ಆಯುರ್ವೇದ ವೈದ್ಯಪದ್ಧತಿಯಲ್ಲಿ ವಿರೇಚನ ಎನ್ನುವ ಚಿಕಿತ್ಸೆ ಇದೆ. ದೇಹದೊಳಗಿನ ಕಲ್ಮಶಗಳನ್ನು ಭೇದಿಯ ರೂಪದಲ್ಲಿ ಹೊರಹಾಕುವ ಮೂಲಕ ಶರೀರವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆಯಿದು. ಕಾವ್ಯಮೀಮಾಂಸೆಯಲ್ಲಿ ಬರುವ ‘ಕೆಥಾರ್ಸಿಸ್’ ಎನ್ನುವ ಪರಿಕಲ್ಪನೆಯೂ ಇದೇ ಪ್ರಕ್ರಿಯೆಯನ್ನು ಆಧರಿಸಿದೆ. ಈ ಪರಿಕಲ್ಪನೆಯನ್ನು ಕೊಟ್ಟವನು ಅರಿಸ್ಟಾಟಲ್. ಅವನು ಗ್ರೀಕ್ ರುದ್ರನಾಟಕಗಳಿಗೆ ಅನ್ವಯಿಸಿ ಬಳಸಿದ ಈ ಪದ ಗ್ರೀಕ್ ಸಂಪ್ರದಾಯ ಮತ್ತು ವೈದ್ಯಕೀಯ ಮೂಲದ್ದು. ಅರಿಸ್ಟಾಟಲ್ನ ಗುರುವಾಗಿದ್ದ ಪ್ಲೇಟೋ ಕಾವ್ಯವನ್ನು ತಿರಸ್ಕರಿಸಿದ್ದ. ಕಾವ್ಯ ಭಾವನೆಗಳನ್ನು ಉದ್ರೇಕಿಸುವ ಮೂಲಕ ಮನಸ್ಸನ್ನು ವಿಕ್ಷಿಪ್ತಗೊಳಿಸುತ್ತದೆ ಎನ್ನುವುದು ಅವನ ಅಭಿಪ್ರಾಯವಾಗಿತ್ತು.
ಡಾ. ವಿಶ್ವನಾಥ ನೇರಳಕಟ್ಟೆ ಬರಹ ನಿಮ್ಮ ಓದಿಗೆ
ಕತ್ತಲು ಕವಿದಿತ್ತು ಟಾಕೀಸಿನೊಳಗೆಲ್ಲ. ದೊಡ್ಡಪರದೆಯ ಮೇಲಿದ್ದ ದುಂಡುಮೋರೆಯ ಚೆಲುವ ಜೀವವಿಲ್ಲದ ಮೊಲವೊಂದನ್ನು ಬುವಿಯೊಡಲಿನೊಳಗಿಡಲು ಸಿದ್ಧನಾಗಿದ್ದ. ಆತನ ಮುಖದಲ್ಲಿದ್ದುದು ದುಃಖ; ನಿರಾಸೆ. ಮೊಲವನ್ನು ಧರಣಿಯ ಮಡಿಲಲ್ಲಿ ತಣ್ಣಗೆ ಮಲಗಿಸಿದವನು ಕಲ್ಲಿನ ಮೇಲೊಂದು ಸಾಲು ಗೀಚಿದ- ‘ಕೆಲವು ದಿನಗಳ ಗೆಳೆಯ ದೇವದಾಸ್’ ಅದರ ಬೆನ್ನಲ್ಲೇ ಮೂಡಿಬಂತೊಂದು ಭಾವಪಂಕ್ತಿ- ‘ಪ್ರೀತಿ ಮಧುರ ತ್ಯಾಗ ಅಮರ’ ಸಿನಿಮಾ ಮುಗಿದಿತ್ತು. ಮುಕ್ಕಾಲು ನಿಮಿಷಗಳ ಮೌನ ಥಿಯೇಟರ್ ತುಂಬ. ಬೆಳಕು ಹರಿದಾಗ ನೋಡಿದರೆ ನನ್ನ ಪಕ್ಕದಲ್ಲಿ ಕುಳಿತಿದ್ದವನು ಅಳುತ್ತಿದ್ದ. ಅವನಿಗಿಂತ ನಾಲ್ಕು ಸೀಟು ಆಚೆ ಕುಳಿತಿದ್ದ ಹುಡುಗಿಯೂ ಅಳುತ್ತಿದ್ದಳು. ಸಿನಿಮಾ ನೋಡಿ ಎದ್ದು ಹೋಗುತ್ತಿದ್ದವರ ಮುಖದಲ್ಲಿ ಸಿಂಹಾಸನ ಹಾಕಿ ಕುಳಿತದ್ದು ಬೇಸರದ ಭಾವ. ನಾನೀಗ ವಿವರಿಸಿದ್ದು ‘ಮುಂಗಾರು ಮಳೆ’ ಚಲನಚಿತ್ರದ ಕೊನೆಯ ದೃಶ್ಯವನ್ನು. ದುಃಖದಲ್ಲಿಯೇ ಕೊನೆಗೊಳ್ಳುವ ಈ ಸಿನಿಮಾವನ್ನು ನಾನು ಥಿಯೇಟರ್ನಲ್ಲಿ ಎರಡು ಸಲ ನೋಡಿದ್ದೇನೆ. ಟಿ.ವಿ.ಯಲ್ಲಿ ಪ್ರಸಾರ ಆದಾಗಲೂ ನೋಡಿದ್ದೇನೆ. ಟಾಕೀಸಿನಲ್ಲಿ ನೂರಾರು ಜನರ ಮಧ್ಯೆ ಕುಳಿತು ನೋಡಿದಾಗ ಉಂಟಾದ ಭಾವಸ್ಫುರಣಕ್ಕಿಂತಲೂ ಹೆಚ್ಚಿನದನ್ನು ಮನೆಯೊಳಗಿನ ಏಕಾಂತದ ವೀಕ್ಷಣೆಯಲ್ಲಿ ನಾನು ಅನುಭವಿಸಿದ್ದೇನೆ.
“ನಿನಗಿಷ್ಟವಾದ ಸಿನಿಮಾ ಯಾವುದು?” ಎಂದು ಯಾರಾದರೂ ನನ್ನನ್ನು ಪ್ರಶ್ನಿಸಿದರೆ ನಾನು ಹೇಳುವ ಮೂರು ಹೆಸರುಗಳಲ್ಲಿ ‘ಮುಂಗಾರು ಮಳೆ’ಯೇ ಮೊದಲ ಸ್ಥಾನ ಪಡೆದಿರುತ್ತದೆ. ಉಳಿದ ಎರಡು ಹೆಸರುಗಳಾದ ‘777 ಚಾರ್ಲಿ’ ಮತ್ತು ‘ಜಮೀನ್ದಾರ್ರು’ ಇವುಗಳೂ ಸಹ ದುಃಖಾಂತವಾದ ಕಥೆಗಳೇ. ಸಂತಸದಲ್ಲಿ ಕೊನೆಗೊಳ್ಳುವ ಕಥೆಗಳು ನಮ್ಮನ್ನು ನಗಿಸುತ್ತವೆ, ನಮ್ಮ ಮನಸ್ಸಿಗೆ ನಿರಾಳತೆಯನ್ನು ಕೊಡುತ್ತವೆ ಮತ್ತು ಬಹಳ ಬೇಗ ಮರೆತುಹೋಗುತ್ತವೆ. ಆದರೆ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವುದೆಂದರೆ ದುಃಖಾಂತವಾಗಿರುವ ಕಥೆಗಳೇ.
***
ನನ್ನ ಒಂದಷ್ಟು ಕಥೆ, ಕವನ, ಲೇಖನಗಳೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಮಯವದು. ಕನ್ನಡದ ಒಂದು ಪ್ರಮುಖ ಆಡಿಯೋ ಸಂಸ್ಥೆಯವರೊಬ್ಬರು ಕರೆಮಾಡಿ ನನ್ನ ಕೆಲವು ಕಥೆಗಳನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದರು. ನನ್ನ ಕಥೆಗಳಿಗೆ ಚಂದದ ಧ್ವನಿಯನ್ನು ಕೊಟ್ಟು ಆಡಿಯೋ ರೂಪದಲ್ಲಿ ಹೊರತರುವ ಯೋಚನೆ ಅವರದ್ದು. ನನಗೂ ಅದು ಒಪ್ಪಿಗೆಯಾಯಿತು. ಆರು ಕಥೆಗಳನ್ನು ಕಳುಹಿಸಿಕೊಟ್ಟಿದ್ದೆ. ಒಂದು ವಾರದ ಮೇಲೆರಡು ದಿನ ಕಳೆದ ಮೇಲೆ ಅವರ ಫೋನು. ಎತ್ತಿಕೊಂಡರೆ ಅವರು ನನ್ನಲ್ಲಿ ಕೇಳಿದ ಪ್ರಶ್ನೆ- “ನಿಮ್ಮ ಕಥೆಗಳೆಲ್ಲವೂ ಟ್ರ್ಯಾಜಿಡಿಯಾಗಿಯೇ ಇದೆಯಲ್ಲಾ ಸಾರ್, ಯಾಕೆ?” ತಕ್ಷಣಕ್ಕೆ ಏನು ಹೇಳಬೇಕೆಂದು ನನಗೂ ಹೊಳೆಯಲಿಲ್ಲ. “ಅದು ಕಥೆಗಳ ತಂತ್ರ ಸಾರ್. ಕಥೆ ದುಃಖದಲ್ಲಿ ಕೊನೆಯಾದರೆ ಓದುಗರ ಮನಸ್ಸಿನಲ್ಲಿ ಹೆಚ್ಚು ಸಮಯ ಉಳಿಯುತ್ತದಲ್ಲಾ, ಅದಕ್ಕೆ ಹಾಗೆ ಬರೆದಿದ್ದೇನೆ” ಎಂದಿದ್ದೆ. “ಕಥೆಗಳೆಲ್ಲ ಬಹಳ ಚೆನ್ನಾಗಿದೆ. ಮುಂದಿನ ವಾರವೇ ಆಡಿಯೋ ರೂಪದಲ್ಲಿ ಬರುತ್ತದೆ” ಎಂದು ಅವರಂದಿದ್ದರು. ಅಲ್ಲಿಗೆ ನಮ್ಮ ಮಾತುಕತೆ ಮುಗಿದಿತ್ತು.
ಆಮೇಲೆ ನಾನೇ ಆ ಪ್ರಶ್ನೆಯನ್ನು ನನಗೆ ಕೇಳಿಕೊಂಡಾಗ ನಾನು ಕಥೆಯ ತಂತ್ರವಾಗಿಯಷ್ಟೇ ಕಥೆಗಳನ್ನು ದುಃಖಾಂತಗೊಳಿಸಿಲ್ಲ; ಅದಕ್ಕಿನ್ನೂ ಹಲವು ಆಯಾಮಗಳಿವೆ ಎಂಬ ಸಂಗತಿ ಗೋಚರಿಸತೊಡಗಿತು. ಕಥೆಗಳನ್ನು ಬರೆಯುವಾಗ ನಾವು ಯಾವ ಮನಃಸ್ಥಿತಿಯಲ್ಲಿ ಇರುತ್ತೇವೆಯೋ ಅದು ಕಥೆಯ ಮುಕ್ತಾಯದ ಮೇಲೆ ಪ್ರಭಾವ ಬೀರುತ್ತದೆ. ಸೋತು ಕೂತವನೊಬ್ಬನಿಗೆ ಗೆಲುವಿನಲ್ಲಿ ಕೊನೆಗೊಳ್ಳುವ ಕಥೆ ಬರೆಯುವುದೆಂದರೆ ಬಲು ಪ್ರಯಾಸದ ಕೆಲಸ. ಕೆಲವು ಕಥಾವಸ್ತುಗಳನ್ನು ನಾವು ಕಥೆಗೆ ಆರಿಸಿಕೊಂಡಾಗ ಕಥೆಯನ್ನು ದುಃಖಾಂತವಾಗಿ ಕೊನೆಗೊಳಿಸದಿದ್ದರೆ ವಾಸ್ತವವನ್ನು ಮರೆಮಾಚಿದಂತಾಗಿಬಿಡುತ್ತದೆ. ಬರವಣಿಗೆಯ ಸಂದರ್ಭದಲ್ಲಿ ಬರಹಗಾರರ ಸುಪ್ತಪ್ರಜ್ಞೆಯಲ್ಲಿ ನೆಲೆನಿಂತ ವಿಚಾರಗಳು ಬರವಣಿಗೆಯ ಮೇಲೆ ಪ್ರಭಾವ ಬೀರುವುದರಿಂದ ಸುಖಾಂತವಾಗಬಹುದಾದ ಕಥೆಗಳೂ ಸಹ ದುಃಖಾಂತವಾಗುವಂತಾಗಬಹುದು. ಇದರಲ್ಲೇನೂ ಅಚ್ಚರಿಯಿಲ್ಲ.
ಮನುಷ್ಯನ ಬದುಕಿನಲ್ಲಿರುವಂತೆ ಕಥೆಯಲ್ಲೂ ಬೇರೆ ಬೇರೆ ಹಂತಗಳಿರುತ್ತವೆ. ಅಮ್ಮನ ಗರ್ಭದಿಂದ ಹೊರಬಿದ್ದ ಶಿಶುವಿಗೆ ಜಗತ್ತೊಂದು ಅಚ್ಚರಿ. ಅದು ಬೆಳೆದಂತೆ ಬೆಳೆದಂತೆ ಈ ಲೋಕಕ್ಕೆ, ಲೋಕದಲ್ಲಿರುವವರಿಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಾ ಹೋಗುತ್ತದೆ. ಕಥೆಯ ಆರಂಭ ಎನ್ನುವುದು ಕಥೆಯ ಶೈಶವದ ಹಂತ. ಅಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳಿಂದಲೇ ಓದುಗ ಜಗತ್ತಿಗೆ ಕಥೆಯ ಪರಿಚಯ ಸಿಕ್ಕಿಬಿಡುತ್ತದೆ. ಮಗು ಬೆಳೆಯತೊಡಗುತ್ತದೆ. ಮಾತು ಕಲಿಯುತ್ತದೆ. ಶಾಲೆಗೆ ಹೋಗುತ್ತದೆ. ಬಾಲಕನೆನಿಸಿಕೊಳ್ಳುತ್ತಾನೆ. ಗೆಳೆಯ ಗೆಳತಿಯರ ಸಂಗದಲ್ಲಿ ಕಿಶೋರಾವಸ್ಥೆ ದಾಟಿ, ಯೌವ್ವನಕ್ಕೆ ಕಾಲಿಡುತ್ತಾನೆ. ಪ್ರೀತಿ, ಪ್ರೇಮ, ಗೆಳೆತನ, ತುಂಟಾಟ, ಸಿಟ್ಟು, ನಿರಾಸೆ, ನಗು ಯುವಕನ ಬದುಕಿಗೆ ಹಲವು ಬಣ್ಣಗಳು. ಕಥೆಯಲ್ಲೂ ಇರುತ್ತವೆ ಹಲವು ಭಾವಗಳು. ಬೆಳೆಯುತ್ತಾ ಹೋದಂತೆ ಕಥೆಗೆ ಕೈಕಾಲುಗಳು ಸೇರಿಕೊಳ್ಳುತ್ತವೆ. ಹಾಗೆ ಸೇರಿಕೊಂಡ ಅವಯವಗಳೆಲ್ಲಾ ಬಲಿಷ್ಠವಾಗಿ ಕಥೆಯನ್ನು ಕಡುಜವ್ವನಿಗನನ್ನಾಗಿಸುತ್ತವೆ. ಯುವಕನಿಗೀಗ ವಿವಾಹಯೋಗ. ಬದುಕಿಗೊಂದು ಬಲುದೊಡ್ಡ ತಿರುವು. ಹಿಂದಿನಂತಿರದ, ಹಿಂದಿನ ಹೆಚ್ಚಿನದರ ಜೊತೆಗೂ ಸಂಬಂಧ ಉಳಿಸಿಕೊಂಡ, ಹೊಸ ಸಂಬಂಧವನ್ನು ಗಳಿಸಿಕೊಂಡ ಭಾವ. ಕಥೆಯಲ್ಲಿಯೂ ಒಂದು ತಿರುವು ಇರುತ್ತದೆ. ಕಥೆಯ ಓಟವನ್ನು ತಡೆದು ನಿಲ್ಲಿಸುವಂತಹ, ದಿಕ್ಕನ್ನು ಬದಲಿಸಿಬಿಡುವಂತಹ ಸನ್ನಿವೇಶವೊಂದು ಜರಗಿಬಿಡುತ್ತದೆ, ಓದುಗರ ಊಹೆಯನ್ನೂ ಮೀರಿ.
ಮಧ್ಯವಯಸ್ಸಿನವನಲ್ಲಿ ಭಾವನೆಗಳ ತಾಕಲಾಟ. ಬದುಕಿನ ಬಗ್ಗೆ ಹೆಚ್ಚಿನ ಗಂಭೀರತೆ. ಒತ್ತಡಗಳ ಅತ್ಯುತ್ಕರ್ಷತೆ. ಕಥೆಯೂ ಉತ್ತುಂಗವನ್ನು ಏರಿಬಿಡುತ್ತದೆ. ವೃದ್ಧಾಪ್ಯ ಕಳೆದಾಗ ವ್ಯಕ್ತಿಯ ಬದುಕಿಗೊಂದು ಕೊನೆ. ಮರಣ. ದುಃಖ. ಕಥೆಯಲ್ಲಿಯೂ ಭಾವನೆಗಳ ಇಳಿತ. ಮೆರೆದಾಟವೆಲ್ಲದ್ದರ ಕೊನೆ. ಒಂದೋ ಸುಖ; ಇಲ್ಲವೇ ದುಃಖ. ಕಥೆಯ ಚಲನೆಗೂ, ಮನುಷ್ಯನ ಬದುಕಿನ ಗತಿಗೂ ಎಣೆಯಿರದ ಹೋಲಿಕೆ. ಈ ಕಾರಣಕ್ಕೇ ಮನುಷ್ಯನ ಬದುಕೆಂದರೆ ಅದೊಂದು ಕಥೆ. ಕಥೆಯೆನ್ನುವುದೇ ಮನುಷ್ಯನ ಬದುಕು.
ಕಥೆಗಳು ದುಃಖಾಂತವಾಗಿವೆಯೆಂದರೆ ಅಂತಹ ಕಥೆಗಳು ನಮ್ಮ ಬದುಕಿನ ಸಂಕೇತವೂ ಆಗಿರುತ್ತವೆ. ನಮ್ಮ ಬದುಕು ಹೇಗೇ ಇರಲಿ ಬದುಕಿನ ಕೊನೆಗೊಂದು ದುಃಖ ಇದ್ದೇ ಇದೆ. ಅತ್ಯಂತ ಸಿರಿವಂತನಾಗಿ, ಬದುಕಿನ ಎಲ್ಲಾ ಸುಖಭೋಗಗಳನ್ನು ಅನುಭವಿಸಿ ಬದುಕಿನ ಕೊನೆಯ ಹಂತದಲ್ಲಿರುವವನಿಗೆ ಅಗಲಿಕೆಯ ವೇದನೆ. ಮುಂದಿನ ಜನ್ಮ ಎನ್ನುವುದೊಂದು ಇದೆಯಾ? ಇಲ್ಲವಾ? ಎನ್ನುವ ಸಂದೇಹ. ಮುಂದಿನ ಜನ್ಮ ಇದ್ದರೆ ತಾನಿಂತಹದ್ದೇ ಸ್ಥಿತಿಯಲ್ಲಿ ಜನಿಸುತ್ತೇನಾ? ಎಂಬ ದೂರಾಲೋಚನೆ ಹುಟ್ಟುಹಾಕಿದ ಕೊರಗು. ದುಃಖದಲ್ಲಿಯೇ ಬದುಕು ನಡೆಸಿದವನಿಗೆ ತಾನಿಲ್ಲವಾದಮೇಲೆ ತನ್ನವರಿಗೆ ಯಾರು ದಿಕ್ಕು ಎನ್ನುವ ಚಿಂತೆ. ಹೀಗೆ ನಾವು ಯಾವ ಸ್ಥಿತಿಯಲ್ಲಿಯೇ ಇದ್ದರೂ ಸಹ ಬದುಕಿನ ಕೊನೆ ಅಂದರೆ ಸಾವು ನಮ್ಮಲ್ಲಿ ಹುಟ್ಟುಹಾಕುವುದು ದುಃಖವನ್ನು. ಸಹಜವೆಂದು ಗೊತ್ತಿದ್ದೂ ಸಹನೆಯಿಂದ ಸ್ವೀಕರಿಸಲಾಗದ ಸಂಗತಿ ಎಂದರೆ ಸಾವು. ಆದ್ದರಿಂದಲೇ ಪ್ರತಿಯೊಬ್ಬರ ಬದುಕಿನ ಕೊನೆಯಲ್ಲೂ ಒಂದು ವಿಷಾದದ ಭಾವ. ಕಥೆಯ ಕೊನೆಗೆ ಬರುವ ದುಃಖ ಬದುಕಿನ ಮುಗಿತಾಯದ ದುಃಖಕ್ಕೆ ಬಲುದೊಡ್ಡ ಸಂಕೇತ.
***
ದುಃಖದಲ್ಲಿಯೇ ಕೊನೆಗೊಳ್ಳುವ ಕಥೆಗಳು ಮನಸ್ಸಿನ ಚಿಕಿತ್ಸೆಯ ಅತ್ಯದ್ಭುತ ಮೂಲಗಳು. ಕಥೆಯೊಂದನ್ನು ಓದಿದಾಗ ಹರಿದುಬರುವ ಕಣ್ಣೀರು ಮನದ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಯುರ್ವೇದ ವೈದ್ಯಪದ್ಧತಿಯಲ್ಲಿ ವಿರೇಚನ ಎನ್ನುವ ಚಿಕಿತ್ಸೆ ಇದೆ. ದೇಹದೊಳಗಿನ ಕಲ್ಮಶಗಳನ್ನು ಭೇದಿಯ ರೂಪದಲ್ಲಿ ಹೊರಹಾಕುವ ಮೂಲಕ ಶರೀರವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆಯಿದು. ಕಾವ್ಯಮೀಮಾಂಸೆಯಲ್ಲಿ ಬರುವ ‘ಕೆಥಾರ್ಸಿಸ್’ ಎನ್ನುವ ಪರಿಕಲ್ಪನೆಯೂ ಇದೇ ಪ್ರಕ್ರಿಯೆಯನ್ನು ಆಧರಿಸಿದೆ. ಈ ಪರಿಕಲ್ಪನೆಯನ್ನು ಕೊಟ್ಟವನು ಅರಿಸ್ಟಾಟಲ್. ಅವನು ಗ್ರೀಕ್ ರುದ್ರನಾಟಕಗಳಿಗೆ ಅನ್ವಯಿಸಿ ಬಳಸಿದ ಈ ಪದ ಗ್ರೀಕ್ ಸಂಪ್ರದಾಯ ಮತ್ತು ವೈದ್ಯಕೀಯ ಮೂಲದ್ದು. ಅರಿಸ್ಟಾಟಲ್ನ ಗುರುವಾಗಿದ್ದ ಪ್ಲೇಟೋ ಕಾವ್ಯವನ್ನು ತಿರಸ್ಕರಿಸಿದ್ದ. ಕಾವ್ಯ ಭಾವನೆಗಳನ್ನು ಉದ್ರೇಕಿಸುವ ಮೂಲಕ ಮನಸ್ಸನ್ನು ವಿಕ್ಷಿಪ್ತಗೊಳಿಸುತ್ತದೆ ಎನ್ನುವುದು ಅವನ ಅಭಿಪ್ರಾಯವಾಗಿತ್ತು. ಗುರುಗಳ ಅಭಿಪ್ರಾಯವನ್ನು ಇನ್ನೊಂದು ಆಯಾಮದಲ್ಲಿ ಗಮನಿಸಿಕೊಂಡ ಅರಿಸ್ಟಾಟಲ್ ಆ ಮೂಲಕವೇ ಕಾವ್ಯವನ್ನು ಸಮರ್ಥಿಸಿದ. ಅವನ ಪ್ರಕಾರ, ಕಾವ್ಯ ಮನಸ್ಸನ್ನು ಉದ್ರೇಕಿಸುತ್ತದೆ ನಿಜ. ಆದರೆ ಇದರಿಂದ ಉಂಟಾಗುವುದು ವಿಕ್ಷಿಪ್ತತೆಯಲ್ಲ; ಮನಸ್ಸಿನ ಪರಿಶುದ್ಧತೆ. ಭಾವನೆಗಳ ಉದ್ದೀಪನದ ಮೂಲಕ ಮನಸ್ಸು ಶುದ್ಧವಾಗುವ ಪ್ರಕ್ರಿಯೆಯೇ ಕೆಥಾರ್ಸಿಸ್.
ಈ ಪ್ರಕ್ರಿಯೆಯ ಆಧಾರದಲ್ಲಿ ಹೇಳುವುದಾದರೆ, ದುಃಖಭರಿತ ದೃಶ್ಯವೊಂದನ್ನು ನೋಡಿದಾಗ ಅಥವಾ ಸನ್ನಿವೇಶವನ್ನು ಓದಿದಾಗ ನಮ್ಮಲ್ಲೂ ದುಃಖ ಮೂಡುತ್ತದೆ. ಭಾವನಾಶೀಲರಾದವರಿಗೆ ಕಣ್ಣೀರು ಬರಬಹುದು. ಇದರಿಂದ ಮನದ ಒತ್ತಡ ಕಡಿಮೆಯಾಗಿ ಅಂತಿಮವಾಗಿ ಮೂಡುವುದು ಆನಂದದ ಭಾವ. ಅಂದರೆ, ದುಃಖದಿಂದ ಕೂಡಿದ ಸನ್ನಿವೇಶದ ಅಂತಿಮ ಪರಿಣಾಮ ಆನಂದವೇ ಆಗಿದೆ. ಆದ್ದರಿಂದ ದುಃಖಾಂತವಾಗಿರುವ ಕಥೆಯೂ ಕೂಡಾ ಅಂತಿಮವಾಗಿ ನಮ್ಮನ್ನು ಸಂತಸದ ಕಲ್ಲುಬೆಂಚಿನ ಮೇಲೆಯೇ ಕೂರಿಸಿಬಿಡುತ್ತದೆ ಎನ್ನುವುದು ನಿಜ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.