ಬೆಳಕಿರುವ ಜಗದಲ್ಲಿ ತನ್ನವರು ಎಲ್ಲೋ ಕಳೆದು ಹೋಗಿರುವಾಗ ಹುಡುಕಿ ಸೇರಿಕೊಳ್ಳಲು ಹಂಬಲಿಸಿ ಸೋತು ಹೋದಳು. ಸುಮ್ಮನೆ ಅಲೆಯಬೇಕು. ಒಂದೂರಲಿ ಒಂದೆರಡು ದಿನ. ಭಿಕ್ಷೆಯ ಕೂಳು ಹೊಟ್ಟೆಗಿತ್ತು. ಹರಿದ ಎರಡು ದುಪ್ಪಟಿಗಳು ರಾತ್ರಿ ಚಳಿಗಿದ್ದವು. ರಾತ್ರಿ ಮಾತ್ರ ಸ್ನಾನದ ಹಂಗಿನಲ್ಲಿ ಅವಳ ಬೆತ್ತಲೆ ದೇಹವನ್ನು ನೋಡಿತ್ತು. ಆಚೆ ನೆಲದಲ್ಲಿ ಕೂಡಿಸಿಟ್ಟ ಮೂರು ಕಲ್ಲುಗಳು ಅವಳ ಅಡುಗೆ ಮನೆ. ಇಂತಿಪ್ಪ ಆಕೆಯ ಬದುಕು ಬೆಳಕು, ಕತ್ತಲುಗಳ ಮಧ್ಯೆ ನುಗ್ಗುತ್ತಿತ್ತು.
ಸದಾಶಿವ ಸೊರಟೂರು ಬರೆದ ಕಥೆ “ಬಯಲು” ನಿಮ್ಮ ಈ ಭಾನುವಾರದ ಓದಿಗೆ

 

ಸೋಮವಾರ ಮತ್ತೆ ಮತ್ತೆ ಬಂದು ನಿಂತಾಗ ಆಕೆ ಬೆಚ್ಚುತ್ತಾಳೆ. ವಾರದ ಕೊನೆಗೆ ಅವಳಿಗೊಂದು ನಿಶ್ಚಿಂತೆಯಷ್ಟೆ! ಅಂದು ಶಾಲೆಯ ಬೀಗಗಳು ತೆರೆಯುವುದಿಲ್ಲ. ಪ್ರಾಂಕ್ ಲಂಗದ ಹುಡುಗಿಯರು ಅಲ್ಲಿ ಕುಣಿಯುವುದಿಲ್ಲ. ಕಾರಿಡರ್ ಬೆತ್ತಲೆ ಬಿದ್ದಿರುತ್ತದೆ. ಅಲ್ಲೊಂದು ಬೆಚ್ಚನೆಯ ಜಾಗ ಹುಡುಕಿ ಎರಡು ದಿನಗಳ ಕಾಲ ಮನಸೋ ಇಚ್ಚೆ ಕಳೆದು ಬಿಡುತ್ತಾಳೆ. ಮತ್ತೆ ಸೋಮವಾರದಿಂದ ರಾತ್ರಿಯಾಗುವುದನ್ನೇ ಕಾಯಬೇಕು.

ಮೂರು ಮಂದಿ ಇದ್ದವರು ಇಬ್ಬರಾಗಿದ್ದಾರೆ! ಇಬ್ಬರೆ!? ಆಕೆ ಮತ್ತು ಒಂದು ವರ್ಷವೂ ಕೂಡ ತುಂಬದ ಮಗು. ಈರಪ್ಪ ಮೆಚ್ಚಿಕೊಂಡು ಜೊತೆಯಾಗಿದ್ದ. ಹೀಗೆ ಯಾವುದೊ ಊರ ಶಾಲೆಯ ಅಂಗಳದಲ್ಲಿ ಜೊತೆಗೂಡಿದ ಮತ್ತೊಂದು ಅವರದೇ ತರಹ ಅಲೆಯುವ ಪಂಗಡದಲ್ಲಿದ್ದವ. ಈರಪ್ಪ ಈಕೆಯನ್ನು ನೋಡಿ ಒಂದೇ ಗುಕ್ಕಿಗೆ ಮೆಚ್ಚಿದ್ದ. ಆಕೆಯಾದಾದರೂ ಎಂತಹ ಚೆಲುವು!? ಆದರೆ ನೆಗ್ಗಿದ ಬದುಕಿನಲ್ಲಿ ಮಸುಕಾಗಿತ್ತು. ಅವಕಾಶ ಸಿಕ್ಕಿದ್ದರೆ ಆಕೆ ಮಾಡೆಲ್ ಜಗತ್ತನ್ನು ಆಳುತ್ತಿದ್ದಳೋ ಏನೊ! ಅಂತಹ ಚಲುವಿ ಒಮ್ಮೆಯಾದರೂ ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡಿದ್ದರ ಅನುಮಾನವಿದೆ. ನೀ ಚಂದ ಇದಿಯಾ ಕಣೆ ಅಂತ ಅವಳನ್ನು ಅವಳಿಗೆ ಪರಿಚಯ ಮಾಡಿಸುವ ಒಂದೇ ಒಂದು ಶಬ್ದ ಅವಳ ಕಿವಿಯ ಮೇಲೆ ಬಿದ್ದಿದ್ದರ ಬಗ್ಗೆಯೂ ಅನುಮಾನವಿದೆ. ಆದರೆ ಆಕೆ ತನ್ನ ಸೌಂದರ್ಯ ಕಂಡುಕೊಂಡಿದ್ದು ಸಮಾಜ ಆಕೆಯನ್ನು ನೋಡುತ್ತಿದ್ದ ಪರಿಗೆ. ಮೊಲೆ, ಸೊಂಟ, ನಿತಂಬವನ್ನೆ ನೋಡುವ ಜನರ ಮಧ್ಯೆ ಆಕೆಗೆ ತನ್ನ ಅಂದದ ಬಗ್ಗೆ ಈಗೀಗ ಅರಿವಾಗಿದೆ.

ಪೂರ್ಣ ಬಯಲ ಬಾಳು. ಈರಪ್ಪನೊಂದಿಗೆ ದೇಹ ಹಂಚಿಕೊಂಡಿದ್ದು ಬಯಲಲ್ಲೆ, ಕಂದನನ್ನು ಹಡೆದಿದ್ದು ಬಯಲಲ್ಲೆ. ಜಗತ್ತನ್ನೇ ಮನೆಮಾಡಿಕೊಂಡವರು ಇವರು. ಮೂರೇ ಮೂರು ತಿಂಗಳಿಗೆ ಕಂದನನ್ನು ಬೆನ್ನಿಗೆ ಕಟ್ಟಿಕೊಂಡು ಬೀದಿಗೆ ಕೂದ್ಲಾ, ಪಿನ್ನಾ ಮಾರೋಕೆ ಇಳಿದಿದ್ದಳು. ಮಗು ಮಲಗಿ ಎಚ್ಚರವಾಗಿ ಮತ್ತೆ ಮಲಗುತ್ತಿತ್ತು. ರಾತ್ರಿಯ ರೊಟ್ಟಿ, ತಣ್ಣನೆಯ ಅನ್ನ, ಬಗೆ ಬಗೆಯ ಸಾರುಗಳು ಸಿಗುತ್ತಿದ್ದವು. ಈರಪ್ಪನೊಂದಿಗೆ ಸವಿದು, ಕೂದಲು ಒಪ್ಪಿಸಿ, ರಾತ್ರಿ ಬಯಲಲ್ಲೇ ದೇಹವನ್ನೂ ಒಪ್ಪಿಸಿದರೆ ಆ ದಿನ ಅಲ್ಲಿಗೆ ಮುಗಿಯುತ್ತಿತ್ತು. ಮತ್ತೆ ಬೆಳಗು, ಕಂದ ಬೆನ್ನಿಗೆ, ದಾರಿ ಇನ್ನೊಂದು ಊರಿಗೆ. ಮೊನ್ನೆ ತಾನೇ ‘ಮೊಲ ಹೊಡೆದು ತರ್ತೀನಿ, ರಾತ್ರಿ ಹಬ್ಬ ಮಾಡೋಣ’ ಅಂತ ಹೇಳಿ ಹೋದ ಈರಪ್ಪ ಇವತ್ತಿಗೂ ಬಂದಿಲ್ಲ. ನಾಲ್ಕು ತಿಂಗಳ ಮೇಲೆ ಹತ್ತಾರು ದಿನಗಳು ಕಳೆಯುತ್ತಿವೆ. ಹುಡುಕಿ ಹುಡುಕಿ ಸೋತು ಆ ಊರಿನ ಬಯಲು ಬಿಟ್ಟು ಬಂದು ಈ ಊರ ಬಯಲಿಗೆ ಬಂದಿದ್ದಾಳೆ. ಆಕಾಶವೇ ಚಾವಣಿಯಾಗಿರುವಾಗ ಯಾವ ಬಯಲಾದರೇನು? ಈರಪ್ಪನ ಯೋಚನೆಗಿಂತ ಮಗಳ ಭವಿಷ್ಯವನ್ನು ಕಣ್ಣಲ್ಲಿಟ್ಟುಕೊಂಡು ಆಕಾಶದಲ್ಲಿ ಹೋಗುವ ಸೂರ್ಯ ಚಂದಿರರನ್ನು ನೋಡುತ್ತಾ ಕಡಕಲು ರೊಟ್ಟಿಗಳನ್ನು ಉಂಡು ಮಲಗುತ್ತಾಳೆ.

ಬೆಳಕಿರುವ ಜಗದಲ್ಲಿ ತನ್ನವರು ಎಲ್ಲೋ ಕಳೆದು ಹೋಗಿರುವಾಗ ಹುಡುಕಿ ಸೇರಿಕೊಳ್ಳಲು ಹಂಬಲಿಸಿ ಸೋತು ಹೋದಳು. ಸುಮ್ಮನೆ ಅಲೆಯಬೇಕು. ಒಂದೂರಲಿ ಒಂದೆರಡು ದಿನ. ಭಿಕ್ಷೆಯ ಕೂಳು ಹೊಟ್ಟೆಗಿತ್ತು. ಹರಿದ ಎರಡು ದುಪ್ಪಟಿಗಳು ರಾತ್ರಿ ಚಳಿಗಿದ್ದವು. ರಾತ್ರಿ ಮಾತ್ರ ಸ್ನಾನದ ಹಂಗಿನಲ್ಲಿ ಅವಳ ಬೆತ್ತಲೆ ದೇಹವನ್ನು ನೋಡಿತ್ತು. ಆಚೆ ನೆಲದಲ್ಲಿ ಕೂಡಿಸಿಟ್ಟ ಮೂರು ಕಲ್ಲುಗಳು ಅವಳ ಅಡುಗೆ ಮನೆ. ಇಂತಿಪ್ಪ ಆಕೆಯ ಬದುಕು ಬೆಳಕು, ಕತ್ತಲುಗಳ ಮಧ್ಯೆ ನುಗ್ಗುತ್ತಿತ್ತು.

ಈರಪ್ಪ ಹೋಗಿ ಎರಡು ತಿಂಗಳು ಕಳೆದಿವೆಯಷ್ಟೇ! ನೆನೆದಷ್ಟು ಕಣ್ಣುಗಳು ತೇವವಾಗುತ್ತವೆ. ಪ್ರತಿ ದಿನ ಸಾಯುವ ಸೂರ್ಯ ಇವಳಲ್ಲಿ ಭಯ ತುಂಬಿ ಹೋಗುತ್ತಾನೆ. ಈಗೀಗ ಕತ್ತಲೆ ಹೆದುರುವಂತೆ ಕಲ್ಲಾಗಿದ್ದಾಳೆ. ಅವಳದು ಏನಿದ್ದರೂ ಬರುವ ನಾಳೆಯದಷ್ಟೇ ಯೋಚನೆ. ಈಗೀಗ ಹಳೆಯದನ್ನು ಹಿಡಿದು ಹೊರಟರೇ ಅಲ್ಯಾರು ಸಿಗಲಾರರು. ಅಲ್ಲೇನು ಸಿಗುವುದಿಲ್ಲ ಎಂಬುದು ಹೆಚ್ಚು ಸ್ಪಷ್ಟವಿದೆ. ಮಟ್ಟಸವಾದ ಶಾಲೆಯ ಸಿಮೆಂಟ್ ನೆಲಕ್ಕೆ ದಪ್ಪನೆಯ ಮೊಲೆಗಳನ್ನು ಒತ್ತಿ ಮಲಗುತ್ತಾಳೆ. ಗೊತ್ತಿಲ್ಲದೇ ಆಕೆಯ ಕಾಲುಗಳು ಉಜ್ಜಿಕೊಳ್ಳುತ್ತವೆ.

ಕಪ್ಪು ಬಿಳುಪು ಬಿಟ್ಟರೆ ಆಕೆಯಲ್ಲಿ ಹಗಲು ರಾತ್ರಿಗೆ ವ್ಯತ್ಯಾಸವಿಲ್ಲ. ಹಗಲಿನಲ್ಲಿ ಊರಿನ ಮಧ್ಯೆ ಕೂದಲು ಕೊಳ್ಳುವ, ಜೊತೆಗಿಷ್ಟು ಭಿಕ್ಷೆ ಬೇಡುವಲ್ಲಿ ಅವಳಿಗೆ ಯಾವುದೇ ಮುಜುಗರವಿಲ್ಲ. ಅವಳೆಡೆಗೆ ಮೂಡುವ ನೋಟಗಳಿಗೆ ಅವಳಲ್ಲಿ ಪ್ರತಿಯಾಗಿ ಯಾವುದೇ ಭಾವನೆಗಳಿಲ್ಲ. ದೊಡ್ಡ ಬಂಗಲೆ, ಒಡೆದ ಹೆಂಚಿನ ಮನೆ, ಹೆಂಡತಿಯ ಸೆರಗನ್ನು ಹಿಡಿದು ಸುತ್ತುವ ಗಂಡಸು, ಮಾರಾಮಾರಿಗೆ ಇಳಿದು ಬಿಡುವ ಇನ್ಯಾರದೊ ಮನೆಯ ದಂಪತಿಗಳು, ದಿನಕ್ಕೊಂದೇ ಊಟಕ್ಕೆ ತಳ್ಳಿಸಿಕೊಂಡು ಬದುಕುವ ಇಳಿ ಜೀವಗಳು ಅವಳಿಗೆ ಯಾವುದೇ ಪರಿಣಾಮವನ್ನು ಬೀರಲಾರವು. ನಿರ್ದಯ ನೋಟವನ್ನು ಬೀರಿ ಮುಂದಕ್ಕೆ ಹೋಗುತ್ತಾಳೆ. ಚಿಕ್ಕಂದಿನಿಂದಲೂ ದೂಡಿಕೊಂಡು ಬಂದಿದ್ದು ಇಂಥದ್ದೆ ಬದುಕು. ಬದುಕಿನ ಒಂಚೂರು ಮುಖವನ್ನು ತೋರಿಸಿ ಕಾಣೆಯಾದ ಈರಪ್ಪ, ಬೆನ್ನ ಮೇಲೆ ಕೂತ ಅಮಾಯಕ ಕಂದ ಇವೆಲ್ಲವೂ ಅವಳನ್ನು ಮತ್ತಷ್ಟು ನಿರ್ಧಯಿಯನ್ನಾಗಿ ಮಾಡಿದ್ದಾವಾ? ಗೊತ್ತಿಲ್ಲ!

ಕತ್ತಲು! ಅಮವಾಸ್ಯೆ ಕಳೆದು ಎರಡು ಮೂರು ದಿನಗಳಾಗಿರಬಹುದು. ಬೆಳಕಿರುವಾಗಲೇ ಮಗುವಿಗೆ ಗುಕ್ಕನಿಕ್ಕಿ, ತಾನೂ ಉಂಡು ಕತ್ತಲು ಮತ್ತೊಷ್ಟು ಕಪ್ಪಾಗುವ ವೇಳೆಗಾಗಲೇ ನೆಲಕ್ಕೆ ಮೈ ಚಾಚಿದ್ದಳು. ಅವಳಿಗಿಂತ ಮೊದಲೇ ಮಗು ನಿದ್ದೆಯನ್ನ ಕರೆದುಕೊಂಡಿತ್ತು. ಈಕೆ ಯಾವಾಗ ನಿದ್ದೆಗೆ ಸೇರಿಕೊಂಡಳೋ ಅವಳಿಗೆ ಗೊತ್ತಿಲ್ಲ.

ನಾಲ್ಕು ತಿಂಗಳ ಮೇಲೆ ಹತ್ತಾರು ದಿನಗಳು ಕಳೆಯುತ್ತಿವೆ. ಹುಡುಕಿ ಹುಡುಕಿ ಸೋತು ಆ ಊರಿನ ಬಯಲು ಬಿಟ್ಟು ಬಂದು ಈ ಊರ ಬಯಲಿಗೆ ಬಂದಿದ್ದಾಳೆ. ಆಕಾಶವೇ ಚಾವಣಿಯಾಗಿರುವಾಗ ಯಾವ ಬಯಲಾದರೇನು? ಈರಪ್ಪನ ಯೋಚನೆಗಿಂತ ಮಗಳ ಭವಿಷ್ಯವನ್ನು ಕಣ್ಣಲ್ಲಿಟ್ಟುಕೊಂಡು ಆಕಾಶದಲ್ಲಿ ಹೋಗುವ ಸೂರ್ಯ ಚಂದಿರರನ್ನು ನೋಡುತ್ತಾ ಕಡಕಲು ರೊಟ್ಟಿಗಳನ್ನು ಉಂಡು ಮಲಗುತ್ತಾಳೆ.

ಎಚ್ಚರವಾದಾಗ ಅಥವಾ ಅದಕ್ಕಾಗಿಯೇ ಎಚ್ಚರವಾಯಿತೋ; ಅವಳಿಗೆ ಅನುಮಾನ. ಆದರೆ ಎಚ್ಚರವಾದಾಗ ಮಾತ್ರ ಮೈಮೇಲೆ ಯಾರೊ ಬಿದ್ದುಕೊಂಡ ಭಾವ. ಮೊಲೆಗಳ ಮೇಲೆ ಕೈಗಳು ಓಡಾಡುತ್ತಿವೆ. ಧಿಢೀರನೆ ಕಣ್ಣು ಬಿಟ್ಟರೆ ಇನ್ನೂ ಕತ್ತಲಿದೆ. ಮೈಮೇಲೆ ಯಾವುದೊ ಗಂಡಸು ಬಿದ್ದಿದೆ. ಒಂದು ಕ್ಷಣ ಏನೂ ಮಾಡಲು ಅರಿಯದೆ ಬಿಗಿಯಾಗಿ ಎದ್ದು, ಕೂರಲು ಪ್ರಯತ್ನಸಿದಳು. ಮೈಮೇಲೆ ಬಿದ್ದ ದೇಹ ಏಳಲು ಬಿಡಲಿಲ್ಲ. ರಭಸಕ್ಕೆ ಕೂಗಿದಳು. ಕೂಗು ಕತ್ತಲಲ್ಲಿ ಕರಗಿತೆ ವಿನಃ ಮತ್ತೇನನ್ನು ಮಾಡಲಿಲ್ಲ. ಈಗ ಒಂದು ಕೈ ಮೊಲೆಯಿಂದ ಬಾಯಿಗೆ ಸೇರಿ ಕೂಗದಂತೆ ತಡೆಯಿತು. ಮೈಮೇಲೆ ಹೊಯ್ದಾಡಲು ಗಂಡಸ್ಸು ದೇಹ ಹವಣಿಸುತ್ತಿದ್ದ ಪರಿ ಅವಳಿಗೆ ಅರ್ಥವಾಯಿತು. ಪ್ರಯತ್ನಗಳು ಕತ್ತಲಲ್ಲಿ ಕರಗುತ್ತಿದ್ದವೆ ವಿನಃ ಫಲಿಸಲಿಲ್ಲ. ಕೊನೆಗೆ ಸೋತು ಮೈ ಹಗುರಬಿಟ್ಟು ಬಿದ್ದು ಕೊಂಡಳು. ಈರಪ್ಪ ನೆನಪಾದ. ಚಳಿಯಲ್ಲಿ ಆಕೆಯನ್ನು ಬೆವರಿಸಿ ಗಂಡಸು ದೇಹ ಎದ್ದು ಹೊಯಿತು. ತಾನು ಹೊದ್ದ ಹರಕಲು ದುಪ್ಪಟಿಯನ್ನು ಮಗಳಿಗೆ ಹೊಚ್ಚಿ ಹಾಗೆ ಕೂತು ಬಿಟ್ಟಳು, ದೇಹ ಸಣ್ಣಗೆ ನಡುಗುತ್ತಿತ್ತು. ಯಾಕೆ? ಯಾರು? ಮುಂದೇನು? ಇನ್ಮೇಲೆ ಹೀಗೆನಾ? ಬದುಕು ಏನು? ಹೇಗೆ ಬದುಕುವುದು? ನಾಳೆ ಬೇರೆ ಊರಲ್ಲೂ ಇದೆ ಆದರೆ? ಸತ್ತು ಹೋಗಿದ್ದ ಭಾವನೆಗಳು ಯಾಕೊ ಚಿಗುರುತ್ತಿವೆಯಲ್ಲ!? ಕತ್ತಲಲ್ಲಿ ಶೂನ್ಯದೆಡೆಗೆ ದೃಷ್ಟಿ ನೆಟ್ಟು ಯೋಚಿಸ ತೊಡಗಿದಳು. ದೇಹ ಹಗುರ ಹಗುರ. ಒಮ್ಮೆ ಅಸಹ್ಯವೆನಿಸಿದ್ದರೂ ಕೊನೆಗೆ ಕೈಚೆಲ್ಲಿ ಸುಮ್ಮನಾಗಿದ್ದಳು. ನನಗೂ ಅದೇ ಬೇಕಿತ್ತಾ? ಅವಳ ಒಳಗೆ ಅವಳ ಪ್ರಶ್ನೆಗಳಿಗೇ ಉತ್ತರವಿಲ್ಲ. ಶೂನ್ಯದ ನೋಟ ನೂರು ಪ್ರಶ್ನೆಗಳನ್ನು ಹಾಕುತ್ತಲೇ ಇತ್ತು. ಉತ್ತರ ಹುಡುಕಲು ಸಿದ್ಧವಾಗುತ್ತಲೇ ಹೋದಳು. ಅದಾಗಲೇ ಆ ಕಡೆ ಮುಗಿಲು ಕೆಂಪಾಗ ತೊಡಗಿತು. ಭಾನುವಾರ! ಶಾಲೆಯ ಕಟ್ಟೆಯ ಆಶ್ರಯಕ್ಕೆ ಭಂಗವಿಲ್ಲದ್ದು ನೆನಪಾಯಿತು. ಮಗು ಮಗ್ಗಲು ಬದಲಿಸಿ ಮತ್ತೆ ನಿದ್ದೆಗೆ ಜಾರಿತು.

ಎಂದೂ ಕಾಡದ ಯೋಚನೆಗಳು ಅಂದು ಹುಟ್ಟಿಕೊಂಡವೊ ಅನ್ನುವಂತೆ ಬರತೊಡಗಿದವು. ಪಕ್ಕದಲ್ಲಿ ಹಾಯಾಗಿ ನಿದ್ದೆ ಮಾಡುತ್ತಿದ್ದ ಮಗು ಮತ್ತೆ ಮತ್ತೆ ನೆನಪಾಗತೊಡಗಿತು. ಬೆಳಕು ಬಂದ ಕಾರಣಕ್ಕೆ ಹಕ್ಕಿಗಳು ಅರಚುತ್ತಿದ್ದರೂ ಆಕೆಗೆ ಕೇಳಿಸುತ್ತಿರಲಿಲ್ಲ. ಮನದ ಮಂಥನ ಹೊರಗಿನ ಜಂಜಾಟ ಗ್ರಹಿಸಲು ಸೋತಿತ್ತು. ಹುಟ್ಟುವ ಭಾವಗಳಿಗೆ ಶಬ್ದಗಳನ್ನು ಸೇರಿಸಿ ಆಚೆ ಎಸೆದರೆ ಕೇಳಿಸಿಕೊಳ್ಳುವರ್ಯಾರು? ಹುಟ್ಟಿದ ಪ್ರತಿ ಮಾತನ್ನು ಹುಟ್ಟಿದ್ದಲ್ಲೇ ಸಾಯಿಸಿಲು ಕೂಡ ಇಷ್ಟವಿಲ್ಲ. ತನ್ನ ಮಾತನ್ನು ತಾನೇ ಕೇಳಿಸಿಕೊಳ್ಳಬೇಕು. ಸಮರ್ಥನೆಗೆ ಇಳಿದು ಬಿಡಬಾರದು. ಮನಸ್ಸು ಹೊರಗಡೆಯಲ್ಲಾ ಸುತ್ತಾಡಿ ಬರಲಿ ಎಲ್ಲವ ಒಂದೆಡೆ ಹಾಕಿ ಕಲಸಿ ಕಲಸಿ ತಗೆಯೋಣವೆಂದು ನಿರ್ಧರಿಸಿದಳಾದರೂ. ತನ್ನೊಳಗಿನ ಮಾತಿನ ಯುದ್ಧ ಶುರುವಾದಂತೆ ಇಹವನ್ನು ಮರೆತು ಕಲ್ಲಂತಹ ಒಳಗಿನ ಭಾವವನ್ನು ಪ್ರೋತ್ಸಾಹಿಸಿದಳು.

ಇಂತದೊಂದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೂ ನನಗ್ಯಾಕೆ ಏನೂ ಅನ್ನಿಸುವುದಿಲ್ಲ? ಮನೆ ಮನೆಯಿಂದ ಪಡೆದ ತಂದ ಭಿಕ್ಷೆಯಂತೆಯೇ ಇದನ್ನು ಕೂಡ ಮನಸ್ಸು ಭಾವಿಸುತ್ತಿದೆಯ? ನನಗೆ ಏನೂ ಗೊತ್ತಾಗ್ಲಿಲ್ಲ ಆದರೆ ಒಂದಂತೂ ಸತ್ಯ. ಈ ತರಹದ್ದು ಇನ್ನೂ ನನಗೆ ನಿತ್ಯ. ಒಂದು ಎರಡು ಮೂರು ಹೀಗೆ ಒಂದು ರಾತ್ರಿಗೆ ಆಕ್ರಮಣವಾಗಬಹುದು! ಕಾಯಲಿಕ್ಕಾದರೂ ಯಾರಿದ್ದಾರೆ ಕತ್ತಲೆಯೂ ಕೂಡ ಬೆತ್ತಲೆ ಬಿದ್ದಿರುವಾಗ. ತಪ್ಪಿಸಿಕೊಂಡು ಮುಂದಿನ ಊರಿಗೆ ಹೋಗಬಹುದು. ಅಲ್ಲೂ ಕೂಡ ಇರುವುದು ಮನುಷ್ಯರೆ. ಇನ್ನೂ ಹೆಚ್ಚಿನ ಆಕ್ರಮಣಗಳಾಗಬಹುದು. ನನಗಿರುವುದು ಎರಡೆ ಆಯ್ಕೆ. ಎಲ್ಲವನ್ನೂ ಒಪ್ಪಿಕೊಂಡು ಬದುಕುವುದು. ಇಲ್ಲವೇ ಸಾಯುವುದು. ಸತ್ತರೇ? ನನ್ನ ಮಗು!? ಹೌದು ನಾನೇಕೆ ಸಾಯಬೇಕು? ನನ್ನದೇನು ತಪ್ಪು? ಯಾರೋ ಬಂದು ಮೈಮೇಲೆ ಬೀಳುತ್ತಾನೆ ಅಂದ ಮಾತ್ರಕ್ಕೆ ಸಾಯಬೇಕಾ? ಅಷ್ಟಕ್ಕೂ ಈ ನಿಯಮಗಳು ನಮ್ಮಂಥಹ ಹೆಣ್ಣುಗಳಿಗೆ ಮಾತ್ರವೇನಾ? ಊರಲ್ಲಿ ಸುತ್ತಿ ಸುತ್ತಿ ತಿಳಿದಂತೆ ನನಗೆ ದೊಡ್ಡ ದೊಡ್ಡ ಬಂಗಲೆಯಲ್ಲಿ ಎಂತೆಂತಹ ಅನೈತಿಕತೆ ನಡೆಯುತ್ತಿರುವಾಗ ಅವೆಲ್ಲ ಹೊಸ್ತಿಲ ಒಳಗೆ ಉಳಿದು ಹೋಗಿ ಹೊರಗೆ ಮರ್ಯಾದೆಯ ಚಂದದ ಬಟ್ಟೆ ಧರಿಸಿ ಓಡಾಡುತ್ತಿರುವಾಗ ನಾನ್ಯಾಕೆ ಇಷ್ಟಕ್ಕೂ ಯೋಚಿಸಬೇಕು!?

ಶೀಲದ ಕಲ್ಪನೆಯನ್ನು, ನೈತಿಕತೆಯ ಕಲ್ಪನೆಯನ್ನು ಯಾರೋ ಅವರವರ ದೃಷ್ಟಿಗೆ ಮಾಡಿಟ್ಟು ಹೋಗಿದ್ದನ್ನು ನಾನೇಕೆ ಅನುಸರಿಸಬೇಕು? ನನಗೆ ನನ್ನದೇ ಆದ ಶೀಲದ ಕಲ್ಪನೆಯಿದೆ. ಅದನ್ನು ಈ ಸಮಾಜ ಗೌರವಿಸುವುದಾ? ನನ್ನ ಪಾಲಿನ ಸಮಾಜ ಯಾವುದು? ಈ ಬಯಲಾ? ಶಾಲೆಯ ಈ ಕಟ್ಟಡವಾ? ಯಾರೋ ಕಟ್ಟಿಟ್ಟು ಹೋದ ಮೌಲ್ಯಗಳನ್ನು ಅನುಸರಿಸಿದರೆ ಅವರಲ್ಲಿ ಯಾರಾದರು ಬಂದು ನನಗೆ ಹೊಟ್ಟೆಗೆ ಅನ್ನ ನೀಡುತ್ತಾರೆ. ನನ್ನ ಮಗವಿಗೊಂದು ಆಶ್ರಯ ನೀಡುತ್ತಾರೆ. ಇಲ್ಲವಲ್ಲ! ಹಾಗಾದರೆ ಅಂತಹ ದರ್ದು ನಂಗ್ಯಾಕೆ? ಇದನ್ನು ಮಾತಾಡಿಕೊಳ್ಳುವ ಸಮಾಜ ನನ್ನನ್ನು ನನ್ನ ಪಾಡಿಗೆ ಬಾಳಲು ಬೀಡುತ್ತದಾ? ಇಲ್ಲ ಸಾಧ್ಯವೇ ಇಲ್ಲ. ನೈತಿಕತೆ, ಮೌಲ್ಯಗಳು ಹೊಟ್ಟೆ ತುಂಬಿದವರ ತೇಗುಗಳು.

ರಾಜರಿಗೆ ನೂರು ಹೆಂಡತಿ, ಸಾವಿರ ಸಂಬಂಧಗಳು ಇರುವುದನ್ನು ಒಪ್ಪುವ ಸಮಾಜ ಹೆಣ್ಣಿಗೂ ಅಷ್ಟೇ ಗಂಡಸುಗಳು ಇರಬಾರದೇ? ಇವು ಅವಳನ್ನು ಕಟ್ಟಿ ಹಾಕಲು ಮಾಡಿದ ನಿಯಮಗಳಲ್ಲದೇ ಬೇರೇನು? ಐದು ಮಂದಿ ಗಂಡಂದಿರನ್ನು ಹೊಂದಿದ್ದ ದ್ರೌಪದಿ ಪತಿವ್ರತೆಯಾದರೆ ಅದೇ ಪ್ರಯತ್ನವನ್ನು ಈಗಿನ ಹೆಣ್ಣುಗಳು ಮಾಡಿದರೆ ಸಹಿಸಲಾರರು, ಏಕೆ?

ಊಟ ಬೇಡಿ ತಿಂದ ಹಾಗೆ ನಾನು ಹುಡುಕಿಕೊಂಡು ಬಂದ ಕಾಮವನ್ನು ಅನುಭವಿಸಬಾರದೇ? ಗಂಡ ಇಲ್ಲ, ಎಲ್ಲೋ ಹೋದ ಎಂಬ ಕಾರಣಕ್ಕೆ ಹಾಗೆ ಇದ್ದು ಬಿಟ್ಟರೆ ಈ ಜೀವನದಲ್ಲಿ ನನಗೆ ಸಿಗುವುದಾದರೂ ಏನು? ಹೆಂಡತಿ ಇದ್ದರೂ ಕೂಡ ಮೈಮೇಲೆ ಬೀಳುವ ಗಂಡಸರು ಇರುವಾಗ ಗಂಡ ಇಲ್ಲದ ನಾನು ಮೈ ನೀಡಿದರೆ ಅದು ಯಾವ ರೀತಿಯ ತಪ್ಪು? ಇದರಲ್ಲಿ ನನ್ನ ತಪ್ಪಾದರೂ ಏನಿದೆ? ನಾನ್ಯಾಕೆ ಅದನ್ನು ಸುಟ್ಟುಕೊಂಡೆ ಬದುಕಬೇಕು? ನೀರು, ಆಹಾರ, ಉಸಿರಾಟದಂತೆ ಕಾಮವನ್ನು ಕೂಡ ಅಷ್ಟೇ ಸುಲಭವಾಗಿ ತಗೆದುಕೊಳ್ಳಲು ಇರುವ ಅಡ್ಡಿಯಾದರೂ ಏನು? ಹಳೆಯ ಗೊಡ್ಡು ನೀತಿಗಳನ್ನು ಬಿಟ್ಟು! ಅಯ್ಯೋ, ಕಾಮವಾ? ಅಂತ ವಿಚಿತ್ರವಾದ ಮತ್ತು ಮಡಿ ಮಡಿ ಭಾವನೆ ಕಟ್ಟಿದ್ದು ಮನುಷ್ಯರೇ ಹೊರೆತು, ಅದರಲ್ಲೂ ಗಂಡಸರೇ ಹೊರೆತು ಪ್ರಕೃತಿಯಲ್ಲ, ಯಾವುದೇ ದೇವರಲ್ಲ. ಹೆಣ್ಣು ಒಂಚೂರು ಹೆಜ್ಜೆಯಿಟ್ಟ ಕೂಡಲೇ ಮಡಿವಂತಿಕೆ ನೆನಪಾಗುವಷ್ಟು ಗಂಡು ಹಾರಿ ಪಲ್ಟಿ ಹೊಡೆದರೂ ನೆನಪಾಗದು. ಮನುಷ್ಯರಾಗಿ, ಅದರಲ್ಲೂ ವಿವೇಕಯುತ ಮನುಷ್ಯರಾಗಿ ನಾವು ಕಾಮದ ವಿಷಯದಲ್ಲಿ ಹಾಗೆ ನಡೆದುಕೊಂಡರೆ ಹೇಗೆ ಎಂಬ ಒಣ ಚರ್ಚೆಯೂ ಕೂಡ ಇದೆ. ಆದರೆ ಆ ವಿವೇಕ ಕಾಮಕ್ಕೆ ಮಾತ್ರವಾ? ಸಂಬಂಧಗಳಿಗೆ ಮಾತ್ರವಾ? ಮಾಡುವ ಮೋಸ, ಪಿತೂರಿ, ಕಳ್ಳತನ, ಲಂಚ ಇವಕ್ಕೆ ಯಾಕೆ ಅಷ್ಟರಮಟ್ಟಿಗೆ ಅನ್ವಯವಾಗುವುದಿಲ್ಲ.

ಮುಂದಿನ ಪೀಳಿಗೆ ಸಾಕಲು ಹಿರಿಯರು ಆಸ್ತಿ ಮಾಡುವುದು ಸಾಮಾನ್ಯ! ಅದರಿಂದ ಮುಂದಿನ ಪೀಳಿಗೆ ಬದುಕುತ್ತದೆ. ನನ್ನ ಮಗಳಿಗಾಗಿ ಯಾವ ಆಸ್ತಿ ಇದೆ. ಅವಳಾದರೂ ಹೇಗೆ ಬದುಕುಬೇಕು? ನನ್ನ ತಂದೆ ತಾಯಿಯರು ಕೊಟ್ಟಿರುವ ಆಸ್ತಿಯೆಂದರೆ ಈ ನನ್ನ ದೇಹ ಮಾತ್ರ. ಇದರಿಂದಲೇ ದುಡಿದು ಸಾಕಬಾರದೇ? ಅದು ಪಾಪದ ಹಣವೆನ್ನುವರು. ಅದ್ಹೇಗೆ ಪಾಪದ ಹಣ? ನನ್ನ ದೇಹ ದುಡಿಯುವುದಿಲ್ಲವೇ? ಬಡ್ಡಿ ಕೊಟ್ಟು ಕೋಟಿ ಎಣಿಸಿಕೊಳ್ಳುವಂತೆ ಅಲ್ಲವೇ ಇದು. ಅದು ಸರಿಯೆಂದ ಮೇಲೆ ಇದು ಕೂಡ ಸರಿಯಾಗಬಾರದೇಕೆ? ನನ್ನ ದೇಹ ಬೆವರುತ್ತದೆ. ನೋವು ತಿನ್ನುತ್ತದೆ. ಅದಕ್ಕೆ ಹಣ ಸಿಗುತ್ತದೆ. ಅದೊಂದು ಕಾಯಕವಲ್ಲವೇ? ಪ್ರತಿ ವ್ಯವಹಾರವೂ ಕೂಡ ಅದರದೇ ಆದ ಒಳ ಸತ್ಯಗಳನ್ನು ಇಟ್ಟುಕೊಂಡು ನಡೆಯುತ್ತದೆ. ಅದರಂತೆ ನನ್ನದು ಕೂಡ ಏಕೆ ಆಗಬಾರದು? ವ್ಯವಸ್ಥೆಯಲ್ಲಿ ವ್ಯವಹಾರಕ್ಕೆ ಬೆಲೆ ಇರುವಾಗ ಮನುಷ್ಯ ಅದರಿಂದ ದುಡ್ಡು ಮಾಡಿಕೊಂಡು ನಂತರ ಅದರಿಂದ ಬದುಕುತ್ತಾನೆ. ಈಗ ನಾನು ಬೆಲೆ ಇರುವ ವಸ್ತು. ದುಡಿಯಲು ಇಳಿದರೆ ಯಾವ ತಪ್ಪು? ನನ್ನ ಮಗಳಿಗೊಂದು ಭವಿಷ್ಯ ಕಟ್ಟುವುದು ಬೇಡವಾ? ರಾತ್ರಿ ಮಲಗಿದಾಗಲೇ ಎಲ್ಲಿಂದಲೋ ಬಂದು ಹಾವು ಕಚ್ಚಿ ನಾನು ಸತ್ತು ಹೋದರೆ ಮಗಳ ಗತಿ? ಅದಕ್ಕಾದರೂ ನಾನು ಒಂದಿಷ್ಟು ಅವಳಿಗಾಗಿ ಈ ಕೆಲಸ ಮಾಡಬಾರದ? ಈ ದೇಹದಿಂದ ಹೊರಬಂದ ಆಕೆಗೆ ಈ ದೇಹದ ದುಡಿಮೆಯಿಂದಲೇ ಕಟ್ಟಿಕೊಟ್ಟರೆ ಏನು ತಪ್ಪು?……. ಹೀಗೆ ವಿಚಾರ ಸರಣಿ ಸಾಗಿತ್ತು. ಅದಾಗಲೇ ಬಿಸಿಲು ಮೇಲೇರಿತ್ತು. ಬ್ಯಾಟ್ ಬಾಲ್ ಹಿಡಿದು ಶಾಲಾ ಅಂಗಳಕ್ಕೆ ಬಂದ ಹುಡುಗರ ಗಲಾಟೆಯಿಂದ ಅವಳ ವಿಚಾರ ಲಹರಿಗೆ ಬ್ರೇಕ್ ಬಿದ್ದಿತ್ತು. ಪಕ್ಕದಲ್ಲಿ ಮಗುವನ್ನು ನೋಡಿದಳು, ಮಗು ಇರಲಿಲ್ಲ. ಎದ್ದು ಹೋಗಿ ಅಲ್ಲೇ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರನ್ನು ನೋಡುತ್ತಾ ನಿಂತಿದ್ದಳು.

ಮುಖದಲ್ಲಿ ಸ್ಪಷ್ಟತೆ ಇತ್ತು. ಏನೋ ನಿರ್ಧರಿಸಿಕೊಂಡಂತಿತ್ತು. ಕಂಠ ಮುರಿದ ಚರಿಗೆ ಹಿಡಿದು ನೀರು ತರಲು ಎದ್ದಳು. ಅಂಗಳದಲ್ಲಿ ಆಕೆ ಇಡುತ್ತಿದ್ದ ಪ್ರತಿ ಹೆಜ್ಜೆಯಲ್ಲೂ ಧೃಢತೆ ಇತ್ತು. ನನ್ನದು ಸಮರ್ಥನೆಯಲ್ಲ, ತಾನು ಬಾಳಬೇಕು ಎಂದುಕೊಂಡಿರುವ ಹೊಸ ಮಾರ್ಗ ಅದೇ ಎಂಬುದನ್ನು ಆಕೆ ಊರಿ ಹೋದ ಪ್ರತಿ ಹೆಜ್ಜೆಗಳು ಹೇಳುವಂತೆ ಮೂಡಿದ್ದವು.