ಮಾಯಾ ಆಂಜೆಲೋ (1928–2014 ): ಅಮೆರಿಕಾದ ಕವಯಿತ್ರಿ, ಸಾಮಾಜಿಕ ಕಾರ್ಯಕರ್ತೆ, ಕಥೆಗಾರ್ತಿ, ಗಾಯಕಿ, ನಟಿ, ನಿರ್ದೇಶಕಿ ಏನೆಲ್ಲವೂ ಆಗಿದ್ದ ಮಾಯಾ ಆಂಜೆಲೋ ಕಪ್ಪು ಹಕ್ಕಿಗಳ ಕೊರಳಾಗಿದ್ದಳು. ಏಳು ವರ್ಷದ ಸಣ್ಣ ಹುಡುಗಿಯಾಗಿದ್ದಾಗಲೇ ತಾಯಿಯ ಸ್ನೇಹಿತನಿಂದ ಅತ್ಯಾಚಾರಕ್ಕೊಳಪಟ್ಟವಳು. ಮಾಯಾಳ ಚಿಕ್ಕಪ್ಪ ಅತ್ಯಾಚಾರಿಯನ್ನು ಕೊಂದಾಗ, ಅವಳ ಧ್ವನಿ ಒಬ್ಬ ಮನುಷ್ಯನ ಸಾವಿಗೆ ಕಾರಣವಾಯಿತು ಅನ್ನುವ ಪಾಪ ಪ್ರಜ್ಞೆಯಿಂದಾಗಿ ಮಾಯಾ ಅಪೂಟ ಐದು ವರುಷಗಳ ಕಾಲ ಮೂಕಿಯಾಗುತ್ತಾಳೆ. ಮುಂದೆ ಹನ್ನೆರಡೂವರೆ ವರುಷದವಳಾದಾಗ ಶ್ರೀಮತಿ ಫ್ಲವರ್ಸ್ ಅವಳನ್ನು ಮತ್ತೆ ಮಾತನಾಡುವಂತೆ ಮಾಡುತ್ತಾರೆ. ಅವಳಲ್ಲಿ ಕಾವ್ಯದ ಬಗ್ಗೆ ಪ್ರೀತಿ ಹುಟ್ಟಿಸುತ್ತಾರೆ. “I Know Why the Caged Bird Sings” (1969) ಮಾಯಾಳ ಆತ್ಮಕಥನ ಒಂದು ಸಂಚಲವನ್ನೇ ಸೃಷ್ಟಿ ಮಾಡುತ್ತದೆ. ಜೀವನದಲ್ಲಿ ಸಾಕಷ್ಟು ನೋವನ್ನುಂಡ ಮಾಯಾ ಇಡೀ ಕಪ್ಪು ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದಳು. ನೊಂದ ನೋವನ್ನು ಹಾಡಾಗಿಸಿದಳು.

ಗಂಡಸರು

ಸಣ್ಣವಳಿದ್ದಾಗ ಪರದೆಯ ಹಿಂದೆ
ನಿಂತು ಗಮನಿಸುತ್ತಿದ್ದೆ
ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುವ ಗಂಡಸರನ್ನ

ಕರಿಮುಸುಡಿಯ ಗಂಡಸರು
ಮುದಿ ಗಂಡಸರು
ಎಲ್ಲದರಲ್ಲೂ ಮೂಗು ತೂರಿಸುವ
ಚಿಗುರು ಮೀಸೆಯ ಗಂಡಸರು
ಸುಮ್ಮನೆ ಗಮನಿಸಿ
ಗಂಡಸರು ಸದಾ ಎಲ್ಲಿಗೋ ಹೋಗುತ್ತಲೇ ಇರುತ್ತಾರೆ
ಗೊತ್ತಿತ್ತು ಅವರಿಗೆ
ಅಲ್ಲಿಯೇ ಇದ್ದ ಹದಿಹರೆಯದ
ನಾನೊಬ್ಬಳು ಅವರಿಗಾಗಿ ಹಸಿದಿದ್ದೇನೆಂದು

ನನ್ನ ಕಿಟಕಿಯ ಬಳಿ ನಿಲ್ಲುವರು
ತರುಣಿಯ ಮೊಲೆಯಂತೆ ಚೂಪು
ಅವರ ಭುಜ ಹಿಂದೆ ಬರುವವರನ್ನು
ಸವರುವ ಅವರ ಅಂಗಿಯ ಕಸಿಗಳು

ಒಂದಿನ ನಿನ್ನನ್ನೂ
ಅಂಗೈಲಿ ಮೃದುವಾಗಿ ಹಿಡಿಯುವರು
ಜಗತ್ತಿನ ಕಟ್ಟಕಡೆಯ ಎಳೆಯ ದಾಸವಾಳವೆನ್ನುವ ಹಾಗೆ
ಆಮೇಲೆ ಹಿಡಿತ ಕೊಂಚ ಬಿಗಿಯಾಗಿಸುವರು
ಮೊದಲ ಸಲ ಅವುಕಿದಾಗ ಹಿತವೆನಿಸುತ್ತೆ
ಥಟ್ಟನೆ ಬಿಗಿದಪ್ಪುವರು
ಅಸಹಾಯಕ ನಿನ್ನೊಳಗೆ ಹಾಗೇ
ಮೆತ್ತಗೆ ಜಾರುವರು ಹಾಂ ಇನ್ನೂ ಹಾಗೇ

ಈಗ ಶುರು ನೋಡಿ
ನೋವು ಒದ್ದುಕೊಂಡು ಬರುವುದು
ಭಯವನ್ನ ಮರೆಮಾಚಲು
ನಗುವಿನ ಬಟ್ಟೆ ತೊಟ್ಟು ಬಿಡು
ಎಲ್ಲವೂ ಮುಗಿದ ಮೇಲೆ
ಗೀರಿದ ಬೆಂಕಿ ಕಡ್ಡಿಯ ತಲೆ ಛಿದ್ರವಾಗುವಂತೆ
ನಿನ್ನ ತಲೆ ಚಿಟ್ಟು ಹಿಡಿಯುವುದು, ಸಿಡಿಯುವುದು
ನಿನ್ನ ಜೀವರಸವೇ ಅದು
ಅಗೋ ಅವರ ತೊಡೆಗಳಿಂದ ಇಳಿದು
ತೊಟ್ಟ ಕಾಲ್ಮರಿಗಂಟಿ ಕರೆಯಾಗಿರುವುದು
ಮತ್ತೆ ನೆಲದೊಡಲು ಸಜ್ಜಾದಾಗ
ಮತ್ತೆ ರುಚಿ ಮರಳಿದೆ ಎನ್ನುವಾಗ
ನಿನ್ನ ದೇಹ ಮತ್ತೆಂದೂ ತೆರೆಯದ ಹಾಗೆ
ಕೀಲಿಯಿರದ ಬೀಗ ಜಡಿದುಕೊಳ್ಳುವುದು

ಕಿಟಕಿಯ ಪಡಕು ಪೂರಾ ತೆರೆದಿದೆ
ಅಲ್ಲೇ ಹೊಯ್ದಾಡುವ
ಪರದೆಯ ಹಿಂದೆ ಗಂಡಸರು ಓಡಾಡುತ್ತಾರೆ
ಏನೋ ಗೊತ್ತಿದೆ ಎಲ್ಲಿಗೋ ಹೋಗುತ್ತಿದ್ದಾರೆ
ಆದರೆ ಈ ಬಾರಿ ಬಹುಶಃ
ನಾನು ಸುಮ್ಮನೆ ನಿಂತು ಗಮನಿಸುತ್ತೇನೆ

*****

ನೆನೆಕೆ

ಸಿಕ್ಕು ಸಿಕ್ಕಾದ
ಈ ಹಠಮಾರಿ ಹೆರಳು
ನೇವರಿಸುವಾಗ
ನಿನ್ನ ಕೈಗಳು ಅದೆಷ್ಟು
ಹಗೂರ ಆಗುತ್ತವೆ!

ಕೆನ್ನೆಯ ಇಳಿಜಾರಿನ ಮೇಲೆ
ನಿನ್ನ ನಗು
ಹೊಳೆ ಹೊಳೆದು,
ಚಿಮ್ಮಿ, ಹಾರಿ, ನೆಗೆದು
ನನ್ನ ಮೇಲೆ ನೀನು ಮುದ್ರೆಯೊತ್ತುವಾಗ
ನನ್ನೆಲ್ಲಾ ನೆಪಗಳೂ ಧ್ವಂಸ
ನಿನ್ನ ಮಾಯಾವಿ
ತುಂಟತನ ದಾಳಿಮಾಡಲು!

ನನ್ನೊಳಗೆ ನೆಟ್ಟ
ಆ ಶ್ರೀಗಂಧದ ಕೊರಡನ್ನ
ಆ ಇಂದ್ರಜಾಲದ ತುಣುಕನ್ನ
ಹಗೂರ ಹೊರಗೆಳೆದೆ
ನಿನ್ನ ಮೈಗಂಧ ಮಾತ್ರ
ಈ ಅಮೃತಕಳಶಗಳ
ನಡುವೆ ಅಮರಿದಾಗ
ಇರುವಿಕೆಯ ಸವಿಯೇ
ಈ ಆಸೆಬುರುಕ
ಇಂದ್ರಿಯಗಳಿಗೆ ಮೃಷ್ಟಾನ್ನ!

*****

ಅನಿದ್ರಾ

ಕೆಲವು ರಾತ್ರಿ
ನಿದ್ರೆ ಹತ್ತಿರವೇ
ಸುಳಿಯದೆ ಅಣಕಿಸುತ್ತದೆ
ದೂರಸರಿವುದು
ಹೇವರಿಸಿಕೊಂಡು, ಒಲ್ಲೆಯೆಂದು

ನನ್ನನ್ನು ಗೆಲ್ಲಿಸಲು
ನನ್ನ ಪರ ನಿಂತ ಎಲ್ಲಾ
ಕಣ್ಕಟ್ಟುಗಳು
ಘಾಸಿಗೊಂಡ ಅಹಂಕಾರದಷ್ಟೇ ಜೊಳ್ಳು
ಮತ್ತು ಅದಕೂ ಹೆಚ್ಚು ನೋವುಭರಿತ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು.
ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ ಸಂದಿದೆ).
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..