ಮೊದಲೇ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದ ನನಗೆ ಈ ಫ್ರಾನ್ಸ್‌ನ ಗುಂಗು ಎಷ್ಟು ಹಿಡಿಯಿತೆಂದರೆ ಕೆಲಸಕ್ಕೆ ಹೋಗುವುದೇ ಬೇಡ ಅನ್ನುವಷ್ಟು! ಆದರೂ ಕೈಯಲ್ಲಿ ಇದ್ದ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಯಾವುದೇ ಚ್ಯುತಿ ಬರದಂತೆ ನಿಗಾ ವಹಿಸಿದ್ದೆ. ವಿದೇಶಕ್ಕೆ ಹೋದರೆ ಹಲವು ತಿಂಗಳು ಬರಲು ಆಗದಲ್ಲ ಅಂತ ಕೆಲವು ಸಂಬಂಧಿಕರ ಮನೆಗೂ ಹೋಗಿ ಬಂದೆವು. ಆದರೂ ನಾವು ವಿದೇಶಕ್ಕೆ ಹೋಗಲಿದ್ದೇವೆ ಅಂತ ಯಾರಿಗೂ ಸಣ್ಣ clue ಕೂಡ ಬಿಟ್ಟು ಕೊಟ್ಟಿರಲಿಲ್ಲ. ಯಾಕಂದರೆ ಇನ್ನೂ ಯಾವುದೂ ನಿಶ್ಚಿತ ಆಗಿರಲಿಲ್ಲವಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯಲ್ಲಿ ಎರಡನೆಯ ಬರಹ

Manager ಗಳು ಒಂತರಹ ಹೆಂಡತಿಯರು ಇದ್ದ ಹಾಗೆ! ನಮ್ಮ ಮುಖದಲ್ಲಿ ಆದ ಸಣ್ಣ ಬದಲಾವಣೆಗಳು ಕೂಡ ಅವರಿಗೆ ಸುಲಭವಾಗಿ ಗೊತ್ತಾಗಿಬಿಡುತ್ತವೆ! ನನ್ನ ಲವಲವಿಕೆಯನ್ನು ಗುರುತಿಸಿದ ವೆಂಕಟ್‌ಗೆ ಹಾಗೇನೂ ಇಲ್ಲವಲ್ಲ ಎಂಬಂತಹ ನೋಟವನ್ನು ಕೊಟ್ಟು ಸುಮ್ಮನಾದೆ.

ವೆಂಕಟ್ office ಗೆ ಬರುತ್ತಿದ್ದುದೆ ಅಪರೂಪ. ಅವರ ಜೊತೆ ನನ್ನ ಮಾತುಕತೆ ಆಗುತ್ತಿದ್ದುದೆಲ್ಲ ಫೋನ್‌ನಲ್ಲೇ ಹೆಚ್ಚು. ಅವರು office ನಲ್ಲಿ ಪ್ರತ್ಯಕ್ಷ ಆಗಿದ್ದಾರೆ ಅಂದರೆ ಸಧ್ಯ ನಮ್ಮ ಪ್ರೊಜೆಕ್ಟ್‌ನಲ್ಲಿ ಏನೂ ಸಮಸ್ಯೆಗಳು ಇಲ್ಲ ಅಂತಲೇ ಅರ್ಥ. ಸಮಸ್ಯೆಗಳು ಎದುರಾದಾಗ ಅವರು ಮತ್ತೆ ಕಾಣೆಯಾಗಿಬಿಡುತ್ತಿದ್ದರು!

ನಮ್ಮ ಪ್ರಾಜೆಕ್ಟ್‌ನಲ್ಲಿ ಯಾವುದಾದರೂ ಭೂತಾಕಾರದ ಸಮಸ್ಯೆಗಳು ಉದ್ಭವಿಸಿದಾಗ, ಯುದ್ಧವೇ ಆಗಿದೆಯೇನೋ ಎಂಬಂತೆ conference call ಗಳು ನಡೆಯುತ್ತಿದ್ದಾಗ ಅವರು ಕೂಡ ಭಾಗವಹಿಸಬೇಕಿರುತ್ತಿತ್ತು.. ವಿಚಿತ್ರವೆಂದರೆ ಯಾವುದೇ ಇಂತಹ ಕರೆಗಳಲ್ಲಿ ಅವರು ಭಾಗವಹಿಸಿದಾಗಲೂ ಅವರು ಡ್ರೈವ್ ಮಾಡುತ್ತ ಟ್ರಾಫಿಕ್‌ನಲ್ಲಿ ಇರುತ್ತಿದ್ದರು. ಹಾಗಂತ ಅವರ ಫೋನ್ ಮುಖಾಂತರ ಕೇಳುತ್ತಿದ್ದ ಕರ್ಕಶ ಶಬ್ಧಗಳಿಂದ ತಿಳಿಯುತ್ತಿತ್ತು. ಅವರ ಫೋನಿನ Signal ಕೂಡ ಎಷ್ಟೋ ಸಲ ಸರಿ ಇರುತ್ತಿರಲಿಲ್ಲ. ಅಥವಾ ಅಂತಹ ಪರಿಸ್ಥಿತಿ ಅವರೆ ಸೃಷ್ಟಿ ಮಾಡುತ್ತಿದ್ದರಾ!? ಸಮಸ್ಯೆಗಳ ಕುರಿತು ಯಾರಾದರೂ ಅವರಿಗೆ ಪ್ರಶ್ನೆ ಕೇಳಿದ ಕೂಡಲೇ ಅವರ ಫೋನ್ disconnect ಆಗುತ್ತಿತ್ತು! ವೆಂಕಟ್.. ವೆಂಕಟ್.. ಅಂತ ಮೀಟಿಂಗ್‌ನಲ್ಲಿ ಉತ್ತರಕ್ಕಾಗಿ ಎಲ್ಲರೂ ಕೂಗುತ್ತಿದ್ದರೆ ಅವರಿಂದ ಯಾವುದೇ ಉತ್ತರ ಬರುತ್ತಿರಲಿಲ್ಲ. ಡ್ರೈವ್ ಮಾಡುತ್ತಿರುವ ಕಾರಣ ಅವರಿಗೆ ಸಿಗ್ನಲ್ ಸಮಸ್ಯೆ ಇದೆ, ಅದಕ್ಕಾಗಿ ಹೀಗೆ ಆಗಿರಬೇಕು ಅಂತ ಅಂದುಕೊಂಡು ಎಲ್ಲರೂ “ವೆಂಕಟ್ ನೋ…. ಹಿ ಇಸ್ always ಲೈಕ್ ದಟ್ ಒನ್ಲಿ” ಅಂತ ನಕ್ಕು ಸುಮ್ಮನಾಗುತ್ತಿದ್ದರು. ಈಗ ಪ್ರಶ್ನೆಗೆ ಉತ್ತರಿಸುವ ಸರದಿ ನನ್ನದಾಗುತಿತ್ತು!

ಐಟಿ ಪ್ರಪಂಚದ ಹಲವಾರು ವಿಚಿತ್ರಗಳಲ್ಲಿ ಇದು ಕೂಡ ಒಂದು. ಇಲ್ಲಿ ಕೆಲಸ ಮಾಡುವವರಿಗೆ ಜವಾಬ್ದಾರಿ ಕೊಡುತ್ತಾ ಹೋಗುತ್ತಾರೆ. ಕೆಲಸ ಕಳ್ಳರು ಆರಾಮವಾಗಿ ಇರುತ್ತಾರೆ. ಅವರ ತಂಟೆಗೆ ಯಾರೂ ಹೋಗೋದಿಲ್ಲ! ಯಾಕಂದರೆ ಅವರು ಹಾಗೇನೇ ಅಂತ ಎಲ್ಲರೂ ಕೈ ಚೆಲ್ಲಿ ಬಿಟ್ಟಿರುತ್ತಾರೆ! ಐಟಿ ಒಂದೇ ಅಲ್ಲ ಇದು ಪ್ರಪಂಚದಲ್ಲಿ ಎಲ್ಲಾ ಕಡೆಗೂ ಅನ್ವಯಿಸುತ್ತದೇನೋ.

ವೆಂಕಟ್ ತುಂಬಾ ತಮಾಷೆ ಮಾಡುವ ವ್ಯಕ್ತಿ ಕೂಡ ಆಗಿದ್ದರು. ಅವರ ಉಡುಗೆ ತೊಡುಗೆಗಳು, ನಡೆ ನುಡಿಗಳು ಒಬ್ಬ ಟಿಪಿಕಲ್ ಕಾರ್ಪೊರೇಟ್ manager ತರಹ ಇದ್ದವು. ಬಹುಶಃ ಅವರು ಬಹಳ ವರ್ಷಗಳಿಂದ ಆ ಹುದ್ದೆಯಲ್ಲಿ ಇದ್ದು ಹಾಗೆ ಆಗಿದ್ದರೋ ಅಥವಾ ಹಾಗೆ ಇದ್ದುದಕ್ಕೆ ಒಳ್ಳೆಯ ಪೊಸಿಷನ್‌ನಲ್ಲಿ ಇದ್ದರೋ ಗೊತ್ತಿಲ್ಲ. ಒಟ್ಟಾರೆಯಾಗಿ ತುಂಬಾ cool ಮ್ಯಾನೇಜರ್ ಆಗಿದ್ದರು. ಅವರದು ಬೆಂಗಳೂರಿನಲ್ಲಿ ಮೂರು, ನಾಲ್ಕು flat ಗಳು ಇದ್ದವು. ಅವನ್ನೆಲ್ಲ ಬಾಡಿಗೆಗೆ ಕೊಟ್ಟಿದ್ದರು. ಏಳು ಸೀಟಿನ ದೊಡ್ಡ ಕಾರು ಅವರ ಬಳಿ ಇತ್ತು. ಆಫೀಸ್‌ಗೆ ಬಂದರೆ ಅದರಲ್ಲಿ ಒಬ್ಬರೇ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಬೆಂಗಳೂರಿನ traffic ಸುಮ್ಮ ಸುಮ್ಮನೆ ಬೆಳೆದಿದೆಯೇ ಮತ್ತೆ? ಅವರು ಬಹುಭಾಷಾ ಪಾರಂಗತರು ಆಗಿದ್ದರು. ಅವರಿಗೆ ಆಂಗ್ಲ ಭಾಷೆಯ ಜೊತೆಗೆ ತೆಲುಗು, ತಮಿಳು, ಕನ್ನಡ ನಿರರ್ಗಳವಾಗಿ ಮಾತಾಡಲು ಬರುತ್ತಿತ್ತು. ಕೆಲವು ಐಟಿ ಕಂಪನಿಗಳಲ್ಲಿ ಈ ಒಂದು ಕೌಶಲ್ಯ ತುಂಬಾ ಮುಖ್ಯ ಆಗುತ್ತದೆ. ಅವರು ಹೇಳುತ್ತಿದ್ದರು “ಗುರು, ಈ ಕಂಪನಿಯಲ್ಲಿ survive ಆಗಬೇಕು ಅಂದರೆ ನೀವು ತಮಿಳು ಕಲಿಯಬೇಕು”

ಯಾಕಂದರೆ ಅಲ್ಲಿನ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದವರೆಲ್ಲ ತಮಿಳು ಭಾಷಿಕರು. ಅರೆ ಇದ್ಯಾವ ಮಾನದಂಡ ಅನಿಸಿತು. ಕನ್ನಡದವರು ಕೂಡ ತಮ್ಮ ಪ್ರಾಬಲ್ಯವಿರುವ company ಗಳಲ್ಲಿ ಹೀಗೊಂದು rule ಮಾಡಿದ್ದರೆ ಹೆಚ್ಚು ಹೆಚ್ಚು ಜನರು ಕನ್ನಡ ಕಲಿಯುತ್ತಿದ್ದರಲ್ಲವೆ? ಆದರೆ ನಮ್ಮವರು ಮೊದಲು ತಮ್ಮ ತಮ್ಮಲ್ಲಿ ಕನ್ನಡ ಮಾತಾಡಿದರೆ ಅದೇ ಸಾಕಾಗಿತ್ತು!

ಅದೂ Survive ಆಗೋದಕ್ಕೆ ತಮಿಳು ಕಲಿಬೇಕಂತೆ, Success ಇಲ್ಲಿ ಯಾರಿಗೂ ಬೇಕಿಲ್ಲ. ಅಲ್ಲಿ ಬದುಕಿ ಉಳಿಯುವುದಕ್ಕೆ ನಾನು ತಮಿಳು ಕಲಿಯುವುದೇ? No way! ಅದಕ್ಕಿಂತ ಮೇಲಾಗಿ ನನಗೆ ಈ ಕಂಪನಿ ಬಿಟ್ಟರೇನೆ ಬದುಕುತ್ತೇನೆ ಅಂತ ಅನಿಸಿತ್ತಲ್ಲ!

*****

ಮೊದಲೇ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದ ನನಗೆ ಈ ಫ್ರಾನ್ಸ್‌ನ ಗುಂಗು ಎಷ್ಟು ಹಿಡಿಯಿತೆಂದರೆ ಕೆಲಸಕ್ಕೆ ಹೋಗುವುದೇ ಬೇಡ ಅನ್ನುವಷ್ಟು! ಆದರೂ ಕೈಯಲ್ಲಿ ಇದ್ದ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಯಾವುದೇ ಚ್ಯುತಿ ಬರದಂತೆ ನಿಗಾ ವಹಿಸಿದ್ದೆ. ವಿದೇಶಕ್ಕೆ ಹೋದರೆ ಹಲವು ತಿಂಗಳು ಬರಲು ಆಗದಲ್ಲ ಅಂತ ಕೆಲವು ಸಂಬಂಧಿಕರ ಮನೆಗೂ ಹೋಗಿ ಬಂದೆವು. ಆದರೂ ನಾವು ವಿದೇಶಕ್ಕೆ ಹೋಗಲಿದ್ದೇವೆ ಅಂತ ಯಾರಿಗೂ ಸಣ್ಣ clue ಕೂಡ ಬಿಟ್ಟು ಕೊಟ್ಟಿರಲಿಲ್ಲ. ಯಾಕಂದರೆ ಇನ್ನೂ ಯಾವುದೂ ನಿಶ್ಚಿತ ಆಗಿರಲಿಲ್ಲವಲ್ಲ.

ಹಾಸಿನಿ ಅವತ್ತು ಮತ್ತೆ ಕರೆ ಮಾಡಿದರು. “ಗುರು ಇವತ್ತು ನಿಮ್ಮ appointment letter ನೋಡಿಕೊಂಡು ಬಂದೆ. ಸುಮಾರು ಇಪ್ಪತ್ತೈದು ಜನರದು ready ಆಗಿದೆ. ಎಲ್ಲರೂ ನಿಮ್ಮ team ನಲ್ಲಿ ಇರುವವರು. ಕೆಲವೊಂದು ಸ್ಯಾಲರಿ ಗಳಲ್ಲಿ changes ಇತ್ತು, ಅದಕ್ಕೆ ಸ್ವಲ್ಪ ತಡ ಆಗ್ತಾ ಇದೆ” ಅಂದರು। ಅಪಾಯಿಂಟ್ಮೆಂಟ್ ಲೆಟರ್ ಇನ್ನೂ ನೋಡಿಲ್ಲ, ನನ್ನ ಟೀಮ್ ಅಂತೆ, ನಾನೇ ಅವರನ್ನು ಇನ್ನೂ ಭೇಟಿಯಾಗಿಲ್ಲ. ಆದರೂ ರೋಮಾಂಚನ! Letter ಯಾವಾಗ ನನ್ನ ಕೈ ಸೇರುತ್ತೋ ಯಾವಾಗ ಈಗಿದ್ದ ಕಂಪೆನಿಗೆ ರಾಜೀನಾಮೆ ನೀಡುತ್ತೇನೋ ಅಂತ ನಾನು ಕಾತುರನಾಗಿದ್ದೆ, ಸಂಯಮದಿಂದ ಕಾದಿದ್ದೆ.

ಅದೂ Survive ಆಗೋದಕ್ಕೆ ತಮಿಳು ಕಲಿಬೇಕಂತೆ, Success ಇಲ್ಲಿ ಯಾರಿಗೂ ಬೇಕಿಲ್ಲ. ಅಲ್ಲಿ ಬದುಕಿ ಉಳಿಯುವುದಕ್ಕೆ ನಾನು ತಮಿಳು ಕಲಿಯುವುದೇ? No way! ಅದಕ್ಕಿಂತ ಮೇಲಾಗಿ ನನಗೆ ಈ ಕಂಪನಿ ಬಿಟ್ಟರೇನೆ ಬದುಕುತ್ತೇನೆ ಅಂತ ಅನಿಸಿತ್ತಲ್ಲ!

ಒಂದಿಷ್ಟು ದಿನಗಳು ಕಳೆದವು. ಅವತ್ತೊಂದು ವೀಕೆಂಡು ನಮ್ಮ ಕುಟುಂಬದ ಸದಸ್ಯರ ಜೊತೆಗೆ ಮೈಸೂರಿಗೆ ಹೊರಟಿದ್ದೆವು. ಸಾಫ್ಟವೇರ್ ಇಂಜಿನಿಯರ್‌ಗಳು ಬದುಕುವುದೇ ವೀಕೆಂಡುಗಳಲ್ಲಿ! ವಾರವಿಡಿ ಕೆಲಸಕ್ಕಿಂತ ಜಾಸ್ತಿ ಮೀಟಿಂಗುಗಳು, ರಾಕ್ಷಸರಂತೆ ಕಾಡುವ severity one issue ಗಳು, ನಮ್ಮನ್ನು ಕಾಡಿಸುವುದು ಬಿಟ್ಟು ಬೇರೆ ಕೆಲಸವೆ ಇಲ್ಲ ಅನ್ನುವ ಮ್ಯಾನೇಜರ್‌ಗಳ ಕಿರುಕುಳಗಳು, ಕಂಪೆನಿಯ CEO ವರೆಗೆ ಹೋಗಿ ತಲುಪುವ escalation ಗಳು.. ಇವೆಲ್ಲದರ ನಡುವೆ ವಿಲಿ ವಿಲಿ ಒದ್ದಾಡಿ ಹೇಗೋ ಜೀವ ಹಿಡಿದುಕೊಂಡು, ಶುಕ್ರವಾರ ಬರುತ್ತಲೆ ನಮಗೆಲ್ಲ ಮತ್ತೆ ಜೀವ ಬರುತ್ತಿತ್ತು. ಹೊಸ ಹುರುಪು ಮೂಡುತ್ತಿತ್ತು. ಶುಕ್ರವಾರದ ದಿನ ನಮಗೆ ಎಲ್ಲ ದೇವರುಗಳೂ ನೆನಪಾಗುತ್ತಿದ್ದರು. ಯಾವುದೇ issue ಗಳು ಶುಕ್ರವಾರದ ಆಚೆಗೆ ನಮ್ಮ ಕೈಮೀರಿ ಹೋಗೋದು ಬೇಡ ದೇವರೇ ಅಂತ ಪ್ರಾರ್ಥನೆ ಮಾಡುತ್ತಿದ್ದೆವು. ಯಾಕೆಂದರೆ ಒಂದು ವೇಳೆ ಶುಕ್ರವಾರ ಸಮಸ್ಯೆ ಬಗೆಹರಿಯದಿದ್ದರೆ ಅದು ನಮ್ಮ ಶನಿವಾರ ರವಿವಾರಗಳನ್ನು ನುಂಗಿ ನೀರು ಕುಡಿಯುತ್ತಿತ್ತಲ್ಲ!

ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ನಮಗೆಲ್ಲ ಶುಕ್ರವಾರ ಹಾಗೂ ಶನಿವಾರಗಳು ತುಂಬಾ ಖುಷಿ ಕೊಡುವ ದಿನಗಳು. ರವಿವಾರ ಬಂತೆಂದರೆ ಅಯ್ಯೋ ನಾಳೆ ಸೋಮವಾರ ಎಂಬ ವಿಷಾದ ಮೂಡುತ್ತಿತ್ತು.

ಮೈಸೂರಿಗೆ ಅರ್ಧ ದಾರಿಯಲ್ಲಿ ಇದ್ದಾಗ ಮತ್ತೆ ಹಾಸಿನಿಯವರ ಫೋನ್ ಬಂತು. ಕಾರನ್ನು ಪಕ್ಕಕ್ಕೆ ನಿಲ್ಲಿಸಿದೆ.

“ಗುರು, ನಿಮ್ಮ ವೀಸಾ process ಮಾಡ್ತಾ ಇದಾರೆ. ನಿಮ್ಮದು, ಹೆಂಡತಿಯದು ಹಾಗೂ ಮಗಳದು ಒಂದಿಷ್ಟು documents urgent ಆಗಿ ಬೇಕು. ಮತ್ತೆ 25000 ವೀಸಾ ಪ್ರೊಸೆಸಿಂಗ್ fees ಈಗಲೇ transfer ಮಾಡಿ ಅಂದರು”

ಅರೆ ಇನ್ನೂ appointment letter ಕೈಗೆ ಸಿಕ್ಕಿಲ್ಲ ಅದು ಹೇಗೆ visa process ಮಾಡಿಸಲಿ? ಅದೂ ಅಲ್ಲದೆ ಅದ್ಯಾಕೆ Visa ಗೆ ನಾನು ದುಡ್ಡು ಕೊಡಬೇಕು? ಅದೊಂದು ಪ್ರತಿಷ್ಟಿತ ಕಂಪೆನಿ, ಅವರು ವೀಸಾ ಕೂಡ ಅವರ ಖರ್ಚಿನಲ್ಲೇ ಮಾಡೋದು. ಹಾಗಂತ ನನ್ನ ಸಂಶಯ ಹೊರಹಾಕಿದ ಕೂಡಲೇ ಅವರಿಗೆ ಸ್ವಲ್ಪ ಬೇಜಾರಾಯ್ತು, “ಏನ್ ಗುರು ನನ್ನ ಮೇಲೆ ಅಷ್ಟೂ ನಂಬಿಕೆ ಇಲ್ಲವೇ ನಿಮಗೆ? Director ಜೊತೆಗೆ ಮೊದಲನೇ ದಿನದಿಂದ touch ಅಲ್ಲಿ ಇದ್ದೀನಿ. ನಿಮ್ಮ appointment letter ಕಣ್ಣಾರೆ ನೋಡಿದ್ದೇನೆ. ನಿಮಗೆ ಇಂತಹ offer ಕನಸಿನಲ್ಲಿ ಕೂಡ ಕಲ್ಪನೆ ಮಾಡೋಕೆ ಸಾಧ್ಯ ಇಲ್ಲ. ಒಂದೆರಡು ದಿನ ತಡ ಆಗಿದೆ ಅಷ್ಟೇ.” ಅಂತ ಅವರು ಸಣ್ಣ ದನಿಯಲ್ಲಿ ಹೇಳಿದಾಗ ನನಗೆ ನಾಚಿಕೆಯಾಯಿತು. ಛೇ ಅವರು ನನ್ನ ಕೆಲಸದ ಬಗ್ಗೆ ಇಷ್ಟೊಂದು ಕಷ್ಟ ಪಡುತ್ತಿರುವಾಗ ನಾನು ಅವರ ಮೇಲೆ ಸಂಶಯ ಪಟ್ಟೆನಲ್ಲ ಅಂತ ಬೇಜಾರಾಯ್ತು.

“ಬೇಜಾರು ಮಾಡಿಕೋಬೇಡಿ ಹಾಸಿನಿ, ನಿಮ್ಮ ಬಗ್ಗೆ ಖಂಡಿತ ನನಗೆ ನಂಬಿಕೆ ಇದ್ದೇ ಇದೆ. ಆದರೆ ನನಗೆ ಕೆಲಸ offer ಮಾಡುವವರನ್ನು ನಾನು ಇನ್ನೂ ಭೇಟಿ ಕೂಡ ಆಗಿಲ್ಲ. ಹೀಗಾಗಿ ನನಗೆ ಸ್ವಲ್ಪ ಆತಂಕ ಆಯ್ತು” ಅಂತ ಹೇಳಿ ಅವಳು ಹೇಳಿದ account ಗೆ 25000 ದುಡ್ಡು ಹಾಕಿದೆ. ಹಾಗೆಯೇ ನಮ್ಮ ಪ್ರವಾಸವನ್ನು ಮುಂದುವರಿಸಿ ಮೈಸೂರಿನಲ್ಲಿ ಸುತ್ತಾಡಿಕೊಂಡು, ಸ್ನೇಹಿತರನ್ನು ಭೇಟಿಯಾಗಿ ವಾಪಸ್ಸು ಬೆಂಗಳೂರಿಗೆ ಬಂದೆವು.

*****

ಹಾಗೆಯೇ ಕೆಲವು ದಿನಗಳು ಕಳೆದವು. ಹಾಸಿನಿಯವರಿಂದ ಯಾವುದೇ ಕರೆಗಳು ಬರದೆ ಹೋದಾಗ ನಾನು ಸ್ವಲ್ಪ ಯೋಚನೆಗೆ ತೊಡಗಿದೆ. ನನ್ನ ಸಂಯಮವನ್ನು ಅವರು ಪರೀಕ್ಷೆ ಮಾಡುತ್ತಿದ್ದಾರೆ ಅನಿಸತೊಡಗಿತು. ಒಂದ್ಯಾವುದೋ ಗುಂಗು ತಲೆಯಲ್ಲಿ ಹೊಕ್ಕಾಗ ಬೇರೆ ಎಲ್ಲವೂ ಗೌಣ ಅನಿಸುತ್ತದೆ. ಅದು ಆಗದೆ ಹೋದಾಗ ನಿರಾಸೆ ಮೂಡತೊಡಗುತ್ತದೆ. ಅವರಿಗೆ ನಾನೇ ಕರೆ ಮಾಡಿದೆ. ಆದರೆ ಅದನ್ನು ತುಂಡರಿಸಿದರು. ಕೆಲಸದಲ್ಲಿರಬಹುದು ಅಂತ ಸುಮ್ಮನಾದೆ.

ಈಗ ನನ್ನ ಮನೆಯ manager ಸರದಿ! ನನ್ನ ಹೆಂಡತಿ ನನ್ನನ್ನು ಕೆಲಸದ ವಿಷಯ ಏನಾಯ್ತು, ಯಾವಾಗ ಹೋಗೋದು ಅಂತ ವಿಚಾರಿಸಲು ತೊಡಗಿದಳು. ಅವಳಿಗೆ ವಿದೇಶಕ್ಕೆ ಹೋಗುವ ಉತ್ಸಾಹಕ್ಕಿಂತ ಅಲ್ಲಿಗೆ ಹೋಗುವುದು ಅಂತ ಆದರೆ ಎಲ್ಲ ಪ್ಯಾಕಿಂಗ್ ಶುರು ಮಾಡಬೇಕಲ್ಲ ಎಂಬ ದೊಡ್ಡ ಜವಾಬ್ದಾರಿಯ ಚಿಂತೆ! ಫ್ರಾನ್ಸ್ ನಲ್ಲಿ ತುಂಬಾ ಕಡೆ ಚಳಿ ಜಾಸ್ತಿ ಇರುತ್ತೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು. ಅದೆಲ್ಲ ಕೊನೆಗೆ ಅವಳ ತಲೆಗೆ ಬರುವುದು. ಹೀಗಾಗಿ ಅವಳ ಆತಂಕ ಸಹಜವೇ ಆಗಿತ್ತು. ಯಾವಾಗ ಹೋಗುವುದು ಇರಲಿ ಫ್ರಾನ್ಸ್ ನಲ್ಲಿ ಎಲ್ಲಿಗೆ ಹೋಗೋದು ಅಂತ ಕೂಡ ಇನ್ನೂ ಗೊತ್ತಿರಲಿಲ್ಲ. ಇಷ್ಟೊಂದು ಅಂಧಕಾರದಲ್ಲಿ ಈ ಕೆಲಸಕ್ಕೆ ಒಪ್ಪಿಕೊಂಡೆನಲ್ಲ ಅಂತ ನನ್ನ ಮೇಲೆ ನನಗೆ ಕೋಪ ಬಂತು.

ಅಂತೂ ಅವತ್ತು ಹಾಸಿನಿಯ ಕರೆ ಬಂತು.
“ಏನ್ರೀ ಮೇಡಂ ನೀವೇ ಫ್ರಾನ್ಸ್‌ಗೆ ಹೋಗಿಬಿಟ್ರ ಅಂದುಕೊಂಡೆ. ಏನು ಸುದ್ದಿನೆ ಇಲ್ಲ?” ಅಂತ ತಮಾಷೆ ಮಾಡಿದೆ.

“ಗುರು, sorry…. ನಾನು ಮೋಸ ಹೋದೆ ಕಣ್ರೀ.. ” ಅಂದರು ಹಾಸಿನಿ.

(ಮುಂದುವರಿಯುವುದು..)
 “ಅಮೆರಿಕದಲ್ಲಿ ಕುರ್ತಕೋಟಿ” ಮೊದಲ ಕಂತು