ಒಂದಿಷ್ಟು ಓದು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ವಿಜ್ಞಾನವೆ ಹೇಳುವಂತೆ ಸಾಮಾನ್ಯವಾಗಿ ವಂಶವಾಹಿನಿಗಳು ಪ್ರತಿ ಮೂರನೆ ತಲೆಮಾರಿಗೆ ವರ್ಗಾವಣೆಯಾಗುತ್ತವೆ ಎಂದು ಶಾಲೆಗಳಲ್ಲಿ ಶಿಕ್ಷಕರು ಹೇಳುವಾಗೆಲ್ಲ ನಮ್ಮಲ್ಲಿ ನನ್ನಜ್ಜನ ರೂಪದ ಹೋಲಿಕೆ ಇರಬಹುದಾ ಎಂದು ಯೋಚಿಸಿದ್ದಿದೆ. ಆತನ ಒಂದಾದರೂ ಫೋಟೋ ಇರಬಾರದಿತ್ತಾ ಎಂದು ಕೊರಗಿದ್ದಿದೆ. ನನಗೆ ನನ್ನಜ್ಜನನ್ನು ನೋಡುವ ಕುತೂಹಲ ಹಾಗೆಯೇ ಉಳಿದು ಬಿಟ್ಟಿತು. ನಾವು ಬೆಳೆದಂತೆಲ್ಲಾ ನಮ್ಮ ಬೌದ್ಧಿಕತೆಯು ಬೆಳೆಯುತ್ತ ಹೋಯಿತು. ನನ್ನಜ್ಜನ ಮೂಲದ ಯಾರಾದರೂ ಇದ್ದಿರಬಹುದೆ ಎಂದು ಹುಡುಕಾಡಿದ್ದಿದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ಮೂರನೆಯ ಕಂತು

ನಾನು ನನ್ನಜ್ಜನನ್ನು ನೋಡಿಲ್ಲ. ಆದರೆ ಅವರಿವರು ಹೇಳಿದ ನೆನಪುಗಳಲ್ಲಿ ಅವರು ಸದಾ ಹಸಿರಾಗಿ ನನ್ನ ಮನದಲ್ಲಿ ಉಳಿದಿದ್ದಾರೆ. ನನ್ನಜ್ಜಿಯನ್ನು ಯಾವಾಗಲೂ ಕೇಳುತ್ತಿದ್ದೆ; ನನ್ನಜ್ಜ ಹೇಗಿದ್ದ? ಎಂದು. ಅದಕ್ಕೆ ಅಜ್ಜಿಯಿಂದ ಒಂದೆ ಉತ್ತರ ಯಾವಾಗಲೂ ಸಿಗುತ್ತಿತ್ತು. ಅದು ಬ್ರಿಟಿಷರ ಕಾಲಾವಧಿಯಾದ್ದರಿಂದ ಹಾಗೂ ಒಂದು ಫೋಟೊ ತೆಗಿಸಿಕೊಳ್ಳಲು ಅವಕಾಶವಿಲ್ಲದಿದ್ದ ಕಾಲ. ಹಾಗಾಗಿ ಎಲ್ಲಿಯೂ ಆತನ ಒಂದು ಫೋಟೋ ಕೂಡ ಇರಲಿಲ್ಲ. ಹಾಗಾಗಿ ನಮ್ಮೆಲ್ಲರ ಮನಸ್ಸಿನಲ್ಲಿ ಅಜ್ಜ ಅಮೂರ್ತವಾಗಿಯೇ ಉಳಿದ. ಆದರೆ ಅಜ್ಜನ ಬಗ್ಗೆ ನನ್ನೂರಿನ ಆ ತಲೆಮಾರಿನ ಅಜ್ಜಂದಿರು ಕೆಲವು ವಿಷಯಗಳನ್ನು ಹೇಳುವಾಗ ನನ್ನಜ್ಜನ ಬಗ್ಗೆ ಹೆಮ್ಮೆ ಎನಿಸುತ್ತದೆ. ನನ್ನಜ್ಜಿಯೆ ನನ್ನಜ್ಜನ ಬಗ್ಗೆ ಹೇಳಿದ ಆತನ ಪೂರ್ವದ ಕತೆ ಹೀಗಿದೆ.

ನನ್ನಜ್ಜನ ಪೂರ್ವಜರು ಆಂಧ್ರದ ಭಾಗದಿಂದ ಬಂದಿದ್ದರು. ಆಗಿನ ಕಾಲದಲ್ಲಿ ಬಡತನ ಹೆಚ್ಚು. ಹಾಗಾಗಿ ತುತ್ತಿನ ಚೀಲ ತುಂಬಲು ಈ ಊರಿಗೆ ವಲಸೆ ಬಂದಿದ್ದರು. ಅಜ್ಜನಿಗೊಂದು ಕೆಲಸ ಬೇಕಲ್ಲವೆ. ಆತ ಊರಿನ ದನಗಳನ್ನು ಕಾಯುತ್ತಿದ್ದ ಒಂದಷ್ಟು ಕುರಿಗಳನ್ನು ಕಾಯುತ್ತಿದ್ದ. ಅದರಿಂದಲೆ ಬದುಕನ್ನು ಕಟ್ಟಿಕೊಂಡಿದ್ದ. ನನ್ನಜ್ಜನಿಗೆ ಇಬ್ಬರು ಹೆಂಡತಿಯರು. ಮೊದಲನೆಯ ಮದುವೆಯು ಆಂಧ್ರದ ಭಾಗದ ಹಲ್ಕೂರು ಗ್ರಾಮದ ಸಿದ್ದಮ್ಮನೊಂದಿಗೆ ಆಗಿತ್ತು. ಬಹಳ ದಿನ ಮಕ್ಕಳು ಇರಲಿಲ್ಲ. ನಂತರ ಒಂದು ಹೆಣ್ಣು ಮಗು ಆಗಿದ್ದು, ಅದು ಅನಾರೋಗ್ಯಕ್ಕೆ ತುತ್ತಾಗಿ ಸತ್ತು ಹೋಗಿತ್ತು. ನಂತರ ಬಹಳ ದಿನ ಆಕೆಗೆ ಮಕ್ಕಳಾಗಲಿಲ್ಲ ಅನ್ನೋ ಕಾರಣಕ್ಕೆ ತಂಗಿಯ ಮಗಳಾದ ನನ್ನ ಎರಡನೆಯ ಅಜ್ಜಿಯನ್ನು ಮದುವೆಯಾಗಿದ್ದರು. ನನ್ನಜ್ಜ ಪ್ರಾಮಾಣಿಕನಾಗಿದ್ದ, ಮಾತಿನ ಮೇಲೆ ನಿಲ್ಲುವ ವ್ಯಕ್ತಿ. ಆತನ ಮಾತಿಗೆ ಒಂದು ತೂಕವಿರುತಿತ್ತು. ನ್ಯಾಯ ತೀರ್ಮಾನದಂಥ ಸಂದರ್ಭದಲ್ಲಿ ಉತ್ತಮ ನ್ಯಾಯ ನೀಡುತ್ತಿದ್ದ. ಆತ ಪ್ರತಿ ನ್ಯಾಯ ತೀರ್ಮಾನ ಸಭೆಗಳನ್ನು ಹಾಜರಿರಲೆಬೇಕಾಗಿತ್ತು ಎಂದು ಅವರ ಸಮಕಾಲೀನರು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತಿತ್ತು. ಆದರೆ ಆತನದು ಒಂದು ಪಟವೂ ಇಲ್ಲವಲ್ಲ ಎಂದು ಯಾವಾಗಲೂ ಯೋಚಿಸುತ್ತಿದ್ದೆ. ನನ್ನಜ್ಜಿಯಂದಿರನ್ನು ಕಾಡಿದ್ದೆ ಕೂಡ. ಅದೆ ಸಮಕಾಲೀನ ಬೇರೆಯವರ ಪಟವನ್ನು ನೋಡಿದಾಗಲೆಲ್ಲಾ ಅವರ ಪಟ ಇದೆ ನನ್ನಜ್ಜನ ಪಟಗಳು ಯಾಕೆ ಇಲ್ಲ ಎಂದು ಜಗಳವಾಡಿದ್ದಿದೆ. ಅವಾಗೆಲ್ಲಾ ನನ್ನಜ್ಜಿ ಅವರು ಶ್ರೀಮಂತರು, ನಾವು ಕೂಲಿ ಮಾಡಿ ಬದುಕುತ್ತಿದ್ದೆವು. ಹಾಗಾಗಿ ನಮಗೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವೆ ಇರಲಿಲ್ಲ. ಸ್ವಾತಂತ್ರ್ಯದ ಸಂದರ್ಭವದು ಎನ್ನುತ್ತಿದ್ದರು. ಆದರೆ ನನ್ನಜ್ಜ ಹೇಗಿರಬಹುದೆಂಬ ಕಲ್ಪನೆ ನನ್ನನ್ನು ಆಗಾಗ ಕಾಡುತ್ತಲೆ ಇತ್ತು. ನಾನೊಬ್ಬನೇ ಇದ್ದಾಗೆಲ್ಲಾ ‘ನನ್ನಂಗೆ ಇರಬಹುದಾ’ ಎಂದು ಯೋಚಿಸಿದ್ದಿದೆ. ನನ್ನ ಈ ಕುತೂಹಲ ಮನಸ್ಸಿನಲ್ಲಿಯೆ ಉಳಿಯಿತು. ಮತ್ತೆ ನನ್ನಜ್ಜ ಬಡವನಾಗಿದ್ದರು ಎಲ್ಲರೂ ಆತನ ಮಾತನ್ನು ಕೇಳುತ್ತಿದ್ದರಾ ಎಂದರೆ ಹೌದು ಕೇಳುತ್ತಿದ್ದರು. ಮಾತಿನ ಮೇಲೆ ಗೌರವವಿದ್ದ ಕಾಲವದು ಎನ್ನುತ್ತಿದ್ದರು. ಜೊತೆಗೆ ನಮ್ಮೂರಿನ ಕೈವಾಡಸ್ಥನಾಗಿ ನನ್ನಜ್ಜ ಇದ್ದ ಊರಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದ. ಯಾರೇ ಆದರೂ ನಿಷ್ಟುರವಾಗಿ ಮಾತನಾಡುತ್ತಿದ್ದ ಎಂಬ ಆತನ ಗುಣದ ಮಾತುಗಳು ನನ್ನನ್ನು ಬಹುವಾಗಿ ಆಕರ್ಷಿಸಿದ್ದವು.

ಒಂದಿಷ್ಟು ಓದು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ವಿಜ್ಞಾನವೆ ಹೇಳುವಂತೆ ಸಾಮಾನ್ಯವಾಗಿ ವಂಶವಾಹಿನಿಗಳು ಪ್ರತಿ ಮೂರನೆ ತಲೆಮಾರಿಗೆ ವರ್ಗಾವಣೆಯಾಗುತ್ತವೆ ಎಂದು ಶಾಲೆಗಳಲ್ಲಿ ಶಿಕ್ಷಕರು ಹೇಳುವಾಗೆಲ್ಲ ನಮ್ಮಲ್ಲಿ ನನ್ನಜ್ಜನ ರೂಪದ ಹೋಲಿಕೆ ಇರಬಹುದಾ ಎಂದು ಯೋಚಿಸಿದ್ದಿದೆ. ಆತನ ಒಂದಾದರೂ ಫೋಟೋ ಇರಬಾರದಿತ್ತಾ ಎಂದು ಕೊರಗಿದ್ದಿದೆ. ನನಗೆ ನನ್ನಜ್ಜನನ್ನು ನೋಡುವ ಕುತೂಹಲ ಹಾಗೆಯೇ ಉಳಿದು ಬಿಟ್ಟಿತು. ನಾವು ಬೆಳೆದಂತೆಲ್ಲಾ ನಮ್ಮ ಬೌದ್ಧಿಕತೆಯು ಬೆಳೆಯುತ್ತ ಹೋಯಿತು. ನನ್ನಜ್ಜನ ಮೂಲದ ಯಾರಾದರೂ ಇದ್ದಿರಬಹುದೆ ಎಂದು ಹುಡುಕಾಡಿದ್ದಿದೆ. ಆದರೆ ನನ್ನಜ್ಜನಿಗೆ ಯಾರೂ ಸಂಬಂಧಿಗಳಿರಲಿಲ್ಲ, ತನ್ನ ತಂಗಿಯ ಹೊರತಾಗಿ ಎಂದೆ ಅಜ್ಜಿ ಹೇಳುತ್ತಿದ್ದಳು. ಗೊತ್ತಿಲ್ಲ ನನಗೆ ಯಾಕೆ ಅವರ ಬಗ್ಗೆ ಕುತೂಹಲ ಹೆಚ್ಚಾಯಿತೆಂದು ಬಹುಶಃ ಅವರ ರೂಪವನ್ನು ಕಾಣುವ ಬಯಕೆ ಇರಬಹುದು ಎಂದೆ ಭಾವಿಸಿದ್ದೇನೆ.

ನಮ್ಮಪ್ಪನಿಗೆ ನಾವು ನಾಲ್ವರು ಮಕ್ಕಳು. ನಾನು ಮೂರನೆಯವನು. ನನಗೆ ಇಬ್ಬರು ಅಕ್ಕಂದಿರು. ನನ್ನ ದೊಡ್ಡಕ್ಕ ಗುಂಡು ಗುಂಡಾಗಿ ಅಗಲವಾದ ಮುಖವುಳ್ಳ ನಮ್ಮ ನಾಲ್ವರಲ್ಲೆ ಒಂದಿಷ್ಟು ಎತ್ತರದ ದೇಹಾಕೃತಿಯವಳಾಗಿದ್ದಳು. ಒಂದಿಷ್ಟು ನಾವು ಬೆಳೆದಂತೆಲ್ಲಾ ನಮ್ಮಪ್ಪ ನಮ್ಮಜ್ಜಿ ಯಾವಾಗಲೂ ಹೇಳುತ್ತಿದ್ದರು. ನಿಮ್ಮ ತಾತ ಥೇಟ್ ನಿಮ್ಮ ಅಕ್ಕನ ಹಾಗೆಯೇ ಇದ್ದರು. ಇದ್ದರು ಇರಬಹುದು ನನ್ನಕ್ಕ ವಿಪರೀತ ಭಾವುಕಳು. ಆದರೆ ಮಾತಿನಲ್ಲಿ ಯಾವಾಗಲೂ ಕಡ್ಡಿತುಂಡಾದಂತೆ ಮಾತನಾಡುವವಳು. ಬಹಳ ಸೂಕ್ಷ್ಮಮತಿ. ಇವೆಲ್ಲಾ ನನ್ನಜ್ಜನ ಗುಣಗಳಾಗಿದ್ದವು ಎಂದಾಗಲೆಲ್ಲಾ ನನ್ನಜ್ಜನನ್ನೆ ನೋಡಿದಷ್ಟು ಸಂತಸ ನಮ್ಮ ಮನಸ್ಸಿನಲ್ಲಿ ಮೂಡುತ್ತಿತ್ತು. ಒಂದೊಂದ್ಸಾರಿ ಯೋಚಿಸಿದ್ದಿದೆ ನನ್ನಕ್ಕನಿಗೆ ಗಂಡುಡುಗೆ ತೊಡಿಸಿ ಮೀಸೆಇಟ್ಟು ಫೋಟೋ ತೆಗೆಸಿದರೆ ಹೇಗೆ ಅದನ್ನು ಮನೆಯಲ್ಲಿಟ್ಟರೆ ಹೇಗೆ ಎಂದು ಕೇಳಿದ್ದು ಕೂಡ ಇದೆ. ಇಲ್ಲ ಹಾಗೆ ಮಾಡಬಾರದು ಅದು ಅಜ್ಜನ ರೂಪದ ಪಟವಾದರೂ ಅದು ಜೀವಂತ ವ್ಯಕ್ತಿಯ ವೇಷದ ಪಟವಾಗುತ್ತೆ. ಸತ್ತವರಿಗೆ ಹಾರಹಾಕಬೇಕಾಗುತ್ತದೆ. ಅದು ಬದುಕಿದ್ದವರಿಗೆ ಹಾರ ಹಾಕಿದಂತಾಗುತ್ತದೆ. ಹಾಗೆ ಮಾಡುವುದು ಬೇಡ ಎಂದಾಗ ಅದರ ಆಸೆಯನ್ನು ಬಿಡಬೇಕಾಯಿತು.

ನನ್ನಕ್ಕನಲ್ಲಿ ನನ್ನಜ್ಜನ ಗುಣಗಳು ಇದ್ದವಾ ಅಥವಾ ನಾವೆ ಯೋಚಿಸಿದ್ದು ಅಷ್ಟೇನಾ ಎಂದಾಗಲೆಲ್ಲಾ ನನ್ನಜ್ಜಿಯೆ ಹೇಳುತ್ತಿದ್ದಳು. ಇಲ್ಲ ಖಂಡಿತವಾಗಿ ಅವಳಲ್ಲಿ ಆ ಗುಣಗಳಿವೆ ಎಂದು ಹೇಳುತ್ತಿದ್ದಳು. ಇದ್ದರು ಇರಬಹುದೇನೊ ಗೊತ್ತಿಲ್ಲ.

ಅಕ್ಕನೊಂದಿಗಿನ ಒಡನಾಟವನ್ನು ನಾನು ಹೇಳಲೇಬೇಕು ಹಿರಿಯ ಮಗಳು ಅನ್ನೋ ಕಾರಣಕ್ಕೆ ಒಂದಿಷ್ಟು ಜವಾಬ್ದಾರಿಯುತವಾಗಿ ಅಕ್ಕ ನಡೆದುಕೊಳ್ಳುತ್ತಿದ್ದಳು. ನಮಗೆ ಬೇಕಾದ ನೋಟ್ಬುಕ್ಕಿನಿಂದ ಹಿಡಿದು ಇತರೆ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಸಹಾಯ ಮಾಡುತ್ತಿದ್ದಳು. ಯಾಕೆಂದರೆ ಅಕ್ಕ ಕಾಲೇಜಿಗೆ ಹೋಗುತ್ತಿದ್ದಳು. ನಾವೆಲ್ಲಾ ಚಿಕ್ಕವರಾದ್ದರಿಂದ ನಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಆಕೆಯದ್ದೆ ಎಂಬ ಭಾವನೆ ನನ್ನದು. ಅಕ್ಕ ನೋಡಲು ಸುಂದರಳಾಗಿದ್ದಳು ನಮ್ಮ ಮನೆಯಲ್ಲಿ ನನ್ನಕ್ಕ ನನ್ನ ತಮ್ಮ ಇಬ್ಬರೂ ಬಿಳಿ. ಅಮ್ಮನ ಬಣ್ಣ. ನಾನು ಎರಡನೆಯ ಅಕ್ಕ ಒಂದಿಷ್ಟು ಕಪ್ಪು; ಅಪ್ಪನ ಬಣ್ಣ. ಹಾಗಾಗಿ ಅಕ್ಕ ಕಾಲೇಜಿಗೆ ಹೋಗುವಾಗಲೆ ಸಂಬಂಧವೊಂದು ಬಂತು. ಅಕ್ಕನನ್ನು ಇಲ್ಲ ಎನ್ನಲು ಕಾರಣವೆ ಇರಲಿಲ್ಲ. ಹಾಗಾಗಿ ಮದುವೆಯೂ ಆಯಿತು. ನನ್ನ ಮಾವನು ಒಳ್ಳೆಯವರು ನಮ್ಮ ಅನೇಕ ಕಷ್ಟಗಳಲ್ಲಿ ಭಾಗಿಯಾದವರು. ಇವತ್ತಿಗೂ ಅಂಥದೊಂದು ಬಾಂಧವ್ಯವಿದೆ. ಅಕ್ಕ ಮದುವೆಯಾದ ಹೊಸತರಲ್ಲಿ ಆ ಮನೆಗೆ ಹೊಂದಿಕೊಳ್ಳಲು ಕಷ್ಟ ಪಟ್ಟಳೆಂದೆ ಹೇಳಬೇಕು. ಆದರೂ ಅಕ್ಕ ಬಹುಬೇಗ ಆ ಮನೆಗೆ ಹೊಂದಿಕೊಂಡಳು. ನನ್ನನ್ನು ಆಗಾಗ ನೆನಸಿಕೊಳ್ಳುತ್ತಿದ್ದಳು ಎಂದು ಎಷ್ಟೊ ಬಾರಿ ಮಾವ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಕ್ಕನಿಗೆ ಎಲ್ಲವನ್ನು ನಿಭಾಯಿಸುವ ಶಕ್ತಿ ಹುಟ್ಟಿನಿಂದಲೆ ಬಂದದ್ದಾ ಅಥವಾ ಬದುಕು ಹಾಗೆ ಬದುಕುವುದನ್ನು ಕಲಿಸಿರಬಹುದಾ ಇರಬಹುದೇನೊ ನನ್ನಜ್ಜನು ಹೀಗೆಯೆ ಇದ್ದನಾ ಆತನು ಕಷ್ಟಗಳನ್ನು ಹೀಗೆ ಎದುರಿಸಿರಬಹುದು ಎಂದು ಯೋಚಿಸುತ್ತಿದ್ದೆ. ಅಕ್ಕನಿಗೆ ಅನೇಕ ಕಷ್ಟಗಳು ಬಂದವು. ಎಲ್ಲಿಯೂ ಬದುಕಿನಲ್ಲಿ ರಾಜಿಯಾಗದೆ ಕಷ್ಟಗಳನ್ನು ಎದುರಿಸಿದಳು. ನಾವಿನ್ನೂ ಚಿಕ್ಕವರಾದ್ದರಿಂದ ನಮ್ಮಿಂದ ಏನು ತಾನೆ ಸಹಾಯ ಮಾಡಲು ಸಾಧ್ಯ.

ಎಲ್ಲವನ್ನೂ ಎದುರಿಸಿದ ಅಕ್ಕ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಳು ಪಂಚಾಯಿತಿ ಅಧ್ಯಕ್ಷಳು ಆಗಿದ್ದಳು. ನನ್ನಜ್ಜ ಆಗ ನ್ಯಾಯ ಹೇಳುತ್ತಿದ್ದ ನನ್ನಕ್ಕ ಪಂಚಾಯ್ತಿಯಲ್ಲಿ ಸಾಮಾಜಿಕ ಸೇವೆ ಮಾಡಿದಳು. ಎಲ್ಲಿಯೂ ಯಾವುದಕ್ಕೂ ರಾಜಿಯಾಗಲಿಲ್ಲ. ಅವಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರಶಸ್ತಿಯೂ ಬಂದಿತು. ನನಗೆ ನನ್ನಕ್ಕನೆಂದರೆ ಅಕ್ಕರೆ ಜಾಸ್ತಿ. ಇಂತಹ ಸಂದರ್ಭಗಳಲ್ಲೆಲ್ಲಾ ನನ್ನಜ್ಜ ನೆನಪಾಗುತ್ತಾನೆ. ಆದರೆ ಕಾಣದ ಆತನ ಮುಖ ಅವರಿವರು ಹೇಳುವ ಪ್ರಸಂಗಗಳಲ್ಲಿ ನೆನಪುಗಳಲ್ಲಿ ನೆನಪಾಗಿ ಕಾಡುತ್ತಾನೆ. ಕೊನೆಗೂ ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ನನ್ನಜ್ಜನ ಪಟವೊಂದು ಇರಬೇಕಾಗಿತ್ತು. ಅದನ್ನು ನಮ್ಮ ಮುಂದಿನ ಪೀಳಿಗೆಯು ನೋಡಬೇಕೆಂದು ಆದರೆ ಅಜ್ಜ ಪದಗಳಲ್ಲಿ ಮಾತ್ರ ನೆನಪಾಗಿ ಉಳಿದಿದ್ದಾನೆ.

(ಮುಂದುವರಿಯುವುದು)