ಅದೊಂದು ದಿನ ಅಲ್ಲಿಗೆ ಗುಂಡೇಟಿನಿಂದ ಗಾಯಗೊಂಡ ಓರ್ವ ವ್ಯಕ್ತಿಯನ್ನು ಕೆಲವರು ಕರೆದುಕೊಂಡು ಬಂದಿದ್ದರು. ಕರ್ತವ್ಯದಲ್ಲಿ ಇದ್ದ ವೈದ್ಯರು ಆಗಷ್ಟೇ ಸರಕಾರೀ ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮ ಶಿಕ್ಷಣದ ದಿನಗಳಲ್ಲಿ ಕೆಲವು ಅಪಘಾತದ ಕೇಸುಗಳನ್ನು ನೋಡಿದ್ದರೂ, ಗುಂಡೇಟಿನ ಗಾಯಾಳುವನ್ನು ಅವರು ಎಂದೂ ನೋಡಿರಲಿಲ್ಲ. ರೋಗಿಯನ್ನು ಪರೀಕ್ಷಿಸಿದಾಗ, ಆತನ ಎದೆಯ ಎರಡೂ ಭಾಗದ ಮೇಲೆ ಒಂದೊಂದು ಗಾಯದ ಗುರುತುಗಳು ಕಂಡು ಬಂದು ಅವುಗಳಿಂದ ರಕ್ತಸ್ರಾವವಾಗುತ್ತಿತ್ತು.
ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯ ಬರಹ:
ಚರಿತ್ರೆಯನ್ನು ಆಮೂಲಾಗ್ರವಾಗಿ ಗಮನಿಸಿದರೆ, ರಾಮಾಯಣದ ಯುದ್ಧ, ಮಹಾಭಾರತದ ಯುದ್ದ, ಟ್ರಾಯ್ ಕದನ, ಗ್ರೀಕ್ ಮತ್ತು ಮೊಘಲರ ಧಾಳಿ, ಖಿಲ್ಜಿಯ ಮುತ್ತಿಗೆ, ಹೀಗೆ ಜಗತ್ತಿನಲ್ಲಿ ಇದುವರೆಗೆ ನಡೆದ ಯುದ್ಧಗಳಲ್ಲಿ, ಹೆಚ್ಚಿನವು ಹೆಣ್ಣು, ಹೊನ್ನು, ಮಣ್ಣಿಗಾಗಿ ನಡೆದಿದ್ದವು. ಇವೆಲ್ಲ ಯುದ್ಧಗಳ ಪರಿಣಾಮ ಒಂದೋ ಕುಲ ನಾಶ, ಇಲ್ಲಾ ಕೆಲವು ರಾಜ್ಯದ, ರಾಜರುಗಳ ಅಂತ್ಯ. ಜೊತೆಗೆ ಸಹಸ್ರಾರು ಜನರ ಸಾವು, ನೋವು, ಆಸ್ತಿಪಾಸ್ತಿ ಸಂಪತ್ತುಗಳ ನಷ್ಟ. ಹಾಗೇ ಇತ್ತೀಚೆಗಿನ ದಿನಗಳಲ್ಲಿ ನಮ್ಮ ದೇಶದ ನೆರೆಯ ಶತ್ರು ರಾಷ್ಟ್ರಗಳು ತಮ್ಮ ಸರಹದ್ದನ್ನು ವಿಸ್ತರಿಸುವ ಹುನ್ನಾರದಲ್ಲಿ ಎರಡೂ ದೇಶದ ಜನರ, ಹಾಗೂ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣರಾಗಿದ್ದಾರೆ.
ಪ್ರಪಂಚದಾದ್ಯಂತ ನಡೆಯುತ್ತಿರುವ ಇಂತಹ ವಿದ್ಯಮಾನಗಳಿಗೆ, ನಮ್ಮ ಮಲೆನಾಡು ಏನೂ ಹೊರತಲ್ಲ. ಇಲ್ಲಿ ಕೂಡ ಹೆಚ್ಚಿನ ಜಗಳಗಳು, ಹೊಡೆದಾಟ, ಬಡಿದಾಟ, ಕೊಲೆ ಆಗುವುದು ಮಣ್ಣಿಗಾಗಿ, ಕೆಲವೊಮ್ಮೆ ಹೊನ್ನಿಗಾಗಿ. ಹಿಂದೆ ಇಲ್ಲಿ ಅವಿಭಕ್ತ ಕುಟುಂಬಗಳು ಇದ್ದು, ನಂತರ ಪಾಲು ಆದಾಗ ಮಕ್ಕಳಿಗೆ ಬರುತ್ತಿದ್ದ ತೋಟದ ಭಾಗಗಳು ಎಲ್ಲೆಲ್ಲೋ ಹುದುಗಿ ಇರುತ್ತಿದ್ದವು. ಆಸ್ತಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗುವ ದಾರಿಯ ಕುರಿತು ಹೆಚ್ಚು ಆಕ್ಷೇಪ ಇರುತ್ತಿರಲಿಲ್ಲ. ಹಿರಿಯರ ಮಾತಿಗೆ ಕಟ್ಟುಬಿದ್ದು, ಮಕ್ಕಳು ಅಲ್ಲಿಗೆ ಹೋಗುವ ದಾರಿ ತಮ್ಮ ಆಸ್ತಿಯ ಒಳಗೇ ಇದ್ದರೂ ಓಡಾಟದ ವಿಷಯದಲ್ಲಿ ಯಾವ ತಕರಾರು ಆಕ್ಷೇಪಣೆ ಮಾಡುತ್ತಿರಲಿಲ್ಲ. ಕಾಲ ಬದಲಾದಂತೆ ಹಿರಿಯರು, ಕಿರಿಯರು ಎಂಬ ವ್ಯತ್ಯಾಸ ಇಲ್ಲವಾಗಿ, ‘ತಮ್ಮದು ತಮಗೆ’, ಎಂಬ ಸ್ವಾರ್ಥ ಭಾವನೆ ಹೆಚ್ಚಾಗಿ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಆಗಾಗ ಜಗಳ, ಮನಸ್ತಾಪಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಯಕಃಶ್ಚಿತ್ ಒಂದು ಕಾಲು ದಾರಿಯ ವಿಷಯದಲ್ಲಿ ಹೊಡೆದಾಟ ಘಟಿಸಿ, ಗಾಯಗೊಂಡು ಬರುವವರಿಗೆ, ಇಲ್ಲಿನ ಆಸ್ಪತ್ರೆಯ ವೈದ್ಯರುಗಳು ಚಿಕಿತ್ಸೆ ನೀಡುತ್ತಿರುತ್ತಾರೆ.
ಇದು ಬಹಳ ಹಿಂದೆ ನಡೆದ ಘಟನೆ. ಆ ಒಂದು ಆಸ್ಪತ್ರೆಯಲ್ಲಿ ಲಭ್ಯವಿದ್ದ ವೈದ್ಯರು ಕೂಡ ಕಡಿಮೆ. ಅದೊಂದು ದಿನ ಅಲ್ಲಿಗೆ ಗುಂಡೇಟಿನಿಂದ ಗಾಯಗೊಂಡ ಓರ್ವ ವ್ಯಕ್ತಿಯನ್ನು ಕೆಲವರು ಕರೆದುಕೊಂಡು ಬಂದಿದ್ದರು. ಕರ್ತವ್ಯದಲ್ಲಿ ಇದ್ದ ವೈದ್ಯರು ಆಗಷ್ಟೇ ಸರಕಾರೀ ಕೆಲಸಕ್ಕೆ ಸೇರಿಕೊಂಡಿದ್ದರು. ತಮ್ಮ ಶಿಕ್ಷಣದ ದಿನಗಳಲ್ಲಿ ಕೆಲವು ಅಪಘಾತದ ಕೇಸುಗಳನ್ನು ನೋಡಿದ್ದರೂ, ಗುಂಡೇಟಿನ ಗಾಯಾಳುವನ್ನು ಅವರು ಎಂದೂ ನೋಡಿರಲಿಲ್ಲ.
ರೋಗಿಯನ್ನು ಪರೀಕ್ಷಿಸಿದಾಗ, ಆತನ ಎದೆಯ ಎರಡೂ ಭಾಗದ ಮೇಲೆ ಒಂದೊಂದು ಗಾಯದ ಗುರುತುಗಳು ಕಂಡು ಬಂದು ಅವುಗಳಿಂದ ರಕ್ತಸ್ರಾವವಾಗುತ್ತಿತ್ತು. ಚಿಕಿತ್ಸೆಗೆ ತೊಡಗಿದ ವೈದ್ಯರಿಗೆ ಸಿಕ್ಕಿದ ಮಾಹಿತಿಯ ಪ್ರಕಾರ ಅತನ ಹೆಸರು ಚಿಣ್ಣಪ್ಪ, ವಯಸ್ಸು 50 ವರ್ಷ. ಆ ದಿನ ಬೆಳಿಗ್ಗೆ ಮನೆಯಿಂದ ಹೊರಟು ತನ್ನ ತೋಟದ ಕಡೆಗೆ, ತಮ್ಮನ ತೋಟದಲ್ಲಿರುವ ಒಳಗಿನ ದಾರಿಯಿಂದ ಹೋಗುವಾಗ, ತಮ್ಮ ನಂಜಪ್ಪ ಎದುರಾಗಿ ಬಂದು ಜಗಳ ತೆಗೆದಿದ್ದ. ಅದು ತಾರಕಕ್ಕೆ ಏರಿದಾಗ ನಂಜಪ್ಪನ ಹೆಂಡತಿ ಮನೆಯಿಂದ ಓಡಿ ಬಂದಿದ್ದಾಳೆ. ಅವಳ ಕೈಯಲ್ಲಿ ಲೈಸೆನ್ಸ್ ಇಲ್ಲದ ಯಾವುದೋ ಹಳ್ಳಿಯಲ್ಲಿ ತಯಾರಾದ ಒಂದು ರಿವಾಲ್ವರ್ ಇತ್ತು. ಅದರಿಂದ ಇಬ್ಬರೂ ಸೇರಿ ಗುಂಡು ಹೊಡೆದಿದ್ದಾರೆ. ಅಷ್ಟರಲ್ಲಿ, ಇವರ ಗದ್ದಲ, ಚೀರಾಟವನ್ನು ಕೇಳಿದ ಹತ್ತಿರದ ತೋಟದ ಮನೆಯವರು ಬಂದು, ಜಗಳ ಬಿಡಿಸಿ ಆತನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ.
ಕೂಡಲೇ ವೈದ್ಯರು ವಿವರಗಳನ್ನು ದಾಖಲಿಸಿ, ಚಿಕಿತ್ಸೆ ನೀಡುವ ಸಲುವಾಗಿ ಚಿನ್ನಪ್ಪನ ಎದೆಯ ಭಾಗವನ್ನು ಎಕ್ಸರೇ ಮಾಡಿದಾಗ ಯಾವುದೇ ಗುಂಡಿನ ಸೀಸ ಅಥವಾ ಚಿಲ್ಲುಗಳಿರುವ ಕುರುಹು ಕಂಡು ಬಂದಿರಲಿಲ್ಲ. ಹಾಗಾಗಿ, ಅಲ್ಲಿನ ಆಸ್ಪತ್ರೆಯಲ್ಲಿ ಲಭ್ಯವಿದ್ದ ಚಿಕಿತ್ಸೆಯನ್ನು ನೀಡಿ, ಗಾಯಾಳುವನ್ನು ಮಂಗಳೂರಿಗೆ ಸಾಗಿಸಲಾಗಿತ್ತು. ಅಲ್ಲಿನ ತಜ್ಞರು ಶಸ್ತ್ರಚಿಕಿತ್ಸೆ ಮಾಡಿ ಒಳಗಡೆ ಇದ್ದ ಎರಡು ಗಾಯಗಳಿಗೆ ಹೊಲಿಗೆ ಹಾಕಿ ರಕ್ತಸ್ರಾವವನ್ನು ನಿಲ್ಲಿಸಿದ್ದರು. ಸ್ಪಲ್ಪ ಅತ್ತಿತ್ತ ಕೈ ಹಾಕಿ ಗುಂಡಿನ ಸೀಸಕ್ಕಾಗಿ ಹುಡುಕಿ ನೋಡಿದ್ದರು. ಸಿಗದಿದ್ದಾಗ, ಎಕ್ಸರೇಯಲ್ಲಿ ಅದು ಕಾಣದೆ ಇದ್ದು, ರೋಗಿಯ ಸ್ಥಿತಿ ಗಂಭೀರವಾಗಿದ್ದ ಕಾರಣ, ಹುಡುಕುವಿಕೆಯನ್ನು ಅಷ್ಟಕ್ಕೇ ನಿಲ್ಲಿಸಿದ್ದರು. ಕೆಲವು ದಿನಗಳ ಬಳಿಕ ಗುಣಮುಖರಾಗಿ ಮನೆಗೆ ಮರಳಿದ ಅವರು, ಪೋಲೀಸರ ಮುಂದೆ ತಮ್ಮ ಹೇಳಿಕೆಯನ್ನು ನೀಡಿದ್ದರು.
ಅದರಲ್ಲಿ, ‘ತಾನು ತೋಟಕ್ಕೆಂದು ಗೊಬ್ಬರವನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ, ತನ್ನ ತಮ್ಮ ಅಡ್ಡಗಟ್ಟಿ ನಿಂತು ಜಗಳ ತೆಗೆದಿದ್ದಾನೆ. ಎಷ್ಟೊಂದು ತಡೆದರೂ ಕೇಳದೆ, ಗೊಬ್ಬರದ ಮೂಟೆಯನ್ನು ಎಳೆದು ನೆಲಕ್ಕೆ ಚೆಲ್ಲಿದ್ದಾನೆ. ಅಷ್ಟರಲ್ಲಿ, ಅಲ್ಲೇ ಪಕ್ಕದಲ್ಲೇ ಇದ್ದ ತಮ್ಮನ ಮನೆಯ ಒಳಗಿನಿಂದ ಅವನ ಹೆಂಡತಿ, ಲೈಸೆನ್ಸ್ ಇಲ್ಲದ ಯಾವುದೋ ಒಂದು ಹಳ್ಳಿಯಲ್ಲಿ ತಯಾರಾದ ರಿವಾಲ್ವರ್ ತಂದು, ತಮ್ಮನ ಕೈಗೆ ಕೊಟ್ಟು ‘ಸುಮ್ಮನೇ ಏನು ನೋಡುತ್ತೀರಿ, ಹೊಡೆದು ಬಿಡಿ’ ಎನ್ನುತ್ತಾ ತಾನೂ ಸೇರಿ ಗುಂಡು ಹೊಡೆದಿದ್ದಾರೆ. ಆಗ ಅಲ್ಲಿಗೆ ಬಂದು ಸೇರಿದ ಊರಿನ ಕೆಲವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ’ ಎಂದು ಹೇಳಿದ್ದ.
ಚಿನ್ನಪ್ಪನ ಹೇಳಿಕೆಯಂತೆ ಪೋಲೀಸರು ಭಾ.ದಂ.ಸ.307ರ (ಕೊಲೆಯ ಪ್ರಯತ್ನ), 320ರ (ತೀವ್ರ ಗಾಯ) ಅಡಿಯಲ್ಲಿ ನಂಜಪ್ಪ ಮತ್ತು ಅವನ ಹೆಂಡತಿಯ ಮೇಲೆ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದಾರೆ. ಸಾಕ್ಷಿಗಳಾಗಿ ಅಂದು ನಂಜಪ್ಪನನ್ನು ಆಸ್ಪತ್ರೆಗೆ ತಂದ ಕೆಲವರನ್ನು ವಿಚಾರಿಸಲಾಗಿ ಅವರು ಖಚಿತವಾದ ಮಾಹಿತಿ ನೀಡಿರಲಿಲ್ಲ. ಒಬ್ಬರ ಪ್ರಕಾರ ನಂಜಪ್ಪನ ಕೈ ಯಲ್ಲಿ ರಿವಾಲ್ವರ್ ಇತ್ತು, ಉಳಿದವರು ಆ ಗಡಿಬಿಡಿಯಲ್ಲಿ ನಾವು ಸರಿಯಾಗಿ ಗಮನಿಸಲಿಲ್ಲ ಎಂದಿದ್ದರು.
ಇನ್ನು ನಂಜಪ್ಪ ಮತ್ತು ಅವನ ಹೆಂಡತಿಯನ್ನು ವಿಚಾರಿಸಲಾಗಿ ಅವರು ಹೇಳಿದ್ದು ಬೇರೆಯದೇ ಕಥೆ: ‘ಆ ದಾರಿ ಕಾನೂನಿನ ಪ್ರಕಾರ ತಮಗೇ ಸೇರಿದ್ದು, ಅದರ ಬಗ್ಗೆ ಕೋರ್ಟಿನಲ್ಲಿ ಕೆಲವು ವರ್ಷಗಳಿಂದ ಕೇಸು ನಡಿಯುತ್ತಾ ಇದೆ. ಆದರೂ ಅಣ್ಣ ಅಲ್ಲಿಂದಲೇ ಹೋಗಿ ಬರುವುದು. ತಾವು ಆ ದಿನ ಅವರನ್ನು ತಡೆಯಲು ಅಲ್ಲಿಗೆ ಹೋಗಿದ್ದು ನಿಜ. ಮಾತು ಜೋರಾದಾಗ ಅಣ್ಣ ತನ್ನ ಕೈಯಲ್ಲಿ ಇದ್ದ ಕತ್ತಿಯಿಂದ ತಮ್ಮ ಮೇಲೆ ದಾಳಿ ನಡೆಸಿದ ಸಮಯದಲ್ಲಿ ತಾವಿಬ್ಬರು ಅವರನ್ನು ತಳ್ಳಿದ ಸಂದರ್ಭದಲ್ಲಿ, ಅಣ್ಣ ಮೂಟೆಯ ಸಹಿತ ಕೆಳಗೆ ಬಿದ್ದಾಗ ಆತನ ಕೈಯಲ್ಲಿ ಇದ್ದ ಕತ್ತಿಯಿಂದಲೇ ಅವನ ಎದೆಗೆ ಗಾಯವಾಗಿದೆ. ನಮ್ಮ ಬಳಿ ಯಾವುದೇ ರಿವಾಲ್ವರ್ ಇಲ್ಲ ‘.
ಈ ಕೇಸ್ ಕೋರ್ಟಿನಲ್ಲಿ ಬಂದಾಗ ಅಪರಾಧಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿ, ಇದು ಭಾ.ದ.ಸ. 307ರ ಅಡಿಯಲ್ಲಿ ಬರುವುದಿಲ್ಲ. ಹೆಚ್ಚೆಂದರೆ ಭಾ.ದಸ. 324ರ (ಸ್ವಯಂ ಪ್ರೇರಣೆಯಿಂದ ಅಪಾಯಕಾರಿ ಆಯುಧದಿಂದ ಗಾಯ ಮಾಡುವುದು) ಕೆಳಗೆ ಬರಬಹುದು. ಅದು ಜಾಮೀನು ಕೊಡುವಂತಹ ಸೆಕ್ಷನ್ ಎಂದು ವಾದಿಸಿ, ಜಾಮೀನು ದೊರಕಿಸಿ ಕೊಂಡಿದ್ದರು.
ಕೆಲವೊಮ್ಮೆ ಯಃಕಶ್ಚಿತ್ ಒಂದು ಕಾಲು ದಾರಿಯ ವಿಷಯದಲ್ಲಿ ಹೊಡೆದಾಟ ಘಟಿಸಿ, ಗಾಯಗೊಂಡು ಬರುವವರಿಗೆ, ಇಲ್ಲಿನ ಆಸ್ಪತ್ರೆಯ ವೈದ್ಯರುಗಳು ಒಂದಲ್ಲಾ ಒಂದು ದಿನ ಚಿಕಿತ್ಸೆ ನೀಡುತ್ತಿರುತ್ತಾರೆ.
ಸಮಯ ಕಳೆದಂತೆ ಎಲ್ಲರೂ ಈ ಕೇಸನ್ನು ಮರೆತರು. ಕೊನೆಗೆ ಕೋರ್ಟಿಗೆ ಬಂದಾಗ ಅಂದು ಸಾಕ್ಷಿ ಹೇಳಲು ಒಪ್ಪಿದ್ದ ಕೆಲವರು ಪ್ರತಿಕೂಲ ಸಾಕ್ಷಿಗಳಾದರು.(ಹೋಸ್ಟೈಲ್). ವಾದಗಳು ನಡೆದವು. ಸರಕಾರೀ ವಕೀಲರ ಪ್ರಶ್ನೆಗೆ ಉತ್ತರಿಸಿದ ವೈದ್ಯರು ಇದು ಗುಂಡೇಟಿನಿಂದ ಆಗಿರಬಹುದು ಎಂದರು. ಆದರೆ, ಆರೋಪಿ ಪರ ವಕೀಲರು ಇದನ್ನು ಪ್ರಶ್ನಿಸಿ, ಗುಂಡೇಟಿನ ಗಾಯಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಇರಬೇಕು. ಅದು ನಿಮ್ಮ ವರದಿಯಲ್ಲಿ ಕಾಣ ಬರುತ್ತಿಲ್ಲ. ಈ ರೀತಿಯ ಗಾಯಗಳು ಚೂಪಾದ ವಸ್ತುವಿನ ಮೇಲೆ ಬಿದ್ದಾಗ ಕೂಡಾ ಆಗ ಬಹುದು ಎಂಬ ಉತ್ತರವನ್ನು ವೈದ್ಯರ ಬಾಯಿಂದ ಹೇಳಿಸಿದ್ದಾರೆ.
ಹಾಗೆಯೇ ಎಲ್ಲಾ ವಾದಗಳು ಮುಗಿದು ಕೊನೆಗೆ ನ್ಯಾಯಾಧೀಶರು, ಆ ಕೇಸಿನಲ್ಲಿ ಫಿರ್ಯಾದಿಯ ಪರ ಇದ್ದ ಸರಕಾರೀ ವಕೀಲರು, ಆರೋಪಿಗಳೇ ಅಂದು ಹಲ್ಲೆಯನ್ನು ಮಾಡಿದ್ದಾರೆ ಎಂದು ನಿಖರವಾಗಿ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣದಿಂದಾಗಿ ಆರೋಪಿಗಳನ್ನು ಬಿಡುಗಡೆ ಮಾಡುವ ತೀರ್ಪು ನೀಡಿದ್ದರು.
******
ಇದಾದ ಅನೇಕ ತಿಂಗಳುಗಳ ನಂತರ, ಒಮ್ಮೆ ಆ ನ್ಯಾಯಾಧೀಶರಿಗೆ ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ನನ್ನನ್ನು ಅವರ ಮನೆಗೆ ಕರೆಸಿಕೊಂಡಿದ್ದರು. ಆಗ, ಹಾಗೆಯೇ ಅಲ್ಲಿ ಒಂದು ಕಪ್ ಚಾ ದೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಈ ಕೇಸಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದರು. ಈ ಕೇಸಿನ ಬಗ್ಗೆ ಅಲ್ಲಿ ಇಲ್ಲಿ ಸ್ವಲ್ಪ ಕೇಳಿದ್ದ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅವರ ಒಳ ಮನಸ್ಸು ಹೇಳುವಂತೆ ಇದು ಒಂದು ಗುಂಡೇಟಿನ ಕೇಸ್ ಆದರೂ, ಸಾಕ್ಷ್ಯದ ಕೊರತೆ ಇತ್ತು. ಹಾಗಾಗಿ, ಗುಂಡೇಟಿನ ಗಾಯದ ಲಕ್ಷಣಗಳನ್ನು ವಿವರಿಸಿ ಹೇಳಲು ನನ್ನನ್ನು ಕೇಳಿದ್ದರು.
ನನ್ನ ಎಲ್ಲಾ ವೈದ್ಯ ಮಿತ್ರರಿಗೂ ವೈದ್ಯಕೀಯ ವಿದ್ಯಾರ್ಥಿಗಳಿಗೂ ಪಾಠ ಮಾಡುವ ಸಮಯದಲ್ಲಿ ನಾನು ಒಂದಂಶವನ್ನು ಒತ್ತಿ ಹೇಳುತ್ತಿರುತ್ತೇನೆ. ಅದು ಗಾಯದ ಸ್ವರೂಪದ ವಿವರಣೆಯನ್ನು ಬರೆಯುವ ರೀತಿ. ಗಾಯ ಶರೀರದ ಯಾವ ಭಾಗದಲ್ಲಿ ಇದೆ, ಅದರ ಉದ್ದ, ಅಗಲ, ಆಳ, ಆಕಾರದ ಬಗ್ಗೆ ಸ್ಪಷ್ಟವಾಗಿ ಬರೆಯಬೇಕು. ಗುಂಡೇಟಿನ ಗಾಯದಲ್ಲಿ ಅದು ಒಳ ಬಾಗಿದೆಯೇ, (ಪ್ರವೇಶ /ಎಂಟ್ರಿ ಗಾಯ) ಇಲ್ಲಾ ಹೊರ ಬಾಗಿದೆಯೆ, (ನಿರ್ಗಮನ /ಎಕ್ಸಿಟ್ ಗಾಯ), ಅದರ ಸುತ್ತಲೂ ಕೂದಲು ಸುಟ್ಟಿದೆಯೇ (ಸಮೀಪದ ಗುಂಡೇಟು), ಸುತ್ತಲೂ ಮಸಿಯ ಗುರುತು ಇದೆಯೇ ಇತ್ಯಾದಿ, ಇತ್ಯಾದಿ. ಈ ವಿವರಗಳು ಗುಂಡೇಟು ಎಷ್ಟು ದೂರದಿಂದ ಬಿದ್ದಿರಬಹುದು, ಶರೀರದ ಒಳ ಹೊಕ್ಕ ಗಾಯ ಯಾವುದು, ಹೊರ ಬಂದ ಗಾಯ ಯಾವುದು ಎಂಬುದನ್ನು ಸೂಚಿಸುತ್ತದೆ.
ಈ ಪ್ರಕರಣದ ಗಾಯದ ದೃಢೀಕರಣ ಪತ್ರದಲ್ಲಿ ಅವು ಯಾವುವೂ ಸರಿಯಾಗಿ ದಾಖಲಾಗಿರಲಿಲ್ಲ. ನ್ಯಾಯಾಧೀಶರು ಈ ಕೇಸ್ ಹೇಗೆ ಆಗಿರಬಹುದು ಎಂಬ ಬಗ್ಗೆ ನಿಮ್ಮ ಊಹೆ ಅಥವಾ ತರ್ಕ ಏನು ಎಂದು ನನ್ನನ್ನು ಕೇಳಿದಾಗ, ನನಗೆ ಜ್ಞಾಪಕಕ್ಕೆ ಬಂದದ್ದು, ಅಪರೂಪದಲ್ಲಿ ಅಪರೂಪವಾದ ಒಂದು ವಿವರಣೆ.
ಅದುವೇ ರಿಕಷೆ, ರಿಕಷೆಟ್ (Ricochet) ಗುಂಡು, ಕನ್ನಡದಲ್ಲಿ ಕುಪ್ಪಳು ಏಟು. ಕೆಲವೊಮ್ಮೆ ಕೋವಿಯಿಂದ ಹೊರ ಬಂದ ಗುಂಡು ಅಪರೂಪಕ್ಕೊಮ್ಮೆ ಯಾವುದಾದರೂ ಗೋಡೆ, ಬೆಂಚು, ಕಾರ್ ಇತ್ಯಾದಿ ಗಟ್ಟಿಯಾದ ವಸ್ತುವಿಗೆ ಬಡಿದಾಗ ಅದರ ದಿಕ್ಕು ಬದಲಾಗಿ ಮತ್ತೆಲ್ಲೋ ಹೋಗಿ ತಗುಲುವ ಸಾಧ್ಯತೆ ಇದೆ. ಫಿರಂಗಿ, ತೋಪುಗಳಿಂದ ನೀರಿನ ಸಮೀಪದಲ್ಲಿ ಸಿಡಿದ ಗುಂಡು, ಅದರ ರಭಸಕ್ಕೆ ನೀರಿನ ಮೇಲೆ ಕುಪ್ಪಳಿಸುತ್ತಾ, ಪುಟಿದೇಳುತ್ತ ಮುಂದಕ್ಕೆ ಜಿಗಿಯುತ್ತಾ ಹೋಗಬಹುದು. ಹೀಗಾಗಿ, ಯಾರಿಗೋ ಹೊಡೆದ ಗುಂಡು ಇನ್ನು ಯಾರಿಗೋ ತಾಗುವುದೂ ಉಂಟು.
ಬೆಂಗಳೂರಿನಲ್ಲಿ ನಡೆದ ಒಂದು ಗಲಭೆಯನ್ನು ಹತೋಟಿಗೆ ತರಲು ಪೊಲೀಸರ ಟಿಯರ್ ಗ್ಯಾಸ್ ಫೈರಿಂಗ್ ನಲ್ಲಿ ಈ ರೀತಿ ಆಗಿ, ಅದರ ಶೆಲ್ (ಹೊರ ಕವಚ), ಅಲ್ಲೆಲ್ಲೋ ಆಟವಾಡುತ್ತಿದ್ದ ಒಂದು ಚಿಕ್ಕ ಮಗುವಿನ ಕುತ್ತಿಗೆಯ ಒಳ ಹೊಕ್ಕ ಫೋಟೋ ಒಂದನ್ನು ಬೆಂಗಳೂರು ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ಮ್ಯೂಸಿಯಂ ನಲ್ಲಿ ಇಂದಿಗೂ ಕಾಣಬಹುದು.
ನನ್ನ “ಊಹೆಯ” ಪ್ರಕಾರ ಪ್ರಾಯಶಃ ಈ ಕೇಸಿನಲ್ಲಿ ಅದೇ ಆಗಿರುವ ಸಾಧ್ಯತೆ ಇದೆ. ಶರೀರದ ಎದೆಯ ಮುಂಭಾಗದಲ್ಲಿ ಒಳ ಹೊಕ್ಕ ಗುಂಡು ಹಿಂಭಾಗದಲ್ಲಿ ಇರುವ ಯಾವುದೊ ಮೂಳೆಗೆ ಬಡಿದು, ಪುಟಿದು ಮರುಕಳಿಸಿ, ಎದೆಯ ಇನ್ನೊಂದು ಭಾಗದಿಂದ ಹೊರ ಹೋಗಿದೆ. ಆದರೆ ಗಾಯದ ವಿವರ ಇಲ್ಲದಿದ್ದ ಕಾರಣ, ಯಾವುದು ಒಳ ಹೋದ ಗಾಯ, ಯಾವುದು ಹೊರ ಬಂದದ್ದು ಎಂದು ತಿಳಿಯುತ್ತಿಲ್ಲ. ಆದುದರಿಂದ ಇಲ್ಲಿ ಯಾರೋ ಒಬ್ಬರ ಕೈಯಿಂದ ಗುಂಡು ಹಾರಿರಬಹುದು. ಅದೊಂದು ಹಳ್ಳಿ ಆಗಿದ್ದರಿಂದ ಅಷ್ಟು ದಿನ, ಆ ಚಿಕ್ಕ ಗುಂಡಿನ ತುಂಡನ್ನು ಹುಡುಕುವ ಗೋಜಿಗೆ ಯಾರೂ ಹೋಗಿರಲಿಲ್ಲ. ಈಗದು ಸಿಕ್ಕುವ ಸಾಧ್ಯತೆಯೂ ಅಷ್ಟಕ್ಕಷ್ಟೇ. ಅಕಸ್ಮಾತ್ ಅದು ಸಿಕ್ಕಿದ್ದರೆ, ಬಹುಶಃ ಅದರ ಬಗ್ಗೆ ಪ್ರಬಂಧ ಬರೆದು ನಾನೂ ಫೇಮಸ್ ಆಗಿ ಬಿಡುತ್ತಿದ್ದೆನೋ ಏನೋ. ಯಾಕೆಂದರೆ ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ..!
ಇದರ ಬಗ್ಗೆಯ ನನ್ನ ಈ ವಿವರಣೆ ಬರೀ ಊಹನಾತ್ಮಕ ಅಷ್ಟೆ. ಹೀಗೆಯೇ ಆಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈಗಿನ ನನ್ನ ವೈದ್ಯ ಮಿತ್ರರು ಇದಕ್ಕೆ ಬೇರೆಯ ಮತ್ತೂ ಉತ್ತಮವಾದ ಸಮಜಾಯಿಷಿಕೆಯನ್ನು ಕೂಡಾ ಕೊಡಬಹುದು.
ದಿನ ಕಳೆದಂತೆ ವೈದ್ಯಕೀಯ ತಜ್ಞತೆ ಬಹಳ ಮುಂದುವರೆದಿದೆ. ಹಿಂದೆಲ್ಲಾ ಸಾಮಾನ್ಯ ವೈದ್ಯರೇ ಹೆರಿಗೆಯನ್ನು ಮಾಡಿಸುತ್ತಿದ್ದರು, ಮೂಳೆ ಮುರಿದಾಗ ಅದಕ್ಕೆ ಪ್ಲಾಸ್ಟರ್ ಕೂಡಾ ಹಾಕುತ್ತಿದ್ದರು. ಕಣ್ಣಿನ ದೃಷ್ಟಿ ದೋಷವಿದ್ದಲ್ಲಿ, ಅಕ್ಷರಗಳ ಬೋರ್ಡ್ ಓದಿಸಿ, ತಾವೇ ಕನ್ನಡಕವನ್ನು ಕೂಡಾ ಕೊಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಆಯಾಯ ತಜ್ಞರು ಆಯಾ ವಿಭಾಗದಲ್ಲಿ ಪರಿಣತಿಯನ್ನು ಹೊಂದಿದ್ದು ರೋಗಿಗಳಿಗೆ ಉತ್ತಮ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ. ಇದೇ ರೀತಿ ವಿಧಿ ವಿಜ್ಞಾನ ವಿಭಾಗದಲ್ಲಿ ಕೂಡಾ ಪರಿಣಿತರು ಬಂದು ಗಾಯಗಳ ಮತ್ತು ಶವ ಪರೀಕ್ಷೆಗಳಲ್ಲಿ ಉತ್ತಮ ಮಟ್ಟದ ವರದಿಗಳನ್ನು ಕೊಡುತ್ತಿದ್ದಾರೆ. ಹೀಗಾಗಿ, ಈಗ ಬಹಳ ಕ್ಲಿಷ್ಟಕರ ಅಪರಾಧಗಳನ್ನು ಕೂಡಾ ಪತ್ತೆ ಹಚ್ಚುವುದು ಸಾಧ್ಯವಾಗುತ್ತಿದೆ.
ಡಾ.ಕೆ.ಬಿ. ಸೂರ್ಯಕುಮಾರ್ ಅವರು ಹಿರಿಯ ವಿಧಿವಿಜ್ಞಾನ ತಜ್ಞರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷ ವಿಧಿವಿಜ್ಞಾನ ಪರಿಣತರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿಯೂ ವಿಧಿವಿಜ್ಞಾನ ತಜ್ಞರಾಗಿ ತಮ್ಮ ತಜ್ಞ ಸಲಹೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದ ಪ್ರೊಫೆಸರ್. ‘ವೈದ್ಯ ಕಂಡ ವಿಸ್ಮಯ’ ಅವರು ಬರೆದ ಕೃತಿ.
ತುಂಬಾ ಸ್ವಾರಸ್ಯಕರ. ಹೊಸ ಶಬ್ದ ಗಳನ್ನು ಪರಿಚಯಿಸಿತು. ಹೀಗೂ ಉಂಟೆ ನಮ್ಮ ಊರಿನ ಹಳ್ಳಿಗಳಲ್ಲಿ ಎಂದು ಒಮ್ಮೆ ಚಿಂತಿಸು ವಂತಾಯಿತು. ಗಾಯಕ್ಕೊಳಗಾದ ವ್ಯಕ್ತಿ ಯ ಹೇಳಿಕೆ.. ಒಂದು ವಿಶಿಷ್ಟ ಕೇಸಿನ ವರ್ಣನೆ . ಹೀಗೆ ಬರೆಯುತ್ತಾ ಇರಿ . ಜನ ಸಾಮಾನ್ಯರಿಗೆ ಇವುಗಳು ತುಂಬಾ ಉತ್ತಮ ಮಾಹಿತಿ ಗಳನ್ನು ನೀಡುವುದು.. ” ಕುಪ್ಪಳು ಗುಂಡು “
Very good firearm case, unfortunately justice denied to victim, good narration.. Thank ???you sir..
Good Reading..Keep it going
ಚೆನ್ನಾಗಿದೆ. ನಿಮ್ಮ ricochet theory ಯೇ ನಿಜ ಅನ್ನಿಸುತ್ತೆ. ವಾಸ್ತವವೋ ನಿಜವೋ ಎಂದು ಯೋಚಿಸ ಬೇಕು ಹಾಗೆ ಪ್ರಸ್ತುತ ಪಡಿಸಿದ್ದೀರ
Again, congrats oncemore
ವಿವರಣೆ ಸಾಲದು ಅನ್ನಿಸಿತು ಹಾಗೂ ಗಾಯದ ನಿಖರ ಮಾಹಿತಿ ಕೊನೆಗೂ ಸಿಗದೇ ಕತೆ ಮುಗಿಯಿತು..
I wish I could type in kannada.then i could have expressed meaningfully
Women, wealth or land is mostly cause of the disputes , which you have tried to bring in your narration.one should appreciate your patience , writing these things week in and out As a doctor coming from village sarroundings ican picturised the story better
Keep writing good luck
ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಆರೋಪಿಗಳ ಅದೃಷ್ಟ ಜಾಮೀನು . ಬೇಗ ಸಿಗುತ್ತದೆ. ವಾದ ಪ್ರತಿವಾದ ಸಮಯ . ಇವುಗಳ ಪ್ರಕಾರ ಆರೋಪಿಗಳಿಗೆ ಶಿಕ್ಷೆ ಸಿಗುತ್ತದೆ ಮುಂದುವರೆಯಲಿ ಈ ನಿಮ್ಮ ಕನ್ನಡದ ಸಾಹಿತ್ಯ ಸೇವೆ
ಅಪರೂಪದ ಅನಾಹುತ ಗಳಿಂದ ಆಗುವ ಗೊಂದಲಕ್ಕಿಂತಲೂ ರಿಪೋರ್ಟ್ ಸರಿಯಾಗಿ ದಾಖಲಿಸದಿದ್ದಾಗ ಆಗುವ ಗೊಂದಲಗಳೆ ಜಾಸ್ತಿ. ಇದಕ್ಕಿಂತಲೂ ಹೊರತಾಗಿಲ್ಲ ಸಾಕ್ಷಿಗಳ ಕೊರತೆ. ಒಳ್ಳೆಯ ಲೇಖನ. ಧನ್ಯವಾದಗಳು ಸರ್.
Interesting one sir !
Lesson for all budding doctors I.e perfect documentation of MLC is very very important.
Your articles creates enthusiasm, Iam always eager to read your article,.pl be writing.
You have highlighted the interesting phenomenon of ricochet in this episode; thank you. We all have seen many movies in which the hero doesn’t die of a bullet injury as an amulet (ताबीज़) worn by him ricochets the bullet away ?. Well written article.