ಅಂದು ಪೋಲೀಸರು ಹೋದ ಮೇಲೂ ಅಮ್ಮ ಅಳುತ್ತಲೆ ಇದ್ದಳು. ಬಡವರ ಪಾಲಿಗೆ ಕಣ್ಣೀರೇ ಅಲ್ಲವೆ ಸಾಂತ್ವನದ ಸೆಲೆಗಳು ಆಗಾಗಿ ಧಾರಾಕಾರವಾಗಿ ಹರಿಯುತ್ತಲೆ ಇತ್ತು. ಊರಿನಲ್ಲಿ ಯಾರ್ಯಾರೊ ಸಹಾಯವನ್ನು ಮಾಡಿದರು. ಅಮ್ಮನ ಒಳ್ಳೆಯ ಗುಣವೇ ಅದಕ್ಕೆ ಕಾರಣವಾಗಿತ್ತು. ಇದೆಲ್ಲ ನೋಡುತ್ತಿದ್ದಾಗ ದೇವರ ಮೇಲೆ ಕೋಪವು ಬರುತ್ತಿತ್ತು. ನನ್ನ ಓರಗೆಯವರೆಲ್ಲ ನಿಮ್ಮ ಮನೆಯ ಸಾಮಾನುಗಳನ್ನು ಪೋಲಿಸ್ನೋರು ತಗೊಂಡ್ಹೋದ್ರು ಅನ್ನುತ್ತಿದ್ದರು. ಆಗ ಇಡೀ ವ್ಯವಸ್ಥೆಯ ಮೇಲೆ ರೋಷವೇನೊ ಬರುತ್ತಿತ್ತು. ಅದರಿಂದ ಏನು ಪ್ರಯೋಜನ? ನಮ್ಮಿಂದ ಏನನ್ನೂ ಮಾಡುವುದಕ್ಕಾಗುತ್ತಿರಲಿಲ್ಲವಲ್ಲ. ಕೊನೆಗೆ ಅಮ್ಮ ಸುಮ್ಮನಾದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

ಮನೆಯಲ್ಲಿನ ಕಡುಬಡತನದ ದಿನಗಳು ನನಗೆ ಈಗಲೂ ಕಾಡುತ್ತವೆ. ಸಂವೇದನೆಯ ಅನುಭವವಾಗುವುದು ಇಂತಹ ಕಷ್ಟದ ದಿನಗಳಲ್ಲಿಯೇ ಅನಿಸುತ್ತದೆ. ಅಕ್ಷರಶಃ ಕೂಲಿ ಮಾಡಿಯೇ ಬದುಕುತ್ತಿದ್ದರೂ ಸ್ವಾಭಿಮಾನದಲ್ಲಿ ಶ್ರೀಮಂತರಾದರೆ ಸಂಕಷ್ಟಗಳು ನಮ್ಮ ಮನಸ್ಸಿನ ಮೇಲೆ ಬೀರಿದ ಪರಿಣಾಮಗಳು ಬದುಕಿನುದ್ದಕ್ಕೂ ಕಾಡುತ್ತವೆ. ಅಂತಹ ಘಟನೆಗಳನ್ನು ಹಂಚಿಕೊಳ್ಳುವ ತವಕ ನನ್ನದು.

ನಮ್ಮಪ್ಪನಿಗೆ ಪಿತ್ರಾರ್ಜಿತವಾಗಿ ಬಂದಿದ್ದು ಎರಡು ಮುಕ್ಕಾಲು ಎಕರೆ ಒಣಭೂಮಿಯಷ್ಟೆ. ಅದು ಮಳೆಯನ್ನು ಆಶ್ರಯಿಸಿ ಬೇಸಾಯ ಮಾಡಬೇಕಾಗಿತ್ತು. ಆರ್ಥಿಕ ಸಂಕಷ್ಟದಲ್ಲಿ ಅದನ್ನು ಬೇಸಾಯ ಮಾಡುವುದಕ್ಕು ಕಷ್ಟ ಅನಿಸುವಂತೆ ನಮ್ಮ ಮನೆಯ ಪರಿಸ್ಥಿತಿ. ನಾವು ನಾಲ್ಕು ಜನ ಮಕ್ಕಳು ನಾಲ್ವರಿಗೂ ಶಾಲೆಗೆ ಕಳಿಸಬೇಕು, ಓರಗೆಯವರಂತೆ ಪೆನ್ನು ಪುಸ್ತಕ ಬಟ್ಟೆ ಎಲ್ಲವನ್ನೂ ಒದಗಿಸಬೇಕು ಎಂದು ಕಷ್ಟಪಡುತ್ತಿದ್ದ ನನ್ನ ಹೆತ್ತವರಿಗೆ ಇದ್ದಕ್ಕಿದ್ದಂತೆ ನಡೆದ ಆಘಾತವೊಂದು ಇಡಿ ಕುಟುಂಬವನ್ನೆ ಕೀಳರಿಮೆಯ ಮಹಾಕೂಪಕ್ಕೆ ತಳ್ಳಲ್ಪಟ್ಟಿತ್ತು. ಆ ಘಟನೆಯನ್ನು ನೆನೆದರೆ ಇದನ್ನೆಲ್ಲ ನಾವು ಹೇಗೆ ದಾಟಿ ಬಂದೆವು ಅನಿಸುತ್ತದೆ. ಕಾಲ ಎಲ್ಲವನ್ನು ಮರೆಸುತ್ತದೆ. ಕಾಲಕ್ಕಿರುವ ಶಕ್ತಿ ಅದು. ಆಗಾಗ ನೆನಪು ಮರುಕಳಿಸುತ್ತದೆ ನೆನಪಿಗಿರುವ ಸಾಂತ್ವನವದು.

ಅಪ್ಪನಿಗೆ ಹೊಲದಲ್ಲಿ ಬೇಸಾಯ ಮಾಡಿ ಅದರಿಂದಲೆ ಬದುಕು ಕಟ್ಟಿಕೊಳ್ಳುವ ಆಸೆ. ಅದಕ್ಕಾಗಿ ಈ ಹಿಂದೆ ಮಾಡಿದ ಸಾಲದ ಜೊತೆಗೆ ಇನ್ನೊಂದಿಷ್ಟು ಸಾಲಮಾಡಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದ. ದುರದೃಷ್ಟವಶಾತ್ ಆ ವರ್ಷ ಮಳೆಯೆ ಬರಲಿಲ್ಲ. ಹೊಲಕ್ಕೆ ಹಾಕಿದ ಬಿತ್ತನೆ ಬೀಜ ಸರಿಯಾಗಿ ಹುಟ್ಟಲಿಲ್ಲ. ಅತೀವ ಆಸೆಯಿಂದ ಬೇಸಾಯ ಮಾಡಿದ ಅಪ್ಪ ಕಂಗಲಾಗಿ ಹೋಗಿದ್ದ. ಅಮ್ಮನ ಗೊಣಗಾಟ ಜಾಸ್ತಿಯಾಯಿತು. ಅಮ್ಮ ಕೂಲಿ ಮಾಡಿ, ಇದ್ದುದರಲ್ಲಿಯೆ ಬದುಕುವುದು ಅಮ್ಮನ ಎಣಿಕೆಯಾಗಿತ್ತು. ಯಾಕೆಂದರೆ ಅಮ್ಮನಿಗೆ ಖಾಯಂ ಆಗಿ ನಮ್ಮೂರಿನ ದೊಡ್ಡಕ್ನೋರು ಎಂದೆ ಕರೆಯುತ್ತಿದ್ದವರೊಬ್ಬರ ಮನೆಯಲ್ಲಿ ಕೆಲಸವಿರುತ್ತಿತ್ತು ಆ ಮನೆಯವರು ಕೂಲಿ ಇಲ್ಲದ ಸಮಯದಲ್ಲಿಯೂ ಅಮ್ಮನಿಗೆ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಸಿಕೊಂಡು ಕೂಲಿ ನೀಡುತ್ತಿದ್ದರು. ಅದು ನಮ್ಮ ಬದುಕಿನ ತುತ್ತಿನ ಚೀಲ ತುಂಬಿಸುತ್ತಿತ್ತು. ಚಿಕ್ಕಮಕ್ಕಳಿದ್ದಾರೆ ಎನ್ನುವ ಕಾರಣಕ್ಕೆ ಮನೆಗೆ ಬುತ್ತಿಯನ್ನೂ ಕಳಿಸುತ್ತಿದ್ದರು. ನಮ್ಮನ್ನು ಮನೆಯವರಂತೆ ಕಾಣುತ್ತಿದ್ದುದು ವಿಶೇಷ ಆದ್ದರಿಂದ ಅಮ್ಮ ಯಾವಾಗಲೂ ಹೇಳುತ್ತಿದ್ದಳು; ಈಗಾಗಲೆ ಅಲ್ಪ ಸ್ವಲ್ಪ ಸಾಲ ಇದೆ, ಬೇಡ ಎಂದರೂ ಅಪ್ಪ ಕೇಳಲಿಲ್ಲ. ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ. ಆದರೂ ಧೈರ್ಯವಂತನಾದ ನಮ್ಮಪ್ಪ ಸಾಲಗಾರರಿಗೆ ಮುಂದಿನ ವರ್ಷ ತೀರಿಸುತ್ತೇವೆ ಎಂದು ಸಮಜಾಯಿಷಿ ಹೇಳಿದರೆ ಆಗುತ್ತದೆ ಎಂದುಕೊಂಡ ಆದರೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ನಾವೆಲ್ಲ ಚಿಕ್ಕ ಮಕ್ಕಳು ನಮಗೇನು ಇದರ ಬಗ್ಗೆ ತಿಳಿಯುತ್ತಿರಲಿಲ್ಲ. ಆಟ ಪಾಠಗಳಲ್ಲಿ ಕಳೆದುಹೋಗುತ್ತಿದ್ದ ನಮ್ಮ ಎಳೆಯ ಮನಸ್ಸಿಗೆ ಇದೆಲ್ಲ ಹೇಗೆ ತಿಳಿಯಬೇಕು. ಆಗಾಗ ಸಾಲ ಕೊಟ್ಟವನು ಮನೆಗೆ ಬಂದು ಕೇಳುತ್ತಿದ್ದ.. ಮಾತುಕತೆ ನಡೆಯುತ್ತಿದ್ದವು. ಒಮ್ಮೊಮ್ಮೆ ಅವನು ಏರುಧ್ವನಿಯಲ್ಲಿ ಕೇಳುತ್ತಿದ್ದರೆ, ಅಪ್ಪ ಬೇಡಿಕೊಳ್ಳುವಂತೆ ಮಾತನಾಡುತ್ತಿದ್ದ.. ನಮಗೆಲ್ಲ ಅದು ಅಷ್ಟು ಗಂಭೀರವಾದುದೆಂದು ಅನಿಸಿಯೆ ಇರಲಿಲ್ಲ.

ಒಂದಿನ ನಾವು ಅಕ್ಕ ಎಲ್ಲರೂ ಊರಮುಂದೆ ಮೈದಾನದಲ್ಲಿ ಆಟವಾಡುತ್ತಿದ್ದೆವು. ನಮ್ಮ ಮನೆಗೂ ನಾವು ಆಟವಾಡುತ್ತಿದ್ದ ಜಾಗಕ್ಕು ಕೂಗಳತೆಯ ದೂರವಷ್ಟೆ ಇದ್ದದ್ದು. ಖಾಕಿ ಧರಿಸಿದವರಿಬ್ಬರು ನಮ್ಮ ಮನೆಯತ್ತಲೆ ಹೋಗುತ್ತಿದ್ದರು. ಎಂಭತ್ತು ತೊಂಭತ್ತರ ದಶಕದಲ್ಲಿ ಖಾಕಿ ನೋಡಿದರೆ ಎಲ್ಲರೂ ಭಯಪಡುತ್ತಿದ್ದರು. ಅವರನ್ನು ಕಂಡರೆ ಸಾಕು ಊರಿಗೆ ಊರೆ ಕಂಗಾಲಾಗಿ ನೋಡುತ್ತಿತ್ತು. ಇನ್ನು ಅವರು ಯಾರ ಹೆಸರನ್ನಾದರು ಕೇಳಿ ಅವರ ಮನೆಯ ಹತ್ತಿರ ಹೋದರಂತೂ ಮುಗಿದೆ ಹೋಯ್ತು, ಆ ಸಂಕಟಕ್ಕೆ ಸಿಲುಕುವ ಮನೆಯ ಸ್ಥಿತಿ ಯಾವ ಶತ್ರುವಿಗೂ ಬೇಡ ಅನ್ನುವಷ್ಟು ಕೀಳರಿಮೆ ಮೂಡುವಂತೆ ಮಾಡುತ್ತದೆ. ಅಂಥ ಕಾಲದಲ್ಲಿ ಅಂದು ಅವರಿಬ್ಬರು ಸೀದಾ ನಮ್ಮ ಮನೆಯ ಹತ್ತಿರವೇ ಹೋದರು.

ಅಲ್ಲಿದ್ದವರು ನಮ್ಮ ಮನೆಯನ್ನು ತೋರಿಸಿ ನಮ್ಮ ಮನೆಯಲ್ಲಿ ಯಾರೂ ಇಲ್ಲ ಅವರು ಕೂಲಿ ಹೋಗಿದ್ದಾರೆಂದು ಹೇಳಿದರು. ಊರಿನ ಹತ್ತಿರವೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮಮ್ಮನನ್ನು ಯಾರೊ ಕರೆತಂದರು. ನಮ್ಮಮ್ಮನಿಗೆ ಏನು ತಿಳಿಯದೆ ಗಾಬರಿಯಿಂದಲೇ ಮನೆಗೆ ಬಂದವರು, ಪೋಲಿಸರನ್ನು ನೋಡಿ ಇನ್ನಷ್ಟು ಗಾಬರಿಯಾಗಿ ಸುಮ್ಮನೆ ನಿಂತಳು. ಪೋಲಿಸ್‌ನವನು “ಎಲ್ಲಮ್ಮ ನಿನ ಗಂಡ ಇಲ್ವ… ಎಲ್ಹೋಗವನೆ ಮೊದಲು ಅವನನ್ನು ಕರೆ, ಅವನನ್ನು ಕರ್ಕೊಂಡ್ಹೋಗ್ಬೇಕು” ಎಂದು ಗತ್ತಿನಿಂದ ಕೇಳಿದ. ಅವನ ಧ್ವನಿಗೆ ಅಮ್ಮನ ಧ್ವನಿ ಉಸಿರಿಲ್ಲದಂತಾಗಿತ್ತು. “ಗೊತ್ತಿಲ್ಲ ಸಾಮಿ.. ಇಲ್ಲೆ ಇದ್ರು..” ಅಂದಳು ಗಾಬರಿಯಿಂದ… ಆಗವರು “ಸುಳ್ಳೆಳ್ತೀಯ… ಅವನ ಮೇಲೆ ಕೇಸಾಗಿತ್ತು, ಅವನನ್ನು ಸ್ಟೇಷನ್ಗೆ ಕರ್ಕೊಂಡ್ ಹೋಗ್ಬೇಕು… ಸುಮ್ನೆ ನಿಜ ಹೇಳಮ್ಮ.. ಇಲ್ಲ ಅಂದ್ರೆ ಈ ಮನೇಲಿರೋ ಸಾಮಾನುಗಳೆಲ್ಲ ಜಪ್ತಿ ಮಾಡಿ ತಕೊಂಡ್ಹೋಗ್ತೇವೆ..” ಅಂದಾಗ “ನಮ್ಮ ಮನೆಯಲ್ಲಿ ಎಂತ ಸಾಮಾನುಗಳಿವೆ ಸಾಮಿ ಅಡಿಗೆ ಮಾಡ್ಕೋಳ್ಳೊ ಪಾತ್ರೆಗಳಷ್ಟೆ..” ಅಂತ ಅಮ್ಮ ಅಂದಿದ್ದಳು. ಅದಕ್ಕವರು “ಆಯ್ತು ಅದನ್ನೆ ತಗೊಂಡು ಹೋಗ್ತೇವೆ…” ಅಂದರು. ಇದೆಲ್ಲವನ್ನೂ ಇಡಿ ಊರಿಗೆ ಊರೆ ನೋಡ್ತಾ ಇತ್ತು. ಅಮ್ಮ ಅವಮಾನದಿಂದ ಜರ್ಜರಿತಳಾಗಿದ್ದಳು. ಒಂದಿಷ್ಟೊತ್ತು ಕಾದರೂ ಅಪ್ಪ ಬರಲಿಲ್ಲ. ಯಾಕೆಂದರೆ ಅಪ್ಪ ಸಿಕ್ಕಿದರೆ ಅರೆಸ್ಟ್ ಮಾಡುವ ಸಂಭವವಿತ್ತು. ಅಪ್ಪನಿಗೆ ಈ ವಿಷಯ ಅದು ಹೇಗೊ ಗೊತ್ತಾಗಿ, ಇದನ್ನು ತಿಳಿದ ಅಪ್ಪ ಮರೆಯಾಗಿದ್ದ. ಆದರೆ ಅಮ್ಮ ಇಲ್ಲಿ ಸಂಕಟಕ್ಕೆ ಸಿಲುಕಿದ್ದಳು.

ಮನೆ ಬೇರೆಯಾಗುವಾಗ ಒಂದು ಎಮ್ಮೆ ನಮ್ಮ ಭಾಗಕ್ಕೆ ಬಂದಿತ್ತು. ಬಂದಿದ್ದ ಪೋಲಿಸರು ಆ ಎಮ್ಮೆಯನ್ನೂ ಹಾಗೂ ಮನೆಯಲ್ಲಿದ್ದ ಸ್ಟೀಲ್ ಪಾತ್ರೆ, ನಮ್ಮ ಭಾಗಕ್ಕೆ ಬಂದ ಒಂದೆರಡು ಕಂಚಿನ ತಟ್ಟೆಗಳು ಚೆಂಬು ಲೋಟಗಳೆಲ್ಲವನ್ನೂ ಹೊತ್ತೊಯ್ದರು. ನಡೆದಿದ್ದು ಇಷ್ಟೆ ಪ್ರತಿ ದಿನ ಮನೆಗೆ ಬಂದು ಸಾಲ ಕೇಳುತ್ತಿದ್ದ ಅವನು ನಮ್ಮಪ್ಪನಿಗೂ ತಿಳಿಸದೆ ಕೋರ್ಟಿಗೆ ಹಾಕಿದ್ದ ಒಂದೆರಡು ನೋಟಿಸ್ ಬಂದಿದ್ದವು. ಅದಕ್ಕೆ ಅಪ್ಪ ಜಗ್ಗಿರಲಿಲ್ಲ. ಕೊನೆ ಅಸ್ತ್ರವೆಂಬಂತೆ ವಾರೆಂಟ್ ಮಾಡಿಸಿ ಸಾಲಕ್ಕೆ ಪ್ರಾಥಮಿಕವಾಗಿ ಮನೆಯ ಸಾಮಾನುಗಳನ್ನು ಜಪ್ತಿಮಾಡುವುದು ಎಂದಾಗಿತ್ತು. ಕೋರ್ಟಿಗೆ ಹೇಗೆ ಗೊತ್ತಾಗಬೇಕು ನಾವು ಕೂಲಿ ಮಾಡಿ ಬದುಕುವವರೆಂದು… ಸಾಕ್ಷಿಯನ್ನೆಲ್ಲ ಅವರಂತೆ ಮಾಡಿಕೊಂಡ ಸಾಲಕೊಟ್ಟವನು ನಾನ್ನೂರು ರೂಪಾಯಿ ಸಾಲಕ್ಕೆ ನಾಲ್ಕು ಸಾವಿರ ಮಾಡಿದ್ದ. ಆಗಿನ ಕಾಲಕ್ಕೆ ಅದೆ ದೊಡ್ಡದು. ಬೇರೆ ದಾರಿ ಇಲ್ಲದೆ ಕೋರ್ಟಿಗೆ ಹಾಜರಾಗಿ ಒಂದಿಷ್ಟು ಹಣ ಕಟ್ಟಿ ಸಾಮಾನುಗಳನ್ನು ಬಿಡಿಸಿಕೊಂಡು ಬಂದಿದ್ದಾಯಿತು. ಸಾಲಕ್ಕೋಸ್ಕರ ಎಮ್ಮೆಯನ್ನು ಆತನಿಗೆ ಬಿಟ್ಟರು. ಆತ ಅದಾದ ಮೇಲು ಸುಮಾರು ಹತ್ತು ವರ್ಷಗಳ ಕಾಲ ಅದೆ ಸಾಲಕ್ಕೆ ನಮ್ಮನ್ನು ಪೀಡಿಸುತ್ತಲೆ ಬಂದ.. ನಂತರ ಹೇಗೊ ಅದು ಬಗೆ ಹರಿಯಿತು.

ಅಂದು ಪೋಲೀಸರು ಹೋದ ಮೇಲೂ ಅಮ್ಮ ಅಳುತ್ತಲೆ ಇದ್ದಳು. ಬಡವರ ಪಾಲಿಗೆ ಕಣ್ಣೀರೇ ಅಲ್ಲವೆ ಸಾಂತ್ವನದ ಸೆಲೆಗಳು ಆಗಾಗಿ ಧಾರಾಕಾರವಾಗಿ ಹರಿಯುತ್ತಲೆ ಇತ್ತು. ಊರಿನಲ್ಲಿ ಯಾರ್ಯಾರೊ ಸಹಾಯವನ್ನು ಮಾಡಿದರು. ಅಮ್ಮನ ಒಳ್ಳೆಯ ಗುಣವೇ ಅದಕ್ಕೆ ಕಾರಣವಾಗಿತ್ತು. ಇದೆಲ್ಲ ನೋಡುತ್ತಿದ್ದಾಗ ದೇವರ ಮೇಲೆ ಕೋಪವು ಬರುತ್ತಿತ್ತು. ನನ್ನ ಓರಗೆಯವರೆಲ್ಲ ನಿಮ್ಮ ಮನೆಯ ಸಾಮಾನುಗಳನ್ನು ಪೋಲಿಸ್ನೋರು ತಗೊಂಡ್ಹೋದ್ರು ಅನ್ನುತ್ತಿದ್ದರು. ಆಗ ಇಡೀ ವ್ಯವಸ್ಥೆಯ ಮೇಲೆ ರೋಷವೇನೊ ಬರುತ್ತಿತ್ತು. ಅದರಿಂದ ಏನು ಪ್ರಯೋಜನ? ನಮ್ಮಿಂದ ಏನನ್ನೂ ಮಾಡುವುದಕ್ಕಾಗುತ್ತಿರಲಿಲ್ಲವಲ್ಲ. ಕೊನೆಗೆ ಅಮ್ಮ ಸುಮ್ಮನಾದಳು.

ಕಷ್ಟದ ದಿನಗಳಲ್ಲಿ ಶಾಲೆಯಲ್ಲಿ ಸಮಾರಂಭಗಳು ನಡೆದಾಗ ನಮಗೊಂದು ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶಾಲೆಯಲ್ಲಿ ಕೊಟ್ಟ ಬಟ್ಟೆಗಳೆ ನಮ್ಮ ಗೌರವದ ಸಂಕೇತಗಳಾಗಿದ್ದವು. ಓರಗೆಯ ಸ್ನೇಹಿತರು ಹಾಕಿಕೊಂಡು ಬರುತ್ತಿದ್ದ ಬಟ್ಟೆಗಳನ್ನು ನೋಡಿ ಭೂಮಿಯ ಮೇಲೆ ಬದುಕುವ ಮನುಷ್ಯರಲ್ಲಿ ಎಷ್ಟೊಂದು ತಾರತಮ್ಯ. ಇಲ್ಲಿನ ವಸ್ತು ಯಾವುದೂ ನಮ್ಮದಲ್ಲ. ಆದರು ಇಷ್ಟೊಂದು ಬಗೆಯ ತಾರತಮ್ಯವೆ… ದೇವರು ಎಲ್ಲರಿಗೂ ಸಮಾನವಾಗಿ ಹಂಚಬೇಕಿತ್ತಲ್ಲವೆ ಅನಿಸಿದ್ದು ಇದೆ. ಇಲ್ಲಿಯವರೆಗೂ ಆ ಪ್ರಶ್ನೆ ಹಾಗೆಯೆ ಉಳಿದಿದೆ. ಅಣ್ಣಂದಿರು ಸಹ ಶಾಲೆಗೆ ಹೋಗುವಾಗ ಬಾಗಿಲ ಹೊಸ್ತಿಲಿಗೆ ಬಳಿದಿದ್ದ ಉರ್ಮಂಜು (ಕೆಂಪು ಕಂದು ಬಣ್ಣದ್ದು) ಬಳಿದಿದ್ದನ್ನೆ ನೀರಚ್ಚಿ ಹಣೆಗಿಟ್ಟುಕೊಂಡು ಹೋಗುತ್ತಿದ್ದರು. ಕಣ್ಣಿನ ಕಪ್ಪನ್ನಾಗಿ ಬಾಗಿಲಿಗೆ ಬಳಿಯುತ್ತಿದ್ದ ಸಗಣಿ ಗಂಜು ಮಿಶ್ರಿತ ಕಪ್ಪನ್ನೆ ಬಳಿದುಕೊಂಡು ಹೋಗುತ್ತಿದ್ದರು. ಎಲ್ಲವೂ ಬಡತನದ ಕಷ್ಟಗಳೆ.. ಇವೆಲ್ಲವೂ ನನ್ನೊಳಗೊಂದು ಅಳಿಸಲಾಗದ ಕೀಳರಿಮೆಗಳನ್ನು ತಂದಿದ್ದವು. ಬದುಕಿನ ಪ್ರತಿ ಘಟ್ಟದಲ್ಲಿಯೂ ಇಂತಹದೊಂದು ಅವಮಾನದ ಸಂಗತಿಗಳು ನನ್ನನ್ನು ಕಾಡಿವೆ… ಅವೇ ಮತ್ತೆ ಮತ್ತೆ ಪುಟಿದೇಳುವಂತೆ ಮಾಡಿವೆ. ಕೊರತೆಯಲ್ಲಿಯೆ ಬದುಕು ಅರಳುತ್ತದೆನೋ ಗೊತ್ತಿಲ್ಲ. ಎಲ್ಲಾ ಸಂಕಷ್ಟಗಳ ಮಧ್ಯೆಯೂ ನಮ್ಮದೊಂದು ಬದುಕು ರೂಪುಗೊಂಡಿತಲ್ಲ.. ಇಂಥದೊಂದು ಬದುಕಿಗೆ ನಡೆದು ಬಂದ ಕಷ್ಟದ ದಾರಿಗಳು ಮತ್ತೆ ಮತ್ತೆ ನೆನಪಾಗುತ್ತವೆ. ಮತ್ತೆ ಮತ್ತೆ ಮನಸ್ಸು ಪ್ರಫುಲ್ಲವಾಗುತ್ತದೆ. ಬದುಕನ್ನು ಪ್ರೀತಿಸುವಂತೆ ಮಾಡುತ್ತವೆ. ಹೀಗೆಯೆ ಸಾಗುವ ದಾರಿಯಲ್ಲಿ ಎಷ್ಟೊಂದು ಘಟನೆಗಳ ನಿಲ್ದಾಣಗಳಿವೆ ಅನ್ನುವಾಗಲೆ ಇನ್ನೊಂದು ಕಷ್ಟ ನೆನಪಾಗುತ್ತದೆ. ನೆನಪುಗಳು ಸಾಯುವುದಿಲ್ಲ. ನಮ್ಮ ಬದುಕು ಕೂಡ……!?

(ಮುಂದುವರಿಯುವುದು…)