ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು. ಗೌರಿ ಹಬ್ಬಕ್ಕೆ ಅರಿಶಿನ ಕುಂಕುಮಕ್ಕೆ ಪ್ರೀತಿಯಿಂದಲೇ ಅವುರ್ ಮನೇಗೆ ಹೋಗಿ ಕೊಟ್ ಬರ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಂದೆಯವರ ಕುರಿತ ಬರಹ ಇಲ್ಲಿದೆ
ಅಪ್ಪ ನನ್ನ ಬಾಲ್ಯದ ಹೀರೋ. ಈಗ್ಲೂ ನನ್ನ ಬದುಕಿನ ಮುಂದೋಟದಲ್ಲಿ ನಾಯಕನೇ. ಎಲ್ಲ ಮಕ್ಕುಳ್ಗೂ ಅಪ್ಪದೀರು ಹೀರೋಗ್ಳೆ. ಆದ್ರೆ ನಮ್ಮಪ್ಪ ನನ್ನ ಹೀರೋ ಆಗಿ ಮಾತ್ರ ಮಿಗಿಲದೆ ಸುತ್ತೂರ ಮಂದಿ, ಸಂಬಂಧಿ ಸರೀಕರು, ಅಕ್ಕ-ತಂಗೀರು, ಹೆತ್ತೋರು ಎಲ್ಲಾರ ಮನಸಾಗೂ ನಾಯಕನಾಗಿ ಮಿಗಿಲಿದ್ದು ಘನವಾದ ವಿಚಾರ.
ಎಂಟು ಮಂದಿ ಹೆಣ್ಣುಮಕ್ಕಳ ಪಟಾಲಂ ಒಳಗೆ ಏಕಮೇವ ಗಂಡು ಮಗ. ಆದ್ರೆ ಸ್ಯಾನೆ ಜನ ಮಾಡ್ದಂಗೆ ನಮ್ಮಜ್ಜಿ ತಾತ ಅಪ್ಪನ್ನ ಮಾತ್ರ ಮೆರುಸ್ಲಿಲ್ಲ. ಹೆಣ್ಣುಮಕ್ಕಳೂ ಅಷ್ಟೇ ಮುಖ್ಯವಾಗಿದ್ದೊ. ಅಪ್ಪನ್ ಮ್ಯಾಗೆ ವಸಿ ಪ್ರಾಣ ಜಾಸ್ತಿ ಮಡಗಿದ್ರು ಆಟೇಯಾ.
ಮಗಾ ಚೆಂದಾಗಿ ಕಲೀಲಿ ಅಂತಾವ ವೀರಾಪುರದಾಗೆ ಕೂಲಿಮಠಕ್ಕೆ ಸೇರ್ಸಿದ್ರು. ಅಕ್ಷರಾಭ್ಯಾಸ ಅಲ್ಲೇ ಆಯ್ತು. ಮರಳ ಮ್ಯಾಲೆ ತಿದ್ಸೋರು. ಆ ಮೇಷ್ಟ್ರುಗೆ ಸಂಬಳ ಸಾರಿಗೆ ಅಂದ್ರೆ ಸಾಲೀಗೆ ಬರಾ ಹುಡುಗರ ಹೆತ್ತೋರು ಕೊಡಾ ದವಸ ಧಾನ್ಯ. ಅವ್ರು ಸಾಧರ ಜನಾಂಗದೋರು. ನಮ್ಮಪ್ಪಂಗೆ ನಿದ್ದೆ ಬಂದ್ರೆ ಅಲ್ಲೇ ಗೋಣಿ ಚೀಲ ಹಾಕಿ ಮನುಗುಸ್ತಿದ್ರಂತೆ. ಅಪ್ಪ ಯೋಳ್ಕೊಂಡು ನಗಾಡ್ತಾರೆ. ಆಮ್ಯಾಕೆ ಒಂದ್ನೇ ಕ್ಲಾಸು ಚಿಕ್ಮಾಲೂರಿನಾಗೆ. ನಮ್ಮಜ್ಜಿ ತಾತ ಆಗಿನ್ ಕಾಲ್ದಾಗೆ ಎಲ್ಲಾ ಹೆಣ್ಣುಮಕ್ಕಳಿಗೂ ನಾಕು ಐದ್ನೇ ಕ್ಲಾಸಿನಗಂಟ ಓದ್ಸಿದ್ರು. ವಸಿನಾರಾ ವ್ಯವಾರ (ವ್ಯವಹಾರ) ಗ್ಯಾನ ಬರ್ಲಿ ಅಂಬ್ತ. ಕೊನೇ ತಂಗೀರಿಬ್ರೂ ಏಳ್ನೇ ಕ್ಲಾಸಿನ ತಕ ಬಂದಿದ್ರು. ಯಾರೂ ಹೈಸ್ಕೂಲ್ ಮೆಟ್ಲು ಹತ್ತಿರ್ಲಿಲ್ಲ. ಮುಂದುಕ್ಕೆ ಊರ್ನಾಗೆ ಇರ್ಲಿಲ್ಲ. ಅಪ್ಪನ್ನ ನಮ್ ಇಡಗೂರತ್ತೆ ಅವರೂರ್ಗೆ ಕರ್ಕೋ ಹೋಗಿ ಎರಡನೇ ಕ್ಲಾಸಿಗೆ ಸೇರ್ಸುದ್ರು. ಹದ್ದುಬಸ್ತಾಗಿಟ್ಟು ಸಿಸ್ತು ಕಲ್ಸಿ, ಬದುಕು ಕಲ್ಸಾಕೆ.
ಅತ್ತೆಯಂದ್ರಿಗೆ ಊರ ಹೆಸ್ರೆ ಅಡ್ಡೆಸ್ರು
ಅದ್ಯಾಕೋಪ್ಪ ನಮ್ಗೆ ಅತ್ತೆದೀರ ಹೆಸ್ರೇ ಗೊತ್ತಿರ್ಲಿಲ್ಲ. ಅವ್ರೂರ ಹೆಸ್ರೆ ಅವ್ರ ಅಡ್ಡೆಸ್ರಾಗಿತ್ತು. ಇಡಗೂರತ್ತೆ, ಮ್ಯಾಳ್ಯ ಅತ್ತೆ, ಮೈಸೂರತ್ತೆ, ಗರಣಿ ಅತ್ತೆ, ನಗರಗೆರೆ ಅತ್ತೆ ಅಂತಿದ್ದೊ. ತುಮ್ಕೂರಿನಾಗೆ ಮೂವಾರಿದ್ರು. ಅದ್ಕೇ ಅವ್ರಿಗೆ ಮಾತ್ರ ಹೆಸ್ರಿಡಿದು ಕರೀತಿದ್ವಿ. ಉಳ್ದೋರ ಹೆಸ್ರೂ ಸತ ಗೊತ್ತಿರಲಿಲ್ಲ. ಅದ್ರಾಗೂ ನಮ್ ಮ್ಯಾಳ್ಯದ ಅತ್ತೆ ಸ್ಯಾನೆ ಅಪರೂಪುಕ್ಕೆ ಬರ್ತಿತ್ತು. ಎಲ್ಲೋ ಮೂರೊರ್ಸುಕ್ಕೆ ಒಂದ್ ಕಿತ ಮಡಿಲು ತುಂಬಾವಾಗ ಬರ್ತಿದ್ರು. ಅದ್ಕೇ ಅವ್ರು ನಮ್ಮತ್ತೆ ಅಂಬ್ತಾನೆ ಗೊತ್ತಿಲ್ದೆ ನಮ್ಮಕ್ಕ ಒನ್ ಸತಿ ನಮ್ಮಮ್ಮನ ತಾವ ಬಂದು, ಅಮ್ಮೋ ಅದ್ಯಾರಮ್ಮೋ ಆಯಮ್ಮ ಅತ್ತೆದೀರ ಪಕ್ಕದಾಗೆ ಕುಂತು ಮಡಿಲಕ್ಕಿ ಕಟ್ಕೊಂತಾವ್ರೆ ಅಂತ ಕ್ಯೋಳಿದ್ಕೆ, ನಮ್ಮಮ್ಮ ಅವುಳ್ ಬಾಯ್ಮುಚ್ಚಿ, ಸುಮ್ಕಿರಮ್ಮಿ, ಅವ್ರೂ ನಿಮ್ಮತ್ತೇನೇಯಾ ಅಂದ್ಲಂತೆ.
ಏಳನೇ ಕ್ಲಾಸಿನತಕ ಅಲ್ಲೇ ವೋದಿದ್ದು. ಅಕ್ಕನ ಗರಡೀನಾಗೆ ಆಟೋಟದಲ್ಲೂ ಮುಂದಿತ್ತಂತೆ ಅಪ್ಪ. ಲಾಂಗ್ ಜಂಪೂ, ಐಜಂಪೂ, ಥ್ರೋಬಾಲೂ, ಓಡೋದು ಎಲ್ಲಾದ್ರಾಗೂ ಬಹುಮಾನ ತಕಂಡಿದ್ದಲ್ದೆ, ಓದೋದ್ರಾಗೂ ಸೈ ಅನ್ನಿಸ್ಕೊಂಡಿದ್ರಂತೆ. ಎಂಟನೇ ತರಗತಿಗೆ ನಮ್ಮ ಹೋಬಳಿ ಕೇಂದ್ರ ಕೊಡಿಗೇನಹಳ್ಳಿಗೆ ಬಂದರು. ಬಸ್ಸು ಖಾಲಿ ಇತ್ತಾ ನಿಲ್ಲಿಸ್ತಿದ್ರು. ಇಲ್ಲಾಂದ್ರೆ ಪಾದಗಳೇ ಗತಿ. ಯಾರಾನಾ ಸೈಕಲ್ನಾಗೆ ಹೋಗ್ತಿದ್ರೆ, ಹಿಂದೆ ಕುಂಡ್ರಿಸ್ಕೊಂಡು ಓಯ್ತಿದ್ರು. ಕೊನೇಗೆ ಅಂಗಾಡಿ ಇಂಗಾಡಿ ಒಂದೊರ್ಸ ಮುಗ್ಸಿ, ಮುಂದ್ಲ ಕ್ಲಾಸ್ಗೆ ಮಧುಗಿರೀನಾಗೆ ಹಾಸ್ಟಲ್ ಸೇರ್ಕೊಂಡ್ರು. ಹತ್ನೇ ಕ್ಲಾಸ್ ಮುಗೀತು. ಎಸೆಲ್ಸಿ ಮುಗುದ್ ಮ್ಯಾಲೆ ಬೆಂಗ್ಳೂರಾಗೆ ಒಂದು ಮಂಡೀನಾಗೆ ಕೆಲ್ಸಕ್ಕೆ ಸೇರ್ಕೊಂಡ್ರು. ಕೆಲ್ಸ ಕಲ್ತಕಂಬಾಣಿ ಅಂಬ್ತ. ಒಂದೊರ್ಸ ಆದ್ ಮ್ಯಾಕೆ ನಮ್ ತಾತ ಬೆಂಗ್ಳೂರು ಬ್ಯಾಡ, ದೊಡ್ಡಬಳ್ಳಾಪುರದಾಗೆ ಮೆಡಿಕಲ್ ಶಾಪು ಇಟ್ಕೊಡ್ತೀನಿ, ಟ್ರೇನಿಂಗ್ ತಕಾ ಬಾ ಅಂತ ಮೈಸೂರ್ಗೆ ಕಳಿಸೀರು. ಅಲ್ಲಿ ಒಂದೊರ್ಸ ಕೆ ಆರ್ ಆಸ್ಪತ್ರೇನಾಗೆ ಕಾಂಪೌಂಡರ್ ತರಬೇತಿ ಆಯ್ತು. ತಾತ ಯಾಕೋ ಮೆಡಿಕಲ್ ಶಾಪು ಇಡಾಕೆ ಹಿಂದೆ ಮುಂದೆ ನೋಡಿದ್ರು. ಸರಿ ಊರಾಗೆ ಇರಾ ಬದ್ಲಿ ವಸಿ ಕೆಲ್ಸ ಕಲಿತ್ರೆ ಸುಲಭಾಂತ ಅನ್ನುಸ್ತು. ಆಗ ತಾನೆ ಚೀನಾ ದೇಸದಿಂದ ಟಿಬೇಟಿಯನ್ನರು ಓಡಿ ಬಂದು ನಮ್ ಕರ್ನಾಟಕದಾಗೆ ಆಸರೆ ಪಡ್ಕೊಂಡಿದ್ರು. ಬೈಲುಕುಪ್ಪೇಲಿದ್ದ ಟಿಬೇಟಿಯನ್ ರೆಫ಼್ಯೂಜೀಸ್ ಕಾಲನಿನಾಗೆ ಅವುರ್ಗೆಲ್ಲ ಗುಡಿಸಲು ಹಾಕ್ಕೊಟ್ಟಿದ್ರು. ಅಲ್ಲೇ ಒಂದು ಗುಡಿಸಲಿನಾಗೆ ಆಸ್ಪತ್ರೆ ಮಾಡಿದ್ರು. ಅಲ್ಲಿಗೆ ಕಾಂಪೌಂಡರ್ ಆಗಿ ನೇಮಕ ಆದ್ರು. ಮನಗಾಕೆ ಅಲ್ಲೇ ಪಕ್ಕದಾಗಿದ್ದ ನಂದಿನಾಥಪುರದಾಗೆ ಕ್ವಾಟ್ರಸ್ ಕೊಟ್ಟಿದ್ರು. ಅಲ್ಲೂ ಒಂದೊರ್ಸ ಕೆಲ್ಸ ಮಾಡಿದ್ರು.
ಕೆಲ್ಸ ಬಿಟ್ಟು ಊರಿಗೆ ವಾಪಸ್
ಇದ್ಕೂ ಒಂದು ದೊಡ್ಡ ರಾಜಕಾರಣ ಇತ್ತು. ನಮ್ ತಾತ ನಾಜೂಕು ಜಾಸ್ತಿ. ದಿಗಿಲು ಬೀಳೋರು. ಅದೂ ಅಲ್ದೆ ಊರಿನ್ ಪಟೇಲ್ರು ಪಾಳೇಗಾರಿಕೆ ಮಾಡ್ತಿದ್ರು. ಜನ ಎಲ್ಲಾ ಅವರ ಅದ್ದುಬಸ್ತಿನಾಗೆ ಇರ್ಬೇಕಿತ್ತು. ನಮ್ ತಾತ ಹೊಗೆಸೊಪ್ಪಿನ ವ್ಯಾಪಾರದಾಗೆ ಬಂದಿದ್ದ ಕಾಸ್ನಾಗೆ ಕೆರೆ ನೀರಿನ ಆಸ್ರೆ ಇರಾ ಜಮೀನು ಖರೀದಿ ಮಾಡಿದ್ರು. ಅದ್ರಾಗೆ ಒಂದು ಬಾವಿ ತೋಡ್ಸಿದ್ರು. ಆ ಬಾವಿ ನೀರ್ನಾಗೆ ಹನ್ನೆರಡಾಣೆ ಭಾಗ ತಾತುಂಗೆ. ನಾಕಾಣೆ ಭಾಗಕ್ಕೆ ಬ್ಯಾರೆಯೋರು ಭಾಗಸ್ಥರು. ಆ ಬಾವಿ ನೀರ್ನ ಕಪಿಲೇನಾಗೆ ಎತ್ತಿ ಬ್ಯಾಸಾಯ ಮಾಡ್ತಿದ್ರು. ಊರ್ಗೆ ಕರೆಂಟ್ ಬಂತು. ಕರೆಂಟ್ ಮೋಟಾರು ಜೋಡಿಸಿದ್ರೆ ಅನುಕೂಲ ಅಂತ ತಾತ ನೋಡೀರು. ಪಟೇಲ್ರಿಗೆ ಹೊಟ್ಟೆ ಉರಿ ಆಯ್ತು. ಆ ಭಾಗಸ್ಥರಿಗೆ ಬ್ಯಾರೆ ಮೊದ್ಲೇ ಹಿತ್ತಾಳೆ ಕಿವಿ. ಈ ಪಟೇಲ್ರು ಅವ್ರ ಕಿವಿ ಕಚ್ಚಿ ಮೋಟಾರ್ ಜೋಡಿಸ್ದಂಗೆ ತಡೆ ಹಾಕೀರು. ನಮ್ಮಪ್ಪ ಬಂದು ಮಧುಗಿರಿ ಕೋರ್ಟ್ನಾಗೆ ಕೇಸು ಹಾಕ್ಸಿದ್ರು. ಕೇಸ್ನಾಗೆ ಜಡ್ಜಿ ಸಾಯೇಬ್ರು ನೀವು ಪಂಪು ಸೆಟ್ಟು ಜೋಡಿಸ್ಕಳ್ಳಿ, ಆದ್ರೆ ಭಾಗಸ್ಥರಿಗೆ ಕಪಿಲೆ ಹೊಡ್ಕಣಾಕೆ ಅವಕಾಶ ಮಾಡ್ಕೊಡಿ ಅಂತ ತೀರ್ಮಾನ ಯೋಳೀರು. ಈ ಕೋರ್ಟಿನ್ ವ್ಯವಹಾರಕ್ಕೆ ತಾತುಂಗೆ ಧೈರ್ಯ ಇರ್ಲಿಲ್ಲ. ಅಪ್ಪ ಪದೇ ಪದೇ ಕೆಲ್ಸ ಬಿಟ್ಟು ಓಡಾಡಬೇಕಿತ್ತು. ಕೊನೇಗೆ ದೌರ್ಜನ್ಯ ಸುರು ಆತು. ಜನ ಕಳ್ಸಿ ನಮ್ ಮನೇ ಮ್ಯಾಕೆ ಕಲ್ಲೆಸೆಯೋದು, ಹೊರುಕ್ ಬಂದ್ರೆ ಹೆದುರ್ಸೋದು ಸುರು ಆತು. ತಾತ ಹೆದ್ರಿ ನಡುಗೋದ್ರು. ಊರು ಬಿಟ್ಟೆ ಹೊಂಟೋಗಾಣಿ ಅಂದ್ರು. ಅಲ್ಲೀಗಂಟ ಅಣ್ಣ ತಮ್ದೀರೆಲ್ಲ ಊರು ಬಿಟ್ರೂ, ಇಲ್ಲೇ ಇದ್ದೋರು. ನಮ್ಮಪ್ಪ ಊರು ಬಿಟ್ಟು ಪ್ಯಾಟೇನಾಗೆ ಮೆಡಿಕಲ್ ಶಾಪ್ ಇಕ್ಕಾಣಾ ಅಂದ್ರೂ ಬ್ಯಾಡ ಅಂದೋರು. ಈಗ ತಾನೇ ಮುಂದಾಗಿ ಊರ್ ಬಿಡಾಕೆ ರೆಡಿ ಆದ್ರು. ಆದ್ರೆ ಅಪ್ಪಂಗೆ ಅವಮಾನ ಅನ್ನುಸ್ತು. ಸುಮ್ಕೆ ಊರ್ ಬಿಟ್ಟೋಗಾದು ಬ್ಯಾರೆ. ಹೆದುರ್ಕೊಂಡು ಬ್ಯಾರೆ ಕಡೆ ಅವುಸ್ಕಣಾಕೆ ನಾವೇನು ಕಳ್ಳರೆ ಅಂತ ರೇಗೋಯ್ತು. ನಮ್ ತಾತ ಗಿಣೀಗೆ ಯೋಳ್ದಂಗೆ ಯೋಳೀರು, ಬ್ಯಾಡ ಕಣ್ ಮಗಾ, ದೊಡ್ಡೋರ ಸಾವಾಸ. ದುಷ್ಟರನ್ನ ಕಂಡ್ರೆ ದೂರ ಇರ್ಬೇಕು. ಇರಾದು ಒಬ್ಬನೇ ಮಗಾ ನೀನು. ನಿನ್ ಬೆನ್ನ ಹಿಂದೆ ಇನ್ನಾ ಮೂವಾರು ಮದ್ವೆ ಆಗ್ದಿರೋ ಹೆಣ್ಣುಮಕ್ಕಳು ಅವ್ರೆ ಅಂದ್ರು. ಯೋನೇಳಿದ್ರೂ ಅಪ್ಪ ಜಗ್ಗಲಿಲ್ಲ. ನಾನು ಎಲ್ಲಾದ್ಕೂ ರೆಡಿ ಅಂತ ತೊಡೆ ತಟ್ಕೊಂಡು ನಿಂತ್ರು. ಜೀವ ಬೆದರಿಕೇಗೂ ಬೆದುರ್ಲಿಲ್ಲ. ತಾತ ಅಂಗೈಯಾಗೆ ಜೀವ ಇಡ್ಕೊಂಡು ಮಗನ ಕಾರ್ಬಾರು ನೋಡ್ತಿದ್ರು. ಅಪ್ಪ ಕೆಲ್ಸಕ್ಕೆ ರಾಜೀನಾಮೆ ಕೊಟ್ಟು ಊರ್ಗೆ ಬಂದ್ರು.
ಈ ಸುದ್ದಿ ಯೋಳ್ವಾಗೆಲ್ಲ ನಮ್ ದೊಡ್ಡತ್ತೆ, ಅಲ್ಲಾ ಕಣಮ್ಮಿ ನಿಮ್ಮಪ್ಪುಂಗೆ ಸಣ್ಣುಡುಗ್ನಿಂದ ದಿಗಿಲು. ತಲೆಕೂದ್ಲು ಸುರುಳಿ ಕಂಡ್ರೂ ಕಿಟ್ ಅಂತ ಕಿರುಚ್ತಿದ್ದ. ನಾವೂ ಗೋಳೊಯ್ಕಳಾಕೆ ಬೇಕೂಂತ್ಲೇ ಕೂದ್ಲು ಉಂಡೆ ಮಾಡಿ ಮುಂದ್ಕಾಕಿ, ತಮಾಸಿ ನೋಡ್ತಿದ್ವು. ಅಮ್ಯಾಕೂ ಬಲೇ ಎದ್ರುಪುಕ್ಲ ಇದ್ದ. ಅದ್ಯಾವಾಗ ಈ ಪಾಟಿ ಧೈರ್ಯ ಬಂತೋ ಕಾಣೆ. ಒಟ್ನಾಗೆ ನಮ್ ವಂಶದಾಗೆ ಈಸೊಂದು ಗಂಡಸ್ತನ ಯಾರ್ಗೂ ಇರ್ಲಿಲ್ಲ ಬುಡಮ್ಮಿ ಅಂತ ಖುಷೀಯಿಂದ ಯೋಳ್ತಿದ್ರು. ಅಪ್ಪ ಭಗತ್ ಸಿಂಗ್, ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕ ಎಲ್ಲಾ ಓದ್ತಿದ್ರು. ಅವ್ರ ದೊಡ್ಡಪ್ಪ ಒಬ್ರು ಹೋರಾಟ್ದ ಪಾಲಾಗಿದ್ರು. ಇಂಗಾಗಿ ಅನ್ಯಾಯ ಎದ್ರಾದ್ ಕೂಡ್ಲೇ ರೋಷ ಉಕ್ಕರೀತು ಅನ್ಸತೈತೆ.
ಕುಟುಂಬದ ಜವಾಬ್ದಾರಿ ಹೊತ್ತು
ಚಿಲ್ಲರೆ ಅಂಗಡಿ ತಾತ ನೋಡ್ಕಂತಿದ್ರು. ಅಪ್ಪ ಬೇಸಾಯ ನೋಡ್ಕಂತಾ, ಆಗಾಗ ಬ್ಯಾರೆ ವ್ಯವಾರಗಳ್ನೂ ಸುರು ಮಾಡ್ತಿದ್ರು. ಮಧುಗಿರೀನಾಗೆ ಮಧು ಫೈನಾನ್ಸ್ ಸುರು ಮಾಡಿ ಮೂರೊರ್ಸ ಮಾಡಿದ್ರು. ಸಾಲ ತಕಂಡೋರು ನಾಮ ಹಾಕಿ ಮುಚ್ಚಿಬಿಟ್ಟರು. ಪಾವಗಡದಾಗೆ ಸೀಮೆಣ್ಣೆ ವಿತರಕರಾಗಿ ವ್ಯವಾರ ಸುರು ಮಾಡಿ ಬಾಮೈದಂದ್ರುಗೆ ಬಿಟ್ಟು ಕೊಟ್ಟರು. ಗೌರಿಬಿದನೂರಾಗೆ ಪೆಟ್ರೋಲ್ ವಿತರಕರಾಗಿ ವ್ಯವಾರಕ್ಕೆ ಕೈಹಾಕಿದ್ರು. ಎಂಟು ಹೆಣ್ಣುಮಕ್ಕಳು ಇರಾ ಅವರ ಭಾವ ನಾನೇ ಮಾಡ್ಕೊಂತೀನಿ ಅಂದುದ್ದುಕ್ಕೆ ಬಿಟ್ಟುಕೊಟ್ಟರು. ಇಂಗೆ ಏನೇನೆಲ್ಲಾ ಮಾಡೀರೂ ಯಾವ್ದೂ ಉಪ್ಯೋಗಕ್ಕೆ ಬರಲಿಲ್ಲ. ಯಾವ್ದಾರಾ ಯವಾರಾ ಸುರು ಮಾಡ್ಬೇಕಾದ್ರೆ ಅದ್ರ ತಳಾ ಬುಡಾ ಶೋಧಿಸ್ತಿದ್ರು. ಕಾನೂನೆಲ್ಲಾ ತಿಳ್ಕಮ್ತಿದ್ರು. ಸ್ಯಾನೆ ಬುದ್ಧಿ ಇತ್ತು. ಆದ್ರೆ ಸೊಲ್ಪ ಉದಾರ ಜಾಸ್ತಿ. ಬ್ಯಾರೆಯೋರ್ಗೆ ಸಾಯಾ ಮಾಡಾ ಉಮ್ಮೇದಲ್ಲಿ ಸ್ವಂತಕ್ಕೆ ಮಾಡ್ಕಂಡಿದ್ದು ಕಮ್ಮಿನೇಯಾ. ತಾತ ಕೈಲಾಗ್ದೆ ಅಂಗಡಿ ಮುಚ್ಚಿದ್ ಮ್ಯಾಲೆ, ಅಪ್ಪಾನೆ ಸಂಸಾರದ ಹೊರೆ ಹೊತ್ರು.
ತಂಗಿದೀರ ಮೆಚ್ಚಿನ ಅಣ್ಣ
ಹೊಲ್ದಾಗೆ ಕೆಲ್ಸ ಮಾಡಾ ಆಳುಗಳಿಗೆ ಮುದ್ದೆ ತಿರುವಬೇಕಿತ್ತು. ಕೊನೆ ತಂಗೀರಿಬ್ರು ನಾಗರತ್ನ ಮತ್ತೆ ವಿಜಯಲಕ್ಷ್ಮಿ ಈ ಕೆಲ್ಸ ಮಾಡ್ತಿದ್ರು. ಒಂದು ಸತೀಗೆ ನೂರು ಮುದ್ದೆ ತಿರುವೋ ಸಕ್ತಿ ಇದ್ದದ್ದು ನಮ್ ನಾಗೂ ಅತ್ತೇಗೆ. ಬೋ ಗಟ್ಟಿಗಿತ್ತಿ. ವಿಜಿ ಅತ್ತೆ ಸಾಯಾ ಮಾಡ್ತಿದ್ರು. ಸಂಜಿ ಹೊತ್ನಾಗೆ ಸದ್ದಿ ಸಂಗಟಿ ಅಂತ ಸಣ್ಣ ಉಂಡೆ ಕಟ್ಟೋರು. ಮಧ್ಯಾಹ್ನ ದೊಡ್ಡ ಮುದ್ದೆ.
ತಂಗಿದೀರ ಕೆಲ್ಸ ಮೆಚ್ಚಿ ಅಪ್ಪ ಏನಾರಾ ಉಡುಗೋರೆ ಕೇಳಿ ಅಂದ್ರೆ, ಪಾಪ ಮನೆ ಬಿಟ್ಟು ಬ್ಯಾರೆ ಪ್ರಪಂಚ ಕಂಡಿಲ್ದವ್ರು, ಸೀರೆ ಬೇಕು, ಬಟ್ಟೆ ಬೇಕೂಂತ ಕ್ಯೋಳ್ದೆ ಮನೆಗೆ ಸ್ಟೀಲ್ ಪಾತ್ರೆ, ಇಂಡಾಲಿಯಂ ಪಾತ್ರೆ, ಕ್ಯಾರಿಯರ್, ಲೋಟಾ ಮಣ್ಣೂ ಮಸೀಂತ ಕ್ಯೋಳೋರಂತೆ. ಕೊನೆಗೊಂದ್ ಸಲ ಅಪ್ಪಾನೆ ಅವ್ರಿಬ್ರುಗೂ ವಾಚ್ ತಂದ್ಕೊಟ್ಟಿದ್ರಂತೆ. ಆಗಿನ್ ಕಾಲ್ದಾಗೆ ವಾಚು ಅನ್ನೋದು ಹೆಂಗಸರ ಪಾಲಿಗೆ ಬೇಸಾದ ಒಡ್ವೆ ಅನ್ನಂಗಿತ್ತು. ಸ್ಯಾನೆ ಅಪರೂಪುದ್ದು.
ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು. ಗೌರಿ ಹಬ್ಬಕ್ಕೆ ಅರಿಶಿನ ಕುಂಕುಮಕ್ಕೆ ಪ್ರೀತಿಯಿಂದಲೇ ಅವುರ್ ಮನೇಗೆ ಹೋಗಿ ಕೊಟ್ ಬರ್ತಿದ್ರು.
ಊರಾಗೆ ಇರಾ ಬದ್ಲಿ ವಸಿ ಕೆಲ್ಸ ಕಲಿತ್ರೆ ಸುಲಭಾಂತ ಅನ್ನುಸ್ತು. ಆಗ ತಾನೆ ಚೀನಾ ದೇಸದಿಂದ ಟಿಬೇಟಿಯನ್ನರು ಓಡಿ ಬಂದು ನಮ್ ಕರ್ನಾಟಕದಾಗೆ ಆಸರೆ ಪಡ್ಕೊಂಡಿದ್ರು. ಬೈಲುಕುಪ್ಪೇಲಿದ್ದ ಟಿಬೇಟಿಯನ್ ರೆಫ಼್ಯೂಜೀಸ್ ಕಾಲನಿನಾಗೆ ಅವುರ್ಗೆಲ್ಲ ಗುಡಿಸಲು ಹಾಕ್ಕೊಟ್ಟಿದ್ರು. ಅಲ್ಲೇ ಒಂದು ಗುಡಿಸಲಿನಾಗೆ ಆಸ್ಪತ್ರೆ ಮಾಡಿದ್ರು. ಅಲ್ಲಿಗೆ ಕಾಂಪೌಂಡರ್ ಆಗಿ ನೇಮಕ ಆದ್ರು.
ಅಜ್ಜಿ ನೆಲ ಕಚ್ಚಿದಾಗ
ಅಜ್ಜಿಗೆ ಲಕ್ವಾ ಹೊಡೆದು ಹಾಸಿಗೆ ಮೇಲಾದಾಗ, ಒಂದಾಳು ಇಟ್ಕೊಂಡು ಟೇಮ್ ಟೇಮಿಗೂ ಸ್ನಾನಕ್ಕೆ, ವಂದಕ್ಕೆ, ಕಕ್ಕಸಿಗೆ ವ್ಯವಸ್ಥೆ ಮಾಡಿದ್ರು. ಒಂದು ಗೋಣಿ ಚೀಲದ ಮ್ಯಾಲೆ ಕುಂಡ್ರಿಸಿ ಅತ್ಲಾಗೊಬ್ರು, ಇತ್ಲಾಗೊಬ್ರು ಇಡ್ಕೊಂಡು ಬಚ್ಚಲಿಗೆ ಕರ್ಕೋ ಹೋಗ್ತಿದ್ದುದ್ದು ಇನ್ನಾ ಕಣ್ಮುಂದೆ ಐತೆ. ಯಾವ ಊರಿಗೋದ್ರೂ ರಾತ್ರೆ ಆದ್ರೆ ವಾಪಸ್ ಬರೋರು. ಬಂದ್ ತಕ್ಷಣ ಅಜ್ಜಿ ರೂಮಿಗೋಗಿ ಮಾತಾಡ್ಸಿ, ಒಂದು ಪುಟ ದ್ಯಾವ್ರ ಮಂತ್ರ ಓದುದ್ ಮ್ಯಾಲೇನೆ ಮನಿಕ್ಕಳಾದು. ಅಜ್ಜಿ ಮನಗಿದ್ರೂ ಸುತಾನ ಮಂತ್ರ ಓದೀನೇ ಬರ್ತಿದ್ರು. ಅಜ್ಜಿ ತಾತುನ್ನ ಕೊನೆಗಾಲ್ದಾಗೆ ಮಕ್ಕಳಂಗೆ ಕಾಣೋರು. ಅವುರ್ನ ನೋಡಾಕೆ ಅಂತ ಮನ್ಯಾಗೆ ಯಾವಾಗ್ಲೂ ನೆಂಟರು ತುಮ್ಕಣಾರು. ಎಲ್ಲಾನೂ ನಿಭಾಯುಸ್ಕೊಂಡು ಒಳ್ಳೆ ಮಗಾಂತ ಹೆಸ್ರು ತಕಂಡಿದ್ರು.
ಊರ ಜನರ ಪಾಲಿಗೆ ಶಂಕ್ರಣ್ಣ
ಜನುರ್ಗೆ ಒಳ್ಳೆದಾಯ್ತದೆ ಅಂದ್ರೆ ಯಾವ ಕೆಲ್ಸಕ್ಕಾದ್ರೂ ಜೈ ಅಂತಿದ್ರು. ಏಸು ಕಷ್ಟ ಆದ್ರೂ ಓಡಾಡ್ತಿದ್ರು. ಅಧಿಕಾರಿಗಳ್ನ ಓಲೈಸಿಕೊಂಡು ಕೆಲ್ಸ ಮಾಡುಸ್ಕೊಂಡು ಬರ್ತಿದ್ರು. ಆಗ್ಲೇ ಲಂಚ ರುಷುವತ್ತುಗಳಿಲ್ದೆ ಒಂದಂಗುಲಾನೂ ಮುಂದೋಗ್ತಿರಲಿಲ್ಲ. ಜೇಬಿನಾಗಿಂದ ಕಾಸು ಖರ್ಚು ಮಾಡ್ಕೊಂಡು ಊರುದ್ದಾರ ಮಾಡಕ್ಕೆ ಸೊಂಟ ಕಟ್ತಿದ್ರು. ಅದುಕ್ಕೆ ಜನ್ರು ಶಂಕ್ರಣ್ಣ ಅಂತ ಪ್ರೀತಿಯಿಂದ ಕರ್ಯೋರು.
ತಿಮ್ಮಣ್ಣ ಗುಂಡಿ
ನಮ್ಮ ಹೊಲದ ಮಗ್ಗುಲಾಗೆ ಇತ್ತು. ತಿಮ್ಮಣ್ಣ ಅಂಬೋನು ಕುರಿ ಕಾಯೋನು. ಸಣ್ದೊಂದು ಗುಂಡಿ ತೋವಿದ್ದ. ಮಳೆನೀರು ತುಂಬ್ಕೊಂಡ್ರೆ ಕುರಿಗಳ್ಗೆ ನೀರು ಕುಡಿಯಾಕೆ ಸಿಗ್ತಿತ್ತು. ನಮ್ ತಾತ ಅದುನ್ನ ದೊಡ್ಡದು ಮಾಡಿಸಿದ್ರು.
ಅಪ್ಪ ಹೊಲುಕ್ಕೆ ಬೋರು ಹಾಕ್ಸಿದ್ ಮ್ಯಾಲೆ ಸದಾ ಅದ್ರಾಗೆ ನೀರು ತುಂಬುಸ್ತಿದ್ರು. ಬ್ಯಾಸಿಗೆ ಧಗೇನಾಗೆ, ಬರಗಾಲ್ದಾಗೆ ಕೆರೆ ನೀರು ಬತ್ತೋಗ್ತಿತ್ತು. ಆಗ ಊರ್ ಜನಾ ಎಲ್ಲ ಕುಡಿಯಾಕೆ ಅಲ್ಲಿಂದ್ಲೇ ನೀರು ತಕಂಡೋಗ್ತಿದ್ರು. ನಮ್ ಬೋರ್ ನೀರು ಸೀಗಿರ್ತಿತ್ತು. ಅದ್ಕೂ ಮೊದ್ಲು ಬ್ಯಾಸಿಗೇನಾಗೆ ಸೀನೀರ್ಗೆ ಜಯಮಂಗಲಿ ನದೀ ತಾವ ಹೋಗ್ಬೇಕಿತ್ತು. ಒಂದೂವರೆ ಕಿಲೋಮೀಟ್ರು ಹೋದ್ರೆ ವೀರನಾಗೇನಳ್ಳಿ ಸಿಗ್ತಿತ್ತು. ಅಲ್ಲಿಗೋಗಿ ನದೀಗ್ಳಿಂದ ತರ್ಬೇಕಿತ್ತು. ತಿಮ್ಮಣ್ಣ ಗುಂಡಿ ಹತ್ರ ಕೆಲವ್ರು ತಗಂಡೋದ್ರೆ, ಸೀದಾ ಹೊಲದೊಳ್ಗೇ ಬಂದು ತಕಂಡೋಗೋರು ಸ್ಯಾನೆ ಜನ್ವಿದ್ರು. ಬಂದೋರು ಬಂದ್ರು ಬುಡು ಅನ್ನಾಂಗಿಲ್ಲ, ನೀರ್ ತಕಂಡು ಸುಮ್ಕೆ ಓಯ್ತಿರಲಿಲ್ಲ, ತೆಂಗಿನ ಮಟ್ಟೆ, ಗರಿ, ಒಣಗಿದ ಕಟ್ಟಿಗೆ, ಹುವ್ವ ಎಲ್ಲಾ ತಕೋ ಓಯ್ತಿದ್ರು.
ಇದು ಅಪ್ಪನ ಬೋಳೆತನ ಯೋಳಾಕೆ ಒಂದು ಕತೆ ಅಷ್ಟೇಯ. ಇಂತಾವು ಏಸೊಂದು ಅವೆ. ಇನ್ನಾ ವ್ಯವಸಾಯದ್ದು, ರಾಜಕೀಯದ್ದು ಜೊತೆಗೆ ಊರುದ್ದಾರಕ್ಕೆ ಉಡುದಾರ ಬಿಗಿದದ್ದು ದೊಡ್ಡ ಕತೆಗ್ಳು. ಮುಂದಿನ ಭಾಗದಾಗೆ ಯೋಳ್ತೀನಿ.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.