ಎಮಿಲಿ ಮನೆಯೇ ಮಂದಿರವೆಂದು ನಂಬಿದ್ದವಳು. ಇಗರ್ಜಿಗಳಿಗೆ ಹೆಚ್ಚಾಗಿ ಭಾಗವಹಿಸದೇ, ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಅನಾರೋಗ್ಯ ನಡುವೆಯೂ ಒಂದಿಷ್ಟು ಉಲ್ಲಸಿತಳಾಗಿರೋವಾಗ ಅನೇಕ ಸೃಜನಶೀಲ ಕೆಲಸಗಳಲ್ಲಿ ಮಗ್ನಳಾಗುತ್ತಿದ್ದಳು. ಸ್ನೇಹಿತರಿಗೆ ಪತ್ರ ಬರೆಯುವುದು, ತಾನು ಬರೆದ ಪದ್ಯಗಳಲ್ಲಿ ಕೆಲವನ್ನು ಮಾತ್ರ ಸನ್ಮಿತ್ರರಿಗೆ ಟಪಾಲು ಹಾಕಿದರೂ ಅವೆಷ್ಟೋ ಪದ್ಯಗಳು ಅವಳಲ್ಲೇ ಉಳಿಯುತ್ತಿದ್ವು. ಎಮಿಲಿಯ ಬಳಿ 1958ರ ಒಳಗಾಗಿ, ಸ್ವಚ್ಛ ಬಿಳಿ ಹಾಳೆಯ ಮೇಲೆ ಅಂದವಾಗಿ ಬರೆದಿಟ್ಟ 40 ಹಸ್ತಪ್ರತಿಗಳು ಇದ್ದವು. ಹತ್ತಿರ 800 ಪದ್ಯಗಳು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಎಮಿಲಿ ಡಿಕಿನ್ಸನ್ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ನಮ್ಮ ಬದುಕು ಕ್ಷಣ ಮಾತ್ರದಲ್ಲಿ ಬದಲಾಗುವಾಗ ಆ ಕಟುವಾಸ್ತವದೊಂದಿಗೆ ನಾವು ಸಂಭಾಳಿಸಿಕೊಳ್ಳಲು, ಮುಂದಿರುವ ಅಪರಿಚಿತ ದಾರಿಯನ್ನು ಅಂದಾಜಿಸಲು ಕಾವ್ಯ ನಮ್ಮ ಕೈ ಹಿಡಿದು ನಡೆಸುವುದು. ಕವಿ ಪ್ರಶ್ನಿಸುವವರು, ಸದಾ ಏನನ್ನೋ ಶೋಧಿಸುವ, ಹುಡುಕುವ ಅನ್ವೇಷಕರು. ಏಕಕೋಶಿಯ ಜೀವಿ ಅಮೀಬಾದ ಹಾಗೆ ಅಜ್ಞಾತವಾಗಿರೋದನ್ನ ಅನ್ವೇಷಿಸಿ ಅದಕ್ಕೊಂದು ಸರಿಯಾದ ರೂಪ ಕೊಡುವವರು.

10 ಡಿಸೆಂಬರ್ 1830 ರಂದು ಅಮೇರಿಕಾದ ಅಮ್ಹರ್ಸ್ಟ ನಲ್ಲಿ ಜನಿಸಿದ ಎಮಿಲಿ ಡಿಕನ್ಸನ್ ತನ್ನೊಳಗಿನ ಎಲ್ಲಾ ಮಾತು, ಪಿಸುಮಾತು, ಆಧ್ಯಾತ್ಮ, ಆತಂಕ, ಭಯ, ತವಕ, ತಳಮಳ, ತಲ್ಲಣಗಳು… ಹೀಗೆ ಎಲ್ಲವನ್ನೂ ಕಾವ್ಯವಾಗಿಸಿ ಓದುಗರಿಗೆ ಒಂದು ಏಕಾಂತದ ಮಧುರ ಹಿತವನ್ನು ತಂದು ಕೊಟ್ಟಿವೆ. ಕಾವ್ಯವೆಂದರೆ ಎಲ್ಲಾ ಅನಿಶ್ಚಿತತೆ, ಅಸ್ಪಷ್ಟತೆ, ಬೆಳಕು-ಕತ್ತಲು ಇವೆಲ್ಲವನ್ನೂ ಸಂಭಾಳಿಸುವ, ಅದೆಷ್ಟೋ ಉತ್ತರವಿಲ್ಲದ ಪ್ರಶ್ನೆಗಳಿಗೆ, ಉತ್ತರ ಹುಡುಕದೆ ಕತ್ತಲನ್ನೇ ಅನುರಣಿಸಿ ಸುಮ್ಮನೆ ಜೀವಿಸುವ, ಧ್ವನಿಸುವ‌, ರಿಂಗಣಿಸಿಸುವಂಥವು ಎಮಿಲಿಯ ಪದ್ಯಗಳು.

ಬಾಲ್ಯದಲ್ಲಿ ತನ್ನ ಸಹೋದರ, ಸಹೋದರಿಯೊಂದಿಗೆ ತುಂಬಾ ಒಳ್ಳೆಯ ಮಗು, ಓದಿನಲ್ಲೂ ಮುಂದು ಎಂದೆನ್ನಿಸಿಕೊಂಡು ಬೆಳೆದ ಮಗು. ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಪುಟ್ಟ ಎಮಿಲಿ ಪಿಯಾನೋ ನುಡಿಸುವುದರಲ್ಲಿ ವಿಶೇಷ ಆಸಕ್ತಿ. ಹದಿಹರೆಯಕ್ಕೆ ಕಾಲಿಡುವಷ್ಟರೊಳಗೆ ಆಪ್ತ ಜೀವಗಳ ಸಾವನ್ನು ತುಂಬಾ ಹತ್ತಿರದಿಂದ ಕಂಡು, ಆ ನೋವು ಅವಳನ್ನು ಜರ್ಜರಿತಳನ್ನಾಗಿಸಿತು. ದೇಹಾರೋಗ್ಯ ಸದಾ ತೊಂದರೆಯಲ್ಲೇ ಇತ್ತು. “ನಾನು ಯಾರು ಅಲ್ಲ, ನೀನ್ಯಾರು?” ಈ ಪದ್ಯದಂತೆ ಎಮಿಲಿ ಎಂದಿಗೂ ಅರಚುಮಾರಿಯಾಗಲು ಇಷ್ಟ ಪಡದ ಸಾರ್ವಜನಿಕವಾಗಿರಲು ಇಷ್ಟ ಪಡದ, ಏಕಾಂತವಾಗಿರಲು ಬಯಸುವ (ಪ್ರೈವೇಟ್) ವ್ಯಕ್ತಿ. ಇದೇ ಕಾರಣಕ್ಕೆ ನನಗೆ ಇಷ್ಟವಾದ ಹಾಗೆ ಹಲವರಿಗೆ ಎಮಿಲಿ ಅಚ್ಚುಮೆಚ್ಚು.

ಎಮಿಲಿ ಮನೆಯೇ ಮಂದಿರವೆಂದು ನಂಬಿದ್ದವಳು. ಇಗರ್ಜಿಗಳಿಗೆ ಹೆಚ್ಚಾಗಿ ಭಾಗವಹಿಸದೇ, ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಅನಾರೋಗ್ಯ ನಡುವೆಯೂ ಒಂದಿಷ್ಟು ಉಲ್ಲಸಿತಳಾಗಿರೋವಾಗ ಅನೇಕ ಸೃಜನಶೀಲ ಕೆಲಸಗಳಲ್ಲಿ ಮಗ್ನಳಾಗುತ್ತಿದ್ದಳು. ಸ್ನೇಹಿತರಿಗೆ ಪತ್ರ ಬರೆಯುವುದು, ತಾನು ಬರೆದ ಪದ್ಯಗಳಲ್ಲಿ ಕೆಲವನ್ನು ಮಾತ್ರ ಸನ್ಮಿತ್ರರಿಗೆ ಟಪಾಲು ಹಾಕಿದರೂ ಅವೆಷ್ಟೋ ಪದ್ಯಗಳು ಅವಳಲ್ಲೇ ಉಳಿಯುತ್ತಿದ್ವು. ಎಮಿಲಿಯ ಬಳಿ 1958ರ ಒಳಗಾಗಿ, ಸ್ವಚ್ಛ ಬಿಳಿ ಹಾಳೆಯ ಮೇಲೆ ಅಂದವಾಗಿ ಬರೆದಿಟ್ಟ 40 ಹಸ್ತಪ್ರತಿಗಳು ಇದ್ದವು. ಹತ್ತಿರ 800 ಪದ್ಯಗಳು. ಎಮಿಲಿಯ ಪದ್ಯಗಳನ್ನು ಸಂಕಲಿಸಿ ಮೂರು ಆವೃತ್ತಿಗಳಲ್ಲಿ ಬೇರೆ ಬೇರೆಯವರು ಪ್ರಕಟಿಸಿದರು. ಇದೆಲ್ಲಾ ಆಗಿದ್ದು ಮಾತ್ರ ಅವಳ 56ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದಿಂದ ಮಡಿದ ನಂತರ.

“100 selected poems of Emily Dickinson” ಬಹುತೇಕ ಕವಿತೆಗಳು ಇದೇ ಸಂಕಲನದಲ್ಲೇ ಓದಿದ್ದರೂ “ಯಾರಿಗೂ ಗೊತ್ತಿರದ ಈ ಪುಟ್ಟ ಗುಲಾಬಿ” ಈ ಕವಿತೆ ಅಚಾನಕ್ಕಾಗಿ ನನ್ನ ಗಮನ ಸೆಳೆದದ್ದು ಅಂತರ್ಜಾಲದ ಯಾವುದೋ ಒಂದು ಲಿಂಕ್ ನಲ್ಲಿ. ಈ ಪದ್ಯ ಓದಿದ ಇಡೀ ದಿನ ನನಗೆ ಯಾವ ಕೆಲಸವನ್ನೂ ಮಾಡಲಾಗಲಿಲ್ಲ. ಎಂತದೋ ಒಂದು ಚಡಪಡಿಕೆ… ಪದ್ಯದ ಕೊನೆಯ ಸಾಲು – ” Ah little rose-how easy for such as thee to die!” ನನ್ನನ್ನು ತೀವ್ರವಾಗಿ ಕಾಡಿತ್ತು. ನನ್ನ ಅತ್ಯಾಪ್ತರಿಗೆ ಈ ಪದ್ಯದ ಚಡಪಡಿಕೆಯನ್ನು ದಾಟಿಸಿ ಒಂಟಿ ಚಂದಿರ ಬಾನಿನಲ್ಲಿ ಕಾಣುವಷ್ಟರಲ್ಲಿ ಭಾವ ಅನುವಾದವಾಗಿ ಮಳೆ ಬಂದು ಹೋದ ಹಾಗೆ ನಿರಾಳವಾದೆ.

ಎಮಿಲಿ ಪದ್ಯಗಳನ್ನು ಅನುವಾದಿಸುವುದೇ ಒಂದು ದುಃಸ್ಸಾಹಸ. ತುಂಬಾ ಕಡಿಮೆ ಪದಗಳಲ್ಲಿ ತೀವ್ರವಾಗಿ, ಆಪ್ತವಾಗಿ ಹೇಳುವ ಅವಳ ಕೌಶಲ, ಅಷ್ಟೇ ತೀವ್ರವಾಗಿ ಭಾಷೆಗೆ ತರುವುದು ಅಬ್ಬಾ, ಮೀಟರ್, ರೈಮ್ ಇತ್ಯಾದಿ ಯಾವ ಭಾಷಾ ಪಾಂಡಿತ್ಯವೂ ಇರದ ನನಗೆ ಸವಾಲು.

ಸಹಜವಾಗಿ ಮೊದಲಿಗೆ ಪ್ರೇಮ, ವಿರಹದ ಪದ್ಯಗಳೇ ಸೆಳೆದಿದ್ದರು ತದನಂತರ ಎಮಿಲಿಯು ನನ್ನನ್ನು ಗಾಢವಾಗಿ ಆವರಿಸಿಕೊಂಡಳು. “ಹಕ್ಕಿಯೊಂದು ಬಂತು ನನ್ನ ಹಾದಿಯಲಿ” ಒಂದು ತೀರಾ ಸಾಮಾನ್ಯ ನೋಟದ ಪದ್ಯ. ಒಂದು ಹಕ್ಕಿ ಹುಳುವನ್ನು ಕುಕ್ಕಿ ತಿನ್ನೋದು, ಇಬ್ಬನಿ ಕುಡಿಯೋದು ಹೀಗೆ ಆದರೆ ಪದ್ಯದ ಕೊನೆಯ ಚರಣ ಓದುವಾಗ ಆಗುವ ಅನುಭವ ನಾನಿಲ್ಲಿ ಹೇಗೆ ಹೇಳಲಿ? ಆ ಪದ್ಯವನ್ನು ಓದಿಯೇ ಅನುಭೂತಿಗೊಳಗಾಗಬೇಕು.

ಎಂದಿನಂತೆ ಯಾವ ಕವಿತೆಗೂ ಶೀರ್ಷಿಕೆ ಕೊಡದ ಎಮಿಲಿಯನ್ನು ಅವಗಾಹನಿಸಿಕೊಂಡ ನನ್ನ ಈ ಆವೃತ್ತಿ ನಿಮ್ಮ ಓದಿಗೆ… ಓದುವ ಸುಖ ನಿಮ್ಮದಾಗಲಿ.

ಪದ್ಯ – 1
Nobody knows this little Rose

ಯಾರಿಗೂ ಗೊತ್ತಿರದ ಈ ಪುಟ್ಟ ಗುಲಾಬಿ
ಯಾತ್ರಿ ಇರಬಹುದು
ಹಾದಿಯಲ್ಲಿ ನಾನು ಇವಳನ್ನು ಮೇಲೆತ್ತಿಕೊಂಡರೆ
ದುಃಖಿಸುವುದು ಯಾವುದೋ ದುಂಬಿ ಮಾತ್ರ
ದುಃಖಿಸುವುದು ಎದೆಯ ಮೇಲೊರಗಲು
ಬರುವ ಯಾವುದೋ ಚಿಟ್ಟೆ ಮಾತ್ರ
ಬೆರಗು, ದೂರ ಪಯಣದ ಹಕ್ಕಿಗೆ ಮಾತ್ರ
ನಿಡುಸುಯ್ಯುವುದು ಸುಳಿಗಾಳಿ ಮಾತ್ರ

“ಓಹ್ ಪುಟ್ಟ ಗುಲಾಬಿ!
ಸಾಯುವುದು ಎಷ್ಟು ಸಲೀಸು
ನಿನ್ನಂಥವರಿಗೆ”

ಪದ್ಯ – 2
I’m Nobody! Who are you?

ನಾನು ಯಾರು ಅಲ್ಲ,
ನೀವ್ಯಾರು?
ನೀವು ಕೂಡ ಯಾರು ಅಲ್ವಾ?
ಹಾಗಿದ್ರೆ ಸರಿ ನಾವಿಬ್ರೂ ಭಲೇ ಜೋಡಿ
ಶ್! ಯಾರಿಗೂ ಹೇಳಬೇಡಿ
ಸುಮ್ಮನೆ ಡಂಗೂರ ಸಾರಿ ಬಿಟ್ಟಾರು ನೋಡಿ

ಯಾರೋ ಆಗಿರುವುದೆಂದರೆ
ಮಹಾನ್ ಬೋರ್ ಅಲ್ವಾ!
ಇಡೀ ಮಳೆಗಾಲ ಜವುಗು ನೆಲಕ್ಕೆ
ತಮ್ಮದೇ ಬಡಾಯಿ ಕೊಚ್ಚಿಕೊಳ್ಳುವ
ಊರ ಮುಂದಿನ ಕೆರೆಯ
ವಂಡರಗಪ್ಪೆಯ ಹಾಗೆ

ಪದ್ಯ – 3
Water, is taught by thirst

ನೀರನ್ನು- ಕಲಿಸುವುದು ನೀರಡಿಕೆ
ನೆಲವನ್ನು – ಸರಿವ ಸಮುದ್ರ
ಪಯಣವನ್ನು – ಬಳಲಿಕೆ
ಶಾಂತಿಯನ್ನು – ಯುದ್ಧ ಕಥನ
ಪ್ರೀತಿಯನ್ನು – ಗೋರಿಯ ಕಲ್ಲು
ಹಕ್ಕಿಗಳನ್ನು – ಹಿಮ

ಪದ್ಯ – 4
Heart! We will forget him!

ಓ ಮನಸೇ…!!!
ಈ ರಾತ್ರಿ
ನಾವಿಬ್ಬರೂ ಕೂಡಿ
ಅವನನ್ನ ಮರೆಯೋಣ
ನೀನು ಅವನು ನೀಡಿದ ಬಿಸುಪನ್ನ
ಮತ್ತು ನಾನು ಅವನು ದಾಟಿಸಿದ ಬೆಳಕನ್ನ

ನಿನ್ನದಾದ ನಂತರ
ದಯವಿಟ್ಟು ನನಗೆ ಹೇಳು
ನಾನೂ ಸುರು ಮಾಡುವೆ
ಅವಸರಿಸು ನೀನೇನಾದರೂ ನಿಧಾನಿಸಿದರೆ
ನಾನು ಮತ್ತೆ ಅವನನ್ನ ನೆನೆಯುವೆ!

ಪದ್ಯ -5
A Bird, came down the Walk

ಹಕ್ಕಿಯೊಂದು ಬಂತು ನನ್ನ ಹಾದಿಯಲಿ
ಗೊತ್ತಿಲ್ಲ ಅವನಿಗೆ ನಾ ಕಂಡೆನೆಂದು
ಎರೆಹುಳು ಒಂದನ್ನು ಎರಡು ತುಂಡಾಗಿ
ಕಡಿಯಿತು ಆಮೇಲದನ್ನ ಹಾಗೇ ತಿಂತು

ಮಗ್ಗುಲಲ್ಲಿದ್ದ ಹುಲ್ಲೊಂದರ
ಮೇಲಿನ ಇಬ್ಬನಿ ಹನಿ ಕುಡಿಯಿತು
ಜೀರುಂಡೆಯೊಂದಕೆ ದಾರಿ ಬಿಡಲು
ಗೋಡೆಯ ಕಡೆಗೆ ಪಕಕ್ಕೆ ನೆಗೆಯಿತು

ಅವನು ತನ್ನ ಮಖಮಲ್ಲು ತಲೆ ಕೊಡವುತ್ತ
ಫಕ್ಕನೆ ಲೋಕದ ಸುತ್ತ ಹಾಯಿಸಿ
ಪಿಳಪಿಳನೆ ಪಿಳುಕಿಸುವ ಕಣ್ಣು
ಹೆದರಿದ ಮಣಿಗಳಂತಿದ್ದವೆಂದು ನನಗನಿಸಿತು

ಕುತ್ತು ಬಂದಂತೆ ಹುಷಾರಾಗಿ
ಒಂದು ತುತ್ತು ರೊಟ್ಟಿ ನೀಡಿದೆ
ತಟ್ಟನೆ ರೆಕ್ಕೆ ಬಿಡಿಸಿ
ಹೋದ ತನ್ನ ಮನೆಯತ್ತ ಹಾರಿ –

ಹೇಗೆಂದರೆ:
ಬೆಳ್ಳಿನೊರೆ ಗೆರೆ ಕೊರೆಯದೆ
ಹುಟ್ಟು ಕಡಲನ್ನು ಸೀಳುವಂತೆ
ಚಿಟ್ಟೆಗಳು ಮಧ್ಯಾಹ್ನದ ದಂಡೆಗಳಿಂದ
ಪುಟಿದು, ನೀರ ಸಪ್ಪಳ ಮಾಡದೆ ಈಜುವುದಕ್ಕಿಂತ

ಪದ್ಯ – 6
The Heart asks Pleasure – first 

ಈ ಹೃದಯ ಬಯಸುತ್ತೆ
ಮೊಟ್ಟ ಮೊದಲಿಗೆ ಸುಖವನ್ನ
ಆ ಮೇಲೆ
ನೋವಿನಿಂದ ಮಾಫಿಯನ್ನ
ಆ ಮೇಲೆ ನೋವು
ಮರಗಟ್ಟಿಸೋ
ಆ ಸಣ್ಣ ಗುಳಿಗೆಯನ್ನ

ಆ ಮೇಲೆ
ನಿದ್ರೆಗೆ ಜಾರುವುದನ್ನ
ಅನಂತರ ಮಾತ್ರ
ದಂಡಾಧಿಪತಿಯ ಅನುಮತಿ ಸಿಕ್ಕರೆ
ಸಾಯುವ ಅನುಮತಿಯನ್ನು

ಪದ್ಯ – 7
I haven’t told my garden yet

ನನ್ನ ಹೋದೋಟಕ್ಕೂ ಇನ್ನು ತಿಳಿಸಿಲ್ಲ
ವಿವಶವಾಗದಿರಲಿ ನಾನು
ಆ ದುಂಬಿಗೂ ಗುಟ್ಟು ಬಿಟ್ಟು ಕೊಡುವ
ಅಳವು ಇನ್ನೂ ನನ್ನಲ್ಲಿಲ್ಲ

ಬೀದಿಯಲ್ಲಿ ಖಂಡಿತವಾಗಿಯೂ
ಅದರ ಹೆಸರೊಡೆಯಲಾರೆ
ದುಕಾನುಗಳು ನನ್ನನ್ನೇ ದುರುಗುಟ್ಟಿಯಾವು
ಈ ಅಜ್ಞಾನಿ ಅವಿವೇಕಿಗೆ
ಸಾವನೆದರಿಸುವ ಮುಖವೇ?

ನಾನು ಓಡಾಡಿಡದ ಆ ಬೆಟ್ಟಗುಡ್ಡಗಳ
ಬದಿಗೂ ತಿಳಿಯಬಾರದು
ಊಹೂಂ ಪ್ರೀತಿಸುವ ಕಾನನಕೂ
ತಿಳಿಯಲೇಬಾರದು ನಾನು
ಹೊರಟು ಹೋಗುವ ದಿನ

ಬಾಯಿ ಬಿಡಲೇಬಾರದು ಆಪ್ತರ ಬಳಿ
ಯಾರೋ ದಾರಿಹೋಕರ ಬಳಿಯೂ
ಇಂದೇ ನಡೆದು ಹೋಗುವೆನೆಂದು
ಒಡಪ ಹಚ್ಚಿ ಹೇಳಿಬಿಡಬೇಕು ಅಷ್ಟೇ!

ಪದ್ಯ – 8
If recollecting were forgetting

ನೆನೆಯುವುದೇ
ಮರೆಯುವುದೆಂದಾದರೆ
ನಾನು ನೆನೆಯುವುದಿಲ್ಲ
ಒಂದು ವೇಳೆ ಮರೆಯುವುದೇ
ನೆನೆಯುವುದೆಂದಾದರೆ

ಅದೆಷ್ಟು ಸಲೀಸಾಗಿ
ನಾನು ಮರೆತು ಹೋದೆ
ವಿಯೋಗವೇ ಸಡಗರವೆಂದಾದರೆ
ದುಃಖಿಸುವುದೇ ಸುಖವೆಂದಾದರೆ

ಛೆ…!
ನಿನಗಾಗಿ ಈ ಹೂಗಳನ್ನ
ಇಂದು ಆಯ್ದು ಕಟ್ಟಿದ
ಈ ಬೆರಳುಗಳದು ಅದೆಂಥ

ದು
ರ್ದೈ
ವ!