ಅವರು, ಅಲ್ಲೆಲ್ಲೋ ಸಂತೆಯ ಮಧ್ಯೆ ಜಗವ ಮರೆತು ಸಾಗುವ ಪ್ರೀತಿಯ ರಾಯಭಾರಿಗಳಂತೆ ಕಾಣುತ್ತಾರೆ. ಮಳೆಯ ಜೊತೆಗೆ ಸಾದಾ ಸೀದಾ ಎಂಬಂತೆ ಹಾರಿ ಬರುವ ತಂಗಾಳಿ, ಪ್ರತಿ ಬೆಳಗು ಖಾಲಿ ಬೇಲಿಯ ಭೇಟಿಯಾಗುವ ದಾಸವಾಳ, ಆಕಳಿಸುವ ಚಂದಿರನಿಗೆ ಸದಾ ಕಾಣುವ ಟ್ರಕ್ಕಿನ ಟಾರ್ಪಲ್ ಮುಂಡಾಸು, ಚೆಂಡೆಗೆ ದಣಿವಾಗುವಷ್ಟು ಕುಣಿಯುವ ಪುಂಡು ವೇಷಧಾರಿ ಹೀಗೆ ಯಾವುದು ಮಾಮೂಲು ಎಂದು ವಿಭಾಗಿಸಿಕೊಂಡಿರುವ ಸಂಗತಿಗಳಿವೆಯೋ ಅದೇ ತೆರನಾದ ಬಂಧ ಅವರದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಸಿನಿಮಾದ ವಿಶ್ಲೇಷಣೆ

ಮರೆಯದೆ ಕ್ಷಮಿಸು ನೆನಪಾದರೆ,
ಕನಸನು ಉರಿಸು ಇರುಳಾದರೆ..
ನಿನದೇ ಹಿತವ, ಬಯಸಿ ಒಲವೇ,
ನಿನ್ನಿಂದಾ ದೂರ ಓಡುವೇ

ಮನಸಿದು ನೆನಪಿನ ಸಂಚಿಕೆ,
ಪುಟವನು ತಿರುವಲು ಅಂಜಿಕೆ
-ಜಯಂತ ಕಾಯ್ಕಿಣಿ

(ಸೂರಿ)

ಒಲವೆಂಬುದು ಒಂದು ಸುಂದರ ಅಪಘಾತ. ಸೋಲುವ ಕಣ್ಣುಗಳ, ಮಾತು ಕೇಳದ ಹೃದಯಗಳ ಸಮ್ಮಿಲನ. ಅವಳ ನಗು, ಅವನ ಕೈ ಬೆರಳುಗಳ ಸ್ಪರ್ಶ, ಅವಳ ಹುಸಿ ಕೋಪ, ಅವನ ಕಾಳಜಿ ಇವೆಲ್ಲವೂ ಪ್ರೀತಿಯ ಪದಗಳು. ಇಲ್ಲಿ ಭಿನ್ನತೆಗಳ ಪರಿಧಿಯ ಮೀರಿ, ಎರಡು ಮನಸ್ಸುಗಳು ಸಂಕಲನಗೊಳ್ಳುತ್ತವೆ. ಮಾಮೂಲಿ ಕನಸುಗಳು ಮಾಯವಾಗಿ, ಒಲವಿನ ಬಣ್ಣಗಳು ಪ್ರತ್ಯಕ್ಷವಾಗುತ್ತದೆ. ಅನುಗಾಲವೂ ಪ್ರೇಮದ ಧ್ಯಾನ, ಬದುಕಿನ ಕವಿತೆಯ ಸಾಲುಗಳೆಲ್ಲವನ್ನು ಒಲವಿಗೆ ಮೀಸಲಿಡುತ್ತದೆ. ಭುವಿಯ ಮರೆಯಲಾಗದ ಶ್ರಾವಣದ ಮಳೆಯಂತೆ, ಅಂಟಿಸಿಕೊಂಡ ಬಣ್ಣದ ಬಲೆಗೆ ಬಿದ್ದ ಕಾಮನಬಿಲ್ಲಿನಂತೆ, ವಸಂತನ ಕಣ್ನೋಟಕ್ಕೆ ಲಜ್ಜೆಯಿಂದಲೇ ನಲಿದಾಡುವ ಹಸಿರಿನ ಸಾಲುಗಳಂತೆ ಪ್ರೀತಿಗೆ ಬಿಡುಗಡೆಯಿಲ್ಲ. ಮನಸ್ಸುಗಳು ದೂರ ಸಾಗಿದರು, ಉಳಿಸಿಹೋದ ಹೆಜ್ಜೆಗುರುತುಗಳ ಅಳಿಸಲಾಗುವುದಿಲ್ಲ. ಕಾಲಗಳೆಷ್ಟೇ ಖಾಲಿಯಾಗಲಿ, ಹೃದಯ ಶೇಖರಿಸಿದ ನೆನಪುಗಳಿಗೆ ಜಾಮೀನು ಸಿಗುವುದೇ ಇಲ್ಲ. ಇಂತಹ ಒಂದು ಆತ್ಯಂತಿಕ ಪ್ರೇಮದ ನಡಿಗೆಗೆ, ವ್ಯವಸ್ಥೆಯ ಹುಳುಕುಗಳು, ಭೀಬತ್ಸ ಮಾನಸಿಕತೆಗಳೆಂಬ ತಡೆಗೋಡೆಗಳು ಎದುರಾದರೂ ನಗುವ ಮುಡಿಸಿದ ನೆರಳಿಗೆ ಆತುಕೊಂಡು ಬದುಕುವ ಜೀವಗಳ, ಭಾವ ತೀವ್ರತೆಯ ಸರೋವರದಲ್ಲಿ ತೇಲುವ ಕಥಾನಕವೇ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’.

ಅವನು ರವಿ. ಗಾಳಿಗೆ ಹಾರುವ ಕಿಸೆಯ ಒಡೆಯ. ಅವಳು ಗೌರಿ. ಧೂಳು ಸೋಕದ ಕಾಲುಗಳು, ಹಾರುವ ಹಕ್ಕಿಯ ಮಟ್ಟದ ಬದುಕು. ಆದರೆ ಬದುಕಿನಲ್ಲಿ ಪ್ರೀತಿ, ವಾತ್ಸಲ್ಯ, ಮಮತೆಯನ್ನು ಮಾತೆಯ ಸಿರಿವಂತಿಕೆಯ (ಅ)ಹಮ್ಮು ಆಪೋಶನ ತೆಗೆದುಕೊಂಡಿದೆ. ಅದೇ ಕಾರಣಕ್ಕೆ ಗೌರಿಗೆ ರವಿಯೇ ಉಸಿರು. ಅವನಿಗೂ ಅಷ್ಟೇ. ಅವಳೆಂದರೆ, ಮಾತು-ಮೌನಕ್ಕಿರುವ ಏಕೈಕ ಜವಾಬು. ಚಿತ್ರ ಮಂದಿರದ ಕತ್ತಲು ಬೆಳಕಿನ ಕಣ್ಣು ಮುಚ್ಚಾಲೆ, ಕೈಗಳನ್ನು ಆಗಸದತ್ತ ಚಾಚಿರುವ ಮಾಲುಗಳು ಅವರ ಸಂತಸ, ಸಲ್ಲಾಪಗಳಿಗೆ ವೇದಿಕೆ. ಅದೊಂದು ದಿನ ತಾಯಿಯ ಕಣ್ಣಿನಲ್ಲಿ ಜೋಡಿ ಹಕ್ಕಿಗಳು ಸೆರೆಯಾಗುತ್ತದೆ. ಡಿಸಿಪಿ ಸೂರ್ಯಕಾಂತರಿಗೆ ಈ ಸಲಿಗೆಗೊಂದು ಕಣಿವೆ ಹೂಡುವ ಆಜ್ಞೆ ಹೊರಡುತ್ತದೆ. ಅತ್ತ ಡ್ರಗ್ ದಂಧೆಯಲ್ಲಿ ವಶಪಡಿಸಿಕೊಂಡ ಕೋಟ್ಯಂತರ ಮೌಲ್ಯದ ಅಕ್ರಮ ಹಂಚಿಕೆಯಲ್ಲಿ ಇನ್ಸ್‌ಪೆಕ್ಟರ್ ಒಬ್ಬ ಮಾಡಿದ ಮೋಸದ ವಿರುದ್ಧ ಸೂರ್ಯಕಾಂತ್ ಮತ್ತಾತನ ಬಳಗ ಬೆಂಕಿ ಕಾರುತ್ತಿರುತ್ತದೆ. ಅವನ ಕೊಲೆಗೆ ಸಂಚು ರೂಪಿಸುವ ಈ ಬಳಗ, ರವಿಯನ್ನು ಡ್ರಗ್ ಸಾಗಣೆದಾರ ಎಂಬ ದೂರಿನಲ್ಲಿ ಬಂಧಿಸಿ, ಅವನ ಕೈಯಿಂದಲೇ ಆ ಇನ್ಸ್ಪೆಕ್ಟರ್ ಸತ್ತ ಎಂದು ಸಾಬೀತುಗೊಳಿಸಲು ಬೃಹನ್ನಾಟಕವೊಂದನ್ನು ಆಯೋಜಿಸುತ್ತದೆ. ರವಿಯ ಬಂಧನದ ನಂತರ ಆತನನ್ನು ಕರೆದುಕೊಂಡು ಹೋಗುವ ಜೀಪಿನ ಡ್ರೈವರ್ ಅದೇ ಇನ್ಸ್ಪೆಕ್ಟರ್ ಎಂದು ಸಮಾಜವ ನಂಬಿಸಿ, ಅವನಂತೆಯೇ ಕಾಣುವ ರೌಡಿ ಶೀಟರ್ ಒಬ್ಬನನ್ನು ಕಳುಹಿಸುತ್ತಾರೆ. ಆ ವ್ಯಕ್ತಿ ಜೀಪಿನ ಮುಂಭಾಗದಿ ಕುಳಿತ ರಿವಾಲ್ವರ್ ಬೀಳುವಂತೆ ಮಾಡಿ, ಆತಂಕದಿಂದ ಅಡರಿ ಹೋಗಿದ್ದ ರವಿ ಆ ರಿವಾಲ್ವರ್‌ಅನ್ನು ಎತ್ತಿ ಟ್ರಿಗರ್ ಅದುಮುವಂತೆಯೂ, ಸರಿ ಸಮಯಕ್ಕೆ ಆ ಇನ್ಸ್ಪೆಕ್ಟರ್ ಮುಖವಾಡದ ಮನುಷ್ಯ ಸಾಯುವಂತೆಯೂ ನಟನೆ ಮಾಡುವಂತೆ ಸನ್ನಿವೇಶವ ರಚಿಸಿ, ರವಿಯನ್ನು ಕೊಲೆಗಾರನನ್ನಾಗಿ ಮಾಡಲಾಗುತ್ತದೆ.

ಆ ಅಪರಾಧದ ಚಿತ್ರಣದಿಂದ ಉಸಿರಿಗೆ ತ್ರಾಸ ನೀಡುವ ರವಿ, ಗೌರಿಯ ಸಂಗಡ ಮಹಾ ಶಹರಕ್ಕೆ ಬೆನ್ನು ಹಾಕಿ, ಉತ್ತರದತ್ತ ಸಾಗುತ್ತಾನೆ. ಇತ್ತ ಎಸಿಪಿ ಪುರಂದರ್ ತನಿಖಾಧಿಕಾರಿಯಾಗಿ ಆಗಮಿಸುತ್ತಾರೆ. ಅತ್ತ ಸೂರ್ಯಕಾಂತ್ ಮತ್ತವನ ಬಳಗ ಆಫ್ ದಿ ರೆಕಾರ್ಡ್ ಎನ್ನುತ್ತಾ ಸುದ್ದಿಯಿಲ್ಲದೇ ತಮ್ಮ ಕೆಲಸದ ಹಿಂದೆ ಬೀಳುತ್ತಾರೆ. ಹೀಗೆ ಒಂದೆಡೆ ತನಿಖೆ, ಹುಡುಕಾಟ, ಸಂಚು ಸಾಗುತ್ತಲೇ ಇದ್ದರೆ, ಅದೇ ವೇಗದಲ್ಲಿ ಗಿಣಿಮರಿಗಳ ಯಾನವು ಬಸ್ಸು, ಕಾರುಗಳೆಲ್ಲದರ ಬೆನ್ನೇರಿ, ಉತ್ತರದ ನೆಲಕ್ಕೆಳೆದ ರೇಖೆಗಳ ಮೀರಿ ಓಡುತ್ತಾ ಮುಂದುವರೆಯುತ್ತದೆ. ಸುಳಿವ ಮಿಂಚಿನಂತೆ ಅಂಧಕಾರದ ಮಧ್ಯೆ ಅಪ್ಪಳಿಸುವ ಕನಸುಗಳು, ಬದುಕಿನ ಭವಿಷ್ಯದ ಬಗ್ಗೆ ಮಸುಕುಂಟಾಗುವಂತೆ ಮಾಡುತ್ತದೆ. ಬಸ್ಸಿನ ಛಾವಣಿಯಲ್ಲಿ ಕುಣಿಯುವ ದೀಪಗಳ ಕೆಳಗೆ ಸಭೆ ಸೇರಿದ ಕತ್ತಲು ಕಾಡುತ್ತದೆ, ನಾಳಿನ ಬೆಳಕಿನ ಕುರಿತು ಪ್ರಶ್ನೆಯ ಕೇಳುತ್ತದೆ. ಮುಂದೆ ಸೂರ್ಯಕಾಂತನ ದುಷ್ಟ ಬಳಗದ ದಾರಿಗೆ ಅಡ್ಡಲಾಗುವ ಜೋಡಿಯತ್ತ ಬಂದೂಕಿನ ನಳಿಕೆಗಳು ಬಾಯಿ ತೆರೆದು ಕಾಯುತ್ತದೆ. ಇತ್ತ ಎಸಿಪಿ ಪುರಂದರ ಒಳಸುಳಿಗಳ ನೆತ್ತರ ತರ್ಪಣದ ಬಯಕೆಯನ್ನು ಅರಿತುಕೊಂಡು, ಇವರಿಬ್ಬರ ರಕ್ಷಿಸಲು ಮುಂದೆ ದಾಪುಗಾಲಿಡುತ್ತಾನೆ. ಮುಂದೆ ಗಿಣಿಮರಿಗಳು ಮರಳಿ ಗೂಡಿಗೆ ಸೇರಿದವೇ? ಜೊತೆಯಾದವೇ ಅಥವಾ ಬೇರೆಯಾದವೇ? ಸಂಚಿನ ಕಥೆಯ ಅಂತ್ಯವೇನಾಯಿತು? ಎಂಬಂತಹ ಹಲವು ಕೌತುಕಗಳ ದೋಣಿಯ ಮೇಲೆ ಕುಳಿತು ಸಾಗುವ, ಒಲವಿನ ಭಾವಗೀತೆಯೇ ‘ಕೆಂಡಸಂಪಿಗೆ’.

ಪ್ರೇಮದ ಕಂದೀಲು ಹಿಡಿದು ಬಂದ ಚಿತ್ರಗಳು ಅಗಣಿತ. ಆ ರಾಶಿಯ ಮಧ್ಯೆ ಈ ಕಥೆಯು ವಿಭಿನ್ನವಾಗಿ ನಿಲ್ಲುವುದು ಇಲ್ಲಿ ಅಡಕವಾಗಿರುವ ಸರಳತೆಯ ಸಹವಾಸದಿಂದ. ರವಿ ಮತ್ತು ಗೌರಿಯ ನಡುವಿನ ಬಾಂಧವ್ಯ, ಕಾಳಜಿ, ವಿರಹ ಯಾವುದೂ ಗಂಧರ್ವ ಲೋಕದಿಂದ ಇಳಿದು ಬಂದ ವಿಶೇಷ ವಿಷಯದಂತೆ ಕಾಣುವುದಿಲ್ಲ. ಬದಲಾಗಿ ಅವರು, ಅಲ್ಲೆಲ್ಲೋ ಸಂತೆಯ ಮಧ್ಯೆ ಜಗವ ಮರೆತು ಸಾಗುವ ಪ್ರೀತಿಯ ರಾಯಭಾರಿಗಳಂತೆ ಕಾಣುತ್ತಾರೆ. ಮಳೆಯ ಜೊತೆಗೆ ಸಾದಾ ಸೀದಾ ಎಂಬಂತೆ ಹಾರಿ ಬರುವ ತಂಗಾಳಿ, ಪ್ರತಿ ಬೆಳಗು ಖಾಲಿ ಬೇಲಿಯ ಭೇಟಿಯಾಗುವ ದಾಸವಾಳ, ಆಕಳಿಸುವ ಚಂದಿರನಿಗೆ ಸದಾ ಕಾಣುವ ಟ್ರಕ್ಕಿನ ಟಾರ್ಪಲ್ ಮುಂಡಾಸು, ಚೆಂಡೆಗೆ ದಣಿವಾಗುವಷ್ಟು ಕುಣಿಯುವ ಪುಂಡು ವೇಷಧಾರಿ ಹೀಗೆ ಯಾವುದು ಮಾಮೂಲು ಎಂದು ವಿಭಾಗಿಸಿಕೊಂಡಿರುವ ಸಂಗತಿಗಳಿವೆಯೋ ಅದೇ ತೆರನಾದ ಬಂಧ ಅವರದು. ಅಷ್ಟೇ ಅಲ್ಲ, ಕಥೆಯ ಮಧ್ಯೆ ಬರುವ ಕ್ಯಾಬ್ ಡ್ರೈವರ್‌ನಿಂದ ಹಿಡಿದು, ಪೊಲೀಸ್ ಅಧಿಕಾರಿಗಳವರೆಗೆ ಎಲ್ಲವೂ ಮುಖವಾಡವಿಲ್ಲದ ಸಮಾಜದ ನಕಲು ಪ್ರತಿ. ಒಲವಿನ ವಿಸ್ತಾರಕ್ಕೆ ಜೊತೆಯಾಗುವ ಕ್ರೈಮ್ ಥ್ರಿಲ್ಲರ್ ಬೆತ್ತಲುಗೊಳಿಸುವುದು ವ್ಯವಸ್ಥೆಯ ಮಧ್ಯೆ ರಾಕ್ಷಸರಂತೆ ಆರ್ಭಟಿಸುವ, ಜೀವ ಹೀರುವ ಹುಳಗಳನ್ನು. ಅಮಾಯಕರಿಗಾಗುವ ಅನ್ಯಾಯ, ಉಳ್ಳವರ ನೆತ್ತರದಾಹ, ಅನಾಥವಾಗುವ ಉಸಿರು, ಗಾಂಧಿಯ ಪಟದ ನೋಟಿನ ಹಿಂದೆ ಬಿದ್ದು ಕಟ್ಟುವ ಮೋಸ, ಕ್ರೌರ್ಯದ ಅರಮನೆ ಎಲ್ಲದಕ್ಕೂ ಹಿಡಿದ ಕನ್ನಡಿಯಿದು. ಅವೆಲ್ಲದರ ಮಧ್ಯೆ, ಪ್ರೀತಿಯ ಗೂಡು ಕಟ್ಟಿ ‘ಹೃದಯವು ಮುತ್ತಿನ ಜೋಳಿಗೆ, ಅದರಲಿ ನಿನ್ನದೇ ದೇಣಿಗೆ’ ಎನ್ನುತ್ತಾ ಕನಸಲಿ ನಡೆವ ಜೋಡಿಯ ಹೆಜ್ಜೆಗುರುತೇ ಕಾಡುವಿಕೆಯ ಆತ್ಯಂತಿಕತೆಗೆ ಒಂದು ಇಶಾರೆ.

ಸೂರಿಯ ಬಗ್ಗೆ ಇರುವ ನೇರ ಆರೋಪವೆಂದರೆ ಅವರ ಕುಂಚಕ್ಕೆ ಹೆಚ್ಚು ರುಚಿಸುವುದು ಕೆಂಪು ಬಣ್ಣವೆಂಬುದು. ಅದೇ ಬಣ್ಣ ಪ್ರೀತಿಗೂ ತಾಜ್ಮಹಲ್ ಅಲ್ಲವೇ ಎಂದು ಸಮರ್ಥಿಸಿಕೊಂಡಿದ್ದಾರೆ ಸೂರಿ. ಅತಿಶಯೋಕ್ತಿಗಳತ್ತ ಚಪ್ಪಲಿಯೂ ಬಿಡದೆ, ಜಗತ್ತಿನ ಮೂಲೆಯಲ್ಲೊಂದು ಗೋಡೆಯ ಕೆಳಗೆ ಉಸಿರಾಡುತ್ತ ಬಿದ್ದ ಜೀವದ ಮೌನದಲ್ಲಿ, ಜಾತ್ರೆಯ ಪೆಂಡಾಲಿನ ಕೆಳಗೆ ಆಟಿಕೆ ಮಾರುವ ಹುಡುಗಿಯ ಕಣ್ಣಿನಲ್ಲಿ, ಹೊಡೆದಾಟವ ಬಿಟ್ಟ ಖದೀಮನಲ್ಲಿ, ತಿರುಗುವ ಭೂಮಿಯ ನಿಂತೇ ನೋಡುವ ಅಮಾಯಕನ ಮಾತಿನಲ್ಲಿ, ಪೋಲೀಸ್ ಅಧಿಕಾರಿಯ ಖದರಿನಲ್ಲಿ, ದೇವದಾಸನ ವೈರಾಗ್ಯದಲ್ಲಿ ಸೂರಿಗೆ ಕಥೆಗಳು ಕಾಣಿಸುತ್ತವೆ. ಹಳೆಯ ಬಸ್ಸು, ಬಣ್ಣ ಮಾಸಿದ ಗೋಡೆಗಳು, ಸ್ಲಮ್ಮು, ಬಡತನ, ಶಹರದ ಬದುಕು ಎಲ್ಲವೂ ಅಲ್ಲಿ ಪಾತ್ರಗಳೆ. ಹಾಗೆಂದು ಇವರ ಚಿತ್ರಗಳಲ್ಲಿ ದೃಶ್ಯಗಳು ಒಂದರ ಹಿಂದೆ ಒಂದರಂತೆ ರೈಲ್ವೆ ಬೋಗಿಗಳಂತೆ ಜೋಡಿಸಿರುವುದಿಲ್ಲ. ಬದಲಾಗಿ, ಒಂದಷ್ಟು ಹೂವುಗಳ ರಾಶಿ ಹಾಕಿ, ಪೋಣಿಸುವ ಕಸುಬನ್ನು ನೋಡುವ ಕಣ್ಣುಗಳಿಗೆ ವರ್ಗಾಯಿಸುತ್ತಾರೆ. ಅಷ್ಟಲ್ಲದೆ, ರಚನಾತ್ಮಕ ಮನೋಭಾವನೆಯೂ ಸೂರಿಯನ್ನು ಇತರ ನಿರ್ದೇಶಕರಿಂದ ವಿಭಿನ್ನವಾಗಿ ನಿಲ್ಲಿಸುತ್ತದೆ. ಉದಾಹರಣೆಗೆ ಕೆಂಡಸಂಪಿಗೆ ಉರುಫ್ ಗಿಣಿಮರಿ ಕೇಸ್ ಇದು ಭಾಗ 2. ಮುಂದಿನ ಅಥವಾ ಕೊನೆಯ ಭಾಗ ‘ಪಾಪ್ ಕಾರ್ನ್ ಮಂಕಿ ಟೈಗರ್’ ಅನಂತರ ತೆರೆಕಂಡಿತು. ಆದರೆ ಭಾಗ 1 ಕಾಗೆ ಬಂಗಾರ ಇನ್ನಷ್ಟೇ ತೆರೆಗೆ ಹೆಜ್ಜೆಯಿಡಬೇಕಾಗಿದೆ. ಹೀಗೆ ಅಸಾಂಪ್ರದಾಯಿಕ ನಡಿಗೆಯ ಮೂಲಕ ಛಾಪು ಮೂಡಿಸಿದ ಸೂರಿಯ ಚಿತ್ರಜಗದಲ್ಲಿ ಕೆಂಡಸಂಪಿಗೆ ಅಗ್ರೇಸರವಾಗಿ ಕುಳಿತುಬಿಡುತ್ತದೆ. ಇನ್ನು, ಚಿತ್ರದ ಸರಳತೆಗೆ ಇನ್ನಷ್ಟು ಔತಣ ನೀಡಿದ ತ್ರಿಮೂರ್ತಿಗಳೆಂದರೆ, ಸಾಹಿತ್ಯದಲ್ಲಿ ಜಯಂತ ಕಾಯ್ಕಿಣಿ, ಕ್ಯಾಮರಾ ಕಂಗಳಲ್ಲಿ ಸತ್ಯ ಹೆಗಡೆ, ರಾಗ ಸಂಯೋಜನೆಯಲ್ಲಿ ಹರಿಕೃಷ್ಣ. ‘ನೆನಪೆ ನಿತ್ಯ ಮಲ್ಲಿಗೆ, ಕನಸು ಕೆಂಡಸಂಪಿಗೆ’, ‘ಮರೆಯದೆ ಕ್ಷಮಿಸು ನೆನಪಾದರೆ ‘, ಕನಸಲಿ ನಡೆಸು ಬಿಸಿಲಾದರೆ, ಒಲವನೆ ಬಡಿಸು ಹಸಿವಾದರೆ’ ಹೀಗೆ ಎಲ್ಲಾ ಹಾಡುಗಳಲ್ಲೂ ಭಾವದ ಬೆಳಕಿಗೆ ಪದಗಳ ಸನ್ಮಾನವಿದೆ. ವಿಶೇಷತಃ ನೆನಪೆ ನಿತ್ಯ ಮಲ್ಲಿಗೆ ಹೂಗಳ ಬಳಸಿ ರಚಿಸಿದ ರಮಣೀಯ ರೂಪಕ. ಬಸ್ಸಿನ ಒಳಗೆ ಕಣ್ಣು ಮುಚ್ಚಾಲೆ ಆಡುವ ಬೆಳಕಿನ ನಡುವೆ ಅಸ್ಪಷ್ಟವೆಂದು ಕಾಣುವ ಯೋಚನೆಗಳು, ಗಲೀಜು ಯೋಚನೆಗಳು ತುಂಬಿದ ಜಗತ್ತಿನ ಸಂಕೇತಿಯಾದ ಧೂಳು ನುಂಗಿದ ವಾಶ್ ರೂಮುಗಳು, ಸಂತೆಯ ಮಧ್ಯೆ ಮತ್ತೆ ಕಳೆದುಹೋಗುವ ನಾಪತ್ತೆಯಾದ ಜೀವಗಳು, ಸಾವಿನ ಸದ್ದು ಕೇಳಿಸುವ ಕಲ್ಲು ಬಂಡೆಗಳು, ಆಸೆಯ ಮೂಟೆ ಹೊತ್ತ ಬಾವಿ ಎಲ್ಲವೂ ನಿರ್ದೇಶಕರ ಕಲ್ಪನೆಯಂತೆ ಚಿತ್ತಾರವಾಗಿ ಅರಳಿದ್ದು, ಸತ್ಯ ಹೆಗಡೆ ಛಾಯಾಗ್ರಹಣದಲ್ಲಿ. ಜೊತೆಗೆ ಏರಿಳಿತಗಳು ಎದುರಾದಾಗ ಸಂಗೀತದ ಹಿನ್ನೆಲೆಯೂ, ಅಜ್ಜಿಯ ಕೈಹಿಡಿದು ಸಾಗುವ ಮೊಮ್ಮಗನಂತೆ ಹೆಜ್ಜೆ ಹಾಕುವುದು ಹರಿಕೃಷ್ಣರ ಹೆಚ್ಚುಗಾರಿಕೆ. ಹೀಗೆ ಸರಳ, ಸುಂದರ ರೂಪದಲ್ಲಿ ಗುಲಾಬಿಯ ತೋಟದಲ್ಲಿ ಕೆಂಪು ಬಣ್ಣದಿ ಗೀಚಿದ ವೈವಿಧ್ಯಮಯ ಕಥಾ ಹಂದರವೇ ಕೆಂಡಸಂಪಿಗೆ.

ರವಿ ಮತ್ತು ಗೌರಿ ಪಾತ್ರದಲ್ಲಿ ವಿಕ್ಕಿ ಹಾಗೂ ಮಾನ್ವಿತಾ ನೈಜ ಜೋಡಿಗಳೇನೋ ಎಂಬಂತೆ ಅಚ್ಚರಿ ಹುಟ್ಟಿಸುವಂತೆ ನಟಿಸಿದ್ದಾರೆ. ಎಸಿಪಿ ಪುರಂದರನಾಗಿ ರಾಜೇಶ್ ನಟರಂಗ, ಡಿಸಿಪಿಯಾಗಿ ಪ್ರಕಾಶ್ ಬೆಳವಾಡಿಯವರ ಅಭಿನಯದ ಬಗ್ಗೆ ಮಾತನಾಡಿದರೆ ಜಾಮೀನು ರಹಿತ ಅಪರಾಧವಾದೀತು. ಇನ್ನೆಲ್ಲಾ ಕಲಾವಿದರು, ಗುಪ್ತಚರ ಅಧಿಕಾರಿಯಾಗಿ ಶೀತಲ್ ಶೆಟ್ಟಿಯಿಂದ ತೊಡಗಿ ಕ್ಯಾಬ್ ಚಾಲಕನವರೆಗೆ ಯಾರೂ ನಟನೆಯ ಗೋಜಿಗೆ ಹೋಗದೆ, ಕ್ಯಾಮೆರಾವ ಮರೆತು ನಡೆದುಕೊಂಡಿದ್ದಾರೆ ಎನ್ನಬಹುದಷ್ಟೇ. ಹೀಗೆ, ಹತ್ತಿರ ಹತ್ತಿರ ಕೇವಲ 99 ನಿಮಿಷಗಳಷ್ಟೇ ಇರುವ ಚಿತ್ರದ ಕಥೆಯು ಮಾತ್ರ ಹೃದಯದ ರಂಗದಲ್ಲಿ ಸದಾ ಕುಣಿಯುತ್ತಲೇ ಇರುವಂಥದ್ದು ಥೇಟು ಬೆಕ್ಕನ್ನು ಸೆಳೆಯುವ ಮೀನಿನ ಲಾರಿಯ ಸದ್ದಿನಂತೆಯೇ.

ಮುಗಿಸುವ ಮುನ್ನ:
‘ನೀ ನನಗಿಷ್ಟ’ ಎಂದು ಆರಂಭವಾಗುವ ಪ್ರೀತಿ ಸಾಗುವುದು ‘ನೀನಿಲ್ಲದೆ ನನಗೇನಿದೆ’ ಎಂಬ ಹರಿಗೋಲು ಹಿಡಿದು. ಎರಡು ದೇಹ, ಒಂದು ಆತ್ಮ ಎಂಬ ಭಾವದಿ ಜೀವಿಸುವ ಪ್ರೀತಿ ಮಳೆಯಲಿ ಮಿಂದ ಹೂವಿನ ಹಾಗೇ ಮಿನುಗುವುದು, ಕನಸಲಿ ಕಂಡ ದೇವರ ಹಾಗೇ ಸೆಳೆಯುವುದು, ಬದುಕಿನ ಬಣ್ಣವ ಬದಲಾಯಿಸುವುದು ಅದು ಸರಳತೆಯಲ್ಲಿ ಸ್ಥಿರವಾಗಿದ್ದಾಗ. ಶುಭ್ರ ಆಗಸ, ಮೌನ ತೀರದಂತೆ ಬೆಳಗುವ ಒಲವು ಕಾಲಾತೀತ ಒರತೆಯಾದರೆ ಬದುಕು ಕಳೆಗಟ್ಟುವುದು ನಿಸ್ಸಂಶಯ. ಕುವೆಂಪು ಹೇಳಿದ್ದಾರಲ್ಲ
‘ನಾ ನಿನಗೆ, ನೀನೆನಗೆ ಜೇನಾಗುವಾ…
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ, ಹೂವಾಗುವ, ಹಣ್ಣಾಗುವ, ಪ್ರತಿರೂಪಿ ಭಗವತಿಗೆ ಮುಡಿಪಾಗುವ’ ಅಂತೆಯೇ ಬಾಳಬೇಕು.
ಜಯಂತ ಕಾಯ್ಕಿಣಿಯವರ
‘ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು
ನಗುವ ಮುಡಿಸು
ನೀ ನನ್ನ ಪ್ರೇಮಿ ಆದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ’
ಸಾಲಿನಂತೆ ಒಲವು ಎಂದೂ ಮುಗಿಯದ ನಗು ಹೊತ್ತ ಮೊಗವಾಗಬೇಕು, ಪರಿಮಳವ ಬೀರಬೇಕು ಕೆಂಡಸಂಪಿಗೆಯಂತೆ….