ಮನೆಯ ಮಂಚದ ಮೇಲೆ ಕಾಲು ಚಾಚಿ ಮಲಗಿಯೋ ಓದುತ್ತಿರುವಾಗ ತೇಜಸ್ವಿಯವರ ಮೂಡಿಗೆರೆ, ಚಿತ್ತಾಲರ ಹನೇಹಳ್ಳಿ, ಭೈರಪ್ಪರ ಚೆನ್ನರಾಯಪಟ್ಟಣ- ಮೈಸೂರು, ಕಾಯ್ಕಿಣಿಯವರ ಮುಂಬೈ-ಗೋಕರ್ಣ, ವಸುಧೇಂದ್ರರ ಬಳ್ಳಾರಿ- ಬೆಂಗಳೂರು… ಹೀಗೆ ಅವರ ಬೆರಳತುದಿಯ ಜಗತ್ತು ನಮ್ಮ ಪ್ರಪಂಚವಾದ ದಿನಗಳಿದ್ದವು. ಪುಸ್ತಕದ ಹಿಂಬದಿಯಲ್ಲಿ ಪ್ರಕಟವಾದ ಅವರ ಚಿತ್ರವೊಂದನ್ನು ಬಿಟ್ಟು ವೈಯಕ್ತಿಕ ಇಷ್ಟ- ಕಷ್ಟ, ನಿಲುವುಗಳ ಸುದ್ದಿಯೇ ತಿಳಿಯದ ಆನಂದಮಯ ಸ್ಥಿತಿ. ಮೆಣಸಿನಕಾಯಿ, ಕಡಲೆಕಾಯಿ ಕಟ್ಟಿಕೊಟ್ಟ ಪೊಟ್ಟಣವನ್ನೂ ಬಿಡದೆ ಓದುತ್ತಿದ್ದ, ದಾರಿಯುದ್ದಕ್ಕೂ ಕಾಣುವ ಅಂಗಡಿ- ಮುಂಗಟ್ಟುಗಳ, ಸಿನಿಮಾ ಪೋಸ್ಟರ್‌ಗಳ ಹೆಸರನ್ನೂ ಬಿಡದೆ ಓದುತ್ತಾ ಹೊತ್ತು ಕಳೆಯುತ್ತಿದ್ದ ಸಮಯ ಈಗ ಸೋಜಿಗವಾಗಿ ಕಾಣುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
ಈಗ ನಾಲ್ಕು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪಿಟೀಲುವಾದಕಿ, ಇಂಡೋ ಜಾಸ್ ಶೈಲಿಯ ಪ್ರಯೋಗಗಳಲ್ಲಿ ತೊಡಗಿಕೊಂಡು ಯಶಸ್ವಿಯಾದ ಕನ್ನಡತಿಯೊಂದಿಗೆ ಮಾತನಾಡುತ್ತಿದ್ದೆ. ದೇಶ- ವಿದೇಶಗಳ ಪ್ರತಿಷ್ಠಿತ ವೇದಿಕೆಗಳು, ಅಪೂರ್ವ ಕಲಾವಿದರು, ಹಣ, ಹೆಸರು, ಕೀರ್ತಿಯೆಲ್ಲವನ್ನೂ ಕಂಡಿದ್ದ ಅವರ ನಡೆಯಲ್ಲಿನ ಸರಳತೆ, ಸಹಜತೆಗೆ ಮತ್ತೆ ಮತ್ತೆ ಸೋಲುವ ಸರದಿ ನನ್ನದಾಗಿತ್ತು. ಹಿಂದೆ ವೇದಿಕೆ ಸಿಗುವುದೇ ಅದೃಷ್ಟವೆಂಬ ಕಾಲವಿತ್ತು. ಈಗ ನಾವೇ ವೇದಿಕೆ ಸೃಷ್ಟಿಮಾಡಿಕೊಳ್ಳಬಹುದಾದ ಕಾಲದಲ್ಲಿದ್ದೇವೆ. ಅಂದಿಗೂ ಇಂದಿಗೂ ಸಂಗೀತ ಕಲಿಕೆಯಲ್ಲಿ ಯಾವ ರೀತಿಯ ವ್ಯತ್ಯಾಸವಾಗಿದೆ? ಎಂದೇನೋ ಕೇಳಿದ ನೆನಪು. ಆದರೆ, ಅವರು ಕೊಟ್ಟ ಉತ್ತರ ಮಾತ್ರ ನೆನಪಿನಿಂದ ಮಸುಕಾಗುವಂತದ್ದಲ್ಲ.
ವೇದಿಕೆ ಇದೆ. ಅವಕಾಶವಿದೆ. ಪೋಷಕರು ಆರ್ಥಿಕವಾಗಿ ಸಬಲರಾಗಿದ್ದಾರೆ. ಮಕ್ಕಳು ಕಲಿಯುವ ಉತ್ಸಾಹ ತೋರುತ್ತಾರೆ. ಆದರೆ, ನಾವು ತಿಳಿಯಬೇಕಾದ ಸತ್ಯವೊಂದಿದೆ. ಐನೂರು ಜನ ಸಂಗೀತ ಕಲಿಯಲು ಸೇರಿದರೆ, ಅದರಲ್ಲಿ ಗುಂಪಿನಲ್ಲಿ ಎದ್ದು ತೋರುವಂತಹ ಪ್ರತಿಭೆ, ಪರಿಶ್ರಮ ಕಾಣುವುದು ಒಬ್ಬಿಬ್ಬರಲ್ಲಿ ಮಾತ್ರ. ಮಿಕ್ಕ ನಾನೂರ ತೊಂಭತ್ತೊಂಭತ್ತು ಜನರ ಶ್ರಮ ವ್ಯರ್ಥವೆಂದು ಎಣಿಸುವಂತಿಲ್ಲ. ಅವರು ಸಂಗೀತವನ್ನು ಆಸ್ವಾದಿಸುವ, ಆನಂದಿಸುವ ಸಂಸ್ಕಾರ ಪಡೆದುಕೊಂಡಿದ್ದರೆ ಸಾಕಲ್ಲವೇ? ಇದನ್ನು ಗುರುತಿಸದ ಪೋಷಕರು ಮಕ್ಕಳ ಮೇಲೆ ವಿಪರೀತ ನಿರೀಕ್ಷೆಯ ಹೊರೆ ಹೊರೆಸಿ ತಾವೂ ಬಸವಳಿದು, ಮಕ್ಕಳಲ್ಲಿನ ಸಹಜ ಖುಷಿ, ಆಸಕ್ತಿಯನ್ನು ಕೆಡಿಸುತ್ತಾರೆ. ಎಂದರು.
ಇದು ಸಂಗೀತವೊಂದಕ್ಕೇ, ಅಥವಾ ಮಕ್ಕಳಿಗೆ ಮಾತ್ರ ಅನ್ವಯವಾಗುವ ಮಾತು ಅನ್ನಿಸಲಿಲ್ಲ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಕಡೆಗೆ ಸಂಬಂಧಗಳಲ್ಲೂ ತಾನು ಮೊದಲಿಗನಾಗಬೇಕೆನ್ನುವ ಸ್ಪರ್ಧೆ ರಸಾಸ್ವಾದನೆಯ ಅನುಭವವನ್ನೇ ಇಲ್ಲವಾಗಿಸುತ್ತಿದೆ. ಬೇಸಿಗೆಯ ಹಗಲು ಅಂಗಳದ ಮಲ್ಲೆ ಚಪ್ಪರದ ಕೆಳಗೆ ಕುಳಿತೋ, ಹೊಂಗೆ ಮರದ ಟೊಂಗೆಗೆ ಕಟ್ಟಿದ ಜೋಕಾಲಿ ಜೀಕುತ್ತಲೋ, ಮನೆಯ ಮಂಚದ ಮೇಲೆ ಕಾಲು ಚಾಚಿ ಮಲಗಿಯೋ ಓದುತ್ತಿರುವಾಗ ತೇಜಸ್ವಿಯವರ ಮೂಡಿಗೆರೆ, ಚಿತ್ತಾಲರ ಹನೇಹಳ್ಳಿ, ಭೈರಪ್ಪರ ಚೆನ್ನರಾಯಪಟ್ಟಣ- ಮೈಸೂರು, ಕಾಯ್ಕಿಣಿಯವರ ಮುಂಬೈ-ಗೋಕರ್ಣ, ವಸುಧೇಂದ್ರರ ಬಳ್ಳಾರಿ- ಬೆಂಗಳೂರು… ಹೀಗೆ ಅವರ ಬೆರಳತುದಿಯ ಜಗತ್ತು ನಮ್ಮ ಪ್ರಪಂಚವಾದ ದಿನಗಳಿದ್ದವು. ಪುಸ್ತಕದ ಹಿಂಬದಿಯಲ್ಲಿ ಪ್ರಕಟವಾದ ಅವರ ಚಿತ್ರವೊಂದನ್ನು ಬಿಟ್ಟು ವೈಯಕ್ತಿಕ ಇಷ್ಟ- ಕಷ್ಟ, ನಿಲುವುಗಳ ಸುದ್ದಿಯೇ ತಿಳಿಯದ ಆನಂದಮಯ ಸ್ಥಿತಿ. ಮೆಣಸಿನಕಾಯಿ, ಕಡಲೆಕಾಯಿ ಕಟ್ಟಿಕೊಟ್ಟ ಪೊಟ್ಟಣವನ್ನೂ ಬಿಡದೆ ಓದುತ್ತಿದ್ದ, ದಾರಿಯುದ್ದಕ್ಕೂ ಕಾಣುವ ಅಂಗಡಿ- ಮುಂಗಟ್ಟುಗಳ, ಸಿನಿಮಾ ಪೋಸ್ಟರ್‌ಗಳ ಹೆಸರನ್ನೂ ಬಿಡದೆ ಓದುತ್ತಾ ಹೊತ್ತು ಕಳೆಯುತ್ತಿದ್ದ ಸಮಯ ಈಗ ಸೋಜಿಗವಾಗಿ ಕಾಣುತ್ತದೆ.
ಓದುಗ- ಲೇಖಕರ ನಡುವೆ ಏರ್ಪಟ್ಟ ಸಂಬಂಧ ಸಾಹಿತ್ಯದಾಚೆಯ ಕಾರಣಕ್ಕೂ ವಿಸ್ತರಿಸಿ ಬಹಳ ಕಾಲವಾಗಿದೆ. ಓದುಗರೆಲ್ಲರೂ ಲೇಖಕರಾಗಲು ಹೊರಟಿದ್ದಾಯಿತು. ಈಗ ವೇದಿಕೆಯ ಬರವಿಲ್ಲ. ಅವರು ಇವರನ್ನು ಹೊಗಳಿ, ಇವರು ಅವರನ್ನು ಅಟ್ಟಕ್ಕೇರಿಸಿ, ಪುಸ್ತಕಕ್ಕಿಂತ ಪ್ರಚಾರವೇ ಹೆಚ್ಚು ಸದ್ದು ಮಾಡತೊಡಗಿ, ಓದುಗ ಕಕ್ಕಾಬಿಕ್ಕಿ.
ಉದ್ಯೋಗ ರಂಗದಲ್ಲೂ ಈ ಮುಂಚೂಣಿಯಲ್ಲಿರಬೇಕಾದ ಒತ್ತಡ ಸೃಷ್ಟಿಸುವ ತೊಂದರೆಗಳು ಒಂದೆರಡಲ್ಲ. ಸಮಾನ ವಿದ್ಯೆ, ಹುದ್ದೆ, ಸ್ಥಾನಮಾನಗಳ ನಡುವಿನವರ ಪೈಪೋಟಿಯ ಭರದಲ್ಲಿ ನಲುಗುವ ವೈಯಕ್ತಿಕ ಜೀವನ, ಆರೋಗ್ಯದ ಕಥೆ ಗಮನಿಸಿದರೆ ನಮಗೇ ಅರಿವಿಗೆ ಬರುವ ಸಮಾಚಾರ. ಅತಿಯಾಸೆಯೂ ಸಣ್ಣ ವಯಸ್ಸಿಗೆ ಬರುವ ಹೃದಯದ ಖಾಯಿಲೆಗೆ ಒಂದು ಕಾರಣ ಎಂದರು ಹೃದಯತಜ್ಞರು. ಸದಾ ವ್ಯಾಯಾಮ, ಆರೋಗ್ಯಪೂರ್ಣ ಆಹಾರ, ಕ್ಯಾಲೋರಿ ಲೆಕ್ಕ ಎಂದು ದೇಹವನ್ನು ಜೋಪಾನ ಮಾಡುವುದೇ ಜೀವನದ ಪರಮೋದ್ದೇಶ ಎನ್ನುವವರ ಸಂಖ್ಯೆಯೂ ಹೆಚ್ಚಿದೆ. ಸತ್ತ ಮೇಲೆ ಆರೋಗ್ಯವಂತ ಮನುಷ್ಯನಾದರೂ ಅಷ್ಟೇ.. ರೋಗಿಷ್ಟನಾದರೂ ಅಷ್ಟೇ. ಮನೆಯಿಂದಾಚೆ ಹಾಕುವುದೇ. ಇರುವಷ್ಟು ದಿನ ನಿರ್ಭೀತರಾಗಿ ಬದುಕನ್ನು ಆಸ್ವಾದಿಸಿ ಎನ್ನುವವರೂ ಇದ್ದಾರೆ. ಇವೆರೆಡರ ಮಧ್ಯದ ಸಮತೋಲನ ಕಾಯ್ದುಕೊಳ್ಳುವುದಲ್ಲವೇ ಸವಾಲು?
ತನ್ನತನವನ್ನೇ ಮರೆತು ಎಲ್ಲರ ಮೂಗಿನ ನೇರಕ್ಕೂ ವರ್ತಿಸಿ, ಅಂತೂ ಎಲ್ಲರಿಂದ ಮೆಚ್ಚುಗೆ ಪಡೆಯಬೇಕೆನ್ನುವ ಹೌದಪ್ಪಗಳು, ಯಾವುದರಲ್ಲಾದರೂ ಹುಳುಕು ಹುಡುಕಿಯೇ ಸಿದ್ಧ ಎನ್ನುವ ಅತೃಪ್ತರು, ತಾನುಂಟು ಮೂರು ಲೋಕವುಂಟು ಎಂದು ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದ ಒಂಟೊಂಟಿ ದ್ವೀಪಗಳು, ಎಲ್ಲರೊಳಗಿದ್ದೂ ಎಲ್ಲರಂತಾಗದ ವಿಶೇಷ ವ್ಯಕ್ತಿಗಳು, ಹೆಸರಿಡಲಾಗದ, ಯಾವೊಂದು ವಿವರಣೆಗೂ ನಿಲುಕದವರು… ನಾವು ಯಾರಾಗಿದ್ದರೂ ರೇಸಿಗೆ ಬಿದ್ದವೆಂದರೆ ಸಣ್ಣಸಣ್ಣ ಖುಷಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಹಾಗೆಂದ ಮಾತ್ರಕ್ಕೆ ದೊಡ್ಡ ದೊಡ್ಡ ಆನಂದಗಳಿಗದು ರಹದಾರಿಯೇನಲ್ಲ.
ಇಷ್ಟೆಲ್ಲಾ ವಿಚಾರಗಳು ತಲೆಯೊಳಗೆ ಗಸ್ತು ತಿರುಗುವಾಗಲೇ, “ತೆಂಗಿನ ಚಿಪ್ಪಿಗೆ ಕಬ್ಬಿಣದ ತಂತಿ ಬಿಗಿದು ವಾದ್ಯ ನುಡಿಸುತ್ತಾನಲ್ಲಾ ಅದು ಸಂಗೀತವೇ. ಲಕ್ಷಾಂತರ ರುಪಾಯಿ ಬೆಲೆಬಾಳುವ ಪಿಟೀಲು ಹಿಡಿದು ದೊಡ್ಡ ದೊಡ್ಡ ವೇದಿಕೆಯಲ್ಲಿ ನುಡಿಸುತ್ತೇವಲ್ಲಾ ಅದೂ ಸಂಗೀತವೇ. ಸಂಗೀತ ಎಲ್ಲೆಲ್ಲಿಯೂ ಇದೆ. ಅದನ್ನು ಅನುಭವಿಸುವ ಹೃದಯವೊಂದಿದ್ದರೆ ಸಾಕು.” ಎಂದರವರು. ಅವತ್ತಿನ ಮಟ್ಟಿಗೆ ಅದು ಹೃದಯ ಗೆದ್ದ ಮಾತು.
ನಾನು ಮೆಚ್ಚಿದ ಸಂಗೀತ, ಸಾಹಿತ್ಯ, ವ್ಯಕ್ತಿ, ವಸ್ತು ಮಾತ್ರ ಶ್ರೇಷ್ಠ. ಮಿಕ್ಕೆಲ್ಲವೂ ಗೌಣ ಎನ್ನುವ ಮನಃಸ್ಥಿತಿಯೇ ನಮ್ಮ ಶತ್ರು. ಖ್ಯಾತಿಗೂ ಮೌಲ್ಯಕ್ಕೂ, ಅಂತಸ್ತಿಗೂ ಅಂತರ್ಯಕ್ಕೂ, ಸ್ವಾತಂತ್ರ್ಯಕ್ಕೂ ಸ್ವಚ್ಛಂದಕ್ಕೂ, ಅಗತ್ಯಕ್ಕೂ ಐಷಾರಾಮಕ್ಕೂ ನಾವೇ ಕಲ್ಪಿಸಿದ ಸಂಬಂಧದ ಹೊರತಾಗಿಯೂ ಮತ್ತೊಂದು ದೃಷ್ಟಿಯಿರಬಹುದು ಎಂದು ಒಪ್ಪುವ ಪ್ರಬುದ್ಧತೆ ನಮ್ಮ ಇಂದಿನ ಅವಶ್ಯಕತೆ. ಒಳ್ಳೆಯ ಕವಿ, ಕಲಾವಿದ, ರಸಿಕರಿಗಿಂತಾ ಸಹೃದಯಿ ಮನುಷ್ಯರ ಅಗತ್ಯ ಈ ಪ್ರಪಂಚಕ್ಕಿದೆ. ಏನೆಲ್ಲಾ ವಶೀಲಿ, ಪೈಪೋಟಿ, ಸ್ಪರ್ಧೆಗಳ ಮಧ್ಯೆಯೂ ನಮ್ಮೊಳಗಿನ ಮುಗ್ಧ ಮಗುವನ್ನು, ಅದರ ನಗುವನ್ನು ಉಳಿಸಿಕೊಳ್ಳೋಣ. ಪ್ರತಿಯೊಬ್ಬರೂ ಜನ ಮುಗಿಬೀಳುವಂತಹ ಸಾಧನೆ ಮಾಡಬೇಕಿಲ್ಲ. ಸಾಮಾನ್ಯ ಜೀವನದಲ್ಲಿ ಸೊಗಸಿದೆ. ಈ ಬದುಕಿಗೆ ಅದರದ್ದೇ ಘನತೆಯಿದೆ ಎನ್ನುವುದನ್ನು ಮರೆಯದಿರೋಣ.
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
Wow. ಮತ್ತೊಂದು ಅದ್ಭುತ ಲೇಖನ 💐. ಸಾಧನೆ ಎನ್ನುವುದರ ಪರಿಮಾಣ, ವೈಯಕ್ತಿಕ. ನಾಲ್ಕು ಜನ ಮೆಚ್ಚುವುದೂ ಸಾಧನೆಯೇ, ನಮಗಷ್ಟೇ ಮೀಸಲಿಟ್ಟುಕೊಂಡ ಆತ್ಮತೃಪ್ತಿಯ ಅನುಭೂತಿಯೂ ಸಾಧನೆಯೇ 👍. ನಿಜ, ಕಲಾರಸಿಕರಿಗಿಂತಲೂ ಅಂತಃಕರಣದಿಂದ ಮಿಡಿವ ಮಾನವೀಯ ಮನಸ್ಸುಗಳ ಕೊರತೆ ಬಹಳವಾಗಿದೆ ಇಂದು.
ಬಹಳ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಲೇಖನ. ತಮ್ಮ ಅನಿಸಿಕೆಗಳನ್ನು ಸೊಗಸಾಗಿ ಬಿಚ್ಚಿಟ್ಟಿದ್ದೀರ. ಧನ್ಯವಾದಗಳು 🙏🏻🙏🏻🙏🏻🙏🏻 ಶ್ರೀಧರ್ ಸೀ ಆರ್
ವಿಶಿಷ್ಟಗಳೆಲ್ಲವೂ ವೈಶಿಷ್ಟ್ಯ ಉಳ್ಳವರ ಸ್ವತ್ತಾಗಿಯೇ ಉಳಿದರು ಕೂಡ… ಸಾಮಾನ್ಯರಾಗಿ ಬದುಕುವುದರಲ್ಲಿರುವ ಮುದುವನ್ನ ಬೇಸಿಗೆಯ ಚಪ್ಪರದಡಿಯಲ್ಲಿ, ಉಯ್ಯಾಲೆಯ ಜೀಕಿನ ಶಬ್ದದಲ್ಲಿ, ತೆಂಗಿನ ಚಿಪ್ಪಿನ ತಂತಿ ವಾದ್ಯದಲ್ಲಿ ಹುಡುಕಿ ಕೊಡುವ ಮನಸ್ಸಿಗೆ ಮುಟ್ಟುವ ಲೇಖನ ತುಂಬಾ ಇಷ್ಟ ಆಯ್ತು ನಿಮ್ಮ ಬದುಕು ಬರಹ ಎಲ್ಲವೂ…