ಮಕ್ಕಳಿಗೆ ಕನ್ನಡ ಪುಸ್ತಕವನ್ನು ಓದುವುದೆಂದರೆ ಬಹಳ ತ್ರಾಸಿನ ಕೆಲಸ. ಕಾರ್ಟೂನನ್ನು ನೋಡಿದ ಗುಂಗಿನಲ್ಲಿ ಇದ್ದ ಮಗುವೊಂದು ಸಭಾಸದ ಎಂದೋದಲು ಸಬಾಸ್ಟಿಯನ್ ಎಂದು ಓದಿದ್ದು ನೆನಪಾಗುತ್ತದೆ. ಎಲೆ ಅಡಿಕೆ ಮೆಲ್ಲುತ್ತಿದ್ದ ಎಂದು ಓದಬೇಕಾದ್ದನ್ನು ಎಲೆ ಅಡಿಕೆ ಮೇಯುತ್ತಿದ್ದ ಎಂದರೆ ಆಭಾಸವೇ ತಾನೆ! ರಂಗ ನಾಯಕಿ > ಲಂಗನಾಯಕಿ, ಆಸ್ಥಾನದ ದಾಸಿ ಹಾಸನದ ಆಶ ಆಂದರೆ ರಕ್ಷಿಸ ಬೇಕು ಎನ್ನಲು ಹೋಗಿ ರಸ್ಕ್ ಬೇಕು ಎಂದರೆ ಎಲ್ಲಿಕೊಡಕ್ಕಾಗುತ್ತೆ? ಕಾಲ್ ಸೆಂಟರಿನವರೋ ಯಾರೋ ಕಾಲರ್ ಐಡಿ ಬೇಗ ಎನ್ನುವ ಬದಲಿಗೆ ಕಾಲರ್ ಹಿಡಿ ಬೇಗ ಎಂದರೆ ಆಗುವ ಅವಾಂತರವೆ ಬೇರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಏಳನೆಯ ಬರಹ
ಈಗಂತೂ ಎಲ್ಲಿ ನೋಡಿದರಲ್ಲಿ AI ದೆ ಮಾತು. ಕೃತಕಬುದ್ಧಿಮತ್ತೆ; ಅದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ. ಎಲ್ಲಿ ನೋಡಿದರೂ AI ಹವಾ ಇನ್ನು ಸ್ವಲ್ಪ ದಿನಕ್ಕೆ ಮನುಷ್ಯ ಸಂಪೂರ್ಣ AI ಹಿಡಿತದಲ್ಲೆ ಇರಬೇಕಾಗುತ್ತದೇನೋ? ನಮಗೆ ಏನು ಬೇಕು? ಏನು ಬೇಡ? ಎಲ್ಲವನ್ನೂ AI ನಿರ್ಧರಿಸುತ್ತದೆ….. ಕೃತಕಬುದ್ಧಿಮತ್ತೆ ಬಂದು ಗಂಟೆಗಳಲ್ಲಿ ಆಗುವ ಕೆಲಸಗಳನ್ನು ನಿಮಿಷಗಳಲ್ಲಿ ಮುಗಿಸಬಹುದು. ಆದರೆ ನಮ್ಮ ಸೃಜನಶೀಲತೆಯೂ ಮುಕ್ಕಾಗುತ್ತಿರುವುದು ಅಷ್ಟೇ ಸತ್ಯ.
ಕೃತಕಬುದ್ಧಿ ಮತ್ತೆ ಕುರಿತು ಸಧ್ಯ ಅಗತ್ಯಕ್ಕಿಂತ ಹೆಚ್ಚಿನ ಮಾತುಗಳು ಕೇಳಿಬರುತ್ತಿವೆ. ಆದರೆ ನೀತಿ ನಿರೂಪಕರು ವಾಸ್ತವಾಂಶವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. “ಸಧ್ಯದ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿ ಮತ್ತೆಯು ಐನ್ಸಟೀನ್ ಸಿದ್ಧಾಂತಗಳನ್ನು ಮೀರಿಸುವಷ್ಟರ ಮಟ್ಟಿಗೆ ಬೆಳೆದಿಲ್ಲದಿರಬಹುದು; ಆದರೆ ಭವಿಷ್ಯದಲ್ಲಿ ಅದಕ್ಕಿಂತ ಉತ್ತಮ ಲೆಕ್ಕವನ್ನು ಮಾಡಿ ತೋರಿಸುವಷ್ಟರ ಮಟ್ಟಿಗೆ ಬೆಳೆಯಲಿದೆ” ಎಂದು ಪ್ರೊ. ಗಣೇಶ್ ಬಾಗ್ಲೆರ್ ದೆಹಲಿ ಐಐಟಿಯಲ್ಲಿರುವ ಇನ್ಫೊಸಿಸ್ ಕೇಂದ್ರದ ಪ್ರಾಧ್ಯಾಪಕ AI ಕುರಿತು ಆಡಿರುವ ಆತಂಕಕಾರಿ ಮಾತುಗಳು ಸರಕಾರಕ್ಕೆ, ಸಾಮಾಜಿಕರಿಗೆ, ಶಿಕ್ಷಣ ತಜ್ಞರಿಗೆ ಎಚ್ಚರಿಕೆಯ ಮಾತುಗಳಾಗಿವೆ. AI ಮತ್ತು A1 ನೋಡಲು ಸರಿಸುಮಾರು ಒಂದೇ ರೀತಿಯಿದೆ. ಆದರೆ A1 ಏಒನ್ ಎಂದರೆ ಚನ್ನಾಗಿದೆ ಅದರ ಗುಣಮಟ್ಟ ಚನ್ನಾಗಿದೆ ಅಥವಾ ಅತ್ಯುತ್ತಮ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. ಇನ್ನು ಶಾಲಾ ಮಕ್ಕಳು A1, A2 ಶ್ರೇಣಿಯನ್ನು ತೆಗೆಯುತ್ತಾರೆ ಎಂದರೆ ಬಹಳ ಚನ್ನಾಗಿ ಅಧ್ಯಯನ ಮಾಡಿದ್ದಾರೆ ಎಂದರ್ಥ. ಇದೇ ಅರ್ಥ ಕೊಡುವ A ಯನ್ನು ಅವಲಂಬಿಸಿರುವ ಶ್ರೇಣಿಗಳು A+, A++……..ಇತ್ಯಾದಿ.
ಇನ್ನು ಪೋಲಿಸರು ದೋಷಾರೋಪಣೆ ಸಲ್ಲಿಸಿದ್ದಾರೆ ಎಂದರೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ತೀವ್ರತೆಯನ್ನು ಆಧರಿಸಿ ಹೆಚ್ಚು ಅಪರಾಧ ಮಾಡಿರಬಹುದಾದ ಸಾಕ್ಷ್ಯಗಳು ಮೇಲ್ನೋಟಕ್ಕೆ ಕಂಡುಬಂದಿದ್ದಲ್ಲಿ ಅನುಕ್ರಮವಾಗಿ A1,A2,A3,A4,A5… ಇತ್ಯಾದಿ ಅನುಕ್ರಮಣಿಕೆಯನ್ನು ಕೊಡುತ್ತಾ ಹೋಗುತ್ತಾರೆ. ಜೆರಾಕ್ಸ್ ಅಂಗಡಿಗೆ ಹೋದರಂತೂ A4 ಅಳತೆಯ ಹಾಳೆಗಳನ್ನು ಹೆಚ್ಚಾಗಿ ಬಳಸುತ್ತಾರೆ… A3 ಅಳತೆಯ ಹಾಳೆಗಳನ್ನು ಅವಶ್ಯಕತೆಯನ್ನು ಭೂವಿಸ್ತೀರ್ಣದ ದಾಖಲಾತಿಗಳನ್ನು ಮುದ್ರಿಸಲು ಬಳಸುತ್ತಾರೆ. ಆಹಾರ ವಿಜ್ಞಾನಕ್ಕೆ ಬಂದರೆ A1 ಎಂಬ ಹೆಸರಿನ ವಿಟಮಿನ್ ಕೂಡ ಇದೆ. ಸಮುದ್ರದ ಮೀನಿನ ಯಕೃತ್ತಿನ ಎಣ್ಣೆಗಳಲ್ಲಿ ಕಂಡುಬರುವ ಮತ್ತು ಕ್ಯಾರೋಟಿನಿಂದ ಜೈವಿಕವಾಗಿ ಸಂಶ್ಲೇಷಿಸಲ್ಪಟ್ಟ ಆಲ್ಕೋಹಾಲ್ ಕೂಡ A1 ವಿಟಮಿನ್ ಆಗಿದೆ. A1 ಬಳಕೆಯು ISOD International sports organization ಸಂಸ್ಥೆಯು ಬಳಸುವ ಅಂಗವಿಚ್ಛೇದಿತ ಕ್ರೀಡಾ ವರ್ಗೀಕರಣವಾಗಿದೆ. ಇಲ್ಲಿ ಸರಳವಾಗಿ ಹೇಳುವುದಾದರೆ A1 ವಿಶೇಷಚೇತನರನ್ನು ಗುರುತಿಸುವ ಸಂಕೇತವಾಗಿದೆ.
ಮುಂದೆ Showcase ಷೋಕೇಸ್ ಪದವನ್ನು ನೋಡೋಣ! ಕನ್ನಡದಲ್ಲಿ Showcase ಪದಕ್ಕೆ ಪ್ರದರ್ಶನ ಕಪಾಟು… ಬೀರು….. ಪ್ರದರ್ಶನ ರಂಗ ಎಂಬುದಾಗಿ ಅರ್ಥ ಬರುತ್ತದೆ. ಜೊತೆಗೆ ವ್ಯಕ್ತಿಯೊಬ್ಬ ಸಮಾಜಕ್ಕೆ ತನ್ನನ್ನು ತಾನು ತೆರೆದುಕೊಂಡ ಹಾಗು ವ್ಯಕ್ತಿಯನ್ನು ಸಮಾಜ ಬಿಂಬಿಸಿದ ಬಗೆಗೂ Showcase ಷೋಕೇಸ್ ಎಂದೇ ಬಳಸುತ್ತೇವೆ. ಕನ್ನಡದಲ್ಲಿ ಪಾಪ ಭೀರು…… ಎಂಬ ಪದವೂ ಬಳಕೆಯಲ್ಲಿದೆ. ಅರ್ಥಾತ್ ಪಾಪಕ್ಕೆ ಹೆದರುವವನು ಎಂಬ ಅರ್ಥವನ್ನು ಕೊಡುತ್ತದೆ. ಇದೇ ರೀತಿಯ ಇನ್ನೊಂದು ಶಬ್ದ ShowCsuse ಇದಕ್ಕೆ ಕಾರಣವನ್ನು ತೋರಿಸು ಎಂಬ ಅರ್ಥ ಬರುತ್ತದೆ. ಕಾರಣವನ್ನು ತೋರಿಸುವ ಸೂಚನೆಯು ವಿವಾದದಲ್ಲಿ ಒಬ್ಬ ಪಕ್ಷಕ್ಕೆ ಅಥವಾ ಒಬ್ಬ ವ್ಯಕ್ತಿಗೆ ನೀಡಲಾದ ಔಪಚಾರಿಕ ತಿಳಿವಳಿಕೆ ನೋಟಿಸಿನ ದಾಖಲೆಯಾಗಿದೆ. ಇದು ಆಪಾಧಿತ ಅಪರಾಧ ಅಥವಾ ದುಷ್ಕೃತ್ಯದ ವಿವರಗಳನ್ನು ಹೊಂದಿರುತ್ತದೆ. ShowCasuse ಷೋಕಾಸ್ ನೋಟಿಸನ್ನು ಪಡೆದವರು ತಮ್ಮನ್ನು ಸಮರ್ಥನೆ ಮಾಡಿಕೊಂಡು ಅದಕ್ಕೆ ಉತ್ತರ ನೀಡುತ್ತಾರೆ. ಕನ್ನಡದಲ್ಲಿ ಇದಕ್ಕೆ ಕಾರಣ ಕೇಳಿ ನೋಟೀಸ್ ನೀಡುವುದು ಎನ್ನುತ್ತಾರೆ. ಹೀಗೆಂದರೆ ಯಾರಿಗೂ ಅರ್ಥವಾಗುವುದಿಲ್ಲ. ShowCsuse ಎಂದರೆ ಬೇಗನೆ ಅರ್ಥವಾಗುತ್ತದೆ.
ಇದೇ ತೆರನಾದ ಇನ್ನೊಂದು ಪದ Highwitness. ನ್ಯಾಯಾಲಯದ ಪರಿಭಾಷೆಯ ಪದ. ಇದು High ಅಲ್ಲ Eye ಆಗಬೇಕು ಅಂದರೆ ಪ್ರತ್ಯಕ್ಷ ಸಾಕ್ಷಿ ಕಣ್ಣಾರೆ ಕಂಡಿದ್ದು ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತಿದೆ Highwitness ಎಂಬ ಮಾತು Eye witness ಆಗಿ ರೂಪಾಂತರ ಹೊಂದಿದರೂ Highwitness ಪದಬಳಕೆ Eyewitness ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೇಳಿಸುತ್ತದೆ. SHAKE HAND ಎಂದರೆ ಕೈಕುಲುಕು, ಅಭಿನಂದನೆಗಳನ್ನು ಸಲ್ಲಿಸು ಎಂದು ಆದರೆ ಆಡುಮಾತಿನಲ್ಲಿ ಸೆಕೆಂಡ್ ಎಂದೇ ಕೆಲವೊಮ್ಮೆ ಬಳಕೆಯಾಗುತ್ತದೆ. ಸೆಕೆಂಡ್ ಎಂದರೆ ನಿಮಿಷದ ಅರವತ್ತು ಭಾಗದಲ್ಲಿ ಒಂದಲ್ಲವೆ? ಪ್ರತಿ ಹನ್ನೆರಡು ಕಿಲೊಮೀಟರಿಗೊಂದು ಭಾಷಾವೈವಿಧ್ಯತೆ ಇರುವ ಕನ್ನಡದಲ್ಲಿ ಅದೆಷ್ಟೋ ಶಬ್ದವೈಚಿತ್ರ್ಯವನ್ನು ಕಾಣಬಹುದು. ಮಲೆನಾಡಿನ ಕಡೆ ‘ನಾಟ’ ಎಂದರೆ ‘ಮರದ ದಿಮ್ಮಿ’ ಎಂದಾಗುತ್ತದೆ. ಕದ್ದುಸಾಗಿಸುವ ಮರದ ದಿಮ್ಮಿಗಳನ್ನು ಕಳ್ಳನಾಟ ಎನ್ನಬಹುದು. ಅದನ್ನೆ ಕದ್ದುಮುಚ್ಚಿ ಕಳ್ಳಾಟವಾಡುವವರನ್ನೂ ಕಳ್ಳನಾಟ ಆಡುತ್ತಾರೆ ಎನ್ನಬಹುದು. ನಾಟ ಮತ್ತು ಆಟ ಎರಡಕ್ಕೂ ವ್ಯತ್ಯಾಸ ತಿಳಿದರೆ ಆಭಾಸವಾಗುವುದಿಲ್ಲ.
ಹಾಗೆ ‘ಬಂಬು’ ಎನ್ನುವ ಪದ ಇದು. ಉತ್ತರ ಕರ್ನಾಟಕದಲ್ಲಿ ಕಾರ್ಖಾನೆಯಲ್ಲಿ ಸಮಯ ಸೂಚಿಸಲು ಬಳಸುವ ಯಂತ್ರ ಎಂಬ ಅರ್ಥವನ್ನು ನೀಡಿದರೆ ದಕ್ಷಿಣ ಕರ್ಣಾಟಕದಲ್ಲಿ ‘ಬಂಬು’ ಎಂದರೆ ‘ಬಿದಿರಿನ ಉದ್ದನೆಯ ತುಂಡು’ ಎನ್ನುವ ಅರ್ಥದಲ್ಲಿ ಪ್ರಯೋಗವಾಗುತ್ತದೆ. ಅದೇ ಹೀನಾರ್ಥದಲ್ಲಿ ಹೇಳುವಾಗ ಮೃತರ ಅಂತ್ಯಕ್ರಿಯೆಯಲ್ಲಿ ‘ಬಂಬು’ ಪದ ಹೆಚ್ಚು ಕೇಳಿಸುತ್ತದೆ. ಯಾರನ್ನೋ ವ್ಯಂಗ್ಯವಾಗಿ ಚೇಷ್ಟೆ ಮಾಡುವಾಗ ಯಾವುದೋ ಮಾತಿಗೆ ಬಿದಿರು ಮೋಟಾರಿನಲ್ಲಿ ಯಾವಾಗ ಪ್ರಯಾಣ? ಎಂಬ ಮಾತು ಬರುತ್ತದೆ. ಹೇಗೂ ಇರಲಿ ಕನ್ನಡದ ಬಂಬು ಅಥವಾ ಬಿದಿರು ಇಂಗ್ಲಿಷಿನ ಬ್ಯಾಂಬೂ ಸಹ ಒಂದೇ ಅರ್ಥ ಮತ್ತು ಉಚ್ಛಾರಣೆಯಲ್ಲಿ ಸಾಮೀಪ್ಯತೆ ಇರುವುದನ್ನು ಗಮನಿಸಬಹುದು. ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವಾಗ ಬಿರುದು ನೀಡಿ ಗೌರವಿಸಲಾಗುತ್ತದೆ ಎನ್ನುವುದರ ಬದಲು ಬಿದಿರು ನೀಡಿ ಗೌರವಿಸಲಾಗುತ್ತದೆ ಎಂದು ಬಿಟ್ಟರೆ ಎಷ್ಟು ಆಭಾಸವಾಗುತ್ತದೆ ಅಲ್ಲವೆ.
ಬಿರುದು>ಬಿದಿರು, ತರಕಾರಿ>ತಕರಾರಿ, ಬೆಳಗ್ಗೆ>ಬೆಳಗಡೆ, ಕ್ಲರ್ಕ್ >ಕರ್ಕ್ಲು ಹೀಗೂ ಪದಗಳು ಮಾತಿನ ನಡುವೆ ತಿಳಿಯದೆಯೊ ಬಾಯ್ತಪ್ಪಿನಿಂದ ಇಲ್ಲವೆ ಹಾಸ್ಯಕ್ಕೆಂದೆ ನುಸುಳುತ್ತವೆ. ಇದನ್ನು ಇಂಗ್ಲಿಷಿನಲ್ಲಿ ‘ಮಾಲ್‌ಪ್ರೋಪಿಸಮ್’ ಅಥವಾ ‘ಡಾಗ್ಬೆರಿಸಮ್’ ಎಂದೂ ಕರೆಯಲಾಗುತ್ತದೆ. ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎನ್ನುವ ಹಾಡನ್ನು ತೊದಲು ನುಡಿಯುವ ಮಗು ಬಾಬಲ್ಲೂ ನೀನೇ ಬುಬಿಯಲ್ಲೂ ನೀನೆ ಎಂದು ಹಾಡಿಬಿಟ್ಟರೆ ಉದ್ದೇಶಪೂರ್ವಕವಾಗಿ ಹಾಡಿದ್ದಲ್ಲ, ತಪ್ಪಾದ ಬಳಕೆ ಅಷ್ಟೆ. ಇಂಥವುಗಳೆ ಸಾಮಾನ್ಯವಾಗಿ ಹಾಸ್ಯಮಯವಾದ ಉಕ್ತಿಗಳಾಗುತ್ತವೆ. ಇದರ ವ್ಯುತ್ಪತ್ತಿಯ ಹಿಂದೆ ಹೋಗುವುದಾದರೆ ಮಾಲಪ್ರಾಪ್ ಪದವು ರಿಚರ್ಡ್ ಬ್ರಿನ್ಸ್ಲೆ ಶೆರಿಒಡಿನ್ ಅವರ 1775 ರ ನಾಟಕ ದಿರೈವಲ್ಸಿನಲ್ಲಿ “ಮಿಸೆಸ್ ಮಾಲಪ್ರಾಪ್” ಎಂಬ ಪಾತ್ರದಿಂದ ಬಂದಿದೆ. ಮಿಸೆಸ್ ಮಾಲಪ್ರಾಪ್ ತಮ್ಮ ಸಂಭಾಷಣೆಗಳಲ್ಲಿ ಹಾಸ್ಯದ ಪರಿಣಾಮಕ್ಕೆ ತಪ್ಪು, ಮಾತಗಳನ್ನಾಡುತ್ತಾರೆ. ಆದರೆ ಆ ಪದಗಳಿಗೆ ಯಾವುದೇ ಅರ್ಥವಿರುವುದಿಲ್ಲ. ಆದರೆ ಧ್ವನಿಸುವಾಗ ಅರ್ಥವಿರುವಂತೆ ಭಾಸವಾಗುತ್ತದೆ. ಶೆರಿಒಡಿನ್ ತನ್ನ ಹೆಸರನ್ನು ಮಾಲಾಪ್ರೋಪೋಸ್ ಎಂಬ ಪದಕ್ಕೆ ಹಾಸ್ಯಮಯವಾಗಿ ಉಲ್ಲೇಖಿಸಿದ್ದಾನೆ. ಮಾಲಾಪ್ರೋಪ್ ಪದವನ್ನು ನಿರ್ದಿಷ್ಟವಾಗಿ ಮಾತಿನ ದೋಷ ಎಂಬ ಅರ್ಥದಲ್ಲಿ ಬಳಸಿದ ಮೊದಲ ವ್ಯಕ್ತಿ ಲಾರ್ಡ್ ಬೈರನ್. ವಿಲಿಯಂ ಷೇಕ್ಸ್‌ಪಿಯರ್ ತನ್ನ ಕೆಲಸದಲ್ಲಿ ಮಾಲಾಪ್ರೋಪಿಸಮ್‌ಗಳನ್ನು ಬಳಸುವುದಕ್ಕೆ ಹೆಸರುವಾಸಿಯಾಗಿದ್ದಾನೆ. ಇದನ್ನು ಕನ್ನಡದಲ್ಲಿ ಸಾದೃಶಾಭಾಸ ಎಂಬ ಪದದಿಂದಲೂ ಗುರುತಿಸುತ್ತಾರೆ. ನಾಟಕಗಳಲ್ಲಿ ಈ ರೀತಿಯ ಪದಬಳಕೆಯನ್ನು ಹೆಚ್ಚು ಮಾಡಿರುತ್ತಾರೆ. “ಸೀಲ್ ಒತ್ತಮ್ಮ’’ ಎಂದು ನಯವಾಗಿ ಕೆಲಸಮಾಡಿಸಿಕೊಳ್ಳುವ ಉದ್ದೇಶದಿಂದ ಮೃದುವಾಗಿ ಕೆಲಸಗಾರನೊಬ್ಬ ತನ್ನ ಸಹವರ್ತಿ ಹೆಂಗಸಿಗೆ ಹೇಳಿದರೆ ಆಕೆ ಯಾವುದೋ ಗುಂಗಿನಲ್ಲಿ ನನ್ನನ್ನು “ತಿಲೋತ್ತಮ’’ ಎಂದು ಕರೆಯುತ್ತಿದ್ದಾರೆ ಎಂದು ಖುಷಿಯಾಗಬಹುದು. ಇಲ್ಲವೆ ಸಿಟ್ಟಿಗೇಳಬಹುದು. ಏನ್ ಮಾಡೋಕ್ಕಾಗುತ್ತೆ?
ತೊದಲು ನುಡಿಯುವ ಮಕ್ಕಳಲ್ಲಿ ಯಾವುದೇ ದುರುದ್ದೇಶವಿಲ್ಲದೆ ಸಹಜವಾಗಿ ಇಂಥ ಸಾದೃಶಾಭಾಸ ಪದಗಳು ನುಗ್ಗುತ್ತವೆ. ಉದಾಹರಣೆಗೆ ಶ್ಲೋಕ ಹೇಳಲು ಶೋಕ್ಲ, ಉಕ್ಸ್ಗೆ ಉಸ್ಕ್, ಮಿಕ್ಸಿಗೆ ಮಿಸ್ಕಿ. ಕೇಸರಿಭಾತಿಗೆ ಕೇಶ್ರಿಭಾತ್, ಊಡಿಗೆ ಹೋದರು ಎನ್ನಲು ಓಡಿಹೋದರು ಎನ್ನುವುದು ಇತ್ಯಾದಿ. ದೊಡ್ಡವರಲ್ಲೂ ಮಾತಿನ ಭರದಲ್ಲಿ ಇಂಥ ಸಾದೃಶಾಭಾಸಗಳು ನುಸುಳಬಹುದು. “ಅಯ್ಯೋ ನನ್ನ ಹಾರ್ಮೋನಿಯಮ್ ಸಮಸ್ಯೆ ಇಷ್ಟೆಲ್ಲಾ ಹೆಲ್ಸ್ ಇಶ್ಯೂಗಳಿಗೆ ಕಾರಣ” ಎಂದು ಮಾತಿಗೆ ಯಾರೋ ಹೇಳಿಬಿಟ್ಟರೆ ಅಲ್ಲಿದ್ದವರು “ಇದೇನು? ಒಂದಕ್ಕೊಂದು ಅರ್ಥವಿಲ್ಲ” ಎಂದು ಬಿಟ್ಟಬಾಯಿ ಬಿಟ್ಟ ಹಾಗೆ ನೋಡುತ್ತಿದ್ದರೆ ಹೇಳಿದವರೆ ಇನ್ನೊಮ್ಮೆ ಇವರಿಗೆ ಅರ್ಥವಾಗಿಲ್ಲ. ಸಮಸ್ಯೆ ಹಾರ್ಮೋನಿಯಮ್‌ದಲ್ಲ ಹಾರ್ಮೋನ್ ಸಮಸ್ಯೆ ಎಂದಾಗ ಸರಿಯಾಗಿ ಅರ್ಥವಾಗುತ್ತದೆ.
ಮಕ್ಕಳಿಗೆ ಕನ್ನಡ ಪುಸ್ತಕವನ್ನು ಓದುವುದೆಂದರೆ ಬಹಳ ತ್ರಾಸಿನ ಕೆಲಸ. ಕಾರ್ಟೂನನ್ನು ನೋಡಿದ ಗುಂಗಿನಲ್ಲಿ ಇದ್ದ ಮಗುವೊಂದು ಸಭಾಸದ ಎಂದೋದಲು ಸಬಾಸ್ಟಿಯನ್ ಎಂದು ಓದಿದ್ದು ನೆನಪಾಗುತ್ತದೆ. ಎಲೆ ಅಡಿಕೆ ಮೆಲ್ಲುತ್ತಿದ್ದ ಎಂದು ಓದಬೇಕಾದ್ದನ್ನು ಎಲೆ ಅಡಿಕೆ ಮೇಯುತ್ತಿದ್ದ ಎಂದರೆ ಆಭಾಸವೇ ತಾನೆ! ರಂಗ ನಾಯಕಿ > ಲಂಗನಾಯಕಿ, ಆಸ್ಥಾನದ ದಾಸಿ ಹಾಸನದ ಆಶ ಆಂದರೆ ರಕ್ಷಿಸ ಬೇಕು ಎನ್ನಲು ಹೋಗಿ ರಸ್ಕ್ ಬೇಕು ಎಂದರೆ ಎಲ್ಲಿಕೊಡಕ್ಕಾಗುತ್ತೆ? ಕಾಲ್ ಸೆಂಟರಿನವರೋ ಯಾರೋ ಕಾಲರ್ ಐಡಿ ಬೇಗ ಎನ್ನುವ ಬದಲಿಗೆ ಕಾಲರ್ ಹಿಡಿ ಬೇಗ ಎಂದರೆ ಆಗುವ ಅವಾಂತರವೆ ಬೇರೆ.
ಹಳಡಗನ್ನಡ ಪಠ್ಯವನ್ನು ಸರಿಯಾಗಿ ಬಿಡಿಸಿ ಓದಲು ಬಾರದೆ ಕುಂತಿ ಪುತ್ರರನ್ ಎನ್ನುವ ಬದಲು ಕುಂಟಿ ಪುತ್ರರನ್ ಎಂದೂ ಕೃಷ್ಣಾಂಬರ ಕೇಶಾಕೃಷ್ಟಿಯಂ ಮಾಡಿಸಿದ ಮದಮದೇನಾಯ್ತೋ ಅನ್ನುವ ಬದಲು ಕೃಷ್ಣಂ ಬರಕೇಶ ಮಾಡಿಸಿದ ಮದಮದೇನಾಯ್ತೋ ಎಂದೂ ಭೀಮನೆ ಮಿಡುಕುಳ್ಳ ಗಂಡ ಎಂದೋದುವ ಬದಲು ಭೀಮನೆ ಬಲು ಕುಳ್ಳ ಗಂಡ ಎಂದರೆ ಎಷ್ಟು ಅರ್ಥ ಆಭಾಸವಾಗುತ್ತದೆ ಅಲ್ಲವೆ!
ಯಜಮಾನರೊಬ್ಬರು ತಮ್ಮ ಮನೆಯ ಸಮಾರಂಭವೊಂದರಲ್ಲಿ ಅಡುಗೆ ಮಾಡಲು ಅಡುಗೆ ಭಟ್ಟರನ್ನು ನಿಗದಿ ಮಾಡಿ ಅವರು ಕೊಟ್ಟ ದಿನಸಿ ಸಾಮಾನಿನ ಚೀಟಿ ನೋಡುವಾಗ ಚೀಟಿಯಲ್ಲಿ ಮೊದಲಿಗೆ ಅರಿಶಿಣ ಇತ್ತು….. ಮುಂದೆ ಮುಂದೆ ಸಣ್ಣಾಕಿ, ಚ.ಲಂ ಎಂದಿದ್ದನ್ನು ನೋಡಿ ಗಾಬರಿಯಾಗಿ ಅಡುಗೆ ಭಟ್ಟರಿಗೆ ಫೋನ್ ಮಾಡಿ “ಅಡುಗೆಗೆ ಸಣ್ಣಾಕಿ, ಚಡ್ಡಿ, ಲಂಗ ಏಕೆ” ಎಂದು ಕೇಳಿದಾಗ ಅಡುಗೆಯವರು “ರೀ…. ಸ್ವಾಮೀ ಸಣ್ಣಕ್ಕಿ, ಚಕ್ಕೆ & ಲವಂಗ ಇತ್ಯಾದಿ ಬೇಕು ಬರೆಯೋವಾಗ ಮಿಸ್ಟೇಕ್ ಆಗಿರಬೇಕು ತಿದ್ದಿಕೊಳ್ಳಿ” ಎಂದಿದ್ದರಂತೆ. ಇನ್ನೊಮ್ಮೆ ಹಿಂದಿ ಭಾಷಿಕ ಅಧಿಕಾರಿಯೊಬ್ಬರು ಖಾನ ಪಕಾನೆಕೇಲಿಯೇ ಲಕ್ಡಿ ಚಾಹಿಯೇ ಎಂದು ತಮ್ಮ ಸಿಬ್ಬಂದಿಗೆ ಸೌದೆ ತರ ಹೇಳಿದರೆ ಆ ಸಿಬ್ಬಂದಿ “ನಮ್ ಸಾಹೇಬ್ರ ಮನೆಗೆ ಅಡುಗೆ ಮಾಡಲು ಹುಡುಗಿ ಬೇಕು” ಎಂದು ಲಡಕಿಯನ್ನು ಕರೆತಂದು ಅಧಿಕಾರಿಗೆ ಮುಜುಗರ ತಂದಿದ್ದರಂತೆ. ಲಕ್ಡಿ > ಲಡ್ಕಿ ಒಂದು ಅಕ್ಷರ ಅದಲು ಬದಲಾದರೆ ಆಗುವ ಅವಾಂತರ ನೋಡಿ.
ಸಾದೃಶಾಭಾಸ ಪದಗಳ ಒಟ್ಟಿಲಲ್ಲಿ ಕೆಲವನ್ನು ಇಲ್ಲಿ ನೋಡಿದ್ದೇವೆ. ಒಂದೊಂದು ಪದಗಳನ್ನು ಸೂಕ್ಷ್ಮವಾಗಿ ವಿವಕ್ಷೆ ಮಾಡುತ್ತಾ ಹೋದಂತೆ ಈಜಲಾಗದ ಅನಂತ ಶಬ್ದಸಾಗರ ಅರ್ಥ ಸಾಗರದ ನಡುವೆಯೇ ನಾವಿದ್ದೇವೆ ಅನ್ನಿಸುತ್ತದೆ. ಈ ಶಬ್ದಪ್ರಪಂಚವೇ ಮೋಹಕವಾದದ್ದು. ಮುಂದಿನ ಬರಹದಲ್ಲಿ ಇನ್ನಷ್ಟು ಶಬ್ದಗಳೊಂದಿಗೆ ಬರುವೆ…..
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.