ಅವರೊಮ್ಮೆ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಭೇಟಿ ನೀಡಿದಾಗ, ಪ್ರಯೋಗಕ್ಕಾಗಿ ಎಲ್ಲಿಂದಲೋ ತಂದ ಕಮಲದ ಹೂ ನೋಡಿದರು. ಮತಗೆ ಅದನ್ನೆತ್ತಿ ಖಲಿಲ್ ಗಿಬ್ರಾನನ ಕವನದ ಸಾಲೊಂದನ್ನು ಉಸುರಿದರು. ಅದರ ಪಕಳೆಗಳನ್ನು ಕಿತ್ತು ಪರೀಕ್ಷಿಸುವುದು ಅವರಿಗೆ ಹಿಂಸೆ ಎನಿಸಿತ್ತು. ಅವರ ಈ ಕೋಮಲ ಭಾವನೆಗಳ ಬಗೆಗೆ ಅಲ್ಲಿದ್ದ ಸೈನ್ಸ್ ವಿದ್ಯಾರ್ಥಿಗಳು ಉತ್ಸಾಹದಿಂದ ತಿಳಿಸುವಾಗ, ನಾನು ತದೇಕಚಿತ್ತದಿಂದ ಕೇಳಿದ ನೆನಪು ಇನ್ನೂ ಉಳಿದಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 89ನೇ ಕಂತು ನಿಮ್ಮ ಓದಿಗೆ
ಅರವತ್ತು ವರ್ಷಗಳಿಗೂ ಹಿಂದಿನ ನೆನಪು. ವಿಜಾಪುರದ ನಾವಿಗಲ್ಲಿಯಲ್ಲಿ ನನ್ನ ಮನೆ. ಪಕ್ಕದ ಮುಳವಾಡಗಲ್ಲಿಯಲ್ಲಿ ಮದುವೆ ನಡೆದಿತ್ತು. ಮದುಮಗನ ಅಣ್ಣ ಕೆ. ಸಿ. ಪಿ. ಸೈನ್ಸ್ ಕಾಲೇಜನಲ್ಲಿ ಸಿಪಾಯಿ ಆಗಿದ್ದ. ನಾವೆಲ್ಲ ಬಾಲಕರು ಹಂದರದಲ್ಲಿ ಖುಷಿಯಿಂದ ಓಡಾಡುತ್ತಿದ್ದೆವು.
ಹಿರಿಯನೊಬ್ಬ ಗದರಿಸಿದ- ”ಚುಪ್ ರಹೋ, ಸಾಹೇಬ್ ಆ ರಹೇ ಪೈ” ನಾನು ಬೆರಗುಗಣ್ಣಿನಿಂದ ನೋಡಿದೆ. ಸಾಹೇಬರು ಟಾಂಗಾದಿಂದ ಇಳಿದರು. ಗೌರವದ ಪ್ರತೀಕವಾಗಿ ಎಲ್ಲವೂ ಸ್ತಬ್ಬ. ಮುಸ್ಲಿಂಮರಿಗೂ ಅವರು ಬಂಧುವಾಗಿದ್ದರು. ಅವರಿಂದಾಗಿ ಅನೇಕ ಬಡ ಮುಸ್ಲಿಮರು ಸೈನ್ಸ್ ಕಾಲೇಜಿನಲ್ಲಿ ಸಿಪಾಯಿ, ಮಾಲಿ ಮುಂತಾದ ನೌಕರಿ ಪಡೆದಿದ್ದರು. ಇದಾವುದರ ಅರಿವಿಲ್ಲದ ನನ್ನ ಮೇಲೂ ಅವರು ಪರಿಣಾಮ ಬೀರಿದ್ದರು. ಅವರ ವ್ಯಕ್ತಿತ್ವವೇ ಅಂತಹದು. ಕೋಟು, ಬೂಟು, ಹ್ಯಾಟು, ಟೈಗಳಲ್ಲಿ ಗಾಂಭೀರ್ಯದ ಸಾಕಾರರೂಪವೇ ಆಗಿದ್ದರು. ಆ ಸಾಹೇಬರೇ ಕೆ. ಸಿ. ಪಿ. ಸೈನ್ಸ್ ಕಾಲೇಜಿನ ಪ್ರಿನ್ಸಿಪಾಲ ಡಾ॥ ಎಚ್. ಟಿ. ಸಾಸನೂರ ಅವರು. ಅವರನ್ನು ನಾನು ಮೊದಲ ಬಾರಿಗೆ ಕಂಡ ಸಂದರ್ಭವಿದು. ಒಬ್ಬ ಪ್ರಿನ್ಸಿಪಾಲರು ಈ ರೀತಿ ಸಾಹೇಬರಾಗಿ ರಾರಾಜಿಸಿದ್ದು ನನ್ನ ಜೀವಮಾನದಲ್ಲಿ ಮತ್ತೆಲ್ಲೂ ಕಾಣಲಿಲ್ಲ.
ಅವರು ಬಡವರ ಬಂಧು ಎಂಬುದನ್ನು ಅರಿತುಕೊಳ್ಳಲು ಬಹಳ ದಿನ ಹಿಡಿಯಲಿಲ್ಲ. ಅವರ ಘನವ್ಯಕ್ತಿತ್ವ ರೂಪುಗೊಂಡದ್ದು ಭಾಷಣದಿಂದಲ್ಲ, ಬರವಣಿಗೆಯಿಂದಲ್ಲ, ಪ್ರಚಾರದಿಂದಲ್ಲ, ಸಮೂಹ ಮಾಧ್ಯಮಗಳಿಂದಲ್ಲ, ಬದುಕುವ ಪರಿಯಿಂದ!
ಅವರನ್ನು ಎಲ್ಲ ವರ್ಗಗಳ, ಎಲ್ಲ ಜಾತಿಗಳ, ಎಲ್ಲ ಧರ್ಮಗಳ ಜನ ಗೌರವದಿಂದ ಕಾಣುತ್ತಿದ್ದರು. ಇಂಥ ಸಮ್ಮೋಹನ ಶಕ್ತಿಯನ್ನು ಅವರು ಹೇಗೆ ಪಡೆದರು ಎಂಬುದರ ಬಗೆಗೆ ಅನೇಕ ಬಾರಿ ಯೋಚಿಸಿದ್ದೇನೆ. ನಾನು ಎಸ್. ಬಿ. ಆರ್ಟ್ಸ್ ಕಾಲೇಜಿನಲ್ಲಿದ್ದಾಗ ನೋಡಿದ್ದೇನೆ. ಗೌರವದ ದ್ಯೋತಕವಾಗಿ ವಿದ್ಯಾರ್ಥಿಗಳು ಅವರ ಎದುರು ಹಾದು ಹೋಗುತ್ತಿರಲಿಲ್ಲ.
ಅವರೇನು ಶ್ರೀಮಂತ ಮನೆತನದಲ್ಲಿ ಜನಿಸಿ ಬಂದವರಲ್ಲ. ಕಟ್ಟಿಗೆ ಹೊತ್ತು ಹೊತ್ತು ತಮ್ಮ ತಲೆಗೂದಲು ಹೋಗಿದ್ದಾಗಿ ಅವರೊಮ್ಮೆ ಹೇಳಿ ನಕ್ಕಿದ್ದನ್ನು ನನಗೆ ನನ್ನ ವಿದ್ಯಾಗುರು ಪ್ರೊ|| ಎ. ಎಸ್. ಹಿಪ್ಪರಗಿ ಅವರು ಹೇಳಿದ ನೆನಪು.
ಅವರದು ಮುಕ್ತ ಸ್ವಚ್ಛಂದ ನಗು. ಅವರ ಈ ನಗುವನ್ನು ಅನೇಕ ಸಲ ದೂರದಿಂದಲೇ ಗಮನಿಸಿದ್ದೇನೆ. ಅವರ ನಗುವಿನಲ್ಲಿ ಯಾವುದೇ ರಾಗದ್ವೇಷ ಗಳಿರುತ್ತಿರಲಿಲ್ಲ. ಅನುಭಾವಿಯ ನಗು ಅದು.
ಅವರೊಮ್ಮೆ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಭೇಟಿ ನೀಡಿದಾಗ, ಪ್ರಯೋಗಕ್ಕಾಗಿ ಎಲ್ಲಿಂದಲೋ ತಂದ ಕಮಲದ ಹೂ ನೋಡಿದರು. ಮತಗೆ ಅದನ್ನೆತ್ತಿ ಖಲಿಲ್ ಗಿಬ್ರಾನನ ಕವನದ ಸಾಲೊಂದನ್ನು ಉಸುರಿದರು. ಅದರ ಪಕಳೆಗಳನ್ನು ಕಿತ್ತು ಪರೀಕ್ಷಿಸುವುದು ಅವರಿಗೆ ಹಿಂಸೆ ಎನಿಸಿತ್ತು. ಅವರ ಈ ಕೋಮಲ ಭಾವನೆಗಳ ಬಗೆಗೆ ಅಲ್ಲಿದ್ದ ಸೈನ್ಸ್ ವಿದ್ಯಾರ್ಥಿಗಳು ಉತ್ಸಾಹದಿಂದ ತಿಳಿಸುವಾಗ, ನಾನು ತದೇಕಚಿತ್ತದಿಂದ ಕೇಳಿದ ನೆನಪು ಇನ್ನೂ ಉಳಿದಿದೆ.
ಅವರ ಸಮಯಪ್ರಜ್ಞೆ ಅನನ್ಯವಾದುದು. ಡಾ|| ಡಿ. ಸಿ. ಪಾವಟೆ ಅವರು ಪಂಜಾಬ್ ರಾಜ್ಯಪಾಲರಾಗಿ ನೇಮಕಗೊಂಡಾಗ ವಿಜಾಪುರದಲ್ಲಿ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಹಾರ ಹಾಕಲು ಬಂದ ಅಭಿಮಾನಿಗಳ ಮಹಾಪೂರವೇ ನೆರೆದಿತ್ತು. ಪ್ರಾಧ್ಯಾಪಕರೊಬ್ಬರು, ಹಾರ ಹಾಕಲು ಹೆಸರು ಕೊಟ್ಟವರ ಹೆಸರುಗಳನ್ನು ಕೂಗುತ್ತಿದ್ದರು. ಆದರೆ ಅಭಿಮಾನಿಗಳ ಉತ್ಸಾಹವನ್ನು ಹತೋಟಿಯಲ್ಲಿಡಲು ಸಾಧ್ಯವಿರಲಿಲ್ಲ. ಹೀಗಾಗಿ ಎಲ್ಲವೂ ಗೊಂದಲಮಯವಾಗಿತ್ತು. ಸಾಸನೂರ ಸಾಹೇಬರು ತಕ್ಷಣ ಮೈಕ್ ಬಳಿ ಬಂದರು. “ಹಾರಹಾಕುವವರೆಲ್ಲ ಸಾಲಾಗಿ ನಿಲ್ಲಿರಿ. ಒಬ್ಬೊಬ್ಬರಾಗಿ ಮೈಕ್ ಬಳಿ ಬಂದು ಹೆಸರು ಅಥವಾ ಸಂಸ್ಥೆಯ ಹೆಸರು ಹೇಳಿ ಹಾರ ಹಾಕಿರಿ” ಎಂದು ‘ಆದೇಶಿಸಿದರು’. ಸಾಸನೂರ ಸಾಹೇಬರು ಹೇಳಿದ ಮೇಲೆ ಕೇಳಬೇಕೆ? ಎಲ್ಲವೂ ಸರಾಗವಾಗಿ ನೆರವೇರಿತು.
ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದಾಗ ವಿಜಾಪುರ ಬರಗಾಲದಿಂದ ತತ್ತರಿಸಿತ್ತು. ಕಾಲೇಜು ಫೀ ಮಾಫಿ ಮಾಡಬೇಕೆಂದು ವಿದ್ಯಾರ್ಥಿಗಳು ಚಳುವಳಿ ಹೂಡಿದರು. ಈ ಚಳುವಳಿಯಲ್ಲಿ ಕೆಲ ದುಷ್ಟಶಕ್ತಿಗಳೂ ಸೇರಿದ್ದವು. ಭಾರಿ ಮೆರವಣಿಗೆ ರೈಲ್ವೇ ನಿಲ್ದಾಣದವರೆಗೆ ಹೋಯಿತು. ಸಮೂಹಸನ್ನಿಗೊಳಗಾದ ವಿದ್ಯಾರ್ಥಿಗಳು ರೈಲ್ವೇ ಸಿಗ್ನಲ್ ಕಂಬವನ್ನು ಬಗ್ಗಿಸಿದರು. ಹಳಿಗಳನ್ನು ಸರಿಸಿದರು. ದೂರದಿಂದ ರೈಲ್ವೇ ನಿಲ್ದಾಣದ ಮೇಲೆ ಕಲ್ಲಿನ ಸುರಿಮಳೆಗರೆಯುತ್ತಿದ್ದರು. ನಿಲ್ದಾಣದಿಂದ ಪ್ರಯಾಣಿಕರೆಲ್ಲ ಓಡಿಹೋಗಿದ್ದರು. ಒಬ್ಬಳು ಬಾಣಂತಿ ಏಳಲಿಕ್ಕಾಗದೆ ಹಾಗೇ ಕುಳಿತಿದ್ದಳು. ಸಾಸನೂರ ಸಾಹೇಬರು ಅಲ್ಲಿಗೆ ಧಾವಿಸಿದರು. ಆ ಬಾಣಂತಿಯ ಎದುರಿಗೆ ರಕ್ಷಾಗೋಡೆಯಂತೆ ನಿಂತರು. ತಮ್ಮ ಹ್ಯಾಟನ್ನು ಅವಳ ತಲೆಯ ಮೇಲಿಟ್ಟರು. ಕೋಟನ್ನು ಮೈಗೆ ಹೊಚ್ಚಿದರು. ಈ ಕ್ಷಣಗಳಲ್ಲಿ ಅವರಿಗೆ ಅನೇಕ ಕಲ್ಲುಗಳು ತಾಗಿದವು.
ಆದರೆ ಪೊಲೀಸರ ಲಾಠಿಗೆ, ಅಶ್ರುವಾಯುವಿಗೆ ಎದೆಗುಂದದ ಆ ‘ಹುಚ್ಚು ಸಮೂಹ’ಕ್ಕೆ ಸಾಹೇಬರ ಈ ರೀತಿಯ ದರ್ಶನದಿಂದ ಪ್ರಜ್ಞೆಮೂಡಿತು. ಕಲ್ಲಿನ ಮಳೆ ನಿಂತಿತು. ನನ್ನ ಒಳದನಿ ಪಿಸುಗುಟ್ಟಿತು- ‘ಮಹೋನ್ನತ ಮಾನವ.’
ಅವನ ಕುಲವು ಹೆಚ್ಚಾಗಲಿ’.
‘May his tribe increase’
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.