ಮಾರ್ಕ್ವೆಜ್‌ನ ಅದ್ಭುತರಮ್ಯ ಕಾದಂಬರಿ ಒಂದು ನೂರು ವರ್ಷಗಳ ಏಕಾಂತ ಕೃತಿಯನ್ನು ಓದಿದವರಿಗೆ ಆ ರೀತಿಯ ಅದ್ಭುತರಮ್ಯ ಪರಿಚಯವನ್ನು ಈ ಸಿನಿಮಾ ಮೂಡಿಸುತ್ತದೆ. ಸದಾ ಮಳೆ ಹಿಡಿದ ಊರು, ಪಾತಾಳಲೋಕದ ಅನುಭವ ನೀಡುವ ಬಾವಿಯಲ್ಲಿನ ಚಿತ್ರಣ ಚಿತ್ರಕ್ಕೆ ಒಂದು ನಿಗೂಢತೆಯನ್ನು ಒದಗಿಸಿ ಭಯ ಮತ್ತು ಕುತೂಹಲದಿಂದ ನಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.
ಹಿಂದಿಯ “ತುಂಬಾಡ್”‌ ಸಿನಿಮಾದ ಕುರಿತು ಗೊರೂರು ಶಿವೇಶ್‌ ಬರಹ ನಿಮ್ಮ ಓದಿಗೆ

ನಾವು ಬಾಲ್ಯಕಾಲದಲ್ಲಿ ಓದಿದ ಕೇಳಿದ ಕಥೆಗಳನ್ನು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ನಮ್ಮನ್ನು ಪೊರೆಯುವ ದೇವಾನುದೇವತೆಗಳ ಕುರಿತಾದ ಕಥೆಗಳು. ನಾವು ಆಚರಿಸುವ ಪ್ರತಿ ಹಬ್ಬ, ಜಾತ್ರೆ, ತೇರು ಹಾಗೂ ಇತರೆ ಆಚರಣೆಗಳ ಹಿನ್ನೆಲೆಯಲ್ಲಿ ಬರುವ ಪುರಾಣ ಮತ್ತು ಐತಿಹ್ಯಗಳ ಆಧಾರಿತ ಕಥೆಗಳು. ಇದರ ಜೊತೆಗೆ ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಉಪಕಥೆಗಳಾಗಿ ಬರುವ ಅನೇಕ ದೇವತೆಗಳ ಮತ್ತು ಅವರ ವಂಶದ ರಾಜರುಗಳ ಕಥೆಗಳು ಇವುಗಳನ್ನು ಕುರಿತಾಗಿ ಅನೇಕ ಸಿನಿಮಾಗಳು ಮತ್ತು ಗಿರೀಶ್ ಕಾರ್ನಾಡರಂಥ ನಾಟಕಕಾರರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ.

ಎರಡನೆಯ ರೀತಿಯ ಕಥೆಗಳೆಂದರೆ ಅವು ಪಂಚತಂತ್ರ ಹಾಗೂ ಈಸೋಪನ ನೀತಿಕಥೆಗಳು. ಈ ಕಥೆಗಳಲ್ಲಿ ಪ್ರಾಣಿ-ಪಕ್ಷಿಗಳೆ ಕಥೆಗಳ ನಾಯಕರು, ಹಾಗೂ ಪಾತ್ರಗಳಾಗಿ ಅವು ಮನುಷ್ಯ ಸ್ವಭಾವವನ್ನು ಹೊಂದಿ ಮನುಷ್ಯರಂತೆಯೇ ವ್ಯವಹಾರ ಹಾಗೂ ಮಾತುಕತೆಗಳನ್ನು ಆಡುತ್ತಾ ಮನುಷ್ಯರ ಗುಣಾವಗುಣಗಳನ್ನು ಪರಿಚಯಿಸುತ್ತ ನೀಡುವ ನೀತಿ ಕಥೆಗಳು. ಅದರಲ್ಲೂ ಮುಟ್ಟಿದ್ದೆಲ್ಲ ಚಿನ್ನವಾಗುವ ವರಪಡೆದ ಮೈದಾಸನ ಕಥೆ, ಬಂಗಾರದ ಮೊಟ್ಟೆ ಇಡುವ ಕೋಳಿಯ ಕಥೆ ದುರಾಸೆಯ ಫಲವನ್ನು ಹೇಳುವ ಕಥೆಗಳು ಪ್ರಾಥಮಿಕ ಶಾಲೆಯಲ್ಲಿ ಪಠ್ಯವಾಗಿದ್ದ ಕಥೆಗಳು ಕೂಡ ಹೌದು.

ಮೂರನೆಯ ರೀತಿಯ ಕಥೆಗಳೆಂದರೆ ಮೈಮನ ನಡುಗಿಸುವ ದೆವ್ವ ಬೇತಾಳ ಪಿಶಾಚಿಗಳ ಕಥೆಗಳು. ಮುಳ್ಳು ಮುತ್ತುಗದ ಮರವನ್ನೇರಿದ ಬೇತಾಳವನ್ನು ಕೆಳಗಿಳಿಸಿ ಅದನ್ನು ಹೊತ್ತು ಸಾಗುವ ವಿಕ್ರಮನಿಗೆ ಬೇತಾಳವು ಹೇಳುವ ಚಿತ್ರ ವಿಚಿತ್ರವಾದ ಕಥೆಗಳು, ಕಥೆಯ ಕೊನೆಗೊಂದು ಪ್ರಶ್ನೆ, ಪ್ರಶ್ನೆಗೆ ವಿಕ್ರಮಾದಿತ್ಯನ ಉತ್ತರದ ಭಟ್ಟಿ ವಿಕ್ರಮಾದಿತ್ಯನ ಕಥೆಗಳು. ಜನಪದ ಶೈಲಿಯ ನೂರಾರು ಸಿನಿಮಾಗಳಲ್ಲಿ ಬರುವ ಏಳು ಸಮುದ್ರವನ್ನು ದಾಟಿದರೆ ಸಿಗುವ ಒಂದು ಕೀಳು ಸಮುದ್ರ, ಆ ಸಮುದ್ರವನ್ನು ದಾಟಿ ಅಲ್ಲಿಂದ ದುರ್ಗಮದ ಹಾದಿಯನ್ನು ಸಾಗಿದರೆ ಸಿಗುವ ಪರ್ವತ ಗುಹೆ. ಆ ಗುಹೆ ಕಾಯುತ್ತಿರುವ ಅಟಾವಿಕರು ಮತ್ತು ಸರ್ಪಗಳು, ಅವುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಿದರೆ ಸಿಗುವ ಪಂಜರದಗಿಳಿ, ಪಂಜರದಲ್ಲಿರುವ ಮಾಯ ಮರಾಠಿಯ ಪ್ರಾಣ.. ಈ ಮಾಯಾ ಮರಾಠಿ ಆದರೂ ದೈವೀಶಕ್ತಿಯನ್ನು ಒಲಿಸಿಕೊಂಡು ಆಡಬಾರದ ಆಟ ಆಡಿ ಕೊನೆಗೆ ಆದ್ದರಿಂದಲೇ ಮರಣಹೊಂದುತ್ತಾನೆ.

ಈ ಕತೆಗಳಲ್ಲಿ ಮತ್ತೆ ಎರಡು ವಿಧ, ಒಂದು ವಿಠ್ಠಲಾಚಾರ್ಯ ಪ್ರಣಿತ ಮೋಹಿನಿ ಸಿನಿಮಾಗಳು. ಈ ಮೋಹಿನಿಯರು ಸುಂದರ ನಾಯಕನನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಂತರ ಧರ್ಮಬೀರುವಾದ ಅವರ ಪತ್ನಿ ಅವರನ್ನು ವಾಪಸ್ ಪಡೆಯುವುದು ಒಂದು ರೀತಿಯದಾದರೆ ಮತ್ತೊಂದು ಮಾಂತ್ರಿಕನಾದ ಮಾಯಾಮರಾಠಿ ಸುಂದರಿಯಾದ ನಾಯಕಿಯನ್ನು ಹೊತ್ತೊಯ್ದಾಗ ಅವನ ಪ್ರಿಯಕರ ಅಥವಾ ಆಕೆಯ ಮಗ ಆತನನ್ನು ಸಂಹರಿಸಿ ಆಕೆಯನ್ನು ವಾಪಸ್ ಪಡೆಯುವ ಕಥೆಗಳು, ಸಿನಿಮಾಗಳು .ಇಲ್ಲಿ ಮಾಯಾ ದಂಡ, ಮಾಯಾ ಚಾಪೆ, ಮಂತ್ರಿಸಿದ ಮಾವಿನಕಾಯಿ… ಹೀಗೆ ಅದ್ಭುತವೆನ್ನಬಹುದಾದ ವಸ್ತುಗಳು, ಕನ್ನಡದಲ್ಲಿ ಪಾತಾಳ ಮೋಹಿನಿಯಿಂದ ಹಿಡಿದು ಏಟು ಎದುರೇಟು, ಪ್ರಚಂಡ ಕುಳ್ಳ ಮುಂತಾಗಿ ಬಿ ವಿಠ್ಠಲಾಚಾರ್ಯ ಹಾಗೂ ಸುಬ್ಬರಾವ್‌ರವರ ಅನೇಕ ಸಿನಿಮಾದ ಕಥೆಗಳು ಇದೆ ಧಾಟಿಯನ್ನು ಹೊಂದಿವೆ.

ನಾಲ್ಕನೆಯ ರೀತಿಯ ಕಥೆಗಳೆಂದರೆ ಭೂತಗಳ ಕಥೆಗಳು. ಕಾಡಿನ ನಡುವೆಯೇ ಇಲ್ಲ ಎಸ್ಟೇಟ್‌ನ ಮಧ್ಯೆ ಇರುವ ಒಂದು ಕಾಲದಲ್ಲಿ ಭವ್ಯವಾಗಿದ್ದು ಈಗ ಹಾಳು ಬಿದ್ದಿರುವ ಒಂದು ಬಂಗಲೆ. ಆ ಬಂಗಲೆಗೆ ವಿವಿಧ ಕಾರಣಗಳಿಗಾಗಿ ಬರುವ ಐದಾರು ಜನರ ತಂಡ, ಆ ತಂಡದ ಒಬ್ಬೊಬ್ಬ ಸದಸ್ಯರು ಅಲ್ಲಿರುವ ಅತೃಪ್ತ ಆತ್ಮಕ್ಕೆ ಬಲಿಯಾಗುತ್ತ ಹೋಗುವುದು ಕೊನೆಗೆ ಕಥೆಯ ನಾಯಕ ಅಥವಾ ನಾಯಕಿ ಆ ಸಮಸ್ಯೆಗೊಂದು ಪರಿಹಾರ ಕಂಡುಹಿಡಿದು ಹಂತ ತಲುಪುವ ಕಥೆಗಳು. ಇಂತಹ ಕಥೆಗಳನ್ನು ಹೊಂದಿದ ಸಿನಿಮಾಗಳಂತೆ ಪುಂಖಾನುಪುಂಖವಾಗಿ ಬಿಡುಗಡೆಯಾಗುತ್ತಲೇ ಇವೆ.

ಇನ್ನು ಕೆಲವು ಗೋಲ್ಡ್ ಹಂಟಿಂಗ್ ಕಥೆಗಳು ಯಾವುದೋ ಕಾಲದ ರಾಜ-ಮಹಾರಾಜರುಗಳು ಬಿಟ್ಟುಹೋದ ಅಪಾರ ಧನಕನಕ ರಾಶಿಯ ಗುಪ್ತನಿಧಿ. ಆ ನಿಧಿಯನ್ನು ಹುಡುಕಲು ಹೊರಟ ಅನೇಕ ತಂಡಗಳು, ಆ ತಂಡಗಳ ಮುಖಾಮುಖಿ, ಆ ತಂಡಗಳು ರೂಪಿಸುವ ಯೋಜನೆ, ಮಾಡುವ ಪಿತೂರಿ, ವಂಚನೆ ಮತ್ತು ಅತಿಯಾಸೆಗೆ ತಾವೇ ಬಲಿಯಾಗುವುದು…. ಇಂತಹ ಕಥೆ ಹಾಗೂ ಸಿನಿಮಾಗಳ ಹೂರಣ. ಹಾಲಿವುಡ್‌ನ ಮೆಕ್ಯಾನಾಸ್ ಗೋಲ್ಡ್, ಇಂಡಿಯಾನಾ ಜೋನ್ಸ್‌ನಿಂದ ಹಿಡಿದು ಕನ್ನಡದಲ್ಲಿ ಗಂಡಬೇರುಂಡ, ವಜ್ರದ ಜಲಪಾತ ಬಂಗಾರದ ಗುಡಿ.. ಮುಂತಾಗಿ ಸಾಗಿ ಅವನೇ ಶ್ರೀಮನ್ನಾರಾಯಣದವರೆಗೆ ಮುಂದುವರೆದುಕೊಂಡು ಬಂದಿದೆ. ಇಂತಹ ಕಥೆಗಳು, ಸಿನಿಮಾಗಳು, ರೋಚಕವಾಗಿರುವುದರಿಂದ ಇದನ್ನು ಓದುವ ನೋಡುವ ಸಾಕಷ್ಟು ಓದುಗರು ಮತ್ತು ಸಿನಿಪ್ರೇಕ್ಷಕರು ಉಂಟು.

ಮೇಲಿನ ಎಲ್ಲ ಕಥೆಗಳನ್ನು ಬಟ್ಟಿ ಇಳಿಸಿ ಅದರ ಸಾರವನ್ನು ತೆಗೆದು ಒಂದು ಸಿನಿಮಾ ಮಾಡಿದರೆ ಆಗ ಸಿಗುವುದೇ ಮರಾಠಿ ಸಂಸ್ಕೃತಿಯ ಹಿನ್ನಲೆಯ ಹಿಂದಿ ಸಿನಿಮಾ “ತುಂಬಾಡ್”. ಇದರ ನಿರ್ದೇಶನ ರಾಹಿ ಅನಿಲ್ ಬಾರ್ವೆರವರಾಗಿದ್ದರೂ ಆನಂದ್ ಗಾಂಧಿ (ಕ್ರಿಯೇಟಿವ್ ಡೈರೆಕ್ಟರ್) ಆದೇಶ್ ಪ್ರಸಾದ್ (ಸಹ-ನಿರ್ದೇಶಕ)ರಾಗಿ ನಿರ್ದೇಶಕರಿಗೆ ನೆರವು ನೀಡಿದ್ದಾರೆ. ಚಿತ್ರಕಥೆ ಬರೆಯಲು ಸುಮಾರು ಒಂಬತ್ತು ತಿಂಗಳು ಮತ್ತು ಚಿತ್ರದ ನಿರ್ಮಾಣಕ್ಕಾಗಿ ಸುಮಾರು ಆರು ವರ್ಷಗಳ ಸುದೀರ್ಘ ಅವಧಿಯನ್ನು ತೆಗೆದುಕೊಂಡಿದೆ ಚಿತ್ರತಂಡ. ಚಿತ್ರ ಬಿಡುಗಡೆಯಾಗಿ ಹಲವು ವರ್ಷಗಳೇ ಕಳೆದಿವೆ. ತುಂಬಾದ್ ಹೆಸರಿನ ಸಿನಿಮಾ ಒಂದಿದೆ ಎಂದು ಬಹಳಷ್ಟು ಬಹಳಷ್ಟು ಸಿನಿಪ್ರೇಕ್ಷಕರಿಗೆ ಗೊತ್ತಿಲ್ಲದೆ ಇರಬಹುದು, ಕಾರಣ ಸಂಪೂರ್ಣ ಹೊಸಬರೇ ನಿರ್ಮಿಸಿ ನಿರ್ದೇಶಿಸಿ, ಅಭಿನಯಿಸಿ ಪ್ರದರ್ಶಿಸಿದ ಚಿತ್ರ ಅದು. ಆದರೂ ಚಿತ್ರ ಬಿಡುಗಡೆಯಾದಾಗ ಬಾಲಿವುಡ್‌ನಲ್ಲಿ ಸಣ್ಣದೊಂದು ಸಂಚಲನ ನಿರ್ಮಿಸಿ 5 ಕೋಟಿ ಆಸುಪಾಸಿನ ವೆಚ್ಚದ ಈ ಚಿತ್ರ ಹದಿನಾಲ್ಕು ಕೋಟಿಯಷ್ಟು ಹಣ ಸಂಪಾದಿಸಿ ಹಿಟ್ ಚಿತ್ರಗಳ ಸಾಲಿಗೆ ಸೇರಿದ್ದು ನಿಜ. ಆದರೆ ಚಿತ್ರಕ್ಕೆ ಹೆಚ್ಚಿನ ಜನ ಮನ್ನಣೆ ಸಿಕ್ಕಿದ್ದು ಚಿತ್ರ- ಅಮೆಜಾನ್ ಪ್ರೈಮ್ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಹಿಂದಿಯ ಜೊತೆಗೆ ತಮಿಳು ತೆಲುಗು ಅವತರಣಿಕೆಯಲ್ಲಿ ಲಭ್ಯವಾದಾಗ. ಈಗ ಸ್ತ್ರೀ-2 ಹಾರರ್ ಚಿತ್ರ ಬಿಡುಗಡೆಯಾಗಿ ತಿಂಗಳಲ್ಲಿ 750 ಕೋಟಿ ಸಂಪಾದಿಸಿದೆ. ಈ ಸಂದರ್ಭದಲ್ಲಿ ಆಗ ಪಡೆದ ಜನಾದರಣೆಯನ್ನು ನಗದೀಕರಿಸಲು ತುಂಬಾಡ್ ಚಿತ್ರವನ್ನು ಓ ಟಿ ಟಿ ಇಂದ ಹಿಂಪಡೆದು ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲಾಗಿದೆ.

1947 ರಲ್ಲಿ ವಿನಾಯಕ ರಾವ್ ತನ್ನ 14 ವರ್ಷದ ಮಗ ಪಾಂಡುರಂಗನಿಗೆ ಸಮೃದ್ಧಿಯ ದೇವತೆಯ ಬಗ್ಗೆ ಹೇಳುತ್ತಾನೆ. ಅವಳು ಚಿನ್ನ (ಸಂಪತ್ತು) ಮತ್ತು ಧಾನ್ಯಗಳ (ಆಹಾರ) ಸಂಕೇತ ಮತ್ತು ಭೂಮಿಯು ಅವಳ ಗರ್ಭ. ವಿಶ್ವ ಸೃಷ್ಟಿಯಾದಾಗ ಆಕೆ 16 ಕೋಟಿ ದೇವರುಗಳಿಗೆ ಜನ್ಮ ನೀಡಿದಳು. ಹಸ್ತಾರ್, ಅವಳ ಮೊದಲ ಮತ್ತು ಅತ್ಯಂತ ಪ್ರೀತಿಯ ಸಂತಾನ. ಅವಳ ಚಿನ್ನ ಮತ್ತು ಆಹಾರಕ್ಕಾಗಿ ದುರಾಸೆಪಟ್ಟ ಹಸ್ತಾರ್ ದೇವಿಯಿಂದ ಚಿನ್ನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೂ ಅವಳ ಆಹಾರವನ್ನು ಪಡೆಯಲು ಯತ್ನಿಸುತ್ತಿರುವಂತೆ ಇತರ ದೇವತೆಗಳು ಆತನ ಮೇಲೆ ದಾಳಿ ಮಾಡಿ ಸಾಯಿಸಲೆಳಿಸಿದಾಗ ದೇವಿಯು ಹಸ್ತಾರ್‌ನ ರಕ್ಷಣೆಗೆ ಬಂದು ಅವನನ್ನು ಮುಂದೆ ಎಂದಿಗೂ ಪೂಜಿಸಲಾಗುವುದಿಲ್ಲ ಮತ್ತು ಇತಿಹಾಸದಿಂದಲೇ ಮರೆಮಾಡುವುದಾಗಿ ತಿಳಿಸಿ ಆತನನ್ನು ಕಾಪಾಡುತ್ತಾಳೆ.

ಹೀಗಾಗಿ ನೂರಾರು ವರ್ಷಗಳಿಂದ, ಹಸ್ತಾರ್ ತನ್ನ ತಾಯಿಯ ಗರ್ಭದೊಳಗೆ ಮಲಗಿದ್ದ. ಆದಾಗ್ಯೂ, ತುಮ್ಬಾದ್‌ನ ನಿವಾಸಿಗಳು, ದೇವತೆಗಳ ಶಾಪ ನಮಗೆ ವರ ಎಂದು ಆಲೋಚಿಸಿ ಹಸ್ತಾರ್‌ನನ್ನು ಒಲಿಸಿಕೊಂಡು ಚಿನ್ನವನ್ನು ಪಡೆಯಬಹುದೆಂಬ ಉದ್ದೇಶದಿಂದ ಈ ಪ್ರಾಚೀನ ನಿಷೇಧವನ್ನು ಧಿಕ್ಕರಿಸಿ ಹಸ್ತಾರ್‌ಗಾಗಿ ದೇವಸ್ಥಾನವನ್ನು ನಿರ್ಮಿಸುತ್ತಾರೆ. ಇದರಿಂದ ಇತರ ದೇವತೆಗಳ ಕೋಪದ ಜೊತೆಗೆ ಗ್ರಾಮದಲ್ಲಿ ಸದಾ ಮಳೆ ಸುರಿಯುತ್ತಿರುವಂತೆ ಶಾಪ ಪಡೆಯುತ್ತಾರೆ.

ಆರಂಭದ ಈ ಕಥಾನಿರೂಪಣೆಯ ನಂತರ ಚಿತ್ರ ಮೂರು ಅಧ್ಯಾಯದಲ್ಲಿ ಮುಂದುವರಿಯುತ್ತದೆ. 1907ರಿಂದ 1947ರ ವರೆಗಿನ ಅವಧಿಯಲ್ಲಿ ಪಿರಿಯಾಡಿಕ್ ಕತೆಯು ಮೂರು ಘಟ್ಟದಲ್ಲಿ ಮುಂದುವರೆಯುತ್ತದೆ. ವಿನಾಯಕ ಮತ್ತು ಸದಾಶಿವ ಇಬ್ಬರು ಸಹೋದರರು. ಅವರ ತಾಯಿ ಆ ಊರಿನ ಶ್ರೀಮಂತ ಹಾಗೂ ಭವ್ಯ ಬಂಗಲೆಯ ಒಡೆಯ ಭಗವಂತ ಸರ್ಕಾರನ ಬಳಿ ಸೇವೆ ಸಲ್ಲಿಸುತ್ತಿದ್ದಾಳೆ. ಆಕೆಯ ಉದ್ದೇಶ ಆತನ ಮನೆಯಲ್ಲಿರುವ ಹಸ್ತಾರ್ ಪ್ರತಿಮೆ ಒಳಗಿನ ಚಿನ್ನದ ನಾಣ್ಯವನ್ನು ಪಡೆಯುವುದು. ಆದರೆ ಅದರ ಸುಳಿವನ್ನು ಆ ಸರ್ಕಾರ್ ಬಿಟ್ಟುಕೊಡುತ್ತಿಲ್ಲ. ಇತ್ತ ಆಕೆ ಮನೆಯಲ್ಲಿರುವ ಮುಪ್ಪಾನು ಮುಪ್ಪಾದ ಮುದುಕಿಗೆ ಕಾಲಾನುಕಾಲಕ್ಕೆ ಊಟ ಕೊಡಲೇಬೇಕು. ಆದರೆ ತನ್ನ ಮಕ್ಕಳನ್ನು ಆ ಮುದುಕಿಯ ಬಳಿ ಆಕೆ ಬಿಡಲಾರಳು. ಅದಕ್ಕೆ ಅವಳದೇ ಆದ ಕಾರಣವಿದೆ.

ಬಂಗಲೆ ಯಜಮಾನ ತೀರಿಕೊಂಡ ಕಾರಣ ಆಕೆ ಊರನ್ನು ಬಿಟ್ಟು ಪುಣೆ ಗೆ ಹೋಗಲು ನಿರ್ಧರಿಸುತ್ತಾಳೆ. ಆದರೆ ಆ ಸಮಯಕ್ಕೆ ಸದಾಶಿವ ಮರದಿಂದ ಬಿದ್ದು ಘಾಸಿಗೊಳ್ಳುತ್ತಾನೆ. ಆತನನ್ನು ಅನಿವಾರ್ಯವಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ತಾಯಿ ವಿನಾಯಕನಿಗೆ ವಿಧಿಯಿಲ್ಲದೆ ಆ ಮುದುಕಿಗೆ ಊಟ ನೀಡುವ ಕೆಲಸವನ್ನು ವಹಿಸಿ ಆಕೆಯಿಂದ ತೊಂದರೆ ಎದುರಾದರೆ ‘ಹಸ್ತಾರ್ ಬರ್ತಾನೆ ಸುಮ್ಮನೆ ಮಲಗು’ ಎಂದು ಹೇಳಲು ತಿಳಿಸಿ ಹೋಗುತ್ತಾಳೆ.

ಮುದುಕಿಗೆ ಊಟ ನೀಡಲು ಹೋದ ವಿನಾಯಕನಿಗೆ ಆಗುವ ವಿಚಿತ್ರ ಅನುಭವಗಳು ಮತ್ತು ಆಕೆಯ ಭೇಟಿಯಿಂದ ಅವನ ಜೀವನದಲ್ಲಿ ಉಂಟಾಗುವ ತಿರುವುಗಳು ಮುಂದಿನ ಕಥೆಯನ್ನು ತೆರೆಯುತ್ತಾ ಹೋಗುತ್ತದೆ.

ಮಾರ್ಕ್ವೆಜ್‌ನ ಅದ್ಭುತರಮ್ಯ ಕಾದಂಬರಿ ಒಂದು ನೂರು ವರ್ಷಗಳ ಏಕಾಂತ ಕೃತಿಯನ್ನು ಓದಿದವರಿಗೆ ಆ ರೀತಿಯ ಅದ್ಭುತರಮ್ಯ ಪರಿಚಯವನ್ನು ಈ ಸಿನಿಮಾ ಮೂಡಿಸುತ್ತದೆ. ಸದಾ ಮಳೆ ಹಿಡಿದ ಊರು, ಪಾತಾಳಲೋಕದ ಅನುಭವ ನೀಡುವ ಬಾವಿಯಲ್ಲಿನ ಚಿತ್ರಣ ಚಿತ್ರಕ್ಕೆ ಒಂದು ನಿಗೂಢತೆಯನ್ನು ಒದಗಿಸಿ ಭಯ ಮತ್ತು ಕುತೂಹಲದಿಂದ ನಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.

ಚಿತ್ರದ ಅವಧಿ ಕೇವಲ ಒಂದೂವರೆ ಗಂಟೆ. ಎಷ್ಟು ಹೇಳಬೇಕು ಹೇಗೆ ಹೇಳಬೇಕು ಎಂಬ ಸ್ಪಷ್ಟತೆ ನಿರ್ದೇಶಕರಿಗೆ ಇರುವುದರಿಂದ ಚಿತ್ರ ಎಲ್ಲೂ ಅನಾವಶ್ಯಕವಾಗಿ ಎಳೆಯದೆ ಬೇಗನೆ ಮುಗಿಯುತ್ತದೆ. ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಸ್ಥಳಗಳು ಬೆಳಕಿನ ಸಂಯೋಜನೆ, ಛಾಯಾಗ್ರಹಣ, ಸಂಗೀತ, ನಟರ ಆಯ್ಕೆ ಚಿತ್ರದ ಗೆಲುವಿಗೆ ಸಹಕಾರಿಯಾಗಿದೆ. ಆದರೆ ಚಿತ್ರ ವಯಸ್ಕರಿಗೆ ಮಾತ್ರ. ಅಳ್ಳೆದೆಯವರಿಗೆ ಈ‌ ಚಿತ್ರ ಅಲ್ಲ. ಇಂಗ್ಲಿಷ್‌ನಲ್ಲಿ ಎಕ್ಸಾರ್ಸಿಸ್ಟ್ ಹಿಂದಿಯಲ್ಲಿ ಭೂತ್ ಕನ್ನಡದಲ್ಲಿ “ಶ್” ಚಿತ್ರ ನೋಡಿ ಇಷ್ಟಪಟ್ಟವರಿಗೆ ಈ ಚಿತ್ರವು ಇಷ್ಟವಾಗಬಹುದು. ಆದರೆ ಆ ಚಿತ್ರಗಳಿಗಿಂತಲೂ ವಿಭಿನ್ನವಾದ ಅನುಭವವನ್ನು ಈ ಚಿತ್ರ ನೀಡುತ್ತದೆ.