ಅಮೇರಿಕನ್ನರು ಹೆಚ್ಚು ಔಷಧಗಳನ್ನು ತೆಗೆದುಕೊಂಡರೂ, ಅವರು ಅದಕ್ಕೆ ಹೆಚ್ಚು ಬೆಲೆ ಪಾವತಿಸುತ್ತಾರೆ. ಅಮೇರಿಕಾದಲ್ಲಿ ಔಷಧಿಗಳ ಬೆಲೆಗಳು ಫ್ರಾನ್ಸ್‌ಗಿಂತ 50 ರಿಂದ 60 ಪ್ರತಿಶತದಷ್ಟು ಹೆಚ್ಚು ಮತ್ತು ಇಂಗ್ಲೆಡ್‌ಗಿಂತ ಅಥವಾ ಆಸ್ಟ್ರೇಲಿಯಾಕ್ಕಿಂತ ಎರಡು ಪಟ್ಟು ಹೆಚ್ಚು. ಏಕೆಂದರೆ ಅನೇಕ ದೇಶಗಳಲ್ಲಿ, ಸರ್ಕಾರಗಳು ಮೂಲಭೂತವಾಗಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತವೆ ಮತ್ತು ಜನ ಪಾವತಿ ಮಾಡುವ ಮೊತ್ತಕ್ಕೆ ಮಿತಿಗಳನ್ನು ನಿಗದಿಪಡಿಸುತ್ತವೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ಅಮೆರಿಕಾದ ಔಷಧ ತಯಾರಿಕಾ ವಲಯ ಒಂದು ದೊಡ್ಡ ಉದ್ಯಮ. ಎರಡು ಸಾವಿರದ ಇಪ್ಪತ್ತೆರಡಲ್ಲಿ ಸುಮಾರು ಎಂಟನೂರ ಎಂಬತ್ತುನಾಲ್ಕು ಬಿಲಿಯನ್ ಡಾಲರ್‌ಗಳಷ್ಟು ವಹಿವಾಟು ಈ ವಲಯದಲ್ಲಿ ಆಗಿದೆ. ಎರಡು ಸಾವಿರದ ಮೂವ್ವತ್ತರಲ್ಲಿ ಅದು ಸಾವಿರದ ಇನ್ನೂರು ಬಿಲಿಯನ್‌ಗಳನ್ನು ದಾಟುವ ನೀರಿಕ್ಷೆ ಇದೆ. ಪ್ರಪಂಚದ ಬಹುತೇಕ ದೊಡ್ಡ ಫಾರ್ಮಸಿಟಿಕಲ್ ಕಂಪನಿಗಳು ಇಲ್ಲಿವೆ. ಜಾನ್ ಸನ್- ಜಾನ್ ಸನ್, ಫೈಜರ್, ಜಿ.ಎಸ್‌.ಕೆ, ಮರ್ಕ್ ಮುಂತಾದ ಔಷಧ ತಯಾರಿಕಾ ದಿಗ್ಗಜರು ಇಲ್ಲಿ ಹಲವಾರು ಔಷಧ ತಯಾರಿಕಾ ಘಟಕಗಳನ್ನು ತೆರೆದಿದ್ದಾರೆ.

ಅಮೆರಿಕಾದಲ್ಲಿ ಪ್ರತಿ ವ್ಯಕ್ತಿ ಪ್ರತಿ ವರ್ಷಕ್ಕೆ ಸುಮಾರು ಒಂದು ಸಾವಿರ ಡಾಲರ್‌ಗಳನ್ನು (ಸುಮಾರು ಎಂಬತ್ತು ನಾಲ್ಕು ಸಾವಿರ ರೂಪಾಯಿಗಳನ್ನು) ಔಷಧಗಳ ಮೇಲೆ ಖರ್ಚು ಮಾಡುತ್ತಾರೆ. ಇದು ಎರಡನೆಯ ಅತಿ ಹೆಚ್ಚು ಖರ್ಚು ಮಾಡುವ ಕೆನಡಾಕ್ಕಿಂತ ಸುಮಾರು ನಲವತ್ತು ಪ್ರತಿಶತ ಹೆಚ್ಚು ಮತ್ತು ಫ್ರಾನ್ಸ್ ಮತ್ತು ಜರ್ಮನಿಯಂತಹ ದೇಶಗಳು ಖರ್ಚು ಮಾಡುವುದಕ್ಕಿಂತ ಎರಡು ಪಟ್ಟು ಹೆಚ್ಚು. ಹಾಗಾದರೆ ಅಮೆರಿಕಾದ ಜನ ಅಷ್ಟು ಖರ್ಚು ಮಾಡುವುದು ಏಕೆ? ಅಮೆರಿಕನ್ನರು ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆಯೇ ಅಥವಾ ಅವರು ಹೆಚ್ಚಿನ ಬೆಲೆಯನ್ನು ಪಾವತಿಸುತ್ತಾರೆ ಎಂಬ ಕಾರಣಕ್ಕಾಗಿಯೇ? ಅಮೆರಿಕನ್ನರು ತಮಗೆ ಬೇಕಾದ ಔಷಧಗಳನ್ನು ಖರೀದಿಸಬಹುದೇ?

ಒಟ್ಟಾರೆಯಾಗಿ, ಅಮೆರಿಕನ್ನರು ಇತರ ಅಭಿವೃದ್ಧಿ ಹೊಂದಿದ ದೇಶಗಳ ಜನರಿಗಿಂತ ಹೆಚ್ಚು ಔಷಧಿಗಳನ್ನು ಬಳಸುತ್ತಾರೆ. ಅವರು ಮನೋರೋಗಕ್ಕೆ ಮತ್ತು ಬುದ್ಧಿಮಾಂದ್ಯತೆ, ಉಸಿರಾಟದ ಸಮಸ್ಯೆಗಳು ಮತ್ತು ಸಂಧಿವಾತದ ಔಷಧಿಗಳ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಮೆರಿಕಾದಲ್ಲಿ ಹೃದ್ರೋಗ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು, ಮಧುಮೇಹ, ಮತ್ತು ಆಲ್ಝೈಮರ್‌ ಸಾಮಾನ್ಯ ರೂಪಗಳಿಗೆ ಸಂಬಂಧಿಸಿದಂತೆ ಇತರೆ ದೇಶಗಳಿಗಿಂತ ಹೆಚ್ಚಾಗಿದೆ. ಹೆಚ್ಚಿನ ಮಟ್ಟದ ಸ್ಥೂಲಕಾಯತೆ ಅಮೆರಿಕಾದ ಜನರಲ್ಲಿ ಇದೆ.

ಅನೇಕ ಇತರ ದೇಶಗಳಲ್ಲಿನ ರೋಗಿಗಳಿಗಿಂತ ಅಮೆರಿಕಾದ ಜನರಿಗೆ ಹೊಸ ಔಷಧಗಳು ಬೇಗ ಲಭ್ಯವಾಗುತ್ತವೆ. ಅದು ಬಹುಶಃ ಏಕೆಂದರೆ ಅಮೇರಿಕಾ, ಔಷಧೀಯ ಕಂಪನಿಗಳಿಗೆ ಯಾವಾಗಲೂ ಅತ್ಯಂತ ಆಕರ್ಷಕ ಮತ್ತು ದೊಡ್ಡ ಮಾರುಕಟ್ಟೆಯಾಗಿದೆ. ಪ್ರಪಂಚದ ಮಾರುಕಟ್ಟೆಯ ಶೇಕಡ ಮೂವತ್ತು ನಾಲ್ಕುರಷ್ಟು ವಹಿವಾಟು ಇಲ್ಲಿ ನಡೆಯುತ್ತದೆ. ಇಲ್ಲಿ ಬೆಲೆ ನಿಯಂತ್ರಣ ಸರ್ಕಾರದ ಕೈಯಲ್ಲಿ ಅಷ್ಟಾಗಿ ಇರುವುದಿಲ್ಲ.

ಇದರಿಂದ ಕಂಪನಿಗಳು ಸಾಮಾನ್ಯವಾಗಿ ಅಮೆರಿಕಾದಲ್ಲಿ ತಮ್ಮ ಔಷಧಿ ತಯಾರಿಕಾ ಘಟಕಗಳನ್ನು ಇಲ್ಲಿ ಪ್ರಾರಂಭಿಸುತ್ತವೆ, ಏಕೆಂದರೆ ಅಮೇರಿಕಾ ಮಾರುಕಟ್ಟೆ ಲಾಭದಾಯಕ, ಆದ್ದರಿಂದ ದೊಡ್ಡ ದೊಡ್ಡ ಕಂಪನಿಗಳು ಸಂಶೋಧನೆಗೆ ಇಲ್ಲಿ ಹಣ ಹೂಡುತ್ತವೆ.

ಅಮೇರಿಕನ್ನರು ಹೆಚ್ಚು ಔಷಧಗಳನ್ನು ತೆಗೆದುಕೊಂಡರೂ, ಅವರು ಅದಕ್ಕೆ ಹೆಚ್ಚು ಬೆಲೆ ಪಾವತಿಸುತ್ತಾರೆ. ಅಮೇರಿಕಾದಲ್ಲಿ ಔಷಧಿಗಳ ಬೆಲೆಗಳು ಫ್ರಾನ್ಸ್‌ಗಿಂತ 50 ರಿಂದ 60 ಪ್ರತಿಶತದಷ್ಟು ಹೆಚ್ಚು ಮತ್ತು ಇಂಗ್ಲೆಡ್‌ಗಿಂತ ಅಥವಾ ಆಸ್ಟ್ರೇಲಿಯಾಕ್ಕಿಂತ ಎರಡು ಪಟ್ಟು ಹೆಚ್ಚು. ಏಕೆಂದರೆ ಅನೇಕ ದೇಶಗಳಲ್ಲಿ, ಸರ್ಕಾರಗಳು ಮೂಲಭೂತವಾಗಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತವೆ ಮತ್ತು ಜನ ಪಾವತಿ ಮಾಡುವ ಮೊತ್ತಕ್ಕೆ ಮಿತಿಗಳನ್ನು ನಿಗದಿಪಡಿಸುತ್ತವೆ.

ಅಮೆರಿಕಾದಲ್ಲಿ ವೈದ್ಯಕೀಯ ಚಿಕ್ಸಿತೆ ಪಡೆಯಲು ವಿಮೆ ಹೊಂದಿರಬೇಕು. ಬಹುತೇಕ ಜನ ತಾವು ಕೆಲಸ ಮಾಡುವ ಸ್ಥಳಗಳಲ್ಲಿ ವಿಮೆ ಪಡೆದಿರುತ್ತಾರೆ. ವಿಮೆ ಬಹುತೇಕ ಚಿಕ್ಸಿತೆಯ ವೆಚ್ಚವನ್ನು ಭರಿಸುವುದರಿಂದ, ಜನರಿಗೆ ಪರೋಕ್ಷವಾಗಿ ಒತ್ತಡ ಕಡಿಮೆ ಇರುತ್ತದೆ, ಆದರೆ ವಿಮೆ ಇರುವುದರಿಂದ ಚಿಕಿತ್ಸೆಯ ವೆಚ್ಚ ಹೆಚ್ಚಾಗಿರುತ್ತದೆ, ಅದು ಆಸ್ಪತ್ರೆಗಳಿಗೆ ವಿಮಾ ಕಂಪನಿಗಳಿಂದ ಪಾವತಿಸಲಾಗುತ್ತದೆ.

ರೋಗಿಗಳು ತಮಗೆ ಬೇಕಾದ ಔಷಧಿಗಳನ್ನು ಪಡೆಯುತ್ತಾರೆಯೇ? ಹೆಚ್ಚಿನ ವೆಚ್ಚದ ಕಾರಣ ಅನೇಕ ಅಮೆರಿಕನ್ನರು ತಮಗೆ ತೆಗೆದುಕೊಳ್ಳಲು ಹೇಳಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವ ಮಾತೂ ಇದೆ. ಅಮೆರಿಕಾದಲ್ಲಿ ವೈದ್ಯಕೀಯ ಸೇವೆ ಒಂದು ಮಾಫಿಯಾ ಎನ್ನುವ ಮಾತು ಇದೆ. ಕೆಲವು ವೇಳೆ ವಿಮೆ ಇಲ್ಲದೆ ಇರುವ ಜನ ತಮ್ಮ ಚಿಕಿತ್ಸೆಗೆ ದಾನ ಸಂಸ್ಥೆಗಳ ಮೊರೆ ಹೋಗಿರುವುದು ಇದೆ.

ಇತ್ತೀಚಿಗೆ ಅಮೆರಿಕಾದ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದೆ, ಆದ್ದರಿಂದ ಹೆಚ್ಚಿನ ಯುವಕರು ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ, ಜಿಮ್‌ಗಳು ತುಂಬಿ ತುಳುಕಾಡುತ್ತಿವೆ. ಇಲ್ಲಿ ಜೀವಿತಾವಧಿ ಸುಮಾರು ಎಪ್ಪತ್ತ ಏಳು ವರ್ಷಗಳಷ್ಟು ಇದೆ, ಇದು ಭಾರತಕ್ಕಿಂತ ಹತ್ತು ವರುಷ ಹೆಚ್ಚು, ಆದರೆ ಇಂಗ್ಲೆಡ್‌ಗಿಂತ ಐದು ವರುಷ ಕಡಿಮೆ.

ಅಮೇರಿಕಾದಲ್ಲಿ ಅತ್ಯುತ್ತಮ ಆಸ್ಪತ್ರೆಗಳಿವೆ, ಚಿಕಿತ್ಸೆಯ ಗುಣಮಟ್ಟ ಹೆಚ್ಚಿದೆ. ಎಲ್ಲಾ ತರಹದ ವೈದ್ಯಕೀಯ ಸಲಕರಣೆಗಳ ಲಭ್ಯವಿದೆ. ಉತ್ತಮ ವೈದ್ಯರಿದ್ದಾರೆ, ಅದರಲ್ಲಿ ಅನೇಕ ಭಾರತೀಯ ಮೂಲದವರೂ ಇದ್ದಾರೆ. ಹಣಕ್ಕಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡುವುದು ಕಡಿಮೆ. ಅಗತ್ಯವಿದ್ದಲ್ಲಿ ಪರೀಕ್ಷೆ ಮಾಡುತ್ತಾರೆ, ಇಲ್ಲಿ ಮುಂಜಾಗ್ರತಾ ಕ್ರಮದ ಭಾಗವಾಗಿ ಕೆಲವು ಪರೀಕ್ಷೆಗಳನ್ನು ಮಾಡುತ್ತಾರೆ. ಬಹುತೇಕ ಜನ ಪ್ರತಿ ವರುಷ ವೈದ್ಯರನ್ನು ಭೇಟಿ ಮಾಡುತ್ತಾರೆ ಹಾಗು ಕೆಲವು ಪರೀಕ್ಷೆಗಳಿಗೆ ಒಳಪಡುತ್ತಾರೆ. ಇದರಿಂದ ಕಾಯಿಲೆಗೆ ಪತ್ತೆ ಮೊದಲೇ ಮಾಡಬಹದು, ಚಿಕಿತ್ಸೆ ಪ್ರಾರಂಭಿಸಬಹುದು.

ಅಮೇರಿಕಾದಲ್ಲಿ ಇತರೆ ಕೆಲವು ದೇಶಗಳಂತೆ ಕೆಲವು ವೈದ್ಯಕೀಯ ಸೇವೆಗಳಿಗೆ ನಗರಗಳಿಗೆ ಹೋಗಬೇಕಾದ ಪರಿಸ್ಥಿತಿ ಇಲ್ಲ. ಬಹುತೇಕ ಎಲ್ಲಾಕಡೆ ಸುಸಜ್ಜಿತ ಆಸ್ಪತ್ರೆಗಳಿವೆ. ತುಂಬಾ ದೂರ ಹೋಗುವ ಅವಶ್ಯಕತೆಯೂ ಇಲ್ಲ. ಆಸ್ಪತ್ರೆಗಳನ್ನು ಬೇಗ ತಲುಪುವ ವ್ಯವಸ್ಥೆಯೂ ಇದೆ.

ಆದರೆ ಆಸ್ಪತ್ರೆಗಳಿಗೆ ಎಡತಾಗುವುದಕ್ಕಿಂತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಮೇಲೆ ಎನ್ನುವ ಅರಿವು ಕೆಲವರಲ್ಲಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ.