ಮುಂದೆ ಈ ಕುದುರೆ ಗಾಡಿ ಯಾ ಜಟಕಾ ಗಾಡಿ ಪ್ರಸಂಗ ಸಾವಿರಾರು ಸಲ ರಿಪೀಟ್ ಆದವು. ಆಗ ರಾಮಚಂದ್ರಪುರದ ಬಳಿ ಬರುತ್ತಿದ್ದಂತೆ ದೊಡ್ಡ ಇಳಿಜಾರು ಶುರು ಆಗಿ ಸುಮಾರು ನೂರಾ ಐವತ್ತು ಅಡಿ ಆಳಕ್ಕೆ ರಸ್ತೆ ಸರಿದು ನಂತರ ಏರು ಗತಿಯಲ್ಲಿ ಇದು ಮುನ್ನೂರು ಗಜ ದಾಟಿ ರಾಜಾಜಿನಗರ ಎಂಟ್ರೆನ್ಸ್ ತಲುಪುತಿತ್ತು. ಅಂದರೆ ಇಂಗ್ಲಿಷ್ ವಿ ಆಕಾರದಲ್ಲಿ ಈ ರಸ್ತೆ ಇದ್ದು ಈಗಿನ ಸುಜಾತಾ ಟಾಕೀಸ್ ಬಳಿ ಅದು ‘ವಿ’ಯ ತಳ ಮುಟ್ಟುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ ಹೊಸ ಸರಣಿ “ಹಳೆ ಬೆಂಗಳೂರ ಕಥೆಗಳು” ಇನ್ನು ಹದಿನೈದು ದಿನಗಳಿಗೊಮ್ಮೆ, ಶುಕ್ರವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.
ರಾಜಾಜಿನಗರ ನಮ್ಮ ರಾಜಾಜಿನಗರ…
ನಾವು ಮೊದಲು ರಾಜಾಜಿ ನಗರ ಸೇರಿದ್ದು ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ (ಈಗ ಇದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಶನ್ ಎಂದು ಬದಲಾಗಿದೆ)ತುಮಕೂರಿನಿಂದ ಬೆಂಗಳೂರಿಗೆ ವಲಸೆ ಬರಬೇಕಾದರೆ ರೈಲು ಹಿಡಿದು ಹೋಗೋದು ತುಂಬಾ ಅನುಕೂಲದ್ದು ಅಂತ ಅಪ್ಪ ಅನುಭವದಿಂದ ಅರಿತಿದ್ದ. ಹಾಗಾಗಿ ಒಂದೆರಡು ಗೋಣಿ ಚೀಲದಲ್ಲಿ, ಎರಡು ಮೂರು ಪುಟ್ಟ ಪುಟ್ಟ ಚೀಲಗಳಲ್ಲಿ ಸಾಮಾನು ತುಂಬಿಸಿಕೊಂಡು ರೈಲು ಹತ್ತಿದೆವು. ಈಗಿನ ಹಾಗೆ ಮೊದಲೇ ರಿಸರ್ವ್ ಮಾಡಬೇಕಿರಲಿಲ್ಲ ಹಾಗೂ ಬೇಕಾದಷ್ಟು ಜಾಗ ಇತ್ತು ರೈಲಿನಲ್ಲಿ. ರೈಲು ಪ್ರಯಾಣ ಸುಮಾರು ಹೊತ್ತು ಹಿಡಿಯಿತು, ನಾಲ್ಕೈದು ಗಂಟೆ ಇರಬಹುದು. ರೈಲು ಡಬ್ಬಿಗೆ ಬಂದ ಎಲ್ಲಾ ತಿನಿಸುಗಳನ್ನು ಅಪ್ಪ ಕೊಳ್ಳುತ್ತಿದ್ದ ಮತ್ತು ನಮಗೆ ಕೊಡುತ್ತಿದ್ದ.. ಸೊಪ್ಪಿನ ಕಡ್ಲೆ, ಕಡ್ಲೆಕಾಯಿ, ಇಡ್ಲಿ ವಡೆ ದೋಸೆ, ಈರುಳ್ಳಿ ಪಕೋಡ, ಮದ್ದೂರುವಡೆ, ಕಾರಾಸೇವಿನ ಪುರಿ…. ಇನ್ನೂ ಏನೇನೋ ಅಪ್ಪ ಕೊಡಿಸಿದ್ದು, ನಾವೂ ತಿಂದದ್ದು. ಮಿಕ್ಕಿದ್ದು ನೆನಪಿಗೆ ಬರ್ತಿಲ್ಲ, ಹೆಚ್ಚು ಕಡಿಮೆ ಏಳು ದಶಕ ಆಯಿತು ನೋಡಿ.. ಮೊದಮೊದಲು ಸುಮ್ಮನಿದ್ದ ಅಮ್ಮ, ಆಮೇಲೆ “ಮಕ್ಳಮೈಗೆ ಆಗಬೇಕೋ ಬೇಡವೋ ಯಾಕೆ ಹೀಗೆ ಕೊಡಿಸ್ತಿರಾ” ಅಂತ ರೇಗಿದಳು . ಪಾಪ ತಿನ್ಲಿ ಅವು, ದಿನಾ ಬರ್ತವೇನು.. ಅಂತ ಕೇಮೆ ಮಾಡದೇ ಕೊಡಿಸಿದ.
ಬೆಂಗಳೂರು ರೈಲು ಸ್ಟೇಶನ್ ಬಂತು.. ಸ್ಟೇಶನ್ ಆಚೆ ಬಂದರೆ ಉದ್ದಕ್ಕೂ ತಾರು ಹಾಕಿದ ಕಡು ಕಪ್ಪಿನ ರಸ್ತೆ. ರಸ್ತೆಯ ಎರಡೂ ಕಡೆ ಇಬ್ಬಿಬ್ಬರು, ಮೂರು ಮೂರು ಜನ ತಬ್ಬಿ ಹಿಡಿಯಬೇಕಾದ ದಪ್ಪನೆ ಕಾಂಡದ ಮರಗಳು. ಎತ್ತರಕ್ಕೆ ಬೆಳೆದು ಸುತ್ತಲೂ ಹರಡಿ ಹಬ್ಬಿರುವ ಅದರ ರೆಂಬೆಗಳು ಮತ್ತು ಈ ರೆಂಬೆಯ ಸಂದಿನಿಂದ ಬಿಸಿಲು ಬರುತ್ತಾ ಇದ್ದರೂ ತಂಪಾದ ನೆರಳು. ಎಷ್ಟು ತಂಪು ಅಂದರೆ ಯಾರಿಗಾದರೂ ಅಲ್ಲೇ ಒಂದು ಚಾಪೆ ಹಾಸಿ ಮಲಗಿ ಬಿಡೋಣ ಅನ್ನುವ ಆಸೆ ಹುಟ್ಟಿಸುವಷ್ಟು. ಎಷ್ಟೋ ದಿವಸದ ನಂತರ ಈ ಆಸೆ ತೀರಿಸಿಕೊಂಡ ನೆನಪು ಇನ್ನೂ ಹಸಿರು ಹಸಿರು. ಚಾಪೆ ಹಾಸಿ ಅಲ್ಲ, ಅಲ್ಲೇ ಕಲ್ಲು ಬೆಂಚಿನ ಮೇಲೆ ಎರಡು ತಾಸು ಮಲಗಿ ಆಸೆ ತೀರಿಸಿಕೊಂಡೆ.
ಈ ಪರಿಸರ ರೈಲ್ವೆ ಸ್ಟೇಶನ್‌ನ ಈಗಿನ ಹೊಸಾ ಕಟ್ಟಡ ಬಂದಾಗ ಕಣ್ಮರೆ ಆಯಿತು. ಮತ್ತೆ ಅಲ್ಲಿ ಅಂತಹ ಪರಿಸರ ನಾನು ಕಾಣಲೇ ಇಲ್ಲ. ಈಗ ಉರಿ ಬಿಸಿಲು ಮಧ್ಯಾಹ್ನ ಆದರೆ, ನಡುಗೋ ಚಳಿ ಬೆಳಿಗ್ಗೆ. ಜತೆಗೆ ದುರ್ವಾಸನೆ.
ರಸ್ತೆಯ ಉದ್ದಕ್ಕೂ ಜಟಕಾ ಗಾಡಿಗಳು, ಅದರ ಚಾಲಕರು, ಬಂದು ಮುತ್ತಿಕೊಂಡರು. ಎರಡು ರೂಪಾಯಿ ಬಾಡಿಗೆ ಅಂತ ಶುರು ಆದ ಮಾತು ಒಬ್ಬ ಜಟಕಾ ಸಾಬ್ ಹತ್ತಿರ ಅಪ್ಪ ವಾಗ್ವಾದ ಮಾಡಿ ಮಾಡಿ ಹದಿನಾಲ್ಕು ಆಣೆಗೆ ಒಪ್ಪಿಸಿದ. ಅಂದರೆ ಚೌಕಾಸಿ ಅಷ್ಟು ಚೆನ್ನಾಗಿ ಮಾಡಿದ್ದ ಮತ್ತು ಹೇರಳವಾಗಿ ತನಗೆ ಬಾರದ ಹಿಂದಿ ಮತ್ತು ಉರ್ದು ಭಾಷೆ ಮಾತಾಡಿ ನಮಗೆ ಅಚ್ಚರಿ ಮೂಡಿಸಿದ್ದ. ಆಗ ಒಂದೇ ಒಂದು ರಿಕ್ಷಾ ಅಥವಾ ಕಾರು ಕಾಣಿಸಿರಲಿಲ್ಲ ಅಂತ ಈಚೆಗೆ ನೆನಪಿಗೆ ಬಂತು. ಆಗಿನ್ನೂ ರಿಕ್ಷಾ ಹುಟ್ಟಿರಲಿಲ್ಲ ಮತ್ತು ಕಾರು ಅಂದರೂ ತುಂಬಾ ವಿರಳವಾಗಿದ್ದು ಬರೀ ಉಳ್ಳವರು ಅದನ್ನು ಇಟ್ಟುಕೊಂಡಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಜನಕ್ಕೆ ಅದರ ಅಗತ್ಯ ಅಷ್ಟು ಕಂಡಿರಲಿಲ್ಲ. ಟ್ಯಾಕ್ಸಿ ಸಹ ಆಗ ತಾನೇ ಗರ್ಭದಲ್ಲಿತ್ತು.
ಗೋಣಿ ಚೀಲ ಜಟಕಾ ಮೇಲೆ ಕಟ್ಟಿ ಆಯ್ತು. ಅಪ್ಪ ಅಮ್ಮ ನಾವು ನಾಲ್ಕು ಜನ. ಗಾಡಿ ಹತ್ತಿದೆವು.. ಅದು ಹೇಗೋ ತುರುಕಿಕೊಂಡೆವು… ಜಟಕಾ ಸಾಬು, ಹೋಗ್ತಾ ಹೋಗ್ತಾ ಇನ್ನೂ ಮೇಲೆ ಮೇಲೆ ಬನ್ನಿ ಮೇಲೆ ಬನ್ನಿ ಅಂತ ನಮ್ಮನ್ನ ಮೂಕಿ ಮೇಲೆ ಕೂಡಿಸಿ ಚಲ್ ಬೇಟಾ ಚಲ್ ಅಂತ ಗಾಡಿ ಚಕ್ರಕ್ಕೆ ಕೋಲು ಅಂದರೆ ಚಾವಟಿ ಹಿಂಭಾಗ ಕೊಟ್ಟು ಟರ್ ಟ್ಟರ್ಟರ್ಟರ್ಟರ್ ಅಂತ ಶಬ್ದ ಮಾಡಿಕೊಂಡು ಓಡಿಸ್ತಾ ಇದ್ದ. ಅಪ್ಪ ಅವನನ್ನ ಗರ್ ಕಾಹ, ಕಿತ್ನ ಬಚ್ಚೆ, ಪಡ್ತೆ ಹೈ.., ಮೊದಲಾದ ಪ್ರಶ್ನೆ ಅರೆ ಬರೆ ಹಿಂದಿ ಉರ್ದುನಲ್ಲಿ ಕೇಳಿ ತಿಳಿದು ಕೊಳ್ತಾ ಇದ್ದ. ಗಾಡಿಯಲ್ಲಿ ನಾನು ಎರಡು ಬದಿ ಮಧ್ಯೆ ಸಿಕ್ಕಿ ಅಡಕಿಕೊಂಡಿದ್ದೆ. ಅಕ್ಕ ಪಕ್ಕ ಏನೂ ಕಾಣದು. ಬದಲಿಗೆ ಮುಂದೆ ಕೂತವರ ಸಂದಿಯಲ್ಲಿ ಕಾಣುತ್ತಿದ್ದ ರಸ್ತೆ ಅಕ್ಕಪಕ್ಕದ ಅಂಗಡಿಗಳು, ಅದರ ಮಧ್ಯೆ ಮನೆಗಳು ವೇಗವಾಗಿ ಹೋಗುತ್ತಿದ್ದ ಕೆಂಪು ಬಸ್ಸುಗಳು, ಅವುಗಳ ಸಂದಿಯಲ್ಲಿ ಸೈಕಲ್ಲು ಸವಾರರು… ಇವನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಗಾಡಿ ಕೆಳ ಮುಖವಾಗಿ ಹೋಗುತ್ತಿದೆ ಅಂತ ಮುಂದು ಮುಂದಕ್ಕೆ ಜಾರುವ ಅನುಭವದಿಂದ ತಿಳಿತಿತ್ತು…
ಹಾಗೆ ಹೋಗುವಾಗ ಇದ್ದಕ್ಕಿದ್ದ ಹಾಗೆ ಗಾಡಿ ನಿಂತಿತು. ಸಾಬು ಗಾಡಿಯಿಂದ ಕೆಳಗೆ ಇಳಿದ. ಕುದುರೆಗೆ ಸವಿ ಮಾತಿನಲ್ಲಿ ಚಲ್ ಬೇಟೆ ಅಂತ ಬೆನ್ನು ಚಪ್ಪರಿಸಿದ. ಕುದುರೆ ಮಿಸುಕಲೆ ಇಲ್ಲ. ಒಂದೆರೆಡು ಬಾರಿ ಚಲ್ ಬೇಟೆ ಚಲ್ ಬೇಟೆ ಚಲ್ ಬೇಟೆ.. ಅಂದ. ಆದರೂ ಕುದುರೆ ಮಿಸುಕಲೆ ಇಲ್ಲ. ಸಾಬುಗೆ ಕೋಪ ಹತ್ತಿತು. ಚಲ್ರೆ ಮಾದಿರ್ ಚೋಡ್ ಅಂತ ಚಾವಟಿಯಿಂದ ರಪ ರಪಾ ಬಾರಿಸಿದ.
ಚುಪ್ ರಹೋ ಸಾಬು ಮತ್ ಮಾರೋ ವೋ ಪ್ರಾಣಿ ಹೈನಾ, ಉಸ್ಕೋ ಕ್ಯಾ ತಿಳೀತಾ ಹೈ… ಅಂತ ಅಪ್ಪ ಸಾಬು ಕುದುರೆಗೆ ಹೊಡೆಯುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದ. ಕುದುರೆ ಒಂದೇ ಒಂದು ಅಂಗುಲ ಕದಲದೆ ಮುಷ್ಕರ ಹೂಡಿತ್ತು.
ಹಾಳಾದೋನು ಕುದುರೆನ ಸಾಯಿಸಿಬಿಡ್ತಾನೆ, ಮುಂಡೆ ಮಗ, ಕುದುರೆ ಸಾಯಿಸಿದ ಪಾಪ ನಮಗೆ ತಟ್ಟುತ್ತೆ… ಅಂತ ಅಮ್ಮ ನಮ್ಮನ್ನ ಕೆಳಗೆ ಗಾಡಿಯ ಮುಂದಿನಿಂದಲೆ ಇಳಿಸಿದಳು. ಹಿಂದಿನಿಂದ ಇಳಿದರೆ ಮೂಕಿ ಎತ್ತೀತು ಅಂತ ಅವಳ ಭಯ. ಅವಳ ಹಳ್ಳಿಯಲ್ಲಿ ಈ ರೀತಿ ಮೂಕಿ ಎತ್ತಿ ಸುಮಾರು ಸಲ ಪೆಟ್ಟು ತಿಂದ ಅನುಭವ ಅಮ್ಮನಿಗೆ. ಮೂಕಿ ಅಂದರೆ ಗಾಡಿಯ ಎರಡೂ ಬದಿಯಿಂದ ಮುಂದಕ್ಕೆ ಕುದುರೆ ಕಟ್ಟಲು ಬಿಟ್ಟಿರುವ ಮರದ ವಸ್ತು. ಅವು ನೇರವಾಗಿ ಚಕ್ರಕ್ಕೆ ಸಂಪರ್ಕ ಹೊಂದಿರುತ್ತದೆ. ಚಕ್ರ ಹಾಗೂ ಕುದುರೆ ಸಮತಟ್ಟು ಇದ್ದಾಗ ಒಳಗೆ ಕೂತವರು ಸರಾಗ ಪ್ರಯಾಣಿಸಬಹುದು. ತೂಕ ಏರು ಪೇರು ಆದರೆ ಮೂಕಿ ಹಿಂದಕ್ಕೂ ಮುಂದಕ್ಕೂ ಬೀಳುವ ಸಾಧ್ಯತೆ ಇದೆ.
ಸ್ಟೇಶನ್ ಆಚೆ ಬಂದರೆ ಉದ್ದಕ್ಕೂ ತಾರು ಹಾಕಿದ ಕಡು ಕಪ್ಪಿನ ರಸ್ತೆ. ರಸ್ತೆಯ ಎರಡೂ ಕಡೆ ಇಬ್ಬಿಬ್ಬರು, ಮೂರು ಮೂರು ಜನ ತಬ್ಬಿ ಹಿಡಿಯಬೇಕಾದ ದಪ್ಪನೆ ಕಾಂಡದ ಮರಗಳು. ಎತ್ತರಕ್ಕೆ ಬೆಳೆದು ಸುತ್ತಲೂ ಹರಡಿ ಹಬ್ಬಿರುವ ಅದರ ರೆಂಬೆಗಳು ಮತ್ತು ಈ ರೆಂಬೆಯ ಸಂದಿನಿಂದ ಬಿಸಿಲು ಬರುತ್ತಾ ಇದ್ದರೂ ತಂಪಾದ ನೆರಳು. ಎಷ್ಟು ತಂಪು ಅಂದರೆ ಯಾರಿಗಾದರೂ ಅಲ್ಲೇ ಒಂದು ಚಾಪೆ ಹಾಸಿ ಮಲಗಿ ಬಿಡೋಣ ಅನ್ನುವ ಆಸೆ ಹುಟ್ಟಿಸುವಷ್ಟು.
ಅದು ರಾಮಚಂದ್ರಪುರ. ಅಲ್ಲಿ ವೃಷಭಾವತಿ ನದಿ ಇಡೀ ಊರಿನ ಕಲ್ಮಷ ಹೊತ್ತು ಸಾಗುತ್ತಿತ್ತು. ಮುಂದೆ ಅದು ಕೆಂಗೇರಿ ಸೇರುತ್ತಿತ್ತು. ನಗರ ಬೆಳೆದಂತೆ ಈ ಕಾಲುವೆ ಮುಚ್ಚಿದರು ಮತ್ತು ಇಡೀ ಏರಿಯಾ ಮನೆಗಳಿಂದ ತುಂಬಿಹೋಯಿತು.
ರಸ್ತೆ ತುಂಬಾ ಅಪ್ಪು (ಏರು) ಇದಾವೆ ನೋಡಿ ಸಾಮಿ, ಅದ್ಕೇ ಈ ಹೈವಾನ್ ಹತ್ತುತ್ತಾ ಇಲ್ಲ ಅಂತ ಸಾಬು ಕುದುರೆಗೆ ಹೊಡೆಯೋದು, ಅಪ್ಪ ಮತ್ ಮಾರೋ ವೋ ಮನುಸ್ ನೈ ಹೈನ ಉಸ್ಕೊ ತಿಳೀತಾ ನೈ ನಾ ಅಂತ ಅವನನ್ನ ತಡೆಯೋದು ನಡೀತು. ಕೊನೆಗೆ ಸಂಧಾನ ಮಾಡಿದ ಹಾಗೆ ಕುದುರೆಗೆ ಬಾರಿಸೋದು ನಿಲ್ಲಿಸಿದ ಹಾಗೂ ಮೇಲಿಂದ ಮೂಟೆ ಇಳಿಸಿದ.
ಮಾತಾಡಿದ ಹಾಗೆ ಹದಿನಾಲ್ಕು ಆಣೆ ಕೊಡಿ ಅಂತ ಸಾಬು, ನೀನು ಪೂರ್ತಿ ಕರ್ಕೊಂಡು ಹೋಗಿಲ್ಲ ಎಂಟಾಣೆ ಕೊಡ್ತೀನಿ ಅಷ್ಟೇ ಅಂತ ಅಪ್ಪ.. ಅರ್ಧ ಗಂಟೆ ಈ ಚೌಕಾಸಿ ಆದಮೇಲೆ ಹನ್ನೆರೆಡು ಆಣೆ ಕೊಟ್ಟು ಅಲ್ಲಿಂದ ನಡಕೊಂಡು ಮನೆಗೆ ಹೊರಟೆವು. ಅಪ್ಪ ತಲೆ ಮೇಲೆ ಒಂದು ಬ್ಯಾಗು ಹೊತ್ತಿದ್ದ. ಅದರ ಮೇಲೆ ಎಡಗೈ. ಬಲಗೈಯಲ್ಲಿ ಮೂಟೆಯ ಒಂದು ತುದಿ, ಇನ್ನೊಂದು ತುದಿ ಅಮ್ಮ, ಅಣ್ಣ, ಅಕ್ಕ ಆಗಾಗ ಬದಲಾಯಿಸಿ ಹಿಡಿದುಕೊಳ್ಳುತ್ತಾ ಇದ್ದರು. ನಾವು ಕೊನೆಯವರಿಬ್ಬರೂ ಕೈಯಲ್ಲಿ ಅಷ್ಟು ಭಾರ ಇಲ್ಲದ ಚೀಲ ಹಿಡಿದು ಹಿಂದೆ ಬಂದೆವು. ಮಧ್ಯಾಹ್ನ ನಾಲ್ಕರ ಸುಮಾರಿಗೆ ಉರಿ ಬಿಸಿಲಲ್ಲಿ ನಮ್ಮ ನಗರ ಪ್ರವೇಶ ಹೀಗಾಯಿತು. ಆಗ ತಾನೇ ಹುಟ್ಟಿದ್ದ ಬಡಾವಣೆ ಆದ್ದರಿಂದ ಯಾರೂ ಮರ ನೆಟ್ಟಿರಲಿಲ್ಲ. ಅಲ್ಲಿಂದ ಒಂದು ಒಂದೂವರೆ ಮೈಲು ನಡೆದು hmt ಕ್ವಾರ್ಟರ್ಸ್ ಸೇರಿಕೊಂಡೆವು. ನಾವು ನಾಲ್ಕು ಬ್ರಹ್ಮಚಾರಿ ಗಂಡು ಕೂಸುಗಳು ಎಲ್ಲರೂ ಮುಂದೆ ಸುಮಾರು ವರ್ಷ ನಾವು ಬೆಳೆದದ್ದು, ನಮ್ಮ ಜೀವನ ಕಟ್ಟಿಕೊಂಡಿದ್ದು, ಮದುವೆ, ಮಕ್ಕಳು… ಎಲ್ಲವೂ ಈ ಮನೆ ಹಾಗೂ ಪರಿಸರದಲ್ಲಿ. ಹಾಗೂ ವಿಧವೆಯಾಗಿದ್ದ ನಮ್ಮ ಅಕ್ಕ ಇಲ್ಲೇ ಮುಂದೆ ಓದಿ ಸ್ಕೂಲು ಮೇಡಂ ಆಗಿದ್ದು, ಮನೆಗಿನೆ ಮಾಡಿದ್ದು ಎಲ್ಲವೂ ಇಲ್ಲೇ. ನಾಲ್ಕು ದಶಕಗಳ ನಂತರ ಆ ಮನೆ ಮಾರಿದ್ದೆಲ್ಲ ಅದು ಇನ್ನೊಂದು ಕತೆ. ಕಳೆದ ವರ್ಷ ತೊಂಬತ್ತ ಎರಡರ ವಯಸ್ಸಿನಲ್ಲಿ ನಮ್ಮ ಅಕ್ಕ ಸತ್ತಾಗ ಸಹ ಈ ಮನೆಯ ನೆನಪು ಅವಳಿಗಿತ್ತು.
ಮುಂದೆ ಈ ಕುದುರೆ ಗಾಡಿ ಯಾ ಜಟಕಾ ಗಾಡಿ ಪ್ರಸಂಗ ಸಾವಿರಾರು ಸಲ ರಿಪೀಟ್ ಆದವು. ಆಗ ರಾಮಚಂದ್ರಪುರದ ಬಳಿ ಬರುತ್ತಿದ್ದಂತೆ ದೊಡ್ಡ ಇಳಿಜಾರು ಶುರು ಆಗಿ ಸುಮಾರು ನೂರಾ ಐವತ್ತು ಅಡಿ ಆಳಕ್ಕೆ ರಸ್ತೆ ಸರಿದು ನಂತರ ಏರು ಗತಿಯಲ್ಲಿ ಇದು ಮುನ್ನೂರು ಗಜ ದಾಟಿ ರಾಜಾಜಿನಗರ ಎಂಟ್ರೆನ್ಸ್ ತಲುಪುತಿತ್ತು. ಅಂದರೆ ಇಂಗ್ಲಿಷ್ ವಿ ಆಕಾರದಲ್ಲಿ ಈ ರಸ್ತೆ ಇದ್ದು ಈಗಿನ ಸುಜಾತಾ ಟಾಕೀಸ್ ಬಳಿ ಅದು ‘ವಿ’ಯ ತಳ ಮುಟ್ಟುತ್ತಿತ್ತು. ಆಗ ಇನ್ನೂ ಎಂಬತ್ತು ಅಡಿ ರಸ್ತೆ ಇರಲಿಲ್ಲ ಮತ್ತು ಆಗತಾನೇ ಮನೆಗಳು ಬರುತ್ತಾ ಇದ್ದದ್ದರಿಂದ ಮರ ಗಿಡವಿಲ್ಲದ ಧೂಳು ತುಂಬಿದ ಪರಿಸರ ಇತ್ತು. ಸುಮಾರು ಹದಿನೈದು ವರ್ಷಗಳ ನಂತರ ಈ ಹಳ್ಳ ಮುಚ್ಚಿ ರಸ್ತೆ ಎತ್ತರ ಮಾಡಲಾಯಿತು. ತದನಂತರ ಅಲ್ಲಿ ಸಬ್ ವೇ, ಓವರ್ ಲೈನ್ ಬಂತು. ಈ ವರ್ಷ ಲುಲು ಮಾಲಿ ಗೆ ಅನುಕೂಲ ಮಾಡಿಕೊಡಲು ಒಂದು ಫ್ಲೈ ಓವರ್ ನಿರ್ಮಾಣ ಮಾಡಿದ್ದಾರೆ ಅಂತ ವಿರೋಧ ಗುಂಪಿನವರು ಸದ್ದು ಮಾಡ್ತಾ ಇದ್ದಾರೆ.
ರಾಜಾಜಿನಗರದ ಉದ್ಘಾಟನೆ ಆದ ಸಮಯದಲ್ಲಿ ನೆಟ್ಟ ಒಂದು ಕಲ್ಲು ಈಗಲೂ ಸೋಪ್ ಫ್ಯಾಕ್ಟರಿ ಮುಂದಿನ ಸರ್ಕಲ್‌ನಲ್ಲಿದೆ. ಅದರ ಪ್ರಕಾರ ರಾಜಾಜಿನಗರದ ಉದ್ಘಾಟನೆ ಆಗಿದ್ದು ಜುಲೈ 3, 1949. ಮೈಸೂರು ಮಹಾರಾಜ ಶ್ರೀ ಜಯಚಾಮ ರಾಜೇಂದ್ರ ವೊಡೆಯರ್ ಅವರು ಶ್ರೀ ರಾಜಗೋಪಾಲಾಚಾರಿ ಅವರ ಎಪ್ಪತ್ತನೆಯ ಹುಟ್ಟಿದ ಹಬ್ಬದ ಅಂಗವಾಗಿ ಈ ನಾಮಕರಣ ಮಾಡಿದರು. ಈ ಬಡಾವಣೆ ನಿರ್ಮಾಣಕ್ಕೆ 1000ಎಕರೆ ಜಮೀನು ನೀಡಲಾಗಿದ್ದು ಅವುಗಳು ಕೈಗಾರಿಕೆ ಮತ್ತು ಗೃಹ ನಿರ್ಮಾಣಕ್ಕೆ ಮೀಸಲು. ಕೈಗಾರಿಕಾ ವಲಯದಲ್ಲಿ 148 ಎಕರೆ ಬಟ್ಟೆ ಗಿರಣಿ ಗಳಿಗೆ, 228 ಎಕರೆ ಯಂತ್ರೋಪಕರಣ ಉದ್ದಿಮೆಗೆ, ನೂರು ಎಕರೆ ರಾಸಾಯನಿಕ ಉದ್ದಿಮೆಗೆ ಮತ್ತು 48 ಎಕರೆ ಆಹಾರ ತಯಾರಿಕಾ ಉದ್ದಿಮೆಗೆ ಮೀಸಲು. ಸುಮಾರು ನಾಲ್ಕು ಸಾವಿರ ಗೃಹ ನಿರ್ಮಾಣ ನಿವೇಶನಗಳನ್ನು 500 ಎಕರೆ ಸ್ಥಳದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು ಒಟ್ಟಾರೆ ಖರ್ಚು ಐವತ್ತು ಲಕ್ಷವಂತೆ…! ಈಗ ಐವತ್ತು ಲಕ್ಷಕ್ಕೆ ರಾಜಾಜಿನಗರ ಸಿಗುವ ಹಾಗಿದ್ದರೆ ನಾನೇ ಒಂದು ನೂರು ರಾಜಾಜಿನಗರ ಹೇಗಾದರೂ ಕೊಳ್ಳಲು ಸಿದ್ಧ.
ಈಗ ರಾಜಾಜಿನಗರದಲ್ಲಿ ಐವತ್ತು ಲಕ್ಷಗಳಿಗೆ ಒಂದು ಪುಟ್ಟ ಗೂಡು ಸಹ ಸಿಕ್ಕದು ಮತ್ತು ಹೇಗೆ ಬೆಳೆದಿದೆ ಅಂದರೆ ಎಪ್ಪತ್ತು ವರ್ಷ ಹಿಂದೆ ಅದನ್ನು ನೋಡಿದವರು ಈಗ ನೋಡಿದರೆ ರಿಪ್ ವಾನ್ ವಿಂಕಲ್ ಆಗಿಬಿಡುತ್ತಾರೆ. ಅಗಾಧವಾಗಿ ಬೆಳೆದಿರುವ ರಾಜಾಜಿನಗರ ನಗರದ ಹೃದಯ ಭಾಗ ಆಗಿದೆ. ರೈಲು ನಿಲ್ದಾಣದಿಂದ, ಬಸ್ ನಿಲ್ದಾಣದಿಂದ ಬರೆ ಮೂರು ಕಿಮೀ ಇರುವ ಈ ನಗರ ಈಗ ಹೇಗೆ ಬದಲಾವಣೆ ಹೊಂದಿದೆ ಎಂದರೆ ಆರಂಭದಲ್ಲಿದ್ದ ರಾಮಚಂದ್ರಾಪುರ ಹಳ್ಳ ಈಗ ಸಂಪೂರ್ಣ ಮುಚ್ಚಿ ಅಂಡರ್ ಪಾಸ್‌ಗೆ ದಾರಿ ಮಾಡಿದೆ. ಹಲವು ಉದ್ದಿಮೆಗಳು ಹುಟ್ಟಿ ಸತ್ತಿವೆ ಮತ್ತು ವಿದ್ಯಾಸಂಸ್ಥೆಗಳು ತಮ್ಮ ಛಾಪು ಮೂಡಿಸಿವೆ. ದೇವಾಲಯಗಳು, ಮದುವೆ ಛತ್ರಗಳು, ಹೋಟೆಲ್ ಹೆಚ್ಚಿವೆ.
ಕೈಗಾರಿಕೆಗಳಿಗೆ ಎಂದು ಕೈಗಾರಿಕಾ ವಲಯದಲ್ಲಿ ಕಟ್ಟಿದ್ದ ಕಟ್ಟಡಗಳು ಮದುವೆ ಛತ್ರಗಳಾಗಿವೆ. ಹೊಸದಾಗಿ ದುಬಾರಿ ಅನಿಸುವ ಕನ್ವೆನ್ಷನ್ ಹಾಲ್‌ಗಳು ಬಂದಿವೆ. ಯಾವುದೇ ಕಾರಣಕ್ಕೂ ಬೇರೆ ಯಾವ ಸ್ಥಳಕ್ಕೂ ಹೋಗದ ಹಾಗೆ ಸ್ವ ಬೆಳವಣಿಗೆ ಹೊಂದಿದೆ.
ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯ ದೇವಸ್ಥಾನ ಮೊದಲು ಒಂದು ಪುಟ್ಟ ಗುಡ್ಡ ಮತ್ತು ಅದರ ಮೇಲೆ ಒಂದು ಕಲ್ಲು ಬಂಡೆ ಇತ್ತು. ಅದರ ಮೇಲೆ ಕೂತು ಆಡಿದ ನೆನಪಿದೆ. ಅದರ ಮೇಲೆ ಒಂದು ದಿನ ಒಂದು ಆಂಜನೇಯ ಸ್ವಾಮಿ ಚಿತ್ರ ಕಂಡಿತು. ನಿಧಾನಕ್ಕೆ ಅಲ್ಲಿ ಒಂದು ದೊಡ್ಡ ದೇವಸ್ಥಾನ ಸಹ ನಿರ್ಮಾಣ ಆಯಿತು. ಇಸ್ಕಾನ್, ವೆಂಕಟೇಶ ದೇವರು ಹಾಗೂ ಮಿಕ್ಕ ದೇವಸ್ಥಾನಗಳು ನಂತರದಲ್ಲಿ ಹುಟ್ಟಿದವು, ಹಾಗೇ ಪ್ರಪಂಚ ವಿಖ್ಯಾತ ಆದುವು.
ಮೆಜೆಸ್ಟಿಕ್ ಕಡೆಯಿಂದ ಒಂದು ಎಂಟ್ರೆನ್ಸ್ ರಾಜಾಜಿನಗರಕ್ಕೇ. ಮಹಾಲಕ್ಷ್ಮಿ ಲೇಔಟ್ ನಂತರ ನಿರ್ಮಾಣ ಆಗಿ ಯಶವಂತಪುರ, ರಾಜಾಜಿನಗರದ ಸಂಪರ್ಕ ಹುಟ್ಟು ಹಾಕಿತು. ಈಗ ಮಹಾಲಕ್ಷ್ಮಿ ಬಡಾವಣೆ ಬಳಿ ಒಂದು ಬಸ್ ಸ್ಟಾಪಿಗೆ ಎಂಟ್ರೆನ್ಸ್ ಅನ್ನುವುದು ಕೇಳಿದ್ದೇನೆ! ಸ್ಟೇಶನ್ ಕಡೆಯಿಂದ ರಾಮಚಂದ್ರಪುರ ದಾಟಿ ರಾಜಾಜಿನಗರ ಸೇರುವ ರಸ್ತೆ ಈಗ ರಾಜಕುಮಾರ್ ರಸ್ತೆ ಆಗಿದೆ. ಇಲ್ಲಿ ಅರವತ್ತರ ದಶಕದಲ್ಲಿ ಸೈಟುಗಳು ಒಂದಾಣೆಗೆ ಚದರ ಗಜ ಇತ್ತು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿದ್ದರು. ಎಪ್ಪತ್ತರ ಸುಮಾರಿನಲ್ಲಿ ಆ ರಸ್ತೆಯಲ್ಲಿ ಸುಮಾರು ಮನೆಗಳು ನಿಜಲಿಂಗಪ್ಪ ಅವರದ್ದು ಅಂತ ಆಗ ತಾನೇ ಬೆಳಕಿಗೆ ಬರುತ್ತಾ ಇದ್ದ ಹೋರಾಟಗಾರರು ಮೈಕ್ ಹಿಡಿದು ಭಾಷಣ ಮಾಡುವುದು ಕೇಳಿದ್ದೆ. ನಂತರ ತೀರಾ ಈಚೆಗೆ ಅದು ಪೂರ್ಣ ಸುಳ್ಳು, ನಿಜಲಿಂಗಪ್ಪ ಅವರಿಗೆ ಒಂದು ಮನೆ ಸಹ ಇರಲಿಲ್ಲ ಅಂತ ಕೇಳಿದೆ.
ರಾಜಾಜಿನಗರ ಆಗ ಆರು ವಿಭಾಗವಾಗಿ ಒಂದೊಂದು ವಿಭಾಗವೂ ಬ್ಲಾಕ್ ಎಂದು ಕರೆಯುತ್ತಿದ್ದರು. ಪೋವರ್ ಹೌಸ್ ಹಿಂಭಾಗ ಶಿವನಹಳ್ಳ ಹಳ್ಳಿ ಆಗ ಬಯಲು ಮತ್ತು ಅಂಚಿನಲ್ಲಿ ಒಂದು ಕೆರೆ. ಅಲ್ಲಿಂದ ಒಂದೂವರೆ ಕಿಮೀ ದೂರದಲ್ಲಿ ಸಾಣೆ ಗುರುವನ ಹಳ್ಳಿ, ಅಲ್ಲಿಯೂ ಒಂದು ಕೆರೆ.
ರಾಜಾಜಿ ಯಾರು ಅಂತ ಪುಟ್ಟದಾಗಿ ವಿವರಿಸಲೇ…
(ಮುಂದುವರೆಯುವುದು…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ತುಂಬ ಕುತೂಹಲ ಕರವಾಗಿದೆ ಬರಹ