ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು
ನೆಂಟರ ಮನೆಗೆ ಬಂದಿದ್ದ ಆ ಮಗು ತನ್ನ ಅಮ್ಮನೊಂದಿಗೆ ಊರಿಗೆ ಹೊರಡುವ ಸಮಯದಲ್ಲಿ ತಗಾದೆ ಮಾಡಿತು. ʻಅಮ್ಮ ಇವತ್ತೊಂದು ದಿನ ಇಲ್ಲೇ ಇದ್ದು ನಾಳೆ ಹೋಗೋಣʼ ಅಂತ. ʻನಾಳೆ ಸ್ಕೂಲಿದೆ, ಮತ್ತೆ ಬರೋಣ, ಎರಡು ದಿನ ಇವ್ರೆಲ್ಲರ ಜೊತೆ ಇದ್ದಾಯ್ತಲ್ಲ, ಈಗ ಹೋಗೋಣʼ ಅಂತ ಹೇಳಿ ಅವನಮ್ಮ ಅವನನ್ನು ಒಪ್ಪಿಸಿ ಕರೆದುಕೊಂಡು ಹೋದಳು. ಹೋಗುವ ಮೊದಲು ಎಲ್ಲರೊಂದಿಗೂ ʻನಮ್ಮನೆಗೆ ಬನ್ನಿʼ ಎಂದು ಹೇಳಿತು ಆ ಮಗು. ನಾಲ್ಕೈದು ವರ್ಷದ ಆ ಹುಡುಗನಿಗೆ ಅಜ್ಜ, ಅಜ್ಜಿ, ಅತ್ತೆ, ಮಾವ, ಮಾವನ ಮಗನೊಂದಿಗೆ ಕಳೆದ ಎರಡು ದಿನ ಅಮೂಲ್ಯವೆನಿಸಿರಬೇಕು. ಅಪ್ಪ ಅಮ್ಮನೊಂದಿಗೆ ಇದ್ದ ಆ ಹುಡುಗ ಮನೆಯ ತುಂಬ ಜನವಿದ್ದ ಮನೆಯಿಂದ ಹೋಗಲು ಹಿಂದೆ ಮುಂದೆ ನೋಡಿರುವುದು ಸಹಜವೇ. ಅವನು ಹೋದ ಮೇಲೆ ಮನೆಯಲ್ಲಿರುವವರಿಗೆ ಮನೆಯೆಲ್ಲ ಬಣಬಣ ಎನಿಸಿತ್ತು.
ಮನೆಗೆ ಬಂದವರನ್ನು ಕಳಿಸುವುದು ಮತ್ತು ಬಂದವರು ಅಲ್ಲಿಂದ ಹೊರಡುವುದು ಎರಡೂ ಒಂದು ರೀತಿಯಲ್ಲಿ ಏನೋ ಕಳೆದುಕೊಂಡೆವು ಎನಿಸುವುದುಂಟು. ಇಬ್ಬರ ಬಾಂಧವ್ಯದ ಹಿನ್ನೆಲೆಯೂ ಇದಕ್ಕೆ ಇರುತ್ತದೆ. ಯಾರೋ ಬಂದು ಹೋದಾಗಿನ ಅನುಭವಕ್ಕೂ ಆತ್ಮೀಯರು, ಬಂಧುಗಳು ಹೊರಟಾಗಿನ ಸನ್ನಿವೇಶಕ್ಕೂ ಭಿನ್ನತೆ ಇರುತ್ತದೆ. ಆತ್ಮೀಯತೆ ಇದ್ದಲ್ಲಿ ಹೊರಡುವವರಿಗೆ ಕಳಿಸುವವರಿಗೆ ಇಬ್ಬರಿಗೂ ಧಾವಂತ ಇರುವುದಿಲ್ಲ. ಎಲ್ಲವೂ ನಿಧಾನವೇ. ಹೊರಟಾಗ ಮನೆಯವರು ಕೇಳುವುದಿದೆ, ʻಮೊಬೈಲ್ ಎಲ್ಲಿ? ಚಾರ್ಜರ್ ತಗೊಂಡಿದೀಯಾ?ʼ ಮುಂತಾಗಿ. ಕಾಲ ಬದಲಾದಂತೆ ಹೀಗೆ ವಿಚಾರಿಸುವ ಬಗೆಯಲ್ಲಿ ವ್ಯತ್ಯಾಸವಾಗುತ್ತ ಹೋಗುತ್ತದೆ. ನಾವು ಚಿಕ್ಕವರಿದ್ದಾಗಿನ ರೀತಿ ಈಗಿನದಕ್ಕಿಂತ ಬಹಳ ಭಿನ್ನವಾಗಿತ್ತು.
ಹಿಂದಿನ ಶತಮಾನದ ಎಪ್ಪತ್ತರ ದಶಕದವರೆಗೆ ಮಲೆನಾಡಿನ ನಮ್ಮ ಊರುಗಳಿಗೆ ಬಸ್ಸಿನ ಸವಲತ್ತು ತೀರ ಅಪರೂಪವಾಗಿತ್ತು. ನೆಂಟರ ಮನೆಗೆ ಹೋಗುತ್ತಿದ್ದುದು ಕಾಲ್ನಡಿಗೆಯಲ್ಲಿ ಅಥವಾ ಎತ್ತಿನ ಗಾಡಿಯಲ್ಲಿ. ದ್ವಿಚಕ್ರ ವಾಹನಗಳೂ ಇರದ ಕಾಲವದು. ಸೈಕಲ್ಗಳು ಮಾತ್ರ ಇದ್ದವು. ಹಾಗಾಗಿ ಬಂದವರು ಎರೆಡೋ ಮೂರೋ ದಿನಗಳಿದ್ದು ಹೊರಡುತ್ತಿದ್ದರು. ಮನೆಯಲ್ಲಿ ಎತ್ತಿನಗಾಡಿ ಇದ್ದವರು ಅವರನ್ನು ಗಾಡಿಯಲ್ಲಿ ಕಳಿಸುತ್ತಿದ್ದರು. ಆಗೆಲ್ಲ ಮನೆಯಿಂದ ಹೊರಡುವ ಸಂಭ್ರಮವೇ ಸಂಭ್ರಮ. ʻನಿನ್ನ ಹಲ್ತಿಕ್ಕ ಬ್ರಶ್ ತಂಗಂಡ್ಯಾ?, ಒಣಗಿಸಿದ್ದ ಬಟ್ಟೆ ಚೀಲಕ್ಕೆ ಹಾಕಿಯಾತಾ?ʼ ಅಂತ ವಿಚಾರಿಸುತ್ತಿದ್ದರು. ಇನ್ನೇನು ಹೊರಡಬೇಕು ಎನ್ನುವಾಗ ಅವರ ಮನೆ ಅಂಗಳದಲ್ಲೋ ಹಿತ್ತಿಲಿನಲ್ಲೋ ಇದ್ದ ಗುಲಾಬಿ ಕಡ್ಡಿಯೋ, ಮಲ್ಲಿಗೆಯ ಹಂಬೋ, ಡೇರೆಯ ಗಡ್ಡೆಯೋ ನೆನಪಾಗಿ, ʻಅಕ್ಕಯ್ಯ ಆ ಗಿಡ ಬೇಕು ಕೊಡು ಅಂತ ಹೇಳಿದ್ದು ಮರ್ತೇ ಹೋಗಿತ್ತುʼ ಎನ್ನುತ್ತಿದ್ದಂತೆ ಮನೆಯ ಯಜಮಾನಿ ʻಹೌದು ಯಂಗೂ ಮರ್ತೇಹೋತು. ತಡಿ ತಗಂಡು ಬರ್ತಿʼ ಅಂತ ಅದನ್ನು ಕತ್ತರಿಸಿಯೋ ಕಿತ್ತೋ ತರುತ್ತಿದ್ದರು. ಹೀಗೆ ತಂದುದನ್ನು ಪಡೆದು ಅದಕ್ಕೊಂದು ದಾರವನ್ನೋ ಬಳ್ಳಿಯನ್ನೋ ಕಟ್ಟಿ ಅದು ಮನೆಯವರೆಗೆ ತಲುಪುವಂತೆ ಜೋಪಾನವಾಗಿ ಒಯ್ಯುವುದಿತ್ತು. ದೊಡ್ಡವರೊಂದಿಗೆ ನಾವೂ ಗಾಡಿ ಮರೆಯಾಗುವವರೆಗೆ ಅಂಗಳದಲ್ಲಿ ನಿಂತು ಕೈಬೀಸುತ್ತಿದ್ದೆವು. ನಡೆದು ಹೋಗುವುದಾದಲ್ಲಿ ಕೆಲವೊಮ್ಮೆ ಊರಬಾಗಿಲವರೆಗೆ ಅಥವಾ ಕೆರೆಯೋ ಗದ್ದೆಯೋ ತೋಟವೋ ಇದ್ದರೆ ಅಲ್ಲಿವರೆಗೂ ಹೋಗುವುದಿತ್ತು. ಬಸ್ಸಿನ ಸೌಕರ್ಯ ಬಂದ ಮೇಲೆ ಮನೆಯ ಮಕ್ಕಳಿಗೆ ಅವರನ್ನು ಬಸ್ಸಿಗೆ ಹತ್ತಿಸಿ ಬರುವ ಖಯಾಲಿ. ಒಂದೋ ಎರಡೋ ಕಿ.ಮೀ ದೂರವಿರುವ ಬಸ್ ನಿಲ್ದಾಣದತನಕ ಹೋಗಿ ಅವರಿಗೆ ಟಾಟಾ ಮಾಡುವುದು ಮಜಾ ಅನಿಸುತ್ತಿತ್ತು. ಅಲ್ಲೇನಾದರೂ ಅಂಗಡಿ ಇದ್ದರೆ ಅವರ ಕೈಗೆ ಚಾಕ್ಲೇಟೋ, ಪೆಪ್ಪರಮೆಂಟೋ ಬಿಸ್ಕತ್ತೋ ಕಡಲೆಕಾಯಿ ಪೊಟ್ಟಣವೋ ಸಿಗುವುದೂ ಇತ್ತು. ಹಾಗೆ ಪಡೆದು ಮನೆಗೆ ಬಂದ ಮೇಲೆ ಆ ಮಕ್ಕಳು ಮಾಡುವ ಡೌಲು ನೋಡುವಂತಿರುತ್ತಿತ್ತು. ನೆಂಟರ ಜೊತೆಗೆ ಹೋಗದೆ ಇರುವ ಮಕ್ಕಳ ಮುಖ ಬಾಡುತ್ತಿತ್ತು. ಮನೆಗೆ ಮತ್ಯಾರಾದರೂ ಬಂದರೆ ಸಾಕು, ಅವರನ್ನು ಕಳಿಸಿ ಬರಲಿಕ್ಕೆ ಮಕ್ಕಳಲ್ಲಿ ʻನಾ ಮುಂದು ತಾ ಮುಂದು ʼ ಎನ್ನುವ ಸ್ಪರ್ಧೆ ಏರ್ಪಡುತ್ತಿತ್ತು.
ಮನೆಗೆ ಬಂದ ನೆಂಟರನ್ನು ಕಳಿಸುವ ರೀತಿ, ಅಥವಾ ಬಂದವರು ಹೊರಡುವ ಬಗೆ ಇದೆಯಲ್ಲಾ ಅದರಲ್ಲಿ ಹೆಚ್ಚಿನ ಭಿನ್ನತೆ ಇರುವುದಿಲ್ಲ. ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು. ಈಗಿನಂತೆ ಫೋನು ಇಲ್ಲದ ಕಾಲದಲ್ಲಿ ಮನೆಗೆ ಬಂದವರು ಊರಿಗೆ ತಲುಪಿ ಸುಧಾರಿಸಿಕೊಂಡು ಕಾಗದ ಬರೆದು ಅದು ನಮ್ಮ ಕೈಸೇರುವುದರಲ್ಲಿ ಬೇರೆ ನೆಂಟರೋ ಇಷ್ಟರೋ ಮನೆಗೆ ಬಂದು ಹೋಗಿಯಾಗಿರುತ್ತಿತ್ತು. ಈಗ ಹಾಗಲ್ಲ, ಫೋನ್, ಮೊಬೈಲ್ ಯುಗದಲ್ಲಿ ಅವರು ಹೋಗಿ ತಲುಪುವ ಪೂರ್ವದಲ್ಲಿಯೇ ನಾವು ಫೋನ್ ಮಾಡಿ ʻಎಲ್ಲಿದ್ದೀರಿ?ʼ ಅಂತಲೋ ʻಎಲ್ಲಿವರೆಗೆ ಹೋದಿರಿ?ʼ ಅಂತಲೋ ವಿಚಾರಿಸಿರುತ್ತೇವೆ.
ಮನೆಗೆ ಬಂದವರನ್ನು ಕಳಿಸುವುದು ಒಂದು ಬಗೆಯಾದರೆ ಮದುವೆ ಮಾಡಿ ಮಗಳನ್ನು ಗಂಡನ ಮನೆಗೆ ಕಳುಹಿಸುವುದು ನೋವು-ನಲಿವು ಎರಡೂ ಸೇರಿರುವ ಕ್ಷಣ. ಹೊಸ ಬದುಕಿಗೆ ಹೆಜ್ಜೆ ಇಡುತ್ತಿದ್ದಾಳೆ ಎನ್ನುವ ನಲಿವು ಒಂದೆಡೆಯಾದರೆ ಮುಂದಿನ ಜೀವನ ಹೇಗಿರುತ್ತದೆಯೋ ಎನ್ನುವ ದುಗುಡ ಮತ್ತೊಂದೆಡೆ; ಜೊತೆಗೆ ಇನ್ನು ಮೊದಲಿನಂತೆ ಪದೆಪದೆ ಮಗಳನ್ನು ನೋಡುವಂತಿಲ್ಲ ಎನ್ನುವ ನೋವು ಇನ್ನೊಂದೆಡೆ. ಇದಕ್ಕೆ ಕಾಲ, ದೇಶ, ಸಮುದಾಯ ಎನ್ನುವ ಯಾವ ಉಪಾಧಿಯೂ ಇಲ್ಲ. ಇದು ಸರ್ವತ್ರ. ತವರನ್ನು ಬಿಟ್ಟು ಗಂಡನ ಮನೆಗೆ ಹೊರಡುವ ಮಗಳು ʻಹುಟ್ಟಿ ಬೆಳೆದಿಹ ಮನೆಯ ಬಿಟ್ಟು ಹೊರಟೆನು ತಾಯೆ ಪುಟ್ಟ ಮಲ್ಲಿಗೆ ಹೂವ ಮುಡಿಗೆ ಮುಡಿಸುʼ ಎಂದು ಕೇಳುವ, ಹೆತ್ತವರು ʻನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವುʼ ಎಂದು ಬೀಗರಿಗೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎನ್ನುವ ಕಾಲವನ್ನು ದಾಟಿಯಾಗಿದೆ. ಎಲ್ಲ ಕಾಲಕ್ಕೂ ಬಾಳಂತನಕ್ಕೆ ಬಂದ ಮಗಳನ್ನು ಕಳುಹಿಸುವ ಸಂಕಟವೇ ಬೇರೆ. ಮಾಂಸದ ಮುದ್ದೆಯಂತಿದ್ದ ಮಗು ಎಲ್ಲರ ಮುಖವನ್ನೂ ನೋಡಿ ಏನೇನೋ ಸದ್ದು ಮಾಡುತ್ತ ನಗು ಬೀರುವ ಹೊತ್ತಿನಲ್ಲಿ ಅದನ್ನು ಕಳುಹಿಸುವ ಸಮಯ ಬಂದಿರುತ್ತದೆ. ಇನ್ನೊಮ್ಮೆ ಆ ಮಗು ಬರುವಷ್ಟರಲ್ಲಿ ಅದರ ಪ್ರಪಂಚವೇ ಬದಲಾಗಿ ಅಜ್ಜಿ ಮನೆಯ ಜನರನ್ನು ಮರೆತಿರುತ್ತದೆ.
ಶಿಕ್ಷಣದ ಕಾರಣದಿಂದ ಮಕ್ಕಳನ್ನು ಬೇರೆಡೆಗೆ ಕಳುಹಿಸುವ ಸಂಭ್ರಮ ಮತ್ತು ನೋವು ಎರಡೂ ಅನನ್ಯವಾದವು. ಮಕ್ಕಳು ಶಿಕ್ಷಣ ಪಡೆಯಲು ಹೋಗುವುದು ಸಂತೋಷದ ಸಂಗತಿಯೇ. ಆದರೆ ನಮ್ಮಿಂದ ದೂರವಿರುತ್ತಾರೆ ಎನ್ನುವ ನೋವೂ ಇರುತ್ತದೆ. ನಾವು ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ಈಗನ ಆರ್ಥಿಕ ಅನುಕೂಲ ಇರಲಿಲ್ಲ. ಹಾಗಾಗಿ, ಒಂದು ರೂಮನ್ನು ಬಾಡಿಗೆಗೆ ಹಿಡಿದರೆ ಅಲ್ಲಿ ಎರಡೋ ಮೂರೋ ವಿದ್ಯಾರ್ಥಿಗಳು ಸೇರಿ ಅಡಿಗೆ ಮಾಡಿಕೊಂಡು ಓದನ್ನು ಮುಂದುವರಿಸಬೇಕಿತ್ತು. ಊರಿಗೆ ಹೋದಾಗ ಅಮ್ಮಂದಿರು ಅವರ ಅನುಕೂಲಕ್ಕೆ ಎಂದು ಸಾರಿನಪುಡಿ, ಚಟ್ನಿಪುಡಿ ಅಂತ ಒಂದಿಷ್ಟು ತಯಾರಿ ಮಾಡಿ ಡಬ್ಬದಲ್ಲಿ ಹಾಕಿ ಕಳಿಸುವುದಿತ್ತು. ಆಗಿನ್ನೂ ಮಿಕ್ಸರ್ ಬಂದಿರಲಿಲ್ಲ. ಈಗಿನ ಹಾಗೆ ಹೊರಗೆಲ್ಲೂ ಬೇಕಾದ ಪುಡಿಗಳೂ ಸಿಗುತ್ತಿರಲಿಲ್ಲ. ʻಈ ಡಬ್ಬದಲ್ಲಿ ಇರೋದು ಇಂಥ ಪುಡಿʼ ಎನ್ನುವ ಪ್ರವರ ಬೇರೆ. ಮರೆತುಹೋಗದಂತೆ ತಮ್ಮಂದಿರೋ ತಂಗಿಯರೋ ಅವೆಲ್ಲ ಡಬ್ಬಿಗಳಿಗೂ ಆಯಾ ಪುಡಿಗಳ ಹೆಸರಿನ ಚೀಟಿ ಅಂಟಿಸುತ್ತಿದ್ದರು. ಕೆಲವರು ಉದ್ದಿನಬೇಳೆ, ಅಕ್ಕಿ, ರಾಗಿ ಹೀಗೆ ಬೇರೆ ಬೇರೆ ಧಾನ್ಯಗಳನ್ನು ತೊಳೆದು ಒಣಗಿಸಿ ಹಿಟ್ಟುಮಾಡಿ ದೋಸೆ ಮಾಡಿಕೊಳ್ಳಲು ಅನುಕೂಲವಾಗಲಿ ಎಂದು ಕಳಿಸುವುದೂ ಇತ್ತು. ಹಳ್ಳಿಯಿಂದ ನಗರಕ್ಕೆ ಹೋಗುವ ಮಕ್ಕಳ ವಿಷಯ ಹೀಗಿದ್ದರೆ, ಉನ್ನತ ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗುವ ಮಕ್ಕಳಿಗೆ ಅಲ್ಲಿ ಯಾವುದು ಸಿಗುತ್ತದೆಯೋ ಇಲ್ಲವೋ ಎಂದು ಬೇಕಾದ್ದು ಬೇಡವಾದ್ದು ಎಲ್ಲವನ್ನು ಕೊಟ್ಟು ಕಳುಹಿಸುತ್ತಿದ್ದರು. ಈಗಿನಂತೆ ಸ್ಕೈಪೋ, ವಾಟ್ಸಾಪ್ ಕಾಲೋ ಮಾಡಲು ಅನುಕೂಲಗಳಿರಲಿಲ್ಲ. ಅಂತಾರಾಷ್ಟ್ರೀಯ ಕರೆಗಳು ಕೈಗೆ ಎಟುಕುತ್ತಿರಲಿಲ್ಲ. ಯಾವಾಗ ಪತ್ರ ಬರುತ್ತದೆಯೋ ಎಂದು ಕಾಯುವುದು ಅನಿವಾರ್ಯವಾಗಿತ್ತು. ಪತ್ರ ಬಂದರೆ ಅಕ್ಕಪಕ್ಕದವರಿಗೆ ಹೇಳಿ ಸಂಭ್ರಮಿಸುತ್ತಿದ್ದರು. ಮಕ್ಕಳು ಬಂದರಂತೂ ಸ್ವರ್ಗವೇ ಧರೆಗಿಳಿದಂತೆ ಸಂತೋಷಿಸುತ್ತಿದ್ದರು. ತಿರುಗಿ ಹೊರಟಾಗ ಮತ್ತೆ ಅದೇ ಗೋಳು.
ಅನಂತರದ ಕಾಲಘಟ್ಟ ಮಕ್ಕಳು ಉದ್ಯೋಗವನ್ನರಸಿ ವಿದೇಶಕ್ಕೆ ಹೋಗುತ್ತಿದ್ದುದು. ಅವರು ಬರುತ್ತಾರೆ ಎನ್ನುವಾಗ ಅದಕ್ಕಾಗಿ ಕಾತರ, ಹೊರಟಾಗ ಇನ್ನು ಯಾವಾಗ ಬರುತ್ತಾರೋ? ಅಲ್ಲಿವರೆಗೆ ನಾವು ಇರುತ್ತೇವೋ ಇಲ್ಲವೋ ಎನ್ನುವ ಆತಂಕ. ಅವರನ್ನು ಕಳುಹಿಸಲು ವಿಮಾನ ನಿಲ್ದಾಣದವರೆಗೂ ಹೋಗಿ ಕಳಿಸಿ ಬರುವ ಸೌಖ್ಯ. ಸುಮಾರು ನಾಲ್ಕು ದಶಕಗಳ ಹಿಂದೆ ವಿದೇಶದಲ್ಲಿರುವ ಮಕ್ಕಳ ಮನೆಗೆ ಅಮ್ಮಂದಿರು ಹೋಗುವಾಗಿನ ಸಂಭ್ರವನ್ನು ನೋಡಬೇಕಿತ್ತು. ಹೋಗುವ ತಯಾರಿಗೆ ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಅಲ್ಲಿ ಏನು ಸಿಗುತ್ತದೆ ಯಾವುದು ಇಲ್ಲ ಎಂದು ಈಗಿನಂತೆ ತಿಳಿದಿರಲಿಲ್ಲ. ಪ್ರಾಯಶಃ ಅದಕ್ಕಾಗಿಯೇ ಇರಬಹುದು ಆ ಕಾಲದಲ್ಲಿ ಹಲವು ನಗೆ ಬರಹಗಳು ಮತ್ತೆ ಮತ್ತೆ ಕಾಣಿಸುತ್ತಿದ್ದವು. ಅಮ್ಮಂದಿರು ಪುಡಿ, ಕಡುಬು-ಕಜ್ಜಾಯಗಳಲ್ಲದೆ, ರುಬ್ಬುವ ಗುಂಡನ್ನೂ ಮಗನ ಮನೆಗೆ ತೆಗೆದುಕೊಂಡು ಹೊರಟಾಗಿನ ಫಜೀತಿಗಳು ನಗೆಯುಕ್ಕುಸುವಂತಿರುತ್ತಿದ್ದವು.
ಈಗಲೂ ಹಳ್ಳಿಯನ್ನು ಬಿಟ್ಟಬಂದು ನಗರ ಪ್ರದೇಶದಲ್ಲಿ ಉದ್ಯೋಗದಲ್ಲಿರುವವರು ಊರಿಗೆ ಹೋಗಿ ಮರಳಿ ಬರುವಾಗಿನ ಸಂಭ್ರಮವನ್ನು ನೋಡಬೇಕು. ಅದರಲ್ಲಿಯೂ ನಾಲ್ಕು ಚಕ್ರದ ವಾಹನ ಇರುವವರ ವಾಹನದಲ್ಲಿ ಹಿಡಿಸದಷ್ಟು ವಸ್ತುಗಳು ಅಲ್ಲಿ ಆಶ್ರಯ ಪಡೆದಿರುತ್ತವೆ. ಮನೆಯಲ್ಲಿ ಬೆಳೆದ ಸೊಪ್ಪು, ತರಕಾರಿ, ಬಾಳೆಹಣ್ಣು, ಮಾವು, ಹಲಸು, ನಿಂಬೆ ಹೀಗೆ ಆಯಾ ಪ್ರದೇಶದ ಬೆಳೆಗಳನ್ನು ಆಧರಿಸಿ ಮಕ್ಕಳ ಮನೆಗೆ ಕಳುಹಿಸಲು ಹೆತ್ತವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ʻಇದು ಈ ಬಾರಿ ಬಂದ ಹೊಸ ಫಸಲು, ನೀವೂ ತಿನ್ನಿʼ ಎನ್ನುತ್ತ ಇನ್ನಷ್ಟು ತುಂಬುತ್ತಾರೆ. ಹೈನು ಇರುವ ಮನೆಯ ಮಕ್ಕಳಿಗೆ ಕಳುಹಿಸುವ ವಸ್ತುಗಳ ಪಟ್ಟಿಯಲ್ಲಿ ತುಪ್ಪವೂ ಜಾಗವನ್ನು ಪಡೆದುರುತ್ತದೆ. ಹೀಗೆ ಮಾಡುವುದರಲ್ಲಿ ವಸ್ತುಗಳ ಪ್ರಾಧಾನ್ಯಕ್ಕಿಂತ ಮಕ್ಕಳು, ಮೊಮ್ಮಕ್ಕಳ ಮೇಲಿನ ಪ್ರೀತಿ ಮತ್ತು ಮಮಕಾರ ಮುಖ್ಯವಾಗುತ್ತವೆ. ಹಸುವೋ ಎಮ್ಮೆಯೋ ಕರು ಹಾಕಿದಾಗ ಸದ್ಯದಲ್ಲಿಯೇ ಮಕ್ಕಳು ಬರುವವರಿದ್ದಾರೆ ಎಂದಾದರೆ ಗಟ್ಟಿ ಗಿಣ್ಣು ಮಾಡಿ ಫ್ರಿಜ್ನಲ್ಲಿಟ್ಟು ಕಾಪಿಡುವ ಅವರ ನಿಷ್ಕಲ್ಮಷ ಪ್ರೀತಿಗೆ ಯಾರಾದರೂ ಸೋಲಲೇಬೇಕು. ಕೆಲವೊಮ್ಮೆ ಮನೆಗೆ ಬಂದರಿವವರ ಮನೆಯ ಯಾರಿಗೂ ಯಾವುದೋ ಪ್ರೀತಿಯೆಂದು ತಮ್ಮಲ್ಲಿರುವುದನ್ನು ಕೊಟ್ಟು ಕಳುಹಿಸುವುದೂ ಇದೆ. ಹೀಗೆ ಕೊಟ್ಟಿರುವುದು ಬೇಡವೆನಿಸಿದರೂ ತೆಗೆದುಕೊಂಡು ಹೋಗಲು ನಿರಾಕರಿಸುವುದು ಕಷ್ಟವಾಗುತ್ತದೆ.
ಯಾವುದನ್ನೇ ಆದರೂ ಬಿಟ್ಟು ಹೊರಡುವುದು, ತಾತ್ಕಾಲಿಕವಾಗಿಯಾದರೂ ದೂರವಾಗುವುದು ಸುಲಭದ್ದಲ್ಲ. ಮಾನವ ಸಂಬಂಧದ ಕೊಂಡಿ ಅಲ್ಲಿ ಬಿಗಿಯಾಗಿಯೇ ಇರುತ್ತದೆ ಎಂದೇ ಅರ್ಥ. ಇದು ಒಂದು ಸಂಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡುವ ಸಹೋದ್ಯೋಗಿಗಳು ಬೇರೆಡೆಗೆ ವರ್ಗವಾದಾಗ ಅಥವಾ ನಿವೃತ್ತರಾದಾಗಿನ ಸಂದರ್ಭ ಇರಬಹುದು ಅಥವಾ ಸಹಪಾಠಿಗಳ ಒಡನಾಟ ಮುಗಿದು ಅಗಲುವ ಸನ್ನಿವೇಶವೇ ಆಗಿರಬಹುದು; ಅಲ್ಲೊಂದು ಸವಿನೆನಪು ಮತ್ತು ನೋವು ಎರಡೂ ಇರುತ್ತದೆ. ಈ ಕಾಲದಲ್ಲಿ ಅಂತಲ್ಲ ಎಲ್ಲ ಕಾಲದಲ್ಲಿಯೂ ಅಗಲುವುದು ನೋವಿನ ಸಂಗತಿಯೇ ಆಗಿತ್ತು. ಕೃಷ್ಣನು ಗೋಕುಲದಿಂದ ಮಧುರೆಗೆ ಹೊರಟಾಗಿನ ಅವನ ಒಡನಾಡಿಗಳ ಪ್ರತಿಕ್ರಿಯೆಯನ್ನು ನಮ್ಮ ಸಾಹಿತ್ಯ ಕೃತಿಗಳು ಬಹಳ ಚೆನ್ನಾಗಿ ವರ್ಣಿಸುತ್ತವೆ. ಅಗಲುವಿಕೆಯ ಕಷ್ಟ ಏನು ಎತ್ತ ಎನ್ನುವುದು ಹಲವು ಬಗೆಯಲ್ಲಿ ಬಿಂಬಿತವಾಗಿವೆ.
ಆಯ್ತು, ಮತ್ತೆ ಸಿಗೋಣ
(ಸರಣಿ ಮುಕ್ತಾಯ)
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
ನೀವು ಚೆನ್ನಾಗಿ ಬರೆಯುತ್ತೀರಿ. ನಿಮ್ಮ ಎಲ್ಲಾ ಅಂಕಣ ಬರಹಗಳು ಇಷ್ಟವಾದವು.
ಬಿಡುವು ಮಾಡಿಕೊಂಡು ಮತ್ತೆ ಬರೆಯಿರಿ.
ಆಯ್ತು, ಮತ್ತೆ ಸಿಗೋಣ!!