‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ

‘ದಾಸವಾಳ’ ನೀಳ್ಗತೆಗಳ ಸಂಕಲನ ಓದಿ ಮುಗಿಸಿದೆ. ಕೊಂಚ ಸಮಯ ಮಾತುಬಾರದೆ ಮೂಕಳಾದೆ. ಅಥವಾ ನನ್ನೊಳಗೆ ನಾನೇ‌ ಆಳಕ್ಕಿಳಿದೆ. ಬಹುತೇಕ ಕತೆಗಳು ಸ್ತ್ರೀ ದೃಷ್ಟಿ ಕೋನದಲ್ಲಿ ನಿರೂಪಣೆಯಾಗಿವೆ. ಹಾಗಾಗಿ ಅವೆಲ್ಲವೂ ನನ್ನನ್ನು ಬಹುವಾಗಿ ಆವರಿಸಿದವು. ಕೆಲವು ಸಾಲುಗಳು ಹೊಸ ನೋಟಕೊಟ್ಟು ಬೆರಗು ಹುಟ್ಟಿಸಿದವು. ಉದಾಹರಣೆಗೆ ‘ಕಣ್ಣು ಯಾವ ಕಡೆಗೆ ತಿರುಗಿದರೂ ರೆಪ್ಪೆಯಿಂದಿಳಿದು ಎದುರಿಗೆ ನಿಲ್ಲುತ್ತದೆ’ ಇಂಥ ಸಾಲುಗಳು ಪುಟ ಪುಟದಲ್ಲೂ ತುಂಬಿಹೋಗಿವೆ.

(ಎ.ಎನ್. ಪ್ರಸನ್ನ)

‘ಕುಣಿಕೆ’ಯ ವಸ್ತು ಬೆಚ್ಚಿ ಬೀಳಿಸಿತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ನಾಣ್ನುಡಿ ಇಂಥದನ್ನು ನೋಡಿಯೇ ಹುಟ್ಟಿತೇನೋ! ಅಂತ್ಯದಲ್ಲಿ ಮಗಳ ನಿಲುವು, ಎಚ್ಚರ ಬಡಿದೆಬ್ಬಿಸುತ್ತದೆ. ನಮ್ಮ ಬದುಕು ನಾವೇ ರೂಪಿಸಿಕೊಳ್ಳಬೇಕು. ಅದು ಯಾರ ಅಂಗೈಯಲ್ಲಿಯೂ ಬೆಚ್ಚಗಿರುವುದಿಲ್ಲ.

‘ವಿಹಾರ’ ಕತೆಯು ಸಹ ಭಾವನೆಗಳ ಏರಿಳಿತದ ನಡುವೆ ಹೊಯ್ದಾಡುವಂತೆ ಮಾಡಿತು. ಕಲ್ಪನೆ ಕೊಡುವ ಸುಖ ಅನನ್ಯ. ಆದರೆ ವಾಸ್ತವವನ್ನು ಬಡಿದೋಡಿಸಲಾರೆವಲ್ಲ! ಮತ್ತದೇ ಬೇಸರ, ಅದೆ…. ಅಂದಹಾಗೆ.

ನಿರ್ಧಾರ ‘ಸ್ವಭಾವಗಳು ಎಷ್ಟು ಭಿನ್ನ, ಆದರೆ ಅವು ವಿಕೃತವೂ ಆದಾಗ…. ಇಡೀ ವಾತಾವರಣ ಬದಲಾಗುವ ಬಗೆ ಒಮ್ಮೆಲೇ ನಡುಗಿಸಿತು. ಹೆಣ್ಣು ಮಗಳೊಬ್ಬಳು ಕ್ಷಮಿಸಲಾರದ ಅಪರಾಧಕ್ಕೆ ಶಿಕ್ಷೆ ಕೊಡದೇ ಬಿಡಳು. ಆ ತಿರುವು ಇಡೀ ಕಥಾ ಭಾಗಕ್ಕೆ ಬಹು ಮುಖ್ಯ.

ಸಮಾಧಾನದ ನಸುನಗು ಎನ್ನುವ ಕೊನೆಯ ವಾಕ್ಯ ಬಹಳಷ್ಟನ್ನು ಹೇಳುತ್ತದೆ. ಅಪರೂಪ, ವಿಶಿಷ್ಟ ಅನ್ನಿಸಿದ ಕತೆ. ನಿಮ್ಮ ಕತೆಯಲ್ಲಿ ಬರುವ ಹೆಣ್ಣು ಪಾತ್ರಗಳು ಆಪ್ತವಾಗುತ್ತವೆ; ಬೆಚ್ಚಿಬೀಳಿಸುತ್ತವೆ. ‘ದಾಸವಾಳ’ ಕೂಡಾ ಮತ್ತೆ ಮತ್ತೆ ಕಾಡುವ ಕತೆ. ನೈತಿಕತೆ- ಅನೈತಿಕತೆಗಳೇ ಎದ್ದುಬಂದು ನಮ್ಮ ನಡುವಿನ ಸೂಕ್ಷ್ಮ ಕಂಡುಹಿಡಿಯಿರಿ ಎಂದು ಜಪ್ಪಿಸಿ ಕೇಳಿದಂತಾಯಿತು.

ಸ್ವೇಚ್ಛೆ, ವಿಫಲ ಪ್ರಣಯ ಏನೇ ಇರಲಿ ಅಲ್ಲೊಂದು ಸ್ವಾತಂತ್ರ್ಯದ ತುಡಿತವಿದೆಯಲ್ಲ, ಅದೇ ಬಹುದೊಡ್ಡ ಶಕ್ತಿ.’ಹದ್ದು ಹಾರುವ ಹೊತ್ತು’ ಒಂದು ಓದಿಗೆ ದಕ್ಕಲಿಲ್ಲ. ಮತ್ತೆ ಮತ್ತೆ ಓದಿದಾಗ ನಂಬಿಕೆ, ಬದುಕಿನ ಅನಿವಾರ್ಯ, ಎಲ್ಲಕ್ಕಿಂತ ಮಿಗಿಲಾದ ಸಂಕೀರ್ಣ ನಿಗೂಢತೆ ಬೆಚ್ಚಿ ಬೀಳಿಸಿತು.

‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ.

(ಡಾ. ವಿಜಯಾ)

ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ! ಸುಳಿಗಾಳಿ, ಮೋಡ, ಮಳೆಗಳೂ ನಿಮ್ಮ ಕೈಯಲ್ಲಿ ಪಾತ್ರಗಳ ಹಾಗೆ ಮಾತಾಡುತ್ತವೆ. ಮನಸ್ಸಿನ ಹೊಯ್ದಾಟವನ್ನು ಗಾಳಿ, ಮಳೆಯ ತುಂತುರು, ಕಡೆಗೆ ಗಾಳಿಗಾಡುವ ಬಾಗಿಲು ಕಿಟಕಿಯ ಪರದೆಗಳೊಂದಿಗೂ ಪಿಸುಗುಡುತ್ತೀರಿ.

ನಾನು ಊಹಿಸಿಯೂ ಇರದ ದಿಕ್ಕಿನಿಂದ ಸದ್ದಿಲ್ಲದೆ ಯಾವುದೋ ಬಳ್ಳಿ, ಹೂವು, ಮೋಡ ಮಾತನಾಡುವುದಿದೆಯಲ್ಲ, ಅದೊಂದು ಸಂಭ್ರಮ. ಕತೆಗಿಂತ ಮಿಗಿಲಾಗಿ ಈ ವಿವರಗಳ ನವಿರಿಗಾಗಿ ಹಾತೊರೆಯುವಂತಾಯಿತು.

ಇದೊಂದು ವಿನೂತನ ಸಂಗತಿ ನನಗೆ. ತುಂಬಾ ಸಂತೋಷವಾಯಿತು. ಅಲ್ಲಿಯ ವಿವರಗಳು, ಕಾಣಕಾಣುತ್ತಲೇ ಬಹುದೊಡ್ಡ ವ್ಯಾಖ್ಯಾನ ಕ್ಕೆ ಒಡ್ಡಿಕೊಳ್ಳುತ್ತ ಪ್ರತಿಮೆಗಳಾಗಿ ಮಾರ್ಪಡುವ ಬಗೆ ಸಂಭ್ರಮವನ್ನೇ ಹುಟ್ಟು ಹಾಕಿದವು. ಅಭಿನಂದನೆ ಪ್ರಸನ್ನ. ಮುಂದುವರಿಸಿ.

(ಕೃತಿ: ದಾಸವಾಳ (ಕಥಾಸಂಕಲನ), ಲೇಖಕರು: ಎ.ಎನ್.‌ ಪ್ರಸನ್ನ, ಪ್ರಕಾಶಕರು: ವಸಂತ ಪ್ರಕಾಶನ, ಬೆಲೆ: 160/-)