ಭಾರತೀಯರ ಹಣ, ಅಂತಸ್ತು, ಜಾತಿ ತೋರಿಕೆ ಇಂತವುಗಳಿಂದ ದೂರಸರಿಯಲು ಅವರು ಬಯಸುತ್ತಾರೆ. ಕೆಲ ಭಾರತೀಯರದು ಸಂಕುಚಿತ ಮನೋಭಾವ, ಕೆಲವರು ಅತಿಯಾಗಿ ಹಚ್ಚಿಕೊಳ್ಳಲು ಹವಣಿಸಿ, ಕೊನೆಗೆ ವ್ಯಯಕ್ತಿಕ ವಿಷಯಗಳನ್ನು ಕೆದುಕುತ್ತಾರೆ, ಇಂತವುಗಳಿಂದ ತಪ್ಪಿಸಿಕೊಳ್ಳಲು ಬಂದಂತಹ ಕೆಲವರಿಗೆ ಇದರಿಂದ ಮುಜುಗರವಾಗುತ್ತದೆ. ಇದಲ್ಲದೆ ಭಾರತೀಯರನ್ನು ಹಚ್ಚಿಕೊಂಡಷ್ಟೂ ಸಾಮಾಜಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಅವರು ಭಾವಿಸುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ತುಂಬಾ ದೂರ ಎನಿಸುತ್ತಿದ್ದ ಅಮೇರಿಕ, ಈಗ ಕೂಗಳತೆಯಷ್ಟು ದೂರ ಬಂದು ನಿಂತಿದೆ. ಭಾರತದಲ್ಲಿ ಯಾರಾದರೂ ನಾನು ಅಮೇರಿಕಾಗೆ ಹೊರಟೆ ಎಂದರೆ, “ಒಹ್ ನಮ್ಮ ಅಮೇರಿಕಕ್ಕೆ ಹೊರಟಿರಾ” ಎಂದು ಕೇಳುವಷ್ಟು ಮಟ್ಟಿಗೆ ಅಮೇರಿಕ ಹತ್ತಿರವಾಗಿದೆ. ಆಂಧ್ರ ಹಾಗು ತೆಲಂಗಾಣದ ರಾಜ್ಯಗಳ ಜನ ಮನೆಗೊಬ್ಬರಂತೆ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಗುಜರಾತಿಗಳು ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ.

21 ನೇ ಶತಮಾನದ ಆರಂಭವು ಭಾರತದಿಂದ ಅಮೇರಿಕಾ ದೇಶಕ್ಕೆ ವಲಸೆಯ ಪ್ರವೃತ್ತಿಯಲ್ಲಿ ಗಮನಾರ್ಹ ಅಲೆಯನ್ನು ಗುರುತಿಸಿತು. ಬೆಂಗಳೂರು, ಚೆನ್ನೈ, ಪುಣೆ, ಮುಂಬೈ, ಮತ್ತು ಹೈದರಾಬಾದ್‌ಗಳಂತಹ ಭಾರತೀಯ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಹೊರಹೊಮ್ಮುವಿಕೆಯು ಮುಖ್ಯವಾಗಿ ದಕ್ಷಿಣ ಭಾರತದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಅಮೇರಿಕಾಗೆ ಹೆಚ್ಚಿನ ಸಂಖ್ಯೆಯ ವಲಸೆಗೆ ಕಾರಣವಾಯಿತು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪಂಜಾಬ್, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಸಾಕಷ್ಟು ಜನಸಂಖ್ಯೆ ಇದೆ. ಅಮೆರಿಕನ್ನರ ಸರಾಸರಿ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯದೊಂದಿಗೆ ಭಾರತೀಯ ಅಮೇರಿಕನ್ನರು ಅಮೇರಿಕಾದಲ್ಲಿ ಶ್ರೀಮಂತ ಜನಾಂಗದವರಾಗಿ ಏರಿದ್ದಾರೆ.

ಜನವರಿ 20, 2021 ರಂದು, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಅಮೇರಿಕಾ ದೇಶದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಇತಿಹಾಸವನ್ನು ನಿರ್ಮಿಸಿದರು. ಅವರು 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಜೋ ಬೈಡೆನ್ ಅವರ ಸಹವರ್ತಿಯಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇದು ಭಾರತೀಯ ಅಮೇರಿಕನ್ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು, ಮತ್ತು ಹ್ಯಾರಿಸ್ ಜೊತೆಗೆ ಇನ್ನೂ 20 ಭಾರತೀಯ ಅಮೆರಿಕನ್ನರು ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ನಾಮನಿರ್ದೇಶನಗೊಂಡರು.

ಹಿಂದೆ ಅಮೇರಿಕಾದಿಂದ ಭಾರತಕ್ಕೆ ಫೋನ್ ಮಾಡಬೇಕಾದರೆ ದುಬಾರಿ ಆಗುತ್ತಿತ್ತು. ಫೋನ್ ಕಾರ್ಡ್ ಉಪಯೋಗಿಸಿ ಫೋನ್ ಮಾಡಿದರೂ ಎರಡೂ ಕಡೆಯವರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಈಗ ವಾಟ್ಸಾಪ್ ಬಂದಿರುವುದರಿಂದ ಸುಲಭವಾಗಿ ಪ್ರತ್ಯೇಕವಾಗಿ ಹಣ ವ್ಯಯಸದೆ ಮಾತನಾಡಬಹದು. ವಿಡಿಯೋ ಕಾಲ್ ಮಾಡಲು ಸಾಧ್ಯವಾಗಿರುವುದರಿಂದ ಮನೆಯವರನ್ನು ನೋಡಿಕೊಂಡು ಮಾತನಾಡಬಹದು. ಅಷ್ಟರ ಮಟ್ಟಿಗೆ ಅಮೇರಿಕಾ ಭಾರತಕ್ಕೆ ಅಂಗಳಕ್ಕೆ ಬಂದಿದೆ.

ಅಮೇರಿಕಾದಲ್ಲಿ ಟಿ-೨೦ ವಿಶ್ವಕಪ್ ಕ್ರಿಕೆಟ್ ನಡೆಯುವಮಟ್ಟಿಗೆ ಭಾರತವಾಗಿದೆ. ಈ ಸಲ ಯು.ಎಸ್ .ಎ ತಂಡ ಟಿ-೨೦ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡುತಿದ್ದು, ಈಗಾಗಲೇ ಕೆನಡಾ ತಂಡವನ್ನು ಮಣಿಸಿದ್ದರ ಅಚ್ಚರಿ ಆರುವ ಮೊದಲೇ ಬಲಾಢ್ಯ ಪಾಕಿಸ್ತಾನ ತಂಡವನ್ನು ಮಣಿಸಿ ಅಚ್ಚರಿಯನ್ನು ವಿಸ್ಮಯ ಗೊಳಿಸಿದೆ. ಯು.ಎಸ್ .ಎ ಭಾರತೀಯ ಮೂಲದ ಆಟಗಾರಿದ್ದಾರೆ. ಕನ್ನಡದ ಕೆಂಜಿಗೆ ಅವರಿದ್ದಾರೆ. ಎಲ್ಲರೂ ಉತ್ಸಾಹದಿಂದ ಆಡುತ್ತಿದ್ದಾರೆ. ಅಮೇರಿಕಾದಲ್ಲಿನ ಕ್ರಿಕೆಟ್ ಆಟ ಅಮೇರಿಕಾದಲ್ಲಿ ನೆಲೆಸಿರುವ ಜನರನ್ನು ಭಾರತದ ಹೊಸ್ತಿಲಿಗೆ ಬಂದು ನಿಲ್ಲಿಸಿದೆ. ಅಮೇರಿಕಾದ ಮಾಧ್ಯಮಗಳು ಕ್ರಿಕೆಟ್ ಬಗ್ಗೆ ಮಾತನಾಡುತ್ತಿವೆ. ಟೀ-೨೦ ಗಾಗಿ ನ್ಯೂಯಾರ್ಕ್‌ನಲ್ಲಿ ಒಂದು ಹೊಸ ಕ್ರಿಕೆಟ್ ಕ್ರೀಡಾಂಗಣ ಎದ್ದು ನಿಂತಿದೆ.

ರಾಜಕಾರಣದ ಕಾರಣಗಳಿಗೋ, ಚೀನಾವನ್ನು ಹತ್ತಿಕ್ಕಲೊ ಅಮೇರಿಕ ಎಂದಿಗಿಂತ ಭಾರತಕ್ಕೆ ಹತ್ತಿರವಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ವಿತರಿಸಿದೆ. ಭಾರತದ ಜೊತೆ ಹಲವಾರು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತಕ್ಕೆ ಎಲ್ಲದರಲ್ಲೂ ರಿಯಾಯಿತಿ ಸಿಗುತ್ತಿದೆ. ಭಾರತದ ಹಲವರು ಅಮೇರಿಕಾದ ದೊಡ್ಡ ದೊಡ್ಡ ಕಂಪನಿಗಳ ಸಿಇಓ ಗಳಾಗಿದ್ದಾರೆ. ಇದರಿಂದ ಭಾರತದ ಹೆಸರು ಎಂದಿಗಿಂತಲೂ ಹೆಚ್ಚು ಅಮೇರಿಕಾದಲ್ಲಿ ಪ್ರಸಿದ್ಧಗೊಂಡಿದೆ.

ಅಮೇರಿಕಾದಲ್ಲಿರುವ ಧರ್ಮಗಳಲ್ಲಿ ಹಿಂದೂಧರ್ಮವೂ ಒಂದು ಎನ್ನುವ ಮಟ್ಟಿಗೆ ಭಾರತೀಯತೆ ನೆಲೆಗೊಳ್ಳುತ್ತಿದೆ. ಅಮೇರಿಕಾದ ಶಾಲೆಗಳಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಘೋಷಿಸಲಾಗುತ್ತಿದೆ. ಅಷ್ಟರಮಟ್ಟಿಗೆ ಅಮೇರಿಕಾದ ಮಕ್ಕಳಿಗೆ ಭಾರತೀಯ ಧರ್ಮವೊಂದರ ಪರಿಚಯವಾಗುತ್ತಿದೆ. ಎಷ್ಟು ಅಮೇರಿಕ ಭಾರತಕ್ಕೆ ಹತ್ತಿರವಾಗುತ್ತದೋ, ಅಷ್ಟೇ ಭಾರತ ಅಮೇರಿಕಾಗೆ ಹತ್ತಿರವಾಗುತ್ತದೆ. ಇದಲ್ಲದೆ ಅಮೇರಿಕಾದ ಅನೇಕ ಶಾಲೆಗಳಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಕಲಿಯುವ ಅವಕಾಶ ಮಾಡಿಕೊಡಲಾಗುತ್ತಿದೆ.

ಅಮೇರಿಕಾದ ದೊಡ್ಡ ದೊಡ್ಡ ಸೂಪರ್ ಮಾರುಕಟ್ಟೆಗಳಲ್ಲಿ, ಈ ಹಿಂದೆ ಭಾರತೀಯ ಅಡುಗೆ ಸಾಮಾಗ್ರಿಗಳು ಕಾಣಿಸುತ್ತಿರಲಿಲ್ಲ, ಈಗ ಅಲ್ಲಿಯೂ ಭಾರತೀಯ ಅಕ್ಕಿ, ಸಾಂಬಾರ್ ಪೌಡರ್, ಗೋಧಿಹಿಟ್ಟು, ಸಮೋಸ, ಉಪ್ಪಿನಕಾಯಿ ಮುಂತಾದುವು ಸಿಗುತ್ತವೆ.

ಈಗ ಅಮೇರಿಕಾದಲ್ಲಿ, ಭಾರತದ ಏನೆಲ್ಲಾ ಇಲ್ಲ, ಲೆಕ್ಕವಿಲ್ಲದಷ್ಟು ಭಾರತೀಯ ರೆಸ್ಟೋರೆಂಟ್‌ಗಳಾಗಿವೆ. ಭಾರತೀಯ ದಿನಸಿ ಕೊಳ್ಳಲು ಬೇಕಾದಷ್ಟು ಅಂಗಡಿಗಳಾಗಿವೆ. ಭಾರತೀಯ ಅಂಗಡಿಗಳೇ ತುಂಬಿಕೊಂಡಿರುವ ಬೀದಿಗಳಿವೆ. ಅಲ್ಲಿ ಮಹಾತ್ಮ ಗಾಂಧಿ ಪ್ಲಾಜಾ ಎಂದು ಕರೆಸಿಕೊಳ್ಳುವ ಸಮುಚ್ಚಯವಿದೆ. ಬೇಕಾದ ಚಿತ್ರಮಂದಿರಗಳಲ್ಲಿ ಭಾರತೀಯ ಸಿನೆಮಾಗಳು ಕಾಣಸಿಗುತ್ತವೆ. ಅನೇಕ ಭಾರತೀಯ ಕಾರ್ಯಕ್ರಮಗಳು ನಡೆಯುತ್ತವೆ. ಭಾರತದ ಹಬ್ಬಗಳು ನಡೆಯುತ್ತವೆ. ಎಲ್ಲೆಲ್ಲೂ ದೇವಸ್ಥಾನಗಳು ತಲೆ ಎತ್ತಿನಿಂತಿವೆ. ವಿಶ್ವದ ಎರಡನೇ ದೊಡ್ಡ ಹಿಂದೂ ದೇವಾಲಯ ಅಮೇರಿಕಾದಲ್ಲಿದೆ. ಅಮೇರಿಕಾದಲ್ಲಿ ಬಾಲಾಜಿ ಟೆಂಪಲ್ ಡ್ರೈವ್ ಎನ್ನುವ ರಸ್ತೆಯೂ ಇದೆ. ಇದರಿಂದ ಅಮೇರಿಕಾದಲ್ಲಿ ಇರುವ ಭಾರತೀಯರಿಗೆ ಭಾರತವೂ ಹತ್ತಿರದಲ್ಲೇ ಇದ್ದಂತೆ ಭಾಸವಾಗುತ್ತದೆ.

ಟೆಕ್ಸಾಸ್ ರಾಜ್ಯದ ಡ್ಯಾಲ್ಲಸ್‌ನಲ್ಲಿ ಭಾರತೀಯ ಅದರಲ್ಲೂ ತೆಲಗು ಜನರು ತುಂಬಿಹೋಗಿದ್ದಾರೆ. ಗಣೇಶ ಹಬ್ಬಗಳಲ್ಲಿ ಭಾರತದಂತೆ ರಸ್ತೆಯಲ್ಲಿ ಗಣೇಶನ ಮೆರವಣಿಗೆ ನಡೆಯುತ್ತದೆ. ಡೋಲು ಬಾರಿಸಲಾಗುತ್ತದೆ. ಭಾರತೀಯರು ಭಾರತೀಯ ಉಡುಪಿನಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ದೀಪಾವಳಿ ಹಬ್ಬದ ಸಮಯ ದೇವಸ್ಥಾನಗಳಲ್ಲಿ ರಾವಣ ದಹನ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಅಮೇರಿಕಾದ ಪೊಲೀಸರು ಕಾವಲುಗಾರರಾಗಿರುತ್ತಾರೆ.

ಭಾರತದ ಎಷ್ಟೋಜನ ಭಾರತೀಯ ಗುಂಪಿನಿಂದ ದೂರವಿರಲು ಅಮೇರಿಕಾಗೆ ಬಂದಿರುತ್ತಾರೆ. ಅಂಥವರು ಭಾರತೀಯ ಜನರ ಜೊತೆ ಬೆರೆಯಲು ಇಷ್ಟಪಡುವುದಿಲ್ಲ. ಭಾರತೀಯರು ಮಾತನಾಡಿಸಿದಾಗ, ಮಾತನಾಡಿದರೂ ಹತ್ತಿರವಾಗುವುದಿಲ್ಲ. ಅಂಥವರನ್ನು ಜಂಬದ ಜನ ಎಂದು ಹೀಯಾಳಿಸುವವರು ಇರುತ್ತಾರೆ. ಆದರೆ ಭಾರತೀಯರ ಹಣ, ಅಂತಸ್ತು, ಜಾತಿ ತೋರಿಕೆ ಇಂತವುಗಳಿಂದ ದೂರಸರಿಯಲು ಅವರು ಬಯಸುತ್ತಾರೆ. ಕೆಲ ಭಾರತೀಯರದು ಸಂಕುಚಿತ ಮನೋಭಾವ, ಕೆಲವರು ಅತಿಯಾಗಿ ಹಚ್ಚಿಕೊಳ್ಳಲು ಹವಣಿಸಿ, ಕೊನೆಗೆ ವ್ಯಯಕ್ತಿಕ ವಿಷಯಗಳನ್ನು ಕೆದುಕುತ್ತಾರೆ, ಇಂತವುಗಳಿಂದ ತಪ್ಪಿಸಿಕೊಳ್ಳಲು ಬಂದಂತಹ ಕೆಲವರಿಗೆ ಇದರಿಂದ ಮುಜುಗರವಾಗುತ್ತದೆ. ಇದಲ್ಲದೆ ಭಾರತೀಯರನ್ನು ಹಚ್ಚಿಕೊಂಡಷ್ಟೂ ಸಾಮಾಜಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಇದೆಲ್ಲಾ ಏನೇ ಇರಲಿ ಭಾರತೀಯರಿಗೆ ಭಾರತೀಯರೇ ಒಳ್ಳೆಯ ಸ್ನೇಹಿತರಾಗುವುದು. ಭಾಷೆ, ಸಂಸ್ಕೃತಿ, ಸಂಪ್ರದಾಯ ಎಲ್ಲಾ ಒಂದೇ ಆಗಿರುವುದರಿಂದ ಸ್ನೇಹ ಮಾಡಲು ಸುಲಭವೂ ಆಗುತ್ತದೆ.