ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತು ಹೊರಬರುವವರು ಮಿಕ್ಕವರಿಗಿಂತ ಒಂದು ಸ್ತರದ ಮೇಲೆ ಇರುತ್ತಾರೆ. ಯಾಕೆಂದರೆ ಅವರನ್ನು ಹಾಗೆ ತರಬೇತುಗೊಳಿಸಿರಲಾಗುತ್ತದೆ. ಅವರಿಗೆ ರಂಗಪಠ್ಯವನ್ನು ಅಭ್ಯಾಸ ಮಾಡಿಸುವ ಕ್ರಮವೇ ಬೇರೆ. ನಟನೆ ಮತ್ತು ನಟರ ಆಯ್ಕೆ ನಂತರದ ಕೆಲಸ. ಮೊದಲು ರಂಗಪಠ್ಯದ ಸಾರಸರ್ವದ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆ ರಂಗನಾಟಕ ರೂಪಕವಾಗಿ ಅರಳಿಕೊಂಡಿರುವ ಬಗೆಯನ್ನು ಬೆರಗಿನಲ್ಲಿ ಅರ್ಥೈಸಲಾಗುತ್ತದೆ. ನಂತರ ಪ್ರತಿಯೊಂದು ಪಾತ್ರ, ಅದರ ಅನನ್ಯತೆಯನ್ನು ವಿವರಿಸಲಾಗುತ್ತದೆ. ಚಿಕ್ಕ ಪಾತ್ರ ದೊಡ್ಡ ಪಾತ್ರದ ವರ್ಗೀಕರಣವನ್ನು ಮೊದಲು ಇಲ್ಲವಾಗಿಸುತ್ತಾರೆ.
ಎನ್.ಸಿ. ಮಹೇಶ್‌ ಬರೆಯುವ ರಂಗ ವಠಾರ ಅಂಕಣ

 

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಸಾಗಿದೆ. ಕೋವಿಡ್ ಇಳಿಕೆಯಾಗುತ್ತಿರುವ ಹೊತ್ತು ಈ ಯುದ್ಧ ಮತ್ತೊಂದು ಬಗೆಯ ಭೌತಿಕ ದಾಳಿ. ದಿನಪತ್ರಿಕೆ ತೆರೆದರೆ ಯುದ್ಧದ ವಿವರಗಳು ಭೀತಿ ಹುಟ್ಟಿಸುತ್ತಿವೆ. ರಷ್ಯಾ ದಂಗೆ ಎದ್ದಿರುವುದು ಬೇರೆ ಸಂಗತಿ. ಆದರೆ ಅಲ್ಲಿ ನಿಗದಿ ಆಗಿದ್ದ ಹಲವು ಕಲೆಯ ಬಗೆಗಿನ ಕಾರ್ಯಕ್ರಮಗಳು ಮತ್ತು ಅವುಗಳು ಆಯೋಜನೆ ಆಗಲಿಕ್ಕೆ ಶ್ರಮಿಸುತ್ತಿದ್ದ ಹಲವು ಪ್ರಸಿದ್ಧ ಕಲಾವಿದರು ರಷ್ಯಾದ ನಡೆ ಖಂಡಿಸಿ ಹಿಂದೆ ಸರಿಯುತ್ತಿದ್ದಾರೆ. ಶಾಸ್ತ್ರೀಯ ಸಂಗೀತ, ಬ್ಯಾಲೆ, ರಂಗಭೂಮಿಯ ಹಿನ್ನೆಲೆ ಹೊಂದಿರುವ ಪ್ರಖ್ಯಾತ ಕಲಾವಿದರು ರಷ್ಯಾ ಆರಂಭಿಸಿರುವ ಯುದ್ಧದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ರಷ್ಯಾದಲ್ಲಿ ಯುದ್ಧದ ಜೊತೆಜೊತೆಗೇ ಅಲ್ಲಿನ ಸಾಂಸ್ಕೃತಿಕ ಲೋಕದ ಬೆರಗೂ ಕೂಡ ಮಸುಕಾಗಲು ಆರಂಭಿಸಿದೆ. ಕಲಾವಿದರಲ್ಲಿರುವ ಯುದ್ಧವಿರೋಧಿ ನಿಲುವು ಹಾಗೂ ಮಾನವೀಯ ಕಾಳಜಿ ಮೆಚ್ಚುವಂಥದ್ದು.

ಜೆಕ್ ಫಿಲ್‍ಹಾರ್ಮೋನಿಕ್‌ನ ಪ್ರಧಾನ ಸಂಚಾಲಕ ಹಾಗೂ ಸಂಗೀತ ನಿರ್ದೇಶಕ ಸೆಮ್ಯೋನ್ ಬೆಚಕೋವ್ ಜೂನ್‌ನಲ್ಲಿ ಮಾಸ್ಕೊದ ಕಾನ್ಸರ್ಟ್ ಹಾಲ್‌ನಲ್ಲಿ ರಷ್ಯನ್ ಯೂಥ್ ಸಿಂಫೋನಿ ಆರ್ಕೆಸ್ಟ್ರಾಗೆ ನಿಗದಿಯಾಗಿದ್ದ ಸಾಲುಸಾಲು ಕಾರ್ಯಕ್ರಮಗಳನ್ನು ರದ್ದು ಮಾಡಿಕೊಂಡಿದ್ದಾರೆ. ಈಚೆಗೆ ಅವರು ಫೇಸ್ಬುಕ್ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: ‘ ರಷ್ಯಾದ ಯುವ ಪ್ರತಿಭಾನ್ವಿತ ಕಲಾವಿದರ ಜೊತೆಗೂಡಿ ಸಂಗೀತ ಸಂಯೋಜಿಸುವ ಅಮಿತ ಉತ್ಸಾಹದಲ್ಲಿದ್ದೆ. ಆದರೆ ಈ ಯುದ್ಧದ ಸಲುವಾಗಿ ನಾನು ಹಿಂದೆ ಸರಿಯುತ್ತಿದ್ದೇನೆ. ಇದು ನೋವಿನ ಸಂಗತಿ. ಪರಿಸ್ಥಿತಿ ಹೀಗಿದ್ದೂ ನಾನು ಮತ್ತೆ ಇಲ್ಲಿ ಕೆಲಸ ಮಾಡಲು ಆರಂಭಿಸಿದರೆ ಅದು unconscionable act of acquiescence ಆಗುತ್ತದೆ. ನನ್ನ ಈ ನಿರ್ಧಾರವನ್ನ ಯಾರೂ ತಪ್ಪಾಗಿ ಗ್ರಹಿಸಿಕೊಳ್ಳಬಾರದು. ಅದರ ಸ್ಪಿರಿಟನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇದು ನೇರವಾಗಿ ಆರ್ಕೆಸ್ಟ್ರಾ ಅಥವಾ ಸಾರ್ವಜನಿಕರಿಗೆ ಸಂಬಂಧಿಸಿದ್ದಲ್ಲ. ಈ ಸಮಯದಲ್ಲಿ ರಷ್ಯಾದ ಸಾಮಾನ್ಯ ಜನರ ಮಾನಸಿಕ ನರಳಾಟ, ಅವರು ಅನುಭವಿಸುತ್ತಿರುವ ನಾಚಿಕೆ ಮತ್ತು ಆರ್ಥಿಕ ನಷ್ಟ ನಿಜವಾದದ್ದು. ಸ್ವತಂತ್ರ ಮನೋಭಾವ ಇರುವ ಜನರೂ ಇದನ್ನು ವಿರೋಧಿಸದಿದ್ದರೆ ಅವರ ಜೀವನನ್ನು ಅವರೇ ಆತಂಕಕ್ಕೆ ತಂದುಕೊಳ್ಳುತ್ತಾರೆ. ನಾವು ಕಲಾವಿದರು ಅವರ ಪರ ನಿಂತು ಯುದ್ಧದ ವಿರುದ್ಧ ದನಿ ತೆಗೆಯಲಿ ಎಂದು ಬಯಸುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆ ಅಂದರೆ ‘The guns must fall silent, so that we can celebrate life over death’ ಆಗುತ್ತದೆ. ನನ್ನ ಈ ನಿರ್ಧಾರವನ್ನ ಯಾರೂ ತಪ್ಪಾಗಿ ಗ್ರಹಿಸಿಕೊಳ್ಳಬಾರದು. ಅದರ ಸ್ಪಿರಿಟನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇದು ನೇರವಾಗಿ ಆರ್ಕೆಸ್ಟ್ರಾ ಅಥವಾ ಸಾರ್ವಜನಿಕರಿಗೆ ಸಂಬಂಧಿಸಿದ್ದಲ್ಲ. ಈ ಸಮಯದಲ್ಲಿ ರಷ್ಯಾದ ಸಾಮಾನ್ಯ ಜನರ ಮಾನಸಿಕ ನರಳಾಟ, ಅವರು ಅನುಭವಿಸುತ್ತಿರುವ ನಾಚಿಕೆ ಮತ್ತು ಆರ್ಥಿಕ ನಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಸ್ವತಂತ್ರ ಮನೋಭಾವ ಇರುವ ಜನರೂ ಇದನ್ನು ವಿರೋಧಿಸದಿದ್ದರೆ ಅವರ ಜೀವನನ್ನು ಅವರೇ ಆತಂಕಕ್ಕೆ ತಂದುಕೊಳ್ಳುತ್ತಾರೆ. ನಾವು ಕಲಾವಿದರು ಅವರ ಪರ ನಿಂತು ಯುದ್ಧದ ವಿರುದ್ಧ ದನಿ ತೆಗೆಯಲಿ ಎಂದು ಅವರು ಬಯಸುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆ ಅಂದರೆ- ‘The guns must fall silent, so that we can celebrate life over death…” ಸೆಮ್ಯೋನ್ ಬೆಚಕೋವ್‌ಗೆ ಈ ಸಮಯದಲ್ಲಿ ಮೌನವಾಗಿರುವುದು ಸಮ್ಮತವಲ್ಲ. ಅವರು ತಮ್ಮ ಪೋಸ್ಟ್‌ನಲ್ಲ ‘ಮೌನವಾಗಿರುವುದು ಕ್ರೂರತೆಗೆ ಸಮಾನವಾದದ್ದು. ಆ ಕ್ರೂರತ್ವದಲ್ಲಿ ಅದು ನಮ್ಮನ್ನು ಶಾಮೀಲು ಮಾಡಿಕೊಳ್ಳುತ್ತದೆ. ಮತ್ತು ಅದರ ಸಮಾನವಾಗಿ ಕಾಣಲು ಆರಂಭಿಸುತ್ತದೆ. ಈ ಯುದ್ಧದ ಸಮಯದಲ್ಲಿ ಮೌನವಾಗಿರುವುದು ಅಂದರೆ ನಮ್ಮ ಆತ್ಮಸಾಕ್ಷಿ ಮತ್ತು ಮೌಲ್ಯಗಳಿಗೆ ದ್ರೋಹ ಮಾಡಿಕೊಂಡಂತೆ…’ ಎಂದು ಬರೆದು ಹಿಂದೆ ಸರಿದಿದ್ದಾರೆ.

(ಸೆಮ್ಯೋನ್ ಬೆಚಕೋವ್)

ಮತ್ತೊಂದು ಕಡೆ ಕಿರಿಲ್ ಪೆಟ್ರೆಂಕೊ ದನಿ ತೆಗೆದಿದ್ದಾರೆ. ಇವರು ಹುಟ್ಟಿದ್ದು ರಷ್ಯಾದಲ್ಲೇ. ಆದರೆ ಹದಿನೆಂಟನೇ ವಯಸ್ಸಿಗೆ ಆಸ್ಟ್ರಿಯಾಗೆ ಇಮಿಗ್ರೇಟ್ ಆದವರು. ಅವರೂ ತಮ್ಮ ಪೋಸ್ಟ್‌ನಲ್ಲಿ ‘ಉಕ್ರೇನ್ ಮೇಲೆ ಪುಟಿನ್ ಅವರು ನಡೆಸುತ್ತಿರುವ ದಾಳಿ ಅಂತರ ರಾಷ್ಟ್ರೀಯ ಕಾನೂನಿನ ಅತಿಕ್ರಮಣ. ಅದು ಕಲೆಯ ಮೇಲಿನ ದಾಳಿಯೂ ಹೌದು. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಲೆ ಎನ್ನುವುದು ಎಲ್ಲ ಗಡಿಗಳನ್ನು ಒಂದು ಮಾಡುತ್ತದೆ. ನಾನು ನನ್ನ ಎಲ್ಲ ಉಕ್ರೇನಿನ ಸಹೋದ್ಯೋಗಿಗಳ ಪರವಾಗಿ ಇದ್ದೇನೆ. ಮತ್ತು ಎಲ್ಲ ಕಲಾವಿದರು ಈ ಯುದ್ಧದ ಉಗ್ರತೆಯ ವಿರುದ್ಧವಾಗಿ ಹೋರಾಡಲು ಜೊತೆಗೂಡಿ ನಿಲ್ಲಬೇಕು’ ಎಂದಿದ್ದಾರೆ.

ಇದು ಕೇವಲ ಇಬ್ಬರು ಕಲಾವಿದರ ಪ್ರತಿರೋಧ ಅಲ್ಲ. ಈವರೆಗೆ ಸರಿಸುಮಾರು ಹತ್ತುಸಾವಿರಕ್ಕೂ ಹೆಚ್ಚು ಮಂದಿ ರಷ್ಯಾದ ಸಾಂಸ್ಕೃತಿಕ ಲೋಕದ ಕಲಾವಿದರು ಪುಟಿನ್ ಅವರ ಕಾರ್ಯವೈಖರಿಯ ವಿರುದ್ಧ ಬಹಿರಂಗ ಪತ್ರಕ್ಕೆ ಸಹಿ ಮಾಡುತ್ತ- ‘ನೋ ಟು ವಾರ್’ ಅಭಿಯಾನ ಆರಂಭಿಸಿದ್ದಾರೆ. ಇದು ರಷ್ಯಾದ್ಯಂತ ಹಾಗೂ ಜಗತ್ತಿನ ಬಹಳಷ್ಟು ಕಡೆ ಈ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ರಷ್ಯಾದ ರಂಗಕಲಾವಿದರು ಯುದ್ಧದ ವಿರುದ್ಧ ದನಿ ತೆಗೆಯುತ್ತಿರುವ ಬಗ್ಗೆ ಓದುತ್ತ ಓದುತ್ತ ಖುಷಿಗೊಳ್ಳಲು ಆರಂಭಿಸಿದೆ. ಕಲಾವಿದರು ಯುದ್ಧ ತಡೆಯುವಷ್ಟು ಶಕ್ತರಲ್ಲದೆ ಇರಬಹುದು; ಆದರೆ ತಮ್ಮ ರಂಗದಿಂದಲೇ ಪ್ರತಿರೋಧ ಒಡ್ಡಿ ಸಾಂಸ್ಕೃತಿಕ ಲೋಕವನ್ನು ಬರಿದು ಮಾಡಿಬಿಡುವ ಶಕ್ತಿ ಅವರಿಗೆ ಇದೆ. ನಮ್ಮ ಜೀವನದ ಒಟ್ಟು ಪ್ರತಿಫಲನವಾದ ಸಂಸ್ಕೃತಿ, ಸಾಹಿತ್ಯ, ಸಂಗೀತ ಮುಂತಾದ ಪ್ರಕಾರಗಳು ಒಂದು ದೇಶದಲ್ಲಿ ಸ್ಥಗಿತ ಆಗುವುದು ಎಷ್ಟು ಅಪಾಯಕಾರಿ ಬೆಳವಣಿಗೆ ಎಂಬುದು ಅದು ಬರಿದಾದ ಸಂದರ್ಭದಲ್ಲಿ ತಿಳಿಯುತ್ತದೆ. ಇದರ ಬಗ್ಗೆ ಯೋಚಿಸುತ್ತ ರಂಗಕಲಾವಿದರಿಗೆ ಯುದ್ಧವೆನ್ನುವುದು ನಿಜಕ್ಕೂ ಭೌತಿಕವೇ ಎಂಬ ಅನುಮಾನ ಶುರುವಾಯಿತು. ಹೀಗೆ ಯೋಚಿಸಲಿಕ್ಕೆ ಕಾರಣವಿದೆ.

ಕ್ರೀಡಾಪಟುಗಳಿಗೆ ಪ್ರತಿಯೊಂದು ಪಂದ್ಯವೂ ಯುದ್ಧದ ಹಾಗೆಯೇ. ಅಗ್ನಿದಿವ್ಯದ ಕ್ಷಣಗಳಿಗೆ ಮುಖಾಮುಖಿಯಾಗುವ ಸಂದರ್ಭ. ಕ್ರೀಡೆಯ ಹಾಗೆಯೇ ರಂಗಕಲಾವಿದರಿಗೂ ಪ್ರತಿ ನಾಟಕ ಪ್ರದರ್ಶನ ಯುದ್ಧದ ಅನುಭವವನ್ನೇ ತಂದುಕೊಡುತ್ತದೆ. ರಂಗಕ್ಕೆ ಇಳಿದ ಮೇಲೆ ಆಡಲೇಬೇಕು.
ಕ್ರೀಡಾಪಟುವಾದರೂ ಅಷ್ಟೇ ರಂಗಕಲಾವಿದರಾದರೂ ಅಷ್ಟೇ. ಕ್ರೀಡೆಗೆ ಹೆಸರೂ ಪ್ಲೇ. ರಂಗನಾಟಕದ ಹೆಸರೂ ಪ್ಲೇ ಎಂದೇ. ಆಡಬೇಕು ಅಷ್ಟೇ.
ನಾನು ಈವರೆಗೆ ಹಲವು ಸ್ತರದ ರಂಗಕಲಾವಿದರ ಜೊತೆ ಒಡನಾಡಿದ್ದೇನೆ. ರಂಗನಟರನ್ನ ನಿರ್ದೇಶಕರು ಮತ್ತು ರಂಗಶಾಲೆಗಳು ಹೇಗೆ ಅಣಿಮಾಡುತ್ತವೆ ಎನ್ನುವುದರ ಮೇಲೆ ಅವರ ಸಂಯಮದ ಆಟ ನಿರ್ಧಾರವಾಗಿರುತ್ತದೆ. ನಟನೆಯ ಗೀಳು ಅದು ಪರಿಸರದ ಪ್ರಭಾವ, ಸಹವಾಸ ಅಥವಾ ರಕ್ತಗತವಾಗಿ ಬಂದಿರುವುದು, ಕಲೆ ಅಂತರ್ಗತವಾಗಿರುವುದರಿಂದ ರೂಢಿಯಾಗಿರಬಹುದು.

ಆದರೆ ಆರಂಭದಲ್ಲಿ ನಟನೆ ಕಟ್ಟಕಡೆಗೆ ಪ್ರೇಕ್ಷಕನನ್ನು ತಣಿಸಬೇಕು ಮತ್ತು ಚಪ್ಪಾಳೆಯ ಸದ್ದು ಕೇಳಿಸಿಕೊಳ್ಳಬೇಕು ಎನ್ನುವ ಉಮೇದು ಹೆಚ್ಚು ಇರುತ್ತದೆ. ಇದನ್ನು ಕಳೆದುಕೊಳ್ಳುವ ಹಂತದಲ್ಲಿ ನಟರ ಹೃದಯದಲ್ಲಿ ಒಂದು ಯುದ್ಧ ಆರಂಭವಾಗುತ್ತದೆ. ಕೆಲವರು ಯುದ್ಧ ಗೆದ್ದು ಮುಂದೆ ನಡೆಯುತ್ತಾರೆ. ಮತ್ತೆ ಕೆಲವರು ನಿತ್ಯ ಯುದ್ಧ ಮಾಡುತ್ತ ಸಂಘರ್ಷ ಎದುರಿಸುತ್ತಲೇ ಇರುತ್ತಾರೆ. ಇದು ನಟನ ಮನೋಧರ್ಮ ಹಾಗೂ ನೋಟಕ್ರಮವನ್ನು ಆಧರಿಸಿರುತ್ತದೆ.

ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತು ಹೊರಬರುವವರು ಮಿಕ್ಕವರಿಗಿಂತ ಒಂದು ಸ್ತರದ ಮೇಲೆ ಇರುತ್ತಾರೆ. ಯಾಕೆಂದರೆ ಅವರನ್ನು ಹಾಗೆ ತರಬೇತುಗೊಳಿಸಿರಲಾಗುತ್ತದೆ. ಅವರಿಗೆ ರಂಗಪಠ್ಯವನ್ನು ಅಭ್ಯಾಸ ಮಾಡಿಸುವ ಕ್ರಮವೇ ಬೇರೆ. ನಟನೆ ಮತ್ತು ನಟರ ಆಯ್ಕೆ ನಂತರದ ಕೆಲಸ. ಮೊದಲು ರಂಗಪಠ್ಯದ ಸಾರಸರ್ವದ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆ ರಂಗನಾಟಕ ರೂಪಕವಾಗಿ ಅರಳಿಕೊಂಡಿರುವ ಬಗೆಯನ್ನು ಬೆರಗಿನಲ್ಲಿ ಅರ್ಥೈಸಲಾಗುತ್ತದೆ. ನಂತರ ಪ್ರತಿಯೊಂದು ಪಾತ್ರ, ಅದರ ಅನನ್ಯತೆಯನ್ನು ವಿವರಿಸಲಾಗುತ್ತದೆ. ಚಿಕ್ಕ ಪಾತ್ರ ದೊಡ್ಡ ಪಾತ್ರದ ವರ್ಗೀಕರಣವನ್ನು ಮೊದಲು ಇಲ್ಲವಾಗಿಸುತ್ತಾರೆ. ನಟನಟಿಯರಿಗೆ ನಾಟಕದ ಅನನ್ಯತೆ ಬಗ್ಗೆ ವಿವರಿಸಿ ಅವರನ್ನು ಅಣಿಮಾಡಿ ಅದನ್ನು ಪ್ರಯೋಗಕ್ಕೆ ತರುವ ಸವಾಲನ್ನು ಅರ್ಥಮಾಡಿಸುತ್ತಾರೆ. ಹಾಗಾಗಿ ಅದು ನಿತ್ಯ ಪ್ರಯೋಗ. ಇಷ್ಟನ್ನು ಅರ್ಥೈಸಿಕೊಂಡಿರುವವರ ಜೊತೆ ಮಾತಿಗೆ ನಿಂತರೆ ಅವರು ಪ್ರೇಕ್ಷಕರು ಮತ್ತು ಚಪ್ಪಾಳೆಯ ಸದ್ದಿನ ಆಚೆಗೆ ಮಾತು ಆರಂಭಿಸುತ್ತಾರೆ. ಅವರು ತಮ್ಮ ನಟನೆ ಪ್ರದರ್ಶಿಸುವುದು ಪ್ರೇಕ್ಷಕರ ಎದುರೇ ಆದರೂ ಪ್ರೇಕ್ಷಕರ ಬಗೆಗೆ ಅವರಲ್ಲಿ ಹೆಚ್ಚು ಗಮನ ಕೇಂದ್ರೀಕೃತವಾಗಿರುವುದಿಲ್ಲ. ಬದಲಿಗೆ ರಂಗನಾಟಕದ ಒಳಹೂರಣದ ಬಗೆಗೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ಮುಖ್ಯವಾಗಿರುತ್ತವೆ. ಹವ್ಯಾಸಿಗಳು ಸದಾ ಲೆಕ್ಕ ಹಾಕುವಂತೆ ನಾಟಕ ಪ್ರದರ್ಶನಕ್ಕೆ ಎಷ್ಟು ಮಂದಿ ಬರುತ್ತಾರೆ, ಆ ದಿನದ ಕಲೆಕ್ಷನ್ ಎಷ್ಟಾಗುತ್ತದೆ, ಅದು ಅಂದಿನ ಖರ್ಚುಗಳನ್ನು ಸರಿದೂಗಿಸಿ ಮುಂದಿನ ಪ್ರದರ್ಶನಕ್ಕೆ ರಂಗಮಂದಿರ ನಿಗದಿ ಮಾಡುವಷ್ಟಾದರೂ ಹಣವನ್ನು ನಾಟಕ ತಂದುಕೊಡುತ್ತಿದೆಯೇ..? ಈ ಬಗೆಯಲ್ಲಿ ಅವರುಗಳು ಎಂದೂ ಯೋಚಿಸಿದಂತೆ ನಾನು ಕಂಡಿಲ್ಲ.

ಯಾಕೆಂದರೆ ಅವರ ಯುದ್ಧ ಇರುವುದು ಕಲೆಕ್ಷನ್ ವಿಚಾರದಲ್ಲಿ ಅಲ್ಲ. ಬದಲಿಗೆ ಒಟ್ಟು ರಂಗಪಠ್ಯದ ಬಗೆಗೆ. ಪ್ರೇಕ್ಷಕರು ಚಪ್ಪಾಳೆ ತಟ್ಟಲಿ ಬಿಡಲಿ, ತಮ್ಮ ಅಭಿನಯ ಮೆಚ್ಚಿಕೊಳ್ಳಲಿ ಬಿಡಲಿ ಮೊದಲು ತಮ್ಮ ಸೈದ್ಧಾಂತಿಕ ಆತ್ಮ ತಣಿಯಿತೆ ಎಂಬುದು ಅವರಿಗೆ ಮುಖ್ಯವಾಗಿರುತ್ತದೆ. ಇವರ ಜೊತೆ ಒಡನಾಡುವುದು ಅಂದರೆ ಸುಮ್ಮನೆ ಕಿವಿಗೊಟ್ಟು ನಿಲ್ಲುವುದು ಅಷ್ಟೇ. ಉಳಿದ ಮಾತನ್ನು ಅವರೇ ಸರಾಗವಾಗಿ ಸಾಗಿಸುತ್ತಿರುತ್ತಾರೆ. ಅಪ್ಪಿತಪ್ಪಿಯೂ ನಾಟಕದ ರಿಸೀವಿಂಗ್ ಎಂಡ್‌ನಲ್ಲಿ ಪ್ರೇಕ್ಷಕರು ಇರುತ್ತಾರೆ ಎನ್ನುವ ಭಯ ಅವರಿಗೆ ಕಾಡುವುದೇ ಇಲ್ಲ. ಅವರ ಯುದ್ಧವೇನಿದ್ದರೂ ನಾಟಕದ ಜೊತೆಯೇ ಮತ್ತು ಅದನ್ನು ಗಟ್ಟಿ- ಕೆಲವೊಮ್ಮೆ ತೀರಾ ಗಟ್ಟಿ ಅಭಿನಯದ ಮೂಲಕ ದಾಟಿಸುವುದು ಅಷ್ಟೇ. ಇವರಿಂದ ಕಲಿಯುವುದೂ ಸಾಕಷ್ಟಿದೆ ಎಂದು ಅನಿಸುತ್ತಿರುತ್ತದೆ.

ನಮ್ಮಲ್ಲಿರುವ ಪ್ರಸಿದ್ಧ ರೆಪರ್ಟರಿಗಳು ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಿರುಗಾಟ, ಸಂಚಾರ ಆರಂಭಿಸುತ್ತವೆ. ಇಡೀ ಕರ್ನಾಟಕ ಸುತ್ತಿ ಬರುತ್ತವೆ. ಅಲ್ಲಿ ಥರಾವರಿ ಪ್ರೇಕ್ಷಕ ವರ್ಗ ಇರುತ್ತದೆ. ಅವರ ಸ್ವೀಕಾದ ಬಗೆಗೆ ಸಂಚಾರ ಮತ್ತು ತಿರುಗಾಟದವರಿಗೆ ನೆದರು ಇರುವುದಿಲ್ಲ. ಅಥವಾ ಇದ್ದರೂ ನಾನು ಅದನ್ನು ಗುರುತಿಸದೇ ಇರಬಹುದು. ಆ ಊರಲ್ಲಿ ಷೋ ಹೇಗಾಯ್ತು ಎಂದು ಕೇಳಿದರೆ ಹವ್ಯಾಸಿಗಳು ಮೊದಲು ಮಾತು ತೆಗೆಯುವುದು ಪ್ರೇಕ್ಷಕರ ರೆಸ್ಪಾನ್ಸ್ ಬಗ್ಗೆಯೇ. ಆದರೆ ತಿರುಗಾಟ ಅಥವಾ ಸಂಚಾರ ಅಥವಾ ಮತ್ಯಾವುದೇ ಜಂಗಮ ರೆಪರ್ಟರಿಯ ನಟನಟಿಯರು ಈವರೆಗೆ ಪ್ರೇಕ್ಷಕರ ರೆಸ್ಪಾನ್ಸ್ ಬಗ್ಗೆ ಮಾತಾಡಿದ್ದು ಕಡಿಮೆ. ತಾವು ಮಾಡುವ ನಾಟಕ ಒಂದು ‘ಬ್ರ್ಯಾಂಡೆಂಡ್ ಐಟಂ’ ರೀತಿ ಆಗೋಗಿದೆ ಎನ್ನುವುದು ಆಗಲೇ ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಈ ಧೈರ್ಯ ಅವರನ್ನು ಯುದ್ಧಭೂಮಿಯಲ್ಲಿರುವ ಪ್ರೇಕ್ಷಕರ ಭಯದಿಂದ ವಿಮುಕ್ತಗೊಳಿಸಿರುತ್ತದೆ. ಬಹುತೇಕ ರೆಪರ್ಟರಿಯವರು ನಾಟಕದ ಬಗೆಗೇ ದಟ್ಟ ವಿಮರ್ಶೆ ಬೆಳೆಸಿಕೊಂಡು ಪ್ರದರ್ಶನ ನೀಡುವವರು ಎಂಬಂತೆ ಆಗೋಗಿದೆ.

ಶಾಸ್ತ್ರೀಯ ಸಂಗೀತ, ಬ್ಯಾಲೆ, ರಂಗಭೂಮಿಯ ಹಿನ್ನೆಲೆ ಹೊಂದಿರುವ ಪ್ರಖ್ಯಾತ ಕಲಾವಿದರು ರಷ್ಯಾ ಆರಂಭಿಸಿರುವ ಯುದ್ಧದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ರಷ್ಯಾದಲ್ಲಿ ಯುದ್ಧದ ಜೊತೆಜೊತೆಗೇ ಅಲ್ಲಿನ ಸಾಂಸ್ಕೃತಿಕ ಲೋಕದ ಬೆರಗೂ ಕೂಡ ಮಸುಕಾಗಲು ಆರಂಭಿಸಿದೆ. ಕಲಾವಿದರಲ್ಲಿರುವ ಯುದ್ಧವಿರೋಧಿ ನಿಲುವು ಹಾಗೂ ಮಾನವೀಯ ಕಾಳಜಿ ಮೆಚ್ಚುವಂಥದ್ದು.

ಮೇಲೆ ನಾನು ವಿವರಿಸಿದ ಬಗೆ ಫುಲ್ ಟೈಂ ನಟರದು. ಅವರು ನಾಟಕ ಸಿದ್ಧಾಂತಿಗಳು. ನಾಟಕ ಮತ್ತು ನಟನೆ ಬಗ್ಗೆ ಅವರು ಹೇಳಿದ್ದೇ ಸಿದ್ಧಾಂತ. ಅವರ ಸಿದ್ಧಾಂತ ಹೊರತುಪಡಿಸಿ ಉಳಿದವರ ನಟನೆ ಅವರಿಗೆ ಹಿಡಿಸುವುದಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅವರು ತಮ್ಮ ಜಾಡಿನ ಚಿಂತನೆಯವರ ನಾಟಕಗಳನ್ನು ಬಿಟ್ಟು ಮಿಕ್ಕವರ ನಾಟಕಗಳನ್ನು ನೋಡುವುದೂ ಇಲ್ಲ. ಆದರೆ ಟೀಕಾಸ್ತ್ರಗಳನ್ನು ಮಾತ್ರ ಬಿಡುವುದರಲ್ಲಿ ನಿಷ್ಣಾತರು. ಇವರು ಒಂದು ಆವರಣ ಕಟ್ಟಿಕೊಳ್ಳುತ್ತಾರೆ. ಆ ಆವರಣದ ಪ್ರಕಾರವೇ ಎಲ್ಲ ಇರಬೇಕು. ಸಾಮಾಜಿಕ ನಾಟಕ ತೆಗೆದುಕೊಳ್ಳಲಿ ಐತಿಹಾಸಿಕ ನಾಟಕ ತೆಗೆದುಕೊಳ್ಳಲಿ ನಟನಟಿಯರು ನಾಭಿಯಿಂದಲೇ ದನಿ ತೆಗೆಯಬೇಕು. ಇಲ್ಲದಿದ್ದರೆ ಅವರ ನಡುವೆಯೇ ಯುದ್ಧ ಆರಂಭವಾಗುತ್ತದೆ. ಆಮೇಲೆ ಎಲ್ಲ ಮಾತುಗಳನ್ನೂ ಗಮಕಕ್ಕೆ ಮಾತಿನ ದಾಟಿ ದಕ್ಕಿಸಿಕೊಟ್ಟರೆ ಹೇಗೆ ಇರುತ್ತದೊ ಹಾಗೇ ಆಡಬೇಕು. ಹಾಗಿದ್ದರೆ ಮಾತ್ರ ಅದು ನಾಟಕ ಅವರ ಪ್ರಕಾರ. ಪ್ರೇಕ್ಷಕರು ಮೆಚ್ಚುವುದು ಬಿಡುವುದು ಸೆಕೆಂಡರಿ.

ಆದರೆ ನಮ್ಮಲ್ಲಿ ರಂಗಕ್ಕೆ ಫುಲ್ ಟೈಂ ಕೊಡಲು ಸಾಧ್ಯವಾಗದವರೂ ಕಲೆಯ ಬಗೆಗೆ ಗೀಳು ಹತ್ತಿಸಿಕೊಂಡಿರುತ್ತಾರೆ. ಅವರಿಗೆ ರಂಗಭೂಮಿ ಎನ್ನುವುದು ತಮ್ಮ ದೈನಂದಿನ ಏಕತಾನ ಬದುಕು ಮತ್ತು ಕೆಲಸದಿಂದ ಸಂಜೆ ಹೊತ್ತು ಕೆಲ ಕಾಲ ಮುಕ್ತಿ ದೊರಕಿಸಿಕೊಡುವ ಕ್ಷೇತ್ರ. ಅವರಿಗೆ ಅದು ರಿಫ್ರೆಶ್‌ಮೆಂಟ್. ಅವರಿಗೆ ನಾಭಿಯಿಂದ ಡೈಲಾಗ್ ಹೇಳು ಅಂದರೆ ಮರುದಿನ ಮಾಯವಾಗುತ್ತಾರೆ. ಮತ್ತೆಲ್ಲೋ ಮತ್ತೊಂದು ವಿಮುಕ್ತಾಕ್ಷೇತ್ರ ಹುಡುಕಲು ಆರಂಭಿಸಿರುತ್ತಾರೆ. ಹಾಗೆ ಅವರನ್ನು ಬೇರೆ ಮುಕ್ತ ಕ್ಷೇತ್ರ ಹುಡುಕದಂತೆ ಕಾಪಿಟ್ಟುಕೊಂಡು ಅವರಿಗೆ ತಕ್ಕ ಅಭಿನಯ ಹೇಳಿಕೊಡಬೇಕು. ಅವರಿಗೆ ರೆಪರ್ಟರಿಗಳವರ ಹಾಗೆ ತಿಂಗಳಾನುಗಟ್ಟಳೆ ಒಂದು ನಾಟಕದ ರೀಡಿಂಗ್ ಕೊಡುತ್ತ ಅದಕ್ಕೆ ಇರುವ ಬಹುಮುಖೀ ಆಯಾಮಗಳ ಬಗೆಗೆ ವಿವರಿಸುತ್ತ ಕೂತರೆ ಮೂರೇ ದಿನಕ್ಕೆ ಅವರು ತಲೆಸುತ್ತಿ ಬೀಳುವುದು ಗ್ಯಾರಂಟಿ. ಅವರಿಗೆ ಇಷ್ಟಕ್ಕೂ ಮೊದಲಿಗೆ ಬೇಕಿರುವುದು ರಂಗದ ಮೇಲೆ ಒಂದು ಸ್ಪೇಸ್. ಆ ಸ್ಪೇಸ್‌ನಲ್ಲಿ ಒಂದು ದೊಡ್ಡ ಪಾತ್ರ. ಆ ಪಾತ್ರದಲ್ಲಿ ಮಜಭೂತಾದ ಪರಮವಾಚ್ಯ ಡೈಲಾಗುಗಳಿದ್ದರೆ ಅವರ ಉತ್ಸಾಹ ಹೆಚ್ಚುತ್ತದೆ. ಅವರ ಡೈಲಾಗ್‍ಗಳಿಗೆ ಪ್ರೇಕ್ಷಕ ವರ್ಗ ಚಪ್ಪಾಳೆ ತಟ್ಟಿದರೋ ಅಲ್ಲಿಗೆ ಮುಗಿಯಿತು ಕಥೆ. ನಾಟಕಕಾರರನ್ನು ಅತಿಕ್ರಮಿಸಿ ಮುಂದಿನ ಶೋಗಳಲ್ಲಿ ಅವರು ತಮ್ಮ ಡೈಲಾಗುಗಳನ್ನು ಸೇರಿಸಿಕೊಂಡು ಪ್ರೇಕ್ಷಕರ ಚಪ್ಪಾಳೆಯ ಸದ್ದಿಗೆ ಕಿವಿ ಅಂಟಿಸಿಕೊಂಡೇ ನಟನೆಯಲ್ಲಿ ನಿರತರಾಗಿರುತ್ತಾರೆ.

ಆದರೆ ಮಜ ಇರುವುದು ಈ ಸಂಗತಿಯಲ್ಲಲ್ಲ. ರೆಪರ್ಟರಿಗಳಲ್ಲಿ ಕಲಿತವರಲ್ಲಿ ಪ್ರೇಕ್ಷಕರ ಬಗೆಗೆ ಭಯ ಹೇಗೆ ಇರುವುದಿಲ್ಲವೋ ಸಂಜೆ ಹವ್ಯಾಸಿಗಳಲ್ಲಿ ಪ್ರೇಕ್ಷಕರ ಬಗೆಗೆ ಭಯ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಯಾಕೆಂದರೆ ಅವರು ರಂಗಕೃತಿಯ ಬಗೆಗೆ ಎಂದೂ ತೀರಾ ಬುದ್ಧಿಜೀವಿಗಳ ಹಾಗೆ ಚರ್ಚೆಗೆ ಇಳಿದಿರುವುದಿಲ್ಲ. ನಾಟಕದ ರೀಡಿಂಗ್ ಮಾಡುವಾಗ ಅದರ ಸಾರಸರ್ವ ಏನು ಎಂದು ಗ್ರಹಿಸುವ ಬಗೆಗೆ ಮನಸ್ಸು ತೆರೆಯದೆ ತಮಗೆ ಯಾವ ಪಾತ್ರ ಸರಿಹೊಂದಬಹುದು ಎಂದು ಲೆಕ್ಕಾಚಾರ ಹಾಕುತ್ತ ಕೂತಿರುತ್ತಾರೆ. ಅತಿ ರಂಜಿಸುವ ಪಾತ್ರ ಇದ್ದರೆ ಅದನ್ನು ಪಡೆದುಕೊಳ್ಳುವ ಕ್ರಮಗಳ ಬಗೆಗೆ ಯೋಚಿಸುತ್ತಿರುತ್ತಾರೆ. ಒಂದು ಚಿಕ್ಕ ಪಾತ್ರ ಎಷ್ಟೇ ಮಹತ್ವದ್ದಾಗಿದ್ದರೂ ಅದು ಅವರಿಗೆ ನಗಣ್ಯ. ದೊಡ್ಡ ಡೈಲಾಗ್‌ ಗಳಿರಬೇಕು. ಅದು ಅವರಿಗೆ ನೆಚ್ಚಿನ ಪಾತ್ರವಾಗುತ್ತದೆ. ಅದನ್ನು ಹೇಗೊ ಗಿಟ್ಟಿಸಿಕೊಂಡು ರಂಗಕ್ಕೆ ಬರುತ್ತಾರೆ. ಒಂದು ಭಾಗದಲ್ಲಿ ತಮ್ಮ ಅಭಿನಯಕ್ಕೆ ಜನ ಚಪ್ಪಾಳೆ ತಟ್ಟಿ ಹುರಿದುಂಬಿಸಿರುತ್ತಾರೆ. ಇದು ಅವರ ಮನಸ್ಸಿನಲ್ಲಿ ನೆಲೆ ನಿಂತಿರುತ್ತದೆ. ಆದರೆ ಇವರ ಅಗ್ನಿಪರೀಕ್ಷೆ ಸಿದ್ಧವಾಗುವುದು ಬೇರೆ ಊರುಗಳಿಗೆ ಹೋಗಿ ಪ್ರದರ್ಶನಕ್ಕೆ ಸಜ್ಜಾದಾಗ. ಆ ಊರಿನ ಅಲ್ಲಿನ ಜನರ ಮನಸ್ಥಿತಿ ಬೇರೆ, ನಾಟಕದ ಬಗೆಗಿನ ಪರಿಕಲ್ಪನೆ ಬೇರೆ. ನಾಟಕ ನೋಡುವ ಕ್ರಮ ಬೇರೆ. ಸ್ಪಂದನೆಯ ಪರಿ ಬೇರೆ. ತಮ್ಮ ಕಸರತ್ತಿಗೆ ಜನ ನಗಬಹುದು. ನಗದೆಯೂ ಇರಬಹುದು. ನಕ್ಕರೆ ಸೇಫ್. ನಟರು ಆರಾಮು ಮತ್ತು ಆತ್ಮ ಬಣ್ಣ ಬಳಿದುಕೊಳ್ಳುತ್ತದೆ.

ಆದರೆ ಹಾಗೊಂದು ವೇಳೆ ಜನ ತಮ್ಮ ಮಾತುಗಳಿಗೆ ಸ್ಪಂದಿಸದೆ ಹೋದರೆ.. ಮೊದಲು ಅನುಮಾನ ಶುರುವಾಗುತ್ತದೆ. ಆತ್ಮ ತಾನು ಈ ಹಿಂದಿನ ಪ್ರದರ್ಶನಗಳಲ್ಲಿ ಬಳಿದುಕೊಂಡಿರುವ ಬಣ್ಣವನ್ನು ತಾನೇ ದಿಟ್ಟಿಸಲು ಆರಂಭಿಸುತ್ತದೆ. ಮೊದಲನೇ ದೃಶ್ಯದಲ್ಲಿ ಜನ ನಗದೆ ಇರಬಹುದು, ಮುಂದೆ ನಗಬಹುದು ಎಂಬ ಭರವಸೆಯೂ ಜೊತೆಗೂಡುತ್ತದೆ. ಆದರೆ ಅದೂ ಹುಸಿಯಾದಾಗ ನಟರಲ್ಲಿ ಯುದ್ಧದ ನಿಜವಾದ ಭಯ ಶುರುವಾಗುತ್ತದೆ. ತಮ್ಮ ಸೀನ್ ಮುಗಿಸಿ ಸೈಡ್‌ವಿಂಗ್‌ಗೆ ಬರುತ್ತಿದ್ದಂತೆ ತಮಗೆ ಎದುರಾಗುವ ಸಹನಟರ ಎದುರೇ ತಮ್ಮ ಧಾವಂತ ಮತ್ತು ತಾವು ಡೈಲಾಗ್ ಸರಿಯಾಗಿ ಹೇಳುತ್ತಿಲ್ಲವೋ ಎನ್ನುವ ಆತ್ಮಾವಲೋಕನದ ಮಾತನ್ನು ಶುರುವಿಟ್ಟುಕೊಳ್ಳುತ್ತಾರೆ. ಆ ನಟ ತನ್ನ ಸೀನ್‌ಗೆ ಎಂಟ್ರಿ ಕೊಡುವ ತರಾತುರಿಯಲ್ಲಿರುತ್ತಾನೆ. ಅವನಿಗೆ ಮತ್ತೊಂದು ಬಗೆಯಲ್ಲಿ ಆತಂಕ. ಜನ ಯುದ್ಧದಂತೆಯೇ ಭಾಸವಾಗುವ ಸಂದರ್ಭ ಅದು.

ಬೆಂಗಳೂರಿನ ವಲಯದಲ್ಲಿ ನಮ್ಮ ತಂಡದ ನಾಟಕಕ್ಕೆ ಜನರಿಂದ ಉತ್ತಮ ಸ್ಪಂದನೆ ಇತ್ತು. ಇದೇ ಕಾರಣಕ್ಕೆ ನಮಗೆ ಬೇರೆ ಊರುಗಳಲ್ಲೂ ಪ್ರಾಯೋಜಕತ್ವದ ಪ್ರದರ್ಶನಗಳು ಸಿಗಲು ಆರಂಭಿಸಿದವು. ರಂಗೋತ್ಸವಗಳಲ್ಲಿ ನಮ್ಮ ತಂಡದ ನಾಟಕಕ್ಕೆ ಪ್ರವೇಶ ಸಿಗಲು ಶುರುವಾದವು. ನಮ್ಮ ನಟರು ಉತ್ಸಾಹದಿಂದಲೇ ಬೇರೆ ಊರಿಗೆ ಹೋಗಲು ಅಣಿಯಾದರು. ಬೆಂಗಳೂರಿನಲ್ಲಿ ಕೇಳಿಬಂದ ನಗು ಮತ್ತು ಚಪ್ಪಾಳೆಯ ಸದ್ದು ಬೇರೆ ಊರಲ್ಲೂ ಕೇಳುತ್ತದೆ ಎನ್ನುವುದಾದರೆ ಯಾಕೆ ಬಿಟ್ಟುಕೊಡಬೇಕು ಎನ್ನುವುದು ಅವರ ಉತ್ಸಾಹಕ್ಕೆ ಕಾರಣ. ಬೆಂಗಳೂರು ಹೊರತುಪಡಿಸಿಯೂ ಬೇರೆ ಕಡೆ ನಮ್ಮ ತಂಡದ ನಾಟಕಕ್ಕೆ ಅದೇ ಸ್ಪಂದನ ಸಿಕ್ಕಾಗ ನಟರಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು.

ಆದರೆ ಎಲ್ಲ ಕಡೆಯೂ ಹೀಗೆ ಆಗಲಾರದು ಎನ್ನುವುದು ನಟರಿಗೆ ತಿಳಿದಿರಬೇಕು. ಆದರೆ ಇದು ಆಗಲಿಲ್ಲ. ಮೊನ್ನೆ ನಮ್ಮ ತಂಡ ಅಜ್ಜಂಪುರದಲ್ಲಿ ನಾಟಕ ಪ್ರದರ್ಶಿಸಲು ಹೊರಟಿತು. ಅಲ್ಲೊಂದು ರಂಗೋತ್ಸವದ ಆಯೋಜನೆ ಇತ್ತು. ನಮ್ಮ ತಂಡಕ್ಕೂ ಸ್ಲಾಟ್ ಸಿಕ್ಕಿತ್ತು. ಅಲ್ಲಿಗೆ ಹೋಗುತ್ತಿದ್ದಂತೆ ನಮ್ಮ ಬಹುತೇಕ ನಟರು ರಂಗಮಂದಿರವನ್ನು ಬೆಕ್ಕಸ ಬೆರಗಾಗಿ ನೋಡಲು ಆರಂಭಿಸಿದರು. ಯಾಕೆಂದರೆ ಈವರೆಗೆ ಅವರು ಕಂಡು ಪ್ರದರ್ಶಿಸಿದ್ದದ್ದೆಲ್ಲ ಇಂಡೋರ್ ಆಡಿಟೋರಿಯಂನಲ್ಲಿ ಮಾತ್ರ. ಅಲ್ಲಿನ ವ್ಯವಸ್ಥೆ ಬೇರೆ. ಆದರೆ ಅಜ್ಜಂಪುರಲ್ಲಿದ್ದದ್ದು ಓಪನ್ ಆಡಿಟೋರಿಯಂ. ಅಲ್ಲಿ ಅಕಾಸ್ಟಿಕ್ಸ್ ಇಲ್ಲ. ಜನಕ್ಕೆ ಮಾತು ಕೇಳುತ್ತಿದೆಯೇ ಎನ್ನುವು ಪ್ರಶ್ನೆಯನ್ನು ಬಹುತೇಕರು ಕೇಳಿದರು.

ಬೆಂಗಳೂರಿನ  ಐಶಾರಾಮಿ ರಂಗಮಂದಿರಗಳಲ್ಲಿನ ಮೈಕ್ ವ್ಯವಸ್ಥೆ ಬೇರೆ ಬಗೆಯಲ್ಲಿ ಇರುತ್ತದೆ. ಈ ಓಪನ್ ಆಡಿಟೋರಿಯಂನಲ್ಲಿ ವ್ಯವಸ್ಥೆ ಹೇಗಿರುತ್ತದೋ ಎಂದು ಯೋಚಿಸುತ್ತಲೇ ಎಲ್ಲರೂ ಬಣ್ಣ ಹಚ್ಚಿಕೊಂಡರು.

ನಾಟಕ ಆರಂಭ ಆಯಿತು. ಆರಂಭದಲ್ಲಿ ಜನ ತುಂಬ ಗಂಭೀರವಾಗಿ ನೋಡಲು ಆರಂಭಿಸಿದರು. ನಮ್ಮ ನಟರ ಲೆಕ್ಕಾಚಾರ ತಲೆಕೆಳಗಾಗಿತ್ತು. ಬೆಂಗಳೂರಿನಲ್ಲಿ ಇದೇ ಡೈಲಾಗಿಗೆ ಜನ ನಕ್ಕಿದ್ದರು. ಇಲ್ಲಿ ಯಾಕೆ ನಗುತ್ತಿಲ್ಲ? ಆತ್ಮಾವಲೋಕನದ ಜೊತೆಗೆ ಆಳದಲ್ಲಿ ಭಯ ಶುರುವಾಗಿದೆ. ಯುದ್ಧ ಎಂದಾಗ ಶುರುವಾಗುತ್ತದಲ್ಲ ಭಯ? ಅಂಥದ್ದು. ಇದನ್ನು ಮೀರಿ ಅವರು ನಟಿಸಲು ಆಗದಂತೆ ಅವರಲ್ಲಿ ಅನುಮಾನಗಳು ಶುರುವಾದವು. ಸೈಡ್‍ವಿಂಗ್ಸ್‌ನಲ್ಲೇ ಅಳಲು, ಅನುಮಾನಗಳನ್ನು ವ್ಯಕ್ತಪಡಿಸುವ ಕ್ರಿಯೆ ಶುರುವಾಯಿತು. ಸಂಗೀತ ನೀಡಲು ಕೂತಿದ್ದ ನನಗೆ ಇವರ ಪಡಿಪಾಟಲುಗಳು ನಗು ತರಿಸುತ್ತಿದ್ದವು. ನಾಟಕ ಮುಗಿದ ಮೇಲೆ ನಮ್ಮ ನಟರು ಬಂದು ನನ್ನ ಬಳಿ ತಮ್ಮ ತೀವ್ರ ಆತ್ಮಾವಲೋಕನದ ಮಾತುಗಳನ್ನು ಹೇಳುತ್ತಿದ್ದರೂ ನಾನು ಸುಮ್ಮನೆ ನಗುತ್ತಿದ್ದೆ. ಬೇರೆ ಏನು ಮಾಡಲು ಸಾಧ್ಯ?

ಒಂದು ಕಡೆ ನಾಟಕ ಕೃತಿಯನ್ನು ಅಗತ್ಯಕ್ಕಿಂತ ಹೆಚ್ಚು ಡಿಸೆಕ್ಟ್ ಮಾಡಿ ನೋಡುವ ತೀವ್ರತೆ. ಪ್ರೇಕ್ಷಕರು ಸೆಕೆಂಡರಿ. ಮತ್ತೊಂದು ಕಡೆ ನಾಟಕದಲ್ಲಿ ತಮ್ಮ ಪಾತ್ರ ಮುಖ್ಯ ಎನ್ನುವವರು. ಅದೇ ಮುಖ್ಯ ಎಂದು ಅಂತರಂಗದಲ್ಲಿ ವಾದಿಸಿಕೊಂಡವರು. ಅವರಿಗೆ ಪ್ರೇಕ್ಷಕರು ಮತ್ತು ಚಪ್ಪಾಳೆ ಮುಖ್ಯ. ಅದರಲ್ಲಿ ಚೂರು ವ್ಯತ್ಯಯವಾದರೂ ಅವರು ಮಿಡುಕುವ ಬಗೆ ಕಾಣುಲಿಕ್ಕೇ ಒಂದು ಚೆಂದ.

ಈ ಎರಡೂ ಬಣವನ್ನು ಹೇಗೆ ನಿರ್ವಚಿಸಿಕೊಳ್ಳುವುದು?  ಯಾವ ಲೇಬಲ್ಲೂ ಹಚ್ಚದೆ ಎಲ್ಲರ ಮಾತುಗಳಿಗೆ ಕಿವಿಗೊಡುತ್ತ ನಗುತ್ತ ನಿಲ್ಲುವುದು ಮಜ ಎಂದು ಕಂಡುಕೊಂಡಿದ್ದೇನೆ.

ಅಜ್ಜಂಪುರ ಹೋಗುವ ಪೂರ್ವದಲ್ಲಿ ಮಾರ್ಗ ಮಧ್ಯೆ ಸಿಗುವ ಸಾಣೆಹಳ್ಳಿಗೆ ಭೇಟಿಕೊಟ್ಟು ಅಲ್ಲಿನ ಮಠ, ರಂಗದ ವಾತಾವರಣ, ಆಡಿಟೋರಿಯಂ, ಅಲ್ಲಿ ರಂಗವನ್ನು ಕೋರ್ಸ್ ಆಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಲ್ಲ ನೋಡಿ ಅಲ್ಲೇ ಊಟ ಮುಗಿಸಿ ಅಜ್ಜಂಪುರಕ್ಕೆ ಹೊರಟೆವು. ಸಂಜೆ ಅಲ್ಲಿ ನಾಟಕ. ಅದು ಮುಗಿದ ಮೇಲೆ ನಮ್ಮ ಕೆಲ ನಟರು ಗಂಭೀರವಾಗಿದ್ದರು. ಆತ್ಮಾವಲೋನದ ಅಲೆಗಳು ಬಂದು ಅವರನ್ನು ನಿತ್ಯ ತಾಕುತ್ತಲೇ ಇದ್ದವು. ಅದು ಅವರ ಮುಖದ ಮೇಲೆ ಪ್ರತಿಫಲಿಸುತ್ತಿತ್ತು. ನಗುವ ಸರದಿ ನನ್ನದಾಗಿತ್ತು.

ಅಜ್ಜಂಪುರದಿಂದ ಹೊರಟಾಗ ನಮ್ಮ ನಟರೊಬ್ಬರನ್ನ ನಾನು ‘ ಒಟ್ಟಾರೆ ಎಲ್ಲ ಹೇಗಿತ್ತು ಸರ್..?’ ಎಂದು ಕೇಳಿದೆ. ಅದಕ್ಕೆ ಬಂದ ಉತ್ತರ ಮಾರ್ಮಿಕವಾಗಿತ್ತು. ಅವರು ‘ಸಾಣೆಹಳ್ಳಿಯಲ್ಲಿ ಮತ್ತು ಅಜ್ಜಂಪುರದಲ್ಲಿ ಊಟ ಚೆನ್ನಾಗಿತ್ತು..’ ಎಂದು ನಗುತ್ತಲೇ ಹೇಳಿದರು. ನಾನೂ ನಕ್ಕೆ. ‘ಹಾಗಿದ್ದರೆ ನಾಟಕ..?’ ಎಂದು ಕೇಳುವ ಗೋಜಿಗೆ ನಾನು ಹೋಗಲಿಲ್ಲ. ಯಾಕೆಂದರೆ ಹಲವು ನಟರ ಅಂತರಂಗದಲ್ಲಿ ಎದ್ದಿರುವ ಆತ್ಮಾವಲೋಕನದ ಅಲೆಗಳ ಸದ್ದು ನನ್ನ ಕಿವಿಗೆ ತಾಕುತ್ತಲೇ ಇತ್ತು.