ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್‌ಲ್ಯಾಂಡಿಕ್ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಐಸ್‌ಲ್ಯಾಂಡ್ ದೇಶದ ಖ್ಯಾತ ಕವಿ ಮಾಗ್ನುಸ್ ಸಿಗುರ್ದ್ಸನ್-ರವರ
(Magnus Sigurðsson) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಐಸ್‌ಲ್ಯಾಂಡ್ ದೇಶದ ದೂರದ ವೆಸ್ಟ್‌ಫ್ಜೋರ್ಡ್ಸ್ (Westfjords) ಪ್ರಾಂತ್ಯದ ಒಂದು ಸಣ್ಣ ಮೀನುಗಾರಿಕಾ ಹಳ್ಳಿಯಲ್ಲಿ 1984-ರಲ್ಲಿ ಮಾಗ್ನುಸ್ ಸಿಗುರ್ದ್ಸನ್-ರ ಜನ್ಮವಾಯಿತು. 2007-ರಲ್ಲಿ ಯೂನಿವರ್ಸಿಟಿ ಆಫ್ ಐಸ್‌ಲ್ಯಾಂಡ್ ಪ್ರೆಸ್‌ನಿಂದ ಪ್ರಕಟಿಸಲಾದ ಎಜ್ರಾ ಪೌಂಡ್-ರವರ The Pisan Cantos ಕೃತಿಯ ಅನುವಾದ ಸಿಗುರ್ದ್ಸನ್-ರ ಮೊದಲನೆಯ ಪ್ರಕಟಿತ ಪುಸ್ತಕ. ಸಿಗುರ್ದ್ಸನ್-ರ ಮೊದಲ ಕವನಗಳ ಸಂಗ್ರಹಕ್ಕಾಗಿ (Fiðrildi, mynta og spörfuglar Lesbíu) 2008-ರಲ್ಲಿ ಟೊಮಾಸ್ ಗುದ್ಮಂಡ್ಸನ್ ಪ್ರಶಸ್ತಿಯನ್ನು (Tómas Guðmundsson Prize) ನೀಡಲಾಯಿತು. 2013-ರಲ್ಲಿ ಅವರು ಪ್ರತಿಷ್ಠಿತ ಜಾನ್ ಉರ್ ವೋರ್ ಕವನ ಪ್ರಶಸ್ತಿಯನ್ನು (Jón úr Vör Poetry Award) ಪಡೆದರು. ಅವರ ಮೂರನೇ ಕವನ ಸಂಕಲನದ (Tími kaldra mána, 2013) ಇಂಗ್ಲಿಷ್ ಅನುವಾದ, Cold Moons, 2017-ರಲ್ಲಿ ಪ್ರಕಟಿಸಲಾಯಿತು. ಐಸ್‌ಲ್ಯಾಂಡಿಕ್ ಸಾಹಿತ್ಯದಲ್ಲಿ ಎಮಿಲಿ ಡಿಕಿನ್ಸನ್-ರ ಸ್ಥಾನದ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕಾಗಿ ಅವರು 2019-ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸಿಗುರ್ದ್ಸನ್-ರವರು ಐಸ್‌ಲ್ಯಾಂಡಿಕ್ ಭಾಷೆಗೆ ಅನುವಾದಿಸಿದ ಎಮಿಲಿ ಡಿಕಿನ್ಸನ್ ಅವರ ಕವಿತೆಗಳ ಸಂಗ್ರಹ 2020-ರಲ್ಲಿ ಪ್ರಕಟವಾಯಿತು. ನಾರ್ವೇ ದೇಶದ ಕವಿ ಟೋರ್ ಉಲ್ವೆನ್ (Tor Ulven) ಹಾಗೂ ಅಮೇರಿಕಾ ದೇಶದ ಕವಿ ಆ್ಯಡಲೇಯ್ಡ್ ಕ್ರಾಪ್ಸಿ-ಯವರ (Adelaide Crapsey) ಕವನಗಳನ್ನು ಇವರು ಐಸ್‌ಲ್ಯಾಂಡಿಕ್ ಭಾಷೆಗೆ ಅನುವಾದಿಸಿದ್ದಾರೆ, ಹಾಗೂ ಐಸ್‌ಲ್ಯಾಂಡಿನ ಕವಿ ಇಂಗಿಬ್ಯೋರ್ಗ್ ಹ್ಯಾರಲ್ಡ್ಸ್‌ಡೊಟಿರ್-ರವರ (Ingibjörg Haraldsdóttir) ಕವನಗಳನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸಿದ್ದಾರೆ. ಐದು ಕವನ ಸಂಗ್ರಹಗಳ ಕವಿ, ಎರಡು ಪ್ರಾಯೋಗಿಕ ಗದ್ಯ ಕಾದಂಬರಿಗಳ ಲೇಖಕ, ಹಾಗೆಯೇ ಐಸ್ಲ್ಯಾಂಡಿಕ್ ಭಾಷೆಗೆ ಅನುವಾದ ಮಾಡಿದ ಹಲವಾರು ಕವನ ಸಂಕಲನಗಳ ಅನುವಾದಕ … ಎಂದೇ, ಸಿಗುರ್ದ್ಸನ್ ಅವರನ್ನು “ಐಸ್‌ಲ್ಯಾಂಡ್ ದೇಶದ ಅತ್ಯಂತ ಗಮನಾರ್ಹ ಯುವ ಲೇಖಕರಲ್ಲಿ ಒಬ್ಬರು” ಎಂದು ಕರೆಯಲಾಗಿದೆ.
ಮಾಗ್ನುಸ್ ಸಿಗುರ್ದ್ಸನ್-ರ ಕವನಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ ಮೇಗನ್ ಅಲಿಸಾ ಮ್ಯಾಟಿಚ್-ರವರು (Megan Alyssa Matich – Meg Matich) ತಮ್ಮ ಅನುವಾದ ಅನುಭವದ ಬಗ್ಗೆ ಹಾಗೂ ಸಿಗುರ್ದ್ಸನ್-ರವರ ಕಾವ್ಯದ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ಮೆಗ್ ಮ್ಯಾಟಿಚ್-ರವರ ಅಭಿಪ್ರಾಯಗಳ, ಒಳನೋಟಗಳ ಆಯ್ದ ಭಾಗಗಳನ್ನು ಅನುವಾದಿಸಿ ಇಲ್ಲಿ ಕೊಟ್ಟಿರುವೆನು. ಇಲ್ಲಿಂದ ಮುಂದೆ ಮೆಗ್ ಮ್ಯಾಟಿಚ್-ರವರ ಮಾತುಗಳು:
ಮಾಗ್ನುಸ್ ಸಿಗುರ್ದ್ಸನ್ ಅವರು ತಮ್ಮ ಕವಿತೆಗಳಲ್ಲಿ ತಮ್ಮ ಭಾಷೆಯಲ್ಲಿರುವ ಅತಿಶಯತೆಯನ್ನು ಕಳಚಿಹಾಕುತ್ತಾ “ಏಕಾಕ್ಷರಗಳ ಸಣಕಲಾದ ಸಂಗೀತ”-ವನ್ನು ಅಭ್ಯಾಸ ಮಾಡುವಲ್ಲಿ ಒಲವು ತೋರುತ್ತಾರೆ. ಹಾಗೆಯೇ, ಅವರು ಸಂಕೀರ್ಣವಾದ ನುಡಿಯಾಟ ಮತ್ತು ಪದರಚನೆಯತ್ತ ಗಮನಕೊಡುವ ಮೂಲಕ ತಮಗೆ ತಾವೇ ನೇಮಿಸಿಕೊಂಡ ಭಾಷಾ ಮಿತಿಗಳನ್ನು ಮೀರುತ್ತಾ, ಸರಳವಾದ ಪದಗಳನ್ನು ಆಸ್ವಾದಿಸುವ ಹಾಗೂ ಅನುಭವಿಸುವ ಹೊಸ ಮಾರ್ಗಗಳನ್ನು ಕಾಣುತ್ತಾರೆ.
ಸಿಗುರ್ದ್ಸನ್ ಅವರ ಕಾವ್ಯಲೋಕವು ಸೂಕ್ಷ್ಮ ವಿವರಗಳಿಂದ ನಿರ್ಮಿಸಲ್ಪಟ್ಟಿದೆ. ಸಿಗುರ್ದ್ಸನ್-ರ ಅಡಕವಾದ, ಸಂಕೀರ್ಣ ಬರವಣಿಗೆಯ ಶೈಲಿಯನ್ನು ಅನುವಾದಿಸುವುದು ಲೇಖಕ ಮತ್ತು ಭಾಷಾಂತರಕಾರರ ನಡುವಿನ ನಿಕಟ ಸಹಯೋಗದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಅತಿ ತೆಳುವಾದ ವಸ್ತುಗಳಿಂದ ಪ್ರತಿಧ್ವನಿಸುವ, ಆಕರ್ಷಕ ಕವಿತೆಗಳನ್ನು ಸೃಷ್ಟಿಸುವ ಅವರ ಸಾಮರ್ಥ್ಯ ಅನುವಾದಕರಿಗೆ ರೋಮಾಂಚಕಾರಿ ಸವಾಲುಗಳನ್ನು ಒಡ್ಡುತ್ತದೆ, ಆದರೆ ಅದು ಅವರ ಮಾತೃಭಾಷೆಯನ್ನು ಮರುರೂಪಿಸುವ ಅವರ ಸೃಜನಶೀಲತೆ ಮತ್ತು ಯೋಗ್ಯತೆಗೆ ಕೂಡ ಸಾಕ್ಷಿಯಾಗಿದೆ.
ಸಿಗುರ್ದ್ಸನ್-ರ ಕವನಗಳನ್ನು ಭಾಷಾಂತರಿಸುವಾಗ, ನಾನು ನನ್ನನ್ನು ಒಂದು ಸನ್ಯಾಸಿಯ ಗೂಡಿನೊಳಗಿದ್ದಂತೆ ಕಂಡುಕೊಂಡೆ, ಕೇಂದ್ರೀಕೃತ ಅಭ್ಯಾಸಕ್ಕೆ ವಿಶಿಷ್ಟವಾದಂತಹ “ಪ್ರತಿಧ್ವನಿಸುವ ಮೌನ”-ವನ್ನು ಎದುರಿಸಿದೆ. ನಾನು ಅವರ ಕಾವ್ಯದೊಳಗೆ ಆಳವಾಗಿ ಮುಳುಗಿದಾಗ, ಅವರ ಕವನಗಳಿಗೆ ಸರಳವಾದ ಮತ್ತು ಧ್ವನಿ ಅಥವಾ ಅರ್ಥದಲ್ಲಿ ಸಾಮರಸ್ಯವಿಲ್ಲದ ಇಂಗ್ಲಿಷ್ “ಪರಿಹಾರಗಳನ್ನು” ರೂಪಿಸಿದೆ. ಸಿಗುರ್ದ್ಸನ್ ಅವರ ಕಾವ್ಯ ಪಿಸುದನಿಯಲ್ಲಿ ಮಾತನಾಡುತ್ತೆ; ಇದು ನನ್ನ ಕಾವ್ಯಪ್ರವೃತ್ತಿಗಳಾದ ಆರೋಹಣ ಮತ್ತು ಅಸಂಬದ್ಧ ಶಬ್ದಜೋಡಣೆಗೆ ವ್ಯತಿರಿಕ್ತವಾದ ಕಾವ್ಯ. ಇಂಗ್ಲಿಷ್-ನಲ್ಲಿ ಅವರ ಕವಿತೆಗಳನ್ನು ಕಾಣುವುದು ಎಂದರೆ ಅದು ಹೊಂದಾಣಿಕೆ ಮಾಡಿಕೊಂಡಂತೆ ಅಲ್ಲ, ಒಂದು ಸಮತೋಲನವನ್ನು ತಂದಂತೆ.
ನಾನು ಇಂಗ್ಲಿಷ್‌ಗೆ ಅನುವಾದಿಸಿದ ಅವರ ಕವನ ಸಂಕಲನ Cold Moons-ನಲ್ಲಿ, ಮಾಗ್ನುಸ್ ಸಿಗುರ್ದ್ಸನ್ ಅವರು ತಾನು ಬಯಸಿದ ಜಗತ್ತನ್ನು ವಿವರಿಸುತ್ತಾರೆ; ಇದು ಹಸಿರು ಪ್ರಪಂಚದಿಂದ ಕಲಿಯಲು ಒತ್ತು ನೀಡುವ ಜಗತ್ತಾಗಿರುತ್ತೆ ಹಾಗೂ ನಮ್ಮ ಭಾವನೆಗಳನ್ನು ಸದೆಬಡಿಯಲು ಯಂತ್ರಗಳಿಗೆ ಅನುಮತಿ ಕೊಡುವ ಬದಲು ಪ್ರಕೃತಿಯ ಸೂಕ್ಷ್ಮ ದರ್ಶನಗಳ ಕಡೆ ಗಮನ ಕೊಡುತ್ತದೆ. ಸಂಕೀರ್ಣವಾದ ನುಡಿಯಾಟ ಮತ್ತು ಅವರ ತಾಯಿನುಡಿಯಾದ ಐಸ್‌ಲ್ಯಾಂಡಿಕ್ ಭಾಷೆಯ ಅಗಾಧ ಅರವಿನ ಮೂಲಕ, ಸಿಗುರ್ದ್ಸನ್-ರು ಸಣ್ಣ ಸಣ್ಣ ಆದರೆ ಬಹು ಆಕರ್ಷಕವಾದ ಕಲಾಕೃತಿಗಳನ್ನು ರಚಿಸಲು ಸಮರ್ಥರಾಗಿದ್ದಾನೆ – ಒಂದು ಕ್ಷಣದಿಂದ ಒಂದು ಯುಗದವರೆಗೆ ಏರುವ ಮತ್ತು ಸಾವಿರ ಸಹಸ್ರಮಾನಗಳಿಂದ ಒಂದು ಸೆಕೆಂಡಿಗೆ ಇಳಿಯುವ ಕ್ಷಮತೆಯುಳ್ಳ ತುಣುಕುಗಳು. ಅವರು ತನ್ನ ಮಾತೃಭಾಷೆಯ ವಿಶ್ವವಿಜ್ಞಾನಿ.
ಅವರ ಕವಿತೆಗಳು ನೈಸರ್ಗಿಕ ಪ್ರಪಂಚದ ಪರಿಶೋಧನೆಗಳಾಗಿ ಮತ್ತು “ಕಲ್ಪನೆಯ ನಿಸರ್ಗದೃಶ್ಯ”ವಾಗಿ ಕಾರ್ಯನಿರ್ವಹಿಸುವುದಲ್ಲದೆ, ಅವು ಐಸ್ಲ್ಯಾಂಡಿಕ್ ಭಾಷೆಯ ನಮ್ಯತೆ ಹಾಗೂ ಆ ದೇಶದ ನೆಲ ಮತ್ತು ಅದರ ಜನರ ನಡುವಿನ ಸಂಬಂಧದ ಇತಿಹಾಸವನ್ನು ಎತ್ತಿ ತೋರಿಸುತ್ತವೆ. ಉದಾಹರಣೆಗೆ, ’að ykrja’ ಎಂಬ ಐಸ್‌ಲ್ಯಾಂಡಿಕ್ ಪದವನ್ನು ತೆಗೆದುಕೊಳ್ಳಿ, ಇದನ್ನು ಕವಿ ಹಲವಾರು ಸಂದರ್ಭಗಳಲ್ಲಿ ಬಳಸುತ್ತಾರೆ… ಈ ಪದಕ್ಕೆ ಎರಡು ಅರ್ಥಗಳಿವೆ – “ಪದ್ಯ ರಚಿಸುವುದು” ಮತ್ತು “ಹೊಲವನ್ನು ಉಳುಮೆ ಮಾಡುವುದು.” ಇಂತಹ ಪದಗಳನ್ನು ಅವರು ಇರಿಸುವ ಸಂದರ್ಭದ ಕ್ರಿಯಾಶೀಲತೆಯು ಅವುಗಳ ಅರ್ಥದ ಪೂರ್ಣತೆಯನ್ನು ಸಾಕಾರಗೊಳಿಸಲು ಅನುವು ಮಾಡಿಕೊಡುತ್ತದೆ.
ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್‌ಲ್ಯಾಂಡಿಕ್ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ.
ಮಾಗ್ನುಸ್ ಸಿಗುರ್ದ್ಸನ್ ಅವರ ಕವಿತೆಗಳಲ್ಲಿ, ಒಂದು ಚಿಕ್ಕ ಜೀವಿ ಕೂಡ ಬಹು ದೊಡ್ಡದಾಗಿರುತ್ತೆ. ಉದಾಹರಣೆಗೆ, ಅವರ ಕವಿತೆ Evolution (1)-ನಲ್ಲಿ ಅವರು ವಿಕಾಸವನ್ನು ಮಾನವಕೇಂದ್ರಿತವಾಗಿ ವಿವರಿಸುವುದಿಲ್ಲ. ಕೇವಲ ಒಂದು ಮಿಲಿಮೀಟರ್ ವಿಸ್ತಾರದ ರೆಕ್ಕೆಗಳನ್ನು ಹೊಂದಿರುವ ಕುಬ್ಜ ಕಣಜ ನೊಣವನ್ನು (dwarf wasp) ಕವಿ ನಮ್ಮ ಮುಂದೆ ಇಡುತ್ತಾರೆ. ಅವರು ಆ ಕುಬ್ಜ ಕಣಜ ನೊಣವನ್ನು ಕ್ಯಾಮೆರಾ ಲೆನ್ಸ್-ನ ಎದುರು ಹಿಡಿಯುತ್ತಾ ತಂತ್ರಜ್ಞಾನ ಮತ್ತು ಪ್ರಕೃತಿಯನ್ನು ಅಕ್ಕಪಕ್ಕ ಇಟ್ಟು ತೋರಿಸುತ್ತಾರೆ. ಕುಬ್ಜ ಕಣಜದ ರೆಕ್ಕೆಗಳನ್ನು ನೋಡಿ ಅವರು ಆಶ್ಚರ್ಯಪಡುತ್ತಾರೆ, “ಒಂದು ಸೆಕೆಂಡಿಗೆ 350 ಬಾರಿ” ಬಡಿಯುತ್ತೆ ಅದರ ರೆಕ್ಕೆಗಳು. ಆದರೂ, ಈ ಚಿಕ್ಕ ಜೀವಿಯನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವಂತಹ ಕ್ಯಾಮರಾವನ್ನು ತಯಾರಿಸಲು ಅವಿರತವಾಗಿ ವಿಕಸನಗೊಳ್ಳುತ್ತಿರುವ ನಮ್ಮ ತಂತ್ರಜ್ಞಾನಕ್ಕೆ ಸಹಸ್ರಾರು ವರ್ಷಗಳು ಬೇಕಾಯಿತು ಎಂದು ಅವರು ಬರೆಯುತ್ತಾರೆ. ಏತನ್ಮಧ್ಯೆ, ಈ ಜೀವಿಯು ಅದನ್ನು ನೋಡುವ ನಮ್ಮ ಸಾಮರ್ಥ್ಯದ ಹೊರತಾಗಿಯೂ ಅಸ್ತಿತ್ವದಲ್ಲಿದೆ (“ಸೆರೆಹಿಡಿಯುವುದು” ಇಲ್ಲಿ ಅಪಶಕುನ ಸೂಚಿಸುವ ಪದವಾಗಿದೆ). ಅದು ನಮ್ಮ ಮಧ್ಯಸ್ತಿಕೆ ಅಥವಾ ಆವಿಷ್ಕರಣದ ಹೊರತಾಗಿಯೂ, ‘ಉಪಯುಕ್ತತೆ,’ ‘ಕುತಂತ್ರತೆ,’ ಅಥವಾ ‘ಚತುರತೆ’ ಇಲ್ಲದ ಜೀವಿಯಾಗಿ ಸ್ವಾಭಾವಿಕವಾಗಿ ವಿಕಸನಗೊಳ್ಳುತ್ತೆ, ಸಾಧನಗಳು ಅಥವಾ ರಚನೆಗಳಂತಲ್ಲ.
ನಾನು ಮಾಗ್ನುಸ್ ಸಿಗುರ್ದ್ಸನ್ ಅವರ ಕವಿತೆಗಳಲ್ಲಿರುವ ಕಳಕಳಿಗೆ ಆಕರ್ಷಿತಳಾಗಿರುವೆ. ಕೇವಲ ಬೆರಳೆಣಿಕೆಯಷ್ಟು ಬೀಜಗಳನ್ನು ಮಾತ್ರ ಹೊಂದಿರುವ, ಅಗತ್ಯ ಬಿದ್ದಲ್ಲಿ ಮಾತ್ರ ಅವನ್ನು ಬಳಸುವ ರೈತನು ಆ ಬೀಜಗಳನ್ನು ಬಿತ್ತಿ, ಹೊಸದಾಗಿ ಉಳುಮೆ ಮಾಡಿದ ಗದ್ದೆಯ ವಿರಳತೆಯನ್ನು ಅವರ ಕವನಗಳು ಹೊಂದಿವೆ. ಅವು ಫಲವನ್ನು ನೀಡುತ್ತಿದ್ದಂತೆ, ಹಾಳೆಯಲ್ಲಿ ಜಾಗವನ್ನು ಸೃಷ್ಟಿಸುತ್ತವೆ – “ಬಿಳಿ ಬಯಲು” – ಮತ್ತು ಆ ಫಲದಿಂದ ಇನ್ನೂ ಹೆಚ್ಚು ಬೀಜಗಳು ಉತ್ಪನ್ನವಾಗುತ್ತವೆ – ನಂತರ ಅವುಗಳನ್ನು ಮುಂಬರುವ ಋತುವಿನಲ್ಲಿ ಮರು ನೆಡಲಾಗುತ್ತದೆ (ಅಥವಾ ಅವು ಸ್ವಂತವಾಗಿ ಬೆಳೆಯುತ್ತವೆ) – ಹೊಸ ಬೆಳೆ ತಯಾರಾಗುತ್ತದೆ. ಆದರೆ, ಸಿಗುರ್ದ್ಸನ್ ನಿಮ್ಮ ಗಮನವನ್ನು ಕವಿತೆಯ ಕಡೆಗೆ ತಳ್ಳುತ್ತಿದ್ದಂತೆ, ನಿಮ್ಮ ಗಮನವನ್ನು ಅಲ್ಲಿ ಏನಿಲ್ಲವೋ ಅದರ ಕಡೆಗೆ ಸೆಳೆಯುತ್ತಾರೆ. ಬಿಳಿ ಹಾಳೆಯನ್ನು ನೋಡುವುದು ಒಂದು ಆಶ್ಚರ್ಯಕರವಾದ ಅನುಭವ; ಇದು ಬಿಳಿಯ ಹರಹನ್ನು ನೋಡುವ, ನಿಜವಾಗಿಯೂ ನೋಡುವ, ಆಶ್ಚರ್ಯವಾಗಿದೆ; ಹಾಳೆಯ ಅಂಚುಗಳು ಅನಂತವಾಗಿ ವಿಸ್ತರಿಸುವ ಸಾಧ್ಯತೆಯನ್ನು ನೀಡುತ್ತದೆ. ಕೊಯ್ಲು ಮುಗಿದ ನಂತರ, ಬಂಜರು ಗದ್ದೆಯನ್ನು ಮತ್ತೆ ನಾಟಿ ಮಾಡಬೇಕು, ಹೊಸ ಪದಗಳಿಂದ. ಮತ್ತೆ “ಎಲೆಗಳು ಪ್ರಾಕ್ತನ ಮಳೆಯನ್ನು ಹನಿಸುತ್ತವೆ.”
ಇಲ್ಲಿ ನಾನು ಕನ್ನಡಕ್ಕೆ ಅನುವಾದಿಸಿದ ಮಾಗ್ನುಸ್ ಸಿಗುರ್ದ್ಸನ್-ರ ಎಲ್ಲಾ ಕವನಗಳನ್ನು ಮೇಗನ್ ಅಲಿಸಾ ಮ್ಯಾಟಿಚ್-ರವರು (Megan Alyssa Matich – Meg Matich ) ಮೂಲ ಐಸ್‌ಲ್ಯಾಂಡಿಕ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.
*****
೧
ಹೊಸತಿರುವು
ಮೂಲ: Watershed
ಆಲೋಚನೆಗಳ ಹುಚ್ಚುಹೊಳೆಯೊಂದು
ನನ್ನನ್ನು ಕಡಲತೀರಕ್ಕೆ
ಒಗೆದುಬಿಟ್ಟಿದೆ.
ಯಾರ ಕಿವಿಗೂ ಎಟುಕದಷ್ಟು ದೂರ.
ಒಂದು ಹೊಸ ಆಗಸದ ಅಡಿಯಲ್ಲಿ.
ನಾನೀಗ ಸಸಿಗಳ ನೆಡುವೆನು
ಒಂದು ಹೊಸ ಹೊಲದಲ್ಲಿ.
೨
ನೌಕಾಯಾನ
ಮೂಲ: Sailing
ನೈದಿಲೆಗಳ ಮಧ್ಯೆ ತೇಲಿ
ಹೋಗುತ್ತಿದೆ ದೋಣಿ.
ದಡದಲ್ಲಿ, ಮಲರಿದ ಚೆರಿ
ಮರಗಳ ಸಾಲು.
ವಿಲೋ ಮರಗಳ ಚಪ್ಪರದಡಿಯಲ್ಲಿ
ಮಾವಿನ-ಹಕ್ಕಿಯೊಂದನ್ನು ಬಿಟ್ಟರೆ
ಬೇರೇನೂ ಇಲ್ಲ.
ಹುಟ್ಟುಗಳ ಒಂದೊಂದು ಎಳೆತ
ಮತ್ತೂ ಹತ್ತಿರಕ್ಕೆ ತರುತ್ತೆ ನಮ್ಮನ್ನು.
೩
ಬೇಟೆಗಾರ
ಮೂಲ: Hunter
ನನಗೆ ಓದಲು ಬರುವುದಿಲ್ಲ,
ಬರೆಯಲು ಸಹ.
ನನ್ನ ಈಟಿಯೇ ನನ್ನ ಸೀಸದಕಡ್ಡಿ.
ಈ ನೀರಿನ ಮೇಲ್ಪದರವೇ
ನನ್ನ ಹಾಳೆ.
ಮೀನಿನ ನೆರಳು
ಹೊಳೆದ ಕೂಡಲೆ,
ನಾನು ನನ್ನ ಹೆಸರ
ರುಜು ಹಾಕುವೆ
ಪದರದ ಮೇಲೆ.
೪
ವಿಕಾಸ (೧)
ಮೂಲ: Evolution (1)
ಕುಬ್ಜ ಕಣಜದ ಉಡ್ಡಯನ,
ಒಂದು ಮಿಲಿಮೀಟರ್
ರೆಕ್ಕೆಯಳತೆ,
ಒಂದು ಸೆಕೆಂಡಿಗೆ
350 ಸಲ ಬಡಿಯುತ್ತೆ,
ಕೊನೆಗೂ ಛಾಯಾಚಿತ್ರದಲ್ಲಿ
ಸೆರೆಹಿಡಿಯಲ್ಪಟ್ಟಿದೆ.
ಅವಿರತವಾಗಿ ವಿಕಸನಗೊಳ್ಳುತ್ತಿರುವ
ತಂತ್ರಜ್ಞಾನಕ್ಕೆ
ಸಹಸ್ರಾರು ವರ್ಷಗಳು
ಬೇಕಾಯಿತು.
೫
ಮಳೆ
ಮೂಲ: Rain
ನಾನು ಎಲ್ಲಕ್ಕಿಂತ
ಹೆಚ್ಚಾಗಿ ಇಷ್ಟಪಡುವುದು
ಮಳೆಯನ್ನು,
ಅದು ಎಲೆಗಳ ಮೇಲಿದ್ದ
ಧೂಳನ್ನು ತೊಳೆಯುವಾಗ
ಹಾಗೂ ಒಣಗಿದ ಹುಲ್ಲು
ನೀರನ್ನು ಹೀರುವಾಗ.
ಈ ಲೋಕ ತನ್ನ
ಬಣ್ಣಗಳ ಸೂಕ್ಷ್ಮತೆಯನ್ನು
ಮರುಪಡೆಯುವವರೆಗೂ.
೬
ಹಗಲು-ಲಿಲಿ ಹೂಗಳು
ಮೂಲ: Daylilies
ಬೆಳಗ್ಗಿನ ಸೂರ್ಯ
ಮಿನುಗುತ್ತಿದ್ದಾನೆ
ಹಗಲು-ಲಿಲಿ ಹೂವೊಂದರ
ಶಿರದ ಮೇಲೆ.
ಪ್ರತಿ ದಿನ
ತುಂಬುವ ಸೆಲೆ
ಹಾಗೂ
ಖಾಲಿಯಾಗುವ ಸೀಸೆ
ಅದು.
Daylily – ಹಗಲು ಲಿಲಿ (ಗಿಡ); ಹೆಮರಕ್ಯಾಲಿಸ್ ಕುಲದ, ಒಂದೆ ದಿನಕ್ಕೆ ಬಾಡಿ ಹೋಗುವ, ಹಳದಿ ಯಾ ಕಿತ್ತಳೆ ಬಣ್ಣದ, ಲಿಲಿಯಂಥ ಹೂಗಳನ್ನು ಬಿಡುವ ಗಿಡ.
೭
ಕಾಲ್ಪನಿಕ ನಾಡು
ಮೂಲ: Imaginary Land
ಎಲೆಗಳ ಬಣ್ಣ
ಈಗ ಕೆನ್ನೇರಳೆ,
ಪ್ಲಮ್ ಹಣ್ಣುಗಳ ಹಾಗೆ.
ಮತ್ತೆ ಆ ಆಕಾಶದ ಬಣ್ಣ
ಗುಲಾಬಿ, ಅರಮನೆಯ ಹಾಗೆ.
ಹೊರಲೋಕವೇ,
ನಾನು ನಿನ್ನನ್ನು ಕುಡಿಯುವೆ.
ನಾನು ನಿನ್ನನ್ನು ಹರಿಯಬಿಡುವೆ
ನದಿಯ ಹಾಗೆ.
ಒಂದು ಕಾಲ್ಪನಿಕ ನಾಡಿನ
ಬಂಜರು ಹೊಲಗಳ ಮೇಲೆ.
೮
ಕರಾಳ ಕಾನನ
ಮೂಲ: Dark forest
ನಿನ್ನ ಪತ್ರಗಳನ್ನೆಲ್ಲಾ
ಹಿತ್ತಲ ತೋಟದಲ್ಲಿ
ಹುಗಿದೆ,
ಎಲ್ಲಾ 79 ಪತ್ರಗಳನ್ನು.
ಅವು ಚಿಗುರೊಡೆಯಲು
ಪ್ರಾರಂಭಿಸಿವೆ
ಹಿಮಪದರದ ಅಡಿಯಲ್ಲಿ.
ಮುಸ್ಸಂಜೆಯ ಬೆಳಕಿಗಾಗಿ ಹಾತೊರೆಯುತ್ತಾ,
ಛಳಿಗಾಳಿಯನ್ನು ಅರಸುತ್ತಾ.
ಒಂದು ಕರಾಳ ಕಾನನ
ಉದ್ಭವಿಸುವುದು
ಅವುಗಳಿಂದ.
೯
ಬೇಸಾಯ
ಮೂಲ: Agriculture
ಈ ಹಾಳೆ ಒಂದು ಬಿಳಿ ಬಣ್ಣದ
ಹೊಲ.
ನಾನು ಬಿತ್ತುವ
ಕಪ್ಪು ಬೀಜಗಳೇ
ಪದಗಳು.
೧೦
ಬೆಳದಿಂಗಳು
ಮೂಲ: Moonlight
ಸ್ಮರಣಾರ್ಥ
ಸೂರ್ಯ ಅಡವಿಯ ಸಾಲಿನ ಕೆಳಗೆ ಮುಳುಗಿರುವ.
ಒಬ್ಬರ ನಂತರ ಒಬ್ಬರು
ಗಣಿಕೆಲಸದವರು ಏರಿ ಬರುವರು ಹೊರಗೆ
ಭೂಮಿಯ ಒಳಗಿನಿಂದ.
ಮಸ್ಸಂಜೆಯ ಹೊತ್ತು ಅವರು
ನದಿದಡದಲ್ಲಿ ಕುಕ್ಕರಕೂರುವರು,
ಅಂಗೈ ಬೊಗಸೆಯಿಂದ ನೀರು ಕುಡಿಯುವರು,
ಹಣೆಗಳಿಂದ ಧೂಳು ತೊಳೆದುಕೊಳ್ಳುವರು.
ಅವರ ಬಿಳಿಚಿದ ಮುಖಗಳು,
ಹೊಸದಾಗಿ ಬೆಳಗಿಸಿದ 20,000 ಚಂದ್ರಗಳು
ಕಪ್ಪು ಆಕಾಶದ ಹಿನ್ನೆಲೆಯ ಮೇಲೆ.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.