ಚಿತ್ರದ ಕಟ್ಟುವಿಕೆ ವಿಶೇಷವೆನಿಸಿಕೊಳ್ಳುವುದು ಪಿ. ವಾಸು ಆಯ್ದುಕೊಳ್ಳುವ ಕಥಾವಸ್ತು ಹಾಗೂ ಅದರ ಮೌಲ್ಯದ ಕಾರಣಕ್ಕೆ. ಅವರ ಆಪ್ತಮಿತ್ರ, ಆಪ್ತ ರಕ್ಷಕ, ಶಿವಲಿಂಗ ಹಾಗೂ ಆಯುಷ್ಮಾನ್‌ಭವ ಚಿತ್ರಗಳೆಲ್ಲವೋ ಮನೋ ವೈಜ್ಞಾನಿಕ ಅಂಶಗಳನ್ನು ಆಧರಿಸಿದವೇ ಆಗಿವೆ ಹಾಗೂ ಸಂಗೀತದ ಬಳಕೆಯೂ ಅತೀ ವಿಶೇಷವಾಗಿರುವಂಥದ್ದು. ಇಲ್ಲಿ ಚಿತ್ರದ ಅಭೂತ ಪೂರ್ವ ವಿಜಯಕ್ಕೆ ಇನ್ನೊಂದು ಕಾರಣವೆಂದರೆ ತಾರಾಗಣ. ವಿಜಯ್ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಮೋಘ ಅಭಿವ್ಯಕ್ತಿ… ಗಂಭೀರವಿರಲಿ, ಮೋಜಿರಲಿ ಅಭಿನಯದಲ್ಲಿ ಆ ತುಂಟತನದ ಸಂಕಲನ ಪಾತ್ರಕ್ಕೆ ಭೂಷಣ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಪಿ. ವಾಸು ನಿರ್ದೇಶನದ ‘ಆಪ್ತಮಿತ್ರ’ ಸಿನಿಮಾದ ವಿಶ್ಲೇಷಣೆ

ಮನುಷ್ಯ: ಮನಸ್ಸಿನ ಆಲೋಚನೆಗಳ ಮೂರ್ತ ರೂಪ
-ಮೋಹನದಾಸ ಕರಮ ಚಂದ ಗಾಂಧಿ

ಬದುಕೆಂಬುದು ತಿಳಿಯದ ನಿಲ್ದಾಣಕ್ಕೆ ಹೊರಡುವ ಬಸ್ಸಿನ ಪಯಣ. ಪ್ರವೇಶ ಪೂರ್ವ ನಿರ್ಧರಿತ, ಇಳಿಯುವ ಹೊತ್ತು ಅನಿಶ್ಚಿತ. ಬೇಗ ಇಳಿಯುವವರು ಕೆಲವರು, ಇನ್ನು ಕೆಲವರದ್ದು ಹೆಚ್ಚು ಮೈಲುಗಳ, ಸುಖ ದುಃಖಗಳ ಸಮ್ಮಿಳಿತಗೊಂಡ ಪಯಣ. ಆದರೆ ಪಯಣ ಮುಗಿಸಿದ ನಂತರ ಬದುಕಿನ ಅಂತಃಸತ್ವದ ಭವಿಷ್ಯವೇನು? ದೇಹವು ನಿಂತರೂ, ಆತ್ಮವೆಂಬ ಹೆಸರಿನಲ್ಲಿ ಕಾಯದೊಳಗೆ ಮನೆಮಾಡಿರುವ ಚೈತನ್ಯದ ಮುಂದಿನ ಅಧ್ಯಾಯವೇನು? ಎಲ್ಲವೂ ಊಹೆಗಳ ಸರಕು. ‘ಆತ್ಮ’ ವೆಂಬುದು ಆಸ್ತಿಕ ಭಾವಗಳ ನಂಬಿಕೆಯಾದರೂ, ದೇಹವ ಮೀರಿದ ಸಂಗತಿಯೊಂದಿದೆ ಎಂಬ ವಿಜ್ಞಾನದ ಕುತೂಹಲ ತಣಿಯದೆ ಉಳಿದಿದೆ. ‘ಗರುಡ ಪುರಾಣ’ ದಿಂದ ‘ಡಿವೈನ್ ಕಾಮಿಡಿ’ಯವರೆಗೆ ಅಸಂಖ್ಯ ಜಿಜ್ಞಾಸೆಗಳು ಉಸಿರು ಮಲಗಿದ ಮೇಲಿನ ಜೀವನದ ಕುರಿತು ಬೆಳಕು ಹಚ್ಚಿದರೂ, ಇದುವೇ ಅಂತಿಮ ಎಂಬ ತತ್ವಗಳು ಲಭ್ಯವಿಲ್ಲ. ಆದ್ದರಿಂದ, ಕತ್ತಲಿನೊಳಗೆ ಅಡಗಿರುವ ಕಣ್ಮುಚ್ಚಿದ ಬೆಳಕಿನಂತೆ ಸದಾ ರಹಸ್ಯ ಚಾಲ್ತಿಯಲ್ಲಿಟ್ಟಿರುತ್ತದೆ ಈ ಆತ್ಮವೆಂಬ ದ್ರವ್ಯ. ಜೊತೆಗೆ, ಈ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳೆಂಬ ಪರಿಕಲ್ಪನೆಗಳು. ಆಸೆ, ಅಪೇಕ್ಷೆಗಳು ಪೂರ್ಣಗೊಳ್ಳದೇ, ಬದುಕು ಅಕಾಲಿಕ ವಿದಾಯ ಕಂಡರೆ, ಆತ್ಮವೂ ಅಂತ್ಯ ಕಾಣದೆ, ಇನ್ನೊಂದು ದುರ್ಬಲ ದೇಹದ ಒಳ ಹೋಗಿ ತನ್ನ ಆಶಯಗಳನ್ನು ಈಡೇರಿಸಲು ಯತ್ನಿಸುತ್ತದೆ ಎಂಬುದು ಒಂದು ನಂಬಿಕೆ. ಈ ಋಣಾತ್ಮಕ ಶಕ್ತಿಯೆಂದು ಹೆಸರಿಸಲ್ಪಟ್ಟ ಕ್ರಿಯೆಯ ಸುತ್ತಲಿನ ಘಟನೆಗಳನ್ನು ಆಧ್ಯಾತ್ಮ ಮತ್ತು ಮನಶಾಸ್ತ್ರದ ಸಮ್ಮಿಳಿತದೊಂದಿಗೆ, ಶಾಸ್ತ್ರೀಯ ಅಭಿವ್ಯಕ್ತಿಯಲ್ಲಿ ಹೇಳುವ ಚಿತ್ರವೇ ಪಿ. ವಾಸು ನಿರ್ದೇಶನದ ‘ಆಪ್ತ ಮಿತ್ರ’.

(ಪಿ. ವಾಸು)

ಅವರಿಬ್ಬರೂ ದಂಪತಿಗಳು. ಆತ ರಮೇಶ್. ಆಕೆ ಗಂಗಾ. ಮೈಸೂರಿನ ಪುರಾತನ ಬಂಗಲೆಯೊಂದನ್ನು ಖರೀದಿಸುವ ಅವರು, ತಮ್ಮ ಕುಟುಂಬ ಸಮೇತವಾಗಿ ಅಲ್ಲಿಗೆ ಸ್ಥಳಾಂತರಗೊಳ್ಳುತ್ತಾರೆ. ಆಗ ಸಮಸ್ಯೆಗಳು ಕೂಡ ಹೊಸ್ತಿಲು ದಾಟಿ ಅವರು ಕೊಂಡ ಹೊಸ ಬಂಗಲೆಯೊಳಗೆ ಬರುತ್ತದೆ. ಹಲವು ಅತಿಮಾನುಷ ಘಟನೆಗಳು ಜರುಗುತ್ತವೆ. ಅದರ ಹಿನ್ನೆಲೆಯೆಂದರೆ ಅವರಿರುವ ಬಂಗಲೆ, ಹಿಂದೊಮ್ಮೆ ವಿಜಯ ರಾಜೇಂದ್ರ ಬಹದ್ದೂರ್ ಎಂಬ ಅರಸನ ನಿಲಯವಾಗಿತ್ತು. ಅಲ್ಲಿ ನಾಗವಲ್ಲಿ ಎಂಬ ನರ್ತಕಿಯಿದ್ದಳು. ರಾಜನಿಗೆ ಆಕೆಯ ಮೇಲೆ ಮೋಹ. ಅವಳು ರಾಮನಾಥ ಎಂಬ ಸಹನರ್ತಕನ ಒಲವಿನ ಆಸರೆಯಲ್ಲಿದ್ದಳು. ಇದು ಅರಸನ ಅಕ್ಷಿಗಳನ್ನು ಕೆಂಪಗಾಗಿಸಿತ್ತು. ದುರ್ಗಾಷ್ಟಮಿಯ ದಿನ ಸುಡುವ ಬೆಂಕಿಗೆ ಆಕೆಯನ್ನು ಅಹುತಿಯಿಟ್ಟ. ದೇಹ ನಶಿಸುತ್ತಿದ್ದಾಗಲೇ, ಆಕೆ ಮುಂದೊಂದು ದುರ್ಗಾಷ್ಟಮಿಗೆ ನಿನ್ನನ್ನು ಇದೇ ತೆರನಾಗಿ ದಹಿಸುವೆನೆಂಬ ಶಪಥಗೈಯ್ಯುತ್ತಾಳೆ. ಮುಂದೆ ಇತರೆ ಕಾರಣಗಳಿಂದ ರಾಜ ಕಾಲನಾಗುತ್ತಾನೆ. ಆಕೆಯ ಮಾತು ಆರದ ಗಾಯದಂತೆ, ಅಳಿವಿರದ ಆತ್ಮದ ಅಂತ್ಯ ಕಾಣದ ದ್ವೇಷವಾಗಿ ಉಳಿದುಬಿಡುತ್ತದೆ. ಪ್ರತೀಕಾರಕ್ಕಾಗಿ, ಅಗಣಿತ ಕಾಲಗಳ ಅಳಿಯುವಿಕೆಯ ನಂತರವೂ ಆಕೆ ಕಾಯುತ್ತಿರುತ್ತಾಳೆ. ಆ ಮನೆಗೆ ಬಂದ ರಮೇಶ್ ಕುಟುಂಬದ ಸದಸ್ಯರಲ್ಲೊಬ್ಬರನ್ನು ತನ್ನ ಇರುವಿಕೆಯ ತೋರ್ಪಡಿಸಲು ಬಳಸಿಕೊಳ್ಳುತ್ತಾಳೆ. ಇದು ಮನೆಯಲ್ಲಿ ಭಯದ ಕತ್ತಲನ್ನು ಚೆಲ್ಲುತ್ತದೆ. ಇದರ ನಿವಾರಣೆಗಾಗಿ ರಮೇಶ್ ಗೆಳೆಯ ಸೈಕಿಯಾಟ್ರಿಸ್ಟ್ ವಿಜಯ್ ಆಗಮನವಾಗುತ್ತದೆ. ಆದರೂ ಮೇಲ್ನೋಟಕ್ಕೆ ಸಮಸ್ಯೆ ತ್ವರಿತವಾಗಿ ಕಡಿಮೆಯಾಗದೆ, ಉಲ್ಬಣಗೊಳ್ಳುತ್ತದೆ. ಗಂಗಾಳಿಗೆ ದ್ವಿ ವ್ಯಕ್ತಿತ್ವ ಸಮಸ್ಯೆ(Bipolar Disorder)ಯಿದೆಯೆಂದು, ಅದೇ ಈ ನಾಗವಲ್ಲಿ ಪ್ರಹಸನಕ್ಕೆ ಕಾರಣವೆಂದು ವಿಜಯ್ ಅರಿವಿಗೆ ಬಂದರೂ, ಅದನ್ನು ಮನೆಯ ಮಂದಿಗಳಿಗೆ ನಂಬಿಸುವಂತಾಗಲು ಇನ್ನೂ ಸಮಯವಕಾಶದ ಅಗತ್ಯವಿರುತ್ತದೆ. ಅಷ್ಟರಲ್ಲಾಗಲೇ ಮನೆಯವರು ರಾಮಚಂದ್ರ ಗುರೂಜಿಯನ್ನು ಮನೆಗೆ ಮುತ್ತಿದ ಅಮಾನುಷ ಆಘಾತದ ನಿವಾರಣೆಗೆಂದು ಕರೆತರುತ್ತಾರೆ. ಕೊನೆಗೆ ಮಂತ್ರ ತಂತ್ರಗಳ ಸಮ್ಮಿಳಿತದಿಂದ, ನಾಗವಲ್ಲಿಯ ಆತ್ಮದ ಉಳಿಕೆ ಕನಸುಗಳ ನೀಗಿಸಿ ಆ ಮನೆಗೆ ಹಿಡಿದ ಧೂಳಿನಿಂದ ಮುಕ್ತಿ ಪಡೆವ ರೋಚಕ ಕಥಾನಕವೇ ‘ಆಪ್ತ ಮಿತ್ರ’.

ಮಲಯಾಳಂನ ಮೋಹನ್ ಲಾಲ್, ಶೋಭನಾ ಅಭಿನಯದ ‘ಮನಚಿತ್ರತಾಲ’ ಚಿತ್ರದ ಕನ್ನಡ ಅವತಾರಣಿಕೆಯಾದರೂ ಕನ್ನಡ ಮಣ್ಣಿನ ಸೊಗಡು, ಶಾಸ್ತ್ರೀಯತೆ ತುಂಬಿದ ಹಾಡುಗಳು ಸಂಕಲನಗೊಂಡು ವಿಶೇಷ ಅವತರಣಿಕೆಯಾಗಿ ಮೂಡಿ ಬಂದಿದೆ. ಬಹು ದಿನಗಳ ಕಾಲ ಚಿತ್ರಮಂದಿರಗಳ ಗಲ್ಲಾ ಪೆಟ್ಟಿಗೆ ಲೂಟಿಗೈದದ್ದು ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ. ಇಲ್ಲಿ ಕಥೆಯ ಮೂಲಧಾತುವಾದ ಹಾರರ್ ಭಾವಕ್ಕೆ ವೈಜ್ಞಾನಿಕ ಮನೋಭಾವನೆ ಮತ್ತು ಅಧ್ಯಾತ್ಮಿಕತೆಯ ಮಿಶ್ರಣವು ಮೆರುಗನ್ನು ನೀಡಿದ್ದು ಮಾತ್ರವಲ್ಲ, ನೋಡುಗನನ್ನು ಹಗುರಗೊಳಿಸಲು ಸೇರಿಸಿದ ಹಾಸ್ಯ ಮಸಾಲಾ, ಪ್ರೇಮಕಥೆಗಳು ಸಮರ್ಪಕವಾಗಿ ಬೆರೆತು ಅದ್ಭುತ ರಸಪಾಕವಾಗಿ ಮೂಡಿ ಬಂದಿದೆ ದೃಶ್ಯ ಹೆಣಿಗೆ. ಕಾಣದ ಮನಸ್ಸೆಂಬ ಪರಿಕಲ್ಪನೆ ಕೋಟ್ಯಂತರ ಪರಮಾಣುಗಳು ಅಪ್ಪಿದ ದೇಹವನ್ನು ನಿಯಂತ್ರಿಸುವುದು ಈ ಜಗದ ಜೀವರಾಶಿಗಳ ನಡುವೆ ಜೀವಂತವಿರುವ ಅಚ್ಚರಿ. ಮನವ ಗೆದ್ದ ಮನುಜ ಜಗವ ಗೆಲ್ಲುವ ಎಂಬ ಮಾತಿನಂತೆ ಮನಸ್ಸು ಮುನಿದರೆ, ಬದುಕು ಭಾರವೆ ಸರಿ. ಇಲ್ಲಿ ಗಂಗಾ, ಮೇಲ್ನೋಟಕ್ಕೆ ಯಾವ ಸಮಸ್ಯೆಗಳಿಂದಲೂ ಬಾಧಿತರಾಗಿರದಿದ್ದರೂ, ಅರಿವಿಗೆ ನಿಲುಕದ ನೋವಿನ ನೆತ್ತರು ಹೆಪ್ಪುಗಟ್ಟಿತ್ತು ಆಕೆಯಲ್ಲಿ. ಅದು ವಿಷದಗೊಳ್ಳುತ್ತಿದ್ದದ್ದು, ನಾಗವಲ್ಲಿಯೆಂಬ ಆತ್ಮದ ಮುಖವಾಡದಲ್ಲಿ. ಸಂಕೀರ್ಣ ಮನಸ್ಸಿನ ಕಲಕುವಿಕೆಗೆ ಉತ್ತರವಾಗಿ ಮನಶಾಸ್ತ್ರವನ್ನು ಮತ್ತು ಪರಂಪರೆಯ ಪ್ರಾತಿನಿಧಿಕವಾಗಿ ಭಕ್ತಿಯೆಂಬ ಶರಣು ಭಾವವನ್ನು ಬೆಸೆದು ಉತ್ತರ ಹುಡುಕುವ ಕಲ್ಪನೆ ಈ ಚಿತ್ರದ ಕಾಲಾತೀತ ಆಯಸ್ಸಿಗೆ ಕಾರಣವೆಂದರೆ ಅತಿಶಯೋಕ್ತಿಯಲ್ಲ.

ಇನ್ನು ಚಿತ್ರದ ಕಟ್ಟುವಿಕೆ ವಿಶೇಷವೆನಿಸಿಕೊಳ್ಳುವುದು ಪಿ. ವಾಸು ಆಯ್ದುಕೊಳ್ಳುವ ಕಥಾವಸ್ತು ಹಾಗೂ ಅದರ ಮೌಲ್ಯದ ಕಾರಣಕ್ಕೆ. ಅವರ ಆಪ್ತಮಿತ್ರ, ಆಪ್ತ ರಕ್ಷಕ, ಶಿವಲಿಂಗ ಹಾಗೂ ಆಯುಷ್ಮಾನ್‌ಭವ ಚಿತ್ರಗಳೆಲ್ಲವೋ ಮನೋ ವೈಜ್ಞಾನಿಕ ಅಂಶಗಳನ್ನು ಆಧರಿಸಿದವೇ ಆಗಿವೆ ಹಾಗೂ ಸಂಗೀತದ ಬಳಕೆಯೂ ಅತೀ ವಿಶೇಷವಾಗಿರುವಂಥದ್ದು. ಇಲ್ಲಿ ಚಿತ್ರದ ಅಭೂತ ಪೂರ್ವ ವಿಜಯಕ್ಕೆ ಇನ್ನೊಂದು ಕಾರಣವೆಂದರೆ ತಾರಾಗಣ. ವಿಜಯ್ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಮೋಘ ಅಭಿವ್ಯಕ್ತಿ… ಗಂಭೀರವಿರಲಿ, ಮೋಜಿರಲಿ ಅಭಿನಯದಲ್ಲಿ ಆ ತುಂಟತನದ ಸಂಕಲನ ಪಾತ್ರಕ್ಕೆ ಭೂಷಣ. ಗಂಗಾ ಹಾಗೂ ನಾಗವಲ್ಲಿಯಾಗಿ ಸೌಂದರ್ಯ ಪರಕಾಯ ಪ್ರವೇಶ. ಗಂಗಾ ನಾಗವಲ್ಲಿಯಾಗಿ ಬದಲಾಗುವ ಸನ್ನಿವೇಶ, “ರಾರಾ…” ಹಾಡಿನ ನರ್ತನ, ಸೌಮ್ಯ ಭಾವದಿಂದ ತಕ್ಷಣದ ಭೀಬತ್ಸ ಭಾವಕ್ಕೆ ಬದಲಾಗುವ ಪರಿ ಎಲ್ಲವೂ ಮನಸೂರೆಗೊಳ್ಳುವಂಥದ್ದು. ಇನ್ನು ರಮೇಶ್ ಅರವಿಂದ್, ಪ್ರೇಮಾ, ದ್ವಾರಕೀಶ್, ಸತ್ಯಜಿತ್ ಹಾಗೂ ಇನ್ನಿತರ ಎಲ್ಲರೂ ಚಿತ್ರಕ್ಕೆ ಮೆರುಗು. ಕಥೆಯು ಸೆಳೆಯುವಿಕೆಯಲ್ಲಿ ಇನ್ನೊಂದು ಮಜಲನ್ನು ತಲುಪುವುದು ಗುರುಕಿರಣ್ ಸಂಗೀತದಲ್ಲಿ. ಆರಂಭದಲ್ಲಿ ಬರುವ ‘ಪಟ ಪಟ ಹಾರೋ ಗಾಳಿಪಟ’ ಹೆಜ್ಜೆಗಳಿಗೆ ಕಿಚ್ಚು ಹಚ್ಚಿದರೆ, ನಂತರ ಬರುವ ‘ಕಣ ಕಣದೆ ಶಾರದೆ’ ಶಾಸ್ತ್ರೀಯ ರಾಗಾಲಾಪದ ‘ಜೋಗ’ ಸಿರಿ. ರಾರಾ ಎಂದರೆ ಅದು ಬೆವೆತ ದೇಹಕ್ಕೆ ‘ಮಾಲಕಂಸದ’ ಮಳೆಗಾಲ. ಮನದ ವಿಹಾರಕ್ಕೆ ‘ಹಿಂದೋಳ’ ದ ಹಿನ್ನೀರು ಮತ್ತು ‘ಕಾಲವನ್ನು ತಡೆಯೋರು ಯಾರೂ ಇಲ್ಲ’ ಹಳೆಯ ಘಮವ ಕಳೆಯದೆ, ತಾಜಾ ಸ್ಪರ್ಶವನ್ನು ಹಚ್ಚುವ ಪರಿಗೊಂದು ಉದಾಹರಣೆ.

ಹೀಗೆ ಹಾರರ್ ಜಾನರ್ ಎಂದರೆ ಕೇವಲ ಭಯ ಪಡಿಸುವುದೇ ಕಥೆಯ ಕೆಲಸವಲ್ಲ. ಅದಕ್ಕೂ ಮೀರಿದ ಸಂಗತಿಗಳನ್ನು ನವರಸಗಳ ಶ್ರೇಷ್ಟ ಬಳಕೆಯಲ್ಲಿ ವಿವರಿಸಬಹುದು ಎಂಬುವುದಕ್ಕೆ ಆಧಾರವೇ ‘ಆಪ್ತಮಿತ್ರ’.

ಮುಗಿಸುವ ಮುನ್ನ:

ಮಳೆ ಮುಗಿಲು, ಮಾತು ಮೌನ, ಸಾಗರ ತೀರ, ಗಗನ ಚುಕ್ಕಿ, ಭಾನು ಚಂದಿರ ಹೀಗೆ ಜಗದಲ್ಲಿ ಜೊತೆಯಾಗಿ ನಡೆವ ಅಸಂಖ್ಯ ಜೋಡಿಗಳಿವೆ. ದೇಹ ಮತ್ತು ಮನಸ್ಸು ಅವುಗಳಲ್ಲಿ ಅಗ್ರಗಣ್ಯವಾದದ್ದು. ವಿಚ್ಛೇದನದ ಗಾಳಿಯೇ ಸುಳಿಯಬಾರದ ಸಂಬಂಧವದು. ಅಂತಹ ಬಾಂಧವ್ಯದ ಮಧ್ಯೆ ಬಿರುಗಾಳಿಯೆದ್ದಾಗ ಬದುಕು ಸೂತ್ರ ಹರಿದ ಪಟದಂತಾಗುತ್ತದೆ. ಹುಟ್ಟು ಮರೆತ ದೋಣಿ ವಿಹಾರದಂತೆ ಭಾಸವಾಗುತ್ತದೆ. ಆದ್ದರಿಂದ ಮನಸ್ಸು ಮಸುಕಾಗದೆ ಮಿನುಗಬೇಕು. ಆಗ ದೇಹವೇ ದೇವಾಲಯವಾಗುವುದು ನಿಸ್ಸಂಶಯ………