ಮಕ್ಕಳು ಕಾಲೇಜಿಗೆ ಸೇರಿ, ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ತಮ್ಮ ಜೀವನದಲ್ಲಿ ನಿರತರಾಗುತ್ತಾರೆ. ತಂದೆ ತಾಯಿಯರಿಗೆ ನೆಂಟರಾಗಿಬಿಡುತ್ತಾರೆ. ದೇಶ ತುಂಬಾ ದೊಡ್ಡದಿರುವುದರಿಂದ ಹತ್ತಿರದಲ್ಲೇ ಕೆಲಸ ಸಿಗಲು ಸಾಧ್ಯವಾಗುವುದಿಲ್ಲ. ಮಕ್ಕಳು ತಂದೆ ತಾಯಿ ಜೊತೆ ಇರಲು ಬಯಸುವುದೂ ಇಲ್ಲ. ರಜೆಯ ಸಮಯದಲ್ಲಿ ಮನೆಗೆ ಬಂದು ಇದ್ದು ಹೋಗುತ್ತಾರೆ. ನಿವೃತ್ತಿ ಹೊಂದಿದ ತಂದೆ ತಾಯಿಯರು ಮಕ್ಕಳ ಮನೆಯ ಹತ್ತಿರ ಮನೆಯ ಮಾಡಿಕೊಂಡು ವಾಸಿಸುತ್ತಾರೆ, ಇದರಿಂದ ಪರಸ್ಪರ ಬೇಕಾದ ಸಹಾಯಮಾಡಲು ಸಾಧ್ಯವಾಗುತ್ತದೆ. ಎಲ್ಲ ದೇಶದ ವೃದ್ಧ ತಂದೆ ತಾಯಿಯರಂತೆ ಮಕ್ಕಳು ಮನೆಗೆ ಬರುವುದಕ್ಕೆ ಕಾಯುತ್ತಾರೆ, ಬಂದಾಗ ಸಂಭ್ರಮಿಸುತ್ತಾರೆ. ಅಮ್ಮ ಅಪ್ಪನಿಗೆ ಮಕ್ಕಳ ಮೇಲಿರುವ ಪ್ರೀತಿ, ಮಕ್ಕಳಿಗೆ ಅಪ್ಪ ಅಮ್ಮನ ಮೇಲಿರುತ್ತದೆಯೇ?
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
ಅಮೆರಿಕಾದ ಶಿಕ್ಷಣ ಪದ್ಧತಿ ಜಗತ್ತಿನ ಉತ್ತಮ ಶಿಕ್ಷಣ ಪದ್ಧತಿಯಲ್ಲಿ ೨೭ನೇ ಸ್ಥಾನದಲ್ಲಿದೆ. ಅಮೆರಿಕಾದ ಶಾಲಾ ಶಿಕ್ಷಣ ಪದ್ಧತಿಯನ್ನು ಕೆ-೧೨ ಎಂದು ಕರೆಯಲಾಗುತ್ತದೆ. ಅಂದರೆ ಕಿಂಡರ್ ಗಾರ್ಡನ್ನಿಂದ ೧೨ನೇ ತರಗತಿಯವರೆಗೆ. ಸುಮಾರು ಐದು ವರುಷಕ್ಕೆ ಕಿಂಡರ್ ಗಾರ್ಡನ್ಗೆ ಸೇರಿಸಿಕೊಳ್ಳಲಾಗುತ್ತದೆ, ಹನ್ನೆರಡನೇ ಇಯತ್ತೆ ಮುಗಿಯುವ ಹೊತ್ತಿಗೆ ಮಕ್ಕಳು ಹದಿನೆಂಟು ವರುಷದವರಾಗಿರುತ್ತಾರೆ. ಬಹುತೇಕ ಮಕ್ಕಳು ಇಲ್ಲಿ ಸರ್ಕಾರಿ ಶಾಲೆಗಳಲ್ಲಿಯೇ ಓದುತ್ತಾರೆ. ಹನ್ನೆರೆಡನೆಯ ತರಗತಿಯವರೆಗೆ ಶಾಲೆ ಉಚಿತ, ಯಾವುದೇ ಶುಲ್ಕವಿರುವುದಲ್ಲ. ಖಾಸಗಿ ಶಾಲೆಗಳೂ ಇವೆ, ಆದರೆ ಅವು ಸಣ್ಣ ಸಂಖ್ಯೆಯಲ್ಲಿದ್ದು ಅವುಗಳ ಶುಲ್ಕ ಅಧಿಕವಾಗಿರುತ್ತದೆ. ಸರ್ಕಾರಿ ಶಾಲೆಗಳು ಉತ್ತಮವಾಗಿರುವುದರಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಅಗತ್ಯ ಬರುವುದಿಲ್ಲ.
ಇಲ್ಲಿನ ಶಿಕ್ಷಣ ಪದ್ಧತಿಯನ್ನು ಹೀಗೆ ವಿಂಗಡಿಸಲಾಗಿದೆ. ಕಿಂಡರ್ ಗಾರ್ಡನ್ನಿಂದ ಐದನೇ ತರಗತಿಯವರೆಗೆ ಪ್ರಾಥಮಿಕ ಶಾಲೆ, ಐದರಿಂದ ಎಂಟನೇ ತರಗತಿಯವರೆಗೆ ಮಾಧ್ಯಮಿಕ ಹಾಗು ಒಂಬತ್ತರಿಂದ ಹನ್ನೆರೆಡರವರೆಗೆ ಪ್ರೌಢಶಾಲೆ. ಕೆಲವು ರಾಜ್ಯಗಳಲ್ಲಿ ಒಂದು ವರುಷ ಆಕಡೆ -ಈಕಡೆ ಇರಬಹದು. ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಪಠ್ಯಗಳನ್ನು ಒಬ್ಬರೇ ಶಿಕ್ಷಕರು ಬೋಧಿಸುತ್ತಾರೆ. ಪ್ರಾಥಮಿಕ ಶಾಲೆ ಶಿಕ್ಷಣ ಹೆಚ್ಚಾಗಿ ಸೃಜನಾತ್ಮಕ ಕಲಿಕೆಯಾಗಿರುತ್ತದೆ ಉರುಹೊಡೆಯುವುದು ಅಗತ್ಯವಿದ್ದಾಗ ಮಾತ್ರ. ಶಿಕ್ಷಕ-ಶಿಕ್ಷಕಿಯರು ಪ್ರೀತಿಯಿಂದ ಮಕ್ಕಳಿಗೆ ಬೋಧಿಸುತ್ತಾರೆ. ಮಕ್ಕಳನ್ನು ಹೊಡೆಯುವುದು ಬೈಯ್ಯುವುದು ಇರುವುದಿಲ್ಲ. ಮಾತುಕೇಳದ, ತುಂಟ ಮಕ್ಕಳಿಗೆ ಮೊದಲ ಶಿಕ್ಷೆಯೆಂದರೆ ಆಟದ ಸಮಯದಲ್ಲಿ ಅವರನ್ನು ಹೊರಗೆ ಬಿಡದೆ ಕೊಠಡಿಯಲ್ಲಿ ಕೂರಿಸಿ ಹೋಂ ವರ್ಕ್ ಮಾಡಿಸುವುದು. ಆಟದ ಮೈದಾನದಲ್ಲಿ ಆಟವಾಡುವ ಮಕ್ಕಳ ಸಂತೋಷದ ಕಿರುಚಾಟ, ಓಟ ಇವುಗಳಲ್ಲಿ ಭಾಗಿಯಾಗಲು ಆಗದೆ ಚಡಪಡಿಸಿದಾಗ ಮತ್ತೆ ತಪ್ಪು ಮಾಡಲು ಹೋಗುವುದಿಲ್ಲ. ಮುಂದಿನ ಹಂತದ ಶಿಕ್ಷೆ ಎಂದರೆ ಪ್ರಿನ್ಸಿಪಾಲರ ಕಚೇರಿಗೆ ಹೋಗಬೇಕಾಗಿ ಬರುವುದು, ಮುಂದಿನ ಹಂತವೆಂದರೆ ಪೋಷಕರನ್ನು ಶಾಲೆಗೆ ಕರೆಸುವುದು, ದೊಡ್ಡ ಶಿಕ್ಷೆಯೆಂದರೆ ಸ್ವಲ್ಪ ದಿನ ಶಾಲೆಗೆ ಬರದಂತೆ ಮಾಡುವುದು. ಅದು ತುಂಬಾ ವಿರಳ.
ಅಮೆರಿಕಾದಲ್ಲಿ ರಾಷ್ಟ್ರೀಯ ಭಾಷೆ ಎನ್ನುವುದು ಇಲ್ಲ, ಬಹುತೇಕ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಾರೆ. ಶಾಲೆಗಳಲ್ಲಿ ಇಂಗ್ಲಿಷಿನಲ್ಲಿಯೇ ಶಿಕ್ಷಣ ನಡೆಯುತ್ತದೆ. ಇಲ್ಲಿ ಸ್ಪ್ಯಾನಿಷ್ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆ. ಮಕ್ಕಳು ಶಾಲೆಗಳಲ್ಲಿ ಎಂಟನೇ ತರಗತಿಯಿಂದ ಯಾವುದಾದರೂ ಒಂದು ಬೇರೆ ಭಾಷೆಯನ್ನು ಕಲಿಯಬಹದು, ಅದರಲ್ಲಿ ಸ್ಪ್ಯಾನಿಷ್, ಫ್ರೆಂಚ್, ಜರ್ಮನ್ ಹೇಗೆ ಇರುತ್ತವೆ. ಇದಲ್ಲದೆ ಸಂಗೀತ ತರಗತಿಗಳೂ ನಡೆಯುತ್ತವೆ. ಪೀಟಿಲು, ಗಿಟಾರ್, ಕೊಳಲು, ಚಲ್ಲೊ, ವಿಯೋಲ ಹೀಗೆ ಇಷ್ಟವಾದ ಒಂದು ವಾದ್ಯವನ್ನು ಕಲಿಯುತ್ತಾರೆ. ಮಕ್ಕಳ ಬುದ್ಧಿಮಟ್ಟ ಸಾಮಾನ್ಯಕ್ಕಿಂತಲೂ ಹೆಚ್ಚು ಇದ್ದರೆ ಅಂತಹ ಮಕ್ಕಳಿಗೆ ಗಿಫ್ಟೆಡ್ ಪ್ರೋಗ್ರಾಮ್ ಎನ್ನುವ ಹೆಸರಿನಲ್ಲಿ ಪ್ರತ್ಯೇಕ ತರಗತಿಗಳನ್ನು ನಡೆಸುತ್ತಾರೆ. ಇದರಿಂದ ಬುದ್ಧಿಮಟ್ಟ ಹೆಚ್ಚಿರುವ ಮಕ್ಕಳಿಗೆ ಸವಾಲು ಎನಿಸಿ ಅವರ ಮೆದುಳಿಗೆ ಕೆಲಸ ಕೊಟ್ಟಂತಾಗುತ್ತದೆ. ಗಿಫ್ಟೆಡ್ ಮಕ್ಕಳು ತುಂಬಾ ಚಟುವಟಿಕೆಯಿಂದಿರುವ ಮಕ್ಕಳಾಗಿರುತ್ತಾರೆ, ಅವರಿಗೆ ಸದಾ ಮಾಡಲು ಏನಾದರೂ ಒಂದು ಕೆಲಸ ಬೇಕು, ಸುಮ್ಮನೆ ಕೂರುವ ಪೈಕಿಯಲ್ಲ. ಅವರ ಐ.ಕ್ಯೂ. ಸರಾಸರಿ ೧೨೦ ಕ್ಕಿಂತಲೂ ಹೆಚ್ಚಾಗಿರುತ್ತದೆ. ಇದರಿಂದ ವಿಶೇಷ ತರಗತಿಗಳು ಅವರಿಗೆ ಸಹಾಯವಾಗುತ್ತವೆ.
ಅಮೆರಿಕಾದ ಶಾಲಾ ಕೊಠಡಿಗಳು ಒಂದು ದೊಡ್ಡ ಕಟ್ಟಡದ ಒಳಗಿರುತ್ತವೆ, ಒಂದು ದೊಡ್ಡ ಬಾಗಿಲು ತೆರೆದು ಒಳ ಹೊಕ್ಕರೆ, ಅಲ್ಲಿ ಶಾಲಾ ಕಚೇರಿ, ಪ್ರಾಂಶುಪಾಲರ ಕೊಠಡಿ, ಶಾಲಾ ಕೊಠಡಿಗಳು, ಆಟದ ಜಿಮ್, ಊಟಕ್ಕೆ ಆಸನ ವ್ಯವಸ್ಥೆ, ಶೌಚಾಲಯಗಳು, ಸಂಗೀತ ಕಲಿಸುವ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್ ಕೊಠಡಿಗಳು, ಪ್ರಯೋಗಾಲಯಗಳು, ಆಡಿಟೋರಿಯಂ ಹೀಗೆ ಹತ್ತು ಹಲವು ಇರುತ್ತವೆ. ಚಳಿಗಾಲಕ್ಕೆ ಬಿಸಿಯಾಗಿರಿಸುವ ಹೀಟರ್ಗಳು, ಬೇಸಿಗಿಗೆ ತಂಪಾಗಿಸುವ ಕೂಲರ್ಗಳು ಇರುತ್ತವೆ. ಶಾಲೆಯ ಸುತ್ತ ಆಟದ ಮೈದಾನಗಳಿರುತ್ತದೆ. ಇದರಲ್ಲಿ ಚಿಕ್ಕಮಕ್ಕಳು ಆಟವಾಡಲು ಉಯ್ಯಾಲೆಗಳೂ, ಜಾರುಬಂಡೆಗಳು, ದೊಡ್ಡ ಮಕ್ಕಳಿಗೆ ಫುಟ್ಬಾಲ್, ಸಾಕರ್, ಬೇಸ್ ಬಾಲ್, ಬಾಸ್ಕೆಟ್ ಬಾಲ್ ಹೀಗೆ ಎಲ್ಲಾ ರೀತಿಯ ಆಟವಾಡುವ ಮೈದಾನಗಳಿರುತ್ತವೆ. ಶಾಲೆಯ ಒಳಗಡೆ ಸದಾ ಒಬ್ಬರು ನರ್ಸ್ ಇರುತ್ತಾರೆ, ಮಕ್ಕಳಿಗೆ ಅಗತ್ಯಬಿದ್ದಲ್ಲಿ ಚಿಕಿತ್ಸೆ ಕೊಡುತ್ತಾರೆ. ಎಲ್ಲಾ ಶಾಲೆಗಳಲ್ಲಿಯೂ ಈ ಸೌಲಭ್ಯಗಳು ಇರುತ್ತವೆ.
ಪ್ರೌಢಶಾಲೆಗಳಲ್ಲಿ ಈಜು ಕೊಳಗಳೂ ಇರುತ್ತವೆ. ಪ್ರೌಢಶಾಲೆಗಳ ಒಳಹೊಕ್ಕರೆ ಹೊಸಬರು ಕಳೆದುಹೋಗುವುದಂತೂ ಖಂಡಿತ. ಪ್ರೌಢಶಾಲೆಗಳಲ್ಲಿ ಒಂದು ದೊಡ್ಡ ಕ್ರೀಡಾಂಗಣವೂ ಇರುತ್ತದೆ. ಮಕ್ಕಳು ಶಾಲೆಗೆ ಹೋಗಿಬರಲು ಹವಾನಿಯಂತ್ರಿತ ಬಸ್ಸುಗಳಿರುತ್ತವೆ. ಶಾಲೆ ಪ್ರಾರಂಭವಾಗುವ ಹಾಗು ಬಿಡುವ ಸಮಯದಲ್ಲಿ ಪೋಲೀಸ್ ಕಾವಲೂ ಇರುತ್ತದೆ. ಈ ಸಮಯದಲ್ಲಿ ಕಾರುಗಳು ಶಾಲೆಯಿರುವ ರಸ್ತೆಗಳಲ್ಲಿ ತುಂಬಾ ನಿಧಾನವಾಗಿ ಚಲಿಸಬೇಕು ಮಾತು ಶಾಲಾ ಬಸ್ಸು ನಿಂತಿದ್ದರೆ ಅದು ಮುಂದೆ ಸಾಗುವವರೆಗೂ ನಿಲ್ಲಬೇಕು. ಸಾಮಾನ್ಯವಾಗಿ ಇಲ್ಲಿನ ಯಾವುದೇ ಶಾಲೆಗಳಲ್ಲಿ ಮಕ್ಕಳಿಗೆ ಯುನಿಫಾರ್ಮ್ ಇರುವುದಿಲ್ಲ.
ಬಹುತೇಕ ಎಲ್ಲಾ ಶಿಕ್ಷಕ ಶಿಕ್ಷಕಿಯರೂ ಉನ್ನತ ವ್ಯಾಸಂಗ ಮಾಡಿರುತ್ತಾರೆ, ಬಹುತೇಕರು ಸ್ನಾತಕೋತ್ತರ ಪದವಿ ಹೊಂದಿರುತ್ತಾರೆ. ಶಿಕ್ಷಕ ಶಿಕ್ಷಕಿಯರಿಗೆ ಬೇರೆ ಖಾಸಗಿ ಕೆಲಸಗಳಿಗಿಂತ ಸಂಬಳ ಕಡಿಮೆಯಿದ್ದರೂ, ಇಷ್ಟಪಟ್ಟು ಈ ವೃತ್ತಿ ಸೇರುತ್ತಾರೆ. ಮಕ್ಕಳಿಗೆ ಹಿತವಾಗಿ ಪಾಠ ಮಾಡುತ್ತಾರೆ. ಹಿಂದೆ ಬಿದ್ದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುತ್ತಾರೆ. ವರ್ಷದ ಕೊನೆಯಲ್ಲಿ ಅಥವಾ ಹನ್ನೆರಡೇ ತರಗತಿಗೆ ಬರುವ ವೇಳೆಗೆ ಎಲ್ಲಾ ಮಕ್ಕಳಿಗೂ ಎಲ್ಲ ವಿಷಯಗಳನ್ನೂ ಕಲಿಸಿರುತ್ತಾರೆ, ಆದ್ದರಿಂದ ಯಾರೂ ನಾಪಾಸ್ ಆಗುವುದಿಲ್ಲ.
ಶಾಲೆ ಬೆಳಿಗ್ಗೆ ಬೇಗ ಆರಂಭವಾಗುತ್ತದೆ ಮತ್ತು ಬೇಗ ಮುಗಿಯುತ್ತದೆ. ಹೋಮ್ ವರ್ಕ್ ಕಡ್ಡಾಯವಲ್ಲದಿದ್ದರೂ ಹೋಮ್ ವರ್ಕ್ ಕೊಡಲಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಹೋಮ್ ವರ್ಕ್ ಬೇಡ ಎಂದರೆ ಹೇಳಬಹುದು. ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಲು ಪುಸ್ತಕ ಓದುವುದನ್ನು ಹೊಂವರ್ಕ್ ಆಗಿ ಕೊಡಲಾಗುತ್ತದೆ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ಪಡೆಯಬಹುದು. ವರ್ಷದ ಕೊನೆಯಲ್ಲಿ ರೀಡಿಂಗ್ ಒಲಂಪಿಕ್ಸ್ ನಡೆಸಲಾಗುತ್ತದೆ. ಬೇರೆ ಬೇರೆ ಶಾಲೆಗಳ ನಡುವೆ ಸ್ಪರ್ಧೆ ಏರ್ಪಡಿಸಿ ಪುಸ್ತಕಗಳಲ್ಲಿ ಬರುವ ಕತೆ ಪಾತ್ರಗಳ ಬಗ್ಗೆ ಪ್ರಶ್ನೆಕೇಳಿ, ಉತ್ತರಗಳ ಆಧಾರದಮೇಲೆ ಬಹುಮಾನ ಕೊಡಲಾಗುತ್ತದೆ. ಅತಿ ಹೆಚ್ಚು ಸರಿಯಾದ ಉತ್ತರ ಕೊಟ್ಟ ಶಾಲೆಗೆ ಗೋಲ್ಡನ್ ರಿಬ್ಬನ್, ನಂತರ ಗ್ರೀನ್ ರಿಬ್ಬನ್, ಕೊನೆಯದಾಗಿ ಎಲ್ಲೊ ರಿಬ್ಬನ್ ಎಂದು ಪ್ರಶಸ್ತಿ ಕೊಡಲಾಗುತ್ತದೆ.
ಹನ್ನೆರಡನೆ ತರಗತಿ ಮುಗಿದ ನಂತರ ನಾಲ್ಕು ವರುಷದ ಪದವಿಗೆ ಹೋಗಲು ಅವಕಾಶವಿರುತ್ತದೆ. ತಮ್ಮ ಇಚ್ಛೆಯಂತೆ, ಇಚ್ಛೆಯ ವಿಷಯಗಳಲ್ಲಿ ಮಕ್ಕಳು ಪದವಿ ಪಡೆಯಬಹುದು. ಬಲವಂತಪಡಿಸಿ ಮಕ್ಕಳ ಇಚ್ಛೆ ವಿರುದ್ಧವಾಗಿ ಯಾವ ಪೋಷಕರೂ ಇಂತಹುದೇ ವಿಷಯದಲ್ಲಿ ಪದವಿ ಮಾಡಬೇಕೆಂದು ಹೇಳುವುದಿಲ್ಲ. ಹನ್ನೆರಡನೇ ತರಗತಿಯವರಿಗೆ ಉಚಿತವಾಗಿದ್ದ ಶಾಲೆ, ಕಾಲೇಜಿಗೆ ಹೋದಮೇಲೆ ಹಚ್ಚಿನ ಹಣ ಬೇಡುತ್ತದೆ. ಕಡಿಮೆಯೆಂದರೂ ಸುಮಾರು ಇಪ್ಪತೈದು ಲಕ್ಷ ರೂಪಾಯಿಗಳು ಒಂದು ವರ್ಷಕ್ಕೆ ಬೇಕಾಗುತ್ತದೆ, ಪ್ರತಿಷ್ಠಿತ ಕಾಲೇಜಿನಲ್ಲಿ ಓದಲು ಕಡಿಮೆಯೆಂದರೂ ಸುಮಾರು ಅರವತೈದು ಲಕ್ಷ ರೂಪಾಯಿಗಳು ಒಂದು ವರ್ಷಕ್ಕೇ ಬೇಕಾಗುತ್ತದೆ! ಬಹುತೇಕ ಮಕ್ಕಳು ಕಾಲೇಜಿನಲ್ಲಿ ಓದಲು ಸಾಲ ತೆಗೆದುಕೊಳ್ಳುತ್ತಾರೆ. ಪೋಷಕರು ಮಗು ಶಾಲೆಯಲ್ಲಿ ಇರುವಾಗಲೇ ಕಾಲೇಜು ಫಂಡ್ ತೆಗೆದು ತಿಂಗಳು ತಿಂಗಳು ಹಣ ಜಮಾಯಿಸುತ್ತಾರೆ. ಅದು ಬೆಳೆದು ತಕ್ಕ ಮಟ್ಟಿನ ಹಣ ಸಿಗುತ್ತದೆ. ಇದರ ಜೊತೆ ಸ್ಕಾಲರ್ಶಿಪ್ ಸಿಗಬಹುದು.
ಮಕ್ಕಳು ಕಾಲೇಜಿಗೆ ಸೇರಿ, ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ತಮ್ಮ ಜೀವನದಲ್ಲಿ ನಿರತರಾಗುತ್ತಾರೆ. ತಂದೆ ತಾಯಿಯರಿಗೆ ನೆಂಟರಾಗಿಬಿಡುತ್ತಾರೆ. ದೇಶ ತುಂಬಾ ದೊಡ್ಡದಿರುವುದರಿಂದ ಹತ್ತಿರದಲ್ಲೇ ಕೆಲಸ ಸಿಗಲು ಸಾಧ್ಯವಾಗುವುದಿಲ್ಲ. ಮಕ್ಕಳು ತಂದೆ ತಾಯಿ ಜೊತೆ ಇರಲು ಬಯಸುವುದೂ ಇಲ್ಲ. ರಜೆಯ ಸಮಯದಲ್ಲಿ ಮನೆಗೆ ಬಂದು ಇದ್ದು ಹೋಗುತ್ತಾರೆ. ನಿವೃತ್ತಿ ಹೊಂದಿದ ತಂದೆ ತಾಯಿಯರು ಮಕ್ಕಳ ಮನೆಯ ಹತ್ತಿರ ಮನೆಯ ಮಾಡಿಕೊಂಡು ವಾಸಿಸುತ್ತಾರೆ, ಇದರಿಂದ ಪರಸ್ಪರ ಬೇಕಾದ ಸಹಾಯಮಾಡಲು ಸಾಧ್ಯವಾಗುತ್ತದೆ. ಎಲ್ಲ ದೇಶದ ವೃದ್ಧ ತಂದೆ ತಾಯಿಯರಂತೆ ಮಕ್ಕಳು ಮನೆಗೆ ಬರುವುದಕ್ಕೆ ಕಾಯುತ್ತಾರೆ, ಬಂದಾಗ ಸಂಭ್ರಮಿಸುತ್ತಾರೆ. ಅಮ್ಮ ಅಪ್ಪನಿಗೆ ಮಕ್ಕಳ ಮೇಲಿರುವ ಪ್ರೀತಿ, ಮಕ್ಕಳಿಗೆ ಅಪ್ಪ ಅಮ್ಮನ ಮೇಲಿರುತ್ತದೆಯೇ?
ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ. ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು ಗಾಡ್, ಲೈಫ್, ಅಂಡ್ ಡೆತ್ (ಕವನ ಸಂಕಲನ), “ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು. “ಲಾಸ್ಟ್ ಲೈಫ್” ಕಥನ ಕವನ ಮತ್ತು “ದ್ವಂದ್ವ” ಕವನ ಸಂಕಲನ ಅಚ್ಚಿನಲ್ಲಿವೆ