ಇಲ್ಲಿರುವ ಎಲ್ಲಾ ಕತೆಗಳಿಗಿಂತ ಕೊನೆಯ ಕತೆ ‘ಎಲ್ಲೋ ಯಲ್ಲೋ’ ಕಥೆಯೇ ಯಾಕೆ ಜಾಸ್ತಿ ಇಷ್ಟವಾಯಿತು ಅಂದುಕೊಂಡರೂ ಯಾವುದ್ಯಾವುದೋ ಕಾರಣಗಳು ತೋಚುತ್ತವೆ. ಆದರೆ ಮುಖ್ಯವಾಗಿ ಇಷ್ಟವಾಗಿದ್ದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಸಹಜವಾದ ಗೆಳೆತನದ ರೀತಿ ಮತ್ತು ಒಬ್ಬಳು ಶಿಕ್ಷಕಿಯ ಗಂಡನಾಗಿ ಅವರ ಕಷ್ಟನಷ್ಟಗಳ ಬಗ್ಗೆ ಅರಿವಿರುವುದು. ಹೇಗೆ ಹುಡುಗ ಹುಡುಗ ಆತ್ಮೀಯ ಗೆಳೆಯರಾಗಿರಲು ಸಾಧ್ಯವೋ ಅದೇ ರೀತಿ ಹುಡುಗ ಹುಡುಗಿ ಕೂಡಾ ಅದೇ ಆತ್ಮೀಯತೆಯಲ್ಲಿರಲು ಸಾಧ್ಯ. ಸಮಾಜ ಈ ವಿಷಯದಲ್ಲಿ ಮುಂಚಿನಷ್ಟು ಮಡಿವಂತಿಕೆ ಇಟ್ಟುಕೊಂಡಿಲ್ಲವಾದರೂ ಪೂರ್ತಿ ಬದಲಾಗಿಯೂ ಇಲ್ಲ.
ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ
ನಾನು ಈ ಬರಹವನ್ನು ಬರೆದ ವಾರದಲ್ಲಿ ಈ ಕೃತಿಯ ಲೇಖಕ ದಾದಾಪೀರ್ ಜೈಮನ್ನರಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಯುವ ಪುರಸ್ಕಾರ ತಂದುಕೊಟ್ಟಿತು. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಕತೆಗಳು ಅಥವಾ ಕಾದಂಬರಿಗಳು ಅತ್ಯುತ್ತಮ ಅನ್ನಿಸಿಕೊಳ್ಳಲು ಹೇಗಿರಬೇಕು? ಇದಕ್ಕೆ ಹಲವಾರು ರೀತಿಯ ಉತ್ತರಗಳು ಬರಬಹುದು. ಪ್ರತಿಯೊಬ್ಬರ ಅನಿಸಿಕೆಯೂ ವಿಭಿನ್ನವಾಗಿರಬಹುದು. ಅಥವಾ ನಮ್ಮ ವಯಸ್ಸಿಗೆ ತಕ್ಕಂತೆ ಇಲ್ಲಾ ನಮ್ಮ ವಿಚಾರಗಳಲ್ಲಿ ಬದಲಾವಣೆಯಾದಂತೆ ನಾವು ಅತ್ಯುತ್ತಮ, ಉತ್ತಮ ಅಥವಾ ಸಾಧಾರಣ ಎಂದು ಅಳೆಯುವ ಮಾನದಂಡಗಳು ಬದಲಾಗಲೂಬಹುದು. ಅದೇ ರೀತಿ ನನ್ನ ಅನಿಸಿಕೆ ಏನೆಂದರೆ ಕತೆ ಅಥವಾ ಕಾದಂಬರಿಗಳು ಅತ್ಯುತ್ತಮ ಎಂದು ಹೇಳಬೇಕೆಂದರೆ ಅವು ಕಾಡಬೇಕು. ಓದಿದ ಕೆಲ ಕಾಲದವರೆಗೆ ಅವು ಕಣ್ಮುಂದೆ ಕಾಣುವಂತೆ ಇರಬೇಕು. ಕತೆ ಸಾಗುವ ಸ್ಥಳಕ್ಕನುಗುಣವಾಗಿ ಸಂತೆಯಲ್ಲಿ, ಮಾಲಿನಲ್ಲಿ, ರೈಲಿನಲ್ಲಿ, ಬಸ್ಸಿನಲ್ಲಿ ಹೀಗೆ ಕಥೆಯ ಪಾತ್ರಗಳು ಕಣ್ಮುಂದೆ ಬರಬೇಕು. ಖುಷಿ ಕೊಟ್ಟ ಎಲ್ಲಾ ಕತೆಗಳು ನನಗೆ ಈ ರೀತಿ ಕಾಡುವುದಿಲ್ಲ. ಬಹಳ ಆಳವಾಗಿ ತಾಕಿದ ಕತೆಗಳಲ್ಲಿ ಮಾತ್ರ ಹೀಗಾಗುತ್ತದೆ. ದಾದಾಪೀರ್ ಜೈಮನ್ ಅವರ ನೀಲಕುರಿಂಜಿಯಲ್ಲಿ ನನಗೆ ಆ ರೀತಿಯ ಅನುಭವಗಳಾದವು.
ಕೆಂಡಸಂಪಿಗೆ ಓದುಗರಿಗೆ ದಾದಾಪೀರ್ ಜೈಮನ್ ಅಪರಿಚಿತರಲ್ಲ. ಅತ್ಯಂತ ವಿಭಿನ್ನ ರೀತಿಯ ಬರಹಗಳುಳ್ಳ ಅವರ ಅಂಕಣದ ಅಭಿಮಾನಿ ನಾನು. ನಾನು ತಪ್ಪಿಸದೇ ಓದುವ ಅಂಕಣಗಳಲ್ಲಿ ಒಂದು. ಇವರು ಬರೆದ ಕಥಾಸಂಕಲನ ‘ನೀಲಕುರಿಂಜಿ’ಯ ಬಗ್ಗೆ ಸುಮಾರು ಗೆಳೆಯರು ಒಳ್ಳೆಯ ಮಾತುಗಳನ್ನಾಡಿದ್ದನ್ನು ಕೇಳಿದ್ದೆ, ಅದೇ ರೀತಿ ಅವರ ಅನುವಾದಿತ ಕೃತಿ ‘ಪರ್ದಾ ಮತ್ತು ಪಾಲಿಗಮಿ’ಯ ಬಗ್ಗೆ ಕೂಡಾ. ಆದರೆ ಕೊಳ್ಳಬೇಕು ಕೊಳ್ಳಬೇಕು ಅಂದುಕೊಂಡು ಮರೆತೇಬಿಟ್ಟಿದ್ದೆ. ಫೇಸ್‌ಬುಕ್ಕಿನಲ್ಲಿ ಚೈತ್ರಿಕನ ಪೋಸ್ಟ್ ನೋಡಿದಾಗ ಥಟ್ಟನೆ ನೆನಪಾಯಿತು. ಮತ್ತೆ ಮರೆತರೆ ಕಷ್ಟವೆಂದೆಣಿಸಿ ಕೂಡಲೆ ಆರ್ಡರ್ ಮಾಡಿದೆ.
ಒಂದು ಪುಸ್ತಕದ ಮೌಲ್ಯವನ್ನು ಕೇವಲ ಅದರ ಪುಟಗಳಿಂದ ಅಳೆಯಲು ಖಂಡಿತಾ ಸಾಧ್ಯವಿಲ್ಲ. ಕನ್ನಡದಲ್ಲಿ ಅನೇಕ ಅನೇಕ ಅಮೂಲ್ಯ ಪುಸ್ತಕಗಳು ಬಹಳ ಚಿಕ್ಕವೇ. ಇಲ್ಲಿರುವುದು ಕೂಡಾ ಬರೀ ೮೭ ಪುಟಗಳು, ಹತ್ತು ಕತೆಗಳು. ನಾನು ಇದನ್ನು ಎರಡು ಸಿಟ್ಟಿಂಗಿನಲ್ಲಿ ಓದಿ ಮುಗಿಸಿದೆ, ಆದರೆ ಹಾಗೆ ಮಾಡಬಾರದಿತ್ತು ಎಂದು ಆಮೇಲೆ ಅನ್ನಿಸಿತು. ಪ್ರತೀ ಕತೆಗಳೂ ಬಹಳ ವಿಭಿನ್ನವಾಗಿರುವ ಕಾರಣ ಸ್ವಲ್ಪ ಸಮಯ ತೆಗೆದುಕೊಂಡು ದಿನಕ್ಕೊಂದು ಕತೆ ಓದಿದರೆ ಚನ್ನಾಗಿರುತ್ತಿತ್ತೇನೋ, ಏನಾದ್ರೂ ಆಗಿರಲಿ.
ಯಾಕೆ ವಿಷಯವನ್ನ ಸ್ವಲ್ಪ ಡೈವರ್ಟ್ ಮಾಡಣ ಅಂತ ಅನ್ನಿಸ್ತಾ ಇದೆ. ಹೆಚ್ಚಾಗಿ ಕಥಾಸಂಕಲನ ಅಥವಾ ಪ್ರಬಂಧ ಸಂಕಲನದಲ್ಲಿ ಅಲ್ಲಿರುವ ಯಾವುದಾದರೂ ಕತೆಯ ಹೆಸರನ್ನು ಇಡುವುದು ವಾಡಿಕೆ. ಉದಾಹರಣೆಗೆ ದಗಡೂಪರಬನ ಅಶ್ವಮೇಧ, ಕಿರಿಗೂರಿನ ಗಯ್ಯಾಳಿಗಳು, ಆಲದ ಮರದ ಕೆಳಗೆ ಮತ್ತು ಇತರ ಕತೆಗಳು ಇತ್ಯಾದಿ. ಆದರೆ ಪುಸ್ತಕದ ಹೆಸರಾಗುವ ಕತೆಯ ಹೆಸರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಕೃತಿಕಾರನಿಗೆ ಇಷ್ಟವಾದ ಮತ್ತು ಮೌಲಿಕ ಅನ್ನಿಸಿದ ಕತೆಯಾ? ಇಲ್ಲಾ ಇದ್ದ ಕತೆಗಳ ಪಟ್ಟಿಯಲ್ಲೇ ಆಕರ್ಶಕ ಅನ್ನಿಸಿದ ಕತೆಯಾ? ಯೋಚಿಸಿ ನೋಡಿ ಎಲ್ಲಾ ಕೃತಿಗಳಲ್ಲಿ ನಿಮಗಿಷ್ಟವಾದ ಕತೆಯೇ ಟೈಟಲ್‌ನಲ್ಲಿ ಬಂದಿರಬೇಕೆಂದೆನೂ ಇಲ್ಲ. ನಿಮ್ಮ ಅಭಿರುಚಿಗನುಗುಣವಾಗಿ ಬೇರೆಯೂ ಆಗಿರಬಹುದು. ಇತ್ತೀಚೆಗೆ ನಾನು ಇಷ್ಟಪಟ್ಟ ‘ಕಡಲು ನೋಡಲು ಹೋದವಳು’ ಮತ್ತು ಪ್ರಸ್ತುತ ಬರೆಯುತ್ತಿರುವ ‘ನೀಲಕುರಿಂಜಿ’ ಎರಡರಲ್ಲೂ ನನ್ನಿಷ್ಟದ ಬರಹ ಟೈಟಲ್ ಕತೆಗಳಲ್ಲ. ಆದರೆ ಎರಡೂ ಕಡೆ ಈ ಹೆಸರು ಇದ್ದರೇ ಚಂದ ಅನ್ನಿಸಿದೆ. ಇದೇ ಪುಸ್ತಕದಲ್ಲಿ ನನಗಿಷ್ಟವಾದುದು ಕೊನೆಯ ಕತೆಯಾದ ‘ಎಲ್ಲೋ ಯಲ್ಲೋ’. ಆದರೆ ಈ ಹೆಸರು ಪುಸ್ತಕಕ್ಕೆ ಇಟ್ಟಿದ್ದರೆ ಹೇಗಿರುತ್ತಿತ್ತು? ಪುಸ್ತಕದ ಮೌಲ್ಯವೇನೂ ಇದರಿಂದ ಹೆಚ್ಚೂ ಅಥವಾ ಕಮ್ಮಿ ಆಗದಿದ್ದರೂ ‘ನೀಲಕುರಿಂಜಿ’ ಹೆಸರೇ ಬಹಳ ಆಕರ್ಷಕವಾದುದು.
ದಾದಾಪೀರ್ ನನಗೆ ಸಾಮಾಜಿಕ ತಾಣದಲ್ಲಿ ಪರಿಚಯವಿದ್ದರೂ ಅವರ ಜೊತೆ ಇನ್ನೂ ವೈಯಕ್ತಿಕವಾಗಿ ಭೇಟಿಯಾಗಲೀ ಇಲ್ಲಾ ಮಾತನಾಡಿದ್ದಾಗಲೀ ಇಲ್ಲ. ಆದರೆ ಇಲ್ಲಿರುವ ಕತೆಗಳನ್ನೂ ಓದುತ್ತಾ ಹೋದಂತೆ ಅವರ ಇಲ್ಲಿಯವರೆಗಿನ ಪಯಣ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ ಎಂದು ಅನ್ನಿಸುತ್ತದೆ. ಅವರು ಪಟ್ಟ ಕೆಲ ಅಡೆತಡೆಗಳು ಕಥಾರೂಪದಲ್ಲಿ ಬಂದಂತೆ ತೋರುತ್ತದೆ. ಆದರೆ ಆ ಕಷ್ಟಗಳನ್ನು ನಿರಾಶಾವಾದಿಯಂತೆಯೋ ಇಲ್ಲಾ ವ್ಯವಸ್ಥೆಯ ಹಳಿಯಲು ಬಳಸಿಕೊಳ್ಳದೆ ಧನಾತ್ಮಕವಾಗಿ ಸ್ವೀಕರಿಸಿ ಬರೆದಿದ್ದಾರೆ.
ಕತೆ ಅಥವಾ ಕಾದಂಬರಿಗಳು ಅತ್ಯುತ್ತಮ ಎಂದು ಹೇಳಬೇಕೆಂದರೆ ಅವು ಕಾಡಬೇಕು. ಓದಿದ ಕೆಲ ಕಾಲದವರೆಗೆ ಅವು ಕಣ್ಮುಂದೆ ಕಾಣುವಂತೆ ಇರಬೇಕು. ಕತೆ ಸಾಗುವ ಸ್ಥಳಕ್ಕನುಗುಣವಾಗಿ ಸಂತೆಯಲ್ಲಿ, ಮಾಲಿನಲ್ಲಿ, ರೈಲಿನಲ್ಲಿ, ಬಸ್ಸಿನಲ್ಲಿ ಹೀಗೆ ಕಥೆಯ ಪಾತ್ರಗಳು ಕಣ್ಮುಂದೆ ಬರಬೇಕು. ಖುಷಿ ಕೊಟ್ಟ ಎಲ್ಲಾ ಕತೆಗಳು ನನಗೆ ಈ ರೀತಿ ಕಾಡುವುದಿಲ್ಲ. ಬಹಳ ಆಳವಾಗಿ ತಾಕಿದ ಕತೆಗಳಲ್ಲಿ ಮಾತ್ರ ಹೀಗಾಗುತ್ತದೆ.
ಕನ್ನಡದಲ್ಲಿ LGBTQ ಬಗ್ಗೆ ಈಗಿನ ಬರಹಗಾರರು ಮೈಛಳಿ ಬಿಟ್ಟು ಬರೆಯತೊಡಗಿದ್ದಾರೆ. ವಸುಧೇಂದ್ರರ ಮೋಹನಸ್ವಾಮಿಗಿಂತ ಮುಂಚೆ ಕನ್ನಡದಲ್ಲಿ ಅಂತಹ ಕತೆಗಳ ಓದಿದ ನೆನಪಿಲ್ಲ. ಆದರೆ ಈಗ ಆ ಸಮುದಾಯದವರ ಕೇಂದ್ರೀಕೃತವಾಗಿಟ್ಟುಕೊಂಡು ಬರೆದ ಅನೇಕ ಉತ್ತಮ ಕತೆಗಳು ಬಂದಿವೆ. ಇಲ್ಲಿ ಕೂಡ ‘ಆವರಣ’ ಮತ್ತು ‘ತೀರದ ಒಲವಿನ ಒಂಟಿ ಹಾಡು’ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಬರೆದ ಕತೆಗಳಾಗಿವೆ. ಆವರಣ ಕತೆಗೂ ಫಾತಿಮಾ ರಲಿಯಾ ಬರೆದ ‘ಅಕ್ಕರೆಗ್ಯಾವ ಲಿಂಗ’ಕ್ಕೂ ಏನೋ ಹೋಲಿಕೆ ಕಂಡಹಾಗಿದೆ. ಒಮ್ಮೆ ಅವೆರಡೂ ಕತೆಗಳು ಮಿಶ್ರಗೊಂಡು ಗೊಂದಲವಾದಂತಾಯಿತು. ಆದರೆ ಅವರೆಡರ ಎಳೆ ಒಂದೇ ರೀತಿ ಇರುವಂತೆ ತೋರಿದರೂ, ಎರಡೂ ಕತೆಗಳು ಸಾಗುವ ರೀತಿ ಸಂಪೂರ್ಣ ಭಿನ್ನವಾದುದು. ಒಂದು ವಿಷಯ ನೆನಪಾಯಿತು. ಗಂಡಿನ ದೇಹದಲ್ಲಿನ ಹೆಣ್ಣಿನ ಕುರಿತ ಕೆಲ ಕತೆಗಳು ನೆನಪಿಗೆ ಬರುತ್ತವೆ. ಇಲ್ಲಿನ ಆವರಣ, ಫಾತಿಮಾಳ ಅಕ್ಕರೆಗಾವ ಲಿಂಗ, ವೈಶಾಲಿ ಹೆಗಡೆಯವರ ಒಂದು ಕತೆ (ಹೆಸರು ನೆನಪಿಗೆ ಬರುತ್ತಾ ಇಲ್ಲ) ಹಾಗೇ ದಿವಂಗತ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ನಾನು ಅವನಲ್ಲ ಅವಳು’ ಇತ್ಯಾದಿ. ಆದರೆ ‘ಅವಳ ದೇಹದಲ್ಲಿ ಅವನಿರುವ’ ಕತೆಗಳ ಓದಿದ ನೆನಪು ಬರುತ್ತಾ ಇಲ್ಲ. ಅಂತಹ ಕತೆಗಳು ಬಂದಿಲ್ಲವಾ ಅಥವಾ ಬಂದಿದ್ದರೂ ನನಗೆ ಓದಲು ಸಿಕ್ಕಿಲ್ಲವಾ ತಿಳಿಯದು. ಆದರೆ ಅವಳ ದೇಹದಲ್ಲಿರುವ ಅವನ ಕುರಿತು ಚರ್ಚೆಯಾಗಿದ್ದು ಸ್ವಲ್ಪ ಕಡಿಮೆಯೇ.
ಯಾವುದೇ ಕಥಾಸಂಕಲನ ಓದುವಾಗ ನನಗೆ ಯಾಕೆ ಆ ಕತೆ ಜಾಸ್ತಿ ಇಷ್ಟವಾಯ್ತು, ಯಾಕೆ ಈ ಕತೆ ಕಮ್ಮಿ ಇಷ್ಟವಾಯಿತು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ನನಗೆ ನಾನೇ ಪ್ರಶ್ನೆ ಹಾಕಿಕೊಂಡು ಯೋಚಿಸಲು ಕೂತರೆ ಹತ್ತಾರು ಕಾರಣಗಳು ಬಂದರೂ ಅದು ಸರಿಯಾದ ಕಾರಣ ಹೌದೋ ಅಲ್ಲವೋ ಅನ್ನುವ ಬಗ್ಗೆ ನನಗೇ ಭರವಸೆಯಿಲ್ಲ. ಇಲ್ಲಿರುವ ಎಲ್ಲಾ ಕತೆಗಳಿಗಿಂತ ಕೊನೆಯ ಕತೆ ‘ಎಲ್ಲೋ ಯಲ್ಲೋ’ ವೇ ಯಾಕೆ ಜಾಸ್ತಿ ಇಷ್ಟವಾಯಿತು ಅಂದುಕೊಂಡರೂ ಯಾವುದ್ಯಾವುದೋ ಕಾರಣಗಳು ತೋಚುತ್ತವೆ. ಆದರೆ ಮುಖ್ಯವಾಗಿ ಇಷ್ಟವಾಗಿದ್ದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಸಹಜವಾದ ಗೆಳೆತನದ ರೀತಿ ಮತ್ತು ಒಬ್ಬಳು ಶಿಕ್ಷಕಿಯ ಗಂಡನಾಗಿ ಅವರ ಕಷ್ಟನಷ್ಟಗಳ ಬಗ್ಗೆ ಅರಿವಿರುವುದು. ಹೇಗೆ ಹುಡುಗ ಹುಡುಗ ಆತ್ಮೀಯ ಗೆಳೆಯರಾಗಿರಲು ಸಾಧ್ಯವೋ ಅದೇ ರೀತಿ ಹುಡುಗ ಹುಡುಗಿ ಕೂಡಾ ಅದೇ ಆತ್ಮೀಯತೆಯಲ್ಲಿರಲು ಸಾಧ್ಯ. ಸಮಾಜ ಈ ವಿಷಯದಲ್ಲಿ ಮುಂಚಿನಷ್ಟು ಮಡಿವಂತಿಕೆ ಇಟ್ಟುಕೊಂಡಿಲ್ಲವಾದರೂ ಪೂರ್ತಿ ಬದಲಾಗಿಯೂ ಇಲ್ಲ. ಅದರಲ್ಲೂ ಕಥಾ ಪಾತ್ರಗಳು ಶಿಕ್ಷಕರು, ಶಿಕ್ಷಣ ಕ್ಷೇತ್ರದಲ್ಲಿ ಈ ಸಂಪ್ರದಾಯಶೀಲತೆ ಚೂರು ಜಾಸ್ತಿಯೇ ಇದೆ. ಅದೇ ರೀತಿ ಎಲ್ಲವನ್ನು ಹಂಚಿಕೊಳ್ಳುವಷ್ಟು ಆತ್ಮೀಯತೆ ಬಂದರೂ ಸರ್ ಮೇಡಂ ಎಂದು ಕರೆದುಕೊಳ್ಳುವುದು ಸಾಮಾನ್ಯ. ಅದೇ ವಯಸ್ಸಿನ ಅಂತರ ಇದ್ದಾಗ ಪರಸ್ಪರ ಹೆಸರು ಹೇಳಿ ಕರೆದುಕೊಳ್ಳುವುದು ಅಪರೂಪವೇ. ಅವರ ಚಿಕ್ಕ ಹೆಜ್ಜೆಗಳನ್ನು ಸಮಾಜ, ವಿಶೇಷವಾಗಿ ಮಕ್ಕಳು ಗಮನಿಸುವ ಕಾರಣ, ಮಕ್ಕಳನ್ನು ತಿದ್ದುವ ಹೊಣೆಗಾರಿಕೆಯುಳ್ಳ ಸ್ಥಾನದಲ್ಲಿರುವ ಕಾರಣ ಹೊರಗಿನ ಸಮಾಜದಲ್ಲೂ ಹೆಚ್ಚಿನ ಶಿಸ್ತನ್ನು ಪಾಲಿಸಬೇಕಾದ ಕಾರಣ ಹೀಗಿರಬಹುದು. ವಿರುದ್ಧ ಲಿಂಗದ ಇಬ್ಬರು ಶಿಕ್ಷಕರ ನಡುವಣ ಆತ್ಮೀಯ ಗೆಳೆತನವನ್ನು ಈ ಕತೆ ತೋರಿಸುತ್ತದೆ. ಮೇಲೆ ಹೇಳಿದ ಎಲ್ಲಾ ಎಟಿಕೇಟ್‌ಗಳನ್ನು ಪಾತ್ರಗಳು ನಿರ್ವಹಿಸುವ ಪರಿಯನ್ನು ಬಹಳ ಸುಂದರವಾಗಿ ಹೇಳಿಕೊಟ್ಟಿದ್ದಾರೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರಿಗಿಂತ ಶಿಕ್ಷಕಿಯರೇ ಅಧಿಕ. ಅಲ್ಲಿನ ಶಿಕ್ಷಕರ ಪಾಡು ಜಾಸ್ತಿ ಕೆಲಸ ಕಮ್ಮಿ ಸಂಬಳ ಅನ್ನುವಂತದ್ದು. ಹೆಚ್ಚಿನ ಶಿಕ್ಷಕಿಯರು ತಮ್ಮ ಜೀವನದಲ್ಲಿ ರಾಜಿ ಮಾಡಿಕೊಂಡೋ ಇಲ್ಲಾ ಕನಸುಗಳನ್ನು ತ್ಯಾಗ ಮಾಡಿಕೊಂಡೋ ಇಲ್ಲಾ ಗಂಡನ ಕೆಲಸಕ್ಕೋಸ್ಕರ ಹೊಂದಾಣಿಕೆ ಮಾಡಿಕೊಂಡೇ ಬಂದಿರುತ್ತಾರೆ. ಅದೆಲ್ಲವನ್ನೂ ‘ತಾವೊಬ್ಬ ವಿಜ್ಞಾನಿ ಆಗಬೇಕಂತಿತ್ತು, ಅದಂತೂ ಸಾಧ್ಯವೇ ಇರಲಿಲ್ಲ. ಕೊನೆಗೂ ಜಿದ್ದಿಗೆ ಬಿದ್ದು ಈ ಶಾಲೆಗೆ ಬಂದದ್ದಾಯಿತು’ ಅನ್ನುವ ಎರಡೇ ವಾಕ್ಯದಲ್ಲಿ ಹೇಳಿಬಿಡುತ್ತಾರೆ. ಕತೆಯನ್ನು ಓದುವಾಗ ಈ ಸಾಲುಗಳು ಮತ್ತೆ ಮತ್ತೆ ಕಾಡಿದವು.
ಯಾಕೋ ಏನೋ ಈ ಹೊತ್ತಿಗೆ ಬಹಳ ಕಾಡಿತು. ಇದುವರೆಗೂ ಅವರ ಅಂಕಣ ಓದಿದ್ದರೂ ಕತೆಗಳ ಓದಿರಲಿಲ್ಲ. ಬಿಡಿ ಕತೆಗಳ ಓದುವ ಅವಕಾಶ ಸಿಕ್ಕಾಗಲೂ ನನ್ನ ಉದಾಸೀನತೆಯಿಂದಲೋ ಇಲ್ಲಾ ಬೇರ್ಯಾವ ಕಾರಣಕ್ಕೋ ಓದಲಾಗಲೇ ಇರಲಿಲ್ಲ. ಆದೊಂತರಾ ಒಳ್ಳೆಯದಾಯಿತು. ಎಲ್ಲವನ್ನೂ ಒಟ್ಟಿಗೆ ಓದುವ ಖುಷಿ ಸಿಕ್ಕಿತು. ಖಂಡಿತವಾಗಿಯೂ ಸಂಗ್ರಹಯೋಗ್ಯವಾದ ಪುಸ್ತಕ. ಪುಸ್ತಕದ ಬೆಲೆ ೧೨೦ ರೂಪಾಯಿಗಳು. ಕಾಫಿ ಡೇಯ ಕಾಫಿಗಿಂತಲೂ, ಶಾಂತಿಸಾಗರದ ವೆಜ್ ಬಿರಿಯಾನಿಗಿಂತಲೂ, ಒಂದು ಮಲ್ಟಿಪ್ಲೆಕ್ಸಿನ ಸಿನಿಮಾ ಟಿಕೇಟಿಗಿಂತಲೂ ಕಮ್ಮಿ ಬೆಲೆಯಲ್ಲಿ, ಒಂದು ಉತ್ತಮ ಓದಿನ ಖುಷಿ ನಿಮ್ಮದಾಗುತ್ತದೆ.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ನೀಲಕುರಿಂಜಿ ಪುಸ್ತಕ ಕೊಂಡು, ಓದುವ ಆಸೆ ಹೆಚ್ಚಿದೆ.🙏🙏