ಊರಿನ ಹುಡುಗರೆಲ್ಲ ನೋಡಿ ಹೇಗೆ ಹರಳೆಣ್ಣೆ ಹಚ್ಕೊಂಡು ಓಡಾಡ್ತ ಇದ್ದಾರೆ. ನಿಮಗೆ ಹಬ್ಬ ಬ್ಯಾಡ್ವ ಎಂದು ಅಜ್ಜಿ ಗದರಿದ್ದಳು. ನಾವೇನು ಹೊಸಬಟ್ಟೆ ಹಾಕ್ಕೋಳಲ್ಲ. ನಾವ್ಯಾಕೆ ಹರಳೆಣ್ಣೆ ಹಚ್ಕೊಬೇಕು ಎಂದು ಸುಮ್ಮನಾದೆವು. ಅಪ್ಪ ಬಂದು ಗದರಿದ. ನಾವು ವಿಧಿಯಿಲ್ಲದೆ ಅದಕ್ಕೆ ಸಿದ್ಧರಾದೆವು. ಎಣ್ಣೆಸ್ನಾನ ಆದಮೇಲೆ ಇದ್ದಕ್ಕಿದ್ದಂತೆ ಹೊಸ ಬಟ್ಟೆ ಕಾಣಿಸಿದವು. ಅವು ರೆಡಿಮೇಡ್ ಬಟ್ಟೆಗಳಾಗಿದ್ದವು. ಬುಟ್ಟಿ ತೋಳಿನ ರಬ್ಬರ್‌ನ ಎಳೆಯ ಅಲ್ಲಲ್ಲಿ ಮಿಂಚು ಕಾಣಿಸುವ ಇಂಗ್ಲೀಷ್ ಅಕ್ಷರದ ಉಲ್ಟಾ ಸೀದಾ ಅಡ್ಡ ಹೀಗೆ ನಾನಾ ರೀತಿ ಕಾಣುವ ಪ್ರಿಂಟೆಡ್ ಅಕ್ಷರಗಳ ಆ ‘ಅಂಗಿ’ ಆಧುನಿಕತೆಯ ‘ಟೀ ಶರ್ಟ್’ ಆಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾರನೆಯ ಕಂತು

ಹಳ್ಳಿಗಳಲ್ಲಿ ಹಬ್ಬಗಳೆಂದರೆ ಸಾಂಸ್ಕೃತಿಕ ಜೀವಂತಿಕೆಯ ಸಂಕೇತ. ಕೂಲಿ, ಬವಣೆ ಕಷ್ಟ-ಸುಖ ಒಮ್ಮೆ ಮಳೆ ಒಮ್ಮೆ ಬರ ಹೀಗೆ ದುಸ್ತರವಾಗಿ ಸಾಗುವ ಬದುಕಿನಲ್ಲಿ ಹಬ್ಬಗಳು ಖುಷಿಯ ಪರಾಕು ಹಾಕುತ್ತಲೆ ಜೀವಕ್ಕೆ ಚೈತನ್ಯ ತಂದುಕೊಡುವುದರ ಮೂಲಕ ನಮ್ಮೊಳಗೊಂದು ಆಶಾಭಾವನೆಯನ್ನು ಉಂಟುಮಾಡುತ್ತವೆ. ವರ್ಷಪೂರ್ತಿ ದುಡಿದ ಮನಸ್ಸುಗಳು ಹಬ್ಬಕ್ಕೊಂದು ಹೊಸಬಟ್ಟೆ ಹಪ್ಪಳ ಸಂಡಿಗೆ ಒಂದೊಳ್ಳೆ ಸಿಹಿಯೂಟ ಸಂಬಂಧಿಗಳೊಂದಿಗೆ ಒಂದು ಹರಟೆ, ಕಷ್ಟ ಸುಖಗಳ ಹಂಚಿಕೆ ಮರೆತು ಹೋದ ಹಳೆಯ ನೆನಪುಗಳ ಮೆಲುಕು ಹಠಾತ್ ಸಂಭವಿಸಿದ ಆಘಾತ ಅದರಿಂದ ಹೊರಬಂದು ಬದುಕನ್ನು ಕಟ್ಟಿಕೊಂಡ ರೀತಿ ಎಲ್ಲಾ ಮಾತುಗಳು ಸಂಭ್ರಮದಲ್ಲಿ ಬಂದು ಹೋಗುತ್ತವೆ. ಏನಿಲ್ಲವೆಂದರೂ ಹಬ್ಬಕ್ಕೆ ಹೊಸ ಬಟ್ಟೆ ಇರಲೇಬೇಕು. ಅದರಲ್ಲೂ ಯುಗಾದಿಗೆ ಬಟ್ಟೆ ಬೇಕೆ ಬೇಕು. ತಂದ ಬಟ್ಟೆ ಖುಷಿಕೊಡದಿದ್ದರೆ ಮನಸ್ಸು ಘಾಸಿಗೆ ಬೀಳುತ್ತದೆ.

ಮನೆಯಲ್ಲಿ ವರ್ಷಕ್ಕೆರಡು ಜೊತೆ ಬಟ್ಟೆ ಕೊಡಿಸಿದರೆ ಅದೆ ನಮ್ಮ ಭಾಗ್ಯ. ಅದನ್ನು ತರಬೇಕಾದರೆ ಅಪ್ಪ ಎಷ್ಟು ಅವಸ್ಥೆ ಬೀಳುತ್ತಿದ್ದ! ಒಮ್ಮೊಮ್ಮೆ ಈ ಬಟ್ಟೆಯ ಸಹವಾಸವೆ ಸಾಕು ಎನ್ನುವಷ್ಟು ತೊಂದರೆ ಪಡುತ್ತಿದ್ದ. ಮಧ್ಯಮ ವರ್ಗದವರಿಗೆ ಅದು ಸಲೀಸು ಇರಬಹುದು. ಕೂಲಿ ಮಾಡಿ ಬದುಕುವವರು ಅಥವಾ ಸಣ್ಣದೊಂದು ವ್ಯಾಪಾರ ಮಾಡಿಕೊಂಡು ಬದುಕುವವರು ಅಂದಿನ ಊಟಕ್ಕಷ್ಟೆ ದುಡಿಯುವವರು ಇಂತಹ ಸಂಕಟಗಳಿಗೆ ತುತ್ತಾಗುತ್ತಲೆ ಇರುತ್ತಾರೆ. ಇದು ಎಲ್ಲಾ ಕಾಲಕ್ಕೂ ಇರುವಂಥದ್ದೆ. ಕಾಲ ಬದಲಾದರೇನು ಅಥವಾ ಮನುಷ್ಯ ಬದಲಾದರೇನು? ಅವಶ್ಯಕತೆಗಳು ಬದುಕಿಗೆ ಬೇಕಾದ ಅಗತ್ಯಗಳು ಎಲ್ಲಾ ಕಾಲಕ್ಕೂ ಒಂದೆ ಅಲ್ಲವೆ. ಬದುಕುವ ರೀತಿಯಲ್ಲಿ ಮಾರ್ಪಾಟುಗಳಿರಬಹುದು ಅಷ್ಟೆ.

ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ. ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬಕ್ಕೆ ಹೊಸಬಟ್ಟೆ ತರಬೇಕೆಂದು ನಾವು ಕೇಳುತ್ತಿದ್ದೆವು. ಅಪ್ಪ ಆಗಾಗ ಸಿಡಿಮಿಡಿಗೊಳ್ಳುತ್ತಿದ್ದ. ಬದುಕು ಒಂದಿಷ್ಟು ಸುಧಾರಿಸಿತ್ತು. ಚಿಕ್ಕಪ್ಪ ಒಂದು ಸಣ್ಣ ಅಂಗಡಿಯನ್ನಿಟ್ಟುಕೊಂಡು ಬದುಕನ್ನು ಆರಂಭಿಸಿದ್ದ. ನಾಲ್ಕೈದು ವರ್ಷಗಳು ಕಳೆಯುವುದರೊಳಗೆ ಸರ್ಕಾರದ ಅಕ್ಕಿ ಡೀಲರ್ ವೃತ್ತಿ ಸಿಕ್ಕಿತ್ತು. ಅದು ಸಂಪೂರ್ಣವಾಗಿ ಸರ್ಕಾರದ ಕೆಲಸವಲ್ಲದಿದ್ದರೂ ತಕ್ಕಮಟ್ಟಿಗೆ ಸಾರ್ವಜನಿಕ ಸೇವೆ ಅಂದರೆ ಸರಿಯಾದೀತು. ಅದರಲ್ಲಿ ಬದುಕು ಕಟ್ಟಿಕೊಳ್ಳುವ ಬಯಕೆ ಚಿಕ್ಕಪ್ಪನದು. ಅಪ್ಪನು ಒಂದಿಷ್ಟು ವಿದ್ಯಾವಂತನೆ. ಆದ್ದರಿಂದ ತಾನು ಆರಂಭಿಸಿದ್ದ ಅಂಗಡಿಯ ವ್ಯವಹಾರವನ್ನು ಅಪ್ಪನಿಗೆ ವಹಿಸಿದ್ದ. ಅದು ನಮ್ಮ ಊಟ ಬಟ್ಟೆಗೆ ಸಾಕಾಗುವಷ್ಟು ದುಡಿಮೆ ಅದರಿಂದ ಬರುತ್ತಿತ್ತು.

ಒಂದಿಷ್ಟು ಸಾಲವು ಅಂಗಡಿಯ ವ್ಯವಹಾರದಲ್ಲಿ ಬೀಳುತ್ತ ಬಂತು. ಅಪ್ಪ ಅದನ್ನು ಸರಿದೂಗಿಸುವುದರಲ್ಲಿ ಬಸವಳಿಯುತ್ತಿದ್ದ. ಆಗಾಗ ದುಡ್ಡಿನ ಸುದ್ದಿ ಬಂದರೆ ಸಾಕು ಕೋಪಗೊಳ್ಳುತ್ತಿದ್ದ. ಆದರೂ ಒಳಗೊಳಗೆ ಮಕ್ಕಳಿಗೆಲ್ಲ ಬಟ್ಟೆ ತರಲೆಬೇಕೆಂಬ ತುಡಿತ ಅಪ್ಪನನ್ನು ಹಾಗೆ ಕೋಪಗೊಳ್ಳುವಂತೆ ಮಾಡುತ್ತಿತ್ತಾ. ಗೊತ್ತಿಲ್ಲ. ಅದನ್ನು ಅಪ್ಪ ಎಂದೂ ಯಾರಬಳಿಯೂ ಹಂಚಿಕೊಳ್ಳುತ್ತಿರಲಿಲ್ಲ. ನಾವು ನಾಲ್ವರು ಮಕ್ಕಳು; ನಾಲ್ವರು ಮಕ್ಕಳಿಗೂ ಬಟ್ಟೆ ತರುವುದು. ಹಬ್ಬದ ಊಟಕ್ಕೆ ಧವಸ ಧಾನ್ಯಗಳನ್ನು ಹೊಂದಿಸುವುದು ಬಹಳ ಕಷ್ಟವೆ ಆಗುತ್ತಿತ್ತು. ನಾವಂತು ಹಠಹಿಡಿದು ಕೂತುಬಿಟ್ಟೆವು. ನಮಗೆ ಹಬ್ಬಕ್ಕೆ ಹೊಸಬಟ್ಟೆ ಬೇಕೆ ಬೇಕು ಎಂದು ಅಪ್ಪನೊಂದಿಗೆ ಜಗಳಕ್ಕೆ ನಿಂತಂತೆ ಕೇಳಿದ್ದೆವು. ಅತ್ತದ್ದೂ ಆಯಿತು. ಆಗ ನೋಡೋಣ ಎಂದಷ್ಟೆ ಅಂದಿದ್ದ ಅಪ್ಪ. ನಾಳೆಯೆ ಹಬ್ಬ ಹೊಸಬಟ್ಟೆ ಮನೆಗೆ ಬರಲಿಲ್ಲ. ನಾವು ನಿರಾಶರಾದೆವು. ಊರಿನತುಂಬ ನನ್ನ ಸ್ನೇಹಿತರೆಲ್ಲ ಹೊಸಬಟ್ಟೆ ಹಾಕುವರಲ್ಲ. ನಾವು ಅವರ ಮುಂದೆ ಹೇಗೆ ಇರುವುದು ಎಂಬ ಯೋಚನೆ. ಹಳ್ಳಿಗಳಲ್ಲಿ ಅದು ಪ್ರತಿಷ್ಠೆಯ ವಿಷಯವೆ. ಹಬ್ಬಕ್ಕೆ ಹೊಸಬಟ್ಟೆ ಹಾಕಲಿಲ್ಲವೆಂದರೆ ಅವರನ್ನು ಹೀಯಾಳಿಸುತ್ತಿದ್ದ ಪ್ರಸಂಗವೂ ನಡೆಯುತ್ತಿದ್ದವು. ಅದು ನಮ್ಮನ್ನು ಯೋಚನೆಗೀಡು ಮಾಡಿತ್ತು. ಹಾಗಾಗಿ ನಾವೆಲ್ಲ ಅತ್ತು ಗೋಳಾಡಿದೆವು. ಇದ್ಯಾವುದೂ ಅಪ್ಪನನ್ನು ಕರಗಿಸಲಿಲ್ಲ. ಅಪ್ಪನಿಗಿದ್ದ ತೊಂದರೆಗಳೇನು ಎಂದು ಅರಿಯುವಷ್ಟು ವ್ಯವಧಾನವಾಗಲೀ ಬುದ್ದಿಯಾಗಲೀ ಆಗ ನಮಗೆಲ್ಲಿ ಬರಬೇಕು. ನಮಗೆ ಬೇಕಾದ್ದನ್ನು ಕೇಳುವವರಷ್ಟೆ ನಾವು. ಅಪ್ಪ ಕೇಳುವವರೆಗೂ ಕೇಳಿ, ಗದರಿದ… ನಾವು ಸುಮ್ಮನಾದೆವು.

ವಸಂತ ಋತುವಿನಲ್ಲಿ ಗಿಡಮರಗಳ ಹಚ್ಚ ಹಸುರಿನ ಒಡಲಲ್ಲಿ ಬೇವು ಬೆಲ್ಲದ ಸಂಕೇತವಾಗಿ ಬರುವ ಹಬ್ಬ ನಮಗೆ ಬೇವಿನ ಕಹಿಯನ್ನೆ ನೀಡಿತಲ್ಲ ಎಂದು ನಮ್ಮ ಸಂಕಷ್ಟಕ್ಕೆ ಬೇವನ್ನು ಸಾಂಕೇತಿಸುತ್ತ ಮನಸ್ಸು ಬೇಸರದಲ್ಲಿ ಮರುಗುವಾಗ ನೀವು ಮೈ ತುಂಬ ಹರಳೆಣ್ಣೆ ಹಚ್ಚಿಕೊಳ್ಳಿ. ಊರಿನ ಹುಡುಗರೆಲ್ಲ ನೋಡಿ ಹೇಗೆ ಹರಳೆಣ್ಣೆ ಹಚ್ಕೊಂಡು ಓಡಾಡ್ತ ಇದ್ದಾರೆ. ನಿಮಗೆ ಹಬ್ಬ ಬ್ಯಾಡ್ವ ಎಂದು ಅಜ್ಜಿ ಗದರಿದ್ದಳು. ನಾವೇನು ಹೊಸಬಟ್ಟೆ ಹಾಕ್ಕೋಳಲ್ಲ. ನಾವ್ಯಾಕೆ ಹರಳೆಣ್ಣೆ ಹಚ್ಕೊಬೇಕು ಎಂದು ಸುಮ್ಮನಾದೆವು. ಅಪ್ಪ ಬಂದು ಗದರಿದ. ನಾವು ವಿಧಿಯಿಲ್ಲದೆ ಅದಕ್ಕೆ ಸಿದ್ಧರಾದೆವು. ಎಣ್ಣೆಸ್ನಾನ ಆದಮೇಲೆ ಇದ್ದಕ್ಕಿದ್ದಂತೆ ಹೊಸ ಬಟ್ಟೆ ಕಾಣಿಸಿದವು. ಅವು ರೆಡಿಮೇಡ್ ಬಟ್ಟೆಗಳಾಗಿದ್ದವು. ಬುಟ್ಟಿ ತೋಳಿನ ರಬ್ಬರ್‌ನ ಎಳೆಯ ಅಲ್ಲಲ್ಲಿ ಮಿಂಚು ಕಾಣಿಸುವ ಇಂಗ್ಲೀಷ್ ಅಕ್ಷರದ ಉಲ್ಟಾ ಸೀದಾ ಅಡ್ಡ ಹೀಗೆ ನಾನಾ ರೀತಿ ಕಾಣುವ ಪ್ರಿಂಟೆಡ್ ಅಕ್ಷರಗಳ ಆ ‘ಅಂಗಿ’ ಆಧುನಿಕತೆಯ ‘ಟೀ ಶರ್ಟ್’ ಆಗಿತ್ತು. ನನಗೂ ನನ್ನ ತಮ್ಮನಿಗೂ ಒಂದೆ ರೀತಿಯ ಬಟ್ಟೆಗಳು ಬಂದಿದ್ದವು. ಅಕ್ಕಂದಿರಿಗೆ ಬಟ್ಟೆ ತಂದಿರಲಿಲ್ಲ. ಅದಕ್ಕೆ ಹಣವಿಲ್ಲದ್ದೆ ಕಾರಣವಾಗಿತ್ತು. ಅದು ಅಪ್ಪ ತಂದಿದ್ದಲ್ಲ ಎಂದು ನಂತರವಷ್ಟೇ ತಿಳಿಯಿತು. ನಮ್ಮ ಚಿಕ್ಕಪ್ಪನೆ ಮಕ್ಕಳಿಗೆ ಹಬ್ಬದಲ್ಲಿ ಬಟ್ಟೆಯಿಲ್ಲದಿದ್ದರೆ ಹೇಗೆ ಎಂದು ತಂದಿದ್ದರಂತೆ. ನಂತರ ಅದರ ಹಣವನ್ನು ಅಪ್ಪ ಕೊಟ್ಟ ಎಂದಷ್ಟೆ ತಿಳಿಯಿತು. ಮೊದಲೆ ಸಣಕಲು ದೇಹದ ಈ ದೇಹಕ್ಕೆ ಆ ಟೀ ಷರ್ಟ್ ಕಡ್ಡಿಗೆ ತೊಡಿಸಿದ ಬೆದರುಬೊಂಬೆಯಂತೆ ಕಾಣುತ್ತಿತ್ತು. ಮೊದ ಮೊದಲು ಅದನ್ನು ಹಾಕಿಕೊಳ್ಳಲು ನಾಚಿಕೆ ಪಟ್ಟೆವಾದರೂ ಹಬ್ಬ ಎಂಬ ಕಾರಣಕ್ಕೆ ಹಾಕಿಕೊಂಡಿದ್ದೆ. ಅದು ನನ್ನ ಮೊದಲ ರೆಡಿಮೇಡ್ ಬಟ್ಟೆ. ಬಹುಶಃ ಅದೆ ಕೊನೆಯದು. ಮುಂದೆ ಸುಮಾರು ಇಪ್ಪತ್ತು ವರ್ಷಗಳವರೆಗೆ ಎಂದೂ ಟಿ ಷರ್ಟ್‌ಗಳನ್ನು ಹಾಕಲಿಲ್ಲ. ಅದನ್ನು ಹಾಕಿಕೊಂಡಾಗಲೆಲ್ಲ ಸಂಕೋಚ ನನ್ನನ್ನು ಕಾಡುತ್ತಿತ್ತು. ನಾಲ್ಕೈದು ಬಾರಿ ಅದನ್ನು ಹಾಕಿಕೊಂಡು ನಂತರ ಒಂದು ದಿನ ನಾವೆ ಅದನ್ನು ಹರಿದು ಬೇಲಿಗೆ ಸಿಕ್ಕಿ ಹರಿದುಹೋಯಿತು ಎಂದು ಮನೆಯಲ್ಲಿ ಸುಳ್ಳು ಹೇಳಿ ಅದಕ್ಕೊಂದು ಗತಿ ಕಾಣಿಸಿದೆವು.

ಇನ್ನೊಂದು ಪ್ರಸಂಗವನ್ನು ಹೇಳಲೇಬೇಕು. ಈಗಾಗಲೆ ತಿಳಿಸಿದಂತೆ ನಮ್ಮ ಊರಿನಲ್ಲಿ ಸುಮಾರು ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ಬೇರೆ ಊರಿಗೆ ವರ್ಗಾವಣೆಯಾದ ಗಂಗಣ್ಣ ಮೇಷ್ಟ್ರು ಮಕ್ಕಳ ಮನಸ್ಸನ್ನಲ್ಲದೆ ಇಡಿ ಊರಿನ ಜನಗಳ ಮನಸ್ಸನ್ನು ಗೆದ್ದಿದ್ದರು. ಹಾಗಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ಊರಿನ ಜನರು ಅವರ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಪ್ರತಿ ಮನೆಯಿಂದಲೂ ಅವರಿಗೆ ಒಂದೊಂದು ಉಡುಗೊರೆಯನ್ನು ಕೊಡಲಾಗಿತ್ತು. ಅಷ್ಟೊತ್ತಿಗೆ ನಮ್ಮಪ್ಪ ಒಂದಿಷ್ಟು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ. ಜೊತೆಗೆ ಮೇಷ್ಟ್ರಿಗೆ ನಮ್ಮಪ್ಪನ ಮೇಲೆ ಗೌರವವು ಇತ್ತು. ಹಾಗಾಗಿ ಆ ವೇದಿಕೆಯಲ್ಲಿ ನಮ್ಮಪ್ಪನು ಒಂದೆರಡು ಮಾತುಗಳನ್ನು ಮೇಷ್ಟ್ರು ಬಗ್ಗೆ ಹೇಳಿದ್ದು ನೆನಪಿದೆ.

ಉಡುಗೊರೆ ಕೊಡುವ ಕಾರ್ಯಕ್ರಮ ನಡೆದ ಮೇಲೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಹುಡುಗರೆಲ್ಲ ಮುಗಿಬಿದ್ದರು. ನಾವು ಆ ವರ್ಷವೆ ನಮ್ಮೂರಿನ ಶಾಲೆ ತೊರೆದು ಇನ್ನೊಂದು ಶಾಲೆಗೆ ಸೇರಿದ್ದೆವು. ಅವಾಗಲೆ ನಾನು ಪಂಚೆ ಹಾಕಿಕೊಳ್ಳುವುದನ್ನು ಕಲಿತಿದ್ದೆ. ಸಣಕಲು ದೇಹವಿದ್ದುದರಿಂದ ಬಹು ಎತ್ತರದವನಂತೆ ಕಾಣುತ್ತಿದ್ದೆ. ಆಗಿನ್ನೂ ನಮಗೆ ಪ್ಯಾಂಟ್ ಹೊಲಿಸಿರಲಿಲ್ಲ. ಆದರೆ ಮೇಷ್ಟ್ರು ಇನ್ನೊಂದು ಹೊಸ ಶಾಲೆಗೆ ಪ್ಯಾಂಟ್ ಹಾಕಿಕೊಂಡು ಹೋಗುತ್ತಾರೆ ಎಂದೆ ಭಾವಿಸಿದ್ದರು. ನಾವು ಪಂಚೆ ಹಾಕಿಕೊಂಡೆ ಸಮಾರಂಭಕ್ಕೆ ಹೋಗಿದ್ದೆವು. ಎಲ್ಲರೂ ಫೋಟೊ ತೆಗೆಸಿಕೊಳ್ಳಬೇಕಾದರೆ ನಾವು ಅವರನ್ನು ಕರೆದೆವು. ಅವರು ಹೋಗಿ ಬಟ್ಟೆ ಬದಲಿಸಿಕೊಂಡು ಬನ್ನಿ ಎಂದರು. ಬದಲಿಸಿಕೊಳ್ಳಲು ಬಟ್ಟೆ ಎಲ್ಲಿವೆ. ನಮ್ಮಪ್ಪ ಒಂದಿಷ್ಟು ಬದುಕು ಸುಧಾರಿಸಿದರೂ ಬಟ್ಟೆ ತರುವ ವಿಚಾರದಲ್ಲಿ ಬದಲಾವಣೆ ಆಗಿರಲಿಲ್ಲ. ವರ್ಷಕ್ಕೆರಡೆ ಜೊತೆ ಅವನ್ನೆ ಒಗೆದೊಗೆದು ಹಾಕಿಕೊಳ್ಳಬೇಕಾಗಿತ್ತು. ಅಪ್ಪನಿಗೆ ಬಟ್ಟೆಯ ಮೇಲೆ ಯಾಕಿಷ್ಟು ತಿರಸ್ಕಾರ ಎಂದು ಯೋಚಿಸಿದ್ದಿದೆ. ಮನುಷ್ಯನನ್ನು ಆತನ ವ್ಯಕ್ತಿತ್ವದಿಂದ ಗುರ್ತಿಸಬೇಕೆ ಹೊರತು ಬಟ್ಟೆಯಿಂದಲ್ಲ ಎಂಬ ಧೋರಣೆ ಆತನದು ಇದ್ದಿರಬಹುದು. ಕೊನೆಗೆ ನಾವು ಸುಮ್ಮನಿದ್ದುದನ್ನು ನೋಡಿ ಅವರಿಗೆ ನಮ್ಮ ಸ್ಥಿತಿ ಅರ್ಥವಾಗಿರಬೇಕು. ಆಯ್ತು ಬನ್ನಿ ಎಂದು ನನ್ನನ್ನು ನನ್ನ ತಮ್ಮನನ್ನು ಜೊತೆಯಲ್ಲಿಯೆ ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರು. ಅದೊಂದು ಸಾರ್ಥಕ ಕ್ಷಣ. ಇವತ್ತಿಗೂ ನನಗೆ ಬಟ್ಟೆಗಳ ಮೇಲೆ ವ್ಯಾಮೋಹ ಅಷ್ಟಕಷ್ಟೆಯೆ. ಹೀಗೆ ಬಟ್ಟೆಗಳಿಂದಲೆ ಬದುಕಿನ ಪಾಠವನ್ನು ಅಪ್ಪ ನಮಗರಿವಿಲ್ಲದೆಯೆ ಹೇಳಿದ್ದ. ಅದು ಸರಳ ಜೀವನಕ್ಕೆ ದಾರಿಯಾಗಿತ್ತು.

(ಮುಂದುವರಿಯುವುದು)