ಹಾದಿ!
ಕಾಲದ ಚಕ್ರ ಸದ್ದಿಲ್ಲದೆ
ಸರಸರನೆ ಸರಿಯುತಿದೆ
ಒಮ್ಮೆ ಬೆಳದಿಂಗಳ ಬೆಳಕು
ಮತ್ತೊಮ್ಮೆ ಕಡುಕತ್ತಲ ಹಾದಿ
ಮನದ ಮಾಳಿಗೆಯಲಿ
ಕಳೆದ ನೆನಪುಗಳು ಸುಪ್ತವಾಗಿ
ಸುತ್ತಲೂ ಸುತ್ತುತ್ತಿವೆ!
ಹಸಿದವರ ಹಸಿವಡಗಿಸಲು
ಹಸಿರು ಚಿಗುರಿಲ್ಲ
ಕನಸುಗಳ ಹೊತ್ತು
ಭರವಸೆಯ ಹೊದ್ದು
ಕಾದು ಕೂತ ರೈತನ
ಕಣ್ಣೀರು ಬತ್ತಿಲ್ಲ
ಬಡತನದ ಬೇಗೆಯಲ್ಲಿ
ನೊಂದು ಬೆಂದು ನಲುಗಿ
ನರಳುತಿರುವವರ ಆಕ್ರಂದನ ಅಳಿದಿಲ್ಲ!
ದ್ವೇಷ ಅಸೂಯೆ ಸರಿದಿಲ್ಲ
ಭವಿಷ್ಯಕೆ ಮತ್ತಷ್ಟು ಮಗದಷ್ಟು
ಕೂಡಿಡುವ ಬಯಕೆ ಬರಿದಾಗಿಲ್ಲ
ನಾ ಮೇಲು ನೀ ಕೀಳು
ಎಂಬ ಭಾವ ಅಳಿದು
ಬಾಂಧವ್ಯದ ಬೆಸುಗೆ ಬೆಸದಿಲ್ಲ
ನಾವೆಲ್ಲಾ ಒಂದೇ ಎನ್ನುವ
ಹೊಸ ಭಾವ ಅಂಕುರಿಸಿಲ್ಲ
ಮನದ ಮೊಗ್ಗು ಬಿರಿದಿಲ್ಲ
ಹೂವಾಗಿ ಅರಳಿ ಕಂಪು ಸೂಸಿಲ್ಲ
ವರುಷ ಉರುಳುತಿದೆ
ಕಾಲ ಸರಿಯುತಿದೆ!
ಸೌಮ್ಯಶ್ರೀ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಗಸನಮರ ಗ್ರಾಮದವರು.
ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಕತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸೌಮ್ಯಶ್ರೀಯವರ ಈ ಚೊಚ್ಚಲ ಕಥಾಸಂಕಲನ ೨೦೧೭ರಲ್ಲಿ ಪ್ರಕಟವಾಗಿದೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ