ನಮ್ಮ ತಂದೆ ರಾಮಯ್ಯನವರು ತಮ್ಮ 19ನೆಯ ವಯಸ್ಸಿನಲ್ಲಿ ಕಾಶಿಗೆ ಬೊಂಬಾಯಿಯ ಮೂಲಕ ಹೋಗಬೇಕಿತ್ತು; ಅಲ್ಲಿ ಅವರು ಮೊದಲು ಹೋಗಿ ಸಮುದ್ರವನ್ನೇ ನೋಡಿದ್ದು! ಆದ್ದರಿಂದ ಹತ್ತಿರ ಯಾವ ಹೇಳಿಕೊಳ್ಳುವ ನದಿಯೂ ಇಲ್ಲದ ಬೆಂಗಳೂರಿನವರಿಗೆ ಸಮುದ್ರದ ಆಕರ್ಷಣೆ ಸಹಜ! ನಮ್ಮ ವಯಸ್ಸಿನವರಿಗೆ ಬೊಂಬಾಯಿನ ಇನ್ನೊಂದು ಆಕರ್ಷಣೆ ಇದ್ದದ್ದು  ಅಲ್ಲಿನ ಕ್ರಿಕೆಟ್  ಆಟಗಾರರಲ್ಲಿ! ಅನೇಕ ವರ್ಷಗಳಿಂದ ಭಾರತದ ಖ್ಯಾತ ಕ್ರಿಕೆಟಿಗರೆಲ್ಲಾ ಅಲ್ಲಿಂದಲೇ ಬಂದಿದ್ದವರು;
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕ ಒಂದು ಅಧ್ಯಾಯ 

 

1950-60 ರ ದಶಕದಲ್ಲಿ ಬೆಂಗಳೂರಿನವರಿಗೆ ಬೊಂಬಾಯಿ ವಿಶೇಷ ವಿಸ್ಮಯಗಳ ಮಹಾನಗರ; ಸುಮಾರು ನಾಲ್ಕು ಪಟ್ಟು ಜನಸಂಖ್ಯೆ (1950-60ರಲ್ಲಿ ಬೆಂಗಳೂರು ಮತ್ತು ಮುಂಬಯಿಯ ಜನಸಂಖ್ಯೆ : 7/11 ಲಕ್ಷ ಮತ್ತು  31/40 ಲಕ್ಷ !) ಹೆಚ್ಚಾದ್ದರಿಂದ ಸ್ವಾಭಾವಿಕವಾಗಿ ಉದ್ಯೋಗಕ್ಕೆ ಹೆಚ್ಚು ಅವಕಾಶಗಳು. ಆದರೆ 1955ರಲ್ಲಿ ನನ್ನಂತಹ ಹುಡುಗರಿಗೆ ಇದ್ದ ಖುಷಿಗಳೇ ಬೇರೆ: ಟ್ರ್ಯಾಮ್ ಗಳು, ಮಹಡಿ ಬಸ್ಸುಗಳು, ಸಬರ್ಬನ್ ರೈಲುಗಳು , ದೊಡ್ಡ ಚೌಕಗಳು, ವಾತಾನುಕೂಲಿಕ ಸಿನೆಮಾ ಥಿಯೇಟರುಗಳು, ದೊಡ್ಡ ದೊಡ್ಡ (4-5 ಅಂತಸ್ತಿನ) ಮನೆಗಳು, ಅವರ ಪಾಡಿಗೆ ಓಡಾಡಿಕೊಂಡಿರುತ್ತಿದ್ದ ಜನಸಮೂಹ! ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಎರಡು ಮುಖ್ಯ ಆಕರ್ಷಣೆಗಳು: ಸಮುದ್ರ ಮತ್ತು ಕ್ರಿಕೆಟ್! ನಮ್ಮ ತಂದೆ ರಾಮಯ್ಯನವರು ತಮ್ಮ 19ನೆಯ ವಯಸ್ಸಿನಲ್ಲಿ ಕಾಶಿಗೆ ಬೊಂಬಾಯಿಯ ಮೂಲಕ ಹೋಗಬೇಕಿತ್ತು; ಅಲ್ಲಿ ಅವರು ಮೊದಲು ಹೋಗಿ ಸಮುದ್ರವನ್ನೇ ನೋಡಿದ್ದು! ಆದ್ದರಿಂದ ಹತ್ತಿರ ಯಾವ ಹೇಳಿಕೊಳ್ಳುವ ನದಿಯೂ ಇಲ್ಲದ ಬೆಂಗಳೂರಿನವರಿಗೆ ಸಮುದ್ರದ ಆಕರ್ಷಣೆ ಸಹಜ! ನಮ್ಮ ವಯಸ್ಸಿನವರಿಗೆ ಬೊಂಬಾಯಿಯ ಇನ್ನೊಂದು ಆಕರ್ಷಣೆ ಇದ್ದದ್ದು ಅಲ್ಲಿನ ಕ್ರಿಕೆಟ್  ಆಟಗಾರರಲ್ಲಿ! ಅನೇಕ ವರ್ಷಗಳಿಂದ ಭಾರತದ ಖ್ಯಾತ ಕ್ರಿಕೆಟಿಗರೆಲ್ಲಾ ಅಲ್ಲಿಂದಲೇ ಬಂದಿದ್ದವರು: ಪಿ.ಆರ್. ಉಮ್ರಿಗರ್, ವಿನೂ ಮಂಕಡ್, ವಿಜಯ ಮಾಂಜ್ರೇಕರ್, ವಿಜಯ ಮರ್ಚೆಂಟ್, ಸುಭಾಷ್ ಗುಪ್ತೆ, ದತ್ತು ಫಡ್ಕರ ಇತ್ಯಾದಿ. ಅಲ್ಲಿಯ ವಿಶಾಲ ಮೈದಾನುಗಳಲ್ಲಿ ಒಟ್ಟಿಗೆ ಅನೇಕ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದ್ದವು! ಇವೆಲ್ಲದರಿಂದ ಬೊಂಬಾಯಿಯ ಕ್ರಿಕೆಟ್ಟಿನಲ್ಲಿ ಖ್ಯಾತಿ ಗಳಿಸಿದ್ದು ಹೆಚ್ಚೇನಲ್ಲ!

ಗಣೇಶ ಪ್ರಸಾದ್(1955-1961)

ನಾನು ಹಿಂದೆಯೂ ಬೊಂಬಾಯಿಗೆ ಹೋಗಿದ್ದೆ (ಗೇಟ್ ವೇ ಆಫ್ ಇಂಡಿಯಾದ ಹತ್ತಿರದ ಒಂದು ಚಿತ್ರವನ್ನು ಹಿಂದೆ ತೋರಿಸಿದ್ದೆ). ಆದರೆ ನನ್ನ ನೆನಪು ಇರುವುದು 1955ರಿಂದ. ಆಗ ನನಗೆ ವಯಸ್ಸು ಇನ್ನೂ 12+. ಎಸ್.ಎಸ್.ಎಲ್.ಸಿ. ಗೆ ಕಟ್ಟಿದ್ದೆ (ಆ ಕಾಲದಲ್ಲಿ ಚೂರು ಚುರುಕಿದ್ದ ಮಕ್ಕಳಿಗೂ ಮತ್ತು ಗಣ್ಯ ವ್ಯಕ್ತಿಗಳ ಮಕ್ಕಳಿಗೂ ಡಬಲ್ ಪ್ರೊಮೋಷನ್ ಸಿಗುತ್ತಿತ್ತು ) ಬೊಂಬಾಯಿಗೆ ಅಮ್ಮನ ಜೊತೆ ಬಂದಿದ್ದೆ. ಗೆಳೆಯ ಭರತ್ ದೇಸಾಯಿಯವರ ಜೊತೆ ಅಣ್ಣ ಬ್ರಹ್ಮಾನಂದ ಒಂದು ಬಾಡಿಗೆ ಮನೆ ತೆಗೆದುಕೊಂಡಿದ್ದ. ಬ್ರಹ್ಮಾನಂದ ವಾಸಿಸುತ್ತಿದ್ದ ಕಟ್ಟಡದ ಹೆಸರು ‘ಗಣೇಶ್ ಪ್ರಸಾದ್ʼ. ಮಧ್ಯ ಮುಂಬಯಿಯ ಗ್ರಾಂಟ್ ರೋಡಿನ ಬಳಿಯ ಸ್ಲೀಟರ್ ರೋಡ್ (ಸ್ಲೀಟರ್ ಎಂಬ ವ್ಯಕ್ತಿ ಖ್ಯಾತ ರೈಲ್ವೆ ಇಂಜಿನಿಯರ್ ಆಗಿದ್ದರಂತೆ. ಇಂದಿನ ಹೆಸರು ಭರೂಚಾ ರಸ್ತೆ) ನಲ್ಲಿನ ಒಂದು ಪ್ರಮುಖ ಕಟ್ಟಡ. ಆ ರಸ್ತೆಯಲ್ಲೇ ಗ್ರಾಂಟ್ ರೋಡ್ ರೈಲ್ವೆ ಸ್ಟೇಷನ್ ಕೂಡ ಇದ್ದಿತು. ನಾನು ಇತ್ತೀಚೆಗೆ ವಿಶೇಷ ಮಾಹಿತಿಗಾಗಿ ಗೂಗಲ್ ಮಾಡಿದಾಗ 2018ರ ಮುಂಬಯಿ ಮಿರರ್ ಪತ್ರಿಕೆಯಲ್ಲಿ ಒಂದು ಉಲ್ಲೇಖ ಕಾಣಿಸಿತು “ ಗಣೇಶಪ್ರಸಾದ್ ನ 94 ವಯಸ್ಸಿನ ಖ್ಯಾತ ವೈದ್ಯ ಮತ್ತು ಸೋಷಲಿಸ್ಟ್ ಡಾಕ್ಟರ್ ಪರೀಖ್… ‘ಹೌದು, ಅವರ ದವಾಖಾನೆ ಕೆಳಗೇ ಇದ್ದಿತು ಮತ್ತು ನಾವು ಅವರ ಬಳಿ ಚಿಕಿತ್ಸೆಗಾಗಿ ಕೂಡ ಹೋಗುತ್ತಿದ್ದೆವು . ಬೆಂಗಳೂರಿನಲ್ಲಿ ಮನೆಗಳೇ ಬೇರೆ, ಅಂಗಡಿಗಳೇ ಬೇರೆ ಇರುತ್ತಿದ್ದವು. ಇಲ್ಲಿ ಎಲ್ಲಾ ಕಲಸುಮೇಲೋಗರವಾಗಿದ್ದು ನನಗೆ ಆ ಕಟ್ಟಡ ಬಹಳ ವಿಶೇಷವಾಗಿ, ವಿಚಿತ್ರವಾಗಿ ಕಾಣಿಸಿತ್ತು. ಏಕೆಂದರೆ ಕೆಳಗೆಲ್ಲಾ ಅಂಗಡಿಗಳು (ಒಂದು ಐಸ್ ಕ್ರೀಮ್ ಅಂಗಡಿ – ಅಲ್ಲೇ ಮೊದಲ ಬಾರಿ ಪಿಸ್ತಾ ಎಂಬ ಹೆಸರು ಕೇಳಿಸಿದ್ದು – ಡಾಕ್ಟರ್ ಶಾಪ್.. ಡ್ರೈ‌ ಕ್ಲೀನಿಂಗ್ ಅಂಗಡಿ, ಇತ್ಯಾದಿ).

ಇನ್ನೊಂದು ವಿಶೇಷವೆಂದರೆ ಕಟಕಟೆಯ ಹಳೆಯ ಕಾಲದ ಲಿಫ್ಟು! ಚೌಕಿದಾರ (ಅ ಪದ್ಧತಿಯೂ ನಮಗೆ ಹೊಸದೇ) ಇಲ್ಲದಿದ್ದಾಗ ಸುಮ್ಮನೆ ಮೇಲೆ ಕೆಳಗೆ ಹೋಗಿ ಬರುವುದು. 5/6 ಅಂತಸ್ತಿನ ಕಟ್ಟಡ. ಸುಮಾರು 100 ಕುಟುಂಬಗಳು ವಾಸಿಸುತ್ತಿದ್ದವೋ ಏನೋ! ಎಲ್ಲಾ ಸ್ವಚ್ಚವಾಗಿಯೇ ಇದ್ದವು. ಆದರೂ ಪ್ರತಿದಿನ ಮೀನು ಮಾರುವವಳು ಬಂದು ಹೋದಾಗ ನಮಗೆ ಪರಿಚಯವಿಲ್ಲದ ವಾಸನೆ! ಒಂದೆರಡು ಬಾರಿ ಆಕೆಯ ಬುಟ್ಟಿಯಿಂದ ತಪ್ಪಿಸಿಕೊಂಡಿದ್ದ ಮೀನು ಲಿಫ್ಟಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಲ್ಲಿಂದ ನಾನಾ ಚೌಕದ ಮೂಲಕ ಚೌಪಾಟಿ ಬೀಚು ಕೂಡ ಹೆಚ್ಚು ದೂರವೇನಿರಲಿಲ್ಲ.

 ಬ್ರಹ್ಮಾನಂದ 1946ರಲ್ಲಿ ಓದನ್ನು ಮುಂದುವರಿಸಲು ಮುಂಬಯಿಗೆ ಹೊರಟು ಹೋದರು 1947ರ ‘ ನಮ್ಮ ಮನೆ ‘ ಯಲ್ಲಿ ಅವರು ಮನೆಯ ಮಕ್ಕಳಿಗೆ ಬರೆದ ಪತ್ರದ ಅನುವಾದ/ಪ್ರತಿಲಿಪಿಯ ಭಾಗವನ್ನು ಹಾಕಿತ್ತು. ಅದರಲ್ಲಿ ಬೊಂಬಾಯಿಯಲ್ಲಿ 15 ಆಗಸ್ಟ 1947 ನ್ನು ಹೇಗೆ ಆಚರಿಸಿದರು ಎಂದು ಬರೆದಿದ್ದಾರೆ ಇಲ್ಲಿ ‘ 30 ಲಕ್ಷ ಕಾಶಿ’ – ಕಾಶಿ ಎಂದರೆ ಬಹು ತುಂಟನಾಗಿದ್ದ ನನ್ನ ಕಸಿನ್ ಕಾಶಿ)

ಮೊದಲನೆಯ ಮಹಡಿಯಲ್ಲಿ ಒಂದು ಬೆಡ್ರೂಮ ಮನೆ; ಪುಟ್ಟ ಅಡಿಗೆ ಮನೆ; ಸ್ನಾನಕ್ಕೆ ಬಾಯ್ಲರಿನಲ್ಲಿ ಬಿಸಿನೀರು; ಪ್ರತಿ ದಿನಾ ಕಕ್ಕಸು ಕೋಣೆ (ಅಲ್ಲಿಯೂ ಫ್ಲಷ್ ಟಾಯ್ಲೆಟ್!) ತೊಳೆದುಹೋಗುತ್ತಿದ್ದ ಹೆಂಗಸು (ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಬರುತ್ತಿದ್ದರಿಂದ ರಾಜನರ್ತಕಿ ಎಂದ ಹೆಸರಿಟ್ಟಿದ್ದರು), ಬೇಸಿಗೆಯಾದ್ದರಿಂದ ನಾನು ಬಾಲ್ಕನಿಯಲ್ಲಿ ಮಲಗುತ್ತಿದ್ದೆ. ಅಂದಿನ ದಿನಗಳ ಮುಂಬಯಿಯ ಅನೇಕ ಕಟ್ಟಡಗಳ ತರಹವೇ ಇಲ್ಲೂ ಒಳಗಡೆ ವಿಶಾಲವಾದ ಪ್ರಾಂಗಣವಿತ್ತು. ಅಲ್ಲಿ ಹುಡುಗರು ಸಂಜೆ ಕ್ರಿಕೆಟ್ ಆಡುತ್ತಿದ್ದರು. ನಾನೂ ಹೋಗಿ ಅವರ ಜೊತೆ ಆಡುತ್ತಿದ್ದೆ. ನನ್ನನ್ನೂ ಮಕ್ಕಳು ಬ್ರಹ್ಮಾನಂದ ಎಂದೇ ಕರೆಯುತ್ತಿದ್ದರು.

ಹತ್ತಿರದ ನಾನಾ ಚೌಕಿನಲ್ಲಿ ಒಳ್ಳೆಯ (ಶೆಟ್ಟಿ)ಭೇಲ್ಪುರಿ (ಅದೂ ಹೊಸದು ನಮಗೆ ) ಸಿಗುತ್ತಿತ್ತು. ಅಕ್ಕ ರಾಮೇಶ್ವರಿ ಅಲ್ಲಿಯೇ 2 ವರ್ಷ ಎಲ್ವಿನ್ ಸ್ಟನ್ ಕಾಲೇಜಿನಲ್ಲೆ ಬಿ.ಎ. ಮಾಡುತ್ತಿದ್ದು ಮರೀನ್ ಡ್ರೈವ್ ನ ಒಂದು ಭವ್ಯ ಕಟ್ಟಡದಲ್ಲಿದ್ದ ಹಾಸ್ಟೆಲ್ ನಲ್ಲಿ (ಮುಂದೆ ಸಾವಿತ್ರಿಬಾಯಿ ಫುಲೆ ಹಾಸ್ಟೆಲ್) ಇದ್ದಳು. ಮಿಸಸ್ ಮೆಕ್ಲೀನ್ ಎಂಬ ಆಂಗ್ಲ ಮಹಿಳೆ ವಾರ್ಡನ್ ಆಗಿದ್ದರು (ಆ ಕಾಲದಲ್ಲಿ ಒಂದು ಟೂತ್ ಪೇಸ್ಟ್ ಹೆಸರೂ ಅದೇ ಇತ್ತು!) ಕೆಲವು ಸಂಜೆಗಳು ನಾವೆಲ್ಲ ಸಮುದ್ರದ ಕಡ ಹೋಗಿಬರುತ್ತಿದ್ದೆವು.. ನಾನು ಮುಂದೆ ಮುಂಬಯಿಯಲ್ಲಿ ನಾಲ್ಕು ದಶಕಗಳನ್ನ ಕಳೆದರೂ ನನಗೆ ಕಟ್ಟಡದ ಕೆಳಗೇ  ಎಲ್ಲವೂ ಸಿಗುವ ಮತ್ತು ಹೆಚ್ಚು ಜನಸಂದಣಿಯ ಮಧ್ಯ ಮುಂಬಯಿಯ ಈ ವಾತಾವರಣ ದೊರಕಲಿಲ್ಲ. ನಾನು ನಂತರ ಇದ್ದಿದ್ದೇ ಸಬರ್ಬುಗಳಲ್ಲಿ ಮತ್ತು ಕಾಲೊನಿಗಳಲ್ಲಿ.

(ಚಿತ್ರಗಳು ಕ್ರಮವಾಗಿ ಎಡದಿಂದ ಬಲಕ್ಕೆ:  ಗಿರಗಾಮ್ ಚೌಪಾತಿ ಮತ್ತು ಅಲ್ಲಿಯ ಭೇಲ್; ಮೆರೀನ್ ಡ್ರೈವ್; ವಿಟಿ ರೈಲ್ವೆ ಸ್ಟೇಷನ್ ಹತ್ತಿರದ ವಿಶಾಲ ಚೌಕದಲ್ಲಿ ಟ್ರಾಮುಗಳು; ಅನೇಕ ಟೀಮುಗಳು ಒಟ್ಟಿಗೆ ಕ್ರಿಕೆಟ್ ಆಡುವ ಅಜಾದ್ ಮೈದಾನ; ಫ್ಲೋರಾ ಫೌಂಟನ್; ಬ್ರಹ್ಮಾನಂದ ಕೆಲಸ ಮಾಡುತ್ತಿದ್ದ ಬೊಂಬಾಯಿ ವಿಶ್ವವಿದ್ಯಾಲಯ (ಎಲ್ಲಾ ಅಂತರಜಾಲದಿಂದ)


1957ರಲ್ಲಿ ಬ್ರಹ್ಮಾನಂದ ಅವರ ಮೊದಲ ವಿದೇಶ ಪ್ರಯಾಣವನ್ನು ಮಾಡಿದರು. ಬ್ರೆಜಿಲ್ಲಿನ ರಯೋಡಿ ಜನೈರೊ ನಲ್ಲಿ ಅಂತರರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಸಭೆ. ಅವರನ್ನು ಬೀಳ್ಕೊಡಲು ಅಕ್ಕ ರಾಮೇಶ್ವರಿ ಮತ್ತು ನಾನು ಬೊಂಬಾಯಿಗೆ ಹೋಗಿದ್ದೆವು. ಆಗಿನ ಕಾಲದಲ್ಲಿ ವಿದೇಶಗಳಿಗೆ ಹೋಗುವವರೆಲ್ಲ ಸೂಟುಬೂಟು ಹಾಕಿಕೊಂಡು ಹೋಗುತ್ತಿದ್ದರು. ಭಾರತೀಯರು ತಮಗೆ ತಾವೇ ಹಾಕಿಕೊಂಡ ನಿರ್ಬಂಧ ಎನ್ನಿಸುತ್ತದೆ. ಇದಕ್ಕೋಸ್ಕರ ಬ್ರಹ್ಮಾನಂದ ಟೈ ಕಟ್ಟಿಕೊಳ್ಳಲು ಅಭ್ಯಾಸ ಮಾಡಬೇಕಾಯಿತು. ಅದನ್ನು ನೋಡಿ ಅವರ ವಿದ್ಯಾರ್ಥಿಗಳಿಗೆ ಖುಷಿ ಮತ್ತು ತಮಾಷೆ! ಅದರಲ್ಲೂ ಮಶ್ರೂವಾಲಾ ಎಂಬುವವರಿಗೆ ಬಹಳ ಉತ್ಸಾಹ (ಮುಂದೆ ಅವರು ಬ್ರಹ್ಮಾನಂದರಿಗೆ ಬಹಳ ಹತ್ತಿರವಾದರು). ಬಹಳ ಹಳೆಯ ಸಾಂತಾಕ್ರೂಜ್ ವಿಮಾನ ನಿಲ್ದಾಣಕ್ಕೆ ಹೋದ ಜ್ಞಾಪಕ. ಇದಾದ ನಂತರ ಅನೇಕ ವರ್ಷ ಅವರು ವಿದೇಶದ ಕಾನ್ಫರೆನ್ಸುಗಳಿಗೆ ಹೋಗುತ್ತಿರಲಿಲ್ಲ. ಮತ್ತೆ ಹೋಗಲು ಆರಂಭಿಸಿದಾಗ ಬರೇ ಶರ್ಟು ಪ್ಯಾಂಟುಗಳಲ್ಲಿರುತ್ತಿದ್ದರು; ಅದಲ್ಲದೆ ಚಪ್ಪಲಿ ಮಾತ್ರ! ಮಾಸ್ಕೋಗೂ ಹಾಗೆ ಹೋಗಿ ಬಂದರು. (ನನ್ನದೂ ಸುಮಾರು ಅದೇ ಕಥೆಯೇ! ಮೊದಲನೆ ಬಾರಿ ಅಮೆರಿಕಕ್ಕೆ ಹೋಗುವಾಗ ಮತ್ತು ಅಲ್ಲಿ ಮೊದಲೆರಡು ವಾರಗಳು, ಅಷ್ಟೆ! ಆಮೇಲೆ ಟೈ ಹೇಗೆ ಕಟ್ಟಿಕೊಳ್ಳುವುದೂ ಎನ್ನುವುದೂ ಮರೆತುಹೋಯಿತು. ಅದಲ್ಲದೆ ಅಮೆರಿಕವೂ ಬದಲಾಗುತ್ತಿದ್ದು ಬಟ್ಟೆಯ ಪ್ರಾಧಾನ್ಯ ಕಡಿಮೆಯಾಯಿತು) ನಮ್ಮ ತಂದೆಯ ಪ್ರಭಾವವೋ ಏನೋ ಅಂತೂ ಬ್ರಹ್ಮಾನಂದ ಖಾದಿ ಬಿಡಲಿಲ್ಲ ಮತ್ತು ಕಡೆಯವರೆಗೂ ಬಹಳ ಸರಳ ಬಟ್ಟೆಗಳಲ್ಲೇ ಇದ್ದರು! ನಮ್ಮಂತಹವರು ಬಿಡಿ, ಗೆಲೆಲಿಯೊ ಮತ್ತು ಐನ್ ಸ್ಟೈನ್ ಕೂಡ ತಮ್ಮ ತಾರುಣ್ಯದಲ್ಲಿ ಆಡಂಬರದ ದಿರಸಿನ ವಿರುದ್ಧ ಪ್ರತಿಭಟಿಸಿದ್ದರು.

1958ರಿಂದ ನಾನು ಪ್ರತಿ ಬೇಸಿಗೆ 3-4 ವಾರ ಮುಂಬಯಿಯಲ್ಲಿ ಕಳೆಯಲು ಶುರುಮಾಡಿದೆ. ಬ್ರಹ್ಮಾನಂದ ಆಗ ತನ್ನ ಸಂಶೋಧನೆಗಳಲ್ಲಿ ಬಹಳ ಮುಳುಗಿದ್ದ ಹಾಗಿತ್ತು. ಆದರೂ ಕೆಲವು ಬ್ಯಾಂಕ್ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಕೆಲಸ ತೆಗೆದುಕೊಂಡಿದ್ದು ಪ್ರಶ್ನೆಗಳಿಗೆ ಅಂಕಗಳನ್ನು ಕೊಡುತ್ತಿದ್ದ. ಯಾರಾದರೂ ಅವುಗಳನ್ನೆಲ್ಲಾ ಕೂಡಿ, ಟೇಬಲ್ ಮತ್ತು ಪಟ್ಟಿಗಳನ್ನು ಮಾಡಿ ಬರೆದಿಡಬೇಕಾಗುತ್ತಿತ್ತು. ಅದಕ್ಕೆ ಅವನ ಬಳಿ ಸಮಯವಿರಲಿಲ್ಲ. ಅದೆಲ್ಲ ಮಾಡುವರು ಅಲ್ಲೆ ಸಿಗುತ್ತಿದ್ದರೋ ಏನೋ! ಆದರೂ ನನಗೆ ಪ್ರಪಂಚ ತಿಳಿಯಲಿ ಎಂದೋ ಏನೋ ನಾನು ಅಲ್ಲಿ ಬಂದು ಈ ಕೆಲಸ ಮಾಡಿಕೊಟ್ಟು ಹೋಗಲಿ ಎಂದು ನಮ್ಮ ತಂದೆತಾಯಿಯರನ್ನು ಒಪ್ಪಿಸಿದ್ದ.

ಆದ್ದರಿಂದ ನನ್ನ 14 ನೆಯ ವಯಸ್ಸಿನಿಂದಲೇ ಒಬ್ಬನೇ ಮುಂಬಯಿಗೆ ರೈಲಿನಲ್ಲಿ ಹೋಗಿ ಬರಲು ಶುರುಮಾಡಿದೆ. ಆಗ ಅವನು ಗಣೇಶ ಪ್ರಸಾದ್ ಐದನೆಯ ಮಹಡಿಯಲ್ಲಿ ಮನೆಯೊಂದರ ಭಾಗವನ್ನು ಬಾಡಿಗೆಗೆ ತೆಗೆದುಕೊಂಡಿದ್ದ: ಒಂದು ಮಲಗುವ ಕೊಠಡಿ, ಒಂದು ಪುಟ್ಟ ಅಡುಗೆ ಮನೆ, ಬಚ್ಚಲಮನೆ. ಅಲ್ಲಿ ಹೋದಾಗ ನಾನು ಅಡುಗೆ ಮನೆಯಲ್ಲಿ ಮಲಗಿಕೊಳ್ಳುತ್ತಿದ್ದೆ. ಬ್ರಹ್ಮಾನಂದ ಬೇಗ ಏಳುತ್ತಿದ್ದು ಬೆಳಿಗ್ಗೆ ಕಾಫಿ (ಪಾಲಸನ್) ಮಾಡಿಕೊಡುತ್ತಿದ್ದ. ಕೆಲವು ಸತಿ ಬೆಳಿಗ್ಗೆ ಬ್ರೆಡ್ಡು, ಪಾಲ್ಸನ ಪುಟ್ಟ ಬೆಣ್ಣೆ ಪ್ಯಾಕೆಟ್ಗಳು. 9 ಗಂಟೆಗೆ ಬಸ್ಸು ತೆಗೆದುಕೊಂಡು ಯೂನಿವರ್ಸಿಟಿಗ ಹೊರಟು ಹೋಗಿ ರಾತ್ರಿ 8 ಗಂಟೆಗೆ ವಾಪಸ್ಸು ಬರುತ್ತಿದ್ದ. ವಿಟಿ ಬಳಿಯ ಮಾಡರನ್ ಹಿಂದು ಹೊಟೇಲಿನಿಂದ ರಾತ್ರಿ ಒಂದು ಊಟ ಕ್ಯಾರಿಯರ್ರಿನಲ್ಲಿ ಬರುತ್ತಿತ್ತು. ನನಗೆ ಪಕ್ಕದ ಮನೆಯವರು ಎರಡು ಚಪಾತಿ ಕೊಡುತ್ತಿದ್ದರು. ಅವನು ನನ್ನ ಹತ್ತಿರ ಹೆಚ್ಚು ಮಾತಾಡುತ್ತಿರಲಿಲ್ಲ. ಕೆಲಸ ಸರಿಯಾಗಿ ಮಾಡಿರದಿದ್ದರೆ ಸಣ್ಣ ಪುಟ್ಟ ಬೈಗಳು ಇರುತ್ತಿತ್ತು, ಅಷ್ಟೆ!

(ಮೆರೀನ್ ಡ್ರೈವ್ ನಲ್ಲಿ ಓಡಾಡುತ್ತಿದ್ದ 123  ಸಂಖ್ಯೆಯ ( 1955 ರಲ್ಲಿ ಅದು ಸಿ ರೂಟ್) ಮಹಡಿ ಬಸ್ (ಕೃಪೆ : ಇಂಡಿಯ ಹಿಸ್ಟರಿ ಪಿಕ್ಸ್)

ಕೆಲವು ಬಾರಿ ಸಂಜೆ ಅವನ ವಿದ್ಯಾರ್ಥಿಗಳು ಅಥವಾ ಸ್ನೇಹಿತರು ಬರುತ್ತಿದ್ದರು. ಅವರಲ್ಲಿ ಮುಖ್ಯವಾದವರು ಕೆ.ಜಿ.ವೆಂಕಟೇಶ್. ಅವರ ತಮ್ಮ ಕೃಷ್ಣ ಅರ್ಥಶಾಸ್ತ್ರಜ್ಞರು. ಆದರೆ ವೆಂಕಟೇಶ್ ಜೊತೆ ಬ್ರಹ್ಮಾನಂದಗೆ ಹೆಚ್ಚು ಸ್ನೇಹ. ಅವರು ಅಗಾಗ್ಗೆ ಅವನನ್ನು ಚುಡಾಯಿಸುತ್ತಿದ್ದರು ಕೂಡ. ನಾನಿದ್ದಾಗ ಒಂದು ಭಾನುವಾರ ಯಾವುದೋ ಅಂತರಕಾಲೇಜು ಪಂದ್ಯದಲ್ಲಿ ಬ್ರಹ್ಮಾನಂದ ಜಾಸ್ತಿ ವಿಕೆಟ್ಟು ಗಳಿಸಿದ್ದ (ಅವನು ಆಗಲೂ ಆಡುತ್ತಿದ್ದದ್ದು ನನಗೆ ತಿಳಿದಿರಲಿಲ್ಲ). ಆ ಸುದ್ದಿ ಟೈಮ್ಸ್ ನಲ್ಲೂ ಬಂದಿತ್ತು. ಆಗ ವೆಂಕಟೇಶ್ ‘ಇನ್ನೇನು ಮುಂದೆ ಬ್ರಹ್ಮಾನಂದ ಆಡೋದು ನೋಡಬೇಕಾದರೆ ಬ್ರಬೋರ್ನ ಸ್ಟೇಡಿಯಮ್ ಗ ಹೋಗಬೇಕು (ಅಂದರೆ ಟೆಸ್ಟ್‌ ಆಡುತ್ತಾರೆ ಅಂತ!)’ ರೇಗಿಸಿದ್ದು ನನಗೆ ಜ್ಞಾಪಕ. ಆಮೇಲೆ ವೆಂಕಟೇಶ್ ಮೈಸೂರಿಗೆ ಹೋಗಿ ಟೆನ್ನಿಸ್, ಕ್ರಿಕೆಟ್ ಕೋಚ್ ಆಗಿದ್ದರು; ಬಹಳ ಸಭ್ಯ ವ್ಯಕ್ತಿ ಮತ್ತು ಸ್ನೇಹಜೀವಿ.

ಅಣ್ಣ ಬ್ರಹ್ಮಾನಂದ ಮಾತ್ರ ತನ್ನ ಪಾಡಿಗೆ ತಾನು ಯೂನಿವರ್ಸಿಟಿಗೆ ಹೋಗಿ ಬಸ್ಸಿನಲ್ಲಿ ಬರುತ್ತಿದ್ದ; ಬೆಳಿಗ್ಗೆ ಹೋದರೆ, ರಾತ್ರಿಯೆ ವಾಪಸ್ಸು. ಆ ಬಸ್ಸಿನ ಹೆಸರು ‘ಸಿʼ ರೂಟ್. ನಿಜವಾಗಿಯೂ ಅದು ಸೀ /ಸಮುದ್ರದ ಪಕ್ಕದಲ್ಲೇ ಹೋಗುತ್ತಿತ್ತು. ಹತ್ತಿರದ ತಾರದೇವನಿಂದ ಕೊಲಾಬಾದ ಕೊನೆಯಾದ ಆರ್.ಸಿ.ಚರ್ಚಿಗೆ ಹೋಗಿ ಬರುತ್ತಿತ್ತು. ಯೂನಿವರ್ಸಿಟಿಯ ಪಕ್ಕ ಹೋಗುತ್ತಿದ್ದರಿಂದ ಬ್ರಹ್ಮಾನಂದನಿಗೆ ಇದು ಸರಿಯಾದ ಬಸ್ ಆಗಿತ್ತು. ಕೆಲವು ವರ್ಷಗಳ ನಂತರ ಅದರ ರೂಟ್ ನಂಬರ್ 123 ಆಯಿತು. ಅದೂ ಮಹಡಿ ಬಸ್ಸಿನಲ್ಲಿ ಕುಳಿತು ಸಮುದ್ರ ನೋಡುತ್ತಾ ಹೋಗುವುದೇ ನನಗೆ ವಿನೂತನ ಅನುಭವವಾಗಿತ್ತು. 1955ರ ಹೊತ್ತಿಗೆ ಬ್ರಹ್ಮಾನಂದ ಅವರ ಖ್ಯಾತ ‘ಪ್ಲಾನಿಂಗ್ ಫರ್ ಎಕ್ಸಪ್ಯಾಂಡಿಂಗ್ ಎಕಾನಮಿ’ ಪುಸ್ತಕವಲ್ಲದೆ ಇನ್ನೂ ಕೆಲವು ಪುಸ್ತಕಗಳನ್ನು ಬರೆದಿದ್ದರು. ಆದ್ದರಿಂದ ಅವರಲ್ಲಿ ಯಾವಾಗಲೂ ತೀವ್ರತೆ ಇದ್ದದ್ದು ಹೆಚ್ಚೇನಿಲ್ಲ.  ಆಗ ಅವೆಲ್ಲಾ ನನ್ನಂತಹ ಚಿಕ್ಕ ಹುಡುಗರಿಗೆ ತಿಳಿದಿರಲಿಲಲ್ಲ, ಹೇಳಿದ್ದರೂ ಅರ್ಥವಾಗುತ್ತಿರಲಿಲ್ಲ!


ಬೆಳಿಗ್ಗೆ ಅವನು ಕೊಟ್ಟ ಎಲ್ಲ ಕೆಲಸಗಳನ್ನು ಮುಗಿಸಿ , ಮಧ್ಯಾಹ್ನದ ಮೇಲೆ ನಾನು ಊರು ಸುತ್ತಲು ಹೋಗುತ್ತಿದ್ದೆ. ಹತ್ತಿರದಲ್ಲೇ ಇದ್ದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಹಿಂದಿ ಸಿನೆಮಾಗಳಿಗೆ ಅಥವಾ ಫೋರ್ಟ್ ಪ್ರದೇಶದ ಇಂಗ್ಲಿಷ್ ಸಿನೆಮಾಗಳಿಗೆ ಹೋಗುತ್ತಿದ್ದೆ. ಬೇಸಿಗೆಯೂ ಇದ್ದು ಇವೆಲ್ಲ ವಾತಾನುಕೂಲ ಚಿತ್ರಮಂದಿರಗಳಾದ್ದರಿಂದ ಚೆನ್ನಾಗಿಯೂ ಇರುತ್ತಿತ್ತು. ಕೆಲವು ಬಾರಿ ಆಜಾದ್ ಅಥವಾ ಇತರ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತ ನಿಂತಿರುತ್ತಿದ್ದೆ. ಯಾರಾದರೂ ಖ್ಯಾತನಾಮ ಕ್ರಿಕೆಟಿಗರು ಕಾಣಿಸುತ್ತಾರೋ ಎನ್ನುವ ಕುತೂಹಲವೂ ಇತ್ತು. ಮನೆಯ ಹತ್ತಿರದ ತಾರದೇವದಿಂದ ಊರಿನ ಬೇರೆ ಬೇರೆ ಜಾಗಗಳಿಗೆ ಟ್ರಾಮುಗಳು ಇದ್ದವು. ನಾನು ಅವುಗಳಲ್ಲಿ ಕುಳಿತುಕೊಂಡು ಹೊಸ ಹೊಸ ಜಾಗಗಳಿಗೆ ಹೋಗಿ ಬರುತ್ತಿದ್ದೆ. ಆಗೆಲ್ಲ ನನಗೆ 16-17 ವಯಸ್ಸು. ಮುಂಬಯಿಯ ಬಗ್ಗೆ ಆಗ ಈ ರೀತಿ ಗಳಿಸಿದ್ದ ‘ಜ್ಞಾನ’ ಮುಂದೆ ನಾನು ಆ ನಗರವಾಸಿಯಾದಾಗ ಬಹಳ ಸಹಾಯವಾಯಿತು.