ನನಗೆ ಬೇರೆ ದಾರಿ ಇರಲಿಲ್ಲ. ಓಡಿಹೋಗೋಣವೆಂದರೆ ಅಪ್ಪನ ಕೈಯಲ್ಲಿನ ಕೋಲನ್ನು ಎಸೆದರೆ ಏನಾಗುವುದೋ ಎಂದು ಯೋಚಿಸುವಾಗಲೆ, ಊರಿನಿಂದ ಬಂದ ದೊಡ್ಡಮ್ಮ ಬಿಡಪ್ಪ ಮಗೀನ್ನ ಏನು ಮಾಡ್ಬೇಡ ಏನೋ ಹುಡುಗ್ ಬುದ್ದಿ ಅಂಗ್ ಮಾಡೈತಿ. ಎಳೆಮಗು ಬಾಯಲ್ಲೇಳಿದ್ರೆ ಸಾಕು ಅಂದ್ಕಂಡು ಒಳಗಿನಿಂದ ಬರುವುದಕ್ಕೂ ಅಪ್ಪ ಕೋಲನ್ನು ಎತ್ತಿ ಬೀಸುವುದಕ್ಕೂ ಸರಿಯಾಯಿತು. ದೊಡ್ಡಮ್ಮ ಬಂದವಳೆ ನನ್ನನ್ನು ರಬಕ್ಕನೆ ಎಳೆದುಕೊಂಡಳು. ಕೋಲಿನ ತುದಿ ಬಲ ತೋಳಿಗೆ ಬಿತ್ತು. ಇಷ್ಟು ಸಾಕಾಗಿತ್ತು; ಸಹಾಯಕ್ಕೆ ದೊಡ್ಡಮ್ಮ ಇದ್ದಳು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತೆರಡನೆಯ ಕಂತು ನಿಮ್ಮ ಓದಿಗೆ
ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ನಮಗೆಲ್ಲರಿಗೂ ಹಿಗ್ಗು. ಈಗಿನಂತೆ ಹೋಂ ವರ್ಕ್ಗಳ ಮೂಟೆ ಹೊತ್ತು ಮನೆಗೆ ಬಂದು ಬಸವಳಿದು ಕುಳಿತುಕೊಳ್ಳಬೇಕಾದ ಪ್ರಸಂಗವಂತೂ ನನ್ನ ಸಮಕಾಲೀನ ಬಾಲ್ಯದ ದಿನಗಳಲ್ಲಿ ಇರಲಿಲ್ಲ. ಹಾಗಂತ ಹೋಂ ವರ್ಕ್ ಕೊಡುತ್ತಿರಲಿಲ್ಲವೆ ಅಂದುಕೊಂಡರೆ ತಪ್ಪಾಗುತ್ತದೆ. ಅಕ್ಷರ, ಕಾಗುಣಿತ, ಮಗ್ಗಿ, ದಿನಕ್ಕೊಂದು ಪುಟ ಪಾಠ ಇಷ್ಟನ್ನು ಬರೆದರೆ ಸಾಕು. ಅದೆಲ್ಲವೂ ನಮಗೆ ಅಷ್ಟೇನೂ ಹೊರೆಯೂ ಆಗಿರಲಿಲ್ಲ. ರಜೆಯು ಎಂಟತ್ತು ದಿನಗಳು ಉಳಿದಿವೆ ಅನ್ನುವಾಗಲೆ ಅದರ ಬಗ್ಗೆ ನಮ್ಮ ಗಮನವಿರುತ್ತಿತ್ತು. ಬಹುಶಃ ಮನೆಯಲ್ಲಿ ಕಾಲ ಕಳೆಯುತ್ತಿದ್ದದ್ದೆ ಕಡಿಮೆ; ಅಷ್ಟು ಸಮಯವೂ ನಮಗೆ ಸಾಕಾಗುತ್ತಿರಲಿಲ್ಲ. ಏಕೆಂದರೆ ಎಷ್ಟೊಂದು ಆಟಗಳಿದ್ದವು ಆಗೆಲ್ಲ ಆಡಲು. ಗೋಲಿಆಟ, ಬುಗುರಿ, ಚಿನ್ನಿದಾಂಡು, ಅದು ಸಾಕಾದರೆ ಮರಕೋತಿಯಾಟ… ಇದರ ನಡುವೆ ಸುಡುಬಿಸಿಲಿಗೆ ತೆರೆದ ಬಾವಿಗಳಲ್ಲಿ ಈಜುವುದು ಅದು ಸಾಕಾದರೆ ಜೇನು ಕೀಳುವ ಕಾಯಕವೂ ಇರುತ್ತಿತ್ತು. ಹಾಗಾಗಿ ಈ ಎಲ್ಲ ಚಟುವಟಿಕೆಗಳಲ್ಲಿ ಕೆಲವು ಪ್ರಸಂಗಗಳು ಅಚ್ಚಳಿಯದೆ ಹಾಗೆ ಉಳಿದಿವೆ.
ಅದರಲ್ಲಿಯೂ ಗೋಲಿ ಆಟವೆಂದರೆ ಅತ್ಯಂತ ಪ್ರಿಯವಾದ ಆಟ ನನಗೆ. ಒಂದೆರಡು ಗೋಲಿಗಳಿಂದ ಆರಂಭವಾಗುತ್ತಿದ್ದ ಆಟ ರಜೆ ಕಳೆಯುವಷ್ಟರಲ್ಲಿಯೆ ಒಂದು ಸಣ್ಣ ಕೈಚೀಲದಷ್ಟು ಗೋಲಿ ಸಂಗ್ರಹವಾಗುತ್ತಿತ್ತು. ಪ್ರತಿದಿನ ಅದನ್ನು ಎಣಿಸಿ ಎಣಿಸಿ ಚೀಲದಲ್ಲಿ ಕಟ್ಟಿಡುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ. ಅದರಿಂದ ಲಾಭವೇನು ಇಲ್ಲದಿದ್ದರೂ ಲೆಕ್ಕಹಾಕುವುದಂತು ಕಲಿಯುತ್ತಿದ್ದೆವು. ಸಾಮಾನ್ಯವಾಗಿ ಐದಾರು ಸ್ನೇಹಿತರು ಒಂದೆಡೆ ಸೇರಿ ಈ ಆಟವನ್ನು ಆಡುತ್ತಿದ್ದೆವು. ಎಷ್ಟೊ ಬಾರಿ ಅದರಿಂದ ನಮ್ಮಪ್ಪನಿಂದ ಒದೆ ತಿಂದದ್ದು ಇದೆ. ಏಡಿಕಾಯಿ ಹಿಡಿಯುವಾಗ, ಒಂದಿಡಿ ದಿನ ಮನೆಗೆ ಹೋಗದೆ ಆಟದಲ್ಲೆ ಕಾಲಕಳೆದು ಸಂಜೆ ಮನೆಗೆ ಹೋದಾಗ ಜಾಲಿ ಕಟ್ಟಿಗೆಯ ಅಪ್ಪನ ಹೊಡೆತಗಳು ಆ ಕ್ಷಣಕ್ಕೆ ಸಂಕಟವನ್ನುಂಟುಮಾಡಿದರೂ ನಂತರ ಹಾಸ್ಯಕ್ಕೆ ಆಹಾರವಾಗುತ್ತಿದ್ದದ್ದೆ ಹೆಚ್ಚು. ಎಷ್ಟೆ ಒದೆಗಳು ಬಿದ್ದರೂ ಗೋಲಿ ಆಟವನ್ನಂತೂ ನಾವು ಬಿಡುತ್ತಿರಲಿಲ್ಲ.
ಗೋಲಿ ಆಡುವುದೆಂದರೆ ಅಚ್ಚು ಮೆಚ್ಚಿನ ಕೆಲಸ. ಗೆದ್ದ ಗೋಲಿಗಳೆಲ್ಲ ಜೇಬು ಸೇರುತ್ತಿದ್ದರೆ ಜೇಬು ಭಾರವಾಗಿ ಜಗ್ಗಿದರೆ ಅದನ್ನು ಎಲ್ಲರಿಗೂ ತೋರಿಸಿಕೊಂಡು ಓಡಾಡುವುದೆ ಒಂದು ಆನಂದ… ಸಂಭ್ರಮ. ಒಂದೊಂದು ಸಾರಿ ಸೋತು ಗೋಲಿಗಳೆಲ್ಲ ಖಾಲಿಯಾಗುತ್ತಿದ್ದವು. ಅವುಗಳನ್ನು ಗೆಲ್ಲುವವರೆಗೆ ಸಮಾಧಾನವಿರುತ್ತಿರಲಿಲ್ಲ. ಒಮ್ಮೆ ನನ್ನಲ್ಲಿದ್ದ ಎಲ್ಲಾ ಗೋಲಿಗಳನ್ನು ಸೋತಿದ್ದೆ. ಹೊಸದಾಗಿ ಗೋಲಿ ತೆಗೆದುಕೊಳ್ಳಲು ಹಣವು ಇರಲಿಲ್ಲ. ಯಾರನ್ನು ಕೇಳುವುದು? ನನ್ನ ಗೆಳೆಯರೆಲ್ಲ ನನ್ನದೆ ಪರಿಸ್ಥಿತಿ ಹೊಂದಿರುವ ಬಡತನದ ಹಿನ್ನೆಲೆಯ ಕೂಸುಗಳೆ… ಅವರಿಗೆ ಹಣ ಎಲ್ಲಿಂದ ಬರಬೇಕು. ಚಡಪಡಿಸಿದೆ… ಆ ರಾತ್ರಿಯೆಲ್ಲಾ ಒದ್ದಾಡಿದೆ ನಿದ್ರೆಯೆ ಬರಲಿಲ್ಲ. ಬೆಳಿಗ್ಗೆ ಅಮ್ಮನ ಧ್ವನಿ ಕೇಳಿದ ಮೇಲೆ ನಾನು ಕಣ್ಣು ಬಿಟ್ಟದ್ದು. ಎದುರಿನ ಮೊಳೆಗೆ ನೇತಾಕಿದ್ದ ಅಪ್ಪನ ತೇಪೆಯ ಅಂಗಿ ಕಂಡದ್ದು. ಆಸೆಯ ಅಲೆಯೊಂದು ತೇಲಿ ಮನದಮೂಲೆಯಲಿ ಅಪ್ಪಳಿಸಿದಂತಾಗಿ ಅಪ್ಪನ ಜೇಬಲ್ಲಿ ಹಣವಿರಬಹುದೆ ಎಂಬ ಆಸೆ ಮೂಡಿತು. ಛೆ.. ಛೆ.. ಇರಲಾರದು ಎನ್ನಿಸಿತು. ಹೊತ್ತಿನ ಊಟಕ್ಕೆ ಹೋರಾಡುತಿದ್ದ ಅಪ್ಪ ಹಣವಿನ್ನೆಲ್ಲಿ ಜೇಬನಲ್ಲಿರಿಸಿಕೊಂಡಾನು ಎಂಬ ಯೋಚನೆ ಬಂದರೂ ಒಮ್ಮೆ ನೋಡಿದರೆ ತಪ್ಪೇನು ಎಂದು ಯೋಚಿಸಿ ಹೋಗಿ ಸೀದಾ ಜೇಬಿಗೆ ಕೈ ಹಾಕಿದೆ. ಅರೆ ಇಪ್ಪತ್ತು ಪೈಸೆಯ ಎರಡು ನಾಣ್ಯಗಳು ಕಂಡವು… ಅದರಲ್ಲಿ ಒಂದು ನಾಣ್ಯವನ್ನ ತೆಗೆದುಕೊಂಡು ಜೇಬಿಗೆ ಸೇರಿಸಿಬಿಟ್ಟೆ. ಯಥಾಸ್ಥಿತಿ ಅಮ್ಮ ಕೂಲಿ ಹೋದಳು. ನಾನೊಂದಿಷ್ಟು ಊಟ ಮಾಡಿ ಆಟ ಆಡುವುದಕ್ಕೆ ಹೋದೆ.
ಬಹುಶಃ ಮನೆಯಲ್ಲಿ ಕಾಲ ಕಳೆಯುತ್ತಿದ್ದದ್ದೆ ಕಡಿಮೆ; ಅಷ್ಟು ಸಮಯವೂ ನಮಗೆ ಸಾಕಾಗುತ್ತಿರಲಿಲ್ಲ. ಏಕೆಂದರೆ ಎಷ್ಟೊಂದು ಆಟಗಳಿದ್ದವು ಆಗೆಲ್ಲ ಆಡಲು. ಗೋಲಿಆಟ, ಬುಗುರಿ, ಚಿನ್ನಿದಾಂಡು, ಅದು ಸಾಕಾದರೆ ಮರಕೋತಿಯಾಟ… ಇದರ ನಡುವೆ ಸುಡುಬಿಸಿಲಿಗೆ ತೆರೆದ ಬಾವಿಗಳಲ್ಲಿ ಈಜುವುದು ಅದು ಸಾಕಾದರೆ ಜೇನು ಕೀಳುವ ಕಾಯಕವೂ ಇರುತ್ತಿತ್ತು.
ಅಪ್ಪ ಮನೆಯಲ್ಲಿಯೇ ಇದ್ದ. ಅವನಿನ್ನೂ ತನ್ನ ಜೇಬು ನೋಡಿಕೊಂಡಿರಲಿಲ್ಲ ಎಂಬುದನ್ನು ಗಮನಿಸಿದ್ದೆ. ದುಡ್ಡು ಕದ್ದದ್ದು ನಾನೆ ಅಂತ ಗೊತ್ತಾದರೆ ನನಗೆ ಗೂಸಾ ಗ್ಯಾರಂಟಿ ಅನ್ನೋದು ಖಾತ್ರಿಯಾಗಿತ್ತು. ಹಾಗಾಗಿ ಮನೆಯಿಂದ ಹೊರಟವನೆ ಸೀದಾ ಕಿರಾಣಿ ಅಂಗಡಿಗೆ ಹೋಗಿ ಐದು ಪೈಸೆಗೆ ಒಂದು ಗೋಲಿಯಂತೆ ನಾಲ್ಕು ಗೋಲಿಗಳನ್ನು ತೆಗೆದುಕೊಂಡೆ. ಗೆಳೆಯರೆಲ್ಲ ಒಂದೆಡೆ ಸೇರಿದೆವು. ಗೋಲಿ ಗೆಲ್ಲುವ ಆಟ ಪ್ರಾರಂಭವಾಯಿತು. ಆಯತಾಕಾರದಲ್ಲಿ ಗೆರೆ ಎಳೆದು ಅದರಲ್ಲಿ ಆಟಕ್ಕೆ ಬರುವವರ ಒಂದೊಂದು ಗೋಲಿಗಳನ್ನು ಇಟ್ಟು ಒಂದು ದಿಕ್ಕಿನಲ್ಲಿ ಗೊತ್ತಾದ ಸ್ಥಳದಿಂದ ಗೋಲಿಯನ್ನು ಎಸೆದು ಏರಿಳಿತಕ್ಕೆ ಅನುಸಾರವಾಗಿ ಆಯತಾಕಾರದಲ್ಲಿರುವ ಗೋಲಿಗಳನ್ನು ಹೊರಗೆ ಬರುವಂತೆ ಗುರಿಯಿಟ್ಟು ಹೊಡೆಯಬೇಕು. ಹೀಗೆ ಅದರಲ್ಲಿರುವ ಗೋಲಿಗಳನ್ನು ಒಬ್ಬೊಬ್ಬರಾಗಿ ಹೊಡೆದು ಗೆಲ್ಲುವ ಆಟವದು. ಯಾರೂ ಗೆಲ್ಲದಿದ್ದರೆ ಆಟ ಪುನರಾವರ್ತಿತವಾಗುವುದು ನಿಯಮ. ನನ್ನಲ್ಲಿರುವ ಗೆಲ್ಲಬೇಕೆಂಬ ಹಪಹಪಿತನ ಈ ಹಿಂದೆ ಸೋತ ಕಿಚ್ಚು ನನ್ನನ್ನು ಗುರಿಯಿಟ್ಟು ಹೊಡೆಯುವಂತೆ ಮಾಡಿತು. ಹಾಗಾಗಿ ಅರ್ಧತಾಸು ಕಳೆಯುವುದರೊಳಗೆ ಆಟಕ್ಕಿದ್ದ ಗೋಲಿಗಳನ್ನೆಲ್ಲ ಗೆದ್ದಿದ್ದೆ. ಈಗ ಗೆಳೆಯರ ಗೋಲಿಗಳೆಲ್ಲ ಖಾಲಿಯಾಗಿದ್ದವು. ಅವುಗಳಲ್ಲಿ ಹೊಸ ಹೊಸ ಗೋಲಿಗಳನ್ನು ವಾಪಸ್ಸು ಕಿರಾಣಿ ಅಂಗಡಿಯವನು ಐದು ಪೈಸೆಗೆ ಎರಡರಂತೆ ಕೊಂಡುಕೊಳ್ಳುತ್ತಿದ್ದ. ಅದರಲ್ಲಿ ಕೆಲವನ್ನು ವಾಪಸ್ಸು ಕೊಟ್ಟು ಅಪ್ಪನ ಜೇಬಿಗೆ ಇಪ್ಪತ್ತು ಪೈಸೆ ಇಡಬೇಕು ಅಂದ್ಕೊಂಡಿದ್ದೆ. ಆದರೆ ಗೆದ್ದ ಖುಷಿಯಲ್ಲಿ ಎಲ್ಲವನ್ನು ಮರೆತಿದ್ದೆ.
ಜೇಬಿನ ತುಂಬ ಗೋಲಿಗಳಿದ್ದವು. ಅವುಗಳನ್ನು ಅಕ್ಕನಿಗೆ ತೋರಿಸಿ ಒಂದಿಷ್ಟು ಗೋಳಾಡಿಸಬೇಕು ಅಂದ್ಕೊಂಡು ಮನೆಗೆ ಓಡೋಡಿ ಬಂದಿದ್ದೆ. ಹಟ್ಟಿಯ ಅಂಗಳಕ್ಕೆ ಬಂದವನೆ ಸಡನ್ನಾಗಿ ನಿಂತುಕೊಂಡೆ. ಅಪ್ಪ ಎದುರಿಗೆ ನಿಂತಿದ್ದಾನೆ. ಭೀಮನ ಗದೆಯಂತ ಕೋಲು ಹಿಡಿದು ತೇಪೆಯ ಅಂಗಿಯ ತೊಟ್ಟು ಕಣ್ಣು ಕೆಂಪಾಗಿವೆ. ಸಿಟ್ಟಿಗೆ ಅವನ ಮುಖ ನಡುಗುತ್ತಿದೆ. ಕೈಯಲ್ಲಿನ ಕೋಲು ಕುಣಿಯುತ್ತಿದೆ. ನನಗೆ ಎಲ್ಲವೂ ಅಷ್ಟುಬೇಗ ಅರ್ಥವಾಗಿಹೋಗಿತ್ತು. ಅಪ್ಪನಿಗೆ ನಾನು ಹಣ ತೆಗೆದುಕೊಂಡಿದ್ದು ಗೊತ್ತಾಗಿದೆ. ಪಕ್ಕದಲ್ಲಿ ಅಕ್ಕ ನಿಂತಿದ್ದಳು; ಅವಳ ಮುಖದಲ್ಲಿ ನಗು ನೋಡಿ ಅರ್ಥವಾಯಿತು… ಓ.. ನಾನು ಬೆಳಿಗ್ಗೆ ತೆಗೆದುಕೊಳ್ಳುವಾಗ ಇವಳು ನೋಡಿರಬೇಕು. ಅಪ್ಪನಿಗೆ ಊಟ ಮಾಡಿದ ಮೇಲೆ ಬೀಡಿ ಸೇದುವ ಚಟ. ಜೇಬಿನಲ್ಲಿದ್ದ ಹಣದಲ್ಲಿ ಬೀಡಿ ತಂದು ಸೇದುವ ಎಂದು ನೋಡಿದ್ದಾನೆ. ಇಪ್ಪತ್ತು ಪೈಸೆ ಇಲ್ಲದ್ದು ನೋಡಿ ಅಕ್ಕನನ್ನು ಕೇಳಿದ್ದಾನೆ. ಅವಳು ನನ್ನ ಮೇಲೆ ಬರುವುದೆಂದು ತಿಳಿದು ನಾನು ತೆಗೆದುಕೊಂಡಿದ್ದನ್ನು ತಿಳಿಸಿದ್ದಾಳೆ. ಗ್ರಹಚಾರಕ್ಕೆ ನಾನು ಅದೇ ಸಮಯಕ್ಕೆ ಹೋಗಿದ್ದೇನೆ. ಕೇಳದೆ ತೆಗೆದುಕೊಂಡನಲ್ಲಾ ಎಂಬ ಕೋಪ ಅಪ್ಪನನ್ನು ‘ನಖಶಿಖಾಂತ’ ಉರಿಯುವಂತೆ ಮಾಡಿತ್ತು. ಇನ್ನೊಮ್ಮೆ ಇಂತಹ ತಪ್ಪು ಮಾಡಬಾರದೆಂದು ಆತನ ಎಣಿಕೆಯಾಗಿತ್ತು. ಹಣಕ್ಕೆ ಬಡತನವಿದ್ದರೂ ಅಪ್ಪ ಶಿಸ್ತಿನ ಮನುಷ್ಯ.
ನನಗೆ ಬೇರೆ ದಾರಿ ಇರಲಿಲ್ಲ. ಓಡಿಹೋಗೋಣವೆಂದರೆ ಅಪ್ಪನ ಕೈಯಲ್ಲಿನ ಕೋಲನ್ನು ಎಸೆದರೆ ಏನಾಗುವುದೋ ಎಂದು ಯೋಚಿಸುವಾಗಲೆ, ಊರಿನಿಂದ ಬಂದ ದೊಡ್ಡಮ್ಮ ಬಿಡಪ್ಪ ಮಗೀನ್ನ ಏನು ಮಾಡ್ಬೇಡ ಏನೋ ಹುಡುಗ್ ಬುದ್ದಿ ಅಂಗ್ ಮಾಡೈತಿ. ಎಳೆಮಗು ಬಾಯಲ್ಲೇಳಿದ್ರೆ ಸಾಕು ಅಂದ್ಕಂಡು ಒಳಗಿನಿಂದ ಬರುವುದಕ್ಕೂ ಅಪ್ಪ ಕೋಲನ್ನು ಎತ್ತಿ ಬೀಸುವುದಕ್ಕೂ ಸರಿಯಾಯಿತು. ದೊಡ್ಡಮ್ಮ ಬಂದವಳೆ ನನ್ನನ್ನು ರಬಕ್ಕನೆ ಎಳೆದುಕೊಂಡಳು. ಕೋಲಿನ ತುದಿ ಬಲ ತೋಳಿಗೆ ಬಿತ್ತು. ಇಷ್ಟು ಸಾಕಾಗಿತ್ತು; ಸಹಾಯಕ್ಕೆ ದೊಡ್ಡಮ್ಮ ಇದ್ದಳು. ಇಲ್ಲಿಯವರೆಗೂ ಇದ್ದ ಭಯ ಅಳುವಿನ ರೂಪ ಪಡೆದು ಅರಚುವುದಕ್ಕೆ ಶುರು ಮಾಡಿದೆ. ಅಪ್ಪನ ಕೋಪ ಕಡಿಮೆಯಾಗಿರಲಿಲ್ಲ. ಅಲ್ಲೊಂದು ಇಲ್ಲೊಂದು ಏಟುಗಳು ಬಿದ್ದವು. ಅಂತೂ ದೊಡ್ಡಮ್ಮನಿಂದ ನನ್ನ ರಕ್ಷಣೆಯಾಗಿತ್ತು. ಎರಡ್ಮೂರು ಕಡೆ ಬಾಸುಂಡೆಗಳು ಬಿದ್ದಿದ್ದವು. ಇನ್ನೊಮ್ಮೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಮಾತಾಯಿತು. ಆದರೆ ಏಟಿನ ನೋವಿಗೆ ದುಖ್ ದುಃಖ್ಖಿಸಿ.. ಅತ್ತೆ. ದೊಡ್ಡಮ್ಮ ಅಳು ನಿಲ್ಲಲಿ ಎಂದು ಎಂಟಾಣೆ (ಐವತ್ತು ಪೈಸೆ) ಕೊಟ್ಟಳು ನನಗೂ ಖುಷಿಯಾಯಿತು. ಸ್ವಲ್ಪ ಹೊತ್ತಿನಲ್ಲೆ ಅಳುವುದನ್ನು ನಿಲ್ಲಿಸಿದೆ. ಅಕ್ಕನ ಜೊತೆ ಹೊರಗಡೆ ಆಟ ಆಡ್ಕೊ ಹೋಗು ಎಂದು ದೊಡ್ಡಮ್ಮನೆ ಕಳಿಸಿದಳು. ಬಾಲ್ಯವೆ ಅಂತಹದು, ಯಾವುದು ಮನಸ್ಸಿನಲ್ಲಿರುವುದಿಲ್ಲ ಎಲ್ಲವೂ ಕ್ಷಣಿಕ ಅಷ್ಟೆ. ಅದಕ್ಕೆ ಬಾಲ್ಯವೆಂದರೆ ಪದೆಪದೆ ನೆನಪಾಗುವ ಸುಂದರ ನೆನಪು ಇಂತಹ ಬಾಲ್ಯ ಇಂದಿನ ಮಕ್ಕಳಿಗೆ ಸಿಗುವುದೆ ಅಪರೂಪ. ಹೋಂ ವರ್ಕ್ ಬರೆಯುತ್ತಲೊ ಮೊಬೈಲ್ ನೋಡುತ್ತಲೊ ಒಂಟಿಯಾಗಿ ಕಳೆದುಬಿಡುತ್ತವೆ. ಇದೆಲ್ಲವೂ ಆಧುನಿಕತೆಯ ಕೊಡುಗೆಯೊ ನಮಗೆ ನಾವೆ ವಿಧಿಸಿಕೊಂಡ ಕಟ್ಟಳೆಯೊ ಒಂದೂ ತಿಳಿಯದು.