ನಮಗೆ ಅಗತ್ಯವಿಲ್ಲದ ಪದಗಳ ಬಳಕೆಯ ವಿಷಯದಲ್ಲಿ ಸರಿ. ಆದರೆ ದಿನನಿತ್ಯದ ವ್ಯವಹಾರದಲ್ಲಿ ಬಳಸುವ, ನಾವು ಉಪಯೋಗಿಸುವ ವಸ್ತುಗಳ ವಿಷಯವೇ ಬೇರೆ. ಅನೇಕ ಪದಗಳನ್ನು ಕನ್ನಡದಲ್ಲಿ ಹೇಳಲು ಕಷ್ಟಪಡುತ್ತೇವೆ. ಯಾಕೆಂದರೆ ನಮಗೆ ಅವೆಲ್ಲ ಮರೆತೇ ಹೋಗುತ್ತಿವೆ. ಇಂಗ್ಲಿಷ್‌ ಪದಗಳು ಆ ಸ್ಥಾನವನ್ನು ಆಕ್ರಮಿಸಿವೆ. ಉಚಿತ, ಖಚಿತ, ರಿಯಾಯಿತಿ, ಮುಂಗಡ, ಸಮಸ್ಯೆ, ಪರಿಹಾರ, ಸಮಾಲೋಚನೆ, ಗ್ರಂಥಾಲಯ, ಅಂಗಡಿ ಮುಂತಾದ ಸರಳ ಪದಗಳನ್ನು ನೆನಪಿಸಿಕೊಳ್ಳಲು ತಿಣುಕಾಡುತ್ತೇವೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತನೆಯ ಕಂತಿನಲ್ಲಿ ದಿನನಿತ್ಯ ಕನ್ನಡ ಭಾಷೆಯ ಬಳಸುವಿಕೆಯ ಕುರಿತ ಬರಹ ನಿಮ್ಮ ಓದಿಗೆ

ಯಾರೋ ಕೇಳುತ್ತಿದ್ದರು ನವೆಂಬರ್‌ ತಿಂಗಳ ಕನ್ನಡ ಪ್ರೇಮ ಎಂದರೇನು? ಅಂತ. ನಮ್ಮ ರಾಜ್ಯ ಅಸ್ತಿತ್ವಕ್ಕೆ ಬಂದ ನೆನಪಿನಲ್ಲಿ ಪ್ರತಿವರ್ಷವೂ ಒಂದಿಷ್ಟು ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನವೆಂಬರ್‌ ಒಂದನೇ ತಾರೀಖಿನಂದು ಎಲ್ಲೆಲ್ಲೂ ಕನ್ನಡ ಧ್ವಜಗಳ ಭರಾಟೆ, ಭಾಷೆಯ ಬಗೆಗಿನ ಭಾವನಾತ್ಮಕ ಮಾತುಗಳ ಮಹಾಪೂರವೇ. ಅಷ್ಟೆ ಅಲ್ಲ, ಯಾರದೇ ಸ್ಟೇಟಸ್‌ ನೋಡಿದರೂ ಅಲ್ಲಿ ಕನ್ನಡ ಕವಿಗಳ ಕವನಗಳ ಸಾಲುಗಳ ವಿಜೃಂಭಣೆ. ಇಷ್ಟೊಂದು ಕನ್ನಡಾಭಿಮಾನ ಈಗಲೂ ಉಳಿದಿದೆ ಎಂದು ಕೆಲವೊಮ್ಮೆ ಅನಿಸುತ್ತದೆ. ಆಗೆಲ್ಲ ನೆನಪಾಗುತ್ತದೆ ನಾವು ಚಿಕ್ಕವರಿದ್ದಾಗಿನ ದಿನಗಳು.

ಐವತ್ತು, ಅರವತ್ತರ ದಶಕಗಳಲ್ಲಿ ನಮ್ಮೂರಿನ ಮಂದಿಗೆ ಕನ್ನಡ ಭಾಷೆಯನ್ನು ಹೊರತುಪಡಿಸಿದರೆ, ತುಸುಮಟ್ಟಿಗೆ ಕೊಂಕಣಿ ಭಾಷೆಯನ್ನು ಕೇಳಿ ಗೊತ್ತಿತ್ತು. ನಾವು ಆಡುತ್ತಿದ್ದ ಮಾತುಗಳಲ್ಲಿ ಇಂಗ್ಲಿಷ್‌ ಪದಗಳು ತೀರ ಕ್ವಚಿತ್ತಾಗಿದ್ದವು. ನಾನಾಗ ಮೂರನೆಯ ತರಗತಿಯಲ್ಲಿದ್ದೆ ಒಂದು ದಿನ ನನ್ನ ಎರಡನೆಯ ಅಣ್ಣ ʻನೀನು ಗರ್ಲಾ ಬಾಯ್‌ಆ? ಅಂತ ಕೇಳಿದ್ದ. ಹೊಸ ಪದವನ್ನು ಕೇಳಿ ಗೊಂದಲವಾಗಿತ್ತು. ೧೯೬೪ನೆಯ ಇಸವಿ. ಹಿಂದಿ ಪರೀಕ್ಷೆ ಬರೆಯಲೆಂದು ಹಿಂದೆ ಮುಂಬಯಿ ಕರ್ನಾಟಕದ ಭಾಗವಾಗಿದ್ದ ಬನವಾಸಿಗೆ ಹೋಗಿದ್ದೆ. ನನ್ನ ಮಾತಿನಲ್ಲಿ ನುಸುಳಿದ್ದ ಯಾವುದೋ ಒಂದು ಇಂಗ್ಲಿಷ್‌ ಪದವನ್ನು ಕೇಳಿ ನನ್ನ ಸೋದರತ್ತೆಯ ಮೊಮ್ಮಕ್ಕಳು ಬೆರಗಾಗಿದ್ದರು. ಹಳೆ ಮೈಸೂರು ಭಾಗದ ನಾವು ಪ್ರಾಥಮಿಕ ಶಾಲೆಗೂ ಸ್ಕೂಲು ಎನ್ನುತ್ತಿದ್ದೆವು. ಅವರ ದೃಷ್ಟಿಯಲ್ಲಿ ಸ್ಕೂಲು ಎಂದರೆ ಪ್ರೌಢಶಾಲೆ. ಏಳನೆಯ ತರಗತಿವರೆಗಿನದು ಕನ್ನಡಶಾಲೆ. ನಮಗೆ ಶಾಲೆಯಲ್ಲಿ ಕಲಿಸುವವರು ಮೇಷ್ಟ್ರು. ಅವರಿಗೆ ಗುರೂಜಿ ಮತ್ತು ಅಕ್ಕೋರು. ಉತ್ತರ ಕನ್ನಡದಲ್ಲಿ ಈಗಲೂ ಕನ್ನಡ ಶಾಲೆಯ ಮೇಡಂದಿರನ್ನು ಅಕ್ಕೋರು ಎಂದೇ ಕರೆಯುವ ರೂಢಿ ಇದೆ. ಹಿಂದೆ ಕಾನ್ವೆಂಟ್‌ಗಳಲ್ಲಿ ಮಹಿಳಾ ಶಿಕ್ಷಕಿಯರನ್ನು ಸಿಸ್ಟರ್‌ ಎನ್ನಲಾಗುತ್ತಿತ್ತು. ಅದರ ಕನ್ನಡಾನುವಾದ ಅಕ್ಕೋರು.

ನಾವು ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಪ್ರಾಥಮಿಕ ತರಗತಿಯ ಮಕ್ಕಳಿಗೆ ಪುಸ್ತಕದಲ್ಲಿ ಬರೆಯುವ ಅವಕಾಶ ಇರಲಿಲ್ಲ. ನಾವು ಬರೆಯುತ್ತಿದ್ದುದು ಪಾಟಿಯಲ್ಲಿ. ಅದರ ಮೇಲೆ ಬಳಪದಿಂದ ಬರೆಯಬೇಕಿತ್ತು. ೧೯೭೦ರಲ್ಲಿ ನಾನು ಮೈಸೂರಿಗೆ ಓದಲೆಂದು ಬಂದಾಗ ಇಲ್ಲಿನ ಜನರಿಗೆ ಪಾಟಿಯ ಹೆಸರೇ ಗೊತ್ತಿರಲಿಲ್ಲ. ಅದು ಸ್ಲೇಟ್‌ ಆಗಿತ್ತು. ಹಾಗಂತ ಪಾಟಿಚೀಲ ಎನ್ನುತ್ತಿದ್ದರು. ಪಾಟಿ ಹಾಕುತ್ತಿದ್ದ ಚೀಲ ಎಂದರೆ ಅವರಿಗೆ ಆಶ್ಚರ್ಯ. ನಾವು ತರಗತಿ ಎನ್ನುವುದಕ್ಕೆ ಕೆಲವು ಕಡೆ ಇಯತ್ತೆ ಎನ್ನುವ ಪದ ಬಳಕೆಯಲ್ಲಿತ್ತು/ಇದೆ. ಉದಾ: ಪಠ್ಯಪುಸ್ತಕದ ಮೇಲೆ ಕನ್ನಡ ಮೂರನೆ ತರಗತಿ ಎನ್ನುವುದರ ಬದಲು ಕನ್ನಡ ಮೂರನೆಯ ಇಯತ್ತೆ ಎಂದು ಬರೆಯಲಾಗುತ್ತಿತ್ತು. ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ಅಮೆರಿಕದಲ್ಲಿದ್ದ ಒಂದು ಮಗುವಿನ ಹತ್ತಿರ ನೀನು ಯಾವ ಕ್ಲಾಸು ಎಂದು ಕೇಳಿದಾಗ ನಾನು ಎರಡನೆಯ ಇಯತ್ತೆ ಎಂದಿದ್ದಳು. ಅವಳು ಆಗಷ್ಟೆ ಅವಳ ಅಜ್ಜನ ಮನೆ ಶಿರಸಿಯ ಸಮೀಪದ ಹಳ್ಳಿಯಿಂದ ಹಿಂದಿರುಗಿದ್ದಳು.

ನಾವೀಗ ನಮ್ಮ ಗಮನಕ್ಕೆ ಬಾರದಂತೆ ದಿನನಿತ್ಯದ ಬಳಕೆಯ ಪದಗಳಿಗೆ ಇಂಗ್ಲಿಷ್‌ ಪದಗಳನ್ನು ಬಳಸುತ್ತಿದ್ದೇವೆ. ಎರಡು ದಶಕಗಳ ಈಚೆಗೆ ಜನಿಸಿದ ಮಕ್ಕಳಿಗೆ ಹುರುಳಿಕಾಯಿ ಎಂದರೆ ಏನು ಎನ್ನುತ್ತಾರೆ. ಅದೇ ರೀತಿ ಗಜರಿಗಡ್ಡೆ, ಹೂಕೋಸು, ಗಡ್ಡೆಕೋಸು, ಎಲೆಕೋಸು, ದಪ್ಪಮೆಣಸಿನಕಾಯಿ ಹೀಗೆ ಎಲ್ಲವನ್ನು ಮರೆಯುತ್ತ ಬಂದಿದ್ದೇವೆ. ಸದ್ಯಕ್ಕೆ ಹಳ್ಳಿ ನಗರ ಎನ್ನದೆ ಎಲ್ಲ ಕಡೆ ಸೊಪ್ಪುಗಳ ಹೆಸರು ಚಾಲ್ತಿಯಲ್ಲಿವೆ. ಒಂದು ಮಾರು ಹೂವಿಗೆ ಅಥವಾ ಮೊಳಕ್ಕೆ ಇಷ್ಟು ಎಂದು ಹೇಳುತ್ತಿದ್ದ ಹೂವು ಈಗ ಮೀಟರ್‌ ಲೆಕ್ಕದಲ್ಲಿ ಸಿಗುತ್ತಿದೆ. ಒಂದು ಭಾಷೆಯನ್ನು ಉಳಿಸಿಕೊಳ್ಳುವುದು ಅಂದರೆ ನಾವು ದಿನನಿತ್ಯದ ಬಳಕೆಯ ಪದಗಳನ್ನು ಉಳಿಸಿಕೊಂಡರೆ ಮಾತ್ರ ಎನ್ನುವ ಮಾತಿದೆ. ಕನ್ನಡ ಭಾಷೆ ಇಷ್ಟರಮಟ್ಟಿಗೆ ಉಳಿದಿರುವುದೇ ಹಳ್ಳಿಗರಿಂದ ಎಂದು ಹೇಳುವುದಿದೆ. ಸದ್ಯಕ್ಕೆ ಆ ಮಾತು ಕೆಲಮಟ್ಟಿಗೆ ನಿಜ. ನಗರ ಮತ್ತು ನಗರಗಳ ಸಮೀಪದ ಊರುಗಳಿಗಿಂತ ಗ್ರಾಮೀಣ ಭಾಗದ ಊರುಗಳಲ್ಲಿ ಸಮಯ ಅಳತೆ, ಪ್ರಮಾಣ, ದೂರ, ಇವನ್ನೆಲ್ಲ ಕನ್ನಡದಲ್ಲಿಯೂ ಹೇಳುವ ಪರಿಪಾಠವಿದೆ. ಗಳಿಗೆ, ತಾಸು, ಅರ್ಧತಾಸಿನ ದಾರಿ, ಒಂದು ಚಿಟಿಕೆ, ಹಿಡಿ, ಮುಷ್ಟಿ, ಸೆರೆ, ಬೊಗಸೆ, ಮೊಳ, ಮಾರು ಎನ್ನುವುದು ಈ ತಲೆಮಾರಿನವರಿಗೆ ಗೊತ್ತಿದೆ. ನಮ್ಮ ಹಿಂದಿನವರು ನಮಗೆ ಬೈಯುತ್ತಿದ್ದರು- ಒಂದು ಗಳಿಗೆ ನಿದ್ದೆ ಮಾಡಕ್ಕೆ ಕೊಡಲ್ಲ, ಎಷ್ಟು ಗಲಾಟೆ ಮಾಡ್ತೀರಿ ಅಂತ. ಎಷ್ಟು ಮಳೆ ಸುರಿತು ಎನ್ನುವುದನ್ನು ಹೇಳುತ್ತಿದ್ದುದು ವಿಶೇಷವಾಗಿತ್ತು. ಧೂಳು ಅಡಗುವಷ್ಟು, ಸೂರಿನ ಹನಿ ಬೀಳುವಷ್ಟು, ಕಂಬಳಿಯಲ್ಲಿ ನೀರು ಇಳಿಯುವಷ್ಟು ಮುಂತಾಗಿ. ಸೂರ್ಯ ಎರಡಾಳು ಮೇಲೇರಿದ್ದ, ನೆತ್ತಿಮೇಲಿನ ಬಿಸಿಲು, ಸೂರ್ಯಕಂತುವ ಹೊತ್ತು (ಅಂದರೆ ಇಳಿಸಂಜೆ) ಸಮಯದ ಸೂಚನೆ.

ನಗರದ ಹತ್ತಿರ ಇರುವ ಹಳ್ಳಿಯ ಜನರಿಗೆ ಹಿಂದೆ ಬಳಸುತ್ತಿದ್ದ ಕನ್ನಡ ಪದಗಳು ಮರೆತು ಹೋಗುತ್ತಿವೆ. ನಮ್ಮನೆಯ ಕೆಲಸದೋಳಿಗೆ ಟೇಮು ಗೊತ್ತಿದೆಯೇ ವಿನಾ ಗಂಟೆ ಗೊತ್ತಿಲ್ಲ. ಎಜ್ಞಿಮಿಸನ್‌ ಗೊತ್ತಿದೆ, ವಸ್ತುಪ್ರದರ್ಶನ ಎಂದರೆ ಅದೇನು ಎಂದು ಕೇಳುತ್ತಾಳೆ. ಆವತ್ತು ಬ್ಯಾಂಕಿಗೆ ಹೋಗಿದ್ದ ಅವಳು ʻನನ್ನ ಆಧಾರ ಕಾಡ್ರಿಗೆ ಅದೇನೋ ಬ್ಯಾಂಕ್‌ ಬುಕ್ಕಿಗೆ ಇಂಕು ಮಾಡ್ಬೇಕಂತೆʼ ಅಂದಳು. ಅವಳ ಮಾತನ್ನು ಕೇಳಿ ಒಂದು ಕ್ಷಣ ಅಯೋಮಯವಾಗಿತ್ತು. ಆಮೇಲೆ ಅರ್ಥವಾಯಿತು, ಬ್ಯಾಂಕ್‌ ಅಕೌಂಟಿಗೆ ಆಧಾರ ಕಾರ್ಡ್‌ ಲಿಂಕ್‌ ಮಾಡಬೇಕು ಅಂತ. ಯಾರದಾದರೂ ಹೊಸಮನೆ ಪ್ರವೇಶಕ್ಕೆ ಹೋಗಿ ಬಂದರೆ ಅವಳು ಹೇಳುವುದನ್ನು ಕೇಳಬೇಕು- ʻಅವ್ವ, ಮನೆ ಎಷ್ಟು ದೊಡ್ಡಕ್ಕೈತೆ ಮೂರು ಅಪ್‌ಟೇರ್‌ ಕಟ್ಟವ್ರೆʼ ಅಂತ. ʻಅದ್ಯಾಕೆ ಮೂರು ಮಹಡಿ ಅನ್ನಕ್ಕಾಗಲ್ವಾ?ʼ ಅಂದರೆ ʻಏನೋ ಎಲ್ಲ ಅಂಗೆ ಯೇಳತಿದ್ರುʼ ಅಂತಾಳೆ. ಮದುವೆಯ ಹಿಂದಿನ ದಿನ ನಡೆಯುವ ಆರತಿ- ಅಕ್ಷತೆಗೆ ಹೋಗಿದ್ದೆಯಾ ಎಂದು ಅವಳನ್ನು ಕೇಳಿದರೆ ʻಅಂಗಂದ್ರೇನು?ʼ ಅನ್ನುತ್ತಾಳೆ. ರಿಸೆಪ್ಶನ್‌ ಅಂದರೆ ʻಅಂಗೇಳಿ ಮತ್ತೆʼ ಎಂದು ನಗುತ್ತಾಳೆ. ತಪ್ಪು ರೀತಿಯಲ್ಲಿ ಉಚ್ಚರಿಸಿದರೂ ಪರವಾಯಿಲ್ಲ, ಇಂಗ್ಲಿಷ್‌ ಪದಗಳನ್ನೇ ಬಳಸುವ ಖಯಾಲಿಗೆ ಅವಳೂ ಹೊರತಾಗಿಲ್ಲ.

ಕೃಷಿಪ್ರಧಾನ ವ್ಯವಸ್ಥೆಯಲ್ಲಿ ಬಳಕೆಯಾಗುತ್ತಿದ್ದ ಅನೇಕ ಪದಗಳು ಕಾಣೆಯಾಗಿವೆ. ಅದು ಸಹಜ. ಉದಾ: ಬೆಟ್ಟೆ, ಆಪಿ, ಚಿಕಣಿ, ಗೋಟು ಎಂದರೆ ಬೇರೆಯವರಿಗೆ ಅರ್ಥವಾಗದು. ಅಡಿಕೆ ಬೆಳೆಯುವ ಪ್ರದೇಶದ ಪಾರಿಭಾಷಿಕ ಪದಗಳು ಅವರಿಗೆ ಮಾತ್ರ ತಿಳಿದಿರುತ್ತದೆ. ಜೊತೆಗೆ ಅದರ ವ್ಯಾಪಾರಸ್ಥರಿಗೂ ಗೊತ್ತಿರುತ್ತದೆ. ಕೆಲವು ಪದಗಳು ಎಲ್ಲ ಕೃಷಿಕರಿಗೂ ಸಂಬಂಧಿಸಿದ್ದೇ ಆಗಿರುತ್ತದೆ. ನೇಗಿಲು, ಕುಳ, ಕಳೆ, ನಾಟಿ ಮುಂತಾದವು. ಕೆಲವು ಆಯಾ ಪ್ರಾದೇಶಿಕ ಬಳಕೆಯ ಪದಗಳಾಗಿರುತ್ತವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಆರಂಭ ಎಂದರೆ ವ್ಯವಸಾಯ ಎನ್ನುವ ಅರ್ಥವಿದ್ದರೆ ಬೇರೆಡೆ ಇದು ಪ್ರಾರಂಭ ಎನ್ನುವ ಸಾಮಾನ್ಯ ಅರ್ಥಕ್ಕೆ ಸೀಮಿತ. ರೆಂಟೆ ಹೊಡೆಯುವುದು, ಕುಂಟೆ ಕಟ್ಟುವುದು, ನ್ಯಾರೆ ಕೀಳುವುದು ಮುಂತಾದ ಪದಗಳು ಇವತ್ತಿಗೆ ಅರ್ಥಕಳೆದುಕೊಂಡಿವೆ. ಅಂತಹ ಪದಗಳನ್ನು ಉಳಿಸಿಕೊಳ್ಳಬೇಕೆನ್ನುವ ಹಟ ಬೇಡ ಎನ್ನುವುದು ಸರಿ.

ಒಂದು ಮಾರು ಹೂವಿಗೆ ಅಥವಾ ಮೊಳಕ್ಕೆ ಇಷ್ಟು ಎಂದು ಹೇಳುತ್ತಿದ್ದ ಹೂವು ಈಗ ಮೀಟರ್‌ ಲೆಕ್ಕದಲ್ಲಿ ಸಿಗುತ್ತಿದೆ. ಒಂದು ಭಾಷೆಯನ್ನು ಉಳಿಸಿಕೊಳ್ಳುವುದು ಅಂದರೆ ನಾವು ದಿನನಿತ್ಯದ ಬಳಕೆಯ ಪದಗಳನ್ನು ಉಳಿಸಿಕೊಂಡರೆ ಮಾತ್ರ ಎನ್ನುವ ಮಾತಿದೆ. ಕನ್ನಡ ಭಾಷೆ ಇಷ್ಟರಮಟ್ಟಿಗೆ ಉಳಿದಿರುವುದೇ ಹಳ್ಳಿಗರಿಂದ ಎಂದು ಹೇಳುವುದಿದೆ. ಸದ್ಯಕ್ಕೆ ಆ ಮಾತು ಕೆಲಮಟ್ಟಿಗೆ ನಿಜ. ನಗರ ಮತ್ತು ನಗರಗಳ ಸಮೀಪದ ಊರುಗಳಿಗಿಂತ ಗ್ರಾಮೀಣ ಭಾಗದ ಊರುಗಳಲ್ಲಿ ಸಮಯ ಅಳತೆ, ಪ್ರಮಾಣ, ದೂರ, ಇವನ್ನೆಲ್ಲ ಕನ್ನಡದಲ್ಲಿಯೂ ಹೇಳುವ ಪರಿಪಾಠವಿದೆ.

ಕಳೆದು ಹೋಗುತ್ತಿರುವ ಅಥವಾ ಈಗ ಬದಲಾಗಿರುವ ಜೀವನ ಶೈಲಿಗೆ ಸಂಬಂಧಿಸಿದ ಕನ್ನಡ ಪದಗಳು ಅನೇಕವಿವೆ. ಅವು ಕೇವಲ ಪದಕೋಶದಲ್ಲಿ ಇವೆ ಇಲ್ಲವೆ, ಆಗ ಬಳಸುತ್ತಿದ್ದ ವಸ್ತುಗಳನ್ನು ವಸ್ತುಸಂಗ್ರಹಾಲಯಗಳಲ್ಲಿ ಕಾಣಬಹುದಾಗಿದೆ. ಒರಳು, ಒನಕೆ, ಕುಟ್ಟುವ ಹಾರೆ, ಬೀಸೋಕಲ್ಲು, ಕಡೆಗೋಲು ಅಥವಾ ಮಂತು. ಕುಟ್ಟಣಿ, ಕಲ್ಲೊತ್ತು, ಮಸೆಕಲ್ಲು ಹೀಗೆ. ನಮ್ಮ ಅಮ್ಮ ಅಜ್ಜಿಯರು ಬೆಳಗಿನ ತಿಂಡಿ ಮಾಡಬೇಕೆಂದರೆ ಒರಳಲ್ಲಿ ಅಥವಾ ಬೀಸುವ ಕಲ್ಲಿನಲ್ಲಿ ಹಿಟ್ಟನ್ನು ತಯಾರಿಸಬೇಕಿತ್ತು. ಇಲ್ಲವೆ ಗಡಿಗೆಯಲ್ಲಿ ಬತ್ತವನ್ನು ಹುರಿದು ಅರಳು ಅಥವಾ ಅವಲಕ್ಕಿ ಮಾಡಬೇಕಿತ್ತು ಅವಲಕ್ಕಿ ಕುಟ್ಟಲು ಕುಟ್ಟುವ ಹಾರೆ ಅವಶ್ಯವಾಗಿತ್ತು. ಯಾವುದೇ ಪುಡಿ ಮಾಡುವುದಿರಲಿ ಹಾರೆ ಬೇಕೇಬೇಕಿತ್ತು. ಹಿಟ್ಟು, ರವೆ, ಅವಲಕ್ಕಿ, ಅರಳು ಎಲ್ಲವೂ ಕೊಳ್ಳಲು ಸಿಗುತ್ತಿರುವುದರಿಂದ ಕುಟ್ಟುವ, ಹುರಿಯುವ, ಅರೆಯುವ ಪ್ರಮೇಯವೇ ಇಲ್ಲ. ಅಕ್ಕಿ, ಅಥವಾ ಧಾನ್ಯಗಳನ್ನು ಹಸನುಗೊಳಿಸಲು ಮೊರ, ಒನಕೆಗಳು ಅಗತ್ಯವಾದ ಪರಿಕರಗಳು. ಈಗ ಶುದ್ಧಗೊಳಿಸಿದ ಪದಾರ್ಥಗಳೇ ಸಿಗುತ್ತಿವೆ. ಹಾಗಾಗಿ, ತೊಳಸು, ಕೇರು, ಕೊಚ್ಚು, ಒನೆ ಎನ್ನುವ ಪದಗಳ ಬಳಕೆ ಇವತ್ತಿನ ಅಗತ್ಯವೇ ಅಲ್ಲ.

ನಮಗೆ ಅಗತ್ಯವಿಲ್ಲದ ಪದಗಳ ಬಳಕೆಯ ವಿಷಯದಲ್ಲಿ ಸರಿ. ಆದರೆ ದಿನನಿತ್ಯದ ವ್ಯವಹಾರದಲ್ಲಿ ಬಳಸುವ, ನಾವು ಉಪಯೋಗಿಸುವ ವಸ್ತುಗಳ ವಿಷಯವೇ ಬೇರೆ. ಅನೇಕ ಪದಗಳನ್ನು ಕನ್ನಡದಲ್ಲಿ ಹೇಳಲು ಕಷ್ಟಪಡುತ್ತೇವೆ. ಯಾಕೆಂದರೆ ನಮಗೆ ಅವೆಲ್ಲ ಮರೆತೇ ಹೋಗುತ್ತಿವೆ. ಇಂಗ್ಲಿಷ್‌ ಪದಗಳು ಆ ಸ್ಥಾನವನ್ನು ಆಕ್ರಮಿಸಿವೆ. ಉಚಿತ, ಖಚಿತ, ರಿಯಾಯಿತಿ, ಮುಂಗಡ, ಸಮಸ್ಯೆ, ಪರಿಹಾರ, ಸಮಾಲೋಚನೆ, ಗ್ರಂಥಾಲಯ, ಅಂಗಡಿ ಮುಂತಾದ ಸರಳ ಪದಗಳನ್ನು ನೆನಪಿಸಿಕೊಳ್ಳಲು ತಿಣುಕಾಡುತ್ತೇವೆ. ನಾವು ಯಾರನ್ನಾದರೂ ʻಹೇಗೆ ಬಂದೆ?ʼ ಅಂತ ಕೇಳಿದರೆ ʻಬೈ ವಾಕ್‌ʼ ಎನ್ನುತ್ತಾರೆಯೇ ವಿನಾ ʻನಡೆದು ಬಂದೆʼ ಎನ್ನುವುದಿಲ್ಲ. ಮೊದಲು ಹೆಂಡತಿ ಗಂಡನನ್ನು ನಮ್ಮ ಯಜಮಾನರು, ಗಂಡ ಹೆಂಡತಿಯನ್ನು ನನ್ನ ಧರ್ಮಪತ್ನಿ ಎನ್ನುತ್ತಿದ್ದರು. ಅನಂತರದ ಕಾಲಘಟ್ಟದಲ್ಲಿ ನಮ್ಮನೆಯವಳು, ನಮ್ಮನೆಯವರು ಎನ್ನುತ್ತಿದ್ದರು, ಈಗ ಹಾಗೆ ಹೇಳುವುದು ಹಲವರಿಗೆ ಮುಜುಗರದ ವಿಷಯ. ಅದರ ಬದಲು ನನ್ನ ಹಸ್ಬಂಡ್‌ ನನ್ನ ವೈಫ್‌ ಎನ್ನುವುದು ಸಹಜವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾವ ರೀತಿಯಲ್ಲಿಯೂ ಸಂಬಂಧ ಇಲ್ಲದವರು ʻಅಂಕಲ್‌ʼ ʻಆಂಟಿʼಗಳಾಗಿದ್ದಾರೆ. ಕೆಲಮಟ್ಟಿಗೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಅತ್ತೆ, ಅತ್ತಿಗೆ, ಅಕ್ಕ, ಮಾವ, ಭಾವ, ಅಣ್ಣ ಎಂದು ಕರೆಯುವ ಪರಿಪಾಠ ಚಾಲ್ತಿಯಲ್ಲಿದೆ. ಹೀಗೆ ಕರೆಯುವುದು ಆಯಾ ಸಂಬಂಧದ ಹಿನ್ನೆಲೆಯಲ್ಲಿ ಅಲ್ಲ. ಹೀಗೆ ಕರೆಸಿಕೊಳ್ಳುವವರು ಕೇವಲ ಪರಿಚಿತರು ಅಥವಾ ಊರಿನವರು ಅಷ್ಟೆ. ಅವರ ವಯಸ್ಸು ಮತ್ತು ಕರೆಯುವವರ ವಯಸ್ಸನ್ನು ಪರಿಗಣಿಸಿ ಹಾಗೆ ಕರೆಯಲಾಗುತ್ತದೆ. ನಮ್ಮ ಮನೆ ಪಕ್ಕದಲ್ಲಿ ಒಬ್ಬರು ಇದ್ದರು. ಅವರ ಮಗಳ ವಯಸ್ಸು ಹತ್ತೋ ಹನ್ನೆರಡೋ ಇರಬಹುದು. ಅವಳು ಅವಳ ಚಿಕ್ಕಪ್ಪನನ್ನು ಹೆಸರಿನಿಂದ ಕರೆಯುತ್ತಿದ್ದಳು. ಆತ ಅವಳಿಗಿಂತ ಸುಮಾರು ಇಪ್ಪತ್ತು ವರ್ಷ ದೊಡ್ಡವರು.

ನನ್ನ ಸ್ನೇಹಿತನೊಬ್ಬ ವಾಣಿಜ್ಯ ತೆರಿಗೆ ಉಪ ಆಯುಕ್ತನಾಗಿದ್ದ. ಅವನ ಕನ್ನಡ ಪ್ರೇಮ ಎಷ್ಟು ಎಂದರೆ ಅವನು ತನ್ನನ್ನು ವಾಣಿಜ್ಯ ತೆರಿಗೆ ಉಪ ಆಯುಕ್ತ ಎಂದೇ ಪರಿಚಯಿಸಿಕೊಳ್ಳುತ್ತಿದ್ದನು. ದೂರವಾಣಿ ಮೂಲಕ ತಿಳಿಸಿದಂತೆ ಎಂದೇ ಬರೆಯುತ್ತಿದ್ದವನು. ನಾವೆಲ್ಲ ಎಸ್ಸೆಮ್ಮೆಸ್‌ ಮಾಡು ಎನ್ನುತ್ತೇವೆ ಅವನು ಮಾತ್ರ ಈಗಲೂ ಸಂದೇಶ ಕಳಿಸು ಅಂತಲೋ ಕಳಿಸುವೆ ಅಂತಲೋ ಹೇಳುತ್ತಾನೆ. ಅವನ ಸೇವಾವಧಿಯಲ್ಲಿ ರಾಜ್ಯದ ಬೇರೆಬೇರೆ ಊರುಗಳಲ್ಲಿ ಕೆಲಸ ಮಾಡಿದ್ದಾನೆ. ಅವನನ್ನು ಕನ್ನಡದ ಅಧಿಕಾರಿ ಎಂದು ಗುರುತಿಸುತ್ತಿದ್ದರು. ತುಸುವೂ ಕಷ್ಟಪಡದೆ ನಿರಾಯಾಸವಾಗಿ ಕನ್ನಡವನ್ನು ಬಳಸುತ್ತಾನೆ. ಅಂದರೆ ರೂಢಿಸಿಕೊಂಡರೆ ಯಾವುದೂ ಕಷ್ಟವಲ್ಲ. ಈಗ ಯಾರಾದರೂ ಹೀಗೆ ಶುದ್ಧವಾಗಿ ಕನ್ನಡ ಪದಗಳನ್ನೇ ಬಳಸುತ್ತಿದ್ದರೆ ಇದೊಂದು ವಿಚಿತ್ರಪ್ರಾಣಿ ಎಂದು ನೋಡುವ ಸ್ಥಿತಿ ಇದೆ.

ಈಗ ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಒಬ್ಬರು ಸ್ನೇಹಿತೆ ವಿದೇಶಿಯನನ್ನು ಮದುವೆಯಾಗಿದ್ದರು. ನಮ್ಮ ಕನ್ನಡವನ್ನು ನೋಡಿ ಆತ ನಗುತ್ತಿದ್ದರು. ಅವರಿಗೆ ಬಹಳ ಚೆನ್ನಾಗಿ ಕನ್ನಡ ಬರುತ್ತಿತ್ತು. ನಮ್ಮಂತೆ ಆತ ಕಂಗ್ಲಿಷ್‌ ಮಾತನಾಡುತ್ತಿರಲಿಲ್ಲ. ʻವೈದ್ಯರು ಏನು ಹೇಳಿದರು?ʼ ಎಂದೋ ʻಇದಕ್ಕೆ ಚುಚ್ಚುಮದ್ದು ತೆಗೆದುಕೊಂಡಿದ್ದೀರಾ?ʼ ಎಂದೋ ಕೇಳುತ್ತಿದ್ದರು. ʻಯಾಕೆ ಕನ್ನಡದಲ್ಲಿ ಮಾತನಾಡುವಾಗ ಇಂಗ್ಲಿಷ್‌ ಪದಗಳನ್ನು ಸೇರಿಸುತ್ತೀರಿ?ʼ ಎನ್ನುತ್ತಿದ್ದರು. ನಾವು ಕನ್ನಡದ ನಡುವೆ ಎಷ್ಟೊಂದು ಅನ್ಯಭಾಷೆಯ ಪದಗಳನ್ನು ಸೇರಿಸುತ್ತೇವೆ ಎನ್ನುವುದು ನಮಗೆ ಅರಿವಿಗೆ ಬರುವುದಿಲ್ಲ. ಮತ್ತೊಬ್ಬರು ಹೇಳಿದಾಗ ʻಹೌದಲ್ಲವೇ?ʼ ಎನಿಸುವುದಿದೆ. ಪಾರಿಭಾಷಿಕ ಪದಗಳನ್ನು ಕನ್ನಡೀಕರಣಗೊಳಿಸಬೇಕೆಂದಿಲ್ಲ. ಆದರೆ ಬಳಕೆಯ ಪದಗಳ ಬದಲಿಗೆ ಇಂಗ್ಲಿಷ್‌ಗೆ ಪ್ರಾಧಾನ್ಯ ನೀಡುತ್ತಿದ್ದೇವೆ. ಒಂದು ಭಾಷೆಯ ಕಡೆಗಣನೆ ನಿಧಾನವಾಗಿ ಅದು ಹಿನ್ನೆಲೆಗೆ ಸರಿಯಲು ಕಾರಣವೂ ಆಗಬಹುದು.

ನವೆಂಬರ್‌ ತಿಂಗಳ ಕನ್ನಡ ಪ್ರೇಮ ಎನ್ನುವ ಮಾತಿಗೆ ಎಷ್ಟೊಂದು ಆಯಾಮಗಳಿವೆ. ಕನ್ನಡ ಭಾಷೆಯ ಉಳಿವಿಗಾಗಿ ಬೀದಿಗಿಳಿದು ಹೋರಾಟವನ್ನೇ ಮಾಡಬೇಕೆಂದಿಲ್ಲ. ʻಕನ್ನಡ ಎನೆ ಕುಣಿದಾಡುವುದೆನ್ನೆದೆʼ ಎನ್ನುವ ಭಾವ ಒಳಗಿದ್ದರೆ, ಅದು ಸಹಜವಾಗಿ ಹೊರಹೊಮ್ಮಿದರೆ, ನಮ್ಮಷ್ಟಕ್ಕೆ ನಾವು ಸಾಧ್ಯವಾದಮಟ್ಟಿಗೆ ಕನ್ನಡ ಪದಗಳನ್ನು ದಿನನಿತ್ಯದ ವ್ಯವಹಾರದಲ್ಲಿ ಬಳಸುವುದನ್ನು ರೂಢಿಸಿಕೊಂಡರೆ ಅಷ್ಟೆ ಸಾಕಲ್ಲವೇ? ಹಾಗಂತ ಇನ್ನೊಂದು ಭಾಷೆಯ ಬಗೆಗೆ ಸಿನಿಕತನ ಇಲ್ಲದೆ ನಮ್ಮ ತಿಳಿವನ್ನು ಹೆಚ್ಚಿಸಿಕೊಳ್ಳಲು ಸಹಾಯಕ ಎಂದು ಭಾವಿಸುವುದು ಸರಿಯಾದುದೇ.