ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ಈ ವರುಷದ ಸ್ವಾತಂತ್ರ್ಯ ದಿನವನ್ನು ಸುಮಾರು ಹನ್ನೊಂದು ಸಾವಿರ ಜನರಿಗೆ ಅಮೆರಿಕದ ಪೌರತ್ವ ಕೊಟ್ಟು ವಿಶೇಷವಾಗಿ ಆಚರಿಸುತ್ತಿದೆ. ಅಮೆರಿಕಾದ ಜನ ಸ್ವತಂತ್ರ ಪಡೆದು ತುಂಬಾ ಮುಂದೆ ಹೋಗಿದ್ದಾರೆ. ಪ್ರಪಂಚದ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಬಹುತೇಕ ಎಲ್ಲಾ ವಲಯಗಳಲ್ಲೂ ಬಲಾಢ್ಯ ದೇಶವಾಗಿ ಅಮೆರಿಕಾ ಹೊರಹೊಮ್ಮಿದೆ. ಪ್ರಪಂಚದ ಇತರ ದೇಶಗಳ ತನ್ನ ಪ್ರಭಾವ ಬೀರುವಷ್ಟು ಬೆಳೆದಿದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ಅಮೆರಿಕ ತನ್ನ 248ನೇ ಸ್ವತಂತ್ರೋತ್ಸವವನ್ನು ಗುರುವಾರ ಜೂಲೈ 4ನೇ ತಾರೀಕು ಆಚರಿಸಿಕೊಳ್ಳುತ್ತಿದೆ. ಅದು 1776 ರಲ್ಲಿ ಬ್ರಿಟೀಷರಿಂದ ತನ್ನ ಸ್ವತಂತ್ರ ಪಡೆದುಕೊಂಡಿತು.

ಸ್ವಾತಂತ್ರೋತ್ಸವವು ಒಂದು ದೊಡ್ಡ ಆಚರಣೆಯಾಗಿದ್ದು, ಕುಟುಂಬಗಳು ಒಂದೆಡೆ ಸೇರಿ, ಒಳ್ಳೆಯ ಅಡುಗೆಮಾಡಿಕೊಂಡು, ಕಲ್ಲಂಗಡಿ ಹಣ್ಣನ್ನು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿ, ಬೇಸ್ ಬಾಲ್, ಟಗ್ ಆಫ್ ವಾರ್ ಮುಂತಾದ ಆಟಗಳನ್ನು ಆಡುತ್ತ ಆಚರಿಸಿಕೊಳ್ಳುತ್ತವೆ. ಅಮೆರಿಕಾದ ಬಾವುಟವನ್ನು ಮನೆ ಮನೆಗಳ ಮೇಲೆ ಹಾಗು ಇತರೆ ಕಟ್ಟಡಗಳ ಮೇಲೆ ಹಾರಿಸಲಾಗುತ್ತದೆ. ಆ ದಿನ ಹಲವಾರು ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತವೆ. ದೊಡ್ಡ ನಗರಗಳಾದ ನ್ಯೂಯಾರ್ಕ್ ಹಾಗು ವಾಷಿಂಗ್ಟನ್ ಡಿ.ಸಿ. ಯಲ್ಲಿ ಮೆರವಣಿಗೆ ಮತ್ತು ಹತ್ತು ಹಲವಾರು ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಮೂರು ಅಥವಾ ನಾಲ್ಕು ದಿನ ರಜೆ ಸಿಗುವುದರಿಂದ ಜನ ತಮ್ಮ ಇಷ್ಟದ ಸ್ಥಳಕ್ಕೆ ಪ್ರವಾಸ ಹೋಗುತ್ತಾರೆ.

ಸ್ವಾತಂತ್ರೋತ್ಸವವು ಒಂದು ರಾಷ್ಟ್ರಭಕ್ತಿಯ ಸಂಕೇತವಾಗಿದ್ದು, ಹಲವಾರು ರಾಜಕೀಯ ಧುರೀಣರು ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡು ಅಮೆರಿಕಾದ ಇತಿಹಾಸ, ಜನ ಮತ್ತು ಪರಂಪರೆಯನ್ನು ನೆನಪಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅಮೆರಿಕಾದ ಜನರು ತಮಗೆ ಸ್ವಂತಂತ್ರ ತಂದುಕೊಟ್ಟವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಲಿಬರ್ಟಿ ಪ್ರತಿಮೆ ಸ್ವಾತಂತ್ರ್ಯ ದಿನದ ಒಂದು ಪ್ರತೀಕವಾಗಿದೆ.

ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದು ಮೂನ್ನರು ಐದು ಅಡಿ ಮತ್ತು ಒಂದು ಇಂಚು ಎತ್ತರವಿದೆ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ) ಸ್ಟ್ಯಾಚ್ಯೂ ಆಫ್‌ ಲಿಬರ್ಟಿ (ಸ್ವಾತಂತ್ರ್ಯದ ಪ್ರತಿಮೆ) ಯನ್ನು ‘ಲಿಬರ್ಟಿ ಎನ್ಲೈಟೆನಿಂಗ್‌ ದಿ ವರ್ಲ್ಡ್‌’ ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್‌ 28ರಂದು ಈ ಪ್ರತಿಮೆ ಅನಾವರಣಗೊಂಡಿತು. ಫ್ರಾನ್ಸ್‌ ದೇಶದ ಜನರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್‌ ಕ್ರಾಂತಿ ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. ‘ಸ್ಟೊಲಾ’ ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು, ಹಾಗೂ ಸ್ವಾತಂತ್ರ್ಯ ದಿನಾಂಕ JULY IV MDCCLXXVI ಕೆತ್ತಲಾದ ‘ಟ್ಯಾಬುಲಾ ಅನ್ಸಾಟಾ’ ಫಲಕ ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ. ನ್ಯೂಯಾರ್ಕ್‌ ಬಂದರಿನಲ್ಲಿರುವ ಲಿಬರ್ಟಿ ದ್ವೀಪದ ಮೇಲಿರುವ ಈ ಪ್ರತಿಮೆಯು, ಪ್ರವಾಸಿಗರು, ವಲಸೆಗಾರರು ಮತ್ತು ಹಡಗಿನ ಮೂಲಕ ಬರುವ ಅಮೆರಿಕನ್ನರನ್ನೂ ಸ್ವಾಗತಿಸುತ್ತದೆ. ಫ್ರೆಡೆರಿಕ್‌ ಆಗಸ್ಟ್‌ ಬಾರ್ತೊಲ್ಡಿ ಈ ಪ್ರತಿಮೆಯ ಶಿಲ್ಪಿ. ಇದರ ವಿನ್ಯಾಸಕ್ಕಾಗಿ ಅವರು ಯು.ಎಸ್. ಹಕ್ಕು ಸ್ವಾಮ್ಯ ಪಡೆದಿದ್ದಾರೆ.

ಸಾವಿರದ ಏಳನೂರ ಎಪ್ಪತೈದರಲ್ಲಿ ಹದಿಮೂರು ವಸಾಹತು ಪ್ರದೇಶಗಳು ಮೊದಲಬಾರಿಗೆ ಆಂಗ್ಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಇಳಿಯುತ್ತಾರೆ. ಸಾವಿರದ ಏಳನೂರ ಎಪ್ಪತ್ತಾರರಲ್ಲಿ ಗ್ರೇಟ್ ಬ್ರಿಟನ್ನಿನಲ್ಲಿ ಗುಪ್ತ ಮತದಾನ ನಡೆದು, 1776 ವರುಷದ ಜುಲೈ 4 ದಿನದಂದು ಸ್ವಾತಂತ್ರ್ಯವನ್ನು ಘೋಷಿಸಲಾಗುತ್ತದೆ. ಸಾವಿರದ ಎಂಟನೂರ ಎಪ್ಪತ್ತರಲ್ಲಿ ವೇತನ ರಹಿತ ರಜೆ ಘೋಷಿಸಲಾಗುತ್ತದೆ, ಮತ್ತೆ ಸಾವಿರದ ಒಂಬೈನೂರ ನಲವತ್ತೊಂದರಲ್ಲಿ ವೇತನ ಸಹಿತ ರಜೆಯಾಗಿ ಘೋಷಿಸಲಾಗುತ್ತದೆ.

ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ಈ ವರುಷದ ಸ್ವಾತಂತ್ರ್ಯ ದಿನವನ್ನು ಸುಮಾರು ಹನ್ನೊಂದು ಸಾವಿರ ಜನರಿಗೆ ಅಮೆರಿಕದ ಪೌರತ್ವ ಕೊಟ್ಟು ವಿಶೇಷವಾಗಿ ಆಚರಿಸುತ್ತಿದೆ.

ಅಮೆರಿಕಾದ ಜನ ಸ್ವತಂತ್ರ ಪಡೆದು ತುಂಬಾ ಮುಂದೆ ಹೋಗಿದ್ದಾರೆ. ಪ್ರಪಂಚದ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಬಹುತೇಕ ಎಲ್ಲಾ ವಲಯಗಳಲ್ಲೂ ಬಲಾಢ್ಯ ದೇಶವಾಗಿ ಅಮೆರಿಕಾ ಹೊರಹೊಮ್ಮಿದೆ. ಪ್ರಪಂಚದ ಇತರ ದೇಶಗಳ ತನ್ನ ಪ್ರಭಾವ ಬೀರುವಷ್ಟು ಬೆಳೆದಿದೆ.

ಜನ ಸಾಮಾನ್ಯರಿಗೆ ಅಷ್ಟೇನು ತೊಂದರೆ ಇಲ್ಲದ ಸಮಾಜ ನಿರ್ಮಿಸಿದ್ದಾರೆ. ಒಳ್ಳೆಯ ರಸ್ತೆಗಳಿವೆ, ನೀರಿಗೆ, ವಿದ್ಯುತ್ತಿಗೆ ಯಾವುದೇ ತೊಂದರೆ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಇಲ್ಲ. ಒಂದು ವರದೊಂದಿಗೆ ಒಂದು ಶಾಪವೂ ಇರುವಂತೆ ಅಮೆರಿಕಾದಲ್ಲಿಯೂ ಕೆಲವು ಪರಿಹಾರ ಕಾಣದ ಸಮಸ್ಯೆಗಳಿವೆ. ಒಂದು ದೊಡ್ಡ ಸಮಸ್ಯೆ ಎಂದರೆ ಗನ್ ಶೂಟಿಂಗ್. ಗನ್ ಶೂಟಿಂಗ್‌ನಲ್ಲಿ ಭಯೋತ್ಪಾದನೆಯಲ್ಲಿ ಅಸು ನೀಗಿದವರಿಗಿಂತಲೂ ಹೆಚ್ಚು ಜನ ಕೊಲ್ಲಲ್ಪಟ್ಟಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆಯಾದರೂ, ಈ ಸಮಸ್ಯೆ ನಿಲ್ಲುತ್ತಿಲ್ಲ. ಬಹುತೇಕ ಎಲ್ಲರ (ಶೇಕಡ ಸುಮಾರು 80 ಕುಟುಂಬಗಳ ಹತ್ತಿರ) ಹತ್ತಿರವೂ ಗನ್ ಇರುವುದರಿಂದ ಹೇಗೆ, ಏಕೆ, ಎಂದು ಅದು ಸಿಡಿಯುತ್ತದೆಯೋ ಹೇಳಲು ಕಷ್ಟ. ಪ್ರೇಮವಿವಾಹಗಳು, ವಿಭಕ್ತ ಕುಟುಂಬಗಳು, ಒಂಟಿತನ, ಡಿಪ್ರೆಶನ್ ಮುಂತಾದವು ಹೆಚ್ಚಾಗಿ ಮನಸಿನ ಸಮತೋಲನ ಕಾಪಾಡಿಕೊಳ್ಳಲು ಕಷ್ಟಪಡುತ್ತಿರುವವರು ಹಲವರು. ಜನ ಸಂಖ್ಯೆ ಕಡಿಮೆ ಇದ್ದ ದಿನಗಳಲ್ಲಿ, ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಗನ್ ಪರವಾನಿಗೆ ನೀಡುತ್ತಿದ್ದುದ್ದು ಈಗ ಕಂಟಕವಾಗಿ ಅಮೇರಿಕಾದ ಜನರನ್ನು ಕಾಡುತ್ತಿದೆ.

ಮತ್ತೊಂದು ದೊಡ್ಡ ಸಮಸ್ಯೆ ಮಾದಕ ವಸ್ತುಗಳದು. ಇದು ಮಕ್ಕಳನ್ನು ಹೆಚ್ಚು ಕಾಡುತ್ತಿದೆ, ಕುತೂಹಲಕ್ಕೆ ರುಚಿ ನೋಡಿದ ಪ್ರೌಢಶಾಲೆಯ ಮಕ್ಕಳು ಅದನ್ನು ಒಂದು ವ್ಯಸನ ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತು ಮಾರಾಟ ಸುಲಭವಾಗಿ ಹಣ ಮಾಡುವ ದಂಧೆಯಾಗಿದ್ದು, ಕೆಲವು ಸೋಮಾರಿ ಜನ ಇಂತಹ ದಂಧೆಯಿಂದ ಹಣ ಗಳಿಸುತ್ತಾರೆ, ಆದರೂ ಒಂದಿಲ್ಲ ಒಂದು ದಿನ ಪೋಲೀಸಿನವರಿಗೆ ಸಿಕ್ಕಿ ಬೀಳುತ್ತಾರೆ.

ಇಂತಹ ವ್ಯಸನಕ್ಕೆ ಬೀಳದಂತೆ ಮಕ್ಕಳನ್ನು ಕಾಯುವುದು, ಜನನಿಬಿಡ ಪ್ರದೇಶಕ್ಕೆ ತಡರಾತ್ರಿ ಹೋಗದಿರುವುದು, ಇಂತಹ ಸಂಕಷ್ಟಗಳಿಂದ ದೂರ ಇರುವ ವಿಧಾನ, ಸಾಮಾನ್ಯವಾಗಿ ಭಾರತೀಯರು ತುಂಬಾ ಎಚ್ಚರಿಕೆಯಿಂದ ಇರುವುದರಿಂದ ಇಂತವುಗಳಿಂದ ತಪ್ಪಿಸಿಕೊಳ್ಳುತ್ತಾರೆ.

ಅಮೆರಿಕಾದ ಜನ ಸ್ವತಂತ್ರಗೊಂಡು, ಹಣ, ಅಂತಸ್ತು ಎನ್ನುವ ತೋರಿಕೆಗಳಿಂದ ದೂರ ಸರಿದಿದ್ದರೂ, ಭಾರತದಿಂದ ಹೋಗಿ ನೆಲಸಿರುವವರಿಗೆ ಇಂತವುಗಳಿಂದ ತಪ್ಪಿಸಿಕೊಳ್ಳಲು ಇನ್ನೂ ಆಗಿಲ್ಲ. ಸ್ನೇಹಿತರು ದೊಡ್ಡ ಮನೆ ಖರೀದಿಸಿದರು ಎಂದು ತಾವೂ ಖರೀದಿಸಲು ಪ್ರಯತ್ನ ಪಡುವುದು. ಯಾರೋ ಯಾವುದೋ ಬ್ರಾಂಡ್ ಕಾರು ಖರೀದಿಸಿದರೆಂದು ತಾವೂ ಖರೀದಿ ಮಾಡುವುದು, ಹಾಗೆ ಮಾಡಲು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವುದು. ಅದನ್ನು ತೀರಿಸಲು ಪರದಾಡುವುದು ಇವೆಲ್ಲ ನಡೆಯುತ್ತದೆ. ಕೆಲವರು ತಮ್ಮ ಹಣ, ಅಂತಸ್ತನ್ನು ತೋರ್ಪಡಿಸಿಕೊಳ್ಳುವುದೂ ನಡೆಯುತ್ತದೆ. ಇತರೆ ಸಾಮಾಜಿಕ ಒತ್ತಡಗಳಿಗೆ ಒಳಪಡುವುದೂ ನಡೆಯುತ್ತದೆ.

ಮನುಷ್ಯನಿಗೆ ತನಗೆ ಏನು ಬೇಕು ಎನ್ನುವ ಸ್ಪಷ್ಟ ಅರಿವು ಮೂಡಲು ಒಂದು ಪ್ರಯತ್ನ ಬೇಕಾಗುತ್ತದೆ. ಇಲ್ಲದಿದ್ದರೆ ಬಾಳು ನಮ್ಮ ಕೈಯಲ್ಲಿ ಇರದೆ ಯಾರದೋ ಕೈಗೆ ಜಾರುತ್ತದೆ. ಸಮಾಜ ನಮ್ಮನ್ನು ನಿಯಂತ್ರಣ ಮಾಡಲು ತೊಡಗುತ್ತದೆ, ಸಮಾಜದ ಕೆಲವು ಉತ್ತಮ ಕಟ್ಟು ಪಾಡುಗಳಿಗೆ ಒಳಗಾಗುವುದು ಒಳ್ಳೆಯದಾದರೂ, ಕೆಲವು ಅನಗತ್ಯ ಒತ್ತಡಗಳಿಗೆ ಆಸ್ಪದ ಕೊಡದೆ ಜೀವಿಸುವುದು ಅಗತ್ಯ. ಇಂತಹ ಒಂದು ಅಗತ್ಯ ಕೆಲವರು ಕಂಡುಕೊಂಡಿದ್ದಾರೆ ಮತ್ತು ಸುಖವಾಗಿ ಜೀವಿಸುತ್ತಿದ್ದಾರೆ.