ಆಕೆಯ ಹೆಸರು ರೇಖಾ, ವಯಸ್ಸು ಇಪ್ಪತ್ತೈದು. ಗಂಡ ಕಾರ್ಯಪ್ಪನ ಪ್ರಕಾರ ಸಾಧಾರಣವಾಗಿ ಆರೋಗ್ಯವಾಗಿಯೇ ಇದ್ದ ಆಕೆ ಅಂದು ರಾತ್ರಿ ಪಕ್ಕನೆ ಎದೆ ನೋವು, ಸುಸ್ತು ಎನ್ನುತ್ತ ವಾಂತಿ ಮಾಡತೊಡಗಿದ್ದಳು. ತುಂಬಾ ಸುಸ್ತಾಗಿದ್ದ ಆಕೆ ನರಳುತ್ತಾ ತನಗೆ ಉಸಿರಾಡಲು ತೊಂದರೆಯಾಗುತ್ತಿದೆ, ತುಂಬಾ ತಲೆನೋವು, ತಲೆ ತಿರುಗುತ್ತಿದೆ, ಕಿವಿಯಲ್ಲಿ ಏನೋ ಶಬ್ಧ ರಿಂಗಣಿಸುತ್ತಿದೆ ಎನ್ನುತ್ತಿದ್ದಳು. ನಾನು ಚಿಕಿತ್ಸೆ ಮಾಡುತ್ತಿದ್ದಂತೆಯೇ, ಆಕೆಗೆ ಅಪಸ್ಮಾರ ಬಂತು. ಶರೀರದ ಬಣ್ಣ ಜ್ವರ ಬಂದಂತೆ ಕೆಂಪಾಗಿ ಕಾಣುತ್ತಿತ್ತು. ಅವಳ ಜೊತೆಯಲ್ಲಿ ಬಂದವರ ಗುಸು ಗುಸು, ಪಿಸು ಮಾತಿನ ಧಾಟಿ ನೋಡಿದರೆ, ಗಂಡನೇ ಏನೋ ಮಾಡಿದ್ದಾನೆ ಅನ್ನುವಂತಿತ್ತು. ಆದರೆ ನಿಜಕ್ಕೂ ಅವಳ  ಸ್ಥಿತಿಗೆ ಕಾರಣವೇನು ಎಂದು ಪತ್ತೆ ಮಾಡುವುದು ನನ್ನ ಮುಂದಿದ್ದ ಸವಾಲಾಗಿತ್ತು. 
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಕುತೂಹಲಕಾರಿ ಬರಹ.

 

ಕೊಡಗಿನ ಮಳೆಗಾಲದಲ್ಲಿ ಜಡಿ ಮಳೆಗೆ, ಚಳಿ ಹಿಡಿದು, ಹೆಪ್ಪುಗಟ್ಟಿ ಹೋಗುವಂತೆ ಹೊರ ಊರಿನ ಜನರಿಗೆ ಭಾಸವಾಗುವುದು ಸಾಮಾನ್ಯ. ಅಲ್ಲೇ ಹುಟ್ಟಿ ಬೆಳೆದ ಜನರಿಗೆ ಅದೆಲ್ಲಾ ರೂಢಿ ಆಗಿರುತ್ತದೆ. ಆದರೂ ಕೆಲವರಿಗೆ, ಸ್ವಲ್ಪ ಮಳೆ ಹೆಚ್ಚಾದರೂ ಸಾಕು, “ಅಯ್ಯೋ ಈ ಬಾರಿ ಭಾರೀ ಮಳೆ” ಎನ್ನುವುದು ಒಂದು ಅಭ್ಯಾಸ. ಇವರ ಹಿರಿಯರು ತಮ್ಮ ಬಾಲ್ಯದಲ್ಲಿ ಇದಕ್ಕಿಂತಲೂ ಮಿಗಿಲಾದ ಮಳೆಯನ್ನು ನೋಡಿರುತ್ತಾರೆ. ಆ ಮಾತೇ ಬೇರೆ. ಬೇರೆ ಕೆಲವು ಊರುಗಳಲ್ಲಿ ಇದಕ್ಕಿಂತ ಹೆಚ್ಚಿನ ಮಳೆಯೂ ಬರಬಹುದು. ಆದರಿಲ್ಲಿ, ಒಮ್ಮೆ ಜೋರಾಗಿ ಮಳೆ ಬಂದು ನಿಂತರೆ, ಇಡೀ ದಿನ ಜಿನುತ್ತಿರುವ ಸೋನೆ ಮಳೆ ನಿಲ್ಲುವುದೇ ಇಲ್ಲ. ಹಾಗಾಗಿ ಚಳಿಯೂ ಜಾಸ್ತಿ. ಮಳೆಗಾಲದಲ್ಲಿ ಸ್ವೆಟರ್, ಕೋಟು, ಹಾಕಿಕೊಂಡು ಓಡಾಡುವುದು ಇಲ್ಲಿನ ಜನರ ಜೀವನದ ಒಂದು ಅವಿಭಾಜ್ಯ ಅಂಗ. ಬೆಳಿಗ್ಗೆ ಒದ್ದೆಯಾದ ಬಟ್ಟೆಯಲ್ಲಿ ಇಡೀ ದಿನ ಕ್ಲಾಸಿನಲ್ಲಿ ಕೂರುವ ಮಕ್ಕಳು, ಅವರಿಗೆ ನಡುಗುತ್ತಾ ಪಾಠ ಮಾಡುವ ಜಿಲ್ಲೆಯ, ಹೊರ ಜಿಲ್ಲೆಯ ಅಧ್ಯಾಪಕರು, ಇದೆಲ್ಲಾ ಇಲ್ಲಿ ಮಾಮೂಲು. ಹಿಂದೆಲ್ಲಾ ರೈನ್ ಕೋಟ್ ಇಲ್ಲದೆ ಶಾಲೆಗೆ, ಆಫೀಸಿಗೆ ಹೋಗುವವರ ಸಂಖ್ಯೆ ಕಡಿಮೆ. ಈ ಕೋಟ್, ಬಾಗಿದ ಹಿಡಿ ಇರುವ ಉದ್ದನೆಯ ಕೊಡೆಗಳನ್ನು ನೇತು ಹಾಕಲು, ಅಲ್ಲೆಲ್ಲಾ ಕೊಕ್ಕೆಗಳಿರುವ ಪಟ್ಟಿಗಳು, ಇರಲೇಬೇಕಿತ್ತು. ಜೊತೆಗೆ ಚಳಿ ಕಾಯಿಸಲು ಸೀಮೆ ಎಣ್ಣೆ ಡಬ್ಬದಿಂದ ತಯಾರಿಸಿದ, ಅದನ್ನ ಕೈಯಲ್ಲಿ ಹಿಡಿಯಲು ಅದಕ್ಕೊಂದು ದಪ್ಪನೆಯ ತಂತಿ ಕಟ್ಟಿದ ಅಗ್ಗಿಷ್ಟಿಗೆ. ಅರಣ್ಯ ಇಲಾಖೆಯಿಂದ ಪ್ರತೀ ವರ್ಷ ಮರದ ಕೊರಡಿಗೆ ಬೆಂಕಿ ಹಾಕಿ, ಮಣ್ಣಿನಲ್ಲಿ ಮುಚ್ಚಿ, ರೆಡಿ ಮಾಡಿಡುತ್ತಿದ್ದ ಒಳ್ಳೆಯ ಮಸಿಯನ್ನು ಅದರೊಳಗೆ ಹಾಕಿ ಬೇಕಾದಷ್ಟು ಸಿಕ್ಕುತ್ತಿದ್ದ ಸೀಮೆ ಎಣ್ಣೆಯನ್ನು ಸುರಿದು, ಬೆಂಕಿ ಹಚ್ಚಿ, ಬೆಂಕಿ ಕೆಂಡ ಮಾಡುವ ಕೆಲಸ ಕೆಲವರಿಗೆ ಬೆಳಿಗ್ಗೆ ಶುರು ಆಗುತ್ತಿತ್ತು. ಸಂಜೆ ಆದರಂತೂ, ಅಗ್ಗಿಷ್ಟಿಗೆಯಲ್ಲಿ ಬೆಂಕಿ ಕೆಂಡ ಎಲ್ಲರ ಮನೆಯಲ್ಲೂ ಇರಲೇಬೇಕು. ಈಗ ಮಸಿಗೆ ಚಿನ್ನದ ಬೆಲೆ, ಸೀಮೆ ಎಣ್ಣೆ ಕಣ್ಣಿಗೆ ಕಾಣುವುದೇ ಇಲ್ಲ.

ಇಂತಹ ಮಳೆಗಾಲದಲ್ಲಿ ನಮ್ಮೂರಿನ ಆಹಾರ ಪದ್ಧತಿಗಳು ಕೂಡಾ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿದ್ದವು. ಮಳೆಗಾಲದಲ್ಲಿ, ಶರೀರದ ಉಷ್ಣತೆಯನ್ನು ಕಾಯ್ದುಕೊಳ್ಳಲು ಕೆಲವು ವಿಶೇಷವಾದ ಖಾದ್ಯಗಳನ್ನು, ಪೇಯಗಳನ್ನು ತಯಾರಿಸಿ, ಸೇವಿಸುವುದು ಉಂಟು. ಸತತವಾದ ಮಳೆಯಿಂದಾಗಿ ಬಟ್ಟೆಗಳು ಸರಿಯಾಗಿ ಒಣಗದೆ, ಒಂದು ರೀತಿಯ ಮುಗ್ಗಲು ವಾಸನೆ ಬರುವಂತೆ ಆಗುತ್ತಿತ್ತು. ಚಿಕ್ಕ ಮಕ್ಕಳಿರುವ ಮನೆಗಳಲ್ಲಿ, ಅಗ್ಗಿಷ್ಟಿಗೆಯ ಮೇಲೆ ಬಿದಿರಿನ ಪಟ್ಟಿಗಳಿಂದ ನೇಯ್ದಂತಹ ಅಗಲವಾದ ಬುಟ್ಟಿಯನ್ನು ಮುಚ್ಚಿ, ಅದರ ಮೇಲೆ ಬಟ್ಟೆಗಳನ್ನು ಹರಡಿ ಒಣಗಿಸುವುದು ವಾಡಿಕೆ. ಮನೆಯ ಗೋಡೆಗಳಲ್ಲಿ ಕೆಲವು ಕಡೆ ಬೂಷ್ಟು ಹಬ್ಬಿ, ಇದರಿಂದ ಶೀತ ಜ್ವರ, ಅಲರ್ಜಿ, ಇವು ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಮಳೆಗಾಲದ ರೋಗಗಳು.

ಚಿಕ್ಕವನಾಗಿದ್ದಾಗ ಊರಿನಲ್ಲಿ, ನಾನು ಮಳೆಗಾಲದಲ್ಲಿ ಕೇಳುತ್ತಿದ್ದ ಒಂದು ಕಾಯಿಲೆ ಎಂದರೆ ನ್ಯೂಮೋನಿಯ. ಹೆಚ್ಚಿನವರು ಕೆಮ್ಮು, ಜ್ವರ ಬಂದರೆ ಸಾಕು, ನನಗೆ ‘ನಿಮೋನಿ’ ಬಂದಿದೆ ಎಂತಲೇ ಆಸ್ಪತ್ರೆಗೆ ಹೋಗುತ್ತಿದ್ದರು. ಜ್ವರ ಹೆಚ್ಚಾದಾಗ, ಕೆಲವರ ಬಾಯಲ್ಲಿ ಬರುತ್ತಿದ್ದ ಇನ್ನೊಂದು ಶಬ್ಧ, ‘ಡಬಲ್ ನಿಮೋನಿ’. ಈ ಎಲ್ಲ ಶಬ್ಧಗಳು ಇಲ್ಲಿಗೆ ಮಾತ್ರ ಸೀಮಿತವೇ, ಇಲ್ಲ ಬೇರೆ ಕಡೆ ಇರುತ್ತಿತ್ತೋ ನನಗೆ ತಿಳಿದಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಅಂದಿನ ದಿನಗಳಲ್ಲಿ ಸಿಗುತ್ತಿದ್ದ ಪೆನಿಸಿಲಿನ್ ಇಂಜೆಕ್ಷನ್ನು ಎಲ್ಲಾ ಕಾಯಿಲೆಗಳಿಗೆ ರಾಮ ಬಾಣವಾಗಿತ್ತು. ಒಂದೆರಡು ಇಂಜೆಕ್ಷನ್ ಕೊಟ್ಟ ಕೂಡಲೇ ಸಾಮಾನ್ಯವಾಗಿ ಬರುವ ಕಾಯಿಲೆಗಳು ಯಾವುದೇ ಇದ್ದರೂ ಅದು… ಮಂಗ ಮಾಯಾ!

ಮಳೆಗಾಲದಲ್ಲಿ ಆಗುವ ಗಾಯಗಳು, ಹುಣ್ಣುಗಳು ಅನೇಕ. ಆಗಿನ ಕಾಲದಲ್ಲಿ ಈ ಎಲ್ಲಾ ಗಾಯಗಳಿಗೆ ಇದ್ದದ್ದು ಒಂದೇ ಒಂದು ಔಷಧ. ಅದು ಸೆಪ್ಟಿಕ್ ಹುಡಿ. ಬಾಲ್ಯಾವಸ್ಥೆಯ ನನ್ನ ಬಾಯಲ್ಲಿ ಸೆಪ್ಟಿಕ್ ಪೌಡರ್ ಆಗಿದ್ದುದ್ದು ಸೆಟ್ಟಿ ಪೊಡ್ಡು! ಇದು ಈಗೆಲ್ಲೂ ಚಾಲ್ತಿಯಲ್ಲಿ ಇಲ್ಲದಿರುವ ಸಲ್ಫಾ ಡಿಮಿಡಿನ್ ಎಂಬುದು ನನಗೆ ಗೊತ್ತಾಗಿದ್ದು ನಾನು ವೈದ್ಯನಾದ ಮೇಲೆಯೇ!

ಇಂತಹ ಒಂದು ಓಬಿರಾಯನ ಕಾಲದಲ್ಲಿ ಜಿಲ್ಲೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನಲ್ಲಿಗೆ ಬರುತ್ತಿದ್ದ ರೋಗಿಗಳು ವಿವಿಧ ಬಗೆಯವರು. ವೈದ್ಯರ ಅಭಾವ ಇದ್ದುದರಿಂದ ಎಲ್ಲಾ ರೀತಿಯ ರೋಗಿಗಳನ್ನೂ ಇರುವವರೇ ನೋಡಿ ಚಿಕಿತ್ಸೆ ಮಾಡಬೇಕಿತ್ತು.

ಸೆಪ್ಟೆಂಬರ್ ಮೂರು ಇಲ್ಲಿನ ಜನರಿಗೆ ದೊಡ್ಡ ಸಂಭ್ರಮದ ದಿನ. ಕೊಡಗಿನ ಜನಕ್ಕೆ ಇರುವುದೇ ಮೂರು ಮುಖ್ಯ ಹಬ್ಬ. ಒಂದು ಹುತ್ತರಿ, ಇನ್ನೊಂದು ಕಾವೇರಿ ಸಂಕ್ರಮಣ, ಮತ್ತೊಂದು ಕೈಲ್ ಪೋಲ್ದು ಅಥವಾ ಕೈಲ್ ಮುಹೂರ್ತ, ಅರ್ಥಾತ್ ಕೊಡಗಿನ ಆಯುಧ ಪೂಜೆ. ಇಂತಹಾ ಒಂದು ವಿಶೇಷ ಹಬ್ಬಕ್ಕೆ ತಮ್ಮ ನೆಂಟರು, ಮಿತ್ರರೆಲ್ಲರನ್ನು ಮನೆಗೆ ಆಹ್ವಾನಿಸುವುದು ಇಲ್ಲಿಯ ಒಂದು ವಾಡಿಕೆ. ಅನೇಕ ವರ್ಷಗಳಿಂದ ನನ್ನೊಬ್ಬ ಮಿತ್ರ, ಪರೋಪಕಾರಿ ರವಿಯ ಮನೆಯಲ್ಲಿ ನಾವು ಕೆಲವರು ಖಾಯಂ ಆಹ್ವಾನಿತರು. ಎಣ್ಣೆ ಸೇವನೆಯ ಅಭ್ಯಾಸ ನನಗೆ ಇಲ್ಲದಿದ್ದರೂ, ಬೇರೆಯವರು ಕುಡಿಯುವುದನ್ನು ನೋಡಿ ಆನಂದ ಪಡುತ್ತಿದ್ದೆ.

ಅಂತಹ ಒಂದು ಹಬ್ಬದ ದಿನದಂದು, ಮಧ್ಯಾಹ್ನ ತಿಂದದ್ದು ಜಾಸ್ತಿಯಾಗಿದ್ದು, ರಾತ್ರಿ ಬೇಗ ನಿದ್ರೆ ಮಾಡೋಣ ಎನ್ನುವಷ್ಟರಲ್ಲಿ ಆಸ್ಪತ್ರೆಯಿಂದ ಬಂದಿತ್ತು ಬುಲಾವ್! ಕೂಡಲೇ ನಿದ್ರೆ ಜಾರಿ ಹೋಗಿ, ನಾನು ಹಾರುತ್ತಾ ಆಸ್ಪತ್ರೆ ತಲುಪಿದ್ದೆ.

ಅಲ್ಲಿ ಒಬ್ಬ ಹೆಂಗಸನ್ನು ಎತ್ತಿಕೊಂಡು ಆಕೆಯ ಗಂಡ ಹಾಗೂ ನೆಂಟರು ಜೀಪು ತುಂಬಾ ಜನರೊಂದಿಗೆ, ಆಸ್ಪತ್ರೆಗೆ ಬಂದಿದ್ದರು. ಆಕೆಯ ಹೆಸರು ರೇಖಾ, ವಯಸ್ಸು ಇಪ್ಪತ್ತೈದು. ಗಂಡ ಕಾರ್ಯಪ್ಪನ ಪ್ರಕಾರ ಸಾಧಾರಣವಾಗಿ ಆರೋಗ್ಯವಾಗಿಯೇ ಇದ್ದ ಆಕೆ ಅಂದು ರಾತ್ರಿ ಪಕ್ಕನೆ ಎದೆ ನೋವು, ಸುಸ್ತು ಎಂದು ಹೇಳಿ ವಾಂತಿ ಮಾಡತೊಡಗಿದ್ದಳು. ಈ ಹಿಂದೆ ಆಕೆಗೆ ರಕ್ತ ಹೀನತೆ ಇದ್ದು, ಅದಕ್ಕೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಳು. ತುಂಬಾ ಸುಸ್ತಾಗಿದ್ದ ಆಕೆ ನರಳುತ್ತಾ ತನಗೆ ಉಸಿರಾಡಲು ತೊಂದರೆಯಾಗುತ್ತಿದೆ, ತುಂಬಾ ತಲೆನೋವು, ತಲೆ ತಿರುಗುತ್ತಿದೆ, ಕಿವಿಯಲ್ಲಿ ಏನೋ ಶಬ್ಧ ರಿಂಗಣಿಸುತ್ತಿದೆ ಎನ್ನುತ್ತಿದ್ದಳು. ಚಿಕಿತ್ಸೆ ಮಾಡುತ್ತಿದ್ದಂತೆಯೇ, ಆಕೆಗೆ ಅಪಸ್ಮಾರ ಬಂತು. ಶರೀರದ ಬಣ್ಣ ಜ್ವರ ಬಂದಂತೆ ಕೆಂಪಾಗಿ ಕಾಣುತ್ತಿತ್ತು.

(ಹಬ್ಬದ ಸಂಭ್ರಮದ ಒಂದು ದೃಶ್ಯ)

ಕಾರ್ಯಪ್ಪ ಒಂದು ದೊಡ್ದ ಚಿನ್ನದ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಇದ್ದ ಮೈಸೂರಿನ ಹುಡುಗಿಯನ್ನು ಎರಡು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ. ಹಿಂದಿನ ವರ್ಷ ಅವಳ ತಾಯಿಗೆ ಹುಷಾರು ಇಲ್ಲದಿದ್ದುದರಿಂದ, ಆ ಮಳೆಗಾಲವನ್ನು ಮೈಸೂರಿನಲ್ಲೇ ಕಳೆದಿದ್ದ ರೇಖಾ, ಜನವರಿಯಲ್ಲಿ ಕೊಡಗಿಗೆ ಬಂದಿದ್ದಳು. ಅದು ಆಕೆಗೆ ಕೊಡಗಿನ ಪ್ರಥಮ ಮಳೆಗಾಲ.

ಜೊತೆಯಲ್ಲಿ ಬಂದವರ ಗುಸು ಗುಸು, ಪಿಸು ಮಾತಿನ ಧಾಟಿ ನೋಡಿದರೆ, ಗಂಡನೇ ಏನೋ ಮಾಡಿದ್ದಾನೆ ಅನ್ನುವಂತಿತ್ತು. ಎರಡು ವರ್ಷಗಳ ಹಿಂದೆ ತಾನೇ ಮದುವೆಯಾಗಿದ್ದ ಅವರೊಳಗಿನ ಸಂಬಂಧ, ಕೆಲವು ದಿನಗಳಿಂದ ಸರಿ ಇಲ್ಲದೆ ಇದ್ದು, ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು ಎಂಬ ವಿಷಯ; ಪಕ್ಕದ ಮನೆಯ ಜೀವ ವಿಮಾ ನಿಗಮದ ಏಜೆಂಟರಿಂದ ಇತ್ತೀಚೆಗೆ ರೇಖಾಳ ಹೆಸರಲ್ಲಿ ತೆಗೆದುಕೊಂಡ ದೊಡ್ದ ಮೊತ್ತದ ವಿಮಾ ಪಾಲಿಸಿ ಎಲ್ಲವೂ ಅವರ ಹೇಳಿಕೆಗೆ ಪುಷ್ಟಿ ಕೊಡುತ್ತಿತ್ತು.

ಆಕೆಗೆ ಏನಾಗಿರಬಹುದು ಎಂಬ ವಿಷಯದ ಬಗ್ಗೆ ಗೊಂದಲವಿದ್ದ ನನಗೆ, ಪರೀಕ್ಷೆಗೆಂದು ತೆಗೆದ ರಕ್ತದ ಕಡು ಕೆಂಪು ಬಣ್ಣ, ಆಕೆಯ ರೋಗ ಲಕ್ಷಣಗಳು, ಕಾರ್ಯಪ್ಪನು ಮಾಡುತ್ತಿದ್ದ ಚಿನ್ನದ ಅಂಗಡಿಯಲ್ಲಿನ ಕೆಲಸ, ಇವೆಲ್ಲವನ್ನೂ ತಾಳೆ ಹಾಕಿ ನೋಡಿದಾಗ ನನ್ನ ಮನಸ್ಸಿನ ಮುಂದೆ ಎಲ್ಲವೂ ಒಂದಕ್ಕೊಂದು ಸಂವಹನಗೊಂಡು ಆಕೆಗೆ ಏನಾಗಿರಬಹುದು ಎಂಬ ಚಿತ್ರವೊಂದು ಮೂಡಿ ಬಂದಿತ್ತು.

ಒಂದೋ ಆಕೆ ಸೈನೈಡ್ ಸೇವಿಸಿದ್ದಾಳೆ, ಇಲ್ಲಾ ಆಕೆಯ ಆಹಾರದಲ್ಲಿ ಬೆರೆಸಲಾಗಿದೆ. ಸೈನೈಡ್, ಸುಲಭವಾಗಿ ಯಾರಿಗೂ ಸಿಗದ, ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಯಪ್ಪನಿಗೆ ಹೇಗೋ ಸಿಕ್ಕಿರಬಹುದು. ಆದುದರಿಂದ, ಸಂದೇಹ ಈಗ ಕಾರ್ಯಪ್ಪನತ್ತ ಬೊಟ್ಟು ಮಾಡಿ ತೋರಿಸಿತ್ತು.

ಸೈನೈಡ್ ಎಂಬ ವಿಷ ಸೇರಿರಬಹುದು ಎಂಬ ಸಂಶಯ ನನ್ನ ಮನಸ್ಸಿಗೆ ಧೃಡವಾದ ಕೂಡಲೇ ಅದರ ಶಮನಕ್ಕೆ ಬೇಕಾದ ಚಿಕಿತ್ಸೆ  ಶುರು ಮಾಡಿದೆ.  ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಿ, ಶರೀರದಲ್ಲಿರುವ ವಿಷದ ಆಂಶವನ್ನು ಕಿಡ್ನಿಯ ಮೂಲಕ ಹೊರ ಹಾಕಲು ಗ್ಲೂಕೋಸ್ ಡ್ರಿಪ್ಸ್‌ನ ಗತಿಯನ್ನು ತ್ವರಿತಗೊಳಿಸಿ, ಅಮೈಲ್ ನೈಟ್ರೇಟ್ ಟ್ಯೂಬನ್ನು ಒಡೆದು, ಅದನ್ನು ಒಂದು ಬಟ್ಟೆಗೆ ಹಾಕಿ ಮೂಗಿಗೆ ಹಿಡಿದು, ವಿಟಮಿನ್ ಬಿ 12 ಇಂಜೆಕ್ಷನ್ ಚುಚ್ಚಿದ್ದೆ. ಅಲ್ಲಿಗೆ ಚಿಕಿತ್ಸೆಯ ಒಂದು ಭಾಗ ಮುಗಿದಿದ್ದು, ಇನ್ನು ಮೆಡಿಕೋ ಲೀಗಲ್ ವಿಷಯದಲ್ಲಿ ಏನು ಮಾಡುವುದು ಎಂದು ಯೋಚಿಸತೊಡಗಿದ್ದೆ. ಈ ರೀತಿ ವಿಷ ಸೇವಿಸಿ ಬಂದದ್ದು ನಮಗೆ ನಿಶ್ಚಯವಾದಾಗ ಮೊದಲು ಪೊಲೀಸರಿಗೆ ಸುದ್ದಿಯನ್ನು ತಿಳಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಆದರೆ ಇದು ಬರೇ ನನ್ನ ಸಂಶಯ ಮಾತ್ರವಾಗಿತ್ತು. ಆದರೆ, ಆಕೆ ವಿಷವನ್ನೇ ಸೇವಿಸಿದ್ದು ಎಂಬ ವಿಷಯದ ದೃಢೀಕರಣವೇ ಆಗದಿರುವಾಗ ಪೋಲಿಸರಿಗೆ ತಿಳಿಸಿ ಮುಂದುವರೆಯುವುದು ಹೇಗೆ ಎಂದು ಯೋಚಿಸತೊಡಗಿದ್ದೆ. ಎಲ್ಲಿಯಾದರೂ ಆಕೆ ಸಾವನ್ನಪ್ಪಿದರೆ ಮರಣೋತ್ತರ ಪರೀಕ್ಷೆಯಂತೂ ನಿಶ್ಚಯ. ವಿಷ ಸೇವಿಸಿದ್ದರೆ ವರದಿಯಲ್ಲಿ ಅದು ಬಂದೇ ಬರುತ್ತದೆ. ಆದರೂ ಯಾಕೋ ಮನಸ್ಸು ಪೊಲೀಸರಿಗೆ ಈ ವಿಷಯ ತಿಳಿಸುವುದಕ್ಕೆ ಹಿಂದೇಟು ಹಾಕುತ್ತಿತ್ತು. ಸ್ವಲ್ಪ ಸಮಯದ ಬಳಿಕ ರೇಖಾಗೆ ಪ್ರಜ್ಞೆ ಬಂದಿತ್ತು. ಆಕೆ ಮಾತನಾಡುವ ಸ್ಥಿತಿಗೆ ಬಂದ ಕೂಡಲೇ, ಅಲ್ಲಿದ್ದ ಎಲ್ಲರನ್ನೂ ವಾರ್ಡಿನ ಹೊರಗೆ ಕಳಿಸಿ ಅವಳನ್ನು ಕೆಲವು ಪ್ರಶ್ನೆಗಳನ್ನು ಕೇಳಿದ್ದೆ…

“ಬೆಳಿಗ್ಗೆಯಿಂದ ನೀನು ಯಾವ ಆಹಾರ ಸೇವಿಸಿದೆ, ನೀನಿದ್ದ ಕೋಣೆಯ ಕಿಟಕಿಗಳು, ಬಾಗಿಲು ಮುಚ್ಚಿತ್ತೇ, ಅಥವಾ ಹೊರಗೆ ಎಲ್ಲಾದರೂ ಮುಚ್ಚಿದ ಕೋಣೆಯೊಳಗೆ, ಬಾವಿಯ ಪಕ್ಕಕ್ಕೆ ಹೋಗಿದ್ದೆಯಾ” ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಯಾವುದೂ ಸಿಕ್ಕಿರಲಿಲ್ಲ. ಕೆಲವೊಮ್ಮೆ ಗಾಳಿಯಾಡದ ಕೋಣೆಯಲ್ಲಿ, ಕಾದ ಕೆಂಡದ ಅಗ್ಗಿಷ್ಟಿಕೆಯನ್ನು ಇಟ್ಟಿದ್ದರೆ, ಪಾಳುಬಿದ್ದ ಬಾವಿಯಂತ ವಿಷ ಅನಿಲ ಉತ್ಪತ್ತಿಯಾಗುವ ಸ್ಥಳಕ್ಕೆ ಹೋದರೆ, ಕಾರ್ಬನ್ ಮಾನಾಕ್ಸೈಡ್ ಸೇವನೆಯಿಂದ ಇದೇ ರೀತಿಯ ಲಕ್ಷಣಗಳು ಕಾಣಬರುತ್ತವೆ. ಇಂತಹುದೇ ಒಂದು ಸನ್ನಿವೇಶವನ್ನು ನನ್ನ “ವೈದ್ಯ ಕಂಡ ವಿಸ್ಮಯ” ಪುಸ್ತಕದಲ್ಲಿರುವ ಒಂದು ಕಥೆಯಲ್ಲಿ ನಿರೂಪಿಸಿದ್ದೇನೆ. ಆದರೆ ಅವಳ ಹೇಳಿಕೆಯ ಪ್ರಕಾರ, ಮಧ್ಯಾಹ್ನದ ಹೊತ್ತು, ಹಬ್ಬದ ಹೆಸರಲ್ಲಿ ಊಟ ಮಾಡಿ ಮನೆಯಲ್ಲೇ ಮಾಮೂಲು ಕೆಲಸಗಳನ್ನು ಮಾಡುತ್ತಾ ಇದ್ದು, ಗಂಡ, ತಾನು ರಾತ್ರಿ ಬರಲು ತಡವಾಗುವುದು ಎಂದು ಹೇಳಿ ಹೋಗಿದ್ದರಿಂದ, ತಾನೇ ಮಾಡಿದ ಅನ್ನ ಸಾರನ್ನಷ್ಟೇ ರಾತ್ರಿ ತಿಂದಿದ್ದಳು ರೇಖಾ.

ಬಾಲ್ಯಾವಸ್ಥೆಯಲ್ಲಿ ಈ ಸೆಪ್ಟಿಕ್ ಪೌಡರ್  ನನ್ನ ಬಾಯಲ್ಲಿ  ಸೆಟ್ಟಿ ಪೊಡ್ಡು ಆಗಿತ್ತು! ಇದು ಈಗೆಲ್ಲೂ ಚಾಲ್ತಿಯಲ್ಲಿ ಇಲ್ಲದಿರುವ ಸಲ್ಫಾ ಡಿಮಿಡಿನ್ ಎಂಬುದು ನನಗೆ ಗೊತ್ತಾಗಿದ್ದು ನಾನು ವೈದ್ಯನಾದ ಮೇಲೆಯೇ!

ಇದರಿಂದ ನನಗೆ ಯಾವುದೇ ಸುಳಿವು ಸಿಕ್ಕದೆ ಇರುವಾಗ, ಕಾರ್ಯಪ್ಪನನ್ನು ನನ್ನ ಕೋಣೆಗೆ ಕರೆದು, ಸ್ವಲ್ಪ ಗಡಸು ಧ್ವನಿಯಲ್ಲೇ ಅವನನ್ನು ತರಾಟೆಗೆ ತೆಗೆದುಕೊಂಡು,
“ನೀನು ಅವಳಿಗೆ ಸೈನೈಡ್‌ಅನ್ನು ಬೆರೆಸಿ ಕೊಟ್ಟಿದ್ದೀಯಾ. ನಿನಗೆ ಅದು ಎಲ್ಲಿ ಹೇಗೆ ಸಿಕ್ಕಿತು ಎಂದು ಹೇಳು” ಕೇಳಿದಾಗ, ಅವನು ಗಾಬರಿಯಾಗಿ,
“ಸೈನೈಡ್ ಅಂದರೆ ಏನು ಸಾರ್, ಅದು ಎಲ್ಲಿ ಸಿಗುತ್ತದೆ, ಏನು ಅದರ ವಿಶೇಷತೆ?” ಎಂದು ಕೇಳಿದ ಅವನ ಮುಖದಲ್ಲಿ ಕಂಡದ್ದು, ಯಾವುದೇ ಕಪಟತನವಿಲ್ಲದ ಬರೀ ಒಂದು ಮುಗ್ಧತೆಯ ನೋಟ. ಅಲ್ಲಿಗೆ ನಾನು ಎಲ್ಲೋ ದಾರಿ ತಪ್ಪುತ್ತಿದ್ದೇನೆ ಎನ್ನುವ ಭಾವನೆ ಬಂದು,
“ಬೆಳಿಗ್ಗಿನಿಂದ ಮನೆಯಲ್ಲಿ ಏನೇನು ಆಯ್ತು ಎನ್ನುವ ವಿವರಗಳನ್ನು ಹೇಳು” ಎಂದಿದ್ದೆ.

“ಸಾರ್, ಇಂದು ಹಬ್ಬದ ದಿನವಾದ್ದರಿಂದ ನನ್ನ ಮಿತ್ರರು ಕೆಲವರು ಅವರ ಮನೆಗೆ ಊಟಕ್ಕೆ ಕರೆದಿದ್ದರು. ನನ್ನ ಹೆಂಡತಿಗೆ ಮಾಂಸಾಹಾರ ಆಗುತ್ತಿರಲಿಲ್ಲ. ಅದರ ಜೊತೆಗೆ ನಾನು ಕುಡಿಯುವುದನ್ನು ಅವಳು ಇಷ್ಟ ಪಡುತ್ತಿರಲಿಲ್ಲ. ನಮ್ಮ ಹಬ್ಬದ ದಿನವಾದ್ದರಿಂದ ಸ್ವಲ್ಪವಾದರೂ ಕುಡಿಯದಿದ್ದರೆ ಹೇಗೆ? ಹೀಗಾಗಿ, ಅವಳನ್ನು ಜೊತೆಯಲ್ಲಿ ಕರಕೊಂಡು ಹೋಗಿರಲಿಲ್ಲ. ಬೆಳಿಗ್ಗೆ ಪೇಟೆಗೆ ಹೋದವನು, ಅಲ್ಲಿ ಯುದ್ಧ ಸ್ಮಾರಕದ ಎದುರುಗಡೆ ಮಾರುತ್ತಿದ್ದ ಕಣಿಲೆಯನ್ನು, ಅಲ್ಲೇ ಪಕ್ಕದಲ್ಲಿದ್ದ ಬೇಕರಿಯಿಂದ ಜಾಮೂನ್, ಖಾರ ತಿಂಡಿ ತಂದು ಅವಳ ಬಳಿ ಕೊಟ್ಟಿದ್ದೆ. ಯಾಕೋ ಜಾಮೂನ್ ಸ್ವಲ್ಪ ಬೂಷ್ಟು ಹತ್ತಿದ ಹಾಗಿತ್ತು, ಆದರೂ ಅವಳಿಗೆ ಅದು ತುಂಬಾ ಇಷ್ಟ ಅಂತ ಅದನ್ನು ತಂದಿದ್ದೆ. ಆನಂತರ ಮನೆ ಬಿಟ್ಟವನು, ಮಿತ್ರರೊಂದಿಗೆ ಹಬ್ಬ ಮಾಡಿ, ರಾತ್ರಿಯ ಗಮ್ಮತ್ತು ಊಟ ಮಾಡಿ ಮನೆಗೆ ಬಂದಿದ್ದೆ.

“ನಾನು ಮನೆ ತಲುಪಿದಾಗ ಅವಳಿದ್ದ ಸ್ಥಿತಿ ಕಂಡು ಗಾಬರಿಯಾಗಿ ಪಕ್ಕದ ಮನೆಯವರನ್ನು ಕರೆದು, ಅವರ ಸಹಾಯ ಪಡೆದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಇದಿಷ್ಟೇ ನಡೆದ ವಿಷಯ. ನನಗೆ ಬೇರೇನೂ ತಿಳಿದಿಲ್ಲ” ಎಂದಿದ್ದ.

ಇಷ್ಟು ಕೇಳಿದ ನನಗೆ ತಲೆಯಲ್ಲಿ ಮಿಂಚು ಹಾಯ್ದಂತಾಗಿ ರೇಖಾಳಿಗೆ ಏನಾಗಿದೆ ಎಂದು ಒಮ್ಮೆಲೆ ಹೊಳೆದು ಬಿಟ್ಟಿತ್ತು. ಕೂಡಲೇ ವಾರ್ಡಿಗೆ ಓಡಿ ಹೋಗಿ ರೇಖಾಳನ್ನು ನಾನು, ರಾತ್ರಿ ಯಾವ ತಿಂಡಿ, ಯಾವ ಸಾರು ತಿಂದಿದ್ದೆ ಎಂದು ಕೇಳಿದೆ. ಸುಸ್ತಾದ ದನಿಯಲ್ಲಿ ರೇಖಾ,
“ಸ್ವಲ್ಪ ಬೆಳ್ಳಗಾಗಿದ್ದ ಜಾಮೂನ್, ಕಣಿಲೆ ಸಾರು ಮತ್ತು ರೊಟ್ಟಿ…”

ಆಕೆ, ಹಾಗಂದದ್ದೇ ತಡ, ನನಗೆ ರೇಖಾಳಿಗೆ ಆಗಿದ್ದೇನು ಎಂಬುದು ಸ್ಪಷ್ಟವಾಗಿ ತಿಳಿದು, ಚಿಕಿತ್ಸೆಯನ್ನು ಮುಂದುವರಿಸಿದ್ದೆ. ಒಂದೆರಡು ದಿನಗಳಲ್ಲಿ ರೇಖಾ ಗುಣ ಮುಖಳಾದಳು.

******

ಈಗ ನಿಮ್ಮ ಕುತೂಹಲ ಪರಿಹರಿಸಲು ಇಲ್ಲಿದೆ ನನ್ನ ವಿವರಣೆ:
ಕಾರ್ಯಪ್ಪ ಬೆಳಿಗ್ಗೆ ಹೊರಗೆ ಹೋದವನು ಅಲ್ಲಿ ಕಂಡ ಕಣಿಲೆಯನ್ನು ಕೊಂಡು ತಂದಿದ್ದ. ಅರಣ್ಯ ಇಲಾಖೆಯವರಿಗೆ ಗೊತ್ತಾಗದಂತೆ, ಅದನ್ನು ಬೆಳ್ಳಂಬೆಳಗ್ಗೆಯೇ ಕಡಿದು, ಸಣ್ಣದಾಗಿ ಚಕ್ರಾಕಾರವಾಗಿ ಕೊಯ್ದು ಆಗಷ್ಟೇ ಒಬ್ಬ ವ್ಯಕ್ತಿ ಮಾರಲು ತಂದಿದ್ದ. ಯಾವಾಗ ಕತ್ತರಿಸಿದ್ದು, ಏನು, ಎತ್ತ ಎಂಬ ವಿವರ ಕೇಳದೆ ಕಾರ್ಯಪ್ಪ ಅದನ್ನು ತಂದು ಮನೆಯಲ್ಲಿ ಕೊಟ್ಟಿದ್ದ. ಸಾಧಾರಣವಾಗಿ ಕಣಿಲೆಯನ್ನು, ಸಣ್ಣಗೆ ಕೊಚ್ಚಿ ಹೆಚ್ಚಿದ ನಂತರ, ಅದನ್ನು ಎರಡು ದಿನಗಳ ತನಕ, ನೀರಿನಲ್ಲಿ ನೆನೆಹಾಕಿ, ದಿನಾ ನೀರನ್ನು ಬಸಿದು ಹಿಂಡಿ ತೆಗೆದ ನಂತರವಷ್ಟೇ ಅಡಿಗೆಗೆ ಬಳಸುತ್ತಾರೆ. ಮೈಸೂರಿನ ಹುಡುಗಿ ರೇಖಾ,ಕೊಡಗಿನಲ್ಲಿ  ಅಪರೂಪವಾಗಿ ಸಿಕ್ಕಿದ ಅದನ್ನು, ರಾತ್ರಿಗೆ ಸಾರು ಮಾಡಿದ್ದಳು.  ಹೇಗಿದ್ದರೂ ಗಂಡ ಊಟಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದ ಆಕೆ, ಅಕ್ಕಿ ರೊಟ್ಟಿ ಮಾಡಿ, ಅದೇ ಕಣಿಲೆ ಸಾರಿನಲ್ಲಿ ನಂಜಿಕೊಂಡು ತಿಂದಿದ್ದಳು. ಜೊತೆಗೆ ಬಾಯಿ ಸಿಹಿಗೆ, ತನಗಿಷ್ಟವೆಂದು ಗಂಡ ತಂದಿದ್ದ ಆ ಬೂಷ್ಟು ಹಿಡಿದಿದ್ದ ಜಾಮೂನನ್ನೂ ಸವಿದಿದ್ದಳು.

ಬಿದಿರಿನ ಚಿಗುರು ಅಥವಾ ಮೊಗ್ಗುಗಳನ್ನು ಕಣಿಲೆ ಅಥವಾ ಕಳಲೆ ಅನ್ನುತ್ತಾರೆ. ಅನೇಕ ಜಾತಿಯ ಬಿದಿರಿನ ಚಿಗುರುಗಳು ಖಾದ್ಯ ಯೋಗ್ಯವಾಗಿದ್ದು, ಇದನ್ನು ಏಷ್ಯಾ ಖಂಡದ ಅನೇಕ ದೇಶಗಳಲ್ಲಿ ಭಕ್ಷ್ಯ ಪದಾರ್ಥವಾಗಿ ಉಪಯೋಗಿಸುತ್ತಾರೆ. ಕಣಿಲೆ ಬಿದಿರಿನ ಚಿಗುರಾದರೂ, ಮೃದುವಾಗಿದ್ದು ಇದರಿಂದ ಸಾರು, ಪಲ್ಯ, ಉಪ್ಪಿನಕಾಯಿ ಮತ್ತಿತರ ಹಲವು ರೀತಿಯ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರಲ್ಲಿ, ವಿಷಪೂರಿತವಾದ ಟ್ಯಾಕ್ಸಿಫೈಲ್ಲಿನ್ ಗ್ಲೂಕೋಸೈಡ್ ಇರುವ ಕಾರಣ, ಇದನ್ನು ಹಾಗೆಯೇ ಬಳಸಲು ಸಾಧ್ಯವಿಲ್ಲ. ಈ ಟ್ಯಾಕ್ಸಿಫೈಲ್ಲಿನ್ ಬಿದಿರಿನಲ್ಲಿ ಸದಾ ಇದ್ದು, ಪ್ರಾಣಿಗಳು ಅದನ್ನು ತಿನ್ನದಂತೆ ತಡೆಯಲು, ಇದು ಒಂದು ರೀತಿಯ ರಕ್ಷಣಾ ಪ್ರಕ್ರಿಯೆಯನ್ನು ಹೊಂದಿದೆ. ಮುಟ್ಟಿದರೆ ಮುನಿ ಗಿಡಗಳಲ್ಲೂ ಇದೇ ರೀತಿಯ ಒಂದು ರಾಸಾಯನಿಕ ಕ್ರಿಯೆ ನಡೆಯುತ್ತದೆ. ಕೀಟಾಹಾರಿ ಸಸ್ಯಗಳಲ್ಲಿ ಹುಳ ಹುಪ್ಪಟೆಗಳು ಮುಟ್ಟಿದಾಗ ನಡೆಯುವ ರಾಸಾಯನಿಕ ಪ್ರಕ್ರಿಯೆಯಂತೆ ಅವುಗಳ ಬಾಯಿ ಮುಚ್ಚಿಕೊಳ್ಳುತ್ತದೆ.

ಬಿದಿರಿನ ಚಿಗುರಿಗೆ ಯಾವುದೇ ರೀತಿಯ ಗಾಯ ಆದರೂ ಈ ಟ್ಯಾಕ್ಸಿಫೈಲ್ಲಿನ್, ಹೈಡ್ರೋಜನ್ ಸೈನೈಡ್ ವಿಷವಾಗಿ ಪರಿವರ್ತನೆ ಗಳ್ಳುತ್ತದೆ. ಅದರಲ್ಲೂ ಕಬ್ಬಿಣ, ತಾಮ್ರ, ಮ್ಯಾಂಗನೀಸ್ ನ ಕತ್ತಿಯಿಂದ ಅದನ್ನು ಕಡಿದಾಗ, ಅದರ ಜೊತೆ ರಾಸಾಯನಿಕ ಸಂಯೋಜನೆ ಹೊಂದಿ ಇನ್ನೂ ಕಠಿಣವಾದ ವಿಷವಾಗಿ ಪರಿವರ್ತಿತಗೊಳ್ಳುತ್ತದೆ. ಇದೇ ಕಾರಣಕ್ಕೆ ಹಿಂದೆ ಹಿರಿಯರು, ಕತ್ತಿಯಲ್ಲಿ ಕತ್ತರಿಸಿದ ಕಣಿಲೆಯ ನೀರನ್ನು ದನ ಕರುಗಳು ಕುಡಿದರೆ ಸಾಯುತ್ತವೆ ಎಂದು ಹೇಳುತ್ತಿದ್ದದ್ದು.

ಹಾಗಾಗಿ ಇದನ್ನು, ದಿನಾ ತೊಳೆದು ಹೊಸ ನೀರಿನಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ನೆನೆಸಿ ಕೊಳೆಸಿದ ನಂತರವೇ ಇದು ಬಳಸಲು ಯೋಗ್ಯ. ಬಸಿದ ನೀರನ್ನು ಯಾವುದೇ ಪ್ರಾಣಿಯೂ ಸೇವಿಸದಂತೆ ಎಚ್ಚರ ವಹಿಸಬೇಕು. ಶುದ್ಧವಾದ ನೀರಿನಲ್ಲಿ ಕುದಿಸಿದಾಗ ಇದರಲ್ಲಿನ ವಿಷಯುಕ್ತ ಸೈನೈಡ್ ಅಂಶಗಳು ಜಲ ವಿಚ್ಛೇದನಗೊಂಡು ಹೈಡ್ರೋಸೈನೈಡ್ ಎಂಬ ವಿಷದ ಆವಿಯಾಗಿ ಪರಿವರ್ತನೆಗೊಂಡು, ಗಾಳಿಯಲ್ಲಿ ವಿಲೀನವಾಗಿ, ಅದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ.

ಸೈನೈಡ್ ಒಂದು ಅಪಾಯಕಾರಿ ವಿಷ. ಇದನ್ನು ಸೇವಿಸಿದರೆ, ಇದು ಜೀವ ಕೋಶದ ಒಳಹೊಕ್ಕು ಉಸಿರನ್ನು ನಿರ್ಬಂಧಿಸುತ್ತದೆ. ಹಾಗಾಗೀ ರೋಗಿಯಲ್ಲಿ ಉಸಿರಾಟದ ತೊಂದರೆ, ತಲೆನೋವು, ತಲೆ ತಿರುಗುವಿಕೆ, ವಾಂತಿ, ಕಿವಿಯಲ್ಲಿ ರಿಂಗಣದ ಸದ್ದು, ಸುಪ್ತಾವಸ್ಥೆ, ಅಪಸ್ಮಾರ, ಪ್ರಜ್ಞಾಹೀನತೆ, ಚರ್ಮದ ಮೇಲೆ ಕೆಂಪು ಬೊಬ್ಬೆಗಳು, ಬಾಯಲ್ಲಿ ಕೊಳೆತ ಬಾದಾಮಿ ವಾಸನೆ, ಇಂತಹ ಲಕ್ಷಣಗಳನ್ನು ಕಾಣಬಹುದು.

ಈ ವಿಷವು ಬೇಗನೇ ಶರೀರದಲ್ಲಿ ಹಬ್ಬುವುದರಿಂದ ಕೂಡಲೇ ಆ ವ್ಯಕ್ತಿಗೆ ಆಮ್ಲಜನಕವನ್ನು ಕೊಟ್ಟು, ನಂತರ, ಇತರ ಚಿಕಿತ್ಸೆಯನ್ನು ಮಾಡಬೇಕು. ಸೈನೈಡ್ ಎಷ್ಟು ಬೇಗ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸಲು ಒಂದು ಕಾಲ್ಪನಿಕ ಕಥೆ ಇದೆ. ಹಿಂದೊಮ್ಮೆ ಒಬ್ಬ ವಿಜ್ಞಾನಿ ಇದರ ರುಚಿ ಹೇಗಿದೆ ಎಂದು ಪರೀಕ್ಷಿಸಲು ಪೇಪರ್, ಪೆನ್ ಕೈಯಲ್ಲಿ ಇಟ್ಟುಕೊಂಡು, ಸೈನೈಡ್ ಅನ್ನು ನಾಲಿಗೆಯ ಮೇಲೆ ಇಟ್ಟುಕೊಂಡನಂತೆ. ಇಂಗ್ಲೀಷಿನ ಎಸ್ ಅಕ್ಷರ ಬರೆಯುವಷ್ಟರಲ್ಲಿ ಆತನ ಜೀವ ಹಾರಿ ಹೋಗಿದೆಯಂತೆ. ಅವನು ಬರೆದ ಎಸ್ ಅಂದರೆ ಸ್ವೀಟ್ (ಸಿಹಿ), ಸಾಲ್ಟಿ (ಉಪ್ಪು), ಅಥವಾ ಸೋರ್ (ಹುಳಿ) ಎಂಬುದು ಇದುವರೆಗೆ ಯಾರಿಗೂ ಅರ್ಥ ಆಗಿಲ್ಲವಂತೆ!!.

*******

ನಮ್ಮ ರೇಖಾನ ವಿಷಯದಲ್ಲಿ ಆಗಿದ್ದೂ ಇದೇ ಪ್ರಕ್ರಿಯೆ. ಕಣಿಲೆಯ ಬಗ್ಗೆ ಏನೂ ತಿಳಿಯದ ಪೇಟೆಯ ಹುಡುಗಿ, ಅಂದೇ ಕುಯ್ದಿದ್ದ ಕಣಲೆಯನ್ನು ಮೊದಲ ಬಾರಿಗೆ ಸಾರು ಮಾಡಿದ್ದಾಳೆ. ಅದರಲ್ಲಿದ್ದ ಸೈನೈಡ್ ಅಂಶ ಶರೀರಕ್ಕೆ ಸೇರಿ ಸಾಯುವ ಸ್ಥಿತಿಗೆ ತಲುಪಿದ್ದಾಳೆ. ಜೊತೆಗೆ, ಬಾಯಿ ರುಚಿಗೆಂದು, ಹಳಸಿದ ತಿನಿಸನ್ನು, ತಿನ್ನಲು ಹೋಗಿ ಸ್ವರ್ಗದ ಹಾದಿ ಹಿಡಿದಿದ್ದ ಅವಳು, ಅದೃಷ್ಟವಶಾತ್ ಅರ್ಧಕ್ಕೇ ಹಿಂತಿರುಗಿ ಬಂದಿದ್ದಳು. ವಿಷ ಭರಿತ ಕಣಿಲೆಯ ಪದರಗಳ ವರ್ತುಲಾಕಾರದ ಸುರುಳಿಗಳ ಒಳಗೆ ರೇಖಾಳ ಜೊತೆ, ನಾವೂ ಒಮ್ಮೆ ಇಣುಕು ಹಾಕಿ ಹೊರ ಬಂದಿದ್ದೆವು.

ವೈದ್ಯಕೀಯ ಸೇವೆಯಲ್ಲಿ, ನಾವುಗಳು, ರೋಗಿಯ ರೋಗ ಲಕ್ಷಣಗಳಲ್ಲದೆ, ಅವರ ಇತರ ವಿಷಯಗಳ ಬಗ್ಗೆ ಆದಷ್ಟು ವಿಚಾರಣೆ, ವಿಶ್ಲೇಷಣೆಯನ್ನು ನಡೆಸದೆ, ಚಿಕಿತ್ಸೆ ನಡೆಸಲು ಮುಂದಾದರೆ, ಎಡವಟ್ಟುಗಳು ಸಂಭವಿಸುವ ಸಾಧ್ಯತೆಗಳೇ ಹೆಚ್ಚು.