ಒಮ್ಮೆ ‘ಬಿಹಾರಿ ಭೈಯ್ಯ’ ಹೀಗೆ ಕರ್ಕೊಂಡ್ ಬರುವಾಗ, ಆ ಕುಡುಕ ಮಹಾಶಯನೇ ಬ್ಯಾಲೆನ್ಸ್ ತಪ್ಪಿಸಿ, ಬೈಕ್ ಬಿದ್ದು, ಇಬ್ಬರಿಗೂ ಪೆಟ್ಟಾಗಿ, ನೋಡಿದವರು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಆ ಮಹಾಶಯನ ಮಕ್ಕಳು, ಮೊಮ್ಮಕ್ಕಳು ಬೈಕ್ ಚಾಲಕನದೇ ತಪ್ಪೆಂದು ದಬಾಯಿಸಿ, ಅವನಿಂದಲೇ ಹಣ ಪೀಕಿ, ಟ್ರೀಟ್ಮೆಂಟ್‌ಗೆ ಅದಕ್ಕೆ ಇದಕ್ಕೆ ಎಂದು ಅದರಲ್ಲಿ ಬೇಕಾದ ಬೇಡದ ಟೆಸ್ಟ್‌ಗಳನ್ನೆಲ್ಲ ಮಾಡಿಸಿ, ಆ ಬಿಹಾರಿ ಭಯ್ಯ ಈ ಊರಿನ ಸಹವಾಸವೇ ಬೇಡ ಎಂದು ಈಗ ಇಲ್ಲಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಗೋಣಿಪುರಕ್ಕೆ ಮನೆ ಶಿಫ್ಟ್ ಮಾಡಿದನಂತೆ!
‘ಸಿರಿ’ವಂತರ ಜಿಪುಣತನದ ಕುರಿತು ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಇತ್ತೀಚೆಗೆ ಯಾಕೋ ಬೋರ್ ಎನಿಸಿ, ಯಥಾ ಪ್ರಕಾರ ಮೊಬೈಲ್ ಮೊರೆ ಹೋದಾಗ ಆಕಸ್ಮಿಕವಾಗಿ ಡ್ರಾಮಾ ಜೂನಿಯರ್ಸ್ ಸೂರಜ್‌ನ ‘ಸಾವ್ಕಾರ್ ಮಂದಿ’ ಎನ್ನುವ ಶಾರ್ಟ್ಸ್ ನೋಡಿದೆ. ಖುಷಿಯಾಯಿತು. ಹುಡುಗ ಪ್ರತಿಭಾವಂತ. ಹಾಗೆ ಸುಮ್ಮನೆ ಯೋಚಿಸಿದಾಗ ನನಗೂ ಸಾವ್ಕಾರ್ ಮಂದಿಗಳ ವಿವಿಧ ಮುಖಗಳ ನೆನಪಾಯಿತು.

ಬೇರೆ ಬೇರೆ ಪ್ರದೇಶಗಳಲ್ಲಿ -ಕರ್ನಾಟಕದಲ್ಲಿ- ನೀವೇನ್ ಬಿಡ್ರಿ ಸೌಕಾರ್ರು,…..ಅವ್ನ್ ಬಿಡ್ರಿ ಭಾರಿ ಕುಳ… ಅವನ ಮನೇಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ (ಶಾಂತಂ ಪಾಪಂ)…. ಹೇ ಅಂವ ಏನ್ ಬಿಡ ಭಾರಿ ಆಸಾಮಿ ಅದನಾ?… ಅವನಿಗೇನ್ರಿ ದುಡ್ ಅಂದ್ರೆ ಹುಣಸೆ ಬೀಜ ಇದ್ದಾಗೆ…. ಆ ಜನ ಭಾರಿ ದೊಡ್ಡ ಜನ ಮಾರ್ರೇ,… ಎಂದು ಸಂಬೋದಿಸುವುದನ್ನು ನೋಡಿದ್ದೇವೆ.

ಹೀಗೆ ಬೇರೆ ಬೇರೆ ರೀತಿ ಉಳ್ಳವರು -ಅವರಲ್ಲಿ ಕೆಲವರು ಶಿವಾಲಯ, ಕೃಷ್ಣಾಲಯ ಎಲ್ಲದಕ್ಕೂ ಹಣ ಹಾಕಿ, ಹಣದ ಜೊತೆಗೆ ಮತಗಳನ್ನೂ ಬಾಚುವವರನ್ನು ನೋಡಿದ್ದೇವೆ- ಆದರೆ ಮನೆಯಲ್ಲಿ ಹಣ ಕೊಳೀತ ಇದ್ರೂ… ಕೆಲವರ ಸ್ವಭಾವ ಮಾತ್ರ ತೀರಾ ವಿಭಿನ್ನ, ವಿಚಿತ್ರ! ಅಂತಹುಗಳ ಕೆಲವು ಸ್ಯಾಂಪಲ್ ನಿಮ್ಮ ಅವಗಾಹನೆಗೆ…

ಅದೊಂದು ಬೆಂಗಳೂರಿನ ಹೊರವಲಯದ, ಇನ್ನೂ ಕಾರ್ಪೊರೇಷನ್ ವ್ಯಾಪ್ತಿಯಿಂದ ಹೊರಗಿರುವ, ಬೇಡದ, ಬೇಕಾದ ಎಲ್ಲ ಸವಲತ್ತುಗಳನ್ನು, ಬೀದಿ ನಾಯಿಗಳ ಹಾವಳಿಯನ್ನು, “ಮಮ್ಮಿ ಕರೀತಾವಳೇ ಬಾರ್ಲಾ, ಡ್ಯಾಡಿಗೆ ಬಾಯ್ ಮಾಡ್ಲಾ” ಎನ್ನುವ ನಾಗರಿಕರನ್ನು ಹೊಂದಿರುವ ಊರು. ಅನಿವಾರ್ಯವಾಗಿ ನಾನು ಕೆಲವು ವರ್ಷಗಳು ಆ ಊರಿನಲ್ಲಿ ಇರಬೇಕಾಯಿತು. ನಾನು ಹಿಂದಿದ್ದ ಊರಿನಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದೆ, ಅಲ್ಲಿ ಮನೆಯೆದುರಿದ್ದ ಮಾರ್ವಾಡಿ ಹುಡುಗರು, ಮುಖ್ಯ ರಸ್ತೆಯಲ್ಲಿ ಅನೇಕ ತರಹದ ಅಂಗಡಿಗಳನ್ನು ನಡೆಸುತ್ತಿದ್ದರು. ಪರಿಚಯದವರೆಂದು ಅವರ ಅಂಗಡಿಗೆ ಸ್ಟೇಷನರಿ, ಫ್ಯಾನ್ಸಿ ಐಟಂಗಳಿಗೆ ನಾವು ದಂಪತಿಗಳು ಹೋಗಿ ಬರುತ್ತಿದ್ದೆವು. ಹೆಚ್ಚು ಮರ್ಯಾದೆಯೂ, ಒಂಚೂರು ದರದಲ್ಲಿ ರಿಯಾಯಿತಿಯೂ ಸಿಗುತ್ತಿತ್ತು. ನಾವು ಅಲ್ಲಿನ ಮನೆ ಖಾಲಿ ಮಾಡುವಾಗ ನಾವು ಹೋಗುತ್ತಿರುವ ಪ್ರದೇಶದ ವಿವರ ತಿಳಿದುಕೊಂಡ ಆ ಹುಡುಗರಲ್ಲಿ ಒಬ್ಬ, ಅಲ್ಲಿಯೂ ಅವರ ಭಾವನ ಒಂದು ಅಂಗಡಿ ಇರುವುದಾಗಿಯೂ ತಾವು ಏನಾದರೂ ಕೊಳ್ಳುವುದಿದ್ದರೆ ಅಲ್ಲಿಗೆ ಹೋಗಬೇಕೆಂದು ತಾಕೀತು ಮಾಡಿದ. ಮೊದಲೇ ದಾಕ್ಷಿಣ್ಯಕ್ಕೆ ಬಸಿರಾಗುವಷ್ಟು ಮಟ್ಟಿಗೆ ಪಾಪ ಭೀರುಗಳು ನಾವು. ‘ಹೂಂ.…’ ಎಂದು ಕುತ್ತಿಗೆ ನೋವು ಬರುವಷ್ಟು ತಲೆಯಲ್ಲಾಡಿಸಿದ್ದೆವು -ನಕಾರದಲ್ಲಲ್ಲ….

ಮನೆ ಬದಲಾವಣೆ ನಂತರ ಆ ಅಂಗಡಿಯನ್ನು ಹುಡುಕಿ ಹೊರಟೆ. ಆದರೆ ಅದು ಕಿರಾಣಿ, ಸ್ಟೇಷನರಿ, ಫ್ಯಾನ್ಸಿ ಅಂಗಡಿ ಆಗಿರಲಿಲ್ಲ. ಹಾರ್ಡ್ ವೇರ್, ಎಲೆಕ್ಟ್ರಿಕ್, ಪ್ಲಂಬಿಂಗ್ ಮೆಟೀರಿಯಲ್ಸ್ ಅಂಗಡಿಯಾಗಿತ್ತು. ಆ ಹುಡುಗರು ಸರಿಯಾಗಿ ಹೇಳಿರಲಿಲ್ಲವೋ ಅಥವ ನಾವೇ ಸಾರಿ ‘ನಾನೇ’ ಸರಿಯಾಗಿ ‘ನಿಗಾ ಮಡಗಿರಲಿಲ್ಲವೋ’ ತಪ್ಪು ತಿಳಿದುಕೊಂಡಿದ್ದೆ. ಉಭಯ ಕುಶಲೋಪರಿ, ಪರಿಚಯ ವಿನಿಮಯದ ನಂತರ ಆ ಮನುಷ್ಯನ ಹೆಸರು ‘ಪಪ್ಪೂಜಿ’ ಎಂದು ತಿಳಿಯಿತು. ಈಗಂತೂ ಪಪ್ಪು ಎಂದರೆ ವಿಪರೀತಾರ್ಥಗಳು ಹುಟ್ಟಿಕೊಳ್ಳುವ ಕಾಲ. ನಾನವರಿಗೆ ಪಪ್ಪೂಜಿ ಎಂದರೆ ಅವರು ನನಗೆ ಅಂಕಲ್ ಜಿ ಎನ್ನುವರು. ರೇಷನ್ ಅಂಗಡಿ ಅಲ್ಲದ್ದರಿಂದ ಪ್ರತಿ ದಿನ ಹೋಗಬೇಕಿರಲಿಲ್ಲ. ಅಲ್ಲಿಗೆ ಹೋಗಿ ತರಲೇಬೇಕಾದ ಸಾಮಾನುಗಳ ಅವಶ್ಯಕತೆ ಬೀಳದಿದ್ದರೆ ಸಾಕು ಎಂದು ಭಾವಿಸುವ ಸುಖಾಪೇಕ್ಷಿ ನಾನು. ಬಲ್ಬ್ ಹೋಯಿತು ತೊಂದರೆ ಇಲ್ಲ! ಸ್ವಿಚ್ ಪ್ರಾಬ್ಲಮ್, ಕೊಳಾಯಿ ಮುರಿಯಿತು ಸಿಂಕ್‌ನಲ್ಲಿ ನೀರು ಸರಾಗ ಹೋಗಲ್ಲ ಎಂದರೆ.. ನನಗವು ಬೃಹತ್ ಸಮಸ್ಯೆಗಳೇ!

ಬೇಡ ಬೇಡವೆಂದರೂ ಇಂತಹ ಬೃಹತ್ ಸಮಸ್ಯೆಗಳು ಆಗಾಗ ಕಾಡುವುದೂ, ನಮ್ಮ ಮನೆ ಓನರ್ ನಾವೇ ಆದ್ದರಿಂದ, ಅದರ ದುರಸ್ತಿಯ ಹೊಣೆ ನಮ್ಮದೇ ಆದ್ದರಿಂದ ಆಗಾಗ ಪಪ್ಪೂಜಿ ಅಂಗಡಿಗೆ ಎಡತಾಕುವುದೂ ನಡೆಯುತ್ತಿತ್ತು. ಮೊದಲೇ ಹೇಳಿದ ಹಾಗೆ ದಾಕ್ಷಿಣ್ಯದ ಮಂದಿ ನಾವು. ನಮಗೆ ಬೇಕಾದ್ದು ಸಿಗದಿದ್ದರೂ ಅಲ್ಲಿರುವುದರಲ್ಲಿಯೇ ಸೂಕ್ತವಾದದ್ದನ್ನು ತಂದು ಸಮಸ್ಯೆ ನೀಗಿಸಿ ಕೊಳ್ಳುತ್ತಿದ್ದೆವು. ಸಾರಾಂಶ ಏನೆಂದರೆ ಪಪ್ಪೂಜಿಗೆ ಅಂಕಲ್ ಜಿ ಮೇಲೆ ಎಷ್ಟು ನಂಬಿಕೆ ಅಭಿಮಾನ ಬೆಳೆಯಿತೆಂದರೆ ತನ್ನೆಲ್ಲಾ ಕಷ್ಟ ಸುಖಗಳನ್ನು ಊರಿನ ಹಿನ್ನೆಲೆಯನ್ನೂ ಹೇಳತೊಡಗಿದ. ಮಧ್ಯ ಮಧ್ಯೆ ಬೈಟು ಟೀ ತರಿಸುತ್ತಿದ್ದ… ಬೇಡವೆಂದರೂ ಪಕ್ಕದ ಬೇಕರಿಯ ಸಿಹಿ ಪಾನಕದಂತಹ ಟೀ! ಅಷ್ಟೇ ಅಲ್ಲದೆ ಒಮ್ಮೊಮ್ಮೆ ಮನೆಗೆ ಫೋನ್ ಮಾಡಿ “ಒಂದು ಹತ್ತು ನಿಮಿಷ ಬಂದು ಹೋಗಿ” ಎನ್ನುತ್ತಿದ್ದ. ನಾನು ಸಹ ಫ್ರೀ ಇದ್ದರೆ ಹೋಗುತ್ತಿದ್ದೆ. ಅವನ ಅಂಗಡಿಯಲ್ಲಿ ಕೂರಿಸಿ “ಇಲ್ಲೇ ಹತ್ತು ನಿಮಿಷ ಬಂದುಬಿಡುತ್ತೇನೆ ಕೂತಿರಿ” ಎಂದು ಕೂರಿಸಿ ಹೊರಗೆ ಹೋಗಿ ಬರುತ್ತಿದ್ದ. ‘ನನಗೆ ವ್ಯಾಪಾರ ಮಾಡಲು ಬರಲ್ಲ ಬೇಕಾದರೆ ಬಾಗಿಲು ಹಾಕಿ ಹೋಗು’ ಎಂದರೆ ‘ಇಲ್ಲ, ನೀವು ಸುಮ್ಮನೆ ಕೂತಿರಿ ಬಂದುಬಿಡುತ್ತೇನೆ ..’ ಎಂದು ಹೋಗುತ್ತಿದ್ದ. ಕೆಲವೊಮ್ಮೆ ಆ ಸಮಯದಲ್ಲಿಯೇ ಗಿರಾಕಿಗಳು ಬರುತ್ತಿದ್ದರು. ಅವರಿಗೆ ಬೇಕಾದದ್ದು ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವಷ್ಟು ಜ್ಞಾನ ಸಂಪಾದಿಸಿದ್ದೆ.. ಆದರೆ ವೆರೈಟಿ, ದರ ತಿಳಿಯುತ್ತಿರಲಿಲ್ಲ. ಕೆಲವರು ಆಮೇಲೆ ಬರುತ್ತೇನೆ ಎಂದು ಹೋದರೆ, ಕೆಲವರು ಕಾಯುತ್ತಿದ್ದರು. (ಇಂತಹವರು ಸಾಲದ ಗಿರಾಕಿಗಳೆಂದು ಆಮೇಲೆ ತಿಳಿಯಿತು.)

ಮುಖ್ಯ ವಿಷಯ ಹೇಳಲು ಹೋಗಿ ಪೀಠಿಕೆ ಹೆಚ್ಚಾಯ್ತು. ಹೀಗೆ ನಾನು ಆಗಾಗ ಅಲ್ಲಿ ಕುಳಿತಿರುತ್ತಿದ್ದಾಗ, ಪಪ್ಪೂಜಿ ಇದ್ದಾಗ ಕೆಲವು ಗಿರಾಕಿಗಳ ವರ್ತನೆ ನನಗೆ ಅಚ್ಚರಿ ಹುಟ್ಟಿಸುತ್ತಿತ್ತು. ಒಬ್ಬರು ಹಿರಿಯರು ಕೆಳಗೆ ಚಡ್ಡಿ ಮೇಲೊಂದು ಬೆಲೆಬಾಳುವ ಆದರೆ ಕೊಳೆಯಾಗಿದ್ದ ದೊಗಲೇ ಶರ್ಟ್, ಹೆಗಲ ಮೇಲೆ ಶಾಲು, ಹದಿನೈದು ದಿನದ ಕಳೆ ಕೆನ್ನೆಯ ಮೇಲೆ, ತಾಂಬೂಲ ಚರ್ವಣದಿಂದ ಕೆಂಪಾದ ಹಲ್ಲುಗಳು. ಅವರನ್ನು ಕಂಡವನೆ ಪಪ್ಪೂಜಿ ಅತಿ ವಿನಯ ಗೌರವದಿಂದ “ಬನ್ನಿ ಸ್ವಾಮಿ” ಎಂದ. ಅವರು ‘ಸೇಟು.. ಬೋಲ್ಟ್ ಐತೇನಯ್ಯ’ ಎಂದರು. ‘ಇದೇ ಬನ್ನಿ’, ಎಂದು ತೋರಿಸಿ “ಇದು ಮೀಡಿಯಂ ಕ್ವಾಲಿಟಿ ನೂರೈವತ್ತು ರೂಪಾಯಿ ಇದು, ಇನ್ನೂ ಬೆಸ್ಟ್ ಕ್ವಾಲಿಟಿ ಇದೆ ಇನ್ನೂರೈವತ್ತು” ಎಂದ. ಅದನ್ನೇ ತೋರಿಸು ಎಂದರು. ತೋರಿಸಿದ. ‘ಇದಕ್ಕೆ ಇನ್ನೂರೈವತ್ತಾ, ಹೋಗಯ್ಯೋ.. ಇದೆ ಐಟಂ ಸೀಗೆ ಹಳ್ಳಿಲಿ ನೂರೈವತ್ತಕ್ಕೆ ಸಿಗುತ್ತೆ’ ಎಂದರು. ಸೀಗೆ ಹಳ್ಳಿ ಇಲ್ಲಿಂದ ಮೂರು ಕಿಲೋಮೀಟರ್ ದೂರ. ಹೈವೇ ಹೋಗುವ ಊರು ಆದ್ದರಿಂದ ಸಾಕಷ್ಟು ಅಂಗಡಿಗಳು ಇವೆ. “ಇಲ್ಲಾ ಸ್ವಾಮಿ ಇದು ಬೆಸ್ಟ್ ಕ್ವಾಲಿಟಿ, ನಾವು ಅಷ್ಟೊಂದು ಲಾಭ ಇಟ್ಟಿಲ್ಲ, ಬೇರೆಯವರಿಗಾದರೆ ಮುನ್ನೂರು ಹೇಳುತ್ತಿದ್ದೆ. ನಿಮಗೆ ಹೇಳಿದ್ದೇ ಕಡಿಮೆ’ ಎಂದ. “ಓಹೋಹೊ.. ಯಾಕ್ಹೇಳು, ನೀವು ಸೇಟುಗಳು ಬಲೇ ಕಿಲಾಡಿಗಳು, ಡಬಲ್ ಲಾಭ ಮಡಗಿರ್ತೀರಾ” ಎಂದರು ಸ್ವಾಮಿಗಳು. ಕೊನೆಗೆ ಇನ್ನೂರೈವತ್ತರದ್ದೇ, ನೂರೈವತ್ತರಿಂದ ಇನ್ನೂರಕ್ಕೆ ಏರಿ, ಆಗಲ್ಲ, ಕೊಡಲ್ಲ, ಬಿಡಲ್ಲ ಎಂದು ಇನ್ನೂರ ಇಪ್ಪತ್ತಕ್ಕೆ ಒಪ್ಪಿಸಿ, ಐದು ತೆಗೆದುಕೊಂಡು, ಒಂದು ಸಾವಿರ ಕೊಟ್ಟು, ಉಳಿದ ನೂರು ಆಮೇಲೆ ಕೊಡುವುದಾಗಿ ಹೇಳಿ ಹೋದರು. ಪಪ್ಪೂಜಿ ಹುಳ್ಳ ಹುಳ್ಳಗೆ ನಗುತ್ತಾ, “ನೀವೇ ಗ್ಯಾಪಕ ಮಾಡಿಕೊಂಡು ಕೊಟ್ಟುಬಿಡಿ” ಎಂದ. “ಕೊಡ್ತೀನಿ ಬಿಡಯ್ಯ ಓಡೋಗ್ತೀನಾ” ಎಂದು ಹೊರಟರು ಸ್ವಾಮಿಗಳು. “ನನಗೆ ಅಸಲು ಬಿದ್ದಿದ್ದೇ ಇನ್ನೂರು, ಅವರು ಕೊಟ್ಟರೆ ಐತೆ ಇಲ್ಲದಿದ್ದರೆ ಗೋವಿಂದಾ” ಎಂದ ಪಪ್ಪೂಜಿ. ನನಗೇನೋ ಅವರು ಆ ನೂರು ಕೊಡದಿದ್ದರೂ ಇವನಿಗೆ ನೂರು ಲಾಭ ಬಂದಿರಬಹುದು ಎನಿಸಿತು, ಅವರ ವ್ಯವಹಾರ ಗಮನಿಸಿ ಸ್ವಲ್ಪ ಜಾಣತನ ಬಂದಿದ್ದರಿಂದ.

ಇನ್ನೊಮ್ಮೆ ಪಪ್ಪೂಜಿ ಅಂಗಡಿಯಲ್ಲಿ ಅರ್ಧ ಟೀ ಕುಡಿದು, ಬೈಕ್ ಸ್ಟಾರ್ಟ್ ಮಾಡುವಷ್ಟರಲ್ಲಿ, “ಯಾವ ಕಡೆ ಓಯ್ತಾ ಇದ್ದೀರಾ, ಸೀಗೇ ಅಳ್ಳಿ ಕಡೆ ಓಯ್ತೀರಾ” ಅಂತ ಒಬ್ಬರು ‘ಸಾವ್ಕಾರ್ ಮಂದಿ’ ಕೇಳಿದರು. ಈ ಹಿಂದೆ ಪಪ್ಪೂಜಿ ಅಂಗಡಿಯಲ್ಲಿ ನೋಡಿದಂತಹ ‘ಸ್ವಾಮಿ’ಗಳ ಹಾಗೆ ವೇಷ. ಇನ್ನಷ್ಟು ಸೀನಿಯರ್. ಹೊಟ್ಟೆ ಕೂಡ ಮುಂದೆ ಬಂದಿತ್ತು. ನಾನು ‘ಹೂಂ ಆ ಕಡೇನೇ’ ಅಂದೆ. ‘ಸ್ವಲ್ಪ ಅಲ್ಲಿ ಗಂಟ ಬಿಟ್ಟುಬಿಡಿ’ ಅಂದ್ರು. ಇನ್ನೂ ಸೀಗೇಹಳ್ಳಿ ಬಸ್ ಸ್ಟಾಪ್ ನೂರು ಮೀಟರ್ ಇರುವಾಗಲೇ ‘ಇಲ್ಲೇ ಬುಟ್ಬುಡಿ’ ಅಂದ್ರು, ಅಂಗಡಿ ಸಾಲುಗಳಿದ್ದ ಕಡೆ ಇಳಿಸಿ ನನ್ನ ಕೆಲಸ ಮುಗಿಸಿ ವಾಪಸ್ ಬರುವಾಗ, ಪಪ್ಪೂಜಿ ಅಂಗಡಿಯ ಹತ್ತಿರ ಐದು ನಿಮಿಷ ನಿಲ್ಲಿಸಿ ಮಾತಾಡಿ ಬರಲು ಇಳಿದೆ. ನನ್ನನ್ನು ನೋಡಿದ ತಕ್ಷಣ ಪಪ್ಪೂಜಿ ಕೇಳಿದ ‘ಎಲ್ ಬಿಟ್ರಿ ಅವರನ್ನ …’ ಎಂದು. ನಾನು ಹೇಳಿದೆ. “ಅದು ಅವರ ಪರ್ಮನೆಂಟ್ ಜಾಗ, ಅಲ್ಲೊಂದು ವೈನ್ ಷಾಪ್ ನೋಡಿದ್ರಾ” ಎಂದು ಮುಂದುವರಿಸಿದ. “ದಿನಾ ಒಂದು ರೌಂಡ್ ಅಲ್ಲಿಗೆ ಹೋಗಿ ಒಂದು ಕ್ವಾರ್ಟರ್ ಹಾಕೊಂಡು ಬಂದ್ರೇ ಆಯಪ್ಪನಿಗೆ ಸಮಾಧಾನ, ಹೋಗುವಾಗ ಯಾರದಾದರೂ ಗಾಡಿಗೆ ಕೈ ಮಾಡುತ್ತಾರೆ, ಬರುವಾಗಲೂ… ಆದರೆ ನೀವು ಕರ್ಕೊಂಡು ಹೋಗಿ, ಆದ್ರೆ ಕರ್ಕೊಂಡ್ ಬರಬೇಡಿ” ಎಂದ. ಕುತೂಹಲದಿಂದ “ಯಾಕೆ” ಎಂದೆ. “ಅಯ್ಯೋ ಅದು ಯಾಕೆ ಕೇಳ್ತೀರಾ” ಅಂತ ಕಥೆ ಮುಂದುವರೆಸಿದ. ಸಾರಾಂಶ ಇಷ್ಟೇ: ಹೊಸಬರು ಯಾರಾದರೂ ಬೈಕ್ನಲ್ಲಿ ಕರ್ಕೊಂಡು ಬಂದು ಬಿಡ್ತಾರೆ. ಒಮ್ಮೆ ‘ಬಿಹಾರಿ ಭೈಯ್ಯ’ ಹೀಗೆ ಕರ್ಕೊಂಡ್ ಬರುವಾಗ, ಆ ಕುಡುಕ ಮಹಾಶಯನೇ ಬ್ಯಾಲೆನ್ಸ್ ತಪ್ಪಿಸಿ, ಬೈಕ್ ಬಿದ್ದು, ಇಬ್ಬರಿಗೂ ಪೆಟ್ಟಾಗಿ, ನೋಡಿದವರು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಆ ಮಹಾಶಯನ ಮಕ್ಕಳು, ಮೊಮ್ಮಕ್ಕಳು ಬೈಕ್ ಚಾಲಕನದೇ ತಪ್ಪೆಂದು ದಬಾಯಿಸಿ, ಅವನಿಂದಲೇ ಹಣ ಪೀಕಿ, ಟ್ರೀಟ್ಮೆಂಟ್‌ಗೆ ಅದಕ್ಕೆ ಇದಕ್ಕೆ ಎಂದು ಅದರಲ್ಲಿ ಬೇಕಾದ ಬೇಡದ ಟೆಸ್ಟ್‌ಗಳನ್ನೆಲ್ಲ ಮಾಡಿಸಿ, ಆ ಬಿಹಾರಿ ಭಯ್ಯ ಈ ಊರಿನ ಸಹವಾಸವೇ ಬೇಡ ಎಂದು ಈಗ ಇಲ್ಲಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಗೋಣಿಪುರಕ್ಕೆ ಮನೆ ಶಿಫ್ಟ್ ಮಾಡಿದನಂತೆ! ಪಪ್ಪೂಜಿ ಪ್ರಕಾರ ಗುಡ್ಡದ ಆಚೆ ಇರುವ ಬಯಲಿನ ಜಮೀನಲ್ಲಿ ಅರ್ಧಭಾಗ ಈ ಮಹಾನುಭಾವನದಂತೆ, ಈಗ ಮಕ್ಕಳು ಮೊಮ್ಮಕ್ಕಳು ರಾಜಕೀಯ ಪ್ರವೇಶಕ್ಕೆ ಹೊರಟಿದ್ದಾರಂತೆ, ಅದಕ್ಕೆ ಬೇಕಾದ ಪ್ರಮುಖ ಅರ್ಹತೆ ಇದೇ ಅಲ್ಲವೇ?!

ಇನ್ನೊಮ್ಮೆ, ಹೀಗೇ ಕೂತಿದ್ದಾಗ ಒಬ್ಬ ಪ್ಲಂಬರ್ ಬಂದ. ಇಂತಿಂತಹ ಸಾಮಾನುಗಳು ಬೇಕು ಎಂದು ದೊಡ್ಡ ಲಿಸ್ಟ್ ತೋರಿಸಿ, ಆಮೇಲೆ ಯಜಮಾನರು ಬಂದು ದುಡ್ಡು ಕೊಡುತ್ತಾರಂತೆ ಎಂದಾಗ, ಪಪ್ಪೂಜಿ ಉತ್ಸಾಹ ತೋರಿಸಲಿಲ್ಲ. ಆಗ ಆ ಪ್ಲಂಬರ್ ಯಜಮಾನರಿಗೆ ಫೋನ್ ಮಾಡಿ ಇವನ ಕೈಗೆ ಕೊಟ್ಟ. ಇವನು ಇನ್ನೂ ಬೋಣಿಯಾಗಿಲ್ಲ ಸ್ವಾಮಿ, ಅದು ಜಾಸ್ತಿ ಐಟಂ ಐತೆ ಅಂತ ಗೋಗರೆದ. ಸರಿ ನಾನೇ ಬರ್ತಿದ್ದೀನಿ ಅಂತ ಆ ಕಡೆಯಿಂದ ಉತ್ತರ ಬಂದಿರಬಹುದು. ಗೊಣಗಿಕೊಂಡೆ ಐಟಂಗಳನ್ನು ತೆಗೆದು ಜೋಡಿಸಿ, ಬಿಲ್ ಮಾಡಿದ. ಸುಮಾರು ಹದಿನೈದು ಸಾವಿರ ಚಿಲ್ಲರೆ ಆಯ್ತು. ಅಷ್ಟರಲ್ಲಿ ಇನ್ನೊಂದು ದಿಕ್ಕಿನಿಂದ ಕಾರಿನಲ್ಲಿ ಯಜಮಾನರು ಬಂದರು. ‘ಏನಯ್ಯಾ ಸೇಟು ಅಷ್ಟ್ ನಂಬ್ಕೆ ಇಲ್ವೇನಯ್ಯಾ, ನಾವು ಎಷ್ಟು ಕೋಟಿಗೆ ಬಾಳ್ತೀವಿ ಗೊತ್ತಾ?’ ಎಂದು ದರ್ಪದಿಂದ ಬಿಲ್ ಪರಿಶೀಲಿಸಿ, ಚಿಲ್ಲರೆಯನ್ನು ಗಣನೆಗೇ ತೆಗೆದುಕೊಳ್ಳದೆ, ‘ಹೂಂ ಹದಿನೈದು ಸಾವಿರನಾ… ಯಾಕೇಳು’ ಎಂದು, ಇನ್ನೊಮ್ಮೆ ಪ್ರತಿ ಐಟಂನ ರೇಟು ವಿಚಾರಿಸಿ ಕಡಿಮೆ ಮಾಡ್ತಾ ಬಂದು, ಹದಿನಾಲ್ಕು ಸಾವಿರಕ್ಕೆ ಇಳಿಸಿ, ಜೋಬಿಗೆ ಕೈ ಹಾಕಿ ನಾಲ್ಕು ಸಾವಿರ ಕೊಟ್ಟು, ಆಮೇಲೆ ಕೊಡ್ತೀನಿ ಬಿಡಯ್ಯ ಎಂದು ಇವನು ಇಲ್ಲ ಸ್ವಾಮಿ ಸಪ್ಲೈ ಬರ್ತಾರೆ ಪೇಮೆಂಟ್ ಮಾಡಬೇಕು ಎಂದು, ಸರಿ ಹಾಗಾದರೆ ಅರ್ಜೆಂಟ್ ಇದ್ರೆ ಮನೆ ತಾವ ಬಾ ಎಂದು, ಇವನು ಹೂಂ ಎಂದು, ಅವರು ಮಾಲು ಸಹಿತ ಹೋದಮೇಲೆ, ಗೊಣಗಿಕೊಂಡು, ನನ್ನನ್ನು ಕೂರಿಸಿ ‘ಅಂಕಲ್ ಜಿ ಐದು ನಿಮಿಷ ಬರ್ತೀನಿ..’ ಅಂತ ತನ್ನ ಹಳೆ ಟಿವಿಎಸ್ ಮೊಪೆಟ್ ತಗೊಂಡು ಹೋಗಿ 10 ನಿಮಿಷ ಬಿಟ್ಟು ಬಂದ. ನಾನು ದುಡ್ಡು ಕೊಟ್ರ ಎಂದಾಗ, ಅಯ್ಯೋ ಈ ಊರಿನ ದೊಡ್ ಸಾವಕಾರ್‌ಗಳ ಸಹವಾಸನೆ ಇಷ್ಟು ಎಂದು, ಐದುಸಾವಿರ ಕೊಟ್ಟನೆಂದು, ಉಳಿದ ಐದು ಸಾವಿರ ನಾಳೆ ಕೊಡುವನೆಂದೂ, ಆ ನಾಳೆ ಎಂದು ಬರುತ್ತೋ ಎಂದು ಗೋಳಾಡಿದ. ‘ಈ ಊರಿನಲ್ಲಿ ಸಾಲ ಕೊಡದಿದ್ದರೆ ಯಾಪಾರ ಆಗಲ್ಲ; ಸಾಲ ಕೊಟ್ಟರೆ ಪೂರ ವಾಪಸ್ ಬರಲ್ಲ..’ ಎಂದು ಸಂಕಟ ತೋಡಿಕೊಂಡ.

ಪಪ್ಪೂಜಿ ಹುಳ್ಳ ಹುಳ್ಳಗೆ ನಗುತ್ತಾ, “ನೀವೇ ಗ್ಯಾಪಕ ಮಾಡಿಕೊಂಡು ಕೊಟ್ಟುಬಿಡಿ” ಎಂದ. “ಕೊಡ್ತೀನಿ ಬಿಡಯ್ಯ ಓಡೋಗ್ತೀನಾ” ಎಂದು ಹೊರಟರು ಸ್ವಾಮಿಗಳು. “ನನಗೆ ಅಸಲು ಬಿದ್ದಿದ್ದೇ ಇನ್ನೂರು, ಅವರು ಕೊಟ್ಟರೆ ಐತೆ ಇಲ್ಲದಿದ್ದರೆ ಗೋವಿಂದಾ” ಎಂದ ಪಪ್ಪೂಜಿ. ನನಗೇನೋ ಅವರು ಆ ನೂರು ಕೊಡದಿದ್ದರೂ ಇವನಿಗೆ ನೂರು ಲಾಭ ಬಂದಿರಬಹುದು ಎನಿಸಿತು, ಅವರ ವ್ಯವಹಾರ ಗಮನಿಸಿ ಸ್ವಲ್ಪ ಜಾಣತನ ಬಂದಿದ್ದರಿಂದ.

ಇನ್ನೊಮ್ಮೆ ಯಥಾ ಪ್ರಕಾರ ನಾನೂ ಕೂತಿದ್ದೆ. ಈ ಅಂಗಡಿಗೆ ಆಗಾಗ ಜನ ಬಂದು ಹೋಗುವುದರಿಂದ ಪಪ್ಪೂಜಿ ಫ್ರೀ ಇದ್ದಾಗ ತನ್ನ ಊರಿನ ಕಥೆಯನ್ನು ಹೇಳುತ್ತಿರುತ್ತಾನೆ. ಎಲ್ಲರಂತೆ ಇವನೂ ತನ್ನ ಊರಿನ ವಿಶೇಷಗಳನ್ನು, ರುಚಿ, ಸ್ವಾದ ಬೇರೆಲ್ಲೂ ಸಿಗಲ್ಲ ಎಂಬುದನ್ನು ವಿವರಿಸಿಕೊಂಡಿದ್ದ… ಇನ್ನೊಬ್ಬರು ದೊಡ್ಡ ಮನುಷ್ಯರು ಬಂದರು. ಹಿಂದಿದ್ದ ಕೆಲಸದವನ ಕೈಯಲ್ಲಿ ಒಂದು ಗೋಣೀ ಚೀಲವಿತ್ತು. ಒಂದಷ್ಟು ಐಟಂ ತಗೊಂಡು, ಯಥಾಪ್ರಕಾರ ಚೌಕಾಶಿ ಮಾಡಿ ಬಿಲ್ ರೆಡಿ ಆದಮೇಲೆ, ಆ ಗೋಣಿಯಲ್ಲಿದ್ದ ಸಾಮಾನುಗಳು ಒಂದೊಂದೇ ಹೊರಬಿದ್ದು ಟೇಬಲ್ ಮೇಲೆ ರಾರಾಜಿಸಿದವು. ಅವುಗಳಲ್ಲಿ ಕೆಲವು ಹಿಂದೆ ತೆಗೆದುಕೊಂಡು ಹೋಗಿ ಹೆಚ್ಚುವರಿಯಾಗಿದ್ದವು, ಸೈಜ್ ಬೇರೆಯಾದವು. ಇವುಗಳೇನೋ ಸರಿ, ಇದರ ಜೊತೆಗೆ ಕೆಲವು ಬಳಸಿ ಬಿಟ್ಟದ್ದು, ಹಳತಾದದ್ದೂ ಕಾಣಿಸಿತು. ಪಪ್ಪೂಜಿಯ ಮುಖ ಪೆಚ್ಚಾಗಿ, ಕೆಲವನ್ನು ಬದಿಗೆ ಸರಿಸಿ, ಸರಿಯಾದ ವಸ್ತುಗಳಿಗೆ ಹಿಂದೆ ಕೊಟ್ಟಿದ್ದ ಬೆಲೆ ಇಬ್ಬರಿಗೂ ಬೇರೆ ಬೇರೆ ಎನಿಸಿ, ಒಮ್ಮತಕ್ಕೆ ಬಂದು ಅದರ ಲಿಸ್ಟ್ ರೆಡಿ ಮಾಡಿ, ಅದರ ಬೆಲೆಯನ್ನು ಫ್ರೆಷ್ ಬಿಲ್‌ನಲ್ಲಿ ಮೈನಸ್ ಮಾಡಿ, ಆ ಮೊತ್ತದ ಅರ್ಧ ಹಣ ಕೊಟ್ಟು ಉಳಿದದ್ದನ್ನು “ನಾಳೆ ಕೊಡ್ತೀನಯ್ಯಾ ಇನ್ನೂ ಐಟಂಗಳು ಬೇಕು” ಎಂದು ಆ ದೊಡ್ಡ ಮನುಷ್ಯರು ಹೊರಟೇಬಿಟ್ಟರು ಚೇಲಾನೊಂದಿಗೆ!

ಈ ಊರಿನಲ್ಲಿರುವ ದೊಡ್ಡ ಕುಳಗಳೆಲ್ಲಾ ಒಂದೇ ಜಾತಿಗೆ ಸೇರಿದವರು. ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ -ಕೆಲವರು ಅದರಲ್ಲಿ, ಕೆಲವರು ಇದರಲ್ಲಿ- ನಾಯಕರು… ಪ್ರಶ್ನಿಸುವ ಹಾಗೆ ಇಲ್ಲ ಹೊರಗಿನಿಂದ ಬಂದವರು… ಏಕೆಂದರೆ ಅವರವರೇ ಕೆಲವು ಸಂದರ್ಭಗಳಲ್ಲಿ ಒಂದಾಗಿಬಿಡುತ್ತಾರೆ. ಆದರೆ ಎಲ್ಲರೂ ಹಾಗೆಂದೇನೂ ಇಲ್ಲ. ತರುಣ ಪೀಳಿಗೆಯ ಕೆಲವರು ವಿದ್ಯಾವಂತರು, ವಿನಯವಂತರು ಅವರಲ್ಲೇ ಇದ್ದಾರೆ. ಅಂತಹವರು ಬಂದಾಗ, ಇವನು ಹೇಳಿದಷ್ಟು ಹಣ ಕೊಡುವಾಗ ಪಪ್ಪೂಜಿಯೇ “ತಗೊಳಿ ಸರ್ ನೀವು ರೆಗ್ಯುಲರ್ ಕಸ್ಟಮರ್, ನಿಮ್ಮ ಹತ್ತಿರ ಜಾಸ್ತಿ ತಗೊಂಡ್ರೆ ದೇವರು ಮೆಚ್ಚಲ್ಲ” ಎಂದು ಸ್ವಲ್ಪ ಹಣ ವಾಪಸ್ ಕೊಡುವುದನ್ನೂ ನಾನು ಹೇಳಲೇಬೇಕು.

ಹೀಗೆ ಒಮ್ಮೆ ಪಪ್ಪೂಜಿ, “ಅಂಕಲ್ ಜಿ ನಿಮ್ಮ ಫೋನ್ ಕೊಡಿ, ಯಾರಿಗೋ ಒಂದು ಫೋನ್ ಮಾಡಬೇಕು” ಎಂದ. ಸರಿ ಕೊಟ್ಟೆ, ಕಾಲ್ ಮಾಡಿ ಆ ಕಡೆ ತೆಗೆಯದೆ ಗೊಣಗಿಕೊಂಡು ಫೋನ್ ವಾಪಸ್ ಕೊಟ್ಟ. ವಿಚಾರಿಸಿದಾಗ…. ಒಬ್ಬ ದೊಡ್ಡ ಗಿರಾಕಿ, ಮೈಮೇಲೆ ಒಂದು ಕೆಜಿಯಷ್ಟು ಚಿನ್ನ ಹೇರಿಕೊಂಡಿರುತ್ತಿದ್ದ, ಸುಮಾರು ಎಂಟು ಹತ್ತು ಕಿಲೋ ಮೀಟರ್ ದೂರದ ಊರಿನಲ್ಲಿ ಬಿಲ್ಡಿಂಗ್‌ನಲ್ಲಿ ಕಟ್ಟುತ್ತಿದ್ದನಂತೆ, ಸಾಕಷ್ಟು ಸಾಮಾನು ಕೊಳ್ಳುತ್ತಿದ್ದ. ಅವನೇ ಹೇಳಿದ್ದು ಎಲ್ಲೆಂದೂ ಇವನಿಗೆ ಗೊತ್ತಿಲ್ಲ. ಆಗಾಗ ಸ್ವಲ್ಪ ಹಣ ಬಾಕಿ ಮಾಡಿ ಮುಂದಿನ ಬಾರಿ ಕೊಟ್ಟು ಇನ್ನಷ್ಟು ಖರೀದಿಸಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ಇನ್ನೊಂದು ಫ್ಲೋರ್ ಮಾಡ್ತಾ ಇದ್ದೀನಿ, ಇನ್ನು ಬ್ಯಾಂಕ್ ಲೋನ್ ಇನ್ನೊಂದು ಕಂತು ಬರಬೇಕು, ತಡ ಆಗ್ತಾ ಇದೆ ಎಂದು ನಂಬಿಸಿ, ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಮೊತ್ತದ ಐಟಮ್ಸ್ ತೆಗೆದುಕೊಂಡು ಹೋಗಿದ್ದ. ಈಗ ಆಗ ಎಂದು ಕಾದು ಒಮ್ಮೆ ಫೋನ್ ಮಾಡಿದಾಗ ಸದ್ಯದಲ್ಲೇ ಕೊಡುವೆನೆಂದಿದ್ದ, ಪುನಃ ಫೋನ್ ಮಾಡಿದಾಗ ತೆಗೆಯಲಿಲ್ಲ‌. ಇದೇ ಪುನರಾವರ್ತನೆ ಆದಾಗ, ಆ ಮನುಷ್ಯನ ಜೊತೆ ಓಡಾಡುತ್ತಿದ್ದ ಈ ಊರಿನ ಕೆಲವರನ್ನು ವಿಚಾರಿಸಿದಾಗ, “ಏನ್ ಸೇಟು ಸಾಲ ಕೊಟ್ಟಿದ್ದೀಯಾ?! ಎಷ್ಟು? ಅಷ್ಟೇ ಬಿಡು ಮೂರುನಾಮ. ನಮಗೂ ಬೇಕಾದಷ್ಟು ಕೊಡಬೇಕು. ಅವನೇನು ನಮ್ಮ ಪೈಕಿ ಅಲ್ಲ, ಪರಿಚಯದವನಷ್ಟೇ” ಎಂದಾಗ ಇವನಿಗೆ ತಲೆ ತಿರುಗಿತ್ತು. ವರ್ಷದ ಲಾಭವೆಲ್ಲ ಒಂದೇ ಕಡೆ ಹೋಗಿತ್ತು. ನನಗಾದ ಭಯವೆಂದರೆ ನನ್ನ ನಂಬರಿಗೆ ಪುನಃ ಅವನು ಫೋನ್ ಮಾಡಿ ‘ಯಾರಯ್ಯ ನೀನು’? ಎಂದು ದಬಾಯಿಸಿದರೆ! ಒಟ್ಟಿನಲ್ಲಿ ಹೀಗೆ ಎರಡು ಮೂರು ವರ್ಷಗಳ ನಂತರ, ಸುಮಾರು ಮೂರು ಲಕ್ಷ ಬಾಕಿಯಾಗಿ, ಪಪ್ಪೂಜಿ ಅಂಗಡಿಯನ್ನು ಬೇರೆಯವರ ಸುಪರ್ದಿಗೆ ಕೊಟ್ಟು ತನ್ನೂರಿಗೆ ಹೊರಟು ಅಲ್ಲೇ ಈ ವ್ಯವಹಾರ ಮುಂದುವರೆಸಿದ್ದಾನೆ.

ಪಪ್ಪೂಜಿಯ ಅಂಗಡಿಯ ಸಾಲಿನಲ್ಲಿ ಎರಡು ಅಂಗಡಿ ಬಿಟ್ಟು ಒಂದು ಟೈಲರ್ ಅಂಗಡಿ ಇದೆ. ಅದರ ಮಾಲೀಕ ಇದೇ ಊರಿನವರೇ, ಅದೇ ಜಾತಿಯವರೆ. ನನಗೂ ಸ್ವಲ್ಪ ಪರಿಚಯ ಇತ್ತು. ಈಗ ಹೆಚ್ಚು ಸಿದ್ಧ ಉಡುಪುಗಳೇ ಆದ್ದರಿಂದ ಹೊಲಿಸುವುದು ಕಡಿಮೆ. ಯಾರಾದರೂ ಕೊಟ್ಟ ಗಿಫ್ಟ್‌ಗಳಲ್ಲಿ ಇಷ್ಟವಾದದ್ದು ಇದ್ದು, ಹೊಲಿಸುವಾಗ ಅಥವಾ ಕೆಲವರು ಇದನ್ನು ನಿಮಗೆ ಎಂದೇ ತಂದಿದ್ದೇನೆ ನೀವು ಹೊಲಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಿ ಹೋಗಿರುವ ಸಂದರ್ಭದಲ್ಲಿ,- ಅದಕ್ಕೆ ಬೇರೆ ಸುಮಾರು ದುಡ್ಡು ತೆರಬೇಕಲ್ಲ ಆ ದುಡ್ಡಿನಲ್ಲಿ ರೆಡಿಮೇಡ್ ತಗೋಬಹುದಲ್ಲ ಎಂದೆನಿಸಿದರು- ಇವರ ಪರಿಚಯ ಹೆಚ್ಚಾಗಿ ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ಪಪ್ಪೂಜಿಯ ನಂತರ ನಾನು ಹತ್ತು ನಿಮಿಷ ಬದಲಾವಣೆಗಾಗಿ ಕೂತುಕೊಳ್ಳುವ ಸ್ಥಳ ಅದಾಯಿತು. ಅವರು ಈ ಊರಿನ ಬಗ್ಗೆ ಇಲ್ಲಿನ ಜನಗಳ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತಿದ್ದುದಲ್ಲದೆ ನನಗೆ ಅವಶ್ಯಕತೆ ಇದ್ದಾಗ ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳ ನಂಬರ್ ಕೊಟ್ಟು ಸಹಕರಿಸುತ್ತಿದ್ದರು. ಜೊತೆಗೆ ಆಗಾಗ ಬೈಟು ಅಥವಾ ಬೇರೆ ಜನರಿದ್ದಾಗ ಮೂರರಲ್ಲಿ ನಾಲ್ಕು, ಅದೇ ಬೇಕರಿ, ಅದೇ ಸಿಹಿ ಪಾನಕ!. ಒಮ್ಮೆ ಗಮನಿಸಿದೆ ಕೆಲವು ಜೊತೆ ಬಟ್ಟೆಗಳು ಹ್ಯಾಂಗರ್‌ನಲ್ಲಿ ಧೂಳು ತಿನ್ನುತ್ತಾ ನೇತಾಡುತ್ತಿದ್ದವು. ಕೇಳಿದೆ. ಅದೊಂದು ದೊಡ್ಡ ಕಥೆ ಎಂದು ಹೇಳಿದರು. ಅದರ ಪ್ರವರ, ಕೆಲವರು ಅವಸರಪಡಿಸಿ ಇಂತಹ ದಿನಕ್ಕೆ ಬೇಕೇ ಬೇಕೆಂದು ಹೇಳಿ ಹೋಗಿರುತ್ತಾರೆ. ಇವರು ಹೊಲಿದಿಟ್ಟ ನಂತರ ಅವರ ಪತ್ತೆ ಇರುವುದಿಲ್ಲ. ಕೆಲವರು ತಿಂಗಳುಗಟ್ಟಲೆ ಬರುವುದೇ ಇಲ್ಲ. ಕೆಲವು ಜೊತೆ ಬಟ್ಟೆಗಳಂತೂ ವರ್ಷಗಳೇ ಇಲ್ಲಿಯೇ ನೇತಾಡಿ ಕೊನೆಗೆ ಇವರು ಪರಿಚಯದ ಬಡವರಿಗೆ ಸರಿ ಹೊಂದಿದರೆ ಪುಕ್ಕಟೆಯಾಗಿಯೂ, ಕೆಲವೊಮ್ಮೆ ಹೊಲಿಗೆ ಚಾರ್ಜ್ ಪಡೆದುಕೊಂಡು ಕೊಟ್ಟುಬಿಡುತ್ತಾರೆ. ಆದರೆ ಈಗ ನಾನು ನೋಡಿದ ಬಟ್ಟೆ ಉತ್ತಮ ಮಟ್ಟದಲ್ಲಿದ್ದು ಅದರ ಕಥೆ ಹೀಗಿದೆ. “ಅದೇ ಸಾರ್ ಮೀಸೆ ಬಸವಯ್ಯ ಗೊತ್ತಿಲ್ವಾ” ಎಂದರು. ನಾನು ಹೂಂ ಎಂದೆ ಅಂದಾಜಿನಲ್ಲಿ. ಅರ್ಧ ಊರು ಅವರದೇ. ಲಕ್ಷಾಂತರ ಬಾಡಿಗೆ ಬರುತ್ತೆ. ಹೋದ ವರ್ಷ ಅವರ ಮೊಮ್ಮಗಳ ಮದುವೆಗೆ ನಾಲ್ಕು ಜೊತೆ ಬಟ್ಟೆ ಕೊಟ್ಟಿದ್ದರು. ಕೆಲಸದವನು ಕೈ ಕೊಟ್ಟಿದ್ದ. ಇವರ ಎರಡು ಜೊತೆ ಬಟ್ಟೆ ರೆಡಿ ಇತ್ತು. ಮದುವೆಗೆ ಎರಡು ದಿನ ಇದ್ದಾಗ ಬಂದು ರೆಡಿ ಇದ್ದ ಎರಡು ತಗೊಂಡು, ‘ಇನ್ನೆರಡು ನಾಳೆ ಕೊಡು.. ಒಟ್ಟಿಗೆ ಹಣ ಕೊಡುತ್ತೇನೆ..’ ಎಂದು ಹೋದರು. ನಾನು ಅವಸರದಲ್ಲಿ ಹೊಲೆದಿಟ್ಟು ಕಾದೆ. ಬರಲಿಲ್ಲ. ಪರಿಚಯದವರೆಂದು -ಪರಿಚಯವೇನು ದೂರದಲ್ಲಿ ನೆಂಟರೆ- ರಿಸೆಪ್ಶನ್‌ಗೆ ಹೋಗಿ ಐನೂರು ಮುಯ್ಯಿ ಮಾಡಿ ಬಂದೆ‌. ಈಗ ಬರ್ತೀನಿ ಆಗ ಬರ್ತೀನಿ ಎಂದು ಬರಲೇ ಇಲ್ಲ. ಒಟ್ಟಿಗೆ ಕೊಡ್ತೀನಿ ಅಂತ, ತಗೊಂಡು ಹೋಗ್ತೀನಿ ಅಂತ, ಹಳೆಯದರ ಕೂಲಿಯೂ ಇಲ್ಲ, ಬೇರೆಯವರ ಬಟ್ಟೆ ಹಾಗೆ ವಿಲೆವಾರಿ ಮಾಡುವ ಹಾಗೂ ಇಲ್ಲ. ಎಂದು ನಿಟ್ಟುಸಿರು ಬಿಟ್ಟರು. ಇದು ಈ ಊರಿನ ಕಥೆಯಾದರೆ, ಇನ್ನೊಂದು ಘಟನೆ ಹೇಳಿ ಮಂಗಳ ಹಾಡುತ್ತೇನೆ, ಹೆಚ್ಚು ಕೊರೆಯುವುದಿಲ್ಲ.!

ಈ ಘಟನೆ ನಡೆದದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ‌ ನಾನಾಗ ಒಂದು ಕಾರ್ಖಾನೆಯಲ್ಲಿದ್ದೆ. ಅಲ್ಲಿ ಒಬ್ಬ ಇದ್ದ -ರಾಮನೋ, ಕೃಷ್ಣನೋ, ರೆಡ್ಡಿಯೋ, ನಾಯ್ಡುವೋ, ಗೌಡನೋ- ಯಾರೋ ಒಬ್ಬ. ಬಾಡಿಗೆ ಸೈಕಲ್‌ನಲ್ಲಿ ಹದಿನೈದು ಕಿ.ಮೀ. ದೂರದ ಹಳ್ಳಿಯಿಂದ, ಯಾರದೋ ವಶೀಲಿ ಭಾಜಿಯಿಂದ ಈ ಫ್ಯಾಕ್ಟರಿ ಸೇರಿದವನು. ನನಗಿಂತ ಒಂದು ವರ್ಷಕ್ಕೆ ಮುಂಚೆ. ಆದರೆ ನನಗಿಂತ ಎರಡು ವರ್ಷ ಕಿರಿಯ. ಕ್ರಮೇಣ ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಹೆಲ್ಪರ್‌ಗಳಿಗೆ, ತೋಟದ ಮಾಲಿಗಳಿಗೆ, ಟಾಯ್ಲೆಟ್ ಕ್ಲೀನ್ ಮಾಡಲು ಬರುತ್ತಿದ್ದ, ಬಡವರೂ ಎಣ್ಣೆ ಪಾರ್ಟಿಗಳೂ ಆಗಿದ್ದವರಿಗೆ ಸಣ್ಣ ಪುಟ್ಟ ಸಾಲ ಕೊಡುವುದು, ಬಡ್ಡಿ ತೆಗೆದುಕೊಳ್ಳುವುದು ಮಾಡುತ್ತಾ, ಹಾಗೆಯೇ ಬೆಳೆದ. ಬಡ್ಡಿಗೆ ತೆಗೆದುಕೊಳ್ಳುವ ಕೆಳ ಮಧ್ಯಮ, ಮಧ್ಯವರ್ಗದವರು ಹೆಚ್ಚಾದರು. ಅವನ ಆದಾಯವು ಹೆಚ್ಚಾಗುತ್ತ ಹೋಗಿ ಮುಂಚೆಯೇ ಸಾಕಷ್ಟು ಜಮೀನು ಇದ್ದುದರಿಂದ, ಅಲ್ಲೆಲ್ಲಾ ಸೈಟ್‌ಗಳನ್ನು ಮಾಡಿ, ಮನೆಗಳನ್ನು ಕಟ್ಟಿಸಿ ಬಾಡಿಗೆ ಕೊಟ್ಟು, ಅವನ ಹೆಸರಿನ ಹಿಂದೆ ಬಡ್ಡಿ ಸೇರಿಕೊಂಡು, ಕೊನೆಗೆ ತಿಂಗಳಿಗೆ ಲಕ್ಷಾಂತರ ವರಮಾನ ಬರುವಂತಾಗಿ, ಕಾರ್ಖಾನೆಯ ಸೂಪರ್ವೈಸರ್‌ಗಳಿಗೆ ಮ್ಯಾನೇಜರ್‌ಗಳಿಗೆ ಸಾಲ ಕೊಡುವ ಹಂತ ತಲುಪಿ, ಅವರು ಇವನಿಂದ ಕೆಲಸ ಮಾಡಿಸಲೇ ರಿಕ್ವೆಸ್ಟ್ ಮಾಡಬೇಕಾದ ಪ್ರಸಂಗವೂ ಬಂದಿತು.

ನಾನು ಸುಮಾರು ಎಂಟು ಕಿಲೋಮೀಟರ್ ದೂರದಿಂದ ಕಾರ್ಖಾನೆಗೆ ಬರುತ್ತಿದ್ದೆ. ಮೊದಲು ಸೈಕಲ್ ಇದ್ದುದು ನಂತರ ಬೈಕ್ ಆಯ್ತು‌. ಅದೇ ಊರಿನಿಂದ ಬರುವ, ಹೋಗುವ ಯಾರನ್ನಾದರೂ ಕೂರಿಸಿಕೊಳ್ಳುತ್ತಿದ್ದೆ. ನಮ್ಮ ಊರು ದಾಟಿ ಏಳು ಕಿಲೋಮೀಟರ್ ದೂರ ಬಡ್ಡಿಯ ಊರು. ಹಾಗಾಗಿ ಸುಮಾರು ಒಂದೇ ರಸ್ತೆಯಲ್ಲಿ ಹೋಗಬೇಕು‌. ಒಮ್ಮೆ ನಾನು, ನನ್ನ ಗೆಳೆಯ ಕೆಲಸ ಮುಗಿಸಿ ಮನೆಗೆ ಹೋಗುವ ಹಾದಿಯಲ್ಲಿ ಒಬ್ಬ ಹಲಸಿನ ಹಣ್ಣು ಬಿಡಿಸಿ ಮಾರುವವನನ್ನು ನೋಡಿ ಗಾಡಿ ನಿಲ್ಲಿಸಿದೆವು. ನಾವು ಮನೆಯಲ್ಲಿ ಮೂವರೆ ಇದ್ದುದರಿಂದ ಪೂರಾ ಹಣ್ಣು ತೆಗೆದುಕೊಳ್ಳುವುದು ಕಡಿಮೆ. ಅದರಲ್ಲೂ ಅದನ್ನು ಬಿಡಿಸುವುದು ದೊಡ್ಡ ರೇಜಿಗೆಯ ವಿಷಯ, ಹಾಗಾಗಿ. ಇಲ್ಲಿ ಬಿಡಿಸುತ್ತಾ ನಿಂತವನ ಬಳಿ ಅನೇಕ ಬಾರಿ ಕೊಂಡಿದ್ದೆವು. ಬೈಕ್ ನಿಲ್ಲಿಸಿ ವಿಚಾರಿಸಿದಾಗ -ಒಂದು ರೂಪಾಯಿಗೆ ಐದು ತೊಳೆ ಎಂದೂ, ಆರು ಕೊಡುವುದಾಗಿ ಹೇಳಿದ. ಯಥಾ ಪ್ರಕಾರ ನಾನು ‘ಸಿಹಿಯಾಗಿದೆಯಾ’ ಎಂದು ಅವನು ‘ಬೇಕಾದರೆ ತಿಂದು ನೋಡಿ’ ಎಂದು, ನಾನು ‘ಪರವಾಗಿಲ್ಲಾ’ ಎಂದು ಎಂದಿನಂತೆ ಹೇಳಿ, ಗೆಳೆಯನು ನನಗೂ ಐದು ರುಪಾಯಿಗೆ ಕೊಡಿ ಎಂದಾಗ, ಅವನು ಬಿಡಿಸಿ ಫ್ರೆಶ್ ಆಗಿದ್ದ ತೊಳೆಗಳನ್ನು ಕವರಿಗೆ ಹಾಕತೊಡಗಿದ್ದ. ಅಷ್ಟರಲ್ಲಿ ‘ಬಡ್ಡಿ’ಯ ಬುಲೆಟ್ ಬಂತು. ನಮ್ಮನ್ನು ನೋಡಿ ನಿಲ್ಲಿಸಿದ. ನಾವು ವಿವರ ಹೇಳಿದೆವು. ಅವನು ಚಕ್ಕನೆ ಕೈ ಹಾಕಿ ಒಂದು ತೊಳೆ ತಿಂದ. ಇನ್ನೊಂದು ತೆಗೆದುಕೊಂಡು ಬಾಯಿಗೆ ಹಾಕಿಕೊಂಡ. “ಅಷ್ಟೇನೂ ಚೆನ್ನಾಗಿಲ್ಲ” ಎಂದು ಬುಲೆಟ್ ಏರಿ ಹೊರಟೇಬಿಟ್ಟ!! ನಾವು ಮೂವರೂ ಪೆಚ್ಚಾದೆವು. ನಾನು ನನಗೆ ಹಾಕಿದ್ದ ಕವರಿನಿಂದ ಒಂದು ಹಣ್ಣು ತೆಗೆದು ಬಾಯಿಗೆ ಹಾಕಿಕೊಂಡೆ. ಸೊಗಸಾಗಿತ್ತು! ಜೇನುತುಪ್ಪದ ಹಾಗೆ ಸಿಹಿಯಾಗಿತ್ತು!! ಕೊನೆಗೆ ನಾವಿಬ್ಬರೂ ನಮ್ಮ ಕವರಿನಿಂದ ಒಂದೊಂದು ಹಣ್ಣುಗಳನ್ನು ತೆಗೆದುಕೊಂಡು ಕಡಿಮೆ ಮಾಡಲು ಹೇಳಿದವು, ಅವನ ನಷ್ಟ ಸರಿದೂಗಿಸಲು. ಆದರೆ ಆ ವ್ಯಾಪಾರಿಗೆ ಇದು ಹೊಸತಲ್ಲ. ಇಂತಹವರು ಅನೇಕರು ಇರುವರೆಂದೂ, ಇಲ್ಲಿ ಹೀಗೆ ಉಳಿಸಿ ಎಲ್ಲೋ ಒಮ್ಮೆಗೆ ಇದರ ನೂರು ಪಟ್ಟು ಕಳೆದುಕೊಳ್ಳುವರೆಂದು ಹೇಳಿ, ತಾನು ಸಮಾಧಾನಗೊಂಡು ನಮ್ಮನ್ನೂ ಸಮಾಧಾನಿಸಿದ. ಹೀಗೇ ಅಲ್ಲವೇ ನಮ್ಮಂತಹವರು ನೆಮ್ಮದಿ ಕಂಡುಕೊಳ್ಳುವುದು. ಆದರೆ ಆ ಘಟನೆ ಮಾತ್ರ ನನ್ನ ನೆನಪಿನಿಂದ ದೂರ ಹೋಗಲೊಲ್ಲದು.

ನನಗೆ ಅಂಬಾನಿ, ಅದಾನಿ ಬಗ್ಗೆ ಗೊತ್ತಿಲ್ಲ. ನಮ್ಮ ಜೀವನದಲ್ಲಿ ಹಾದುಹೋದ, ದೇವರು ಬೇಕಾದಷ್ಟು ಕೊಟ್ಟಿದ್ದರೂ ‘ಪಿಸುಣಾರಿ’ಗಳಂತೆ ವರ್ತಿಸುವ ಇಂತಹವರು ನಿಮ್ಮ ಗಮನಕ್ಕೂ ಬಂದಿರುತ್ತಾರೆ..