ಯುದ್ಧಗಳೇಕೆ ನಡೆಯುತ್ತವೆ ಎಂದು ಯೋಚಿಸುತ್ತಾ, ಸ್ಕಾಟ್‍ ಲ್ಯಾಂಡ್‍ನಲ್ಲಿ  ಯಾಂತ್ರಿಕವಾಗಿ ಆ ವಸ್ತು ಸಂಗ್ರಹಾಲಯವನ್ನು ನೋಡುತ್ತಿದ್ದಾಗ ‘ಹಾಲ್ ಆಫ್ ಆನರ್’ ಎನ್ನುವ ಇಪ್ಪತ್ತು ಅಡಿ ಉದ್ದ ಅಗಲವಿದ್ದ ಕೋಣೆಯಲ್ಲಿ ಕೆಂಪು ಬಣ್ನದ ಲೆದರ್ ಬೈಂಡಿಂಗ್ ಹೊಂದಿದ್ದ ವಿಪರೀತ ದಪ್ಪವಾದ ಒಂದು ಪುಸ್ತಕ ಕಂಡಿತು. ಅದರ ಹಿಂದೆಯೇ ಅದಕ್ಕೇ ಆತುಕೊಂಡಿದ್ದಂತೆ ನಿಂತಿದ್ದ ಗಾಜಿನ ಗೋಡೆ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದರೆ ಅದರಲ್ಲಿದ್ದ ಅಕ್ಷರಗಳನ್ನು ಓದಿ ಒಂದು ಕ್ಷಣ ದಂಗುಬಿಡಿದೆ.
ಅಂಜಲಿ ರಾಮಣ್ಣ  ಬರೆಯುವ ‘ ಕಂಡಷ್ಟು ಪ್ರಪಂಚ’ ಅಂಕಣದಲ್ಲಿ ಹೊಸ ಬರಹ 

ಉಕ್ರೈನ್ ಇರಲಿ ರಷ್ಯಾ ಆಗಲೀ, ಯುದ್ಧಗಳನ್ನು ಘೋಷಿಸುವುದು ಮಾತ್ರ ಎಂದಿಗೂ ಗಂಡಸರೇ ಎಂದು ಜೋರಾಗಿ ಹೇಳಿದಾಗ ಕ್ಷಮಿಸಿ ನನ್ನನ್ನು ಪುರುಷ ದ್ವೇಷಿ ಎಂದುಕೊಳ್ಳುತ್ತೀರೇನೋ ! ಆದರೆ ಚರಿತ್ರೆಯ ಪುಟಗಳು ಓದಲು ನೀಡಿರುವುದು ಈ ಸತ್ಯವನ್ನೇ ತಾನೆ? ಅದಕ್ಕೇ ಇರಬೇಕು ಯಾವ ದೇಶಕ್ಕೆ ಹೋದರೂ ಜಾಗದ ಸಾಮರ್ಥ್ಯಕ್ಕೆ ತಕ್ಕಂತೆ ಮಡಿದ ವೀರರಿಗೆ ಸ್ಮಾರಕಗಳನ್ನು ನಿರ್ಮಿಸಲಾಗಿರುತ್ತದೆ. ಯುದ್ಧದ ಹೆಸರಿನಲ್ಲಿ ದೇಶಕ್ಕಾಗಿ ಯಥಾಶಕ್ತಿ ಹೋರಾಡಿ ಪ್ರಾಣ ತೆತ್ತವರೂ ಪುಸ್ತಕಗಳಲ್ಲಿ ಬಹುಪಾಲು ಗಂಡಸರೇ. ವೈಭವೀಕರಣಗೊಂಡವರೂ ಅವರೇ. ಆದರೆ ಎಲ್ಲಿಯೇ ಯುದ್ಧ ಯಾವ ಕಾರಣಕ್ಕೇ ನಡೆದರೂ ಬೇರನ್ನು ಕಳೆದುಕೊಂಡು ನೋಯುವವರು ಮಾತ್ರ ಹೆಂಗಸರು.

ಈ ಸತ್ಯವನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದ್ದಕ್ಕೆ ಚರಿತ್ರೆಯೂ ಅಪೂರ್ಣ ಎನಿಸಿಕೊಂಡಿದ್ದು. ಹೀಗೆಲ್ಲಾ ಅನಿಸುವುದು ಕೇವಲ ಹೀಗೆ ಹೇಳುವವರಿಗೆ, ನಂಬಿದವರಿಗೆ ಮಾತ್ರವಲ್ಲ, ಮತ್ತೂ ಕೆಲವರಿಗೂ ಹೀಗನಿಸಿದ್ದಿದೆ. ಅದಕ್ಕೆ ಸಾಕ್ಷಿಯಾಗಿ ಬೆರಳೆಣಿಕೆಯಷ್ಟು ದೇಶಗಳಲ್ಲಿ ತಲೆ ಎತ್ತಿ ನಿಂತಿದೆ ಮಹಿಳಾ ಯುದ್ಧ ಸ್ಮಾರಕಗಳು.

ಒಮ್ಮೆ ಅಮೇರಿಕೆಯ ಸ್ಮಾರಕಗಳ ನಗರ ಎಂದೇ ಹೆಸರುವಾಸಿಯಾದ ವಾಷಿಂಗ್ಟನ್ ಡಿಸಿ ನಗರದ ಆರ್ಲಿಂಗ್ಟನ್ ರಾಷ್ಟ್ರೀಯ ರುದ್ರಭೂಮಿಯಲ್ಲಿ ನಡೆದು ಹೋಗುತ್ತಿದ್ದಾಗ ಗಮನ ಸೆಳೆದದ್ದು ಎರಡನೇ ಮಹಾಯುದ್ಧದಲ್ಲಿದ್ದ ಮಹಿಳೆಯರ ಸ್ಮಾರಕ ಎನ್ನುವ ಫಲಕ. ಅಲ್ಲಿಯತನಕ ಸೈನಿಕರಿಗಾಗಿ ಇರಿಸಲಾಗಿದ್ದ ಅದೆಷ್ಟೆಷ್ಟೋ ಸ್ಮಾರಕಗಳನ್ನು ನೋಡಿದ್ದವಳಿಗೆ, ಮೊದಲ ಬಾರಿಗೆ ಮಹಿಳೆಯರಿಗಾಗಿ ಮೀಸಲಾಗಿಟ್ಟಿದ್ದ ಸ್ಮರಣಾ ಸ್ಥಳ ಸಿಕ್ಕಿತ್ತು. ನಾಲ್ಕು ಎಕರೆ ಜಾಗದಲ್ಲಿ ಸಂಗ್ರಹಾಲಯ, ವಿವರಗಳನ್ನು ಕೆತ್ತಿದ ಗೋಡೆಗಳು,  ಮಹಿಳಾ ಸೈನಿಕರ ಮೂವತ್ತು ಅಡಿ ಎತ್ತರದ ಕರಿ ಕಂಚಿನ ಪ್ರತಿಮೆಗಳು, ಹುರಿದುಂಬಿಸುವ ಮಾತಗಳನ್ನು ಹೇಳುವ ವೀಡಿಯೋಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಇಟ್ಟಿದ್ದಾರೆ. 1997ರಲ್ಲಷ್ಟೇ ಸ್ಥಾಪಿತವಾದ ಈ ಜಾಗಕ್ಕೆ ವರ್ಷವೊಂದಕ್ಕೆ ಇಪ್ಪತ್ತು ಸಾವಿರ ಜನರು ಭೇಟಿ ನೀಡುತ್ತಾರಂತೆ. ಹೊರ ಬಂದ ಮೇಲೆ ಮನಸಿನಲ್ಲಿ ತೊಳಲಾಡುತ್ತಿದ್ದದ್ದು ಅಲ್ಲಿ ಓದಿದ ಈ ವಾಕ್ಯ “ಹಿಂದೆ ಇಂದು ಮತ್ತು ಮುಂದು ಯುದ್ಧದ್ದಲ್ಲಿ ಮಡಿದ ಮಡಿಯಲಿರುವ ಎಲ್ಲಾ ಮಹಿಳೆಯರ ಗೌರವಾರ್ಥ”. ಅವ್ಯಕ್ತ ದುಗುಡದ ಜೊತೆಯಲ್ಲಿಯೇ ಅಂದಿನಿಂದ ಭಾರತದಲ್ಲಿ ವಿದೇಶದಲ್ಲಿ ಮಹಿಳೆಯರಿಗಾಗಿ ಮೀಸಲಾದ ಸ್ಮಾರಕ ಇದೆಯೇ ಎಂದು ಹುಡುಕಲು ತೊಡಗಿದೆ.

ವಿಯಟ್ನಾಮ್ ದೇಶದಲ್ಲಿ ಇದೆ ಎಂದು ಓದಿ ತಿಳಿದೆ. ಒಮ್ಮೆ ಲಂಡನ್‍ನಲ್ಲಿ ಸಿಕ್ಕಿತು ನೋಡಿ ಮತ್ತೊಂದು ವಿಚಿತ್ರ ರೀತಿಯಲ್ಲಿ ಸ್ಮರಣೆಗೆ ತೊಡಗಿಕೊಂಡಿರುವ ಸ್ಮಾರಕ. ವೆಸ್ಟ್ ಮಿನ್ಸ್ಟರ್ ಎನ್ನುವ ಮುಖ್ಯವಾದ ಸ್ಥಳದಲ್ಲಿ ವೈಟ್‍ಹಾಲ್ ಎನ್ನುವ ರಸ್ತೆ. ಪಾರ್ಲಿಮೆಂಟ್ ಕಡೆಯಿಂದ ಈ ರಸ್ತೆಯಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದೆ. ಎಡಗಡೆಗೆ ಧುತ್ತನೆ ಎದುರಾಯಿತು ಇಪ್ಪತ್ತೆರಡು ಅಡಿ ಉದ್ದದ ಈ ಕಪ್ಪು ಶಿಲೆ. ಮಿರಮಿರ ಮಿಂಚುತ್ತಿದ್ದ ಇದರ ಬಳಿ ಹೋಗಿ ನೋಡಿದಾಗ ತಿಳಿದದ್ದು ಇದು ಎರಡನೆಯ ಮಹಾಯುದ್ಧದಲ್ಲಿ ಭಾಗವಹಿಸಿದ ಮಹಿಳೆಯರ ಸ್ಮರಣಾರ್ಥವಾಗಿ ಇರುವ ಸ್ಮಾರಕ ಎಂದು. ಈ ಶಿಲೆಯ ಮೇಲೆ ಯಾವ ಮಹಿಳಾ ಸೇನಾನಿಯ ಮುಖವಿರುವ ಮೂರ್ತಿಯಾಗಲೀ, ಚಿತ್ರವಾಗಲೀ, ಹೆಸರಾಗಲೀ ಇಲ್ಲ. ಬದಲಿಗೆ ಮಹಿಳಾ ಸೈನಿಕರು ಬಳಸುತ್ತಿದ್ದರು ಎನ್ನಲಾದ ಹದಿನೇಳು ರೀತಿಯ ಬಟ್ಟೆಗಳು, ಟೊಪ್ಪಿಗೆಗಳು, ಕೈ ಚೀಲಗಳು ಮತ್ತು ಬೂಟುಗಳನ್ನು ಕಂಚಿನಲ್ಲಿ ಮಾಡಿ ಮೇಲ್ಭಾಗದಲ್ಲಿ ನೇತು ಬಿಡಲಾಗಿದೆ. ಅದರ ಕೆಳಗೆ “ದೇಶ ಸೇವೆಯಲ್ಲಿ ಪ್ರಾಣ ತೆತ್ತ ಮಹಿಳೆಯರ ಗೌರವಾರ್ಥ” ಎಂದು ಕೆತ್ತಲಾಗಿದೆ. ಎಲ್ಲಾ ಸರಿ ಆದರೆ ಮುಖ, ಹೆಸರು ಏನೂ ಇಲ್ಲದ ಈ ಸ್ಮಾರಕ ತೋರಿಸುತ್ತಿರುವುದಕ್ಕಿಂತ ಹೆಚ್ಚಿನದೇನನ್ನೋ ಬಚ್ಚಿಟ್ಟುಕೊಳ್ಳುತ್ತಿದೆ ಎಂದೆನಿಸುತ್ತಿತ್ತು. ಹಠ ಬಿಡದೆ ಅದರ ಇತಿಹಾಸ ಕೆದಕುತ್ತಾ ಹೋದೆ.

 

1997ರಲ್ಲಷ್ಟೇ ಸ್ಥಾಪಿತವಾದ ಈ ಜಾಗಕ್ಕೆ ವರ್ಷವೊಂದಕ್ಕೆ ಇಪ್ಪತ್ತು ಸಾವಿರ ಜನರು ಭೇಟಿ ನೀಡುತ್ತಾರಂತೆ. ಹೊರ ಬಂದ ಮೇಲೆ ಮನಸಿನಲ್ಲಿ ತೊಳಲಾಡುತ್ತಿದ್ದದ್ದು ಅಲ್ಲಿ ಓದಿದ ಈ ವಾಕ್ಯ “ಹಿಂದೆ ಇಂದು ಮತ್ತು ಮುಂದು ಯುದ್ಧದ್ದಲ್ಲಿ ಮಡಿದ ಮಡಿಯಲಿರುವ ಎಲ್ಲಾ ಮಹಿಳೆಯರ ಗೌರವಾರ್ಥ”. ಅವ್ಯಕ್ತ ದುಗುಡದ ಜೊತೆಯಲ್ಲಿಯೇ ಅಂದಿನಿಂದ ಭಾರತದಲ್ಲಿ ವಿದೇಶದಲ್ಲಿ ಮಹಿಳೆಯರಿಗಾಗಿ ಮೀಸಲಾದ ಸ್ಮಾರಕ ಇದೆಯೇ ಎಂದು ಹುಡುಕಲು ತೊಡಗಿದೆ.

ಬೇರೆ ದೇಶಗಳಲ್ಲಿ ಮಹಿಳೆಯರಿಗಾಗಿಯೇ ಸ್ಮಾರಕವಿದ.  ಆದರೆ ಪ್ರಭಾವೀ ಲಂಡನ್‍ನಲ್ಲಿ ಇಲ್ಲದಿರುವುದನ್ನು ಗಮನಿಸಿದ ನಿವೃತ್ತ ಮೇಜರ್ ಡೇವಿಡ್ ಮೆಕೆನ್ಲೇ ರಾಬರ್ಟ್‍ಸನ್ ಸರ್ಕಾರಕ್ಕೆ 1997ರಲ್ಲಿ ಮನವಿ ಸಲ್ಲಿಸುತ್ತಾರೆ. ನಮ್ಮ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ತಿಣುಕುತ್ತಿರುವಂತೆಯೇ ಅಲ್ಲೂ ಸಾಕಷ್ಟು ವಾದ, ವಿವಾದ, ಚರ್ಚೆಗಳು ನಡೆದು, ಅದರ ಅವಶ್ಯಕತೆ ಇಲ್ಲ ಎನ್ನುವವರ ನಡುವೆಯೂ 2005ನೆಯ ಇಸವಿಯಲ್ಲಿ ಮಹಾರಾಣಿ ಎಲಿಜಬೆತ್ ಅವರು ತಮ್ಮ ಅರವತ್ತನೆಯ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ಸ್ಮಾರಕವನ್ನು ಉದ್ಘಾಟಿಸಿದ್ದಾರೆ. ಇದು ಸರಿ, ಆದರೆ ಮತ್ತೇನೋ ಸರಿಯಿಲ್ಲ ಎನುತಿತ್ತು ಮನಸ್ಸು. ಹಿಂದಿರುಗಿ ಬಂದಮೇಲೆ ಪ್ರವಾಸೀ ಗೈಡ್ ಇಯಾನ್‍ನನ್ನು ಕೇಳಿದೆ, ಹಾಗೆ ಧೈರ್ಯ ಮಾಡಲು ಆತ ಬ್ರಿಟಿಷ್ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವನಾಗಿದ್ದ ಎನ್ನುವುದೂ ಕಾರಣವೇ. “ಆ ಸ್ಮಾರಕದಲ್ಲಿ ಕೇವಲ ಪರಿಕರಗಳನ್ನು ತೂಗು ಬಿಟ್ಟಿದ್ದೀರ, ಯಾರದೇ ಮುಖಗಳನ್ನಾಗಲೀ ಹೆಸರನ್ನಾಗಲೀ ಕಾಣಿಸಿಲ್ಲ ಯಾಕೆ?” ಎಂದೆ. ಹತ್ತಾರು ಜನರಿಗೆ ನನ್ನದು ಸಿನಿಕತನ ಎನ್ನಿಸದಿರದು. ಆದರೆ ಆತನಿಗೆ ಅದೊಂದು ಅದ್ಭುತವಾದ ಪ್ರಶ್ನೆಯಾಗಿ ಕಂಡಿತ್ತು.

ಈ ಸ್ಮಾರಕ ನಿರ್ಮಿಸುವ ಚರ್ಚೆ ನಡೆಯುವಾಗ ಹೆಚ್ಚಿನ ಸಂಸದರು ಮತ್ತು ಪ್ರಜೆಗಳು ಮಹಿಳೆಯರಿಗೆ ಸ್ಮಾರಕದ ಅವಶ್ಯಕತೆ ಇಲ್ಲ ಎಂದೇ ಅಭಿಪ್ರಾಯ ಪಟ್ಟಿದ್ದರಂತೆ. ಅಲ್ಲದೆ ಒಂದಷ್ಟು ಜನರ ಮುಖಗಳನ್ನು ಹಾಕಿದರೆ ಉಳಿದವರಿಗೆ ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲವಂತೆ. ಅದಕ್ಕಾಗಿ ಹೀಗೆ ಮಹಿಳಾ ಪ್ರತೀಕವನ್ನು ಮಾತ್ರ ಮಾಡಲಾಯಿತಂತೆ.

ಅಮೇರಿಕೆಯಲ್ಲಿ ನೋಡಿದರೆ ಮುಂದೆಯೂ ಯುದ್ಧ ಮಾಡುತ್ತೆ ಈ ಗಂಡು ಸಮಾಜ ಎನ್ನುವುದನ್ನು ಮಹಿಳೆಯರ ಮೂಲಕ ಪರೋಕ್ಷವಾಗಿ ಘೋಷಿಸಿ ಮುಂದೆ ಮಡಿಯಲಿರುವವರಿಗೂ ನಮನ ಸಲ್ಲಿಸಿಬಿಟ್ಟಿದೆ. ಇಲ್ಲಿ ನೋಡಿದರೆ ದುಡಿದು, ದಣಿದು ಮಡಿದ ಮಹಿಳೆಯರನ್ನು ಅನಾಮಿಕರನ್ನಾಗಿಸಲಾಗಿದೆ.

ಯಾಕೆ ಹೀಗೆ? ವೇದಿಕೆ ಇಲ್ಲದೆ ಒಳಗೇ ಸಾಯುತ್ತಿರುವ ಪ್ರಶ್ನೆಗಳು ಉತ್ತರ ಬಯಸುತ್ತಿರುವುದಾದರೂ ಯಾರಿಂದ? ಅಸಹನೀಯ ಮೌನದೊಂದಿಗೆ ಸ್ಕಾಟ್ಲ್ಯಾಂಡಿನ ಎಡಿನ್‍ಬರೋ ಪ್ರವೇಶಿಸಿದ್ದೆ. ಸ್ಕಾಟ್ಲ್ಯಾಂಡ್ ಜನರ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಟಾಮ್ ಪ್ರವಾಸಿ ಮಾರ್ಗದರ್ಶಕ ಕರೆದುಕೊಂಡು ಹೋಗಿದ್ದು ಎಡಿನ್‍ಬರ್ಗ್ ದುರ್ಗಕ್ಕೆ. ಆತನ ಉತ್ಸಾಹ ಭರಿತ ವಿವರಣೆ ಸ್ವಲ್ಪ ಹೊತ್ತಿನಲ್ಲಿಯೇ ತೀರಾ ಅಸಹಜ ಎನ್ನುವಂತೆ ತೋರುತ್ತಿತ್ತು. ಇತಿಹಾಸ ಎಂದರೆ ತಮಗೆ ತಾವೇ ರಾಜರೆಂದುಕೊಂಡು ನೌಕೆ ಕಟ್ಟಿ, ಕುದುರೆ ಏರಿ ಬಿಲ್ಲು ಬಾಣ ಮದ್ದು ಗುಂಡು ಕತ್ತಿ ಈಟಿ ಭರ್ಜಿಯಂತೆ ದಂಡೆತ್ತಿ ಹೋಗೋದು ಮಹಾರಾಜ ಎಂದು ಘೋಷಿಸಿಕೊಳ್ಳುವುದು, ಇಷ್ಟೇ ತಾನೆ ಎನಿಸಲು ಶುರುವಿಟ್ಟಿತ್ತು. ಕೋಟೆಯನೆಲ್ಲಾ ತೋರಿಸಿ ಟಾಮ್ ಈಗ ಸ್ವಲ್ಪ ಹೊತ್ತು ವಿಶ್ರಾಂತಿ ಸಮಯ ನಂತರ ಸಿಗೋಣ ಎಂದು ಹೇಳಿ ಹೋದ.

ಸಿಡಿಯುತ್ತಿದ್ದ ತಲೆ ಇದೇ ಸಮಯ ಕಾಯುತ್ತಿತ್ತು. ಆಕಾಶವನ್ನು ಆಘ್ರಾಣಿಸುವ ಆಸೆಯಲ್ಲಿ ಹೊರ ಬಂದರೆ ಮತ್ತೆ ಕಣ್ಣಿಗೇ ಬೀಳಬೇಕೆ ‘ಸ್ಕಾಟಿಶ್ ನ್ಯಾಷನಲ್ ವಾರ್ ಮೆಮೋರಿಯಲ್’ ಎನ್ನುವ ಫಲಕ. ಅಲ್ಲಿಗೆ ಹೋಗುವುದೂ ಬೇಡ, ಕದಡಿ ಹೋಗುವ ಮನಸ್ಸು ಕೇಳುವ ಹತ್ತು ಪ್ರಶ್ನೆಗಳೊಂದಿಗಿನ ಜಂಜಾಟವೂ ಬೇಡ ಎನ್ನುವ ಪೇಲವ ದನಿಯೊಂದಿಗೇ ಕಾಲುಗಳು ಮಾತ್ರ ಅದರೊಳಗೆ ಹೊಕ್ಕಿದ್ದವು. ಯಾಂತ್ರಿಕವಾಗಿ ಸಂಗ್ರಹಾಲಯವನ್ನು ನೋಡುತ್ತಿದ್ದಾಗ ‘ಹಾಲ್ ಆಫ್ ಆನರ್’ ಎನ್ನುವ ಇಪ್ಪತ್ತು ಅಡಿ ಉದ್ದ ಅಗಲವಿದ್ದ ಕೋಣೆಯಲ್ಲಿ ಕೆಂಪು ಬಣ್ನದ ಲೆದರ್ ಬೈಂಡಿಂಗ್ ಹೊಂದಿದ್ದ ವಿಪರೀತ ದಪ್ಪವಾದ ಒಂದು ಪುಸ್ತಕ ಮತ್ತು ಅದರ ಹಿಂದೆಯೇ ಅದಕ್ಕೇ ಆತುಕೊಂಡಿದ್ದಂತೆ ನಿಂತಿದ್ದ ಗಾಜಿನ ಗೋಡೆ ಕಣ್ಣಿಗೆ ಬಿತ್ತು.

ಹತ್ತಿರ ಹೋಗಿ ನೋಡಿದರೆ ಅದರಲೇನಿತ್ತು? “ಈ ದೇಶ ಯುದ್ಧ ಎನ್ನುವ ಒತ್ತಡವನ್ನು ಎದುರಿಸುತ್ತಿದ್ದಾಗ ತಮ್ಮ ಕರುಣೆ, ಪ್ರಾರ್ಥನೆ ಮತ್ತು ಮೌನದಲ್ಲಿ ಈ ದೇಶಕ್ಕೆ ಶಾಂತಿಯನ್ನು ಹೊಂದಲು ಸಾಧ್ಯವಾಗಿಸಿಕೊಟ್ಟ ಎಲ್ಲಾ ಮಹಿಳೆಯರ ಗೌರವಾರ್ಥ” ಎನ್ನುವ ಸಾಲುಗಳು. ಅಬ್ಬಾ, ಕಣ್ಣಿಗೆ ಕಾಣುವಂತೆ ಭಾಗವಹಿಸುವವರನ್ನು ಗುರುತಿಸುವುದು ಸಮಾಜದ ಸಹಜ ಗುಣ. ಆದರೆ ಹಿನ್ನೆಲೆಯಲ್ಲಿ ಜೀವ ತೇದವರನ್ನು ಸಾರ್ವಜನಿಕವಾಗಿ ಗುರುತಿಸಿ ಗೌರವಿಸಿದ ಮೊದಲ ದೇಶ ಸ್ಕಾಟ್ಲ್ಯಾಂಡ್, ಇದೋ ನಿನಗೊಂದು ಸಲಾಂ ಎನಿಸಿತು. ಕೂಡಲೇ, ಛೆ ಈ ಯುದ್ಧ ಆಗುವುದಾದರೂ ಯಾಕಾಗಿ, ಎಂದೂ ಉತ್ತರ ದೊರೆಯದ ಪ್ರಶ್ನೆಯೊಂದಿಗೆ ಪ್ರಯಾಣ ಮುಂದುವರೆದಿತ್ತು.