ನಮ್ಮ ಹವ್ಯಾಸಿ ಕೈತೋಟ ಸದಸ್ಯರಲ್ಲಿ ಒಂದು ನಿಯಮವಿದೆ – ತಾವು ಬೆಳೆಯುವ ತರಕಾರಿ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅಂತಹ ಆಹಾರವನ್ನು ಸದಸ್ಯರಲ್ಲಿ ಹಂಚಿಕೊಳ್ಳಬಾರದು. ಈ ನಿಯಮದಿಂದ ಸದಸ್ಯರಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ. ತಮ್ಮ ತರಕಾರಿ ಹಣ್ಣು ಗಿಡಗಳನ್ನು ಕ್ರಿಮಿಕೀಟಗಳು ಭಾದಿಸುತ್ತಿವೆ ಎಂದಾದರೆ ಅವನ್ನು ತೊಲಗಿಸಲು ಸದಸ್ಯರು ತಮಗೆ ಗೊತ್ತಿರುವ ನೈಸರ್ಗಿಕ ವಿಧಾನಗಳನ್ನು ಸೂಚಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಚಳಿಗಾಲ ಮುಗಿದು, ವಾತಾವರಣದ ಬಿಸಿಗೆ ಮತ್ತಷ್ಟು ಕಾವೇರಿದ್ದು ಆಸ್ಟ್ರೇಲಿಯನ್ನರ ಮುಖವನ್ನರಳಿಸಿದೆ. ಅದರಲ್ಲೂ ನಮ್ಮ ರಾಣಿರಾಜ್ಯದವರಿಗೆ ಬಿಸಿಲಿನ ತಾಪ ಹೆಚ್ಚಾದಂತೆಲ್ಲ ಇನ್ನೂ ಖುಷಿ. ನನಗೇನೋ ಬ್ರಿಸ್ಬೇನ್ನಿನ ಬಿಸಿಲು ಇಪ್ಪತೈದು ಡಿಗ್ರಿ ದಾಟಿತೆಂದರೆ ಸಂಕಟ ಶುರುವಾಗುತ್ತದೆ. ಕೇವಲ ಐದು ನಿಮಿಷ ಹೊರಗಡೆ ಮೂವತ್ತು ಡಿಗ್ರಿ ತಾಪಮಾನದಲ್ಲಿ ಸೂರ್ಯರಶ್ಮಿಗೆ ಒಡ್ಡಿಕೊಂಡರೆ ಮುಖ, ತೋಳು-ಕೈಗಳು ಭದ್ರಾವತಿ ಬಂಗಾರದ ಬಣ್ಣಕ್ಕೆ ತಿರುಗುತ್ತವೆ. ತಲೆಗೆ ಹ್ಯಾಟ್ ಹಾಕಿಕೊಳ್ಳದೆ ಮೂವತ್ತೈದು ಡಿಗ್ರಿ ಬಿಸಿಲಲ್ಲಿ ನಡೆದರೆ, ಕೈತೋಟದ ಕೆಲಸ ಮಾಡಿದರೆ ತಲೆ ಸುತ್ತಿ ಬರುತ್ತದೆ. ಹೀಟ್ ಸ್ಟ್ರೋಕ್ ಮಹಿಮೆಯದು. ಆಗೆಲ್ಲ ನಮ್ಮ ಉತ್ತರ ಭಾರತದವರ ಬೇಸಿಗೆಯ ದಿನಚರಿ ನೆನಪಿಗೆ ಬರುತ್ತದೆ. ಯೂರೋಪಿನ ಇಟಾಲಿಯನ್ನರೂ ಕೂಡ ಹಾಗೇಯೇ. ಅಂಗಡಿ ವಹಿವಾಟು, ವ್ಯಾಪಾರಸ್ಥರು ಬೆಳಿಗ್ಗೆ ಬಿಸಿಲೇರುವಷ್ಟರಲ್ಲಿ ಅಂದರೆ ಮಿಡ್-ಮಾರ್ನಿಂಗ್ ಹತ್ತೂವರೆ/ಹನ್ನೊಂದಕ್ಕೆ ಹೊರಗಿನ ಕೆಲಸಗಳನ್ನೆಲ್ಲಾ ಮುಗಿಸಿ ಅಂಗಡಿ ಮುಚ್ಚಿ ಮಧ್ಯಾಹ್ನ ಊಟಕ್ಕೆಂದು ತೆರಳಿದರೆ ವಾಪಾಸ್ ಬರುವುದು ಬಿಸಿಲಿಳಿಯುವ ಸಮಯಕ್ಕೆ. ಸಂಜೆಯೆಲ್ಲ ಮತ್ತೆ ಕೆಲಸ, ಕಲಕಲ ಮಾತುಕತೆ. ಇದರ ವಿರುದ್ಧದ ದಿನಚರಿಯಿರುವುದು ಚಳಿರಾಷ್ಟ್ರಗಳಲ್ಲಿ. ಬೇಸಿಗೆಯಲ್ಲಿ ಜನರು ದಿನಪೂರ್ತಿ ಹೊರಗಿರುತ್ತಾರೆ ಅಥವಾ ಇರಲು ಬಯಸುತ್ತಾರೆ. ಆದಷ್ಟೂ ಬಿಸಿಲನ್ನು ದಕ್ಕಿಸಿಕೊಳ್ಳುವ ಪ್ರಯತ್ನ ಅವರದ್ದು.
ಚಳಿ ಕಳೆದು ವಸಂತಮಾಸ ಕಾಲಿಡುವಂತಾದಾಗ ಪ್ರಕೃತಿಯ ಸಹಜ ಪರಾಗಸ್ಪರ್ಶಿ ಕೆಲಸಗಾರರು ಚುರುಕಾಗುತ್ತಾರೆ. ಜೇನ್ನೊಣದ ಝೇಂಕಾರ, ಚಿಟ್ಟೆಗಳ ಹಾರಾಟಗಳ ಜೊತೆಗೆ ಮಿಡತೆ, ಕಣಜ, ಇರುವೆ ಇತ್ಯಾದಿ ಜೀವಿಗಳು ಉತ್ಸಾಹದಿಂದ ಓಡಾಡುವುದನ್ನು ನೋಡುತ್ತಿದ್ದಾಗ ಇವರೆಲ್ಲ ಚಳಿಗಾಲದಲ್ಲಿ ಎಲ್ಲಡಗಿದ್ದರು ಎಂದು ಸೋಜಿಗವಾಗುತ್ತದೆ. ನಮ್ಮ ಹವ್ಯಾಸಿ ಕೈತೋಟ ಗುಂಪಿನ ಸದಸ್ಯರಲ್ಲೂ ಹೊಸ ಹುರುಪು ಮೈತಾಳುತ್ತದೆ. ತಮ್ಮ ಕೈತೋಟಕ್ಕೆ ಹಾರಿ ಬರುವ ಜೇನ್ನೊಣ, ಚಿಟ್ಟೆಗಳ ಪಟ ಹಿಡಿದು ಫೇಸ್ಬುಕ್ ಗುಂಪಿನಲ್ಲಿ ಹಂಚಿಕೊಂಡು ಅವುಗಳ ಹೆಸರುಗಳನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ನಮ್ಮ ಸೌತ್-ಈಸ್ಟ್ ಕ್ವೀನ್ಸ್‌ಲ್ಯಾಂಡ್ ಪ್ರದೇಶದಲ್ಲಿ ಮೊನಾರ್ಕ್, ಕಾಮನ್ ಗ್ರಾಸ್ ಯೆಲ್ಲೊ, swallowtail, ಬ್ರೌನ್ ರಿಂಗ್ ಲೆಟ್, ಕಾಮನ್ ಕ್ರೋ ಬಟರ್ ಫ್ಲೈ, ಕಾಮನ್ ಇವಿನಿಂಗ್ ಬ್ರೌನ್, ರಿಚ್ಮಂಡ್ ಬರ್ಡ್ ವಿಂಗ್, ಲೆಮನ್ ಮೈಗ್ರಾಂಟ್ ಮುಂತಾದ ಚಿಟ್ಟೆಗಳು ಹೆಸರುವಾಸಿ.
ನಮ್ಮ ಸದಸ್ಯರು ಆಗಸ್ಟ್ ತಿಂಗಳಲ್ಲಿ seedling tray ಗಳಲ್ಲಿ ಇಟ್ಟಿದ್ದ ಬೀಜದಿಂದ ಮೊಳಕೆಯಾಗುತ್ತಿದ್ದ ತರಕಾರಿ ಗಿಡ, ಬಳ್ಳಿಗಳನ್ನು ಕೈತೋಟದ ಮಣ್ಣಿಗೆ ರವಾನಿಸುತ್ತಾರೆ. ನಮ್ಮನೆ ಕೈತೋಟದಲ್ಲಿ ಈ ಬಾರಿ ಸೀಮೆಬದನೆಕಾಯಿ, ಕುಂಬಳಕಾಯಿ, ಹಾಗಲಕಾಯಿ, ಸೌತೆಕಾಯಿ, ಮೂಲಂಗಿ, ಹುರಳಿಕಾಯಿ, ಅಲಸಂದೆ ಗಿಡ, ಬಳ್ಳಿಗಳು ದೊಡ್ಡದಾಗುತ್ತಿವೆ. ಇನ್ನೊಂದು ಕಡೆ ಅವರೆಕಾಯಿ ಬಳ್ಳಿ ಮತ್ತೆ ಹೂತಳೆದಿದೆ. ನಿಂಬೆಗಿಡವು ಮೈಯೆಲ್ಲಾ ಹೂ ಮುಡಿದು ಜೇನ್ನೊಣಗಳನ್ನು ಬನ್ನಿರೆಂದು ಕರೆಯುತ್ತಿದೆ. ಬೇರೆಬೇರೆ ವಿಧದ ಹೂಗಳು ನಲಿಯುತ್ತಿವೆ. ಚಳಿಪ್ರದೇಶಕ್ಕೆ ಹೊಂದುವ/ಒಗ್ಗುವ ಆದರೆ ನನ್ನ ಪ್ರೀತಿಗೆ ಸ್ಪಂದಿಸಿ ಬ್ರಿಸ್ಬೇನ್ ಬಿಸಿಲಲ್ಲಿ ಜೀವ ಉಳಿಸಿಕೊಂಡಿರುವ ವಿಸ್ಟೀರಿಯಾ ಬಳ್ಳಿಯು ಪ್ರತಿವರ್ಷದಂತೆ ಮತ್ತೆ ಹಸಿರಾಗಿದೆ.
ಇನ್ನೇನು passionfruit, ರಾಸ್ಪ್ಬೆರ್ರಿ ಹಣ್ಣಿನ ಸೀಸನ್ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮಲ್ಬೆರ್ರಿ/ಹಿಪ್ಪನೇರಳೆ ಹಣ್ಣು ಸಿಗುತ್ತಿದೆ. ಈ ಬಾರಿಯಾದರೂ ಮಾವಿನಮರದಲ್ಲಿ ಹೂ ಕಾಣುತ್ತದೇನೋ ಎಂದಿದ್ದ ನನ್ನ ನಿರೀಕ್ಷೆಗೆ ಕೊಕ್ ಬಿದ್ದಿದೆ. ಮಾವಿನಮರದ ಎಳೆಚಿಗುರನ್ನು possum ಇಲ್ಲಾ ಬಾವಲಿಗಳು ಮೆದ್ದು ಮುಗಿಸಿವೆ. ಹೀಗಾದರೆ ಈ ಮರ ಬೆಳೆಯುವುದೇ ಇಲ್ಲ ಎಂದುಕೊಂಡು ನಾನು ಉದ್ದನೆ ಏಣಿ ಹತ್ತಿ ಮರದ ನೆತ್ತಿಯಲ್ಲಿ ಇನ್ನೂ ಉಳಿದುಕೊಂಡಿರುವ ಚಿಗುರಿಗೆ netting ಹಾಕಬೇಕೆಂದಿದ್ದೀನಿ.
ಈಗ ಜೇನ್ನೊಣಗಳ ವಿಷಯಕ್ಕೆ ಬರೋಣ. ಕಳೆದ ಆಗಸ್ಟ್ ತಿಂಗಳಲ್ಲಿ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಪ್ರಪಂಚದಾದ್ಯಂತ ಜೇನ್ನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕೃಷಿ-ವ್ಯವಸಾಯದಲ್ಲಿ, ವಾಣಿಜ್ಯಬೆಳೆಗಳ ಉತ್ಪಾದನೆಯಲ್ಲಿ ಬಳಸಲಾಗುತ್ತಿರುವ ರಾಸಾಯನಿಕಗಳು ಇದಕ್ಕೆ ಕಾರಣ, ಎಂದು. ಹೌದು, ನಮಗೆಲ್ಲಾ ಗೊತ್ತಿರುವ ಹಾಗೆ ಕೆಲ ರಾಸಾಯನಿಕಗಳು ಎಲ್ಲಾ ಜೀವಗಳಿಗೂ ಹಾನಿಕಾರಕ. ಆಸ್ಟ್ರೇಲಿಯಾದಲ್ಲೂ ಕೂಡ ಹಲವಾರು ತರದ ರಾಸಾಯನಿಕ ಪದಾರ್ಥಗಳನ್ನು ಬಳಸಿ ಕೃಷಿ, ವಾಣಿಜ್ಯಬೆಳೆಗಳನ್ನು ಬೆಳೆಯುತ್ತಾರೆ. ಹಾನಿಕಾರಕ ರಾಸಾಯನಿಕಗಳು ವಾತಾವರಣದಲ್ಲಿ ಹರಡಿ, ಇದರಿಂದ ಜೇನ್ನೊಣಗಳು ಸಾಯುತ್ತಿವೆ ಮತ್ತು ಅವುಗಳ ವಂಶಾಭಿವೃದ್ಧಿ ಆಗುತ್ತಿಲ್ಲ.
ವಿಷಯ ಅಷ್ಟೇ ಆಗಿಲ್ಲ. ನಮ್ಮ ವಿಶ್ವದಲ್ಲಿ ಗಿಡಮರಗಳು, ಬಳ್ಳಿಗಳು, ಹೂ-ಹಣ್ಣು-ತರಕಾರಿ, ಬೆಳೆ ಎಲ್ಲವೂ ಸಮರ್ಪಕವಾಗಿ ಕಾಲಕಾಲಕ್ಕೆ ಬೆಳೆಯಲು ಜೇನ್ನೊಣಗಳು ಅತ್ಯಂತ ಅವಶ್ಯಕ. ಅವುಗಳ ಪರಾಗಸ್ಪರ್ಶ ಕ್ರಿಯೆ ಈ ಹಸಿರುಜಾಲವನ್ನು ಜೀವಂತವಾಗಿಸಿದೆ. ಜೇನ್ನೊಣವಿಲ್ಲ ಎಂದಾದರೆ ಪರಾಗಸ್ಪರ್ಶ ಕೆಲಸ ಕುಂಠಿತವಾಗುತ್ತದೆ ಅಥವಾ ನಿಂತೇಹೋಗುತ್ತದೆ. ಆಸ್ಟ್ರೇಲಿಯಾದಲ್ಲಿ ಆಗಸ್ಟ್‌ನಲ್ಲಿ ಪ್ರಕಟವಾದ ಸುದ್ದಿಗೆ ಆಧಾರವಾಗಿದ್ದು ಒಂದು ವರದಿ. ‘ಆಸ್ಟ್ರೇಲಿಯನ್ ಆರ್ಥಿಕ ವಲಯಕ್ಕೆ ಜೇನ್ನೊಣ ಪರಾಗಸ್ಪರ್ಶ ತರುವ ಮೌಲ್ಯ’ ಎಂಬ ಈ ವರದಿಯಲ್ಲಿ ಬರೋಬ್ಬರಿ ೧೨.೯ ಬಿಲಿಯನ್ ಡಾಲರ್ ಮೌಲ್ಯದ ಬೆಳೆಗಳು ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ ಜೇನ್ನೊಣ ಪರಾಗಸ್ಪರ್ಶ ಕ್ರಿಯೆಯನ್ನು ಅವಲಂಬಿಸಿದ್ದವು. ಈ ವರದಿಯ ಪ್ರಕಾರ ಜೇನ್ನೊಣ ಪರಾಗಸ್ಪರ್ಶ ಕ್ರಿಯೆಯ ಆರ್ಥಿಕ ಮೌಲ್ಯ ೪.೬ ಬಿಲಿಯನ್ ಡಾಲರ್. ಅಂದರೆ ಜೇನ್ನೊಣವಿಲ್ಲದಿದ್ದರೆ ಆಸ್ಟ್ರೇಲಿಯನ್ ಆರ್ಥಿಕ ವ್ಯವಸ್ಥೆಗೆ ಏಟು ಬೀಳುತ್ತದೆ. ಇಂತಹುದೆ ಮತ್ತೆರಡು ಅಂತಾರಾಷ್ಟ್ರೀಯ ವರದಿಗಳನ್ನು ಆಧರಿಸಿ ಸುದ್ದಿವಾಹಿನಿಗಳು ಹೇಳಿದ್ದು ಜೇನ್ನೊಣ ಸಾಕಣೆ, ಜೇನು ಉತ್ಪತ್ತಿ ಮತ್ತು ಮಾರಾಟವು ಬಿಲಿಯನ್ ಗಟ್ಟಲೆ ವಹಿವಾಟು. ಪ್ರಪಂಚದಾದ್ಯಂತ ಲಕ್ಷಾಂತರ ಜನ ತಮ್ಮ ದಿನನಿತ್ಯದ ಆಹಾರದಲ್ಲಿ ಜೇನು ಬಳಸುತ್ತಾರೆ. ಒಂದೆಡೆ ಜೇನ್ನೊಣಗಳು ಜೀವಜಾಲಕ್ಕೆ ಅತ್ಯವಶ್ಯಕ ಎಂದೆನಿಸಿದರೆ ಇನ್ನೊಂದೆಡೆ ಮನುಷ್ಯರು ಅವನ್ನು ಕೊಲ್ಲುತ್ತಿದ್ದಾರೆ.
ನಮ್ಮ ಹವ್ಯಾಸಿ ಕೈತೋಟ ಸದಸ್ಯರಲ್ಲಿ ಒಂದು ನಿಯಮವಿದೆ – ತಾವು ಬೆಳೆಯುವ ತರಕಾರಿ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅಂತಹ ಆಹಾರವನ್ನು ಸದಸ್ಯರಲ್ಲಿ ಹಂಚಿಕೊಳ್ಳಬಾರದು. ಈ ನಿಯಮದಿಂದ ಸದಸ್ಯರಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ. ತಮ್ಮ ತರಕಾರಿ ಹಣ್ಣು ಗಿಡಗಳನ್ನು ಕ್ರಿಮಿಕೀಟಗಳು ಭಾದಿಸುತ್ತಿವೆ ಎಂದಾದರೆ ಅವನ್ನು ತೊಲಗಿಸಲು ಸದಸ್ಯರು ತಮಗೆ ಗೊತ್ತಿರುವ ನೈಸರ್ಗಿಕ ವಿಧಾನಗಳನ್ನು ಸೂಚಿಸುತ್ತಾರೆ. ಇದರಿಂದ ಸಿಗುವ ಸಮಾಧಾನ, ಕೆಮಿಕಲ್-ಫ್ರೀ ಆಹಾರ ತಿನ್ನುವ ತೃಪ್ತಿಗೆ ಕೂಡ ಬಹಳ ಮೌಲ್ಯವಿದೆ. ರಾಸಾಯನಿಕವಿಲ್ಲದ ಕೈತೋಟಕ್ಕೆ ದುಂಬಿ, ಜೇನ್ನೊಣಗಳು ಹಾರಿ ಬರುತ್ತವೆ. ಹೂವಿಂದ ಹೂವಿಗೆ ಹಾರುತ್ತಾ ಆನಂದಿಸುತ್ತವೆ. ಅವನ್ನು ನೋಡುತ್ತಾ ಫೋಟೋ ತೆಗೆಯುವ ನಮ್ಮ ಸದಸ್ಯರು ಹಂಚಿಕೊಳ್ಳುವ ಸಂತೋಷದಿಂದ ಸಮುದಾಯ ಆರೋಗ್ಯ, ಸೌಖ್ಯ ಹೆಚ್ಚುತ್ತದೆ. ಸ್ಥಳೀಯ ಜೇನ್ನೊಣಗಳನ್ನು ಆಕರ್ಷಿಸಲು ಸ್ಥಳೀಯ ಗಿಡಮರಗಳನ್ನು ಬೆಳೆಸಿ ಎನ್ನುವ ಕರೆಗೂ ಓಗೊಟ್ಟಂತಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ಅನೇಕರಿಗೆ ಜೇನುಸಾಕಣೆ ಒಂದು ಹವ್ಯಾಸ ಹಾಗೂ ಪಾರ್ಟ್ ಟೈಮ್ ಉದ್ಯೋಗ-ವರಮಾನ. ಅದೇನೂ ಸುಲಭದ ಹವ್ಯಾಸವಲ್ಲ. ನಿಗದಿತ ಸ್ಥಳ, ಪರಿಕರಗಳು, ದಿರಿಸು, ಸರಕಾರದಿಂದ ಪರವಾನಗಿ, ಒಳ್ಳೆಯ ನೆಟ್ವರ್ಕ್, ಸಮಯ ಮತ್ತು ತಾಳ್ಮೆ ಇರಬೇಕು. ಪುಟ್ಟ, ಸಣ್ಣ, ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬಹುದು. ಹವ್ಯಾಸಿ ಕೈತೋಟದಂತೆ ನಿಜವಾಗಿಯೂ ಅರ್ಥಪೂರ್ಣವಾಗಿ ಜೇನು ಸಾಕಣೆಯನ್ನು ಅಪ್ಪಿಕೊಂಡರೆ ಅದೊಂದು ಮಾನಸಿಕ ಆರೋಗ್ಯದ ಥೆರಪಿಯಾಗುತ್ತದೆ. ಜೇನ್ನೊಣಗಳು ಮನುಷ್ಯರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತವೆ. ಬಿಲಿಯನ್ ಡಾಲರ್ ಆರ್ಥಿಕ ಮೌಲ್ಯಕ್ಕಿಂತಲೂ ಇದು ಹೆಚ್ಚು, ಎಂದು ಬಲ್ಲವರು ಹೇಳುತ್ತಾರೆ. ಹೌದೆನಿಸುತ್ತದೆ. ಜೇನ್ನೊಣಗಳ, ಚಿಟ್ಟೆಗಳ ಹಾರಾಟವನ್ನು ನೋಡುತ್ತಾ ಇರುವುದೆ ಸಮಾಧಾನ ತರುತ್ತದೆ. ನಮ್ಮನೆ ಕೈತೋಟದ ಆರೋಗ್ಯ ಚೆನ್ನಾಗಿದೆ ಎಂದೆನಿಸಿ ಖುಷಿಯಾಗುತ್ತದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.