ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಅಡುಗೆ ಕೋಣೆಗೆ ಊಟ ಮಾಡೋಕೆ ಒಬ್ಬನೇ ಹೋದಾಗ ತುಪ್ಪವನ್ನು ಸುರಿದುಕೊಂಡು ತಿನ್ನುತ್ತಿದ್ದೆ. ಕೆಲವೊಮ್ಮೆ ನಮ್ಮತ್ತೆ ಬಂದಾಗ ತಕ್ಷಣ ಹಾಕಿಕೊಂಡ ತುಪ್ಪದ ಮೇಲೆ ಅನ್ನವನ್ನು ಹಾಕಿಕೊಂಡು ತುಪ್ಪವನ್ನು ಹಾಕಿಕೊಂಡಿಲ್ಲವೆಂಬಂತೆ ನಟಿಸುತ್ತಿದ್ದೆ. ಒಮ್ಮೆ ನಮ್ಮತ್ತೆ “ಅಲ್ವೋ ಮಾರಾಯ ಅದೆಷ್ಟು ತುಪ್ಪ ಹಾಕ್ಕೊಳ್ತೀಯ? ತಟ್ಟೆ ತೊಳೀಬೇಕಾದ್ರೆ ಜಿಡ್ಡು ಹೋಗದೇ ಇಲ್ವಲ್ಲೋ” ಅಂದಾಗಲೇ ನನಗೆ ಈ ರೀತೀನೂ ಅವರು ಕಂಡುಹಿಡಿಯಬಹುದು ಎಂದು ಗೊತ್ತಾಗಿದ್ದು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿಮೂನೆಯ ಕಂತು ನಿಮ್ಮ ಓದಿಗೆ
ನಮ್ಮಜ್ಜಿ ಊರಲ್ಲಿ ಪ್ರೌಢಶಾಲೆಗೆ ಅಂತಾ ಕಟ್ಟಡ ಇರಲಿಲ್ಲ. ಆದ್ದರಿಂದ ಅದೂ ಸಹ ನಮ್ಮ ಪ್ರೈಮರಿ ಶಾಲೆಯ ಬಿಲ್ಡಿಂಗಿನಲ್ಲಿ ನಡೆಯುತ್ತಿತ್ತು. ಬೆಳಿಗ್ಗೆ 12:00 ರವರೆಗೆ ಪ್ರೌಢಶಾಲೆ ನಂತರ ನಮ್ಮ ಶಾಲೆಯು ನಡೆಯುತ್ತಿತ್ತು. ಎಷ್ಟೋ ಸಲ ಬೆಳಿಗ್ಗೆಯೇ ನಮ್ಮ ಕ್ಲಾಸುಗಳು ನಡೆದಿದ್ದರೆ ಚೆನ್ನಾಗಿತ್ತು, ಮಧ್ಯಾಹ್ನ ಆರಾಮಾಗಿ ಇರಬಹುದಿತ್ತು ಎಂದು ಅಂದ್ಕೊಳ್ತಿದ್ದೆ. ಅಲ್ಲದೇ ನಾವು ಕುಳಿತುಕೊಳ್ಳೋ ಡೆಸ್ಕಿನ ಮೇಲೆ ಕೆಲವರು ಪೆನ್ನಿನಲ್ಲಿ ಬರೆದಿದ್ದ, ಕೈವಾರದಲ್ಲಿ ಕೆತ್ತಿರುತ್ತಿದ್ದ ಹುಡುಗಿಯರ ಹೆಸರುಗಳು, ಲವ್ ಮಾರ್ಕ್‌ಗಳು ಇರುತ್ತಾ ಇದ್ದವು! ಕೆಲವರಿಗಂತೂ ತಮ್ಮ ಸಿಲಬಸ್‌ನಲ್ಲಿರುವ ಚಿತ್ರಗಳನ್ನು ಸರಿಯಾಗಿ ಬಿಡಿಸೋಕೆ ಬರ್ತಿತ್ತೋ ಇಲ್ವೋ ಗೊತ್ತಿಲ್ಲ, ಆದರೆ ಡೆಸ್ಕಿನ ಮೇಲೆ ಚಿತ್ರಗಳನ್ನಂತೂ ಬಿಡಿಸಿರುತ್ತಿದ್ದರು! ಏಳನೇ ಕ್ಲಾಸಿಗೆ ಬಂದಾಗ ವಿರುದ್ಧ ಲಿಂಗಿಗಳ ಕಡೆ ಆಕರ್ಷಣೆ ಶುರು ಆದ್ರೂ ಅವ್ಯಕ್ತ ಭಯಕ್ಕೆ ಸುಮ್ಮನಾಗಿಬಿಡುತ್ತಿದ್ದೆವು. ಇದಕ್ಕೂ ಕಾರಣ ಇದೆ. ಒಮ್ಮೆ ನಮ್ಮ ಒಬ್ಬ ಸೀನಿಯರ್ ಒಬ್ಬರು ಒಂದು ಹುಡುಗಿಗೆ ಲವ್ ಲೆಟರ್ ಬರೆದಿದ್ದಕ್ಕೆ ಹುಡುಗಿ ಮನೆಯವರು ಬರೆದವನನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಹೊಡೆದದ್ದನ್ನು ನಾನು ನೋಡಿದ್ದರಿಂದ ‘ಹುಡುಗೀರಂದ್ರೆ ಡೇಂಜರಪ್ಪೋ ಹುಶಾರಾಗಿರ್ರಪ್ಪೋ’ ಎಂಬಂತೆ ಅವರನ್ನು ಮಾತಾನಾಡಿಸಲೂ ಹೋಗದೇ ಅವರಿಂದ ಅಂತರ ಕಾಪಾಡಿಕೊಂಡಿದ್ದೆ!
ನಮ್ಮಜ್ಜಿ ಊರಲ್ಲಿ ಕ್ರಿಕೆಟ್ ಆಡೋಕೆ ಊರ ಹೊರಗಿನ ತೋಟಕ್ಕೆ ಹೋಗುತ್ತಿದ್ದಾಗ ಅಲ್ಲಿ ಪರಿಚಯವಾಗಿದ್ದು ಡಾಕ್ಟ್ರು ಮನೆಯವರು. ಅವರ ಮನೆಯಲ್ಲಿದ್ದ ಸೀನಣ್ಣ, ವರದಣ್ಣ ಚೆನ್ನಾಗಿ ಪರಿಚಯ ಆದ್ರು. ಊರ ಹೊರಗಿದ್ದ ಇವರ ಮನೆಯ ಹತ್ತಿರ ಹುಡುಗರೆಲ್ಲರೂ ಕ್ರಿಕೆಟ್ ಆಡೋಕೆ ಹೋಗುತ್ತಿದ್ದರು. ಸಂಕ್ರಾಂತಿ ಹಬ್ಬದ ದಿನ ಇವರ ಮನೆಯಲ್ಲಿ ಮಾಡುತ್ತಿದ್ದ ಸಿಹಿತಿಂಡಿಗಳನ್ನು ಇವರು ನನಗೆ ಕೊಡುತ್ತಿದ್ದರು. ವರಣ್ಣ 10 ನೇ ತರಗತಿ ಪರೀಕ್ಷೆ ಬರೆದಾಗ ಒಂದು ಪರೀಕ್ಷೆ ಮುಗಿದಾಗ ಒಂದು ಬಿಂದಿಗೆಯ ನೀರನ್ನು ತಲೆ ಮೇಲೆ ಹೊಯ್ದುಕೊಂಡು ಖುಷಿಪಟ್ಟಿದ್ದ. ಆಗ ನಾನು ‘ಯಾಕೆ ಹೀಗೆ?’ ಎಂದಾಗ ‘ಇಂದು ಮ್ಯಾಥ್ಸ್ ಪರೀಕ್ಷೆ ಮುಗೀತು ಅದಕ್ಕೆʼ ಅಂದ! ನಾನೂ ಸಹ ಮುಂದೆ ಗಣಿತ ಬಹಳ ಕಷ್ಟವೇನೋ ಅಂದುಕೊಂಡಿದ್ದೆ. ಆ ದಿನಕ್ಕೆ ಇಂಗ್ಲೀಷ್, ಗಣಿತ ಅಂದರೆ ಬಹುತೇಕ ಹುಡುಗರು ಭಯಪಡುತ್ತಿದ್ದರು. ಸೀನಣ್ಣನವರ ತಂದೆ ಡಾಕ್ಟರ್ ಆಗಿದ್ದರು. ಅವರ ಉಡುಗೆ ತೊಡುಗೆಯು ಬಹಳ ಆಕರ್ಷಣೀಯವಾಗಿರುತ್ತಿತ್ತು. ಬುಲೆಟ್ಟಿನಂತೆ ಇದ್ದ ಅವರ ದ್ವಿಚಕ್ರ ವಾಹನವು ವಿಶೇಷವಾಗಿತ್ತು. ಇವರು ಅನಾರೋಗ್ಯಪೀಡಿತರೆಂದು ಹೋದವರಿಗೆ 2 ಇಂಜೆಕ್ಷನ್ ಮಾಡುತ್ತಿದ್ದರು! ಸುತ್ತಮುತ್ತಲ ಗ್ರಾಮದವರು ಅನಾರೋಗ್ಯಪೀಡಿತರಾದಾಗ ಇವರ ಬಳಿ ಚಿಕಿತ್ಸೆಗೆಂದು ಬರುತ್ತಿದ್ದರು.
ನಮ್ಮ ಮನೆಯಲ್ಲಿ ಆಗ ಮಜ್ಜಿಗೆ ಕಡೆಯೋದು ಒಂದು ದೊಡ್ಡ ಕೆಲಸವಾಗಿತ್ತು. ಸುಮಾರು ಒಂದು ಬಿಂದಿಗೆಯಷ್ಟು ಮಜ್ಜಿಗೆ ಕಡೆಯಲು ಹೆಚ್ಚು ಸಮಯ ಹಿಡಿಯುತ್ತಿದ್ದರಿಂದ ಆ ಕೆಲಸ ನನ್ನ ಪಾಲಿಗೂ ಬರುತ್ತಿತ್ತು. ಆಗ ನಾನು ಒತ್ತಾಯಪೂರ್ವಕವಾಗಿ ಕಡೆಯೋಕೆ ಹೋಗ್ತಿದ್ದೆ. ನನ್ನಷ್ಟೇ ಎತ್ತರವಿದ್ದ ಕಡುಗೋಲನ್ನು ಹಗ್ಗಕ್ಕೆ ಬಿಗಿದು ಮೊಸರನ್ನು ಒಂದು ಸ್ಟೀಲಿನ ಪಾತ್ರೆಗೆ ಹಾಕಿ ಸೊರಬರ ಸೊರಬರ ಕಡೆಯುತ್ತಿದ್ದರೆ ಅದರಿಂದ ಬರುತ್ತಿದ್ದ ನೊರೆಯನ್ನು ನೋಡೋಕೆ ಚೆಂದ ಎನಿಸುತ್ತಿತ್ತು. 10 ನಿಮಿಷ ಕಡೆದು ನಂತರ ನೀರು ಹಾಕಿ ಸ್ವಲ್ಪ ಹೊತ್ತು ಬಿಟ್ಟು ನಂತರ ಕಡೆಯಬೇಕಾಗಿತ್ತು. ಕೊನೆ ಕೊನೆಗೆ ಬುರುಗಿನ ರೂಪದಲ್ಲಿ ಬರುತ್ತಿದ್ದ ಬೆಣ್ಣೆಯನ್ನು ಹಾಗೆಯೇ ಕೈಗೆ ಮೆತ್ತಿಕೊಳ್ಳುತ್ತ ತಿನ್ನುತ್ತಿದ್ದೆ. ಕೊನೆಗೆ ಬೆಣ್ಣೆ ಬಂದಾಗಲೂ ಬಾಯಿಗೆ ಬೆಣ್ಣೆ ಹಾಕಿಕೊಳ್ಳುತ್ತಿದ್ದೆ. ‘ಜೇನು ಕಿತ್ತವನು ಕೈಗೆ ಅಂಟಿಕೊಂಡ ಜೇನು ನೆಕ್ಕದೇ ಇರುತ್ತಾನೆಯೇ?’ ಎಂಬ ಮಾತು ಬೆಣ್ಣೆ ತಿಂದದ್ದಕ್ಕೆ ಅನ್ವಯಿಸುತ್ತದೆ. ‘ಅದನ್ನು ಹಾಗೆ ತಿನ್ನಬಾರದು. ಬೆಣ್ಣೆ ಬಂದ ನಂತರ ಬೆಣ್ಣೆ ಇರುವ ಪಾತ್ರೆಯನ್ನು ಪೂಜಿಸಿ ನಂತರ ಬೆಣ್ಣೆ ತೆಗೆಯಬೇಕು’ ಎಂಬ ಅಜ್ಜಿಯ ಮಾತು ಮರೆತು, ಮುಂಚೆಯೇ ಅವರಿಗೆ ಗೊತ್ತಾಗದಂತೆ ಬಾಯಿಗೆ ಹಾಕಿಕೊಳ್ಳುತ್ತಾ ಆ ನಿಯಮವನ್ನು ಮುರಿಯುತ್ತಿದ್ದೆ! ನಂತರ ಬೆಣ್ಣೆಯನ್ನು ಒಂದು ಪಾತ್ರೆಯಲ್ಲಿ ತುಂಬಿದ್ದ ಮಜ್ಜಿಗೆಯಲ್ಲಿಟ್ಟು ಮೊದಲೇ ಕಟ್ಟಿರುತ್ತಿದ್ದ ತ್ರಿಭುಜಾಕಾರದ ಹಗ್ಗದ ಮೇಲೆ ಅದನ್ನಿಡುತ್ತಿದ್ದರು. ಯಾಕೆ ಹೀಗೆ ಅಂತಾ ಕೇಳಿದರೆ ‘ಅಂಕೆಯಲ್ಲಿದ್ದ ವ್ಯಕ್ತಿ, ಮಜ್ಜಿಗೆಯಲ್ಲಿದ್ದ ಬೆಣ್ಣೆ ಎಂದೂ ಕೆಡೋದಿಲ್ವಂತೆ’ ಎಂದು ಅಜ್ಜಿ ಹೇಳುತ್ತಿದ್ದ ಮಾತು ಇಂದಿಗೂ ಬೆಣ್ಣೆ ನೋಡಿದ ಕೂಡಲೇ ನೆನಪಾಗುತ್ತೆ. ಮನೆಯಲ್ಲಿ ರೊಟ್ಟಿ ಮಾಡಿದಾಗ ಬೆಣ್ಣೆ, ಹಸಿಮೆಣಸಿನ ಕಾಯಿ ಚಟ್ನಿ ತಿನ್ನುವುದೇ ಮಜಾ ಎನಿಸುತ್ತಿತ್ತು. ಬೆಣ್ಣೆ ಕದ್ದು ತಿನ್ನುವುದಕ್ಕೆ ನನಗೆ ಕೃಷ್ಣ ಆದರ್ಶನಾಗಿದ್ದ! ಈ ವಿಷಯದಲ್ಲಿ ಕದಿಯುವುದು ತಪ್ಪಲ್ಲ ಎಂದು ನನ್ನ ಪಾಡಿಗೆ ನಾನೇ ಸಮಜಾಯಿಷಿಯನ್ನು ಮನಸ್ಸಲ್ಲಿ ಮಾಡಿಕೊಳ್ತಿದ್ದೆ.
ಇನ್ನು ಇದರಿಂದ ಮಾಡುವ ತುಪ್ಪದ ಬಗ್ಗೆ ಹೇಳಬೇಕೆಂದರೆ ಆಗ ನಮ್ಮಜ್ಜಿ ತುಪ್ಪ ಕಾಸುತ್ತಿದ್ದರೆ ನಮ್ಮ ಮನೆಯ ಸುತ್ತಮುತ್ತಲೂ ಅದರ ಪರಿಮಳ ಬರುತ್ತಿತ್ತು. ಅದರ ರುಚಿಯೂ ಅದೇ ರೀತಿ ಇರುತ್ತಿತ್ತು. ಗೋಧಿ ಕಡುಬಿಗೆ ಬೆಲ್ಲ ತುಪ್ಪ ಹಾಕಿಕೊಂಡು ತಿನ್ನುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ನನಗೆ ತುಪ್ಪ ತಿಂದರೆ ಬುದ್ಧಿ ಚುರುಕು ಅಂತಾ ಯಾರೋ ಹೇಳಿದ್ದ ಕಾರಣ ತುಪ್ಪವನ್ನಂತೂ ತುಂಬಾ ತಿನ್ನುತ್ತಿದ್ದೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಅಡುಗೆ ಕೋಣೆಗೆ ಊಟ ಮಾಡೋಕೆ ಒಬ್ಬನೇ ಹೋದಾಗ ತುಪ್ಪವನ್ನು ಸುರಿದುಕೊಂಡು ತಿನ್ನುತ್ತಿದ್ದೆ. ಕೆಲವೊಮ್ಮೆ ನಮ್ಮತ್ತೆ ಬಂದಾಗ ತಕ್ಷಣ ಹಾಕಿಕೊಂಡ ತುಪ್ಪದ ಮೇಲೆ ಅನ್ನವನ್ನು ಹಾಕಿಕೊಂಡು ತುಪ್ಪವನ್ನು ಹಾಕಿಕೊಂಡಿಲ್ಲವೆಂಬಂತೆ ನಟಿಸುತ್ತಿದ್ದೆ. ಒಮ್ಮೆ ನಮ್ಮತ್ತೆ “ಅಲ್ವೋ ಮಾರಾಯ ಅದೆಷ್ಟು ತುಪ್ಪ ಹಾಕ್ಕೊಳ್ತೀಯ? ತಟ್ಟೆ ತೊಳೀಬೇಕಾದ್ರೆ ಜಿಡ್ಡು ಹೋಗದೇ ಇಲ್ವಲ್ಲೋ” ಅಂದಾಗಲೇ ನನಗೆ ಈ ರೀತೀನೂ ಅವರು ಕಂಡುಹಿಡಿಯಬಹುದು ಎಂದು ಗೊತ್ತಾಗಿದ್ದು! ಆಗ ನಾನು ನನ್ನ ಪ್ಲಾನನ್ನು ಚೇಂಜ್ ಮಾಡಿದೆ. ಊಟ ಮಾಡಿದ ನಂತರ ತಟ್ಟೆ ಮೇಲೆ ಚೆನ್ನಾಗಿ ಕಾಯುವ ಬಿಸಿನೀರಿನಿಂದ ತಟ್ಟೆ ತೊಳೆದು ನಂತರ ತೊಳೆಯಲು ಇಡುತ್ತಿದ್ದೆ! ಈ ರೀತಿಯಾಗಿ ನಾನು ಅವರು ಚಾಪೆ ಕೆಳಗೆ ನುಸುಳಿದ್ರೆ ನಾನು ರಂಗೋಲಿ ಕೆಳಗೆ ನುಸುಳುವಂತಹ ಐಡಿಯಾ ಮಾಡ್ತಿದ್ದೆ ಅದೂ ಬರೀ ತುಪ್ಪಕ್ಕಾಗಿ!
ಸಂಕ್ರಾಂತಿ ಹಬ್ಬದ ದಿನ ಇವರ ಮನೆಯಲ್ಲಿ ಮಾಡುತ್ತಿದ್ದ ಸಿಹಿತಿಂಡಿಗಳನ್ನು ಇವರು ನನಗೆ ಕೊಡುತ್ತಿದ್ದರು. ವರಣ್ಣ 10 ನೇ ತರಗತಿ ಪರೀಕ್ಷೆ ಬರೆದಾಗ ಒಂದು ಪರೀಕ್ಷೆ ಮುಗಿದಾಗ ಒಂದು ಬಿಂದಿಗೆಯ ನೀರನ್ನು ತಲೆ ಮೇಲೆ ಹೊಯ್ದುಕೊಂಡು ಖುಷಿಪಟ್ಟಿದ್ದ. ಆಗ ನಾನು ‘ಯಾಕೆ ಹೀಗೆ?’ ಎಂದಾಗ ‘ಇಂದು ಮ್ಯಾಥ್ಸ್ ಪರೀಕ್ಷೆ ಮುಗೀತು ಅದಕ್ಕೆʼ ಅಂದ! ನಾನೂ ಸಹ ಮುಂದೆ ಗಣಿತ ಬಹಳ ಕಷ್ಟವೇನೋ ಅಂದುಕೊಂಡಿದ್ದೆ. ಆ ದಿನಕ್ಕೆ ಇಂಗ್ಲೀಷ್, ಗಣಿತ ಅಂದರೆ ಬಹುತೇಕ ಹುಡುಗರು ಭಯಪಡುತ್ತಿದ್ದರು.
ಹಬ್ಬಗಳು ಬಂತೆಂದರೆ ಸಾಕು; ಅಜ್ಜಿ ಮನೆಯಲ್ಲಿ ಬರುತ್ತಿದ್ದ ನೆಂಟರು ಬಹಳ ಮಂದಿ ಇರುತ್ತಿದ್ದರಿಂದ ಹೋಳಿಗೆಗೆ ಜಾಸ್ತೀನೇ ಬೇಳೆ ಹಾಕುತ್ತಿದ್ದರು. ಆಗ ಈಗಿನಂತೆ ಹೂರಣವನ್ನು ಗ್ರೈಂಡರಿಗೋ, ಮಿಕ್ಸರ್‌ಗೋ ಹಾಕ್ತಾ ಇರಲಿಲ್ಲ. ರುಬ್ಬೋ ದುಂಡಿಯಿಂದ ರುಬ್ಬಬೇಕಾಗಿತ್ತು. ರುಬ್ಬುವ ಕಲ್ಲೂ ಸಹ ಆ ಬದಿ ಈ ಬದಿ ತಿರುಗಿಸುವಂತಹ ದೊಡ್ಡ ಕಲ್ಲಾಗಿತ್ತು. ಅದನ್ನು ಕೆಳಭಾಗದಲ್ಲಿ ಹಾಕಿದ ಚೌಕಾಕಾರದ ಚಪ್ಪಡಿ ಕಲ್ಲ ಮೇಲೆ ಮನೆಯ ಒಂದು ನಿರ್ದಿಷ್ಟ ಜಾಗದಲ್ಲಿ ಇರಿಸಲಾಗಿತ್ತು. ಚಪ್ಪಡಿ ಕಲ್ಲ ಮೇಲೆ ಬೇಯಿಸಿದ ಬೇಳೆ ಹಾಕಿ ವಿರುದ್ಧ ಬದಿಯಲ್ಲಿ ಅಭಿಮುಖವಾಗಿರುವಂತೆ ಇಬ್ಬರು ಕುಳಿತು ಅದನ್ನು ತಿರುವಬೇಕಾಗಿತ್ತು. ಆಗ ಒಂದು ಬದಿಯಲ್ಲಿ ನಮ್ಮಜ್ಜಿ ಅಥವಾ ನಮ್ಮತ್ತೆ ಕುಳಿತರೆ ಇನ್ನೊಂದು ಬದಿಯಲ್ಲಿ ನಾನು ಕುಳಿತುಕೊಳ್ಳಬೇಕಾಗಿತ್ತು. ಅದನ್ನು ತಿರುವೀ ತಿರುವೀ ಸಾಕಾಗಿ ನನಗೆ ‘ಹಬ್ಬಗಳು ಯಾಕಾದ್ರೂ ಬರ್ತಾವೇನಪ್ಪ’ ಎನ್ನುವಂತಾಗುತ್ತಿತ್ತು. ನಾನು ಕರಿಗಡುಬನ್ನು ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ.
ನಲ್ಕುದ್ರೆಯಲ್ಲಿ ಹಬ್ಬಗಳನ್ನಂತೂ ಬಹಳ ಸಡಗರದಿಂದ ಮಾಡುತ್ತಿದ್ದರು. ಅದರಲ್ಲೂ ವೀರಭದ್ರೇಶ್ವರ ದೇವರ ರಥೋತ್ಸವ, ದೀಪಾವಳಿ ಹಬ್ಬ, ಶಿವರಾತ್ರಿ ಹಬ್ಬ, ಮಹೇಶ್ವರನ ಜಾತ್ರೆ ಹೀಗೆ ಹತ್ತು ಹಲವಾರು ಹಬ್ಬಗಳನ್ನು ತುಂಬಾ ಅಚ್ಚುಕಟ್ಟಾಗಿ ಊರವರೆಲ್ಲಾ ಸೇರಿ ಮಾಡುತ್ತಿದ್ದರು. ಒಂದೊಂದು ಹಬ್ಬಕ್ಕೊಂದೊಂದು ವಿಶೇಷ ತಿನಿಸು. ಉದಾಹರಣೆಗೆ ರಥೋತ್ಸವಕ್ಕೆ ಕಡುಬು, ಶಿವರಾತ್ರಿಗೆ ಕಿಲಸ(ರಾಗಿಯಲ್ಲಿ ಮಾಡುವ ಸಿಹಿತಿನಿಸು), ದೀಪಾವಳಿಗೆ ಹೋಳಿಗೆ, ನಾಗರಪಂಚಮಿಯಲ್ಲಿ ಕಡಲೆ, ಶೇಂಗಾ ಉಂಡೆ, ಯುಗಾದಿಗೆ ಶ್ಯಾವಿಗೆ ಮಾಡುತ್ತಿದ್ದರು. ಅದರಲ್ಲೂ ನಮ್ಮಜ್ಜಿ ಮಾಡುತ್ತಿದ್ದ ಕಡಲೆ, ಶೇಂಗಾ ಉಂಡೆಯ ಕ್ರಿಕೆಟ್ಟಿನ ಕಾರ್ಕ್ ಬಾಲಿಗಿಂತ ದೊಡ್ಡವು ಆಗಿರುತ್ತಿದ್ದವು. ಹಬ್ಬದಲ್ಲಿ ನಾನು ದೇಗುಲದಲ್ಲಿ ಕಾಯಿ ಹೊಡೆಯಲು ಹೋಗ್ತಿದ್ದೆ. ಮಹೇಶ್ವರನ ಜಾತ್ರೆ ಊರ ಹೊರಭಾಗದಲ್ಲಿದ್ದ ಈಶ್ವರನ ದೇಗುಲದ ಬಳಿ ನಡೀತಾ ಇತ್ತು. ತುಂಬಾ ಹಿಂದಿನ ಕಾಲದ ಕಲ್ಲಿನಿಂದ ನಿರ್ಮಿಸಿದ್ದ ದೇಗುಲಕ್ಕೆ ಶಿವರಾತ್ರಿ ಹಾಗೂ ಮಹೇಶ್ವರ ಜಾತ್ರೆಯಲ್ಲಿ ಸುತ್ತಮುತ್ತಲಿನ ಪ್ರದೇಶವನ್ನೆಲ್ಲವನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆ ಮಾಡಲಾಗುತ್ತಿತ್ತು. ಜಾತ್ರಾ ದಿನ ದೇಗುಲದ ಬಳಿ ಅನ್ನ, ಹಾಲು, ಬಾಳೇಹಣ್ಣು, ಬೆಲ್ಲದ ಪ್ರಸಾದ ಕೊಡಲಾಗುತ್ತಿತ್ತು. ಇವನ್ನು ಕಲಸಿಕೊಂಡು ತಿನ್ನುತ್ತಿದ್ದರೆ ತುಂಬಾ ರುಚಿ ಎನಿಸುತ್ತಿತ್ತು. ಎಷ್ಟೋ ಬಾರಿ ಮನೆಯಲ್ಲಿ ಇದೇ ರೀತಿ ಕಲಸಿ ತಿಂದರೆ ರುಚಿ ಎನಿಸುತ್ತಿರಲಿಲ್ಲ. ಆದರೆ ಈ ದೇಗುಲದ ಬಳಿ ಈ ಜಾತ್ರೆ ದಿನ ಬರೀ ಗಂಡಸರೇ ಮಾತ್ರ ಪ್ರಸಾದ ಸ್ವೀಕರಿಸಲು ಹೋಗಬಹುದಿತ್ತು. ಯಾವ ಹೆಣ್ಣು ಮಕ್ಕಳೂ ಹೋಗುವಂತಿರಲಿಲ್ಲ! ಇದರ ಬಗ್ಗೆ ಯಾಕೆ ಎಂದು ನಾನು ನಮ್ಮನೆಯಲ್ಲಿ ವಿಚಾರಿಸಲು ಮೊದಲಿನಿಂದಲೂ ನಡೆದುಕೊಂಡ ಬಂದ ಸಂಸ್ಕೃತಿ, ಒಂದೊಮ್ಮೆ ಬಂದರೆ ಒಳ್ಳೆಯದು ಆಗೋಲ್ವಂತೆ ಎಂದು ಹೇಳಿದಾಗ ನಾನು ಸುಮ್ಮನಾಗಿದ್ದೆ. ಇಂದಿಗೂ ಈ ಸಂಪ್ರದಾಯ ದಾವಣಗೆರೆಯ ಸುತ್ತಮುತ್ತಲಿನ ಹಲವಾರು ಊರುಗಳಲ್ಲಿ ನಡೆದುಕೊಂಡು ಬರುತ್ತಿದೆ.
ರಥೋತ್ಸವ ಸಮಯದಲ್ಲಿ ಮಾಡುತ್ತಿದ್ದ ಹೋಳಿ ಹಬ್ಬವೇ ಈ ಊರಿನ ವಿಶೇಷವಾಗಿತ್ತು. ಈರಣ್ಣನ ದೇಗುಲದ ಮುಂದೆ ಈ ಮೊದಲೇ ಸಿದ್ಧಪಡಿಸಿಕೊಂಡು ವರ್ಷವಿಡೀ ಮುಚ್ಚಿದ್ದ ಸಿಮೆಂಟಿನ ದೊಡ್ಡ ಗುಂಡಿಯನ್ನು ತೆಗೆದು ಅದಕ್ಕೆ ಟ್ಯಾಂಕರಿನಿಂದ ನೀರು ತುಂಬಿಸಿ ಅದರಲ್ಲೇ ಸುಣ್ಣ, ಅರಿಷಿಣ ಹಾಕಿ ಕೆಂಪನೆಯ ಬಣ್ಣ ಬರುವಂತೆ ಮಾಡಿ ಊರವರೆಲ್ಲಾ ಅಲ್ಲಿ ಬಂದು ಓಕುಳಿ ಆಡುತ್ತಿದ್ದುದು ವಿಶೇಷ ಎನಿಸುತ್ತಿತ್ತು. ಈ ಸಮಯದಲ್ಲಿ ಊರಲ್ಲಿ ಸಿಕ್ಕ ಸಿಕ್ಕ ಗಂಡು ಮಕ್ಕಳನ್ನು ಹೊತ್ತುಕೊಂಡು ಬಂದು ತೊಟ್ಟಿಯಲ್ಲಿ ಹಾಕುತ್ತಿದ್ದರು! ಮುಳ್ಳು ತುಳಿಯೋ ಹಬ್ಬದಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮುಳ್ಳು ತುಳಿಯುತ್ತಿದ್ದರು! ಅದೇ ರೀತಿ ಕೆಂಡ ತುಳಿಯೋ ಹಬ್ಬದಲ್ಲಿ ರಾಶಿ ರಾಶಿ ಕಟ್ಟಿಗೆಯನ್ನು ಸುಟ್ಟು ಅದರ ಕೆಂಡ ಮಾಡಿ ಅದನ್ನೂ ಸಹ ತುಳಿಯುವ ಹಬ್ಬ ಮಾಡುತ್ತಿದ್ದರು. ಆಗಲೂ ಸಹ ಚಿಕ್ಕವರೂ ತುಳಿಯುತ್ತಿದ್ದರು. ಆದರೆ ನಾನು ಮಾತ್ರ ಎಂದೂ ಈ ರೀತಿ ಮಾಡಲಿಲ್ಲ. ರಥೋತ್ಸವದ ದಿನ ಸ್ತ್ರೀಯರಿಗೆ ಬಾಯಿಬೀಗ ಚುಚ್ಚಿಕೊಳ್ಳೋ ಆಚರಣೆ ಮಾಡ್ತಾ ಇದ್ದರು. ಮೊದಲೇ ಹರಕೆ ಕಟ್ಟಿಕೊಂಡ ಮಹಿಳೆಯರು ಹಿಂದಿನ ದಿನವೇ ಉಪವಾಸ ಮಾಡಿ ಅವರ ಎರಡೂ ಗಲ್ಲದಲ್ಲಿ ತಂತಿಯಯನ್ನು ಸೇರಿಸಿಕೊಂಡು ದೇವರ ಹರಕೆ ಪೂರೈಸುತ್ತಿದ್ದರು. ಇದನ್ನು ನೋಡುತ್ತಿದ್ದ ನನಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುವಂತೆ ಮಾಡಿತ್ತು. ಪರಶಿವನ ಬೆವರ ಹನಿಯಲ್ಲಿ ಹುಟ್ಟಿದ ಬೆಂಕಿ ರುದ್ರ ವೀರಭದ್ರನ ಕುರಿತಾದ ಕಥೆಗಳು, ವೀರಗಾಸೆಯನ್ನು ಕೇಳಿ ನನಗೆ ಈ ದೇವರ ಬಗ್ಗೆ ಭಯಸಹಿತ ಭಕ್ತಿ ಶುರುವಾಯ್ತು. ನಾಗರಪಂಚಮಿ ಹಬ್ಬದ ಸಮಯದಲ್ಲಿ ಶುರುವಾಗುತ್ತಿದ್ದ ಹುಣಸೆಹಣ್ಣಿನ ಹೀಚನ್ನು ತಿನ್ನಲು ಹೋದರೆ ದೇವರ ಮುಂದೆ ಎಡೆ ಇಡುವ ಮುನ್ನವೇ ನಾವೇನಾದರೂ ತಿಂದರೆ ಕಿವಿ ಸೋರುತ್ತದೆಯಂತೆ ಎಂಬ ಮಾತನ್ನು ನಂಬಿ ತಿನ್ನಲೂ ಹಿಂದೇಟು ಹಾಕುತ್ತಿದ್ದೆವು.
ಈಗ ಈ ಹಬ್ಬಗಳನ್ನು ಆಚರಿಸುತ್ತಿದ್ದಾರಾದರೂ ಮೊದಲಿನ ರೀತಿ ಭಕ್ತಿಭಾವದಿಂದ ಮಾಡುತ್ತಿದ್ದ ಆಚರಣೆಗಳು ಇಲ್ಲವೇನೋ ಅಂತಾ ಅನಿಸುತ್ತಿದೆ. ಬರೀ ಹಬ್ಬಗಳೇ ಅಂತಾ ಅಲ್ಲ. ಮನೆಯಲ್ಲಿ ಮಾಡುತ್ತಿದ್ದ ಸಮಾರಂಭಗಳಲ್ಲೂ ಸಹ ಸಿರಿವಂತಿಕೆಯ ತೋರಿಕೆಗಳು, ಮೇಲ್ನೋಟದ ಪ್ರೀತಿ ಕಂಡುಬರುತ್ತಿದ್ದಾವೆಯೇ ಹೊರತು ಮೊದಲಿನಂತೆ ಇಲ್ಲ ಅನಿಸುತ್ತದೆ. ಇದು ಎಲ್ಲರಿಗೂ ಅಲ್ಲವಾದರೂ ಬಹುತೇಕರದ್ದು ಇದೇ ಸ್ಥಿತಿ. ಆ ಕಾಲ ಈ ಕಾಲದ ಬದಲಾದ ಜನರ ಮನೋಸ್ಥಿತಿಗಳನ್ನು ಕಂಡು ಮನಸ್ಸಿಗೆ ಕಸಿವಿಸಿ ಎನಿಸುತ್ತಿದೆಯಾದರೂ ‘ಕಾಲಾಯ ತಸ್ಮೈ ನಮಃ’ ಎಂದುಕೊಂಡು ಸುಮ್ಮನಾಗುತ್ತೇನೆ.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
It’s very nice sir.
ಬಾಲ್ಯ ಮರೆತು ಬದುಕಲು ಸಾಧ್ಯವಿಲ್ಲ ಬಿಡಿ…ಇಂತಹ ನೆನಪುಗಳ ಮರುಕಳಿಕೆಗಳು ಮುಂದಿನ ಬದುಕಿಗೆ ಹಸಿರು ಹಾದಿಯನ್ನು ಸೃಷ್ಟಿಸುತ್ತವೆ….
ಬದುಕು ಕುಲುಮೆ ಅಂಕಣ ನಿನ್ನ ಬಾಲ್ಯದ ದಿನಗಳನ್ನು ನೆನಪಿಗೆ ತರುತ್ತಿದೆ ಅಂಕಣ ಚನ್ನಾಗಿ ಮೂಡಿ ಬರುತಿದೆ ಮುಂದುವರಿಯಲಿ
ಹಬ್ಬಗಳ ವಿಶೇಷ ದ ಬಗ್ಗೆ ಬರೆದ ನಿಮ್ಮ ಲೇಖನತುಂಬಾ ಚೆನ್ನಾಗಿದೆ.👌👍💐
ನನಗೆ ಬಾಲ್ಯದ ನೆನಪುಗಳು ಮತ್ತೆ ಮರುಕಳಿಸಿದಂತಾಯಿತು.
It was nice memories
I just refreshed my old memories
Thank you