ಸೀರೆ ಎಂಬ ಈ ವಿಚಿತ್ರ. ವಿಶಿಷ್ಟ ಉಡುಪು ಯಾಕೆ ಮತ್ತು ಹೇಗೆ ರೂಪು ತಳೆದಿರಬಹುದು ಎಂದು ಯೋಚಿಸುತ್ತ ಹೋದ ಹಾಗೂ ಇದು ಪುರುಷ ಪ್ರಧಾನ ವ್ಯವಸ್ಥೆಯ ರಾಜಕಾರಣದ ಒಂದು ಭಾಗವಾಗಿ ಬೆಳೆದಿದೆ ಅನ್ನಿಸಿದೆ. ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ನಮ್ಮ ದೇಶದ ಕೆಲಭಾಗಗಳ ಮಹಿಳೆಗೆ ಸೀರೆ ಉಡುವುದನ್ನು ಕಡ್ಡಾಯ ಮಾಡಲಾಗಿದೆ! ಕೆಲವು ಪ್ರದೇಶಗಳಲ್ಲಿ ಸೀರೆಯ ಸೆರಗನ್ನು ತಲೆಗೆ ಹೊದೆಯುವುದೂ ಕಡ್ಡಾಯ. ಇತಿಹಾಸದ ಯಾವುದೋ ತಿರುವಿನಲ್ಲಿ ಇಂತಹ ಒಂದು ಹೇರಿಕೆ, ದಬ್ಬಾಳಿಕೆ ಉಡುಪಿನ ಮೂಲಕ ಹುಟ್ಟಿಕೊಂಡಿದೆ ಮತ್ತು ಮುಂದುವರಿದಿದೆ.
ವಿಜಯಶ್ರೀ ಹಾಲಾಡಿ ಬರೆದ ಪ್ರಬಂಧ ನಿಮ್ಮ ಓದಿಗೆ

‘ನಾನು ಸೀರೆಯನ್ನು ಪ್ರೀತಿಸುತ್ತೇನೆ ಮತ್ತು ದ್ವೇಷಿಸುತ್ತೇನೆ’ ಎಂದಿದ್ದೇನೆ ಪದ್ಯವೊಂದರಲ್ಲಿ. ಆದರೆ ಅದು ನಿಜವಾಗಿಯೂ ದ್ವೇಷವಲ್ಲ; ಸನ್ನಿವೇಶದ ಒತ್ತಡಗಳಿಗೆ ಸಿಲುಕಿ ಹುಟ್ಟಿಕೊಂಡ ಅಸಹಾಯಕತೆ ಇರಬಹುದು. ಹದಿನೆಂಟನೆಯ ವರ್ಷದಿಂದ ಇಂದಿನವರೆಗೆ ಉಟ್ಟುಕೊಂಡ ಎಷ್ಟೋ ಸೀರೆಗಳ ಸ್ಪರ್ಶ, ಗಂಧ, ಹಿತದ ನೆರಿಗೆಗಳು ನೆನಪಿನೊಳಗೆ ಸೇರಿಕೊಂಡಿವೆ. ಸೀರೆ ಉಡಬೇಕು ಎಂದಾಕ್ಷಣ ಶುರುವಾಗುವುದು ಅದಕ್ಕೆ ಹೊಂದುವ ಇನ್ನಿತರ ಪರಿಕರಗಳನ್ನು ಒಟ್ಟು ಮಾಡುವ ಉದ್ವೇಗ! ಐದಾರು ಪಿನ್ನುಗಳು, ಅದೇ ಸೀರೆಯದ್ದೇ ರವಿಕೆ, ಸೀರೆಯ ಬಣ್ಣವನ್ನೇ ಹೊಂದಿದ್ದು, ಗಟ್ಟಿಮುಟ್ಟಾದ ದಾರವನ್ನೊಳಗೊಂಡ ಲಂಗ, ಹಿಂಸೆ ಕೊಡದ ಬ್ರೇಸಿಯರ್ ಇವಿಷ್ಟು ಮೂಲಭೂತ ಅಗತ್ಯತೆ. ಜೊತೆಯಲ್ಲಿ ಧರಿಸಬಹುದಾದ ಮ್ಯಾಚಿಂಗ್ ಬಳೆ, ಕಿವಿಯೋಲೆ, ಸರ ಮುಂತಾದವು ಮುಂದಿನ ಸಾಧ್ಯತೆಯ ಆಲೋಚನೆಗಳು. ಈಗ ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಮೊಣಕೈಯ್ಯವರೆಗಿನ ತೋಳು ಮತ್ತು ನಿರ್ದಿಷ್ಟವಾದ ಅದೇ ಸೀರೆಯದ್ದಲ್ಲವೇನೋ ಎಂದು ಕಾಣುವ ರವಿಕೆ ಫ್ಯಾಶನ್ ಆಗಿರುವುದರಿಂದ ನನ್ನಂತಹ ಸೋಮಾರಿಗಳಿಗೆ ಆರಾಮ.

ಅಲ್ಲದೇ ‘ಅತಿಯಾದ ಅಚ್ಚುಕಟ್ಟು ಸೌಂದರ್ಯವೇ ಅಲ್ಲ, ಅಸಂಗತ ಕಾಂಬಿನೇಷನ್‌ಗಳೇ ಚಂದ’ ಎಂಬ ನನ್ನ ಅಭಿಪ್ರಾಯಕ್ಕೂ ಈಗಿನ ಫ್ಯಾಷನ್ ಅನುಕೂಲಕರವಾಗಿದೆ! ಹಾಗಾಗಿ ವಿಭಿನ್ನ ಡಿಸೈನ್‌ಗಳುಳ್ಳ ಕಾಟನ್ ಬಟ್ಟೆಯಿಂದ ಎಂಟ್ಹತ್ತು ರವಿಕೆಗಳನ್ನು ಹೊಲಿಸಿಟ್ಟಿದ್ದೇನೆ. ಆದರೆ ಹೀಗೆಂದೊಡನೆ ತೀರಾ ಮೈಮರೆಯಲು ಸೀರೆ ಬಿಡುವುದಿಲ್ಲ. ಸೀರೆಯ ಜಾಯಮಾನವೇ ಹಾಗೆ, “ನನ್ನ ಕುರಿತು ಜಾಗ್ರತೆ, ಸೂಕ್ಷ್ಮತೆ ವಹಿಸಿದರೆ ಮಾತ್ರ ಸಹಕರಿಸುತ್ತೇನೆ” ಎಂಬ ಷರತ್ತು. ಒಂದರ್ಥದಲ್ಲಿ ಈ ಸೀರೆ ಮೃದು ಹೃದಯದ ಗಡಸು ಹೆಣ್ಣು! ಬಾಲ್ಯದಲ್ಲಿ ‘ಕಡ್ಡಿ ಪೈಲ್ವಾನ್’ ‘ಟ್ಯಾಂಟ್ರಕ್ಕಿ ಕೈ ಕಾಲ್’ ಎಂಬೆಲ್ಲ ಬಿರುದುಗಳು ನನಗಿದ್ದವು. ಮೊದಲೆಲ್ಲ “ನೀವೇನು ಇಷ್ಟು ಸಪೂರ” ಎಂದು ರಾಗವೆಳೆದು ಆಕ್ಷೇಪಿಸಿ ನನ್ನಲ್ಲಿ ಕೀಳರಿಮೆ ಹುಟ್ಟಿಸಿದವರೇ ಈಗ “ನೀವು ಇಷ್ಟು ತೋರ ಆಗುತ್ತೀರೆಂದು ಊಹಿಸಿರಲೂ ಇಲ್ಲ” ಎಂದೆಲ್ಲ ಗಳಹಿ ತಲೆಚಿಟ್ಟು ಹಿಡಿಸುವ ಪರಿಸ್ಥಿತಿ ಬಂದಿದೆ. ಅವರಲ್ಲೊಬ್ಬರಂತೂ ಎಲ್ಲಾ ಸಭ್ಯತೆಗಳನ್ನೂ ಮೀರಿ “ಒಳ್ಳೇ ಎಮ್ಮೆ ತರ ಬೆಳೆದಿದ್ದೀರಿ ಮರ್ರೇ” ಎಂದು ತಲೆಬಿಸಿ ಮಾಡಿಕೊಂಡರು. “ನಿಮ್ಮ ಎಮ್ಮೆ ಯಾವ ಸೀಮೆಯದ್ದು, ಅದಕ್ಕೆ ಎರಡೇ ಕಾಲಾ? ಸೀರೆ ಉಡುತ್ತದಾ? ನನ್ನಷ್ಟು ಸಣ್ಣ ಇದೆಯಾ? ಹಾಗೆಂದರೆ, ನೀವು ಜಿಪುಣರಿರಬೇಕು; ಅದಕ್ಕೆ ಮೇವೇ ಹಾಕಿಲ್ಲ” ಎಂದೆಲ್ಲ ನಾನು ಕೇಳಲು ಹೋಗದೆ ಸುಮ್ಮನೆ ನಕ್ಕಿದ್ದರಿಂದ ಅವರ ಮುಂದಿನ ಮಾತುಗಳು ಉಳಿದುಹೋದವು!

ತುಸು ಸ್ಥೂಲವಾದ ದೇಹಕ್ಕೆ ದಪ್ಪ ಸೀರೆ ಕಷ್ಟ. ತೀರಾ ತೆಳುವಂತೂ ಮೊದಲಿನಿಂದಲೂ ಇಷ್ಟವಿಲ್ಲ. ಸಪೂರ ಇದ್ದ ದಿನಗಳಲ್ಲಿ ಬರೀ ಕಾಟನ್ ಸೀರೆಗಳನ್ನೇ ಆಯ್ದು ಉಡುತ್ತಿದ್ದೆ. ಆದರೀಗ ಕಾಟನ್ ಮಿಕ್ಸ್ ಅಂದರೆ ಮೈಗೆ ಅಂಟಿ ನಿಲ್ಲದ, ಹಾಗೆಂದು ಒರಟೂ ಅಲ್ಲದ ಮಧ್ಯಮ ರೀತಿಯ ಸೀರೆ ಮತ್ತು ದಪ್ಪಗಿನ ಸಿಂಥೆಟಿಕ್ ಸೀರೆಗಳು ಅನುಕೂಲವೆನಿಸುತ್ತವೆ. ಮೊದಲಿನಿಂದಲೂ ನನ್ನ ಆಯ್ಕೆಯೆಂದರೆ ಮೈಗೆ ಒಪ್ಪುವ ಸಾಧಾರಣ ಕ್ರಯದ ಸೀರೆ. ಜಾಸ್ತಿ ದರದ ಸೀರೆ ಅಥವಾ ಯಾವುದೇ ಉಡುಪು ನನಗೆ ಸರಿಬರುವುದಿಲ್ಲ. ನಾನೇ ಬೆವರು ಹರಿಸಿ ದುಡಿಯುವುದಾದರೂ ಮೂರ್ನಾಲ್ಕು ಸಾವಿರದ ಸೀರೆ ತೆಗೆದುಕೊಂಡದ್ದು ಈ ಹದಿನಾರು ವರ್ಷಗಳಲ್ಲಿ ಬರೀ ಮೂರು ಸಲ ಮಾತ್ರ. ಇನ್ನೂರು ರೂಪಾಯಿಂದ ಹಿಡಿದು ಎರಡು ಸಾವಿರದ ಒಳಗಿನ ಸೀರೆಗಳನ್ನಷ್ಟೇ ಆಯ್ದುಕೊಂಡಿದ್ದೇನೆ. ಎಷ್ಟೋ ಜನರು ಮೈ ಮುಚ್ಚಲು, ಮನದ ಅಂಗ್ಲಾಪ ತಣಿಸಿಕೊಳ್ಳಲು ಒಂದೊಳ್ಳೆಯ ಬಟ್ಟೆ ಇಲ್ಲದೆ ಪರದಾಡುತ್ತಿರುವ ಈ ದೇಶದಲ್ಲಿ ಅಂತಹ ವೈಭವ ನನಗೆ ಬೇಕಾಗಿಲ್ಲ. ಆದರೆ ಹೇಗೆಂದರೆ ಹಾಗೆ ಉಡುಪು ಧರಿಸಿ ಹೊರ ಹೊರಡುವುದೂ ನನಗಾಗುವುದಿಲ್ಲ. ತುಸುವೇ ಸರಿಯಿಲ್ಲ, ಒಪ್ಪುವುದಿಲ್ಲ ಅನ್ನಿಸಿದರೂ ಅದೆಷ್ಟೇ ಚಂದದ ಉಡುಪಾದರೂ ಕಿತ್ತೆಸೆದು ಮತ್ತೊಂದು ಸೀದಾ ಸಾದಾ ಬಟ್ಟೆ ಧರಿಸಿ ಹೊರಡುವುದು ಅಭ್ಯಾಸ.

ಸೀರೆಯಂತೂ ಸ್ವಲ್ಪ ಅಹಿತ ಅನ್ನಿಸಿದರೂ ಆತ್ಮವಿಶ್ವಾಸ ಸಹಕರಿಸುವುದಿಲ್ಲ. ಸೀರೆಯುಟ್ಟಾಗ ಎಲ್ಲೂ ಮೈ ಕಾಣಬಾರದು, ಅಸಹ್ಯ ಅನ್ನಿಸಬಾರದು ಎಂಬುದು ಮೊದಲಿನಿಂದಲೂ ಪಾಲಿಸಿಕೊಂಡು ಬಂದ ನಿಯಮ. ಹೀಗಾಗಿ ಆರು ಪಿನ್ನುಗಳನ್ನು ಕುತ್ತಿಕೊಂಡು ಜಾಗ್ರತೆಯಾಗಿ ಉಡುವುದು. ಹಾಗೆಂದು ಅತಿಯಾದ ಶಿಸ್ತೂ ಇಷ್ಟವಿಲ್ಲ. ನೆರಿಗೆಗಳು, ಒಟ್ಟಾರೆ ನಿಲುವು ಸಹಜವಾಗಿ ಕಾಣಬೇಕು. ಈ ಬೇಡಿಕೆಗಳೆಲ್ಲ ಈಡೇರಬೇಕಾದರೆ ಕನಿಷ್ಟ ಇಪತ್ತು ನಿಮಿಷಗಳು ಬೇಕು. ಬ್ರಾ ಕಾಣಲೇಬಾರದು, ಲಂಗ ಕಟ್ಟಿದ್ದು ತೀರಾ ಸಡಿಲ ಅಥವಾ ಸೊಂಟ ಕೊಯ್ಯುವಷ್ಟು ಬಿಗಿಯಾಗಬಾರದು, ಪಾದದ ಹತ್ತಿರ ಲಂಗದ ಫ್ರಿಲ್ಲು ಇಣುಕಬಾರದು, ರವಿಕೆ ತೀರಾ ಜಾಳಾಗಿರಬಾರದು, ತೀರಾ ಬಿಗಿಯಾಗಿರಲೂಬಾರದು… ಈ ಎಲ್ಲ ‘ಬಾರದು’ಗಳನ್ನು ಲಕ್ಷಿಸಿಯೂ ಕೊನೆಗೆ ಉಸಿರು ಸಿಕ್ಕಿಕೊಳ್ಳುವುದು ಸೀರೆಯುಟ್ಟವರಿಗೆ ಸಹಜ! ಈ ಕಾರಣಕ್ಕಾಗಿಯೇ ಸೀರೆ ಎಂದರೆ ಒಮ್ಮೊಮ್ಮೆ ಅಸಾಧ್ಯ ಸಿಟ್ಟು. ಕೆಟ್ಟ ಸೆಕೆಯ ದಿನಗಳಲ್ಲಂತೂ ಸೀರೆ ಉಡುವಾಗಿನ ಸಮಯ ಥೇಟ್ ಮಾವಿನಕಾಯಿಯನ್ನು ಉಬೆಗೆ ಹಾಕಿದಂತಿರುತ್ತದೆ! ನನ್ನ ಶಿಕ್ಷಕ ವೃತ್ತಿಗೆ ಸೀರೆ ಕಡ್ಡಾಯ ಎಂಬಂತಾಗಿದೆ. ಅಸಲಿಗೆ, ಆದೇಶವನ್ನು ಹುಡುಕಿದರೆ ಅಲ್ಲಿ, “ಯಾವುದೇ ಸಭ್ಯ ಉಡುಪು ಧರಿಸುವುದು” ಎಂದಿದ್ದರೂ ಬಾಯಿಮಾತಿನ ರೂಲ್ಸ್‌ಗಳ ಪ್ರಕಾರ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸೀರೆ ‘ಕಡ್ಡಾಯ’! ಶಾಲೆ ಇರುವ ಹಳ್ಳಿಯೂರಿನ ಜನರ ಮನದಲ್ಲಂತೂ ಶಿಕ್ಷಕಿಯರು ಸೀರೆಯೇ ಉಡಬೇಕು ಎಂಬ ಕಲ್ಪನೆ ಕೆತ್ತನೆಯಂತೆ ಅಚಲವಾಗಿದೆ. ಈ ಕುರಿತಾಗಿ ಅನೇಕ ಸಲ ತಲೆಕೆಡಿಸಿಕೊಂಡು ಕೊನೆಗೆ ವಾದಗಳನ್ನು ಬಿಟ್ಟು ಬೆಕ್ಕಿನ ಮರಿಯಂತೆ ಗಪ್‍ಚಿಪ್ ಸೀರೆಯುಟ್ಟು ಹೋಗಲೂ ಕಲಿತದ್ದಾಯಿತು.

ಅರ್ಧ ತಿಂಡಿ ತಿಂದು, ಕಾಫಿ ಮಾಡಿ ಅದನ್ನು ಕುಡಿಯಲು ಸಮಯವಿಲ್ಲದೆ ಅಡುಗೆಮನೆಯಲ್ಲೇ ಬಿಟ್ಟು, ಒಂದೇ ಉಸಿರಿಗೆ ಓಡಿ ಓಡಿ ಬಸ್ಸಿಗೆ ರೆಡಿಯಾಗುವುದು ಪ್ರತೀ ಬೆಳಗಿನ ದಿನಚರಿ. ಅಂಥಾದ್ದರಲ್ಲಿ ಸೀರೆಯೆಂಬೋ ಈ ಆರು ಮೀಟರ್‌ ಉದ್ದದ ಮಾಯಾವಿನಿಯನ್ನು ಸುತ್ತಿಕೊಳ್ಳಬೇಕು! ಕೊನೆಯಲ್ಲಿ ಉಳಿಯುವ ಬರೀ ಎಂಟ್ಹತ್ತು ನಿಮಿಷದಲ್ಲಿ ಅಚ್ಚುಕಟ್ಟಾಗಿ ಸೀರೆ ಉಡುವುದು ಹೇಗೆ ಸಾಧ್ಯ? ನೆರಿಗೆ ಹಿಡಿದು ಪಿನ್ನು ಚುಚ್ಚುವುದು ಯಾವಾಗ, ಚೂರೂ ʼಕಳಂಕʼಕ್ಕೆ ಎಡೆಯಿಲ್ಲದಂತೆ ಸೆರಗಿನ ಭಾಗವನ್ನು ಸರಿಪಡಿಸಿ ಕೂರಿಸುವುದು ಯಾವಾಗ, ಹಿಮ್ಮಡಿ ಕಾಣದಂತೆ ಸೀರೆಯ ತುದಿಯನ್ನು ಹಣಕಿ ಎಳೆದಿಟ್ಟು ಬೆನ್ನು ಸರ್ತ ಮಾಡುವುದು ಯಾವಾಗ… ಅಬ್ಬಬ್ಬಾ ಈ ಗಡಿಬಿಡಿಯ ಸಮಯದಲ್ಲಿ ಎಲ್ಲರಿಗೂ, ಎಲ್ಲಕ್ಕೂ ಶಾಪ ಹಾಕಿಯೇ ಬಸ್ಸಿಗೆ ಓಡುವುದು ನಾನು! ಕೊನೆಗೂ ಬಸ್ಸು ತಪ್ಪಿಯೇ ಹೋದರೆ, ಹತ್ತು ರೂಪಾಯಿಯ ದಾರಿಗೆ ನೂರಾ ಎಪ್ಪತ್ತು ರೂಪಾಯಿಗಳನ್ನು ರಿಕ್ಷಾಕ್ಕೆ ಸುರಿದು ಶಾಲೆಗೆ ದೌಡಾಯಿಸುವುದು! ಇಷ್ಟೆಲ್ಲ ಅದ್ವಾನಗಳಾದ ಮೇಲೂ ಸೀರೆಯುಟ್ಟಿದ್ದು ಚೆನ್ನಾಗಿ ಕಾಣಬೇಕು! ಎಂಥಾ ಹುಚ್ಚೋ! ಆಗಾಗ ನನ್ನ ಸಹೋದ್ಯೋಗಿ ಗೆಳತಿಯರು ಮತ್ತು ಕೆಲ ವಿದ್ಯಾರ್ಥಿನಿಯರು ನಿಮ್ಮ ಸೀರೆಯ ಆಯ್ಕೆ ಪರ್ಫೆಕ್ಟ್, ಉಡುವ ರೀತಿಯೂ ಚಂದ, ನಿಮಗೆ ಸೀರೆ ಚೆನ್ನಾಗಿ ಒಪ್ಪುತ್ತದೆ ಎಂದಾಗೆಲ್ಲ ಮೇಲು ಮೇಲಿಗೆ “ಹೇ ಅಂಥಾದ್ದೇನಿಲ್ಲಪ” ಎಂದರೂ, ಒಳಗೊಳಗೇ ಖುಷಿಪಡುವುದು ತೀರಾ ನಿಜ. ಹಾಗೆ ಕೆಲ ಅಧ್ಯಾಪಕಿ ಮಿತ್ರರು ‘ಸೀರೆ ಸೆಲೆಕ್ಷನ್ನಿಗೆ ಬನ್ನಿ, ಚಂದ ಸೀರೆ ಆಯ್ದುಕೊಡಿʼ ಎಂದು ಕರೆದಾಗ ಕೊಂಬು ಮೂಡುವುದೂ ಇದೆ!

“ನಿಮ್ಮ ಎಮ್ಮೆ ಯಾವ ಸೀಮೆಯದ್ದು, ಅದಕ್ಕೆ ಎರಡೇ ಕಾಲಾ? ಸೀರೆ ಉಡುತ್ತದಾ? ನನ್ನಷ್ಟು ಸಣ್ಣ ಇದೆಯಾ? ಹಾಗೆಂದರೆ, ನೀವು ಜಿಪುಣರಿರಬೇಕು; ಅದಕ್ಕೆ ಮೇವೇ ಹಾಕಿಲ್ಲ” ಎಂದೆಲ್ಲ ನಾನು ಕೇಳಲು ಹೋಗದೆ ಸುಮ್ಮನೆ ನಕ್ಕಿದ್ದರಿಂದ ಅವರ ಮುಂದಿನ ಮಾತುಗಳು ಉಳಿದುಹೋದವು!

ಆಗ ಮದುವೆಯಾದ ಹೊಸದರಲ್ಲಿ, ಉಟ್ಟ ಸೀರೆ ಸಂಗಾತಿಗೆ ಒಪ್ಪಿಗೆಯಾಗಬೇಕು ಎಂಬ ತುಡಿತ. ಆದರೆ ಸೀರೆಗಳನ್ನು ಕೊಳ್ಳಲು ಆಗ ದುಡ್ಡಿರಲಿಲ್ಲ. ಪ್ರೀತಿಸಿ ಮದುವೆಯಾದ ನಮ್ಮದು ಒಲವೊಂದೇ ‘ಅದಕು ಇದಕು, ಎದಕು’ ಎನ್ನುವ ಬದುಕಾಗಿತ್ತು. ಮದುವೆಯಲ್ಲಿ ತವರುಮನೆಯ ಕಡೆಯವರು ಕೊಟ್ಟ ಏಳೆಂಟು ಸೀರೆಗಳು, ನಾವೇ ತೆಗೆದುಕೊಂಡ ಒಂದೆರಡು ಸೀರೆ ಅಷ್ಟೇ. ಹಾಗಾಗಿ ಇದ್ದ ಸೀರೆಯನ್ನೇ ‘ಚಂದಮಾಡಿʼ ಉಡುವುದು. ಆಗ ನಡೆದ ಒಂದು ಘಟನೆ ನೆನಪಾಗುತ್ತದೆ. ನಾವಿದ್ದ ಊರು ಸುಬ್ರಹ್ಮಣ್ಯದಲ್ಲಿ ಷಷ್ಠಿ ಸಮಯ ಜಾತ್ರೆ ಸುತ್ತಲು ಹೋಗಿದ್ದೆವು. ‘ಒಂದು ಸೀರೆ ಕೊಂಡರೆ ಒಂದು ಬಕೆಟ್‌ ಉಚಿತ; ಬರೀ ಎಂಬತ್ತು ರುಪಾಯಿʼ ಎಂಬ ರಿಡೆಕ್ಷನ್‌ ಮಾರಾಟದ ಬೋರ್ಡೊಂದು ಕಾಣಿಸಿತು. ಸೀರೆಯ ಆಸೆ ತಡೆಯಲಾಗದೆ ಇವರಲ್ಲಿ ಹೇಳಿದೆ. ‘ಸರಿ, ತಗೊಳ್ಳೋಣʼ ಎಂದರು. ನನ್ನಿಷ್ಟದ ಈರುಳ್ಳಿ ಸಿಪ್ಪೆಯ ಬಣ್ಣದ ಸೀರೆಯನ್ನು ಆಯ್ಕೆ ಮಾಡಿದೆ. ಮನೆಗೆ ಬರುತ್ತಾ ಈ ಸೀರೆಯ ಕಲರ್‌ ಎಷ್ಟು ದಿನ ಉಳಿಯಬಹುದೆಂದು ಚರ್ಚೆ ಮಾಡಿದೆವು. “ಎರಡು ಸಲ ಉಟ್ಟೇ ಒಗೆಯುತ್ತೇನೆ” ಅಂದೆ ನಾನು. “ಆಯ್ತು, ಆಮೇಲೆ ಇದೇ ಬಕೆಟ್ಟಿನಲ್ಲಿ ನೆನೆಸಿ ಒಗಿ, ಬಣ್ಣ ಎಲ್ಲೂ ಹೋಗುವುದಿಲ್ಲ, ಬಕೆಟಿನೊಳಗೇ ಉಳಿಯುತ್ತದೆ” ಎಂದರು ಇವರು! ಆಮೇಲೆ ಹಾಗೇ ಆಯಿತು; ಬಣ್ಣ, ಡಿಸೈನ್ ಪೂರಾ ಬಕೆಟಿನಲ್ಲಿ ಉಳಿಯಿತು ಮತ್ತು ಆ ಬಕೆಟ್‌ ಎರಡು ವಾರದೊಳಗೆ ಒಡೆಯಿತು!!

ಇಂಥಹ ಆರ್ಥಿಕ ಸನ್ನಿವೇಶದಲ್ಲೇ ಬಿ.ಇಡಿ. ಮಾಡಲೆಂದು ಸಿಇಟಿ ಬರೆದು, ಸೀಟು ಸಿಕ್ಕಿ, ಅವರಿವರಲ್ಲಿ ಸ್ವಲ್ಪ ಕೈ ಸಾಲ ಮಾಡಿ ಕೋರ್ಸ್ ಮುಗಿಸಲು ಹೊರಟದ್ದು! ಬಿ.ಇಡಿ. ತರಗತಿಗೆ ಸೀರೆಯನ್ನೇ ಉಡುವುದು ಕಡ್ಡಾಯ. ವಾರದಲ್ಲಿ ಎರಡು ದಿನ ತಿಳಿಗುಲಾಬಿ ಬಣ್ಣದ ಯೂನಿಫಾರ್ಮ್ ಸೀರೆ. ಉಳಿದ ದಿನಗಳಲ್ಲಿ ಯಾವ ಸೀರೆಯನ್ನಾದರೂ ಉಡುವ ಸ್ವಾತಂತ್ರ್ಯ. ಊರಿಗೆ ಹೋದಾಗ, ಅಮ್ಮ, ಅಕ್ಕ ಕೊಟ್ಟ ಸೀರೆಗಳನ್ನು; ಅವುಗಳ ಹಿಂದಿನ ಪ್ರೀತಿ ನಿರಾಕರಿಸಲಾಗದೆ ತೆಗೆದುಕೊಳ್ಳುತ್ತಿದ್ದೆ. ನನ್ನ ಸಹಪಾಠಿ ಸ್ನೇಹಿತೆಯರು “ನೀವು ಉಡುವ ಪ್ರತಿಯೊಂದು ಸೀರೆಯೂ ತುಂಬ ಸೊಗಸಾಗಿರುತ್ತದೆ, ನಿಮ್ಮ ಸೆಲೆಕ್ಷನ್ನೇ ಹಾಗೇ” ಎಂದಾಗ ಎಲ್ಲವೂ ನಾನೇ ಆರಿಸಿದವುಗಳಲ್ಲ ಎಂದಿದ್ದೆ. ಆಗ ವನಿತಾ “ನೀವು ಉಟ್ಟರೆ ಎಲ್ಲಾ ಸೀರೆಯೂ ಚೆನ್ನಾಗಿಯೇ ಕಾಣುತ್ತದೆ” ಎಂದದ್ದು ಸದಾ ನೆನಪಿನಲ್ಲಿರುತ್ತದೆ!

ನಿಜವಾಗಿಯೂ ಹೇಳಬೇಕೆಂದರೆ ಪಿರಿಯಡ್ಸ್ ಆದ ದಿನಗಳಲ್ಲಿ ಸೀರೆ ಉಟ್ಟರೆ ಏನೋ ಭದ್ರತೆಯ ಭಾವ. ಆ ಎಲ್ಲ ದಿನಗಳ ಕುರಿತು ಈಗ ಯೋಚಿಸಿದರೆ ಮೈಜುಮ್ಮೆನ್ನುತ್ತದೆ. ಮೊದಲ ದಿನವಂತೂ ಹೇಳಲಾಗದ ತಳಮಳ, ಹೊಟ್ಟೆನೋವು, ವಾಂತಿ…… ಇಡೀ ದೇಹವೇ ನಿಯಂತ್ರಣಕ್ಕೆ ಸಿಗದ ಅಸಹಾಯಕತೆ, ರುಚಿ ಕಳೆದುಕೊಂಡ ನಾಲಿಗೆ, ಮೂಡಾಫ್ ಆದ ಮನಸ್ಸು. ಹೊಟ್ಟೆನೋವು, ತೊಡೆ, ಕೈಕಾಲುಗಳ ಸೆಳೆತವಂತೂ ಸಹಿಸಲಸಾಧ್ಯ. ಹೆರಿಗೆ ನೋವನ್ನೇ ನೆನಪಿಸುವ; ಹಿಂಸೆ ಕೊಡುವ ಇಂಥಹ ವೇದನೆಯನ್ನು ತಡೆದುಕೊಳ್ಳಲಾಗದೆ ಮಾತ್ರೆ ನುಂಗುತ್ತಿದ್ದೆ. ಆರಾಮಾಗಿ ಮಲಗಿಬಿಡುವ ಅನ್ನಿಸಿದರೂ ಏನೂ ಮಾಡಲಾಗದ ಪರಿಸ್ಥಿತಿ. ಹೈಸ್ಕೂಲು, ಕಾಲೇಜು ದಿನಗಳಲ್ಲಂತೂ ರಜೆ ಮಾಡುವುದೇ ಅಪರಾಧ ಎಂಬ ಭಾವ; ಅದಲ್ಲದೆ ಎಲ್ಲ ನೋವುಗಳ ನಡುವೆಯೂ ತರಗತಿಗೆ ಹಾಜರಾಗಬೇಕೆಂಬ ಕೆಚ್ಚು! ಕೆಲಸಕ್ಕೆ ಸೇರಿದ ಮೇಲೆ ಅನಿವಾರ್ಯವಾಗಿ ಬೆಳಿಗ್ಗೆ ಎದ್ದು ಹೊರಡಲೇಬೇಕಾದ ಇಕ್ಕಟ್ಟಿನ ವಾತಾವರಣ. ಅದೂ ನನ್ನದು ಹೈಸ್ಕೂಲು ಶಿಕ್ಷಕಿಯ ಕೆಲಸ. ಹದಿಹರೆಯದ ಮಕ್ಕಳ ಮುಂದೆ ತರಗತಿಯಲ್ಲಿ ನಿಲ್ಲಬೇಕು. ಈ ಸಂದರ್ಭದಲ್ಲಿ ತುಸುವಾದರೂ ಆರಾಮ ಕೊಡುವುದು ಸೀರೆ. ಕಾಲಿನ ತನಕ ಮುಚ್ಚುವ ಸೀರೆ, ನೆರಿಗೆಗಳು, ಸೆರಗು ಎಲ್ಲವೂ ಆಪತ್ತಿನ ಕಾಲದಲ್ಲಿ ಸಹಾಯಕ್ಕೆ ಬರದಿರಲಾರವು ಎಂಬ ಯಾವುದೋ ಅಸ್ಪಷ್ಟ ವಿಶ್ವಾಸ. ಅಪ್ಪಿತಪ್ಪಿ ಕಲೆಗಳಾದರೆ ಸೆರಗನ್ನ ಬಿಡಿಸಿ ಸೊಂಟಕ್ಕೆ ತಂದು ಸಿಕ್ಕಿಸಿ ಮರೆಮಾಡಬಹುದು! ಮಧ್ಯಾಹ್ನ ಪ್ಯಾಡ್ ಬದಲಾಯಿಸಬೇಕಾದಾಗಲೂ ಸೊಂಟದಲ್ಲಿಟ್ಟುಕೊಂಡು ಸ್ಟಾಫ್ ರೂಮಿನಿಂದ ಆಟದ ಬಯಲು, ಆಫೀಸ್ ರೂಮ್ ದಾಟಿ ಟಾಯ್ಲೆಟ್ ಕಡೆ ಧಾವಿಸಬಹುದು… ಸ್ಟಾಫ್ ರೂಮಿನಲ್ಲಿ ಕೂತುಕೊಂಡು ನಾನು ಆಗಾಗ ಹೇಳುವುದಿತ್ತು, ಹೆಂಗಸರಿಗೆ ತಿಂಗಳಿಗೆ ಮೂರು ಸಿ.ಎಲ್. ಎಕ್ಸ್ಟ್ರಾ ಕೊಡಬೇಕು ಎಂದು. ಆಗ ಸಹೋದ್ಯೋಗಿ ಸ್ನೇಹಿತೆಯರೆಲ್ಲ ‘ಹೌದು’ ಎನ್ನುತ್ತಿದ್ದರು. “ನಾನು ಡಿಡಿಪಿಐ ಆದರೆ ಮೊದಲು ಮಾಡುವ ಕೆಲಸ ಇದೇ; ಹೆದರಬೇಡಿ” ಎನ್ನುತ್ತಿದ್ದೆ. ನಾನು ಡಿಡಿಪಿಐ ಆಗುವುದು ದೂರದ ಮಾತು ಎನ್ನುವ ಸತ್ಯಸಂಗತಿ ನಮಗೆಲ್ಲರಿಗೂ ಗೊತ್ತಿದ್ದುದರಿಂದ ಎಲ್ಲರೂ ಸೇರಿ ನಗುತ್ತಿದ್ದೆವು! ಆದರೆ ನನಗೆ ಸಾಧ್ಯವಿದ್ದಿದ್ದರೆ ಇಂಥಹ ರೂಲ್ಸ್‌ ಜಾರಿಗೆ ತರುತ್ತಿದ್ದುದಂತೂ ಸತ್ಯ. ಈಚೆಗೆ ಕಂಪನಿಯೊಂದು ತನ್ನ ಮಹಿಳಾ ಉದ್ಯೋಗಿಗಳಿಗೆ ಈ ಸೌಲಭ್ಯ ಒದಗಿಸಿದೆ ಎಂದು ತಿಳಿದು ಸಂತಸವಾಯಿತು.

ನನ್ನ ಲೆಕ್ಕದಲ್ಲಿ ಶಿಕ್ಷಕಿಯರಷ್ಟು ಅಚ್ಚುಕಟ್ಟಾಗಿ ಬೇರೆ ಯಾರಾದರೂ ಸೀರೆ ಉಡುವುದು ಕಷ್ಟ. ಪ್ರಾಥಮಿಕ ಹಂತದಿಂದ ಹಿಡಿದು ಯೂನಿವರ್ಸಿಟಿಯ ಅಧ್ಯಾಪಕಿಯರಿಗೂ ಇದು ಅನ್ವಯ. ಏಕೆಂದರೆ ವಿದ್ಯಾರ್ಥಿಗಳ ಮುಂದೆ ನಿಲ್ಲಲು ಪಾಠದ ತಯಾರಿ, ತಿಳುವಳಿಕೆ ಎಷ್ಟು ಮುಖ್ಯವೋ ಉಡುಗೆಯ ನಿರಾಳತೆಯೂ ಅಷ್ಟೇ ಮುಖ್ಯ. ಕೆಲವು ಜಿಲ್ಲೆಗಳಲ್ಲಿ ಶಿಕ್ಷಕಿಯರು ಚೂಡಿದಾರವನ್ನು ಧರಿಸಿ ಶಾಲೆ, ಕಾಲೇಜಿಗೆ ಹೋಗುವ ಗಟ್ಟಿತನ ಬೆಳೆಸಿಕೊಂಡಿದ್ದಾರೆಂದು ಕೇಳಿರುವೆ. ಆದರೆ ನಮ್ಮ ಭಾಗದ ಹೈಸ್ಕೂಲುಗಳಲ್ಲಿ ಈ ಕನಸು ಇನ್ನೂ ನನಸಾಗಿಲ್ಲ. ನಾನಂತೂ ದಕ್ಷಿಣಕನ್ನಡದ ಸೆಕೆಯ ಬೇಗೆ, ಬೆವರಧಾರೆ ಮತ್ತು ನನ್ನ ಕೆಲಸದ ಒತ್ತಡವನ್ನು ತಡೆದುಕೊಳ್ಳುವ ಸಲುವಾಗಿ ಒಂದಷ್ಟು ಸಮಯ ವಾಯಿಲ್ ಸೀರೆಗಳ ಮೊರೆಹೋದೆ. ಆದರೆ ವಾಯಿಲ್ ಮತ್ತು ಕಾಟನ್ ಸೀರೆಗಳ ನಿರ್ವಹಣೆ ಕಷ್ಟ. ಇನ್ನೊಂದು ವಿಷಯವೆಂದರೆ ಇವುಗಳನ್ನು ಉಟ್ಟಾಗ, ಭಾರಕ್ಕೆ ಸೊಂಟ ಕೊಯ್ಯುವುದು, ಕೆಳಗೆ ಜಗ್ಗುವುದು ಆಗಿ ಬೆನ್ನುನೋವು ಬರುತ್ತದೆ. ಅದಲ್ಲದೆ ಇವುಗಳನ್ನು ಉಟ್ಟರೆ ಇರುವುದಕ್ಕಿಂತಲೂ ದಪ್ಪ ಕಾಣುವುದು ಖಚಿತ! ಈ ಎಲ್ಲ ಕಾರಣಗಳಿಗಾಗಿ ಬಹುತೇಕ ಶಿಕ್ಷಕಿಯರಂತೆ ನಾನೂ ಸಿಂಥೆಟಿಕ್ ಸೀರೆಗಳನ್ನು ಆಯ್ದುಕೊಂಡು ಉಡಲಾರಂಭಿಸಿದೆ. ಮೋಹಕ ಡಿಸೈನ್, ಆಕರ್ಷಕ ಬಣ್ಣಗಳ ಕಾಂಬಿನೇಷನ್ ಜೊತೆಗೆ ಇವು ಬಳಸಲು ಸುಲಭ ಮತ್ತು ಆರಾಮ. ದಿನದಿನದ ಗಡಿಬಿಡಿಗೆ ಒದಗಿಬರುವ ಸಿಂಥೆಟಿಕ್ ಸೀರೆಗಳು ಹೂ ಬಳ್ಳಿಗಳನ್ನು ಮೈ ತುಂಬ ಹರಡಿ ಆಪ್ತವೆನಿಸಿ ನಗು, ಸಂತಸವನ್ನೂ ಉಕ್ಕಿಸುತ್ತವೆ.

ಮೊದಮೊದಲು ಉಟ್ಟ ನೇರಳೆ ಸೀರೆ, ಗುಲಾಬಿ ಬಣ್ಣದ ಸೀರೆಗಳನ್ನು ಸುಮಾರು ಇಪ್ಪತ್ತಾರು ವರ್ಷಗಳ ನಂತರ ಈಗಲೂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಎಲ್ಲಾ ಹೆಣ್ಣುಮಕ್ಕಳಂತೆ ಸೀರೆಗಳ ಕುರಿತು ಭಾವನೆಗಳಿದ್ದರೂ ಅದನ್ನು ಅತಿರೇಕಕ್ಕೆ ಒಯ್ಯುವುದು ನನಗಿಷ್ಟವಿಲ್ಲ. ಹಾಗಾಗಿ ರೇಷ್ಮೆ ಸೀರೆಗಳ ವಿಷಯದಲ್ಲಿ ಯಾವಾಗಲೂ ನನ್ನದು ಕಠಿಣ ನಿಲುವು. ‘ರೇಷ್ಮೆ’ ಎಂದೊಡನೆ ನನ್ನ ಕಣ್ಣ ಮುಂದೆ ಬರುವುದು ಹಿಂಸೆ ಮತ್ತು ಆಡಂಬರ. ನನ್ನ ಮದುವೆಯಲ್ಲಿ ಅಪ್ಪಯ್ಯ, ಅಮ್ಮನ ಭಾವನೆಗಳಿಗೆ ನೋವು ಮಾಡಬಾರದೆಂದು ತೀರಾ ಸರಳವಾದ ಎರಡು ರೇಷ್ಮೆ ಸೀರೆ ಖರೀದಿಸಿದ್ದಷ್ಟೇ. ಮುಂದೆ ಕಾಲಾನುಕ್ರಮದಲ್ಲಿ ಅತ್ಯಗತ್ಯವಾದಾಗ ಮತ್ತೆ ಮೂರು ಕಮ್ಮಿ ಕ್ರಯದ ರೇಷ್ಮೆ ಸೀರೆಗಳನ್ನು ಕೊಂಡದ್ದು ಬಿಟ್ಟರೆ ಉಳಿದೆಲ್ಲವೂ ಸಾಧಾರಣ ಸೀರೆಗಳು. ತರಗತಿಯಲ್ಲಿ ವಿದ್ಯಾರ್ಥಿಗಳಿಗೂ ಎಷ್ಟೋ ಸಲ ಹೇಳಿದ್ದೇನೆ. ಸೀರೆ-ಒಡವೆಗಳ ಆಸೆಗೆ ಬೀಳಬೇಡಿ, ರೇಷ್ಮೆ ಸೀರೆಯಂತೂ ಮೂರ್ನಾಲ್ಕು ಇದ್ದರೆ ಸಾಕು; ಹದಿನೈದಿಪ್ಪತ್ತು ಸಾವಿರ ಅಥವಾ ಅದಕ್ಕಿಂತಲೂ ಹೆಚ್ಚು ಹಣ ಸುರಿದು ತೆಗೆದುಕೊಂಡ ಸೀರೆಗಳನ್ನು ಬೀರುವಿನಲ್ಲಿ ಮಡಚಿಟ್ಟು, ವರ್ಷಕ್ಕೊಮ್ಮೆ ಹೊರತೆಗೆದು ಬಿಸಿಲಿಗೆ ಹಾಕಿ ಮತ್ತೆ ಭದ್ರಪಡಿಸಿಡುವುದು ಖಂಡಿತಾ ಜಾಣತನವಲ್ಲ ಎಂದು!

ಸೀರೆಯ ಕುರಿತು ಅನೇಕ ಸಲ ಬೇಸರವಾಗುವುದೇಕೆಂದರೆ ಎಷ್ಟು ಜಾಗ್ರತೆ ಮಾಡಿದರೂ ಅಲ್ಲಿ ಇಲ್ಲಿ ಮೈ ಕಾಣಿಸಿ ಕಿರಿ ಕಿರಿ ಉಂಟುಮಾಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಿಂದುಬಿಡುವಂತೆ ನೋಡುವ ಕೆಲ ಅಸಹ್ಯ ನೋಟಗಳನ್ನು ಎದುರಿಸುವಾಗ; ದೇಹದ ರಚನೆಯನ್ನು ಎತ್ತಿ ತೋರಿಸುವ ಸೀರೆಗೆ ಶಾಪ ಹಾಕುವುದಿದೆ. ಕಷ್ಟದ ಕೆಲಸಗಳನ್ನು ಮಾಡುವಾಗಲಂತೂ ನೈಟಿ, ಚೂಡಿದಾರ್ (ಸಲ್ವಾರ್)ಗಳು ಆರಾಮದಾಯಕ ಎನ್ನುವುದು ನೂರಕ್ಕೆ ನೂರು ಸತ್ಯ. ಗಡಿಬಿಡಿಯಲ್ಲಿ ಹೊರ ಹೊರಡುವಾಗ ಸಲ್ವಾರ್ ಎಷ್ಟು ನೆರವಿಗೆ ಬರುತ್ತದೆ! ಸೀರೆಯದ್ದಾದರೋ ಒಂದೇ ಗೋಳು, ಅಲ್ಲಿ ಅಚ್ಚುಕಟ್ಟು-ಇಲ್ಲಿ ಶಿಸ್ತು! ಆದರೆ ಸೀರೆಯುಡುವಾಗ, ಉಟ್ಟಾಗ ಸಿಗುವ ತೃಪ್ತಿಯೇ ಬೇರೆ. ನನ್ನ ಈ ಹದಿನೈದು ವರ್ಷದ ಪಾಠ ಮಾಡುವಾಗಿನ ಅನುಭವದಲ್ಲಿ ಒಂದೇ ಒಂದು ಸಲ ಸೆರಗಿನ ಪಿನ್ನು ತಪ್ಪಿ ಒಂದೆರಡು ಎಳೆ ನೆರಿಗೆ ಚದುರಿದ್ದು ಬಿಟ್ಟರೆ ಎಂದೂ ಇನ್ನೇನೂ ಅಭಾಸವಾಗಿಲ್ಲ; ಬದಲಿಗೆ ದೊಡ್ಡ ಆತ್ಮವಿಶ್ವಾಸ ತಂದುಕೊಟ್ಟಿದೆ. ಇನ್ನೊಂದು ವಿಷಯವೆಂದರೆ, ಕೆಲಸದ ಒತ್ತಡಗಳ ಮಧ್ಯೆ ಏನೇ ಬೇಜಾರಾದರೂ ಸೆರಗು ಹೊದ್ದು ಒಂದು ಗಳಿಗೆ ನಿರುಮ್ಮಳ ಕೂತುಬಿಡಬಹುದು; ಮತ್ತೆ ಅದೇ ಸೆರಗನ್ನು ಕಟ್ಟಿ ತುಂಬು ಉತ್ಸಾಹದಿಂದ ಕೆಲಸಗಳಲ್ಲಿ ಮುಳುಗಬಹುದು. ಆದರೆ ಮನೆಕೆಲಸ, ಹೊಲದ ಕೆಲಸ, ಕಲ್ಲು-ಮಣ್ಣಿನ ಕೆಲಸಗಳನ್ನು ಮಾಡುವ ಹೊತ್ತಿನಲ್ಲಿ ಸೀರೆ ಉಟ್ಟರೆ ಖಂಡಿತಾ ಕಷ್ಟಕರ. ನನ್ನ ಅಮ್ಮನನ್ನೂ ಸೇರಿಸಿ ಹಿರಿಯ ಮಹಿಳೆಯರೆಲ್ಲ ಜೀವನದುದ್ದಕ್ಕೂ ಸೀರೆಯನ್ನೇ ಧರಿಸಿ ಅದು ಹೇಗೆ ಮನೆಕೆಲಸಗಳು, ಇತರ ಕೆಲಸಗಳನ್ನು ಮಾಡಿದರೋ ಎಂದು ಯೋಚಿಸುತ್ತಾ ನೋವೆನಿಸುತ್ತದೆ. ಯಾಕೆಂದರೆ ಅವರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಈಗ ಅನೇಕ ಮಹಿಳೆಯರು ಮನೆಯೊಳಗೆ ನೈಟಿ ಅಥವಾ ಸಲ್ವಾರ್ ಧರಿಸುತ್ತಾರೆ. ನೈಟಿಯಂತೂ ಆರಾಮದಾಯಕ ಉಡುಪು. ಕಷ್ಟದ ದುಡಿಮೆ ಮಾಡುವ ಹೆಣ್ಣುಮಕ್ಕಳು ನೈಟಿ ಧರಿಸುವುದನ್ನು ನೋಡಿ ಖುಷಿಯಾಗುತ್ತದೆ. ನನ್ನ ಪ್ರಕಾರ, ಉಡುಗೆಯೊಂದು ಎಲ್ಲ ಬಗೆಯ ಆರಾಮ, ಸ್ವಾತಂತ್ರ್ಯವನ್ನು ಹೆಣ್ಣಿಗೆ ನೀಡಿದ್ದರೆ; ಅದು ನೈಟಿ. ಗ್ರಾಮೀಣಭಾಗದ ಮಹಿಳೆಯರಿಗಂತೂ ಇದು ಅಚ್ಚು ಮೆಚ್ಚಿನ ಉಡುಗೆ. ಇದನ್ನು ಕಂಡು ಕೆಲವರು “ನೈಟಿ ಎಂದರೆ ರಾತ್ರಿ ಧರಿಸುವ ಉಡುಪೆಂದು ಅರ್ಥ, ಆದರೀಗ ಕೆಲವರು ಇಡೀ ದಿನ ಅದರಲ್ಲೇ ಇರುತ್ತಾರೆ” ಎಂದೆಲ್ಲ ಟೀಕಿಸುವುದನ್ನು ನೋಡಿದರೆ ಅಂತವರ ಕುರಿತು ಕನಿಕರ ಉಂಟಾಗುತ್ತದೆ. ಹೆಣ್ಣುಮಕ್ಕಳ ಇಷ್ಟಾನಿಷ್ಟಗಳನ್ನು ತಾವೇ ನಿಯಂತ್ರಿಸಬೇಕೆಂಬ ಮನಸ್ಥಿತಿಯವರು ಮಾತ್ರ ಹೀಗೆ ಮಾತಾಡಿ ಅಧಿಕಾರ ಹೇರಬಲ್ಲರು. ಕರಾವಳಿ ತೀರದ ಈ ಭಾಗದ ಸೆಕೆಗೆ ಕಾಟನ್ ನೈಟಿಗಳು ನಿಜವಾಗಿಯೂ ಒಳ್ಳೆಯ ಉಡುಪು. ಸಡಿಲವಾಗಿದ್ದು, ಬೆವರನ್ನು ಹೀರುವ, ಗಾಳಿಯಾಡಲು ಅವಕಾಶವಿರುವ ಈ ಉಡುಗೆಯಿಂದಾಗಿ ಸೆಕೆ ತುಸುವಾದರೂ ಕಡಿಮೆಯೆನಿಸಿ, ಬೆವರುಸಾಲೆ ಮುಂತಾದ ತೊಂದರೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಅಮ್ಮನ ಸೀರೆ ಸೆರಗಿಗೆ ಕೈ ಬಾಯಿ ಒರೆಸಿದ, ಅಪ್ಪನ ಪೆಟ್ಟನ್ನು ತಪ್ಪಿಸಿಕೊಳ್ಳಲು ಸೆರಗಿನ ಮರೆಯಲ್ಲಿ ಅಡಗಿದ ನೆನಪುಗಳನ್ನು ಹೊಂದಿದವರು ನನ್ನ ಮಾತುಗಳಿಗೆ ಆಕ್ಷೇಪಿಸಿದರೆ ಅವರಿಗೆ ಒಂದು ಸುದ್ದಿಯಿದೆ. ಪದವಿ ಓದುತ್ತಿರುವ ನನ್ನ ಮಗ, ಬೆಳಿಗ್ಗೆ ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿ ಹತ್ತಿರ ಟವೆಲ್ ಸಿಗದಾದಾಗ ‘ಸಾರಿʼ ಎನ್ನುತ್ತಾ ಬಗ್ಗಿಕೊಂಡು ನನ್ನ ನೈಟಿಯ ಅಂಚಿಗೆ ಕೈಯ್ಯೊರೆಸಿ ಹೋಗುವುದೂ ಇದೆ! ಸಲ್ವಾರ್‌ನ ದುಪ್ಪಟವಂತೂ ಸೆರಗಿಗಿಂತಲೂ ಮಕ್ಕಳಿಗೆ ಇಷ್ಟವಾಗುತ್ತದೆ!

ಸೀರೆ ಎಂಬ ಈ ವಿಚಿತ್ರ. ವಿಶಿಷ್ಟ ಉಡುಪು ಯಾಕೆ ಮತ್ತು ಹೇಗೆ ರೂಪು ತಳೆದಿರಬಹುದು ಎಂದು ಯೋಚಿಸುತ್ತ ಹೋದ ಹಾಗೂ ಇದು ಪುರುಷ ಪ್ರಧಾನ ವ್ಯವಸ್ಥೆಯ ರಾಜಕಾರಣದ ಒಂದು ಭಾಗವಾಗಿ ಬೆಳೆದಿದೆ ಅನ್ನಿಸಿದೆ. ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ನಮ್ಮ ದೇಶದ ಕೆಲಭಾಗಗಳ ಮಹಿಳೆಗೆ ಸೀರೆ ಉಡುವುದನ್ನು ಕಡ್ಡಾಯ ಮಾಡಲಾಗಿದೆ! ಕೆಲವು ಪ್ರದೇಶಗಳಲ್ಲಿ ಸೀರೆಯ ಸೆರಗನ್ನು ತಲೆಗೆ ಹೊದೆಯುವುದೂ ಕಡ್ಡಾಯ. ಇತಿಹಾಸದ ಯಾವುದೋ ತಿರುವಿನಲ್ಲಿ ಇಂತಹ ಒಂದು ಹೇರಿಕೆ, ದಬ್ಬಾಳಿಕೆ ಉಡುಪಿನ ಮೂಲಕ ಹುಟ್ಟಿಕೊಂಡಿದೆ ಮತ್ತು ಮುಂದುವರಿದಿದೆ. ನನ್ನ ಅಜ್ಜಿಯ ತಲೆಮಾರಿನ ಹೆಣ್ಣು, ವಿಧವೆಯಾದಾಗ ಕೂದಲನ್ನು ಬೋಳಿಸಿ ಕೆಂಪು ಸೀರೆ ಉಡಿಸುವ ಕ್ರೂರ ಪದ್ಧತಿ ‘ಮೇಲ್ಜಾತಿ’ ಎಂದು ಕರೆಸಿಕೊಳ್ಳುವ ನಿರ್ದಿಷ್ಟ ಸಮುದಾಯದಲ್ಲಿತ್ತು. ವಿಚಿತ್ರವೆಂದರೆ ಅಲ್ಲಿಂದ ಮುಂದೆ ಆಕೆ ರವಿಕೆ ಕೂಡಾ ಧರಿಸದೆ ಕೆಂಪು ಸೀರೆಯನ್ನೇ ಉಡಬೇಕಿತ್ತು. ಹದಿಹರೆಯ, ಹರೆಯ, ನಡುಹರೆಯದ ಆ ಕಾಲದ ವಿಧವೆಯರ ಮನದ ತಲ್ಲಣಗಳನ್ನು ಯಾರಾದರೂ ಅಳೆಯಲು ಸಾಧ್ಯವೇ? ಹೆಣ್ಣನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಂಡ ಇಂತಹ ಇನ್ನೆಷ್ಟೋ ಪೈಶಾಚಿಕ ಉದಾಹರಣೆಗಳು ಸಂಸ್ಕೃತಿ, ಸಂಪ್ರದಾಯದ ಹೆಸರಲ್ಲಿ ಘಟಿಸಿ ಹೋಗಿವೆ, ಘಟಿಸುತ್ತಲೇ ಇವೆ. ಈ ಎಲ್ಲ ವಿಧದ ಮಾನಸಿಕ ಕ್ಷೋಭೆಗಳನ್ನು ನಿಭಾಯಿಸಿದ ಮಹಿಳೆ ಇವತ್ತು ಮತ್ತಷ್ಟು ಗಟ್ಟಿಯಾಗಿದ್ದಾಳೆ. ಸೀರೆ ರಾಜಕಾರಣದ ವಿಷಯವನ್ನೇ ತೆಗೆದುಕೊಂಡರೆ ಹೆಣ್ಣು ಎಷ್ಟು ಕ್ರಿಯಾಶೀಲೆ ಮತ್ತು ಗಟ್ಟಿಗಿತ್ತಿ ಎಂಬುದಕ್ಕೆ ಇವತ್ತು ಸೀರೆಯನ್ನು ಅವಳು ಹೇಗೆ ಬಳಸುತ್ತಿದ್ದಾಳೆ ಎಂಬುದೇ ಸಾಕ್ಷಿ. ತನ್ನ ಜೀವನ ಪ್ರೀತಿಗಾಗಿ ನೆರಿಗೆಯನ್ನು ಚಿಮ್ಮಿಸುತ್ತ, ಹೂ, ಬಳ್ಳಿ, ಹಕ್ಕಿಗಳ ವಿನ್ಯಾಸವಿರುವ ಸೀರೆಯನ್ನು ಉಟ್ಟು ನಡೆದುಹೋಗುವುದೂ ಅವಳಿಗೆ ಗೊತ್ತು. ಸಂದರ್ಭಕ್ಕನುಸಾರವಾಗಿ, ಸಲ್ವಾರ್, ಜೀನ್ಸ್, ಉದ್ದದ ಸ್ಕರ್ಟ್ ಮುಂತಾದವುಗಳನ್ನು ತೊಟ್ಟು ಮತ್ತಷ್ಟು ಆರಾಮಾಗಿರುವುದೂ ಗೊತ್ತು. ಸೀರೆಗಳ ಕುರಿತು ಗಳಿಸಿಕೊಂಡ ಅನುಭವಗಳನ್ನು ಉಪಯೋಗಿಸಿ ಸೀರೆ ವ್ಯಾಪಾರದಲ್ಲಿ ತೊಡಗಿಸಿಕೊಂಡು ಆರ್ಥಿಕ ದೃಢತೆಯನ್ನು ಸಾಧಿಸಿರುವ ಎಷ್ಟೋ ಮಹಿಳೆಯರೂ ಇದ್ದಾರೆ. ಸೀರೆಗೆ ವಿವಿಧ ಬಗೆಯ ಕುಸುರಿಗಳನ್ನು ಕೂರಿಸುವುದು ಹೊಸ ಮಾದರಿಯ ರವಿಕೆಗಳನ್ನು ಹೊಲಿಯುವುದು, ಸೀರೆಗಳ ವಿನ್ಯಾಸ ಮಾಡುವುದು ಹೀಗೆ ಪರಿಶ್ರಮ ಹಾಕಿ ಬದುಕನ್ನು ಕಟ್ಟಿಕೊಂಡಿರುವವರಿದ್ದಾರೆ.

ನೇರಳೆ, ನೀಲಿ, ಹಳದಿ, ಪುಡಿ, ಬಿಳಿ, ಕಪ್ಪುಬಣ್ಣದ; ಗಾಢ ಹೂಗಳುಳ್ಳ ಸೀರೆ ನನಗೆ ಬಹಳ ಇಷ್ಟ. ಆದರೆ ಅತಿಯಾದ ಸೆಕೆಯಿಂದಾಗಿ ಕಪ್ಪು ಬಣ್ಣದವುಗಳನ್ನು ಉಡಲಾಗುವುದು ವರ್ಷದಲ್ಲಿ ಮಳೆಗಾಲದ ಕೆಲ ದಿನಗಳಲ್ಲಿ ಮಾತ್ರ. ಅಚ್ಚ ಬಿಳಿ ಬಣ್ಣದ ಸೀರೆಗಳನ್ನು ಉಡಲು ಮೂಗಿನವರೆಗೆ ಆಸೆಯಿದ್ದರೂ, ಕೆಂಪು ಕಲೆಗಳ ಹೆದರಿಕೆಯಿಂದಾಗಿ ಕ್ಯಾಲೆಂಡರ್ ನೋಡಿ ದೃಢಪಡಿಸಿಕೊಂಡು ಕೆಲವು ದಿನಗಳಲ್ಲಿ ಮಾತ್ರ ಉಡುವುದು ಅತ್ಯಗತ್ಯ. ಶಿಕ್ಷಕ ವೃತ್ತಿಯಿಂದಾಗಿ ಹೆಚ್ಚು ಸೀರೆಗಳನ್ನು ತೆಗೆದುಕೊಳ್ಳುವಂತಾಗಿದ್ದು ಎಷ್ಟು ವಾಸ್ತವವೋ ಸಲ್ವಾರ್ ಅಥವಾ ಇತರೆ ಡ್ರೆಸ್‌ಗಳನ್ನು ಖರೀದಿಸಿದ್ದು ಅಷ್ಟೇ ಕಮ್ಮಿ ಎಂಬುದೂ ನಿಜ! ಆದರೆ ಸೀರೆಗಳೊಂದಿಗೆ ಬದುಕು ಸಹ್ಯವಾಗಿದೆ ಎಂದು ಧಾರಾಳವಾಗಿ ಹೇಳಬಹುದು. ನಾನು ಹುಟ್ಟಿ ಬೆಳೆದ ಕರಾವಳಿ ಜಿಲ್ಲೆಯ ವಾತಾವರಣವೇ, ಇಲ್ಲಿನ ನೀರು- ಗಾಳಿಯೇ ನನಗೆ ಅಲರ್ಜಿಯೆಂದು ‘ಅಲರ್ಜಿ ಟೆಸ್ಟ್ ರಿಪೋರ್ಟ್’ ಹೇಳಿರುವುದರಿಂದ ಪ್ರತಿದಿನವನ್ನೂ ಬಹಳ ಜಾಗ್ರತೆಯಿಂದಲೇ ಕಳೆಯಬೇಕಾದ ಪರಿಸ್ಥಿತಿಯಿದೆ. ಹತ್ತಿಯ ಹಾಸಿಗೆ ನನ್ನ ಅಲರ್ಜಿ ಹೆಚ್ಚಿಸುವುದರಿಂದ ನಾನು ಮಲಗುವುದು ಮಂಚ ಅಥವಾ ನೆಲದ ಮೇಲೆ ಹಾಸಿಕೊಂಡ ಮೂರ್ನಾಲ್ಕು ಕಾಟನ್ ಸೀರೆಗಳ ಮೇಲೆ. ಅಮ್ಮ ಉಟ್ಟ ಹಳೆಯ ಕಾಟನ್ ಸೀರೆಗಳೇ ಇಂದಿಗೂ ನನಗೆ ಹಾಸಿಗೆ. ಇದಕ್ಕೆಂದೇ ವರ್ಷಕ್ಕೊಮ್ಮೆ ಬರುವಾಗ ಪ್ರೀತಿಯಿಂದ ಅಂಥಹ ಸೀರೆಗಳನ್ನು ಒಟ್ಟುಮಾಡಿಕೊಂಡು ತಂದು ಕೊಡುತ್ತಾರೆ ಎಂಬತ್ತರ ಪ್ರಾಯದ ನನ್ನಮ್ಮ! ಈ ಅರ್ಥದಲ್ಲಿ; ಅಂದು ಅಜ್ಜಿ, ಅಮ್ಮನ ಹಳೆಯ ಮೆದು ಸೀರೆಯ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಿದ್ದ ತೊಟ್ಟಿಲ ಮಗುವಂತೆ ಈಗಲೂ ನಾನು ಮಗು. ಇಂತಹ ಅದೃಷ್ಟ ಎಷ್ಟು ಜನರಿಗೆ ಸಿಗುತ್ತದೆ!


ನಿಜಕ್ಕೂ ಸೀರೆಯೆಂದರೆ ನನಗೆ ಅಮ್ಮನಂತೆ, ಅಕ್ಕನಂತೆ, ಗೆಳತಿಯಂತೆ, ನನ್ನೊಳಗಿನ ನನ್ನಂತೆ… ಉರಿಯುವ ಬಿಸಿಲು, ಏದುಬ್ಬಸದ ಸೆಕೆಯಲ್ಲಿ ಹೊರಹೋಗಿ ಬಂದು ಬೆವರಿನಿಂದ ಮೈಗಂಟಿದ ಸೀರೆಯನ್ನು ತೆಗೆದಿಟ್ಟು ನೈಟಿ ತೊಟ್ಟು ನಿರಾಳವಾಗುವುದು ಹೌದಾದರೂ ಇನ್ನೊಮ್ಮೆ ಹೊರಡುವಾಗ ‘ಯಾವ ಸೀರೆ ಉಡಲಿ’ ಎಂಬ ಯೋಚನೆಯೇ ಜೀವನೋತ್ಸಾಹ ತುಂಬುತ್ತದೆ! ಇಂಥಹ ಸೀರೆಗೆ ನಮನ.