‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್‌ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ
ಕೆಲವೊಮ್ಮೆ ರೂಢಿಯಲ್ಲಿ ನಾವಾಡುವ ಪದಗಳು ತೀರಾ ಸಾಮಾನ್ಯ ಅನ್ನಿಸಬಹುದು! ಏನ್ ಮಹಾ? ಅನ್ನಿಸಬಹುದು. ಆದರೆ ಅವುಗಳ ಅಂತರಾಳವನ್ನು ಹೊಕ್ಕರೆ ಅರ್ಥಭಂಡಾರವೇ ಹುದುಗಿರುತ್ತದೆ. ಅಂತಹ ಪದಗಳಲ್ಲಿ ಫೋರ್ಟ್ವೇಂಟಿಯನ್ನೆ ತೆಗೆದುಕೊಳ್ಳೋಣ. ಮೋಸಗಾರರಿಗೆ ಅನ್ವಯಿಸಿ ಹೇಳುತ್ತಾರೆ. ಅಂಕಗಳ ಗಣಿಕೆಯಲ್ಲಿ 420 ಗೆ ನಿರ್ಲಕ್ಷ್ಯವೇಕೆ? ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಕಂಡುಕೊಳ್ಳುವಾಗಲೆ…. ಅಂಕಿಗಳ ಅಗಣಿತ ವಿಚಾರಗಳು ಹೊಳೆದವು.
ಹಾಗೆ ಮೊನ್ನೆ ಇನ್ಸ್ಟಾ ರೀಲ್ಸ್ ನೋಡುತ್ತಿದ್ದೆ; ಅದರ ಒಂದು ದೃಶ್ಯದಲ್ಲಿ ನಾಲ್ಕು ಏನೋ ಹುಡುಕುತ್ತಿದ್ದರು. ನಾಲ್ಕು ಜನ ನೋಡಿದ್ರೆ ಏನೆನ್ನುತ್ತಾರೆ? ನಾಲ್ಕು ಜನದ ಎದಿರು ತಲೆ ಎತ್ತಿ ನಿಲ್ಲಬೇಕು? ನಾಲ್ಕು ಜನ ನೋಡಿದರೂ ಸರಿ ಎನ್ನಬೇಕು? ನಾಲ್ಕು ಜನದ ಎದಿರು ಮರ್ಯಾದೆ ಹೋಯಿತು…. ಹೀಗೆ ಹಿರಿಯರು ಹೇಳ್ತಾರಲ್ಲ… ಆ ನಾಲ್ಕು ಜನ ಯಾರು ಎಂಬುದು ಅವರ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಉತ್ತರ ಕರಾರುವಕ್ಕಾಗಿ ಉತ್ತರ ಹೇಳಲು ಸಾಧ್ಯ ಇಲ್ಲ. ಸಂಖ್ಯೆ ನಾಲ್ಕು ಎಂಬುದು ಇಲ್ಲಿ ವಿಶಾಲಾರ್ಥದಲ್ಲಿ ಒಂದು ಸಮುದಾಯವನ್ನು ಪ್ರತಿನಿಧಿಸುವ ಸಂಖ್ಯೆ ಅಷ್ಟೆ. ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ, ಕೆಲವರಿಗೆ ಸಂಖ್ಯಾಶಾಸ್ತ್ರದ ಮೇಲೆ ಅಪಾರ ನಂಬಿಕೆ. ಇಂಥದ್ದೆ ನಂಬರ್ ಆಗಬೇಕು ಅನ್ನುವ ಹಠ ಹಿಡಿಯುತ್ತಾರೆ. ಮದುವೆ ದಿನಾಂಕ, ವಾಹನ ಸಂಖ್ಯೆ, ಮೊಬೈಲ್ ಸಂಖ್ಯೆ ಎಲ್ಲವನ್ನೂ ತಮಗಿಷ್ಟ ಬಂದಂತೆ ತೆಗೆದುಕೊಳ್ಳುತ್ತಾರೆ. ಫ್ಯಾನ್ಸಿ ನಂಬರ್ ಬೇಕು ಅನ್ನುವ ಕಾರಣಕ್ಕೆ ಅದಕ್ಕೆ ಅಧಿಕ ಹಣ ನೀಡಿ ಪಡೆಯುತ್ತಾರೆ. ಸಂಖ್ಯೆ ಇಲ್ಲದೆ ಬದುಕೇ ಇಲ್ಲ. ಎಲ್ಲದಕ್ಕೂ ಸಂಖ್ಯೆ ಬೇಕು. ಕೆಲವು ಸಂಖ್ಯೆಗಳು ಕೆಲವರಿಗೆ ಬಹಳ ಒಳ್ಳೆಯದು. ಅಂದರೆ ಕೆಲವರಿಗೆ ಅಷ್ಟೇ ಕೆಟ್ಟದ್ದು ಎಂಬ ನಂಬಿಕೆ ಇದೆ. ‘ಏಕಮೇವ ಅದ್ವೀತಿಯ’ ಎಂದು ಕೆಲವು ಕಡೆ ಹೇಳಿದರೆ ‘ಒಂಟಿ’, ‘ಒಂಟಿ ಸೀನು’ ‘ಒಂಟಿ ಬಡಿಗೆ’ ಇತ್ಯಾದಿ ಅಪಸವ್ಯಗಳನ್ನು ಕೆಲವರು ಹೇಳುವುದಿದೆ. ಕೆಲವರಿಗೆ ಸಮಸಂಖ್ಯೆ ಖುಷಿ ಇನ್ನು ಕೆಲವರಿಗೆ ಬೆಸ ಸಂಖ್ಯೆ. ಮುಕ್ಕೋಟಿ ದೇವತೆಗಳು ಮೂರು ಮುಕ್ತಾಯ, ಮೂರು ದಾರಿ, ಆರಕ್ಕೆ ಏರಲ್ಲ ಮೂರಕ್ಕೆ ಇಳಿಯಲ್ಲ ಎಂದು ಬಿಡುತ್ತಾರೆ. ನಂಬರ್ 7. ಕೆಲವರಿಗೆ ಅದ್ಭುತ. ಪ್ರಪಂಚದ ಏಳು ಅದ್ಭುತ. ಸಪ್ತ ಮಾತೃಕೆಯರು, ಕಾಮನಬಿಲ್ಲಿನ ಬಣ್ಣ, ಸಪ್ತರ್ಷಿ ಮಂಡಲ, ಸಪ್ತ ನದಿಗಳು, ಸಪ್ತಧಾತು, ಸಪ್ತಸ್ವರಗಳು, ಸಪ್ತಪದಿ, ಸೂರ್ಯನ ರಥದ ಗಾಲಿಗಳು ಏಳು ಇತ್ಯಾದಿ ಹೇಳಿದರೆ ಇನ್ನು ಕೆಲವರು, ಏಳು ಮನೆಹಾಳು, ಏಳು -ಬೀಳು ಎಂಬ ಮಾತುಗಳನ್ನೆ ಹೇಳಿ ಅದರ ಜೊತೆಗೆ ಇನ್ನೂ ಒಂದು ಸಂಖ್ಯೆಯನ್ನು ಎಳೆದು ತಂದು ಏಳು ಹನ್ನೊಂದು ಆಗಬಾರದು ಎನ್ನುತ್ತಾರೆ.
ಎಂಟು ಕೂಡ ಕೆಲವರಿಗೆ ಒಳ್ಳೆಯದು. ಅಷ್ಟ ದಿಕ್ಕುಗಳು, ಅಷ್ಟ ಲಕ್ಷ್ಮಿಯರು, ಅಷ್ಟೈಶ್ವರ್ಯ ಎಂಬ ಮಾತುಗಳು ಬರುತ್ತವೆ. ಆದರೆ ಅಷ್ಟ-ಕಷ್ಟ ಅನ್ನುವ ಮಾತಿದೆ. ಒಂದು ಮಾತಿಗೆ ಹತ್ತು ಮಾತನಾಡ್ತೀಯ. ಇಪ್ಪತ್ನಾಲ್ಕು ಮಾತಾಡ್ತೀಯ. ಇಪ್ಪತ್ತೆಂಟು ಹಳವಂಡಗಳು ನೂರ ಹನ್ನೊಂದು ದೂರು, ನಂದೋ ಸಮಸ್ಯೆ ನೂರಾ ಹನ್ನೆರಡು. ಹೀಗೆ ಸಂಖ್ಯೆಯನ್ನೆ ಅವಲಂಬಿಸಿ ಕೆಲವು ಮಾತುಗಳಿರುತ್ತವೆ. ಏಳು ವಿಭಕ್ತಿ ಪ್ರತ್ಯಯಗಳು, ಸಾಷ್ಟಾಂಗ ನಮಸ್ಕಾರಗಳು, ನವ ರಸಗಳು, ಇಪ್ಪತ್ತೊಂದು ನಮಸ್ಕಾರಗಳು, ಮೂವತ್ತೆರಡು ರಾಗಗಳು, 48 ದಿನಗಳು, 64 ವಿದ್ಯೆಗಳು, 64 ಪುರಾತನರು, ನೂರ ಎಂಟು, ನೂರ ಒಂದು…. ಹೀಗೆ ತ್ರಿವಿಧ, ತ್ರಿಕರಣ, ಷಟ್ಸ್ಥಲ ಸಿದ್ಧಾಂತ, ಇಮ್ಮಡಿ, ಮುಮ್ಮಡಿ, ನಾಲ್ವಡಿ, ನೂರ್ಮಡಿ, ಅಷ್ಟಾದಶ ವರ್ಣನೆಗಳು ಅರವತ್ತಕ್ಕೆ ಅರಳು – ಮರಳು, ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಅನ್ನುವ ಮಾತುಗಳೂ ಜನಜನಿತವೆ. ಇನ್ನು ಪಾಶ್ಚಾತ್ಯರಿಗೆ 13 ಅತ್ಯಂತ ಕೆಟ್ಟದ್ದು ಅನ್ನುವ ನಂಬಿಕೆ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡರ ಆನೆ’ ಗದ್ಯದಲ್ಲಿ ನಂಬರ್ 17ರ ವಿದ್ಯುತ್ ಕಂಬ ಅತ್ಯಂತ ಅಪಾಯಕಾರಿ. ಕಾರಣ ಅಲ್ಲಿ ತಿಪ್ಪಣ್ಣನ ಸಾವಾಗಿರುತ್ತದೆ. ‘12’, ‘14’ ನಂಬರುಗಳು ವನವಾಸ ಸೂಚಿಗಳು ಅನ್ನುವ ಹಾಗೆ ಬಳಕೆಯಾದರೆ ಡಜನ್ ಲೆಕ್ಕಾಚಾರ ಬಂದಾಗ ಸಂಖ್ಯೆ ‘12’ ಮುಖ್ಯವಾಗುತ್ತದೆ.
ಇವೆಲ್ಲವನ್ನು ಒತ್ತಟ್ಟಿಗೆ ಇರಿಸಿ ನೋಡುವುದಾದರೆ ‘420’ ಎಂಬ ನಂಬರಿನ ಮೇಲೇಕೆ ದ್ವೇಷ, ಅಸಡ್ಡೆ ತಿಳಿಯಬೇಕು. ‘420’ ಅನ್ನುವ ಸಂಖ್ಯೆಗೆ ಪ್ರತಿಕ್ರಿಯಿಸುವಷ್ಟು ಇನ್ಯಾವ ಸಂಖ್ಯೆಗೂ ಜನರು ಪ್ರತಿಕ್ರಿಯಿಸುವುದಿಲ್ಲ. ‘420’ ಬಂದರೆ ಸಾಕು ಎಲ್ಲರೂ ಒಂದು ಹೆಜ್ಜೆ ನಿಂತಲ್ಲಿಂದ ಹಿಂದೆ ಇಡುತ್ತಾರೆ. ಅಂಕಪಟ್ಟಿಯ ಒಟ್ಟು ಅಂಕಗಳು ಬಂದಾಗ, ಯಾವುದಾದರೂ ಅಂಗಡಿಯಲ್ಲಿ ಬಿಲ್ ‘420’ ಎಂದಾದರೆ ಕತೆ ಮುಗಿಯಿತು ಚೇಡಿಕೆಗಳು ಬರುತ್ತವೆ. ಇನ್ನು ಸಮಯ ಕೇಳಿದಾಗ ‘4:20’ ಎನ್ನುವಾಗಲೂ ಮುಜುಗರ ಇದ್ದೆ ಇರುತ್ತದೆ. ಜಗಳ, ಮಾಡುವಾಗ ನೀನು ‘420’ ಎಂದೇ ಹೇಳಿಬಿಡುತ್ತಾರೆ. ಎಲ್ಲಿಯಾದರೂ 420 ನಂಬರ್ ಸ್ವೀಕರಿಸಲ್ಲ ತಾತ್ಸಾರ ಮಾಡುತ್ತಾರೆ. ಎಲ್ಲಾ ನಂಬರ್‌ಗಳನ್ನು ಹೀಗೆ ಬಳಸಬಹುದಲ್ಲ. 420ಯನ್ನು ಮಾತ್ರ ಏಕೆ ಹೀಗೆ ಸ್ವೀಕರಿಸೋಕೆ ಸಿದ್ಧವಿಲ್ಲ ಅನ್ನುವುದನ್ನು ತಿಳಿಯೋಣ.
‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್‌ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ. ಮೋಸಗಾರ ಅನ್ನುವ ಪದಕ್ಕೆ ಪರ್ಯಾಯವಾಗಿ ‘420’ ಸಂಖ್ಯೆ ಇನ್ನಿಲ್ಲದ ಹಾಗೆ ಬೇರೂರಿದೆ.
ಆಫರ್‌ಗಳನ್ನು ಘೋಷಣೆ ಮಾಡುವಾಗ ಪೂರ್ಣ ಸಂಖ್ಯೆಗೆ ಒಂದು ಅಂಕಿ ಕಡಿಮೆ ಬರುವಂತೆ ಮಾಡಿರುತ್ತಾರೆ. ಉದಾಹರಣಗೆ 49, 99, 499, 599, 999 ಹೀಗೆ ಈ ಎಲ್ಲಾ ಅಂಕಿಗಳಿಗು ಒಂದನ್ನು ಸೇರಿಸಿದರೆ ಪರಿಪೂರ್ಣ ಆಗುತ್ತದೆ. ಹಾಗಂತ ನಗದಿನ ರೂಪದಲ್ಲಿ ವ್ಯವಹಾರ ಮಾಡುವಾಗ ಒಂದು ರೂಪಾಯನ್ನು ಗ್ರಾಹಕನೇನು ಕಡಿಮೆ ಕೊಡುವುದಿಲ್ಲ. ವ್ಯಾಪಾರ ಮುಗಿಸಿದ ನಂತರ 99% ಸಂದರ್ಭಗಳಲ್ಲಿ ಒಂದು ರೂಪಾಯಿ ಉಳಿಕೆ ಹಣವನ್ನೂ ತೆಗೆದುಕೊಳ್ಳುವುದಿಲ್ಲ. ಹಾಗಾದರೆ ಒಂದು ರುಪಾಯಿಯ ಕಥೆ? ಅಂಥ ನೂರು, ಸಾವಿರ ಗ್ರಾಹಕರು ಒಂದೊಂದು ರೂಪಾಯಿ ಬಿಟ್ಟರೆ? ಎಷ್ಟಾಯಿತು? ಯಾರಿಗೆ ಹೋಗುತ್ತೆ? ಗೊತ್ತಿಲ್ಲ!
ಅಂಕಗಳ ಗಣಿಕೆ ಎಣಿಕೆ ಮುಖ್ಯವಲ್ಲ. ಇನ್‌ಬಿಲ್ಟ್ ಎಂಬಂತೆ ಕೆಲವು ಸಂಖ್ಯೆಗಳು ಶುಭಾಶುಭ ಎಂಬಂತೆ ಬಂದೇ ಬಿಡುತ್ತವೆ. ಅವುಗಳ ಹಿನ್ನೆಲೆಯನ್ನು ತಿಳಿದು ಬಳಸಿದರೆ ಆ ಸಂಖ್ಯೆಗೂ ಒಳ್ಳೆಯ ಬಲ ಬಂದಂತಾಗುತ್ತದೆ. ಅದುವೆ ಸಂಖ್ಯಾ ಬಲ.
ಕನ್ನಡ ಪದ್ಯಜಾತಿಗಳನ್ನು ಗುರುತಿಸುವಾಗ ಪದ್ಯದ ಸಾಲುಗಳ ಆಧಾರದ ಮೇಲೆಯೆ ಗುರುತಿಸುವುದು ತ್ರಿಪದಿ, ಚೌಪದಿ, ಕಂದಪದ್ಯ, ಷಟ್ಪದಿ, ಅಷ್ಟಪದಿ, ಇನ್ನು ಸಾನೆಟ್ ಅಂದರೆ ಹದಿನಾಲ್ಕು ಸಾಲು… ಇನ್ನು ಛಂದಸ್ಸು ಎಂದಾಗ ಒಂದು ಮಾತ್ರೆಯ ಕಾಲ, ಎರಡು ಮಾತ್ರೆಯ ಕಾಲ, ಇನ್ನು ಅಂಶಗಣ ಛಂದಸ್ಸಿನಲ್ಲಿ ಎರಡು ಗಣ, ಮೂರು ಗಣ, ನಾಲ್ಕು ಗಣ ಹೀಗೆ…. ಅಂದಹಾಗೆ ಒಳಗೊಂದು ಹೊರಗೊಂದು ಮಾತನಾಡುವವರನ್ನು ‘ಎರಡು ನಾಲಗೆಯವರು, ಎರಡುತಲೆ ಹಾವು’ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ರಾಮಾಯಣದಲ್ಲಿ ರಾವಣನ ಅರಮನೆಯ ದಾಸಿ ಮೂರು ಜಡೆಗಳನ್ನು ಹಾಕಿಕೊಳ್ಳುತ್ತಿದ್ದಳಂತೆ. ಅದಕ್ಕೆ ಅವಳಿಗೆ ತ್ರಿಜಟೆ ಅನ್ನುವ ಹೆಸರಂತೆ. ಮೆದುಳಿನಲ್ಲೂ ಸಂಖ್ಯೆಯನ್ನು ನೆನಪಿಟ್ಟುಗೊಳ್ಳುವ ಭಾಗ ತಲೆಯ ಮೇಲ್ಭಾಗದಿಂದ ಕಿವಿಯವರೆಗೂ ಹಬ್ಬಿರುತ್ತದೆಯಂತೆ. ಅಬ್ಬಾ! ಏನೀ ಸಂಖ್ಯಾ ಮಹಿಮೆ. ಭಾರತೀಯರು ‘ಸೊನ್ನೆ’ಯನ್ನು ಕಂಡುಹಿಡಿಯದೆ ಹೋಗಿದ್ದರೆ ನಮ್ಮ ಸಂಖ್ಯೆಗಳ ಮಹಿಮೆಯನ್ನು ಊಹಿಸಲಾಗುತ್ತಿರಲಿಲ್ಲ ಅಲ್ವ! ಅಯ್ಯೋ ಮರೆತು ಹೋಗಿದ್ದೆ; ಯಾವುದೇ ಆಚರಣೆ ತೆಗೆದುಕೊಳ್ಳಿ ಹತ್ತು ವರ್ಷಕ್ಕೆ ದಶಮಾನೋತ್ಸವ, ಇಪ್ಪತ್ತೈದು ವರ್ಷಕ್ಕೆ ಬೆಳ್ಳಿಹಬ್ಬ, ಐವತ್ತಕ್ಕೆ ಸುವರ್ಣಮಹೋತ್ಸವ, ಅರವತ್ತಕ್ಕೆ ವಜ್ರ… ಹೀಗೆ ವರ್ಷಗಳ ಸಂಖ್ಯೆ ವೃದ್ಧಿಸಿದಂತೆ ಅದಕ್ಕೆ ಅನ್ವಯಿಸುವ ಲೋಹದ ಬೆಲೆಯೂ ಅಧಿಕವಾಗುತ್ತಾ ಹೋಗುತ್ತದೆ… ಇರಲಿ. ಮನುಷ್ಯನ ಘನತೆ ಅಳೆಯಲ್ಪಡುವುದು ಅವನು ತರುವ ಸಂಬಳ ಎಷ್ಟು ಅಂಕೆಯದ್ದು ಎಂದೇ…… ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಗಳಿಸುವ ಹಣ ಹೆಚ್ಚಾಗುತ್ತಿದೆಯೇ ವಿನಃ ಅವನ ಮಾನವೀಯ ಮೌಲ್ಯಗಳಲ್ಲ ವಿಪರ್ಯಾಸ ಅಲ್ವೆ!
ಮನುಷ್ಯ ಹಾಸಿಗೆಯಲ್ಲಿ ಮಲಗುವ ಸಮಯ ಎಷ್ಟಿರಬೇಕು ಅಲ್ಲಿಂದ ಎಷ್ಟು ಗಂಟೆಗೆ ಏಳಬೇಕು ಎಷ್ಟು ಗಂಟೆ ನಿದ್ರೆ ಮಾಡಬೇಕು ಎಲ್ಲವೂ ಅಂಕಿಗಳಲ್ಲಿ ಇದೆ. ಪರೀಕ್ಷೆಯಲ್ಲಿ ಇಂತಿಷ್ಟೇ ಅಂಕಗಳನ್ನು ತೆಗೆದುಕೊಂಡರೆ ಮಾತ್ರ ಪಾಸ್, ಇಲ್ಲ ಫೇಲ್ ಹೀಗೆ… ಅಂಕಿಗಳು ಮನುಷ್ಯನ ಅವಿಭಾಜ್ಯ ಅಂಗ. ಹಾಗಾಗಿ ಬಹುಶಃ ಅಂಕಿಗಳು ಸಂಶೋಧನೆ ಆಗದಿರುವಾಗಲೆ ಮನುಷ್ಯ ಹೆಚ್ಚು ಸುಖಿಯಾಗಿದ್ದ ಅನ್ನಿಸುತ್ತದೆ. ಅಂಕಿಗಳು ಅರ್ಥ ಸಂಕೋಲೆಗಳಾಗಿ ಮನುಷ್ಯನನ್ನು ಬಾಧಿಸುತ್ತಿವೆ…… ಅಂಕಿಗಳ ಅಂಕೆಯನ್ನು ಮೀರೋಣ. ಅರ್ಥ ಅನರ್ಥಗಳನ್ನು ಮರೆಯೋಣ! ಕಡೆಯದಾಗಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ….. ಹಾಗಾಗಿ ಕನ್ನಡ ಕುರಿತು ಅಂಕೆಗಳಲ್ಲಿ ಎರಡು ಮಾತು.
ಒಂದು ಎರಡು
ಕನ್ನಡ ಹರಡು
ಮೂರು ನಾಕು
ಕನ್ನಡವೆ ಸಾಕು
ಐದು ಅರು
ಕನ್ನಡವನೆ ಸಾರು
ಏಳು ಎಂಟು
ಕನ್ನಡಿಸು ಕನ್ನಡ ನಂಟು
ಒಂಬತ್ತು ಹತ್ತು
ಕನ್ನಡ ಲಿಪಿರಾಣಿಯ ಮೇಲೆತ್ತು
ಒಂದರಿಂದ ಹತ್ತು ಹೀಗಿತ್ತು
ಕನ್ನಡ ಕವನ ಹೀಗಿತ್ತು
ಕನ್ನಡ ಸೊಬಗನ್ನು ಬರೆದಿರುವ ಪದ್ಯಗಳ ಸಂಖ್ಯೆ ತಿಳಿದಿಲ್ಲ. ಆದರೂ ಬರೆಯುವೆ ಬರೆದು ಅಸಂಖ್ಯೆಗಳ ನಡುವೆ ನಾನೂ ಒಂದು ಸಂಖ್ಯೆಯಾಗುವೆ.
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.