ಈ ವಾರ ನನ್ನ ಪತ್ರ ಜಿಂಡಬೈನ್ (Jindabyne) ಎನ್ನುವ ಆಸ್ಟ್ರೇಲಿಯನ್ ಚಿತ್ರ ನನ್ನನ್ನು ಕಾಡಿದ ಬಗ್ಗೆ.
ಅಮೇರಿಕದ ರೇಮಂಡ್ ಕಾರ್ವರ್‌ನ ಪುಟ್ಟ ಕತೆಯನ್ನಿಟ್ಟುಕೊಂಡು ರೇ ಲಾರೆನ್ಸ್ ಎಂಬಾತ ಮಾಡಿದ ಈ ಚಿತ್ರದ್ದು ನಿಧಾನದ ಗತಿ. ಒಂದು ಮುಳುಗಡೆಯಾದ ಊರು. ಅದರ ಪಕ್ಕದಲ್ಲಿ ಬೆಳೆದ ಇನ್ನೊಂದು ಊರು. ಅಲ್ಲಿಂದ ನಾಕು ಜನ ಗಂಡಸರು ಫಿಶಿಂಗ್‌ಗಾಗಿ ಕಗ್ಗಾಡಿನೊಳಗೆ ಹೋಗುವುದು. ಅವರನ್ನು ಹಿಂಬಾಲಿಸುವಂತೆ ತೋರುವ ದೈತ್ಯಗಾತ್ರದ ವಿಚಿತ್ರ ಸದ್ದು ಮಾಡುವ ವಿದ್ಯತ್ ತಂತಿಗಳು. ಬೆಟ್ಟ ಗುಡ್ಡಗಳ ನಡುವೆ ಕಣಿವೆಯಲ್ಲಿ ಶಾಂತವಾಗಿ ಹರಿವ ನದಿ. ಅದರಲ್ಲಿ ಧಿಗ್ಗನೆ ಒಂದು ಅಬಾರಜಿನಿ ಹುಡುಗಿಯ ಹೆಣ. ಒಂದಷ್ಟು ಚರ್ಚೆ. ಪಕ್ಕದಲ್ಲೇ ನೀರಲ್ಲಿ ಚಾಚಿಕೊಂಡ ಸತ್ತ ಮರದ ರೆಂಬೆಗೆ ಆ ಹೆಣದ ಕಾಲನ್ನು ಕೊಚ್ಚಿಹೋಗದಂತೆ ದಾರದಿಂದ ಕಟ್ಟಿ ಅವರ ಫಿಶ್ಶಿಂಗ್ ಮುಂದುವರೆಯುವುದು. ಮರುದಿನ ಊರಿಗೆ ಹಿಂದಿರುಗುವ ಮುಂಚೆ ಪೋಲೀಸಿಗೆ ಫೋನ್ ಮಾಡಿ ತಮ್ಮ ನಾಗರಿಕ ಜವಾಬ್ದಾರಿಯನ್ನು ಪೂರೈಸಿಕೊಳ್ಳುವುದು.
ಅಲ್ಲಿಂದ ಹಲವಾರು ಸ್ತರದಲ್ಲಿ ಚಿತ್ರ ಜಟಿಲವಾಗುತ್ತಾ ಸಾಗುತ್ತದೆ. ಇಡೀ ಊರಿಗೆ ದಟ್ಟವಾದ ಮುಜುಗರದ ಮೌನ ಆವರಿಸುತ್ತದೆ. ಸತ್ತ ಹುಡುಗಿಯ ಕುಟುಂಬ ದುಃಖದಲ್ಲಿ ಮುಳುಗಿದೆ. ಫಿಶ್ಶಿಂಗ್ ಹೋದ ನಾಕು ಜನರಲ್ಲಿ ಒಬ್ಬನ ಹೆಂಡತಿಗೆ ಹೆಣ ಸಿಕ್ಕ ಮೇಲೂ ಇವರು ಫಿಶಿಂಗ್ ಮುಂದುವರಿಸಿದ್ದು ತಿಳಿಯುತ್ತದೆ. ಅವಳು ಅವರ ಮಾನವೀಯ ಜವಾಬ್ದಾರಿ ಎಲ್ಲಿ ಹೋಯಿತೆಂದು ಸಿಟ್ಟಿಗೇಳುತ್ತಾಳೆ. ಬಿಳಿಯ ಹೆಂಗಸಾದ ಅವಳು ತೋರುವ ಸಂತಾಪ ಮತ್ತು ಕರುಣೆ ಸತ್ತ ಹುಡುಗಿಯ ಕುಟುಂಬದ ಸಿಟ್ಟು ವಾಕರಿಕೆಗೆ ಗುರಿಯಾಗುತ್ತದೆ. ಮಾಯದೇ ಒಣಗಿದ ಹುಣ್ಣನ್ನು ಉಗುರಲ್ಲಿ ಕಿತ್ತ ಹಾಗೆ ಬಿಳಿ-ಕರಿ ಸಂಬಂಧ ಮರಳಿ ಹಸಿಯಾಗುತ್ತದೆ. ಸುತ್ತಲೂ ಸುಂದರ ಬೆಟ್ಟ ಗುಡ್ಡ. ನಡುವೆ ಸತ್ತ ಹುಡುಗಿಯ ಜೀವವನ್ನು ಬೀಳ್ಕೊಡುವ ಅಬಾರಿಜಿನಿಗಳು. ಒಂದು ಬಗೆಯ ನಿರ್ಣಾಯಕ ಮುಕ್ತಾಯವನ್ನು ಚಿತ್ರ ಅಲ್ಲಿ ಕಾಣುತ್ತದೆ.
ಆಸ್ಟ್ರೇಲಿಯಾದ ಬಿಳಿಯರ ಚರಿತ್ರೆಯುದ್ದಕ್ಕೂ ಅಪಚಾರಕ್ಕೆ ಒಳಗಾದ ಅಬಾರಿಜಿನಿಗಳು. ಮನಸ್ಸನ್ನು-ಹೃದಯವನ್ನು ಹಿಂಡುವಂತ ಸಂಗತಿಗಳು. ಅಷ್ಟು ಹೇಳಿದರೆ ಏನೂ ಹೇಳಿದಂತಾಗಲಿಲ್ಲ ನೋಡಿ. ಇಂಡಿಯಾದ ಮಧ್ಯಮ ವರ್ಗದ ಅನಿವಾಸಿಯಾದ ನನ್ನಂಥವನ ಜತೆ ಈ ಚಿತ್ರ ಏನು ಮಾತಾಡುತ್ತಿದೆ? ನಾನು ಅಬಾರಿಜಿನಿಗಳ ನೋವನ್ನು ಅರಿಯಬಲ್ಲೆ ಎಂದರೆ ಏನರ್ಥ? ನನ್ನ ಪ್ರತಿಕ್ರಿಯೆಯ ಜಟಿಲತೆ ತಪ್ತ ಅಬಾರಿಜಿನಿಗಳಿಗಿಂತ ಆ ಊರಿನ ಬಿಳಿಯರ ಹಸಿ ಸಂದಿಗ್ಧತೆಯಲ್ಲಿದೆ ಅನ್ನಲು ನಾಚಿಕೆ ಆಗಬೇಕೆ? ಇಲ್ಲದಿದ್ದರೆ, ಇಂಡಿಯಾದ ಚರಿತ್ರೆಯ ಭೂತದಲ್ಲಷ್ಟೇ ಅಲ್ಲ, ಇವತ್ತಿಗೂ ನಡೆದಿರುವ ಅಪಚಾರಕ್ಕೆ ನನ್ನ ಪ್ರತಿಕ್ರಿಯೆ? ಬಿಳಿಯನಲ್ಲದ ನಾನು ನನ್ನ ಊರಲ್ಲಿ ಇಲ್ಲಿಯ ಬಿಳಿಯರಂತೇ ತಣ್ಣಗಿರುತ್ತೇನಲ್ಲ!? ಇಲ್ಲಿಯ ಬಿಳಿಯರಂತೇ ಹಲವಾರು ವಾದ-ತರ್ಕಗಳ ಬಲದಿಂದ ನನ್ನ ನಿಶ್ಕ್ರಿಯತೆಯನ್ನು ಸಮರ್ಥಿಸಿಕೊಳ್ಳುತ್ತೇನಲ್ಲ – ಮುಸ್ಲೀಮರ ವಿಷಯದಲ್ಲಿ, ಶೂದ್ರರ ವಿಷಯದಲ್ಲಿ, ಬುಡಕಟ್ಟಿನವರ ವಿಷಯದಲ್ಲಿ?
ಚಿತ್ರದಲ್ಲಿ ಮುಳುಗಡೆಯಾದ ಊರು ಈಗ ಊರ ಪಕ್ಕದ ಕೊಳ. ಆಳದಲ್ಲಿ ಸಾಮಾನು ಸರಂಜಾಮು ಮೇಜು ಕುರ್ಚಿ ಪೆಟ್ಟಿಗೆ ಗಡಿಯಾರಗಳು ಈಗಲೂ ಅಲುಗಾಡದೆ ಇವೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಮಗನಿಗೆ ಅದೇ ಕೊಳದಲ್ಲಿ ಫಿಶಿಂಗ್ ಹೇಳಿಕೊಡುವ ಅಪ್ಪ ಇದ್ದಾನೆ. ನೀರಿಗೆ ಹೆದರುವ ಪುಟ್ಟ ಹುಡುಗನಿದ್ದಾನೆ. ಅದೇ ನೀರಿನಲ್ಲಿ ಅವನನ್ನು ಈಜಿಸಿಯೇ ಬಿಡುವ, ವಿಚಿತ್ರಗಳನ್ನು ಕಾಣುವ ಆ ಪುಟ್ಟ ಪೋರಿ ಇದ್ದಾಳೆ. ಊರ ಹೊರಹೊರಗೇ ಸುತ್ತುವ, ಆಗಾಗ ಒಳಗೂ ಹಣಕುವ ವ್ಯಭಿಚಾರಿ ಕೊಲೆಗಡುಕ ಇದ್ದಾನೆ. ಐವತ್ತರ ದಶಕದಿಂದ ಎಪ್ಪತ್ತರ ದಶಕದವರೆಗೆ ಅವಿರತವಾಗಿ ನಡೆದ ಸ್ನೋಯಿ ರಿವರ್ ಹೈಡ್ರೋ ಎಲಕ್ಟ್ರಿಕ್ ಪ್ರಾಜೆಕ್ಟ್‌ನ ಪಳೆಯುಳಿಕೆ ಇಲ್ಲಿಯ ಮುಳುಗಡೆ. ೩೦ ದೇಶಗಳಿಂದ ಬಂದ ನೂರಾರು ಸಾವಿರ ವಲಸಿಗರಿಗೆ ಕೆಲಸ ದೊರಕಿಸಿಕೊಟ್ಟ ಚರಿತ್ರೆಯ ಪುಟ. ಅದಕ್ಕೇ ಇರಬೇಕು, ನಟ ಗ್ಯಾಬ್ರಿಯೆಲ್ ಬರ್ನ್ ಇಲ್ಲಿ ತನ್ನ ಮೂಲ ಐರಿಶ್ ಆಕ್ಸೆಂಟ್‌ನಲ್ಲೇ, ಹಾಗೂ ಲಾರಾ ಲಿನ್ನಿ ತನ್ನ ಮೂಲ ಅಮೇರಿಕನ್ ಆಕ್ಸೆಂಟಿನಲ್ಲೇ ಮಾತಾಡುತ್ತಾರೆ. ಅವರ ನುಡಿಯನ್ನು ಆಸ್ಟ್ರೇಲಿಯನ್ ಆಕ್ಸೆಂಟಿಗೆ ಒಗ್ಗಿಸುವ ಯಾವುದೇ ಜಗ್ಗಾಟವಿಲ್ಲ, ಮತ್ತು ಹಾಗೇ ಇರುವುದಕ್ಕೆ ವಿವರಣೆಯೂ ಇಲ್ಲ. ಅಲ್ಲದೇ ಪ್ರಾಜೆಕ್ಟಿನ ಹೆಸರಲ್ಲಿ ಲೆಕ್ಕವಿಲ್ಲದಷ್ಟು ಮೂಲನಿವಾಸಿಗಳ ಜಾಗ, ನೆನಪು, ಚರಿತ್ರೆ ಮತ್ತು ಬದುಕನ್ನು ನುಂಗಿ ನೀರುಕುಡಿದು ತುಂಬಿ ನಿಂತಿರುವುದೂ ಮರೆತ ನಿಜವೇ. ಇಲ್ಲಿ ಚರಿತ್ರೆಯ ಆ ಮುಗಿದ ಅಧ್ಯಾಯದ ತಣ್ಣನೆ ನಿರ್ಲಕ್ಷ್ಯ ಕೂಡ ಇದೆ.
ಎದೆಯ ಭಾರವನ್ನು ಸರಿಸಿದರೆ ಅದರಡಿ ಮುಲಮುಲ ಹರಿದಾಡುವ ಹತ್ತು ಹಲವಾರು ಹುಳಗಳು ಕಾಣುತ್ತವಲ್ಲ ಅವು. ಮತ್ತು ಸ್ವಸ್ಥ ಬದುಕಿನ ಆಧಾರವನ್ನು ಕೊಂಚ ಅಲುಗಾಡಿಸಿ ಮತ್ತೆ ಸ್ವಾಸ್ಥ್ಯಕ್ಕೆ ಮರಳದಂತೆ ನೋಡಿಕೊಳ್ಳುವುದು ಇದೆಯೆಲ್ಲಾ. ಇವೆಲ್ಲಾ ಸದಾ ನಮ್ಮ ಸಂಗಾತಿಗಳು. ಚಿತ್ರ ಒಂದು ನಿಮಿತ್ತ ಮಾತ್ರ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.