ನಾನು ಸರ್ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ
ನನ್ನದು ರೆಸಿಡೆನ್ಸಿಯಲ್ ಸ್ಕೂಲ್ ಗಾಂಧಿ ಗ್ರಾಮೀಣ ಗುರುಕುಲ ಅಂತಾ.. ವಸತಿ ಶಾಲೆ ದೊಡ್ಡ ದೊಡ್ಡ ಡಾರ್ಮಿಟರಿಗಳು 200 ಕ್ಕೂ ಹೆಚ್ಚು ಹುಡುಗರು. ಹುಡುಗಿಯರೇ ಇಲ್ಲ! ಎಲ್ಲಾ ಗಂಡು ಭೇರುಂಡಗಳು. ಬೆಳಿಗ್ಗೆ 6ಕ್ಕೆ ಮುಂಚೆ ಏಳಬೇಕು. ಪ್ರಾರ್ಥನೆ.. ಮಾಘಿ ಚಳಿಯಲ್ಲಿ ಹಲ್ಲು ಕಟಕಟಾ.. ಐದನೇ ಇಯತ್ತೆ ಕೂಸುಗಳು (ನಮ್ಮ ಕಾಲಕ್ಕೆ) ಯಾವನಿಗೆ ಬೇಕು ದೇವರು ಈ ಪ್ರಾರ್ಥನೆ. ನಂತರ ಯೋಗ. ಸೂರ್ಯ ನಮಸ್ಕಾರ. ನಂತರ ಸ್ನಾನ.. ತಿಂಡಿ. ಇದೆಲ್ಲಾ ಎಂಟರೊಳಗೆ. ಆಗ ಒಂಭತ್ತಕ್ಕೆ ಶಾಲೆ ಇತ್ತಲ್ಲ. ಮಧ್ಯಾಹ್ನ ಹನ್ನೆರಡಕ್ಕೆ ಬೆಲ್ಲು. ಎರಡು ತಾಸು ರೆಸ್ಟ್. 2.15 ರಿಂದ 4.30 ಶಾಲೆ. ನಂತರ ರೆಸ್ಟು ಆಟ. ಇವನಿಂಗ್ ವಾಕು. ಆರಕ್ಕೆ ಪ್ರಾರ್ಥನೆ. ಗಾಂಧಿ ಸ್ತುತಿ. ಪ್ರವಚನ. ಎಂಟು ಗಂಟೆಗೆ ಗಡದ್ದು ಊಟ. ನಂತರ ಕ್ಲಾಸ್ ರೂಮ್ಗೆ ಹೋಗಿ ನೈಟ್ ಸ್ಟಡೀ.. 9.30 ರವರೆಗೆ.. ನಮಗೂ ತೂಕಡಿಕೆ.. ಡೆಸ್ಕ್ನಲಿ ಪಕ್ಕ ಇರೋ ಗೆಳೆಯನಿಗೆ ತೊಡೆ ಚಿವುಟಲು ಹೇಳುತಿದ್ದೆವು.. ನಿದ್ದೆ ಹಾರಿ ಹೋಗಲೆಂದು. ಇಲ್ಲದಿದ್ದರೆ ಮಾನಿಟರ್ ಮಾಡಲು ಬರುವ ಟೀಚರ್ ಕಣ್ಣಿಗೆ ಬಿದ್ದರೆ.. ಮುಗಿಯಿತು.. ಓದು ಎಂಬುದು ಆಪ್ತ ಗೆಳೆಯ ಆಗುವ ಬದಲು ದುಷ್ಟ ರಕ್ಕಸ ಆಗಿತ್ತು. ಇದು ಜೈಲು. ಊರಿಗೆ ಹೋಗುವಂತಿಲ್ಲ. ಸಿನೆಮಾ ಟಿ.ವಿ. ರೇಡಿಯೋ ಇಲ್ಲವೇ ಇಲ್ಲ. ನೀಲಿ ಚೊಣ್ಣ ಬಿಳಿ ಅಂಗಿ ಮೇಲೊಂದು ಗಾಂಧಿ ಟೋಪಿ. ಎಲ್ಲವೂ ಖಾದಿ. ಒಳಗೂ?!
ಭಾನುವಾರವೂ ಊರಿಗೆ ಹೋಗುವಂತಿಲ್ಲ. ದೀಪಾವಳಿ.. ಪಂಚಮಿ ಈ ಎರಡು ಹಬ್ಬಕ್ಕೆ ಮಾತ್ರ ಊರ ದರ್ಶನ. ಏನಾದ್ರು ಕಾರಣ ಇದ್ದರೆ ಮಾತ್ರ ಊರು ಅದು ಕ್ಲಾಸ್ ಟೀಚರ್ ಪರ್ಮಿಷನ್ ಇದ್ದರೆ? ಇನ್ನು ನಮ್ಮ ಶಾಲೆ ಊರಿಂದ ಎರಡು ಕಿ.ಮೀ. ದೂರ ಹೊರಕ್ಕೆ. ಜನರ ಸಂಪರ್ಕವೂ ಇಲ್ಲ. ಹೊಸರಿತ್ತಿ ಸಂತೆ ಶನಿವಾರ. ಅಲ್ಲಿಗೆ ನಮ್ಮ ಉರೋರು ಪಾಲಕರು ಸಂತೆಗೆ ಬರೋರು.. ಏನಾದ್ರು ತರಲು ನೆಪ ಹೇಳಿ ನಾವು ಹೊಸರಿತ್ತಿಗೆ ಹೋಗಬಹುದಿತ್ತು. ಅಲ್ಲಿ ಏನನ್ನಾದರೂ ನೋಡಲೋ.. ತಿನ್ನಲೋ.. ಖರೀದಿಸಲೋ.. ಈ ಥರದ ಸುಖ. ರಿಲೀಫು.. ಇದಕ್ಕೂ ಕ್ಲಾಸ್ ಟೀಚರ್ಗೆ ಲೆಟರ್ ಬರೆದು ಸಹಿ ತಗೊಳ್ಳೋದು ಕಡ್ಡಾಯ.
ಇಲ್ಲೊಂದು ಅವಕಾಶ ನಮಗಿತ್ತು. ಇದೊಂಥರ hope of ray. ನಮ್ಮ ಕ್ಲಾಸ್ ಟೀಚರ್ ಎಲ್ಲಾ ಶನಿವಾರಗಳಂದು ಹಾವೇರಿಗೆ ಹೋಗೋರು. ಅವರ ಮನೆಗಳು ಅಲ್ಲಿದ್ದವು. ಶನಿವಾರ ಹೋದವರು ಸೋಮವಾರ ಬೆಳಗ್ಗೆ ಶಾಲೆಗೆ ಬರೋರು. ಶಿಕ್ಷಕರಿಗೂ ವಾರ್ಡನ್ಗೂ ಎರಡು ದಿನ ಸಂಪರ್ಕ ಇಲ್ಲ.
ಹುಡುಗರು ಪತ್ರ ಬರೆಯೋರು.. ನಾನು ಎಲ್ಲ ಸರ್ಗಳ ಸಹಿ ಹಾಕೋದನ್ನ ಆರನೆ ಇಯತ್ತೆಗೆ ಅಕ್ಷರಶಃ ಕಲಿತಿದ್ದೆ. ಸ್ವಯಂ ಅವರಿಗೂ ಅದನ್ನು ಪತ್ತೆ ಮಾಡುವದು ಸುಲಭ ಆಗಿರಲಿಲ್ಲ. ಬೇಕಿದ್ದರೆ ವಾರ್ಡನ್ ಹೆಡ್ ಮಾಸ್ಟರ್ ಸಹಿಗೂ ಸೈ.
ಹೀಗೆ ವಾರ್ಡನ್ಗೆ ಲೆಟರ್ ಕೊಟ್ಟು ಅನೇಕ ಗೆಳೆಯರು ಹೊಸರಿತ್ತಿ ಶನಿವಾರ ಸಂತೆಗೆ.. ಬೇಲ್ ಸಿಕ್ಕ ಖುಷಿ. ಇದನ್ನು ನನ್ನೆಲ್ಲ ಎಲ್ಲ ತರಗತಿಯ ಹಿರಿಯ ಕಿರಿಯ ಗೆಳೆಯರು ಆರು ವರ್ಷ ಶಾಲೆ ಮುಗಿಸಿ ಪಿಯುಸಿ ಬರೋವರೆಗೂ ಗುಪ್ತವಾಗಿ ಇಟ್ಟುಕೊಂಡಿದ್ದೆವು.
ಒಂದೊಮ್ಮೆ ಮಧ್ಯಾಹ್ನ ರೆಸ್ಟ್ ಅವಧಿಯಲ್ಲಿ ಗೆಳೆಯರೆದಿರು ಜಂಬಕ್ಕೆ ಬ್ಲಾಕ್ ಬೋರ್ಡ್ ತುಂಬಾ ಎಲ್ಲ ಸರ್ ಸೈನ್ ಹಾಕಿ ಅಳಿಸದೇ ಹಾಗೆ ಬಂದಿದ್ದೆ. ನಂತರ ಕ್ಲಾಸ್ಗೆ ಬಂದ ಸೈನ್ಸ್ ಮೇಸ್ಟ್ರು ಅದನ್ನೆಲ್ಲ ನೋಡಿ, ಯಾರು ಇದನ್ನು ಮಾಡಿದ್ದು ಅಂತಾ ಗುಡುಗಿದ್ದಾರೆ. ನಾನು ಕ್ಲಾಸ್ನಲ್ಲಿ ಇಲ್ಲ. ಬಂಕ್ ಹೊಡೆದು ಡಾರ್ಮಿಟರಿಯಲಿ ಶ್ರೀಕೃಷ್ಣ ಪರಮಾತ್ಮನಂತೆ ಪವಡಿಸಿದ್ದೇನೆ. ಆಗೆಲ್ಲ ಬೆಳಿಗ್ಗೆ ಮಾತ್ರ ಹಾಜರಿ. ಅದರ ಪಾಯ್ದ ಬಹಳ ಸರಿ ಸುಖಿಸಿದ್ದೇನೆ. ಎರಡೆರಡು ಅಪರಾಧ. ಪ್ಯೂನ್ ಬಸಣ್ಣ ಬಂದು ಅಕ್ಷರಶಃ ಎತ್ತಿಕೊಂಡು ಹೋದ. ದುಂಡು ಕೋಲು ತೆಗೆದುಕೊಂಡು ಕರಿ ಮೈ ಕೆಂಪಾಗಾಗುವರೆಗೂ ಭಾರಿಸಿದರು. ಮೇಸ್ಟ್ರು ಕಡೆಯಿಂದ ಇಂಥದ್ದಕ್ಕೆ ಮಾತ್ರ ಹೊಡೆಸಿಕೊಂಡಿದ್ದೆ ಮೊದಲ ಭಾರಿ. ಅವರೇಕೋ ಅದನ್ನು ಪಬ್ಲಿಕ್ ಮಾಡಲಿಲ್ಲ. ವಿಷಯ ನಮ್ಮ ಆರನೇ ಕ್ಲಾಸಲ್ಲಿ ಮಾತ್ರ ಉಳಿಯಿತು. ಮರುದಿನ ಅವರೇ ಮೈ ದಡವಿ.. ಇದು ಕ್ರಿಯೇಟಿವ್ ಆರ್ಟ್ ಎಲ್ಲರಿಗೂ ಬರೋದಿಲ್ಲ.. ಆದ್ರೆ ಸೈನ್ ಹಾಕೋದು ತಪ್ಪು (ಅಪರಾಧ ಅನ್ನಲಿಲ್ಲ ) ಎಂದು ತಾಯಿಗಣ್ಣಿನಿಂದ ನೋಡಿದರು. ಅವರ ಶಿಷ್ಯ ಆದೆ. ನನ್ನ ನೋಡಿ ಅವರು ಯಾವಾಗಲೂ ತುಟಿಯಲ್ಲೇ ನಗೋರು.
ಮೇಸ್ಟ್ರುಗಳ ಅಕೌಂಟ್ಗಳು ಹೊಸರಿತ್ತಿಯ ಮಲಪ್ರಭಾ ಗ್ರಾಮೀಣ ಬ್ಯಾಂಕ್ನಲ್ಲಿದ್ದವು. ಅವರಿಗೆ ದುಡ್ದು ಬೇಕಾದಾಗ withdrawal ಗೆ ಸಹಿ ಹಾಕಿ ಕಳಿಸೋರು. ಹಾಗೇ ಬಳಿಗೆರಿಯವರು ನನ್ನ ಕಳುಸಿದ್ದರು. ಐದು ನೂರು ರೂಪಾಯಿ ಅಂತಾ ಬರೆದಿದ್ದರು. ನಾನು ಹೋದೆ ಬ್ಯಾಂಕ್ ಸುತ್ತ ನೋಡಿದೆ. ಅಲ್ಲಿ withdraw ಇದ್ದವು. ಒಂದು ತೆಗೆದುಕೊಂಡು ಸಹಿ ಹಾಕಿ one thousand rupees only ಅಂತಾ ಬರೆದೆ. ಕ್ಯೂನಲ್ಲಿ ನಿಂತು ಪಾಳೆ ಬಂದಾಗ ಕಿಂಡಿಯಲ್ಲಿ ಕೈಯಿಟ್ಟೆ. ಎರಡು ನಿಮಿಷದ ನಂತರ ನೂರರ ಹತ್ತು ಬಿಸಿ ನೋಟುಗಳನ್ನು ಕಿಟಕಿ ಕೊಟ್ಟಿತು.
ನಾನು ಸರ್ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು. ಮೊನ್ನೆ ನನ್ನ ಮನೆ ಗೃಹ ಪ್ರವೇಶಕ್ಕೂ ಬಂದಿದ್ದರು. ಅದನ್ನು ನೆನಸಿಕೊಂಡರು. ನಾನು ನಕ್ಕೆ. ಅವರೂ ಮತ್ತೆ ಗೆಳೆಯರೆಲ್ಲ ನಕ್ಕರು. ಮತ್ತೆ ಗುರುಕುಲ.. ಆರನೇ ಕ್ಲಾಸಿನ ಬೋರ್ಡ್ ಶನಿವಾರ ಸಂತೆ ನೆನಪಾದವು. ಗಿಡ್ಡರಿಗೆ ಬುದ್ಧಿ ಜಾಸ್ತಿ ಅನ್ನೋದನ್ನ ಪ್ರೀತಿಯಿಂದ ಹೇಳಿದರು.
ಹೀಗೆ ಸೈನ್ ಹಾಕಿ ಹೊಸರಿತ್ತಿ ಸಂತೆಗೆ ಎಷ್ಟೋ ಭಾರಿ ಹೋಗಿದ್ದೇನೆ. ನಾನು ಹೆಚ್ಚು ಹೋಗುತಿದ್ದದ್ದು ಗುದ್ದಲಿ ಸ್ವಾಮಿ ಮಠಕ್ಕೆ. ಅಲ್ಲಿ ಉಲಿಯುವ ಎರಡು ಗಿಳಿ ಇದ್ದವು. ಒಂದು ಪ್ರತಿಮಾ ಇನ್ನೊಂದು ಗೀತಾ.
ಶ್ರಾವಣದ ಕಾರ್ಯಕ್ರಮಕ್ಕೆ ಸ್ಪರ್ಧೆಗಳಿಗೆ ಭಾಗವಹಿಸಲು ನಾನು ನನ್ನೊಬ್ಬ ಗೆಳೆಯ ಸಂಜೆ ಮಠಕ್ಕೆ ಹೋಗುತಿದ್ದೆವು. ನಮಗಿದು ವಿಶೇಷ ಅವಕಾಶ. ಎಲ್ಲರೂ ಬಣ್ಣ ಬಣ್ಣದ ಡ್ರೆಸ್ ತೊಟ್ಟುಕೊಂಡು ಬಂದರೆ. ನಾವೋ ಖಾದಿ ಅದರ ಮೇಲೊಂದು ಟೋಪಿ. ನಮ್ಮ ಕ್ರಾಪು ಕಾಣುವದು ಹೇಗೆ? ತಿಂಗಳುಗಟ್ಟಲೆ ಟೋಪಿ ತೊಟ್ಟು ರಂಗು ರಂಗೀನ ವಾತಾವರಣದಲ್ಲಿ ಕೂಡುವದು. ನ ಶೋಭಿತೆ ಸಭಾ ಮಧ್ಯೆ ಬಕ.
ಹೀಗೆ ವಾರ್ಡನ್ಗೆ ಲೆಟರ್ ಕೊಟ್ಟು ಅನೇಕ ಗೆಳೆಯರು ಹೊಸರಿತ್ತಿ ಶನಿವಾರ ಸಂತೆಗೆ.. ಬೇಲ್ ಸಿಕ್ಕ ಖುಷಿ. ಇದನ್ನು ನನ್ನೆಲ್ಲ ಎಲ್ಲ ತರಗತಿಯ ಹಿರಿಯ ಕಿರಿಯ ಗೆಳೆಯರು ಆರು ವರ್ಷ ಶಾಲೆ ಮುಗಿಸಿ ಪಿಯುಸಿ ಬರೋವರೆಗೂ ಗುಪ್ತವಾಗಿ ಇಟ್ಟುಕೊಂಡಿದ್ದೆವು.
ನಾವು ಹೊಟ್ಟೆಯೊಳಗೆ ಟಿ ಶರ್ಟ್ ಇಟ್ಟುಕೊಂಡು ಅಲ್ಲಿ ಹೋಗಿ ಚೇಂಜ್ ಮಾಡುತಿದ್ದೆವು. ಸಭೆ ಆರಂಭವಾಗುತ್ತಿದ್ದುದೆ ಪ್ರತಿಮಾಳ “ಗಜವದನ ಪಾಲಿಸೋ..” ಎಂಬುದರಿಂದ.. ಅದನ್ನು ಮುಗಿಸಿ ಕೆಳಗಿಳಿದು ಬರುವಾಗ ಮುಂದೆಯೇ ಕೂಡುತಿದ್ದ ನನ್ನ ಟೊಪ್ಪಿಗೆ ನೆತ್ತಿ ಮೇಲೆ ಎರಡು ಬೆರಳು ಆಡಿಸಿಯೇ ಬರುತಿದ್ದಳು. ನನಗೋ ಸಿಟ್ಟು. ನಂತರ ಟೋಪಿ ಮಡಚಿ ಜೇಬಲ್ಲಿ ಇಡತೊಡಗಿದೆ.. ನಂತರ ಟಿ ಶರ್ಟ್ ತೊಟ್ಟೆ. ಬೆರಳು ಆಡುವದನ್ನು ತಪ್ಪಿಸಲಿಲ್ಲ. ನನ್ನ ಭಾಷಣಕ್ಕೆ ತಲೆದೂಗಿದ್ದಳೋ ಹೇಗೋ.. ನನ್ನ ಆಶು ಕವನಕ್ಕೆ.. ಪ್ರತಿ ಭಾರಿ ಬಹುಮಾನ ಪಡೆಯುವದಕ್ಕೆ ಮನ ಸೋತಿದ್ದಳೋ ಹೇಗೋ.. ನನ್ನೊಳಗೆ ಎಷ್ಟು ಕತೆಗಳು.. ಹಾಗೆ ಮರಿ ಹಾಕುತ್ತಲೇ ಹೋದವು.
ಅವಳು ಹಾಡುತಿದ್ದ “ನಾರಿ ನಿನ್ನ ಮಾರಿ ಮ್ಯಾಲ ನಗಿ ನವಿಲು ಆಡುತಿತ್ತ ಓಡುತಿತ್ತ..”
ಎಂಬುದನ್ನು ಅವಳ ಸುತ್ತ ಮುತ್ತ ಸುಳಿದಾಡಿ.. ಅವಳಿಗೆ ಕೇಳುವಂತೆ ಗುನುಗಿದ್ದನ್ನು ಬಿಟ್ಟರೆ ನನಗೆ ಹೆಚ್ಚಿನದೇನನ್ನೂ ಮಾಡಲಾಗಲಿಲ್ಲ. ಇದು ಏಳರಿಂದ ಹತ್ತನೇ ತರಗತಿಯವರೆಗಿನ ಪಯಣ.
ಮೊನ್ನೆ ಧಾರವಾಡದ CBT ಯಲ್ಲಿ ಸಿಕ್ಕಿದ್ದಳು.. ಅವಳು ನೋಡುತ್ತಲೇ ಇದ್ದಾಳೆ. ನಾನೂ. ಅವಳು ಗುರುತು ಹಿಡಿದಿದ್ದಾಳೆ. ನಾನು ನಂತರ. ನಂದ್ಯಾವತ್ತೂ ಲೇಟು. ನನ್ನೊಳಗೆ ನಕ್ಕೆ. ನಾನೆ ಹೋಗಿ ಅವಳತ್ತ ಬೆರಳು ಮಾಡಿದೆ. ಹಾಂ ಪ್ರತಿಮಾ ಎಂದಳು..
ಅಪ್ಪಾ.. ದೊಡ್ಡ ಉಸಿರು ಹೊರ ಹಾಕಿದೆ
ನಾನು ಲಿಂಗರಾಜ ಅನ್ನುವ ಮೊದಲೇ..
ಗೊತ್ತು.. ಅಂದು ತಲೆ ಆಡಿಸಿದಳು. ಅದು ಬೆರಳು ಆಡಿಸಿದಂತೆಯೇ ಇತ್ತು.
ಹೇಗಿದ್ದೀಯ ಅಂತಾ ಕೇಳಬೇಕೆನಿಸಲಿಲ್ಲ. ಅವಳು ಚೆನ್ನಾಗಿಯೇ ಇದ್ದಾಳೆ. ನಾರಿ ನಿನ್ನ ನಗೆಯ ಮ್ಯಾಲ ನಗಿ ನವಿಲು ಕುಣಿಯುತ್ತಿತ್ತ.. ಆಡತಿತ್ತ ಓಡತಿತ್ತ.. ಎಂದು ನಕ್ಕೆ.
ಅದೇ.. ಅಂತದ್ದೇ ನಗು.. ಅಂದಳವಳು. ಹಾಗಾದ್ರೆ ಅವಳು ಇಷ್ಟಪಟ್ಟಿದ್ದು ಕವಿತೆನೂ ಅಲ್ಲ ಭಾಷಣವೂ ಅಲ್ಲ..?!
ನಾನು ಕತೆ ಕವಿತೆ ಬರೆದು ಫೇಮಸ್ ಆಗಿದೀನಿ ಅಂತಾ ಹೇಳಿಕೊಳ್ಳಬೇಕೆಂದಿದ್ದು ಒಳಗೆ ಉಳಿಯಿತು.
ತಣ್ಣಗೆ ಮೇಸ್ಟ್ರು ಅಂದೇ. ಅವಳು ಮ್ಯೂಸಿಕ್ ಟೀಚರ್ ಅಂದಳು. ಅವಳಿಗಾಗಿ ಅಂದು ಶ್ರಾವಣದ ಮಠದಲ್ಲಿ ಹಾಡಿದ್ದ ಹಾಡೊಂದನ್ನು ಕೇಳಲು ಬಯಸಿದಳು. ಆಜಾದ್ ಪಾರ್ಕ್ ಹೋದೆವು. ಮೆಲ್ಲಗೆ ಹಾಡ್ತೀನಿ ಅಂದೇ. ನೋ ಅಂದಳು. ಸುತ್ತ ನೋಡಿ ಹಾಡಿದೆ. ಗಲ್ಲಕ್ಕೆ ಕೈ ಕೊಟ್ಟು ಕೇಳಿದಳು. ನನ್ನದೇನು ಗಂಧರ್ವ ಗಾನವೇ..
ಹಾಡು ಮುಗಿಯಿತು.
ಯಬಡಾ.. ಅಂದು ಜೋರು ಕೈ ತಟ್ಟಿ ನಕ್ಕಳು. ಅದೇ ನಗು.. ನಾವು ಬದಲಾಗಬಹುದು ನಮ್ಮತನ..? ಬಹುಷಃ ನಮ್ಮವರೆನ್ನುವವರಿಗೆ ನಾವು ಇದ್ದ ಹಾಗೇ ಇರ್ತೀವಿ.
ಪಕ್ಕದ ಬೃಂದಾವನದಲ್ಲಿ ಒಂದು ಕಾಫೀ ಎರಡು ಮಾತು.. ಗುರುಕುಲ ಈಗ ಹೇಗಿದೆ ಅಂತಾ ಕೇಳುವದನ್ನ ಮರೆಯಲಿಲ್ಲ.
ನಾನು ನಿನ್ನನ್ನು ಎಷ್ಟು ಪ್ರೀತಿಸುತಿದ್ದೆ ಗೊತ್ತಾ.. ಅಂತಾ ಹೇಳಬೇಕೆಂದೆ.. ಮತ್ತೆ ಅವಳು ಯಬಡಾ.. ಅನ್ನುತ್ತಾಳೆನೋ ಅನ್ನಿಸಿತು. ಹೇಳಬೇಕಾದರೂ ಏಕೆ?
ಚಿಗರಿ ಬಸ್ ಹತ್ತಿದಳು. ಶ್ರೀನಗರ. ಕೊನೆಗೂ ಕೇಳಬೇಕೇನಿಸಿತು ಯಬಡಾ.. ಅಂದ್ರೆ?
ಮತ್ತದೇ ನಗು.. ಅದೇ ಎಂಟನೇ ಕ್ಲಾಸಿನ ಪ್ರತಿಮೆ.
ನಗು ನಿಲ್ಲಿಸಿ ತುಸು ಹೊತ್ತು ಹಾಗೇ ನೋಡಿದಳು ಆ ಕಣ್ಣಲ್ಲಿ ಏನಿತ್ತು ಏನಿಲ್ಲಾ..
ಕೊನೆಗೆ ತುಟಿಯರಳಿಸಿ ಗಂಧರ್ವ.. ಅಂದಳು.
ಬಸ್ಸು ಹೊರಟಿತು. ಕೈ ಆಡಿಸಿದೆ. ಅಪ್ಪಾ ವಿದಾಯ ಎಂಬುದು ಯಾ ಪರಿ ಜೀವ ಹಿಂಡುತ್ತದೆ.
ಯಬಡಾ ಅಂದರೆ ಗಂಧರ್ವ ಅಂತಲಾ..
ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.
Very nice.. I enjoyed lingarajuavre 💞👌👌
ಬಾಲ್ಯದ ಸಿಹಿ ಕಹಿ ನೆನಪುಗಳು ಚೇಷ್ಟ ಕುಚೇಷ್ಟೆ ಆಕರ್ಷಣೆ ಪ್ರೇಮದ ಅನುಭೂತಿ
ಸಮ್ಮಿಲನ ಈ ಲೇಖನ ನವಿರಾದ ನಿರೂಪಣೆ ಆಕರ್ಷಕ ಪದ ಜೋಡಣೆ ಓದುವ ಮನಕೆ ಮುದ ನೀಡುವ ಲೇಖನ ಅಭಿನಂದನೆಗಳು ಲಿಂಗರಾಜ್ ಸರ್