ಪ್ರತಿ ಶುಕ್ರವಾರ ಜನ ಕಿಕ್ಕಿರಿದು ತುಂಬತೊಡಗಿದರು. ನನಗೋ ಶುಕ್ರವಾರ ಬಂದರೆ ಬೇಸರ ಶುರುವಾಗತೊಡಗಿತು. ನನ್ನ ಮತ್ತು ಅಂಬಾಭವಾನಿಯ ಮಧ್ಯದ ಏಕಾಗ್ರತೆಗೆ ಈ ಶಾಂತಿಭಂಗ ಬಹಳ ಕಿರಿಕಿರಿ ಎನಿಸುತ್ತಿತ್ತು. ಎಲ್ಲರೂ ಪ್ರಶ್ನೆ ಕೇಳುತ್ತಿದ್ದಿಲ್ಲ. ಆ ಮುಗ್ಧ ಮಹಿಳೆಯರು ಕುತೂಹಲದಿಂದ ಬರುತ್ತಿದ್ದರೂ ನನ್ನ ಪೂಜೆ ಧ್ಯಾನ ಮುಗಿಯುವ ವರೆಗೂ ತುಟಿಪಿಟಕ್ಕೆನ್ನದೆ ಕುಳಿತುಕೊಳ್ಳುತ್ತಿದ್ದರು. ಆದರೆ ಅವರೆಲ್ಲ ಬಂದು ಕೂಡುವುದೇ ನನಗೆ ಕಿರಿಕಿರಿ ಎನಿಸುತ್ತಿತ್ತು. ಹೀಗೆ ನನ್ನ ಖಾಸಗಿತನ ಕಳೆದುಹೋಗತೊಡಗಿತು. ಏತನ್ಮಧ್ಯೆ ನಾವಿಗಲ್ಲಿಯ ಬಡವರ ಬದುಕಿನ ಪರಿಪರಿ ನೋವಿನ ಎಳೆಗಳ ಪರಿಚಯವಾಗತೊಡಗಿತು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಮೂವತ್ತೆರಡನೆಯ ಕಂತು
ತುಳಜಾಭವಾನಿ ಆರಾಧಕ ಲಿಂಗಣ್ಣ ಮಾಸ್ತರ (ಇಂಚಗೇರಿ ಗುರುಗಳು) ಮೂಲಕ ಅನೇಕ ಹಿರಿಯ ಮತ್ತು ಯುವಮಿತ್ರರು ಪರಿಚಯವಾದರು. ಅವರೆಲ್ಲರ ನಡುವೆ ನಾನು ಬಾಲಕನಾಗಿದ್ದೆ. ಲಿಂಗಣ್ಣ ಮಾಸ್ತರರು ಎಲ್ಲೇ ಹೋದರೂ ಪ್ರತಿದಿನ ಸಂಜೆ ದೇವಿ ಫೋಟೊ ಇಟ್ಟು ಪೂಜೆ ಮಾಡುತ್ತಿದ್ದರು. ಆದರೆ ಅದು ತುಳಜಾಭವಾನಿ ಫೋಟೊ ಆಗಿರದೆ ಹುಲಿಯ ಮೇಲೆ ಕುಳಿತ ಪ್ರಶಾಂತ ಮಹಿಷಾಸುರ ಮರ್ದಿನಿಯ ಫೋಟೊ ಆಗಿತ್ತು.
ವಿಜಾಪುರಕ್ಕೆ ಬಂದಾಗ ಅವರ ಭಕ್ತರ ಮನೆಯಲ್ಲಿ ಪೂಜೆಯ ವ್ಯವಸ್ಥೆ ಆಗುತ್ತಿತ್ತು. ಪೂಜೆಯ ವೇಳೆ ತಾವೇ “ಭಾಗ್ಯದ ಲಕ್ಷ್ಮೀ ಬಾರಮ್ಮ” ಹಾಡು ಹೇಳುತ್ತಿದ್ದರು. ನನಗೆ ಪರಿಚಯವಾಗುವ ಮೊದಲೇ ಅವರು ನಿವೃತ್ತರಾಗಿದ್ದರು. ಆದರೆ ‘ಲಿಂಗಣ್ಣ ಮಾಸ್ತರರು’ ಎಂದೇ ಜನ ಹೇಳುತ್ತಿದ್ದರು. ಅವರು ಬಲಗೈ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಅವರ ಶಿಷ್ಯವರ್ಗದಲ್ಲಿ ಎಲ್ಲ ಜಾತಿಯ ಜನರಿದ್ದರು. ಜಾತಿ ಧರ್ಮಗಳು ಎಂದೂ ಅಡ್ಡ ಬಾರದ ದಿನಗಳು ಅವಾಗಿದ್ದವು. ಜಾತಿ, ಅಸ್ಪೃಶ್ಯತೆ ಇದ್ದರೂ ಮಾನವೀಯ ಸಂಬಂಧ ಹಾಳಾಗಿರಲಿಲ್ಲ.
ಅಮಾವಾಸ್ಯೆ ದಿನ ಅನೇಕ ಹಿರಿಯರು ಮತ್ತು ಯುವಕರು ಸೀತಿಮನಿಯ ಅವರ ಆಶ್ರಮಕ್ಕೆ ಹೋಗುತ್ತಿದ್ದರು. (ಅವರು ಇಂಡಿ ಪಟ್ಟಣದಿಂದ ಸೀತಿಮನಿಗೆ ಬಂದು ಉಳಿದಿದ್ದರು.) ಅದೊಂದು ಚಿಕ್ಕ ಆಶ್ರಮವಾಗಿತ್ತು. ಪೂಜಾಸ್ಥಳ ಮತ್ತು ಪಕ್ಕದಲ್ಲೇ ಒಂದು ಕೋಣೆ ಇತ್ತು. ಅವರು ಬಂದಾಗ ವಿಜಾಪುರದ ಮೈಸೂರು ಲಾಡ್ಜ್ ಎದುರಿಗೆ ಇದ್ದ ಅಂಗಡಿಗೆ ಬರುತ್ತಿದ್ದರು. ಅಂಗಡಿಯ ಮುಂಗಟ್ಟಿನ ಕುರ್ಚಿಗಳ ಮೇಲೆ ನಾವು ಕೂಡುತ್ತಿದ್ದೆವು. ಅವರೂ ಅಲ್ಲೇ ಇರುತ್ತಿದ್ದರು. ರಾಜಕೀಯ ನಾಯಕರ ಸಂಬಂಧವಿರುವ ಕೆಲವರು ಅವರ ಕಡೆ ಬರುತ್ತಿದ್ದರು. ಹಾಗೆ ಬರುವವರಲ್ಲಿ ಕೆಲವರು ರಾಜಕಾರಣಿಗಳ ಕೃಪಾಕಟಾಕ್ಷವನ್ನು ಹೊಂದಿದವರಾಗಿರುತ್ತಿದ್ದರು. ಇಂಥ ಜನರ ಜೊತೆ ಬಡವರು, ನಿರುದ್ಯೋಗಿಗಳು, ಸಣ್ಣಪುಟ್ಟ ನೌಕರಿಗಳ ಆಕಾಂಕ್ಷಿಗಳು ಬರುತ್ತಿದ್ದರು. ಆಗ ಈಗಿನಷ್ಟು ಸಂಪರ್ಕ ಸಾಧನಗಳಿರಲಿಲ್ಲ. ವ್ಯಾವಹಾರಿಕ ಪ್ರಜ್ಞೆಯೂ ಇರಲಿಲ್ಲ. ಹಣದ ಕೊರತೆಯಿಂದ ಬಡವರು ವಶೀಲಿಬಾಜಿಯ ಗೋಜಿಗೆ ಹೋಗುತ್ತಿರಲಿಲ್ಲ. ದೇವರ ಮೇಲೆ ಭಾರ ಹಾಕುವುದು, ಭವಿಷ್ಯ ನುಡಿಯುವವರ ಬಗ್ಗೆ ಭರವಸೆ ಇಡುವುದು ಮತ್ತು ಬದುಕಿನಲ್ಲಿ ನಂಬಿಕೆ ಕಳೆದುಕೊಳ್ಳದೆ ಮುನ್ನಡೆಯುವುದು ಅಂದಿನ ಬಡಜನರ ಸಾಮಾನ್ಯ ಮನಸ್ಥಿತಿಯಾಗಿತ್ತು. ಇಂಥ ದೇವರು ಹೇಳುವವರು ಮತ್ತು ಇವರ ಹತ್ತಿರ ಬರುವ ಜನರು ಹೊಸದೊಂದು ಸಾಮಾಜಿಕ ವಾತಾವರಣದ ಸೃಷ್ಟಿಗೆ ಕಾರಣರಾಗುತ್ತಿದ್ದರು. ಹೀಗೆ ಬಡವರು ಸಾಮಾಜೀಕರಣಗೊಳ್ಳುತ್ತಿದ್ದರು.
ಇಂಚಗೇರಿ ಗುರುಗಳು ಒಳ್ಳೆಯತನದ ಜೊತೆಗೆ ಖಡಕ್ ಆಗಿದ್ದರು. ತಮ್ಮಲ್ಲಿ ಬರುವವರಿಗೆಲ್ಲ ಅವರವರ ಬಯಕೆಯಂತೆ ಭರವಸೆ ಕೊಡುತ್ತಿದ್ದರು. ಕೆಲವೊಂದು ಸಲ ನಿರುದ್ಯೋಗಿಗಳಿಂದ ನೂರೋ ಇನ್ನೂರೋ ಪಡೆದು ಮೇಲಧಿಕಾರಿಗಳಿಗೆ ಕೊಡಲು ತಮ್ಮಲ್ಲಿ ಬರುವ ಕೆಳದರ್ಜೆಯ ನೌಕರರಿಗೆ ಮತ್ತು ಶಾಸಕ ಮುಂತಾದವರ ಸಂಬಂಧವಿರುವವರಿಗೆ ದಾಟಿಸುತ್ತಿದ್ದರು. ಒಬ್ಬ ಕಡುಬಡವ ಸಾಲ ಮಾಡಿ ಒಂದಿಷ್ಟು ದುಡ್ಡು ಕೊಟ್ಟಿದ್ದ ಅವನ ಕೆಲಸ ಆಗಲಿಲ್ಲ. ಆತನ ತಾಯಿ ಬಹಳ ಗೋಳಾಡಿದಳು. ಎಲ್ಲ ಕಲ್ಲುಗಳು ಗುರಿ ಮುಟ್ಟಲಾರವು. ಆದರೆ ಇಂಥ ಸಂದರ್ಭಗಳಲ್ಲಿ ಇಂಚಗೇರಿ ಗುರುಗಳ ಹೆಸರಿಗೆ ಕುಂದು ಬರುತ್ತಿತ್ತು.
ಕ್ಯಾತಣ್ಣವರ ಎಂಬ ಮಾಸ್ತರರು ಇಂಚಗೇರಿ ಗುರುಗಳ ಪರಮ ಭಕ್ತರಾಗಿದ್ದರು. ಅವರು ಹೈಸ್ಕೂಲ್ ಮಾಸ್ತರರಾಗಿದ್ದರು. ಈ ತರುಣ ಮಾಸ್ತರರು ತಮ್ಮ ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದರು. ಅವಳನ್ನು ಮದುವೆಯಾಗುವ ಬಗ್ಗೆ ಗುರುಗಳಿಗೆ ತಿಳಿಸಿದರು. ನಕಾರಾತ್ಮಕ ಉತ್ತರ ಬಂದಿತು. ಮದುವೆಯ ವಿಚಾರವನ್ನು ತೆಗೆದುಹಾಕಿದರು. ಗುರುಗಳು ಎಂದರೆ ಪಾಪ ನಾಶಮಾಡುವವರು. ನನ್ನನ್ನು ಪಾಪದಿಂದ ಪಾರುಮಾಡಿದರು ಎಂದು ಅವರು ನನಗೆ ಹೇಳಿದರು. ಇಂಚಗೇರಿ ಗುರುಗಳ ಅನೇಕ ಕಲಿತ ಶಿಷ್ಯರಲ್ಲಿ ಇವರು ಮಾತ್ರ ಪ್ರತಿದಿನ ರಾತ್ರಿ ಅಂಬಾಭವಾನಿ ಪೂಜೆ ಮಾಡಿದ ನಂತರವೇ ಊಟ ಮಾಡುತ್ತಿದ್ದರು. ಈ ಗುರು ಶಿಷ್ಯರ ಪ್ರಭಾವ ನನ್ನ ಮೇಲೆ ಬಿದ್ದಿತ್ತು.
ಹೀಗೆ ಪೂಜೆ ಮಾಡುವುದು ನನಗೂ ಹಿಡಿಸಿತು. ನಾನೂ ಮನೆಯಲ್ಲಿ ಪ್ರತಿದಿನ ರಾತ್ರಿ ಅಂಬಾಭವಾನಿ ಪೂಜೆ ಮಾಡುತ್ತಿದ್ದೆ. ಪೂಜೆಗೆ ಮೊದಲು ಇಂಚಗೇರಿ ಗುರುಗಳ ಹಾಗೆ ರಾತ್ರಿಯೂ ತಣ್ಣೀರ ಸ್ನಾನ ಮಾಡುತ್ತಿದ್ದೆ. ತೆಳ್ಳನೆಯ ಬಟ್ಟೆಯಂಥ ಟಾವೆಲ್‌ನಿಂದ ಮೈ ಒರೆಸಿಕೊಂಡ ನಂತರ ಅದನ್ನು ತೊಳೆದು ಹಿಂಡಿಹಾಕಿ ತಲೆಯ ಮೇಲೆ ಹೊದ್ದಿಕೊಂಡು ಪೂಜೆಗೆ ಕೂಡುತ್ತಿದ್ದೆ. ಮುಂದೆ ಅಂಬಾಭವಾನಿ ಫೋಟೊ ಇರುತ್ತಿತ್ತು. ಹೂವು, ಉದುಬತ್ತಿ, ನೀರು, ಗಂಟೆ ಮುಂತಾದ ಪರಿಕರಗಳೊಂದಿಗೆ ಏಕಾಗ್ರಚಿತ್ತದಿಂದ ಪೂಜೆ ಮಾಡುತ್ತಿದ್ದೆ. ನಂತರ ಅದರ ಜೊತೆ ಲಿಂಗಪೂಜೆಯೂ ಪ್ರಾರಂಭವಾಯಿತು. ಇವೆಲ್ಲ ನನ್ನದೇ ರೀತಿಯಲ್ಲಿ ನಡೆಯುತ್ತಿದ್ದವು. ಇಷ್ಟಲಿಂಗವನ್ನು ಅದೆಲ್ಲಿಂದ ತಂದೆನೊ ನೆನಪಾಗುತ್ತಿಲ್ಲ. ಇಷ್ಟಲಿಂಗ ಪೂಜೆಯ ವಿಧಾನ ಗೊತ್ತಿದ್ದಿಲ್ಲ. ಕೈಯಲ್ಲಿ ಲಿಂಗ ಹಿಡಿದುಕೊಂಡು ಅಂಬಾಭವಾನಿಯ ಮುಖ ನೋಡುತ್ತ ಕೂಡುತ್ತಿದ್ದೆ. ಹುಲಿಯ ಮೇಲೆ ಕುಳಿತ ಸುಂದರ ಪ್ರಶಾಂತ ದುರ್ಗಾದೇವಿಯ ಚಿತ್ರಕ್ಕೇ ನಾನು ಅಂಬಾಭವಾನಿ ಎಂದು ಕರೆಯುತ್ತಿದ್ದೆ. ದುರ್ಗಾದೇವಿಯ ಮುಖ ನೋಡುತ್ತ ಕೂಡಲು ಕಾರಣವೇನೆಂದರೆ ಅವಳು ಮುಗುಳ್ನಗುವುದನ್ನು ಕಾಣಬೇಕು ಎಂಬ ಬಯಕೆ ನನ್ನದಾಗಿತ್ತು. ಅವಳು ಹಸನ್ಮುಖಿಯಾಗುವಷ್ಟರಲ್ಲಿ ಹೊದ್ದುಕೊಂಡಿದ್ದ ಕೇಸರಿ ಬಣ್ಣದ ತೆಳ್ಳನೆಯ ಟಾವೆಲ್ ಒಣಗಿ ಹೋಗಿರುತ್ತಿತ್ತು. ದೇವಿಯ ಮುಖವನ್ನು ತದೇಕಚಿತ್ತದಿಂದ ನೋಡುತ್ತ ನೋಡುತ್ತ ಇದ್ದಾಗ ದೇವಿ ನಕ್ಕಂತೆ ಭಾಸವಾಗುತ್ತಿತ್ತು. ಹಾಗೆ ದೇವಿ ಮುಗುಳ್ನಗುವ ಹಾಗೆ ಅನಿಸುವುವರೆಗೂ ನಾನು ಧ್ಯಾನ ಬಿಟ್ಟು ಏಳುತ್ತಿರಲಿಲ್ಲ. ಹೀಗೇ ದಿನಗಳು ಕಳೆಯುತ್ತಿದ್ದವು.
ದೇವಿಪೂಜಕನಾಗಿರುವ ವಿಷಯ ನಾವಿಗಲ್ಲಿಯ ಜನರ ಕಿವಿಗೆ ಬೀಳತೊಡಗಿತು. ಪ್ರತಿ ಶುಕ್ರವಾರ ಮಹಿಳೆಯರು ಬಂದು ನಮ್ಮ ಪುಟ್ಟ ಮನೆಯಲ್ಲಿ ಭಕ್ತಿಯಿಂದ ಕೂಡತೊಡಗಿದರು. ನಾನು ಏಕಾಗ್ರತೆಯಿಂದ ಎಚ್ಚರಾದಾಗ ಅವರ ಕಷ್ಟಸುಖಗಳಿಗೆ ಪರಿಹಾರ ಕೇಳುತ್ತಿದ್ದರು. ನಾನು ಏನೋ ಹೇಳುತ್ತಿದ್ದೆ. ಅವರು ಅದೇನೋ ಅರ್ಥೈಸಿಕೊಳ್ಳುತ್ತಿದ್ದರು. ಪರಿಣಾಮ ಏನೆಂದರೆ ನನ್ನ ಮಾತು ‘ಖರೆ ಬರತಾವ’ ಎಂಬುದು!
ದಿನಗಳಿದಂತೆ ಜನ ಪ್ರತಿ ಶುಕ್ರವಾರ ಕಿಕ್ಕಿರಿದು ತುಂಬತೊಡಗಿದರು. ನನಗೋ ಶುಕ್ರವಾರ ಬಂದರೆ ಬೇಸರ ಶುರುವಾಗತೊಡಗಿತು. ನನ್ನ ಮತ್ತು ಅಂಬಾಭವಾನಿಯ ಮಧ್ಯದ ಏಕಾಗ್ರತೆಗೆ ಈ ಶಾಂತಿಭಂಗ ಬಹಳ ಕಿರಿಕಿರಿ ಎನಿಸುತ್ತಿತ್ತು. ಎಲ್ಲರೂ ಪ್ರಶ್ನೆ ಕೇಳುತ್ತಿದ್ದಿಲ್ಲ. ಆ ಮುಗ್ಧ ಮಹಿಳೆಯರು ಕುತೂಹಲದಿಂದ ಬರುತ್ತಿದ್ದರೂ ನನ್ನ ಪೂಜೆ ಧ್ಯಾನ ಮುಗಿಯುವ ವರೆಗೂ ತುಟಿಪಿಟಕ್ಕೆನ್ನದೆ ಕುಳಿತುಕೊಳ್ಳುತ್ತಿದ್ದರು. ಆದರೆ ಅವರೆಲ್ಲ ಬಂದು ಕೂಡುವುದೇ ನನಗೆ ಕಿರಿಕಿರಿ ಎನಿಸುತ್ತಿತ್ತು. ಹೀಗೆ ನನ್ನ ಖಾಸಗಿತನ ಕಳೆದುಹೋಗತೊಡಗಿತು. ಏತನ್ಮಧ್ಯೆ ನಾವಿಗಲ್ಲಿಯ ಬಡವರ ಬದುಕಿನ ಪರಿಪರಿ ನೋವಿನ ಎಳೆಗಳ ಪರಿಚಯವಾಗತೊಡಗಿತು.
ನಾನು ಪೂಜೆ ಪ್ರಾರಂಭಿಸಿ ಅರ್ಧ ಗಂಟೆಯ ನಂತರ ಧ್ಯಾನಸ್ಥ ಸ್ಥಿತಿ ತಲುಪಿದಾಗ ಅವರು ಗುಂಪು ಗುಂಪಾಗಿ ಬಂದು ಕೂಡುತ್ತಿದ್ದರು. ಅವರೆಲ್ಲ ಕನಿಷ್ಠ ಒಂದು ಗಂಟೆ ಹಾಗೆ ಶಾಂತವಾಗಿ ಕೂಡುವ ಮೂಲಕವೇ ತೃಪ್ತಿಹೊಂದುತ್ತಿದ್ದರು ಎಂದು ನನಗೆ ಅನಿಸತೊಡಗಿತ್ತು. ಧ್ಯಾನದಿಂದ ಎಚ್ಚರಗೊಂಡಾಗ ಏನೇನೋ ಕಷ್ಟಗಳಿಗೆ ಏನೇನೋ ಉತ್ತರಗಳು. ಅಂತಿಮವಾಗಿ ಕೇಳಿದವರಿಗೆ ಸಮಾಧಾನ.
ಈ ನನ್ನ ಪೂಜೆ ಮತ್ತು ಧ್ಯಾನದ ಸುದ್ದಿ ಪಕ್ಕದ ಗಲ್ಲಿಗೂ ಹಬ್ಬಿತು. ಅದನ್ನು ದಾಟಿ ರಾಮು ದಾದಾ (ದಾದಾ ಮಾಮಾ) ಅವರ ತೋಟದ ವರೆಗೂ ಹೋಯಿತು. ಅವರ ಮೊದಲ ಹೆಂಡತಿಗೆ ಒಂದು ಹೆಣ್ಣುಮಗುವಾಗಿತ್ತು. ಅವಳು ನನ್ನ ಓರಗೆಯವಳಾಗಿದ್ದಳು. ರಾಮುದಾದಾ ಬಹಳ ಶಾಂತಸ್ವಭಾವರು, ಸದಾ ಸಂತೋಷದಿಂದ ಆಳುಗಳ ಹೆಗಲಿಗೆ ಹೆಗಲು ಹಚ್ಚಿ ದುಡಿಯುವವರು. ಉದಾತ್ತ ಮನೋಭಾವದ ಮಿತಭಾಷಿ. ವಿಜಾಪುರ ನಗರದೊಳಗೇ ಅವರ ಹತ್ತಾರು ಎಕರೆಗಳಷ್ಟು ದೊಡ್ಡದಾಗ ತೋಟವಿತ್ತು. ಅವರು ಹೆಚ್ಚಾಗಿ ಕಾಯಿಪಲ್ಯೆ ಬೆಳೆಯುತ್ತಿದ್ದರು. ಹರಿಪಲ್ಲೆ, ಜಿಗಟಮಾಟ, ಕಿರ್ಕಸಾಲಿ, ರಾಜಗಿರಿ ಮುಂತಾದ ಪಲ್ಲೆ ಬೆಳೆಯುತ್ತಿದ್ದರು. ಅವುಗಳ ಮಧ್ಯೆ ಎಲ್ಲೋ ಒಂದೊಂದು ಚಂದನಮಕ್ಕಿ ಎಂಬ ರಂಗುರಂಗಿನ ಪಲ್ಲೆ ಬೆಳೆಯುತ್ತಿತ್ತು. ಅದು ರಾಜಗಿರಿಯ ಹಾಗೆ ಎತ್ತರವಾಗಿರುತ್ತಿತ್ತು. ಅದನ್ನು ಸಾರಿಗೆ (ಖಾರಬ್ಯಾಳಿಗೆ) ಬಳಸುತ್ತಿದ್ದರು. ಚಂದನಮಕ್ಕಿ ಹಾಕಿ ಮಾಡಿದ ಸಾರಿನ ರುಚಿ ನನಗೆ ಆಪ್ಯಾಯಮಾನವಾಗಿತ್ತು. ಅದಿಲ್ಲಿ ನಾನಿರುವ ಧಾರವಾಡದಲ್ಲಿ ಸಿಗುತ್ತಿಲ್ಲ. ಆದರೆ ಅದನ್ನು ಹಾಕಿ ಮಾಡಿದ ಸಾರಿನ ರುಚಿ ಮರೆತಿಲ್ಲ. ದೀಪಾವಳಿ ಮತ್ತು ದಸರೆ ಸಂದರ್ಭದಲ್ಲಿ ಕೈಗೆ ಬರುವ ಹಾಗೆ ರಾಮುದಾದಾ ಚೆಂಡು ಹೂಗಳನ್ನು ಬೆಳೆಯುತ್ತಿದ್ದರು. ಆ ಹಳದಿ ಮತ್ತು ಕೆಂಪು ಬಣ್ಣದ ಹೂಗಳು ಇಡೀ ತೋಟ ಬಂಗಾರದಂತೆ ಕಾಣುವ ಹಾಗೆ ಮಾಡುತ್ತಿದ್ದವು. ಜೋಳ ಮತ್ತು ಮೆಕ್ಕಿಜೋಳವನ್ನೂ ಬೆಳೆಯುತ್ತಿದ್ದರು. ಬದನೆಕಾಯಿ ಬೆಳೆಯುವುದು ಸಾಮಾನ್ಯವಾಗಿತ್ತು. ಹೊಸ ಬೆಳೆಗಳಾದ ನವಲಕೋಲ್, ಫುಲಾವರ್ (ಕಾಲಿಫ್ಲಾವರ್), ಕ್ಯಾಬೇಜ್ (ಹೂಕೋಸು) ಮುಂತಾದ ತರಕಾರಿಗಳನ್ನು ಬೆಳೆಯುತ್ತಿದ್ದರು.
ಇಷ್ಟೆಲ್ಲ ಸಂಪತ್ತಿದ್ದರೂ ಅವರಿಗೆ ಗಂಡುಮಕ್ಕಳಿರಲಿಲ್ಲ. ಮಗಳು ಮದುವೆಯಾಗಿ ಹೋಗುತ್ತಾಳೆ. ಆಸ್ತಿಗೆ ಯಾರು ಎಂಬ ಚಿಂತೆ ಮೂಡಿತು. ಯಾವುದೋ ಹಳ್ಳಿಯಿಂದ ಕನ್ನೆ ಹುಡುಕಿ ಮದುವೆ ಮಾಡುಕೊಂಡರು. ಮೊದಲ ಹೆಂಡತಿಯಿಂದ ಕಿರಿಕಿರಿಯಾದರೂ ಸಹಿಸಿಕೊಂಡರು. ಆದರೆ ಎರಡನೆಯವಳಿಗೆ ಎರಡು ವರ್ಷ ಕಳೆದರೂ ಮಕ್ಕಳಾಗಲಿಲ್ಲ. ಆ ಮಹಿಳೆ ಕೂಡ ದೇವರು ಕೇಳಲು ಬಂದಳು. ಆಗ ನನ್ನ ಮಾನಸಿಕ ಸ್ಥಿತಿ ಬಹಳ ಗೊಂದಲಮಯವಾಗಿತ್ತು. ನನ್ನ ಏಕಾಗ್ರತೆಗೆ ಭಂಗ ಬರುವುದನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಬಾಯಿಗೆ ಬಂದದ್ದನ್ನು ಹೇಳಿಯಾದಮೇಲೆ ಅದೆಲ್ಲ ಸುಳ್ಳಾಗಿ ಇವರೆಲ್ಲ ಬರುವುದನ್ನು ನಿಲ್ಲಿಸುವರು. ಆಮೇಲೆ ನಾನು ಪ್ರಶಾಂತವಾಗಿ ದೇವಿಯ ಧ್ಯಾನಮಗ್ನನಾಗಬಹುದು ಎಂಬ ಯೋಚನೆ ಬಂದಿತು. ‘ಒಂದು ವರ್ಷದೊಳಗಾಗಿ ನಿಮಗೆ ಗಂಡು ಮಗು ಆಗುವುದು’ ಎಂದು ಹೇಳಿದೆ. ಅವರಿಗೆ ಬಹಳ ಸಂತೋಷವಾಯಿತು. ನೆರೆದ ಹೆಣ್ಣುಮಕ್ಕಳೂ ಸಂತೋಷಪಟ್ಟರು. ನನ್ನ ಈ ಶುಕ್ರವಾರದ ಗೋಳು ಮುಂದುವರಿಯಿತು.
ಇಷ್ಟಲಿಂಗ ಪೂಜೆಯ ವಿಧಾನ ಗೊತ್ತಿದ್ದಿಲ್ಲ. ಕೈಯಲ್ಲಿ ಲಿಂಗ ಹಿಡಿದುಕೊಂಡು ಅಂಬಾಭವಾನಿಯ ಮುಖ ನೋಡುತ್ತ ಕೂಡುತ್ತಿದ್ದೆ. ಹುಲಿಯ ಮೇಲೆ ಕುಳಿತ ಸುಂದರ ಪ್ರಶಾಂತ ದುರ್ಗಾದೇವಿಯ ಚಿತ್ರಕ್ಕೇ ನಾನು ಅಂಬಾಭವಾನಿ ಎಂದು ಕರೆಯುತ್ತಿದ್ದೆ. ದುರ್ಗಾದೇವಿಯ ಮುಖ ನೋಡುತ್ತ ಕೂಡಲು ಕಾರಣವೇನೆಂದರೆ ಅವಳು ಮುಗುಳ್ನಗುವುದನ್ನು ಕಾಣಬೇಕು ಎಂಬ ಬಯಕೆ ನನ್ನದಾಗಿತ್ತು.
ವರ್ಷ ಕಳೆಯುವುದರೊಳಗೆ ಆ ಮಹಿಳೆ ಗಂಡುಮಗು ಹಡೆದಳು! ಸಂತೋಷವಾದರೂ ಇನ್ನೂ ಗೊಂದಲಕ್ಕೆ ಸಿಕ್ಕಿಕೊಂಡೆ. ಮೂರು ತಿಂಗಳು ಕಳೆದ ಮೇಲೆ ಒಂದು ಶುಕ್ರವಾರ ಸಂಜೆ ಆ ಮಹಿಳೆ ಬಾಜಾ ಭಜಂತ್ರಿಯೊಂದಿಗೆ ಕೂಸಿನ ಜೊತೆಯಲ್ಲಿ ಪೂಜೆಗೆ ಬಂದಳು. ಜೊತೆಯಲ್ಲಿ ಕಾಣಿಕೆಗಳನ್ನು ತಂದಳು. ಆ ಕಾಣಿಕೆಗಳಲ್ಲಿ ಪೂಜಾ ಪರಿಕರಗಳು ಹೆಚ್ಚಾಗಿದ್ದವು. ಅಂದು ಬಹಳಷ್ಟು ಜನ ಸೇರಿದ್ದರು. ಈ ಘಟನೆಯಿಂದಾಗಿ ಇನ್ನೂ ಹೆಚ್ಚಿನ ಜನ ಬರತೊಡಗಿದರು. ದೇವಿಯನ್ನು ಒಲಿಸಿಕೊಂಡಿದ್ದರಿಂದಲೇ ವಾಣಿ ಹುಸಿ ಹೋಗುವುದಿಲ್ಲ ಎಂದು ಜನ ಮಾತನಾಡತೊಡಗಿದರು. ನಾನು ಒಂದು ರೀತಿಯಲ್ಲಿ ಬಾಲ ದೇವಮಾನವನಾಗಿಬಿಟ್ಟೆ!
ಇದರಿಂದ ಹೊರಗೆ ಬರುವುದೇ ದೊಡ್ಡ ಸಮಸ್ಯೆಯಾಯಿತು. ಹಾಗೇ ದಿನಗಳು ಸಾಗಿದವು. ಇಂಚಗೇರಿ ಗುರುಗಳಲ್ಲಿ ಕ್ಯಾತಣ್ಣವರ ಮತ್ತು ನಾನು ಮಾತ್ರ ಹೀಗೆ ಪೂಜೆ ಮಾಡುತ್ತಿದ್ದೆವು. ಅವರದು ಏಕಾಂತದ ಪೂಜೆಯಾಗಿತ್ತು. ಆದರೆ ನನ್ನದು ಲೋಕಾಂತದ ಪೂಜೆಯಾಯಿತು.
ನಾನು ಮತ್ತು ಯಶವಂತ ನಿಯಮಿತವಾಗಿ ಹುಣ್ಣಿಮೆಗೊಮ್ಮೆ ಸೀತಿಮನಿಗೆ ಹೋಗಿ ಗುರುಗಳ ಸೇವೆ ಮಾಡುತ್ತಿದ್ದೆವು. ನಮ್ಮ ಶ್ರದ್ಧೆ ಮತ್ತು ನಂಬಿಕೆ ಅಚಲವಾಗಿದ್ದವು. ಒಂದು ಸಲ ಹುಣ್ಣಿಮೆ ಪೂಜೆಗಾಗಿ ಸೀತಿಮನಿಗೆ ಬರಲು ಸಮಸ್ಯೆ ಆಯಿತು. ತೆಲಗಿ ಸ್ಟೇಷನ್ ವರೆಗೆ ಮಾತ್ರ ಟಿಕೆಟ್ ಪಡೆಯಲು ಸಾಧ್ಯವಾಗುವಷ್ಟು ಹಣ ಇತ್ತು. ಹಾಗೇ ಮಾಡಿದೆವು. ಆದರೆ ತೆಲಗಿಗೆ ಇಳಿಯಲಿಲ್ಲ. ಆಲಮಟ್ಟಿ ಸ್ಟೇಷನ್‌ನಲ್ಲಿ ಇಳಿದೆವು. ಆಗ ಬೆಳಗಿನ ಜಾವ 4 ಗಂಟೆ ಆಗಿರಬಹುದು. ಸ್ಟೇಷನ್ ಮಾಸ್ತರ್ ಬಳಿ ಹೋಗಿ ‘ನಾವು ತೆಲಗಿಗೆ ಹೋಗಬೇಕಿತ್ತು. ಆದರೆ ನಿದ್ದೆಗಣ್ಣಲ್ಲಿ ಮುಂದೆ ಬಂದು ಇಲ್ಲಿ ಇಳಿದಿದ್ದೇವೆ’ ಎಂದು ಹೇಳಿದೆವು. ಆಗ ಅವರು ‘ಒಂದರ್ಧ ತಾಸು ಕಾಯಿರಿ. ಬಾಗಲಕೋಟೆ ಕಡೆಯಿಂದ ಪ್ಯಾಸೆಂಜರ್ ಗಾಡಿ ಬರ್ತದ. ತೆಲಗಿಗೆ ಹೋಗಿರಿ’ ಎಂದು ತಮ್ಮ ಕೋಣೆಯೊಳಗೆ ಹೋಗಿ ಕುಳಿತರು. ನಾವಿಬ್ಬರು ಸ್ವಲ್ಪ ಹೊತ್ತಾದ ಮೇಲೆ ಮೆಲ್ಲಗೆ ಒಂದಿಷ್ಟು ದೂರದಲ್ಲಿದ್ದ ರೇಲ್ವೆ ಬ್ರಿಜ್ ಕಡೆಗೆ ಹೊರಟೆವು. ಕೃಷ್ಣಾನದಿಯ ಈಚೆ ಆಲಮಟ್ಟಿ ಸ್ಟೇಷನ್ ಇದ್ದರೆ ಆಚೆ ಕಡೆ ಸೀತಿಮನಿ ಸ್ಟೇಷನ್ ಇತ್ತು. ನಡುವಿನ ಬ್ರಿಜ್ ದಾಟಿದರೆ ಸೀತಿಮನಿ. ನಾವು ಬ್ರಿಜ್ ಮೇಲೆ ನಡೆಯತೊಡಗಿದೆವು. ಆ ಹುಣ್ಣಿಮೆ ರಾತ್ರಿ ಬಿಜ್ ಕೆಳಗೆ ಕೃಷ್ಣೆ ಭೋರ್ಗರೆಯುತ್ತಿದ್ದಳು. ಆ ಸಪ್ಪಳಕ್ಕೋ ಏನೋ ಎದುರಿಗೆ ಬರುವ ರೈಲಿನ ಸಪ್ಪಳ ಕೇಳಲೇ ಇಲ್ಲ. ಬೆಳಕು ಬಿದ್ದ ಮೇಲೆ, ಅದು ಮೌನವಾಗಿ ಬರುತ್ತಿರುವ ಹಾಗೆ ಕಾಣಿಸಿತು. ಅದು ರೇಲ್ವೆ ಬ್ರಿಜ್ ಆಗಿರುವ ಕಾರಣ ಎರಡೂ ಹಳಿಗಳ ಮಧ್ಯೆ ಒಂದೆರಡು ಅಡಿಗಳಷ್ಟು ಅಗಲದ ಕಬ್ಬಿಣದ ಪಟ್ಟಿ ಮಾತ್ರ ಇತ್ತು. ಉಳಿದೆಲ್ಲವೂ ಟೊಳ್ಳೇ. ಕಾಲು ಜಾರಿದರೆ ಕೃಷ್ಣಾನದಿಯಲ್ಲಿ ಹರಿದುಕೊಂಡು ಹೋಗುವುದೊಂದೇ ಬಾಕಿ. ಬ್ರಿಜ್ ರಿಪೇರಿ ಮುಂತಾದ ಕೆಲಸ ಮಾಡುವ ಕೆಲಸಗಾರರು ಕಾರ್ಯನಿರತರಾದಾಗ ಟ್ರೇನ್ ಬಂದರೆ ಸುರಕ್ಷಿತವಾಗಿ ನಿಲ್ಲಲ್ಲು ಸೇತುವೆ ಮೇಲೆ ಅಲ್ಲಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ನಮ್ಮ ಮುಂದೆ ಸ್ವಲ್ಪದೂರದಲ್ಲಿ ರೈಲು ಬರುತ್ತಿದೆ. ಕಾಲು ಜಾರುವ ಭಯದಿಂದಾಗಿ ನಾವು ಓಡುವಂತೆಯೂ ಇಲ್ಲ. ನಿಲ್ಲುವಂತೆಯೂ ಇಲ್ಲ. ಆದರೂ ಜೋರಾಗಿ ಹೋಗಿ ನಿಲ್ಲಲು ವ್ಯವಸ್ಥೆ ಇರುವ ಸ್ಥಳ ತಲುಪಿದೆವು. ದೇವಿಯ ಕೃಪೆ ಮತ್ತು ಗುರುವಿನ ಆಶೀರ್ವಾದ ಇದೆ ಎಂಬ ನಂಬಿಕೆ ಇನ್ನೂ ಗಾಢವಾಯಿತು.
ವಿಜಾಪುರ ಬಾಗಲಕೋಟೆ ಮುಂತಾದ ಕಡೆಗಳಿಂದ ಅಮಾವಾಸ್ಯೆ ದಿನ ನೂರಾರು ಜನ ಬರುತ್ತಿದ್ದರು. ಅನೇಕರು ಪೂಜೆ ಮುಗಿದ ನಂತರ ಪಕ್ಕದಲ್ಲೇ ಇದ್ದ ರೈಲು ನಿಲ್ದಾಣಕ್ಕೆ ಹೋಗಿ ರಾತ್ರಿ ಗಾಡಿಗಳನ್ನು ಹತ್ತಿ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದರು.
ಅಷ್ಟೊಂದು ಜನರಿಗೆ ಕುಡಿಯಲು ಬೇಕಾದಷ್ಟು ನೀರನ್ನು ರೈಲುನಿಲ್ದಾಣದ ನಳದಿಂದ ತಂದು ಡ್ರಮ್ ತುಂಬುವುದು, ಸೀತಿಮನಿ ಗುಡ್ಡದಿಂದ ಉರುವಲು ಸಂಗ್ರಹಿಸಿ ತರುವುದು, ಕೆಲವೊಂದು ಸಲ ಅಂಗಳ ಗುಡಿಸುವುದು ಮುಂತಾದವು ನಮ್ಮ ಕೆಲಸಗಳಾಗಿದ್ದವು. ಎಲ್ಲ ಕೆಲಸಗಳನ್ನು ನಾನು ಮತ್ತು ಯಶವಂತ ನಿಷ್ಠೆಯಿಂದ ಮಾಡುತ್ತಿದ್ದೆವು. ‘ನೀವೂ ಕೆಲಸ ಮಾಡಬೇಕು’ ಎಂದು ನಾವು ಯಾರಿಗೂ ಎಂದೂ ಹೇಳಲಿಲ್ಲ. ಗುರುವಿನ ಬಗ್ಗೆ ಮತ್ತು ದೇವಿಯ ಬಗ್ಗೆ ನಮ್ಮ ನಿಷ್ಠೆ ಅಚಲವಾಗಿತ್ತು.
ಒಂದು ಸಾಯಂಕಾಲ ಹುಣ್ಣಿಮೆ ದಿನ ಜನ ಸೇರಿದ್ದರು. ಗುರುಗಳು ಅವರಿಗೆ ಏನೋ ವೇದಾಂತ ಹೇಳುತ್ತ ಕುಳಿತಿದ್ದರು. ಜನ ಕೇಳುತ್ತಿದ್ದರು. ಆದರೆ ಯಶವಂತಗೆ ಮತ್ತು ನನಗೆ ಅವರ ಮಾತುಗಳನ್ನು ಕೇಳುವ ಕಾತರ. ಅದೇ ವೇಳೆಗೆ ಡ್ರಮ್‌ಗೆ ನೀರು ತುಂಬುವ ಕೆಲಸ ನಮ್ಮಿಬ್ಬರಿಗೆ ಹತ್ತಿತು. ಗುರುಗಳ ಮಾತು ಕೇಳುವ ತೀವ್ರತೆ ನಮ್ಮನ್ನು ಕಾಡುತ್ತಿತ್ತು. ನಾವು ಬೇಗ ಬೇಗ ಸ್ಟೇಷನ್‌ಗೆ ಹೋಗಿ ಅಲ್ಲಿನ ನಳಗಳಲ್ಲಿ ಕೊಡ ತುಂಬಿಕೊಂಡು ಬೇಗ ಬೇಗ ಬಂದು ಸಾವಕಾಶವಾಗಿ ಡ್ರಮ್ಮಲ್ಲಿ ನೀರು ಸುರಿಯುತ್ತ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. ಅಲ್ಲಿ ಕುಳಿತವರಲ್ಲಿ ಬಹಳಷ್ಟು ಜನ ಅವರ ಮಾತುಗಳನ್ನು ತಿಳಿದುಕೊಳ್ಳುವ ವಿಚಾರದಲ್ಲಿ ನಮ್ಮಷ್ಟು ಕಾತರರಾಗಿರಲಿಲ್ಲ.
ಪೂಜೆಯ ವೇಳೆಗೆ ನಾವೆಲ್ಲ ಸೇರುತ್ತಿದ್ದೆವು. ಆಗ ಯಾವುದೇ ಮಾತುಕತೆ ಇರುತ್ತಿರಲಿಲ್ಲ. ಇಂಚಗೇರಿ ಗುರುಗಳಿಗೆ ಹಣದ ಬಗ್ಗೆ ಹಪಾಪಿತನವಿರಲಿಲ್ಲ. ಅಂಬಾಭವಾನಿಯ ಬಗ್ಗೆ ನಂಬಿಕೆ ಶ್ರದ್ಧೆಗಳಿದ್ದರೂ ಎದ್ದು ಕಾಣುವಂಥ ಮೂಢನಂಬಿಕೆಗಳು ಇರಲಿಲ್ಲ. ದೇವಿಪೂಜೆಯಿಂದ ಒಳ್ಳೆಯದಾಗುವುದೆಂದು ನಂಬಿ ಅದನ್ನೇ ಒತ್ತಿ ಹೇಳುತ್ತಿದ್ದರು.
ಗುರುಗಳು ಸ್ಪಲ್ಪ ಮುಂಗೋಪಿ ಆಗಿದ್ದರು. ಅವರ ಬಗ್ಗೆ ನಮಗಷ್ಟೇ ಅಲ್ಲದೆ ಇತರರಿಗೂ ಭಯಭಕ್ತಿ ಇತ್ತು. ಒಂದು ಸಲ ಒಬ್ಬ ಭಕ್ತನ ಮನೆಯಲ್ಲಿ ಊಟ ಮಾಡುವ ವೇಳೆ ಅವರ ಜೊತೆ ಊಟ ಮಾಡುತ್ತಿದ್ದವರಲ್ಲಿ ಒಬ್ಬ ಖಾರಬ್ಯಾಳಿಯಲ್ಲಿ ಉಪ್ಪು ಹೆಚ್ಚಾಗಿದೆ ಎಂದ. ಅವರಿಗೆ ಬಹಳ ಬೇಸರವಾಯಿತು. ಅನ್ನಕ್ಕೆ ಎಂದೂ ಹೆಸರಿಡಬಾರದು. ನಮ್ಮ ಪಾಲಿಗೆ ಬಂದದ್ದನ್ನು ತೃಪ್ತಿಯಿಂದ ತಿನಬೇಕು ಎಂದರು. ಅದು ನನ್ನ ಬದುಕಿಗೆ ಸಿಕ್ಕ ದೊಡ್ಡ ಪಾಠವಾಯಿತು.
ಆಶ್ರಮದಲ್ಲಿ ಹುಣ್ಣಿಮೆ ರಾತ್ರಿ ಪೂಜೆಯಾದ ಕೂಡಲೇ ಊಟಕ್ಕೆ ಜೋಳದ ನುಚ್ಚು ಮತ್ತು ಸಾರು ಸಿದ್ಧವಾಗಿರುತ್ತಿತ್ತು. ಆ ರುಚಿಯನ್ನು ಇಂದಿಗೂ ಮರೆತಿಲ್ಲ. ಆ ಬೆಳದಿಂಗಳೂಟದ ಪರಿಯೇ ಬೇರೆ ಇತ್ತು. ಸ್ವಲ್ಲ ದೂರದಲ್ಲಿದ್ದ ಕೃಷ್ಣಾ ನದಿಯ ಕಡೆಯಿಂದ ಮನಸ್ಸಿಗೆ ಮುದ ನೀಡುವ ಹಾಗೆ ತಂಗಾಳಿ ಬೀಸುತ್ತಿತ್ತು. ಆದರೆ ರಾತ್ರಿ ಚಳಿಯಾಗುತ್ತಿತ್ತು.
ಸೀತಿಮನಿ ಗುಡ್ಡ ಸುತ್ತುವ ಆಸೆ ಇಬ್ಬರಿಗೂ ಇತ್ತು. ಒಂದು ಸಲ ಹುಣ್ಣಿಮೆ ಮರುದಿನ ಅಲ್ಲೇ ಉಳಿದು ಬೆಳಿಗ್ಗೆ ಚೆನ್ನಾಗಿ ನಾಷ್ಟಾ ಮಾಡಿ ಗುಡ್ಡ ಸುತ್ತಲು ಹೊರಟೆವು. ಗುಡ್ಡ ಕುರುಚಲು ಅರಣ್ಯದಿಂದ ಕೂಡಿತ್ತು. ಗುಡ್ಡದ ಮೇಲೆ ಒಂದು ಕಡೆ ಗವಿ ಇತ್ತು. ಅಲ್ಲಿ ಆರಂಭದಲ್ಲೇ ಕಪ್ಪುಕಲ್ಲಿನಲ್ಲಿ ಕೆತ್ತಿದ ಸಿದ್ಧರ ಮೂರ್ತಿ ಇತ್ತು. ಅಲ್ಲಿಯೆ ಸಮೀಪದಲ್ಲಿ ಅರಣ್ಯ ಇಲಾಖೆಯ ಕೂಲಿಯೊಬ್ಬನಿಗೆ ಕೇಳಿದಾಗ ಆತ ಸಿದ್ಧೇಶ್ವರ ಮೂರ್ತಿ ಎಂದು ಹೇಳಿದ. (ವಚನಕಾರ ಸಿದ್ಧೇಶ್ವರ ಅಲ್ಲ.) ಈ ಸಿದ್ಧರ ಗುಹೆ ಒಳಗೆ ಹೋಗಲು ಸಾಧ್ಯವಿಲ್ಲ. ಅದು ಒಳಗೆ ಎಷ್ಟು ದೂರದ ವರೆಗೆ ಇದೆಯೊ ಗೊತ್ತಿಲ್ಲ ಎಂದ. ನಮಗೆ ಸ್ವಲ್ಪ ಭಯವಾಯಿತು. ಅಲ್ಲಿಂದ ಸೀತಾದೇವಿ ಲವ ಕುಶರನ್ನು ಹಡೆದ ಸ್ಥಳಕ್ಕೆ ಬಂದೆವು. ಅಲ್ಲಿ ಕುಳಿತಿದ್ದ ಒಂದಿಬ್ಬರು ತಮಗೆ ತಿಳಿದಂತೆ ವಿವರಿಸಿದರು. ಸೀತಾದೇವಿ ಇಲ್ಲಿ ಹಡೆದಳು. ಇಲ್ಲಿ ಬಿಸಿನೀರು ಕಾಸಿಕೊಂಡು ಸ್ನಾನ ಮಾಡಿದಳು. ಈ ಜಾಗದಲ್ಲಿ ತೊಟ್ಟಿಲು ಕಟ್ಟಿದ್ದಳು. ಲವ ಕುಶ ಇಲ್ಲಿ ಆಟವಾಡುತ್ತಿದ್ದರು. ಅವರೆಲ್ಲ ಮಲಗುತ್ತಿದ್ದ ಜಾಗವಿದು ಎಂದು ಮುಂತಾಗಿ ಹೇಳಿದರು. ನಾವು ನಂಬಿ ಖುಷಿಪಟ್ಟು ಮುಂದೆ ಸಾಗಿದೆವು. ಅಂತೂ ಆ ದಿನ ಬಹಳ ದಿನಗಳ ಬಯಕೆ ಈಡೇರಿತು. (ಹೀಗೆ ಸೀತಾಮಾತೆ ಲವ ಕುಶರನ್ನು ಹಡೆದ ಜಾಗಗಳು ದೇಶಾದ್ಯಂತ ಅನೇಕ ಇವೆ ಎಂಬುದು ಬಹಳ ವರ್ಷಗಳ ನಂತರ ತಿಳಿಯಿತು.)
ಗುಡ್ಡದ ಮೇಲಿಂದ ಕೃಷ್ಣಾನದಿ ಸುಂದರವಾಗಿ ಕಾಣುತ್ತಿತ್ತು. ಅದೇ ಆಗ ಆಲಮಟ್ಟಿ ಡ್ಯಾಂ ಕಟ್ಟುವ ಕೆಲಸ ಪ್ರಾರಂಭವಾಗಿತ್ತು. ಎಂಜಿನಿಯರ್ ಮುಂತಾದ ಸಿಬ್ಬಂದಿಗೆ ಮನೆ ಹಾಗೂ ಕಚೇರಿ ನಿರ್ಮಾಣ ಕಾರ್ಯ ನಡೆದಿತ್ತು. ಕೃಷ್ಣಾನದಿ ಮೇಲಿನ ರೇಲ್ವೆ ಬ್ರಿಜ್ ಬಹಳ ಆಕರ್ಷಕ ಅನಿಸಿತು.
ನನ್ನ ಮೇಲೆ ಮತ್ತು ಯಶವಂತನ ಮೇಲೆ ಗುರುಗಳಿಗೆ ಬಹಳ ಪ್ರೀತಿ ಇತ್ತು. ನಾವು ಎಂದೂ ಕೆಲಸಗಳ್ಳರಾಗಿರಲಿಲ್ಲ. ಗುರುವಿಗಾಗಿ ರಾತ್ರಿಹಗಲು ಕೆಲಸ ಮಾಡಲು ಸಿದ್ಧರಿದ್ದೆವು. ಯಾರಾದರೂ ಸಹಾಯಕ್ಕೆ ಬರುತ್ತಾರೆ ಎಂಬ ಯೋಚನೆ ನಮಗೆ ಎಂದೂ ಬರಲಿಲ್ಲ. ನಾವೇ ಮಾಡಿಬಿಡಬೇಕೆಂಬ ಹುಮ್ಮಸ್ಸು ಸದಾ ಇರುತ್ತಿತ್ತು. ಶ್ರದ್ಧೆ ಮತ್ತು ನಂಬಿಕೆಯಿಂದ ಮಾತ್ರ ಜಗತ್ತು ಮುನ್ನಡೆಯಲು ಸಾಧ್ಯ ಎಂದು ನನಗೆ ಈಗೂ ಅನಿಸುತ್ತದೆ.
ಒಂದು ಸಲ ಆಶ್ರಮದಲ್ಲಿ ಅಮಾವಾಸ್ಯೆ ದಿನ ರಾತ್ರಿ ಅಡುಗೆಗೆ ಉರುವಲಿನ ಕೊರತೆಯಾಯಿತು. ಗುರುಗಳು ಬೇಸರಪಟ್ಟುಕೊಂಡರು. ನನಗೆ ಬಹಳ ನೋವಾಯಿತು. ಪಕ್ಕದಲ್ಲೇ ಅರ್ಧಪರ್ಲಾಂಗು ದೂರದಲ್ಲಿ ಸೀತಿಮನಿ ಗುಡ್ಡ ಇತ್ತು. ಅದರ ತಪ್ಪಲಿನಲ್ಲಿ ಕೂಡ ಅರಣ್ಯ ಇಲಾಖೆಯವರು ಅಕೇಶಿಯಾದಂಥ ಗಿಡಗಳನ್ನು ಬೆಳೆಸಿದ್ದರು. ಅವುಗಳಲ್ಲಿ ಕೆಲವೊಂದು ಗಿಡಗಳ ಒಣಗಿದ ಭಾಗಗಳನ್ನು ಉರುವಲಿಗಾಗಿ ಆಶ್ರಮಕ್ಕೆ ತರಲು ಅಭ್ಯಂತರವಿರಲಿಲ್ಲ. ಊಟವಾದ ಕೂಡಲೆ ಗುಡ್ಡದ ಕಡೆಗೆ ಹೋಗಿ ಊರುವಲಿಗೆ ಬೇಕಾಗುವಂಥ ಕಟ್ಟಿಗೆ ಕಡಿದುಕೊಂಡು ಬರುವ ನಿರ್ಧಾರವನ್ನು ನಾನು ಮತು ಯಶವಂತ ಮಾಡಿದೆವು. ಆಶ್ರಮದಲ್ಲಿನ ಕೊಡಲಿಯನ್ನು ತೆಗೆದುಕೊಂಡು ಹೊರಟೇ ಬಿಟ್ಟೆವು.
ಗುರುವಿನ ಸೇವೆಯಲ್ಲಿ ನಮಗೆ ಯಾವುದೇ ಭಯ ಕಾಡಲಿಲ್ಲ. ಆ ಗುಡ್ಡದಲ್ಲಿ ನರಿ ತೋಳ ಕರಡಿ ಮುಂತಾದ ಕಾಡುಪ್ರಾಣಿಗಳಿವೆ ಎಂದು ಜನ ಹೇಳುತ್ತಿದ್ದರು. ಅಲ್ಲಿ ಹಾವುಗಳಂತೂ ಸಾಕಷ್ಟಿದ್ದವು. ಅಲ್ಲಿ ಘಟಸರ್ಪಗಳಿವೆ ಎಂದು ಹೇಳುವುದು ಸಾಮಾನ್ಯವಾಗಿತ್ತು. ಆದರೆ ದೇವಿ ಮತ್ತು ಗುರುವಿನ ರಕ್ಷೆ ಇರುವುದರಿಂದ ನಮಗೆ ಏನೂ ಆಗುವುದಿಲ್ಲ ಎಂಬ ಅಚಲ ನಂಬಿಕೆ ನಮ್ಮದಾಗಿತ್ತು.
ಆ ಬೆಳದಿಂಗಳ ರಾತ್ರಿ ಪ್ರಶಾಂತ ಎನಿಸುತ್ತಿತ್ತು. ಒಂದು ತಿಂಗಳಿಗಾಗುವಷ್ಟು ಉರುವಲನ್ನು ಸಂಗ್ರಹಿಸಿದೆವು. ಗುರುಗಳು ಬಹಳ ಸಂತೋಷಪಡುವರು ಎಂದು ಬಹಳ ಹುರುಪಿನಿಂದ ಹೊರಡಲು ನಿರ್ಧರಿಸಿದೆವು. ಆದರೆ ಎಲ್ಲವನ್ನೂ ಎಳೆದುಕೊಂಡು ಬರುವಹಾಗಿರಲಿಲ್ಲ. ಒಂದು ದೊಡ್ಡ ಹೊರೆಯನ್ನು ಇಬ್ಬರೂ ಕೂಡಿ ಕಷ್ಟಪಟ್ಟು ಎಳೆಯುತ್ತ ಹೊರಟೆವು. ಆ ಎಳೆಯುವ ಭರದಲ್ಲಿ ಕೊಡಲಿಯನ್ನು ಕಳೆದುಕೊಂಡೆವು. ಹೇಗೂ ಉಳಿದ ಕಟ್ಟಿಗೆ ತರಲು ಬೆಳಿಗ್ಗೆ ಬೇಗ ಬರುವುದಿದೆಯಲ್ಲ, ಆಗ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ಹೊರೆ ಎಳೆಯುತ್ತ ಆಶ್ರಮ ತಲುಪಿದೆವು. ಆಗ ಹೋಗುವವರು ಹೋಗಿದ್ದರು. ಉಳಿಯುವವರು ಉಳಿದಿದ್ದರು. ಎಲ್ಲರೂ ಗಾಬರಿಯಲ್ಲಿದ್ದರು. ನಮಗೆ ಎಲ್ಲ ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ನಾವು ಗುಡ್ಡದ ಕಡೆಗೆ ಹೋಗಿರಬಹುದು ಎಂಬ ಯೋಚನೆ ಅವರಿಗೆ ಬಂದಿರಲು ಸಾಕು. ಆದರೆ ಆ ಕಡೆ ಹೋಗಿ ಹುಡುಕುವ ಗೋಜಿಗೆ ಯಾರೂ ಹೋಗಿರಲಿಲ್ಲ.
ಗುರುಗಳು ಆ ತಂಪು ವಾತಾವರಣದಲ್ಲಿಯೂ ಬೆವರಿದ ಹಾಗೆ ಕಾಣುತ್ತಿದ್ದರು. ಅವರು ಗಾಬರಿ ಮತ್ತು ಸಿಟ್ಟಿನಿಂದ ಕುದಿಯುತ್ತಿದ್ದರು. ನಿಮಗೇನಾದರೂ ಆಗಿದ್ದರೆ ನಿಮ್ಮ ತಾಯಿ ತಂದೆಗಳಿಗೆ ಏನು ಹೇಳಲು ಸಾಧ್ಯ. ನೀವು ಬಹಳ ಬೇಜಾಬ್ದಾರಿಯಿಂದ ಈ ಕೆಲಸ ಮಾಡಿದ್ದೀರಿ. ನಿಮಗೆ ಕಟಗಿ ತರಲು ಯಾರು ಹೇಳಿದರು ಎಂದು ಮುಂತಾಗಿ ಗದರಿಸಿದರು. ನಾವು ಇಬ್ಬರು ಬಹಳ ಪೆಚ್ಚಾಗಿ ದಿಕ್ಕುತೋಚದೆ ನಿಂತಿದ್ದೆವು. ನಿಮಗೆ ಶಿಕ್ಷೆ ಕಾದಿದೆ. ಇವತ್ತು ರಾತ್ರಿ ಅಂಗಿ ಚೊಣ್ಣ ಕಳೆದು ಹಂಡಾರೋಡ್ (ಅಂಡರ್ ವೇರ್) ಮೇಲೆ ಅಂಗಳದಲ್ಲಿ ಮಲಗಬೇಕು ಎಂದು ಆ ಪುಟ್ಟ ಆಶ್ರಮದ ಒಳಗೆ ಹೋದರು. ಗುರುವಿನ ಆಜ್ಞೆಯನ್ನು ಮೀರುವ ಹಾಗಿಲ್ಲ. ಅಂಡರ್‍ವೇರ್ ಮೇಲೆಯೆ ಅಂಗಳದಲ್ಲಿ ಮಲಗಿದೆವು. ರಾತ್ರಿಯ ಚಳಿ ತಡೆಯಲಿಕ್ಕಾಗದೆ ಗಟ್ಟಿಯಾಗಿ ಅಪ್ಪಿಕೊಂಡು ಮಲಗಿದೆವು. ಅಪಮಾನ ಮತ್ತು ಬೇಸರದ ಜೊತೆಗೆ ಗುರುವಿನ ಮನಸ್ಸನ್ನು ನೋಯಿಸಿದೆವಲ್ಲಾ ಎಂಬ ನೋವು ಕಾಡುತ್ತಿತ್ತು. ಅಂಥ ವೇಳೆಯಲ್ಲಿ ಆಶ್ರಮದ ರವಿ ಎಂಬ ಹುಡುಗ ಪದೆ ಪದೆ ಬಂದು ‘ಯಶವಂತಾ ಕೊಲ್ಯೋ’ ಎಂದು ಕಾಡುತ್ತಿದ್ದ. ಯಶವಂತಾ ಕೊಡಲಿ ಎಲ್ಲಿ? ಎಂಬುದು ಅವನ ಮಾತಿನ ಅರ್ಥವಾಗಿತ್ತು. ನಾವು ಕೊಡಲಿ ಕಳೆದಿದ್ದೇವೆ ಎಂದು ಅಲ್ಲಿದ್ದ ಜನರಿಗೆ ಹಾಗೂ ಮುಖ್ಯವಾಗಿ ಗುರುಗಳಿಗೆ ಗೊತ್ತಾಗಬೇಕೆಂಬುದೇ ಆತನ ಉದ್ದೇಶವಾಗಿತ್ತು. (ಮುಂದೆ ಯಶವಂತ ಐ ಆರ್ ಎಸ್ ಪಾಸಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಇನ್‌ಕಂ ಟ್ಯಾಕ್ಸ್ ಕಮೀಷನರ್ ಆಗಿ ನಿವೃತ್ತರಾದರು. ಈಗ ಪುಣೆಯಲ್ಲಿದ್ದಾರೆ.)
ನಾವಿಗಲ್ಲಿ ಮನೆಯಲ್ಲಿ ಶುಕ್ರವಾರದ ಪೂಜೆಗೆ ಜನ ಬರುವುದು ಹೆಚ್ಚಾಗತೊಡಗಿತು. ಇದೊಳ್ಳೆ ಕಥೆಯಾಯಿತಲ್ಲಾ ಎಂಬ ಚಿಂತೆ ಶುರುವಾಯಿತು. ನನ್ನ ಮನಸ್ಸು ಏಕಾಂತವನ್ನು ಬಯಸುತ್ತಿತ್ತು. ನನ್ನ ಮತ್ತು ದೇವಿಯ ಮಧ್ಯೆ ಯಾರೂ ಇರಬಾರದು ಎಂಬ ಹಳೆಯ ಆಶಯ ಹೆಚ್ಚಾಗುತ್ತಲೇ ಹೋಯಿತು. ಒಂದು ದಿನ ಶುಕ್ರವಾರದ ಪೂಜೆಗೆ ಮೊದಲು ಒಂದು ನಿರ್ಧಾರಕ್ಕೆ ಬಂದೆ. ಇಂದಿನ ಪೂಜೆಗೆ ಯಾರೂ ಬರಬಾರದು. ಬಂದರೆ ಇದೇ ಕೊನೆಯ ಪೂಜೆ ಎಂದು ದೇವಿಗೆ ಮನದಲ್ಲೇ ತಿಳಿಸಿ ಪೂಜೆಗೆ ಕುಳಿತೆ. ಎಂದಿನಂತೆ ಧ್ಯಾನಸ್ಥ ಸ್ಥಿತಿಯಿಂದ ಕಣ್ ತೆರೆದಾಗ ಅದೇ ಮಹಿಳೆಯರ ಗುಂಪು ತದೇಕ ಚಿತ್ತದಿಂದ ಕುಳಿತಿತ್ತು. ಎಂದಿನಂತೆ ಯಾವುದೋ ಪ್ರಶ್ನೆ ಇನ್ನಾವುದೋ ಉತರ. ಎಲ್ಲ ಎಂದಿನಂತೆ.
ಇದೆಲ್ಲ ಭ್ರಮೆ ಎಂದೆನಿಸಿತು. ಹೀಗೆ ಅನಿಸಲು ಮೂರು ವರ್ಷಗಳು ಹಿಡಿದಿದ್ದವು. ಇದನ್ನು ಬದಲಿಸುವ ನಿರ್ಧಾರ ಕೈಗೊಂಡೆ. ಮರುದಿನ ಬೆಳಿಗ್ಗೆ ಧ್ಯಾನಕ್ಕಾಗಿ ಬಳಸುವ ತೆಳ್ಳನೆಯ ಕೇಸರಿ ಬಣ್ಣದ ಟಾವೆಲ್‌ನಲ್ಲಿ ದೇವಿಯ ಫೋಟೋ, ಲಿಂಗ ಮತ್ತು ಇತರ ಪೂಜಾ ಪರಿಕರಗಳನ್ನು ಗಂಟು ಕಟ್ಟಿ ನಮ್ಮ ಮನೆಗೆ ಸಮೀಪದಲ್ಲಿದ್ದ ಹಾಳಾದ ಸೇದೂಬಾವಿಯಲ್ಲಿ ಹಾಕಿದೆ.
(ಬಹಳ ವರ್ಷಗಳ ನಂತರ ಆಲಮಟ್ಟಿ ಅಣೆಕಟ್ಟು ನಿರ್ಮಾಣ ಕಾರ್ಯ ಅಭಿವೃದ್ಧಿ ಸಾಧಿಸಿದಂತೆಲ್ಲ ಹಿನ್ನೀರಿನಲ್ಲಿ ಬ್ರಿಜ್ ಮುಳುಗುವ ಕಾರಣ ಅದನ್ನು ಕೆಡವಿ ಬೇರೆ ಕಡೆ ನಿರ್ಮಿಸಲಾಯಿತು. ಸೀತಿಮನಿ ರೇಲ್ವೆ ಸ್ಟೇಷನ್, ಅಂಗಡಿಗಳು, ಇಂಚಗೇರಿ ಗುರುಗಳ ಆಶ್ರಮ ಹಾಗೂ ಸುತ್ತಮುತ್ತಲಿನ ಮನೆಮಾರುಗಳ ಪ್ರದೇಶವೆಲ್ಲ ನೀರಿಗೆ ಆಹುತಿಯಾಯಿತು. ಆಮೇಲೆ ಗುರುಗಳು ಎಲ್ಲಿಗೆ ಹೋದರೋ ತಿಳಿಯಲಿಲ್ಲ.)
(ಚಿತ್ರಗಳು: ಸುನೀಲಕುಮಾರ ಸುಧಾಕರ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.