ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ. ಕಮ್ಯುನಿಸ್ಟರ ಬದುಕು ಎಷ್ಟೊಂದು ತ್ಯಾಗಮಯ, ಸಾಹಸಮಯ ಮತ್ತು ಆಶಾಭಾವದಿಂದ ಕೂಡಿರುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 92ನೇ ಕಂತು ನಿಮ್ಮ ಓದಿಗೆ
ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ (01.02.1942 – 08.05.2021)
ದಾವಣಗೆರೆ ಕಾರ್ಮಿಕ ವರ್ಗದ ಬಾಳು ಬೆಳಗುವಲ್ಲಿ ಅನೇಕ ಕಾರ್ಮಿಕ ನಾಯಕರು ಹಣತೆ, ಎಣ್ಣೆ ಮತ್ತು ಜ್ಯೋತಿಯಾಗಿ ಶ್ರಮಿಸಿದ್ದಾರೆ. ಈ ಮಹಾನ್ ಕಾರ್ಯದಲ್ಲಿ ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಅವರ ಪಾತ್ರವೂ ಹಿರಿದಾಗಿದೆ.
ಕಾಮ್ರೇಡ್ ಪಂಪಾಪತಿ ಅವರ ನೇತೃತ್ವದಲ್ಲಿ ದಾವಣಗೆರೆಯನ್ನು ಕೆಂಪುನಗರವಾಗಿಸಿ ಕರ್ನಾಟಕದ ಮ್ಯಾಂಚೆಸ್ಟರ್ ಮಾಡುವಲ್ಲಿ ರಾಮಚಂದ್ರಪ್ಪ ಅವರು ಹೆಗಲಿಗೆ ಹೆಗಲು ಹಚ್ಚಿ ದುಡಿದದ್ದನ್ನು ಮರೆಯಲಿಕ್ಕಾಗದು.
ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ. ಕಮ್ಯುನಿಸ್ಟರ ಬದುಕು ಎಷ್ಟೊಂದು ತ್ಯಾಗಮಯ, ಸಾಹಸಮಯ ಮತ್ತು ಆಶಾಭಾವದಿಂದ ಕೂಡಿರುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ. ಇಂಥ ದುರಿತ ದಿನಗಳಲ್ಲಿ ನನಗೆ ಕಾಮ್ರೇಡ್ ಪಂಪಾಪತಿ ಮತ್ತು ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಅಂಥವರು ನೆನಪಾಗುತ್ತಾರೆ.
1974ರಿಂದ ನನಗೆ ದಾವಣಗೆರೆಯ ಸಂಪರ್ಕ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಸಂಪರ್ಕ ಉಳಿದುಕೊಂಡು ಬಂದಿದೆ. ಪಂಪಾಪತಿ ಮತ್ತು ರಾಮಚಂದ್ರಪ್ಪ ಅವರು ಕರೆದಾಗಲೆಲ್ಲ ನಾನು ದಾವಣಗೆರೆಗೆ ಬಂದಿದ್ದೇನೆ. ಮೇ ದಿನಾಚರಣೆಗಳಲ್ಲಿ ಭಾಗವಹಿಸಿದ್ದೇನೆ. ಆ ಅನುಭವ ಮತ್ತು ವೈಭವ ಕಮ್ಯುನಿಜಂ ಮೇಲಿನ ನನ್ನ ಶ್ರದ್ಧೆಯನು ಸದಾ ಕೆಂಪಾಗಿರಿಸಿವೆ.
ಬಸು ಸೂಳಿಭಾವಿ ಮತ್ತು ಅವರ ಸಂಗಾತಿಗಳು 2022ನೇ ಮೇ 27 ಮತ್ತು 28ರಂದು ಬಹಳ ಶ್ರದ್ಧೆಯಿಂದ ದಾವಣಗೆರೆಯಲ್ಲಿ ಮೇ ಸಾಹಿತ್ಯ ಮೇಳವನ್ನು ಯಶಸ್ವಿಯಾಗಿ ನೆರವೇರಿಸಿದರು. ಮರುದಿನ ಅಂದರೆ ಮೇ 29ರಂದು ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಅವರ ಸ್ಮರಣ ಸಂಚಿಕೆ “ಬೆವರ ನೆಲದ ಕೆಂಪು ಕಾಂಡದ ಹೂ” ಸ್ಮರಣ ಸಂಚಿಕೆ ದಾವಣಗೆರೆಯಲ್ಲಿ ಬಿಡುಗಡೆ ಆಯಿತು.
ದಾವಣಗೆರೆ ಮೇ ಸಾಹಿತ್ಯ ಮೇಳ ಸೃಜನಶೀಲ ಸಾಹಿತ್ಯ ಮತ್ತು ಕ್ರಾಂತಿಕಾರಿ ವಿಚಾರಗಳ ಅಪೂರ್ವ ಸಂಗಮವಾಗಿತ್ತು. ತುಳಿತಕ್ಕೊಳಗಾದವರಿಗಾಗಿ ಸದಾ ತುಡಿಯುವ ಜಸ್ಟಿಸ್ ಕೆ. ಚಂದ್ರು, ಕವಿತಾ ಕೃಷ್ಣ ಪಿ. ಸಾಯಿನಾಥ್ ಅಂಥ ಮೇರು ವ್ಯಕ್ತಿತ್ವದ ಜನಮಿತ್ರರು ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಂಕಷ್ಟದ ದಿನಗಳಲ್ಲಿ ಈ ಸಮ್ಮೇಳನ ಒಂದು ಸಾಧನೆಯೆ ಸರಿ.
1975ರ ಇಂಥದೆ ಸಂಕಷ್ಟದ ದಿನಗಳಂದು ದಾವಣಗೆರೆಯಲ್ಲಿ ನಡೆದ ಪ್ರಗತಿಪಂಥ ಸಮ್ಮೇಳನದ ಐತಿಹಾಸಿಕ ಘಟನೆಗೆ ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಅವರು ಕಾರಣಕರ್ತರಾಗಿದ್ದೊಂದು ವಿಶೇಷ.
1973ರಲ್ಲಿ ನಾನು ವಿಜಾಪುರದಲ್ಲಿ ಬಿ.ಎ. ಓದುವಾಗ ಒಂದು ದಿನ ಮಿತ್ರ ಸನತಕುಮಾರ ಬೆಳಗಲಿ ನನ್ನ ರೂಮಿಗೆ ಬಂದು ನವ್ಯ ಸಾಹಿತ್ಯದ ಕುರಿತು ಚರ್ಚಿಸಿದ. ಇದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ ಹೋರಾಟದ ಹಾಡುಗಳ ಮಹತ್ವವನ್ನು ನವ್ಯ ಸಾಹಿತ್ಯ ಶೈಲಿ ಕಡಿಮೆಗೊಳಿಸುತ್ತದೆ ಎಂಬ ಚಿಂತೆ ನಮ್ಮದಾಗಿತ್ತು. ಎರಡನೆಯದಾಗಿ ಬಹಳಷ್ಟು ನವ್ಯ ಸಾಹಿತಿಗಳು ಕಮ್ಯುನಿಜಂ ಬಗ್ಗೆ ಉದಾಸೀನ ಭಾವ ತಾಳಿದವರಾಗಿದ್ದರು. ನಮ್ಮಿಬ್ಬರ ಮಧ್ಯೆ ಈ ಚರ್ಚೆ ಮುಂದುವರಿದೇ ಇತ್ತು. ನಂತರ 1974ರಲ್ಲಿ ಎಂ.ಎ. ಓದಲು ಧಾರವಾಡಕ್ಕೆ ಬಂದೆ. ಅದಾಗಲೆ ಸನತ್ ಪ್ರೂಫ್ ರೀಡರ್ ಆಗಿ ಹುಬ್ಬಳ್ಳಿ ಸಂಯುಕ್ತ ಕರ್ನಾಟಕ ಸೇರಿದ್ದ. ಪ್ರಗತಿಪಂಥ ಸಾಹಿತ್ಯ ಚಳವಳಿಯನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಯೋಚನೆ ಮಾಡಿದೆವು.
1936ರಲ್ಲಿ ಲಖನೌದಲ್ಲಿ ಮಹಾನ್ ಸಾಹಿತಿ ಪ್ರೇಮಚಂದ ಅವರ ಅಧ್ಯಕ್ಷತೆಯಲ್ಲಿ ಪ್ರಗತಿಪಂಥ ಸಮ್ಮೇಳನ ನಡೆಯಿತು. ಎಡಪಂಥೀಯರ ಶಕ್ತಿಶಾಲಿ ಸಾಹಿತ್ಯ ಚಳವಳಿ ಅದಾಗಿತ್ತು. ಈ ಕುರಿತು ನಾವಿಬ್ಬರೂ ಕಾಮ್ರೇಡ್ ಪಂಪಾಪತಿ ಅವರಿಗೆ ವಿವರಿಸಿದೆವು. ಪಂಪಾಪತಿ ಅವರು ನಮ್ಮ ವಿಚಾರವನ್ನು ಬೆಂಬಲಿಸಿದರು. ದಾವಣಗೆರೆಯಲ್ಲೇ ಮಾಡೋಣ ಎಂದರು. ಈ ಪ್ರಗತಿಪಂಥ ಸಮ್ಮೇಳನದ ಜವಾಬ್ದಾರಿಯನ್ನು ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಅವರಿಗೆ ವಹಿಸಿದರು. ಟಾಡಿ ವೆಂಡರ್ಸ್ ಸಂಘದ ಸದಸ್ಯರು ಮುಂತಾದ ಸಂಗಾತಿಗಳ ನೆರವಿನಿಂದ ರಾಮಚಂದ್ರಪ್ಪ ಅವರು 1975ರಲ್ಲಿ ಪ್ರಗತಿಪಂಥ ಸಮ್ಮೇಳನವನ್ನು ಏರ್ಪಡಿಸಿ ಯಶಸ್ವಿಗೊಳಿಸಿದರು. ಕನ್ನಡ ಸಾಹಿತ್ಯ ಚಳವಳಿಗೆ ಈ ಪ್ರಗತಿಪಂಥ ಸಮ್ಮೇಳನ ಹೊಸ ದಿಕ್ಕು ತೋರಿಸಿತು. ಹೀಗೆ ದಾವಣಗೆರೆಯಲ್ಲಿ ಇತಿಹಾಸ ನಿರ್ಮಾಣವಾಯಿತು.
ಈ ಪ್ರಗತಿಪಂಥ ಸಮ್ಮೇಳನದಲ್ಲಿ ನಿರಂಜನ, ಬಸವರಾಜ ಕಟ್ಟಿಮನಿ, ಜಿ.ಎಸ್. ಶಿವರುದ್ರಪ್ಪ, ಡಿ.ಆರ್. ನಾಗರಾಜ, ಸಿದ್ದಲಿಂಗಯ್ಯ, ಶೂದ್ರ ಶ್ರೀನಿವಾಸ, ಕ.ವೆಂ. ರಾಜಗೋಪಾಲ ಮುಂತಾದ ಸಾಹಿತಿಗಳು ಭಾಗವಹಿಸಿದ್ದರು. ನಾನು “ಸಾಹಿತ್ಯ ಮತ್ತು ಸಮಾಜ” ಕುರಿತು ಮಾತನಾಡಿದೆ. ಇದೇ ಸಮ್ಮೇಳನದಲ್ಲಿ ಸಿದ್ದಲಿಂಗಯ್ಯ ಅವರ “ಹೊಲೆ ಮಾದಿಗರ ಹಾಡು” ಬಿಡುಗಡೆಯಾಯಿತು. ಪ್ರಗತಿಪಂಥ ಹೆಸರಿನಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿದ ಎಲ್ಲ ಸಾಹಿತಿಗಳ ಭಾಷಣದ ಲೇಖನಗಳನ್ನು ಮತ್ತು ಸಮ್ಮೇಳನಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಿರಂಜನರು ಸಂಪಾದಿಸಿ “ಪ್ರಗತಿಪಂಥ” ಹೆಸರಿನಲ್ಲಿ ಅಚ್ಚುಕಟ್ಟಾಗಿ ಪ್ರಕಟಿಸಿದರು.
ರಷ್ಯಾದ ಸಾಹಿತಿ ದಷ್ಕೋವ್ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಭಾಷಾವಿಜ್ಞಾನ) ಓದುತ್ತಿದ್ದಾಗ ರಷ್ಯನ್ ಭಾಷೆಯಲ್ಲಿ ಡಿಪ್ಲೋಮಾ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ದಷ್ಕೋವ್ ಅವರು ಕನ್ನಡ ಕಲಿಯಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದರು. ಆಗ ಅವರಿಗೆ ಕನ್ನಡ ಕಲಿಸುವ ಜವಾಬ್ದಾರಿ ನನ್ನ ಮೇಲೆಯೂ ಬಿತ್ತು. ಹೀಗಾಗಿ ಅವರ ಜೊತೆ ಹೆಚ್ಚಿನ ಸಂಪರ್ಕ ಸಾಧ್ಯವಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಗೆಸ್ಟ್ ಹೌಸಲ್ಲಿ ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಪ್ರತಿದಿನ ಅವರ ರೂಮಿಗೆ ಹೋದಾಗ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಬಸವಣ್ಣನವರ ಕುರಿತು ಮಾತನಾಡುವ ಅವಕಾಶವೂ ಸಿಗುತ್ತಿತ್ತು. ಅವರಿಗೆ ಬಸವಣ್ಣನವರ ವಿಚಾರಗಳು ಬಹಳ ಹಿಡಿಸಿದವು. ಬಸವಣ್ಣನವರ ಕುರಿತ ನನ್ನ ಒಂದು ಲೇಖನವನ್ನು ರಷ್ಯನ್ ಭಾಷೆಗೆ ಅನುವಾದ ಮಾಡುವ ಬಯಕೆ ವ್ಯಕ್ತಪಡಿಸಿದರು. ದಷ್ಕೋವ್ ಅವರನ್ನು ದಾವಣಗೆರೆ ಪ್ರಗತಿಪಂಥ ಸಮ್ಮೇಳನಕ್ಕೆ ಆಹ್ವಾನಿಸಿದೆ. ಅದರ ಮಹತ್ವ ಕುರಿತು ವಿವರಿಸಿದೆ. ಅವರು ಖುಷಿಯಿಂದ ಒಪ್ಪಿದರು.
(1983ರಲ್ಲಿ ನಾನು ಇಸ್ಕಸ್ ಅಂದರೆ ಇಂಡೋ ಸೋವಿಯತ್ ಕಲ್ಚರಲ್ ಸೊಸೈಟಿ ಮೂಲಕ ಭಾರತದ 7 ಜನ ಗುಡ್‌ವಿಲ್ ಡೆಲಿಗೇಷನ್ ಸದಸ್ಯರಲ್ಲಿ ಒಬ್ಬನಾಗಿ ಸೋವಿಯತ್ ದೇಶಕ್ಕೆ ಹೋದಾಗ. ದಷ್ಕೋವ್ ಮತ್ತು ನನ್ನ ರಷ್ಯನ್ ಶಿಕ್ಷಕಿಯರಲ್ಲಿ ಒಬ್ಬರಾದ ನಾತಾಲಿಯಾ ಬಾಸಿಸ್ ಅವರು ಮಾಸ್ಕೊದಲ್ಲಿ ನಮ್ಮನ್ನು ಇಳಿಸಿದ್ದ, ಆ ಕಾಲದ ವಿಶ್ವದ ಅತಿದೊಡ್ಡ ಹೋಟೆಲ್ ಎಂದು ಪ್ರಖ್ಯಾತವಾಗಿದ್ದ “ಹೋಟೆಲ್ ಉಕ್ರೇನಿಯಾ”ಕ್ಕೆ ಬಂದು ಭೇಟಿಯಾಗಿದ್ದರು. ಅ ಸಂದರ್ಭದಲ್ಲಿ ದಷ್ಕೋವ್ ಅವರು ಸೋವಿಯತ್ ದೇಶದ ಭಾಷಾಂತರ ಇಲಾಖೆಯ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಇದನ್ನು ಕೇಳಿ ನಾನು ಪುಳಕಿತಗೊಂಡೆ. ಅವರು ನನ್ನ ಜೊತೆ ಕನ್ನಡದಲ್ಲೇ ಮಾತನಾಡಿದರು. ತೈಲೋತ್ಪಾದನಾ ಕ್ಷೇತ್ರದ ಕಾರ್ಮಿಕರಾಗಿದ್ದ ಅವರು ಅದು ಹೇಗೆ ಕನ್ನಡದ ಬಗ್ಗೆ ಆಸಕ್ತಿ ತಾಳಿದರೋ, ಅದು ಹೇಗೆ ಆ ಮಹತ್ವದ ಕನ್ನಡ ವಿಭಾಗದ ಮುಖ್ಯಸ್ಥರಾಗುವಂಥ ಅವಕಾಶ ಪಡೆದರೋ ಕಲ್ಪನೆಗೆ ಮೀರಿದ ವಿಷಯ. “ಕರತ ಕರತ ಅಭ್ಯಾಸ ಮಂದಮತಿ ಹೋತ ಸುಜಾನ” ಅಂದರೆ ‘ಅಭ್ಯಾಸ ಮಾಡುತ್ತ ಮಂದಮತಿ ಕೂಡ ಸುಜ್ಞಾನಿಯಾಗುತ್ತಾನೆ’ ಎಂಬ ಕಬೀರರ ದೋಹಾ ನೆನಪಾಯಿತು.)
ದಷ್ಕೋವ್ ಅವರನ್ನು ದಾವಣಗೆರೆ ಪ್ರಗತಿ ಪಂಥ ಸಮ್ಮೇಳನಕ್ಕೆ ಕರೆದುಕೊಂಡು ಹೋದೆ. ರಾಮಚಂದ್ರಪ್ಪ ಅವರು ಸಮ್ಮೇಳನದ ಅಂಗವಾಗಿ ಬೃಹತ್ ಮೆರವಣಿಗೆ ಏರ್ಪಡಿಸಿದ್ದರು. ಮೆರವಣಿಗೆಯಲ್ಲಿ ದಷ್ಕೋವ್ ಅವರನ್ನು ಪುಷ್ಪಾಲಂಕಾರ ಮಾಡಿದ ವಾಹನದಲ್ಲಿ ಕೂಡಿಸಿದ್ದು ವಿಶೇಷವಾಗಿತ್ತು. ಈ ಮೆರವಣಿಗೆ ನೋಡಲು ದಾವಣಗೆರೆಯ ಜನ ಕಿಕ್ಕಿರಿದು ತುಂಬಿದ್ದರು.
ಅದೊಂದು ಭಾರಿ ಯಶಸ್ಸಿನ ಸಮ್ಮೇಳನವಾಗಿತ್ತು. ರಾಜನಳ್ಳಿ ಹನುಮಂತಪ್ಪ ಛತ್ರದಲ್ಲಿ ಸಾಹಿತ್ಯಾಸಕ್ತರು ತುಂಬಿತುಳುಕುತ್ತಿದ್ದರು. ಇದು ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಮತ್ತು ಅವರ ಸಂಗಾತಿಗಳ ಶ್ರಮದ ಫಲವಾಗಿತ್ತು. ಈ ಸಮ್ಮೇಳನದಲ್ಲಿ ಭಾಗವಹಿಸಿದ ಸಾಹಿತಿಗಳೇ 1979ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಹುಟ್ಟಿಗೆ ಕಾರಣರಾದರು. ಹೀಗೆ ದಾವಣಗೆರೆಯ ಪ್ರಗತಿಪಂಥ ಸಮ್ಮೇಳನ ಈ ಎಲ್ಲ ಹೊಸತನದ ತಾಯಿಬೇರಾಯಿತು. ಪಂಪಾಪತಿ, ಹೆಚ್.ಕೆ. ರಾಮಚಂದ್ರಪ್ಪ ಮತ್ತು ದಾವಣಗೆರೆ ಕಾರ್ಮಿಕರ ಶಕ್ತಿಯಿಂದಾಗಿ ಇದೆಲ್ಲ ಸಾಧ್ಯವಾಯಿತು.
ಇಂಥ ಒಬ್ಬ ಕ್ರಿಯಾಶೀಲ ಸಂಗಾತಿ ಎಚ್.ಕೆ. ರಾಮಚಂದ್ರಪ್ಪ ಅವರ ಸಂಸ್ಮರಣ ಗ್ರಂಥ “ಬೆವರ ನೆಲದ ಕೆಂಪು ಕಾಂಡದ ಹೂ” ಅನ್ನು ಅವರ ಅಭಿಮಾನಿಗಳು ಲೋಕಾರ್ಪಣೆ ಮಾಡುವ ಮೂಲಕ ಅವರ ಬದುಕಿನ ವಿವರಗಳನ್ನು ದಾಖಲಿಸಿದ್ದು ಸುತ್ಯರ್ಹವಾಗಿದೆ.
ಒಂದು ಮಾತನ್ನು ಹೇಳಲೇಬೇಕು. ಕೆಲವರ್ಷಗಳ ಹಿಂದೆ ರಾಮಚಂದ್ರಪ್ಪ ಅವರು ಸಿ.ಪಿ.ಐ. ಜಿಲ್ಲಾ ಸಮ್ಮೇಳನಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಾನು ಖುಷಿಯಿಂದ ಹೋದೆ. ಆದರೆ ಸಮ್ಮೇಳನದಲ್ಲಿ ವೇದಿಕೆ ಮೇಲಿನ ಆಹ್ವಾನಿತರೂ ಸೇರಿದಂತೆ 50ರಷ್ಟು ಜನರು ಮಾತ್ರ ಇದ್ದರು. ಬಹಳ ನೋವಾಯಿತು. ದಾವಣಗೆರೆ ಮತ್ತು ಹರಿಹರಗಳಲ್ಲಿನ ಮೇ ದಿನಾಚರಣೆಯ ಸಂದರ್ಭಗಳಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ದಿನಗಳು ನೆನಪಾದವು. ಇಲ್ಲಿನ ಕಾರ್ಮಿಕರ ಹೋರಾಟ ಮತ್ತು ತ್ಯಾಗದ ಹಿನ್ನೆಲೆಯ ಸ್ಫೂರ್ತಿಯಿಂದಲೇ “ಪ್ರಣಾಳಿಕೆ” ಕವನ ಬರೆದೆ. ಅದು ಬಹಳ ಪ್ರಸಿದ್ಧವಾಯಿತು. ಅದರ ಲಕ್ಷಾಂತರ ಪ್ರತಿಗಳು ಜನಸಮುದಾಯಕ್ಕೆ ತಲುಪಿದವು. ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳಲ್ಲಿ ಆ ಕವನ ಭಾಷಾಂತರಗೊಂಡಿತು. ದುಡಿಯುವ ಜನರ ಕಲಾವಿದ ಜಾನ್ ದೇವರಾಜ ಅದನ್ನು ಕಲ್ಲಿನಲ್ಲಿ ಕೆತ್ತಿದರು, ಚಾರ್ಕೊಲ್ ಕಲೆಯಲ್ಲಿ ಬಿಡಿಸಿದರು, ಎರಡನೇ ಮಹಾಯುದ್ಧದಲ್ಲಿ ವಾರ್ ಟ್ಯಾಂಕಿಗೆ ಸಿಕ್ಕಿ ಬೆಂಡಾದ ಬಂದೂಕಿನ ಮೇಲೆ ಹಿತ್ತಾಳೆಯ ಗುಬ್ಬಿಗಳನ್ನು ಸೃಷ್ಟಿಸಿ ಕೂಡಿಸಿದರು. ಹೀಗೆ ಆ ಕವನ ವಿವಿಧ ಅವತಾರವನ್ನು ತಾಳಿತು. ಅನೇಕ ಸಲ ವಿವಿಧ ವಿಶ್ವವಿದ್ಯಾಲಯದ ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಭಾಗವಾಯಿತು. ಇಂದಿಗೂ ಆಗುತ್ತಿದೆ.
ಈ ಕವನ ಬರೆದ ಸಮಯ ಕೂಡ ವಿಶಿಷ್ಟವಾಗದೆ. 1978 ರಿಂದ 1980ರ ಅವಧಿಯಲ್ಲಿ ನಾನು ಹುಬ್ಬಳ್ಳಿಯಲ್ಲಿದ್ದೆ. ಒಂದು ದಿನ ಮಧ್ಯಾಹ್ನ ಸನತ್ ಭೇಟಿಗಾಗಿ ಕೊಪ್ಪಿಕರ್ ರಸ್ತೆಯಲ್ಲಿನ ಸಂಯುಕ್ತ ಕರ್ನಾಟಕ ಕಚೇರಿಗೆ ಹೋದೆ. ಆಗ ಟೆಲಿಪ್ರಿಂಟರ್‌ಗಳು ಜೋರಾಗಿ ಬಡಿದುಕೊಳ್ಳುತ್ತಿದ್ದವು. ಸನತ್ ಅಲ್ಲೇ ನಿಂತಿದ್ದ. ಹರಿಹರದ ಪಾಲಿ ಫೈಬರ್ಸ್ ಕಾರ್ಖಾನೆಯಲ್ಲಿ ಕಾರ್ಮಿಕ ಹೋರಾಟವನ್ನು ತಡೆಗಟ್ಟುವ ಸಂದರ್ಭದಲ್ಲಿ ಪೊಲೀಸರು ಗೋಲಿಬಾರ್ ಮಾಡಿರುವುದಾಗಿ ತಿಳಿಸಿದ. ತೀವ್ರ ಗಾಯಗೊಂಡವರನ್ನು ಪಂಪಾಪತಿಯವರು ಕಾರು ಮುಂತಾದ ಕಂಡ ಕಂಡ ವಾಹನಗಳನ್ನು ತರುಬಿ ಗಾಯಾಳುಗಳನ್ನು ತುಂಬಿ ಹುಬ್ಬಳ್ಳಿಯ ಕೆ.ಎಂ.ಸಿ. (ಇಂದಿನ ಕಿಮ್ಸ್) ಆಸ್ಪತ್ರೆಗೆ ಕಳಿಸುತ್ತಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಯಶವಂತ ಸಾವರೆ ಎಂಬ ಕಾರ್ಮಿಕ ಕೆ.ಎಂ.ಸಿ.ಯಲ್ಲಿ ಸತ್ತ. ಗೋಲಿಬಾರ್ ಘಟನೆ ನನ್ನನ್ನು ತೀವ್ರವಾಗಿ ಬಾಧಿಸಿತು. ಹಾಗೇ ಹೊರಗೆ ಬಂದೆ ಕೊಪ್ಪಿಕರ ರಸ್ತೆ ಬಳಿಯ ಗಟಾರದ ಪಕ್ಕದಲ್ಲಿ ಕಾಗದದ ಚೂರೊಂದು ಕಂಡಿತು. ಅದರ ಮೇಲೆ “ಪ್ರಣಾಳಿಕೆ” ಬರೆದೆ! ಹೀಗೆ ದಾವಣಗೆರೆಯ ಸಂಗಾತಿಗಳು ನನ್ನ ಕಾವ್ಯಕ್ಕೆ ಸ್ಪೂರ್ತಿಯಾದರು.
ದಾವಣಗೆರೆಯ ಆ ಸಿ.ಪಿ.ಐ. ಜಿಲ್ಲಾ ಸಮ್ಮೇಳನದಲ್ಲಿ ಆ 50 ಮಂದಿಯ ಮುಂದೆ ಭಾಷಣ ಮಾಡುವಾಗ “ಜಗತ್ತಿನಲ್ಲಿ ಕಾರ್ಮಿಕ ವರ್ಗವನ್ನು ಮೊದಲಬಾರಿಗೆ ಒಂದುಗೂಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಆದ್ದರಿಂದಲೇ ಬಸವಣ್ಣ ಜಗತ್ತಿನ ಮೊದಲ ಕಾಮ್ರೇಡ್” ಎಂದು ಹೇಳಿದೆ. ಮರುದಿನ ಈ ಸುದ್ದಿ ಪತ್ರಿಕೆಗಳಲ್ಲಿ ಬರುವಂತೆ ರಾಮಚಂದ್ರಪ್ಪ ನೋಡಿಕೊಂಡರು. 50 ಜನರ ಮುಂದೆ ಮಾತನಾಡಿದ್ದನ್ನು 50 ಸಾವಿರ ಜನರಿಗೆ ತಲುಪುವಂತೆ ಮಾಡಿದ್ದರು. ಇದುವೆ ಒಬ್ಬ ಸಂಗಾತಿಯ ಶಕ್ತಿ ಎಂದು ಸಂತಸಪಟ್ಟೆ. ತದನಂತರ ‘ಕಾಮ್ರೇಡ್ ಬಸವಣ್ಣ’ ಹಾಡುಗಳು ಶುರುವಾದವು. “ಸೂಟುಬೂಟಿನ ಬಸವಣ್ಣ” ಎಂದು ಅಂಬೇಡ್ಕರರನ್ನು ಬಸವಣ್ಣನವರಿಗೆ ಹೋಲಿಸಿ ಯುವ ದಲಿತ ಕವಿಯೊಬ್ಬ ಕವನ ಬರೆದದ್ದನ್ನು ನೋಡಿದೆ. ಬದಲಾವಣೆಗಳು ಆಗುವ ಕ್ರಮ ಇದಾಗಿದೆ.
ಕಾಮ್ರೇಡ್ ಪಂಪಾಪತಿ, ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಮುಂತಾದ ಸಂಗಾತಿಗಳು ಇಂಥ ಪರಿಜ್ಞಾನದಿಂದ ಯಶಸ್ಸನ್ನು ಸಾಧಿಸಿದರು. ಬಂಡವಾಳಶಾಹಿಗಳ ನಗರದಲ್ಲಿ ಕಮ್ಯುನಿಸ್ಟ್ ಆಡಳಿತ ತಂದರು. ದಾವಣಗೆರೆಯನ್ನು ಕೆಂಪುನಗರದ ಜೊತೆ ಪರಿಸರ ಪ್ರಜ್ಞೆಯ ಮೂಲಕ ಹಸಿರುನಗರವನ್ನಾಗಿಸಿದರು.
ಇಂಥ ಸಂಗಾತಿಗಳ ನೆನಪು ನಮಗೆ ದಾರಿದೀಪವಾಗಲಿ. ಕ್ರಾಂತಿ ಚಿರಾಯುವಾಗಲಿ.
ಪ್ರಣಾಳಿಕೆ
ನಾವು ದುಡಿಯುವ ಜನ
ನಮ್ಮ ಅಧಿಕಾರ ಬಂದಾಗ:
ಪೊಲೀಸರನ್ನು, ನ್ಯಾಯಾಧೀಶರನ್ನು
ಮನುಷ್ಯರನ್ನಾಗಿ ಮಾಡುತ್ತೇವೆ.
ಟ್ಯಾಂಕುಗಳು ಬುಲ್‌ಡೋಜರ್ ಆಗುತ್ತವೆ
ತಗ್ಗು ದಿನ್ನೆಯ ನೆಲ ಸಮನಾಗುತ್ತದೆ.
ಬಂದೂಕಿನ ಬಾಯಲ್ಲಿ
ಗುಬ್ಬಿ ಗೂಡು ಕಟ್ಟುತ್ತದೆ.
‘ಕೆಂಪುದೀಪ’ದ ಕೆಳಗೆ
ಉದ್ಯಾನವನಗಳೇಳುತ್ತವೆ.
ಒಂದೇ ಒಂದು ಸಲ ಅವಕಾಶ ಸಿಗಲಿ
ಭೂಗೋಳದ ತುಂಬೆಲ್ಲ
ಶಾಂತಿಯ ಬೀಜ ಬಿತ್ತುತ್ತೇವೆ.
ಮುಂದೆ,
ನಮ್ಮ ಮಕ್ಕಳು ಶಬ್ದಕೋಶ ತಿರುವಿ
ವೀರಗಲ್ಲುಗಳ ಅರ್ಥ ಹುಡುಕುತ್ತಾರೆ.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.