ಮಂಗಳೇಶಪ್ಪನವರ ಶ್ರೀಮತಿಯವರಾಗಿದ್ದ ದೇವಮ್ಮ ನಿಜಕ್ಕೂ ದೇವತೆಯಂತವರು. ತಮಗಿದ್ದ ನಾಲ್ಕು ಜನ ಮಕ್ಕಳ ಹಾಗೆ ನಾವು ನಾಲ್ಕು ಜನರನ್ನೂ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆಯೇ ಎರಡು ವರ್ಷ ಜತನ ಮಾಡಿದವರು. ಅವರ ತಾಯಿಗರಳು ನಮ್ಮೆಡೆಗೆ ಸದಾ ಮಿಡಿಯುತ್ತಿತ್ತು. ಡಿ.ಇಡಿ ಓದಿದ ಆ ಎರಡೂ ವರ್ಷ ನಮ್ಮ ಊರು, ನಮ್ಮ ತಂದೆ ತಾಯಿ ಯಾರೂ ಅಂದರೆ ಯಾರೂ ನೆನಪಾಗದಂತೆ ನಮ್ಮ ಮೇಲೆ ಪ್ರೀತಿ ತೋರಿಸಿದ್ದೇಕೆಂದು ಈವರೆಗೂ ತಿಳಿದಿಲ್ಲ. ಯಾಕೆಂದರೆ ಆ ಊರಿನಲ್ಲಿ ಇವರ ಕುಟುಂಬವೆಂದರೆ ಒಂದು ಘನತೆ ಮತ್ತು ಗಾಂಭಿರ್ಯವಿತ್ತು. ನಮಗೆ ತಮ್ಮ ಎದೆಯಲ್ಲಿ ವಿಶೇಷ ಜಾಗ ಕೊಟ್ಟಿದ್ದು ನಮ್ಮ ಅದೃಷ್ಟವೆಂದೆ ಹೇಳಬೇಕು. ಮನುಷ್ಯ ಪ್ರೀತಿಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಬರೆಯುವ ಇಸ್ಮಾಯಿಲ್ ತಳಕಲ್ ಅವರ ಹೊಸ ಅಂಕಣ ತಳಕಲ್ ಡೈರಿಯ ಮೊದಲ ಬರಹ ನಿಮಗಾಗಿ
ಬೇರಿನ ಹಾಗೆ ತಬ್ಬಿ ಹಿಡಿದ ಜೀವತಂತು
ನಾನು ಈಗ ಸರಕಾರಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರೂ ಕೂಡ ಅದಕ್ಕೂ ಮುಂಚೆ ಹತ್ತು ಹನ್ನೆರೆಡು ವರ್ಷಗಳ ಹಿಂದೆ ಎನ್ಜಿಒ ಸಂಸ್ಥೆಯೊಂದರ ಬಿಜಾಪುರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಅದೊಂತರ ಶಿಕ್ಷಕ ವೃತ್ತಿಯೇ. ತಾಲೂಕಿಗೊಂದರಂತೆ ನಮ್ಮದೊಂದು ಮೂರು ಜನರ ತಂಡ. ದೊಡ್ಡದೊಂದು ವಾಹನದ ಮೂಲಕ ಪ್ರತಿದಿನ ಒಂದೊಂದು ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನೂ ಪ್ರಯೋಗಗಳನ್ನೂ ತೋರಿಸುವುದಾಗಿತ್ತು. ಒಂದು ಬಾರಿ ಬಿಜಾಪುರ ಜಿಲ್ಲೆಯ ಎಲ್ಲಾ ತಾಲ್ಲುಕಿನ ತಂಡದವರೂ ಸೇರಿ ರಾಜ್ಯ ಮಟ್ಟದ ಕಾರ್ಯಕ್ರಮವೊಂದರ ತಯಾರಿಯಲ್ಲಿ ತೊಡಗಿದ್ದೆವು. ಅದು ಸ್ಪರ್ಧೆ ಮತ್ತು ಪ್ರದರ್ಶನದ ಮೂರ್ನಾಲ್ಕು ದಿನದ ಕಾರ್ಯಕ್ರಮ. ರಾಜ್ಯದ ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳೂ ಶಿಕ್ಷಕರೂ ಬರುವವರಾಗಿದ್ದರಿಂದ ಅವರಿಗೆ ಊಟ ವಸತಿ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಬೇರೆ ಬೇರೆ ಸಮಿತಿಗಳನ್ನು ಮಾಡಿ ಕಾರ್ಯ ಹಂಚಿಕೆ ಮಾಡಿಯಾಗಿತ್ತು. ಕಾರ್ಯಕ್ರಮ ತುಂಬಾ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದರಿಂದ ಯಾರಿಗೂ ಸ್ವಲ್ಪವೂ ಪುರುಸೊತ್ತು ಇಲ್ಲದೆ ಹಗಲು ರಾತ್ರಿ ಕೆಲಸ ನಡೆದಿರುತ್ತಿತ್ತು. ಒಮ್ಮೊಮ್ಮೆ ಮಧ್ಯರಾತ್ರಿ ಮೀರಿಯೂ ಕೆಲಸದಲ್ಲಿ ತೊಡಗಿದ್ದೆವು.
ನಾನು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ತರಬೇತುದಾರನಾಗಿದ್ದೆ. ಆ ಕಾರ್ಯಕ್ರಮದಲ್ಲಿ ಹೇಗೆಲ್ಲ ಮಾದರಿಗಳ ಕುರಿತು ವಿವರಣೆ ನೀಡಬೇಕೆಂದು ಒಂದು ಇಳಿ ಮಧ್ಯಾಹ್ನ ಕೆಲವೊಂದಿಷ್ಟು ವಿದ್ಯಾರ್ಥಿಗಳನ್ನು ಗುಂಪುಗೂಡಿಸಿಕೊಂಡು ತಿಳಿಸುತ್ತಿದ್ದಾಗಲೇ ನನ್ನ ಫೋನು ರಿಂಗಣಿಸಿತು. ಕರೆ ಸ್ವೀಕರಿಸಿ ಹಲೋ ಎಂದೆ. ಅತ್ತಕಡೆಯಿಂದ ಮಂಜಕ್ಕ ನಡುಗುವ ಧ್ವನಿಯಲ್ಲಿ ಮಾತನಾಡತೊಡಗಿದ್ದರು. ನನಗೆ ಗಾಭರಿಯಾಗಿ ‘ಏನಾಯ್ತು ಮಂಜಕ್ಕ, ನಿಮ್ ಧ್ವನಿ ಯಾಕ್ ಹಿಂಗ ನಡುಗಾಕತ್ತೈತಿ?’ ಅಂತ ಕೇಳಿದ ತಕ್ಷಣ ಅವರು ಅಳುವುದಕ್ಕೆ ಪ್ರಾರಂಭಿಸಿದರು. ಏನಾಗ್ತಿದೆ ಅಂತ ನನಗೆ ಅರಿವಿಗೆ ಬರಲಿಲ್ಲ. ಅವರೆ ಸುಧಾರಿಸಿಕೊಂಡು ‘ಇಸ್ಮಾಯಿಲ್, ಅಪ್ಪ ಹೋಗ್ಬಿಟ್ರೊ’ ಅಂದಿದ್ದೆ ತಡ ನನಗೆ ಒಂದು ಕ್ಷಣ ಕಣ್ಣು ಮಂಜು ಮಂಜಾಗಿ ನಿಂತಲ್ಲೆ ಕುಳಿತುಬಿಟ್ಟೆ. ಏನಾಗಿತ್ತು, ಯಾವಾಗ, ಹೇಗೆ ಯಾವೊಂದು ಪ್ರಶ್ನೆ ಕೇಳಲೂ ಆಗದಷ್ಟು ದುಃಖ ಒತ್ತರಿಸಿಕೊಂಡು ಬಂದು ಏನೊಂದೂ ಮಾತೂ ಹೊರಬರಲಿಲ್ಲ. ‘ನಾಳೆ ಮಧ್ಯಾಹ್ನ ಮಣ್ಣೈತಿ, ಇಂದ ಬಂದ್ಬಿಡು’ ಅಂತ ಹೇಳಿ ಮಂಜಕ್ಕ ಫೋನ್ ಕಟ್ ಮಾಡಿದ್ರು.
ಒಂದಿಷ್ಟು ಹೊತ್ತಾದ ಮೇಲೆ ಸುಧಾರಿಸಿಕೊಂಡ ನಾನು ಕಾರ್ಯಕ್ರಮದ ನಿಮಿತ್ತ ಬಹಳ ಬ್ಯುಸಿ ಇದ್ದಂತಿದ್ದ ನಮ್ಮ ವಲಯದ ಮುಖ್ಯಸ್ಥರ ಬಳಿ ಹೋಗಿ ಫೊನ್ ಕರೆ ಬಂದ ವಿಷಯವನ್ನು ಹೇಳಿ ಈಗಲೆ ಕೊಪ್ಪಳಕ್ಕೆ ಹೊರಡಬೇಕು ರಜೆ ಕೊಡಿ ಎಂದು ಬೇಡಿಕೊಂಡೆ. ಆದರೆ ಅದ್ಯಾವುದೋ ಫೋನ್ ಕರೆಯಲ್ಲಿ ನಿರತರಾಗಿದ್ದ ಅವರು ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮುಗಿಯೋವರೆಗೂ ಯಾರಿಗೂ ರಜೆ ಕೊಡುವುದಿಲ್ಲವೆಂದು ಕಡ್ಡಿ ತುಂಡು ಮಾಡಿದವರಂತೆ ಹೇಳಿ ಅಲ್ಲಿಂದ ಹೋಗಿಬಿಟ್ಟರು. ನನಗೆ ಏನು ಮಾಡಬೇಕೆಂದು ತಿಳಿಯದೇ ಒಳಗೆ ವಿಲವಿಲ ಒದ್ದಾಡತೊಡಗಿದೆ. ಇನ್ನೊಂದೆರಡು ಮೂರು ದಿನಗಳಲ್ಲಿ ಶುರುವಾಗುತ್ತಿದ್ದ ಕಾರ್ಯಕ್ರಮಕ್ಕೆ ತರಬೇತಿಗೊಳ್ಳಲಿದ್ದ ವಿದ್ಯಾರ್ಥಿಗಳ ದೊಡ್ಡ ಹಿಂಡು ನನ್ನನ್ನೆ ದಿಟ್ಟಿಸುತ್ತಿತ್ತು.
ಅಲ್ಲಿಯವರೆಗೂ ಯಾರ ಅಗಲಿಕೆಯೂ ನನಗೆ ಅಷ್ಟೊಂದು ಕಾಡಿದ್ದಿಲ್ಲ. ಅವರು ಹೋದದ್ದು ಅತೀವ ದುಃಖಕ್ಕೆ ಕಾರಣವಾಗಿತ್ತು. ನಮ್ಮನ್ನ ಹಾಗೆ ಬಿಟ್ಟು ಹೋದವರು ನಾವೆಲ್ಲ ಅಪ್ಪ ಅಂತಲೇ ಕರೆಯುತ್ತಿದ್ದ ಮರಿಬಸಪ್ಪನವರ ಕುಟುಂಬದ ಮಂಗಳೇಶಪ್ಪ ಎನ್ನುವ ಹೀರಿ ಜೀವ. ನಾವು ನಾಲ್ಕು ಜನ ಗೆಳೆಯರು. ಒಬ್ಬ ಹನುಮಂತ- ಇವನಿಗೆ ಬಳ್ಳಾರಿ ಅಂತಲೂ ಇನ್ನೊಬ್ಬ ಮಲ್ಲೇಶ- ಇವನಿಗೆ ಬೆಂಕಿ ಅಂತಲೂ ಮಗದೊಬ್ಬ ಗುಡುದಪ್ಪ- ಇತನಿಗೆ ಕಾಕಾ ಅಂತಲೂ ಅಡ್ಡ ಹೆಸರಿನಿಂದ ಕರೆಯುವುದ ರೂಢಿ ಮತ್ತು ನಾನು ನಾಲ್ಕನೆಯವನು. ನಮ್ಮೂರು ಗೊಂಡಬಾಳದಿಂದ ಡಿ.ಇಡಿ ಕೋರ್ಸ್ಗೆ ನಮ್ಮ ಕೊಪ್ಪಳ ತಾಲೂಕಿನಲ್ಲೇ ಇದ್ದ ಮಂಗಳೂರು ಎನ್ನುವ ಹಳ್ಳಿಗೆ ಬಂದಾಗ ಎಲ್ಲವೂ ಹೊಸದು. ನಾವು ಹೊಸ ಅಪರಿಚಿತರು ಆ ಊರಿಗೆ. ಶರಣಪ್ಪ ಎನ್ನುವ ಉಪನ್ಯಾಸಕರೊಬ್ಬರ ಮನೆಯನ್ನು ಬಾಡಿಗೆ ಪಡೆದು ಬಾಪೂಜಿ ಡಿ.ಇಡಿ ಕಾಲೇಜಿಗೆ ಹೊರಟಿದ್ದ ನಮಗೆ ನಮ್ಮ ಮನೆಯ ಮುಂದಿದ್ದ ಮರಿಬಸಪ್ಪನವರ ಕುಟುಂಬದ ಜೊತೆ ಅದ್ಯಾವ ಘಳಿಗೆಯಲ್ಲಿ ಭಾಂದವ್ಯ ಬೆಸೆದುಕೊಂಡಿತೋ ಬರಬರುತ್ತಾ ನಾವು ಆ ಮನೆಯವರೇ ಆಗಿಬಿಟ್ಟೆವು. ಮೊದಮೊದಲಿಗೆ ಕಾಲೇಜಿಗೆ ಹೋಗುವಾಗ, ಬರುವಾಗ ಮಾತನಾಡಿಸುತ್ತಿದ್ದ ನಾವು, ಹಬ್ಬ ಹುಣಿವೆ ಬಂತೆಂದರೆ ನಮಗೆ ಊಟ ಮಾಡಿಸದೇ ತಾವು ಊಟ ಮಾಡದಿರುವಷ್ಟು ಅನ್ಯೋನ್ಯತೆ ಬೆಸೆದುಕೊಂಡಿತ್ತು.
ಏನಾಗಿತ್ತು, ಯಾವಾಗ, ಹೇಗೆ ಯಾವೊಂದು ಪ್ರಶ್ನೆ ಕೇಳಲೂ ಆಗದಷ್ಟು ದುಃಖ ಒತ್ತರಿಸಿಕೊಂಡು ಬಂದು ಏನೊಂದೂ ಮಾತೂ ಹೊರಬರಲಿಲ್ಲ. ‘ನಾಳೆ ಮಧ್ಯಾಹ್ನ ಮಣ್ಣೈತಿ, ಇಂದ ಬಂದ್ಬಿಡು’ ಅಂತ ಹೇಳಿ ಮಂಜಕ್ಕ ಫೋನ್ ಕಟ್ ಮಾಡಿದ್ರು.
ಮಂಗಳೇಶಪ್ಪನವರ ಶ್ರೀಮತಿಯವರಾಗಿದ್ದ ದೇವಮ್ಮ ನಿಜಕ್ಕೂ ದೇವತೆಯಂತವರು. ತಮಗಿದ್ದ ನಾಲ್ಕು ಜನ ಮಕ್ಕಳ ಹಾಗೆ ನಾವು ನಾಲ್ಕು ಜನರನ್ನೂ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆಯೇ ಎರಡು ವರ್ಷ ಜತನ ಮಾಡಿದವರು. ಅವರ ತಾಯಿಗರಳು ನಮ್ಮೆಡೆಗೆ ಸದಾ ಮಿಡಿಯುತ್ತಿತ್ತು. ಡಿ.ಇಡಿ ಓದಿದ ಆ ಎರಡೂ ವರ್ಷ ನಮ್ಮ ಊರು, ನಮ್ಮ ತಂದೆ ತಾಯಿ ಯಾರೂ ಅಂದರೆ ಯಾರೂ ನೆನಪಾಗದಂತೆ ನಮ್ಮ ಮೇಲೆ ಪ್ರೀತಿ ತೋರಿಸಿದ್ದೇಕೆಂದು ಈವರೆಗೂ ತಿಳಿದಿಲ್ಲ. ಯಾಕೆಂದರೆ ಆ ಊರಿನಲ್ಲಿ ಇವರ ಕುಟುಂಬವೆಂದರೆ ಒಂದು ಘನತೆ ಮತ್ತು ಗಾಂಭಿರ್ಯವಿತ್ತು. ಅಷ್ಟು ಸುಲಭವಾಗಿ ಯಾರನ್ನೂ ತಮ್ಮ ಮನೆಗೆ ಬಿಟ್ಟುಕೊಳ್ಳದ ಮಂಗಳೇಶಪ್ಪನವರು ನಮಗೆ ತಮ್ಮ ಎದೆಯಲ್ಲಿ ವಿಶೇಷ ಜಾಗ ಕೊಟ್ಟಿದ್ದು ನಮ್ಮ ಅದೃಷ್ಟವೆಂದೆ ಹೇಳಬೇಕು. ಬಹುಶಃ ನಿಜವಾದ ಮನುಷ್ಯ ಸಂಬಂಧ ಅಂದರೆ ಅದೇ ಇತ್ತೇನೋ. ಆ ಎರಡು ವರ್ಷದ ನಂತರ ನಮ್ಮ ನಮ್ಮ ಬದುಕಿಗೆ ತೆರೆದುಕೊಳ್ಳುತ್ತಿದ್ದ ನಮಗೆ ಅವರು ಮಾನವೀಯ ಸಂಬಂಧವೇನೆಂದು ಅರ್ಥ ಮಾಡಿಸಿದ್ದರು.
ಮಂಗಳೂರು ಹಳ್ಳಿಯಾಗಿದ್ದುಕೊಂಡೆ ನಗರ ಜೀವನಕ್ಕೆ ತೆರೆದುಕೊಂಡಿತ್ತಾದರೂ ಹಳ್ಳಿಯಲ್ಲಿಯ ಮನುಷ್ಯ ಮುನುಷ್ಯಗಳ ನಡುವಿನ ಮಾನವೀಯತೆ, ಅನ್ನೋನ್ಯತೆ, ಪ್ರೀತಿಯ ಕೊಡುಕೊಳ್ಳುವಿಕೆ, ಅಂತಃಕರಣ, ಕಾಳಜಿ ಮಮತೆ ಮುಂತಾದವುಗಳ ಹಳ್ಳಿ ಸೊಗಡನ್ನು ತನ್ನ ಒಡಲಲ್ಲೆ ತುಂಬಿಕೊಂಡಿತ್ತು.
ನಾವು ಯಾವಾಗಲಾದರೂ ರಜೆಗೆ ಮನೆಗೆ ಹೋದೆವೆಂದರೆ ಮತ್ತೆ ಮಂಗಳೂರಿಗೆ ಯಾವಾಗ ಮರಳುತ್ತೇವೆ ಎನಿಸುವಷ್ಟು ಅವರು ನಮ್ಮನ್ನು ಆವರಿಸಿಕೊಂಡಿದ್ದರು. ಮಂಗಳೇಶಪ್ಪ ಮತ್ತು ದೇವಮ್ಮನವರಿಗೆ ನಾಲ್ಕು ಜನ ಮಕ್ಕಳು. ಬಸಣ್ಣ, ಈಶಣ್ಣ, ಮಂಜುಳಾ, ಈರಮ್ಮ. ಈಶಣ್ಣ ಮೆಡಿಕಲ್ ರಿಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರೆ, ಬಸಣ್ಣ ಯಾವುದೋ ಊರಿನಲ್ಲಿ ಇಂಜನೀಯರಿಂಗ್ ಓದುತ್ತಿದ್ದರು. ಮಂಜುಳಾ ಅಕ್ಕ ಬಿ.ಇಡಿ ಸ್ಟುಡೆಂಟ್ ಹಾಗೂ ಈರಮ್ಮ ನಮ್ಮ ಸಹಪಾಠಿಯಾಗಿದ್ದರು. ಪಂಚಮಿ, ದೀಪಾವಳಿ, ಉಗಾದಿ ಇತರ ಹಬ್ಬಗಳು ಬಂತೆಂದರೆ ತಪ್ಪದೇ ನಮಗೆಲ್ಲ ಕರೆದು ಊಟಕ್ಕೆ ಬಡಿಸುತ್ತಿದ್ದದ್ದು ಹೆಚ್ಚಾಗಿ ಮಂಜುಳಾ ಅಕ್ಕ. ನಾವು ಪ್ರೀತಿಯಿಂದ ಮಂಜಕ್ಕ ಅಂತಲೇ ಕರೆಯುತ್ತಿದ್ದದ್ದು ರೂಢಿ. ಮಂಜಕ್ಕಳ ಕೈಯಿಂದ ಊಟ ಬಡಿಸಿಕೊಂಡು ತಿನ್ನುತ್ತಿದ್ದರೆ ಒಂದು ಹೋಳಿಗೆ ಹೆಚ್ಚಿಗೆ ತಿನ್ನುತ್ತಿದ್ದೆ. ಪಕ್ಕದಲ್ಲೇ ಕುಳಿತಿರುತ್ತಿದ್ದ ದೇವಮ್ಮ ಅಮ್ಮ ಬೈದು ಮತ್ತೊಂದು ತಿನ್ನುವವರೆಗೂ ಬಿಡುತ್ತಿರಲಿಲ್ಲ. ‘ಇಸ್ಮಾಯಿಲ, ಎಷ್ಟು ಸೊರಗಿ ನೋಡ್ ಛಲೋತ್ನೆಗಿ ತಿನ್ನು. ನೀ ಏನೂ ಮಾತಾಡಾಂಗಿಲ್ಲ, ಮೂಕ್ ಬಸವಣ್ಣ ಇದ್ದಂಗ ಇರ್ತಿ’ ಅಂತ ಪ್ರೀತಿಯಿಂದ ಬೈದರೆ ನಾಚಿಕೊಂಡುಬಿಡುತ್ತಿದ್ದೆ. ನಾನು ಸ್ವಲ್ಪ ಸಂಕೋಚದ ಸ್ವಭಾವದವನಾಗಿದ್ದರಿಂದ ಹೆಚ್ಚಾಗಿ ವಿಶೇಷ ದಿನಗಳಲ್ಲಿ ಮಾತ್ರ ಅವರ ಮನೆಯಲ್ಲಿ ಊಟಕ್ಕೋ, ನಾಸ್ಟಾಕ್ಕೋ ಹೋಗುತ್ತಿದ್ದೆ. ಆದರೆ ಬೆಂಕಿ, ಬಳ್ಳಾರಿ, ಕಾಕಾ ಅವರಾಗಿಯೇ ಹೋಗಿ ಟೀ, ಊಟ ಬೇಡಿ ತಿಂದುಬಿಡುತ್ತಿದ್ದರು.
ಒಮ್ಮೆ ಯಾವುದೋ ಕಾರಣಕ್ಕೆ ನಾವು ನಾಲ್ಕೂ ಜನ ಅವರ ಮನೆಗೆ ಕೆಲವು ದಿನಗಳು ಹೋಗಿರಲಿಲ್ಲ. ಕಾಲೇಜಿನಲ್ಲಿ ಯಾವುದೋ ಗಲಾಟೆಯಾಗಿದ್ದರಿಂದ ಅದರ ಗುಂಗಿನಲ್ಲಿ ನಾವಿದ್ದೆವು. ಇದರಿಂದ ನೊಂದುಕೊಂಡಿದ್ದ ಮಂಗಳೇಶಪ್ಪನವರು ನಮಗೆಲ್ಲ ಕೈ ತೆಗೆದುಕೊಂಡರು. ‘ನಿಮ್ ನಿಮ್ ವೈಯಕ್ತಿಕ ಜೀವನದಾಗ ಏನ ನಡೀಲಿ, ನಮ್ ಮನಿಗೆ ಬರೋದ ಮಾತ್ರ ನಿಲ್ಲಿಸಬಾರ್ದು. ಏನಾದ್ರೂ ಸಮಸ್ಯ ಆದ್ರ ನಾವದೀವಿ, ಬರ್ರಿ ಚಾ ಕುಡಿರಿ’ ಅಂತ ಅಪ್ಪನ ಹಾಗೆ ಪ್ರೀತಿಯಿಂದ ಗದರಿಬಿಟ್ಟಿದ್ದರು. ಅವರು ನೋಡಲು ಒರಟರಂತೆ, ಗಂಭೀರ ಚಹರೆಯುಳ್ಳವರಂತೆ ಕಂಡರೂ ಮನಸು ಅದೆಷ್ಟು ಮೃದು ಮತ್ತು ಅವರೆಷ್ಟು ಪ್ರೀತಿಯುಳ್ಳವರೆಂದು ಅಂದು ಮತ್ತೊಮ್ಮೆ ಸಾಬೀತಾಗಿ ಅವರ ಮೇಲಿನ ಪ್ರೀತಿ ಮಿಶ್ರಿತ ಭಯಕ್ಕೆ ಓದು ಬರಹ ಬಹಳಷ್ಟಿದ್ದರೂ ಅವರ ಮನೆಗೆ ತಪ್ಪದೆ ಹೋಗುವ ಅಭ್ಯಾಸ ಮಾಡಿಕೊಂಡೆವು.
ನಾವು ಒಂದೆರೆಡು ದಿನ ಕಾಣದಿದ್ದರೆ ದೇವಮ್ಮನವರ ಕಣ್ಣುಗಳು ನಮ್ಮನ್ನೆ ಹುಡುಕುತ್ತಿದ್ದೆವು. ‘ಈ ಭಾಡ್ಯಾಗಳು ಎಲ್ಲಿ ಹೋದ್ವೋ ನೋಡ್. ಒಂದೂ ಹೇಳಂಗಿಲ್ಲ ಕೇಳಂಗಿಲ್ಲ ತಮಗ ತಿಳಿದಿದ್ದ ತಾವು ಮಾಡ್ತಾವು’ ಅಂತ ಚಿಟ್ಬುರಿಸಿದರೆ, ಅವರ ಕಿರಿಯ ಮಗಳು ಈರಮ್ಮ ‘ಯವ್ವ, ಇಷ್ಟು ಚಿಂತಿ ಮಾಡಬ್ಯಾಡ, ನಿನ್ನ ನಾಲ್ಕೂ ಜನ ಆ ಮಕ್ಳು ನಿನ್ ಬಿಟ್ಟು ಎಲ್ಲೂ ಹೋಗಂಗಿಲ್ಲೇಳಬೆ’ ಅಂತ ಟಿವಿಯಲ್ಲಿ ಬರುತ್ತಿದ್ದ ಅಡುಗೆ ರುಚಿಯ ರೆಸಿಪಿಯನ್ನು ಬರೆದುಕೊಳ್ಳುತ್ತಲೇ ಸಮಾಧಾನ ಮಾಡುತ್ತಿದ್ದರು. ಈರಮ್ಮ ಹಾಗೆ ರೆಸಿಪಿಯನ್ನು ಬರೆದುಕೊಳ್ಳುತ್ತಿದ್ದಾರೆಂದರೆ ಏನೋ ಸ್ಪೇಷಲ್ ಊಟ ನಮಗಾಗಿ ಕಾದಿದೆ ಅಂತ ನಾನು ಖುಷಿಗೊಂಡು ಅವರ ಕರೆಗಾಗಿಯೇ ಎದುರು ನೋಡುತ್ತಿದ್ದೆ. ಎಲ್ಲೊ ಹೋಗಿರುತ್ತಿದ್ದ ನಾವು ಮತ್ತೆ ಅವರ ಮನೆಗೆ ಮರಳಿ ಹೋದಾಗ ಬಳ್ಳಾರಿ ಮತ್ತು ಬೆಂಕಿ ಇಬ್ಬರೂ ಅಮ್ಮನಿಗೆ ‘ನಾವಿನ್ನು ನಿಮ್ ಮನಿಗೆ ಬರಾಂಗಿಲ್ಲ, ನಿನಗೆ ಸೊಸಿ ಹುಡ್ಕೊಂಡು ಬಂದೀವಿ’ ಅಂತ ಮಜಾಕಿಗೆ ಸ್ವಲ್ಪ ಕಾಡಿಸಿಬಿಡುತ್ತಿದ್ದರು. ಆಗ ಕಣ್ಣೀರನ್ನು ದಳ ದಳ ಉದುರಿಸಿ ಮುನಿಸಿಕೊಳ್ಳುತ್ತಿದ್ದ ಅಮ್ಮ ಸ್ವಲ್ಪ ಘಳಿಗೆ ನಮ್ಮ ಜೊತೆ ಮಾತು ಆಡುವುದನ್ನೇ ನಿಲ್ಲಿಸುತ್ತಿದ್ದರು. ಈ ಸಮಯದಲ್ಲಿ ಸಂಧಾನಕಾರ ಕೃಷ್ಣನಂತೆ ಕಾಕಾ ಬಂದು ಏನೇನೋ ಹೇಳಿ ಸಮಾಧಾನ ಮಾಡಿಸಿ ಮತ್ತೆ ಸಹಜ ಸ್ಥಿತಿಗೆ ತಂದುಬಿಡುತ್ತಿದ್ದ. ದೇವಮ್ಮ ಮತ್ತದೆ ಪ್ರೀತಿಯಿಂದ ಬೈದುಬಿಡುತ್ತಿದ್ದರು. ನಾವೆಲ್ಲ ಅದು ಅವರ ಆಶೀರ್ವಾದ ಅಂದುಕೊಂಡು ನಕ್ಕುಬಿಡುತ್ತಿದ್ದೆವು.
ಇದನ್ನೆಲ್ಲ ನೆನೆದು ಬಿಜಾಪುರದಲ್ಲಿ ಎದೆ ಭಾರ ಮಾಡಿಕೊಂಡು ಕುಳಿತಿದ್ದೆ. ಬೆಂಕಿ, ಬಳ್ಳಾರಿ, ಕಾಕಾ ಮೂವರೂ ಹೋಗಿ ಅಪ್ಪನನ್ನು ನೋಡಿಕೊಂಡು ಬಂದಿದ್ದರು. ನಾನೊಬ್ಬನೇ ನತದೃಷ್ಟ ಅಂದುಕೊಂಡೆ. ಅದೇನಾಗುತ್ತದೆಯೋ ಆಗೇಬಿಡಲಿ ಎಂದು ಧೈರ್ಯ ಮಾಡಿ ಹೋಗಿದ್ದರೆ ಅಪ್ಪನ ಅಂತಿಮ ದರ್ಶನವಾದರೂ ಸಿಗುತ್ತಿತ್ತು. ಆದರೆ ಆ ಅವಕಾಶವನ್ನು ಹಾಳು ಮಾಡಿಕೊಂಡ ಪೆದ್ದನಂತೆ ನನ್ನನ್ನೆ ನಾನು ಬೈಯ್ದುಕೊಂಡೆ. ಯಾರನ್ನೂ ದೂರದೇ ಅದೆಷ್ಟು ಬಾರಿ ಶಪಿಸಿಕೊಂಡೆನೋ ಗೊತ್ತಿಲ್ಲ.
ಓದು ಮುಗಿದು ನಮ್ಮ ಊರಿಗೆ ನಾವು ಮರಳಿದರೂ ಕೂಡ ಯಾವುದೋ ಒಂದು ನೆಪ ಮಾಡಿ ಅವರ ಮನೆಗೆ ಹೋಗಿ ಅಪ್ಪ ಅಮ್ಮನ ದರ್ಶನ ಪಡೆಯದೆ ಬರುವುದು ತಪ್ಪಿರಲಿಲ್ಲ. ಆ ಕುಟುಂಬದ ಮೇಲೆ ಬೆಸೆದುಕೊಂಡಿದ್ದ ಭೂಮಿಗೆ ಅಪ್ಪಿಕೊಂಡ ಬೇರಿನಂತಹ ತಂತುಗಳನ್ನು ಯಾವತ್ತೂ ತುಂಡಾಗಲು ಬಿಟ್ಟಿಲ್ಲ. ಮಂಜಕ್ಕ, ಈರಮ್ಮ ತಮ್ಮ ತಮ್ಮ ಸಂಸಾರದಲ್ಲಿ ಸುಖವಾಗಿದ್ದಾರೆ. ಬಸಣ್ಣ ಈಗ ದೊಡ್ಡದೊಂದು ಸಂಸ್ಥೆಯಲ್ಲಿ ದೊಡ್ಡ ಇಂಜನಿಯರ್. ಈಶಣ್ಣ ರಾಜಕೀಯದಲ್ಲಿ ಸಕ್ರಿಯರಾಗಿ ಕೈಲಾದಷ್ಟು ಬಡಬಗ್ಗರಿಗೆ ಸೇವೆ ಸಹಾಯ ಮಾಡಿಕೊಂಡಿದ್ದಾರೆ. ಇದನ್ನೆಲಾ ನೋಡಿ ನಮ್ಮೆಲ್ಲರ ಮನಸ್ಸು ಬಹಳಷ್ಟು ಖುಷಿಪಟ್ಟಿದೆ.
ಕಳೆದ ವರ್ಷ ರಜೆಗೆಂದು ಊರಿಗೆ ಹೋಗಿದ್ದೆ. ಗೆಳೆಯರನ್ನು ಭೇಟಿಯಾಗಿ ಬೈಕಿನಲ್ಲಿ ಮರಳಿ ಬರುತ್ತಿದ್ದಾಗ ಫೋನ್ ಕರೆಯೊಂದು ಬಂತು. ಯಾರದ್ದೆಂದು ಕರೆ ಸ್ವೀಕರಿಸಿ ಮಾತನಾಡಿದರೆ ಅತ್ತ ಕಡೆಯಿಂದ ಪರಿಚಿತ ಧ್ವನಿ ಕೇಳಿಸಿತು. ಅದು ಯಾರದೆಂದು ತಕ್ಷಣಕ್ಕೆ ನನಗೆ ಗೊತ್ತಾಗಿ ‘ಮಂಜಕ್ಕ, ಹೆಂಗದಿ? ನಿನ್ ಧ್ವನಿ ಕೇಳಿ ಖುಷಿ ಆತು ನೋಡು’ ಅಂದೆ. ನನಗೆ ಅಕ್ಕ ಫೋನ್ ಮಾಡಿದ್ದು ಬಹಳಷ್ಟು ಸಂತೋಷವಾಗಿತ್ತು. ತುಂಬಾ ದಿನಗಳ ನಂತರ ಅವರೊಂದಿಗೆ ಮಾತನಾಡುತ್ತಿದ್ದೆ. ಆದರೆ ಮಂಜಕ್ಕ ಯಾಕೋ ಕ್ಷೀಣಧ್ವನಿಯಲ್ಲಿ ಮಾತನಾಡತೊಡಗಿದ್ದರು. ‘ಏನಾಯ್ತು, ಮಂಜಕ್ಕ?’ ಎಂದೆ. ಮಂಜಕ್ಕ ಸ್ವಲ್ಪ ತಡೆದು ‘ಅಮ್ಮ ಹೋಗ್ಬಿಟ್ರು’ ಅಂದ್ರು. ಅವರ ಆ ಮಾತನ್ನು ಕೇಳುತ್ತಲೇ ಮೊದಲೇ ರಣ ರಣ ಹೊಡೆಯುತ್ತಿದ್ದ ಬಿಸಿಲು. ತಲೆಗೆ ಚಕ್ಕರ್ ಚಕ್ಕರ್ ಬಂದು ಬೀಳುವುದೊಂದೆ ಬಾಕಿಯಿತ್ತು. ಸ್ವಲ್ಪ ಹೊತ್ತು ಆ ರೋಡಿನಲ್ಲಿ ಅಡ್ಡಾಡುತ್ತಿದ್ದ ಯಾವ ವಾಹನಗಳ ಸದ್ದೂ ನನಗೆ ಕೇಳಿಸದೆ ಮೂಕನಾಗಿಬಿಟ್ಟೆ. ಅಮ್ಮ ಸ್ವರ್ಗದಲ್ಲಿದ್ದ ಅಪ್ಪನ ಬಳಿ ಹೋಗಿದ್ದರು. ಮಂಗಳೇಶಪ್ಪ, ದೇವಮ್ಮ ಹಾಗೂ ಅವರ ನಾಲ್ಕೂ ಮಕ್ಕಳ ಮಮತೆಯಲ್ಲಿ ನಾವು ನಾಲ್ಕೂ ಜನ ತೋಯಿಸಿಕೊಂಡಿದ್ದೆವು. ಈಗಲೂ ಮಂಗಳೂರೆಂದರೆ ಎದೆ ಅವ್ಯಕ್ತ ಭಾವನೆಯಲ್ಲಿ ಭಾರವಾಗುತ್ತದೆ.
ಇಸ್ಮಾಯಿಲ್ ತಳಕಲ್ ಕೊಪ್ಪಳ ಜಿಲ್ಲೆಯ ಗೊಂಡಬಾಳ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಖನಗಾಂವ್ ಗ್ರಾಮದಲ್ಲಿ ಸರ್ಕಾರಿ ಆದರ್ಶವಿದ್ಯಾಲಯ(ಆರ್ಎಮ್ಎಸ್ಎ) ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2020) ಸೇರಿದಂತೆ ಇವರ ಕಥೆಗಳು ಹಲವೆಡೆ ಪ್ರಕಟವಾಗಿ, ಬಹುಮಾನ ಪಡೆದುಕೊಂಡಿವೆ. “ಬೆತ್ತಲೆ ಸಂತ” ಇವರ ಪ್ರಕಟಿತ ಮೊದಲ ಕಥಾ ಸಂಕಲನ. ಈ ಕಥಾ ಸಂಕಲನಕ್ಕೆ 2021ರ ಪ್ರತಿಷ್ಟಿತ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಬಹುಮಾನ” ಬಂದಿದೆ. ಸಂಗೀತ ಕೇಳುವುದು, ಅಡುಗೆ ಮಾಡುವುದು ಇವರ ಆಸಕ್ತಿಯ ವಿಷಯಗಳು.
ಅಂತಃಕರಣದಿಂದ ಕೂಡಿದ ಆತ್ಮೀಯ ಬರಹ. 🙏🙏🌹🌹
ಮಂಗಳೇಶಪ್ಪ ಮತ್ತು ದೇವಮ್ಮ ಎಂಬ ಅಂತ:ಕರಣದ ಜೀವಿಗಳ ಪ್ರೀತಿಯ ಸವಿಯನ್ನುಂಡ ನೀವೇ ಧನ್ಯರು. ಅದನ್ನು ಇನ್ನೂ ಮರೆಯದೇ ಸ್ಮರಿಸಿಕೊಳ್ಳುವುದಿದೆಯಲ್ಲ ಅದು ನಿಮ್ಮಂಥ ಭಾವನಾಜೀವಿಗಳ ದೊಡ್ಡತನ.
ಮನುಷ್ಯ ಸಂಬಂಧದ ಮೂಲ ಸೆಲೆ ಪ್ರೀತಿ. ಅದು ಎಲ್ಲ ಎಲ್ಲೆಗಳನ್ನು ಮೀರಿ ತನ್ನತ್ತ ಸೆಳೆದುಕೊಳ್ಳುವ ಹೃದ್ಯ ಗುಣವುಳ್ಳದ್ದು. ಅದು ತರತಮ ಭಾವವಿರದ ಪರಿಶುದ್ಧ ಪವಿತ್ರ ಸಂಬಂಧ. ಕರುಳು ಬಳ್ಳಿಯನ್ನು ಮರೆಸುವ ,ಅದನ್ನು ಮೀರಿಸುವ ಸಂಬಂಧವೊಂದರ ಕಥಾನವೇ ಗೆಳೆಯ ಇಸ್ಮಾಯಿಲ್ ಇಳಕಲ್ ಅವರ “ಬೇರಿನ ಹಾಗೆ ತಬ್ಬಿ ಹಿಡಿದ ಜೀವತಂತು” ಎಂಬ ಅಂಕಣ ಬರೆಹ.
ಅಂಕಣವನ್ನು ಓದುತ್ತ ಓದುತ್ತ ನನ್ನತ್ತ ಯಾರೊ ದಾವಿಸಿಕೊಂಡು ಬಂದು ನನ್ನ ಬಾಯಿ ಮುಚ್ಚಿ ಹಿಡಿದಂತೆ ಮೌನವು ಆವರಿಸಿ ನನ್ನ ಮಾತುಗಳು ಮೂರ್ಛೆ ಹೋದವು . ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂಬಂತೆ, ಮಂಗಳೇಶಪ್ಪನ ಮಾಮರವೆಂಬ ಮನೆಯೊಂದಿಗೆ ಇಸ್ಮಾಯಿಲ್, ಹಣಮಂತ, ಮಲ್ಲೕೆಶ ಮತ್ತು ಗುಡದಪ್ಪ ಎಂಬ ಕೋಗಿಲೆಗಳು ಹೊಂದಿದ್ದ ಅವಿನಾಭಾವ ಸಂಬಂಧ ಪ್ರಚಲಿತ ಜಗತ್ತಿನ ಎಷ್ಟೊ ವೈರುಧ್ಯಗಳಿಗೆ ದಿವ್ಯೌಷಧಿಯಾಗಿರುವುದು ಈ ಲೇಖನದ ಮುಖೇನ ಗೋಚರಿಸುತ್ತದೆ.
ಮನುಷ್ಯ ಬದುಕಿನ ಪ್ರತಿ ಹಂತದಲ್ಲೂ ಅರಿವಿನಿಂದಲೋ ಅರಿವಿಲ್ಲದಯೋ ಎಷ್ಟೊ ಹೊಸ ಹೊಸ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುತ್ತ ಸಾಗುತ್ತಾನೆ. ಅವುಗಳಲ್ಲಿ ಅಚ್ಚಳಿಯದೆ ಉಳಿಯುವ ಸಂಬಂಧಗಳು ಬೇರುಗಳಂತೆ ನಮ್ಮ ಎದೆಯ ಆಳಕ್ಕೆ ಇಳಿದು ಗಟ್ಟಿಗೊಂಡು ಪ್ರೀತಿ ಎಂಬ ಹೆಮ್ಮರವಾಗಿ ನೆರಳು ನೀಡುತ್ತ ಜೊತೆಗೆ ಸಿಹಿಯಾದ ಹಣ್ಣುಗಳನ್ನು ನೀಡುತ್ತ ನಮ್ಮ ಬಾಳು ಬೆಳಕು ಕಾಣುವಲ್ಲಿ ಕಾರಣವಾಗುತ್ತವೆ. ಅಂಥ ನಿರ್ಮಲ ಬದುಕಿನ ಮಾನವ್ಯ ಪ್ರೀತಿಯ ಕುಟುಂಬದೊಂದಿಗಿನ ತಮ್ಮ ಒಡನಾಟ ಕರುಳು ಬಳ್ಳಿಯ ಸಂಬಂಧವನ್ನೂ ಮೀರಿಸುವ ರೀತಿಯಲ್ಲಿ ಬೆಳೆದದ್ದು ಆ ನಾಲ್ಕು ಗೆಳೆಯರನ್ನು ಆ ಕುಟುಂಬ ನೋಡಿಕೊಂಡ ಪರಿ ಅನನ್ಯವಾದುದು. ಕುಟುಂಬದ ಹಿರಿಯ ಜೀವ ಅಗಲಿದಾಗ ತಕ್ಕನೆ ಎದೆ ಭಾರವಾಗಿ ದುಃಖ ಉಮ್ಮಳಿಸಿದ್ದು, ಈ ಸಂವೇದನೆಗಳು ಸುಮ್ಮನೆ ಬರುವಂಥವುಗಳಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಅಂತಃಕರಣಗಳಿಂದ ಮಾತ್ರ ಸಾಧ್ಯ. ಜೀವನಕ್ಕಿಂತ ಜೀವನಪ್ರೀತಿ ದೊಡ್ಡದು. ಅದಕ್ಕೆ ಎಲ್ಲ ಕಲಹಗಳನ್ನು ದೂರೀಕರಿಸುವ ಶಕ್ತಿ ಇದೆ. ವಿಶ್ವವನ್ನೆ ಒಂದು ಕುಟುಂಬವಾಗಿಸುವ ಕಲೆ ಜೀವನ ಪ್ರೀತಿಗಿದೆ ಎಂಬುದನ್ನು ಪ್ರಸ್ತುತ ಇಸ್ಮಾಯಿಲ್ ಅವರ ಅಂಕಣದ ತಿರುಳಾಗಿದೆ.
ಇಸ್ಮಾಯಿಲ್ ಅವರು ಭಾವಜೀವಿ , ಅವರ ಬರೆಹಗಳೆಲ್ಲವೂ ಎದೆಯ ಮುದ್ರಣಾಲಯದಲ್ಲಿ ಅಚ್ಚಾಗಿರುತ್ತವೆ. ಪ್ರಸ್ತುತ ಅಂಕಣವು ಅವರ ಅನುಭವದ ಮೂಲದಿಂದ ನೆಗೆದು ಬಂದ ಭಾವಗಂಧವಾಗಿದೆ.
ಪ್ರೀತಿ ಇಲ್ಲದ ಮೇಲೆ
. ಹೂವು ಅರಳೀತು ಹೇಗೆ?!
ಮೋಡ ಕಟ್ಟೀತು ಹೇಗೆ?!
. ಹನಿವೊಡೆದು ಧರೆಗೆ
ಇಳಿದೀತು ಹೇಗೆ?!
. ಪ್ರೀತಿಯಿಂದಲೆ ಇಹವು
ಪ್ರೀತಿಯಿಂದಲೆ ಪರವು
. ಪ್ರೀತಿಯಿಂದಲೆ ಸಕಲ.
ಸೌಭಾಗ್ಯವು
ಪ್ರೀತಿಯಿಂದಲೆ ಜಗದಲಿ
. ಸರ್ವ ಮಾನ್ಯವು.
– ಸುರೇಶ ಮುದ್ದಾರ
. ಕೆಂಡ ಸಂಪಿಗೆ ಅಂಕಣ ಬರೆಹಕ್ಕಾಗಿ ಇಸ್ಮಾಯಿಲ್ ತಳಕಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು 💐🤝🙏
ಧನ್ಯವಾದಗಳು