ಕಡಲೆಕಾಯಿ ತಿನ್ನುತ್ತಾ ಹಾದಿ ಸವೆಯಿತು. ಸೌತೆಕಾಯಿ, ಬಾಳೆಹಣ್ಣು ಕಡಲೆಕಾಯಿ ನಂತರ ಖಾಲಿ. ಬೆಟ್ಟದ ಬುಡ ಸೇರುವಷ್ಟರಲ್ಲಿ ಕೈ ಖಾಲಿ ಆಗಿ ನಿರಾಳ ಅನಿಸಿತ್ತು. ಅಲ್ಲೂ ಎರಡೋ ಮೂರೋ ಗೋಲಿ ಸೋಡಾ ಕುಡಿದೆವು. ಬೆಟ್ಟ ಏರಲು ಶುರು ಹಚ್ಚಿದೆವು. ತುಂಬಾ ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಮೆಟ್ಟಲು ತರಹ ಮಾಡಿ ಹತ್ತುವವರಿಗೆ ಅನುಕೂಲ ಆಗಲಿ ಅಂತ ಪೈಪು ಹಾಕಿದ್ದಾರೆ. ಈ ಪೈಪ್ ಹಾಕಿ ಅದೆಷ್ಟು ಸಾವಿರ ವರ್ಷ ಆಗಿತ್ತು ಅಂದರೆ ತುಕ್ಕು ಹಿಡಿದು ಕೆಲವು ಕಡೆ ತೂತು ಬಿದ್ದಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

ಹದಿನಾರನೇ ಸಂಚಿಕೆಯಲ್ಲಿ ರಾಮನಾಮ ಕಾಪಿ ಪುಸ್ತಕ ನೆನೆದುಕೊಂಡೆ. ಹಾಗೆ ಪ್ರಜಾವಾಣಿಯ ಸಂಪಾದಕ ಶ್ರೀ ಎಂ ಬೀ ಸಿಂಗ್ ಅವರು ನನಗೆ ದುಂಡಗೆ ಇರುವವರ ಕೈಲಿ ಬರೆಸಿ ಅಂತ ನನ್ನ ಬ್ರಹ್ಮಲಿಪಿಯ ಬಗ್ಗೆ ಮಾಡಿದ ತಮಾಷೆ ತಿಳಿಸಿದೆ. ಅಂದಿನ ಸಿನಿಮಾ ಹಾಡಿನ ಪುಸ್ತಕದ ಬಗ್ಗೆ ಹೇಳಿದೆ ಮತ್ತು ನಮ್ಮ ಮುಂದಿನ ಪೀಳಿಗೆ ಈ ಸುಖದಿಂದ ವಂಚಿತರಾಗಿರುವ ಬಗ್ಗೆಯೂ ತಿಳಿಸಿದೆ. ಜೂಕ್ ಬಾಕ್ಸ್ ಬಗ್ಗೆ ಹೇಳಿದೆನಲ್ಲ, ನಿಯೋ ಮೈಸೂರು ಕೆಫೆಯಲ್ಲಿ ಸಹಾ ಜೂಕ್ ಬಾಕ್ಸ್ ಇತ್ತು ಅಂತ ಗೆಳೆಯ ನಟರಾಜ್ ನೆನೆಸಿಕೊಂಡ.

ರಾಜ್ಯದ ರಾಜಧಾನಿಯಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನ ಮಾನ ದೊರಕಿಸಲು ಹೋರಾಟ ನಡೆಯಿತು .ಮತ್ತು ಅದರ ಫಲಶ್ರುತಿ ಈಗ ನಮ್ಮ ಕಣ್ಣೆದುರಿಗೇ ಇದೆ. ಆಗ ಸ್ವಲ್ಪ ಸಡಿಲ ಬಿಟ್ಟಿದ್ದರೆ ಅಥವಾ ಉದಾಸೀನ ರಾಗಿದ್ದರೆ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳು ಕನ್ನಡಕ್ಕೆ ಗಗನ ಕುಸುಮ ಆಗಿಬಿಡುತ್ತಿದ್ದವು. ಚಳವಳಿಗಾರರಿಗೆ ಕನ್ನಡಿಗರು ಎಂದಿಗೂ ಋಣಿಯಾಗಿರಬೇಕು ಅಂತಹ ಕೆಲಸ ಆಗ ಆಗಿದ್ದು ಅಂತ ಕನ್ನಡ ಚಳವಳಿ ನೆನೆದೆ.

೭೮ rpm (ಆರ್‌.ಪಿ.ಎಂ) ರೆಕಾರ್ಡ್ ತಟ್ಟೆ ಬಗ್ಗೆ ಹೇಳಿದೆ. ಹಾಡಿನ ಕೊನೆಯಲ್ಲಿ ಹಾಡಿದವರು ಅವರ ಹೆಸರನ್ನೂ ಸಹ ಹೇಳುತ್ತಿದ್ದರು. ಮನೆಯಲ್ಲಿದ್ದ ಒಂದು ರೆಕಾರ್ಡ್‌ನಲ್ಲಿ ಹಾಡು ಕೊನೆಗೆ ಬಂದಕೂಡಲೇ ಅಮೀರ್ ಬಾಯಿ ಕರ್ನಾಟಕಿ ಅನ್ನುವ ಹೆಸರು ಕೇಳುತ್ತಿತ್ತು. ಇದು ಹಾಡು ಹಾಡಿದವರ ಹೆಸರು, ಅದನ್ನು ಅವರು ಹೇಳಬೇಕು ಅಂತ ಕಾಂಟ್ರಾಕ್ಟ್ ಇರುತ್ತೆ ಅಂತ ನಮ್ಮ ದೊಡ್ಡಣ್ಣ ವಿವರಿಸಿದ, ಒಮ್ಮೆ ಯಾಕೆ ಹೀಗೆ ಹೇಳ್ತಾರೆ ಅಂತ ಕೇಳಿದ್ದಕ್ಕೆ..! ಸುಮಾರು ರೇಕಾರ್ಡುಗಳು ಹೀಗೆ ಹೆಸರು ಇಲ್ಲದೆಯೂ ಇತ್ತು. ಅವು ನಂತರ ಬಂದ ರೆಕಾರ್ಡ್‌ಗಳು, ಅವುಗಳಿಗೆ ಹೀಗೆ ಹೆಸರು ಹೇಳಿಕೊಳ್ಳುವ ಸಂಪ್ರದಾಯ ನಿಂತಿತ್ತು. ನಂತರ ಬಂದ ೪೫/೩೩rpm ರೆಕಾರ್ಡ್‌ಗಳು ಹಾಡು ಹಾಡಿದವರ ಹೆಸರು ಇಲ್ಲದೇ ಬರುತ್ತಿತ್ತು. ಸುಮಾರು ೭೮rpm ರೆಕಾರ್ಡ್‌ಗಳು ನಂತರ ೪೫/೩೩rpm ರೆಕಾರ್ಡ್‌ಗಳು ಆದವು. ಎಂ ಎಸ್ ಸುಬ್ಬುಲಕ್ಷ್ಮಿ ಅವರ ಎಲ್ಲಾ ಹಾಡುಗಳೂ ಸಿಗುತ್ತಿತ್ತು. ಹಾಗೆಯೇ ಪಿ. ಕಾಳಿಂಗ ರಾವ್, ರಾಜೈಯ್ಯಂಗಾರ್, ಪಟ್ಟಮ್ಮಾಳ್‌ ಇವರ ಹಾಡುಗಳು ಬಂದವು. ಆದರೆ ಪೀರ್ ಸಾಬ್ ಮೊದಲಾದ ಅಂದಿನ ನಾಟಕಕಾರರ ಹಾಡುಗಳು ಬಂದಂತೆ ಕಾಣೆ. “ಓ ಪ್ರಿಯಾ ಪ್ರಶಾಂತ ಹೃದಯಾ ಹಾನಿ ಹೊಂದಿದೆಯಾ…” ಮೊದಲಾದ ಹಾಡುಗಳನ್ನು ಮತ್ತೆ ನಾನು ಕೇಳಿಲ್ಲ. ಈಗಲೂ ಆ ಕಾಲದ ಹಾಡುಗಳು ಅದೇನು ಸಂತೋಷ ಕೊಡುತ್ತವೆ ಎಂದರೆ….

ಮುಂದಕ್ಕೆ..
ರಾಜಾಜಿನಗರದ ಎಂಬತ್ತು ಅಡಿ ರಸ್ತೆಯಲ್ಲಿ ಉತ್ತರಕ್ಕೆ ಮುಖಮಾಡಿ ನಿಲ್ಲಿ. ನಿಮ್ಮ ಎಡಗಡೆಗೆ ರಾಜಾಜಿನಗರದ ಒಂದು ಭಾಗ, ನಂತರ ಶಿವನಹಳ್ಳಿ, ಅದರ ತಳಕ್ಕೆ ಕಮಲಾ ನಗರ, ಲಗ್ಗೆರೆ, ಮೇಲಕ್ಕೆ ಮಂಜುನಾಥ ನಗರ, ಅದರ ಸುತ್ತ ಮಹಾಲಕ್ಷ್ಮೀ ಲೇಔಟು, ಮಹಾಲಕ್ಷ್ಮೀ ನಗರ, ಇನ್ನೂ ಮುಂದಕ್ಕೆ ಯಶವಂತಪುರ, ಸುಬೇದಾರ್ ಪಾಳ್ಯ, ಮತ್ತಿಕೆರೆ, ಜಾಲಹಳ್ಳಿ, ವಿದ್ಯಾರಣ್ಯಪುರ, ಅಟ್ಟೂರು, ಯಲಹಂಕ……. ಬೆಂಗಳೂರಿನ ಈ ಭಾಗದ ಒಂದು ಸ್ಥೂಲ ಪುಟಾಣಿ ಚಿತ್ರ ಇದು.

೧೯೮೦ ರ ಆಸುಪಾಸಿನಲ್ಲಿ ಅಂದಿನ ಸಿ ಅಯ್ ಟಿ ಬೀ, ಈಗಿನ ಬಿಡಿಎ, ಜಗಜ್ಯೋತಿ ಬಸವೇಶ್ವರ ಅವರ ಹೆಸರಿನಲ್ಲಿ ಒಂದು ಬಡಾವಣೆ ಆರಂಭಿಸಿತು. ಅದೇ ಈಗಿನ ಬಸವೇಶ್ವರ ನಗರ. ಈ ಮೊದಲು ಅಲ್ಲಿನ ಒಂದು ಪ್ರದೇಶಕ್ಕೇ ಅಗ್ರಹಾರ ದಾಸರಹಳ್ಳಿ ಮೊದಲ, ಎರಡನೇ ಹಂತ ಎಂದು ಹೆಸರಿತ್ತು.

ಬಸವೇಶ್ವರ ನಗರದ ಮೂರು ಅಂಚಿನಲ್ಲಿ ವಿಜಯನಗರ, ಕಾಮಾಕ್ಷಿ ಪಾಳ್ಯ, ಕಮಲಾನಗರ, ನಂದಿನಿ ಬಡಾವಣೆ ಇದ್ದರೆ ನಾಲ್ಕನೇ ಅಂಚಿನಲ್ಲಿ ರಾಜಾಜಿನಗರ ಕೈಗಾರಿಕಾ ಬಡಾವಣೆ ಇದೆ. ಆಗ ತಾನೇ ಅಭಿವೃದ್ಧಿ ಹೊಂದುತ್ತಿದ್ದ ಮಹಾಲಕ್ಷ್ಮೀ ಬಡಾವಣೆ ಹಾಗೂ ಮಾಗಡಿ ರಸ್ತೆ ಹತ್ತಿರದಲ್ಲಿದ್ದವು. ಆವನಿ ಶಂಕರ ಮಠದವರೆಗೆ ಮೊದಲು bts ಬಸ್ಸುಗಳ ಸಂಪರ್ಕ ಇತ್ತು. ಮಾಗಡಿ ರಸ್ತೆ ಇಂದ ಜೈಮುನಿ ರಾವ್ ವೃತ್ತದ ಮೂಲಕ ಪುಟ್ಟ ರಸ್ತೆಗಳು ಇದ್ದುವು. ಸಮತಟ್ಟಾದ ರಸ್ತೆ ಇಲ್ಲದೇ ಎತ್ತರ ತಗ್ಗು ಹೆಚ್ಚಿದ್ದವು. ಆಗ ಈ ಸ್ಥಳಕ್ಕೆ ಹಿಡಿಶಾಪ ಹಾಕುತ್ತಿದ್ದ ಮೊದಮೊದಲು ಮನೆ ಕಟ್ಟಿಕೊಂಡು ಬಂದ ನಿವಾಸಿಗಳು ನಂತರದ ಕೆಲವೇ ವರ್ಷಗಳಲ್ಲಿ ಆಗಿರುವ ಅಗಾಧವಾದ ಬೆಳವಣಿಗೆ ಕಂಡು ಆಶ್ಚರ್ಯ ಪಡುತ್ತಾರೆ. ಬಡಾವಣೆ ಸುಮಾರು ಹಳ್ಳಿಗಳನ್ನು (ಕಾಮಾಕ್ಷಿ ಪಾಳ್ಯ, ಕಮಲಾ ನಗರ, ಸಾಣೆ ಗುರುವನ ಹಳ್ಳಿ, ಅಗ್ರಹಾರ ದಾಸರಹಳ್ಳಿ ಇತ್ಯಾದಿ ಇತ್ಯಾದಿ) ಒಳಗೊಂಡಿದ್ದು ಈಗ ಅದೆಲ್ಲವೂ ಇಲ್ಲಿನ ಭಾಗಗಳು! ಇಲ್ಲೂ ಹಲವು ಪುಟ್ಟ ಪುಟ್ಟ ಕೆರೆಗಳಿದ್ದು ಅವುಗಳು ನಗರ ಬೆಳೆಯಲು ಜಾಗ ಮಾಡಿಕೊಟ್ಟವು, ಉಹುಂ, ಕೆರೆಗಳನ್ನು ಕೊಂದು ಜಾಗ ಅತಿಕ್ರಮಿಸಿ ವಾಸಕ್ಕೆ ಅನುವು ಮಾಡಲಾಯಿತು. ಸರ್ಕಾರ ಮತ್ತು ಲ್ಯಾಂಡ್ ಮಾಫಿಯಾಗಳು ಕೈಜೋಡಿಸಿ ಈ ಕೆಲಸ ಮಾಡಿದವು. ಇದು ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ನಿರಂತರವಾಗಿ ನಡೆಯಿತು.

ಕಮಲಾನಗರದಲ್ಲಿ ತೊಂಬತ್ತರ ದಶಕದಲ್ಲಿ ಬಡವರಿಗೆ ಎಂದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS Economically weaker section) ಎಂದು ನಾಲ್ಕುನೂರು ಐದುನೂರು ರೂಪಾಯಿಗಳಿಗೆ ಕಂತಿನಲ್ಲಿ ನಿವೇಶನ ಮಾರಾಟಕ್ಕೆ ಇತ್ತು. ಈಗಿನ ಹಾಗೆ ಆಗಲೂ ದಲ್ಲಾಳಿಗಳು ಇದ್ದರು. ಅವರ ಮೂಲಕ ಸುಮಾರು ಸಬಲರು ಅಲ್ಲಿ ನಿವೇಶನ ಕೊಂಡರು. ಖಾಸಗಿ ಸಂಘ ಸಂಸ್ಥೆಗಳು ಅಲ್ಲಿಯೂ ಸಹ ಬಡಾವಣೆ ನಿರ್ಮಿಸಿದವು. ಇದರಿಂದ ಸರ್ಕಾರದ ಮೇಲೆ ಒತ್ತಡ ಕಡಿಮೆಯಾಗಿ ನಿವಾಸಿಗಳಿಗೆ ನಿವೇಶನಗಳು ಅಷ್ಟು ಶ್ರಮ ಇಲ್ಲದೇ ದೊರೆತವು. ಕಾಲ ಕಳೆದ ಹಾಗೆ ಏರಿಯಾ ಅಭಿವೃದ್ಧಿ ಹೊಂದಿತು. ರಿಂಗ್ ರೋಡು ಪಕ್ಕದಲ್ಲಿಯೇ ಹಾದು ಹೋಯಿತು. ಈಗ ಅಲ್ಲಿ ನಿವೇಶನಗಳಿಗೆ ಮತ್ತು ಕಟ್ಟಡಗಳಿಗೆ ತುಂಬಾ ಒಳ್ಳೆಯ ಬೆಲೆ.

ನಂತರ ಶಿವನಗರ ಆದ ಶಿವನಹಳ್ಳಿ ಇದರ ಪಕ್ಕವೇ ಅಂಟಿಕೊಂಡ ಸ್ಥಳ. ನಂತರದ ಕೆಲವು ವರ್ಷಗಳಲ್ಲಿ ಬಡಾವಣೆ ಅತ್ಯಪೂರ್ವ ಅಭಿವೃದ್ಧಿ ಕಂಡಿದೆ. ಹೆಸರುವಾಸಿ ಶಿಕ್ಷಣ ಸಂಸ್ಥೆಗಳು, ಪ್ರಸಿದ್ಧ ತಿಂಡಿ ತಿನಿಸುಗಳ ತಾಣ, ಹಲವು ಛತ್ರಗಳು, ಕಲ್ಯಾಣ ಮಂಟಪಗಳು ಸೇರ್ಪಡೆ ಆಗಿವೆ. ಇಲ್ಲಿದ್ದ ಕೆರೆ ಕುಂಟೆಗಳು ಮನುಷ್ಯನ ಅತಿ ಆಸೆಗೆ ಬಲಿಯಾಗಿ ದೊಡ್ಡ ದೊಡ್ಡ ಕಟ್ಟಡಗಳು ಬಂದಿವೆ. ಅದೇ ರೀತಿ ಆಸ್ತಿಕರಿಗೂ ಅನುಕೂಲವಾಗುವ ಹಾಗೆ ದೇವಸ್ಥಾನಗಳನ್ನು ನಿವಾಸಿಗಳು ನಿರ್ಮಿಸಿಕೊಂಡಿದ್ದಾರೆ.

ಸುಮಾರು ನಿವಾಸಿಗಳು ಕಾರ್ಖಾನೆ ಹಾಗೂ ಇತರೆಡೆ ಉದ್ಯೋಗಿಗಳು. ಐ ಟಿ ಮತ್ತು ಬಿಟಿ ಪ್ರದೇಶಗಳಿಗೆ ದೂರ ಇರುವುದರಿಂದ ಎಂ ಎನ್ ಸಿ ಗಳ ಪ್ರಭಾವ ಅಷ್ಟೆಲ್ಲ ಇಲ್ಲ. ಇಲ್ಲಿನ ಯುವಕರು ದೂರದ ಐ ಟಿ ಮತ್ತು ಬಿಟಿ ಪ್ರದೇಶಗಳಿಗೆ ಉದ್ಯೋಗಕ್ಕೆ ಹೋಗುತ್ತಾರೆ. ಕೆಲವರು ದೂರ ಎನ್ನುವ ಕಾರಣಕ್ಕೆ ಅಲ್ಲೇ ಮನೆ ಮಾಡಿಕೊಳ್ಳುತ್ತಾರೆ. ಎಲ್ಲ ಬಡಾವಣೆಗಳಲ್ಲಿ ಇರುವ ಸಮಸ್ಯೆ ಇಲ್ಲೂ ಇದೆ. ಮುಖ್ಯ ಅಂದರೆ ವಯಸ್ಸಾದ ವೃದ್ಧರು ಮನೆಯಲ್ಲಿ ಮಕ್ಕಳಿಂದ ದೂರ ಇರುವುದು. ಈ ಸಂಗತಿ ಇನ್ನೂ ಅಷ್ಟು ದೊಡ್ಡ ಸಮಸ್ಯೆ ಅನಿಸಿಲ್ಲ. ಇಲ್ಲಿಗೆ ಸಮೀಪದ ಮೆಟ್ರೋ ರೈಲು ಅಂದರೆ ರಾಜಾಜಿನಗರ ಮತ್ತು ಹೊಸಹಳ್ಳಿಯವು. ಮುಂದೆ ಇಲ್ಲೂ ಸಹ ಒಂದು ಮೆಟ್ರೋ ಸ್ಟೇಶನ್ ಮತ್ತು ರೈಲು ಬರುವ ಸೂಚನೆ ಇದೆ. ಅಂದ ಹಾಗೆ ಕನ್ನಡದ ಖ್ಯಾತ ಬರಹಗಾರರು ಮತ್ತು ಅಡ್ವೋಕೇಟ್‌ಗಳು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಶ್ರೀ ಈಶ್ವರ ಚಂದ್ರ, ಶ್ರೀ ಚಿರಂಜೀವಿ, ಶ್ರೀ ಕೃಷ್ಣ ಸುಬ್ಬರಾವ್ ಮುಂತಾದ ಹಿರಿಯ ಬರಹಗಾರರು ಇಲ್ಲಿನವರು.

ರಾಜಾಜಿನಗರದ ವಿಷಯ ಬರೆಯಬೇಕಾದರೆ ಆಗಿನ ಅಲ್ಲಿನ ಸಂಜೆಯ ಈಟ್ ಔಟ್ಸ್ ಬಗ್ಗೆ ಬರೆದಿದ್ದೆ. ಇಲ್ಲೂ ಸಹ ಅದೇ ಕತೆಗಳ ಪುನರಾವರ್ತನೆ. ರಾಜಾಜಿನಗರದ ವಿಷಯ ಬರೆಯಬೇಕಾದರೆ ಹಲವು ಸ್ನೇಹಿತರು ನನ್ನ ಮೇಲೆ ಬೀರಿದ ಪ್ರಭಾವದ ಬಗ್ಗೆ ಮುಂದೆ ತಿಳಿಸುವೆ ಎಂದಿದ್ದೆ. ಈಗ ಅದಕ್ಕೆ..

ಮೊದಲಿಗೆ ಪ್ರಸನ್ನ ಕುಮಾರ್ ಬಗ್ಗೆ. ಇವನು ನನಗೆ ಬರೀ ಪ್ರಸನ್ನ. ಇವನ ನನ್ನ ಗೆಳೆತನ ಸುಮಾರು ಆರು ದಶಕದ್ದು. ಭಾಷ್ಯಂ ಸರ್ಕಲ್‌ಗೆ ರಾಮಮಂದಿರದ ಕಡೆಯಿಂದ ಒಂದು ರಸ್ತೆ ಬಗ್ಗೆ ಹೇಳಿದ್ದೆ. ಭಾಷ್ಯಂ ಸರ್ಕಲ್‌ನಿಂದ ಪ್ರಸನ್ನ ಟಾಕೀಸ್ ಕಡೆ ಹೋಗುವ ರಸ್ತೆಯ ಎರಡನೇ ಅಡ್ಡ ರಸ್ತೆಯ ಕೊನೆಯಲ್ಲಿ ಗೆಳೆಯ ಪ್ರಸನ್ನನ ಮನೆ ಇತ್ತು. ಪ್ರಸನ್ನ ಹಾಗೂ ನನ್ನ ಪರಿಚಯ ಗಾಢವಾಗಿದ್ದು ಬೆಂಗಳೂರಿನಿಂದ ದೂರದ ಬಳ್ಳಾರಿಯಲ್ಲಿ. ಅದು ಹೇಗೆ ಅಂದರೆ ನಮ್ಮ BSc ಗೆಳೆಯ ಭೋಗೇಂದ್ರನ್ ಮದುವೆ ಬಳ್ಳಾರಿಯಲ್ಲಿ ಆಯಿತು. ಭೋಗೇಂದ್ರನ್ ವಯಸ್ಸಿನಲ್ಲಿ ನಮಗಿಂತ ಕೊಂಚ ಹಿರಿಯ. ಡಿಪ್ಲೊಮಾ ಮುಗಿಸಿ ಅಂಚೆ ಮತ್ತು ತಂತಿ ಇಲಾಖೆಯಲ್ಲಿ (PandT)ಕೆಲಸ ಮಾಡುತ್ತಿದ್ದ. ಆಗ P andT ಅಂದರೆ posts and telegraphs ಅಂತ ಒಂದೇ ವಿಭಾಗ ಇತ್ತು. ಕಾಲಾನಂತರ ಅದು posts ಬೇರೆ ಟೆಲಿಗ್ರಾಫ್ ಬೇರೆ ಆಯಿತು. ಭೋಗೇಂದ್ರ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮತ್ತು ಹಗಲಿನಲ್ಲಿ BSc ಸೇರಿದ್ದ. ಆಗ ಡಿಗ್ರಿ ಪಡೆದವರು ಡಿಪ್ಲೊಮಾಗಿಂತ ಹೆಚ್ಚು ಬುದ್ಧಿವಂತರು ಎಂದು ಜನಜನಿತವಾದ ಹೆಸರು ಇತ್ತು! (ಹಾಗೆ ನೋಡಿದರೆ ನಮ್ಮ ಹಿರಿಯ ಕವಿ ಶ್ರೀ ಎಚ್ಚೆಸ್ವಿ ಅವರೂ ಸಹ ಮೂಲ ಡಿಪ್ಲೊಮದವರು). ಬಳ್ಳಾರಿ ಅಂದ ಕೂಡಲೇ ಭೋಗೇಂದ್ರನ ಮದುವೆಗೆ ಹೋಗೋದು ಅಂತ ನಾನು ನಟರಾಜ ನಾಗರಾಜ ತೀರ್ಮಾನಿಸಿಬಿಟ್ಟೆವು. ನಾವೆಲ್ಲ ಭೋಗೇಂದ್ರನ ಜತೆ BSc ಮಾಡಿದವರು. ಮಂತ್ರಾಲಯಕ್ಕೆ ಹೋಗಬೇಕು ಅನ್ನುವುದು ಒಳ ಆಶಯ. ಮಂತ್ರಾಲಯದಲ್ಲಿ ನಮ್ಮ ಅನುಭವ ಹೇಗೆ ಒಂದು storm in tea cup ಆಯಿತು ಅನ್ನುವುದನ್ನು ಮುಂದೆ ಹೇಳುವೆ.

ಮಂತ್ರಾಲಯ ನೋಡಿಕೊಂಡು ಬಳ್ಳಾರಿಗೆ ಮದುವೆಗೆ ಬಂದ ನಾವು ಮದುವೆ ಮನೆ ಹೊಕ್ಕೆವು. ಪ್ರಸನ್ನ ಅಲ್ಲಿ ಸಿಕ್ಕಿದ. ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು. ಎಂದಿನ ಲವಲವಿಕೆ ಇಲ್ಲ ಅನಿಸಿತು. ಬಳ್ಳಾರಿ ಬಿಸಿಲು ಪಾಪ ಅಂದುಕೊಂಡೆವು. ಬೆಂಗಳೂರಿನಂತಹ ತಂಪು ದೇಶದಿಂದ (ಆಗ ಸಾಮಾನ್ಯ ಉಷ್ಣಾಂಶ ೨೪) ಇಂತಹ ಒಲೆ ಊರಿಗೆ (ಆಗ ೪೪ ಉಷ್ಣಾಂಶ) ತಂದು ಹಾಕಿದ್ದಾರೆ ಅಂತ ಬೇಜಾರು ಇರಬೇಕು ಅನಿಸಿತ್ತು. ಭೋಗೇಂದ್ರ ಆಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಖಾಯಂ ಆಗಿತ್ತು. ಮದುವೆ ಅಂತ ಎರಡೋ ಮೂರೋ ವಾರ ರಜಾ ಹಾಕಿದ್ದ. ಬ್ಯಾಂಕಿನವರು ಹೀಗೆ ಪುಟ್ಟ ಪುಟ್ಟ ರಜೆ ಹಾಕಿದಾಗ stop gap ವ್ಯವಸ್ಥೆ ಅಡಿಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಜನರ ನೇಮಕ ಆಗುತ್ತಿತ್ತು. ಪ್ರಸನ್ನ ಈ ಲೆಕ್ಕದಲ್ಲಿ ಭೋಗೇಂದ್ರನ ಜಾಗ ತುಂಬಲು ಬಂದಿದ್ದ. stop gap ಕೆಲಸ ಮತ್ತು ಉರಿ ಬಿಸಿಲು ಯಾವ ಬೆಂಗಳೂರಿನ ಹುಡುಗನಿಗೇ ಆಗಲಿ ಬೇಸರ ತರಿಸಲು ಸಾಕು! ಪ್ರತಿ ಎಂಟು ಹತ್ತು ಹೆಜ್ಜೆಗೆ ಗೋಲಿ ಸೋಡಾ ಕುಡಿಯುತ್ತಾ ಬಿಸಿಲ ಬೇಗೆ ತಪ್ಪಿಸಿಕೊಂಡಿದ್ದು ಯಾವತ್ತೂ ತಲೆಯಲ್ಲಿ ಉಳಿದಿದೆ. ಅಂದು ಗಾಢವಾದ ಪರಿಚಯ ಸಹಜವಾಗಿ ಸ್ನೇಹಕ್ಕೆ ತಿರುಗಿತು. ಬೆಂಗಳೂರಿನ ಇಂಚಿಂಚು ಅಳೆದವರು ನಾವು. ಸಂಜೆ ಆದರೆ ಇಡೀ ರಾಜಾಜಿನಗರ ಸುತ್ತಿ ರಾಮ ಮಂದಿರದ ಪಕ್ಕದ ಮೈದಾನದ ಕಾಂಪೌಂಡ್ ಕಟ್ಟೆ ಮೇಲೆ ಕಳೆದ ದಿನಗಳೇಷ್ಟೋ.. ನಮ್ಮ ಜತೆ ಆಗಾಗ್ಗೆ ಕುಮಾರ ಸ್ವಾಮಿ (ನಂತರ ಆಯುರ್ವೇದ ವೈದ್ಯ ಆದ. ಮೈಸೂರಿನಲ್ಲಿ ನೆಲೆಸಿದ್ದ. ಕೆಲವು ವರ್ಷಗಳ ಹಿಂದೆ ಅವನನ್ನು ದೇವರು ಕರೆಸಿಕೊಂಡ), ರಾಮಕೃಷ್ಣ (ನಂತರ ದಂತ ವೈದ್ಯ ಆದ, ಈಗ ಹೊಸಕೋಟೆ ವಾಸಿ) ಸೇರುತ್ತಿದ್ದರು ಮತ್ತು ಪ್ರಪಂಚದಲ್ಲಿನ ಎಲ್ಲಾ ಸಂಗತಿಗಳೂ ನಮ್ಮ ಜಿಜ್ಞಾಸೆಗೆ ಆಹಾರ. ಬೆಳಗಿನಿಂದ ಸರಿ ರಾತ್ರಿವರೆಗೂ ನಿಂತಲ್ಲಿ ನಿಲ್ಲದೆ ಓಡಾಡಿದ ನೆನಪುಗಳು ಈಗಲೂ ಹಸಿರು.

ಆಗಿನ ಬೆಂಗಳೂರು ಅಂದರೆ ನೀವು ಏನೂ ಮುಂದಾಲೋಚನೆ ಮಾಡದೆ ಸರಾಗವಾಗಿ ನಡೆದೋ ಬೀ ಟಿ ಎಸ್(ಇದು ಈಗ bmtc ಆಗಿದೆ)ಹಿಡಿದೋ ಹೋಗಬಹುದಿತ್ತು. ಆಗ ನಾವು ಇಬ್ಬರೂ ಗಾಂಧಿಗಳು, ಅಂದರೆ ಸ್ಕೂಟರ್ ಮೋಟಾರ್ ಸೈಕಲ್ ಇಟ್ಟಿರಲಿಲ್ಲ. ಇವು ಆಮೇಲೆ ನಮ್ಮ ಸಂಸಾರ ಸೇರಿದ್ದು. ಬೆಂಗಳೂರ ಹೊರಗೆ ಹೋಗುವುದು ಅಂದರೂ ಅಷ್ಟೇ ಯಾವ ಪ್ಲಾನಿಂಗ್ ಬೇಕಿರದ ಕಾಲ ಅದು. ಇದ್ದಕ್ಕಿದ್ದ ಹಾಗೆ ಯಾವುದೋ ಒಂದು ಜಾಗ ನೋಡಬೇಕು ಅನಿಸಿತಾ, ಯೋಚನೆ ಪಾಚನೆ ಇಲ್ಲದೇ ಹೊರಡಿ!

ಹೀಗೇ ಒಂದು ಬೆಳಿಗ್ಗೆ ಎಂಟು ಎಂಟೂವರೆಗೆ ಪ್ರಸನ್ನನ ಮನೆ ಒಳಗೆ ನಡೆದೆ. ಅವರಮ್ಮ ಕೊಟ್ಟ ಕಾಫಿ ಮುಗಿಸಿ ಆಚೆ ಬಂದೆವಾ… ಶಿವಗಂಗೆ ಬೆಟ್ಟ ಹತ್ತಿದರೆ ಹೇಗೆ… ಅಂತ ಕೇಳಿದ. ನಡಿ ಬಸ್ಸಲ್ಲಿ ಹೋಗೋಣ ಅಂತ ಬಸ್ ಸ್ಟಾಂಡ್‌ಗೆ ಬಂದೆವು. ಆಗಿನ್ನೂ ಈಗಿನ ಬೆಂಗಳೂರು ಬಸ್ ನಿಲ್ದಾಣ ಆಗಿರಲಿಲ್ಲ. ತುಮಕೂರು ಕಡೆ ಹೋಗುವ ಬಸ್‌ಗಳು ಕಲಾಸಿಪಾಳ್ಯದಿಂದ ಹೊರಟು ಮೆಜೆಸ್ಟಿಕ್‌ಗೆ ಬಂದು ತುಳಸಿ ತೋಟ ಹತ್ತಿರ ಒಂದು ಸ್ಟಾಪ್ ಕೊಟ್ಟು ನಂತರ ಕೃಷ್ಣ ಫ್ಲೋರ್ ಮಿಲ್ ಹತ್ತಿರ ಇನ್ನೊಂದು ಸ್ಟಾಪ್, ಅಲ್ಲಿಂದ ಮಲ್ಲೇಶ್ವರ, ಯಶವಂತಪುರ… ಹೀಗೆ ಅದರ ರೂಟ್. ಈಗಿನ ಬಸ್ ಸ್ಟಾಂಡ್ ಕಟ್ಟುವ ಮೊದಲು ಅಲ್ಲಿನ ಜಾಗ ಹೇಗಿತ್ತು ಅಂತ ಮುಂದೆ ವಿವರಿಸುತ್ತೇನೆ.

ಇದಕ್ಕೆ ಎರಡು ಮೂರು ತಿಂಗಳು ಮೊದಲು ನಾನು ನನ್ನ ಸಹೋದ್ಯೋಗಿ ಮಿತ್ರರು ಅಲ್ಲಿಗೆ ಅಂದರೆ ಶಿವಗಂಗೆಗೆ ಹೋಗಿ ಬಂದಿದ್ದೆವು. ಶಿವಗಂಗೆ ಬೆಟ್ಟ ಹತ್ತಿದ ಕತೆಯನ್ನು ಕಣ್ಣಿಗೆ ರಾಚುವ ಹಾಗೆ ಸುಮಾರು ಸಲ ವಿವರಿಸಿದ್ದೆ. ಶಿವಗಂಗೆ ಅನ್ನುವ ಪದ ಹೊರಟಿತು ಅಂದರೆ ನನ್ನ ಇಡೀ ಪುರಾಣ ಹರಿದು ಬಿಡೋದು!

ಬಸ್ ಸ್ಟಾಂಡ್‌ಗೆ ಬಂದೆವು. ಆಗ ಶಿವಗಂಗೆ ಬೆಟ್ಟಕ್ಕೆ ನೇರ ಬಸ್ ದಿವಸಕ್ಕೆ ಒಂದೋ ಎರಡೋ ಇತ್ತು ಅಷ್ಟೇ. ಅದರಿಂದ ನೇರ ದಾಬಸ್ ಪೇಟೆಗೆ ಬಸ್ಸಲ್ಲಿ ಹೋಗುವುದು. ಅಲ್ಲಿಂದ ನಡೆದು ಬೆಟ್ಟದ ತಳ ಸೇರಿ ಅಲ್ಲಿಂದ ಬೆಟ್ಟ ಏರುವುದು. ಇದು ಆಗಲೇ ಎರಡು ಮೂರು ಸಲ ಹೋಗಿದ್ದರಿಂದ ಅಭ್ಯಾಸ ಆಗಿತ್ತು. ತುಮಕೂರು ಬಸ್ಸು ಹತ್ತಿದೆವು. ದಾಬಸ್ ಪೇಟೆ ಟಿಕೆಟ್ ಕೊಂಡು ಅಲ್ಲಿಗೆ ತಲುಪಿದೆವು.

ಅಲ್ಲಿಂದ ಹತ್ತು ಕಿಮೀ ಬೆಟ್ಟ. ಅಲ್ಲೇ ಗೋಲಿ ಸೋಡಾ ಕುಡಿದೆವು. ಅಲ್ಲೇನೂ ಸಿಗಲ್ಲ ಅಂತ ಸೌತೆಕಾಯಿ, ಸಿಬೇಕಾಯಿ, ಕಡಲೆಕಾಯಿ ಕೊಂಡೆವು. ಆಗಿನ್ನೂ ಮುಸುಕಿನ ಜೋಳ ಬೇಯಿಸಿ ತಿನ್ನುವ ಕಲ್ಚರ್ ಹುಟ್ಟಿರಲಿಲ್ಲ. ಸಂಜೆ ಹೊತ್ತು ಅದನ್ನ ಕೆಂಡದಲ್ಲಿ ಸುಟ್ಟು ಅದಕ್ಕೆ ಖಾರ ಹಚ್ಚಿ ಮಾರುತ್ತಿದ್ದರು. ಆಗಿನ್ನೂ ನೀರಿನ ಬಾಟಲ್ ಸಂಸ್ಕೃತಿ ಅಂತೂ ಕಾಲಿಟ್ಟರಲಿಲ್ಲ. ನಲ್ಲಿ ನೀರು ಅಥವಾ ಬಾವಿ ನೀರು ಅಭ್ಯಾಸ ಆಗಿತ್ತು. ಕಲುಷಿತ ನೀರಿಂದ ರೋಗ ಬರುತ್ತೆ ಅಂತ ಓದಿದ್ದೇವೆ ಅಷ್ಟೇ!

ಕಡಲೆಕಾಯಿ ತಿನ್ನುತ್ತಾ ಹಾದಿ ಸವೆಯಿತು. ಸೌತೆಕಾಯಿ, ಬಾಳೆಹಣ್ಣು ಕಡಲೆಕಾಯಿ ನಂತರ ಖಾಲಿ. ಬೆಟ್ಟದ ಬುಡ ಸೇರುವಷ್ಟರಲ್ಲಿ ಕೈ ಖಾಲಿ ಆಗಿ ನಿರಾಳ ಅನಿಸಿತ್ತು. ಅಲ್ಲೂ ಎರಡೋ ಮೂರೋ ಗೋಲಿ ಸೋಡಾ ಕುಡಿದೆವು. ಬೆಟ್ಟ ಏರಲು ಶುರು ಹಚ್ಚಿದೆವು. ತುಂಬಾ ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಮೆಟ್ಟಲು ತರಹ ಮಾಡಿ ಹತ್ತುವವರಿಗೆ ಅನುಕೂಲ ಆಗಲಿ ಅಂತ ಪೈಪು ಹಾಕಿದ್ದಾರೆ. ಈ ಪೈಪ್ ಹಾಕಿ ಅದೆಷ್ಟು ಸಾವಿರ ವರ್ಷ ಆಗಿತ್ತು ಅಂದರೆ ತುಕ್ಕು ಹಿಡಿದು ಕೆಲವು ಕಡೆ ತೂತು ಬಿದ್ದಿತ್ತು.

ಕೊಂಚ ದೂರ ಹತ್ತುವಷ್ಟರಲ್ಲಿ ಏದುಬ್ಬಸ ಶುರು. ನಿಂತು ಸುಧಾರಿಸಿ ಮತ್ತೆ ಹತ್ತು ಮೆಟ್ಟಲು ಏರಿದೇವ, ಮತ್ತೆ ಏದುಬ್ಬಸ! ವಯಸ್ಸು ಚಿಕ್ಕದು, ಇಬ್ಬರಿಗೂ ಚೆನ್ನಾಗಿದ್ದ ಹೃದಯ, ಹೃದಯ ಸ್ತಂಭನ ಈ ವಯಸ್ಸಲ್ಲಿ ಆಗುವುದು ಕೇಳಿರಲಿಲ್ಲ. ಅದರಿಂದ ಎಂತಹ ಉಬ್ಬಸ ಬಂದರೂ ಬೆಟ್ಟ ಹತ್ತೇ ತೀರಬೇಕು ಅನ್ನುವ ಛಲ ಹುಟ್ಟಬೇಕೇ….

ಇಲ್ಲೂ ಹಲವು ಪುಟ್ಟ ಪುಟ್ಟ ಕೆರೆಗಳಿದ್ದು ಅವುಗಳು ನಗರ ಬೆಳೆಯಲು ಜಾಗ ಮಾಡಿಕೊಟ್ಟವು, ಉಹುಂ, ಕೆರೆಗಳನ್ನು ಕೊಂದು ಜಾಗ ಅತಿಕ್ರಮಿಸಿ ವಾಸಕ್ಕೆ ಅನುವು ಮಾಡಲಾಯಿತು. ಸರ್ಕಾರ ಮತ್ತು ಲ್ಯಾಂಡ್ ಮಾಫಿಯಾಗಳು ಕೈಜೋಡಿಸಿ ಈ ಕೆಲಸ ಮಾಡಿದವು. ಇದು ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ನಿರಂತರವಾಗಿ ನಡೆಯಿತು.

ಹತ್ತೋದು, ಉಸಿರು ಹಿಡಿಯೋದು ನಿಂತು ಸುಧಾರಿಸಿಕೊಳ್ಳೋದು, ಮತ್ತೆ ಹತ್ತೋದು, ಉಸಿರು ಹಿಡಿಯೋದು ನಿಂತು ಸುಧಾರಿಸಿಕೊಳ್ಳೋದು, ಮತ್ತೆ ಹತ್ತೋದು, ಉಸಿರು ಹಿಡಿಯೋದು ನಿಂತು ಸುಧಾರಿಸಿಕೊಳ್ಳೋದು… ಈ ಪ್ರಕ್ರಿಯೆ ರಿಪೀಟ್ ಆಗುತ್ತಾ ಆಗುತ್ತಾ ನಮ್ಮ ಏರಿಕೆ ಮುಂದುವರಿತಾ.. ಕೊಂಚ ಏರಿದ ಮೇಲೆ ಒಂದು ಒರಳು ಕಲ್ಲು, ಅದನ್ನ ಮೊದಲು ಹತ್ತಿದೋರು ಅಲ್ಲಾಡಿಸಿ ಅಲ್ಲಾಡಿಸಿ ಮುಂದೆ ಹೋಗ್ತಿದ್ದಾರೆ. ನಾವೂ ಅದನ್ನ ಆಡಿಸಿ ಒಳಗೆ ಕೈ ಆಡಿಸಿ ನೀರು ಸಿಕ್ತು ಅಂತ ಖುಷಿ ಪಟ್ಟು ಪುಣ್ಯ ಮಾಡಿದ್ದೇವೆ ಅಂದುಕೊಂಡೆವು…

ಮೊದಲು ಸ್ವಲ್ಪ ಮೆಟ್ಟಿಲು ಹತ್ತಿದ ಮೇಲೆ ಬಂಡರ ಎತ್ತರ ಮೂರು ನಾಲ್ಕು ಅಡಿ. ನೇರ ಕಾಲೆತ್ತಿ ಇಡಬೇಕು ಅಂದರೆ ಒಂದು ದೊಡ್ಡ ಸರ್ಕಸ್ಸು. ಇನ್ನೂ ಕೊಂಚ ಏರಿದ ನಂತರ ಕೈ ಹಿಡಿದು ಹತ್ತಲು ಹಾಕಿದ್ದ ಕಬ್ಬಿಣದ ರೈಲಿಂಗ್ಸ್ ಇಲ್ಲ, ಮುರಿದು ಹೋಗಿದೆ…. ಆದರೂ ಛಲ ಬಿಡದ ತ್ರಿವಿಕ್ರಮರು ನಾವು. ಹಠ ಹುಟ್ಟಿತ್ತಾ, ಹತ್ತಲೇ ಬೇಕು. ಹಾಗೂ ಹೀಗೂ ಜೀವ ಗಟ್ಟಿ ಮಾಡಿಕೊಂಡು ಅರ್ಧ ದೂರಕ್ಕೆ ಬಂದೆವು. ನಮ್ಮ ಜತೆಯೇ ಬೆಟ್ಟ ಹತ್ತಲು ಶುರು ಮಾಡಿದವರು ಕೆಲವರು ನಮಗಿಂತ ಸುಮಾರು ಮುಂದೆ ಹೋಗಿದಾರೆ. ಕೆಲವರು ನಮ್ಮ ತರಹವೇ ಪ್ರಯಾಸ ಪಟ್ಟು ಏರುತ್ತಾ ಇದ್ದಾರೆ. ಕೆಲವರು ಈ ಕಷ್ಟ ಬೇಡ ಅಂತ ವಾಪಸ್ಸು ಹೋಗಿದ್ದಾರೆ! ಮತ್ತೂ ಕೆಲವರು ಇಳಿಯುತ್ತಾ ಇದ್ದಾರೆ.

ನಮಗೂ ಇಳಿದು ವಾಪಸ್ ಹೋದರೆ ಹೇಗೆ ಅನಿಸಿತು. ಚಿಕ್ಕ ಹುಡುಗಿಯರು ಹತ್ತುತ್ತಾ ಇದ್ದಾರೆ, ನಮಗಿಂತ ದೊಡ್ಡೋರು ಇನ್ನೂ ಹತ್ತುತ್ತಾ ಇದ್ದಾರೆ, ನಾವು ಸೋಲುವುದೇ… ಮಾತು ಆಡುತ್ತಾ ಆಡುತ್ತಾ ಬೆಟ್ಟದ ಮೇಲೆ ಹತ್ತುವ ಕಾರ್ಯ ನಡೆಸುತ್ತಿದ್ದೆವು. ಮೋಡಗಳು ನಮ್ಮನ್ನು ಮುತ್ತಿಕ್ಕುತ್ತಿವೆ ಅನಿಸೋದು ಮತ್ತು ಕೈ ಚಾಚಿದರೆ ಮೋಡ ಸಿಗುತ್ತೆ ಅನಿಸುವ ಅಪೂರ್ವ ಅನುಭವ.. ಏಕ್ ದಂ ಚಳಿಗೆ ಮೈ ನಡುಗುವ ಮತ್ತೆ ಬೆಚ್ಚಗಾಗುವ ಸೊಗಸು.. ಓಹ್ ಅನುಭವಿಸಿಯೇ ತೀರಬೇಕು.

ಛಲ ಬಿಡಬಾರದು ಅನಿಸಿತು ಇಬ್ಬರಿಗೂ. ಹತ್ತೇ ಬಿಡೋಣ ಅಂತ ಮುಂದುವರೆಸಿದೆವು. ಈಗ ಬೆವರು ಬೇರೆ ಸುರಿಯಲು ಶುರು. ಅಲ್ಲಲ್ಲೇ ನಿಂತು ಮೆಟ್ಟಿಲು ಏರಿ ಒಂದು ಹಂತ ತಲುಪಿದೆವಾ.. ಇದ್ದಕ್ಕಿದ್ದ ಹಾಗೆ ಮೋಡ ಸೇರಿತು. ಕೆಲವೇ ನಿಮಿಷದಲ್ಲಿ ರಪ ರಪಾ ಹನಿ ಶುರುವಾಯಿತು. ನಿಲ್ಲಲು ಜಾಗವೂ ಇಲ್ಲ. ಹಾಗೇ ಮುಖಕ್ಕೆ ಅಡ್ಡ ಅಂಗೈ ಹಿಡಿದು ಏರಿದೆವು. ಇನ್ನೂ ಕೊಂಚ ದೂರ ಇದೆ ಅನ್ನಬೇಕಾದರೆ ಒಂದು ದೊಡ್ಡ ಬಂಡೆ, ಅದರ ತಳದಲ್ಲಿ ಒಂದು ಗಂಟೆ ನೇತಾಡುತ್ತಿತ್ತು. ಯಾರೋ ಸಾಹಸಿ ಗಂಟೆ ಇಲ್ಲಿ ನೇತು ಹಾಕಿದಾರೆ ಅನಿಸಿತು. ಈ ವೇಳೆಗೆ ಮಳೆ ಕಡಿಮೆ ಆಗಿತ್ತು. ಆಗಲೇ ಕೋಡುಗಲ್ಲು ಸಿಕ್ಕಿದ್ದು. ಅದರ ಮೇಲೇರಿ ಒಂದು ಸುತ್ತು ಬಂದರೆ ಬೆಟ್ಟ ಪೂರ್ಣ ಹತ್ತಿದ ಹಾಗೆ. ಇಲ್ಲಿಂದಲೇ ನಾಟ್ಯ ರಾಣಿ ಶಾಂತಲಾ ಹಾರಿದ್ದು ಎಂದು ಕೆ ವಿ ಅಯ್ಯರ್ ಅವರ ನಾಟ್ಯ ರಾಣಿ ಶಾಂತಲಾ ಓದಿ ತಿಳಿದಿದ್ದೆವು. ಕೋಡುಗಲ್ಲಿನ ಒಂದು ಕಡೆ ಎರಡು ಎರಡೂವರೆ ಅಡಿಯಷ್ಟು ಅಂತರ ಖಾಲಿ ಖಾಲೀ. ಅಲ್ಲಿ ಈ ಕಡೆಯಿಂದ ಅತ್ತ ಜಿಗಿಯಬೇಕು. ಕಾಲಿಗೆ ನೆಲೆ ಸಿಗಲಿಲ್ಲ ಅಂದರೆ ಸುಮಾರು ಐವತ್ತು ಅಡಿ ಕೆಳಕ್ಕೆ ಬೀಳುವ ಭಯ. ಧೈರ್ಯ ಮಾಡಿ ಜಿಗಿಯೋಣ ಅಂತ ನಿರ್ಧಾರ ಮಾಡಿದೆವು. ಜಿಗಿದೇವ, ಅತ್ತ ಆ ಕಡೆ ಬಂದಾಯ್ತು. ಕೊಡುಗಲ್ಲು ಏರಿದ ಖುಷಿಯಲ್ಲಿ ಅಲ್ಲಿಂದ ಪಕ್ಕಕ್ಕೆ ಬಂದೇವಾ… ಮತ್ತೆ ಮಳೆ ಜೋರಾಯಿತು. ಸುತ್ತ ಕಣ್ಣು ಹಾಯಿಸಿದರೆ ಅಲ್ಲೊಂದು ಹಳೇ ಕಲ್ಲು ಮಂಟಪ. ಒಳ ಹೊಕ್ಕು ಸುತ್ತಾ ಕಣ್ಣು ಹಾಯಿಸಿದರೆ ಒಬ್ಬರು ಜಂಗಮ ಸ್ವಾಮಿಗಳು, ಅವರ ಜತೆ ಇನ್ನೊಬ್ಬರು ಪುಟ್ಟ ಸ್ವಾಮಿಗಳು ಕೂತು ಗಹನವಾಗಿ ಮಾತು ಆಡುತ್ತಿದ್ದರು. ಇಬ್ಬರೂ ಸ್ವಾಮಿಗಳು ಕಾವಿ ಜುಬ್ಬಾ ಪಂಚೆ ಧರಿಸಿದ್ದರು. ದೊಡ್ಡ ಸ್ವಾಮಿ ಗಟ್ಟಿ ಮುಟ್ಟಾದ ಪೈಲ್ವಾನ್ ದೇಹದವರು. ಕರೀ ಗಡ್ಡ, ಹಣೆ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ… ನಾವು ಒಳ ಬಂದಿದ್ದು, ನಮ್ಮ ಬಟ್ಟೆ ಒದ್ದೆ ಆಗಿರೋದು ನೋಡಿದರು. ಬನ್ನಿ ಕುತ್ಕಳಿ ಅಂದರು. ಅವರ ಎದುರು ಹತ್ತು ಹದಿನೈದು ಅಡಿ ದೂರ ಇದ್ದ ಗೋಡೆ ಒರಗಿ ಕೂತೆವು. ಚಿಕ್ಕ ಸ್ವಾಮಿ ಅಪ್ಪಾಜಿ ಬರ್ತೀನಿ ಅಂತ ದೊಡ್ಡ ಸ್ವಾಮಿಗೆ ಹೇಳಿ ಆಚೆ ಹೋದರು. ಅಪ್ಪಾಜಿ ಜತೆ ಒಂದೆರೆಡು ಕುಶಲೋಪರಿ ಮಾತು ಆಡಿದೆವು. ಮಳೆ ಇನ್ನೂ ಜೋರಾಯಿತು. ಜೋರು ಮಳೆಯ ಶಬ್ದ ಮತ್ತು ಕೋರೈಸುವ ಮಿಂಚು, ನಾವು ಗೋಡೆ ಒರಗಿ ಚಕ್ಕಳ ಮಕ್ಕಳ ಹಾಕಿ ಕೂತಿದ್ದೆವು. ಎದುರು ಅಪ್ಪಾಜಿ ಗೋಡೆಗೆ ಒರಗಿ ಕಣ್ಣು ಮುಚ್ಚಿ ಅದೇನೋ ಧ್ಯಾನ ಮಾಡುತ್ತಿದ್ದ ಹಾಗೆ ಕಾಣಿಸಿತು.

ಇದ್ದಕ್ಕಿದ್ದ ಹಾಗೆ ಫಲ್, ಫಲ್ ಫಲಾರ್ ಎಂದು ಕಣ್ಣು ಕತ್ತಲಾಗುವ ಬೆಳಕು ಮತ್ತು ಮಿಂಚು ಕೋರೈಸುವ ಹಾಗೆ ಕಣ್ಣ ಮುಂದೆ ಹಾದು ಹೋದಂತೆ ಅನಿಸಿತು. ಅದರ ಜತೆಗೆ ಸಿಡಿಲು ಹೊಡೆದ ಭಾರೀ ಶಬ್ದ. ಇಬ್ಬರಿಗೂ ಬೆನ್ನ ಮೇಲೆ ಯಾರೋ ಬಲವಾಗಿ ಹೊಡೆದ, ಮುಂದಕ್ಕೆ ನೂಕಿದ ಅನುಭವ. ಒಂದೆರೆಡು ನಿಮಿಷ ಬದುಕಿದ್ದೇವೆ ಎನ್ನುವುದೇ ಗೊತ್ತಾಗದ ಹಾಗೆ ಆಯಿತು. ಪ್ರಸನ್ನ ಕಣ್ಣು ಮುಚ್ಚಿ ಗೋಡೆಗೆ ಒರಗಿದ್ದವನು ಹಾಗೇ ಕೊಂಚ ಪಕ್ಕಕ್ಕೆ ವಾಲಿದ್ದ.

ಮೊದಲು ಮಾತು ಹೊರಟಿದ್ದು ನನ್ನಿಂದ. ಏ ಪ್ರಸನ್ನ ಪ್ರಸನ್ನ ಅಂತ ಅವನನ್ನು ಭುಜ ಹಿಡಿದು ಬಲವಾಗಿ ಅಲುಗಾಡಿಸಿದೆ. ನಿಧಾನಕ್ಕೆ ಕಣ್ಣು ತೆರೆದ, ಉಡುಗಿ ಹೋದ ಧ್ವನಿಯಲ್ಲಿ ಎಲ್ಲಿದ್ದೀವೋ…. ಅಂದ!

ಬೆಟ್ಟದ ಮೇಲೆ ಇದೀವಿ, ಇನ್ನೂ ಬದುಕಿದೀವಿ, ಸತ್ತಿಲ್ಲ ಏಳು ಏಳು ಅಂದೆ. ಎದುರು ಕೂತಿದ್ದ ಅಪ್ಪಾಜಿ ಅವರ ಅನುಭವ ಹೇಳಿದ್ದು ಹೀಗೆ…
ಆಕಾಶದಿಂದ ಶಿವನ ಚಕ್ರ ಜೋಯ್ ಅಂತ ಜೋರಾಗಿ ಕೆಳಗೆ ಬಂತು. ಹೀಗೇ ನನ್ನ ಮುಂದೆ ಹೋಗಿ ಆ ಗೋಡೆಗೆ ಡ್ಯಾಶ್ ಹೊಡೆದು ಪಕ್ಕ ಹೋಯಿತು…. ಅಪ್ಪಾಜಿ ಹೇಳಿಕೆಗೆ ಪುರಾವೆಯಾಗಿ ಕಲ್ಲು ಮಂಟಪದ ಒಂದು ತುದಿ ಕೆಳಗೆ ಬಿದ್ದಿತ್ತು! ಅದು ಹೇಗೋ ಸಾವು ಅಷ್ಟು ಹತ್ತಿರ ಬಂದು ಹೋಗಿತ್ತು!

ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಿಧಾನಕ್ಕೆ ಬೆಟ್ಟ ಇಳಿದು ಕೆಳಗೆ ಬಂದೆವು. ಆರೇಳು ಸಾವಿರ ಅಡಿ ಎತ್ತರದ ಬೆಟ್ಟ ಒಂದು ವಿಶಿಷ್ಟ ಅನುಭವ ಕೊಟ್ಟಿತ್ತು. ಸುಮಾರು ದಿವಸದ ನಂತರ ಬೆಟ್ಟದ ಎತ್ತರ ನಾಲ್ಕೂವರೆ ಸಾವಿರ ಅಡಿ ಎಂದು ತಿಳಿಯಿತು. ಅಷ್ಟು ಸಮೀಪ ಸಿಡಿಲು ಹೊಡೆದಿದೆ, ಕೋರೆ ಮಿಂಚಿನ ಬೆಳಕು ಅಪ್ಪಾಜಿಗೆ ಶಿವನ ಚಕ್ರದ ಹಾಗೆ ಕಂಡಿದೆ ಅಂತ ನಮಗೆ ಅನಿಸಿತು. ಈ ಅನುಭವ ಈಗ ಎಷ್ಟೋ ವರ್ಷಗಳ ನಂತರವೂ ನಿನ್ನೆ ಮೊನ್ನೆ ನಡೆದ ಹಾಗಿದೆ. ಈ ಬೆಟ್ಟ ಹತ್ತಿ ಕೋಡುಗಲ್ಲು ಸುತ್ತು ಹಾಕಿದ ಮತ್ತು ಸಿಡಿಲು ಹೊಡೆದ ಅನುಭವ, ಮೋಡ ಮೈ ಮುತ್ತಿದ ಸೊಗಸು.. ಇವೆಲ್ಲವನ್ನೂ ಸೊಗಸಾಗಿ ನನ್ನ ಗೆಳೆಯರಿಗೆ ಸಮಯ ಸಿಕ್ಕಾಗಲೆಲ್ಲಾ ಹಾವ ಭಾವ ಸಮೇತ ವರ್ಣಿಸುತ್ತಾ ಇದ್ದೆ. ಕೆಲವು ಸ್ನೇಹಿತರು ನನ್ನ ವರ್ಣನೆಯ ಪ್ರಭಾವದಿಂದಲೇ ಅಲ್ಲಿ ಹೋಗಿ ಬೆಟ್ಟ ಹತ್ತಿದ್ದರು!

ಇದೇ ವರ್ಣನೆ ನಟರಾಜನ ಮುಂದೂ ಮಾಡಿದ್ದೆ. ಅವನೂ ಬೆಟ್ಟ ಹತ್ತಿದ, ಕೋಡುಗಲ್ಲು ಸುತ್ತು ಹಾಕಿದ. ಮತ್ತೆ ಸಿಕ್ಕಾಗ ಹೇಳಿದ.. ಇಷ್ಟಕ್ಕೋಸ್ಕರ ಇಲ್ಲಿಗೆ ಬರಬೇಕಾಗಿತ್ತೇ ಅಂತ ಅನಿಸಿತು! ಈಚೆಗೆ ನನಗೂ ಯಾವ ಪುರುಷಾರ್ಥಕ್ಕೆ ಅಷ್ಟು ಸಲ ಬೆಟ್ಟ ಹತ್ತಿದೆವು ಅಂತ ಅನಿಸಿದೆ!

ಮದುವೆಗೆ ಮೊದಲು ನನ್ನ ಹೆಂಡತಿಗೆ ಈ ಬೆಟ್ಟದ ಅನುಭವ ಹೇಳಿದ್ದೆ. ಅವಳು ಬೆಟ್ಟ ಹತ್ತೋಣ, ಬರ್ತೀಯಾ ಎಂದಾಗ ಖುಷಿಯಿಂದ ಅವಳನ್ನು ಕರೆದುಕೊಂಡು ಹೋದೆ. ಅವಳ ಸಂಗಡ ಬೆಟ್ಟ ಹತ್ತಿದ್ದೆ. ಪ್ರಸನ್ನನ ಸಂಗಡ ಪಟ್ಟ ಪ್ರಯಾಸ ಎಲ್ಲವೂ ಮತ್ತೊಮ್ಮೆ ರಿಪೀಟ್ ಆಯಿತು, ಈ ಸಲ “ಆಕಾಶದಿಂದ ಶಿವನ ಚಕ್ರ ಜೋಯ್ ಅಂತ ಜೋರಾಗಿ ಕೆಳಗೆ ಬಂತು. ಹೀಗೇ ನನ್ನ ಮುಂದೆ ಹೋಗಿ ಆ ಗೋಡೆಗೆ ಡ್ಯಾಶ್ ಹೊಡೆದು ಪಕ್ಕ ಹೋಯಿತು….” ಮಾತ್ರ ಪುನರಾವರ್ತನೆ ಆಗಲಿಲ್ಲ. ಈ ಸಲದ ಅನುಭವ ಬೇರೆ. ಹೆಣ್ಣು ಮಕ್ಕಳ ಜತೆ ಬಂದರೆ ಇಂತಹ ಪ್ರಾಬ್ಲಮ್ ಇರುತ್ತೆ ಅಂತ ಗೊತ್ತಾಯಿತು. ಈ ತನಕ ನನ್ನ ಮನಸಿಗೆ ಬರದಿದ್ದ ಪ್ರಾಬ್ಲಂ ಇದು!

ಬೆಟ್ಟದ ಮೇಲೆ ಕೆಳಗೆ ಸುತ್ತ ಮುತ್ತಾ ಒಂದೂ ಲೇಡೀಸ್ ಟಾಯ್ಲೆಟ್ ಇಲ್ಲ ಅಲ್ಲೆಲ್ಲೂ (ಇದು ಆಗಿನ ಪರಿಸ್ಥಿತಿ. ಈಗ ಹೇಗಿದೆಯೋ ತಿಳಿಯದು). ಬೆಟ್ಟ ಇಳಿದು ಡಾಬಸ್ ಪೇಟೆಗೆ ಬಂದರೆ ಅಲ್ಲಿ ಸಹ ಒಂದೂ ಲೇಡೀಸ್ ಟಾಯ್ಲೆಟ್ ಇಲ್ಲವೇ… ದಾಬಸ್ ಪೇಟೆ ಪೊಲೀಸ್ ಸ್ಟೇಶನ್‌ಗೆ ಹೋಗಿ ಅಲ್ಲಿನ ಆಫೀಸರ್ ಅವರ ಹತ್ತಿರ ಟಾಯ್ಲೆಟ್ ಸಮಸ್ಯೆ ವಿವರಿಸಿದೆ. ಅವರು ಪಾಪ ಸಮಸ್ಯೆ ಕೇಳಿ ಸ್ಟೇಶನ್ ಟಾಯ್ಲೆಟ್ ಯೂಸ್ ಮಾಡ್ಕಳಿ ಅಂದರು. ಪೊಲೀಸ್ ಸ್ಟೇಶನ್ ಟಾಯ್ಲೆಟ್ ಉಪಯೋಗಿಸಿದ್ದು … ಈಗಲೂ ಆ ನೆನಪು ಹಸಿರು ಹಸಿರು. ಲೇಡೀಸ್‌ಗೆ ಟಾಯ್ಲೆಟ್ ಪ್ಲೇಸ್ ಇರಬೇಕು ಅನ್ನುವ ಕಲ್ಪನೆ ಆಗ ಇದ್ದಿಲ್ಲ ಅನಿಸುತ್ತೆ! ಅದಕ್ಕಿಂತ ತಮಾಷೆ ಐದಾರು ವರ್ಷಗಳ ಹಿಂದೆ ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಶುರು ಆದಾಗಿನ ಕತೆ. ಮೆಟ್ರೋ ಸ್ಟೇಷನ್ ರೆಡಿ ಆಯ್ತು, ಟ್ರೈನ್ ಸಹ ಶುರು ಆಗುವ ಮೊದಲು ನಮ್ಮ ಎಂ ಎಲ್ ಎ ಒಬ್ಬರು ಅಲ್ಲಿನ ವ್ಯವಸ್ಥೆ ನೋಡಲು ಹೋದರು. ಜತೆಯಲ್ಲಿ ಇದ್ದವರಿಗೆ ಒಂದಕ್ಕೆ ಅವಸರ ಆಯಿತು. ಟಾಯ್ಲೆಟ್ ಹುಡುಕಿದರೆ ಅದೇ ಇಲ್ಲ! ಮೇಲ್ವಿಚಾರಕರನ್ನ ಕೇಳಿದರೆ ಅದರ ವ್ಯವಸ್ಥೆ ಇಲ್ಲ ಅಂತ ಉತ್ತರ ಬಂತು. ಪ್ಲಾನ್ ಮಾಡಿದವರು ಇದರ ಬಗ್ಗೆ ಯೋಚನೆ ಮಾಡಿರಲಿಲ್ಲ ಅಂತ ಕಾಣ್ಸುತ್ತೆ. ಇದು ತುಂಬಾ ದೊಡ್ಡ ಸುದ್ದಿ ಆಯಿತು. ಟಾಯ್ಲೆಟ್ ಇಲ್ಲದೇ ಸ್ಟೇಶನ್ ನಿರ್ಮಾಣ ಆಗಿದೆ.. ಕೊನೆಗೆ ಸಿಬ್ಬಂದಿಗೆ ಅಂತ ಇದ್ದ ಟಾಯ್ಲೆಟ್ ಸಾರ್ವಜನಿಕ ಉಪಯೋಗಕ್ಕೆ ಅಂತ ಬಿಟ್ಟರು. ಯಾವುದೇ ಮೆಟ್ರೋಗೆ ಹೋಗಿ ಟಾಯ್ಲೆಟ್ ಅಲ್ಲೆಲ್ಲೋ ಒಂದು ಮೂಲೆಯಲ್ಲಿ ಇರುತ್ತೆ ಮತ್ತು ಅದನ್ನು ಹುಡುಕಿಕೊಂಡು ಹೋಗುವ ವ್ಯವಧಾನ ಸಹ ಹೆಚ್ಚು ಪ್ರಯಾಣಿಕರಿಗೆ ಇರೋಲ್ಲ…

ಆದರೆ ಈಗ ಅದೇ ಶಿವಗಂಗೆ ಬೆಟ್ಟ ಹತ್ತಬೇಕು ಅಂತ ಪ್ರಯತ್ನ ಮಾಡಿದೆ ಅಂದರೆ ಹತ್ತೇ ಹತ್ತು ಮೆಟ್ಟಲು ಹತ್ತುಕ್ಕೆ ಆಗುತ್ತೋ ಅಥವಾ ಐದು ಮೆಟ್ಟಲಾದರೂ ಹತ್ತುತ್ತಿನೋ ಎನ್ನುವ ಸಂಶಯ ನನ್ನದು… ಕಳೆದ ವರ್ಷ ನನ್ನ ಹೈಸ್ಕೂಲ್ ಗೆಳೆಯ ಹೇಮಚಂದ್ರ ಶಿವಗಂಗೆ ಬುಡದಲ್ಲಿ ಮನೆ ಕಟ್ಟಿಸಿದ, ಗೃಹ ಪ್ರವೇಶಕ್ಕೆ ಹೋಗಿದ್ದೆನಾ, ಆಗ ಬೆಟ್ಟ ಹತ್ತಬೇಕು ಅನ್ನುವ ಯೋಚನೆ ಹುಟ್ಟಿತು. ಯೋಚನೆ ಬಂದಾಗ ಮಧ್ಯಾಹ್ನ ಮೂರಾಗಿತ್ತು, ಅವತ್ತು ಐಡಿಯಾ ಡ್ರಾಪ್ ಮಾಡಿದೆ. ಇನ್ನೂ ಒಂದು ಹತ್ತು ಹದಿನೈದು ವರ್ಷ ಬದುಕಿದ್ದರೆ ಒಂದು ದಿವಸ ಬೆಳಿಗ್ಗೆ ಬೆಳಿಗ್ಗೆ ಶಿವಗಂಗೆಯ ಬುಡ ಸೇರಿ ಈ ಪ್ರಯತ್ನ ಮಾಡೋಣ ಅಂತ ಅಂದುಕೊಂಡಿದ್ದೇನೆ…