ಕಿಟ್ಟಪ್ಪ ಪಟ್ಲು ಗೋವಿಯನ್ನು ಯಾರಿಗೂ ಕಾಣದೆ ಹಿಡಿದುಕೊಂಡಿದ್ದಾನೆ. ನಾವು ಈತ ಈಗೇನು ಮಾಡಬಹುದೆಂದು ನೋಡುತ್ತಿದ್ದೆವು, ನಿಧಾನವಾಗಿ ಅವನು ಅದನ್ನು ಪ್ರಯೋಗಿಸಿದ್ದ. ಗುಂಪಿನ ಮಧ್ಯೆ ಅದು ಯಾರಿಗೋ ಬಡಿಯಿತು, ಯಾರೋ ಏನೋ ಮಾಡಿದರು ಎಂದು ಎಲ್ಲರೂ ಗಾಬರಿಯಾಗಿ ನೋಡುತ್ತಿದ್ದರು. ಹುಡುಗಿಯರ ಮಧ್ಯೆ ಒಬ್ಬರ ತಲೆಯಿಂದ ರಕ್ತ ಸುರಿಯುತ್ತಿತ್ತು. ಒಂದು ಬಾರೆ ಹಣ್ಣಿನಿಂದ ಹೀಗಾಗಲು ಸಾಧ್ಯವೇ ಎಂದು ಯೋಚಿಸುತ್ತಿರಬೇಕಾದರೆ ಊರಿನ ಹಿರಿಯರಲ್ಲಿ ಕೆಲವರು ನಮ್ಮ ಕಡೆಯೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ

ಬಾರೆ ಹಣ್ಣುಗಳಿಗೆ ಮುಗಿ ಬೀಳುತ್ತಿದ್ದ ಕಾಲವದು, ಸೀಬೆಹಣ್ಣು ಅನ್ನುವುದು ಕನಸು ನಮಗೆ ಮತ್ತು ಅದನ್ನು ಮನೆಗೆ ತಂದ ನೆನಪು ಇಲ್ಲ. ಬಾರೆ ಹಣ್ಣನ್ನು ತಿನ್ನಬೇಡಿ ಎಂದು ಮನೆಯಲ್ಲಿ ಎಷ್ಟು ಹೇಳಿದರು ನಾನು ಕೇಳುತ್ತಿರಲಿಲ್ಲ. ಬಾರೆ ಹಣ್ಣುಗಳಿಗೆ ಬೇರೆಬೇರೆ ಹೆಸರುಗಳಿವೆ ಎಂದು ನಮಗಲ್ಲ ನಮ್ಮಪ್ಪನಿಗೂ ತಿಳಿದಿರಲಿಲ್ಲ. ಹೀಗಾದರೆ ಗೂಗಲ್ ಸರ್ಚ್ ಮಾಡಿ ಅದರ ಸಂಪೂರ್ಣ ವಿಷಯವನ್ನು ತಿಳಿಯಬಹುದು ಮತ್ತು ನನಗೊಬ್ಬನಿಗೆ ಅದರ ಬಗ್ಗೆ ತಿಳಿದಿದೆ ಎಂದು ಬೀಗಬಹುದು ಅಥವಾ ಕೇಳುವವರು ಮುಂದೆ ಪುಂಖಾನು ಪುಂಖವಾಗಿ ಬಿಟ್ಟಿ ಉಪನ್ಯಾಸ ನೀಡಬಹುದು.

ಬಾರೆಹಣ್ಣಿನ ಕಾಲವು ಸಾಮಾನ್ಯವಾಗಿ ನವಂಬರ್ ಡಿಸೆಂಬರ್ ತಿಂಗಳಲ್ಲಿ ಬರುವುದು ಬಾರೆಹಣ್ಣು ಸಂಗ್ರಹಿಸುವುದಕ್ಕೆ ಚರ್ಚೆಯಾಗುತ್ತಿದ್ದ ದಿನಗಳು ಇದ್ದವು. ಊರಿನ ಹೊರಭಾಗದಲ್ಲಿ ಹುಣಸೆ ಮರದ ಬಾವಿಯೆಂದೆ ಪ್ರಸಿದ್ಧಿ ಪಡೆದಿದ್ದ ಬಾವಿಯೊಂದು ಇತ್ತು. ಬಹಳ ಆಳವಾದ ಬಾವಿಯದು. ಅದರ ಹತ್ತಿರ ಹೋಗುವುದಕ್ಕೆ ನಾವೆಲ್ಲ ಹೆದರುತ್ತಿದ್ದೆವು. ಆ ಬಾವಿಯ ಪಕ್ಕದಲ್ಲಿ ಸುಮಾರು ಮೂರ್ನಾಲ್ಕು ಅಡಿಗಳಷ್ಟು ಆಳವಾದ ಕಂದಕ ರೂಪದ ಓಣಿಯಿತ್ತು. ಮಳೆ ಬಂದಾಗ ಊರಿನ ಮೇಲ್ಬಾಗದಿಂದ ಹರಿದು ಬರುತ್ತಿದ್ದ ಮಳೆ ನೀರೆಲ್ಲಾ ಅದರ ಮೂಲಕ ಪಕ್ಕದ ಊರಿನ ಕೆರೆಗೆ ನೀರು ಹರಿದು ಹೋಗಲು ಮಾಡಿದ ವ್ಯವಸ್ಥೆ ಅದಾಗಿತ್ತು. ಬ್ರಿಟಿಷರ ಅವಧಿಯಲ್ಲಿ ಅದಿತ್ತು ಎಂದು ನಮ್ಮ ಅಜ್ಜಿ ಯಾವಾಗಲೂ ಹೇಳುತ್ತಿದ್ದಳು. ಆಗ ಸಮೃದ್ಧಿ ಮಳೆಗಾಲವಾದ್ದರಿಂದ ಮಳೆ ಉತ್ಕೃಷ್ಟವಾಗಿ ಬರುತ್ತಿತ್ತು ಅದರ ತುಂಬಾ ನೀರು ಹರಿಯುತ್ತಿತ್ತು. ಅದನ್ನು ಕಳ್ಳಿವಾಣೆ ಎಂದೇ ಕರೆಯುತ್ತಿದ್ದೆವು.

ಅದರ ಒಂದು ಬದಿಯಲ್ಲಿ ಹೊಲಗಳಿಗೆ ಓಡಾಡುವುದಕ್ಕೆ ಒಂದು ಕಾಲುದಾರಿ ಮಾಡಿಕೊಂಡಿದ್ದರು. ಉಳಿದ ಭಾಗದಲ್ಲಿ ಅತಿ ಹೆಚ್ಚು ಕಳ್ಳಿ ಗಿಡಗಳು ಬೆಳೆದು ಗುಂಪಾಗಿ ಇತ್ತು. ಅದರ ಒಳಗೆ ಸೂರ್ಯನ ಬೆಳಕು ಬರುತ್ತಿದ್ದದ್ದು ಕಡಿಮೆ ಎನ್ನುವಷ್ಟು ಗುಂಪು. ಅದಕ್ಕಾಗಿ ಮನೆಯಲ್ಲಿ ಹುಣಸೆ ಮರದ ಬಾವಿಯನ್ನು ತೋರಿಸಿ ಅದರ ಬಗ್ಗೆ ಅನೇಕ ಕಥೆಗಳನ್ನು ಹೇಳಿ ನಾವು ಹೋಗದಂತಿರಲಿ ಅನ್ನೋ ಕಾರಣಕ್ಕೆ ಅದರಲ್ಲಿ ದೆವ್ವಗಳು ವಾಸಿಸುತ್ತವೆ ಎಂದು, ಅದರ ಬಗ್ಗೆ ಕಥೆ ಕಟ್ಟಿದ್ದರು. ಹಳ್ಳಿಗಳಲ್ಲಿ ಈ ರೀತಿಯ ಕಥೆ ಕಟ್ಟುವುದು ಮಾಮೂಲು. ಆದರೆ ಅದರ ಅನುಭವವು ನಮಗೆಂದೂ ಆಗಿಲ್ಲ. ನಮ್ಮನ್ನು ನಾವೇ ನೋಡಿಕೊಂಡೋ ನಮ್ಮ ನೆರಳಿಗೆ ನಾವೆ ಹೆದರಿದ ಅನುಭವವಾಗಿದೆ. ಯಾವ ದೆವ್ವವನ್ನು ನಾನು ನೋಡಿಲ್ಲ. ಸಿನಿಮಾಗಳಲ್ಲಿ ಅದರ ವಿಕಾರತೆಯ ದರ್ಶನವಾಗಿದೆ ಅಷ್ಟೇ. ಬಾವಿಯು ನೋಡಲು ಅಷ್ಟೇ ಹೆದರುವಂತಿದ್ದದ್ದು ನಿಜವು ಕೂಡ. ಆ ಕಳ್ಳಿವಾಣೆಯ ಒಂದು ಬದಿಗೆ ಒಂದು ದೊಡ್ಡ ಬಾರೆ ಮರವಿತ್ತು. ಬಹಳ ರುಚಿಯಾದ ಹಣ್ಣಿನ ಗಿಡವದು. ಅದಕ್ಕೆ ನಾವು ಮಕ್ಕಳೆಲ್ಲ ಹೇಗೆ ಮುಗಿ ಬೀಳುತ್ತಿದ್ದೆವು ಎಂದರೆ ಬೆಳಿಗ್ಗೆ ಕತ್ತಲಲ್ಲಿ ಹೋಗಿ, ಅದರ ಹಣ್ಣುಗಳನ್ನು ಸಂಗ್ರಹಿಸುತ್ತಿದ್ದ ದಿನಗಳು ಇದ್ದವು.

ತರಗತಿಯಲ್ಲಿ ಪಾಠ ಕೇಳುವಾಗಲೇ ಜಾಮಿಟ್ರಿ ಬಾಕ್ಸ್ ನಿಂದ ಒಂದೊಂದೇ ತೆಗೆದು ಅದನ್ನು ಬೀಜ ಬೆಳ್ಳಗಾಗುವವರೆಗೂ ನಾಲಿಗೆಯನ್ನು ಅತ್ತಿತ್ತ ಆಡಿಸುತ್ತಾ ಅದನ್ನು ಸವಿಯುತ್ತಿದ್ದ ರೀತಿ ಒಂದು ರೀತಿಯ ಆನಂದವನ್ನು ಮನಸ್ಸಿಗೆ ಉತ್ಸಾಹವನ್ನು ಮೂಡಿಸುತ್ತಿದ್ದವು. ಬಾರೆ ಹಣ್ಣನ್ನು ಪಡೆಯುವುದಕ್ಕಾಗಿಯೇ ಬೇರೆಯವರ ಗಣಿತದ ಲೆಕ್ಕಗಳನ್ನು ಮಾಡಿಕೊಡುತ್ತಿದ್ದೆ. ಹಾಗಾಗಿ ಬಾರೆಹಣ್ಣು ಲೆಕ್ಕದ ವಿಷಯಕ್ಕಾಗಿ ಲಂಚದ ಸ್ವರೂಪವನ್ನು ಪಡೆದಿತ್ತು. ಯಾರದೇ ಜಾಮಿಟ್ರಿ ಬಾಕ್ಸ್ ತೆರೆದರು ಬಾರೆ ಹಣ್ಣುಗಳು ತುಂಬಿರುತ್ತಿದ್ದವು. ಎಷ್ಟೋ ಸಂದರ್ಭದಲ್ಲಿ ಗಣಿತದ ಮೇಷ್ಟ್ರು ಅವನ್ನು ನೋಡಿ ನಮ್ಮನ್ನು ಹೊಡೆದದ್ದು ಇದೆ. ಮನೆಗಳಲ್ಲಿ ಒದೆ ತಿನ್ನುವುದು ಸಹ ಕಾಯಂ ಆಗಿತ್ತು. ಅದರಲ್ಲೂ ಹಣ್ಣಾದ ಬಾರೆ ಹಣ್ಣುಗಳನ್ನು ಸಂಗ್ರಹಿಸಿ ತಿನ್ನುತ್ತಿದ್ದೆವು. ಬಡತನವನ್ನೇ ಹಾಸುಹೊದ್ದು ಮಲಗಿದ್ದ ನಮಗೆಲ್ಲ ಬಾರೆಹಣ್ಣುಗಳೇ ನಮ್ಮ ಹಸಿವನ್ನು ತಣಿಸುವ ಹಣ್ಣಿನ ರಾಜ ಎಂದರೆ. ತಪ್ಪಾಗಲಾರದು. ನಾವು ಗೆಳೆಯರೆಲ್ಲಾ ಇಬ್ಬರು ಮೂವರಾದರೂ ಹಣ್ಣುಗಳನ್ನು ಸಂಗ್ರಹಿಸುವುದಕ್ಕೆ ಹೋಗುತ್ತಿದ್ದೆವು. ಕೆಲವೊಮ್ಮೆ ಅದರ ಬೀಜಗಳನ್ನು ಒಣಗಿಸಿ ಕುಟ್ಟಿ ಅದರ ಒಳತಿರುಳನ್ನು ತಿನ್ನುತ್ತಿದ್ದ ನಮಗೇನು, ಅದರಿಂದ ಎಷ್ಟು ಅನುಕೂಲಗಳಿವೆ ಎಂದು ಗೊತ್ತಿರಲಿಲ್ಲ. ಅದನ್ನು ತಿಳಿದುಕೊಂಡವರೂ ಇರಲಿಲ್ಲ. ಬಾರೆ ಹಣ್ಣಿಗೆ ಮುಗಿಬೀಳಲು ಇನ್ನೊಂದು ಕಾರಣವಿತ್ತು. ಬಾರೆಹಣ್ಣನ್ನು ತಂದು ತಿಂದ ಮೇಲೆ ಅದರ ಬೀಜಗಳನ್ನು ಸಂಗ್ರಹಿಸುತ್ತಿದ್ದು ಅವುಗಳನ್ನು ಬಿಸಿಲಿಗೆ ಚೆನ್ನಾಗಿ ಒಣಗಿಸಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದವು. ದೀಪಾವಳಿ ಹಬ್ಬಕ್ಕೆ ಎಂದು ಪ್ರತಿ ವರ್ಷವೂ ನಮ್ಮ ಎದುರು ಮನೆಯ ಕೃಷ್ಣಪ್ಪ ಪಟ್ಲು ಗೋವಿ ಮಾಡುತ್ತಿದ್ದ. ನಾವು ಏಕೆಂದು ಕೇಳಿದರೆ ದೀಪಾವಳಿ ಹಬ್ಬಕ್ಕೆ ಎಂದು ಉತ್ತರಿಸುತ್ತಿದ್ದ. ಇದರಿಂದ ದೀಪಾವಳಿ ಹಬ್ಬ ಹೇಗಾಗುತ್ತದೆ ಎಂದು ಕೇಳಿದರೆ ಕೊಂತ್ಯಮ್ಮನ ಹಬ್ಬದ ದಿನ ಇದರಿಂದ ಬಾರೆ ಗುಂಡುಹೊಡೆಯಬಹುದು ಎನ್ನುತ್ತಿದ್ದ. ಇದರಿಂದ ಹೇಗೆ ಹೊಡೆಯುತ್ತಾನೆ ಯಾಕೆ ಎಂಬ ಪ್ರಶ್ನೆ ಸದಾ ಕಾಡುತ್ತಲೇ ಇತ್ತು. ಪೀಡಿಸಿ ಪೀಡಿಸಿ ಕೇಳಿದಾಗ ಹಬ್ಬದ ದಿನ ತಿಳಿಯುತ್ತದೆ ಎಂದಿದ್ದ ನಮಗೂ ಕುತೂಹಲ “ಬಿದಿರಿನ ಕೊಳವೆಯನ್ನು ಚೆನ್ನಾಗಿ ಒಣಗಿಸಿ ಅದರ ಒಳಭಾಗವನ್ನು ಸ್ವಚ್ಛಗೊಳಿಸಿ ಒಳಭಾಗವು ನಯವಾಗುವಂತೆ ಮಾಡಿ ಕೊಳವೆಯ ತುದಿಗೆ ಬಾರೆ ಬೀಜವನ್ನು ಇಟ್ಟು ಹೊಡೆಯುವಂತೆ ಅದನ್ನು ಸಿದ್ಧಗೊಳಿಸಿ ಅದಕ್ಕೆ ಬಿದರಿನ ಕೋಲನ್ನು ನಯವಾಗಿ ಉಜ್ಜಿ ಸಿದ್ಧಗೊಳಿಸುತ್ತಿದ್ದ. ಅದಕ್ಕೆ ಆಗಾಗ ಎಣ್ಣೆಯನ್ನು ಹಾಕುತ್ತಿದ್ದ. ನಾವು ಅದನ್ನು ನೋಡಿದಾಗ ಇದರಲ್ಲಿ ಯಾವ ಪರಿ ಗುಂಡುಗಳು ಹಾರಿ ಹೋದಾವು ಎಂದು ಕುತೂಹಲದಿಂದ ನೋಡುತ್ತಿದ್ದೆವು” ಅದನ್ನು ಆತ ನಮಗೆ ಬಳಸುವ ವಿಧಾನವನ್ನು ಹೇಳದೆ ಕುತೂಹಲವನ್ನು ಕಾದಿರಿಸಿದ.

ಬಹಳ ಆಳವಾದ ಬಾವಿಯದು. ಅದರ ಹತ್ತಿರ ಹೋಗುವುದಕ್ಕೆ ನಾವೆಲ್ಲ ಹೆದರುತ್ತಿದ್ದೆವು. ಆ ಬಾವಿಯ ಪಕ್ಕದಲ್ಲಿ ಸುಮಾರು ಮೂರ್ನಾಲ್ಕು ಅಡಿಗಳಷ್ಟು ಆಳವಾದ ಕಂದಕ ರೂಪದ ಓಣಿಯಿತ್ತು. ಮಳೆ ಬಂದಾಗ ಊರಿನ ಮೇಲ್ಬಾಗದಿಂದ ಹರಿದು ಬರುತ್ತಿದ್ದ ಮಳೆ ನೀರೆಲ್ಲಾ ಅದರ ಮೂಲಕ ಪಕ್ಕದ ಊರಿನ ಕೆರೆಗೆ ನೀರು ಹರಿದು ಹೋಗಲು ಮಾಡಿದ ವ್ಯವಸ್ಥೆ ಅದಾಗಿತ್ತು. ಬ್ರಿಟಿಷರ ಅವಧಿಯಲ್ಲಿ ಅದಿತ್ತು ಎಂದು ನಮ್ಮ ಅಜ್ಜಿ ಯಾವಾಗಲೂ ಹೇಳುತ್ತಿದ್ದಳು.

ಬಾರೆಹಣ್ಣು ಸಂಗ್ರಹಿಸುವ ಕಾಯಕವಂತೂ ನಡೆದೇ ಇತ್ತು, ದೀಪಾವಳಿ ಹಬ್ಬಗಳಲ್ಲಿ ಹುಡುಗಿಯರೆಲ್ಲ ಗೌರಮ್ಮನನ್ನು ಇಡುವುದು ವಾಡಿಕೆ. ಆ ಸ್ಥಳಕ್ಕೆ ಹುಡುಗರು ಹೋಗುತ್ತಿದ್ದದ್ದು ಬಹಳ ಕಡಿಮೆ. ನಾನಿನ್ನು ಚಿಕ್ಕ ಹುಡುಗನಾದ್ದರಿಂದ ಅಕ್ಕನ ಜೊತೆಯಲ್ಲಿ ಒಂದೆರಡು ಬಾರಿ ಹೋಗಿದ್ದ ನೆನಪು. ಗೌರಮ್ಮನಿಗೆ ಬೆಲ್ಲ ಕುಟ್ಟುವ ಸಂಪ್ರದಾಯ ಇತ್ತು. ಊರಿನಲ್ಲಿ ಮದುವೆ ವಯಸ್ಸಿಗೆ ಬಂದ ಹುಡುಗಿಯರು ಬೆಲ್ಲ ಕುಟ್ಟುತ್ತಿದ್ದದು. ಹಾಗೆ ಮಾಡಿದರೆ ವರ್ಷದೊಳಗೆ ಮದುವೆಯಾಗುತ್ತದೆ ಎಂಬ ನಂಬಿಕೆ. ಅಂತೇ ಮದುವೆಯೂ ನಡೆದು ನಂಬಿಕೆ ಹಾಗೆ ಉಳಿಯುತ್ತಿತ್ತು. ಮದುವೆಯಾಗದೆ ಉಳಿದವರ ಬಗ್ಗೆ ಅವರವರಲ್ಲಿ ಏನೇನೋ ಮಾತಾಡಿಕೊಳ್ಳುತ್ತಿದ್ದರು. ಅವರು ನಿಷ್ಠರಾಗಿ ಭಕ್ತಿಯಿಂದ ಬೆಲ್ಲ ಕುಟ್ಟಿಲ್ಲವೆಂದು ಗೌರಮ್ಮ ಮುನಿಸಿಕೊಂಡಿದ್ದಾಳೆಂದೂ, ಇಲ್ಲ ಇನ್ನೊಮ್ಮೆ ಬೆಲ್ಲ ಕುಟ್ಟಬೇಕೆಂಬ ಕಾರಣಕ್ಕಾಗಿ ಹೀಗಾಗಿದೆ ಎಂದು ಅವರಲ್ಲಿ ಒಂದು ರೀತಿಯ ಸಂಕುಚಿತ ಮನೋಭಾವವನ್ನುಂಟು ಮಾಡುತ್ತಿದ್ದರು. ನನಗೆ ಇವೆಲ್ಲವೂ ಆಶ್ಚರ್ಯ ನಿಗೂಢ ಎನಿಸಿದರು ದೇವರನ್ನು ತಿರಸ್ಕರಿಸುವಷ್ಟು ನಿಂದಿಸುವಷ್ಟು ಧೈರ್ಯವು ಇಲ್ಲದೆ ಸುಮ್ಮನಾಗುತ್ತಿದೆ. ನನ್ನ ತರಗತಿಯ ಹುಡುಗಿಯರು ಪೂಜೆಗೆ ಬರುತ್ತಿದ್ದರಿಂದ ಸಹಪಾಠಿಗಳೊಂದಿಗೆ ಸೇರಿ ಬೇಲಿಯಲ್ಲಿ ಸಿಗುವ ಅಂಟ್ರಿಸೆ ಮುಳ್ಳನ್ನು ಹುಡುಗಿಯರ ತಲೆಗೆ ಎಸೆದು ಮರೆಯಾಗುತ್ತಿದ್ದೆವು. ಅವರು ಅದನ್ನು ಬಿಡಿಸಿಕೊಂಡಷ್ಟು ಅದು ಇನ್ನಷ್ಟು ಕೂದಲಿಗೆ ಅಂಟಿಕೊಳ್ಳುತ್ತಾ ಸಿಕ್ಕು ಸಿಕ್ಕಾಗ ಕೂದಲನ್ನು ಕಿತ್ತುಕೊಂಡೆ ಬಿಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಶಾಪಗಳ ಸುರಿಮಳೆಯೇ ಹುಡುಗರಿಗೆ ಉಡುಗೊರೆಯಾಗುತ್ತಿತ್ತು. ಇಂತಹ ತುಂಟಾಟದ ಕಾರಣಕ್ಕೆ ಹಿರಿಯರೆಲ್ಲ ಸೇರಿ ಹುಡುಗರು ಗೌರಮ್ಮನ ಪೂಜೆ ನಡೆಯುವ ಸ್ಥಳಗಳಿಗೆ ಹೋಗುವುದನ್ನು ನಿರ್ಬಂಧಿಸಿದ್ದರು.

ದೊಡ್ಡವರಾದಂತೆ ಮಡಿವಂತಿಕೆ ಸಾಮಾಜಿಕ ಕಟ್ಟುಪಾಡುಗಳಿಂದ ಅಲ್ಲಿಗೆ ಹೋಗುವುದನ್ನು ಬಿಟ್ಟುಬಿಟ್ಟೆವು. ಅವಾಗೆಲ್ಲಾ ರಾತ್ರಿ ಸಮಯದಲ್ಲೂ ಭಾರಿ ಹಣ್ಣನ್ನು ಹುಡುಕುವುದಕ್ಕೆ ಹೋಗಿ ಕೆಲವೊಮ್ಮೆ ಅನೇಕ ತೊಂದರೆಗೆ ಒಳಗಾಗಿದ್ದು ಹೌದು. ಅಪ್ಪನ ಕೋಲಾಟದ ರುಚಿ ದಕ್ಕಿದ್ದು ಹೌದು. ಈ ಮಧ್ಯೆ ಕಿಟ್ಟಪ್ಪನ ಹತ್ತಿರ ಆಗಾಗ ಪಟ್ಲು ಗೋವಿಯ ಬಗ್ಗೆ ವಿಚಾರಿಸುತ್ತಿದ್ದೆ. ಗೌರಮ್ಮ ಮತ್ತು ಕೊಂತ್ಯಮ್ಮನನ್ನು ಒಟ್ಟಿಗೆ ಕೆರೆಗೆ ಬಿಡುವುದು ಸಂಪ್ರದಾಯವು ಆಗಿತ್ತು. ಆ ದಿನ ಬೆಳಿಗ್ಗೆಯೇ ಮನೆಯ ಮುಂದೆ ಕಿಟ್ಟಪ್ಪ ಪಟ್ಲುಗೋವಿಯನ್ನು ಬಿಸಿಲಿಗೆ ಒಣಗಿಟ್ಟಿದ್ದಾನೆ. ಬೇಟೆಗಾರನು ಬೇಟೆಗೋಗುವ ಮುನ್ನ ಕೋವಿಯನ್ನು ಸಿದ್ಧಪಡಿಸುವವನಂತೆ ಅದನ್ನು ಜತನವಾಗಿ ಒಣಗಿಸಿ ಒಂದಿಷ್ಟು ಹರಳೆಣ್ಣೆಯನ್ನು ಹಚ್ಚಿ ಕಡ್ಡಿ ಸರಾಗವಾಗಿ ಆಡುವಂತೆ ಸಿದ್ಧಗೊಳಿಸಿದ್ದನು. ಕೊಳವೆಯ ಬಾಯಿಗೆ ಬಾರೆಬೀಜವನ್ನಿಟ್ಟು ಕಡ್ಡಿಯಿಂದ ರಭಸವಾಗಿ ನುಗ್ಗಿಸಿದರೆ ಬಾರೇ ಬೀಜ ವೇಗದಿಂದ ಸುಮಾರು ದೂರ ಹೋಗಿಬೀಳುವಂತೆ ಅದರ ರಚನೆ ಇತ್ತು. ಅದನ್ನು ನೋಡಿ ಬಂದೂಕುಗಳನ್ನು ಹೀಗೆ ತಯಾರು ಮಾಡಿರಬಹುದು ಎಂದುಕೊಳ್ಳುತ್ತಿದ್ದೆ.

ಇದನ್ನು ಪ್ರಯೋಗಿಸುವಾಗ ಇದರಿಂದ ಏನಾದರೂ ಅನಾಹುತ ಆದರೆ ಅಂದುಕೊಳ್ಳುತ್ತಿದ್ದೆ. ಸಹಪಾಠಿಯ ಹುಡುಗರೆಲ್ಲ ಅದರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಸಾಯಂಕಾಲ ಅದನ್ನು ಪ್ರಯೋಗಿಸುವವನಿದ್ದ ಕಿಟ್ಟಪ್ಪ. ಆ ಕ್ಷಣಕ್ಕಾಗಿ ನಾವು ಕಾತರದಿಂದ ಕಾಯುತ್ತಿದ್ದೆವು. ಆ ಕ್ಷಣ ಬಂದೇ ಬಿಟ್ಟಿತು. ಕೊಂತ್ಯಮ್ಮನನ್ನು ನೀರಿಗೆ ಬಿಡಲು ಸಿದ್ಧತೆ ನಡೆಯುತ್ತಿತ್ತು. ಹೆಂಗಳೆಯರು, ಹುಡುಗಿಯರು ಸಿಂಗರಿಸಿಕೊಂಡು ಗುಂಪು ಗುಂಪಾಗಿ ಬರುತ್ತಿದ್ದರು. ಕಿಟ್ಟಪ್ಪ ಪಟ್ಲು ಗೋವಿಯನ್ನು ಯಾರಿಗೂ ಕಾಣದೆ ಹಿಡಿದುಕೊಂಡಿದ್ದಾನೆ. ನಾವು ಈತ ಈಗೇನು ಮಾಡಬಹುದೆಂದು ನೋಡುತ್ತಿದ್ದೆವು, ನಿಧಾನವಾಗಿ ಅವನು ಅದನ್ನು ಪ್ರಯೋಗಿಸಿದ್ದ. ಗುಂಪಿನ ಮಧ್ಯೆ ಅದು ಯಾರಿಗೋ ಬಡಿಯಿತು, ಯಾರೋ ಏನೋ ಮಾಡಿದರು ಎಂದು ಎಲ್ಲರೂ ಗಾಬರಿಯಾಗಿ ನೋಡುತ್ತಿದ್ದರು. ಹುಡುಗಿಯರ ಮಧ್ಯೆ ಒಬ್ಬರ ತಲೆಯಿಂದ ರಕ್ತ ಸುರಿಯುತ್ತಿತ್ತು. ಒಂದು ಬಾರೆ ಹಣ್ಣಿನಿಂದ ಹೀಗಾಗಲು ಸಾಧ್ಯವೇ ಎಂದು ಯೋಚಿಸುತ್ತಿರಬೇಕಾದರೆ ಊರಿನ ಹಿರಿಯರಲ್ಲಿ ಕೆಲವರು ನಮ್ಮ ಕಡೆಯೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರು. ನಾನು ಕಿಟ್ಟಪ್ಪನನ್ನೆ ನೋಡುತ್ತಿದ್ದೆ ಆತ ತನ್ನ ಕೋವಿಯನ್ನು ನಿಧಾನವಾಗಿ ಮರೆಯಲ್ಲಿ ಬಚ್ಚಿಟ್ಟುಕೊಂಡು, ಏನೂ ಆಗಿಲ್ಲವೆಂಬಂತೆ ನಿಂತುಕೊಂಡಿದ್ದನು. ಇನ್ನೇನಾಗಬಹುದೆಂದು ನಾನು ಕುತೂಹಲದಿಂದ ನೋಡುತ್ತಿದ್ದೆ. ಅವರು ಹತ್ತಿರ ಬರುತ್ತಿದ್ದರು ಬಂದವರು ಕಿಟ್ಟಪ್ಪನ ಪಕ್ಕದಲ್ಲಿದ್ದ ಇನ್ನೊಬ್ಬನನ್ನು ಹಿಡಿದುಕೊಂಡರು. ಆತ ನಾನೇನು ಮಾಡಿಲ್ಲ ಎಂದು ಬಡಬಡಿಸುತ್ತಿದ್ದನಾದರೂ, ಹಿರಿಯರಲ್ಲಿ ಒಬ್ಬ ಇಲ್ಲ ಈತನಿಂದಲೇ ಆ ಘಟನೆ ನಡೆದದ್ದು ಎಂದು ಆತನನ್ನು ಬಯ್ಯುತ್ತಿದ್ದರು. ಅಂತಹ ಗಂಭೀರ ಗಾಯವೇನು ಆಗಿರಲಿಲ್ಲವಾದ್ದರಿಂದ ಆತನಿಗೆ ಬುದ್ಧಿವಾದ ಹೇಳಿ ಸುಮ್ಮನಾದರು. ಆತನು ಬಾರೆ ಗುಂಡುಗಳನ್ನು ಎಸೆಯುವ ಬರದಲ್ಲಿ ಕಲ್ಲನ್ನು ಹುಡುಗಿಯರ ಗುಂಪಿನ ಮೇಲೆ ಎಸೆದಿದ್ದನು. ಆದರೆ ಕಿಟ್ಟಪ್ಪ ಒಂದೇ ಒಂದು ಬಾರಿ ಗುಂಡು ಹಾರಿಸಿದವನು ಈ ಘಟನೆಯಿಂದ ಗಾಬರಿಯಾಗಿ ಮುಂದೆಂದೂ ಅದನ್ನು ಹೊರ ತೆಗೆಯಲೇ ಇಲ್ಲ.

ಅವರು ವ್ಯಾಪಾರದ ದೃಷ್ಟಿಯಿಂದ ಊರೇ ಬಿಟ್ಟರು. ಬೇರೆ ಊರಿನಲ್ಲಿ ಬದುಕು ಕಟ್ಟಿಕೊಂಡ ಅವರ ಮನೆ ನಿರ್ವಹಿಸುವವರಿಲ್ಲದೆ ಮಳೆಗೆ ನೆನೆದು ನೆನೆದು ಮನೆಯೊಳಗೆ ಮನೆಯೊಡೆಯನಿಲ್ಲದೆ ಇದ್ದಕ್ಕಿದ್ದಂತೆ ಮಳೆಗಾಲದ ಒಂದು ದಿನ ರಾತ್ರಿ ಸುರಿದ ಮಳೆಗೆ ಕಿಟ್ಟಪ್ಪನ ಮನೆಯೂ ಬಿದ್ದುಹೋಯಿತು. ಅವರ ಮನೆಯ ಗೋಡೆಗಳಲ್ಲಿ ಇಂದಿನ ಕಾಲದ ವಾಡೇವುಗಳಿದ್ದವು. ಗೋಡೆಗಳಲ್ಲೆ ಅವುಗಳನ್ನು ಇಟ್ಟು ಬಳಸಿಬಿಸಾಡುವ ಅಥವಾ ಉಪಯೋಗಕ್ಕೆ ಬರುವ ಬರದಿರುವ ವಸ್ತುಗಳನ್ನು ಅದರಲ್ಲಿ ಕೂಡಿಡುತ್ತಿದ್ದರು ಅದೊಂದು ಸಣ್ಣ ಉಗ್ರಾಣವಾಗಿತ್ತು. ನಮ್ಮ ಮನೆಯು ಅಲ್ಲಿ ಇದ್ದಿದ್ದರಿಂದ ಅದರಲ್ಲಿ ಅಳಿದುಳಿದ ವಸ್ತುಗಳಿಗಾಗಿ ತಡಕಾಡಿದೆವು. ವಾಡೇವುಗಳಲ್ಲಿ ಬೇರೆ ಬೇರೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅದರಲ್ಲಿ ಅಂದು ಕಿಟ್ಟಪ್ಪ ತಯಾರಿಸಿದ್ದ ಪಟ್ಲುಗೋವಿಯೂ ಇತ್ತು. ಅದನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಅಂದು ನಡೆದ ಘಟನೆ ನನ್ನ ಸ್ಮೃತಿ ಪಟಲದಲ್ಲಿ ತೇಲಿ ಹೋಯಿತು. ಊರುಗಳೆಲ್ಲಾ ನಗರ ಸಂಸ್ಕೃತಿಯ ಆವಾಹನೆಗೆ ಒಳಗಾಗಿ ಸಂಕುಚಿತವಾಗುತ್ತಿರುವಾಗ ಮಣ್ಣಿನ ಸೊಗಡಿನ ಸಾಂಸ್ಕೃತಿಕ ವೈವಿಧ್ಯಗಳು ಮರೆಯಾಗುತ್ತಿರುವುದು ವಿಪರ್ಯಾಸವೇ ಸರಿ ಎನಿಸಿ ಅದನ್ನು ಮನೆಗೆ ತಂದು ಸ್ವಚ್ಛಗೊಳಿಸಿ ಜೋಪಾನ ಮಾಡುವಾಗ ಕಿಟ್ಟಪ್ಪ ಇನ್ನಿಲ್ಲದಂತೆ ನೆನಪಾಗಿದ್ದ. ತನ್ನ ಮಕ್ಕಳಿಗೆ ಇಂತಹದೊಂದು ವಸ್ತುವನ್ನು ಮಾಡಿಕೊಟ್ಟಿರಬಹುದೆ ಅನಿಸಿದ್ದು ನಿಜ.

(ಮುಂದುವರಿಯುವುದು…)