ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಈ ಬಲು ದೀರ್ಘ ಪ್ರೋಸ್/ ಪೊಯೆಟ್ರಿ, ನವ್ಯ ಕಾವ್ಯ ಬಹಳ ದಿನಗಳ ಕಾಲ ನನ್ನನ್ನು ಕಾಡಿತ್ತು. ಅದನ್ನು ಕೈಲಿ ಹಿಡಿದುಕೊಂಡು ಎಲ್ಲವನ್ನೂ ಬಿಟ್ಟು ಯಾವುದೊಂದೂ ವ್ಯವಸ್ಥೆಗೆ ಸಿಲುಕದೆ ಪ್ರಪಂಚ ಸುತ್ತುವ ಇರಾದೆ ಹುಟ್ಟಿತ್ತು. ಆ ಕಾಲದಲ್ಲಿ ಅವು ನಾನು ಮನೆಬಿಟ್ಟು ಹೋಗುವ, ಹುಟ್ಟಿ ಬೆಳೆದ ಕುಟುಂಬವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದ ದಿನಗಳು. ಕಾಲೇಜು ಹುಡುಗಿ ಮನೆಬಿಟ್ಟು ಹೋದಮೇಲೆ ಹೇಗೆ ಬದುಕುವುದು ಎನ್ನುವ ಚಿಂತನೆಯಲ್ಲಿದ್ದ ದಿನಗಳು. ಅದರ ಸ್ಪಷ್ಟತೆಯಿಲ್ಲದ ನನ್ನನ್ನು ಕಂಗೆಡಿಸಿ ಕಾಡುತ್ತಿದ್ದ ಅರಿಯದ ಭವಿಷ್ಯ, ಬೇಡವಾಗಿದ್ದ ವರ್ತಮಾನವು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಇದೇ ವಾರ ಕೆಂಡಸಂಪಿಗೆ ಪತ್ರಿಕೆಯಲ್ಲಿ ಪ್ರಕಟವಾದ ಕನ್ನಡದ ಹೆಸರಾಂತ ಸಾಹಿತಿ ಕೆ.ವಿ.ತಿರುಮಲೇಶ್ ಅವರ ದೀರ್ಘ ಲೇಖನವನ್ನು ಮತ್ತು ಅವರ ಬಗ್ಗೆ ಇತರರು ಬರೆದ ಕೆಲ ಲೇಖನಗಳನ್ನು ಓದಿದೆ. ಹಾಗೆಂದುಕೊಂಡರೆ ಎಲ್ಲವನ್ನೂ ಇನ್ನೂ ಓದಿಲ್ಲ, ಜೀರ್ಣಿಸಿಕೊಂಡಿಲ್ಲ. ತಿರುಮಲೇಶ್ ಅವರ ಹೆಸರನ್ನು ನಾನು ಕೇಳಿದ್ದು ೧೯೯೦ ದಶಕದ ಉತ್ತರಾರ್ಧದಲ್ಲಿ. ಆ ಕಾಲದಲ್ಲಿ ಹೈದರಾಬಾದಿನಲ್ಲಿ ವಾಸಿಸುತ್ತಿದ್ದ ಗೆಳತಿ ಈ ಸಾಹಿತಿಯನ್ನು ಮತ್ತು ಅವರ ಸಾಹಿತ್ಯವನ್ನು ಕುರಿತು ಒಂದಷ್ಟು ಹೇಳಿದ್ದಳು. ನಾನೋ ಆಗ ಕಾಯಾವಾಚಾಮನಸಾ ಪೂರ್ತಿಯಾಗಿ ಸಾಮಾಜಿಕ ಕಾರ್ಯ, ಸಮುದಾಯ ಅಭಿವೃದ್ಧಿ ಕ್ಷೇತ್ರ ಕೆಲಸದಲ್ಲಿ ತೊಡಗಿಸಿಕೊಂಡು ಊರು ಸುತ್ತುತ್ತಾ ಮುಳುಗಿಹೋಗಿದ್ದೆ. ಮುಂದೆ ವಲೊಂಗೊಂಗ್ ಯೂನಿವರ್ಸಿಟಿಯಲ್ಲಿ ಮತ್ತೆ ಗಂಭೀರ ಅಧ್ಯಯನಕ್ಕಿಳಿದಾಗ ಓದಿದ್ದೇ ಓದಿದ್ದು. ಹಿಂದೆ ಓದಿಕೊಂಡಿದ್ದ ಸಾಹಿತಿಗಳು, ಸಾಹಿತ್ಯದ ಜೊತೆ ಹೊಸಬರನ್ನು ಓದಲಾರಂಭಿಸಿದ್ದೆ. ಆಗ ಅಲ್ಪಸ್ವಲ್ಪ ಇಂಗ್ಲಿಷ್ ನಲ್ಲಿ ಸಿಕ್ಕ ತಿರುಮಲೇಶ್ ಅವರ ಸಾಹಿತ್ಯವನ್ನು ಓದಿ ಅದು ಎಟುಕದೆ ಸುಮ್ಮನಾಗಿದ್ದೆ. ಆಗ ಫೆಮಿನಿಸ್ಟ್ ಸಾಹಿತ್ಯ, ಬ್ಲಾಕ್ ಸಾಹಿತ್ಯದ ಜೊತೆ ಜಲಾಲುದ್ದೀನ್ ರೂಮಿ, ಅಮಾರ್ತ್ಯ ಸೆನ್, ಮಾರ್ಥಾ ನುಸ್ಬಾಮ್, ಗಾಯತ್ರಿ ಸ್ಪಿವಾಕ್, ಪೋಸ್ಟ್-ಕೊಲೊನಿಯಲ್ ಚರ್ಚೆಗಳು, ಮಹಾಶ್ವೇತಾ ದೇವಿ ಕಥೆಗಳು, ಅದರೊಂದಿಗೆ ಪಾಲೊ ಫ್ರೇರಿ ಅವರ ಸಂಗಾತಿಗಳು, ಚೆ ಗವೇರ ಬರಹಗಳು, ಮತ್ತೆ ರವೀಂದ್ರನಾಥ್ ಟಾಗೂರರ ಸಾಹಿತ್ಯದ ಓದು… ಈ ಪಟ್ಟಿ ಬೆಳೆಯುತ್ತ ಇವೆಲ್ಲಾ ತಲೆಯಲ್ಲಿ ಗಿರಗಿಟ್ಟಲೆ ಹೊಡೆಯುತ್ತಿತ್ತು.
ಮತ್ತೆ ತಿರುಮಲೇಶ್ ಅವರ ಬರಹಗಳನ್ನು ಓದಿದ್ದು ಕೆಂಡಸಂಪಿಗೆ ಪತ್ರಿಕೆಯಲ್ಲಿ. ಅವರು ಬರೆಯುತ್ತಿದ್ದ ಚರಿತ್ರೆ/ಇತಿಹಾಸ/ರಾಜ/ರಾಜ್ಯ/ ಜನಜೀವನ ಸರಣಿ ಕುತೂಹಲ ತಂದಿತ್ತು. ಮೊನ್ನೆ ಓದಿದ ಅವರ ದೀರ್ಘ ಲೇಖನದಲ್ಲಿ ಟಿ ಎಸ್ ಎಲಿಯಟ್ ಅವರ ‘ದಿ ವೇಸ್ಟ್ ಲ್ಯಾಂಡ್’ ಕೃತಿಯ ಉಲ್ಲೇಖನವು ಬಹಳ ವಿಶಿಷ್ಟವೆನಿಸಿತು. ತಮ್ಮ ಆ ಬರಹದಲ್ಲಿ ಅವರ ಜೀವನ ಕಥನವನ್ನು ಹೇಳುತ್ತಾ ಮನುಷ್ಯ ಸ್ವಭಾವದ ಬಗ್ಗೆ, ನಾವು ಮಾನವರು ಬೇಕಿದೆಯೋ ಬೇಡವೋ ಆದರೆ ಸದಾ ಶಾಂತಿ ಮಂತ್ರದ ಹಿಂದೆ ಬಿದ್ದಿರುವ ಅಗತ್ಯ, ಪ್ರಮೇಯವನ್ನು ಹೇಳುತ್ತಾರೆ. ತಿರುಮಲೇಶ್ ಅವರ, ಭಾಗ ಭಾಗವಾಗಿ ಇರುವ, ಹಲವಾರು ಥೀಮ್‌ಗಳಲ್ಲಿ ಸಾಗುವ ಆ ಸ್ವಂತ ಕಥಾನಕವು ವಿಸ್ತೃತವಾಗಿಯೂ, ಸಾಂದ್ರವಾಗಿಯೂ ಇದೆಯೆನ್ನಿಸಿತು. ಅದರ ಹರಿವು ಇಷ್ಟವಾಯಿತು. ಅವರ ಭಾವ, ಭಾವನೆಗಳ ಬಗ್ಗೆ ಕುತೂಹಲ ಮೂಡಿತು. ಮಧ್ಯೆಮಧ್ಯೆ ಕಾಣಿಸುವ ಅವರ ಹತಾಶೆ ನನ್ನನ್ನು ಕಾಡಿತು.
ಎಲಿಯಟ್‌ರ ಕೃತಿಯ ಕಡೆಸಾಲಿನಲ್ಲಿ ಇರುವ ಮೂರು ಪದಗಳು- ಶಾಂತಿಹಿ ಶಾಂತಿಹಿ ಶಾಂತಿಹಿ -ಹಿಂದಿನ ನೆನಪುಗಳನ್ನು ಕೆದಕಿದವು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಈ ಬಲು ದೀರ್ಘ ಪ್ರೋಸ್/ ಪೊಯೆಟ್ರಿ, ನವ್ಯ ಕಾವ್ಯ ಬಹಳ ದಿನಗಳ ಕಾಲ ನನ್ನನ್ನು ಕಾಡಿತ್ತು. ಅದನ್ನು ಕೈಲಿ ಹಿಡಿದುಕೊಂಡು ಎಲ್ಲವನ್ನೂ ಬಿಟ್ಟು ಯಾವುದೊಂದೂ ವ್ಯವಸ್ಥೆಗೆ ಸಿಲುಕದೆ ಪ್ರಪಂಚ ಸುತ್ತುವ ಇರಾದೆ ಹುಟ್ಟಿತ್ತು. ಆ ಕಾಲದಲ್ಲಿ ಅವು ನಾನು ಮನೆಬಿಟ್ಟು ಹೋಗುವ, ಹುಟ್ಟಿ ಬೆಳೆದ ಕುಟುಂಬವನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದ ದಿನಗಳು. ಕಾಲೇಜು ಹುಡುಗಿ ಮನೆಬಿಟ್ಟು ಹೋದಮೇಲೆ ಹೇಗೆ ಬದುಕುವುದು ಎನ್ನುವ ಚಿಂತನೆಯಲ್ಲಿದ್ದ ದಿನಗಳು. ಅದರ ಸ್ಪಷ್ಟತೆಯಿಲ್ಲದ ನನ್ನನ್ನು ಕಂಗೆಡಿಸಿ ಕಾಡುತ್ತಿದ್ದ ಅರಿಯದ ಭವಿಷ್ಯ, ಬೇಡವಾಗಿದ್ದ ವರ್ತಮಾನವು. ಆಗ ಈ ಎಲಿಯಟ್ ಕವನ ನನಗೆ ಗಂಟುಬಿದ್ದು, ಗಟ್ಟಿಯಾಗಿ ಅಂಟಿಕೊಂಡು ಅದನ್ನು ಅಪ್ಪಿಕೊಂಡು ನಾನು ಇನ್ನೂ ಹತಾಶೆಯ ಕೂಪಕ್ಕೆ ಜಾರಿದ್ದೆ. ಮನಸ್ಸಿನಲ್ಲಿ ದಿ ವೇಸ್ಟ್ ಲ್ಯಾಂಡ್ ಕವನದಲ್ಲಿ ಸಂಬಂಧವಿಲ್ಲದಂತೆ ತೋರುವ ಭಾಗಗಳಲ್ಲಿ ಹರಿಯುವ ‘ರಿಯಲ್-ಅನ್ ರಿಯಲ್’ ಹುಡುಕಾಟ ರಿಂಗಣಿಸುತ್ತಿತ್ತು. ಜೊಂಪು ಹಿಡಿಯುವಾಗ ಮೆಲ್ಲನೆ ಕಿವಿಗಳಲ್ಲಿ ಅವೇ ಶಾಂತಿ ಶಾಂತಿ ಶಾಂತಿ ಪದಗಳು ನುಸುಳುತ್ತಿದ್ದವು. ನಿಜಸ್ಥಿತಿ-ಅಗೋಚರಗಳ ನಡುವೆ ಇರುವ ಅರಿಯದ ಆಯಾಮದ ಹುಡುಕಾಟಕ್ಕೊಂದು ಅರ್ಥದ ಚೌಕಟ್ಟು ಹುಟ್ಟುತ್ತಿತ್ತು.
ಸುತ್ತಮುತ್ತಲೂ, ದೇಶವಿದೇಶಗಳಲ್ಲೂ, ಎಲ್ಲೆಡೆಯಲ್ಲೂ ಎಲ್ಲರೂ ‘ಅನ್ ರಿಯಲ್ ಹುಡುಕಾಟ‘ದಲ್ಲಿ ಮಗ್ನರಾಗಿ ಸದಾ ಏನೋ ಒಂದು ಯಾವುದಕ್ಕೋ ಎಂದು ಹುಡುಕುತ್ತಿರುತ್ತಾರೆ ಎನಿಸುತ್ತದೆ. ನಮ್ಮೆಲ್ಲರನ್ನೂ ಆವರಿಸಿರುವ ಭಯಗಳು, ಭೇದಗಳು ಹುಟ್ಟಿಸುವ ಕೋಲಾಹಲಗಳಿಂದ ತಪ್ಪಿಸಿಕೊಳ್ಳಲು ಎಲ್ಲರಿಗೂ ಶಾಂತಿ ಮಂತ್ರದ ಜಪ ಬೇಕಿದೆ. ಇಲ್ಲಿ ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಜನವರಿ ೨೬ರ ಪ್ರಸ್ತುತತೆ ಹಲವಾರು ತಿರುವುಗಳನ್ನು ಕಂಡಿತ್ತು. ಪ್ರತಿವರ್ಷ ಸಂಭ್ರಮ ಸಡಗರದಿಂದ ಆಸ್ಟ್ರೇಲಿಯಾ ಡೇ ಆಚರಿಸುವ ಅನೇಕರು ಈ ಬಾರಿ ‘ಅದು ಹೇಗೆ ಸಡಗರದ ಆಚರಣೆಯಾಗುತ್ತದೆ? ಆ ದಿನವು ಬ್ರಿಟಿಷರು ಬಂದು ವಸಾಹತುಶಾಹಿಗಳಾಗಿ ನೆಲೆನಿಂತ ಗುರುತಾಗಿದೆ ಅಲ್ಲವೇ. ಅದನ್ನು ನೆನೆಪಿಸಿಕೊಳ್ಳೋಣ, ಆಚರಿಸುವುದು ಬೇಡವಾಗಿದೆ,’ ಎಂದರು. ಇನ್ನು ವಲಸೆಗಾರರು ಅತ್ತ ಕಡೆ ಇತ್ತ ಕಡೆ ಎಂದು ವಾಲುತ್ತಾರೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರು ಯಾವತ್ತೂ ಜನವರಿ ೨೬ ರನ್ನು ‘ಆಕ್ರಮಣ ದಿನ’ ವೆಂದು ಕರೆಯುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಸೇರಿ ಶೋಕಾಚರಣೆಯ ದಿನವೆಂದು ಪ್ರತಿರೋಧಿಸುವ ಅವರು ಈ ಬಾರಿ ಸ್ವಲ್ಪ ಹರ್ಷಿಸಿದ್ದಾರೆ. ಆದರೆ ಈ ವರ್ಷದ ವಿಶೇಷವೆಂದರೆ ಪ್ರಾಂತೀಯ ನಗರಪಾಲಿಕೆಗಳು ಆಸ್ಟ್ರೇಲಿಯನ್ ಪೌರತ್ವ ಪ್ರದಾನ ಸಮಾರಂಭಗಳನ್ನು ೨೬ ರಂದೇ ಮಾಡಬೇಕಿಲ್ಲ. ಅದು ಆಯಾ ನಗರಪಾಲಿಕೆಯ ನಿರ್ಧಾರಕ್ಕೆ ಬಿಟ್ಟದ್ದು ಎಂದು ಕೇಂದ್ರೀಯ ಸರ್ಕಾರವು ಹೇಳಿತು. ಇದರಿಂದ ಹಿಂದಿನ ಸರಕಾರವು ಮಾಡಿದ್ದ ಕಡ್ಡಾಯ ಆಸ್ಟ್ರೇಲಿಯಾ ಡೇ ಆಚರಣೆಯಿಂದ ಈಗ ಮುಕ್ತಿ ಸಿಕ್ಕಿದೆ ಎಂದು ಅನೇಕರು ಹರ್ಷಿಸಿದ್ದಾರೆ.
ಆದರೆ ಈ ಭಾವನೆಯನ್ನು ಟೀಕಿಸಿರುವ ವಿರೋಧಪಕ್ಷವು ಆಸ್ಟ್ರೇಲಿಯಾ ಡೇ ಎಂದರೆ ಅದು ನಮ್ಮ ದೇಶದ ಹೆಗ್ಗಳಿಕೆಯನ್ನು ಆಚರಿಸುವ ದಿನ, ಇದು ಎಲ್ಲರೂ ಪರಿಪಾಲಿಸಬೇಕು ಎಂದಾಗ ಪ್ರತ್ಯುತ್ತರವಾಗಿ ಅಬೊರಿಜಿನಲ್ ಜನ ಸಮುದಾಯ ಮುಖಂಡರು ‘ಆ ದಿನಾಂಕವೇ ಯಾಕೆ? ಬೇರೊಂದು ದಿನದಂದು, ನಾವು ಸೂಚಿಸುವ ದಿನಾಂಕದಂದು, ನಮ್ಮ ಅರವತ್ತು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ, ಸಾಂಸ್ಕೃತಿಕ ಹಿರಿಮೆಯನ್ನು ಆಚರಿಸೋಣ,’ ಎಂದಿದ್ದಾರೆ. ಕೇಂದ್ರ ಸರಕಾರವು ಇನ್ನೂ ಮುಂದುವರೆದು ಜನವರಿ ೨೬ ರಂದು ಸಾರ್ವಜನಿಕ ರಜೆಯೆಂದು ಇದ್ದರೂ ಉದ್ಯೋಗದಲ್ಲಿರುವ ಜನರು ತಮ್ಮ ಆಯ್ಕೆಯ ಪ್ರಕಾರ ಆ ದಿನ ಕೆಲಸ ಮಾಡಿ ಬೇರೊಂದು ದಿನದಂದು ರಜೆ ಪಡೆಯಬಹುದು ಎಂದು ಸೂಚಿಸಿತು. ಈ ಕ್ರಮದ ಪ್ರಯೋಜನವನ್ನು ಪಡೆದ ಮೊಟ್ಟಮೊದಲ ವಿಶ್ವವಿದ್ಯಾಲಯವು ವಲೊಂಗೊಂಗ್ ಯೂನಿವರ್ಸಿಟಿ, ನಾನಿಲ್ಲೇ ಪಿ ಎಚ್ ಡಿ ಮಾಡಿದ್ದು. ಈ ಯೂವರ್ಸಿಟಿ ಗ್ರಂಥಾಲಯವನ್ನು ಹೊಕ್ಕ ಮೊದಲ ದಿನಗಳಲ್ಲೇ ನನಗೆ ರೂಮಿ ಸಿಕ್ಕಿದ್ದು. ಅವನ “There is a light seed grain inside. You fill it with yourself, or it dies” ಎನ್ನುವುದು ಸ್ವಗತವಾಗಿ ನನ್ನ ಥೀಸಿಸ್ ನಲ್ಲೂ ದಾಖಲಾಯಿತು. ತಿರುಮಲೇಶರೂ ರೂಮಿಯ ಮಾತು ಕೇಳಿದ್ದರೇನೋ. ವಲೊಂಗೊಂಗ್‌ನಲ್ಲಿ ಎಲಿಯಟ್, ರೂಮಿ, ಅಮಾರ್ತ್ಯ ಸೆನ್, ಟಾಗೋರ್, ಮಹಾಶ್ವೇತಾ ದೇವಿ ಎಲ್ಲರ ಸಂಗಮವಾಗಿ ನನ್ನೊಳಗೆ ಶಾಂತಿ ಮಂತ್ರದ ಜಾಗತೀಕರಣದ ದಿನಗಳು ಬಂದಿದ್ದವು.
ಪಾಶ್ಚ್ಯಾತರು ಶಾಂತಿ ಮಂತ್ರವನ್ನು ಸ್ವೀಕರಿಸುತ್ತಿರುವ ಕಾಲದಲ್ಲಿಯೇ ಇತ್ತೀಚೆಗೆ ಯಾಕೋ ಅವೇ ಪಾಶ್ಚಾತ್ಯ ದೇಶಗಳಲ್ಲಿ ನೆಲಸಿರುವ ಕೆಲ ವಲಸೆಗಾರ ಸಮುದಾಯಗಳಲ್ಲಿ ಅಶಾಂತಿ, ಧರ್ಮ-ಆಧಾರಿತ ವಿಭಜನಾ ಮನೋಭಾವ ಕಾಣುತ್ತಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಕೆಲಕಡೆ ಹಿಂದೂ ಧರ್ಮದ ಗುರುತಾದ ಸ್ವಾಮಿ ನಾರಾಯಣ್, ಶ್ರೀ ಶಿವ ವಿಷ್ಣು ದೇವಸ್ಥಾನಗಳು ಮತ್ತು ಇಸ್ಕಾನ್ ದೇವಾಲಯದ ಹೊರಗೋಡೆಗೆ ಮಸಿ ಲೇಪಿಸಿದ್ದ ಕಿಡಿಗೇಡಿಗಳು ಭಾರತದ ಹಿಂದೂ ಧರ್ಮದ ವಿರುದ್ಧ ಘೋಷಣೆಗಳನ್ನು ಬರೆದಿದ್ದಾರೆ. ಅವರು ಬೆಂಬಲಿಸುವ ಖಲೀಸ್ತಾನ್ ಪರವಾಗಿ ಘೋಷಣೆಯನ್ನು ಬರೆದಿದ್ದಾರೆ. ಇದರಿಂದ ನೊಂದ, ಅದಕ್ಕಿಂತಲೂ ಆಘಾತಕ್ಕೊಳಗಾದ, ದೇವಾಲಯಗಳ ಪ್ರತಿನಿಧಿಗಳು ಈ ಘಟನೆಗಳನ್ನೂ, ಅವಲ್ಲಿ ಅಡಕವಾಗಿರುವ ಆಕ್ರಮಣಾ ಮನೋಭಾವನೆಯನ್ನು ಖಂಡಿಸಿ, ಹಿಂದೂ ಧರ್ಮವು ಜಗತ್ತಿಗೆ ಕೊಟ್ಟಿರುವ ಶಾಂತಿ ಮಂತ್ರವನ್ನು ನೆನಪಿಸಿದ್ದಾರೆ. ಖಂಡಿತವಾಗಿಯೂ ವಲಸೆಗಾರ ಅಥವಾ ಯಾವುದೇ ಬೇರೆ ಸಮುದಾಯಗಳಲ್ಲಿ ಈ ಅಪಾಯಕಾರಿ ಮನೋಭಾವನೆ ಇರಬಾರದು. ಅದು ಕೇಡನ್ನುಂಟು ಮಾಡುವುದೇ ವಿನಃ ಯಾರಿಗೂ ಕ್ಷೇಮವನ್ನು, ಸೌಹಾರ್ದತೆಯನ್ನೂ ಕೊಡುವುದಿಲ್ಲ.
ಮತ್ತೊಬ್ಬರನ್ನು ಇಷ್ಟಪಡದೇ ಆದರ, ಗೌರವದಿಂದ ಕಾಣಲು ಇಚ್ಛೆಯಿಲ್ಲದಿದ್ದಾಗ ಅವರನ್ನು ದ್ವೇಷಿಸುವುದಕ್ಕಿಂತಲೂ ಸುಮ್ಮನೆ ಇರುವುದು ಮೇಲು. ಹತ್ತಿರ ಬರಲು ಸಾಧ್ಯವಿಲ್ಲವೆನಿಸಿದರೆ ತಮ್ಮಷ್ಟಕ್ಕೆ ತಾವು ದೂರವಿರುವುದು ಕ್ಷೇಮ. ಯಾರಿಗೂ ಕೆಡುಕಾಗುವುದಿಲ್ಲ. ದೂರವಾದ ವ್ಯಕ್ತಿಗೆ ಒಮ್ಮೊಮ್ಮೆ ಒಬ್ಬಂಟಿತನ ಕಾಡಬಹುದು. ಆದರೆ ಸ್ವಯಿಚ್ಛೆಯ ದೂರವಾಗುವಿಕೆ, ದೂರ-ತನ, ಜ್ಞಾತವಾಸದಲ್ಲಿ ಸರ್ವೇಜನರಿಗಲ್ಲದಿದ್ದರೂ ಬಹುಜನರಿಗೆ ಸರ್ವತೋಮುಖ ನೆಮ್ಮದಿ ಇರಬಹುದಾದ ಸಾಧ್ಯತೆಗಳಿವೆ. ನೆಚ್ಚಿನ ರೂಮಿಯ ಮತ್ತೊಂದು ಮಾತಿದು: “Out beyond ideas of wrongdoing and rightdoing there is a field. I’ll meet you there”- ಈ ಆಯಾಮದಲ್ಲಿ ಎಲ್ಲರ ಮುಖಾಮುಖಿ ಆಗಬೇಕಿದೆ. ಶಾಂತಿ ಮಂತ್ರವು ಇನ್ನಷ್ಟು ಜಾಗತೀಕರಣವಾಗಬೇಕಿರುವ ದಿನಗಳು ಬೇಗ ಬರಲಿ. ಅದರ ಅವಶ್ಯಕತೆಯನ್ನು ನೆನಪಿಸಿದ ತಿರುಮಲೇಶರ ಆತ್ಮಕ್ಕೆ ವಂದನೆಗಳು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಮತ್ತೊಬ್ಬರನ್ನು ಇಷ್ಟಪಡದೇ ಆದರ, ಗೌರವದಿಂದ ಕಾಣಲು ಇಚ್ಛೆಯಿಲ್ಲದಿದ್ದಾಗ ಅವರನ್ನು ದ್ವೇಷಿಸುವುದಕ್ಕಿಂತಲೂ ಸುಮ್ಮನೆ ಇರುವುದು ಮೇಲು. ಹತ್ತಿರ ಬರಲು ಸಾಧ್ಯವಿಲ್ಲವೆನಿಸಿದರೆ ತಮ್ಮಷ್ಟಕ್ಕೆ ತಾವು ದೂರವಿರುವುದು ಕ್ಷೇಮ. ಯಾರಿಗೂ ಕೆಡುಕಾಗುವುದಿಲ್ಲ. ದೂರವಾದ ವ್ಯಕ್ತಿಗೆ ಒಮ್ಮೊಮ್ಮೆ ಒಬ್ಬಂಟಿತನ ಕಾಡಬಹುದು. ಆದರೆ ಸ್ವಯಿಚ್ಛೆಯ ದೂರವಾಗುವಿಕೆ, ದೂರ-ತನ, ಜ್ಞಾತವಾಸದಲ್ಲಿ ಸರ್ವೇಜನರಿಗಲ್ಲದಿದ್ದರೂ ಬಹುಜನರಿಗೆ ಸರ್ವತೋಮುಖ ನೆಮ್ಮದಿ ಇರಬಹುದಾದ ಸಾಧ್ಯತೆಗಳಿವೆ. ನೆಚ್ಚಿನ ರೂಮಿಯ ಮತ್ತೊಂದು ಮಾತಿದು: “Out beyond ideas of wrongdoing and rightdoing there is a field. I’ll meet you there”- ಈ ಆಯಾಮದಲ್ಲಿ ಎಲ್ಲರ ಮುಖಾಮುಖಿ ಆಗಬೇಕಿದೆ. ಶಾಂತಿ ಮಂತ್ರವು ಇನ್ನಷ್ಟು ಜಾಗತೀಕರಣವಾಗಬೇಕಿರುವ ದಿನಗಳು ಬೇಗ ಬರಲಿ. ಅದರ ಅವಶ್ಯಕತೆಯನ್ನು ನೆನಪಿಸಿದ ತಿರುಮಲೇಶರ ಆತ್ಮಕ್ಕೆ ವಂದನೆಗಳು. ಈ ಸಾಲುಗಳು ಬಹಳ ಇಷ್ಟವಾದವು. ಶ್ರೀಮತಿ. ಶೀಲಾ ಐಸಾಕ್, ಶ್ರೀಮತಿ. ಯಮುನಾ ರಾಜಾರಾವ್, ಹೇಮಲತಾ ಜಾನ್ ಅವರಂಥಾ ಪ್ರಾದ್ಯಾಪಕರಿದ್ದಾಗ ಪಠ್ಯದಲ್ಲಿನ ಪಾತ್ರಗಳು ನಮ್ಮ ಮನಸ್ಸಿಗಿಳಿಯುತ್ತವೆ.
ಅನುರಾಧ, ನನ್ನೀ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ನಿಮಗೆ ಕೃತಜ್ಞತೆಗಳು. ಆ ಕಾಲೇಜು ದಿನಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಓದಿಗೆ ಕಳೆ ಕಟ್ಟಿಸಿದ ಗುರುಗಳನ್ನು ನೆನಪಿಸಿದ್ದೀರ, ಬಹಳ ಸಂತೋಷವಾಯಿತು. ಅವರಲ್ಲಿ ಜಯಗೌರಿ, ಮನು ಚಕ್ರವರ್ತಿ ಕೂಡ ಇದ್ದಾರೆ. ಟಿ.ಎಸ್.ಎಲಿಯಟ್ ರ ಮತ್ತೊಂದು ಕವನವಾದ Prufrock ಕೂಡ…
ಮತ್ತೊಬ್ಬರು ಪ್ರಾಂಶುಪಾಲರಾಗಿದ್ದ ಶ್ರೀಮತಿ. ಸಿ. ಎನ್. ಮಂಗಳಾ.