ಎರಡು ಧ್ರುವಗಳಂತಿದ್ದ ನಮ್ಮ ಮಧ್ಯೆ ಇದ್ದ ಅದೃಶ್ಯ ಸೆಳೆತವೆಂದರೆ ನಮ್ಮಿಬ್ಬರ ಆದರ್ಶಗಳು ಮತ್ತು ಜೀವನ ಬಗ್ಗೆ ಇದ್ದ ನಿಲುವು ಮತ್ತು ಅವನಲ್ಲಿರುವ ಹಾಗು ನನ್ನಲ್ಲಿಲ್ಲದ ಪ್ರಬುದ್ಧತೆ. ಅದಷ್ಟನ್ನೇ ಇಟ್ಟುಕೊಂಡು ಎಷ್ಟು ತಾನೇ ಸಹಿಸಿಕೊಂಡಾನು. ಒಂದು ದಿನ ಅನತಿ ದೂರದಲ್ಲಿ ನಮ್ಮಿಬ್ಬರ ನಡುವೆ ದೊಡ್ಡ ಗೋಡೆಯೊಂದ ಏಳಿಸಿಯೇ ಬಿಟ್ಟ. ಗೋಡೆಯಾಚೆಯಿಂದ ಅವನು ಈಚೆಯಿಂದ ನಾನು. ಬರೀ ಔಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದೆವೆ ಹೊರೆತು ಮನಸ್ಸಿನಾಳದಿಂದೇನಲ್ಲ. ಅದು ನನ್ನಿಂದ ಕೆಡವಲಾಗದಂತ ಗೋಡೆ ಏನಲ್ಲ; ಆದರೂ ಬೇಕಂತಲೇ ಹಾಗೆ ಬಿಟ್ಟು ಖಾಲಿ ಗೋಡೆಯಷ್ಟೇ ಮೌನ ತುಂಬಿಕೊಂಡು ಬದುಕಲಾರಂಭಿಸಿದೆ.
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣದಲ್ಲಿ ಹೊಸ ಬರಹ

ನನಗೆ ಉಗುರು ಕಣ್ಣಲ್ಲಿ ಎದ್ದ ನೂಲಿನಂತ ಚರ್ಮವ ಕೀಳುವುದರಲ್ಲಿ ಅದೇನೋ ಸುಖ. ನೋವ ತಾಳಲಾರದೆ ಬಳಬಳ ಕಣ್ಣೀರು ಸುರಿದರೂ ಸರಿ ಸುಮ್ಮನೆ ಕಿತ್ತು ಕಿತ್ತು ಸುಖ ಪಡುವುದು. ಉಗುರಿಗೆ ನಿಲುಕದ್ದನ್ನು ಹಲ್ಲಿನಿಂದಾದರು ಸರಿ, ನೈಲ್ ಕಟರ್‌ನಿಂದಾದರೂ ಸರಿ ಒಟ್ಟು ಕಣ್ಣೀರು ಸುರಿಸುತ್ತಲೇ ಕಿತ್ತು ತೀರಬೇಕು. ಮುಂದಿನ ನಾಲ್ಕು ದಿನಗಳು ಉಗುರುಕಣ್ಣನ್ನ ಕಣ್ಮುಚ್ಚಿ ಅಮುಕುತ್ತಾ ನೋವ ಆಸ್ವಾದಿಸಬೇಕು. ಇದೆಂತ ಚಾಳಿ ಅಂತೀನಿ. ಬೇಕಂತಲೇ ಕೆಣಕಿ ಕೆಣಕಿ ಬೈಯಿಸಿಕೊಳ್ಳುವ ತೆವಲು. ಅವನಿಗೆ ಏಕಾಂತ ಬೇಕು, ನನಗೆ ಕಿರಿಕಿರಿ ಮಾಡಿಕೊಂಡ ವೈರಾಗ್ಯ ಬೇಕು. ಅವನು ನಿದ್ರಿಸುವಾಗ, ಕೆಲಸದಲ್ಲಿ ತಲ್ಲೀನವಾಗಿರುವಾಗ ಸ್ನೇಹಿತರೊಂದಿಗೆ ಹರಟುತ್ತಿರುವಾಗ ನನಗಿಲ್ಲಿ ಅವನ ಕೆಣಕುವ, ಕುಚೇಷ್ಟೆ ಮಾಡುವ ಚಪಲ. ಅವನು ಒಂಟಿಯಾಗಿ ಭೇಟಿಯಾಗು ಎಂದಾಗೆಲ್ಲ ನನಗವನು ಸುತಾರಾಮ್ ಬೋರಿಂಗ್. ಅವನು ಕರೆದಾಗ ನನಗೆ ಹೊಟ್ಟೆನೋವಿರುತ್ತದೆ. ನಾನು ಕರೆದಾಗ ಅವನಿಗೆ ಬೆನ್ನು ನೋವು. ಅವನಿಗೆ ಟ್ರಾವೆಲ್ ಸಿಕ್ನೆಸ್; ನನಗೆ ಸುತ್ತೋದೆ ದೊಡ್ಡ ವೀಕ್ನೆಸ್ಸ್. ಅವನಿಗೆ ಸಿಕ್ಕ ಏಕಾಂತವ ಮೌನವಾಗಿ ಅನುಭವಿಸಬೇಕು. ನಾನು ಕೊನೆಯ ಭೇಟಿಯಿಂದ ಅಲ್ಲಿಯ ತನಕ ಗಂಟಲಲ್ಲೇ ಸಿಕ್ಕಿಕೊಂಡ ಮಾತನ್ನೆಲ್ಲ ಕಕ್ಕಿ ನಿರಾಳವಾಗಬೇಕು.

ಒಮ್ಮೆ ಇದ್ದಕ್ಕಿದ್ದ ಹಾಗೆ ಕರೆ ಮಾಡಿ ಇಂದು ಫ್ರೀ ಇದ್ದೀನಿ ಬಾರೆ ಒಂದೊಳ್ಳೆ ಕಡೆ ಊಟ ಮಾಡಿ ಬರುವ ಎಂದಿದ್ದ. ಕೈಗೆ ಸಿಗದಷ್ಟು ಬ್ಯುಸಿ ಇರುವ ಅವನು ಅಂದು ಅಷ್ಟು ಅಕ್ಕರೆ ತೋರಿ ಕರೆದದ್ದು ಎಲ್ಲಿಲ್ಲದ ಖುಷಿ ತಂದರೂ ನನಗೆ ಬೇಕೆಂದಾಗೆಲ್ಲ ಸಮಯ ಕೊಡದ ಅವನ ಮೇಲಿನ ಸೇಡಿಗೆ “ಒಹ್ ಸಾರಿ ಡಿಯರ್ ಹುಷಾರಿಲ್ಲ, ತುಂಬಾ ಹೊಟ್ಟೆನೋವು” ಎಂದು ಸುಳ್ಳಾಡಿದ್ದೆ. ಎರಡು ಧ್ರುವಗಳಂತಿದ್ದ ನಮ್ಮ ಮಧ್ಯೆ ಇದ್ದ ಅದೃಶ್ಯ ಸೆಳೆತವೆಂದರೆ ನಮ್ಮಿಬ್ಬರ ಆದರ್ಶಗಳು ಮತ್ತು ಜೀವನ ಬಗ್ಗೆ ಇದ್ದ ನಿಲುವು ಮತ್ತು ಅವನಲ್ಲಿರುವ ಹಾಗು ನನ್ನಲ್ಲಿಲ್ಲದ ಪ್ರಬುದ್ಧತೆ. ಅದಷ್ಟನ್ನೇ ಇಟ್ಟುಕೊಂಡು ಎಷ್ಟು ತಾನೇ ಸಹಿಸಿಕೊಂಡಾನು. ಒಂದು ದಿನ ಅನತಿ ದೂರದಲ್ಲಿ ನಮ್ಮಿಬ್ಬರ ನಡುವೆ ದೊಡ್ಡ ಗೋಡೆಯೊಂದ ಏಳಿಸಿಯೇ ಬಿಟ್ಟ. ಗೋಡೆಯಾಚೆಯಿಂದ ಅವನು ಈಚೆಯಿಂದ ನಾನು. ಬರೀ ಔಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದೆವೆ ಹೊರೆತು ಮನಸ್ಸಿನಾಳದಿಂದೇನಲ್ಲ. ಅದು ನನ್ನಿಂದ ಕೆಡವಲಾಗದಂತ ಗೋಡೆ ಏನಲ್ಲ; ಆದರೂ ಬೇಕಂತಲೇ ಹಾಗೆ ಬಿಟ್ಟು ಖಾಲಿ ಗೋಡೆಯಷ್ಟೇ ಮೌನ ತುಂಬಿಕೊಂಡು ಬದುಕಲಾರಂಭಿಸಿದೆ. ಒಂದಷ್ಟು ದಿನ ಕಳೆಯಿತು. ಮೌನ ಮತ್ತಷ್ಟು ಮಾಗಿತ್ತು. ಅದರ ರುಚಿ ನಾಲಿಗೆಗೆ ಹತ್ತಿತ್ತು. ನಿನಗೆ ಸೀರಿಯಸ್ನೆಸ್ ಇಲ್ಲ, ಜವಾಬ್ದಾರಿ ಇಲ್ಲ ಎಂದು ಬೈಯುತ್ತಿದ್ದವನು ಸಹಿಸಿಕೊಳ್ಳಲಾಗದಷ್ಟು ಮೌನ ತಾಳಿಬಿಟ್ಟೆ. ನನ್ನ ಆರಿಂಚು ಮೊಬೈಲ್ ಮೂಲೆಗೆಸೆದು ಅದೇ ಮೌನದೊಳಗೆ ಅಲೆಯಲು ಆರಂಭಿಸಿದೆ. ಎಲ್ಲವನ್ನೂ ಬೇಕೆಂದೇ ಕೈ ಜಾರಲು ಬಿಟ್ಟು ದೂರದಿಂದ ನೋಡುವುದ ಕಲಿತೆ. ಈಗ ಅದೇ ಮಜವೆನಿಸಿಬಿಟ್ಟಿದೆ.

ಅದೊಂದು ನಡುದಿನ ಆಚೆ ರಣ ಬಿಸಿಲು ಮನೆಯೊಳಗೆ ಗಾಳಿಯ ಸುಳಿವಿಲ್ಲದೆ ಗರ ಬಡಿದಂತೆ ನಿಂತಿದ್ದ ಕಿಟಕಿ ಬಾಗಿಲ ಕರ್ಟನ್‌ಗಳು, ಕುಂಟುತ್ತ ಕುಂಟುತ್ತ ಮುಂದೆ ಸಾಗುತ್ತಿದ್ದ ಗಡಿಯಾರ, ಮುದಿ ಗಾಳಿ ಉಗಿಯುತ್ತಾ ತಿರುಗುತ್ತಿದ್ದ ಫ್ಯಾನ್. ನನಗಿಲ್ಲಿ ಕಾರಣವೆ ಇಲ್ಲದೇ ಹೊಟ್ಟೆಯೊಳಗಿಂದ ಉಮ್ಮಳಿಸಿ ಬರುತ್ತಿದ್ದ ಸಂಕಟ. ಬೆಲೆಬಾಳುವ ವಸ್ತುವೊಂದ ಕಳೆದುಕೊಂಡು ಯಾರಿಗೂ ಹೇಳಲಾಗದೆ ಒಳಗೊಳಗೆ ಕುಂದುತ್ತಿತ್ತು ಜೀವ. ತೀರ್ಮಾನಿಸಿ ಆಗಿತ್ತು ನಿರ್ಜೀವ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಅವನು ಬಿಟ್ಟು ಹೋದ ಮೌನದ ಚೌಕಟ್ಟೊಳಗೆ ಯಾರಿಗೂ ಸಿಗದಂತೆ ಕಳೆದು ಹೋಗಬೇಕೆಂದು. ಅದೇನು ನುಡಿದಷ್ಟೇ ಸುಲಭವೇ. ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿ ಅಂಕುರಿಸಲು ಅಷ್ಟೇನೂ ಸಮಯವಾಗಲಿ, ಪ್ರಯತ್ನಗಳಾಗಲಿ ಬೇಕಿಲ್ಲ. ಇಬ್ಬರ ಕಣ್ಣಂಚಿನಲ್ಲೂ ಸಣ್ಣದೊಂದು ಕಿಡಿ ಇದ್ದರೂ ಸಾಕು ಅದಕ್ಕದೇ ಧಿಗ್ಗೆಂದು ಹೊತ್ತಿ ಉರಿಯಲಾರಂಭಿಸಿಬಿಡುತ್ತದೆ. ಆದರೆ ಅದನ್ನ ನಂದಿಸೋದಾಗಲಿ ಅಥವಾ ನಂದಿದ ಮೇಲೆ ಆವರಿಸುವ ಕತ್ತಲನ್ನಾಗಲಿ ಎದುರಿಸುವುದು ಸುಲಭದ ಮಾತಲ್ಲ. ನಿರ್ಧಾರವನ್ನೇನೋ ಮಾಡಿಬಿಟ್ಟಿದ್ದೆ ನಂತರದ ಒಂಟಿತನ, ಯಾತನೆ, ಅಪರೂಪಕ್ಕೊಮ್ಮೆ ಅವನು ಮಾಡುತ್ತಿದ್ದ ತುಂಟತನದ, ಆ ಜಗಳ, ಮುನಿಸು, ನಂತರದ ಮುದ್ದಾಟ, ವಿನಾಕಾರಣ ಪ್ರೇಮ, ಹೊತ್ತು ಗೊತ್ತಿಲ್ಲದೇ ಪುಟಿದೇಳುವ ಕಾಮ ಎಲ್ಲವನ್ನೂ ಮರೆತು ಉಳಿದ ದಾರಿ ಸವೆಸುವುದು ನನಗಿದ್ದ ಬಹು ದೊಡ್ಡ ಸವಾಲು. ಸೂಕ್ಷ್ಮ ಹೃದಯದ ಹೆಣ್ಣಾದರೂ ಅಳುವ ಪೈಕಿಯವಳಲ್ಲ. ಗಟ್ಟಿಗಿತ್ತಿಯಾದರೂ ಜಗಳಗಂಟಿಯಲ್ಲ.

Women should be like butterfly. Pretty to see but hard to catch ಎನ್ನುತ್ತಲೇ ಬದುಕುತಿದ್ದ ನಾನು ಅದೊಂದು ದಿನ ಊರಿಂದಾಚೆ ಇರುವ ಚಾನೆಲ್‌ನ ಬಳಿ ನಿಂತಿದ್ದ ನನ್ನ ಪಕ್ಕದಲ್ಲಿ ಮಂಡಿಯೂರಿ ಕುಳಿತು ಅದೆಷ್ಟು ಮೃದುವಾಗಿ ನವಿಲುಗರಿ ಗೊಂಚಲಿನಿಂದ ಪಾದಗಳ ಸವರಿ ಬೆಳ್ಳನೆಯ ಅಂಗಾಲಿಗೊಂದು ಮುತ್ತು ಕೊಟ್ಟು ಆ ನವಿಲುಗರಿಯ ಉಡುಗೊರೆಯಾಗಿ ಕೊಟ್ಟಿದ್ದ. ತಾನಾಗೆ ಹೋಗಿ ಆ ನುಣುಪಾದ ಅಂಗೈಯೊಳಗೆ ಸೆರೆಯಾದ ಪಾತರಗಿತ್ತಿಯಂತಾಗಿದ್ದೆ. ಆ ವೇಳೆ ನನ್ನ ಇಡಿ ದೇಹದಲ್ಲಿನ ನೆತ್ತರು ದಿಕ್ಕೆಟ್ಟು ಹರಿದಾಡಿತ್ತು. ಈಗ ಗಾಜಿನ ಶೋಕೇಸಿನಲ್ಲಿ ಜೀವ ಕಳೆದುಕೊಂಡು ಬಿದ್ದಿರುವ ಅದೇ ನವಿಲುಗರಿಯ ಗೊಂಚಲನ್ನ ನೋಡಿ ಹಾಳಾದವನು ವಿನಮ್ರವಾಗಿ ಹಿಂದಿನಿಂದ ಬಂದು ಬೆನ್ನ ಮೇಲಿನ ಗಾಯವನ್ನು ಸವರಿ ಸಂತೈಸಬಾರದೇ ಎಂದು ಮನಸ್ಸು ಹಕ್ಕು ಸಾಧಿಸಿತ್ತದೆ. ಸೈನ್ಸ್ ಓದಿಕೊಂಡಿದ್ದ ನಾನು ಯಾವಾಗಲೂ ಪ್ರಾಕ್ಟಿಕಲ್ ಆಗಿರುತ್ತಿದ್ದವಳು ಅದ್ಯಾವ ಸಾಹಿತ್ಯದ ಬಳ್ಳಿಗೆ ತೊಡರಿಕೊಂಡು ಇಷ್ಟೊಂದು ಎಮೋಷನಲ್ ಅದೆನೋ. ಕಾಲ ಕಳೆದಂತೆ ಎಲ್ಲವೂ ಬದಲಾಗುವಂತೆ ದಿನ ಕಳೆದಂತೆ ನಿಧಾನವಾಗಿ ಪ್ರಕೃತಿಯೊಳಗೆ ಕಳೆದುಹೋಗಿ ಬೇಕಂತಲೇ ಎಲ್ಲವನ್ನೂ ಕೈಜಾರಲು ಬಿಟ್ಟು ಮತ್ತೆ ಪ್ರಾಕ್ಟಿಕಲ್ ಆಗುವ ಪ್ರಯತ್ನಕ್ಕಿಳಿದೆ.

Out of site is out of mind ಅಂತಾರೆ.. Out of mind ಮತ್ತು out of life ಗಳ ನಡುವೆ ಅಂತದ್ದೇನು ವ್ಯತ್ಯಾಸವಿಲ್ಲ ಅನ್ನೋದು ನನ್ನ ಭಾವನೆ. ಯಾವುದೇ ಆದ್ರೂ ಅಷ್ಟೇ ಒಗ್ಗೋ ತನಕ ಮಾತ್ರ ನೋವು.

ಮದುವೆ ಆದ ಹೊಸತರಲ್ಲಿ ಐದು ಸುತ್ತು, ಏಳು ಸುತ್ತು, ಒಂಬತ್ತು ಸುತ್ತು ಹೀಗೆ ವಿಧ ವಿಧದ ಕಾಲುಂಗುರಗಳನ್ನು ಎಂದು ಕಾಣದ ಕಾಲಿನ ಬೆರಳುಗಳಿಗೆ ಹಾಕಿಬಿಡುವುದಿಲ್ಲವೇ. ಸಡಿಲವಾಗಿದ್ದರೆ ಬೀಳುತ್ತದೆ ಅನಿಸಿ ಅದನ್ನು ಆಗಾಗ ಸರಿ ಪಡಿಸಿಕೊಳ್ಳುತ್ತೇವೆ. ಬಿಗಿ ಇದ್ದರೆ ಆಗಾಗ ತಿರುಗಿಸಿ ತಿರುಗಿಸಿ ಸ್ವಲ್ಪ ಮಟ್ಟಿಗೆ ಸಡಿಲ ಮಾಡಿಕೊಳ್ಳುತ್ತೇವೆ. ಸತ್ಯವೇನೆಂದರೆ ಎಂದೂ ಇದನ್ನೆಲ್ಲಾ ಕಾಣದೆ ಆರಾಮಾಗಿ ಊರನ್ನೆಲ್ಲ ತಿರುಗಿಕೊಂಡು ಪುಂಡ ಗೂಳಿಯಂತಿದ್ದ ಬೆರಳು ದಿಢೀರ್ ಎಂದು ಯಾವುದೊ ಸುರುಳಿಗಳ ಮಧ್ಯೆ ಕಟ್ಟುಬಿದ್ದರೆ ಅಪರಿಚಿತ ಹಿಂಸೆಯೊ ಅಥವಾ ಕಷ್ಟವೊ ಆಗಿರುತ್ತದೆ ಅಷ್ಟೇ. ಆದರೆ ಕೆಲವೇ ದಿನಗಳಲ್ಲಿ ಅದೆಷ್ಟರ ಮಟ್ಟಿಗೆ ಆ ಕಾಲ್ಬೆರಳುಗಳು ಹುಟ್ಟುತ್ತಲೇ ಕಾಲುಂಗುರ ತೊಟ್ಟು ಬಂದಂತೆ ಹೊಂದಿಕೊಂಡುಬಿಡುತ್ತವೆ. ಗರ್ಭಿಣಿಯಾದಾಗ ಹೆಚ್ಚುವ ದೇಹ ತೂಕದಿಂದಲೊ, ಕಾಲುಗಳು ಊದಿಕೊಳ್ಳುವುದರಿಂದಲೊ ಅಥವಾ ಹೆರಿಗೆ ಕೋಣೆಗೆ ಹೋಗುವಾಗ ಉಂಗುರ ತೆಗೆವ ಪರಿಸ್ಥಿತಿ ಬಂದು ಅದನ್ನು ಬಿಚ್ಚಿ ಯಾರದ್ದೋ ಕೈಗೆ ಕೊಡುವಾಗ ಗಂಡನನ್ನೇ ಕೊಟ್ಟಂತೆ ಅನಿಸಿ ಅಳುವುದಂತು ಅದೆಷ್ಟು ತಮಾಷೆ. ಮನಸ್ಸು ಹಾಗೆ ಕಂಡಿರದ ಉಂಗುರಕ್ಕೆ ಹೊಂದಿಕೊಂಡ ಬೆರಳಂತೆ ನೋವುಗಳಿಗೆ ಒಗ್ಗಿಕೊಂಡು ಆಮೇಲೆ ಅದೇ ಜೀವದಂತಾಗಿಬಿಡುತ್ತದೆ.

ಮನಸ್ಸು ಹಾಗೆ ಮೊದಲು ಎಲ್ಲಾದಕ್ಕೂ ಪ್ರತಿಭಟನೆ ನಡೆಸುತ್ತದೆ ಆಮೇಲೆ ನಿಧಾನವಾಗಿ ತನ್ನ ಕರ್ತವ್ಯದಲ್ಲಿ ತೊಡಗುತ್ತದೆ. ಈ ಮನಸ್ಸಿಗೆ ಆತುರ ಹೆಚ್ಚು. ಎಡವಿ ಬೀಳದೆ ನಡೆಯಲೇ ಬಾರದೇನೋ. ಬಿದ್ದು ಮೇಲೇಳಲು ಸಾಧ್ಯವೇ ಇಲ್ಲ ಅಂದುಕೊಳ್ಳುವಾಗ ಯಾರಾದರೂ ತಮ್ಮದೊಂದು ಕಿರು ಬೆರಳ ಚಾಚಿ ಮೇಲೇಳಲು ಸಹಾಯ ಮಾಡಿದರೂ ಸಾಕು ಅವರು ನಮ್ಮ ಪಾಲಿನ ದೇವರಾಗಿ ಉಳಿದುಬಿಡುತ್ತಾರೆ. ಮನುಷ್ಯರೇ ಆಗಬೇಕೆಂದೇನಿಲ್ಲ ನೋವಲ್ಲಿ ತತ್ತರಿಸಿ ಹೋಗುತ್ತಿರುವಾಗ ಕಾಲಿಗೆ ಆನಿಕೊಂಡು ತನ್ನ ಮುಖವ ನಮ್ಮ ಪಾದಗಳಿಗೆ ಉಜ್ಜುತ್ತಾ ಕೂರುವ ಬೆಕ್ಕಿನ ಮರಿಯಿರಬಹುದು, ಒಂದೆರಡು ಬಾರಿ ಪಾಪದ್ದು ಅನಿಸಿ ರೊಟ್ಟಿ ತುಂಡನ್ನು ಕೊಟ್ಟದ್ದಕ್ಕೆ ಕಂಡಾಗೆಲ್ಲ ಧನ್ಯ ಕಂಗಳಲ್ಲಿ ನೋಡುವ ನಾಯಿ ಮರಿಯಾಗಬಹುದು, ಓದಲು ಸಮಯವಿರದೆ ಕಪಾಟು ಸೇರಿಕೊಂಡಿದ್ದ ಪುಸ್ತಕವಿರಬಹುದು, ಎಷ್ಟು ಸಂಕಟ ತೋಡಿಕೊಂಡರೂ ತಾಳ್ಮೆಯಿಂದ ಕೇಳಿಸಿಕೊಳ್ಳುವ ಗಿಡ ಮರಗಳಾಗಿರಬಹುದು. ಬಿದ್ದ ನಾವು ಕೊಂಚ ಸಾವರಿಸಿಕೊಂಡು ಮೇಲೇಳುವಾಗ ಜೊತೆಗಿದ್ದರೂ ಸಾಕು ಅವೇ ಜೀವನ ಸಂಗಾತಿಯಂತಾಗಿಬಿಡುತ್ತವೆ. ಹಳೆಯ ನೆನಪುಗಳೆಲ್ಲ ಎಂದೋ ಮನೆಗೆ ಬರುವ ದೂರದ ಸಂಬಂಧಿಕರಂತಾಗಿಬಿಡುತ್ತವೆ. ಬಂದರೂ ತೊಂದರೆ ಇಲ್ಲ, ಬಾರದಿದ್ದರೂ ಅಡ್ಡಿ ಇಲ್ಲ ಎಂಬಂತೆ. ಒಮ್ಮೆ ಗಟ್ಟಿಯಾಗಿಬಿಟ್ಟ ಮನಸ್ಸಿಗೆ ಎಲ್ಲವನ್ನೂ ಬೇಕೆಂದೇ ಎಲ್ಲವನೂ ಕೈಯಿಂದಾಚೆ ಜಾರಲು ಬಿಟ್ಟು ನೋಡುವುದು ಎಂಥ ಅದ್ಭುತ ಅನುಭವ..