ಪೋಸ್ಟ್ ಟ್ರಾಮಾಟಿಕ ಸ್ಟ್ರೆಸ್ ಡಿಸಾರ್ಡರ್ (PTSD) ವಿಯಟ್ನಾಂ ಕಾಳಗದಿಂದ ತಿರುಗಿ ಬಂದವರನ್ನು ಕಾಡುತ್ತಿತ್ತು. ಅದಕ್ಕೂ ಹಿಂದಿನ ಕಾಳಗಗಲ್ಲಿ ಅದಿರಲಿಲ್ಲವೆಂದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಅದರ ಮಾತು ಬಂದಿದೆ. ಆದರೆ ಅದನ್ನು ಗುರುತಿಸಿ ಅದಕ್ಕೊಂದು ಹೆಸರು ಕೊಟ್ಟು, ಪರಿಹಾರವನ್ನು ರೂಪಿಸುವ ಕೆಲಸ ಮಾತ್ರ ಇತ್ತೀಚಿನದು. ಈಗ ಇರಾಕ್, ಆಫ್ಗಾನಿಸ್ತಾನದ ಕಾಳಗದಿಂದ ಮರಳಿದವರಲ್ಲೂ ಅದು ಇದ್ದೇ ಇದೆ. ಯುದ್ಧದಲ್ಲಿ ಮುಂಜಾನೆ ಜತೆಗಿದ್ದ ನಗುವ ಗೆಳೆಯ ಮಧ್ಯಾಹ್ನ ಕಣ್ಣೆದುರೇ ವೈರಿ ಬಾಂಬಿಗೆ ತುತ್ತಾಗಿ ಸಾವಿರ ತುಂಡಾದ ಅನುಭವ ಜೀವನ ಪರ್ಯಂತ ಜತೆಗೆ ಉಳಿಯುವಂತದು. ಮರಳಿದ ಮೇಲೂ ಅದನ್ನು ಸಂಬಾಳಿಸಿಕೊಂಡು ಒಟ್ಟಾಗಿ ಉಳಿಯುವುದು ಸುಲಭದ ಮಾತೇನಲ್ಲ. ತನ್ನ ಗೆಳೆಯನ ಸಾವಿಗೆ ತಾನೇ ಕಾರಣವೇನೋ ಎಂಬ ಅಪರಾಧೀ ಭಾವ – ಅದೆಷ್ಟೇ ಬುಡವಿಲ್ಲದ್ದು ಆಗಿದ್ದರೂ – ಸೇರಿಕೊಂಡರೆ ಹಗಲಿರುಳೂ ಅವರಿಗೆ ನರಕಯಾತನೆ. ಇದನ್ನು ಹಲವರು, ಹಲವಾರು ಬಾರಿ, ಹಲವು ಬಗೆಗಳಲ್ಲಿ ತೋಡಿಕೊಂಡಿದ್ದಾರೆ, ವಿವರಿಸಿದ್ದಾರೆ ಹಾಗು ಮನದಟ್ಟು ಮಾಡಿದ್ದಾರೆ. ಆದರೂ ಕಾಳಗಗಳು ಮಾತ್ರ ಆಗುತ್ತಲೇ ಇರುತ್ತದೆ.
ಇತ್ತೀಚಿನ ಇರಾಕ್, ಆಫ್ಗಾನಿಸ್ತಾನದ ಕಾಳಗದಲ್ಲಿ ಕೆಲವರ ನೋವು ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಅಮೇರಿಕ, ಬ್ರಿಟಿಷ್, ಆಸ್ಟ್ರೇಲಿಯದ ಸೈನಿಕ ತುಕಡಿಗಳು ಹೆಗಲಿಗೆ ಹೆಗಲುಕೊಟ್ಟುಕೊಂಡು ಈ ಯುದ್ಧಗಳಲ್ಲಿ ಪಾಲ್ಗೊಂಡಿದ್ದವಲ್ಲ – ಅದು ಈ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ದೇಶಗಳ ಯುದ್ಧ-ಸಂಸ್ಕೃತಿಯ ಬೇರೆತನಗಳು ಹಲವು ಬಗೆಗಳಲ್ಲಿ ಮರಳಿದ ಸೈನಿಕರನ್ನು ಕಾಡಿದೆ. ಅಮೇರಿಕ, ಬ್ರಿಟನ್ನಿನ ಇಂಟಲಿಜಂಸ್‌ನ ಆಧಾರದ ಮೇಲೆ ನಡೆದ ಚಕಮಕಿಗಳಲ್ಲಿ ಆಗಬಾರದ ಸಂಗತಿಗಳು ನಡೆದು ಹೋಗಿದೆ. ಅದು ಈ PTSDಗೆ ಮತ್ತಷ್ಟು ಆಳ ಮತ್ತು ನೋವನ್ನು ದಯಪಾಲಿಸಿದೆ. ವೈರಿ ಸೈನಿಕರನ್ನು ಕೊಲ್ಲುತ್ತಿದ್ದೇನೆಂದು ಬಗೆದು – ಮಕ್ಕಳುಮರಿ, ಹೆಂಗಸರ ಮೇಲೆ ಗುಂಡು ಹಾರಿಸಿ ಕೊಂದ ಅಪರಾಧಿ ಭಾವ ಹಲವರನ್ನು ಕಿತ್ತು ತಿನ್ನುತ್ತಿದೆ. ಗೆಲುವೆಂಬುದೇ ಇಲ್ಲದ ಇಂದಿನ ಕಾಳಗಗಳಲ್ಲಿ ಈ ಯಾತನೆ ನೂರ್ಮಡಿಯಾಗುತ್ತದೆ ಕೂಡ.
ಇರಾಕಿನಿಂದ ಮರಳಿದ ಸೈನಿಕನೊಬ್ಬ ಹೋದ ವರ್ಷ ಸಿಡ್ನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಒಬ್ಬನೇ ಒಂದು ಹೋಟಲಿನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ನಟ್ಟಿರುಳು ಜೀವ ತೆಗೆದುಕೊಂಡ. ಮುಂಚಿಂದಲೂ ಇದರ ಬಗ್ಗೆ ಅರಿವಿದ್ದರೂ ಅವನ ಸಾವು ಹಲವು ಬಾಗಿಲುಗಳನ್ನು ತಟ್ಟಿತು. ಹಲವು ಸೈನಿಕರು ಮುಕ್ತವಾಗಿ ತಮ್ಮ ಯುದ್ಧದ ಅನುಭವದ ಬಗ್ಗೆ, ಯಾತನೆಯ ಬಗ್ಗೆ, ಬದುಕಿನ ದಾರುಣತೆಯ ಬಗ್ಗೆ ಮಾತಾಡ ತೊಡಗಿದರು. ಸೈನ್ಯದ ಅಧಿಕಾರಿಗಳು ಅವರ ಮಾತನ್ನು ಕೇಳಲೇ ಬೇಕಾಯಿತು. ಆಗ ನಡೆದ ವಿಚಾರಣೆಯಲ್ಲಿ ಹಲವು ಸಂಗತಿಗಳು ಹೊರಬಿದ್ದವು.
ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವೆ ಸೈನಿಕರಿಗೆ ಬೇಕಾದ ಸೈಕಲಾಜಿಕಲ್ ನೆರವಿಗೆ ಕುತ್ತು ಬಂದಿದೆ. ಇರಬೇಕಾದಷ್ಟು ನೆರವು ಸಂಪನ್ಮೂಲ ಇಲ್ಲದೆ ಪರಿಹಾರ ಹಿನ್ನೆಲೆಗೆ ಸರಿದಿದೆ. ಯಾರದೋ ಇಂಟಲಿಜಂಸಿನ ತಪ್ಪಿನಿಂದ ಮನೆಯೊಂದರ ಮೇಲೆ ಗುಂಡುಹಾರಿಸಿದ ಸೈನಿಕ ಈಗ ಹಗಲಿರುಳು ನರಳುವಂತಾಗಿದೆ. ಒಂದು ತಾಯಿಯ ದೇಹದ ಪಕ್ಕ ರಕ್ತ ತುಂಬಿದ ಮುಖ ಮುಚ್ಚಿಕೊಂಡು ಕೂಗುತ್ತಿದ್ದ ಪುಟ್ಟ ಬಾಲಕನ ಚಿತ್ರ ಆ ಸೈನಿಕನ ದಿನನಿತ್ಯದ ಸಂಗಾತಿಯಾಗಿಬಿಟ್ಟಿದೆ. ಸದಾ ಕತ್ತಿಯಲಗಿನ ಮೇಲೆ ಅವನ ಬದುಕು ನಡೆಯುತ್ತಿದೆ. ಹೆಂಡತಿ ಮಕ್ಕಳು ಅವನು ಯಾವಾಗ ಸ್ನಾಪ್ ಆಗಿ ಜೀವ ತೆಕ್ಕೊಳ್ಳುತ್ತಾನೋ ಎಂದು ಪ್ರತಿಕ್ಷಣವೂ ಭಯದಲ್ಲೇ ಕಾಯುವಂತಾಗಿದೆ. ಎದುರಿಗಿರುವ ತನ್ನ ಮಕ್ಕಳ ತಂದೆ ಯಾವ ಕ್ಷಣದಲ್ಲಾದರೂ ಇಲ್ಲವಾಗಬಹುದೆಂಬ ಹಿಂಸೆ ಅವರ ಸಂಗಾತಿಗಳನ್ನು ಕಾಡುತ್ತದೆ.
ಇವರಲ್ಲಾ ಯುದ್ಧಕ್ಕೆ ಹೋಗುವ ಮುನ್ನ ತಮ್ಮ ಸಂಗಾತಿಗಳ ಜತೆ ಚೆಲ್ಲಾಡುತ್ತಿದ್ದ ಹುಡುಗಾಟದ ಹುಡುಗರು. ಆದರೆ ಯುದ್ಧದಿಂದ ಮರಳಿದಾಗ ಗುರುತಿಲ್ಲದಂತೆ ಬದಲಾಗಿ ಹೋಗಿರುವುದು ಆ ಸೈನಿಕ ಹುಡುಗರ ಸಂಗಾತಿಗಳ ಕಹಿ ಅನುಭವ. ಆ ಹಿಂದೆ ತಮ್ಮ ಜತೆಗಿದ್ದ ಹುಡುಗ – ಈ ಮರಳಿದವನಲ್ಲಿ ಇಲ್ಲದ್ದು ಅವರನ್ನು ತಲ್ಲಣಗೊಳಿಸಿದೆ. ಆ ಹುಡುಗನ ಕರಾಳ ನೆರಳಂತಿರುವ ಈ ಮನುಷ್ಯನ ಜತೆ ಬದುಕುವುದು ಕೆಲವರಿಗೆ ಅಸಹನೀಯವಾದರೆ, ಹಲವರಿಗೆ ಶಿಕ್ಷೆಯಾಗಿರುತ್ತದೆ. ಆ ಸತ್ತ ಹುಡುಗಾಟದ ಹುಡುಗನಿಗೆ ಸದಾ ಶೋಕತಪ್ತರಾಗಿ ಬದುಕುವುದನ್ನು ಆ ಸೈನಿಕರ ಸಂಗಾತಿಗಳು ಕಲಿಯಬೇಕಾಗುತ್ತದೆ. ಸದಾ ಒಳಗೊಳಗೇ ಅಳುವುದು ಅವರ ವ್ಯಕ್ತಿತ್ವದ ಅಂಶವಾಗಿ ಬಿಡುತ್ತದೆ.
ಇರಾಕಿನಲ್ಲಿ ಕಡಿಮೆಯೆಂದರೂ ಹತ್ತುಲಕ್ಷ ಸಿವಿಲಿಯನ್ನರು ತಮ್ಮ ಬಾಗಿಲಿಗೆ ಬಂದ ಯುದ್ಧದಲ್ಲಿ ಸತ್ತಿದ್ದಾರೆ. ಅವರನ್ನು “collateral” ಎಂದು ಕರೆದು ಕೈತೊಳೆದುಕೊಳ್ಳುವಾಗ ಒಂದು ಸಂಗತಿ ಮತ್ತಷ್ಟು ಘೋರವಾಗುತ್ತದೆ.ಸಂಪನ್ಮೂಲಕ್ಕೇನೂ ಕಡಿಮೆಯಿಲ್ಲದ ಸಿರಿವಂತ ದೇಶಗಳ ಸೈನಿಕರ ಈ ದುರ್ಗತಿಗೆ ಮರುಕಪಡುವುದು ಸರಿಯೇ. ಆದರೆ ಇರಾಕಿನ, ಆಫ್ಗಾನಿಸ್ತಾನದ ಊರು ಹಳ್ಳಿಗಳಲ್ಲಿ ನಮ್ಮನಿಮ್ಮಂತಿದ್ದ ಜನರ ನೋವು ಯಾತನೆಗೆ ಇನ್ನೂ ಯಾವುದೇ ಹೆಸರು ಕೊಟ್ಟಿಲ್ಲ, ಅವರ ನೋವಿನ ಆಳವನ್ನು ಅಳೆದಿಲ್ಲ. ಯಾತನೆಗೆ ಪರಿಹಾರವೇನೆಂಬ ಮಾತಂತೂ ಇಲ್ಲವೇ ಇಲ್ಲ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.