ಮುಂದಿನ ವರ್ಷಗಳಲ್ಲಿ ಅವರು ಈ ಮೊದಲ ಎರಡು ಸಂಕಲನಗಳು ತನ್ನ ನಿಜವಾದ ಕಾವ್ಯಾತ್ಮಕ ಉದ್ದೇಶಗಳ ವಿರುದ್ಧವಾಗಿವೆ ಎಂದು ಘೋಷಿಸಿ ಆ ಸಂಕಲನಗಳೊಂದಿಗೆ ತಮ್ಮ ಸಂಬಂಧ ತೊರೆದರು. ಈ ಸಂಕಲನದಲ್ಲಿ ಅವರು ಕಮ್ಯೂನಿಸಂ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಸಂಕಲನಗಳಲ್ಲಿನ ಕವನಗಳು ನಿಖರವಾದ ಮೂರ್ತ ಭಾಷೆ ಹಾಗೂ ವ್ಯಂಗ್ಯಾತ್ಮಕ ನಿರ್ಲಿಪ್ತತೆಗಾಗಿ ಗಮನ ಸೆಳೆದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಕವಿ ವೀಸ್ಲಾವಾ ಶಿಂಬೋರ್ಸ್ಕಾ-ರವರ (Wisława Szymborska, 1923 – 2012) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ವೀಸ್ಲಾವಾ ಶಿಂಬೋರ್ಸ್ಕಾ-ರವರಿಗೆ 1996-ರಲ್ಲಿ ಕಾವ್ಯಕ್ಕಾಗಿ ಸಾಹಿತ್ಯದ ನೊಬೆಲ್ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಐತಿಹಾಸಿಕ ಮತ್ತು ಜೈವಿಕ ಸನ್ನಿವೇಶಗಳನ್ನು ಮನುಷ್ಯನ ವಾಸ್ತವದ ತುಣುಕುಗಳಾಗಿ ತಮ್ಮ ಕಾವ್ಯದ ವ್ಯಂಗ್ಯಾತ್ಮಕ ನಿಖರತೆಯ ಮೂಲಕ ಬೆಳಕಿಗೆ ಬರಲು ಶಿಂಬೋರ್ಸ್ಕಾ ಅನುವು ಮಾಡಿಕೊಟ್ಟಿದ್ದಾರೆ ಎಂದು ನೊಬೆಲ್ ಸಮಿತಿಯು ಅವರ ಕಾವ್ಯದ ಬಗ್ಗೆ ಹೇಳಿತ್ತು. ಪೋಲಂಡಿನಲ್ಲಿ ಅವರ ಕವನ ಸಂಕಲನಗಳು ಕಾದಂಬರಿ-ಕಥೆಗಳಿಗಿಂತಲೂ ಹೆಚ್ಚು ಮಾರಾಟವಾಗುತ್ತಿದ್ದವು, ಆದರೆ ಅವರೇ ತಮ್ಮ ಕವನ “ಕೆಲ ಮಂದಿ ಇಷ್ಟಪಡುತ್ತಾರೆ ಕಾವ್ಯ”-ದಲ್ಲಿ ಕಾವ್ಯ ಓದುವವರು ‘ಸಾವಿರದಲ್ಲಿ ಇಬ್ಬರು ಸಿಗಬಹುದು’ ಎಂದು ಹೇಳುತ್ತಾರೆ.

ಶಿಂಬೋರ್ಸ್ಕಾ ತಮ್ಮ ಸಾಹಿತ್ಯ ಕಾರ್ಯವನ್ನು 1943-45-ರ ಅವಧಿಯಲ್ಲಿ ಸಣ್ಣ ಕಥೆಗಳು ಹಾಗೂ ಕೆಲವು ಕವನಗಳ ಮೂಲಕ ಶುರು ಮಾಡಿದರು. 1949-ರ ಹೊತ್ತಿಗಾಗಲೇ ಅವರ ಮೊದಲ ಕವನ ಸಂಕಲನ ಪ್ರಕಟಣೆಗೆ ಸಿದ್ಧವಾಗಿತ್ತು ಆದರೆ ಕಮ್ಯೂನಿಸ್ಟ್ ಸರಕಾರ ಜಾರಿಪಡಿಸಿದ ‘ಸೋಶ್ಯಲಿಸ್ಟ್ ಸಾಹಿತ್ಯ ಮಾದರಿ’-ಯ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಅನುಮತಿ ದೊರೆಯಲಿಲ್ಲ. ಇದರ ನಂತರ ಅವರು ಪೋಲಂಡಿನ ಕಮ್ಯೂನಿಸ್ಟ್ ಸರಕಾರ ಅನುಮೋದಿಸಿದ ಸಾಹಿತ್ಯ ಶೈಲಿಯಾದ ‘ಸೋಶ್ಯಲಿಸ್ಟ್ ವಾಸ್ತವಿಕತೆ’-ಯ ಮಾದರಿಯಲ್ಲಿ ಬರೆದ ಕವನಗಳನ್ನು 1952-ರಲ್ಲಿ ಮೊದಲ ಸಂಕಲನವಾಗಿ ಪ್ರಕಟಿಸಿದರು. ಇದರ ನಂತರದ ಸಂಕಲನವೂ ಇದೇ ಶೈಲಿಯಲ್ಲಿ ಇತ್ತು. ಆದರೆ ಮುಂದಿನ ವರ್ಷಗಳಲ್ಲಿ ಅವರು ಈ ಮೊದಲ ಎರಡು ಸಂಕಲನಗಳು ತನ್ನ ನಿಜವಾದ ಕಾವ್ಯಾತ್ಮಕ ಉದ್ದೇಶಗಳ ವಿರುದ್ಧವಾಗಿವೆ ಎಂದು ಘೋಷಿಸಿ ಆ ಸಂಕಲನಗಳೊಂದಿಗೆ ತಮ್ಮ ಸಂಬಂಧ ತೊರೆದರು. ಅವರ ಮೂರನೆಯ ಕವನ ಸಂಕಲನದಿಂದ ಅವರ ಕಾವ್ಯದ ದಾರಿ ಹೆಚ್ಚು ವೈಯಕ್ತಿಕ ಶೈಲಿಯ ಕಡೆಗೆ ಸ್ಪಷ್ಟವಾಗಿ ತಿರುಗಿತು. ಈ ಸಂಕಲನದಲ್ಲಿ ಅವರು ಕಮ್ಯೂನಿಸಂ ಬಗ್ಗೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರ ಮುಂದಿನ ಸಂಕಲನಗಳಲ್ಲಿನ ಕವನಗಳು ನಿಖರವಾದ ಮೂರ್ತ ಭಾಷೆ ಹಾಗೂ ವ್ಯಂಗ್ಯಾತ್ಮಕ ನಿರ್ಲಿಪ್ತತೆಗಾಗಿ ಗಮನ ಸೆಳೆದವು.

1952 ಮತ್ತು 1993-ರ ಮಧ್ಯೆ ಅವರು ಸುಮಾರು ಹನ್ನೆರಡು ಕವನ ಸಂಕಲನಗಳನ್ನು ಹೊರತಂದರು. 1953-ರಲ್ಲಿ ಅವರು ‘ಲಿಟರರಿ ಲೈಫ಼್’ ಎಂಬ ಸಾಹಿತ್ಯ ಪತ್ರಿಕೆಯ ಒಬ್ಬ ಸಂಪಾದಕರಾಗಿ ಸೇರಿ 1981-ರವರೆಗೂ ಅಲ್ಲೇ ಕೆಲಸ ನಿರ್ವಹಿಸಿದರು. ಈ ಸಮಯದಲ್ಲಿ ಅವರು ಒಬ್ಬ ಕವಿಯಾಗಿ ಮಾತ್ರವಲ್ಲದೇ, ಪುಸ್ತಕ ವಿಮರ್ಶಕರಾಗಿ ಹಾಗೂ ಫ಼್ರೆಂಚ್ ಕಾವ್ಯದ ಅನುವಾದಕರಾಗಿ ಕೂಡ ಪ್ರಖ್ಯಾತರಾದರು.

ಶಿಂಬೋರ್ಸ್ಕಾರರು ತಮ್ಮ ಕವನಗಳಲ್ಲಿ ವ್ಯಂಗ್ಯಾತ್ಮಕ ನಿಖರತೆ, ವಿರುದ್ಧೋಕ್ತಿ, ಅನನ್ವಯ, ನ್ಯೂನೋಕ್ತಿಯಂತಹ ಸಾಹಿತ್ಯ ಸಾಧನಗಳನ್ನು ತಾತ್ವಿಕ ವಿಷಯಗಳ ಮೇಲೆ ಪ್ರಕಾಶ ಬೀರಲು ಆಗಾಗ ಬಳಸುತ್ತಿದ್ದರು. ಅವರ ಹಲವು ಕವನಗಳಲ್ಲಿ ಯುದ್ಧ ಹಾಗೂ ಆತಂಕವಾದದ ಬಗ್ಗೆ ಉಲ್ಲೇಖಗಳು ಇವೆ. ಅವರು ಅಪರೂಪವಾದ ದೃಷ್ಟಿಕೋನಗಳಿಂದ ಕವನಗಳನ್ನು ಬರೆಯುತ್ತಿದ್ದರು, ಉದಾಹರಣೆಗೆ, ಒಂದು ಖಾಲಿ ಫ಼್ಲಾಟಿನಲ್ಲಿ ಬೆಕ್ಕಿನ ದೃಷ್ಟಿಕೋನ, ಕಲ್ಲು ಬಂಡೆಯೊಂದರ ದೃಷ್ಟಿಕೋನ, ಇತ್ಯಾದಿ.

ಹದಿನಾರು ಕವನ ಸಂಕಲನಗಳಲ್ಲದೇ, ಶಿಂಬೋರ್ಸ್ಕಾರರು ಹಲವಾರು ಪ್ರಬಂಧಗಳನ್ನು ಬರೆದರು ಹಾಗೂ ಫ಼್ರೆಂಚ್ ಭಾಷೆಯ ಕವಿತೆಗಳನ್ನು ಪೋಲಿಷ್ ಭಾಷೆಗೆ ಅನುವಾದಿಸಿದರು. ಅವರ ಕವನಗಳು ಇಂಗ್ಲಿಷ್ ಹಾಗೂ ಹಲವಾರು ಯುರೊಪಿಯನ್ ಭಾಷೆಗಳಲ್ಲದೇ, ಆ್ಯರಬಿಕ್, ಹೀಬ್ರೂ, ಜಾಪನೀಸ್, ಪರ್ಷಿಯನ್, ಚೈನೀಸ್ ಭಾಷೆಗಳಲ್ಲೂ ಅನುವಾದವಾಗಿವೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ವೀಸ್ಲಾವಾ ಶಿಂಬೋರ್ಸ್ಕಾ-ರ ಎಲ್ಲಾ ಕವನಗಳನ್ನು ಸ್ತಾನಿಸ್ಲಾವ್ ಬರನ್‌ಚಕ್ (Stanizław Barańczak) ಹಾಗೂ ಕ್ಲೇರ್ ಕಾವನಾ-ರವರು (Clare Cavanagh) ಮೂಲ ಪೋಲಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.

1
ಒಂದು ಖಾಲಿ ಫ಼್ಲಾಟಿನಲ್ಲಿ ಬೆಕ್ಕು
ಮೂಲ: Cat in an Empty Apartment

ಸಾಯುವುದು – ಒಂದು ಬೆಕ್ಕಿಗೆ ನೀನು ಹಾಗೆ ಮಾಡಬಾರದು.
ಒಂದು ಖಾಲಿ ಫ಼್ಲಾಟಿನಲ್ಲಿ ಒಂದು ಬೆಕ್ಕು
ಏನು ತಾನೆ ಮಾಡಬಲ್ಲದು?
ಗೋಡೆ ಹತ್ತುವುದೇ?
ಮೇಜು ಕುರ್ಚಿಗಳಿಗೆ ಮೈಯೊರೆಸಿಕೊಳ್ಳುವುದೇ?
ಇಲ್ಲಿ ಯಾವುದೂ ಬೇರೆಯಾಗಿ ಕಾಣುವುದಿಲ್ಲ,
ಆದರೆ ಯಾವುದೂ ಇದ್ದಂತೆ ಇಲ್ಲ.
ಯಾವುದನ್ನೂ ಜರುಗಿಸಿದಂತೆ ಇಲ್ಲ,
ಆದರೆ ಜಾಗ ಹೆಚ್ಚಾದಂತೆ ಇದೆ.
ಮತ್ತೆ ರಾತ್ರಿಯಲಿ ದೀಪಗಳ ಬೆಳಗಿಸುತ್ತಿಲ್ಲ ಯಾರೂ.

ಮೆಟ್ಟಲುಗಳ ಮೇಲೆ ಕಾಲ್ಸಪ್ಪಳ,
ಆದರೆ ಅವು ಹೊಸ ಕಾಲ್ಸಪ್ಪಳ,
ಸಾಸರಿನಲ್ಲಿ ಮೀನನ್ನಿಡುವ ಕೈ,
ಅದೂ ಕೂಡ ಬದಲಾಗಿದೆ.

ಏನೋ ಒಂದು ಅದರ ಎಂದಿನ
ಸಮಯಕ್ಕೆ ಶುರುವಾಗುತ್ತಿಲ್ಲ.
ಏನೋ ಒಂದು ಆಗಬೇಕಾದ
ಹಾಗೆ ಆಗುತ್ತಿಲ್ಲ.
ಒಬ್ಬ ಯಾವಾಗಲೂ, ಯಾವಾಗಲೂ ಇರುತ್ತಿದ್ದನಿಲ್ಲಿ,
ಅಚಾನಕ್ಕಾಗಿ ಅದೃಶ್ಯನಾದನು
ಹಠಹಿಡಿದು ಅದೃಶ್ಯವಾಗಿಯೇ ಇದ್ದಾನೆ.

ಪ್ರತಿಯೊಂದು ಬೀರೂವನ್ನು ಪರೀಕ್ಷಿಸಲಾಗಿದೆ.
ಪ್ರತಿಯೊಂದು ಶೆಲ್ಫ್‌ನ್ನು ಪರಿಶೀಲಿಸಲಾಗಿದೆ.

ಕಾರ್ಪೆಟ್ಟಿನಡಿಯ ಪರಿಶೋಧನೆಯಲ್ಲೂ ಏನೂ ಸಿಗಲಿಲ್ಲ.
ಕಟ್ಟಳೆಯೊಂದನ್ನು ಕೂಡ ಮುರಿಯಲಾಗಿದೆ:
ಎಲ್ಲೆಲ್ಲೂ ಚದುರಿದ ಕಾಗದ.
ಏನು ಮಾಡಲು ಉಳಿದಿದೆ ಈಗ.
ನಿದ್ರಿಸುವುದು, ಕಾಯುವುದು, ಅಷ್ಟೇ.

ಅವನು ತಿರುಗಿ ಬರುವವರೆಗೂ ಕಾಯಬೇಕು,
ಅವನು ಮುಖವನ್ನೊಮ್ಮೆ ತೋರಿಸಲಿ ಸಾಕು.
ಒಂದು ಬೆಕ್ಕಿಗೆ ಏನು ಮಾಡಬಾರದೆಂಬ
ಪಾಠವನ್ನೆಂದಾದರೂ ಪಡೆಯುವನೇ ಅವನು.

ಮೆಲ್ಲಗೆ ಸರಿದು ಹೋಗು ಅವನತ್ತ
ಇಷ್ಟವಿಲ್ಲದಂತೆ
ಮೆಲ್ಲ ಮೆಲ್ಲಗೆ, ಅತೀ ಮೆಲ್ಲಗೆ
ಮನನೊಂದ ಪಂಜಗಳ ಹೆಜ್ಜೆಯಿಟ್ಟು
ನೋಡು ಮತ್ತೆ, ಹಾರುವುದು, ಚೀರುವುದು,
ಕಡೇಪಕ್ಷ ಆರಂಭದಲ್ಲಿ ಬೇಡ.

2
ಒಂದು ಕಲ್ಲುಬಂಡೆಯ ಜತೆ ಸಂಭಾಷಣೆ
ಮೂಲ: Conversation with a Stone

ನಾನು ಕಲ್ಲುಬಂಡೆಯ ಮುಂಬಾಗಿಲ ತಟ್ಟುವೆ.
“ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನಾ ನಿನ್ನೊಳಗೆ ಬರಲಿಚ್ಛಿಸುವೆ,
ಸುತ್ತಲೂ ನೋಡುವೆ,
ನನ್ನುಸಿರಲ್ಲಿ ನಿನ್ನನ್ನು ತುಂಬಿಕೊಳ್ಳುವೆ.”

“ಹೋಗಾಚೆಗೆ,” ಹೇಳುತ್ತೆ ಕಲ್ಲು.
“ನಾನು ಗಟ್ಟಿಯಾಗಿ ಮುಚ್ಚಲ್ಪಟ್ಟಿರುವೆ.
ನನ್ನನ್ನು ತುಂಡುತುಂಡಾಗಿ ಒಡೆದರೂ,
ನಾವೆಲ್ಲರೂ ಮುಚ್ಚಿಯೇ ಇರುವೆವು.
ನಮ್ಮನ್ನು ಪುಡಿಪುಡಿಮಾಡಿ ಮರಳಾಗಿಸಿದರೂ ಸಹ
ನಾವು ನಿನ್ನನ್ನು ಒಳಗೆ ಬರಲು ಬಿಡಲ್ಲ.”

ನಾನು ಕಲ್ಲುಬಂಡೆಯ ಮುಂಬಾಗಿಲ ತಟ್ಟುವೆ.
“ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನಾನು ಬರೀ ಕುತೂಹಲದಿಂದಷ್ಟೇ ಬಂದಿರುವೆ.
ಉಸಿರು ಮಾತ್ರ ಅದನ್ನು ತಣಿಸಬಲ್ಲದು.
ನಿನ್ನರಮನೆಯಲ್ಲಿ ಅಡ್ಡಾಡಬೇಕೆಂದಿರುವೆ,
ನಂತರ ಒಂದು ಎಲೆಯನ್ನು ಭೇಟಿ ಮಾಡುವೆ, ಒಂದು ನೀರ ಹನಿಯನ್ನು,
ನನ್ನಲ್ಲಿ ಹೆಚ್ಚು ಸಮಯವಿಲ್ಲ.
ನನ್ನ ನಶ್ವರತೆಯಾದರೂ ನಿನ್ನನ್ನು ತಟ್ಟಬೇಕು.”

“ನಾನು ಕಲ್ಲಿನಿಂದ ಮಾಡಲ್ಪಟ್ಟಿರುವೆ,” ಹೇಳಿತು ಕಲ್ಲು,
“ಆದ್ದರಿಂದ ಬಿಗುಮುಖಿಯಾಗಿಯೇ ಇರಬೇಕು.
ಹೋಗಾಚೆಗೆ.
ನಗಲು ಸ್ನಾಯುಗಳಿಲ್ಲ ನನ್ನಲ್ಲಿ.”

ನಾನು ಕಲ್ಲುಬಂಡೆಯ ಮುಂಬಾಗಿಲ ತಟ್ಟುವೆ.
“ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನಿನ್ನೊಳಗೆ ವಿಶಾಲವಾದ ಖಾಲಿ ಹಜಾರಗಳಿವೆಯೆಂದು ಕೇಳಿರುವೆ,
ಕಾಣದವು, ವ್ಯರ್ಥ ಅವುಗಳ ಸೌಂದರ್ಯ,
ಶಬ್ಧರಹಿತ, ಯಾರ ಹೆಜ್ಜೆಗಳೂ ಮಾರ್ದನಿಸವು,
ಒಪ್ಪಿಕೋ, ನಿನಗೂ ಅವುಗಳ ಬಗ್ಗೆ ಹೆಚ್ಚೇನೂ ಗೊತ್ತಿಲ್ಲಾಂತ.”

“ವಿಶಾಲವೂ, ಖಾಲಿಯೂ, ನಿಜವೇ,” ಎಂದಿತು ಕಲ್ಲು,
“ಆದರೆ ಅಲ್ಲಿ ಜಾಗವಿಲ್ಲ.
ಸುಂದರ, ಇರಬಹುದು, ಆದರೆ ಆ ಸೌಂದರ್ಯ ನಿನ್ನ ಬಡ ಬುದ್ಧಿಗೆ ಎಟುಕದು.
ನನ್ನ ಪರಿಚಯವಾಗಬಹುದು ನಿನಗೆ, ಆದರೆ ನನ್ನನ್ನು ಎಂದೂ ಅರಿಯಲಾರೆ.
ನನ್ನ ಹೊರಮೈ ನಿನ್ನತ್ತ ತಿರುಗಿದೆ,
ನನ್ನೆಲ್ಲಾ ಆಂತರ್ಯಗಳು ಒಳ ತಿರುಗಿವೆ.”

ನಾನು ಕಲ್ಲು ಬಂಡೆಯ ಮುಂಬಾಗಿಲ ತಟ್ಟುವೆ.
“ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ಅನಂತ ಆಶ್ರಯ ಅರಸಿ ಬಂದಿಲ್ಲ.
ನಾನು ಅಸಂತುಷ್ಟನಲ್ಲ.
ನಾನು ನಿರ್ಗತಿಕನಲ್ಲ.
ತಿರುಗಿ ಹೋಗಲು ಯೋಗ್ಯವಾದದ್ದೇ ನನ್ನ ಲೋಕ.
ನಾನು ಬರಿಗೈಯಲ್ಲಿ ಬರುವೆ, ಹೋಗುವೆ.
ಮತ್ತೆ, ನಾನು ಅಲ್ಲಿದ್ದೆ ಎಂಬುದಕ್ಕೆ ಪುರಾವೆ
ನನ್ನ ಮಾತುಗಳು ಮಾತ್ರ,
ಅವನ್ನು ಹೇಗೂ ಯಾರೂ ನಂಬಲ್ಲ.”

“ನಿನಗೆ ಒಳಗೆ ಪ್ರವೇಶವಿಲ್ಲ,” ಎಂದಿತು ಕಲ್ಲು.
“ನಿನ್ನಲ್ಲಿ ಪಾಲುಗೊಳ್ಳುವಿಕೆಯ ಅರಿವಿಲ್ಲ.
ನಿನ್ನಲ್ಲಿಲ್ಲದ ಪಾಲುಗೊಳ್ಳುವಿಕೆಯ ಅರಿವನ್ನು
ಬೇರೆ ಯಾವ ಅರಿವೂ ತುಂಬಲಾರದು.
ನಿನ್ನ ದೃಷ್ಟಿಗೆ ಎಲ್ಲವನ್ನೂ ಕಾಣುವ ಶಕ್ತಿ ದೊರಕಿದರೂ
ಪಾಲುಗೊಳ್ಳುವಿಕೆಯ ಅರಿವಿಲ್ಲವಾದ್ದರಿಂದ ಕೆಲಸಕ್ಕೆ ಬಾರದು.
ನೀ ಒಳಗೆ ಬರಲಾರೆ, ನಿನಗೆ ಆ ಅರಿವು
ಹೇಗಿರಬಹುದೆಂಬ ಅರಿವು ಮಾತ್ರ ಇದೆ,
ಅದರ ಬೀಜ, ಕಲ್ಪನೆ ಮಾತ್ರ.”

ನಾನು ಕಲ್ಲು ಬಂಡೆಯ ಮುಂಬಾಗಿಲ ತಟ್ಟುವೆ.
‘ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.
ನನ್ನ ಹತ್ತಿರ ಎರಡು ಸಾವಿರ ಶತಮಾನಗಳಿಲ್ಲ,
ಆದ್ದರಿಂದ, ನಿನ್ನ ಸೂರಿನಡಿಯಲ್ಲಿ ಬರಲು ಬಿಡು.”

“ನನ್ನನ್ನು ನಂಬುವುದಿಲ್ಲವಾದರೆ,” ಕಲ್ಲು ಹೇಳಿತ್ತು,
“ಆ ಎಲೆಯನ್ನು ಕೇಳು, ಅದೂ ಇದನ್ನೇ ಹೇಳುತ್ತೆ,
ನೀರ ಹನಿಯನ್ನು ಕೇಳು, ಎಲೆ ಹೇಳಿದ್ದನ್ನೇ ಅದೂ ಹೇಳುತ್ತೆ.
ಕೊನೆಗೆ, ನಿನ್ನದೇ ತಲೆಯ ಒಂದು ಕೂದಲನ್ನು ಕೇಳು.
ನನಗೆ ಹೊಟ್ಟೆ ಬಿರಿಯ ನಗು ಬರುತಿದೆ,
ಹೌದು, ನಗೆ, ವಿಶಾಲವಾದ ನಗೆ,
ಆದರೆ ನಗುವುದು ಹೇಗೆಂದು ನನಗೆ ಗೊತ್ತಿಲ್ಲ.”

ನಾನು ಕಲ್ಲು ಬಂಡೆಯ ಮುಂಬಾಗಿಲ ತಟ್ಟುವೆ.
“ಬೇರಾರೂ ಅಲ್ಲ, ನಾನೇ, ಒಳಗೆ ಬರಲು ಬಿಡು.”

“ನನ್ನಲ್ಲಿ ಬಾಗಿಲಿಲ್ಲ,” ಎಂದಿತು ಕಲ್ಲು.”

3
ಮೂರು ಅತಿವಿಚಿತ್ರ ಪದಗಳು
ಮೂಲ: The Three Oddest Words

‘ಭವಿಷ್ಯ’ ಪದವನ್ನು ನಾನು ಉಚ್ಛರಿಸುವಾಗ,
ಅದರ ಮೊದಲ ಅಕ್ಷರ ಆಗಲೇ ಭೂತಕ್ಕೆ ಸೇರಿರುತ್ತೆ.

‘ಮೌನ’ ಪದವನ್ನು ನಾನು ಉಚ್ಛರಿಸುವಾಗ,
ಅದನ್ನು ಭಂಗ ಮಾಡುತ್ತೇನೆ.

‘ಶೂನ್ಯ’ ಪದವನ್ನು ನಾನು ಉಚ್ಛರಿಸುವಾಗ,
ಯಾವ ಅಸಾರವೂ ಗ್ರಹಿಸಲಾರದ್ದನ್ನು ಸೃಷ್ಟಿಸುತ್ತೇನೆ.

4
ಕೆಲ ಮಂದಿ ಇಷ್ಟಪಡುತ್ತಾರೆ ಕಾವ್ಯ
ಮೂಲ: Some People like Poetry

ಕೆಲ ಮಂದಿ –
ಅಂದ್ರೆ, ಎಲ್ಲರೂ ಅಂತಲ್ಲ,
ಹೆಚ್ಚಿನವರೂಂತ ಕೂಡ ಅಲ್ಲ, ಕೆಲವರು ಮಾತ್ರ.
ಶಾಲೆಗಳನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ, ಅಲ್ಲಿ ಇಷ್ಟಪಡಲೇ ಬೇಕು,
ಮತ್ತು ಸ್ವತಃ ಕವಿಗಳನ್ನ,
ಕೊನೆಗೆ ಸಾವಿರದಲ್ಲಿ ಇಬ್ಬರು ಸಿಗಬಹುದು ಅಂತ ಅಂದಾಜು.

ಇಷ್ಟ –
ಅಂದ್ರೆ, ನೀವು ಚಿಕನ್ ನೂಡಲ್ ಸೂಪ್ ಇಷ್ಟಪಡಬಹುದು,
ಅಥವಾ ಹೊಗಳಿಕೆಗಳನ್ನ, ಅಥವಾ ನೀಲಿ ಬಣ್ಣ,
ನಿಮ್ಮ ಹಳೇ ಮಫ಼್ಲರ್,
ನಿಮ್ಮದೇ ದಾರಿ,
ನಾಯಿಯನ್ನು ಮುದ್ದು ಮಾಡುವುದು.

ಕಾವ್ಯ –
ಆದರೆ, ಕಾವ್ಯ ಅಂದ್ರೆ ಕೊನೆಗೆ ಏನದು?
ಒಂದಕ್ಕಿಂತ ಒಂದು ಅಸ್ಥಿರ ಉತ್ತರಗಳು
ಹೊರ ಬಿದ್ದಿವೆ ಆ ಪ್ರಶ್ನೆ ಮೊದಲು ತಲೆ ಎತ್ತಿದಾಗಿನಿಂದ.
ಆದರೆ ನನಗೆ ಮಾತ್ರ ಗೊತ್ತಾಗುತ್ತಲೇ ಇಲ್ಲದಾಗಿದೆ,
ಹಿಡಿದುಕೊಂಡಿರುವೆ ನಾನು ಅದನ್ನೇ ಗಟ್ಟಿಯಾಗಿ
ಬಿಡುಗಡೆಯ ಕಟಾಂಜನದ ಹಾಗೆ.

5
ಮರಳಿನ ಕಣವೊಂದರ ಜತೆ ನೋಟ
ಮೂಲ: View with a Grain of Sand

ನಾವದನ್ನು ಮರಳಿನ ಕಣವೆಂದು ಕರೆಯುತ್ತೇವೆ
ಆದರೆ ಅದು ತನ್ನನ್ನು ಮರಳು ಯಾ ಕಣ ಎಂದು ಕರೆದುಕೊಳ್ಳುವುದಿಲ್ಲ,
ಹಾಯಾಗಿದೆ ಅದು,
ಸಾರ್ವತ್ರಿಕ, ನಿರ್ದಿಷ್ಟ,
ಶಾಶ್ವತ, ತಾತ್ಕಾಲಿಕ,
ಸರಿಯಲ್ಲದ, ಯಾ ಸೂಕ್ತವಾದ,
ಇಂತಹ ಯಾವುದೇ ಹೆಸರಿಲ್ಲದೇನೇ.

ನಮ್ಮ ನೋಟ, ನಮ್ಮ ಸ್ಪರ್ಶ ಅದಕ್ಕೆ ಯಾವ ಅರ್ಥವೂ ಇಲ್ಲ,
ಅದಕ್ಕೆ ತನ್ನನ್ನು ನೋಡಲಾಗಿದೆ, ಮುಟ್ಟಲಾಗಿದೆ ಎಂಬ ಅನುಭವವಿಲ್ಲ.
ಮತ್ತದು ಕಿಟಕಿಕಟ್ಟೆಯ ಮೇಲೆ ಬಿತ್ತೆಂಬ ವಿಷಯ
ನಮ್ಮ ಅನುಭವವಷ್ಟೇ, ಅದರದ್ದಲ್ಲ.
ಇದರ ಮೇಲೆ ಬೀಳುವುದು ಬೇರೊಂದರ ಮೇಲೆ ಬೀಳುವುದು
ಅದಕ್ಕೆ ಈ ಅಂತರದ ಲಕ್ಷ್ಯವಿಲ್ಲ.
ತಾನು ಬಿದ್ದಾಗಿದೆ ಅಥವಾ ಬೀಳುತ್ತಲೇ ಇದ್ದೇನೆ
ಎಂಬ ಭರವಸೆ ಕೂಡ ಇಲ್ಲ.

ಕಿಟಕಿಯಿಂದ ಕಾಣುತ್ತೆ ಸರೋವರದ ಅದ್ಭುತ ದೃಶ್ಯ
ಆದರೆ ಆ ದೃಶ್ಯ ತನ್ನನ್ನು ದೃಷ್ಟಿಸುತ್ತಿಲ್ಲ.
ಅದು ಈ ಲೋಕದಲ್ಲಿ ಇದೆ
ಬಣ್ಣವಿಲ್ಲದೇ, ರೂವಿಲ್ಲದೇ,
ಶಬ್ದವಿಲ್ಲದೇ, ಕಂಪಿಲ್ಲದೇ, ನೋವಿಲ್ಲದೇ.

ಆ ಸರೋವರದ ತಳವಿದೆ ತಳರಹಿತವಾಗಿ
ಮತ್ತದರ ತಟವಿದೆ ತಟರಹಿತವಾಗಿ.
ಅದರ ನೀರು ಒದ್ದೆ ಯಾ ಒಣ ಎಂದು ಅದಕ್ಕೆ ಅನಿಸುವುದಿಲ್ಲ.
ಮತ್ತದರ ಅಲೆಗಳು ತಮ್ಮನ್ನು ಏಕ ಯಾ ಬಹು
ಎಂದು ಕಂಡುಕೊಳ್ಳುವುದಿಲ್ಲ.
ದೊಡ್ಡದಲ್ಲದ ಸಣ್ಣದಲ್ಲದ ಬೆಣಚುಕಲ್ಲುಗಳ ಮೇಲೆ
ಎರಚಾಡುತ್ತಿರುತ್ತವೆ ಅವು ತಮ್ಮ ಗದ್ದಲಕ್ಕೇ ಕಿವುಡಾಗಿ.

ಮತ್ತೆ ಇವೆಲ್ಲ ನಡೆಯುತ್ತಿದೆ ಸಹಜವಾಗಿ
ಆಕಾಶರಹಿತವಾದ ಆ ಆಕಾಶದಡಿಯಲ್ಲಿ.
ಅಲ್ಲಿ ಸೂರ್ಯ ಅಸ್ತವಾಗುತ್ತದೆ ಅಸ್ತಮಾನವಾಗದೇ,
ಅಡಗದೇ ಅಡಗುತ್ತದೆ ಅದು ಲೆಕ್ಕಿಸದ ಮೋಡವೊಂದರ ಹಿಂದೆ.
ಗಾಳಿ ಅದನ್ನು ಕದಡುತ್ತದೆ, ಅದು ಬೀಸುತ್ತದೆ
ಎಂಬ ಒಂದೇ ಕಾರಣಕ್ಕಾಗಿ ಮಾತ್ರ.

ಒಂದು ಕ್ಷಣ ಕಳೆಯುತ್ತೆ.
ಎರಡನೆಯ ಕ್ಷಣ.
ಮೂರನೆಯ ಕ್ಷಣ.
ಆದರೆ ಅದು ಮೂರು ಕ್ಷಣಗಳು ಎಂಬುದು ನಮಗೆ ಮಾತ್ರ.

ಸಮಯ ಕಳೆದುಹೋಗಿದೆ ತುರ್ತು ಸುದ್ದಿ ತರುವ ದೂತನ ಹಾಗೆ.
ಆದರೆ ಅದು ನಮ್ಮ ಉಪಮೆಯಷ್ಟೇ.
ಕಲ್ಪಿತ ಪಾತ್ರ ಅವನದು, ಅವನ ತುರ್ತು ಕಾಲ್ಪನಿಕ,
ಅವನ ಸುದ್ದಿ ಅಮಾನುಷ.