ಆ ಹದಿಹರೆಯದ ಪುಳಕಕ್ಕೂ, ರೋಮಾಂಚನಕ್ಕೂ, ನರುಗಂಪನಕ್ಕೂ ಈಗಿನ ನಡುಹರೆಯದ ಭಾವಾವೇಗಕ್ಕೂ ಯಾವೊಂದೂ ವ್ಯತ್ಯಾಸವೇ ಇರಲಿಲ್ಲ! ಅದು ವಿಷಯ! ಅಲ್ಲಿಗೆ ವಯಸ್ಸಾಗಿರುವುದು ಯಾವುದಕ್ಕೆ? ದೇಹಕ್ಕೆ ಮಾತ್ರವೇ? ಮನಸು ಪಕ್ವವಾಗುವುದು ಅನ್ನುತ್ತಾರಲ್ಲ ಅದೇನದು? ಆಯ್ಕೆಗಳನ್ನೆಲ್ಲ ಬದಿಗೊತ್ತಿ, ಹೆಚ್ಚು ತಕರಾರು ಮಾಡದೆ, ಇರುವುದನ್ನು ಒಪ್ಪಿಕೊಂಡು, ಒಪ್ಪಲಾಗದಿದ್ದರೂ ಒಪ್ಪಿಸಿಕೊಂಡು, ಅಪ್ಪಿಕೊಂಡು, ದಬ್ಬಿಸಿಕೊಂಡು ಹೇಗಾದರೊಂದು ಬದುಕುವುದೆ? ಅಥವಾ ಪರಿಸ್ಥಿತಿಗೆ ತಲೆಬಾಗಿ ಸ್ಥಿತಪ್ರಜ್ಞೆಯನ್ನು ಆರೋಪಿಸಿಕೊಂಡು ಒಳಗೊಳಗೇ ಬೇಯುತ್ತ, ಬೇಯುವಿಕೆಯ ಕಮಟು ವಾಸನೆ ಹೊರಗೆ ತೋರದಂತೆ ಕಾಯುತ್ತ, ಹೀಗೆ ಬೇಯುವುದೇ ಜೀವನದ ಸಾರ್ಥಕತೆಯೆಂದುಕೊಂಡು ಸುಳ್ಳೇ ನಂಬಿಸಿಕೊಳ್ಳುವುದೆ? ಅಥವಾ ನಿಜಕ್ಕೂ ಸ್ಥಿತಪ್ರಜ್ಙರಾಗಿಬಿಡುವುದೆ?
ಶಾಂತಿ ಕೆ. ಅಪ್ಪಣ್ಣ ಬರೆದ ಈ ಭಾನುವಾರದ ಕಥೆ “ಚಿತ್ರಕಾರನ ಬೆರಳು” ನಿಮ್ಮ ಓದಿಗೆ
ಸುಮಾರು ದಿನಗಳಿಂದಲೇ ಅವನನ್ನು ಅವಳು ನೋಡುತ್ತಿದ್ದಳು. ಸುಮಾರು ದಿನಗಳೆಂದರೆ ಹತ್ತತ್ತಿರ ಆರೇಳು ತಿಂಗಳಿಂದ. ಎಂದೂ ಅವನ ಮುಖವನ್ನ ನೋಡಿದವಳಲ್ಲ. ಒಂದು ಚಿತ್ರದಲ್ಲಿ ಬುಲೆಟ್ಟಿನ ಮೇಲೆ ಕಾಲೂರಿರುವ ಅವನ ಕಾಲು ನೋಡಿದ್ದಾಳೆ, ಅದು ಬಹುಶಃ ಅವನದ್ದೇ ಅಂದುಕೊಂಡಿದ್ದಾಳೆ. ಇನ್ನೊಂದರಲ್ಲಿ ಅವನು ಹಿಂಬದಿ ತಿರುಗಿ ನಿಂತಿದ್ದು, ಮುಖದ ಒಂದು ಬದಿಯನ್ನಷ್ಟೇ ಅಸ್ಪಷ್ಟವಾಗಿ ತೋರಿಸುವ ಚಿತ್ರದಲ್ಲಿ ಅವನ ಮುಖದ ಗಡ್ಡ, ತಲೆಗೆ ಸುತ್ತಿಕೊಂಡ ನೀಲಿ ಹೂಗಳ ಸ್ಕಾರ್ಫ್ ಕಾಣುತ್ತದೆ. ಅವನ ಮುಖದ ಗಡ್ಡ ಮೋಹವುಕ್ಕಿಸುತ್ತದೆ. ಅಷ್ಟು ಬಿಟ್ಟರೆ ನೋಡಿರುವುದೆಲ್ಲ ಆತನ ಬೆರಳುಗಳನ್ನೇ. ಸದಾ ಒಂದಿಲ್ಲೊಂದು ಚಿತ್ರಗಳನ್ನು ಬರೆಯುತ್ತಿರುವ ಆ ಬೆರಳುಗಳ ಹೊರತಾಗಿ ಅವಳು ಬೇರೇನನ್ನೂ ನೋಡಿಲ್ಲ. ಅವನ ಚಿತ್ರಗಳನ್ನ ನೋಡ್ತಾ ನೋಡ್ತಾ ಅವಳಿಗೆ ಅವನು ಇಷ್ಟವಾದ ಅನ್ನುವುದೂ ಆಗದು, ಅವಳಿಗೆ ನೆನಪಿರುವಂತೆ ಮೊತ್ತಮೊದಲ ಸಲ ಅವನ ಚಿತ್ರವೊಂದನ್ನ ನೋಡಿದಾಗಲೇ ಅವಳಿಗದು ಇಷ್ಟವಾಗಿದೆ. ಅದನ್ನವಳು ಮತ್ತೆ ಮತ್ತೆ ನೋಡಿದ್ದಾಳೆ.
ಅದೊಂದು ವಿರಳ ಮರಗಳಿದ್ದ ಒಂಟಿ ಹಾದಿಯ ಚಿತ್ರ. ಹಾದಿಯುದ್ದಕ್ಕೂ ಚೆಲ್ಲಿದ್ದ ಬೆಳದಿಂಗಳು ಮತ್ತು ನಿಗೂಢ ನೆರಳು. ಅದಕ್ಕೆ ಅವನು ಹೊಂದಿಸಿದ್ದ ಕ್ಯಾಪ್ಶನ್ “ಸಮ್ ಥಿಂಗ್ಸ್ ಆರ್ ನೆವರ್ ಸೆಡ್ ಬಟ್ ಸ್ಟಿಲ್ ಹರ್ಡ್”
ಆ ಚಿತ್ರ ಅವಳಿಗೆ ಬಹಳಷ್ಟನ್ನು ಕೇಳಿಸಿತು.
ಆ ಕಾಡು ಬೆಳುದಿಂಗಳು, ಆ ಒಬ್ಬಂಟಿ ರಾತ್ರಿ, ಅಲ್ಲಿ ಚೆಲ್ಲಿರಬಹುದಾದ ಮೌನ, ಹೊಮ್ಮಿರಬಹುದಾದ ಯಾವುದೋ ಸದ್ದು.. ಆ ನೀರವ ಹಾದಿಯ ಕೊನೆಯಲ್ಲಿ ಯಾರಿಗಾಗಿಯೋ ಕಾಯುತ್ತ ನಿಂತಿರಬಹುದಾದ ಒಂದು ಜೀವ.. ಮತ್ತು ಅದು ತಡೆ ಹಿಡಿದಿರಬಹುದಾದ ಬಿಕ್ಕು ಅಥವಾ ಸುರಿಸಿರಬಹುದಾದ ಕಣ್ಣೀರು! ಆ ಕ್ಷಣ ಅವಳಿಗೆ ಆ ರಸ್ತೆಯ ತುದಿಯಲ್ಲಿ ನಿಂತು ನೋಡುತ್ತಿರುವುದು ತಾನೇ ಅನಿಸಿಬಿಟ್ಟಿತು.. ಆದರೆ ಅದೇಕೆ ಹಾಗನ್ನಿಸಿತು ಎಂಬುವುದಕ್ಕೆ ಅವಳಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ.
ಮರುಕ್ಷಣವೇ ಅವಳು ಕಮೆಂಟಿಸಿದ್ದಳು.. ಯೆ ರಾತೇಂ.. ಯೆ ಮೌಸಮ್…
ಅದಕ್ಕೆ ತಕ್ಕಂತೆ ಮರುದಿನವೇ ಅವನು ಉಕ್ಕುವ ಹುಣ್ಣಿಮೆ ಕಡಲಿನ ಚಿತ್ರ ಬರೆಯುತ್ತಿರುವ ವಿಡಿಯೋ ಹಾಕಿದ, ಹಿನ್ನೆಲೆಗೆ ಆ ಅದೇ ಹಾಡು…… ‘ಯೆ ರಾತೇಂ ಯೆ ಮೌಸಮ್ ನದೀ ಕಾ ಕಿನಾರಾ……
ಅವಳ ಗುಂಡಿಗೆ ಒಂದು ಕ್ಷಣ ತಡವರಿಸಿ ಮುಂಬರೆದಿತ್ತು.
ಕಮೆಂಟಿಸಿದ್ದಳು..
ಫಿದಾ.
ಮುಂದಿನ ವಾರದಲ್ಲಿ ಅವನು ತೆಳುಕೇಸರಿ, ಹೊಳೆವ ಹಳದಿ, ಕಡುನೀಲಿ, ಬೂದುಗಪ್ಪು, ಗಾಢಕಪ್ಪು ಬಣ್ಣಗಳನ್ನು ಬಳಸಿ ಒಂದರೊಳಗೊಂದು ಹೊಸೆದುಕೊಂಡಂತೆ ತೋರುವ ಗೆರೆಗಳನ್ನೆಳೆದು ನಡುವೆ ಗಾಢ ಕೇಸರಿ ಬಣ್ಣದ ವೃತ್ತವೊಂದನ್ನ ರಚಿಸಿ ವೈಟಿಂಗ್ ಎಂಬ ಕ್ಯಾಪ್ಶನ್ ಕೊಟ್ಟಿದ್ದ. ಆ ಚಿತ್ರವನ್ನು ನೋಡಿ ಅವಳಿಗೆ ಏನೊಂದೂ ಅರ್ಥವಾಗಿರಲಿಲ್ಲ. ಆ ಚಿತ್ರದ ಬಣ್ಣಗಳ ಸಂಯೋಜನೆ, ಆ ಗೆರೆಗಳು, ಅವು ಒಂದನ್ನೊಂದನ್ನು ಹೊಸೆದುಕೊಂಡಿರುವ ರೀತಿ, ನಡುವಿನ ವೃತ್ತ ಇವೆಲ್ಲ ಏನನ್ನ ಸೂಚಿಸುತ್ತವೆಯೆಂಬುವುದು ಅವಳಿಗೆ ಹೊಳೆದಿರಲಿಲ್ಲ. ಆದರೆ ಆ ವೈಟಿಂಗ್ ಎಂಬ ಕ್ಯಾಪ್ಶನ್ ಮಾತ್ರ ತನಗೇ ಏನನ್ನೋ ಸೂಚಿಸುತ್ತಿದೆ ಎಂದು ಅವಳಿಗೆ ಅನ್ನಿಸಿತ್ತು. ಆ ನಂತರ ಅವನು ಬರೆಯುವ ಚಿತ್ರಗಳು, ತೆಗೆಯುವ ಪಟಗಳು, ಹಿನ್ನಲೆಗೆ ಹೊಂದಿಸುವ ಹಾಡುಗಳು, ಸುಮ್ಮನೇ ಶೇರ್ ಮಾಡುವ ಯಾವುದೋ ಭಾವಗೀತೆಯ ಸಾಲುಗಳು ಇವೆಲ್ಲವೂ ತನಗೇ ಅನ್ನಿಸುವುದು. ಅದಕ್ಕೆ ಸಂವಾದಿಯಾಗಿ ತಾನೂ ಏನನ್ನಾದರೂ ಹಾಕುವಳು, ಇಬ್ಬರೂ ಯಾರೊಬ್ಬರ ಪೋಸ್ಟಿಗೂ ಕಮೆಂಟಿಸುತ್ತಿರಲಿಲ್ಲ, ಆದರೆ ಅದು ಹೇಗೋ ಆತ ಹಾಕುವ ಪೋಸ್ಟುಗಳೆಲ್ಲ ತನಗೇ ಅಂತ ಅವಳಿಗೆ ಅನ್ನಿಸುತ್ತಿತ್ತು. ಹಾಗೆಯೇ ತಾನು ಹಾಕುವ ಪೋಸ್ಟುಗಳಿಗೆ ಆತ ಲೈಕೊತ್ತದೇ ಇದ್ದರೂ ಅವನು ಅವನ್ನು ನೋಡುತ್ತಿದ್ದಾನೆ ಮತ್ತು ಅದಕ್ಕೆ ತನ್ನದೇ ಪೋಸ್ಟುಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾನೆ ಅಂತಲೂ ಅನಿಸುತ್ತಿತ್ತು, ಅದೇ ಸಮಯ ಸಣ್ಣ ಗೊಂದಲವೂ.. ಮತ್ತಿದು ಭ್ರಮೆಯಲ್ಲ ತಾನೇ ಎಂಬ ಅಳುಕೂ ಅವಳನ್ನ ಕಾಡದೇ ಇರುತ್ತಿರಲಿಲ್ಲ.
ಇವತ್ತಿಗೂ ಅವಳಿಗೆ ನೆನಪಿದೆ, ತನ್ನ ಕಾಲೇಜಿನ ವಾಲಿಬಾಲ್ ತಂಡದ ಕ್ಯಾಪ್ಟನ್ ಕಿಶೋರ್, ಅವನ ಆಳವಾದ ಮತ್ತ ಕಂಗಳು, ಮುಖವನ್ನು ಬೊಗಸೆಯಲಿ ಅಪ್ಪಿಕೊಂಡಂತೆ ಆಪ್ತವಾಗಿ ಕಾಣುತ್ತಿದ್ದ ಗಡ್ಡ, ಆ ತುಂಟ ನಗು! ತೆರೆದ ತೋಳಿನ ಟಿ ಶರ್ಟಿನಲ್ಲಿ ಅವನು ಕೈ ಎತ್ತರಿಸಿ,ಮೇಲೆ ನೆಗೆದು ವಾಲಿಬಾಲ್ ಅಪ್ಪಳಿಸುತ್ತಿದ್ದರೆ, ಅರಿವಿಲ್ಲದೆ ಎದೆ ಬೆಚ್ಚಗಾಗುತ್ತಿತ್ತು. ಅವನು ಹಾಗೆ ಆಡುತ್ತಿರುವಾಗ, ಅವನ ಹಣೆಯ ಮೇಲೆ ಮೂಡಿ ಗಡ್ಡದೊಳಗೆ ಮರೆಯಾಗಿ, ಮತ್ತೆ ಎದೆಯ ಕೂದಲಿನೊಳಗೆ ಹುದುಗುತ್ತಿದ್ದ ಬೆವರ ಹನಿಗಳನ್ನು ಬಸಿದುಕೊಂಡುಬಿಡಬೇಕು ಅನಿಸುತ್ತಿತ್ತು. ಚೆಂಡನ್ನು ಬಾರಿಸುವ ಅವನ ಹುರಿಗಟ್ಟಿದ ಮಾಂಸಲ ತೋಳುಗಳ ಚಲನೆ ಯಾವುದೋ ಕವಿತೆಯಂತೆ ಕಾಣುತ್ತಿತ್ತು, ಆಟದ ನಡುವೆ ಅವನೊಮ್ಮೆ ತಿರುಗಿ ಹುಡುಗಿಯರ ಸಾಲಿನತ್ತ ನೋಡುವಾಗ ಅವನು ತನ್ನನ್ನೇ ನೋಡುತ್ತಿದ್ದಾನೆ ಅಂತ ಅವಳಿಗೆ ಪಕ್ಕಾ ಅನಿಸುತ್ತಿತ್ತು, ಮತ್ತೆ ಅವನು ಎಲ್ಲಾದರೂ ಅಚಾನಕನೆ ಎದುರಾದಾಗಲೂ ಆ ಕಂಗಳು ತನ್ನನ್ನೇ ನೋಡುತ್ತಿವೆಯೆನಿಸಿ, ಎದೆಯ ನೋಡುತ್ತಿತ್ತು, ಕೆನ್ನೆಗಳು ಬಿಸಿಯೇರಿ ಕೆಂಪಾಗಿ, ಮೈಯಿಡೀ ನವಿರೇಳುತ್ತಿತ್ತು.
ಈಗ ಕಾಲೇಜಿನ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಎಲ್ಲರೂ ಫೋಟೋ ಶೇರ್ ಮಾಡುವಾಗ ನೋಡಿದ್ದಳು. ಕಿಶೋರ ಯಾವುದೋ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ, ಹೊಟ್ಟೆ ಮುಂದೆ ಬಂದು ಕಣ್ಣಿಗೆ ಚಶ್ಮಾ ಬಂದು ಹುಡುಗಿಯರ ಕನಸಿಗೆ ಬರುತ್ತಿದ್ದ ಯಾವ ಅಂಶವನ್ನೂ ಉಳಿಸಿಕೊಳ್ಳದೆ ಪೆಂಗನಂತಿದ್ದ. ಅವನೊಂದಿಗೆ ಮಾಡಿದ ಪರ್ಸನಲ್ ಚಾಟ್‌ನಲ್ಲಿ ‘ಯಾಕೋ ಹೀಗಾಗಿದ್ದೀಯ? ಮುಂಚೆ ನಾವು ಕಾಲೇಜ್‌ನಲಿದ್ದಾಗ ಹುಡ್ಗೀರೆಲ್ಲ ನಿನ್ನೇ ನೋಡ್ತಿದ್ದರು ಕಣೋ, ಅದೂ ವಾಲಿಬಾಲ್ ಆಟ ಆಡುವಾಗ! ಅಬ್ಬ ಎಷ್ಟು ಚಂದ ಕಾಣ್ತಾ ಇದ್ದೆ. ಈಗ ಹೆಂಗೆಂಗೋ ಆಗೋಗಿದೀಯ. ಮುಂಚಿನಂತೆ ಸ್ವಲ್ಪನಾದ್ರೂ ಫಿಟ್ನೆಸ್ ಮೇಂಟೇನ್ ಮಾಡೋ’ ಅಂದಾಗ ಮತ್ತೆ ಪೆಂಗನಂತೆ ನಕ್ಕು ‘ಏ.. ಹೋಗೇ ಹುಡ್ಗೀರೆಲ್ಲ ನೋಡ್ತಿದ್ರಂತೆ ನನ್ನ! ಅದರಲ್ಲೂ ಆಟಾಡುವಾಗ! ನಂಗಾ, ಆಟ ಆಡಿ ಸುಸ್ತಲ್ಲಿ ಸಾಕ್ಸಾಕು ಅನ್ಸಿಬಿಟ್ಟಿರೋದು, ಅದರಲ್ಲಿ ಇದೆಲ್ಲ ಎಲ್ಲಿ ನೋಡೋದಕ್ಕಾಗ್ತಿತ್ತು’ ಎಂದಿದ್ದ. ಎಂಥಾ ಅನ್ ರೊಮ್ಯಾಂಟಿಕ್ ಪರ್ಸನ್ ಇವ್ನು ಅನಿಸಿಬಿಟ್ಟಿತ್ತು. ಅದಕ್ಕಿಂತ ಹೆಚ್ಚಾಗಿ, ಆದರೆ ಆಗ ಅವನು ತನ್ನನ್ನೇ ತಿರುಗಿ ನೋಡುತ್ತಿದ್ದಾನೆ ಅಂತ ಬೇರೆ ಅನಿಸ್ತಾ ಇತ್ತಲ್ಲ, ಅದು ಎಷ್ಟು ನಿಜ ಎಂಬ ಗೊಂದಲ ಗುಮಿಗೂಡಿತ್ತು, ಆದರೆ ಅದನ್ನೆಲ್ಲ ಪುರುಸೊತ್ತಾಗಿ ಕೂತು ಯೋಚಿಸುವಷ್ಟು ವ್ಯವಧಾನವಂತೂ ಅವಳಿಗಿರಲಿಲ್ಲವಾಗಿ ಅವಳು ಅದನ್ನು ಹಾಗೇ ಬದಿಗೊತ್ತಿಬಿಟ್ಟಿದ್ದಳು. ಹಾಗೆ ನೋಡಿದರೆ ಈ ಮನಸಾದರೂ ನಮಗೆ ಬೇಕಾಗಿದ್ದನ್ನೇ ನೋಡುತ್ತದೆಯೇನೋ ಅಥವಾ ನಮಗೆ ಬೇಕಿರುವಂತೆ ನೋಡುತ್ತದೋ ಏನೋ! ಗೊತ್ತಿಲ್ಲ. ಅದನ್ನು ಹೇಗೆ ಹೇಳುವುದು… ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಸ್ವತಃ ಕಿಶೋರನನ್ನೇ ‘ನೀನು ನನ್ನನ್ನ ನೋಡ್ತಾ, ಕಣ್ಣುತಪ್ಪಿಸ್ತಾ ಇರಲಿಲ್ಲವಾ?’ ಅಂತ ನೇರ ಕೇಳಿಬಿಡುವಾ ಎಂದು ಬಾಯ್ತುದಿಯವರೆಗೆ ಬಂದರೂ ಅವಳದನ್ನು ಕೇಳದೇ ಉಳಿದಿದ್ದಳು.
ಅದೊಂದು ಕಾಲ. ಆ ಎಳೆಯ ಹರೆಯದಲಿ ಉಕ್ಕಿಬರುತ್ತಿದ್ದ ಆ ಬೆಚ್ಚಗಿನ ಭಾವ, ಎದೆಯೊಳಗೆ ಅಲೆಯೇಳುತ್ತಿದ್ದ ಪುಳಕ, ಮೈಯಿಡೀ ವ್ಯಾಪಿಸುತ್ತಿದ್ದ ನರುಗಂಪನ. ಈ ದೇಹವೆಂಬುವುದೊಂದು ತಂತಿಯೋ, ಅದನ್ಯಾರೋ ಮೀಟಿ ಎಳೆದರೋ ಎಂಬಂತೆ… ಯಾವಾಗಲೂ ಒಂದು ಪುಳಕಿತ ಪಲುಕನ್ನು ಹೊತ್ತುಕೊಂಡೇ ತಿರುಗುತ್ತಿದ್ದ ಆ ಯೌವನದ ದಿನಗಳನ್ನು ದಾಟಿ ಬಂದ ಮೇಲೆ ಇದೀಗ ಈ ನಡುಹರೆಯದಲ್ಲಿ ಅದ್ಯಾರೋ ಅನಾಮಿಕನೆಡೆಗೆ ತುಯ್ಯುತ್ತಿರುವ ಎದೆಗಡಲನ್ನು ಹೇಗಾದರೂ ಸಂಭಾಳಿಸುವುದೋ ಅವಳಿಗೆ ತಿಳಿಯದಾಗಿತ್ತು. ಅದಲ್ಲ ವಿಷಯ, ಆ ಹದಿಹರೆಯದ ಪುಳಕಕ್ಕೂ, ರೋಮಾಂಚನಕ್ಕೂ, ನರುಗಂಪನಕ್ಕೂ ಈಗಿನ ನಡುಹರೆಯದ ಭಾವಾವೇಗಕ್ಕೂ ಯಾವೊಂದೂ ವ್ಯತ್ಯಾಸವೇ ಇರಲಿಲ್ಲ! ಅದು ವಿಷಯ! ಅಲ್ಲಿಗೆ ವಯಸ್ಸಾಗಿರುವುದು ಯಾವುದಕ್ಕೆ? ದೇಹಕ್ಕೆ ಮಾತ್ರವೇ? ಮನಸು ಪಕ್ವವಾಗುವುದು ಅನ್ನುತ್ತಾರಲ್ಲ ಅದೇನದು? ಆಯ್ಕೆಗಳನ್ನೆಲ್ಲ ಬದಿಗೊತ್ತಿ, ಹೆಚ್ಚು ತಕರಾರು ಮಾಡದೆ, ಇರುವುದನ್ನು ಒಪ್ಪಿಕೊಂಡು, ಒಪ್ಪಲಾಗದಿದ್ದರೂ ಒಪ್ಪಿಸಿಕೊಂಡು, ಅಪ್ಪಿಕೊಂಡು, ದಬ್ಬಿಸಿಕೊಂಡು ಹೇಗಾದರೊಂದು ಬದುಕುವುದೆ? ಅಥವಾ ಪರಿಸ್ಥಿತಿಗೆ ತಲೆಬಾಗಿ ಸ್ಥಿತಪ್ರಜ್ಞೆಯನ್ನು ಆರೋಪಿಸಿಕೊಂಡು ಒಳಗೊಳಗೇ ಬೇಯುತ್ತ, ಬೇಯುವಿಕೆಯ ಕಮಟು ವಾಸನೆ ಹೊರಗೆ ತೋರದಂತೆ ಕಾಯುತ್ತ, ಹೀಗೆ ಬೇಯುವುದೇ ಜೀವನದ ಸಾರ್ಥಕತೆಯೆಂದುಕೊಂಡು ಸುಳ್ಳೇ ನಂಬಿಸಿಕೊಳ್ಳುವುದೆ? ಅಥವಾ ನಿಜಕ್ಕೂ ಸ್ಥಿತಪ್ರಜ್ಙರಾಗಿಬಿಡುವುದೆ?
ಮದುವೆ ಮಾಡಿಕೊಟ್ಟಾಗ ಅವಳಿಗೆ ಆಯ್ಕೆಯ ಪ್ರಶ್ನೆಗಳಿರಲಿಲ್ಲ ಹಾಗೆ ನೋಡಿದರೆ ಈಗಲೂ ಇಲ್ಲ. ಮದುವೆಯಾದ ಮೇಲೆ ಅತ್ತೆ, ಮಾವ, ಗಂಡ, ನಾದಿನಿ, ಇಬ್ಬರು ಮೈದುನಂದಿರು, ಕುಟುಂಬದ ಹಿರಿಸೊಸೆ ಎಂಬ ಜವಾಬ್ದಾರಿ, ಗೌರವ… ಮನಸು ಎಲ್ಲವನ್ನೂ ಒಪ್ಪಿಕೊಂಡು ಗಂಭೀರವಾಗಿ ಬಿಟ್ಟಿತ್ತು. ತನ್ನ ಮದುವೆಯಾದ ಕೆಲವರ್ಷಗಳಲ್ಲೇ ಮನೆಯಲ್ಲಿ ಮತ್ತೆ ಮೂರು ಮದುವೆಗಳು, ಒಂದರ ಹಿಂದೊಂದರಂತೆ ಎರಡು ಮಕ್ಕಳು, ಮಾವನ ಹಠಾತ್ ನಿರ್ಗಮನ ಎಲ್ಲವೂ ನಿಯಮಿತ ಅವಧಿಯಲ್ಲಿ ಸರದಿಯಂತೆ ಸುಸೂತ್ರವಾಗಿ ನಡೆದುಹೋದವು. ಉಳಿದಂತೆ ಯಾವುದಕೂ ಕೊರತೆಯಿಲ್ಲದ ನೆಮ್ಮದಿಯ ಜೀವನ. ಸುತ್ತಲೂ ಪ್ರೀತಿ ತೋರುವ ಕುಟುಂಬ, ಮುದ್ದಾದ ಮಕ್ಕಳು ಸಮಾಜದ ನಿಯಮಾವಳಿಗಳಿಗೆ ಎಲ್ಲ ರೀತಿಯಿಂದಲೂ ಅನ್ವಯವಾಗುವ ಮಾದರಿ ಬದುಕು, ಆದರೆ ಒಳಗೆ ಮನದಾಳದ ಕೊಳದಲ್ಲಿ ಮುಳ್ಳಾಡಿದಂತೆ ಸಣ್ಣ ಸಂಚಲನೆ ಉಂಟು ಮಾಡುತ್ತಿದ್ದ ಅದೇನೋ ಒಂದು ಭಾವ ಅದೇನೆಂದು ಮಾತ್ರ ಗೊತ್ತಾಗುತ್ತಿರಲಿಲ್ಲ. ಇದಲ್ಲ ಇದರಾಚೆಗೇನೋ ಇದೆ ಅನಿಸುವುದು ಆದರೆ ಅದೇನೆಂದು ಹೊಳೆಯುತ್ತಿರಲಿಲ್ಲ. ಏನೋ ಒಂದು ಕೊರಗು, ಏನೋ ಹಳಹಳಿಕೆ ಕಾಡುವುದು. ಸುಮ್ಮನೆ ಹೇಳುವುದಾದರೆ ಬೋರು. ಬೋರಿಂಗ್..
ಅಂಥಾ ಒಂದು ದಿನದಲ್ಲೇ ಒಮ್ಮೆ ಅವಳು ಹಾಕಿಕೊಂಡಿದ್ದ ಡಿಪಿ ನೋಡಿ ಗೆಳತಿಯೊಬ್ಬಳು, ‘ಡಿಪಿಲಿ ಹಾಕಿರೋ ಚಿತ್ರ ನೀನು ಬರೆದಿದ್ದಾ’ಎಂದು ಪ್ರಶ್ನೆ ಹಾಕಿದ್ದಳು. ‘ನಾನಾ?? ನಿಂಗ್ಯಾಕೆ ಈ ಥರ ಡೌಟ್ ಬಂತು, ನಾನೆಲ್ಲೆ ಚಿತ್ರ ಬರೀತೀನಿ’ ಅಂದಾಗ ಆ ಗೆಳತಿ ಮರುಸವಾಲು ಹಾಕಿದ್ದಳು. ‘ಸ್ಕೂಲ್ ಡೇಸ್‌ನಲ್ಲಿ ಚೆನ್ನಾಗೇ ಬರಿತಿದ್ಯಲ್ಲೇ? ಬಿಟ್ಬಿಟಾ ಈಗ? ನಾನೆಲ್ಲೋ ಮತ್ತೆ ಶುರು ಮಾಡ್ಕೊಂಡೇನೋ ಅನ್ಕೊಂಡೆ, ಚಂದ ಇದೆ ಡಿಪಿ, ನೀನೂ ಮತ್ತೆ ಚಿತ್ರ ಬರಿಯಕ್ಕೆ ಟ್ರೈ ಮಾಡು’ ಅಂದಿದ್ದಳು. ಅವತ್ತು ಅವಳಿಗೆ ನೆನಪು ಮರುಕಳಿಸಿತ್ತು. ಮುಂಚೆಲ್ಲ ತಾನೂ ಚಿತ್ರ ಬರೀತಾ ಇದ್ನಲ್ಲ ಅನಿಸಿ ಸಂಜೆಯೇ ತಾನು ಬರೆಯಬಹುದಾದ ಚಿತ್ರಗಳಿಗಾಗಿ ಯೂ ಟ್ಯೂಬ್, ಫೇಸ್ಬುಕ್ ಜಾಲಾಡತೊಡಗಿದ್ದಳು. ಹುಡುಕಿದ್ದು ಚಿತ್ರಗಳನ್ನೇ ನಿಜ, ಸಿಕ್ಕಿದ್ದು ಮಾತ್ರ ಚಿತ್ರಕಾರ.
ಅವನ ಚಿತ್ರಕ್ಕೆಂದು ನಿರ್ದಿಷ್ಟವಾಗಿ ಕಮೆಂಟಿಸಿದ್ದು ಎರಡೇ ಎರಡು ಬಾರಿ; ಒಂದು ಮೊತ್ತಮೊದಲನೇ ಸಲ ನೋಡಿದಾಗ, ಎರಡನೆಯದು ಅವಳು ಕಮೆಂಟಿನಲ್ಲಿ ಬಳಸಿದ್ದ ಹಾಡಿನ ಸಾಲನ್ನು ಅವನು ತನ್ನ ಚಿತ್ರವೊಂದಕ್ಕೆ ಹೊಂದಿಸಿದಾಗ, ಆದರೆ ಆ ನಂತರ ಅವಳು ಎಂದಿಗೂ ಪ್ರತ್ಯೇಕವಾಗಿ ಕಮೆಂಟಿಸಲಿಲ್ಲ, ಆದರೆ ತಾನು ಹಾಕುವ ಪೋಸ್ಟುಗಳು ಅವನನ್ನು ತಲುಪುತ್ತಿವೆ ಎಂದು ಮಾತ್ರ ಅನಿಸುತ್ತಿತ್ತು. ಅವನು ಹಾಕುವ ಪ್ರತಿ ಚಿತ್ರವೂ, ಫೋಟೋಗಳೂ ತನಗೇ ಅನಿಸುತ್ತಿತ್ತು. ಒಮ್ಮೆಯಂತೂ ಮಳೆ ಸುರಿದು ಮುಗಿದ ನಂತರದ ಖಾಲಿಬಯಲಿನ ಫೋಟೋವೊಂದನ್ನು ಹಾಕಿದ್ದ. ಅದನ್ನು ನೋಡಿದ್ದೇ ಅವಳ ಎದೆ ಝಲ್ಲೆಂದು, ಯಾವ ಸಕಾರಣವೂ ಇಲ್ಲದೆ ತಾನೂ ಹೀಗೆಯೇ ಒಮ್ಮೆ ಸಂತೃಪ್ತಳಾಗಿ ಮಲಗಬೇಕೆನಿಸಿಬಿಟ್ಟಿತ್ತು. ಅಸಲು ಸಂತೃಪ್ತಿಯಿರುವುದು ಸುರಿವ ಮಳೆಯಲ್ಲಾ, ಒಳಗಿಳಿಸಿಕೊಳ್ಳುವ ಭೂಮಿಯಲ್ಲಾ, ಅಥವಾ ಇವೆರಡರ ಹದದಲ್ಲಾ? ಹಾಗಂತ ಅವಳು ಆ ಚಿತ್ರವನ್ನೊಮ್ಮೆ ನೋಡಿ ಯೋಚಿಸಿದಳು. ಇಂಥ ಆಲೋಚನೆಗಳೆಲ್ಲ ಹಿಂದೆ ಎಂದೂ ಬಂದಿರಲಿಲ್ಲ. ಸುಮ್ಮನೆ ಬಂದಂತೆ ಬದುಕುತ್ತ ಹೋಗಿದ್ದಳು, ಎಲ್ಲವೂ ಸರಿಯಾಗೇ ಇತ್ತು,ಏನೋ ಒಂದು ಹೇಳತಿಳಿಯದ ಸಂಕಟವು ಎದೆಯೊಳಗೆ ಬಾಧಿಸುತ್ತಿತ್ತು ಅನ್ನುವುದು ಬಿಟ್ಟರೆ ಅವಳಿಗೆ ಗುರುತರ ಕೊರತೆಯೆಂಬುವುದೇನೂ ಇರಲಿಲ್ಲ. ಬೆಳಗಿನ ತಿಂಡಿಗೇನು, ಅಡುಗೆಗೇನು, ಯಾವ ಸೀರೆ, ಯಾವ ಆಭರಣ? ಗಂಡನಿಗೆ, ಮಕ್ಕಳಿಗೆ, ಮನೆಗೆ ಏನು ಕೊಳ್ಳಬೇಕು, ಯಾವ ಗಿಡ ನೆಡಲಿ, ಯಾವ ಹೂವು ಮುಡಿಯಲಿ ಇಂಥವೇ ಸಣ್ಣಪುಟ್ಟ ಮಹತ್ತರ ವಿಷಯಗಳು. ಅದು ಕೂಡ ಬಹಳಷ್ಟು ಬಾರಿ ಏನೇನೂ ಯೋಚಿಸದೆ ಈ ಎಲ್ಲವನ್ನೂ ಮಾಡಿದ್ದಿದ್ದೆ ಎಲ್ಲವೂ ಎಲ್ಲೋ ಸಬ್ಕಾನ್ಶಿಸ್ ಲೆವಲಿನಲಿ ಆಪರೇಟ್ ಆಗುತ್ತಿದೆಯೇನೋ ಎಂಬಂತೆ.
ಸುತ್ತಲೂ ಪ್ರೀತಿ ತೋರುವ ಕುಟುಂಬ, ಮುದ್ದಾದ ಮಕ್ಕಳು ಸಮಾಜದ ನಿಯಮಾವಳಿಗಳಿಗೆ ಎಲ್ಲ ರೀತಿಯಿಂದಲೂ ಅನ್ವಯವಾಗುವ ಮಾದರಿ ಬದುಕು, ಆದರೆ ಒಳಗೆ ಮನದಾಳದ ಕೊಳದಲ್ಲಿ ಮುಳ್ಳಾಡಿದಂತೆ ಸಣ್ಣ ಸಂಚಲನೆ ಉಂಟು ಮಾಡುತ್ತಿದ್ದ ಅದೇನೋ ಒಂದು ಭಾವ ಅದೇನೆಂದು ಮಾತ್ರ ಗೊತ್ತಾಗುತ್ತಿರಲಿಲ್ಲ. ಇದಲ್ಲ ಇದರಾಚೆಗೇನೋ ಇದೆ ಅನಿಸುವುದು ಆದರೆ ಅದೇನೆಂದು ಹೊಳೆಯುತ್ತಿರಲಿಲ್ಲ. ಏನೋ ಒಂದು ಕೊರಗು, ಏನೋ ಹಳಹಳಿಕೆ ಕಾಡುವುದು.
ಅಂಥದ್ದರಲ್ಲಿ ಇದೀಗ ಕಳೆದ ಆರುತಿಂಗಳಿನಿಂದ ತನ್ನೊಳಗೆ ನಡೆಯುತ್ತಿರುವ ಈ ಹುಚ್ಚು ಹೋರಾಟಕ್ಕೆ ಯಾವ ಹೆಸರನ್ನೂ ಅವಳು ಇಡದಾಗಿದ್ದಳು. ಅವನ ಚಿತ್ರಗಳು ಯಾಕೆ ಸೆಳೆಯುತ್ತಿವೆ, ಅಸಲು ಸೆಳೆಯುತ್ತಿರುವುದು ಅವನಾ? ಅವನ ಚಿತ್ರಗಳಾ? ಅವನ ಕೈಬೆರಳುಗಳಲ್ಲಿ ಮೆತ್ತಿಕೊಂಡಿರುವ ಬಣ್ಣವನ್ನೇಕೆ ತನ್ನ ಕೆನ್ನೆಗೆ ಪೂಸಿಕೊಳ್ಳಬೇಕೆನಿಸುತ್ತದೆ? ಅವನೆದುರಿಗಿರುವ ಕ್ಯಾನ್ವಾಸಿನಂತೆ ಸ್ವತಃ ತಾನೇ ಯಾಕೆ ಮೈತೆರೆದುಕೊಳ್ಳಬಾರದು ಅನಿಸುತ್ತದೆ. ಅವನೆಲ್ಲೋ ಅನಾಮಿಕ, ಅವನ ಹೆಸರು ಕೂಡ ಪ್ರೊಫೈಲಿನಲ್ಲಿ ಹಾಕಿಕೊಂಡವನಲ್ಲ, ಮುಖವನ್ನೂ ತೋರಿದವನಲ್ಲ, ಆರ್ಟ್ ವಿಲೇಜ್ ಅಂತೆ ಹೆಸರು, ಆದರೆ ಎಲ್ಲೂ ಊರಿನ ಹೆಸರನ್ನೂ ಹಾಕಿಕೊಂಡಿಲ್ಲ. ಆಗೀಗ ಶೇರ್ ಮಾಡುವ ಚಿತ್ರಗಳ ಅಂಗಡಿಬೋರ್ಡ್‌ಗಳನ್ನ ಹಿಗ್ಗಲಿಸಿ ನೋಡಿದ್ದಾಳೆ. ಒಮ್ಮೆ ಧಾರವಾಡ, ಮತ್ತೊಮ್ಮೆ ಬೆಂಗಳೂರು, ಒಮ್ಮೆ ಶಿರಸಿ ಮತ್ತೊಮ್ಮೆ ಶಿವಮೊಗ್ಗ ಸರಿಯಾದ ಅಲೆಮಾರಿಯೇ ಇರಬೇಕು.
ಇನ್ನು ಅವನ ಚಿತ್ರಗಳೋ…
ವಿಷಾದ ಉಕ್ಕಿಸುವ ಖಾಲಿ ಕಡಲ ತೀರ, ನದಿದಂಡೆಯ ಬೋಳುಮರ, ಮುಳುಗುತ್ತಿರುವ ಕಪ್ಪು ಸೂರ್ಯ, ದಾರಿಕಾಯುತ್ತಿರಬಹುದಾದ ಒಂಟಿ ಹಕ್ಕಿ, ಒಡೆದುಹೋದ ಕಪ್ಪೆಚಿಪ್ಪು, ಜೀವಕ್ಕೆ ತತ್ತಳಿಸುವ ಮೀನು, ಒಡೆದ ಕನ್ನಡಿ ಚೂರುಗಳು, ನಗರವನ್ನು ಸುಡುವ ಬೆಂಕಿ, ಪಾಳುಬಿದ್ದ ಅರಮನೆ, ವ್ಯರ್ಥವಾಗಿ ಸುರಿದು ಹೋಗುತ್ತಿರುವ ಕಾಡುಬೆಳದಿಂಗಳು, ಯಾರೂ ನಡೆಯದ ಕಾಡುಹಾದಿ ಬರೇ ಇಂಥವೇ! ನಡುನಡುವೆ ಬುದ್ಧ, ಕೃಷ್ಣ ರಾಧೆ ಇವರೆಲ್ಲ ಸುಳಿದುಹೋಗುತ್ತಿದ್ದರೂ ಅವಳ ಕಣ್ಣಿಗೆ ಪ್ರಶಾಂತ ಬುದ್ಧನ ತುಟಿಯಂಚಿನಲ್ಲೂ ವಿಷಾದದ ಗೆರೆ ಕಾಣಸಿಗುತ್ತಿತ್ತು. ಎಲ್ಲೋ ಯಾವುದೋ ನೋವಿನಲ್ಲಿದ್ದಾನೆ ಹುಡುಗ ಅನಿಸುತ್ತಿತ್ತು. ಹುಡುಗನೋ ನಡುವಯಸ್ಕನೋ ಇಲ್ಲ ವಯಸ್ಸಾದವನೋ ಯಾರಿಗೆ ಗೊತ್ತು, ಕೈಬೆರಳುಗಳ ಗೆರೆಗಳೂ, ಚಲನೆಯೂ ಅವನಿಗಿನ್ನೂ ಮೂವತ್ತು ಕೂಡ ಆಗಿಲ್ಲ ಎಂಬಂತೆ ತೋರುತ್ತದೆ. ಅವನನ್ನು ನೋಡಬೇಕು ಅನಿಸುತ್ತದೆ. ಯಾಕೆಂದು ಹೇಳಲಾಗುವುದಿಲ್ಲ. ಇಷ್ಟೊಂದು ಚಂದ ಚಿತ್ರ ಬರೆಯುವ ಅವನು ಹೇಗಿದ್ದಾನೆಂದು ನೋಡಬೇಕೆನಿಸಿದೆ ಅಷ್ಟೇ ಎಂದು ಅವಳು ಮನಸಿಗೆ ಸಮಜಾಯಿಷಿ ಕೊಟ್ಟುಕೊಳ್ಳುತ್ತಾಳೆ. ಆದರೆ ಇದು ಇಷ್ಟೇ, ಇದೊಂದು ಕುತೂಹಲ ಮಾತ್ರವೇ ಎಂದು ಬಾರಿಬಾರಿ ಅಂದುಕೊಂಡರೂ ಅದು ಹಾಗಲ್ಲ ಬೇರೇನೋ ಇದೆ ಎಂದು ಅವಳಿಗೇ ಅನಿಸುತ್ತದೆ. ಹಾಗೆ ನೋಡಿದರೆ ಚಿತ್ರ ಬರೆಯಬೇಕು ಮತ್ತೆ ಎಂಬ ಕುತೂಹಲದಿಂದ ಚಿತ್ರ ಜಾಲಾಡುವಾಗ ಅದೆಷ್ಟು ಜನ ಕಲಾವಿದರ ಚಿತ್ರಗಳನ್ನ ನೋಡಿಲ್ಲ, ಎಷ್ಟೊಂದು ಚಿತ್ರಗಳನ್ನ ಸ್ಕ್ರೀನ್ ಶಾಟ್ ಮಾಡಿಟ್ಟುಕೊಂಡಿಲ್ಲ, ಎಷ್ಟೊಂದು ಯೂ ಟ್ಯೂಬ್ ಲಿಂಕ್‌ಗಳನ್ನ ಸೇವ್ ಮಾಡಿಟ್ಟುಕೊಂಡಿಲ್ಲ, ಅಂಥದ್ದರಲ್ಲಿ ಇವನದ್ದು ಮಾತ್ರ ಯಾಕೆ ವಿಶೇಷವೆನಿಸುತ್ತದೆ. ಬಹುಶಃ ಆತನ ಮತ್ತು ತನ್ನ ಅಭಿರುಚಿಗಳು ಒಂದೇ ಆಗಿರುವುದರಿಂದಲೇ? ಇಲ್ಲಾ, ಒಂದುವೇಳೆ ತಾನು ಚಿತ್ರಬರೆದಿರುತ್ತಿದ್ದರೆ ಅವನು ಬರೆಯುವಂಥ ಚಿತ್ರಗಳನ್ನೆ ಬರೆದಿರುತ್ತಿದ್ದೆನೆ? ಒಂಟಿಹಕ್ಕಿ, ಯಾರದೋ ಬರುವಿಕೆಗಾಗಿ ಕಾಯುವ ಖಾಲಿ ಹಾದಿ, ಮಳೆಬಿದ್ದು ತೊಯ್ದ ನೆಲ, ನೆಲಕಚ್ಚಿದ ಹೂವು ಇಂಥವೇ? ಸೆಳೆಯುತ್ತಿರುವುದು ಅವನ ಚಿತ್ರಗಳೆ? ಅಥವಾ ಆ ಚಿತ್ರಗಳೊಡನೆ ನನ್ನನ್ನು ಸಮೀಕರಿಸಿಕೊಳ್ಳುತ್ತಿರುವ ಭಾವವೆ? ಹಾಗೆ ಸಮೀಕರಿಸಿಕೊಳ್ಳಲು ನನ್ನ ವಸ್ತುಸ್ಥಿತಿ ಹಾಗಿದೆಯೆ ಅದಕ್ಕೆ? ಹಾಗೆ ನೋಡಿದರೆ ಎಲ್ಲವೂ ಸರಿಯಾಗಿದೆ, ಪರ್ಫೆಕ್ಟ್! ಅಷ್ಟಾದರೂ ಏನದು ಅರ್ಥವಾಗದ ಒಂಟಿತನ? ಮಾಡಲಿಕ್ಕೆ ಇನ್ನೇನೂ ಇಲ್ಲ ಅನಿಸಿಬಿಟ್ಟಾಗ ಕಾಡುವ ಚಡಪಡಿಕೆ, ಖಾಲಿತನ ಅಸಹನೀಯ.
ಅವಳೀಗ ನಿಧನಿಧಾನಕೆ ಮೆಟ್ಟಿಲಿಳಿದು ನಡೆಯತೊಡಗಿದ್ದಳು. ಕೋಟೆಯ ಕಿಟಕಿ ತೆರೆದು ಹೊರಗಿಣುಕಿ ನೋಡಿದವಳಿಗೆ ಆಹ್ಲಾದತರುವ ತಂಗಾಳಿಯ ಸ್ಪರ್ಶವಾದಂತಿತ್ತು. ಅದರಲ್ಲಿ ಒಂದು ಉನ್ಮತ್ತ ಪರಿಮಳವಿತ್ತು, ಕಿವಿತೆರೆದರಷ್ಟೇ ಕೇಳಬಹುದಾದ ಸೂಕ್ಷ್ಮ ಸಂಗೀತವಿತ್ತು, ಒಂದು ಆಹ್ವಾನವಿತ್ತು. ಅವಳೀಗ ಗಾಳಿಯಲ್ಲಿ ತೇಲಬಯಸಿದ್ದಳು, ಕರಗಬಯಸಿದ್ದಳು. ಅದೇ ಮೊದಲಿಗೆ ಆಸ್ಥೆಯಿಂದ ಮೊಬೈಲಿನ ರಿಂಗ್‌ಟೋನ್ ಬದಲಿಸಿದ್ದಳು.
‘ಕಾಣದಾ ಕಡಲಿಗೆ ಹಂಬಲಿಸಿದೆ ಮನ..’.
ಇದಕ್ಕೆ ಅರ್ಥವಿಲ್ಲ. ಅವಳಿಗದು ಗೊತ್ತಿತ್ತು. ಅರ್ಥ ಹುಡುಕಲು ಹೋಗಲೂ ಬಾರದು ಹೃದಯ ಹಾಗಂದಿತು. ಇದೆಲ್ಲ ಹುಚ್ಚಾಟ ವಿವೇಕ ಎಚ್ಚರಿಸಿತು. ‘ತಲೆ! ಹೀಗೇ ಹುಟ್ಟಿ ಹೀಗೇ ಸತ್ತು ಹೋಗಬೇಕಾ? ಈಗೇನಾಯ್ತು ಅಂತ, ಚಂದ ಚಿತ್ರ ಬರೆಯುತ್ತಾನೆ, ಅವನ ಚಿತ್ರಗಳು ಇಷ್ಟವಾಗುತ್ತವೆ, ಇಷ್ಟೊಂದು ಚಂದ ಚಿತ್ರ ಬರೆಯುವ ಅವನನ್ನು ನೋಡಬೇಕು ಅನಿಸುತ್ತದೆ. ಒಂದು ಕುತೂಹಲ, ಒಂದು ಸಣ್ಣ ಆಸೆ, ಏನಿಲ್ಲ ಬೇರೇನೂ ಇಲ್ಲ, ಒಂದು ಫ್ಯಾನ್ ಗರ್ಲ್ ಮೊಮೆಂಟ್ ಅಷ್ಟೇ ಅಷ್ಟನ್ನ ಹೊಂದಬೇಕು. ಅಷ್ಟೆ.’ ಮರುನುಡಿಯಿತು ಹೃದಯ.
‘ಅಷ್ಟೆನಾ?’
‘ಅಷ್ಟೆ ಅಷ್ಟೆ ಅಷ್ಟೆ ಅಷ್ಟೆ.’ ಹೃದಯ ಕಿರುಚಿತು.
ಆ ನಂತರ ಹೃದಯದಲ್ಲಿ ಅಪೂರ್ವ ಶಾಂತಿ.
ಹೀಗಿರಲು, ಅವತ್ತೊಂದು ರಾತ್ರಿ ಗಂಡನ ಎದೆಗೊರಗಿ ಕಾಲು ಬಳಸಿ ಹತ್ತಿರ ಎಳೆದುಕೊಂಡು ಕೇಳಿದಳು.
“ಊರಿಗೆ ಹೋಗಿ ಅಮ್ಮನನ್ನು ನೋಡಿಬರಲೆ?”
“ಇದರಲ್ಲೇನಿದೆ? ಹೋಗಿ ಬಾ, ಯಾವತ್ತು ಹೋಗ್ತಾ ಇದೀಯ?”
“ನಾಳೆ?”
“ಅಪ್ಪುಗೆ ಪರೀಕ್ಷೆ ಸಮಯ, ಮುಗಿಸಿಕೊಂಡು ಹೋದರೆ ಒಳ್ಳೆದಲ್ವಾ?”
“ಅತ್ತೆ ಇದಾರಲ್ಲ, ಒಂದೇ ದಿನ ಹೀಗೆ ಹೋಗಿ ಹಾಗೆ ಬರುತ್ತೀನಿ. ಅಮ್ಮನನ್ನು ನೋಡಲೇಬೇಕು. ಕನಸಿನಲ್ಲಿ ಹುಷಾರಿರಲಿಲ್ಲ.”
“ಫೋನ್ ಮಾಡಿ ಮಾತಾಡಿದೆ ತಾನೆ? ಆರಾಮಿದಾರಲ್ಲ, ಇದಕ್ಕೆಲ್ಲ ತಲೆ ಕೆಡಿಸಿಕೋತರ‍್ಯೆ?”
“ಇಲ್ಲ ನಾನು ಹೋಗಬೇಕು ಪ್ಲೀಸ್” ಅವಳ ದನಿ ಕಟ್ಟಿತ್ತು.
“ಇದಕ್ಕೆಲ್ಲ ಇಷ್ಟು ಕೇಳಬೇಕು ಅಂತೇನಿಲ್ಲವೇ, ಪರೀಕ್ಷೆ ಸಮಯದಲ್ಲಿ ಹೋಗ್ತಿದೀಯ ಅಂದರೆ ಏನೋ ಮನಸಿಗೆ ಬಲವಾಗಿ ತೋಚಿರಬೇಕು, ಆರಾಮಾಗಿ ಹೋಗಿ ಬಾ, ನಾನು ನೋಡ್ಕೊಂತೀನಿ” ಗಂಡ ಅವಳನ್ನು ತಬ್ಬಿದ್ದ.
ಅವನನ್ನು ಅಪ್ಪಿ ಮುದ್ದಿಸಿ ಒಳಗಿಳಿಸಿಕೊಳ್ಳುವಾಗ ಇಷ್ಟುದಿನ ಅಸಹನೀಯವೆನಿಸುತ್ತಿದ್ದ ಅವನ ಉಬ್ಬುಹೊಟ್ಟೆ ಇವತ್ತು ಯಾವುದೇ ತಡೆಯೊಡ್ಡಲಿಲ್ಲ ಎಂಬುವುದನ್ನು ಅವಳು ಗಮನಿಸಿದಳು. ಅವನ ಎದೆಯಲ್ಲಿ ಮುಖಮರೆಸಿಕೊಂಡು ಮೂಗುಜ್ಜುವಾಗ ಬೇರೆಯದೇ ಘಮ ತೇಲಿದಂತೆ.. ಬಹಳ ದಿನಗಳ ನಂತರ ಅವಳು ಸುಳ್ಳೇ ನರಳದೆ, ನಿಜಕ್ಕೂ ಉತ್ತುಂಗದ ಪದಮುಟ್ಟಿ ಬಂದಳು. ತುಟಿಯಲ್ಲಿ ತುಳುಕಿದ ನಗುವಿಗೆ ಯಾವುದೇ ಅರ್ಥಹುಡುಕದೆ ನಾಚಿ ಮಲಗಿದಳು.
ಹೃದಯದಲ್ಲಿ ಮತ್ತೆ ಅಪೂರ್ವ ಶಾಂತಿ.
*****
ಆತ್ಮಗಳು ಸಂಭಾಷಿಸುತ್ತವೆ.
ಇಲ್ಲಿ ನಾನು ಉಕ್ಕಿದರೆ ಅಲ್ಲಿ ಅವನು ತುಳುಕುತ್ತಾನೆ. ಇಲ್ಲಿ ನಾನು ನಾಚಿದರೆ, ಅವನಲ್ಲಿ ಕೆಂಪಾಗುತ್ತಾನೆ. ಇಲ್ಲಿ ನಾನು ನೊಂದರೆ ಅವನು ಅಲ್ಲಿ ಚಿತ್ರ ಬರೆಯುತ್ತಾನೆ. ಅವನ ಚಿತ್ರದಲ್ಲಿ ನಾನಿದ್ದೇನೆ, ಅವನಿದ್ದಾನೆ. ಇಲ್ಲ ಇಲ್ಲ, ನಾವಿಬ್ಬರೂ ಇಲ್ಲ.. ನಮ್ಮ ಆತ್ಮಗಳಿವೆ. ಇದೇ ಮೊದಲ ಚಿತ್ರ ಪ್ರದರ್ಶನ, ಹಾಗಂತ ಅವನು ಹಾಕಿಕೊಂಡಿದ್ದಾನೆ. ಎಲ್ಲಬಿಟ್ಟು ಮೈಸೂರಿಗೇ ಯಾಕೆ ಬರುತ್ತಿದ್ದಾನೆ, ನಾವಿಬ್ಬರೂ ಇದೇ ಮೊದಲು ಒಬ್ಬರನೊಬ್ಬರು ನೋಡಲಿದ್ದೇವೆ. ಅವನನ್ನು ಗುರ್ತಿಸುವುದು ಸುಲಭ, ಅವನು ಚಿತ್ರಕಾರ ಅವನು ನನ್ನನ್ನು ಹೇಗೆ ಗುರ್ತಿಸಬಲ್ಲ? ನಾನು ಕೂಡ ಪ್ರೊಫೈಲಿನಲ್ಲಿ ನನ್ನ ಚಿತ್ರ ಹಾಕಿಕೊಂಡಿಲ್ಲ, ನವಿಲುಗರಿಯೊಂದರ ಚಿತ್ರ ಹಾಕಿದ್ದೇನೆ. ಹೆಸರು ಕೂಡ ನನ್ನಿಷ್ಟದಂತೆ ನವಿಲುಗರಿ ಅಂತ ಹಾಕಿದ್ದೇನೆ. ಆತ್ಮಗಳು ಸಂಭಾಷಿಸುವುದು ನಿಜವೇ ಆದರೆ ಅವನಿಗೆ ನಾನು ಗುರ್ತಾಗುತ್ತೇನೆ, ನಾವಿಬ್ಬರೂ ಒಬ್ಬೊರನ್ನೊಬ್ಬರು ಈ ಮೊದಲೇ ಅರಿತಿದ್ದೇವೆ ಅನಿಸುತ್ತದೆ. ಅಷ್ಟೇ ಇದೇ ನಿಜ. ಇಷ್ಟೇ ಸಾಕು.
“ನಿಮಗೆ ಬೇಸರವಿಲ್ಲ ತಾನೆ? ಯಾಕೋ ಹೋಗಲೇಬೇಕೆನಿಸಿದೆ.”
ಹೇ ಹುಚ್ಚಿ, ಇದೇನಿದು ಹೊರಟು ನಿಂತು ಮೇಲೆ? ಸುಮ್ಮನೆ ಹೋಗಿ ಬಾ”
“ಅತ್ತೆಗೆ ಎಲ್ಲ ಹೇಳಿದ್ದೀನಿ, ಎರಡು ದಿನಕ್ಕೆ ಎರಡು ಬಗೆ ಪಲ್ಯ, ಸಾಂಬಾರು ಮಾಡಿ ಫ್ರಿಜ್‌ಲಿಟ್ಟಿದ್ದೇನೆ. ಸ್ಸಾರಿ”
“ಅದೆಲ್ಲ ನಮ್ಗೇ ಮಾಡ್ಕಳಕ್ಕಾಗಲ್ವಾ? ಇವತ್ತೇನು ಹೊಸದಾ ನೀನು ಊರಿಗೋಗೋದು?”
“ಹಾಗಲ್ಲ.. ನಾನು ನಿಮ್ಮನ್ನ ತುಂಬ ಪ್ರೀತಿಸ್ತೀನಿ… ಥ್ಯಾಂಕ್ಯು.” ಅವಳು ಗಂಡನ ಕೈಯನ್ನು ಆಪ್ತವಾಗಿ ಹಿಡಿದು ಮೆಲ್ಲಗೆ ಪಿಸುಗುಟ್ಟಿದಂತೆ ಹೇಳಿದ್ದಳು.
“ಹೇ, ಇದೇನಿದು ಹೊಸತಾಗಿ? ಜೋಪಾನ ಹೋಗಿ ಬಾ” ಗಂಡ ನಕ್ಕ.
ಅವಳ ಕಂಗಳು ತುಂಬಿದವು. ಅವನ ನಗು ಎಷ್ಟು ಹೃದ್ಯವಾಗಿದೆ. ಛೆ ಎಂಥ ಬದುಕಿದು? ಈ ಕಟ್ಟಳೆಗಳೆಲ್ಲ ಹೇಗೆ ರೂಪುಗೊಂಡವು? ಕಾರಣವನ್ನೇನೂ ಕೊಡಲಾರದೆ ತುಡಿಯುತ್ತಿರುವ ಈ ಸೆಳೆತಕ್ಕೆ ಯಾವ ಹೆಸರಿಟ್ಟು ಕಲುಷಿತಗೊಳಿಸುವುದು? ಸುಮ್ಮನೆ, ಯಾವ ಕಾರಣವೂ ಇಲ್ಲದೆ ಮನ ಯಾಕೆ ಯಾರನ್ನೋ ಮೆಚ್ಚುವುದು? ತನ್ನನ್ನು ಅಕ್ಕರೆಯಿಂದ ಆದರಿಸುವ, ಮುಚ್ಚಟೆ ಮಾಡುವ, ಸಕಲ ಸವಲತ್ತುಗಳಿಂದ ಆರಾಮದಾಯಕ ಬದುಕನ್ನು ಕೊಡಮಾಡಿರುವ ಗಂಡನಿರುವಾಗ, ಜೀವ, ರಕ್ತ, ಮಾಂಸ ಹಂಚಿಕೊಂಡ ಕಣ್ಣಮಣಿಯಂಥ ಮಕ್ಕಳಿರುವಾಗ.. ಈ ಎಲ್ಲದರಾಚೆಗೂ ಏನೋ ಒಂದಿದೆ. ಅದು ಇದಲ್ಲ, ಇಲ್ಲಲ್ಲ, ಬೇರೆಲ್ಲೋ ಇದೆ, ಕರೆಯುತ್ತಿದೆ ಅನಿಸುತ್ತಿರುವಾಗ ಹಾಗೆಲ್ಲ ಎದ್ದು ಹೊರಟುಬಿಡುವಂತಿದೆಯೆ ಬದುಕು? ಸಾವಿರ ಸಾವಿರ ಡಿಸ್ಟ್ರಾಕ್ಷನ್‌ಗಳು ಬದುಕಿನ ಹಾದಿಯುದ್ದಕ್ಕೂ ಬರುತ್ತವೆ. ಬಲು ಮೋಹಕವಾಗಿ ಸಿಂಗರಿಸಿಕೊಂಡು, ಸನ್ನೆ ಮಾಡಿ ಕರೆಯುತ್ತವೆ ಆದರೆ ಅದನ್ನೆಲ್ಲ ದಾಟಿಕೊಂಡು, ವಿವೇಕದಿಂದ ಗುರಿಯತ್ತ ಸಾಗಬೇಕಂತೆ.
ಯಾವುದದು ಗುರಿ? ಎಲ್ಲಿರುತ್ತದೆ ಅಸಲು? ಬದುಕಿನ ಪಯಣವನ್ನೆಲ್ಲ ಗುರಿಮುಟ್ಟುವುದಕ್ಕಾಗಿ ವ್ಯರ್ಥಗೊಳಿಸಬೇಕೆ? ಅಂಥದ್ದೊಂದು ನಿಷ್ಟ್ರಯೋಜಕ ಗುರಿಯನ್ನು ಮುಟ್ಟುವ ಸಾರ್ಥಕತೆಯಾದರೂ ಏನು? ನಾನು ಗಾಳಿಯಾಗಬೇಕು, ಎಲ್ಲವನ್ನೂ ಮುಟ್ಟುವ, ಎಲ್ಲೂ ನಿಲ್ಲದ, ಯಾರ ಅಂಕೆಗೂ ಸಿಗದ, ನನ್ನ ಚಲನೆಯ ಗತಿಯನ್ನು ನಾನೇ ನಿರ್ಧರಿಸುವ ಬೀಸುಗಾಳಿಯಾಗಬೇಕು. ಸ್ವತಂತ್ರವಾಗಬೇಕು. ನನ್ನಷ್ಟಕ್ಕೆ ನಾನು ಬದುಕಬೇಕು, ಎಲ್ಲಿಯೂ ನಿಲ್ಲದೆ, ಎಲ್ಲರೊಳಗೊಂದಾಗಿ ಆದರೆ ಭಿನ್ನವಾಗಿ ಅವಿಚ್ಛಿನ್ನವಾಗಿ.
ನಾನೊಂದು ಸ್ವತಂತ್ರ ಆತ್ಮ. ನನ್ನನ್ನು ಗಡಿಗಳನ್ನಿಟ್ಟು ಯಾರೂ ಕಟ್ಟಲಾರರು ಆದರೆ ನನ್ನ ದೇಹ ಮತ್ತು ಬುದ್ದಿಯನ್ನು ವಿವೇಚನೆಯೆಂಬ, ಗೌರವವೆಂಬ, ಮರ್ಯಾದೆಯೆಂಬ, ಮಾನವೆಂಬ, ಶೀಲವೆಂಬ ಸಲಾಕೆಗಳಿಂದ ಪಂಜರ ನಿರ್ಮಿಸಿ ಕಟ್ಟಿಹಾಕಲಾಗಿದೆ. ಆದರೂ ಈ ಆತ್ಮ ಆ ಸರಳುಗಳೆಡೆಯಿಂದ ತಪ್ಪಿಸಿಕೊಂಡು ಹೊರಗೆ ಹಾರಲು ಹವಣಿಸುತ್ತಲೇ ಇರುತ್ತದೆ, ಹಾರುತ್ತದೆ.. ಹಾರಿಯೇ ಹಾರುತ್ತದೆ. ಮರಳಿ ಬರಬೇಕಾದ ಕೆಲವು ಅನಿವಾರ್ಯತೆಗಳಿಂದಾಗಿ ಮರಳಿಯೂ ಬರುತ್ತದೆ.
ನಾನೂ ಬರುತ್ತೇನೆ. ಹಾಗೆ ನಾನೆಲ್ಲಿ ಹೋಗಿಬಿಡಬಲ್ಲೆ. ಹಾಗೆ ಹೋಗುವುದು ನನ್ನ ಉದ್ದೇಶವಲ್ಲ.
ಬೇರೇನಿಲ್ಲ ಒಮ್ಮೆ ನೋಡಬೇಕು, ನೋಡಿ ಬರುತ್ತೇನೆ ಮತ್ತೆ ಗೂಡಿಗೆ ಮರಳುತ್ತೇನೆ. ಈ ಬದುಕಿಗಿಷ್ಟು ಸಾಕು.
ಹೃದಯ ಒಂದೇ ಸಮನೆ ಮಾತಾಡಿತು…ಬಸ್ಸಿನ ಪಯಣದುದ್ದಕ್ಕೂ. ಬಸ್ಸಿನ ಕಿಟಕಿಯ ಬಳಿ ಕೂತವಳಿಗೆ, ಗಾಳಿಗೆ ಹಾರಾಡುವ ಮುಂಗುರುಳು, ಬಿಗಿವ ಎದೆ, ಕಂಗಳಲಿ ಉರಿಯುತಿರುವ ಬೆಳಕು, ಅತ್ಯಂತ ಹೊಸದೆನಿಸಿ ಮುದವೆನಿಸಿತ್ತು.
“ಇದೇನಮ್ಮ, ಅಚಾನಕನೆ?’
“ನಿನ್ನ ನೋಡಬೇಕೆನಿಸಿತು, ಬರಬಾರದ?”
“ಅಪ್ಪುಗೆ ಪರೀಕ್ಷೆ ಅಲ್ವಾ?”
“ಅಮ್ಮ ಪ್ಲೀಸ್”
“ಸ್ವಲ್ಪ ಹೊತ್ತಿಗೆ ಹೊರಡ್ತೀನಿ ಅಂತಿದೀಯ?”
“ಕಲ್ಪನನ್ನೂ ನೋಡಬೇಕು, ನೋಡಿ ಬರ‍್ತೀನಿ “
“ನಿಜವಾಗಿ ಯಾರನ್ನ ನೋಡಬೇಕು?”
“ಅಮ್ಮ ಪ್ಲೀಸ್, ಸುಮ್ಮನೆ ಏನಾದರೊಂದು ಹೇಳುತ್ತಿರಬೇಡ, ನಿನ್ನ ನವಿಲು ಬಣ್ಣದ ಸೀರೆ ಕೊಡು, ಅದನ್ನು ಉಡಬೇಕೆನಿಸಿದೆ”
ಅಮ್ಮಂದಿರಿಗೆ ಎಲ್ಲ ಗೊತ್ತಾಗುತ್ತದೆ, ಕರುಳ ಬಂಧವೆಂದರೆ ಇದೇ ಇರಬೇಕು ಹೇಳಿಕೊಳ್ಳದೆಯೂ ಎಲ್ಲ ತಿಳಿಯುವುದು.
“ಅಮ್ಮ ಬರುತ್ತೇನೆ, ಬೇಗ”
“ಜೋಪಾನ”
ಜೋಪಾನ! ಜೋಪಾನ! ಹೀಗೆ ಜೋಪಾನ ಮಾಡಬೇಕಾದ ಎಷ್ಟೊಂದನ್ನು ಹೆಣ್ಣಿನ ಹೆಗಲಿಗೇರಿಸಿ ಅವಳ ಬೆನ್ನಿನ ವಜ್ಜೆಯನ್ನು ಹೆಚ್ಚಿಸಿದೆ ಈ ಸಮಾಜ! ಇದನ್ನೆಲ್ಲ ಕೊಡವಿಕೊಂಡು ಹಗುರಾಗುವ ದಿನ ಎಂದು ಬರಬಹುದು? ಬರಬಹುದೆ ಎಂದಿಗಾದರೂ? ಅವಳಿಗೆ ನಗುಬಂತು.
ಆರ್ಟ್ವಿಲೇಜ್
ವೆಲ್ಕಮ್ಸ್ ಯು.
ಬೋರ್ಡೇ ಎಷ್ಟೊಂದು ಆರ್ಟಿಸ್ಟಿಕ್ ಆಗಿದೆ. ಹೊಡೆದುಕೊಳ್ಳುತ್ತಿರುವ ಹೃದಯವನ್ನೂ, ನವಿಲು ಬಣ್ಣದ ಚೆಲುವಾದ ಸೀರೆಯನ್ನೂ ಸಂಭಾಳಿಸಿಕೊಂಡು ಅವಳು ಗ್ಯಾಲರಿಯ ಬಾಗಿಲು ತಲುಪಿದಳು. ಅವಳು ಹಾಗೆ ಒಳಹೋಗುವಾಗ ಬಲಪಾರ್ಶ್ವದಿಂದ ಬಿದ್ದ ಬೆಳಕಿನ ಕೋಲು ಅವಳ ಕಪೋಲವನ್ನು ಮತ್ತಷ್ಟು ಹೊಳಪಿಸಿತು, ಕೆನ್ನೆಗೇರಿದ ಕೆಂಪು ಮಿಂಚಿರಬೇಕು, ಕಂಗಳ ಮಿಂಚು ಫಡಫಡಿಸಿರಬೇಕು.. ಉದ್ದನೆಯ ಜಡೆಯನ್ನು ಎದೆಯಮೇಲೇ ಮಲಗುವಂತೆ ಎಳೆದುಕೊಂಡಿದ್ದಳು, ಹಾರಾಡುವ ಮುಂಗುರಳನ್ನು ಸುಳ್ಳೇ ಹಿಂಸರಿಸುವಂತೆ ಬೆರಳುಗಳಿಂದ ನೇವರಿಸಿಕೊಳ್ಳುತ್ತಿದ್ದಳು. ‘ಓ ದೇವರೇ, ಅವನ್ನನ್ನೀಗ ನೋಡಲೇಬೇಕೆ?
ನೋಡುವುದರೊಂದಿಗೆ ಎಲ್ಲವೂ ಮುಗಿದುಹೋಗುವುದೇ? ಈ ಕನಸಿನೊಂದಿಗೆ ಬದುಕುವುದೇ ನಿಜಕ್ಕಿಂತಲೂ ಸೊಗಸಾಗಿದೆ. ಒಂದುವೇಳೆ ಅವನು ನನ್ನನ್ನು ಗುರ್ತಿಸಲಿಲ್ಲವೆಂದರೆ ನಾನದನ್ನು ಹೇಗೆ ತಡೆದುಕೊಳ್ಳಬಲ್ಲೆ? ಸರಿ ಗುರ್ತಿಸಲಿಲ್ಲ, ನಾನೇ ಸ್ವತಃ ಹೋಗಿ ಏನೆಂದು ಪರಿಚಯಿಸಿಕೊಳ್ಳಬಲ್ಲೆ? ಸರಿ ಗುರ್ತಿಸಿದ, ಸುಮ್ಮನೆ ನಕ್ಕು ಎಲ್ಲ ವಿಸಿಟರ್ಸ್ ಥರ ನಾನೂ ಅಂದುಕೊಂಡು ಸುಮ್ಮನಾದರೆ? ಅಥವಾ ಹೀಗೇ ಅವನಿಗಾಗಿ, ಅವನಿಗಾಗಿ ಮಾತ್ರವೇ ಬಹಳಷ್ಟು ಜನ ಬಂದಿದ್ದರೆ, ನಿಜಕ್ಕೂ ಈ ಆತ್ಮಗಳು ಸಂಭಾಷಿಸುತ್ತವಾ? ಯಾಕೆ ಈ ಗೊಂದಲ ಈಗ ಈ ಹೊತ್ತಿನಲಿ ಧಿಡೀರೆಂದು? ಕಲ್ಪನೆಯಲಿ ಪಡೆದುಕೊಳ್ಳುವ ಸುಖ ನಿಜಕ್ಕಿಂತಲೂ ಹೆಚ್ಚು ತೀವ್ರವಾಗಿರುತ್ತದೆ, ದುಃಖವೂ. ಅಯ್ಯೋ ನಾನು ಹುಚ್ಚಿಯಾಗುತ್ತಿಲ್ಲ ತಾನೆ? ಅಷ್ಟಕ್ಕೂ ನಾನೇಕೆ ಬಂದೆ, ನೋಡಲು. ಸುಮ್ಮನೆ ನೋಡಿ ಹೋಗಲು, ನೋಡಿಹೋಗಲು ಮಾತ್ರ.. ಅಷ್ಟೇ ಅಷ್ಟೆ ಅಷ್ಟೆ.”
ಅವಳು ಕಿರುಚಿದಳು, ತನ್ನೊಳಗೆ. ಕಣ್ಣು ಕತ್ತಲಿಟ್ಟು ಬವಳಿಬಿದ್ದಳು.
ನವಿಲೊಂದು ಬಾಣ ತಾಕಿ ಕುಸಿದುಬಿದ್ದಂತೆ ಅಸಹಾಕಯಳಂತೆ, ಗಾಯಗೊಂಡವಳಂತೆ.. ಯಾವ ಚೈತನ್ಯವೂ ಆ ನಿಮಿಷದಲಿ ಅಲ್ಲಿಂದ ತನ್ನನ್ನು ಎಬ್ಬಿಸಲಾರದು ಎಂಬಂತೆ, ಏಳಳಲಾರೆನೋ ಎಂಬಂತೆ ಕುಸಿದಳು, ಅವಳ ಹಣೆ ಬಾಗಿಲಿಗೆ ತಾಕಿ, ರಕ್ತ ಊಟೆಯೊಡೆಯಿತು. ಯಾರು ಯಾರೋ ಬಂದರು, ಕೈಯೊತ್ತಿ ಹಿಡಿದರು, ನೀರು ಚಿಮುಕಿಸಿದರು, “ಮೇಡಂ, ಮೇಡಂ… ಮೇಡಂ…”
“ಮತ್ತೇನಿಲ್ಲ, ನಿಮ್ಮ ಬೆರಳುಗಳನ್ನೊಮ್ಮೆ ಮುಟ್ಟಬೇಕಿತ್ತು, ನಿಮ್ಮನ್ನು ನೋಡಬೇಕಿತ್ತು ಅಷ್ಟೇ.. ಅದಕ್ಕಾಗಿ ಮಾತ್ರವೇ ಬಂದಿದ್ದೇನೆ. ಈ ಚಿತ್ರಗಳೆಲ್ಲ ನನ್ನವೇ, ನನ್ನ ಮನದ ಪ್ರತಿಬಿಂಬವನ್ನು ನೀವು ಸೆರೆಹಿಡಿದು ಅಚ್ಚುಹಾಕುತ್ತಿದ್ದೀರೇನೋ ಎಂದು ಅನಿಸುತ್ತದೆ ಯಾಕೆ ಹಾಗನ್ನಿಸುತ್ತದೆಯೆಂದು ಮಾತ್ರ ಗೊತ್ತಾಗುವುದಿಲ್ಲ.”
“……..”
“ಆದರೆ ನಾನು ತುಂಬ ಸುಖವಾಗಿದ್ದೇನೆ, ನನಗೆ ಯಾವ ಕೊರತೆಯಿಲ್ಲ, ಆದರೆ ನಿಮ್ಮ ಚಿತ್ರಗಳಲ್ಲಿ ಯಾವುದೋ ವಿಷಾದವಿದೆ ಆದರೂ ಯಾಕೆ ಅವು ನನ್ನವೆನಿಸುತ್ತವೆ ನನಗೆ ತಿಳಿಯುವುದಿಲ್ಲ. ಬಹುಶಃ.. ನನ್ನ ಮನಸಲ್ಲೂ ಏನೋ ನೋವಿದೆ, ಇರಬೇಕೇನೋ ಗೊತ್ತಿಲ್ಲ”
“ಸುಖ ಮತ್ತು ಸಂತೋಷ ಎರಡೂ ಬೇರೆ ಬೇರೆ”
“ನಿಜ ನಿಜ, ನಿಮ್ಮ ಚಿತ್ರಗಳು ನನ್ನವು ಅನಿಸುವುದು ಇದಕ್ಕೇ ಇರಬೇಕು. ಆದರೆ ಅದನ್ನ ಬರೆದವರು ನೀವು, ಹಾಗಾಗಿ ಅವು ನಿಮ್ಮವು. ಆದರೆ ನಮ್ಮಿಬ್ಬರೊಳಗೂ ಇರುವ ಏನೋ ಒಂದು ಆ ಎಲ್ಲ ಚಿತ್ರಗಳಲ್ಲೂ ಇದೆ. ಹಾಗಾಗಿ ಅವು ನಮ್ಮವು”
“ಹೌದು, ಅವು ನಮ್ಮ ಆತ್ಮಗಳ ಚಿತ್ರ”
ಹೇ… ಆತ್ಮಗಳ ಚಿತ್ರ? ನೀವೂ ಇದನ್ನ ನಂಬುತ್ತೀರ? ಫಿಸಿಕಲಿ ನಾವೆಷ್ಟೇ ದೂರದಲ್ಲಿದ್ದರೂ ಆತ್ಮಗಳು ಪರಸ್ಪರ ಕನೆಕ್ಟ್ ಆಗ್ತವೆ, ತಮ್ಮೊಳಗೆ ಮಾತಾಡ್ತವೆ ಅಲ್ವಾ?
“ಇರಬೇಕು, ಮ್.. ನಿಜವೇ ಇರಬೇಕು.”
“ನಿಜ ನಿಜ.. ನಿಜ.. ನಿಜ. ನನಗೆ ಈಗ ತುಂಬ ತುಂಬ ಖುಷಿಯೆನಿಸಿದೆ, ಖುಷಿಯಲ್ಲಿ ಎದೆಯೇ ನೋಯುತ್ತಿದೆ.. ನನ್ನನ್ನು ಹೀಗೇ ಹತ್ತಿರ ಸೆಳೆದು ಹಿಡಿದುಕೊಳ್ಳಿ, ತುಂಬ ಸೋಲೆನಿಸುತ್ತಿದೆ ದೇಹಕ್ಕೆ. ತಲೆ ಕೂಡ ಸುತ್ತುತ್ತಿದೆ. ತಡೆಯಲು ಆಗುತ್ತಿಲ್ಲ. ಹಿಡಿದುಕೊಳ್ಳಿ ನಾನು ಬಿದ್ದುಬಿಡುತ್ತೀನೋ ಏನೋ.. ಅಪ್ಪಿಕೊಳ್ಳಿ,.. ಹಾ ಹಾಗೇ..! ದೇವರೇ ಈ ಕ್ಷಣ ಎಷ್ಟು ಚಂದವಿದೆ. ದಿವ್ಯವಾಗಿದೆ.. ನಾನು…., ನಾನು ಒಮ್ಮೆ ನಿಮ್ಮ ಬೆರಳನ್ನು ಮುಟ್ಟಲೆ? ಮುತ್ತಿಡಲೆ? ಒಮ್ಮೆ?”
“ಅವಶ್ಯ.. ಅವಶ್ಯ….”
ಅವನು ಅವಳನ್ನು ಸೆಳೆದು ಎದೆಗಪ್ಪಿಕೊಂಡ.. ಅವಳು ಅವನ ಬೆರಳುಗಳನ್ನು ಚುಂಬಿಸಿದಳು.
ಅವಳ ಕಣ್ಣಿಂದ ಸಳಸಳ ನೀರು ಹರಿಯಿತು..
ಇಷ್ಟೇ ಇಷ್ಟೇ ಇಷ್ಟೇ ಅಂದಳು.. ಗೊಣಗಿದಂತೆ. ಅವನ ಕೈಗಳು ಅವಳ ನವಿಲು ಸೀರೆಯಲು ಹಾದು, ಅವಳ ಮೃದುವಾದ ಹೊಟ್ಟೆಮೇಲೆ ಕೈಯಾಡಿಸಿದವು. ಅವಳ ತಾಯ್ತನದ ಗೆರೆಗಳನ್ನು ತಡವಿದವು, ಅವಳ ಹೊಕ್ಕುಳಕುಳಿಯೊಳಗೆ ನವಿರಾಗಿ ಬೆರಳಾಡಿಸಿದವು. ಅವಳ ತುಟಿಗಳು ಕಂಪಿಸಿದವು, ಅವನ ಬೆರಳುಗಳು ಅವಳ ತುಟಿಗಳನ್ನು ಹಗೂರಕೆ ನೇವರಿಸಿದವು, ಮುಚ್ಚಿಕೊಂಡಿದ್ದ ಕಣ್ಣುಗಳನ್ನು ಮುದ್ದಿಸಿದವು.
ಅವಳು ನಡುಗಿದಳು, ನರಳಿದಳು..
ಹ್ಹಾ ದೇವರೇ….
ಈ ಕ್ಷಣವನ್ನು ನಿರಂತರವಾಗಿಸು ಬೇಡಿದಳು.
ದೇಹ ಹಗುರು, ಒದ್ದೆಮುದ್ದೆ.
“ಮೇಡಂ,ಮೇಡಂ.. ನಥಿಂಗ್ ಟು ವರಿ, ಯು ಆರ್ ಆಲ್ರೈಟ್.. ಕಮಾನ್.. ಓಪನ್ ಯುವರ್ ಐಸ್”
ಸುತ್ತಲೂ ಮೆಲುವಾಗಿ ಹಾರಾಡುವ ಬಿಳಿಯ ಪರದೆ, ಬಿಳಿ ಬಿಳಿ ವಸ್ತ್ರಗಳ ಯಾರೋ.. ಯಾರು ಯಾರೋ..
ನಾನು ಸತ್ತು ಸ್ವರ್ಗಕ್ಕೇನಾದರೂ ಬಂದುಬಿಟ್ಟೆನೆ?
“ಮೇಡಂ, ಇದು ಆಸ್ಪತ್ರೆ, ನೀವೀಗ ಆಸ್ಪತ್ರೆಯಲ್ಲಿದ್ದೀರಿ, ಎಲ್ಲವೂ ನಾರ್ಮಲ್ ಇದೆ. ಸ್ವಲ್ಪ ರೆಸ್ಟ್ ಬೇಕಿದೆ ಅಷ್ಟೆ. ಬೆಳಗೆ ನಾಷ್ಟ ಮಾಡಿರಲಿಲ್ಲವೆ?”
ಓ ತನ್ನ ಸುತ್ತಲೂ ಡಾಕ್ಟರ್‌ಗಳೂ ನರ್ಸ್ಗಳೂ ಇದ್ದಾರೆ, ಮತ್ಯಾರೋ ಇಬ್ಬರಿದ್ದಾರೆ, ಅವರೂ ಅಪರಿಚಿತರೇ. ಅಲ್ಲಿಗೆ ನಾನು ಬವಳಿಬಿದ್ದು ಆಸ್ಪತ್ರೆ ಸೇರಿದ್ದೇನೆ, ಯಾರು ಸೇರಿಸಿದರು? ಅಮ್ಮನಿಗೆ ವಿಷಯ ತಿಳಿಸಿದರೆ? ಬಿಲ್ಲು ಎಷ್ಟಾಗಬಹುದೋ? ಯಾವಾಗ ಇಲ್ಲಿಂದ ಬಿಡುಗಡೆ? ಮನೆಯಲ್ಲಿ ಏನು ಹೇಳುವುದು..? ಸರೀ, ಇಷ್ಟು ಹೊತ್ತು ಅವನ ಜೊತೆಗೆ ಇದ್ದೆನಲ್ಲ ಅದೆಲ್ಲ ಕನಸೇ ಹಾಗಾದರೆ? ಅವನನ್ನು ಮುದ್ದಿಸಿದೆನಲ್ಲ? ಅದೂ ಕನಸೆ? ಅವನ ಮುತ್ತಿನ ತೇವ ಇನ್ನೂ ಕೆನ್ನೆಗೆ ಅಂಟಿಕೊಂಡಂತೆ ಅನಿಸುತ್ತಿದೆಯಲ್ಲ ಅದೂ ಸುಳ್ಳೇ? ಜ್ವರಬಿಟ್ಟಂತೆ ಅನಿಸಿತು. ಎಲ್ಲವನು ಒಟ್ಟಿಗೆ ಯೋಚಿಸಿ ಅವಳು ಸುಸ್ತಾದಳು.
“ಏನೂ ಯೋಚಿಸಬೇಡಿ. ನಿಮ್ಮ ಬಿಲ್ ಪೇಮೆಂಟ್ ಆಗಿದೆ. ಸೇರಿಸಿದವರೇ ಪೇ ಮಾಡಿಹೋಗಿದ್ದಾರೆ. ನಿಮ್ಮ ಫೋನ್ ತಗೊಳ್ಳಿ ಮನೆಯವರಿಗೆ ಮಾತಾಡಿ, ನಾವು ಎನಿವೇ ಇರ್ನ್ಫಾರ್ಮ್ ಮಾಡಿದ್ದೇವೆ. ಚಿಂತಿಸಬೇಡಿ”
ಫೋನ್ ತೆರೆದರೆ ಅದಾಗಲೇ ಸರಿಯಾಗಿ ಮಧ್ಯಾಹ್ನದ ಎರಡು ಗಂಟೆಗಳಾಗಿದ್ದವು.
ಗಂಡ ಅದಾಗಲೇ ಹತ್ತಾರು ಬಾರಿ ಕರೆ ಮಾಡಿದ್ದ. ಅಮ್ಮನೂ.
ವಾಟ್ಸ್ಯಾಪಿನಲ್ಲಿ ಗಂಡನದ್ದೇ ಮೊದಲ ಮೆಸೇಜು, ‘ನೋಡ್ಕೊಂಡು ಓಡಾಡೋದಲ್ಲ, ಆಟೋ ಹತ್ತುವಾಗ ಅಷ್ಟೂ ಜಾಗ್ರತೆ ಮಾಡದೆ ಇದ್ದರೆ ಹೇಗೆ? ಮೊದಲಿಗೆ ನಾಷ್ಟ ಸಹಾ ಮಾಡಿಲ್ಲವಂತೆ ಅಂಥದ್ದೇನಿತ್ತು ಅರ್ಜೆಂಟು? ಅಮ್ಮ ಬಂದಿರಬೇಕು ನೋಡು, ನಾನು ಹೊರಟಿದೀನಿ, ಬರ್ತಾ ಇದೀನಿ. ಏನೋ ಪುಣ್ಯಾತ್ಮ ಆಟೋ ಡ್ರೈವರ್ ತಂದು ಹಾಸ್ಪಿಟಲ್‌ಗೆ ಸೇರಿಸಿದ್ದಕ್ಕಾಯ್ತು ಇಲ್ಲಾಂದ್ರೆ ಏನಾಗಿರಬೇಕು?’
ಅಲ್ಲಿಗೆ ತನಗೆ ಆಗಿರುವುದು ಆಕ್ಸಿಡೆಂಟ್? ನಾನು ಆರ್ಟ್‌ಗ್ಯಾಲರಿಗೆ ಹೋಗಿಲ್ಲ?!
ಅವಳು ಸರಸರನೆ ಎಫ್ ಬಿ ಗೆ ಹಾರಿದಳು. ಆರ್ಟ್ವಿಲೇಜ್ ಅದೇ ಅರ್ಧಘಂಟೆ ಮುಂಚೆ ಪೋಸ್ಟ್ ಹಾಕಿದ್ದ.
ಕಾಲುದಾರಿಯಲಿ ಬಿದ್ದಿರುವ ನವಿಲುಗರಿಯ ಚಿತ್ರ, ದೂರ ಸಾಗಿ ಹೋಗುತ್ತಿರುವ ಅನಾಮಧೇಯ ಕಾಲುಗಳು.
ಕ್ಯಾಪ್ಶನ್
ಫಿರ್ ಮಿಲೇಂಗೆ….
(ಆಂದೋಲನದ ಹಾಡು ಪಾಡು ಸಂಚಿಕೆಯಲ್ಲಿ ಪ್ರಕಟವಾಗಿದ್ದ ಕಥೆ)
ಕನ್ನಡದ ಹೊಸ ತಲೆಮಾರಿನ ಕಥೆಗಾರ್ತಿ. ಇವರ ‘ಮನಸು ಅಭಿಸಾರಿಕೆ’ ಸಣ್ಣ ಕತೆಗಳ ಚೊಚ್ಚಲ ಸಂಕಲನ ಹಲವು ಪ್ರಶಸ್ತಿಗಳಿಗೆ ಬಾಜನವಾಗಿದೆ. ಮೂಲತಃ ಕೊಡಗಿನವರು. ಈಗ ಕೆಲಸದ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ.