ಅಷ್ಟೊಂದು ಪ್ರೀತಿಸಿ ನನಗೋಸ್ಕರ ಸಾಯಲೂ ಕೂಡ ಮುಂದಾಗಿದ್ದ ಮಹೇಶ್ ಇವನೇನಾ ಎಂದು ಗಂಗಾ ದಂಗುಬಡಿದು ಹೋದಳು. ಗಂಗಾ ಹಾಸ್ಟೆಲ್‌ನಲ್ಲಿ ಓದಿದ ಹುಡುಗಿ, ಈ ಜಗತ್ತಿನ ಎಲ್ಲ ಆಯಾಮಗಳ ಅರಿವು ಕೂಡ ಅವಳಿಗಿತ್ತು. ಆದರೂ ಅವನ ಮಾತಿನ ಬಾಣ ಅವಳ ಎದೆಯಲ್ಲಿ ಹೊಕ್ಕು ರಕ್ತಕಾರುವಂತೆ ಚುಚ್ಚುತ್ತಿತ್ತು. “ಮಹೇಶ ನಿಜಕ್ಕೂ ನನ್ನ ಪ್ರೀತಿಸಿದ್ನಾ..? ಅಥವಾ ನನ್ನ ರೂಪ ಪಡಿಯೋಕೆ ನಾಟ್ಕಾ ಆಡಿದ್ನಾ? ನನ್ನ ಮನಸ್ಸನ್ನ ಅರ್ಥ ಮಾಡಿಕೊಳ್ಳದೇ ಹೋದ ಇವನೆಂಥ ಗಂಡ? ಇದೆಂಥ ಪ್ರೀತಿ. ನನ್ನ ಬದುಕು ಅಂಬಿಗನಿಲ್ಲದ ದೋಣಿಯಾಯಿತಾ?” ಪ್ರಶ್ನೆ ಕಾಡತೊಡಗಿದವು. ಯಾವುದಕ್ಕೂ ಉತ್ತರವಿರಲಿಲ್ಲ.
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರೇಣುಕಾ ಹೆಳವರ ಕತೆ “ಗಿಳಿಯು ಪಂಜರದೊಳಿಲ್ಲ”

ಅಗಲವಾದ ರಸ್ತೆಗಳು, ರಸ್ತೆಗಳ ಮೇಲೆಲ್ಲ ವಾಹನಗಳು, ಕಿಕ್ಕಿರಿದ ಜನಸಂದಣಿ, ಬೆರಗುಗಣ್ಣಿಂದ ಎರಡು ಜಡೆ, ಫ್ರಾಕ್ ಹಾಕಿಕೊಂಡ ಪುಟ್ಟ ಪೋರಿ ಟಾಂಗಾದಲ್ಲಿ ಕುಳಿತು ವಿಸ್ಮಯದಿಂದ ಇದ್ಯಾವ ಜಗತ್ತು? ನಾನ್ಯಾಕೆ ಇಲ್ಲಿಗೆ ಬಂದೆ ಎಂಬಂತೆ ಆ ಕಡೆ ಈ ಕಡೆ ನೋಡುತ್ತಿದ್ದಳು. ಟಾಂಗಾದವನು ಈ ಪೋರಿ ತುಂಬಾ ಸುಂದರವಾಗಿದ್ದಾಳೆ, ಇವಳು ನಿಮ್ಮ ಮಗಳಾ? ಎಂದು ಪಕ್ಕದಲ್ಲಿ ಕುಂತಿದ್ದವನನ್ನು ಕೇಳಿದ. “ಇಲ್ಲ ಇವಳಮ್ಮ ದೇವ್ದಾಸಿ, ನಾನು ಪಾಪ ಅಂತ ಇವಳನ್ನು ಶಾಲೆಗೆ ಸೇರಿಸಲು ಬಂದೀನಿ…” ಎಂದ. ಆ ಪುಟ್ಟ ಪೋರಿ ಏನೂ ಅರಿಯದೆ ಪಿಳಿ ಪಿಳಿ ಕಣ್ಣು ಬಿಡುತ್ತ ತನ್ನ ಪಕ್ಕದಲ್ಲಿ ಕುಳಿತ ಮನುಷ್ಯನನ್ನು ಮೆಲ್ಲಗೆ ಹೆದರುತ್ತ ಕೇಳಿತು, “ನನ್ಯಾಕೆ ಇಲ್ಲಿಗೆ ಕರ‍್ಕೊಂಡು ಬಂದೀರಿ…?”ಮತ್ತೆ “ನಮ್ಮವ್ವನ್ ಹತ್ತಿರ ನನ್ನ ಬಿಡ್ರಿ” ಎಂದು ಒಂದೇ ಸಮನೆ ರಾಗ ಎಳೆದು ಅಳತೊಡಗಿದಳು. ಆ ಮನುಷ್ಯ ಅವಳನ್ನು ಸಮಾಧಾನಗೈಯ್ಯಲು ಓಡಾಡುವ ಮೋಟಾರು ತೋರಿಸಿದ, ಜನರನ್ನು ತೋರಿಸಿದ, ಅಂಗಡಿಗಳನ್ನು ತೋರಿಸಿದ. ಆದರೆ ಆ ಪೋರಿಗೆ ಸಮಾಧಾನವಾಗಲೇ ಇಲ್ಲ. ಕೊನೆಗೆ ಅವನು ಟಾಂಗಾ ಬದಿಗೆ ನಿಲ್ಲಿಸಿ ಕೆಳಗಿಳಿದು ರಸ್ತೆ ಪಕ್ಕ ಜಿಲೇಬಿ ಕರಿಯುತ್ತಿದ್ದ ಹುಡುಗನಿಂದ ಒಂದೆರಡು ಜಿಲೇಬಿ ತಂದುಕೊಟ್ಟ. ಆ ಪುಟ್ಟ ಹುಡುಗಿ ಅಳು ನಿಲ್ಲಿಸಿ ಜಲೇಬಿಪೊಟ್ಟಣ ಕೈಗೆ ತೆಗೆದುಕೊಂಡಳು.

ಇನ್ನೂ ಚಿಕ್ಕ ವಯಸ್ಸು, ಒಮ್ಮೆ ಹಠ, ಒಮ್ಮೆ ನಗು, ಒಮ್ಮೆ ಅಳು, ಒಮ್ಮೆ ಮುನಿಸು, ಏನೂ ಅರಿದ ಮುಗ್ದ ಮನಸ್ಸು, ತನ್ನ ಪುಟ್ಟ ಕೈಗಳಿಂದ ಪೊಟ್ಟಣ ಬಿಚ್ಚಿ ಜಿಲೇಬಿ ತಿನ್ನಲು ಮುಂದಾದಳು. ಟಾಂಗಾ ಕಪ್ಪನೆಯ ಡಾಂಬರ್‌ನ ಮೇಲೆ ಓಡುತ್ತಲಿತ್ತು. ಮಗು ಜಿಲೇಬಿ ತಿನ್ನುತ್ತ ಆ ಕಡೆ ಈ ಕಡೆ ತನ್ನ ಪುಟ್ಟ ಕಣ್ಣುಗಳನ್ನು ಅರಳಿಸಿಕೊಂಡು ನೋಡುತ್ತಲೇ ಇತ್ತು. ಟಾಂಗಾ ಒಂದು ಕಾಂಪೌಂಡ್‌ನ ಗೇಟಿನ ಒಳಗೆ ಬಂತು. ಅದು ವಿಸ್ತಾರವಾದ ಜಾಗ. ದೊಡ್ಡ ದೊಡ್ಡ ಮನೆಗಳು. ಆ ಮನುಷ್ಯ ಕೆಳಗಿಳಿದು ಪುಟ್ಟ ಮಗು ಹಾಗೂ ಸಾಮಾನಿನ ಲಗೇಜು ಇಳಿಸಿಕೊಂಡು ಟಾಂಗಾದವನಿಗೆ ದುಡ್ಡು ಕೊಟ್ಟು ಮಗುವಿನ ಸಮೇತ ಆ ಬಂಗಲೆಯೊಳಗೆ ಹೋದ. ಕುರ್ಚಿಯ ಮೇಲೆ ಕುಳಿತಿದ್ದ ಹೆಂಗಸೊಬ್ಬಳಿಗೆ ನಮಸ್ಕರಿಸಿದ. ಓ…. ಬಂದ್ರಾ, ಕೂಡ್ರಿ ಎಂದು ಅವಳು ಇವರಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೇಳಿದಳು. ಪುಟ್ಟ ಪೋರಿ ಹೆದರುತ್ತ ಆ ಮನುಷ್ಯನ ಕೈಯ್ಯ ಕಿರು ಬೆರಳ ಹಿಡಿತವನ್ನು ಇನ್ನೂ ಬಿಗಿ ಮಾಡಿದಳು. ಆತ ಆಕೆಯನ್ನು ಪ್ರೀತಿಯಿಂದ ಬೆನ್ನುಮೇಲೆ ಕೈಯ್ಯಾಡಿಸಿ ತಾನು ಕುಳಿತ ಕುರ್ಚಿಯ ಪಕ್ಕದಕುರ್ಚಿಯ ಮೇಲೆ ಕೂಡಿಸಿದ. ಅವರಿಬ್ಬರೂ ಅವಳಿಗೆ ಬಾರದ ಭಾಷೆಯಲ್ಲಿ ಏನೇನೋ ಮಾತಾಡಿಕೊಂಡರು. ಆನಂತರ ಆ ಹೆಂಗಸು ಒಂದು ಫಾರಂನ ಮೇಲೆ ಆ ಮನುಷ್ಯನ ಸಹಿ ಹಾಕಿಸಿಕೊಂಡಳು.
ಅದು ತುಂಬಾ ಮುದ್ದಾದ ಮಗು. ಉದ್ದವಾದ ಕೂದಲು, ನೀಳವಾದ ಮೂಗು, ಹುಣ್ಣಿಮೆಯ ಬೆಳದಿಂಗಳಿನಂಥ ಮೈ ಬಣ್ಣ, ಕಾಮನಬಿಲ್ಲಿನಂತೆ ತಿದ್ದಿ ತೀಡಿದ ಹುಬ್ಬು, ಜೇನು ಕಣ್ಣು, ಅವಳ ಮುಖ ಅತ್ಯಂತ ಆಕರ್ಷಕವಾಗಿತ್ತು.ತನ್ನ ತಾಯಿಯಂತೆಯೆ ತುಂಬಾ ಅಂದವಾಗಿದ್ದಳು. ಆತ ಆ ಪೋರಿಯನ್ನು ಒಮ್ಮೆ ನೋಡಿ”ಏನು ಅದೃಷ್ಟನೇ ನಿಂದು ” ಅಂದುಕೊಂಡು ನಿಟ್ಟುಸಿರಿಟ್ಟ. ಆ ಹೆಂಗಸು ಅವಳನ್ನು ಬಳಿ ಕರೆದು ತನ್ನ ಎರಡೂ ಕೈಯಿಂದ ಬಾಚಿ ತಬ್ಬಿಕೊಂಡಳು. ಕೆನ್ನೆಗೆ ಒಂದು ಮುತ್ತನಿಟ್ಟು “ಇವಳ ಹೆಸರೇನು?” ಎಂದು ಕೇಳಿದಳು.

“ಗಂಗಾ ಅಂತ ಮೇಡಂ…”

“ಇವರ ತಂದೆ ತಾಯಿ ಇದ್ದಾರಾ…?”

“ಹಾಂ… ಇವಳಿಗೆ ತಾಯಿ ಇದ್ದಾಳೆ, ತಂದೆ ಇಲ್ಲ, ಇವಳ ತಾಯಿ ನಮ್ಮೂರಿನವಳೆ. ರಾಧಮ್ಮ ಅಂತ. ಇವರಿಗೆ ತುಂಬಾ ಬಡತನ. ನಾನೇ ಈ ಮಗೂನ ನಿಮ್ ಹತ್ರ ಬಿಟ್ರೆ ಎರಡ್ ಅಕ್ಷರ ಕಲ್ತು ಏನಾರ ಉದ್ದಾರ ಆಗಲಿ ಅಂತಾ ಅಮ್ಮನ್ನೊಪ್ಸಿ ಕರ್ಕೊಂಡು ಬಂದೀನಿ. ಅವಳು ಇದು ನನ್ನಂಗಾಗೋದು ಬ್ಯಾಡ ಅಂತ ಒಪ್ಪಿದಳು.” ಎಂದು ಗಂಗಾಳ ತಲೆ ನೇವರಿಸಿ, “ಇವ್ರು ಹೇಳಿದಂಗ ಕೇಳ್ಬೇಕು, ಶಾಲಿಗೆ ಹೋಗ್ಬೇಕು, ಜಾಣೆ ಅನ್ನಿಸ್ಕೊಬೇಕು” ಎಂದು ಹೇಳಿ ಆಕೆಗೆ ವಂದಿಸಿ ಹೊರಟು ಹೋದ.

ಗಂಗಾಳ ಕಣ್ಣಲ್ಲಿ ನೀರು ಜಿನುಗತೊಡಗಿತು. ಆ ವ್ಯಕ್ತಿ ಹೋದ ದಾರಿಯನ್ನೇ ನೋಡುತ್ತ ಬಾಡಿದ ಮುಖ ಹೊತ್ತು ಪಿಳಿಪಿಳಿ ಕಣ್ಣುಬಿಡುತ್ತಿರುವಾಗ ಮೇಡಂ ಅವಳ ಭುಜದ ಮೇಲೆ ಕೈಯ್ಯಿಟ್ಟು, ಗದ್ದ ಹಿಡಿದು ಸಮಾಧಾನಿಸಿ, ಅವಳನ್ನು ಒಂದು ಕೋಣೆಗೆ ಕರೆದುಕೊಂಡು ಹೋದರು. ಆ ಕೋಣೆಯ ತುಂಬೆಲ್ಲ ಹೆಣ್ಣು ಮಕ್ಕಳು. ಎಲ್ಲರಿಗೂ ಒಂದೊಂದು ಮಂಚ. ಮಂಚದ ಮೇಲೆ ಹಾಸಿಗೆ, ದಿಂಬು. ಅವರ ಸಾಮಾನುಗಳನ್ನು ಇರಿಸಿಕೊಳ್ಳಲು ಒಂದೊಂದು ಟ್ರಂಕ್ ಇದ್ದವು. ಮೇಡಂ ಎಲ್ಲರನ್ನೂ ಕರೆದು “ಇವ್ಳು ಗಂಗಾ, ಇನ್ಮೇಲೇ ಇವ್ಳು ಇಲ್ಲೇ ಇರ್ತಾಳೆ. ಇವ್ಳನ್ನ ನೀವು ಚನ್ನಾಗಿ ನೋಡ್ಕೋಳಿ, ಜಗಳ ಮಾಡ್ಬೇಡಿ…” ಎಂದಳು.

ಎಲ್ಲ ಮಕ್ಕಳು “ಸರಿ ಮೇಡಂ…” ಎಂದರು ಜೋರಾಗಿ. ಮೇಡಂ ಹೋದ ನಂತರ ಗಂಗಾ ತನಗೆಂದು ತೋರಿದ ಬೆಡ್ ಮೇಲೆ ಕುಂತಳು. ಮಕ್ಕಳು ಅವಳ ಸುತ್ತ ನೆರೆದರು.

“ಗಂಗಾ, ನಿನ್ನ ಇಲ್ಲಿಗೆ ಯಾರ್ ತಂದು ಸೇರ್ಸಿದ್ರು? ನಿಮ್ದು ಯಾವೂರು?” ಎಂದು ಕೇಳಿದಳು ರಮಾ.

“ನನ್ನ ನಮ್ಮೂರಿನ ತಿಮ್ಮಪ್ಪ ಸಾವ್ಕಾರ ಅಂತ ದೊಡ್ಡು ಸಾವ್ಕಾರ. ಅವ್ರ ತಂದು ಇಲ್ಲಿ ಬಿಟ್ರು. ನಮ್ಮೂರು ಆಳಂದ ಐತಿ…” ಎಂದಳು.
ತಕ್ಷಣ “ಆ ಸಾವ್ಕಾರ ಯಾಕ ನಿನ್ನ ತಂದು ಇಲ್ಲಿ ಬಿಟ್ಟ…? ಅವ್ರಿಗೂ ನಿಮ್ಗೂ ಏನ್ ಆಗ್ಬೇಕು” ಎಂದು ಸಾವಿತ್ರಿ ಕಡೆಯಿಂದ ಪ್ರಶ್ನೆ ತೂರಿಬಂತು. ಪಾಪ ಪುಣ್ಯ ಏನನ್ನೂ ಅರಿದ ಗಂಗಾ, “ನಂಗೊತ್ತಿಲ್ಲ… ಅವ್ವ ಕಳ್ಸಿದ್ಲು ನಾ ಬಂದೆ” ಎಂದಳು.

“ನಿಮ್ಮವ್ವ ನಿನ್ನ ನೋಡೋಕೆ ಬರಲ್ವಾ…” ಎಂದು ಕೇಳಿದಳು ಮಂಜಿ. ಅವ್ವ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಗಂಗಾ ಅಳಲಾರಂಭಿಸಿದಳು. ಎಲ್ಲ ಪುಟ್ಟ ಪುಟ್ಟ ಹುಡುಗಿಯರೇ, ಅವರಲ್ಲೇ ಸ್ವಲ್ಪ ದೊಡ್ಡವಳಾದ ಹೇಮಾ ಬಂದು ಗಂಗಾಳನ್ನು ಸಮಾಧಾನಿಸಿ, ಎಲ್ಲ ಹುಡುಗಿಯರನ್ನ ತಮ್ಮ ಜಾಗಕ್ಕೆ ಕಳಿಸಿ ಗಂಗಾಳಿಗೆ ಊಟ ಮಾಡಿ ಮಲಗಲು ಹೇಳಿದಳು.

ಗಂಗಾ ಒಬ್ಬಳೇ ಹಾಸಿಗೆ ಮೇಲೆ ಮಲಗಿ, ಅವ್ವನ ನೆನಪಾಗಿ ಕಣ್ಣೀರು ಸುರಿಸಲಾರಂಭಿಸಿದಳು. ಗಂಗಾ ಇಲ್ಲಿಗೆ ಬರುವಾಗ ಅವ್ವ “ನೀ ಗುಲ್ಬರ್ಗಾಕ್ಕ ಹೋಗಿ ಶಾಲಿನ್ಯಾಗ ಚನ್ನಾಗಿ ಓದ್ಕೋಬೇಕು. ನಾನ್ ನಿನ್ನ ನೋಡಾಕ ವಾರಕ್ಕೊಮ್ಮೆ ಬರ್ತೀನಿ” ಅಂತ ಹೇಳಿ ಕಳುಹಿಸಿದ್ದಳು. ಗಂಗಾ ಬಿಕ್ಕುತ್ತಲೇ ನಿದ್ರೆಗೆ ಜಾರಿದ್ದಳು.

ಮರುದಿವಸ ಕಿಟಕಿಯಿಂದ ಸೂರ್ಯನ ಕಿರಣಗಳು ಆ ಎಳೆಯ ಮುಗ್ದ ಮುಖದ ಮೇಲೆ ಬಿದ್ದಾಗ ಎದ್ದ ಗಂಗಾಳಿಗೆ ಅದು ಹೊಸ ಜಾಗವೆಂಬ ನಿಜ ಮನಸ್ಸಿಗೆ ಬಂತು. ರಮಾ, ಸಾವಿತ್ರಿ, ಮಂಜಿ ಎಲ್ಲರೂ ಸ್ನಾನಕ್ಕಾಗಿ ಕಚ್ಚಾಡ್ತಾ ಇದ್ರು. ಗಂಗಾ ಎದ್ದವಳೇ ಸೀದಾ ತನಗೆ ಬಲವೆನ್ನಿಸಿದ ಹೇಮಾ ಹತ್ತಿರ ಹೋಗಿ ಕುಳಿತಳು. ಅವರ ಗಲಾಟೆ ಮುಗಿದ ಮೇಲೆ ಹೇಮಾ-ಗಂಗಾ ಇಬ್ಬರೂ ರೆಡಿಯಾಗಿ ಕಾಂಪೌಂಡಿನ ಒಳಗೇ ಇರುವ ಶಾಲೆಗೆ ಹೋದರು. ಗಂಗಾಳಿಗೆ ಹೇಮಾ ತರಗತಿಯ ರೂಮ್ ತೋರಿಸಿ ತನ್ನ ತರಗತಿಗೆ ಹೋದಳು. ಗಂಗಾ ತುಂಬಾ ಮುದ್ದಾಗಿದ್ದಳು ಎಂದಷ್ಟೇ ಅಲ್ಲ ಆಟ-ಪಾಠದಲ್ಲೂ ತುಂಬಾ ಚೂಟಿಯಾಗಿದ್ದ ಹುಡುಗಿ ಅನ್ನುವುದು ಬೇಗನೇ ಎಲ್ಲರಿಗೂ ಅರಿವಾಯಿತು. ಕೆಲ ಕಾಲದ ತಾರೀಫಿನಿಂದಲೇ ಅವಳು ಇಡೀ ಕ್ಲಾಸ್‌ಗೆ ಫಸ್ಟ್ ಬರುವಂತಾಯಿತು.

ಗಂಗಾಳಿಗೆ ನನ್ನವ್ವ ಇವತ್ತು ಬರ್ತಾಳೆ, ನಾಳೆ ಬರ್ತಾಳೆ ಎಂದು ಕಾದು ಕಾದು ಸಾಕಾಗಿತ್ತು. ಅವಳವ್ವ ಮಾತ್ರ ಬರಲೇ ಇಲ್ಲ. ಹೀಗೆ ದಿನ, ವಾರ, ತಿಂಗಳು ವರ್ಷಗಟ್ಟಲೆ ಕಾದ ಗಂಗಾಳಿಗೆ ಕೊನೆಗೆ ತನ್ನ ತಾಯಿಯ ಮುಖವೇ ಸ್ಮೃತಿ ಪಟಲದಿಂದ ಮೆಲ್ಲಗೆ ಮಾಸಿ ಹೋದಂತಾಯಿತು. ದಿನಕಳೆದಂತೆ ತನ್ನ ತಾಯಿಯನ್ನು ಮರೆತು ಗೆಳತಿಯರೊಡನೆ ಸಂತೋಷವಾಗಿ ಕಾಲ ಕಳೆಯಲು ಆರಂಭಿಸಿದಳು. ಓದಿನಲ್ಲಿ ಮುಳುಗಿಹೋದಳು.

ಅವಳು ಈಗ ಹೈಸ್ಕೂಲ್ ಮುಗಿಸಿದಳು. ಗಂಗಾ ಆ ಸಂಸ್ಥೆಗೆ ಮೊದಲ ರ‍್ಯಾಂಕ್ ತಂದುಕೊಟ್ಟಿದ್ದಳು. ಕಾಲೇಜು ಕಟ್ಟೆ ಹತ್ತುವ ಸಮಯ ಬಂತು. ಮೇಡಂ ಅವಳನ್ನು ಕರೆದು “ನಿನ್ನ ಮನಸ್ಸಿನ ಆಸೆಯೇನು” ಎಂದು ಕೇಳಿದ್ದರು. ಸೈನ್ಸ್ ಮಾಡಿ ಮುಂದೆ ಡಾಕ್ಟರ್ ಆಗಿ ಬಡ ರೋಗಿಗಳ ಸೇವೆ ಮಾಡೋ ಕನಸು ಹೊತ್ತಿದ್ದಳು ಅವಳು. ಅದನ್ನೇ ಮೇಡಂ ಹತ್ತಿರ ನಿವೇದಿಸಿಕೊಂಡಳು. ಗಂಗಾ ಸೈನ್ಸ್ ಆಯ್ಕೆ ಮಾಡಿ ಕಾಲೇಜು ಮೆಟ್ಟಿಲೇರಿದಳು. ಮೇಡಂ ಡೋನರ್‌ಗಳ ಸಹಾಯದಿಂದ, ಕಾಲೇಜು ಆಡಳಿತ ಮಂಡಳಿಯ ಸಹಕಾರದಿಂದ ಪ್ರತಿಷ್ಠಿತ ಕಾಲೇಜನ್ನೇ ಸೇರಿದ್ದಳು. ಒಳ್ಳೆಯ ಶ್ರದ್ಧಾವಂತ ಗೆಳತಿಯರ ಒಡನಾಟ, ಉತ್ತಮ ಪಾಠ ಪ್ರವಚನಗಳಿಂದ ಗಂಗಾ ಸೈನ್ಸ್‌ನಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು ಸೈ ಎನಿಸಿಕೊಂಡಳು. ಸಿಇಟಿಯಲ್ಲಿ ಅವಳು ಮೊದಲ ಐವತ್ತರಲ್ಲಿ ಜಾಗ ಪಡೆದುಬೆಂಗಳೂರಿನಲ್ಲಿ ಉಚಿತ ವೈದ್ಯಕೀಯ ಸೀಟು ಸಿಕ್ಕಿತ್ತು. ತಾನು ಬೆಳೆದ ಶಾಲೆ, ಡಾರ್ಮಿಟರಿ ಮಾತ್ರವಲ್ಲ ಮೇಡಂ ಹಾಗೂ ತನ್ನ ಸಹಪಾಟಿಗಳಾದ ಹೇಮಾ, ಸಾವಿತ್ರಿ, ಮಂಜು ಎಲ್ಲರನ್ನೂ ತೊರೆದು ಬೆಂಗಳೂರಿಗೆ ಹೋಗಬೇಕಾಗಿ ಬಂದು ಗಂಗಾ ನೋವು, ಆತಂಕ, ಕಳವಳಗೊಂಡು ಒಬ್ಬಳೇ ಕುಳಿತು ಅಳಲಾರಂಭಿಸಿದಳು. ಸುದ್ದಿ ತಿಳಿದ ಮೇಡಂ ಗಂಗಾಳನ್ನು ಸಮಾಧಾನಪಡಿಸಿದರು, “ಹೆದರಬೇಡ. ನೀನು ಸಾಧಕಿಯಾಗಬೇಕು. ಬೆಂಗ್ಳೂರಿನಲ್ಲಿ ನಮ್ದೊಂದು ಬ್ರಾಂಚ್ ಇದೆ. ಅಲ್ಲಿ ಮೇರಿ ಅಂತ ನನ್ನ ಫ್ರೆಂಡ್ ಒಬ್ರು ಇದ್ದಾರೆ. ನಾನು ಕಾಗ್ದ ಬರ್ದು ಕೊಡ್ತೇನಿ. ಅವರು ನಿನಗೆ ಹೆಲ್ಪ್ ಮಾಡ್ತಾರೆ. ಆರಾಮಾಗಿ ಓದಿ ಡಾಕ್ಟರ್ ಆಗಿ ಬಂದು ಇಲ್ಲೇ ರೋಗಿಗಳ ಸೇವೆ ಮಾಡೊಂತಿ, ಅಳ್ಬಾರ್ದು” ಎಂದು ಸಮಾಧಾನ ಮಾಡಿದರು.

ಗಂಗಾಳನ್ನ ಮೇಡಂ ಮತ್ತು ಎಲ್ಲ ಗೆಳತಿಯರು ಕಣ್ದುಂಬಿ ಹಾರೈಸಿದರು. ಗಂಗಾ ಕಾಲೇಜಿಗೆ ಹಾಜರಾದಳು. ತುಂಬಾ ಮೌನಿಯಾದ ಗಂಗಾ, ಕಾಲೇಜಿಗೆ ಮೊದಲ ದಿನ ಹೋದಾಗ ಎಲ್ಲರೂ ಇವಳನ್ನು ಗೋಳು ಹೊಯ್ದುಕೊಂಡಿದ್ದೂ ಇದೆ. ಆನಂತರ ಇವಳ ಸರಳತೆ, ಜಾಣ್ಮೆಗೆ ಶರಣಾಗಿ ಗಂಗಾಳ ಸ್ನೇಹ ಸಂಪಾದಿಸಲು ಒಬ್ಬೊರಾಗಿ ಬಯಸಿದರು. ಆದರೆ ಗಂಗಾ ತಾನಾಯಿತು ತನ್ನ ಓದಾಯಿತು ಎಂದುಕೊಂಡಿದ್ದಳು.

ಕಾಲ ಉರುಳುತ್ತಿತ್ತು. ಅವಳ ಸರಳತೆ, ಸ್ನಿಗ್ಧ ಸೌಂದರ್ಯಕ್ಕೆ ಹಲವರಂತೆ ತಾನೂ ಮರುಳಾಗಿದ್ದ ಸಹಪಾಠಿ ಮಹೇಶ ಅವಳಿಗೆ ಹತ್ತಿರವಾಗಲು ಹೆಣಗಿದ್ದ. ತನ್ನ ಪ್ರೀತಿಯನ್ನು ನಿವೇದಿಸಿಕೊಂಡ ಕೂಡ. ಗಂಗಾ ನಯವಾಗಿ ತಿರಸ್ಕರಿಸಿದ್ದಳು. ಮಹೇಶ್ ಯತ್ನಿಸಿ ಯತ್ನಿಸಿ ಹುಚ್ಚನಂತಾದ. ಸೂಸೈಡ್ ಮಾಡಿಕೊಂಡುಬಿಡುವುದಾಗಿ ಹೆದರಿಸಿದ. ಅವಳು ಅಂತಹ ದುರ್ಬಲ ಮನಸ್ಸಿನವನಿಗೆ ಏನೂ ಸಾಧ್ಯವಿಲ್ಲ ಎನ್ನಿಸಿದೆಯೆಂದು ಹೇಳಿಯೇ ಬಿಟ್ಟಳು. ಅವಳ ಓದು ಮುಗಿದು ಇಂಟರ್ನ್‌ಶಿಪ್ ಶುರುವಾಗಿತ್ತು.

ಹೀಗೆ ಹಲವಾರು ತಿಂಗಳು ಹತಾಶನಾಗಿ ಬೆನ್ನಿಗಂಟಿದ ಮಹೇಶ್ ಎಂಥದೋ ಹರಾಕಿರಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ. ವಿಷಯ ತಿಳಿದ ಗಂಗಾ ಮಹೇಶ್‌ನನ್ನು ನೋಡಲು ಬಂದಳು. ಆತ ಐಸಿಯುನಲ್ಲಿದ್ದ. ಅವಳ ಮನಸ್ಸು ಅವನ ಈ ಸ್ಥಿತಿಗೆ ನಾನೆ ಕಾರಣವೆ ಎಂಬ ಸುಳಿಗೆ ಸಿಲುಕಿತು. ಅವನು ಗುಣಮುಖನಾಗಿ ವಾರ್ಡಿಗೆ ಶಿಫ್ಟ್ ಆಗುವವರೆಗೂ ಪ್ರತಿದಿನ ಬೆಳಿಗ್ಗೆ, ಸಂಜೆ ಅವನನ್ನು ನೋಡಿ ಹೋಗುತ್ತಿದ್ದಳು. ಯಾಕೋ ಅವಳಲ್ಲಿ ಮೂಡಿದ್ದ ಅವನು ಹೇಡಿಯೆಂಬ ಭಾವ ದೂರಸರಿದು ಅವನ ಪ್ರೀತಿಯ ಉತ್ಕಟತೆ ಮಾತ್ರ ಮನಸ್ಸಿನಲ್ಲಿ ಉಳಿಯುವುದಾಯಿತು. ಆ ಮುಂಜಾನೆ ಅವಳು ವಾರ್ಡ್‌ಗೆ ಭೇಟಿಯಿತ್ತಾಗ ಮಹೇಶ್ ನಿದ್ರೆಯಲ್ಲಿದ್ದ. ಅವಳ ಮನಸ್ಸು ತುಂಬಿ ಬಂತು. ಅವನ ಹಣೆಗೆ ಹೂಮುತ್ತು ನೀಡಿ ಅಲ್ಲಿಂದ ಹೊರಟು ಹೋದಳು.

ಅವಳ ಇಂಟರ್ನ್‌ಶಿಪ್ ಮುಗಿದು ಅವಳಿಗೆ ಪದವಿ ದೊರೆಯಿತು. ಕೆಎಂಸಿಯಲ್ಲಿ ನೊಂದಾಯಿಸಿಕೊಂಡು ಆಳಂದಕ್ಕೆ ಹೊರಡುವ ಸನ್ನಾಹದಲ್ಲಿ ಅವಳಿದ್ದಳು. ಮಹೇಶ್ ಏನು ಮಾಡುವನೋ? ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಿದೆಯೇ ಎಂಬ ಶಂಕೆ ಅವಳಲ್ಲಿ ಮೊಳೆದಿತ್ತು. ಒಮ್ಮೊಮ್ಮೆ ಅವನ ಕಡೆಗೆ ಸೆಳೆತವೊಂದು ಬಲವಾಗಿ ಸೆಳೆಯುವುದು. ಅವನಾದರೋ ದಿನಕ್ಕೆ ಹತ್ತು ಕಾಲ್ ಮಾಡುವ. ಆಗೀಗೊಮ್ಮೊಮ್ಮೆ ಅವರು ಒಂದೆಡೆ ಮೀಟ್ ಆಗುವರು. ಎಲ್ಲಿಯಾದರೂ ಕಾಫಿ ತಿಂಡಿ. ಅಷ್ಟೊಂದು ದೀರ್ಘ ಮಾತು. ಯಾವ್ಯಾವುದೋ ವಿಚಾರ.

ಪ್ರೀತಿ ಗಟ್ಟಿಯಾಗಿ ಗೆಳೆಯರ ಸಮ್ಮುಖ ಮಹೇಶ ಗಂಗಾಳನ್ನು ಮದುವೆಯಾಗಿ ತನ್ನೂರಿಗೆ ಕರೆದುಕೊಂಡು ಹೋಗಲು ರೆಡಿಯಾದ. ಬಳಿಕ ತಂದೆ ತಾಯಿಗೆ ವಿಚಾರ ತಿಳಿಸಿ ಶ್ರಮ ಪಟ್ಟು ಅವರನ್ನು ಸಮಾಧಾನಪಡಿಸಿದ. ಅವರು ಕೇಳಿದ್ದ ಮೊದಲ ಪ್ರಶ್ನೆ ಹುಡುಗಿಯ ಕುಲ ಗೋತ್ರ, ಜಾತಿ, ಇತ್ಯಾದಿ. ಮಹೇಶನಿಗೆ ಆ ಪ್ರಶ್ನೆ ಮೂಡಿದ್ದು ಆಗಲೇ ಮೊದಲು. ಇಷ್ಟೂ ದಿನ ಅವನು ಆ ಕುರಿತು ಯೋಚಿಸಿಯೇ ಇರಲಿಲ್ಲ. ಮನುಷ್ಯ ಜಾತಿ ಅಂದಿದ್ದ.

ಗಂಗಾ ಇಲ್ಲಿನ ಸಿಸ್ಟರ್‌ಗೆ ಮತ್ತೆ ಮೇಡಂಗೆ ಮಾತ್ರ ವಿಷಯ ತಿಳಿಸಬೇಕಿತ್ತು. ತಿಳಿಸಿದಾಗ ಸಂತೋಷಪಟ್ಟರು. ಅವರ ಮುಂದೆ ಜಾತಿಯ ಪ್ರಶ್ನೆಗಳಿರಲಿಲ್ಲ.

ಮಹೇಶನೂರಿಗೆ ಇಬ್ಬರೂ ಬಸ್ ಹತ್ತಿದರು. ಗಂಗಾ ಮಾತ್ರ ಮಹೇಶನ ಮನೆಯವರು ತನ್ನನ್ನು ಒಪ್ಪಿಕೊಳ್ತಾರೋ ಇಲ್ಲವೋ ಎಂಬ ಆತಂಕದಲ್ಲಿಯೇ ಇದ್ದಳು. ಇಬ್ಬರೂ ಬಸ್‌ನಲ್ಲಿ ಕುಂತಲ್ಲಿಯೇ ಆಲೋಚನೆಗೆ ಜಾರಿದರು. ಆನಂತರ ಮಹೇಶ ಕಿಟಕಿಯ ಅಕ್ಕಪಕ್ಕ ಕೈ ತೋರಿಸಿ ಏನೇನೋ ಮಾತಾಡುತ್ತಿದ್ದ. ಗಂಗಾಳಿಗೆ ವಾಸ್ತವ ಜಗದ ಅರಿವೇ ಇರಲಿಲ್ಲ. ಮಹೇಶ ಅವಳ ಭುಜ ತಟ್ಟಿ ಎಚ್ಚರಿಸಿ ಕಾರಣ ಕೇಳಿದ. ತನ್ನ ಮನಸ್ಸಿನ ಆತಂಕ ಹೇಳಿದರೆ ಎಲ್ಲಿ ಅವನಿಗೆ ನೋವಾಗುತ್ತೋ ಎಂದು ಕಾರಣ ಹೇಳದೆ ಮರೆಮಾಚಿದಳು. ಗಂಗಾಳಿಗೆ ಉಂಟಾದ ಚಿಂತೆಯಿಂದಾಗಿ ಮನಸ್ಸಿನಲ್ಲಿ ಯಾವುದೇ ಉಲ್ಲಾಸವೂ ಇರಲಿಲ್ಲ. ಮಹೇಶ ಅದೂ ಇದು ಅಂತ ಮಾತನಾಡುತ್ತಲೇ ಇದ್ದ. ಗಂಗಾ “ಆಹಾ, ಊಂ…” ಎಂದು ಚುಟುಕಾಗಿಯೇ ಉತ್ತರಿಸುತ್ತಿದ್ದಳು. ದೂರದಲ್ಲಿ ಎಲ್ಲೋ ಮಳೆ ಕಾಲುಬಿಟ್ಟಿತ್ತು. ಆ ಕಡೆಯಿಂದ ಬೀಸಿದ ಗಾಳಿ ತಂಪಾಗಿದ್ದು ಸ್ವಲ್ಪ ಹಿತವೆನಿಸಿತು. ಬಸ್ ನಿಲ್ದಾಣ ಬಂದೇಬಿಟ್ಟಿತು. ಅಲ್ಲಿ ಇಳಿದು ಇಬ್ಬರೂ ಟೀ ಕುಡಿದು ಬಸ್ ಕಾದರು.

ಗಂಗಾಳಿಗೆ ನನ್ನವ್ವ ಇವತ್ತು ಬರ್ತಾಳೆ, ನಾಳೆ ಬರ್ತಾಳೆ ಎಂದು ಕಾದು ಕಾದು ಸಾಕಾಗಿತ್ತು. ಅವಳವ್ವ ಮಾತ್ರ ಬರಲೇ ಇಲ್ಲ. ಹೀಗೆ ದಿನ, ವಾರ, ತಿಂಗಳು ವರ್ಷಗಟ್ಟಲೆ ಕಾದ ಗಂಗಾಳಿಗೆ ಕೊನೆಗೆ ತನ್ನ ತಾಯಿಯ ಮುಖವೇ ಸ್ಮೃತಿ ಪಟಲದಿಂದ ಮೆಲ್ಲಗೆ ಮಾಸಿ ಹೋದಂತಾಯಿತು. ದಿನಕಳೆದಂತೆ ತನ್ನ ತಾಯಿಯನ್ನು ಮರೆತು ಗೆಳತಿಯರೊಡನೆ ಸಂತೋಷವಾಗಿ ಕಾಲ ಕಳೆಯಲು ಆರಂಭಿಸಿದಳು. ಓದಿನಲ್ಲಿ ಮುಳುಗಿಹೋದಳು.

ಗುಲ್ಬಗಾದಿಂದ ಆಳಂದ ಕೇವಲ 45 ನಿಮಿಷದ ದಾರಿ. ಗಂಗಾಳ ಮನಸ್ಸು ಭಾರೀ ಹೊಯ್ದಾಟದಲ್ಲೇ ಇತ್ತು. ಯೋಚನೆಯಲ್ಲೇ ಅವಳು ಬೆದರಿ ಬಾಯಾರಿದ್ದಳು. ಮಹೇಶ್ ನೀರಿನ ಬಾಟಲ್ ತಂದ. ಬಾಟಲ್ ಮುಚ್ಚಳ ತೆಗೆದು ನೀರು ಕುಡಿದಳು. ಮೈಯೆಲ್ಲಾ ಬೆವರಿದ್ದಳು. ಮಹೇಶ ಇದನ್ನು ಗಮನಿಸಿ “ಹೇ, ಯಾಕೆ ಹಿಂಗೆ ಹೆದರಿದ್ದೀಯ? ನಿನ್ ಜೊತೆ ನಾನಿಲ್ವಾ… ಇಡೀ ಪ್ರಪಂಚವೇ ಎದುರಾದ್ರೂ ನಾನು ನಿನ್ನ ಕೈ ಬಿಡೊಲ್ಲ. ಅಪ್ಪ ಅಮ್ಮ ಮಾವ ಎಲ್ರೂ ಚನ್ನಾಗಿದ್ದಾರೆ. ನನ್ನ ನಂಬು” ಎಂದ. ಅವಳಿಗೆ ಸಮಾಧಾನವಾಗಲಿಲ್ಲ. ಮನಸ್ಸು ಮಾತ್ರ ಕಡಲ ತೆರೆಗೆ ಸಿಕ್ಕ ದೋಣಿಯಂತೆ, ಸೂತ್ರವಿಲ್ಲದ ಗಾಳಿಪಟದಂತೆ ಅಲೆಮಾರಿಯಾಗಿತ್ತು.

ಬಸ್ ನಿಂತಾಗ ಮಹೇಶ್ ಗಂಗಾಳನ್ನು ಊರು ಬಂತು ಇಳಿ ಎಂದ. ಕಿಟಕಿಯಿಂದ ಹೊರ ನೋಡಿದಳು. “ಆಳಂದ ಬಸ್ ಸ್ಟ್ಯಾಂಡ್” ಎಂದು ಬರೆದಿತ್ತು. ದೀರ್ಘವಾದ ಉಸಿರೆಳೆದುಕೊಂಡು ಬಸ್‌ನಿಂದ ಇಳಿದಳು. ಇಬ್ಬರೂ ಆಟೋ ಹತ್ತಿದರು. ಮಹೇಶ ತೋರಿದಂತೆ ಗಲ್ಲಿ ಸುತ್ತಿ ಒಂದು ಮನೆ ಮುಂದೆ ಬಂದು ಆಟೋ ನಿಂತಿತು. ಮಹೇಶ್ ಆಟೋದಿಂದ ಇಳಿದು ಹಣ ನೀಡಿ ಗಂಗಾಳನ್ನು ಕರೆದುಕೊಂಡು ಮನೆಯ ಒಳಗೆ ಹೋದ.

ಗಂಗಾಳನ್ನು ಮನೆಯ ಹಾಲ್‌ನಲ್ಲಿ ಕೂರಿಸಿದ. ಯಾರೂ ಇವರ ಹಾದಿ ಕಾಯುತ್ತಿರಲಿಲ್ಲ. ಮಹೇಶ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಕರೆದು ಪರಿಚಯ ಕೂಡಾ ಮಾಡಿಸದೆ ಒಂದು ಕೋಣೆ ಸೇರಿದ. ಇಬ್ಬರೂ ಬಾಗಿಲು ಹಾಕಿಕೊಂಡರು. ಸ್ವಲ್ಪ ಸಮಯದ ನಂತರ ಇಬ್ಬರೂ ಹೊರ ಬಂದರು. ಆ ವ್ಯಕ್ತಿ ಸೋಫಾದಲ್ಲಿ ಕೂತು ಗಂಗಾಳನ್ನು ನೀನು ಯಾರವ್ವಾ? ಯಾವ ಊರು? ನಿನ್ನ ತಂದೆ ತಾಯಿ ಹೆಸರೇನು ಎಂದು ಪ್ರಶ್ನೆಗಳ ಮಳೆ ಸುರಿಸಿದ. ಗಂಗಾ ಅಳುಕುತ್ತಲೇ ತನ್ನ ಪ್ರವರ ಹೇಳಿದಳು. ಶಂಕಾದೃಷ್ಟಿಯಲ್ಲಿಯೇ ಅವಳನ್ನು ನೋಡುತ್ತಿದ್ದ ಆ ವ್ಯಕ್ತಿ “ಹಾಗಾದ್ರೆ ನಿನ್ ಹೆಸ್ರು ಗಂಗಾ ಅಲ್ವಾ…!?” ಕೇಳಿದ.

ತಕ್ಷಣ ಗಂಗಾಳಿಗೂ ಶಾಕ್!! ಅವಳು “ಹೌದು…” ಎಂದು ತಲೆಯಲ್ಲಾಡಿಸಿದಳು. ರೋಷ ಉಕ್ಕಿದಂತಾದ ಆ ವ್ಯಕ್ತಿ ಎದ್ದು ಮಹೇಶನಿಗೆ ಎರಡೇಟು ಬಾರಿಸಿದ. ಫೋನ್ ಹಚ್ಚಿ ಮಹೇಶನ ತಂದೆ ತಾಯಿಯನ್ನು ಅವರ ಮನೆಗೆ ಕರೆಸಿದ. ಮಹೇಶನನ್ನು ಎಲ್ಲರೂ ಬೈತಿದ್ದರು. ಗಂಗಾ ಮಾತ್ರ ಅಪರಾಧಿಯಂತೆ ಸುಮ್ಮನಿದ್ದಳು. ಮಹೇಶನ ತಂದೆ ತಾಯಿ ಅವರ ಮಾವನ ಮನೆಗೆ ಬಂದರು. ಅವರಿನ್ನೂ ಬಾಗಿಲು ತಲುಪಿರಲಿಲ್ಲ. ಆಗಲೇ “ಬಾ ಅಕ್ಕ ಬಾ, ನಿನ್ನ ಮಗ ಬಹಳಾ ಘನಂದಾರಿ ಕೆಲ್ಸ ಮಾಡ್ಕೊಂಡ್ ಬಂದಾನ… ಡಾಕ್ಟರ್ ಓದಿ ಬಾ ಅಂದ್ರ ನಿಂಗ ಸೊಸಿ ತಂದಾನ. ಯಾರ್ನಾಂತಿ? ದೇವ್ದಾಸಿ ಮಗಳನ್ನ…”

ಗಂಗಾ ಸಿಡಿಲು ಬಿದ್ದಂಗೆ ಹಾರಿಬಿದ್ದಳು. ತನ್ನ ಜನ್ಮದ ರಹಸ್ಯ ಇಲ್ಲಿಯವರೆಗೂ ಅವಳಿಗೆ ಗೊತ್ತಿರಲಿಲ್ಲ! ಅವಳು ಮನೆ ಬಿಟ್ಟಾಗ ಅವಳಷ್ಟು ಚಿಕ್ಕವಳು.

“ಇವನ್ಯಾರು? ನನಗಿಂತ ಇವನಿಗೆ ನನ್ನ ಬಗ್ಗೆ ಗೊತ್ತಿದೆ.” ಎಂದು ಅಬ್ಬರಿಸಿದಳು. ಸದಾ ಮೌನಿಯಾಗಿ ಹಸನ್ಮುಖಿಯಾಗಿದ್ದ ಗಂಗಾಳನ್ನು ಮಾತ್ರ ನೋಡುತ್ತಿದ್ದ ಮಹೇಶ, ಅಲ್ಲಿ ಅಬ್ಬರಿಸಿದ ಸಿಡಿಲಮರಿಯಂತಾದ ಗಂಗಾಳನ್ನು ನೋಡಿ ಒಂದು ಕ್ಷಣ ಸ್ಥಂಭೀಭೀತನಾದ. ಆ ವ್ಯಕ್ತಿ “ಅದ್ಯಾಕವ್ವಾ ಹಂಗೆ ಹಾರತಿ. ನಾನಾ ನಿನ್ನ ಸ್ಕೂಲಿಗೆ ಕರ್ಕೊಂಡು ಹೋಗಿ ಸೇರ‍್ಸಿದೋನು.” ಎಂದ. ಗಂಗಾಳಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. “ಹಂಗಾದ್ರ ನೀವು ತಿಮ್ಮಪ್ಪ ಸಾವ್ಕಾರ‍್ರಾ? ನನ್ ತಾಯಿ ಯಾರು? ಅವಳನ್ನು ನೀವು ಹೆಂಗೆ ದೇವದಾಸಿ ಅನ್ತೀರಿ” ಅಂತ ಕೊರಳುದುಂಬಿ ಕೇಳಿದಳು. ತಿಮ್ಮಪ್ಪ ಅಬ್ಬರಿಸುತ್ತ “ಸಾಕ್ಷಿ ಕೇಳ್ತೀಯಾ ಸಾಕ್ಷಿ… ನಾನೇನೇ ದಂತ ಸಾಕ್ಷಿ… ನಿಮ್ಮವ್ವ ದಲಿತ ಜಾತೇಳ್ವು, ರಾಧಮ್ಮ ಅಂತ ಅವಳ್ ಹೆಸ್ರು. ಅವ್ಳು ದೇವ್ದಾಸಿಯಾದಾಗ ನಾನೇ ಅವಳನ್ನು ಇಟ್ಟುಕೊಂಡಿದ್ದೆ. ನೀನು ದೇವದಾಸಿ ಆಗೋದು ಬ್ಯಾಡಾ. ಏನರಾ ಮಾಡಿ ಈಕಿನ ಸಾಲಿಗೆ ಹಾಕ್ರಿ ಸಾವ್ಕರ‍್ರ ಅಂತ ಕಾಡಿ ಬೇಡಿದ್ಲು. ನಾನೇ ಹೋಗ್ಲಿ ಪಾಪ ಅಂತ ನಿನ್ನನ್ನ ಸಿಟಿಲಿರೋ ಕಿರಿಸ್ತಾನದವರ ಧರ್ಮದ ಸಾಲಿಗೆ ಸೇರ‍್ಸಿದ್ದೆ. ಆಮೇಲೆ ನಿಮ್ಮವ್ವ ಅದೇನೋ ರೋಗ ಹತ್ತಿ ಸತ್ತೋದ್ಲು. ಆದ್ರ ಈಗ್ ನೀ ಬಂದು ನಮ್ ಹುಡ್ಗನ್ ಮದ್ವೆಯಾಗಿ ನಮ್ ಮಾನ ಮರ್ವಾದಿ ಕಳೀಯಾಕ್ ಹೊಂಟಿಯಾ…” ಎಂದ. ಬಳಿಕ ಮಹೇಶ ತಾಯ ಕಡೆ ತಿರುಗಿ “ಇವ್ಳೇ ನಿಮ್ಮ ಸೊಸಿ, ಇವ್ಳನ್ನ ಮನಸಾರೆ ಇಷ್ಟಪಟ್ಟು ಮದ್ವಿಯಾಗಿದೀನಿ. ದಯಮಾಡಿ ಮನಿ ಸೇರಿಸ್ಕೋ …” ಎಂದು ಗೋಗರೆದ. ಅವನಪ್ಪ ಬುಸುಬುಸು ಕಾವಿನಂತೆ ಕೆರಳಿ ದಮ್ಮು ಹೆಚ್ಚಾದವನಂತೆ ಏದುಸಿರು ಬಿಡತಿದ್ದ. ಮಹೇಶ ಎಂಥದಂದರೂ “ನೀ ಬೇಕಾದ್ರೆ ಇವ್ಳ ಜತಿ ಹಾಳಾಗಿ ಹೋಗು, ಈ ದೇವ್ದಾಸಿ ಹೆಣ್ಣನ್ನ ಸೊಸಿ ಅಂತ ಒಪ್ಕೊಳ್ಳೊದಿಲ್ಲ.” ಎಂದು ಕಡ್ಡಿ ಮುರ್ದಂಗ ಹೇಳಿಬಿಟ್ಟರು ಅವರು.

ಮಹೇಶ ಗಂಗಾಳ ಕೈ ಹಿಡಿದು “ಈ ಮನ್ಯಾಗ ಒಂದು ಕ್ಷಣ ಇರೋದ್ ಬ್ಯಾಡ, ನಾವೆಲ್ಲಾದ್ರೂ ಹೋಗಿ ಹಾಯಾಗಿ ಬದ್ಕೋಣ ಬಾ” ಎಂದು ಕರೆದುಕೊಂಡು ಹೋದ. ಗಂಗಾಳ ಮನಸ್ಸು ಒಂದುಕಡೆ ತನ್ನ ಅವ್ವನ ಬದುಕನ್ನು ಕೆದಕಿದವನ ಮೇಲೆ ಬೆಂಕಿ ಉಗುಳುವಂತಾಗಿತ್ತಾದರೂ ಮಹೇಶ ತನ್ನ ಬೆಂಬಲಕ್ಕೆ ನಿಂತಿದ್ದು ಕಂಡು ಉಮ್ಮಳ ಕಡಿಮೆಯಾದಂತೆನಿಸಿತು. ಅವನ ಹಿಂದೆ ಹೊರಟಳು. ಆಳಂದದಲ್ಲೇ ಜನಸೇವಾ ಮಾಡಬೇಕಂತ ಒಂದು ಮನೆ ಮಾಡಿ ಇಬ್ಬರೂ ಉಳಿದರು. ಮಹೇಶನ ಮಾವ, ತಂದೆ ತಾಯಿ ಮಾತ್ರ ಮಗನ ಮಮಕಾರವನ್ನೂ ತೊರೆದು ಊರಲ್ಲೆಲ್ಲ ಇವಳು ದೇವದಾಸಿ… ದೇವದಾಸಿ… ಎಂದು ಹಬ್ಬಿಸಿದರು. ಕೆಲವ್ರು ಪೋಕರಿಗಳು ಮಹೇಶನಿಗೆ “ನಿನ್ನ ಹೆಂಡ್ತಿ ದೇವ್ದಾಸಿಯಂತ… ಎಷ್ಟು ದುಡ್ ಬೇಕಾದ್ರೂ ಕೇಳು ನಮ್ ಹತ್ರಾನು ಒಂದ್ ಸರಿ ಕಳ್ಸು…” ಎಂದು ಮುಖಕ್ಕೆ ಹೊಡೆದಂತೆ ಕೇಳ್ತಿದ್ರು.

ಇದೆಲ್ಲರಿಂದ ಬೇಸತ್ತ ಮಹೇಶ ಈಚೆಗೆ ಗಂಗಾಳ ಮೇಲೆ ಸಿಡಿಮಿಡಿಗೊಳ್ತಿದ್ದ. ಗಂಗಾಳಿಗೂ ಸಹ ಅಕ್ಕಪಕ್ಕದವ್ರು “ನಿಮ್ಮವ್ವ ದೇವ್ದಾಸಿಯಂತ, ನೀನೂ ದೇವ್ದಾಸಿಯಂತ, ಖರೇನಾ…?” ಎಂದು ಕೇಳುತ್ತಿದ್ದರು. ಹಿಂದೆ ಮುಖಕ್ಕೆ ಸೆರಗು ಹಚ್ಚಿ ನಗುತ್ತಿದ್ದರು. ಇದರಿಂದ ಮನನೊಂದ ಗಂಗಾ ಇದನ್ನೆಲ್ಲ ಮಹೇಶನ ಬಳಿ ತೋಡಿಕೊಂಡಳು. ಮಹೇಶ ಕೋಪದಿಂದ “ನನ್ ಕರ್ಮ ನಿನ್ನಂತವ್ಳನ್ನ ಕಟ್ಕೊಂಡು ನಾನ್ ಅನ್ಬವಿಸ್ಬೇಕಾಗಿದೆ. ಪ್ರೀತಿ ಪ್ರೇಮ ಅಂತ ನಿನ್ ಜತಿ ಬಾಳ್ವೆ ಮಾಡೋಕೆ ಬಂದೆ ನೋಡು, ನಂಗೆ ನಾನ್ ಹೊಡ್ಕೊಬೇಕು. ಎಲ್ಲಿಗಾದ್ರೂ ಹೋಗಿ ಸಾಯಿ, ಆಗ್ಲೆ ನಂಗೆ ನೆಮ್ಮದಿ. ಆಮೇಲಾದ್ರೂ ನೆಮ್ಮದಿ ಸಿಕ್ತೈತಿ. ತಲೆ ಎತ್ತಿ ಬಾಳಾಕ್ ಆಗ್ತಿಲ್ಲ ನಿನ್ನಿಂದ. ಥೂ… ದೇವ್ದಾಸಿ ಮಗಳು ಅಂತ ಮೊದ್ಲೇ ಗೊತ್ತಿದ್ರೆ ನಿನ್ ಮೂಸಿಕೂಡ ನೋಡ್ತಿರ‍್ಲಿಲ್ಲ…” ಎಂದು ಹೊರನಡೆದಿದ್ದ.

ಅಷ್ಟೊಂದು ಪ್ರೀತಿಸಿ ನನಗೋಸ್ಕರ ಸಾಯಲೂ ಕೂಡ ಮುಂದಾಗಿದ್ದ ಮಹೇಶ್ ಇವನೇನಾ ಎಂದು ಗಂಗಾ ದಂಗುಬಡಿದು ಹೋದಳು. ಗಂಗಾ ಹಾಸ್ಟೆಲ್‌ನಲ್ಲಿ ಓದಿದ ಹುಡುಗಿ, ಈ ಜಗತ್ತಿನ ಎಲ್ಲ ಆಯಾಮಗಳ ಅರಿವು ಕೂಡ ಅವಳಿಗಿತ್ತು. ಆದರೂ ಅವನ ಮಾತಿನ ಬಾಣ ಅವಳ ಎದೆಯಲ್ಲಿ ಹೊಕ್ಕು ರಕ್ತಕಾರುವಂತೆ ಚುಚ್ಚುತ್ತಿತ್ತು. “ಮಹೇಶ ನಿಜಕ್ಕೂ ನನ್ನ ಪ್ರೀತಿಸಿದ್ನಾ..? ಅಥವಾ ನನ್ನ ರೂಪ ಪಡಿಯೋಕೆ ನಾಟ್ಕಾ ಆಡಿದ್ನಾ? ನನ್ನ ಮನಸ್ಸನ್ನ ಅರ್ಥ ಮಾಡಿಕೊಳ್ಳದೇ ಹೋದ ಇವನೆಂಥ ಗಂಡ? ಇದೆಂಥ ಪ್ರೀತಿ. ಹೌದು ನಾನು ಇವನ ಪ್ರೀತಿಯನ್ನ ಒಪ್ಪಿಕೊಂಡು ತಪ್ಪು ಮಾಡಿದ್ನಾ? ಯಾರೋ ಆಡಿದ ಮಾತಿಗೆ ಇಷ್ಟು ತಲೆಕೆಡಿಸಿಕೊಂಡು ಸಾಯಿ ಎನ್ನುವ ಮಟ್ಟಕ್ಕೆ ಮಾತನಾಡಬೇಕಾದ್ರೆ ಇದೂ ಒಂದು ಪ್ರೀತಿನಾ? ನನ್ನ ಬದುಕು ಅಂಬಿಗನಿಲ್ಲದ ದೋಣಿಯಾಯಿತಾ?” ಪ್ರಶ್ನೆ ಕಾಡತೊಡಗಿದವು. ಯಾವುದಕ್ಕೂ ಉತ್ತರವಿರಲಿಲ್ಲ. ಬಾಲ್ಯ ನೆನಪಿಗೆ ಬಂತು. ಮಹದಾಕಾಂಕ್ಷೆಯ ಅವ್ವ, ಹಾಸ್ಟೆಲ್‌ಗೆ ಬಂದು ತನ್ನನ್ನ ಬಿಟ್ಟು ಹೋದ ಸಾವ್ಕಾರ, ಮೇಡಂ ಹಾಗೂ ತನ್ನ ಗೆಳತಿಯರು ಎಲ್ಲರೂ ಸ್ಮೃತಿಪಟಲದಲ್ಲಿ ಹಾದು ಹೋದರು. ಅವಳಿಗೆ ಮಹೇಶ್‌ನ ವ್ಯಕ್ತಿತ್ವ ತುಂಬಾನೇ ಕಾಡತೊಡಗಿತು. “ಇಷ್ಟು ದಿನ ನನ್ನ ಬದುಕಿಗೆ ಮಹೇಶನೇ ಇದ್ನಾ…! ಇಲ್ಲವಲ್ಲ, ಅವನಿಲ್ಲದೆ ಇದ್ದಾಗ ಆಗದ ನೋವು ಅವನು ಬಂದಮೇಲೆ ಶುರುವಾಯಿತು. ಅದೂ ಮದ್ವೆಯಾದಮೇಲೆ. ನನ್ನ ನೆಮ್ಮದಿ, ಶಾಂತಿ ಎಲ್ಲವನ್ನೂ ಇಡಿ ಇಡೀಯಾಗಿ ನುಂಗಿ ಹಾಕಿದ ಮದುವೆ ಹಾಗೂ ತಾಳಿ ಕಟ್ಟಿದ ಇವನು ನನ್ನ ಬಾಳಿಗೆ ಇದ್ದು ಪ್ರಯೋಜನವೇನು? ನಾನು ಹೆಣ್ಣಾದ ಮಾತ್ರಕ್ಕೆ, ದೇವ್ದಾಸಿ ಹೊಟ್ಟೇಲಿ ಹುಟ್ಟಿದ ಮಾತ್ರಕ್ಕೆ ಬದುಕುವ ಯಾವ ಅರ್ಹತೆಯೂ ಇಲ್ವಾ?” ಕೊನೆಗೆ ಏನೋ ನಿರ್ಧಾರ ಮಾಡಿ ಒಂದು ಹಾಳೆಯಲ್ಲಿ ಏನೋ ಗೀಚಿದಳು. ಬಟ್ಟೆ ಬರೆ ಎತ್ತಿಕೊಂಡು ಬಾಗಿಲು ಮುಂದು ಮಾಡಿ ಹೊರನಡೆದಳು.

ಹೊರಗೆ ಹೋದ ಮಹೇಶ್ ಮನೆಗೆ ಬಂದಾಗ ಬಾಗಿಲು ಮುಚ್ಚಿತ್ತು. ಎಷ್ಟೇ ಬಡಿದರೂ ಬಾಗಿಲು ತೆಗೆಯಲೇ ಇಲ್ಲ. ಕೂಗಿ ಕೂಗಿ ಸಾಕಾಗಿ ಬಾಗಿಲು ಜೋರಾಗಿ ದೂಡಿದಾಗ ಚಿಲಕ ಹಾಕಿಲ್ಲದಿದ್ದರಿಂದ ಅದು ತಾನಾಗಿಯೇ ತೆರೆದುಕೊಂಡಿತು. ಒಳಗೆ ಹೋಗಿ ನೋಡಿದರೆ ಗಂಗಾ ಇರಲಿಲ್ಲ! ಮಹೇಶ ಅವಳಿಗಾಗಿ ಮನೆಯೆಲ್ಲಾ ಹುಡುಕಾಡಿದ. ಕೊಂಚ ಗಾಬರಿಯಾಯಿತು. ಅವಳು ಬರೆದಿಟ್ಟ ಕಾಗದ ಕಣ್ಣಿಗೆ ಬಿತ್ತು. ತೆಗೆದು ನೋಡಿದ, “ಮಹೇಶ್, ಇನ್ನು ನಿನ್ನ ಜೊತೆ ಬದುಕಲು ನನಗಾಗದು. ನನ್ನಿಂದ ನಿನಗೆ ಇನ್ಯಾವುದೇ ತೊಂದರೆ ಬರೋದಿಲ್ಲ. ನೆಮ್ಮದಿಯಿಂದಿರು. ನಾನು ನಿನ್ನಿಂದ ದೂರ ಹೋಗುತ್ತಿದ್ದೇನೆ. ಹಾಗಂತ ಈ ಸಮಾಜಕ್ಕೆ ಹೆದರಿ ಸಾಯುವ ಹೆಣ್ಣು ನಾನಲ್ಲ. ಸಾಯಲು ನಾನ್ಯಾವ ತಪ್ಪೂ ಮಾಡಿಲ್ಲ. ಆದರೆ ಇಂಥ ಹೇಸಿ ಜನರ ಮಧ್ಯೆ ನಾನು ಬದುಕಲಾರೆ. ಈ ಜನರ ಅಗತ್ಯ ಕೂಡ ನನಗಿಲ್ಲ. ಅಗಸನ ಮಾತಿಗೆ ರಾಮ ಸೀತೆಯನ್ನು ಕಾಡಿಗಟ್ಟಿದಂಥ ಆದರ್ಶಗಳನ್ನು ಇಟ್ಟುಕೊಂಡ ರಾಜ್ಯ ನಮ್ಮದು. ನೀನು ನನ್ನ ಈ ಜನರ ಮಾತಿನಿಂದಾಗಿ ನಡುನೀರಿನಲ್ಲಿ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ನನ್ನಲ್ಲಿ ಸತ್ತೋಯ್ತು. ಹಾಗಾಗಿ ನಿನ್ನಿಂದ ದೂರ ಹೋಗುತ್ತಿದ್ದೇನೆ. ನನ್ನ ಪಾಡಿಗೆ ನಾನು ಬದುಕುತ್ತೇನೆ. ನಿಮ್ಮ ಕುಟುಂಬದ ಜತೆ ನೀನು ಚೆನ್ನಾಗಿರು. ನನ್ನ ಹುಡುಕುವ ಪ್ರಯತ್ನ ಮಾಡಬೇಡ. ಪ್ಲೀಸ್…” ಎಂದು ಬರೆದಿತ್ತು.

ರಾಮನಿಗೆ ಸೀತೆಯನ್ನು ಕಾಡಿಗಟ್ಟಲು ಕಾರಣವಾದರೂ ಇತ್ತು. ಆದ್ರೆ ಗಂಗಾಳನ್ನು ಕಾರಣವಿಲ್ಲದೆ ಕೇವಲ ಯಾರೋ ಆಡಿದ ಮಾತಿಗೆ ಅವಳ ಮನಸ್ಸು ನೋಯಿಸಿದೆ. ಅವಳ ಬದುಕಿನ ಜತೆಗೆ ನನ್ನ ಬದುಕೂ ದಾರಿ ತಪ್ಪಿ ಹೋಯ್ತು… ಎಂದುಕೊಂಡ ಮಹೇಶ ಮೂಕನಾದ.

*****

ತ್ರಿವೇಣಿಯರ ಹೂವು ಹಣ್ಣು ಕಥೆಯಾಧರಿಸಿದ ಚಲನಚಿತ್ರ ಮತ್ತು ಅನಕೃ, ತರಾಸು ಮುಂತಾದ ಪ್ರಗತಿಶೀಲರು ವೇಶ್ಯಾವೃತ್ತಿಯ ಬಗ್ಗೆ ಬರೆದ ಕತೆ, ಕಾದಂಬರಿಗಳು ಓದುಗರ ಮೇಲೆ ಆ ಕಾಲದಲ್ಲಿ ತುಂಬಾ ಪರಿಣಾಮ ಬೀರಿದ್ದವು ಎನ್ನಲಾಗಿದೆ. ಚಲನಚಿತ್ರದಲ್ಲಿ ವೇಶ್ಯೆಯ ಮಗಳಂತ ಹೇಳಿದರೆ ತನ್ನ ಮಗಳ ಬದುಕೆಲ್ಲಿ ಹಾಳಾಗಿ ಹೋಗುತ್ತೊ ಎಂದು ಧಿಡೀರನೆ ಕಾಣದೆ ಹೋಗುವ ತಾಯಿ ಪಾತ್ರದೊಡನೆ ಸಿನಿಮಾ ಕೊನೆಯಾಗುತ್ತೆ. ಆದರೆ ಇಂದು ಅದರ ಓದು ಅಥವ ಮನನ ಪಾರ್ಶ್ವದರ್ಶನದಂತೆ ತೋರುತ್ತದೆ ಮಾತ್ರ. ವಾಸ್ತವದ ಗೆರೆಯನ್ನು ಎಷ್ಟು ತೆಳುವು ಮಾಡಿದರೂ ಉತ್ತರ ಕರ್ನಾಟಕದ ಭೂಭಾಗದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ದೇವದಾಸಿಯರ ಸ್ಥಿತಿ ಕೂಡ ಇದಕ್ಕೇನು ಭಿನ್ನವಾಗಿಲ್ಲ. ಅವರ ಮಕ್ಕಳದ್ದು ಇನ್ನೂ ಘೋರ. ಕೂಳು ಸಿಗದೇ ಬೀದಿ ಬದಿ, ಗುಡಿಯ ಹತ್ತಿರ ಭಿಕ್ಷೆ ಬೇಡುವ ಅವರ ಅವರ ವಯಸ್ಸಾದ ತಾಯಂದಿರ ಸ್ಥಿತಿ ದಯನೀಯ. ಯಾರದೋ ತಪ್ಪಿಗೆ ಹುಟ್ಟಿದ, ಶಾಲೆ ಇಲ್ಲದ, ದುಡಿಯಲು ಕೆಲಸಕ್ಕೆ ಹೋದಾಗ ಆ ಮಕ್ಕಳು ಪಡುವ ಅವಮಾನ, ಹಸಿವು ತಾಳದೆ ಹೊಟ್ಟೆ ತುಂಬಿಸಿಕೊಳ್ಳಲು ಬಡಿದಾಡುವ ಆ ಮಕ್ಕಳ ಗೋಳು – ಆ ತಾಯಂದಿರ ವೇದನೆ ಹೇಳತೀರದು. ಕಾಣದ ಕಂಗಳಿಗದು ಚರ್ವಿತಚರ್ವಣವಾಗಿ ಕಂಡೀತು.
ಈ ದೇವದಾಸಿಯರ ಕುರಿತು ಕಥೆ ಬರೆಯಲು ಶುರು ಮಾಡಿದಾಗ ನಾನು ಬಹಳ ಡಿಸ್ಟರ್ಬ್ ಆಗಿದ್ದೆ. ಅವರ ಮೈಗೆ ಮುಗಿಬೀಳುವ ಕಾಮುಕ ಗಂಡಸು ಅವರ ಬದುಕಿನ ಅವಮಾನಗಳನ್ನು ತಡೆಯುವ ಕೆಲಸಕ್ಕೆ ಕೈ ಹಾಕಲಾರ; ತನಗೆ ಹುಟ್ಟಿದ ಮಗಳನ್ನು ತನ್ನ ಮಗಳೆಂದು ಒಪ್ಪಿಕೊಳ್ಳಲಾರ. ಇದನ್ನು ನೋಡುವ ಸಮಾಜವೋ, ಇನ್ನೂ ಬದಲಾಗಿಯೇ ಇಲ್ಲ. ಈ ನಿಟ್ಟುಸಿರಿನಲ್ಲಿ ಮಿಡುಕಾಡುವ, ಕಾಣದ ಕೈಗಳ ಹುನ್ನಾರಕ್ಕೆ ಬಲಿಯಾಗುವ ಅದೆಷ್ಟೋ ಜೀವಗಳಲ್ಲಿ ಎಲ್ಲೋ ಒಂದರ ಕಥೆಯಿದು, ಅಷ್ಟೇ.